ವೃದ್ಧ ಹೇಳಿದ-
“ಮುದುಕಿ ನಡಿ ಹೋಗೋಣ, ಒಟ್ಟಿಗೆ ಸಾಯೋಣ...”
ವೃದ್ಧೆ ಬೆಳಿಗ್ಗೆ ಎದ್ದು ಅಂಗಳವನ್ನು ಗುಡಿಸುತ್ತಿದ್ದಳು. ಹಗಲಿಡಿಯ ಕೆಲಸದಿಂದ ವೃದ್ಧೆಗೆ ಸಮಯ ಸಿಗುವುದಿಲ್ಲ. ಒಂದು ಕೆಲಸ ಮುಗಿಯುವುದರೊಳಗೆ ಇನ್ನೊಂದು ಕೆಲಸ ಎದುರಾಗುತ್ತಿತ್ತು. ವಯಸ್ಸಾಗುತ್ತಿರುವಂತೆ ದುರ್ಬಲಗೊಳ್ಳುತ್ತಿದ್ದ ಶರೀರದಿಂದಲೇ ನವಯುವತಿಯಂತೆ ಮನೆಯ ಕೆಲಸಗಳನ್ನು ಮಾಡಬೇಕಿತ್ತು. ಒಂದು ಕ್ಷಣ ಸಹ ಸುಧಾರಿಸಿಕೊಳ್ಳಲು ಸಮಯವಿಲ್ಲ. ಆದರೂ ವೃದ್ಧೆ, ವೃದ್ಧನನ್ನು ಒಂದು ಕ್ಷಣ ಆಶ್ಚರ್ಯದಿಂದ ನೋಡಿದಳು. ವೃದ್ಧ ಎಂಥ ಮಾತು ಹೇಳಿದ್ದಾನೆ! ಇಂದು ವೃದ್ಧ ಬೆಳಿಗ್ಗೆಯೇ ಎಚ್ಚರಗೊಂಡಿದ್ದ, ಎದ್ದವನೇ ವೃದ್ಧೆ ಎದುರು ಬಂದು ನಿಂತ.
“ಮುಖ ಯಾಕೆ ನೋಡ್ತಿದ್ದೀಯ? ಮಕ್ಕಳ ಬೈಗಳವನ್ನು ಕೇಳುವುದಕ್ಕೆ ಬದಲು ಸತ್ತು ಮುಕ್ತಿ ಪಡೆಯುವುದು ಲೇಸು.” ಹಾಗಂತ ಇಬ್ಬರು ಸಾಯುವ ಮಾತನ್ನು ಹೇಳುತ್ತಲೇ ಇರುತ್ತಾರೆ.
ಅವರು ಅದೆಷ್ಟು ಯೋಚನೆ ಮಾಡುತ್ತಿರುತ್ತಾರೆ, ಸಿಟ್ಟಿನ ಆವೇಶದಲ್ಲಿ ಏನಾದರೂ ಮಾತನಾಡಿಬಿಡುತ್ತಾರೆ. ಹೀಗಾಗಿ ಸಾಯಲೂ ಹೋಗದಿದ್ದರೆ, ಜನ ಏನೆಂದು ಕೊಳ್ಳುವರು!
“ಸಿಕ್ಕಾಪಟ್ಟೆ ಕೆಲಸ ಮಾಡ್ತಿದ್ದೀಯ, ಅದಕ್ಕೇ ಹೇಳಿದ್ದು. ಇಲ್ಲದಿದ್ದರೆ ಇವರು ಸಾಯಿಸಿಯೇ ಬಿಡುತ್ತಿದ್ದರು. ನಮ್ಮ ಶರೀರ ಕೆಲಸ ಮಾಡಲು ಸಾಧ್ಯವಾಗದಿದ್ದಾಗ, ನಮ್ಮನ್ನು ಯಾರು ನೋಡಿಕೊಳ್ಳುತ್ತಾರೆ? ಶರೀರ ಸರಿಯಿರುವಾಗ, ನಡೆದುಕೊಂಡು ಹೋಗಿ ಸಾಯೋಣ.”
ವೃದ್ಧೆ ಕಸಪರಿಕೆಯನ್ನು ಅಲ್ಲಿಯೇ ಬಿಟ್ಟಳು. ನಿಜವಾಗಿಯೂ, ಶರೀರ ದುರ್ಬಲಗೊಳ್ಳುತ್ತಿದೆ. ಅಂತ್ಯಕಾಲದಲ್ಲಿ ವೃದ್ಧ-ವೃದ್ಧೆಯನ್ನು ನೋಡಿಕೊಳ್ಳುವವರು ಯಾರು? ನರಳಿ-ನರಳಿ ಸಾಯುವುದಕ್ಕಿಂತ, ವೃದ್ಧನ ಮಾತನ್ನು ಕೇಳುವುದು ಒಳಿತು. ಈಗ ಕೊನೆಯ ಕಾಲದ ಕೊನೆಯ ಮಾತು ಸಹ ವೃದ್ಧನ ಇಚ್ಛೆಯೆಂತೆಯೇ ಆಗಲಿ ಎಂದು ವೃದ್ಧೆ ಯೋಚಿಸಿ, ವೃದ್ಧನೊಂದಿಗೆ ಹೋಗಲು ಸಿದ್ಧಳಾದಳು.
