ADVERTISEMENT

ದೀಪಾವಳಿ ಕಥೆ ಸ್ಪರ್ಧೆ–2024: 'ಅಗ್ನಿ' ಬಿದ್ದದ್ದು..!

ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆ

ಟಿ.ಗೋವಿಂದರಾಜು
Published 16 ನವೆಂಬರ್ 2024, 23:30 IST
Last Updated 16 ನವೆಂಬರ್ 2024, 23:30 IST
<div class="paragraphs"><p>ಒಳಚಿತ್ರದಲ್ಲಿ – ಗೋವಿಂದರಾಜು</p></div>

ಒಳಚಿತ್ರದಲ್ಲಿ – ಗೋವಿಂದರಾಜು

   

ವತ್ತಾರೆದ್ದು, ಹೋರಿಗಳನ್ನು ಹಟ್ಟಿಗೆ ಕಟ್ಟಿ, ‘ಕಟ್ಟೆ’ಕಡೆ ಗಂಡಸರು ಹೋದರೆ, ಕೊಟ್ಟಿಗೆ ಕಸ ಬಳಿದು ತಿಪ್ಪೆಗೆಸೆದು ಮಿಕ್ಕ ಕೆಲಸ ನೋಡುವುದು ಹೆಂಗಸರ ಕೆಲಸ. ಹಾಗೆ, ಕಸ ಗುಡಿಸುತ್ತಿದ್ದವಳಿಗೆ ಸಗಣಿ ಗಂಜಲದ ನಡುವೆ ಕೆಲವೊಂದು ಕಾಗದದ ಚೂರುಗಳು ಕಂಡು, ಯಾವೋ ಹುಡುಗರು ಎಸೆದಿರಬಹುದೆಂದು ಎಲ್ಲವನ್ನೂ ಬಳಿದು ಮಂಕರಿ ತುಂಬಿ, ತಿಪ್ಪೆಗೆ ಸಾಗಿಸಿದ್ದಳು. ಆದರೆ, ಮಾರನೇ ದಿನವೂ ಇನ್ನಷ್ಟು ಚೂರುಗಳು ಕಂಡು, ‘ಯಾವ ಹುಡುಗರು ಹಿಂಗೆ ಗ್ಯಾನಾ ಇಲ್ಲದೇ ಹರಿದು ಹಾಳು ಮಾಡ್ಯವೆ..’ಎಂದು ಕೆರಳುತ್ತಲೇ, ಆ ಚೂರುಗಳನ್ನು ಯಜಮಾನಮ್ಮನ ಮುಂದೆಸೆದು, ‘ಹಿಂಗೆ ಹರೀತಾ ಹೋದರೆ, ಪುಸ್ತಕಕ್ಕೆ ದುಡ್ಡು ಸುರಿಯೋರು ಯಾರು..?’ ಎಂದು ವಿಚಾರಣೆಗೆ ಒಪ್ಪಿಸಿದ್ದಳು. ಬೊಗಸೆ ತುಂಬಿದ ಕಾಜಗ ನೋಡಿದರೆ, ಅವು ಇಲಿಸುಂಡ ಉತ್ತರಿಸಿದ್ದು ಎಂಬುದು ಯಜಮಾನಿಗೆ ಅನುಭವ ವೇದ್ಯವಾಯಿತಾದರೂ, ಮನೆ ಜಮೀನಿಗೆ  ಸಂಬಂಧಿಸಿದ ಯಾವುದಾದರೂ  ಹಳೇ ಕಾಗದ ಪತ್ರಾ ಇದ್ದಾತೋ.. ಅನ್ನೋ ಭಯ ಹೆಚ್ಚಾಗಿ, ಹಿರಿ ಮಗ ಸ್ಯಾಮಣ್ಣನ ಮುಂದಿಡಿದಳು. ಅಷ್ಟೇನೂ ಓದು ಬರಹ ಇಲ್ಲದ ಆತನಿಗೂ ಆ ಗೀಚಿದ್ದ ‘ಮೋಡಿ’ ಅಕ್ಷರ ಅರ್ಥವಾಗುವುದಾದರೂ ಹೇಗೆ? ಅವರು ನೋಡಿ ಇವರು ಓದಿ, ಕೊನೆಗೆ ಯಾರೋ ಒಬ್ಬರು, ‘ಇದೇನೋ, ಸ್ರೀರಾಮ..ಅಂತ ಗೀಚಿದಂಗದೆ’ ಎಂದು ರಹಸ್ಯ ಒಡೆದರು. ‘ಸ್ರೀರಾಮ..’ ಅನ್ನೋ ವಾಕ್ಕು ಕಿವಿಗೆ ಬೀಳುತ್ತಿದ್ದಂತೆಯೇ ಶ್ಯಾಮಣ್ಣನಾದಿಯಾಗಿ ಮನೆಯವರೆಲ್ಲರ ತಲೆಯಲ್ಲಿ ಮಿಂಚು ಹೊಳೆಯಿತು.

***

ADVERTISEMENT

‘ಅಣ್ಣಾವರ’ತಿಥಿಗೆ ಮುನ್ನ ಪದ್ಧತಿಯಂತೆ ಮನೆಗೆ ಸುಣ್ಣ ಗಂಜಲ, ಒಪ್ಪ ಓರಣ ಮಾಡ ಹೋದಾಗ ಕಣ್ಣಿಗೆ ಬಿದ್ದ ಮೂಟೆಯನ್ನ, ಆಮೇಲೆ ನೋಡಿಕೊಳ್ಳಾಣ, ಯಾರ ಕೈ ಕಾಲಿಗೂ ಸಿಗದಂತೆ ಇಲ್ಲಿರಲೀ ಅಂತ ಅಟ್ಟದ ಮೇಲೆ ಎತ್ತಿಕ್ಕಿದ್ದರು.  ಅಣ್ಣನ ‘ಕಾರ್ಯ’ಕ್ಕೆಂದು ಮದ್ರೆ ಸಂತೆ ಸೆಟ್ಟರ ಅಂಗಡಿಯಿಂದ ತಂದಿದ್ದ ಬೆಲ್ಲದ ಪೆಂಡಿ, ಮತ್ತಿತರ ಕೆಲವು ದಿನಸಿ ಸಾಮಗ್ರಿಗಳನ್ನೂ ಮಕ್ಕಳ ಕೈಗೆ ಸಿಗದಿರಲೆಂದು ಅಲ್ಲೇ ಪಕ್ಕ ಅಟ್ಟದ ಮೇಲೆ ಇರುಕಿಸಿದ್ದರು. ‘ಕಾರ್ಯ’ದ ದಿನಕ್ಕೆ ಬೆಲ್ಲ, ದಿನಸಿ ಕೆಳಗಿಳಿದು ಬಿಕರಿಯಾಗಿದ್ದವು. ಅಷ್ಟಾಗಿ ಅಟ್ಟ ಮರೆತಿತ್ತು. ಆ ಸ್ರೀರಾಮರೇ ಮೂಷಿಕಾವತಾರ ಎತ್ತಿ  ಈ ಬಾಕೀ ಘನ ಧರ್ಮ ಕಾರ್ಯವನ್ನೂ ನೆನಪಿಸುತ್ತಿರುವರೋ ಎನ್ನುವಂತೆ ಈಗ ಚೀಟಿ ಪ್ರತ್ಯಕ್ಷ ಆಗಿದ್ದವು. ಆಗಬಾರದ ಅಚಾತುರ್ಯ  ಆದದ್ದಕ್ಕೆ ಬೆವತರು. 

‘ತಲೇ ಮೇಲೆ ಬಂದದ್ದು ಎಲೇ ಮೇಲೆ ಹೋಯ್ತು’ ಎಂಬಂತೆ ‘ಕಾರ್ಯ’ವೇನೋ ಮುಗೀತು ಅಂತ ಉಸಿರು ಬಿಟ್ಟು ಸುಧಾರಿಸಿಕೊಳ್ಳುತ್ತಿದ್ದಂಗೇ ಧುತ್ತನೇ ಎದುರಾದದ್ದು ಈ ‘ರಾಮಕೋಟಿ ಮೂಟೆ’!
ರಾಮನಾಮವನ್ನು ಕೋಟಿ ಬಾರಿ ಬರೆಯೋದಂತೆ. ಈಗ ಮೂಟೇಲಿ ಅಷ್ಟು ಇದೆಯೋ ಇಲ್ಲವೋ ಯಾರೂ ಎಣಿಸಿರಲಿಲ್ಲ. ಹಲವು ದಿನಗಳ ಹಿಂದೆಯೇ ಗೌಡರೂ ಬರೆವುದನ್ನು ನಿಲ್ಲಿಸಿದ್ದರೂ ಚೀಟಿ ಎಣಿಸ ಹೋಗಿರಲಿಲ್ಲ. ‘ಎಷ್ಟಾದ್ರೂ ಇರಲಿ; ಬರೆದದ್ದು  ಸಾಕು ಅನ್ನಿಸ್ತಿದೆ’ ಎಂದು ನಿರಾಸಕ್ತರಾಗಿ ಹೇಳಿ, ನಿರುಮ್ಮಳವಾಗಿ ಮಲಗುತ್ತಿದ್ದರು. ‘ನಮಗೂ ಅದರ ಉಸಾಬರಿ ಬೇಡ ..’ ಎಂದು, ಸುಂಡ ಕೊರೆದ  ತೂತಿನಲ್ಲಿ  ಕಾಗದದ ಚೂರುಗಳು ಉದುರಿ ಮತ್ತೂ  ಲೆಕ್ಕ ಮುಕ್ಕಾಗದಿರಲೆಂದು ದಬ್ಬಳದಲ್ಲಿ ಹೊಲಿದು ಭದ್ರ ಮಾಡಿದರು.  

