ADVERTISEMENT

ಪ್ರೇಮಚಂದ್ ಅವರ ಕಥೆ: ಸಭ್ಯತೆಯ ರಹಸ್ಯ

ಡಿ.ಎನ್.ಶ್ರೀನಾಥ್
Published 1 ಜೂನ್ 2024, 23:30 IST
Last Updated 1 ಜೂನ್ 2024, 23:30 IST
<div class="paragraphs"><p>ಕಥೆ</p></div>

ಕಥೆ

   
ಮೂಲ: ಪ್ರೇಮಚಂದ್ ಕನ್ನಡಕ್ಕೆ: ಡಿ.ಎನ್. ಶ್ರೀನಾಥ್

ನನ್ನ ಅರಿವಿಗೆ ಜಗತ್ತಿನ ಸಾವಿರಾರು ವಿಷಯಗಳು ಬರುವುದಿಲ್ಲ; ಉದಾಹರಣೆಗೆ, ಜನರು ಪ್ರಾತಃಕಾಲ ಎದ್ದ ಕೂಡಲೇ ತಲೆಕೂದಲುಗಳಿಗೆ ಕತ್ತರಿ ಏಕೆ ಹಾಕುತ್ತಾರೆ? ಪುರುಷರಲ್ಲೂ ತಮ್ಮ ತಲೆಕೂದಲಿನ ಭಾರವನ್ನು ಹೊರಲಾರದಷ್ಟು ಕೋಮಲತೆ ಬಂದಿದೆಯೇ? ವಿದ್ಯಾವಂತರ ಕಣ್ಣುಗಳೇಕೆ ಇಷ್ಟು ದುರ್ಬಲವಾಗಿವೆ? ಇದಕ್ಕೆ ಮೆದುಳಿನ ದೌರ್ಬಲ್ಯವೇ ಕಾರಣವೋ ಅಥವಾ ಬೇರೆ ಏನಾದರೂ ಇದೆಯೋ? ಜನ ಪದವಿಯ ಬಗ್ಗೆ ಏಕಿಷ್ಟು ಆಶ್ಚರ್ಯ ಪಡುತ್ತಾರೆ? ಇತ್ಯಾದಿ. ಆದರೆ ಈಗ ನನಗೆ ಈ ವಿಷಯಗಳ ಬಗ್ಗೆ ಸಂಬಂಧವಿಲ್ಲ. ನನ್ನ ಮನಸ್ಸಿನಲ್ಲಿ ಹೊಸದೊಂದು ಪ್ರಶ್ನೆ ಉದ್ಭವಿಸುತ್ತಿದೆ, ಅದಕ್ಕೆ ಉತ್ತರವನ್ನು ಯಾರೂ ಕೊಡುವುದಿಲ್ಲ. ಆ ಪ್ರಶ್ನೆಯೆಂದರೆ, ಸಭ್ಯರು ಯಾರು, ಅಸಭ್ಯರು ಯಾರು? ಸಭ್ಯತೆಯ ಲಕ್ಷಣಗಳೇನು? ಮೇಲುನೋಟಕ್ಕೆ, ಇದಕ್ಕಿಂತ ಸುಲಭದ ಬೇರಾವುದೇ ಪ್ರಶ್ನೆಯೇ ಇರಲಾರದು. ಪ್ರತಿಯೊಂದು ಮಗು ಸಹ ಇದಕ್ಕೆ ಸಮಾಧಾನ ಹೇಳಬಲ್ಲದು. ಆದರೆ ಸ್ವಲ್ಪ ಗಮನವಿಟ್ಟು ನೋಡಿ, ಪ್ರಶ್ನೆ ಅಷ್ಟು ಸುಲಭವೆಂದು ತೋರುವುದಿಲ್ಲ. ಕೋಟು-ಶರ್ಟ್ ತೊಡುವುದು, ಟೈ-ಹ್ಯಾಟ್-ಕಾಲರ್ ಧರಿಸುವುದು, ಮೇಜಿನ ಬಳಿ ಕೂತು ಊಟ ಮಾಡುವುದು, ಹಗಲು ವೇಳೆಯಲ್ಲಿ ಹದಿಮೂರು ಬಾರಿ ಕೋಕೋ ಅಥವಾ ಚಹಾ ಕುಡಿಯುವುದು, ಸಿಗಾರ್ ಸೇದುತ್ತಾ ಹೋಗುವುದು ಸಭ್ಯತೆಯಾದರೆ, ರಸ್ತೆಯಲ್ಲಿ ಸಂಜೆ ಆಗಾಗ ಅಡ್ಡಾಡುವ ವ್ಯಕ್ತಿಗಳು; ಮದ್ಯದ ಅಮಲಿನಲ್ಲಿ ಕಣ್ಣುಗಳು ಕೆಂಪಗಾಗಿ, ಕಾಲುಗಳು ತಡವರಿಸುವ ವ್ಯಕ್ತಿಗಳು; ಮಾರ್ಗದಲ್ಲಿ ಸಾಗುವವರಿಗೆ ಅನಾಯಾಸವಾಗಿ ಛೇಡಿಸುವು ಧ್ವನಿ! ಆ ಬಿಳಿಯರನ್ನು ಸಭ್ಯರು ಎನ್ನಲಾಗುವುದೇ? ಎಂದಿಗೂ ಸಾಧ್ಯವಿಲ್ಲ, ಸಭ್ಯತೆ ಬೇರೆಯದೇ ಆಗಿದೆ, ಅದಕ್ಕೆ ಮನಸ್ಸಿನಷ್ಟು ದೇಹದೊಂದಿಗೆ ಸಂಪರ್ಕವಿಲ್ಲ ಎಂಬುದು ಸಾಬೀತಾಯಿತು.

