ADVERTISEMENT

ಡಿ.ಎನ್. ಶ್ರೀನಾಥ್ ಅವರ ಕಥೆ: ಉತ್ತರಿಸಲಾಗದ ಪ್ರಶ್ನೆಗಳು

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 23:30 IST
Last Updated 19 ಅಕ್ಟೋಬರ್ 2024, 23:30 IST
   
ಮೂಲ: ವೀಣಾ ಠಾಕುರ್ | ಕನ್ನಡಕ್ಕೆ: ಡಿ.ಎನ್.ಶ್ರೀನಾಥ್

ಬೆಳಗ್ಗೆಯ ಸುಮಾರು ಎಂಟು ಗಂಟೆ. ಆನಂದರು ಕಚೇರಿಗೆ ಹೊರಡುವ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆಗಲೇ ಡ್ರೈವರ್ ಪತ್ರ ಹಿಡಿದು ಒಳಗೆ ಬಂದ. ಸುಯೋಗವೆಂಬಂತೆ ಅಂಚೆಯವನು ಗೇಟ್ ಸಮೀಪದಲ್ಲಿಯೇ ಅವನನ್ನು ಭೇಟಿಯಾಗಿದ್ದ. 

ಆನಂದರು ಕಚೇರಿಗೆ ಹೋಗಲು ಸಿದ್ಧರಾಗಿದ್ದರು. ಅವರ ಕೈಯಲ್ಲಿದ್ದ ಅಂತರ್ದೇಶೀಯ ಪತ್ರವನ್ನು ನೋಡಿ ಅವರ ಹೆಂಡತಿ ಪೂಜಾ ಕೇಳಿದಳು, ‘ಪತ್ರವನ್ನು ಯಾರು ಬರೆದಿದ್ದಾರೆ? ಅಕ್ಷರವನ್ನು ನೋಡಿದರೆ ನಿಮ್ಮ ತಾಯಿಯ ಪತ್ರವೆಂದು ಕಾಣಿಸುತ್ತದೆ!’ ಪತ್ರವನ್ನು ಕೈಯಲ್ಲಿ ತೆಗೆದುಕೊಂಡಾಗ ಆನಂದರ ಕಣ್ಣುಗಳಲ್ಲಿ ಮಸುಕು ಛಾಯೆಯೊಂದು ಮೂಡಿತು. ಅವರು ಹೆಂಡತಿಯ ದೃಷ್ಟಿಯಿಂದ ಪಾರಾಗಿ ಪತ್ರವನ್ನು ತೆರೆದು ಓದಿದರು-

 ‘ಪ್ರೀತಿಯ ಆನಂದ,

ADVERTISEMENT

 ಚಿರಂಜೀವಿಯಾಗಿರು. 

ನೀವು ಚೆನ್ನಾಗಿರಿ ಎಂದು ನಾನು ಸದಾ ದೇವರಲ್ಲಿ ಪ್ರಾರ್ಥಿಸುತ್ತೇನೆ. ಈಚೆಗೆ ಸೊಸೆಯ ಆರೋಗ್ಯ ಹೇಗಿದೆ? ಮಕ್ಕಳು ಚೆನ್ನಾಗಿರಬೇಕೆಂದು ತಿಳಿದಿದ್ದೇನೆ! ನಿಮ್ಮನ್ನೆಲ್ಲಾ ನೋಡದೆ ತುಂಬಾ ದಿನಗಳಾದವು. ಆನಂದ, ನಿನ್ನ ಆರೋಗ್ಯ ಸರಿಯಿದೆ ತಾನೇ? ನಿನ್ನ ಆರೋಗ್ಯದ ಕಡೆ ಗಮನಕೊಡು. ನಾನಿಲ್ಲಿ ಆರೋಗ್ಯವಾಗಿದ್ದೇನೆ. ಹಳ್ಳಿ ನನಗೆ ತುಂಬಾ ಹಿಡಿಸುತ್ತದೆ. ಇಲ್ಲಿಯ ಜನರೆಲ್ಲಾ ನಮ್ಮವರೇ. ವೈದ್ಯರು ಬಿ.ಪಿ. ಚೆಕ್ ಮಾಡುತ್ತಾರೆ. ಬಿ.ಪಿ. ಹತೋಟಿಯಲ್ಲಿದೆ, ಹೀಗಾಗಿ ಅದರ ಮಾತ್ರೆಯನ್ನು ಕಡಿಮೆ ಮಾಡಿದ್ದಾರೆ. ಇಲ್ಲಿ ಯಾವುದಕ್ಕೂ ತೊಂದರೆಯಿಲ್ಲ. ನೀನೇನೂ ಯೋಚಿಸಬೇಡ. 

ನಿಮ್ಮನ್ನೆಲ್ಲಾ ನೋಡಬೇಕೆಂದು ಮನಸ್ಸಾಗುತ್ತದೆ. ನಿನಗೆ ಬಿಡುವು ಸಿಕ್ಕ ಕೂಡಲೇ ಸೊಸೆ ಮತ್ತು ಮಕ್ಕಳನ್ನು ಕರೆದುಕೊಂಡು ಹಳ್ಳಿಗೆ ಬಂದುಬಿಡು. ಹಳ್ಳಿಯ ಜನರೂ ನಿನ್ನ ಬಗ್ಗೆ ಕೇಳುತ್ತಿರುತ್ತಾರೆ. ಇಂದು ನಾನು ಚಿಕ್ಕ ಸೊಸೆಗೂ ಪತ್ರವನ್ನು ಬರೆದಿದ್ದೇನೆ. ಇನ್ನೇನು ಬರೆಯಲಿ? ನನ್ನ ಬಗ್ಗೆ ಚಿಂತಿಸಬೇಡ. ನೀವೆಲ್ಲರೂ ಸದಾ ಸುಖಿಯಾಗಿರಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.’

 -ನಿನ್ನ ತಾಯಿ.