ಗೌಡರು ಅದು ಹೇಗೋ ಏನೋ ಆ ಹವ್ಯಾಸ ಬೆಳೆಸಿಕೊಂಡುಬಿಟ್ಟಿದ್ದರು. ರಾತ್ರಿ ಎಲ್ಲೇ ಇರಲಿ, ಮಲಗೋ ಮುನ್ನ ಸಾವಧಾನವಾಗಿ ಕೂತು, ತುಂಡು ಹಾಳೆ ತುಂಬಾ ‘ಶ್ರೀರಾಮ ಜಯತು, ಶ್ರೀರಾಮ ಜಯತು..’ಎಂದು ಬರೆಯುವುದು.  ಜೇಬಲ್ಲಿ ಹಾಳೆ ಇರದಾಗ, ತಾವು ಮೊಕ್ಕಾಂ ನಿಂತ ಮನೇಲಿ ಹಳೇ ಲಗ್ನಪತ್ರಿಕೆ ಹಾಳೆಯಾದರೂ ತರಿಸಿ, ಸೊಡರ ಬೆಳಕಲ್ಲಿ  ಪೆನ್ಸಿಲಲ್ಲಾದರೂ ಬರೆದು ಮುಗಿಸುತ್ತಿದ್ದರು. ರಾಮ ಅವರ ಮನೆ ದೇವರೇನೂ ಅಲ್ಲ. ಅವನ ಮೇಲೆ ಅವರಿಗೆ ಅಷ್ಟೊಂದು ಭಕ್ತೀನಾ..? ಅದೂ ಗೊತ್ತಿಲ್ಲ. ಯಾರೋ ಸರೀಕರು ಒಮ್ಮೆ ಸಲಿಗೆಯಲ್ಲೇ ಕೇಳಿದ್ದಕ್ಕೆ ಚುಟುಕಾಗಿ ಉತ್ತರಿಸಿದ್ದರು: 
“ಯಾವುದೋ ಅಯ್ಯ, ‘ಬರೆದರೆ ಒಳ್ಳೇದಾತದೆ’ ಅಂತ ಬೋಧನೆ ಕೊಟ್ಟಿದ್ದ; ‘ಅದೇನೂ ಕಷ್ಟ ಇಲ್ಲವಲ್ಲ; ನೋಡೇಬಿಡಾಣ; ದಿನದ ಜಂಜಡವೆಲ್ಲಾ ಮರೆತು; ಒಳ್ಳೇ ನಿದ್ದೆಯಾದರೂ ಬಂದಾತೂ’ಅಂತ ನಾನೂ ಅದೇ ಪಾಟ ಮಾಡಿಕೊಂಡಿದ್ದೆ.. ಅದು ಹಂಗೇ ಬಂತು..”
“ಅಲ್ಲ, ‘ದಿನಾ ಹಿಂಗೆ ಧ್ಯಾನ ಮಾಡಿದರೆ ದ್ಯಾವರ ಅನುಭವ ಆತದೆ’ ಅಂತ ಯಾರೋ ಹೇಳಿದ್ದು ಕೇಳಿದ್ದೆ. ನಿಮಗೂ ಯಾವತ್ತಾನ ಅದರ ಸೆಳೇವು ಹೊಳೆದಿತ್ತಾ..?” ಅವರು ಮತ್ತೂ ಕುತೂಹಲದಿಂದ ಕೇಳಿದ್ದರು. ಒಂದು ಕ್ಷಣ ಮುಖ ದಿಟ್ಟಿಸಿದ ಗೌಡರು, ಕೇಳಿದವನ ಕಣ್ಣಲ್ಲಿ ಯಾವ ಕಿಡಿಗೇಡಿತನವೂ ಇಲ್ಲವೆಂಬುದನ್ನು ಅರಿತು, ಸಮಾಧಾನದಲ್ಲೇ ಉತ್ತರಿಸಿದ್ದರು :
“ಇಲ್ಲಪ್ಪಾ; ಸುಳ್ಳು ಹೇಳಿದ್ರೂ ಕೇಳ್ತೀರಿ, ಬದ್ದ ಹೇಳಿದ್ರೂ ಕೇಳ್ತೀರಿ; ಹಂಗಂತ, ಈ ವಯಸ್ಸಿನಲ್ಲಿ ನಾನು ಸುಳ್ಳು ಹೇಳಿ ಏನು ಪಡೀಬೇಕು; ಅಂಥಾ ಅನುಭವ ಯಾವತ್ತ್ತೂ ಆಗಲಿಲ್ಲ..”
ಇದೇ ಒಂದು ಅಡವು ಎಂದು ತಿಳಿದು, 
“ದೊಡ್ಡೋರನ್ನ ಶಾನೇ ಕೇಳಬಾರದು; ಆದ್ರೂ, ‘ನಮ್ಮಂಥಾ ಚಿಕ್ಕೋರಿಗೆ ನಿಮ್ಮಂಥಾ ಅನುಭವಿಕರ ಒಂದು ಚಿಕ್ಕ ಮಾತೇ ಹತ್ತು ಪುಸ್ತಕ ಓದಿದ್ದಕ್ಕೆ ಸಮಾ’ ಅಂತ ಇನ್ನೊಂದು ಕೇಳಿಬಿಡ್ತೀನಿ: ರಾಮ-ಸೀತಮ್ಮ ಅನುಭವಿಸಿದ ಕತೆ ಬಗ್ಗೆ ನಿಮಗೆ ಏನನ್ನಿಸ್ತದೆ?” 
ಜಂತೆಯ ಪಲ್ಲಿ ಲೊಚ ಲೊಚ ಅಂದಿತು. ಯಾಂತ್ರಿಕವಾಗಿ ಗೌಡರು ತಾವು ಕೂತ ಚಾಪೆಗೆ  ಬಲಗೈ ತೋರುಬೆರಳಿಂದ ಮೂರು ಬಾರಿ ಟಕ ಟಕ ಬಡಿದು, ‘ಕ್ರಿಸ್ಣ.. ಕ್ರಿಸ್ಣ..”ಎಂದು ದನಿಗೂಡಿಸಿದರು. ಬಳಿಕ, ಗೋಡೆಗೆ ನೆಟ್ಟಗೆ ಒರಗಿ ಕೂತು,ಅವರ ಮುಖ ನೋಡಿ ತಮಗೇ ಎಂಬಂತೆ ನಿಧಾನಕ್ಕೆ ಹೇಳಿಕೊಂಡರು: 
“ಏನಂತಾ ಹೇಳಲಿ? ಊರೂರಲ್ಲಿ ನಮ್ಮ ನಿಮ್ಮ ಸಂಸಾರಗಳನ್ನ ನೋಡಿದ ಮೇಲೆ, ಎಷ್ಟೋ ಬಾರಿ ಅಂದುಕೊಂಡಿದ್ದೀನಿ. ರಾಮಾಯಣ, ಭಾರತದ ಕಾಲದಿಂದಲೂ ನಮ್ಮ ಸಂಸಾರಗಳು ಹಿಂಗೇ ಆಗೋದವಲ್ಲಾ! ನಮ್ಮ ಹಿರೀಕರೇನು ಕಲಿಸಿದ್ದು? ನಾವೇನು ಬದುಕಿದ್ದು? ಎಷ್ಟೋ ಕುಟುಂಬಗಳಲ್ಲಿ ನೋಡಿದ್ದೀನಿ: ಮಗನಿಗೆ ಮದುವೆ ಆದ ತಕ್ಷಣ ಮಲತಾಯೀನೋ, ಇನ್ನೊಬ್ಬರೋ ಅವರನ್ನ  ಮನೆ ಬಿಡಿಸಿಬಿಡ್ತಾರಲ್ಲಾ..! ರಾಮ ದೇವರೂ ಮದುವೆ ಆದಾಗಿನಿಂದ ತಮ್ಮದೂ ಅಂತ ಮನೇಲಿ ನೆಮ್ಮದಿಯಾಗಿ ಯಂಡ್ರು ಜತೆ ಸಂಸಾರ ಮಾಡಾಕಾಯ್ತಾ! ದೊಡ್ಡ ಮನೆತನದೋರು ಅಂತ ನಂಬಿ ಬಂದ ಆ ಸೀತಮ್ಮನ ಪಾಡೂ ಹಂಗೇ ಆಯ್ತಲ್ಲಾ.. ಅವಳು ಮಾಡಿದ ತಪ್ಪಾದರೂ ಏನು? ದೇವರುಗಳ ಮನೇಲೇ ಹಿಂಗಾದರೆ  ನಮ್ಮಂಥೋರ ಪಾಡು ಏನ್ರಪ್ಪಾ.. ಇರೋಗಂಟ ಅನುಸರಿಸ್ಕಂಡು ಹೋಗ್ರೀ’ ಅಂತ ಎಷ್ಟೋ ಜನಕ್ಕೆ ನ್ಯಾಯ ಪಂಚಾಯ್ತೀಲಿ ಕಿವಿ ಮಾತು ಹೇಳಿದ್ದೀನಿ. ಆದರೆ, ನಮ್ಮ ಮಾತು ಕೇಳೋರು ಯಾರು..?”     
    ಗಂಡನ ‘ಮನೆ ತಪ್ಪಿ’ ಬಂದಿದ್ದ ಮಗಳ ನೆನೆದು ಹನಿಗಣ್ಣಾಗಿದ್ದರು. 
‘ಹೀಗಿದ್ದೂ ಇವರು ಹಠಕ್ಕೆ ಬಿದ್ದಂಗೆ ಯಾಕೆ ಬರೀತಾ ಅವರೆ..!’ ಆ ಸೂಕ್ಷ್ಮವನ್ನ ಯಾರೂ ಕೇಳುವ ಧೈರ್ಯ ಮಾಡಿರಲಿಲ್ಲ. ‘ಏನೋ ಅವರ ನಂಬಿಕೆ; ಅದು ಮಾಡೋದರಿಂದಾದರೂ ಅವರ ಮಸುಕಾಗಿದ್ದ ಎಡಗಡೆಯ ಹೂಗಣ್ಣು ಸರಿಯಾದೀತೇನೋ..’ ಎಂದು ಯಜಮಾನಮ್ಮನೂ ಸುಮ್ಮನಾಗಿದ್ದರು. ದೊಡ್ಡ ಮಂದಿರ ಆದಾಗ, ‘ನಿಮ್ಮನ್ನೂ ಕರಕೊಂಡು ಹೋತೀವಿ, ಬನ್ನೀ, ನೋಡಿಕೊಂಡು ಬರೀರಂತೆ; ಹ್ಯಾಗಿದ್ರೂ ‘ರಾಮಕೋಟಿ’ ಬರೀತಿದ್ದೀರಲ್ಲಾ, ಆ ಮೇಲೆ ಅದುನ್ನ ಏನು ಮಾಡೋದು ಅಂತ ಅಲ್ಲಿ ಯಾರಾದರೂ ಸ್ವಾಮೀನ ಕೇಳಿಕೊಂಡು ಬಂದಂಗೂ ಆತದೆ’ ಅಂತ ಊರ ಕೆಲ ಪಡ್ಡೆಗಳು ಕೇಳಿದ್ದಕ್ಕೆ, “ಇಲ್ಲೇ ಕಾಣದ ರಾಮುನ್ನ ಅಲ್ಲೆಲ್ಲೋ ಕಾಣಾದು ಹೆಂಗ್ರಪ್ಪಾ? ನನ್ನ ಒಂದೂವರೆ ಕಣ್ಣಲ್ಲಿ ನಿಮ್ಮಂಗೆ ಎಲ್ಲಪ್ಪಾ ನೋಡಾಕಾದಾತು? ಎಲ್ಲಾ ಭ್ರಮೆ..’ -ನಕ್ಕಂತೆ ಮಾಡಿದವರು ಮತ್ತೆ  ಮುಂದುವರೆಸಿದರು: “ನನ್ನ ಈ ರಾಮಕೋಟೀನೂ ಒಂದು ಭ್ರಮೆ ಅಂತ ಈಗೀಗ ಅನುಸ್ತಾ ಅದೆ. ಅದೆಂಗೋ ಇದು ಅಂಟಿಕೊಳ್ತು.  ಮನುಷ್ಯನಿಗೆ ಏನಾದರೂ ಒಂದು ಹವ್ಯಾಸ ಅಂತ ಇರಬೇಕಂತೆ, ಇರಲೀ ಬಿಡು ಅಂತ ಸುಮ್ಮನಾಗಿದ್ದೆ. ನನ್ನ ನಂತರ ಇದನ್ನ ನೀವೇ ಬೆಂಕೀಗೆ ಹಾಕಿದ್ರೂ ನನಗೇನೂ ಬೇಜಾರು ಆಗಲ್ಲ. ಯಾಕೇಂದ್ರೆ ಆವಾಗ್ಗೆ ನಾನು ಬದುಕೇ ಇರೋದಿಲ್ಲವಲ್ಲಾ..” ಎಂದು ಮತ್ತೆ ಜೋರು ನಗಾಡಿಬಿಟ್ಟರು. ಇದೇನು ಮಾಗಿದ ಅನುಭವ ಕಲಿಸಿದ ಸ್ವ ವಿಮರ್ಶೆಯೋ, ವಿಷಾದವೋ, ವಿಡಂಬನೆಯೋ..ಅರ್ಥವಾಗದೆ ಮೌನವಾಗಿದ್ದರು.