-2-

ADVERTISEMENT

ನನ್ನ ಕೆಲವು ಮಿತ್ರರಲ್ಲಿ ರಾಯ್ ರತನಕಿಶೋರ್ ಸಹ ಒಬ್ಬರು. ಅವರು ತುಂಬಾ ಸಹೃದಯರು, ಉದಾರಿಗಳು, ಶಿಕ್ಷಿತರು ಹಾಗೂ ಉನ್ನತ ಹುದ್ದೆಯಲ್ಲಿದ್ದಾರೆ. ಸಾಕಷ್ಟು ವೇತನವನ್ನು ಪಡೆದಿದ್ದಾಗ್ಯೂ ಅವರ ಆದಾಯ ಖರ್ಚಿಗೆ ಸಾಕಾಗುವುದಿಲ್ಲ. ಕಾಲುಭಾಗದ ವೇತನ ಬಂಗ್ಲೆಯ ಬಾಡಿಗೆಗೇ ಹೋಗುತ್ತದೆ. ಹೀಗಾಗಿ ಅವರು ಸದಾ ವ್ಯಗ್ರರಾಗಿರುತ್ತಾರೆ. ಲಂಚವನ್ನು ತೆಗೆದುಕೊಳ್ಳುವುದಿಲ್ಲ, ಈ ಬಗ್ಗೆ ನನಗೆ ಗೊತ್ತೂ ಇಲ್ಲ; ಆದರೂ ಹೇಳುವವರು ಹೇಳುತ್ತಾರೆ. ಆದರೆ ಅವರು ಭತ್ಯೆಯನ್ನು ಹೆಚ್ಚಿಸಿಕೊಳ್ಳಲು ಪ್ರಯಾಣದಲ್ಲಿರುತ್ತಾರೆ; ಇದಕ್ಕಾಗಿ ಪ್ರತಿ ವರ್ಷ ಬಜೆಟ್‌ನ ಬೇರೊಂದು ಭಾಗದಿಂದ ಹಣವನ್ನು ತೆಗೆಯಬೇಕಾಗುತ್ತದೆ. ಅವರ ಅಧಿಕಾರಿಗಳು, ಇಷ್ಟೆಲ್ಲಾ ಏಕೆ ಮಾಡ್ತೀರ ಎಂದರೆ ಆಗ ಅವರು, ‘ಈ ಜಿಲ್ಲೆಯ ಕೆಲಸವೇ ಹೀಗಿದೆ, ಚೆನ್ನಾಗಿ ಪ್ರವಾಸ ಮಾಡದಿದ್ದರೆ ಪ್ರಜೆಗಳು ಶಾಂತರಾಗಿರುವುದಿಲ್ಲ’ ಎಂದು ಹೇಳುತ್ತಾರೆ. ಆದರೆ ತಮಾಷೆಯ ಸಂಗತಿಯೆಂದರೆ, ರಾಯಸಾಹೇಬರು ತಮ್ಮ ಡೈರಿಯಲ್ಲಿ ಬರೆದಷ್ಟು ಪ್ರವಾಸವನ್ನು ಮಾಡುವುದಿಲ್ಲ, ಅವರ ತಂಗುದಾಣ ನಗರಿಂದ 50 ಮೈಲು ದೂರದಲ್ಲಿರುತ್ತದೆ. ಅಲ್ಲಿ ಬಿಡಾರಗಳಿರುತ್ತವೆ. ಕ್ಯಾಂಪಿನ ಕಾರ್ಯಾಲಯಗಳೂ ಇರುತ್ತವೆ. ರಾಯಸಾಹೇಬರು ಮನೆಯಲ್ಲಿ ಮಿತ್ರರೊಂದಿಗೆ ಹರಟುತ್ತಾರೆ. ರಾಯಸಾಹೇಬರ ಪ್ರಾಮಾಣಿಕತೆಯ ಬಗ್ಗೆ ಸಂದೇಹ ಪಡುವ ಧೈರ್ಯ ಯಾರಿಗಿದೆ! ಅವರು ಸಭ್ಯರು ಎಂಬುವುದರಲ್ಲಿ ಯಾರಿಗೂ ಸಂದೇಹವಾಗದು.

ಅದೊಂದು ದಿನ ನಾನು ಅವರನ್ನು ಭೇಟಿಯಾಗಲು ಹೋದೆ. ಆಗ ಅವರು ಹುಲ್ಲು ಕೀಳುವ ತಮ್ಮ ಸೇವಕ ದಮಡಿಯನ್ನು ಗದರಿಸುತ್ತಿದ್ದರು. ದಮಡಿ ಹಗಲು-ರಾತ್ರಿಯ ನೌಕರನಾಗಿದ್ದ, ಆದರೆ ಊಟಕ್ಕೆ ಮನೆಗೆ ಹೋಗುತ್ತಿದ್ದ. ಅವನ ಮನೆ ಸಮೀಪದ ಹಳ್ಳಿಯಲ್ಲಿತ್ತು. ನಿನ್ನೆ ರಾತ್ರಿ ಯಾವುದೋ ಕಾರಣಕ್ಕೆ ಅಲ್ಲಿಗೆ ಹೋಗಲು ಸಾಧ್ಯವಾಗಿರಲಿಲ್ಲ. ಅದಕ್ಕಾಗಿ ನಿಂದಿಸಲಾಗುತ್ತಿತ್ತು.
ರಾಯಸಾಹೇಬರು –“ನಾವು ನಿನ್ನನ್ನು ಹಗಲು-ರಾತ್ರಿಯ ಕೆಲಸಕ್ಕಿಟ್ಟುಕೊಂಡಿರುವಾಗ, ನೀನೇಕೆ ಮನೆಯಲ್ಲಿದ್ದೆ? ನಿನ್ನೆಯ ಸಂಬಳ ಮುರಿಯಲಾಗುತ್ತೆ.”
ದಮಡಿ –“ಬುದ್ಧಿ, ಅತಿಥಿಗಳು ಬಂದಿದ್ದರು, ಅದಕ್ಕೇ ಬರಲು ಆಗಲಿಲ್ಲ.”

ರಾಯಸಾಹೇಬರು –“ನಿನ್ನೆಯ ಸಂಬಳವನ್ನು ಅವರಿಂದಲೇ ತೆಗೆದುಕೋ.”
ದಮಡಿ -ಬುದ್ಧಿ, ಇನ್ಮೇಲೆ ಹೀಗಾಗಲ್ಲ.”
ರಾಯಸಾಹೇಬರು –“ಹರಟ ಬೇಡ.”
ದಮಡಿ –“ಬುದ್ಧಿ...”
ರಾಯಸಾಹೇಬರು –“ಎರಡು ರೂಪಾಯಿ ಜುಲ್ಮಾನೆಯಾಗುತ್ತೆ.”
ದಮಡಿ ರೋದಿಸುತ್ತಾ ಮನೆಗೆ ಹೋದ. ಎರಡು ರೂಪಾಯಿ ಜುಲ್ಮಾನೆ ಕಟ್ಟಬೇಕಾಯಿತು. ಬಡಪಾಯಿ, ತಪ್ಪನ್ನು ಮನ್ನಾ ಮಾಡಿಸಿಕೊಳ್ಳಲು ಬಯಸುತ್ತಿದ್ದ.