ಪತ್ರವನ್ನು ಓದಿದ ನಂತರ ಆನಂದರು ವ್ಯಗ್ರರಾದರು. ಅವರ ಕಳವಳ ಹೆಚ್ಚಿತು. ಅಪರಾಧ-ಪ್ರಜ್ಞೆ ಮತ್ತು ಎದೆಯಲ್ಲಿ ಭಾರದ ಅನುಭವವಾಯಿತು. ಆನಂದರು ಇದಕ್ಕೆ ಗಮನ ಕೊಡದೆ, ಕಿಟಕಿಯಿಂದ ಹೊರಗೆ ನೋಡಿದರು. ಅದೇ ಮರಗಳು ಮತ್ತು ಅದೇ ವಿದ್ಯುತ್ ಕಂಬಗಳನ್ನು ನೋಡಿ ಅವರು ಎಲ್ಲೋ ಕಳೆದು ಹೋದರು. ಪೂಜಾ ಆನಂದರನ್ನು ಮತ್ತೆ ಕೇಳಿದಳು, ‘ಪತ್ರ ಯಾರದ್ದು?’

ಆನಂದರು ಪತ್ರವನ್ನು ಪೂಜಾಳೆಡೆಗೆ ಹಿಡಿದರು. ಕಚೇರಿಗೆ ಹೋಗಲು ತಡವಾಗಿತ್ತು, ಆದರೂ ಅವರು ಡ್ರೆಸ್ಸಿಂಗ್ ಟೇಬಲ್ಲಿನ ಕನ್ನಡಿಯ ಸಮೀಪದಲ್ಲಿ ಸ್ವಲ್ಪ ಹೊತ್ತು ನಿಂತರು. ಆನಂದರು ಪೂಜಾಳನ್ನು ನೋಡಿದರು. ಅವಳ ಮುಖದಲ್ಲಿ ಪತ್ರವನ್ನು ಬೇಗನೇ ಓದುವ ಆತುರವಿತ್ತು. ತಮ್ಮ ಕಾರ್ಯಬಾಹುಳ್ಯದಿಂದಾಗಿ ಆನಂದರು ಕಚೇರಿಗೆ ಹೊರಟರು. ಯೋಚಿಸುತ್ತಿರುವಾಗ ಕಿವಿಯ ಕೆಳಗೆ ಏನೋ ಅನುಭವವಾಯಿತು, ಐವತ್ತೆರಡನೆಯ ವಯಸ್ಸಿಗೆ, ತಲೆಕೂದಲುಗಳಿಗೆ ಎಳ್ಳಿನ ಎಣ್ಣೆಯನ್ನು ಹಚ್ಚಿಕೊಳ್ಳುವಾಗ ಅವರಿಗೆ ಆಗಾಗ ಸಾವಿನ ಭಯ ಕಾಡುತ್ತದೆ. 

‘ವಾಹ್! ಚೆನ್ನಾಗಿದ್ದಾರಲ್ಲ!’ ಪೂಜಾಳ ಧ್ವನಿಯಲ್ಲಿ ಹೀಯಾಳಿಕೆ ಇದೆಯೆಂದು ಅನ್ನಿಸಿತು. ಇದು ಭ್ರಮೆಯೋ? ಆನಂದರು ವಿಷಯಾಂತರಿಸುತ್ತಾ ಹೇಳಿದರು, ‘ಅವರೇಕೆ ದುಃಖದಲ್ಲಿರುತ್ತಾರೆ.?’

ಕಛೇರಿಗೆ ಹೋಗುವಾಗ ಆನಂದರು ಪತ್ರದಲ್ಲಿ ಬರೆದ ಚಿಕ್ಕ-ಚಿಕ್ಕ ಅಕ್ಷರಗಳನ್ನು ನೆನಪಿಸಿಕೊಳ್ಳುತ್ತಿದ್ದರು. ಪತ್ರದ ಬರವಣಿಗೆಯಲ್ಲಿ ಕೊನೆ-ಕೊನೆಗೆ, ಅಕ್ಷರಗಳನ್ನು ಒತ್ತಿ-ಒತ್ತಿ ಬರೆಯಲಾಗಿದೆ ಎಂದು ಅನ್ನಿಸುತ್ತಿತ್ತು. ಹಳ್ಳಿಯಲ್ಲಿ ಪೆನ್ನಿಗೆ ಹಾಕುವ ರೀಫಿಲ್ ಸಿಗುವುದೋ, ಇಲ್ಲವೋ! ಅಥವಾ ಅಮ್ಮ ಉಪಯೋಗಿಸುವ ಪೆನ್ನಿನ ರೀಫಿಲ್ ಖಾಲಿಯಾಗಿದೆಯೋ, ಏನೋ! ಆನಂದರು ತಮಗೆ ತಾವೇ ತಿಳಿವಳಿಕೆ ಹೇಳಿಕೊಳ್ಳಲು ಪ್ರಯತ್ನಿಸಿದರು. ಆದರೆ ಅಕಸ್ಮಾತ್ ತಾವು ಕಳೆದ ಬಾರಿ ಹೋದಾಗ ಅನೇಕ ರೀಫಿಲ್‌ಗಳು, ಪೆನ್ನು ಮತ್ತು ಅಂತರ್ದೇಶೀಯ ಪತ್ರಗಳನ್ನು ಖರೀದಿಸಿ ಅಮ್ಮನಿಗೆ ಕೊಟ್ಟಿದ್ದು ನೆನಪಾಯಿತು. ದೇವರ ದಯೆಯಿಂದ ಅವುಗಳಲ್ಲಿ ಇನ್ನೂ ಸಾಕಷ್ಟು ಉಳಿದಿರಬಹುದು.

 ‘ಇಷ್ಟೊಂದು ಅಂತರ್ದೇಶೀಯ ಪತ್ರಗಳನ್ನು ಕೊಟ್ಟು ಹೋಗ್ತಿದ್ದೀಯಲ್ಲ, ನಾನು ಯಾರಿಗೆ ಬರೆಯಲಿ?’ ಅಮ್ಮ ಕೇಳಿದ್ದಳು. 