ಬರು ಬರುತ್ತಾ ಹಾಗೆ ನಿರುಮ್ಮಳವಾಗಿ ಮಾತಾಡತೊಡಗಿದ್ದ ಅಣ್ಣಾವರು, ಕೆಲವೇ ದಿನಕ್ಕೆ ನಿರ್ನಿಮಿತ್ತವಾಗಿ  ಕಣ್ಮುಚ್ಚಿದ ಮೇಲೆ, ‘ಯಾರಿಂದಲೂ ಎತ್ತಿಸಿಕೊಳ್ಳಲಿಲ್ಲ, ಇಳಿಸಿಕೊಳ್ಳಲಿಲ್ಲ; ಪುಣ್ಯಾತ್ಮರ ಸಾವು ಬಂತು’ ಎಂದು ಕೊಂಡಾಡಿದರೂ, ಅವರು ಉಳಿಸಿಹೋದ  ಆ ರಾಮಕೋಟಿ ಮೂಟೆಯೇ ಒಂದು ‘ಭಾರ’ವಾಗಿ  ಏನು ಮಾಡುವುದೆಂಬ ಚಿಂತೆ ಕಾಡತೊಡಗಿತು. “ಈ ತಿಥೀ ಕಾರ್ಯವೆಲ್ಲಾ ಮುಗಿದ ಮೇಲೆ, ಅಣ್ಣಾನೇ ಹೇಳಿದಂಗೆ ಮೂಟೇನ ಬೆಂಕೀಗೋ, ಹಾಳು ಬಾವೀಗೋ ಹಾಕಿಬಿಡೋಣ..” ಎಂದು ಕಿರೀ ತಮ್ಮ ರಾಮು ಹೇಳಿದ್ದಕ್ಕೆ ಹಿರಿಯಣ್ಣ ಶ್ಯಾಮಣ್ಣ ಹೌಹಾರಿಬಿಟ್ಟರು: 
“ಅಣ್ಣಾರು ಅಂದ್ರೆ ದೇವರಂತೆ ಬದುಕಿದೋರು. ಅವರು ಕಣ್ಮುಂದೆ ಇರದಿದ್ರೂ ಇಲ್ಲೇ ಇರ್ತಾರೆ; ಸುತ್ತಲ ಜನಾನೇ ಅವರನ್ನ ಅಷ್ಟು ಗೌರವದಿಂದ ನಡೆಸಿಕೊಂಡ ಮೇಲೆ ನಾವು ಅದಕ್ಕಿಂತಲೂ ಹೆಚ್ಚು ಗೌರವ, ಮುತುವರ್ಜಿಯಿಂದ ನಡೆಸಿಕೊಳ್ಳಬೇಕಲ್ಲವಾ.  ಅವರ ನಂಬಿಕೇಗೆ ನಾವು ಅಗೌರವ ಮಾಡಿದೋ ಅಂದರೆ, ಜೀವಂತ ಇರೋ ಅಮ್ಮನ ಜೀವ ಎಷ್ಟು  ನೊಂದುಕೊಳ್ತದೆ ಅಂತ ಯೋಚ್ನೆ ಮಾಡಿದ್ದೀರಾ? ಅವರಿಂದ ನಮ್ಮ ಮನೇತನಕ್ಕೊಂದು ಗೌರವ; ನಮಗೊಂದು ಬೆಲೆ. ಎಲ್ಲೇ ಹೋದರೂ, ‘ಓ, ಗೌಡ್ರು ಮಕ್ಕಳು ಬಂದ್ರೂ ..’ ಅಂತ ಶಾನೇ ಮರ್ಯಾದೆ ಕೊಡ್ತಾರೆ. ಅದನ್ನ ಉಳಿಸಿಕೊಳ್ಳಾಕೆ ಆಗದಿದ್ರೆ ನಾವು ಮಕ್ಕಳೂ ಅಂತ ಇದ್ದರೆಷ್ಟು, ಸತ್ತರೆಷ್ಟು. ನೀವು ಏನಾದರೂ ಅಂದುಕೊಳ್ಳಿ; ನಾನಂತೂ ಅದಕ್ಕೇನು ಮರ್ಯಾದೆ ಕೊಟ್ಟು ಸಾಗ ಹಾಕಬೇಕೋ, ಅದು ಮಾಡೇ ಮಾಡ್ತೀನಿ.  ಸರೀಕರು ನಿಮ್ಮನ್ನ ಕೇಳಲ್ಲ, ಮನೇಗೆ ತಲೇಮಗ ನನ್ನ ಕಡೆ ಬೆಟ್ಟು ಮಾಡ್ತಾರೆ. ಎಲ್ಲಾ ಒಳ್ಳೇದು ಕೆಟ್ಟದ್ದಕ್ಕೂ ತಲೆ ಕೊಟ್ಟು ನಿಲ್ಲೋದೇ ನನ್ನ ಧರ್ಮ..”
ವಿರುದ್ಧ ನಡೆದುಕೊಳ್ಳುವುದು ತಮ್ಮಂದಿರಾರಿಗೂ ಶಕ್ಯವಿರಲಿಲ್ಲ: “ಆಯ್ತಪ್ಪಾ, ಆದರೆ, ಅದನ್ನೀಗ ಏನು ಮಾಡುವುದು?”
ಭಿಕ್ಷಕ್ಕೆ ಬಂದ ಸನ್ಯಾಸಿಯೊಬ್ಬ, ವಿಷಯ ಕಿವಿಗೆ ಬಿದ್ದೇಟಿಗೇ, “ಅದನ್ನ ತಾತ್ಸಾರ ಮಾಡಬ್ಯಾಡಿ; ಬೆಂಕೀ ಇದ್ದಂಗೆ; ಸರಿಯಾಗಿ ಮೋಕ್ಷ ಕಾಣಿಸದಿದ್ದರೆ ಮನೇ ಮಂದಿಗೆಲ್ಲಾ  ಕೇಡು..”   ಎಂದು ಹೆಂಗಸರ ಹತ್ರ ಹೇಳಿದ್ದನಂತೆ. ‘ಏನಾಗುತ್ತೋ, ಹೋಗುತ್ತೋ, ಇದೆಲ್ಲಾ ಉಸಾಬರೀನೆ ಬೇಡ. ಈಗಿಂದೀಗ ಆ ಮೂಟೆಗೊಂದು ತಳ ತೋರಿಸಲೇ ಬೇಕು’ ಎಂದು ಗಂಡಸರು ಜಾಗೃತರಾದರು. ಆದರೆ, ಹೇಗೆ ಮಾಡುವುದು? ಯಾರಾರನ್ನೋ ಕೇಳಿದ್ದೂ ಫಲವಾಗಲಿಲ್ಲ. ಗುಂಪು ಚರ್ಚೆಯಲ್ಲಿ ಹಿರಿಯನೊಬ್ಬ, “ಈ ಸುತ್ತಿನಲ್ಲಿ ಇದೆಲ್ಲಾ ನಾವು ಮಾಡಿದೋರೂ ಅಲ್ಲ, ಕೇಳಿದೋರೂ ಅಲ್ಲ; ಅನಕಾ ಯೋಳೋದಾದ್ರೆ, ರಾಮುರುದು ಅಂದ್ರೆ ಅದು ಸಂಸಾರಿಗರ ಮನೇಲಿರೋದು ಒಳ್ಳೇದಲ್ಲ; ಹಂಗಂತ ಏಕಾಏಕಿ ಎತ್ತಿ ಬಿಸಾಕೋದೂ ಅಲ್ಲ;  ಮನೇಯಿಂದ ಆಚೆ ಹೋಗೋವರ್ಗೂ ರಾಮಭಜನೆ ಆಗಬೇಕು; ಅದೂ ಒಂದು ಶಾಂತಕಾರ ಮಾಡಿದಂಗೆ ಆಗ್ತದೆ..” ಎಂದರು. ಮತ್ತಾರೋ “ ‘ರಾಮಸಪ್ತಾಹ’ವನ್ನೇ ಮಾಡಿಸಿದರೆ ಊರಿಗೂ ಭಾಳಾ ಒಳ್ಳೇದು” ಎಂದೂ  ಸೇರಿಸಿದರು.  “ರಾಮಸಪ್ತಾಹ ಅಂದರೆ ಏಳೂ ದಿನ ಹಗ್ಲೂ ರಾತ್ರೇನೂ ಏಕವಾಗಿ ಅಖಂಡ ರಾಮ ಭಜನೆ ನಡೀಬೇಕು” -ಭಜನಾ ಮಂಡಳಿ ಭಕ್ತನೊಬ್ಬ ಮಾಹಿತಿ ನೀಡಿದ. 
ಅಂದರೆ ಸಾಮಾನ್ಯವೇ! ಸುತ್ತ ಎಲ್ಲೆಲ್ಲಿ ಭಜನಾ ಮಂಡಳಿಯವರಿದ್ದಾರೋ ಅವರಿಗೆಲ್ಲಾ ಆಹ್ವಾನ ಕೊಡಬೇಕು. ಊರು ಮುಂದೆ ದೊಡ್ಡ ಚಪ್ಪರ, ತಳಿರು ತೋರಣ ಅಲಂಕರಣವಾಗಬೇಕು. ಸೀತಾಂಜನೇಯ ಲಕ್ಷ್ಮಣ ಸಹಿತ ರಾಮರ ಪಟ ಎಲ್ಲಿದೆಯೋ ತರಬೇಕು; ಪೂಜಿಸೋ ಕದಲೆ ಮಂಟಪ ಆಗಬೇಕು. ಪಕ್ಕದಲ್ಲೇ  ರಾಮ ಕೋಟಿ ಮೂಟೆಯನ್ನೂ ಇಕ್ಕಿ ತಿರುನಾಮ ಬಳಿದು, ಹೂ ಪತ್ರೆ ಹಾರಗಳಿಂದ ಅಲಂಕರಿಸಬೇಕು; ಈ ವಿಸರ್ಜನಾ ಕೈಂಕರ್ಯದದ ಹೊಣೆ ಹೊತ್ತ ಕರ್ತನು ಶುದ್ಧ ಮಡಿಯಲ್ಲಿರಬೇಕು; ಅತ್ತಿತ್ತ ಕದಲದೇ ದೇವರ ಪಟಕ್ಕೂ, ರಾಮಕೋಟಿಗೂ ಗಂಟೆ ಗಂಟೆಗೆ ಆರತಿ ಮಾಡುತ್ತಿರಬೇಕು. ನಿತ್ಯ ಬರುವ ನೂರಾರು ಸಂಖ್ಯೆಯ ಆಸ್ತಿಕರಿಗೆ ಅಡುಗೂಟದ ವ್ಯವಸ್ಥೆ ಆಗಬೇಕು. ಸರದಿಯಲ್ಲಿ ಭಜನೆ ಮಾಡುವ ತಂಡದವರಿಗೆ ನಿದ್ದೆ ದೂರಾಗಿಸೋ ಕಾಫೀ, ರಾಮರಸ ವಗೈರೆ ಸರಬರಾಜು ಆಗುತ್ತಿರಬೇಕು.  ಕೊನೆಗೆ, ಭಜನಾ ತಂಡಗಳ ಮುಖ್ಯಸ್ಥರಿಗೆ ಗೌರವಾರ್ಪಣೆಗಳೂ, ಕಾಣಿಕೆಗಳೂ ಸಲ್ಲಬೇಕು. ಇದನ್ನೆಲ್ಲಾ ನಡಕಟ್ಟಿ ನಿಂತು ಶ್ರದ್ಧೆಯಿಂದ ನಿಭಾಯಿಸೋ ಜನ ಆಗಬೇಕು. ಹೀಗೇ.. ಒಂದಕ್ಕೊಂದು; ಕೈ ಹಾಕಿದರೆ ಭಜರಂಗೀ ಬಾಲ.. ಕೇಳೀ ಕೇಳೀ ಶ್ಯಾಮಣ್ಣನ ಮೈ ಬೆವರಿತು.