“ಈ ವೇಷದಲ್ಲಿಯೇ ಬರ‍್ತೀಯಾ? ಬಟ್ಟೆಗಳನ್ನು ಬದಲಾಯಿಸು, ಆಮೇಲೆ ಬಾ. ಇಲ್ಲದಿದ್ದಲ್ಲಿ ಜನ ಏನೇನು ಮಾತನಾಡಿಕೊಳ್ಳುತ್ತಾರೋ...”
“ಸಾಯೋದಕ್ಕೇ ಹೋಗುತ್ತಿರುವಾಗ, ಅಲಂಕಾರ ಯಾಕೆ ಬೇಕು?” ವೃದ್ಧೆ ಹಿಂಜರಿದಳು.
“ಸಾಯುವ ವಿಷಯವನ್ನು ಡಂಗುರ ಹೊಡೆದು ಹೇಳಿದರೆ, ಜನ ಆರಾಮಾಗಿ ಸಾಯುವುದಕ್ಕೂ ಬಿಡುವುದಿಲ್ಲ. ಯಾರಾದರು ಕೇಳಿದರೆ, ಔತಣಕೂಟಕ್ಕೆ ಹೋಗುತ್ತಿದ್ದೇವೆ ಎಂದು ಹೇಳು. ಹೋಗು, ಬಟ್ಟೆ ಬದಲಾಯಿಸಿಕೊಂಡು ಬಾ.”
ವೃದ್ಧೆ ಶೀಘ್ರವೇ ಮನೆಯೊಳಗೆ ಹೋಗಿ, ಬಟ್ಟೆ ಬದಲಿಸಿಕೊಂಡು ಮತ್ತೆ ಬಂದಳು.
ಯಾರಿಗೂ ತಿಳಿಸದೆ ವೃದ್ಧ ಮತ್ತು ವೃದ್ಧೆ ಮನೆಯಿಂದ ಹೊರಟರು, ಆದರೆ ಅವರು ರಸ್ತೆಯಲ್ಲಿ ಹೋಗದೆ, ಹೂದೋಟದ ರಸ್ತೆಯನ್ನು ಹಿಡಿದರು.
ಹೂದೋಟದೊಳಗೆ ಹೋಗಲು ವೃದ್ಧೆಗೆ ಮನಸ್ಸಿರಲಿಲ್ಲ. ಅತ್ತ ಅವಳು ನೋಡುವುದೂ ಇಲ್ಲ. ಅವಳ ಎದೆಯಲ್ಲಿ ವೇದನೆಯುಂಟಾಗುತ್ತದೆ. ವೃದ್ಧೆಯ ಮಗಳು ಅಲ್ಲಿಯೇ ನಿದ್ರಿಸುತ್ತಿದ್ದಾಳೆ.
ಮಗಳು ಬದುಕಿದ್ದರೆ, ಇಷ್ಟರಲ್ಲಿ ಅವಳ ವಿವಾಹ ಆಗಿ ಹೋಗುತ್ತಿತ್ತು. ಮಗಳ ಮನೆ ಮಕ್ಕಳಿಂದ ವಿಜೃಂಭಿಸುತ್ತಿತ್ತು. ಅವಳೇ ಹಿರಿಯವಳಾಗಿದ್ದಳು. ಅವಳು ವೃದ್ಧ-ವೃದ್ಧೆಯ ಮೊದಲ ಸಂತಾನವಾಗಿದ್ದಳು. ವೃದ್ಧ ಮಗಳ ಎದೆಗೆ ಲೋಟವನ್ನು ರಭಸದಿಂದ ಎಸೆದು ಸಾಯಿಸಿದ್ದ. ಆ ದಿನ ವೃದ್ಧೆಗೆ ರಜಸ್ವಲೆಯಾಗಿತ್ತು. ಮಗಳು ವೃದ್ಧನಿಗೆ ಊಟವನ್ನು ಬಡಿಸಿದ್ದಳು.