 ‘ಯಾಕೆ? ನಮಗೆ ಬರಿ. ನಿನ್ನ ಮಕ್ಕಳಿಗೆ ಬರಿ.’

‘ಅಯ್ಯೋ ದೇವರೇ, ಇವನ ಮಾತನ್ನು ಕೇಳಪ್ಪಾ…’

ಅಮ್ಮನ ಚಿರಪರಿಚಿತ ಹೇಳಿಕೆಯಲ್ಲಿ ವ್ಯತ್ಯಾಸವುಂಟಾಗಿರಲಿಲ್ಲ, ‘ನಿಮ್ಮನ್ನು ನಾನು ಬಲ್ಲೆ, ನಿಮ್ಮ ವಿಳಾಸ ತಗೊಂಡು ಇಟ್ಟುಕೊಳ್ಳಬೇಕೆಂಬ ಅವಶ್ಯಕತೆಯೇ ಬರಲಿಲ್ಲ. ಇದಕ್ಕೂ ಮೊದಲು ನಾನೂ ಒಂಟಿಯಾಗಿರಲಿಲ್ಲ.’

ಅಮ್ಮನ ನಗುವಿನಲ್ಲೂ ನಿರಾಸೆ ಕವಿದಿತ್ತು. ಅವಳ ಬಾಯಿಯಿಂದ ಬಂದ ‘ಒಂಟಿ’ ಶಬ್ದಕ್ಕೆ ಅನೇಕ ಅರ್ಥಗಳು ಹೊರಹೊಮ್ಮುತ್ತಿದ್ದವು. ಆನಂದರಿಗೆ ಇದನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗಲಿಲ್ಲ. ಅವರು ಬೇಗ-ಬೇಗನೆ ಕವರಿಗೆ ವಿಳಾಸವನ್ನು ಬರೆದರು. ತಲೆ ಎತ್ತಲು ಧೈರ್ಯವಾಗಲಿಲ್ಲ. ಗಡಿಬಿಡಿಯಲ್ಲಿ ಅವರಿಗೆ, ಈಗ ಅಮ್ಮನ ದೃಷ್ಟಿಯಿಂದ ಪಾರಾಗಬೇಕೆಂದು ಅನ್ನಿಸಿತು. ಅದರೆ ಮರಳಿ ಬರುವುದಕ್ಕೂ ಮೊದಲು, ಅಮ್ಮನಿಗೆ ಒಂದು ಪೆನ್ನನ್ನು ಖರೀದಿಸಿ ಕೊಡಬೇಕೆಂಬ ಯೋಚನೆ ಬಂತು. ಅವರ ಬಳಿಯಿದ್ದ ಪೆನ್ನು ದುಬಾರಿಯದಾಗಿತ್ತು, ಹೀಗಾಗಿ ಡ್ರೈವರ್‌ಗೆ ಹೇಳಿ ಇನ್ನೊಂದು ಪೆನ್ನು ಖರೀದಿಸಿ ಕೊಟ್ಟಿದ್ದರು. 

ಇದು ಕಳೆದ ತಿಂಗಳ ಸಂಗತಿ. ಆರು ತಿಂಗಳ ಹಿಂದೆ ಅಪ್ಪ ನಿಧನರಾದಾಗಿನ ವಿಷಯಗಳು ಆನಂದರಿಗೆ ಇನ್ನೂ ಚೆನ್ನಾಗಿ ನೆನಪಿದೆ. ಆನಂದರ ತಂದೆ ಕಾಶಿ ಹಿಂದೂ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರೊಫೆಸರ್ ಆಗಿದ್ದರು. ಆನಂದರೂ ಸೇರಿ ಐದು ಜನ ಅಣ್ಣ-ತಮ್ಮಂದಿರು, ಎಲ್ಲರೂ ಒಳ್ಳೆಯ ಹುದ್ದೆಗಳಲ್ಲಿದ್ದಾರೆ. ಎಲ್ಲರೂ ಸುಖವಾಗಿದ್ದಾರೆ, ಅನುಕೂಲವಾಗಿದ್ದಾರೆ. ಅಪ್ಪ ಸತ್ತ ನಂತರ ಅಮ್ಮನಿಗೆ ಹೃದಯಾಘಾತವಾಗಿತ್ತು. ವೈದ್ಯರು ಅವರಿಗೆ ತೂಕ ಕಡಿಮೆ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದರು. ಕೆಲವು ದಿನ ಅಮ್ಮ ಕಿರಿಯ ಮಗ ಮೋಹನನ ಮನೆಯಲ್ಲಿದ್ದರು. ಮಕ್ಕಳು ಚಿಕ್ಕವರಿದ್ದಾಗ ಅಮ್ಮ ಅಡುಗೆ ಮಾಡಿ ಎಲ್ಲರಿಗೂ ಬಡಿಸುತ್ತಿದ್ದಳು. ತಂದೆಯವರು ನಿಧನರಾದ ನಂತರ, ಅವರಿಗೆ ಊಟ-ತಿಂಡಿಯ ವಿಷಯದಲ್ಲಿ ವಿಶೇಷ ಆಸಕ್ತಿಯಿತ್ತು ಎಂಬುದು ನಮಗೆ ತಿಳಿಯಿತು. 

ಸಹೋದರ-ಸಹೋದರಿಯರ ನಡುವೆ ಅಮ್ಮನ ವಿಭಜನೆಯಾಯಿತು! ಅಮ್ಮ ಸರದಿಯಂತೆ ಮಕ್ಕಳ ಮನೆಗಳಿಗೆ ಹೋಗಿ ದಿನ ಕಳೆಯಲಾರಂಭಿಸಿದಳು. ಎಲ್ಲಾ ಸಂಗತಿಗಳು ಬುಡಮೇಲಾದವು. ಅಮ್ಮ ಶಟಲ್ ಕಾರ್ಕ್‌ನಂತಾದಳು. ಕೈಗಳಲ್ಲಿ ಬ್ಯಾಟ್ ಹಿಡದ ಮಕ್ಕಳ ಕೈಗಳಲ್ಲಿ ಅಮ್ಮನ ಪರಿಸ್ಥಿತಿ ಶಟಲ್ ಕಾರ್ಕ್‌ನಂತಾಯಿತು. ಮಕ್ಕಳ ಕೈಗಳಿಲ್ಲಿದ್ದ ಬ್ಯಾಟ್‌ಗಳಿಂದ ಹೊಡೆತ ತಿಂದ ಅಮ್ಮ ಅತ್ತ-ಇತ್ತ ಎಸೆಯಲ್ಪಟ್ಟಳು. 

