ಬೆಂಗಳೂರು: ದಕ್ಷಿಣ ಏಷ್ಯಾ ಸಾಹಿತ್ಯಕ್ಕಾಗಿ ನೀಡುವ ಪ್ರತಿಷ್ಠಿತ ಡಿಎಸ್‌ಸಿ ಪ್ರಶಸ್ತಿ ಪಡೆದಿರುವ ಕನ್ನಡದ ಕವಿ ಮತ್ತು ಕತೆಗಾರ ಜಯಂತ ಕಾಯ್ಕಿಣಿ, ಪ್ರಾದೇಶಿಕ ಭಾಷೆಗಳಲ್ಲಿ ಬರವಣಿಗೆ ಮತ್ತು ಅನುವಾದ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರಶಸ್ತಿಗಳ ಪಾತ್ರದ ಕುರಿತು ಮಾತನಾಡಿದ್ದಾರೆ.
‘ಶಾಲಾ–ಕಾಲೇಜು ದಿನಗಳಲ್ಲಿ ಅಥವಾ ಯುವಕರಿಗೆ ಪ್ರಶಸ್ತಿ ಲಭಿಸಿದರೆ; ಅವರಿಗೆ ಸಿಗುವ ಸ್ಫೂರ್ತಿಯೇ ಬೇರೆ ತರಹದ್ದು. ನನ್ನ ಕಳೆದ 40 ವರ್ಷಗಳ ಅನುಭವಗಳಲ್ಲಿ ರೂಪುಗೊಂಡಿರುವ ಕಥೆಗಳು ಈಗ ವಿಸ್ತಾರವಾದ ಓದುಗ ವರ್ಗಕ್ಕೆ ತಲುಪುತ್ತಿವೆಎಂಬುದು ಸಂತಸದ ವಿಷಯ. ನಾನು ಕನ್ನಡದಲ್ಲಿ ಬರೆದಿರುವ ಕಥೆಗಳು ಇಂಗ್ಲಿಷ್ ಭಾಷೆಗೆ ಅನುವಾದಗೊಂಡಿರುವುದು ಹಾಗೂ ಪ್ರಶಸ್ತಿಯು ಪುಸ್ತಕವನ್ನು ಹೆಚ್ಚು ಮಂದಿ ಓದುವುದಕ್ಕೆ ಪ್ರೇರೇಪಿಸುತ್ತದೆ.
ಭಿನ್ನ ಯೋಚನೆಗಳುಳ್ಳಓದುಗನಿಗೆ ತಲುಪುವುದರಿಂದ ಪುಸ್ತಕಕ್ಕೆ ಮತ್ತೊಂದು ರೀತಿಯ ಜೀವಂತಿಕೆ ತಂದು ಕೊಡುತ್ತದೆ. ಇಲ್ಲವಾದರೆ, ಪುಸ್ತಕ ಕೇವಲ ವಸ್ತುವಾಗಿಯೇ ಉಳಿಯುತ್ತದೆ.’ ಎಂದು ಜಯಂತ್ ಕಾಯ್ಕಿಣಿ ಅಭಿಪ್ರಾಯ ಪಟ್ಟಿದ್ದಾರೆ.
ಅವರ ‘ನೋ ಪ್ರೆಸೆಂಟ್ಸ್ ಪ್ಲೀಸ್’ ಕೃತಿಗೆ ಡಿಎಸ್‌ಸಿ ಪ್ರಶಸ್ತಿ ಲಭಿಸಿದೆ.ಮುಂಬೈ ಕುರಿತ ಕಥೆಗಳ ಆಯ್ದ ಕೃತಿ ನೋ ಪ್ರೆಸೆಂಟ್ಸ್ ಪ್ಲೀಸ್ ಕನ್ನಡ ಕಥಾ ಸಂಕಲನವನ್ನು ತೇಜಸ್ವಿನಿ ನಿರಂಜನ ಅವರು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಬಹುಮಾನ ಮೊತ್ತ ₹18 ಲಕ್ಷ ಆಗಿದ್ದು, ಡಿಎಸ್‌ಸಿ ಪ್ರಶಸ್ತಿಯ ಎಂಟು ವರ್ಷಗಳ ಇತಿಹಾಸದಲ್ಲಿ ಅನುವಾದಿತ ಕೃತಿಯೊಂದು ಪ್ರಶಸ್ತಿ ಗಳಿಸಿರುವುದು ಇದೇ ಮೊದಲು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.