ತಟ್ಟೆ ಮತ್ತು ಲೋಟವನ್ನು ಅವಳ ಪಕ್ಕದಲ್ಲಿಯೇ ಇಟ್ಟಳು. ಲೋಟದಲ್ಲಿ ನೀರು ಇಡುವುದನ್ನು ಮರೆತಳು. ಆಗ ಅವಳ ವಯಸ್ಸಾದರೂ ಎಷ್ಟಿತ್ತು; 10-12 ವರ್ಷದ ಮುಗ್ಧೆ ಅವಳು. ಇನ್ನೂ ರಜಸ್ವಲೆ ಸಹ ಆಗಿರಲಿಲ್ಲ. ವೃದ್ಧ ಖಾಲಿ ಲೋಟವನ್ನು ಅವಳ ಎದುರಿಗೆ ಎಸೆದ. ಅದು ಹೋಗಿ ಎದೆಗೆ ಬಿತ್ತು. ನೋಡು-ನೋಡುತ್ತಿದ್ದಂತೆಯೇ ಎಲ್ಲವೂ ಮುಗಿದು ಹೋಗಿತ್ತು. ಆದರೂ ವೃದ್ಧ ಪಶ್ಚಾತ್ತಾಪ ಪಡಲಿಲ್ಲ, ದುಃಖಿಸಲೂ ಇಲ್ಲ.
ವೃದ್ಧ ಹೇಳಿದ...2
ಬೆಕ್ಕಿಗೆ ಎಸೆದ ಲೋಟ ಅವಳ ಎದೆಗೆ ಹೋಗಿ ಹೇಗೆ ಬಿತ್ತೋ ತಿಳಿಯದು. ಅವಳು ಒಳಗೆ ಬಂದಿದ್ದು ಸಹ ತಿಳಿಯಲಿಲ್ಲ. ಹೀಗೆ ವೃದ್ಧ ಅತ್ತೂ-ಅತ್ತೂ ಪೊಲೀಸರ ಹಿಡಿತದಿಂದ ಪಾರಾದ.
ವೃದ್ಧೆಗೆ ಮುಕ್ತಿ ಸಿಕ್ಕಿತು. ಕಣ್ಣುಗಳಿಂದ ಕಣ್ಣೀರು ಸಹ ಬಾಡಿತು. ಮದುವೆ ಮಾಡುವ ಖರ್ಚು ಸಹ ಉಳಿಯಿತು. ಎರಡು ದಿನಗಳ ನಂತರ ವೃದ್ಧನ ಬಾಯಿಯಿಂದ ಈ ಮಾತು ಬಂತು.
‘ಮಗಳೇ, ನಿದ್ರಿಸು, ಅಲ್ಲಿಯೇ ನೆಮ್ಮದಿಯಿಂದ ನಿದ್ರಿಸು. ಮನೆಯಲ್ಲಿ ಅಶಾಂತಿಗೆ ಕೊನೆಯಿಲ್ಲ.’- ವೃದ್ಧೆ ಹೀಗೆ ಮನಸ್ಸಿಗೆ ಸಮಾಧಾನ ಹೇಳಿಕೊಳ್ಳುತ್ತಿದ್ದಳು. ಆದರೆ ಹೂದೋಟದ ನಡುವೆ ಹೋಗುವ ಧೈರ್ಯ ವೃದ್ಧೆಗಿಲ್ಲ. ಆ ಸತಿಯಾನ [ಅಸ್ಸಾಮಿನ ಒಂದು ಮರ] ಮರದ ಕೆಳಗಿನ ಜಾಗವನ್ನು ನೋಡಲು ಧೈರ್ಯವಾಗುತ್ತಿಲ್ಲ.
ಆದರೆ ವೃದ್ಧ ಅತ್ತ ಕಡೆಗೇ ಹೋಗುತ್ತಿದ್ದಾನೆ.
ಸಾಕಷ್ಟು ದಿನಗಳ ನಂತರ ಸತಿಯಾನ ಮರದ ಕೆಳಗಿನ ಮಣ್ಣನ್ನು ನೋಡಿ ವೃದ್ಧೆಯ ಕಣ್ಣುಗಳು ತುಂಬಿ ಬಂದವು. ವೃದ್ಧೆಯ ನಡಿಗೆ ಮಂದವಾಯಿತು. ಹೆಜ್ಜೆಗಳು ಮುಂದಕ್ಕೆ ಹೋಗಲು ಹಿಂಜರಿದವು.
ಆ ಜಾಗದಲ್ಲಿ ಕಾಡು ಬಳ್ಳಿಗಳು ಹಬ್ಬಿವೆ. ಮಣ್ಣಿನ ಚಿಕ್ಕ ಸ್ತೂಪದ ಚಿಹ್ನೆಯೂ ಇಲ್ಲ.
ಸತಿಯಾನ ಮರದ ಕೆಳಗೆ ವೃದ್ಧೆ ಕೂತಳು. ಹುಲ್ಲು-ಕಸ-ಕಡ್ಡಿಗಳನ್ನು ಸ್ವಚ್ಛಮಾಡಿ ಕೊನೆಯ ಬಾರಿಗೆ ಮಗಳ ಮಲಗುವ ಜಾಗವನ್ನು ನೋಡಿ ಹೋದಳು.
