ಬೆಳಗಾಗುವ ಮೊದಲೇ ಶಾಮುವಿಗೆ ಎಚ್ಚರವಾಗಿ ತನ್ನ ತಂಗಿ ರಕ್ಷಿತಾಳನ್ನು ಎಬ್ಬಿಸಿದ. ಕಣ್ಣುಜ್ಜುತ್ತಲೇ ರಕ್ಷಿತಾ ಎದ್ದು ಕುಳಿತಳು. ‘ಕೇಳಿಸ್ತಾ ಇದೆಯ? ಒಂದು ಹೊಸ ಹಕ್ಕಿ ನಮ್ಮನೆ ಅಂಗಳಕ್ಕೆ ಬಂದಿದೆ. ನೋಡೋಣವ?’ ಎಂದು ಕೇಳಿದ.
‘ಈಗಲಾ? ಇನ್ನೂ ಕತ್ತಲು’ ಎಂದಳು ತಂಗಿ. ‘ಅಪರೂಪಕ್ಕೆ ಬಂದಿರಬಹುದು ಈ ಹಕ್ಕಿ. ನೋಡೋಣ ಬಾ’ ಎಂದು ಉತ್ತರಿಸಿದ. ಇಬ್ಬರೂ ಸದ್ದಾಗದಂತೆ ಬಾಗಿಲು ತೆರೆದು ಹೊರಬಂದರು. ‘ನಾವು ಗಲಾಟೆ ಮಾಡದೆ ಮರೆಯಲ್ಲಿ ನಿಂತೇ ನೋಡೋಣ’ ಎಂದ ಶಾಮು. ‘ಹಾಗೇ ಆಗಲಿ’ ಎಂದಳು ರಕ್ಷಿತಾ.
ಇಬ್ಬರೂ ಮರೆಯಲ್ಲಿ ನಿಂತರು. ಇಂಪಾಗಿ ಉಲಿಯುತ್ತಿದ್ದ ಹಕ್ಕಿ ಅಲ್ಲೆಲ್ಲೋ ಸಿಳ್ಳೆ ಹಾಕುತ್ತಿದ್ದುದು ಅವರ ಮುಂದೆಯೇ ಕಾಣಿಸಿಕೊಂಡಿತು. ಹಸ್ತದಷ್ಟು ಗಾತ್ರವಿದ್ದ ಹಕ್ಕಿ ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಉಲಿಯುತ್ತ ಅಲ್ಲಿಂದಿತ್ತ ಇಲ್ಲಿಂದತ್ತ ಓಡಾಡಿತು. ರೆಕ್ಕೆಗಳನ್ನು ಅಗಲಿಸಿತು. ರೆಕ್ಕೆಗಳನ್ನು ಮಡಚಿ ಗೋಲಾಕಾರ ಮಾಡಿ ಉರುಳಿತು! ‘ಅದರ ಕೊಕ್ಕು ನೋಡು, ಎಷ್ಟು ಸುಂದರ! ತಲೆಯ ಮೇಲೆ ಜುಟ್ಟು ನೋಡು. ತಲೆಯ ಪುಕ್ಕದಲ್ಲೂ ಬಣ್ಣಗಳಿವೆ. ಕಣ್ಣುಗಳನ್ನು ನೋಡು ಎಷ್ಟು ಚುರುಕಾಗಿ ಸುತ್ತುತ್ತಿವೆ. ಎಷ್ಟು ಗಂಭೀರವಾಗಿ ನಡೆಯುತ್ತಿದೆ’ ಎನ್ನುತ್ತಿದ್ದ ತಂಗಿಗೆ ಶಾಮು ಸುಮ್ಮನಿರುವಂತೆ ತುಟಿಯ ಮೇಲೆ ಬೆರಳಿಡುತ್ತಿದ್ದ.
ಈಗ ಬಾನಲ್ಲಿ ಮೂಡಿದ ಬೆಳಕಲ್ಲಿ ಎಲ್ಲವೂ ಸ್ಪಷ್ಟವಾಗಿ ಕಾಣುತ್ತಿತ್ತು. ‘ಇದು ಗಿಣಿಯಲ್ಲ, ಗುಬ್ಬಿಯಲ್ಲ, ಕಿಂಗ್‍ಫಿಷರ್ ಅಲ್ಲ, ಗಿಡುಗ, ಹದ್ದು ಪಾರಿವಾಳವಲ್ಲ. ನಮಗೆ ತಿಳಿದ ಯಾವ ಹಕ್ಕಿಯೂ ಅಲ್ಲ! ಹಾಗಾದರೆ ಏನಿರಬಹುದು?’ ಎಂದು ಇಬ್ಬರೂ ಆಶ್ಚರ್ಯಚಕಿತರಾದರು.