ಇದು ಒಂದು ರಾತ್ರಿ ಗೈರುಹಾಜರಾಗಿದ್ದಕ್ಕಾಗಿ ವಿಧಿಸಿದ ಶಿಕ್ಷೆಯಾಗಿತ್ತು! ದಿನವೆಲ್ಲಾ ದುಡಿದಿದ್ದ, ರಾತ್ರಿ ಅಲ್ಲಿ ಮಲಗಿರಲಿಲ್ಲ, ಅದಕ್ಕೆ ಈ ಶಿಕ್ಷೆ! ಮನೆಯಲ್ಲಿ ಕೂತು ಭತ್ಯೆ ನುಂಗುವವರನ್ನು ಯಾರೂ ಕೇಳುವುದಿಲ್ಲ! ಯಾರೂ ದಂಡದ ಹಣವನ್ನು ಕೊಡುವುದಿಲ್ಲ. ಅದೂ ಜೀವಮಾನವಿಡೀ ನೆನಪಿರುವಂಥ ದಂಡ. ಒಂದು ವೇಳೆ ದಮಡಿ ಬುದ್ಧಿವಂತನಾಗಿದ್ದರೆ, ರಾತ್ರಿಯಿರುವಂತೆಯೇ ಬಂದು ಮಲಗುತ್ತಿದ್ದ. ಆಗ ಅವನು ರಾತ್ರಿ ಎಲ್ಲಿದ್ದ ಎಂದು ಯಾರಿಗೆ ತಿಳಿಯುತ್ತಿತ್ತು, ಆದರೆ ಬಡ ದಮಡಿ ಅಷ್ಟು ಬುದ್ಧಿವಂತನಾಗಿರಲಿಲ್ಲ.

-3-

ದಮಡಿಯ ಬಳಿ ಸ್ವಲ್ಪ ಜಮೀನಿತ್ತು. ಅಷ್ಟೇ ಖರ್ಚು ಸಹ ಬರುತ್ತಿತ್ತು. ಅವನಿಗೆ ಇಬ್ಬರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು ಮತ್ತು ಹೆಂಡತಿ. ಎಲ್ಲರೂ ವ್ಯವಸಾಯದಲ್ಲಿ ತೊಡಗಿರುತ್ತಿದ್ದರು. ಆದರೂ ಜೀವನ ನಿರ್ವಹಣೆಗೆ ಸಾಕಾಗುತ್ತಿರಲಿಲ್ಲ. ಅಷ್ಟು ಅಲ್ಪ ಭೂಮಿ ಬಂಗಾರವನ್ನು ಕಕ್ಕುವುದೇ! ಎಲ್ಲರೂ ಮನೆಯಿಂದ ಹೊರಟು ಕೂಲಿ ಕೆಲಸ ಮಾಡಿದ್ದರೆ, ನೆಮ್ಮದಿಯಿಂದ ಇರಬಹುದಿತ್ತು; ಆದರೆ ಪಿತ್ರಾರ್ಜಿತವಾಗಿ ಬಂದಿದ್ದ ರೈತ-ವೃತ್ತಿಯಿಂದಾಗಿ, ರೈತ ತನ್ನನ್ನು ಕೂಲಿ ಎಂದು ಕರೆಯಿಸಿಕೊಳ್ಳುವ ಅವಮಾನವನ್ನು ಸಹಿಸಲಾರ. ಈ ಅಪಕೀರ್ತಿಯಿಂದ ಪಾರಾಗಲು ಎರಡು ಎತ್ತುಗಳನ್ನು ಕಟ್ಟಿದ್ದ. ಅವನಿಗೆ ಈ ಎಲ್ಲಾ ಕಷ್ಟಗಳು ಒಪ್ಪಿಗೆಯಾಗಿದ್ದವು, ಆದರೆ ವ್ಯವಸಾಯವನ್ನು ಬಿಟ್ಟು ಕೂಲಿಯಾಳಾಗುವುದು ಒಪ್ಪಿಗೆಯಿರಲಿಲ್ಲ. ರೈತನಿಗೆ ಸಿಗುವ ಮರ್ಯಾದೆ ಕೂಲಿಯಾಳಿಗೆ ಸಿಗುವುದಿಲ್ಲ. ರೈತ-ವೃತ್ತಿಯೊಂದಿಗೆ ಕೂಲಿ ಕೆಲಸ ಮಾಡುವುದು ಅಷ್ಟು ಅವಮಾನದ ಸಂಗತಿಯಲ್ಲ, ಬಾಗಿಲ ಬಳಿ ಕಟ್ಟಿದ್ದ ಎತ್ತುಗಳು ಅವನ ಮಾನವನ್ನು ರಕ್ಷಿಸುತ್ತವೆ, ಆದರೆ ಎತ್ತುಗಳನ್ನು ಮಾರಿದರೆ, ಎಲ್ಲಿ ಮುಖ ತೋರಿಸುವುದು!