ಈಗಾಗಲೇ ತಿಥಿ ವಗೈರೆಗೆ ಇದ್ದ ದುಡ್ಡೆಲ್ಲಾ ಖರ್ಚಾಗಿ ಬರೀಗೈ ಆಗಿದೆ. ‘ಬರೀಗೈ ಅನ್ನಬಾರದು; ತುಂಬೋದಕ್ಕೆ ಅವಕಾಶವಿದೆ ಅನ್ನಬೇಕು’ ಅಂತ ಅಣ್ಣಾರು ಹೇಳುತ್ತಿದ್ದ ತತ್ವ ನೆನಪಾಯಿತು. ಆಯ್ತು; ಸಾಲ ಆದರೂ ಮಾಡಿ ಖರ್ಚು ನಿಭಾಯಿಸಬಹುದು.  ಆದರೆ, ಎಲ್ಲವನ್ನೂ ಮುಂದೆ ನಿಂತು ವಾರಗಟ್ಟಲೇ ಕೆಲಸ ಮಾಡೋರು ಯಾರು?  ‘ಇದು ಬಾಯಿ ಮಾತಿಗೆ ಆಗೋದಲ್ಲ. ತುಸ ಲೋಪ ಆದರೂ ವ್ರತ ಭಂಗ; ಮಾಡಿದ್ದೆಲ್ಲಾ ವ್ಯರ್ಥ.. ಹುಷಾರು ಕಣ್ರಪ್ಪಾ’ ಎಂದರು ಬುದ್ಧಿವಂತ ಹಿತೈಷಿಯೊಬ್ಬರು. ಅಳೆದೂ ಸುರಿದೂ, ಕೊನೆಗೆ, ‘ವಾರ ಕಾಲ ಸಪ್ತಾಹ ಮಾಡಿಸೋದು ಬೇಡ; ಒಂದು ದಿನ ಹಗಲೂ ಇರುಳೂ ಅಖಂಡ ಭಜನೆ ಮಾಡಿಸಿದರೂ ಸಾಕು; ಅದೇ ಫಲ ಸಿಕ್ಯಾತು’ ಎಂಬ ಊರ ಓಷ್ಠಮಯ್ಯನ ಆಪದ್ಧರ್ಮದ ಉಪಾಯ  ಆಧಾರವಾಯಿತು. 