ಸೂರ್ಯೋದಯವಾಯಿತು. ಹಕ್ಕಿಯ ದನಿ ನಿಂತಿತು! ಹಕ್ಕಿ ಮತ್ತೆ ಕಾಣಿಸಿಕೊಳ್ಳಲೇ ಇಲ್ಲ. ಇಬ್ಬರಿಗೂ ಬಹಳ ಬೇಸರವಾಯಿತು. ಎಷ್ಟು ಹೊತ್ತು ಕಾದರೂ ಹೊಸ ಹಕ್ಕಿ ಕಾಣಿಸಿಕೊಳ್ಳಲೇ ಇಲ್ಲ.
ಶಾಲೆಯಲ್ಲಿ ಶಾಮು ಶಿವಣ್ಣ ಮೇಷ್ಟ್ರ ಬಳಿ ಹೋದ. ತಾನು ಕಂಡಿದ್ದನ್ನೆಲ್ಲ ಹೇಳಿದ. ಶಿವಣ್ಣ ಸರ್ ಆಸಕ್ತಿಯಿಂದ ಕೇಳಿಸಿಕೊಂಡರು. ಪ್ರಾಣಿ-ಪಕ್ಷಿಗಳ ಬಗ್ಗೆ ತಿಳಿದಿದ್ದ ಅವರು ತಮ್ಮ ಮೊಬೈಲಿನಲ್ಲಿ ಹಲವು ಹಕ್ಕಿಗಳನ್ನು ತೋರಿಸಿದರು. ಶಾಮುವಿನ ಜೊತೆ ಅವನ ಸ್ನೇಹಿತರೂ ಸೇರಿಕೊಂಡು, ಉತ್ಸಾಹದಿಂದ ಮೇಷ್ಟ್ರು ಹೇಳಿದ್ದನ್ನು ಕೇಳಿಸಿಕೊಂಡರು. ಒಂದು ವಿಶೇಷ ಹಕ್ಕಿಯನ್ನು ತೋರಿಸಿ ‘ಇದೇ ಏನು?’ ಎಂದು ಕೇಳಿದರು. ಒಂದು ಕ್ಷಣ ಚಿತ್ರ ನೋಡಿ ಶಾಮು ‘ಹೌದು ಸರಿಸುಮಾರು ಹೀಗೇ ಇತ್ತು’ ಅಂದ. ಆ ಸುಂದರ ಹಕ್ಕಿಯ ಬಗ್ಗೆ ಮೊಬೈಲಿನ ಗುಂಡಿಗಳನ್ನು ಒತ್ತಿ ಇನ್ನೂ ಹತ್ತಾರು ವಿವರಗಳನ್ನು ಸಂಗ್ರಹಿಸಿದರು ಶಿವಣ್ಣ.
‘ಇದು ವಿಶೇಷ ಹಕ್ಕಿ, ಹಿಮಾಲಯದ ಕಡೆಯಿಂದ ಹಾರಿ ಬಂದಿದೆ. ಬಹಳ ಅಪರೂಪಕ್ಕೆ ಕಾಣಿಸಿಕೊಳ್ಳುತ್ತದೆ. ಸೂರ್ಯೋದಯಕ್ಕೆ ಮುಂಚಿತವಾಗಿ ಮತ್ತು ಸೂರ್ಯೋದಯದ ನಂತರ ಸ್ವಲ್ಪ ಹೊತ್ತು ಕಾಣಿಸಿಕೊಳ್ಳುತ್ತದೆ. ಪುಕ್ಕ ಬಿಚ್ಚಿ ಗೋಲಾಕಾರದಲ್ಲಿ ಉರುಳುವುದು ಇದರ ವಿಶೇಷ. ಒಮ್ಮೊಮ್ಮೆ ಹಾಡಿನಂತೆ ಸುಂದರವಾಗಿ ಹಾಡಿದರೆ ಮತ್ತೊಮ್ಮೆ ಸಿಳ್ಳೆ ಹೊಡೆದು ಸಂಭಾಷಣೆ ನಡೆಸುತ್ತದೆ. ತುಂಬ ಪುಕ್ಕಲು ಹಕ್ಕಿ. ಅದಕ್ಕೆ ಕಾಣಿಸದ ಹಾಗೆ ಮರೆಯಲ್ಲೇ ನಿಂತು ನೋಡಬೇಕು. ಇಂದು ಬೆಳಿಗ್ಗೆ ಕಾಣಿಸಿಕೊಂಡಿದೆ ಎಂದರೆ ಅದೇ ಹೊತ್ತಿಗೆ ನಾಳೆಯೂ ಖಂಡಿತ ಕಾಣಿಸಿಕೊಳ್ಳುತ್ತದೆ. ಸೂರ್ಯೋದಯಕ್ಕೆ ಸ್ವಲ್ಪ ಮೊದಲು ಚೆನ್ನಾಗಿ ಆಟವಾಡಿ ಸೂರ್ಯ ಕಾಣಿಸಿಕೊಳ್ಳುತ್ತಿದ್ದಂತೆ ಮರದ ಮೇಲೆ ಹೋಗಿ ಕುಳಿತುಬಿಡುತ್ತದೆ. ಈ ಅಪರೂಪದ ಹಕ್ಕಿಯನ್ನು ನೋಡಬೇಕಿದ್ದರೆ ನಾಳೆ ಎದ್ದು ಕತ್ತಲಲ್ಲೇ ಕಾಯಬೇಕು’ ಎಂದರು. ಖುಷಿಯಿಂದ ಮುತ್ತಳ್ಳಿಯ ಮಕ್ಕಳೆಲ್ಲ ಹ್ಞೂಂ ಅಂದರು.