ಮುಂದೆ-ಮುಂದೆ ಹೋಗುತ್ತಿದ್ದ ವೃದ್ಧ ಹಿಂದಕ್ಕೆ ಹೊರಳಿ ನೋಡಿದ; ವೃದ್ಧೆ ಎಲ್ಲಿದ್ದಾಳೆ, ವೃದ್ಧೆಯ ಕಾಲಿನ ಸದ್ದು ಸಹ ಕೇಳಿಸುತ್ತಿಲ್ಲ.
ಇದು ಹೂದೋಟದ ನಡುವಿನ ಭಾಗವಾಗಿದೆ. ಮುಂದಕ್ಕೆ ಹೋಗಲು ಯಾವುದೇ ನೇರವಾದ ರಸ್ತೆಯಿಲ್ಲ. ಒಣಗಿದ ಎಲೆಗಳ ರಾಶಿಯನ್ನು ತುಳಿದು, ಕಾಡುಬಳ್ಳಿಗಳಿಂದ ಪಾರಾಗಿ, ಮರಗಳ ಕೊಂಬೆಗಳನ್ನು ಮುರಿದು, ಕುತ್ತಿಗೆಯನ್ನು ಚಾಚಿ, ಹಾರಿ-ನೆಗೆದು ವೃದ್ಧ ಖುದ್ದು ರಸ್ತೆಯನ್ನು ಮಾಡಿಕೊಂಡಿದ್ದಾನೆ. ಅದೇ ರಸ್ತೆಯಲ್ಲಿ ಹಿಂದಿನಿಂದ ವೃದ್ಧೆ ಸಹ ಹೋಗಬೇಕು. ವೃದ್ಧೆಯ ಕಾಲು-ಸಪ್ಪಳವನ್ನು ವೃದ್ಧ ಕೇಳಬೇಕಿತ್ತು. ಈಗ್ಯೆ ಸ್ವಲ್ಪ ಹೊತ್ತಿಗೆ ಮೊದಲು ಕೇಳುತ್ತಲೂ ಇದ್ದ.
ಹೂದೋಟವನ್ನು ನೋಡುತ್ತಿದ್ದ ವೃದ್ಧನ ಮನಸ್ಸು ಭಾರವಾಯಿತು. ಇಂದು ಈ ಹಸಿರು ಮರಗಿಡಗಳು ಮತ್ತು ಬಿದಿರು ಮರಗಳನ್ನು ಬಿಟ್ಟು ಹೋಗಬೇಕಾಗುವುದು. ಹೊಲ-ಗದ್ದೆಗಳು, ಆಸ್ತಿ-ಪಾಸ್ತಿಗಳನ್ನೂ ತ್ಯಜಿಸ ಬೇಕಾಗುವುದು. ಹೀಗೆ ಯೋಚಿಸಿ ವೃದ್ಧ ಅನ್ಯಮನಸ್ಕನಾಗಿದ್ದ. ವೃದ್ಧೆ ಈ ಸಮಯದ ಲಾಭ ಪಡೆದಳೇ? ವೃದ್ಧನನ್ನು ಸಾಯಲು ಕಳುಹಿಸಿ, ವೃದ್ಧೆ ಈ ಭೋಗ-ಜಗತ್ತಿನಲ್ಲಿ ತಾನು ಉಳಿದಳು. ಯಾವುದೇ ಮನೆ-ಮಠವಿಲ್ಲ, ಹೆಣ್ಣನ್ನು ನಂಬುವುದು ಕಷ್ಟ.
ವೃದ್ಧ ಹೊರಳಿ ನೋಡಿದ. ವೃದ್ಧೆ ಸತಿಯಾನ ಮರದ ಕೆಳಗೆ ಕೂತಿದ್ದಾಳೆ.
ಬಹುಶಃ ವೃದ್ಧೆ ಸ್ವಲ್ಪ ಅನುಮಾನದಲ್ಲಿದ್ದಾಳೆ ಎಂದು ವೃದ್ಧ ಯೋಚಿಸಿದ. ವೃದ್ಧ ಸಹ ಮಾನಸಿಕ ಒತ್ತಡಕ್ಕೆ ಒಳಗಾದ. ಸೊಂಟದ ಕೆಳಗೆ ನೋವು ಹೆಚ್ಚಿತು. ಇದರಿಂದ ಬಿಡುಗಡೆ ಹೊಂದಿಯೇ ಹೋಗುವುದು ಉಚಿತವಾಗುವುದು. ಹೀಗೆಂದು ಯೋಚಿಸಿ ವೃದ್ಧ ಸತಿಯಾನ ಮರದ ಕೆಳಗೆ ಬಂದ. ಮೂತ್ರ ವಿಸರ್ಜನೆಗೆ ಇದೇ ಸರಿಯಾದ ಸ್ಥಳ. ವೃದ್ಧೆ ಸ್ವಲ್ಪ ಜಾಗವನ್ನು ಸ್ವಚ್ಛ ಸಹ ಮಾಡಿದ್ದಾಳೆ.