“ಪೂರ್ವದ ಸುಕೃತ ಇದು; ಕಿಂಚಿದೂನವೂ ಆಗದಂತೆ  ಶಿರಸಾವಹಿಸಿ ನೆರವೇರಿಸುತ್ತೇನೆ” ಎಂದು ಪಕ್ಕದ ಊರ ಅಯ್ಯ ಮುಂದೆ ಬಂದರು.‘ಭಜನೆ ಮುಗಿದು, ಎಲ್ಲರಿಗೂ ಪ್ರಸಾದ ದಾಸೋಹ ಆದ ತಕ್ಷಣ ಪೂಜೆಗಿಟ್ಟಿದ್ದ ರಾಮ ಕೋಟಿ ಮೂಟೆಯನ್ನು ವ್ರತ ಹಿಡಿದವ ಹೊತ್ತು  ಅದೇ ನೇರಕ್ಕೆ ಪ್ರಯಾಣ ಹೊರಟುಬಿಡಬೇಕು’ಎಂದು ಒಬ್ಬರು ತಿಳಿಸಿದ್ದರ ಪ್ರಕಾರ, ಹಿರಿಮಗ ಶ್ಯಾಮಣ್ಣನ ಮುಂದಾಳತ್ವದಲ್ಲಿ ಕಿರಿ ಮಗ ರಾಮಣ್ಣನು ಮೂಟೆ ಹೊತ್ತು, ದೇವರು ಇಟ್ಟಂತೆ ಆಗಲಿ; ಎಲ್ಲಾದರೂ ಒಂದು ಕಡೆ ಸನ್ನೇಸಿ ಮಠದಲ್ಲಿ ಸೇರಿಸಿಯೇ ಬರುವುದಾಗಿಯೂ ಹೇಳಿ, ಬರುವವರೆಗೂ ಮನೇಕಡೆ ದನ, ಕೋಳಿ ಜ್ವಾಪಾನ ಎಂದು ಎಲ್ಲರಿಗೂ ಹೇಳಿ, ಅಮ್ಮನ ಕಾಲಿಗೆ ನಮಸ್ಕಾರ ಮಾಡಿ ಹೊರಟರು. ಊರಿಂದ ನಾಲ್ಕೈದು ಮೈಲಿ ಗುಡ್ಡದ ಹಾದೀಲಿ ನಡೆದರೆ ಅಲ್ಲಿ ಹೆದ್ದಾರಿ ಸಿಗುತ್ತೆ. ಅಲ್ಲಿ  ಕಾದು ಕೂತರೆ ಎಷ್ಟೊತ್ತಿಗಾದರೂ  ‘ಪೋಸ್ಟ್ ಗಾಡಿ’ ಎಂದೇ ಪ್ರಸಿದ್ಧವಾದ ಅಮೀರ್ ಮೋಟಾರು ಬರುತ್ತದೆ. ಅದು ಹತ್ತಿದರೆ ಸಂಜೇ ಹೊತ್ತಿಗೆ ನಗರ ಸೇರಬಹುದು.

ಅಂತೂ ಅಲ್ಲಿಗೆ ನಡೆದುಬರುವ ಹೊತ್ತಿಗೆ ಆ ಬಿಸಿಲ ಝಳಕ್ಕೂ, ನಡೆದ ಬಿರುಸಿಗೂ ನಲುಗಿ ರಾಮಣ್ಣನ ಕೊರಳಲ್ಲಿ  ನೇತಾಡುತ್ತಿದ್ದ ಸುಗಂಧ ಮಂಕಾಗಿತ್ತು. “ನನಗಿದು ಬ್ಯಾಡಪ್ಪಾ, ಎಲ್ಲಾ ನೋಡ್ತಾರೆ..” ಎಂದು ಹೇಳುತ್ತಲೇ ಅಣ್ಣನ ಅನುಮತಿಗೂ ಕಾಯದೇ ಹಾರ ಕಿತ್ತೆಳೆದು ದೂರಕ್ಕೆ ಎಸೆದನು. ಜಾಲಿ ಪೊದೆ ಮೇಲೆ ಬಕ್ಕಬರಲಾಗಿ ಬಿದ್ದ ಹಾರ ಮುಳ್ಳು ಮೊನೆಗಳಿಗೆ ಸಿಕ್ಕ ಮಿಕದಂತೆ ತೂಗಾಡುತ್ತಿತ್ತು. ಶ್ಯಾಮಣ್ಣನು  ಅದನ್ನು ಒಂದೇ ಚಿತ್ತದಿಂದ ನೋಡಿಯೇ ನೋಡಿದನು.
ಎಷ್ಟೋ ಹೊತ್ತಿನ ಮೇಲೆ ಅಂದುಕೊಂಡಂತೆಯೇ ಅಮೀರ್ ಬಸ್ಸು ಹಾರನ್ ಮಾಡುತ್ತಾ ಬಂದು ನಿಂತಿತು. ‘ಮೂಟೆ’ನೋಡಿದ ಕ್ಲೀನರನು ‘ಆ ಲಗೇಜ್ ಟಾಪ್ ಮೇಲೆ ಹಾಕಿ’ ಎಂದು ಕೈ ಹಾಕಿ ಜೋರಾಗಿ ಕಿತ್ತುಕೊಂಡೇ ಸರಸರ ಬಸ್ಸು ಏರಿ, ಅಲ್ಲಿ ಎಸೆದು ರೈಟ್ ರೈಟ್ ಎಂದು ಪೀಪಿ ಊದುತ್ತಲೇ, ಡಬಡಬ ಡೋರ್ ಬಡಿಯುತ್ತಾ  ಡೋರ್ ಮುಚ್ಚಿಕೊಂಡೇಬಿಟ್ಟನು. ‘ತಡ ಮಾಡಿದರೆ ಮೂಟೆ ಒಂದು ಕಡೆ, ನಾವು ಒಂದು ಕಡೆ ಆಗಿಬಿಟ್ಟೇವು’ ಎಂಬ ಭಯವಾಗಿ, ದಡ ದಡ ಬಸ್ ಹತ್ತಿದ ಶ್ಯಾಮಣ್ಣ, ರಾಮಣ್ಣರು ಸಿಕ್ಕಿದ ಒಂದೊಂದು ಸೀಟು ಹಿಡಿದರೂ, ಸಮಾಧಾನವಾಗದೇ,  “ ಅಲ್ಲಾ ಕಣಯ್ಯಾ, ಅದೇನು ಕುರೀ ಬಂಡ ಅಂತ ತಿಳಿದೆಯಾ? ಅದು ‘ದೇವರು’ ಇದ್ದಂಗೆ; ಅದುನ್ನ ಎಷ್ಟು ಜೋಪಾನವಾಗಿ ಅದರ ಜಾಗ ಸೇರಿಸಬೇಕಾಗದೆ ನಿನಗೆ ಗೊತ್ತಾ? ಮುಂದಿನ ಸ್ಟಾಪಲ್ಲಿ ಅದನ್ನ ಇಳಿಸಿ ಕೊಟ್ಟುಬಿಡು, ನಾವು ತೊಡೆ ಮ್ಯಾಲಾದರೂ ಇಕ್ಕಂಡು ಕೂಕಂತೀವಿ” ಎಂದ ಶ್ಯಾಮಣ್ಣಗೆ, “ಓ ಹಂಗಾ ಗೌಡ್ರೇ; ನಾನೆಲ್ಲೋ ಮಾಮೂಲಿ ಕೋತ್ಮಿರಿ ಚೀಲ ಅಂದುಕೊಂಡೆ. ಆದ್ರೂ ಬ್ಯಾಡ ಬಿಡ್ರೀ, ಮುಂದೆ ಹೋತಾ ಹೋತಾ ಜನಾ ರಶ್ ಆತದೆ. ಆವಾಗ ಯಾರಾರೋ ಆ ದ್ಯಾವರು  ಮೂಟೇನ ಮುಟ್ಟಿಸಿಕೊಂಡು ಅಂಟು ಮುಂಟು  ಆಗೋದು ತಪ್ತದೆ..” ಅಂದುಬಿಟ್ಟನು. ಎಷ್ಟೋ ವರ್ಷಗಳಿಂದ ಅದೇ ರೂಟಿನಲ್ಲಿ ಓಡಾಡುತ್ತಿದ್ದ ಆ ಕ್ಲೀನರನು ಈ ಸುತ್ತಲ ಕೆಲವು ಪ್ರಯಾಣಿಕರಿಗೆ  ಮಾಮೂಲಿ ಪರಿಚಯಸ್ಥನಾಗಿದ್ದವನು. ಬೇಕಾದ ಮನುಷ್ಯ ಅಂತ ಅವನೊಂದಿಗೆ ಹೆಚ್ಚೇನೂ ಜಗಳಾ ಮಾಡಲು  ಸಾಧ್ಯವಾಗದೇ, ತಮ್ಮೊಳಗೇ ಪೇಚಾಡಿಕೊಂಡು ಕೂತ ಅವರಿಗೆ, ತಕ್ಷಣವೇ ಅರಿವಿಲ್ಲದಂತೇ ಆಯಾಸದ ಮಾಯಾ ನಿದ್ದೆ ಹತ್ತಿಬಿಟ್ಟಿತ್ತು. 