ಆ ದಿನಗಳಲ್ಲಿ ಅಮ್ಮ ಆನಂದರ ಮನೆಯಲ್ಲಿರುತ್ತಿದ್ದಳು. ಬೆಳಗಿನ ಹೊತ್ತು. ಆನಂದರು ಕಚೇರಿಗೆ ಹೋಗುವ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದರು.

‘ಮಗು ಆನಂದ, ಇಲ್ಲಿರುತ್ತಾ ತುಂಬಾ ದಿನಗಳಾದವು. ಇನ್ನು ಕೆಲವು ದಿನ ಹಳ್ಳಿಗೆ ಹೋಗಿರಬೇಕೆಂದು ಅನ್ನಿಸುತ್ತಿದೆ.’ ಅಮ್ಮ ಆನಂದನ ಬಳಿಗೆ ಬಂದು ಹೇಳಿದಳು. 

‘ಇಷ್ಟು ಅವಸರವೇಕೆ?’ ಆನಂದರು ಅಮ್ಮನ ಪರಿಸ್ಥಿತಿಯನ್ನು ಗಮನಿಸಿ ಹೇಳಿದರು.

‘ಆನಂದ, ಕೆಲವು ದಿನಗಳ ಮಟ್ಟಿಗೆ ಹೋಗ್ತೀನಿ, ಅಲ್ಲಿ ಸರಿಯಾಗದಿದ್ದರೆ, ಮತ್ತೆ ಇಲ್ಲಿಗೇ ಬರ‍್ತೀನಿ. ಅಲ್ಲ, ನಾನೇನು ಎಲ್ಲಾ ಕಡೆ ಖಾಯಮ್ ಆಗಿ ಇರ‍್ತೀನಾ?’ 

ಸರಿ, ಆನಂದರೇ ಖುದ್ದು ಅಮ್ಮನನ್ನು ಹಳ್ಳಿಗೆ ಬಿಟ್ಟು ಬಂದರು. ಹಳ್ಳಿಗೆ ಹೋಗುವುದಕ್ಕೂ ಮೊದಲು ಆನಂದರು ಅಮ್ಮನ ಕೋಣೆಗೆ ಹೋಗಿದ್ದರು. ಅಮ್ಮ ಅದೆಷ್ಟೋ ದಿನಗಳ ನಂತರ ನಿಶ್ಚಿಂತೆಯಿಂದ ನಿದ್ರಿಸುತ್ತಿರುವುದನ್ನು ಅವರು ನೋಡಿದರು. ಆದರೆ ಅಮ್ಮ ಮುದುಡಿ ಹೋಗಿದ್ದಾರೆ ಎಂದು ಅನ್ನಿಸಿತು. ಅಮ್ಮನಿಗೆ ಅಪ್ಪನ ಪೆನ್ಶನ್ ಸಿಗುತ್ತಿತ್ತು, ಆದರೂ ಅಮ್ಮನನ್ನು ಶಟಲ್ ಕಾರ್ಕ್ ಆಗಿ ಮಾಡಲಾಗಿತ್ತು. ಅಮ್ಮ ಹಳ್ಳಿಗೆ ಹೋದಾಗ ಎಲ್ಲರೂ ನಿಶ್ಚಿಂತರಾದರು. ಆದರೆ ಆನಂದರಿಗೆ ನಿರಂತರವಾಗಿ ಅಪರಾಧ-ಪ್ರಜ್ಞೆ ಕಾಡುತ್ತಿತ್ತು. ಕೆಲವು ದಿನಗಳ ನಂತರ ಅಮ್ಮನ ಪತ್ರವೊಂದು ಸಿಕ್ಕಿತು- 

‘ಪ್ರೀತಿಯ ಆನಂದ, 

ಚೀರಂಜೀವಿಯಾಗಿರು.

ನಿಮಗೆ ಜಗತ್ತಿನ ಎಲ್ಲಾ ಸುಖ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಮನೆಯಲ್ಲಿ ಎಲ್ಲರೂ ಕ್ಷೇಮವೆಂದು ಭಾವಿಸುತ್ತೇನೆ. ಮಕ್ಕಳು ಖುಷಿಯಾಗಿರಬೇಕು! ಪಿಂಕಿಯ ಪರೀಕ್ಷೆಗಳು ಮುಗಿದಿರಬಹುದು. ಸೊಸೆ ಆರೋಗ್ಯವಾಗಿರಬಹುದು! ನೀನು ನನ್ನ ಬಗ್ಗೆ ಯೋಚಿಸಬೇಡ. ಇಲ್ಲಿ ಯಾವುದಕ್ಕೂ ಚಿಂತೆಯಿಲ್ಲ. ಅತ್ತೆ ಮನೋರಾವಾಲಿ ಎಲ್ಲಾ ಕೆಲಸಗಳನ್ನು ಮಾಡುತ್ತಾರೆ.’