ಅದೊಂದು ದಿನ ರಾಯಸಾಹೇಬರು ದಮಡಿ ಚಳಿಯಿಂದ ನಡುಗುತ್ತಿರುವುದನ್ನು ನೋಡಿ ಹೇಳಿದರು –“ಬಟ್ಟೆಗಳನ್ನೇಕೆ ಹೊಲಿಸಿಕೊಳ್ಳಲ್ಲ? ಏಕೆ ನಡುಗ್ತಿದ್ದೀಯ?”
ದಮಡಿ –“ಬುದ್ಧಿ, ಅನ್ನಕ್ಕೇ ದುಡ್ಡು ಸಾಲದು, ಇನ್ನು ಬಟ್ಟೆ ಎಲ್ಲಿಂದ ತರ‍್ಲಿ?”
ರಾಯಸಾಹೇಬರು –“ಎತ್ತುಗಳನ್ನೇಕೆ ಮಾರಲ್ಲ? ನೂರಾರು ಬಾರಿ ತಿಳಿ ಹೇಳಿದೆ, ಆದ್ರೆ ನಿನಗೆ ಇಷ್ಟು ಮಹತ್ವದ ಮಾತು ಅರ್ಥವೇ ಆಗಲ್ಲ.”
ದಮಡಿ –“ಬುದ್ಧಿ, ನಮ್ಮ ಸಂಬಂಧಿಕರಲ್ಲಿ ನನ್ನ ಮುಖ ತೋರಿಸಲು ಆಗಲ್ಲ. ಮಗಳ ಮದುವೆ ಆಗಲ್ಲ, ಬಂಧು-ಬಳಗದವರು ನನ್ನನ್ನು ಹೊರಗೆ ಹಾಕ್ತಾರೆ.”
ರಾಯಸಾಹೇಬರು –“ಈ ಮೂರ್ಖತನದಿಂದಾಗಿಯೇ ನಿಮಗೆ ಈ ದುರ್ಗತಿ ಬಂದಿದೆ. ನಿಮ್ಮಂಥವರಿಗೆ ಕರುಣೆ ತೋರುವುದು ಸಹ ಪಾಪದ ಕೆಲಸವಾಗುತ್ತದೆ. [ನನ್ನೆಡೆಗೆ ಹೊರಳಿ] ಗುಮಾಸ್ತರೇ, ಈ ಹುಚ್ಚುತನಕ್ಕೆ ಏನಾದ್ರು ಚಿಕಿತ್ಸೆ ಇದೆಯೇ? ಇವರು ಚಳಿಯಿಂದ ಸಾಯಲು ಸಿದ್ಧ, ಆದ್ರೆ ಬಾಗಿಲ ಬಳಿ ಎತ್ತುಗಳನ್ನು ಖಂಡಿತ ನಿಲ್ಲಿಸ್ತಾರೆ.”
ನಾನು ಹೇಳಿದೆ –“ಸ್ವಾಮಿ, ಇದೆಲ್ಲಾ ಅವರವರ ತಿಳಿವಳಿಕೆಯಾಗಿದೆ.”
ರಾಯಸಾಹೇಬರು –“ಇಂಥ ತಿಳಿವಳಿಕೆಗೆ ದೂರದಿಂದಲೇ ನಮಸ್ಕಾರ ಮಾಡಿ. ನಮ್ಮ ಮನೇಲಿ ಈ ಹಿಂದಿನಿಂದಲೇ ಜನ್ಮಾಷ್ಟಮಿ ಸಮಾರಂಭವನ್ನು ಆಚರಿಸಲಾಗ್ತಿತ್ತು. ಸಾವಿರಾರು ರೂಪಾಯಿ ಖರ್ಚಾಗ್ತಿತ್ತು. ಹಾಡು-ಸಂಗೀತ, ಭೋಜನದ ವ್ಯವಸ್ಥೆ ಇರುತ್ತಿತ್ತು, ಸಂಬಂಧಿಕರನ್ನು ಆಹ್ವಾನಿಸಲಾಗ್ತಿತ್ತು, ಬಡವರಿಗೆ ಬಟ್ಟೆಗಳನ್ನು ಹಂಚಲಾಗುತ್ತಿತ್ತು. ನಮ್ಮ ತಂದೆಯವರು ಸ್ವರ್ಗಸ್ಥರಾದ ನಂತರ, ಮೊದಲ ವರ್ಷವೇ ಸಮಾರಂಭವನ್ನು ನಿಲ್ಲಿಸಿದೆ. ಉಪಯೋಗವೇನು? ಪುಕ್ಕಟೆ ನಾಲ್ಕೈದು ಸಾವಿರ ರೂಪಾಯಿಗಳು ಖರ್ಚಾಗುತ್ತಿದ್ದವು. ಇಡೀ ಕಸ್ಬಾದಲ್ಲಿ ಕೋಲಾಹಲವೆದ್ದಿತು, ಜನ ಏನೇನೋ ಮಾತನಾಡಿದರು; ಕೆಲವರು ನನ್ನನ್ನು ನಾಸ್ತಿಕ ಎಂದರು, ಕೆಲವರು ನನ್ನನ್ನು ಕ್ರಿಶ್ಚಿಯನ್ ಮಾಡಿದರು, ಆದ್ರೆ ಈ ಮಾತುಗಳಿಗೆ ಎಲ್ಲಿದೆ ಮಹತ್ವ! ಕಡೆಗೆ ಕೆಲವೇ ದಿನಗಳಲ್ಲಿ ಎಲ್ಲಾ ಕೋಲಾಹಲ ಶಾಂತವಾಯಿತು. ನೋಡಿ, ಅದು ತುಂಬಾ ತಮಾಷೆಯ ವಿಷಯವಾಗಿತ್ತು. ಕಸ್ಬಾದಲ್ಲಿ ಮದುವೆ ಸಮಾರಂಭ ನಡೆದರೆ ಕಟ್ಟಿಗೆಯನ್ನು ನನ್ನಿಂದ ತೆಗೆದುಕೊಳ್ತಿದ್ದರು! ಹಿಂದಿನಿಂದ ಈ ಪದ್ಧತಿ ನಡೆದುಕೊಂಡು ಬರ‍್ತಿತ್ತು. ಹಿರಿಯರು ಸಾಲ ಮಾಡಿ ಈ ಪದ್ಧತಿಯನ್ನು ನಿಭಾಯಿಸುತ್ತಿದ್ದರು. ಇದು ಮೂರ್ಖತನ ಹೌದೋ, ಅಲ್ವೋ? ನಾನು ಕೂಡ್ಲೆ ಕಟ್ಟಿಗೆ ಕೊಡುವುದು ನಿಲ್ಲಿಸಿದೆ. ಅದಕ್ಕೂ ಜನ ರೋದಿಸಿದರು, ಆದ್ರೆ ನಾನು ಬೇರೆಯವರು ಅಳುವುದನ್ನು ಕೇಳಲೋ ಅಥವಾ ನನ್ನ ಲಾಭವನ್ನು ನೋಡಲೋ? ಕಟ್ಟಿಗೆಯಿಂದಲೇ ವರ್ಷಕ್ಕೆ ಕಡೇಪಕ್ಷ 500 ರೂಪಾಯಿಗಳ ಉಳಿತಾಯವಾಯ್ತು. ಈಗ ಯಾರೂ ಮರೆತು ಸಹ ಇವುಗಳನ್ನೆಲ್ಲಾ ಕೇಳಲು ಬರಲ್ಲ.”

ನನ್ನ ಮನಸ್ಸಿನಲ್ಲಿ ಮತ್ತೆ ಪ್ರಶ್ನೆ ಎದ್ದಿತು, ಇಬ್ಬರಲ್ಲಿ ಸಭ್ಯ ಪುರುಷರು ಯಾರು? ಕುಲದ ಪ್ರತಿಷ್ಠೆಗಾಗಿ ಪ್ರಾಣವನ್ನೂ ಲೆಕ್ಕಿಸದ ಮೂರ್ಖ ದಮಡಿಯೇ? ಅಥವಾ ಹಣಕ್ಕಾಗಿ ಕುಲದ ಮರ್ಯಾದೆಯನ್ನೇ ಬಲಿ ಕೊಡುವ ರಾಯ್ ರತನ್‌ಕಿಶೋರರೇ?