ವೃದ್ಧ ಮರಳಿ ಬರುವುದನ್ನು ನೋಡಿ ವೃದ್ಧೆಯ ಮನಸ್ಸಿನಲ್ಲಿ ಆಶಾಭಾವನೆ ಜಾಗೃತಗೊಂಡಿತು. ಜೀವನದ ಕೊನೆಯ ಭರವಸೆ ಅವಳಲ್ಲಿ ಮೂಡಿತು. ಬಹುಶಃ ವೃದ್ಧನಿಗೆ ಮಗಳ ನೆನಪು ಕಾಡಿದೆ. ಸದ್ಯ, ಕೊನೆಯ ದಿನವಾದರೂ ನೆನಪಾಯಿತು.
ಆದರೆ ವೃದ್ಧ ಪಂಚೆಯನ್ನು ಮೇಲೆ ಸರಿಸಿ ಕೂತ. ‘ಇದೇನು ಮಾಡುತ್ತಿದ್ದೀರಿ, ಇದೇನು ಮಾಡುತ್ತಿದ್ದೀರಿ?’ ಎನ್ನುತ್ತಾ ವೃದ್ಧೆ ವೇಗವಾಗಿ ಬಂದು ವೃದ್ಧನನ್ನು ತಳ್ಳಿದಳು.
ವೃದ್ಧನ ತಲೆ ಬಿಸಿಯಾಯಿತು. ಜೀವನದಲ್ಲಿ ಮೊದಲ ಬಾರಿಗೆ ವೃದ್ಧೆ, ವೃದ್ಧನ ಕೆಲಸದಲ್ಲಿ ಅಡ್ಡಿ ಮಾಡಿದಳು. ಅಡ್ಡಿ ಮಾತ್ರವಲ್ಲ, ತಳ್ಳಿ ಬೀಳಿಸಿದಳು. ವೃದ್ಧೆಗೆ ಇಷ್ಟು ಧೈರ್ಯವೇ! ಸಿಟ್ಟಿನ ಒತ್ತಡ, ಮೂತ್ರ ವಿಸರ್ಜಿಸುವ ಒತ್ತಡ-ಇವನ್ನೆಲ್ಲಾ ವೃದ್ಧ ನಿಯಂತ್ರಿಸಲು ಹೇಗೆ ಸಾಧ್ಯ?
ವೃದ್ಧೆಗೆ ಧಾರಾಕಾರವಾಗಿ ಹರಿಯುತ್ತಿರುವ ಕಣ್ಣೀರನ್ನು ನಿಯಂತ್ರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
“ಇಲ್ಲಿ ನಮ್ಮ ಮಗಳು ನಿದ್ರಿಸಿದ್ದಾಳೆ.”– ವೃದ್ಧೆ ಒತ್ತಿ ಬಂದ ಕಂಠದಿಂದ ಹೇಳಿದ ಮಾತನ್ನು ಕೇಳಿ ವೃದ್ಧನಿಗೆ ಜ್ಞಾನೋದಯವಾಯಿತು. ಓಹ್, ಈ ಜಾಗ ಅದೇ- ಈ ಜಾಗ ಅದೇ. ಆದರೂ ವೃದ್ಧ ಸೋಲನ್ನು ಒಪ್ಪಿಕೊಳ್ಳಲಿಲ್ಲ. ಅವನು ಮೃದುವಾಗಲಿಲ್ಲ. “ಅದಕ್ಕಾಗಿ ನೀನು ನನ್ನನ್ನು ತಳ್ಳಬೇಕೆ? ಇಂದು ಕೊನೆಯ ದಿನ ನೀನು ನನ್ನ ಶರೀರದ ಮೇಲೆ ಕೈ ಮಾಡಿದೆ. ನಾನು ನರಕಕ್ಕೆ ಭಾಜನನಾಗಲಿಲ್ಲವೇ? ಪಾಪಕೂಪದಲ್ಲಿ ನಾನು ಮುಳುಗಲಾರೆನೇ? ಏಯ್ ಮುದುಕಿ, ಜನ ನೋಡಿದ್ದರೆ ಏನು ಹೇಳುತ್ತಿದ್ದರು?” ವೃದ್ಧ ಗರ್ಜಿಸಿದ.
“ನಾನು ಆಸರೆ ಹಿಡಿದಿದ್ದೆ. ಉಫ್-ಉಫ್-ಉಫ್...ಇವತ್ತು ನನ್ನ ಸೊಂಟ ಎರಡು ತುಂಡಾಗುತ್ತಿತ್ತು. ಬೇವರ್ಸಿ...
ವೃದ್ಧ ಹೇಳಿದ...3
ಪಾಪಿಷ್ಠೆ...ನೀಚ ಮುದುಕಿ.” ವೃದ್ಧೆಯನ್ನು ನಿಂದಿಸುತ್ತಾ ವೃದ್ಧ ಎದ್ದು ವೃದ್ಧೆಗೆ ಜೋರಾಗಿ ಮುಷ್ಟಿಯಿಂದ ಹೊಡೆದ.