‘ಆನಂದ, ನಾನು ಒಂದು ಜರೂರು ಕೆಲಸದಿಂದ ನಿನಗೆ ಈ ಪತ್ರವನ್ನು ಬರೆಯುತ್ತಿದ್ದೇನೆ. ಕೆಲವು ದಿನಗಳ ಮಟ್ಟಿಗೆ ಬನಾರಸ್‌ಗೆ ಹೋಗಬೇಕೆಂದು ಮನಸ್ಸಾಗುತ್ತಿದೆ. ಹೆಣ್ಣಿಗೆ ಅದೃಷ್ಟ ಮಾತ್ರದಿಂದ ಪೋಷಕರು ಸಿಗುತ್ತಾರೆ. ಅವಳು ಚಿಕ್ಕವಳಿದ್ದಾಗ ತಂದೆ ಮತ್ತು ಅಣ್ಣ ಅವಳಿಗೆ ಪೋಷಕರಾಗುತ್ತಾರೆ, ಮದುವೆಯಾದ ನಂತರ ಗಂಡ; ಅವಳು ವಿಧವೆಯಾದಾಗ ಮಕ್ಕಳು ಅವಳಿಗೆ ಪೋಷಕರಾಗುತ್ತಾರೆ. ಈಗ ನಿಮ್ಮ ತಂದೆ ಇಲ್ಲ, ನಾನು ನಿಮ್ಮನ್ನೆಲ್ಲಾ ಕೇಳದೆ ಯಾವ ಕೆಲಸವನ್ನು ಮಾಡಲು ಸಾಧ್ಯ? ಆನಂದ, ನಿಮ್ಮ ತಂದೆ ಇದ್ದಾಗ ನನಗೆ ಪೂಜೆ-ಪುನಸ್ಕಾರಗಳಿಗೆ ಪುರುಸೊತ್ತು ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ನಿಮ್ಮ ತಂದೆ, ಕರ್ತವ್ಯಗಳನ್ನು ಪಾಲಿಸುವುದೇ ಮನುಷ್ಯನ ಪೂಜೆ ಎಂದು ಸದಾ ಹೇಳುತ್ತಿದ್ದರು. ನಿನಗೆ ಗೃಹಸ್ಥ ಜೀವನ, ಮಕ್ಕಳ ಪೋಷಣೆ ನಿನ್ನ ಕರ್ತವ್ಯವಾಗಿದೆ, ಇದೇ ನೀನು ಮಾಡುವ ಪೂಜೆಯೂ ಹೌದು. ನಾನೂ ಇದರಲ್ಲೇ ನನ್ನ ಜೀವನವನ್ನು ಕಳೆದೆ. ಬನಾರಸ್‌ನಲ್ಲಿದ್ದಾಗ್ಯೂ ಪೂಜೆ-ಪುನಸ್ಕಾರಗಳಿಗೆ ಪುರುಸೊತ್ತು ಸಿಗಲಿಲ್ಲ.’

‘ಆನಂದ, ಈಗ ನನಗೆ ಯಾವುದೇ ಕೆಲಸವಿಲ್ಲ, ಗೃಹಸ್ಥ ಜೀವನವೂ ಇಲ್ಲ. ಈಗ ಬೇಕಾದಷ್ಟು ಸಮಯವಿದೆ. ನೀನು ಹೂಂ ಎಂದರೆ ಕೆಲವು ದಿನ ಬನಾರಸ್‌ಗೆ ಹೋಗಿರ‍್ತೀನಿ! ಅತ್ತೆ ಸಹ ಜೊತೆಗಿರ‍್ತಾರೆ. ಪಾಪ, ಅವರು ಬಾಲ ವಿಧವೆ, ಮಕ್ಕಳೂ ಇಲ್ಲ. ನಿರಾಶ್ರಿತೆ. ಅವರು ನನ್ನ ಜೊತೆಗಿದ್ದರೆ, ನನಗೆ ಯಾವುದೇ ಸಮಸ್ಯೆಯಿರುವುದಿಲ್ಲ. ನೀನು ನನ್ನ ಬಗ್ಗೆ ಚಿಂತಿಸಬೇಡ. ಪೆನ್ಶನ್‌ನಿಂದ ನಮ್ಮಿಬ್ಬರ ಜೀವನ ಸಾಗುತ್ತದೆ. ಸಮಯಕ್ಕೆ ಸರಿಯಾಗಿ ಔಷಧಿಯನ್ನು ತೆಗೆದುಕೊಳ್ತೀನಿ. ನನ್ನ ಬಿ.ಪಿ. ನಾರ್ಮಲ್ ಆಗಿದೆ ಎಂದು ವೈದ್ಯರು ಹೇಳ್ತಾರೆ. ತೂಕವೂ ಕಡಿಮೆಯಾಗಿದೆ ಎಂದೂ ಹೇಳಿದ್ದಾರೆ. ಆನಂದ, ನನ್ನ ಬಗ್ಗೆ ಯೋಚನೆ ಮಾಡಬೇಡ. ನಾನು ಚೆನ್ನಾಗಿದ್ದೇನೆ. ನಿನ್ನ ಆರೋಗ್ಯದ ಬಗ್ಗೆ ಗಮನ ಕೊಡು.’

 -ನಿನ್ನ ತಾಯಿ

ಆನಂದರು ಈ ಪತ್ರವನ್ನು ಓದಿದ ನಂತರ, ಹೆಂಡತಿಗೆ ಕೊಟ್ಟರು. ಇಷ್ಟು ದಿನಗಳಲ್ಲಿ ಅಮ್ಮನ ಅಕ್ಷರಗಳನ್ನು ಎಲ್ಲರೂ ಗುರುತಿಸುತ್ತಿದ್ದರು. ಪತ್ರವನ್ನು ಪಿಂಕಿ ತೆರೆದಿದ್ದಳು. ಆನಂದರು ಕಛೇರಿಯಿಂದ ಮರಳಿದಾಗ ಅವರಿಗೆ ಪತ್ರವನ್ನು ಕೊಡಲಾಗಿತ್ತು.