-4-

ರಾಯಸಾಹೇಬರ ನ್ಯಾಯಸ್ಥಾನದಲ್ಲಿ ಒಂದು ಮಹತ್ವದ ಮೊಕದ್ದಮೆ ಬಂದಿತ್ತು. ನಗರದ ಶ್ರೀಮಂತನೊಬ್ಬ ಕೊಲೆಯ ವಿಷಯದಲ್ಲಿ ಸಿಲುಕಿದ್ದ. ಅವನ ಜಾಮೀನಿಗಾಗಿ ರಾಯಸಾಹೇಬರ ಪ್ರಶಂಸೆ ಆರಂಭವಾಯಿತು. ಮರ್ಯಾದೆಯ ವಿಷಯವಾಗಿತ್ತು. ತಮ್ಮೆಲ್ಲಾ ಸಿರಿವಂತಿಕೆ ಮಾರಾಟವಾದರೂ ಸರಿಯೇ, ಆದರೆ ಈ ಮೊಕದ್ದಮೆಯಿಂದ ನಿಷ್ಕಂಳಕವಾಗಿ ಹೊರ ಬರಬೇಕು ಎಂಬುದು ರಾಯಸಾಹೇಬರ ಆದೇಶವಾಗಿತ್ತು. ಉಡುಗೊರೆಗಳನ್ನು ಕೊಡಲಾಯಿತು, ಶಿಫಾರಸ್‌ಗಳನ್ನು ಮಾಡಿಸಲಾಯಿತು. ಆದರೆ ರಾಯಸಾಹೇಬರ ಮೇಲೆ ಇವು ಪ್ರಭಾವವನ್ನು ಬೀರದಾದವು. ಶ್ರೀಮಂತರಿಗೆ ಪ್ರತ್ಯಕ್ಷವಾಗಿ ಲಂಚದ ಬಗ್ಗೆ ಚರ್ಚೆ ಮಾಡುವ ಧೈರ್ಯ ಬರುತ್ತಿರಲಿಲ್ಲ. ಕಡೆಗೆ ಶ್ರೀಮಂತರ ಹೆಂಡತಿ ರಾಯಸಾಹೇಬರನ್ನು ಭೇಟಿಯಾಗಿ ವ್ಯಾಪಾರ ಕುದುರಿಸಲು ನಿರ್ಧರಿಸಿದಳು.

ರಾತ್ರಿಯ 10 ಗಂಟೆಯಾಗಿತ್ತು. ಇಬ್ಬರು ಮಹಿಳೆಯರ ನಡುವೆ ಮಾತುಕತೆ ಆರಂಭವಾಯಿತು. 20 ಸಾವಿರ ರೂಪಾಯಿಗಳ ಮಾತುಕತೆಯಾಗಿತ್ತು. ರಾಯಸಾಹೇಬರ ಹೆಂಡತಿ ತುಂಬಾ ಖುಷಿಯಿಂದ ಆ ಕೂಡಲೇ ರಾಯಸಾಹೇಬರ ಬಳಿಗೆ ಓಡಿ ಬಂದು ಹೇಳಿದಳು –“ಹಣ ತೆಗೆದುಕೊಳ್ಳಿ, ನೀವು ತೆಗೆದುಕೊಳ್ಳದಿದ್ರೆ ನಾನು ತೆಗೆದುಕೊಳ್ತೀನಿ.”
ರಾಯಸಾಹೇಬರು ಹೇಳಿದರು –“ಸಹನೆಯನ್ನು ಕಳೆದುಕೊಳ್ಳಬೇಡ. ನಿನ್ನ ಬಗ್ಗೆ ಅವಳೇನು ತಿಳೀತಾಳೆ, ಸ್ವಲ್ಪ ಯೋಚಿಸು. ನಿನಗೆ ನಿನ್ನ ಮಾನ-ಮರ್ಯಾದೆಯ ಬಗ್ಗೆ ಯೋಚ್ನೆ ಇದೆಯೋ, ಇಲ್ವೋ? ಹಣ ತುಂಬಾ ಇದೆ, ಸರಿಯೇ; ಈ ಹಣದಿಂದ ನಾನು ಮುಂಬರುವ ದಿನಗಳಲ್ಲಿ ನಿನ್ನ ಬೇಡಿಕೆಗಳನ್ನು ಈಡೇರಿಸಬಹುದು, ಆದ್ರೆ ಒಬ್ಬ ನಾಗರಿಕನ ಮಾನ-ಮರ್ಯಾದೆ ಸಹ ಸಾಮಾನ್ಯ ವಿಷಯವಲ್ಲ. ನಾನು ಮೊದಲೇ, ನನ್ನ ಹತ್ರ ಇಂಥ ಅಸಭ್ಯದ ಮಾತನ್ನು ಹೇಳುವುದಾದರೆ, ಇಲ್ಲಿಂದ ಹೊರಟು ಹೋಗು ಅಂತ ನಾನು ರೇಗಬೇಕಿತ್ತು.”
ಹೆಂಡತಿ –“ಇದನ್ನು ನಾನು ಮೊದಲೇ ಮಾಡಿದೆ. ನಾನೂ ರೇಗಿ ನಿಜವನ್ನೇ ಹೇಳಿದೆ. ನನಗಿಷ್ಟೂ ಗೊತ್ತಿಲ್ವ? ಅವಳು ಬಡಪಾಯಿ, ನನ್ನ ಕಾಲಿಗೆ ಬಿದ್ದು ಅತ್ತಳು.”
ರಾಯಸಾಹೇಬರು –“ರಾಯಸಾಹೇಬರಿಗೆ ಹೇಳಿದರೆ ಅವರು ನನ್ನನ್ನು ಹಸಿಯಾಗಿಯೇ ತಿನ್ತಾರೆ ಎಂದು ಹೇಳಿದ್ಯಾ?”
ಹೀಗೆಂದು ರಾಯಸಾಹೇಬರು ಗದ್ಗದಿತರಾಗಿ ಹೆಂಡತಿಯನ್ನು ತಬ್ಬಿಕೊಂಡರು.
ಹೆಂಡತಿ –“ನೋಡಿ, ನಾನಿಂಥ ಎಷ್ಟೋ ಮಾತುಗಳನ್ನು ಹೇಳಿದೆ, ಆದ್ರೆ ಅವಳು ಹಿಂದಕ್ಕೆ ಸರೀತಿಲ್ಲ, ಅತ್ತೂ-ಅತ್ತೂ ಪ್ರಾಣ ಬಿಡ್ತಿದ್ದಾಳೆ.”
ರಾಯಸಾಹೇಬರು –“ಅವಳಿಂದ ಪ್ರಮಾಣವನ್ನು ಮಾಡಿಸಿಕೊಳ್ಳಲಿಲ್ಲ ತಾನೇ?”