ವೃದ್ಧ ಮೂತ್ರ ವಿಸರ್ಜನೆ ಮಾಡಲು ಪ್ರತ್ಯೇಕ ಜಾಗವನ್ನು ಆಯ್ಕೆ ಮಾಡಿಕೊಂಡ.
“ಇಲ್ಲೂ ನಿನಗೆ ಸಂಬಂಧಿಸಿದವರ ಉಳಿದ ಎಲುಬುಗಳಿವೆಯೇ?” ವೃದ್ಧ, ವೃದ್ಧೆಯೆಡೆಗೆ ಕಣ್ಣುಗಳನ್ನು ಕೆಂಪಗೆ ಮಾಡಿಕೊಂಡು ಕೇಳಿದ.
ಉಳಿದ ದಿನಗಳಂತೆ ಇಂದೂ ಸಹ ವೃದ್ಧೆ ಮೌನಿಯಾಗಿ ವೃದ್ಧನ ನಿಂದನೆಯನ್ನು ಕೇಳಿದಳು. ನಂತರ ವೃದ್ಧನನ್ನು ಹಿಂಬಾಲಿಸಿ ಹೋದಳು. ವೃದ್ಧನ ಹಿಂದೆ-ಹಿAದೆ ಹೋಗುತ್ತಿದ್ದಾಗ್ಯೂ ವೃದ್ಧೆ, ಕಣ್ಣುಗಳಿಂದ ಮರೆಯಾಗುವವರೆಗೆ ಸತಿಯಾನ ಮರದ ಕೆಳಗಿನ ಮಣ್ಣನ್ನು ನೋಡುತ್ತಿದ್ದಳು. ವೃದ್ಧೆಯ ಮನಸ್ಸಿನಲ್ಲಿ ನೋವು ಉಳಿಯಿತು. ಅವಳು ನಿಟ್ಟುಸಿರು ಬಿಡುತ್ತಾ ಮುಂದುವರೆದು ಹೋದಳು.
ಹೂದೋಟವನ್ನು ದಾಟುತ್ತಲೇ ಒಂದು ಉದ್ದ-ಅಗಲದ ಹೊಲ ಎದುರಾಯಿತು. ಅದರ ನಂತರವೇ ಮುಖ್ಯ ರಸ್ತೆಯಿತ್ತು.
ವೃದ್ಧೆ ಮುಖ್ಯ ರಸ್ತೆಗೆ ಬಂದು ದೀರ್ಘವಾಗಿ ನಿಟ್ಟುಸಿರು ಬಿಟ್ಟಳು, “ನನ್ನ ಮಗಳೇ, ಇಂದೇ ಆ ಲೋಕದಲ್ಲಿ ನಾವು ನಿನ್ನನ್ನು ಭೇಟಿಯಾಗುತ್ತೇವೆ.”
ವೃದ್ಧೆ ತನಗೆ ಕೇಳಿಸುವಂತೆ ಮೆಲ್ಲನೆ ಹೇಳಿಕೊಂಡಿದ್ದ ಮಾತನ್ನು ವೃದ್ಧ ಕೇಳಿಸಿಕೊಂಡಿದ್ದ.
ಭಯ ಮತ್ತು ಸಂದೇಹದಿಂದ ವೃದ್ಧನ ಎದೆ ಕಂಪಿಸಿತು. ಮಕ್ಕಳು ಕಡಿಮೆ ಹಿಂಸೆಯನ್ನು ಕೊಟ್ಟಿಲ್ಲ. ಇಬ್ಬರು ಮಕ್ಕಳು ಮನೆಯಲ್ಲಿ ನೆಮ್ಮದಿ ಮತ್ತು ಶಾಂತಿಯಿಂದಿರಲು ಬಿಟ್ಟಿಲ್ಲ. ಈಗ ಸಾಯಲು ಬಂದಾಗ್ಯೂ ಶಾಂತಿಯಿಲ್ಲ. ಮಗಳು ಆ ಲೋಕದಲ್ಲಿ ಕಾಯುತ್ತಿದ್ದಾಳೆ. ವೃದ್ಧನನ್ನು ಅವಳು ಕ್ಷಮಿಸುವಳೇ? ಹೆಂಡತಿ ಮತ್ತು ಮಗಳು ಸೇರಿ ವೃದ್ಧನನ್ನು ಸಂಪೂರ್ಣವಾಗಿ ತುಳಿಯುವರು; ಅಲ್ಲದೆ ವೃದ್ಧನ ಹಣೆಯಲ್ಲಿ ಇನ್ನೂ ಏನೇನು ಶಿಕ್ಷೆ ಬರೆದಿದೆಯೋ...ನರಕದ ಶಿಕ್ಷೆ...ರೌರವ ನರಕದ ಶಿಕ್ಷೆ.