ಆ ಗುಂಪಿನಲ್ಲಿ ಅರ್ಜುನ ಕೂಡ ಇದ್ದ. ಅವನದೊಂದು ಕೆಟ್ಟ ಗುಂಪಿತ್ತು. ಪ್ರಾಣಿಗಳನ್ನು ಹಿಂಸಿಸುವುದು, ದೀಪಾವಳಿಯಲ್ಲಿ ನಾಯಿಬಾಲಕ್ಕೆ ಬಾಂಬ್ ಕಟ್ಟಿ ಹೊಡೆಯುವುದು, ಮಂಗನಿಗೆ ಕಲ್ಲು ಹೊಡೆದು ಕೆಣಕುವುದು, ಕತ್ತೆಯ ಬಾಲಕ್ಕೆ ಬಟ್ಟೆ ಸುತ್ತಿ ಬೆಂಕಿ ಹಚ್ಚುವುದು, ಹಕ್ಕಿಗಳನ್ನು ಕವಣೆಯಿಂದ ಗುರಿಯಿಟ್ಟು ಹೊಡೆಯುವುದು- ಹೀಗೆ ಅವರ ಚೇಷ್ಟೆ ನಡೆಯುತ್ತಿತ್ತು. ಅರ್ಜುನ ಹೊಸ ಹಕ್ಕಿಯ ಬಗ್ಗೆ ತುಸು ಹೆಚ್ಚು ಆಸಕ್ತಿ ತೋರಿದ. ‘ಈ ಬಾರಿ ನಮ್ಮ ಗುರಿನೋಡು’ ಎನ್ನುತ್ತ ಹೋದ ಅರ್ಜುನ.
ಅರ್ಜುನ ಮತ್ತು ಸ್ನೇಹಿತರು ಹೊಸ ಹಕ್ಕಿಯನ್ನು ಹೊಡೆಯಲು ಯೋಜಿಸುತ್ತಿದ್ದಾರೆಂದು ಶಾಮುವಿಗೆ ಮನವರಿಕೆಯಾಯಿತು. ರಕ್ಷಿತಾ ಹತ್ತಿರ ತನ್ನ ಆತಂಕ ಹಂಚಿಕೊಂಡ. ಅರ್ಜುನನ ಸ್ನೇಹಿತರನ್ನು ಹೇಗೆ ನಿಲ್ಲಿಸುವುದು ಎಂದು ಇಬ್ಬರೂ ತಲೆಕೆಡಿಸಿಕೊಂಡರು.
ಮರುದಿನ ಬೆಳಗಿನ ಜಾವ. ಐದು ಗಂಟೆಗೇ ಅರ್ಜುನ ಮತ್ತು ಸ್ನೇಹಿತರು ಶಾಮುವಿನ ಮನೆ ಬಳಿ ಬಂದರು. ಶಾಮು ಮತ್ತು ರಕ್ಷಿತಾ ಕೂಡ ಹೊರಬಂದರು. ಅರ್ಜುನ ಕವಣೆಯನ್ನು ಬೆನ್ನಿಗೆ, ಅಂಗಿಯ ಸಂದಿಯಲ್ಲಿ ಇಟ್ಟುಕೊಂಡಿದ್ದ. ಅದು ಶಾಮುವಿನ ಗಮನಕ್ಕೆ ಬಂದಿತ್ತು. ‘ಹಕ್ಕಿ ಹೊಡೀತೀಯ? ಬೇಡ ಕಣೋ. ತುಂಬ ಅಪರೂಪದ ಹಕ್ಕಿಯಂತೆ, ಶಿವಣ್ಣ ಮೇಷ್ಟ್ರು ಹೇಳಿದ್ದಾರೆ’ ಎಂದ ಶಾಮು. ಅದನ್ನು ಕೇಳಿ ಅರ್ಜುನ ಕೆಟ್ಟದಾಗಿ ನಕ್ಕ.