***

“ಏನು ಗೌಡ್ರೇ, ನಿಮ್ಮ ದ್ಯಾವರು ಮರೆತು ಬಿಟ್ರಾ..?” ಎಂದು ಜೋರು ಕೂಗಿದಾಗಲೇ ಶ್ಯಾಮಣ್ಣ ಬೆಚ್ಚಿ ತಟ್ಟನೇ  ಕಣ್ಣ ತೆರೆದದ್ದು. ಬಸ್ಸು ಬಂದು ಲಾಸ್ಟ್ ಸ್ಟಾಪಲ್ಲಿ ನಿಂತಿತ್ತು. ಜನಾ ಎಲ್ಲಾ ದಬ ದಬಾ ಇಳಿದಿದ್ದರು. ಆ ಸದ್ದಿಗೂ ಎಚ್ಚರಾಗಲಿಲ್ಲವಲ್ಲ! ಮೂರ್ನಾಲ್ಕು ದಿನದ ಬಾಕಿಯನ್ನು ಒಂದೇ ಸಾರಿಗೆ ಕಬಳಿಸುವಂತೆ ಅವರನ್ನು ಅದುಮಿಕೊಂಡಿದ್ದ ನಿದ್ದೆ ಅದು. ಕೂಗಿ ತಟ್ಟದಿದ್ದರೆ ಇನ್ನೂ ಏಸೊತ್ತು  ಗೊರಕೆ ಹೊಡೆಯುತ್ತಿದ್ದರೇನೋ. ಗೊರಕೆಯಲ್ಲ, ಅಂತರ್ಮುಖಿಯಾಗಿ ‘ರಾಮಕೋಟಿ ಮೂಟೆ’ ಹೊತ್ತು, ಅದನ್ನು ವಿಲೆ ಮಾಡುವ ಬಗ್ಗೆ ಯಾರಾರ ಬಳಿಯೋ ಅಲೆದು ಗೋಗರೆದು  ಮತ್ತಷ್ಟು ಆಯಾಸಗೊಂಡು ನಿದ್ರಾ ಕನಸಲಿ ಮೈಮರೆತಿದ್ದರೇನೋ.

ಅದು ದೊಡ್ಡ ಮಾರ್ಕೆಟ್ ಜಾಗ. ಅದರ ಪಕ್ಕದ ಗಲ್ಲಿ ಸೊಂಪಲಲ್ಲಿ ಹೀಗೇ ಹೀಗೇ ನುಗ್ಗಿ ಹೋದರೆ ಅಲ್ಲೊಂದೆಡೆ ಮಠ ಸಿಗುತ್ತದೆ. ಆ ಸ್ವಾಮೇರನ್ನ ಕೇಳಿದರೆ ಅವರು ಈ ‘ರಾಮಕೋಟಿ’ ಪಡೆದು ನಿಮ್ಮ ಭಾರ ಇಳಿಸಬಹುದು ಅಂತ ಯಾರೋ ಹೇಳಿದ್ದರಿಂದ ಅವರು ಯಾರಾರನ್ನೋ ದಾರಿ ಕೇಳುತ್ತಾ, ಮೂಟೆ ಹೊತ್ತು ಸಂದಿ ಗೊಂದಿ ತಿರುಗಿ, ಕೊನೆಗೆ ಸ್ರೀರಾಮರೇ ದಾರಿ ತೋರಿದಂತೆ ಮಠದ ಬಾಗಿಲು ಮುಟ್ಟಿದ್ದರು. ಆದರೆ ಆ ಹೊತ್ತಿಗೆ ಮಠದ ದೊಡ್ಡ ಬಾಗಿಲು ಮುಚ್ಚಿತ್ತು. ಏನಪ್ಪಾ ಮಾಡೋದು ಅಂತ ದಿಕ್ಕೆಟ್ಟಾಗ ಯಾರೋ, ‘ಪಕ್ಕದ ಗಲ್ಲಿ ರಸ್ತೆಯಲ್ಲಿ ಸಣ್ಣಬಾಗಿಲು  ಇರುವುದಾಗಿಯೂ, ನುಗ್ಗಿ ಒಳ ಹೋದರೆ ಯಾರಾದರೂ ಕಣ್ಪಡೆಯಬಹುದು ಎಂದು ಹೇಳಿದ್ದೂ ಮತ್ತೆ ದೇವರೇ ತಮಗೆ ದಾರಿ ತೋರಿದಂತಾಗಿ ಆ ಕತ್ತಲಲ್ಲೇ ತಡಕಾಡುತ್ತಾ, ಆವರಿಸಿದ ಕಮಟು ವಾಸನೆಗೆ ಸಿಂಡರಿಸುತ್ತಾ ಬಂದು,  ಅರೆ ತೆರೆದ ಬಾಗಿಲ್ಲಿ, ‘ಅಂತೂ ತಳ ಮುಟ್ಟಿದ್ದೀವಿ, ಪರಮಾತ್ಮ ಈ ಹೊರೆ ನೀನು ಒಪ್ಪಿಸಿಕೊಂಡು ನಮ್ಮ ಭಾರ ಕಳಿಯಪ್ಪಾ’  ಎಂಬ ಅಹವಾಲಿನೊಂದಿಗೆ ರಾಮಸ್ಮರಣೆ ಮಾಡುತ್ತಾ, ಬಲಗಾಲು ಒಳಗೆ ಊರುತ್ತಿದ್ದಂತೆಯೇ ‘ಅಬ್ಬರಿಸುತ್ತಾ ಬಂದವು’ಗಳಿಗೆ ಕೈ ಮುಗಿಯುವಾಗ್ಗೆ, ಅತ್ತಲಿಂದ ಮತ್ತ್ಯಾರೋ ಗಡುಸಾಗಿ ಅದ್ದದಲಿಸಿದರು: 
“ಯಾರ್ರೀ ಅದು? ಈ ಅವೇಳೆಯಲ್ಲಿ ಒಳ ನುಗ್ಗುತ್ತಿರೋದು, ಆಚೆ ಹೋಗ್ರೀ..” 
ಮೀರಿ ನುಗ್ಗಲು ಧೈರ್ಯ ಸಾಲದೇ, “ಸ್ವಾಮೀ, ದೂರದಿಂದ ಬಂದಿದ್ದೀವಿ; ಈ ‘ಗಂಟ’ನ್ನ  ತಮಗೆ ಒಪ್ಪಿಸಬೇಕು..” ಎಂದು ವಿನಂತಿಸಿಕೊಂಡರು, ಹಿರಿಯನಾದ ಶ್ಯಾಮಣ್ಣ. ಮಠಕ್ಕೆ ಯಾರೋ ಕಾಣಿಕೆ ತಂದಿರಬಹುದೆಂದು ಉತ್ಸುಕನಾದ ಆ ವ್ಯಕ್ತಿ, ಮಲಗಿದ್ದಲ್ಲಿಂದ ಎದ್ದು ಬಂದು, “ಏನದು..? ಹೊರೆ ಕಾಣಿಕೇನಾ..” ಎಂದು ಅರೆಗತ್ತಲಲ್ಲಿಯೇ ಕಣ್ಣರಳಿಸಿದನು. ಶ್ಯಾಮಣ್ಣನಿಗೆ ಜೀವ ಬಂದಂತಾಗಿ, “ಸ್ವಾಮಿ, ನಾವು ದೂರದ ಊರೋರು, ಹಿಂಗಿಂಗೆ ನಮ್ಮಪ್ಪಾರು ಕೂಡಿಕ್ಕಿದ್ದು, ಅದುನ್ನ ತಮ್ಮಂತಹವರಿಗೆ ಮುಟ್ಟಿಸಿದರೆ ಮುಂದಿನದು ಅವರು ಮಾಡ್ತಾರೆ ಅಂತ ಯಾರೋ ಹೇಳಿದ್ದರಿಂದ ಇಲ್ಲಿಗೆ ಹುಡುಕಿ ಬಂದಿವಿ. ಈಗ ನೀವೇ ನಮ್ಮುನ್ನ ಪಾರು ಮಾಡಬೇಕು” ಎಂದು ವಿನಮ್ರವಾಗಿ ನಡುಬಾಗಿ ಕೈ ಮುಗಿದರು. 
ಮೊಬೈಲ್ ಬೆಳಕಲ್ಲಿ ‘ಗಂಟಿ’ನ ಒಳಹೊಕ್ಕು ನೋಡಿದ ಆ ಕಾವಲುಗಾರನಿಗೆ ಅಸಾಧ್ಯ ಸಿಟ್ಟು ಬಂದಿತಾದರು ಸಹಿಸಿಕೊಂಡವನಾಗಿ, “ಇದೆಲ್ಲಾ ನಮಿಗೆ ಸಂಬಂಧಿಸಿದ್ದಲ್ಲ; ಆದರೂ ‘ಬುದ್ಧಿ’ಯೋರು ಇದನ್ನ ಸ್ವೀಕರಿಸಿ, ಅದಕೆ ಹೋಮಹವನ ಮಾಡಿ ಶಾಂತಕಾರ ಮಾಡಬೇಕಾದರೆ, ಭಾಳಾ ಖರ್ಚು ಬರ್ತದೆ. ಅದನ್ನ ನೀವು ಕೊಡಂಗಿದ್ರೆ ಬೆಳಿಗ್ಗೆ ‘ಬುದ್ಧಿ’ಯೋರು ನಿದ್ರಾಧ್ಯಾನದಿಂದ ಎದ್ದೇಳೋವರೆಗೂ ಕಾಯಬಹುದು; ಇಲ್ಲಾಂದ್ರೆ ಈಗಿಂದೀಗ ನಿಮ್ಮ ಮೂಟೆ ಜೊತೆ ಆಚೆ ಹೋಗಿಬಿಡಬೇಕು. ರಾತ್ರಿ ವೇಳೆ ಅನಧಿಕೃತ ವ್ಯಕ್ತಿಗಳಿಗೆ ಇಲ್ಲಿ ಪ್ರವೇಶವಿರುವುದಿಲ್ಲ” ಎಂದು ವದರಿಬಿಟ್ಟನು. ಅನಿರೀಕ್ಷಿತ ವಿಪತ್ತಿಗೆ ಬೆದರಿದ ಶ್ಯಾಮಣ್ಣ,  “ಸ್ವಾಮಿ ನಮಿಗೆ ಇದೆಲ್ಲಾ ಹೊಸದು; ಈ ಪಾಟಿ ಖರ್ಚು ಕೋಡಾಕೂ ನಮ್ಮಲ್ಲಿ ಯತ್ನವಿಲ್ಲ. ನೀವೇ ಏನಾರಾ ದಯಾ ತೋರಬೇಕು” ಎಂದು ಬೇಡಿದ್ದಕ್ಕೆ  ಆ ಮನುಷ್ಯ ಬಿಲ್ ಕುಲ್ ಸಾಧ್ಯವಿಲ್ಲ ಎಂದು ತಲೆ ಕೊಡವಿದ್ದಲ್ಲದೇ, ‘ಇಲ್ಲಿಂದ ಬೇಗ ಜಾಗ ಖಾಲಿ ಮಾಡ್ರೀ, ಬಾಗಿಲು ಹಾಕಬೇಕು’ ಎಂದೂ ಅವಸರಿಸಿದನು. 