ಹೀಗಿರುವಾಗ ವೃದ್ಧನ ಎದೆ ಕಂಪಿಸದೆ ಇರಲು ಹೇಗೆ ಸಾಧ್ಯ?
ಬದುಕಿರುವುದು ಅಥವಾ ಸಾಯುವುದರಲ್ಲಿ ಯಾವುದು ಯೋಗ್ಯ? ವೃದ್ಧ ಯೋಚಿಸುತ್ತಲೇ ಮುಂದುವರೆಯುತ್ತಿದ್ದ.
ಸಾಯುವುದಕ್ಕೂ ಇನ್ನೂ ಎಷ್ಟು ದೂರ ಹೋಗಬೇಕು? ಎಂದು ವೃದ್ಧೆ ಯೋಚಿಸಿದಳು. ನಡೆದು-ನಡೆದು ಅವಳು ದಣಿದಿದ್ದಳು. ಸೂರ್ಯ ನೆತ್ತಿಗೇರುತ್ತಿದ್ದ. ಇಬ್ಬರು ಬೆಳಿಗ್ಗೆಯೇ ಮನೆಯಿಂದ ಹೊರಟಿದ್ದರು. ವೃದ್ಧೆಗೆ ಹಸಿವೂ ಕಾಡಿತು. ಸಾಯುವ ದಿನದಂದು ಹಸಿವಿನ ಬಗ್ಗೆ ಯಾರಾದರು ಯೋಚಿಸುವರೇ? ಹೊಟ್ಟೆಯ ಬಗ್ಗೆ, ಹಸಿವಿನ ಬಗ್ಗೆ ಜೀವನದಲ್ಲಿ ಎಂದೂ ಚಿಂತಿಸಲಿಲ್ಲ. ಆ ಲೋಕದಲ್ಲಿ ಎಲ್ಲವೂ ಲಭ್ಯವಾಗುವವು. ಅಲ್ಲಿ ತಿನ್ನಲು-ಉಣ್ಣಲು ಕೊರತೆಯಿರುವುದಿಲ್ಲ. ನೆಮ್ಮದಿಗೆ ಕೊರತೆಯಿರುವುದಿಲ್ಲ. ಒಂದು ವೇಳೆ ಆ ಲೋಕದಲ್ಲಿ ಮಗಳ ಭೇಟಿಯಾದರೆ, ದುಃಖವೆಲ್ಲಾ ದೂರವಾಗುವುದು. ವೃದ್ಧೆ ಖುಷಿಗೊಂಡಳು.
ಇಷ್ಟು ದಿನಗಳ ನಂತರವೂ ಮಗಳ ಮುಖ ಸ್ಮೃತಿಯಲ್ಲಿ ಮೂಡಿತು. ಸ್ಪಷ್ಟವಾಗಿ ಮೂಡಿತು.
ಅಪಾರ ಶಾಂತಿಯ ಭಾವನೆಯ ಸಂಚಾರವಾಯಿತು; ಇದರಿಂದಾಗಿ ದುಃಖ-ಕಷ್ಟವನ್ನು ಮರೆಯಲಾರಂಭಿಸಿದಳು.
ವೃದ್ಧ, ವೃದ್ಧೆಗೆ ಏನು ಕಡಿಮೆ ಕಷ್ಟವನ್ನು ಕೊಟ್ಟಿದ್ದನೇ? ಒದ್ದಾಡಿಸಿ-ಒದ್ದಾಡಿಸಿ ವೃದ್ಧೆಯ ತನು-ಮನವನ್ನು ವೇದನೆಗಳಿಂದ ತುಂಬುತ್ತಿದ್ದಾನೆ. ಆ ಸಂಗತಿಗಳನ್ನು ವೃದ್ಧೆ ಮರೆತಳು. ಮಗ-ಸೊಸೆಯನ್ನು ಸಂಧಿಸಲು ಅವಮಾನ-ಅವಹೇಳನವನ್ನು ಮರೆತಳು. ಜೀವನ ಅಭಾವದಲ್ಲಿಯೇ ಕಳೆದು ಹೋಯಿತು. ಆಹಾರದ ಚಿಂತೆ, ಬಟ್ಟೆ-ಬರೆಗಳ ಚಿಂತೆ...ಆದರೆ ವೃದ್ಧೆ ಎಂದಾದರೂ ಆಕ್ಷೇಪಿಸಿದಳೇ? ಮನಸ್ಸನ್ನು ನೋಯಿಸಿದಳೇ?
ಹಾಗಂತ ವೃದ್ಧೆಯ ಮನಸ್ಸಿನಲ್ಲೂ ಅಪಾರ ಸುಖವಿದೆ.