‘ಅಜ್ಜಿಯ ಭಾಷೆ ಹೇಗಿದೆ? ಅಪ್ಪಾ, ನೀವು ನೋಡಿದಿರ?’ ಪಿಂಕಿ ಅಪ್ಪನನ್ನೇ ನೋಡಿದಳು. ಆನಂದರು ತಮ್ಮ ಎದೆಯಿಂದ ಭಾರವನ್ನು ಕಳಚಿ ಇಟ್ಟಂತೆ ತಮ್ಮ ಸೂಟ್‌ಕೇಸನ್ನು ಕೆಳಗಿಟ್ಟರು! ಪಿಂಕಿಯ ಧ್ವನಿ ಕಲ್ಲಿನಂತೆ ‘ಠಣ್’ ಎಂದು ಸದ್ದು ಮಾಡುತ್ತಾ ಆನಂದರ ಕಿವಿಗಳ ಪರದೆಗೆ ತಾಗಿತು. ಕಣ್ಣುಗಳೆದುರು ಕಳೆದು ಹೋದ ಸಂಗತಿಗಳು ಮೂಡಿದವು. ‘ಅ’ ದಿಂದ ಅಂಜೂರ, ‘ಆ’ ದಿಂದ ಆಟ, ‘ಇ’ ದಿಂದ ಇಲಿ ಎಂದು ಅಮ್ಮ ಎಷ್ಟು ಸಂತಸದಿಂದ ಬೋಧಿಸುತ್ತಿದ್ದಳು. ಪಾಠ ಹೇಳಿಕೊಟ್ಟ ನಂತರ ಮಕ್ಕಳಿಗೆ ತನ್ನ ಕೈಯಾರೆ ಉಣಿಸುತ್ತಿದ್ದಳು. ಊಟ ಮಾಡದಿದ್ದರೆ ಹೇಗೆ ಓದುವೆ? ಓದದಿದ್ದರೆ ಹೇಗೆ ಮುಂದುವರೆಯುವೆ? ಎಂದು ಸದಾ ಹೇಳುತ್ತಿದ್ದಳು. ನೆನಪುಗಳ ಜ್ವರ...ಅಮ್ಮನ ನೆನಪುಗಳು ಆನಂದರನ್ನು ಕಾಡಿಸಿತು. ಅವರು ರೇಗಿ ಹೇಳಿದರು, ‘ಅಜ್ಜಿ, ನೀನು ಬೇರೆಯವರಂತೆ ಶಾಲೆಗೆ ಹೋಗಿರಲಿಲ್ಲ, ಓದಿರಲಿಲ್ಲ.’

ಆನಂದರ ಧ್ವನಿಯಲ್ಲಿದ್ದ ವ್ಯಂಗ್ಯವನ್ನು ಕೇಳಿ ಪಿಂಕಿಗೆ ಆಶ್ಚರ್ಯವಾಯಿತು. ಪಿಂಕಿಯ ಮುಖದಲ್ಲಾದ ಭಾವನೆಗಳನ್ನು ಕಂಡು ಆನಂದರಿಗೆ ಅವಳು ರೇಗಿದ್ದು ತಿಳಿಯಿತು. ಪಿಂಕಿ ಸಂಭಾಳಿಸಿಕೊಂಡು ಹೇಳಿದಳು. 

‘ಅಪ್ಪಾ, ನೀವೊಳ್ಳೆ...ನಾನು ಅಜ್ಜಿಗೆ ಗೇಲಿ ಮಾಡುತ್ತಿರಲಿಲ್ಲ.’

ರಾತ್ರಿಯೆಲ್ಲಾ ಅಮ್ಮನ ನೆನಪುಗಳು...ನೆನಪುಗಳು...ನೆನಪು ಗಳನ್ನು ಹೊರತುಪಡಿಸಿ ಬೇರೇನೂ ಇಲ್ಲ. ಅಮ್ಮ ಬನಾರಸ್‌ನಲ್ಲಿದ್ದು, ಪೂಜೆ-ಪುನಸ್ಕಾರಗಳಲ್ಲಿ ತೊಡಗಿಸಿಕೊಂಡಿರುತ್ತಾಳೆ. ತಾವು ಬದುಕಿದ್ದಂತೆ ಅಪ್ಪ, ಅಮ್ಮನ ಕೆಲಸವನ್ನು ನಿರ್ಧರಿಸಿದ್ದರು. ಆದರೆ ಅವರು ನಿಧನರಾದ ನಂತರ ಅಮ್ಮನ ಕರ್ತವ್ಯಗಳೇನು ಎಂಬುದನ್ನು ಅವರು ಬಹುಶಃ ಮರೆತರು. ತಮ್ಮ ನಿಧನದ ನಂತರ ಅಮ್ಮನ ಗೃಹಸ್ಥ ಜೀವನವೂ ಕೊನೆಗೊಳ್ಳುವುದು, ಅಮ್ಮ ತಮ್ಮ ದಾರಿಯನ್ನು ನೋಡಿಕೊಳ್ಳಬೇಕಾಗುವುದು, ಎಲ್ಲರೂ ಮನೆಯಲ್ಲಿರುತ್ತಾರೆ, ಮಕ್ಕಳು ಮನೆತುಂಬಾ ಇರುತ್ತಾರೆ, ಅದರೆ ಅಮ್ಮನ ಗೃಹಸ್ಥ ಜೀವನವಿರುವುದಿಲ್ಲ. ಅಮ್ಮ ಹಳ್ಳಿಯಲ್ಲಿ ವನವಾಸವನ್ನು ಅನುಭವಿಸಬೇಕಾಗುತ್ತದೆ ಎಂಬುದನ್ನು ಬಹುಶಃ ಅಪ್ಪ ತಿಳಿಯದಾದರು. 