ಹೆಂಡತಿ –“ಪ್ರಮಾಣ? ನಾನು ಹಣ ತಗೊಂಡು ಪೆಟ್ಟಿಗೆಯಲ್ಲಿಟ್ಟು ಬಂದೆ. ನೋಟ್‌ಗಳಿದ್ದವು.”
ರಾಯಸಾಹೇಬರು –“ನೀನೆಂಥ ಮೂರ್ಖಳು, ದೇವರು ನಿನ್ಗೆ ಬುದ್ಧಿ ಕೊಡ್ತಾನೋ, ಇಲ್ವೋ.?”
ಹೆಂಡತಿ –“ಈಗೇನು ಕೊಡ್ತಾನೆ? ಕೊಡಬೇಕಿದ್ದರೆ, ಕೊಡುತ್ತಿರಲಿಲ್ವ?”
ರಾಯಸಾಹೇಬರು –“ಹೌದು, ಹೀಗೆಯೇ ಎಂದು ಅನ್ನಿಸುತ್ತದೆ. ನನಗೆ ಹೇಳದೆ, ಹಣವನ್ನು ಪೆಟ್ಟಿಗೆಯಲ್ಲಿಟ್ಟೆ! ಒಂದು ವೇಳೆ ವಿಷಯ ಬಹಿರಂಗವಾದರೆ, ನಾನು ಎಲ್ಲೂ ಮುಖ ತೋರಿಸುವಂತಿಲ್ಲ.”
ಹೆಂಡತಿ –“ಯೋಚ್ನೆ ಮಾಡಿ. ಹೆಚ್ಚು-ಕಡಿಮೆಯಾಗುವಂತಿದ್ದರೆ, ನಾನು ಹೋಗಿ ಹಣ ವಾಪಸ್ ಮಾಡ್ತೀನಿ. ಪೆಟ್ಟಿಗೆಯಲ್ಲಿಟ್ಟರೆ ನಾನೇನು ಅಪರಾಧಿಯಾಗಲ್ಲ.”
ರಾಯಸಾಹೇಬರು –“ಮತ್ತೆ ಅದೇ ಮೂರ್ಖತನ! ಈಗ ಆಗುವುದೆಲ್ಲಾ ಆಯ್ತು. ದೇವರ ಮೇಲೆ ಭಾರ ಹಾಕಿ ಜಾಮೀನು ತಗೋಬೇಕಾಗುತ್ತೆ, ಆದ್ರೆ ನಿನ್ನ ಮೂರ್ಖತನದ ಬಗ್ಗೆ ಅನುಮಾನವಿಲ್ಲ. ನಿನಗ್ಗೊತ್ತಾ, ಇದು ಹಾವಿನ ಬಾಯಿಗೆ ಕೈ ಹಾಕಿದಂತೆ, ನನಗೆ ಇಂಥ ವಿಷಯಗಳ ಬಗ್ಗೆ ಜುಗುಪ್ಸೆಯಿದೆ ಅನ್ನೋದು ನಿನಗ್ಗೊತ್ತಿದೆ, ಆದ್ರೂ ತಾಳ್ಮೆ ಕಳೆದುಕೊಳ್ತೀಯ. ಈಗ ನಿನ್ನ ಮೂರ್ಖತನದಿಂದಾಗಿ ನನ್ನ ವ್ರತ ಭಂಗವಾಗುತ್ತಿದೆ. ಇನ್ನು ಈ ವಿಷಯದಲ್ಲಿ ತಲೆ ಹಾಕಲ್ಲ ಅಂತ ನಾನು ತೀರ್ಮಾನಿಸಿದ್ದೆ, ಆದ್ರೆ ನಿನ್ನ ಮೂರ್ಖತನದಿಂದ ನಾನೇನು ತಾನೇ ಮಾಡಲು ಸಾಧ್ಯವಿದೆ?”
ಹೆಂಡತಿ –“ನಾನು ಹೋಗಿ ವಾಪಸ್ ಕೊಡ್ತೀನಿ.”
ರಾಯಸಾಹೇಬರು –“ನಾನು ಹೋಗಿ ವಿಷ ಕುಡೀತೀನಿ.”
ಇತ್ತ ಗಂಡ-ಹೆಂಡತಿಯ ನಡುವೆ ನಾಟಕ ನಡೆಯುತ್ತಿತ್ತು, ಅತ್ತ ದಮಡಿ ಅದೇ ವೇಳೆಗೆ ತನ್ನ ಹಳ್ಳಿಯ ಮುಖಂಡನ ಹೊಲದಲ್ಲಿ ಜೋಳವನ್ನು ಕೊಯ್ಯುತ್ತಿದ್ದ. ಇಂದು ಅವನು ರಾತ್ರೆಗೆ ರಜ ಪಡೆದು ಮನೆಗೆ ಹೋಗಿದ್ದ. ಎತ್ತುಗಳಿಗೆ ತಿನ್ನಿಸಲು ಒಂದು ಹಿಡಿ ಹುಲ್ಲೂ ಸಹ ಇರಲಿಲ್ಲ. ಸಂಬಳ ಸಿಗಲು ಇನ್ನೂ ಅನೇಕ ದಿನಗಳಿದ್ದವು, ಮೇವು ಕೊಳ್ಳಲು ಸಾಧ್ಯವಿರಲಿಲ್ಲ. ಮನೆಯ ಜನ ಹಗಲು ವೇಳೆಯಲ್ಲಿ ಸ್ವಲ್ಪ ಹುಲ್ಲನ್ನು ತಿನ್ನಿಸಿದ್ದರು, ಇದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿತ್ತು. ಎರಡೂ ಎತ್ತುಗಳು ಹಸಿದು ನಿಂತಿದ್ದವು. ಅವು ದಮಡಿಯನ್ನು ನೋಡುತ್ತಲೇ ಬಾಲ ಎತ್ತಿ ಹೂಂಕರಿಸಿದವು. ಅವನು ಸಮೀಪಕ್ಕೆ ಹೋದಾಗ ಅವನ ಅಂಗೈಯನ್ನು ನೆಕ್ಕಿದವು. ದಮಡಿ ಕೈ-ಕೈ ಹೊಸೆದುಕೊಂಡ. ಈ ವೇಳೆಯಲ್ಲಿ ಏನೂ ಸಾಧ್ಯವಿಲ್ಲ, ಬೆಳಿಗ್ಗೆ ಸಾಲ ಪಡೆದು ಮೇವು ತರ‍್ತೀನಿ ಎಂದು ಯೋಚಿಸಿದ.