ಕೊನೆಗೆ, “ತುಂಬಾ ಹಸೀತದೆ, ದಾವ್ರಾನೂ ಆತದೆ, ಏನಾದ್ರೂ ಇದ್ರೆ ಕೊಡಿ” ಎಂದು ಕೈ ಒಡ್ಡಿದವರಿಗೆ, “ಎಂಟು ಗಂಟಿಗೇ ಇಲ್ಲಿ ಪ್ರಸಾದ ಕ್ಲೋಸು, ತಿರುಗಾ ಬೆಳಿಗ್ಗೆ ಒಂಬತ್ತರವರೆಗೆ ಏನೂ ಸಿಗಲ್ಲ; ಆಚೆ  ಎಲ್ಲಾದ್ರೂ ಸಿಕ್ಕಾತೇನೋ ನೋಡ್ಕೋ ಹೋಗ್ರೀ..” ಎಂದುಬಿಟ್ಟನು. “ಹೋಗಲಿ ಸ್ವಾಮೀ, ಈ ರಾಮಕೋಟೀನ  ತಗೊಳ್ಳೋ ವಾರಸುದಾರರು ಎಲ್ಲಿದ್ದಾರು? ಅದನ್ನಾದರೂ ಹೇಳಿ ಪುಣ್ಯ ಕಟ್ಟಿಕೊಳ್ರೀ..”  ಎಂದು ಅಂಗಲಾಚಿದ್ದಕ್ಕೆ, “ಯಾರೋ ಹೇಳಿದ್ದು ಕೇಳಿ ಕುರಿಗಳ ತರಾ ತಂದ್ರೀ; ಇದೆಲ್ಲಾ ಹಳೆ ಪ್ಯಾಷನ್ನು; ಈಗ ಯಾರಿಗೂ ಪುರುಸೊತ್ತು ಇಲ್ಲ; ಆದ್ರೂ ನಮ್ಮ ತಲೆ ತಿನ್ನಾಕೆ ಬಂದಿದ್ದೀರಿ; ಇದು ಪುಗಸಟ್ಟೆ ಆಗಾ ಕೆಲಸ ಅಲ್ಲ ಅಂದ್ರೆ ಕೇಳಾದಿಲ್ಲ. ಹಂಗೂ ಆಗಬೇಕಾದ್ರೆ, ಬೆಳಗಿನ ಜಾವ ಆರು ಗಂಟೆಗೆ ಮೊದಲೇ ಒಂದು ಪ್ರವೇಟ್ ಬಸ್ಸು ಹೋತದೆ; ಅದರಾಗೆ ಹೋಗ್ರಿ, ಈಗ ಏನಾರಾ ಸ್ಕೀಂ ಇದ್ದು, ಆ ಮಠದೋರು ಏನಾರಾ ತಗಂಡ್ರೆ  ತಗಂಡಾರು; ನಿಮ್ ಹಣೇ ಬರಾ..” ಎಂದು  ಹೇಳುತ್ತಾ, “ಕಂಡಕ್ಟರಿಗೆ ಈ ಚೀಟಿ ತೋರಿಸಿ, ಅಲ್ಲಿ ಇಳುಸ್ತಾರೆ; ಅಲ್ಲಿಂದ ಕಾಡಾಗೆ ಐದಾರು ಮೈಲಿ ನಡೆದು ಹೋದ್ರೆ ಆ ಮಠ ಸಿಕ್ತದೆ..” ಎಂದು  ಒಂದು ಚೀಟಿ  ಅವನ ಕೈಗೆ ತುರುಕಿ, ಕಿಂಡಿ ಬಾಗಿಲೂ ಜಡಿದುಬಿಟ್ಟನು. 

‘ಹಸ್ದು ಬಂದ ಎಷ್ಟೋ ಜನಕ್ಕೆ ಅನ್ನ ಹಾಕಿದ ಮನೆ ನಮ್ಮದು; ಈಗ ಪರಮಾತ್ಮನ ಕೃಪೆಯಿಂದ ನಾವೇ ಹಿಂಗೆ ಅನ್ನ ನೀರಿಲ್ಲದೇ ಒಣಗಂಗಾಯ್ತಲ್ಲಾ,  ನೋಡಾಣ ಬಾ, ಯಾವುದಾದರೂ ಗೂಡಂಗಡೀಲಿ ತಿನ್ನಾಕೆ ಕಡಲೆ ಬುರುಗಾದರೂ ಸಿಕ್ಕಾತೇನೋ’ ಎಂದು ಮೂಟೆ ಹೊತ್ತು ಅರೆಬರೆ ಕತ್ತಲು ಬೆಳಕಿನ ಓಣಿಯಲ್ಲೇ  ನಡೆದರು. ಅಲ್ಲೊಂದು ಸರ್ಕಲ್‍ನಲ್ಲಿ ಚಿಕ್ಕ ಹೋಟಲ ಕಂಡು ಖುಷಿಯಾಗಿ ಒಳ ಹೋಗಿ, ಕೂರುವ ಮುನ್ನವೇ ಎದುರು ಕಂಡ ಸಪ್ಲೈಯರಿಗೆ ಆತುರಾತುರವಾಗಿ, “ಇಲ್ಲಿ ಉಣ್ಣಾಕೆ ಏನು ಸಿಗ್ತದೆ..?” ಎಂದನು. ಆತ ತನ್ನ ನಾಲಗೆಯಲ್ಲಿ ರೆಡಿ ಇದ್ದ ರೆಕಾರ್ಡ್ ಹಾಕಿದನು: “ ಮಟನ್, ಚಿಕನ್, ಖೈಮ, ಬೋಟಿ, ಪರೋ..”  - ಐಟಂಗಳು ಕಿವಿಗೆ ಸ್ಪರ್ಶವಾಗುತ್ತಿದ್ದಂತೆಯೇ ಉಲ್ಲಸಿತನಾದ ರಾಮಣ್ಣನು, ಏನೋ ಒಂದು ತಿಂದರಾಯಿತು ಎಂದು ಮೂಟೆ ಕೆಳಗಿಳಿಸಲು ಹದನಾಗುತ್ತಿದ್ದರೆ, ಅಣ್ಣ ಶ್ಯಾಮಣ್ಣನಿಗೆ ಹೊಟ್ಟೆಗೆ ಬೆಂಕಿ ಬಿದ್ದಂತಾಯಿತು.
“ ಅಲ್ಲಾ ರಾಮು, ಹೊಟ್ಟೆ ಆತುರಕ್ಕೆ ಏನಾದ್ರೂ ಆಗಲೀಂತ ತಿನ್ನಾಕಾದಾತ? ನಾವೀಗ ಬಾಡುಬಳ್ಳೆ ತಿಂದ್ರೆ, ನಮ್ಮ ದೇವ್ರುಗೆ ಅಮಂಗಳ ಆಗಲ್ಲವಾ..? ನಡಿ, ನಡೀ..” ಎಂದು ತಳ್ಳಿಕೊಂಡೇ ಹೊರಬಂದನು. “ಅಯ್ಯೋ, ಜೀವಾನೇ ಹೋಗೋವಾಗ ನಿನ್ನದೊಂದು; ನೀರಾದ್ರೂ ಕುಡೀತೀನಿ ಇರು”  ಅಂತ ಕೊಸರಿಕೊಂಡು ಒಳ ನುಗ್ಗಿ ಟೇಬಲ್ ಮೇಲಿದ್ದ ಜಗ್ ಎತ್ತಿ ಗಟ ಗಟ ಖಾಲಿ ಮಾಡಿ, ದೇಕಿ, ‘ಉಸ್ಸಪ್ಪಾ’ ಎಂದು ಉಸಿರು ಬಿಟ್ಟನು. “ಆಯ್ತು ಬಿಡು, ನಾನೂ ರವೋಟು ಗಂಟಲು ತ್ಯಾವ ಮಾಡ್ಕಂತೀನಿ..” ಎಂದು ಶ್ಯಾಮಣ್ಣನೂ ಗುಕ್ಕು ನೀರು ಸುರಿದುಕೊಂಡನು. ಹೋಟೆಲ ಹೊರಗೆ ಬೀಡಾ ಅಂಗಡೀಲಿ ಗೊನೆ ಕಣ್ಣಿಗೆ ಬಿದ್ದದ್ದೇ, ಎರಡೆರಡು ದಪ್ಪ ಹಣ್ಣುಗಳನ್ನು ನುಂಗಿ, ‘ಫಲಾಹಾರ ಸೇವನೆಗೆ ಏನೂ ದೋಷವಿಲ್ಲವಲ್ಲಾ..’ ಎಂದು ತೃಪ್ತರಾಗಿ, ಅಲ್ಲಿಂದ ಕಾಲುಗಳನ್ನು ಎತ್ತಿಡಲು ಅನುವಾಗುವಾಗ್ಗೆ ಸರಿಯಾಗಿ, ‘ಈ ರಾತ್ರಿ ಎಲ್ಲಿ ಕಣ್ಣು ಮುಚ್ಚುವುದು..?’ ಎಂಬ ಪ್ರಶ್ನೆ ತಟಕ್ಕನೇ  ಕಾಲು ಹಿಡಿದು ಜಗ್ಗಿಸಿ ನಿಲ್ಲಿಸಿತು. ಹೌದು ಎಲ್ಲಿ ಹೋಗುವುದು!