ಮುಂಜಾನೆ ಆನಂದರು, ಪೂಜಾಳೊಂದಿಗೆ ಚಹಾವನ್ನು ಗುಟುಕರಿಸುವಾಗ, ನೌಕರ ಮನೆಯನ್ನು ಸ್ವಚ್ಛಗೊಳಿಸುತ್ತಿದ್ದ. ಆಗ ಆನಂದರ ದೃಷ್ಟಿ ಪತ್ರದ ಮೇಲೆ ಬಿತ್ತು. ಆ ಪತ್ರವನ್ನು ನೌಕರ ಕಸ ಗುಡಿಸುವಾಗ ಕಸದೊಂದಿಗೆ ಗುಡಿಸಿ ಹೊರಗೆ ಎಸೆಯುವವನಿದ್ದ. ಆನಂದರು ನಿರಾಸೆಯಿಂದ ಆ ಪತ್ರವನ್ನು ಎತ್ತಿಕೊಂಡರು. ಪೆಟ್ಟು ತಿಂದವರಂತೆ ಪೂಜಾಳನ್ನು ನೋಡುತ್ತಾ ಆ ಪತ್ರವನ್ನು ತಮ್ಮ ಬ್ರೀಫ್‌ ಕೇಸಿನಲ್ಲಿಟ್ಟುಕೊಂಡರು. ಅಮ್ಮ ಹೀಗಾದರೂ ತಮ್ಮೊಂದಿಗಿರುತ್ತಾಳೆ ಎಂಬ ಯೋಚನೆಯಿಂದ ಹೀಗೆ ಮಾಡಿದ್ದರು. ರಸ್ತೆಯಲ್ಲಿ ಸಾಗುವಾಗ ಒಂದು ರೀತಿಯ ಅಪರಾಧ ಪ್ರಜ್ಞೆ ಮತ್ತು ಹೇಡಿತನ ಕಾಡುತ್ತಿತ್ತು. ಅಪ್ಪ ನಿಧನರಾದ ನಂತರ ನಾವು ಅಮ್ಮನ ಪೋಷಕರೇ? ಪೋಷಕರಿಗೆ ಅವರದೇ ಆದ ಕರ್ತವ್ಯಗಳಿರುವುದಿಲ್ಲವೇ? ಯಾವುದಕ್ಕೆ ಪೋಷಕರು? ಯಾಕಾಗಿ ಪೋಷಕರು? ಎಂಬ ಪ್ರಶ್ನೆಗಳು ಪದೇ-ಪದೇ ಅವರನ್ನು ವ್ಯಗ್ರಗೊಳಿಸಿದವು. 

ದಿನಗಳು ಕಳೆದವು. ಅದೊಂದು ದಿನ ಮತ್ತೆ ಅಮ್ಮನ ಪತ್ರ ಬಂತು. ಪತ್ರ ಬನಾರಸ್‌ನಿಂದ ಬಂದಿತ್ತು. ಅಮ್ಮ ಬರೆದಿದ್ದಳು-

 ‘ಬನಾರಸ್ ನನಗೆ ತುಂಬಾ ಹಿಡಿಸಿತು. ಇಲ್ಲಿ ಯಾವುದಕ್ಕೂ ಚಿಂತೆಯಿಲ್ಲ. ಪೂಜೆ-ಪುನಸ್ಕಾರಗಳಲ್ಲಿ ಸಮಯ ಕಳೆದದ್ದೇ ತಿಳಿಯುವುದಿಲ್ಲ.’

ಪತ್ರ ಓದಿ ಆನಂದರಿಗೆ ಸ್ವಲ್ಪ ಸಮಾಧಾನವಾಯಿತು. ಆನಂದರು ಉತ್ತರ ಪ್ರದೇಶದ ಕೇಡರ್‌ನಲ್ಲಿ ತೆರಿಗೆ ಅಧಿಕಾರಿಗಳಾಗಿದ್ದು, ಆಯ-ವ್ಯಯದ ಅಂಕಿ-ಅಂಶಗಳನ್ನಿಡುವುದು ಅವರ ಕರ್ತವ್ಯ. ಪರೀಕ್ಷೆಯ ಫಲಿತಾಂಶ ಬಂದಾಗ ಅಪ್ಪ-ಅಮ್ಮ ಎಷ್ಟು ಖುಷಿಪಟ್ಟಿದ್ದರು, ತಂದೆಯ ಕಣ್ಣುಗಳಲ್ಲಿ ಭರವಸೆಗಳಿದ್ದರೆ, ತಾಯಿಯ ಕಣ್ಣುಗಳಲ್ಲಿ ಭವಿಷ್ಯದ ಆಸೆ-ಆಕಾಂಕ್ಷೆಗಳಿದ್ದವು ಎಂಬುದನ್ನು ಆನಂದರು ಇಂದಿಗೂ ಮರೆತಿಲ್ಲ.