ಆದರೆ ರಾತ್ರಿ ಹನ್ನೊಂದು ಗಂಟೆಗೆ ಎಚ್ಚರವಾದಾಗ, ಎರಡೂ ಎತ್ತುಗಳು ಇನ್ನೂ ನೀರಿನ ತೊಟ್ಟಿಯ ಬಳಿ ನಿಂತಿರುವುದನ್ನು ನೋಡಿದ. ಬೆಳದಿಂಗಳ ರಾತ್ರಿಯಾಗಿತ್ತು, ಎತ್ತುಗಳು ತನ್ನನ್ನು ತಿರಸ್ಕಾರದಿಂದ ನೋಡುತ್ತಿವೆ ಎಂದು ಅನ್ನಿಸಿತು. ಅವುಗಳ ಹಸಿವೆಯನ್ನು ಗಮನಿಸಿ ಅವನ ಕಣ್ಣುಗಳು ತುಂಬಿ ಬಂದವು. ರೈತನಿಗೆ ಅವನ ಎತ್ತುಗಳು ಮಗನಂತಿರುತ್ತವೆ. ಅವನು ಅವುಗಳನ್ನು ಪಶು ಎಂದು ನೋಡದೆ ತನ್ನ ಮಿತ್ರ ಮತ್ತು ಸಹಾಯಕನೆಂದು ತಿಳಿಯುತ್ತಾನೆ. ಎತ್ತುಗಳು ಹಸಿದು ನಿಂತಿರುವುದನ್ನು ನೋಡಿ ಅವನ ನಿದ್ರೆ ಹಾರಿಯೋಯಿತು. ಏನೋ ಯೋಚಿಸಿ ಎದ್ದ, ಕುಡುಗೋಲು ಹಿಡಿದು ಮೇವನ್ನರಸುತ್ತಾ ಹೋದ. ಹಳ್ಳಿಯ ಹೊರ ಭಾಗದಲ್ಲಿ ಸಜ್ಜೆ ಮತ್ತು ಜೋಳದ ಹೊಲಗಳಿದ್ದವು. ದಮಡಿಯ ಕೈಗಳು ಕಂಪಿಸಿದವು, ಆದರೆ ಎತ್ತುಗಳು ನೆನಪಾಗಿ ಉತ್ತೇಜಿತನಾದ. ಅವನು ಬಯಸಿದ್ದರೆ ಬೇಕಾದಷ್ಟು ಸಜ್ಜೆ ಮತ್ತು ಜೋಳವನ್ನು ಕೊಯ್ಯಬಹುದಿತ್ತು; ಆದರೆ ಅವನು ಕದಿಯುತ್ತಿದ್ದಾಗ್ಯೂ ಕಳ್ಳನಾಗಿರಲಿಲ್ಲ. ಅವನು ಎತ್ತುಗಳಿಗೆ ರಾತ್ರಿಗೆ ಸಾಕಾಗುವಷ್ಟು ಮಾತ್ರ ಮೇವನ್ನು ಕೊಯ್ದ. ಒಂದು ವೇಳೆ ಯಾರಾದರು ನೋಡಿದರೂ, ಎತ್ತುಗಳು ಹಸಿದಿದ್ದವು, ಅದಕ್ಕೇ ಕೊಯ್ದೆ ಎನ್ನುವೆ ಎಂದು ಯೋಚಿಸಿದ. ಈ ಅಲ್ಪ-ಸ್ವಲ್ಪ ಮೇವಿಗೆ ನನ್ನನ್ನು ಯಾರೂ ಹಿಡಿಯಲಾರರು, ನಾನು ಇದನ್ನು ಮಾರಲು ಕೊಯ್ದಿಲ್ಲ, ನನ್ನನ್ನು ಹಿಡಿಯುವಂಥ ಕ್ರೂರಿಯಾದರೂ ಯಾರಿದ್ದಾರೆ ಎಂಬ ವಿಶ್ವಾಸವಿತ್ತು. ಹೆಚ್ಚೆಂದರೆ, ಮೇವಿನ ಬೆಲೆಯನ್ನು ಕೇಳಬಹುದು ಎಂದೆಲ್ಲಾ ಯೋಚಿಸಿದ. ಅಲ್ಪ ಪ್ರಮಾಣದಲ್ಲಿ ಮೇವಿರುವುದು ಅವನನ್ನು ಅಪರಾಧದಿಂದ ಪಾರು ಮಾಡಲು ಯಥೇಷ್ಟವಾಗಿತ್ತು. ಕಳ್ಳನಾದವನು ತಾನು ಹೊರುವಷ್ಟು ಮೇವನ್ನು ಕೊಯ್ಯುತ್ತಾನೆ. ಅಂಥ ಕಳ್ಳನಿಗೆ ಬೇರೆಯವರ ಲಾಭ-ನಷ್ಟದ ಬಗ್ಗೆ ಯೋಚಿಸಿ ಏನಾಗಬೇಕಿದೆ? ಹಳ್ಳಿಯ ಜನ ತಾನು ಮೇವು ತೆಗೆದುಕೊಂಡು ಹೋಗುತ್ತಿರುವುದನ್ನು ನೋಡಿ ಖಂಡಿತ ರೇಗಬಹುದು, ಆದರೆ ಯಾರೂ ತನ್ನನ್ನು ಕಳ್ಳತನದ ಅಪರಾಧದಲ್ಲಿ ಸಿಲುಕಿಸುವುದಿಲ್ಲ. ಆದರೆ ಸಂಯೋಗವೆಂಬಂತೆ ಹಳ್ಳಿಯ ಪೊಲೀಸ್ ಸ್ಟೇಷನ್ನಿನ ಪೊಲೀಸು ಅತ್ತ ಕಡೆಯಿಂದ ಹಾದು ಹೋದ. ಅವನು ವ್ಯಾಪಾರಿಯೊಬ್ಬನ ಮನೆಯಲ್ಲಿ ಜೂಜಾಟದ ಸುದ್ದಿ ಕೇಳಿ ಅಲ್ಲಿ ಸ್ವಲ್ಪ ಹಣ ಗಿಟ್ಟಿಸಲು ಹೊರಟಿದ್ದ. ದಮಡಿ ತಲೆಯ ಮೇಲೆ ಮೇವಿಟ್ಟುಕೊಂಡಿದ್ದನ್ನು ನೋಡಿ, ಅವನಿಗೆ ಅನುಮಾನ ಬಂತು. ರಾತ್ರಿಯ ವೇಳೆಯಲ್ಲಿ ಯಾರು ಮೇವನ್ನು ಕೊಯ್ಯುತ್ತಾರೆ? ಇವನು ಕದ್ದು ಕೊಯ್ದಿರಬಹುದು ಎಂದು ಯೋಚಿಸಿ ಗದರಿದ –“ಮೇವು ತಗೊಂಡು ಹೋಗ್ತಿರೋದು ಯಾರು? ನಿಲ್ಲು!”
ದಮಡಿ ಹೆದರಿ ಹಿಂದಕ್ಕೆ ನೋಡಿದ, ಅಲ್ಲಿ ಪೊಲೀಸಿದ್ದ. ಕೈ-ಕಾಲುಗಳು ಕಂಪಿಸಿದವು –“ಬುದ್ಧಿ, ಸ್ವಲ್ಪ ಕೊಯ್ದಿದ್ದೇನೆ, ನೀವೇ ನೋಡಿ.”
ಪೊಲೀಸು- “ಸ್ವಲ್ಪ ಕೊಯ್ದಿದ್ದೀಯೋ, ತುಂಬಾ ಕೊಯ್ದಿದ್ದೀಯೋ, ಕಳ್ಳತನ ಕಳ್ಳತನವೇ. ಹೊಲ ಯಾರದ್ದು?”
ದಮಡಿ –“ಬಲದೇವ ಮಹತೋ ಅವರದ್ದು.”
ಬೇಟೆ ಸಿಕ್ಕಿಕೊಂಡಿತು, ಇವನಿಂದ ಸ್ವಲ್ಪ ಹಣ ಕೀಳ್ತೀನಿ ಎಂದು ಪೊಲೀಸು ತಿಳಿದಿದ್ದ. ಆದರೆ ಅಲ್ಲೇನಿತ್ತು? ದಮಡಿಯನ್ನು ಹಿಡಿದು ಹಳ್ಳಿಗೆ ಕರೆತಂದ, ಅಲ್ಲೂ ಏನೋ ಸಿಗದಿದ್ದಾಗ, ಸ್ಟೇಷನ್ನಿಗೆ ಕರೆದೊಯ್ದ. ಅಲ್ಲಿ ಇನ್ಸ್ಪೆಕ್ಟರ್ ದಂಡದ ರಸೀದಿ ಹರಿದ. ಮೊಕದ್ದಮೆಯನ್ನು ರಾಯಸಾಹೇಬರ ನ್ಯಾಯಸ್ಥಾನದಲ್ಲೇ ಹಾಜರ್ ಪಡಿಸಿದ.