ಅದಾಗಲೆ ಎಂಟು–ಹತ್ತು ಹುಡುಗರು ಕಂಬಳಿ ಹೊದ್ದು ಮರೆಯಲ್ಲಿ ನಿಂತು ಹಕ್ಕಿಗಾಗಿ ಕಾಯುತ್ತಿದ್ದರು. ಆಗಸದಲ್ಲಿ ಸೂರ್ಯೋದಯಕ್ಕೆ ಮುಂಚೆ ಬೆಳಕು ಸಣ್ಣದಾಗಿ ಮೂಡುತ್ತಿದ್ದಂತೆ ಎಲ್ಲರ ನಿರೀಕ್ಷೆಯಂತೆ ಹೊಸ ಹಕ್ಕಿಯ ಉಲಿ ಕೇಳಿಸಿತು. ಎಲ್ಲರೂ ಅಚ್ಚರಿಯಿಂದ ಉಲಿ ಬಂದತ್ತ ತಿರುಗಿದರು. ಮಕ್ಕಳೆಲ್ಲ ಹಕ್ಕಿಯ ಆಟವನ್ನು ಕಣ್ತುಂಬಿಸಿಕೊಂಡು ಆನಂದಿಸಿದರು. ಹಕ್ಕಿ ಹತ್ತಿರ ಬಂದಾಗಲೆಲ್ಲ ಅರ್ಜುನ ಕೆಟ್ಟದಾಗಿ ತನ್ನ ಸ್ನೇಹಿತರತ್ತ ನೋಡುತ್ತಿದ್ದ. ಇನ್ನೂ ಹತ್ತಿರ ಬರಲೆಂದು ಕಾಯುತ್ತಿದ್ದ. ಬೆನ್ನಿನ ಹಿಂದಿನಿಂದ ಕವಣೆಯನ್ನು ತೆಗೆದು ಅದಕ್ಕೆ ಕಲ್ಲು ಏರಿಸಿದ. ರಕ್ಷಿತಾ ಅಣ್ಣನತ್ತ ಅಸಹಾಯಕಳಾಗಿ ನೋಡಿದಳು.
ಇತರ ಮಕ್ಕಳೆಲ್ಲರೂ ಹಕ್ಕಿಯ ಆಟ ಗಮನಿಸುತ್ತಿದ್ದರು. ಆದರೆ ಅರ್ಜುನ ತನ್ನ ಕವಣೆಯಿಂದ ಗುರಿ ಇಡುತ್ತಿದ್ದ. ಹೊಸ ಹಕ್ಕಿ ಹಾಡುತ್ತ ಉಲಿಯುತ್ತ ರೆಕ್ಕೆಗಳನ್ನು ಗೋಲ ಮಾಡಿ ಉರುಳಿತು. ಗುರಿಯಲ್ಲಿ ಚಾಣಾಕ್ಷನಾಗಿದ್ದ ಅರ್ಜುನ ಇದೇ ಸಮಯವೆಂದು ಕವಣೆಗೆ ಪೇರಿಸಿದ್ದ ಕಲ್ಲನ್ನು ಎಳೆದೇ ಬಿಟ್ಟ. ಸಮಯ ಕಾಯುತ್ತಿದ್ದ ರಕ್ಷಿತಾ ಮೆಲ್ಲನೆ ಹಿಂದಿನಿಂದ ಬಂದು ಕವಣೆಯಿಂದ ಎಳೆದ ಕಲ್ಲು ಚಿಮ್ಮುವ ಸಮಯಕ್ಕೆ ಸರಿಯಾಗಿ ಅರ್ಜುನನನ್ನು ತಳ್ಳಿಬಿಟ್ಟಳು. ಕವಣೆಯ ಕಲ್ಲು ಮರದ ಮೇಲಕ್ಕೆಲ್ಲೋ ಹೊಡೆಯಿತು ಅದರ ಸದ್ದಿಗೆ ಹೊಸ ಹಕ್ಕಿ ಹಾರಿ ಹೋಯಿತು.ಉದಯವಾಗಿ ಸೂರ್ಯ ಪೂರ್ವದಲ್ಲಿ ನಗುತ್ತಿದ್ದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.