ಮಗಳನ್ನು ಕಳೆದುಕೊಂಡ ದುಃಖ ಮಾತ್ರ ವೃದ್ಧೆಯ ಮನಸ್ಸಿನಲ್ಲಿದೆ. ಇಂದು ಬಹುಶಃ ಆ ದುಃಖವೂ ದೂರವಾಗುವುದು. ಎಲ್ಲಿದ್ದಾಳೆ ಮಗಳು? ಸತಿಯಾನ ಮರದ ಕೆಳಗೆ ನಿದ್ರಿಸುತ್ತಿರುವಳೇ? ಅಥವಾ ಆ ಲೋಕದ ಬಾಗಿಲ ಬಳಿ ನಿಂತಿರುವಳೇ?
ಆ ಲೋಕದ ಬಾಗಿಲವರೆಗೆ ಹೋಗಲು ಇನ್ನೆಷ್ಟು ತಡವಾಗುವುದು?
ಹೀಗೆಯೇ ಸಾಗುತ್ತಾ ಇಬ್ಬರು ನದಿಯ ಸಮೀಪಕ್ಕೆ ಬಂದರು. ನದಿ ಮೌನತಾಳಿತ್ತು. ವೃದ್ಧ ಈ ನದಿಯಲ್ಲಿ ಹಾರಿ ಸಾಯಲು ನಿರ್ಧರಿಸಿದ್ದ. ‘ಸೇತುವೆ ದುರ್ಬಲವಾಗಿದೆ, ಎಚ್ಚರಿಕೆಯಿಂದ ಹೋಗಿ’ – ಎಂಬ ಫಲಕ ಸೇತುವೆಯ ಮಾರ್ಗದಲ್ಲಿನ ರಸ್ತೆಯಲ್ಲಿ ಹಾಕಲಾಗಿದೆ. ವೃದ್ಧ ಗಟ್ಟಿಯಾಗಿ ಫಲಕವನ್ನು ಓದಿದ. ಎರಡು ಬಾರಿ...ಮೂರು ಬಾರಿ ಓದಿದ. ನಂತರ ಹಿಂದಕ್ಕೆ ಹೊರಳಿ ವೃದ್ಧೆಗೆ ಹೇಳಿದ, “ಸೇತುವೆಯನ್ನು ಹತ್ತುವುದು ಬೇಡ. ಎಲ್ಲಿಯಾದರೂ ನಾವು ಬೀಳಬಹುದು, ಈ ವಯಸ್ಸಿನಲ್ಲಿ ಮೂಳೆಗಳನ್ನು ಮುರಿದುಕೊಂಡು ಅಂಗವಿಕಲರಾಗಬಹುದು. ನಡಿ, ಮನೆಗೆ ಹೋಗೋಣ. ಹೊಟ್ಟೆ ತುಂಬಾ ಹಸಿಯುತ್ತಿದೆ.” ಹೀಗೆಂದು ವೃದ್ಧ ನಿಲ್ಲದೆ, ವೇಗವಾಗಿ ಹೆಜ್ಜೆಗಳನ್ನು ಹಾಕುತ್ತಾ ಮರಳಿ ಹೋಗಲಾರಂಭಿಸಿದ.
ವೃದ್ಧ ಹೇಳಿದ...4
‘ಕೆಲಸಕ್ಕೆ ಬಾರದ ವೃದ್ಧ, ಸಾಯಲು ಬಯಸದಿದ್ದರೆ ನನ್ನ ಸಮಯವನ್ನೇಕೆ ಹಾಳು ಮಾಡಿದ, ನನಗೆ ಎಷ್ಟು ಕೆಲಸವಿದೆ’ ಎಂದು ವೃದ್ಧೆ, ವೃದ್ಧನನ್ನು ಹಳಿಯುತ್ತಾ ವೃದ್ಧನನ್ನು ಹಿಂಬಾಲಿಸಿದಳು.
ಸೂರ್ಯ ನೆತ್ತಿಯ ಮೇಲಿರುವಂತೆಯೇ ಸತಿಯಾನ ಮರದ ಕೆಳಗೆ ಹೋಗಬೇಕು. ಸಮಯವಿರುವಾಗಲೇ ಆ ಜಾಗವನ್ನು ಸ್ವಚ್ಛಗೊಳಿಸಬಲ್ಲೆ, ನಾಳೆಗೆ ಮುಂದೂಡಲಾರೆ. ನಾಳೆ ಏನಾಗುವುದೋ ಏನೋ...ನಾಳೆ ನನ್ನ ದೇಹವೇ ಬಿದ್ದು ಹೋಗಬಹುದು. ವೃದ್ಧೆ ಮನಸ್ಸಿನಲ್ಲಿಯೇ ನಿಶ್ಚಯಿಸಿದಳು.
ಮರಳಿ ಬರುವಾಗ ವೃದ್ಧೆ ವೇಗವಾಗಿ ಹೆಜ್ಜೆಗಳನ್ನು ಹಾಕುತ್ತಿದ್ದಳು. ವೃದ್ಧನನ್ನು ಹಿಂದಕ್ಕೆ ಬಿಟ್ಟು ವೃದ್ಧೆ ಸಾಕಷ್ಟು ದೂರಕ್ಕೆ ಹೋದಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.