ರಾಯಸಾಹೇಬರು ದಮಡಿ ಸಿಕ್ಕಿಹಾಕಿಕೊಂಡಿದ್ದನ್ನು ನೋಡಿ, ಸಹಾನುಭೂತಿಗೆ ಬದಲಾಗಿ ಕಠೋರತೆಯಿಂದ ವರ್ತಿಸುತ್ತಾ ಹೇಳಿದರು –“ಇದು ನನಗೆ ಕೆಟ್ಟ ಹೆಸರು ತರುವ ವಿಷಯ. ನಿನಗೇನಾಗಬೇಕಿದೆ, ವರ್ಷ-ಆರು ತಿಂಗಳ ಜೈಲು ಶಿಕ್ಷೆಯಾಗುತ್ತೆ, ನಾನು ತಲೆತಗ್ಗಿಸಬೇಕಿದೆ! ಜನ ರಾಯಸಾಹೇಬರ ನೌಕರ ಬದ್ಮಾಶ್, ಕಳ್ಳ ಎಂದೇ ಹೇಳುತ್ತಿರಬೇಕು. ನೀನು ನನ್ನ ನೌಕರನಾಗಿರದಿದ್ದರೆ, ಕಡಿಮೆ ಶಿಕ್ಷೆಯನ್ನು ವಿಧಿಸುತ್ತಿದ್ದೆ; ಆದ್ರೆ ನೀನು ನನ್ನ ನೌಕರ, ಹೀಗಾಗಿ ಅತ್ಯಂತ ಕಠಿಣ ಶಿಕ್ಷೆಯನ್ನು ಕೊಡ್ತೀನಿ. ರಾಯಸಾಹೇಬರು ತಮ್ಮ ನೌಕರನಿಗೆ ರಿಯಾಯಿತಿ ತೋರಿಸಿದರು ಎಂಬ ಮಾತನ್ನು ನಾನು ಕೇಳಲಾರೆ.”

ಹೀಗೆಂದು ರಾಯಸಾಹೇಬರು ದಮಡಿಗೆ ಆರು ತಿಂಗಳ ಕಠಿಣ ಶಿಕ್ಷೆಯ ಆದೇಶವನ್ನು ಹೇಳಿದರು.
ಅಂದೇ ಅವರು ಕೊಲೆಯ ಮೊಕದ್ದಮೆಯಲ್ಲಿ ಜಾಮೀನು ತೆಗೆದುಕೊಂಡರು. ನಾನು ಎರಡೂ ವೃತ್ತಾಂತಗಳನ್ನು ಕೇಳಿದೆ; ಸಭ್ಯತೆ ಕೌಶಲ್ಯದ ಹೆಸರು ಎಂಬ ಸಂಗತಿ ದೃಢವಾಯಿತು. ನೀವು ಅತ್ಯಂತ ಕೆಟ್ಟ ಕೆಲಸವನ್ನು ಮಾಡಿ, ಆದರೆ ನೀವು ಅದರ ಮೇಲೆ ಪರದೆಯನ್ನು ಹಾಕಬಲ್ಲಿರಾದರೆ, ನೀವು ಸಭ್ಯರು, ಶಿಷ್ಟರು, ಸಜ್ಜನರು, ಜೆಂಟಲ್‌ಮೆನ್‌ಗಳು. ಒಂದು ವೇಳೆ ನಿಮ್ಮಲ್ಲಿ ಈ ವೈಶಿಷ್ಟ್ಯತೆ ಇರದಿದ್ದರೆ ನೀವು ಅಸಭ್ಯರು, ಗುಗ್ಗುಗಳು, ಬದ್ಮಾಶ್‌ಗಳು. ಇದೇ ಸಭ್ಯತೆಯ ರಹಸ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.