ಆ ಕಡೇಯಿಂದ ಈ ಕಡೆ, ಈ ಕಡೇಯಿಂದ ಆ ಕಡೆಗೆ ಪ್ರಶ್ನೆ- ಉತ್ತರ ಓಡಾಡಿಸಲಾಗಿ, ಕೊನೆಗೆ, ‘ಬಸ್ ಸ್ಟ್ಯಾಂಡಿಗೇ ಹೋಗಿ ಅಲ್ಲೆಲ್ಲಾದರೂ ಸರದಿಯಲ್ಲಿ  ಮಲಗಿ ಮೂಟೆ ಜೋಪಾನ ಮಾಡುವುದೇ ಸರಿ; ಬೆಳಿಗ್ಗೆ ಬಸ್ ಹುಡುಕೋದೂ ಸುಲಭ ಆತದೆ..’ ಎಂಬ ತೀರ್ಮಾನಕ್ಕೆ ಇಬ್ಬರೂ ಬಂದು, ಅತ್ತ ಕಡೆ ಭಾರವಾದ ಕಾಲುಗಳನ್ನು  ದರಾ ಬರಾ ಎಳೆದುಕೊಂಡು ಹೋದರು. ಎಷ್ಟೋ ದೂರ ಸುತ್ತಿ ಬಳಸಿ ಹೋದಮೇಲೆ, ಅಲ್ಲಲ್ಲಿ ಸಾಲಾಗಿ ನಿಂತಿದ್ದ ದೀಪವಿಲ್ಲದ ಬಸ್‍ಗಳ ನೋಡಿ, ಇದೇ ಬಸ್‍ಸ್ಟ್ಯಾಂಡು ಎಂದು ಧೈರ್ಯ ಮಾಡಿ, ಅಲ್ಲೊಂದು ಅಂಗಡಿ ಮುಂದಿನ ಮೆಟ್ಟಿಲುಗಳ ಮೇಲೆ  ಮೂಟೆ ಇಳಿಸಿ ಕೂತದ್ದೇ, “ರಾಮು, ನೀನು ರವೋಟು ಮೂಟೆ ಕಾದುಕೊಂಡಿರು; ನಾನು ಒಂದು ಕ್ಷಣ ಹಿಂಗೆ ಕಣ್ಣು ರೆಪ್ಪೆ ಅಂಟಿಸಿ ಕಿತ್ತು ಬಿಡ್ತೇನೆ; ಯಾಕೋ, ನಿದ್ದೆ ಅಮರಿಕೊಂಡು ಬತ್ತದೆ..” ಎಂದವನು ಮನದಲ್ಲೇ, ‘ಪಂಚೆ ಬಿಚ್ಚಿಕೊಡಲಾ, ಮೂಟೆ ಕೆಳಗೆ ಹಾಕಿದ್ರೆ ಮೈಲಿಗೆ ಆಗಲ್ಲ..’ಎನ್ನ ಹೋದವನಿಗೆ ಸೊಳ್ಳೆಗಳ ಭಯವಾಗಿ, ‘ಬ್ಯಾಡ ಬಿಡು..’ ಎಂದು ತನಗೇ ಹೇಳಿಕೊಂಡು ಟವೆಲ್‍ನ ಮೊಖದ ಮೇಲೆ ಹಾಕಿಕೊಂಡು ತಲೆದೆಸೆಗೆ ಕೈ ಕೊಟ್ಟೇ ಬಿಟ್ಟನು, ಅಣ್ಣ  ಶ್ಯಾಮಣ್ಣ. ದ್ಯಾವರು ಇಕ್ಕಿದಂಗಾಗಲಿ, ಅಂತ ಮೂಟೆಯ ಮೇಲೇ ಮೊಖ ಇಟ್ಟುಕೊಂಡು ಕೂತು, ಕಣ್ಣು ತೆರೆದುಕೊಂಡೇ ಬಾಗಿದ್ದನು ರಾಮಣ್ಣ. 

ಎಷ್ಟೋ ಹೊತ್ತಿಗೆ, ಯಾರೋ ಕೆನ್ನೆಗೆ ಬಡಿದಂತಾಗಿ ತಟ್ಟನೆ ಎದ್ದ ಶ್ಯಾಮಣ್ಣನು, “ರಾಮು, ಈಗ ನೀನು ನಿದ್ದೆ ಮಾಡು, ಕೊಡು ಮೂಟೆ..” ಎಂದು ಆತನನ್ನು ಅಲುಗಾಡಿಸಿದರೆ ಅವನು ಕುಂಭಕರ್ಣಾವಸ್ಥೆಯಲ್ಲಿದ್ದನು. ‘ಮೂಟೆ ಎಲ್ಲಿ ಮಡಗಿದ್ದೀ?’ ಎಂದು ಕತ್ತಲಲ್ಲಿ ತಡಕಿದರೆ ಅದೇ ಮಾಯ..!! 
ಬೆಚ್ಚಿ ಬಿದ್ದು, “ಹೇ ರಾಮು, ಎದ್ದೇಳೋ, ಮೂಟೆ ಎಲ್ಲಿ  ಮಡಗಿದ್ದೀಯೋ..” ಎಂದು ಕೂಗಿದರೆ, ‘ತಮ್ಮ’ಗೆ ಬದಲು ಬೇರಾರೋ ‘ಅಣ್ಣ’ದಿರು  ಅತ್ತಲಿಂದ ಉತ್ತರಿಸಿದಂತಾಯಿತು: 
“ಯಾರೋ ಬದ್ಮಾಶ್, ನಮ್ಮ ಏರಿಯಾಕ್ಕೆ ಚಿಂದಿ ಆಯಾಕೆ ಬಂದಿದ್ದೀ, ನಮ್ಮ ಪರ್ಮಿಶನ್ ಇಲ್ಲದಂಗೆ? ಇದೇನೇನೋ ನಿನ್ನ  ಮೂಟೆ..?”
ಗಡಬಡಿಸಿ ಹತ್ತಿರ ಓಡಿದ ಶ್ಯಾಮಣ್ಣ  ಕಣ್ಣು ಅಗಲಿಸಿ ನೋಡುತ್ತಾನೆ, ಯಾರೋ ಪರೋಡಿಗಳು ಕಾಗದದ ಚೂರುಗಳನ್ನು ಅಗ್ನಿಗರ್ಪಣೆ ಮಾಡುತ್ತಾ ಕೈ ಮೈ ಕಾಯಿಸಿಕೊಳ್ಳುತ್ತಿದ್ದಾರೆ! 
ಆ ಧಗ ಧಗ ಬೆಂಕಿ ಬೆಳಕಿನಲ್ಲಿ  ನೋಡಿಯೇ ನೋಡಿದ ಶ್ಯಾಮಣ್ಣಗೆ ದೃಗ್ಗೋಚರವಾದದ್ದು: 
ಅಗ್ನಿಗೆ ಬಿದ್ದ ಯಾರಾರದೋ ಸದ್ದಿರದ ನರಳೂ..
ಕಮರುತ್ತಿದ್ದ  ತಿರುನಾಮವೂ..ಆವರಿಸುತ್ತಿದ್ದ ಘನ ತಮಂಧವೂ

ಡಾ. ಟಿ. ಗೋವಿಂದರಾಜು
ದೊಡ್ಡಬಳ್ಳಾಪುರದ ಚನ್ನಾದೇವಿ ಅಗ್ರಹಾರದರು. ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಜಾನಪದ ಅಕಾಡೆಮಿ, ಬಯಲಾಟ ಅಕಾಡೆಮಿಗಳ ಸದಸ್ಯರಾಗಿದ್ದರು. ಹಲವಾರು ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಕಥೆ, ಕವನವಲ್ಲದೇ ಸಾಕಷ್ಟು ಕೃತಿಗಳನ್ನು ರಚಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.