ಕೆಲವು ತಿಂಗಳುಗಳ ನಂತರ ಆನಂದರಿಗೆ ಬನಾರಸ್‌ಗೆ ವರ್ಗವಾಯಿತು. ವರ್ಗಾವಣೆಯ ಆದೇಶವನ್ನು ಓದಿ ಅವರಿಗೆ ಒಮ್ಮೆಲೆ ತಾಯಿಯ ನೆನಪಾಯಿತು. ಇನ್ನು ಅಮ್ಮ ಬನಾರಸ್‌ನಲ್ಲಿ ಒಂಟಿಯಾಗಿರುವುದಿಲ್ಲ, ತಮ್ಮ ಬಳಿಯೇ ಇರುವಳೆಂದು ಯೋಚಿಸಿ ಸಂತಸಪಟ್ಟರು. ಬನಾರಸ್‌ಗೆ ಹೋಗಿ ಕರ್ತವ್ಯಕ್ಕೆ ಹಾಜರಾದ ನಂತರ ಬಾಡಿಗೆ ಮನೆಯ ವ್ಯವಸ್ಥೆ ಇತ್ಯಾದಿಗಳನ್ನು ಮಾಡಿದರು. ಅಲ್ಲಿ ದಿನ ನಿತ್ಯದ ಜೀವನಕ್ಕೆ ಹೊಂದಿಕೊಳ್ಳಲು ಕೆಲವು ದಿನಗಳೇ ಹಿಡಿದವು. ಈ ಎಲ್ಲಾ ಕೆಲಸಗಳಿಂದ ಮುಕ್ತರಾಗಿ, ಒಂದು ದಿನ ಅವರು ಅಮ್ಮ ಬರೆದ ವಿಳಾಸವನ್ನು ಹುಡುಕಿ ಹೊರಟರು. ಅದೊಂದು ಉಸಿರುಗಟ್ಟುವ ಚಿಕ್ಕ, ಹಳೆಯ ಕೋಣೆಯಾಗಿತ್ತು. ಅದನ್ನು ನೋಡಿದರೆ ಅಲ್ಲಿ ವಾಸಿಸುವವರ ಸ್ಥಿತಿ-ಗತಿಯನ್ನು ಊಹಿಸಿಕೊಳ್ಳಬಹುದಿತ್ತು. ಅತ್ತೆ ಮನೋರಾವಾಲಿ ಹೊರಗೆ ಕೂತಿದ್ದಳು, ಆದರೆ ಆನಂದರ ಕಣ್ಣುಗಳು ಅಮ್ಮನನ್ನು ಅರಸುತ್ತಿದ್ದವು. ಅಮ್ಮ ಇನ್ನೇನು ಕೋಣೆಯಿಂದ ಹೊರಬರಬಹುದೆಂದು ಅವರಿಗೆ ಅನ್ನಿಸಿತು. ಅವರ ಎದೆ ಜೋರಾಗಿ ಬಡಿದುಕೊಳ್ಳುತ್ತಿತ್ತು. ಎಷ್ಟೋ ಬಾರಿ, ಆನಂದರು ಹೇಳದಿದ್ದಾಗ್ಯೂ ಅಮ್ಮನಿಗೆ ಅವರ ಮನಸ್ಸಿನಲ್ಲಿರುವುದು ತಿಳಿಯುತ್ತಿತ್ತು. ಅಮ್ಮ, ಅದು ಹೇಗೆ ತಮ್ಮ ಮನದ ಮಾತುಗಳನ್ನು ಅರ್ಥಮಾಡಿಕೊಳ್ಳುತ್ತಾಳಲ್ಲ ಎಂದು ಅವರಿಗೆ ಆಶ್ಚರ್ಯವಾಗುತ್ತಿತ್ತು. ಅವರು ಒಮ್ಮೆ ಅಮ್ಮನನ್ನು ಕೇಳಿಯೂ ಇದ್ದರು, ‘ಅಮ್ಮಾ, ನಾನು ಹೇಳದೆ ನನ್ನ ಮನಸ್ಸಿನಲ್ಲಿದ್ದುದ್ದನ್ನು ನೀನು ಹೇಗೆ ಅರ್ಥ ಮಾಡಿಕೊಳ್ಳುತ್ತೀಯಾ?’

‘ಅಯ್ಯೋ ದೇವರೇ, ಇವನ ಮಾತನ್ನು ಕೇಳು! ನಿನ್ನ ಮನಸ್ಸಿನಲ್ಲಿರುವುದನ್ನು ತಿಳಿದುಕೊಳ್ಳಲು ನಾನು ನೀನು ಹೇಳುವುದನ್ನು ನಿರೀಕ್ಷಿಸಬೇಕೆ?’ ಅಮ್ಮ ಅದೇ ನಗುಮುಖದಿಂದ ಹೇಳಿದ್ದಳು. 

ಸ್ವಲ್ಪ ಹೊತ್ತಿನ ನಂತರ ಅತ್ತೆ ಮನೋರಾವಾಲಿ ರೋದಿಸಿದರು. ಆನಂದರ ಕಣ್ಣುಗಳೆದುರು ಸಾವಿರಾರು ಪ್ರಶ್ನೆಗಳು ಮೂಡಿದವು, ಹೃದಯ ಭಯದಿಂದ ಕಂಪಿಸಿತು. ಮನೋರಾವಾಲಿ ಅತ್ತೆ ರೋದಿಸುತ್ತಲೇ ಪರಿಸ್ಥಿತಿಯನ್ನು ವಿವರಿಸಿದರು.

‘ಆನಂದ, ನಿನ್ನ ಅಮ್ಮ ಬದುಕಿಲ್ಲ. ಅವರಿಗೆ ಹೃದಯಾಘಾತವಾಗಿತ್ತು. ವೈದ್ಯರು ಬರುವದರೊಳಗೇ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು. ಅವರ ಎದೆಯಲ್ಲಿ ನೋವು ಕಾಣಿಸಿಕೊಂಡ ಕೂಡಲೇ ಹೃದಯದ ಬಡಿತ ನಿಂತು ಹೋಗಿತ್ತು. ನಿಮ್ಮ ಹೊಸ ವಿಳಾಸದ ಬಗ್ಗೆ ನಮಗೆ ತಿಳಿದಿರಲಿಲ್ಲ. ಹೀಗಿರುವಾಗ ಸುದ್ದಿಯನ್ನು ಹೇಗೆ ತಲುಪಿಸಲು ಸಾಧ್ಯವಿತ್ತು? ಅವರ ಚಿತೆಗೆ ಬೆಂಕಿ ಇಡುವವರೂ ಇರಲಿಲ್ಲ. ನೆರೆಹೊರೆಯವರು ವಿದ್ಯುತ್ ಚಿತಾಗಾರಕ್ಕೆ ಶವವನ್ನು ಒಯ್ದು ಸುಟ್ಟರು. ಹೇಗೋ ಅಂತಿಮ ಸಂಸ್ಕಾರವನ್ನು ನೆರವೇರಿಸಿದೆವು. ಆನಂದ, ಒಂದು ದಿನ ಎಲ್ಲರೂ ಹೀಗೆಯೇ ಸಾಯಬೇಕಾಗುವುದು!’

ಬರಿಗೈ, ಶೂನ್ಯ ಮನಸ್ಸು ಮತ್ತು ಭಾರದ ಹೃದಯದಿಂದ ಆನಂದ ಮರಳಿ ಬಂದರು. ಎಲ್ಲಾ ಸಂಗತಿಗಳು ಪದೇ-ಪದೇ ಎದುರಾಗುತ್ತಿದ್ದವು...ಒಂದು ದಿನ ಎಲ್ಲರೂ ಹೀಗೆಯೇ ಸಾಯಬೇಕಾಗುವುದೇ? ಒಬ್ಬ ತಾಯಿ ಐವರು ಮಕ್ಕಳನ್ನು ಸಾಕಿ-ಸಲಹಿ, ಸೇವೆ ಮಾಡಿದಳು. ಆದರೆ ನಾವು ಐವರು ಸೇರಿ ಒಬ್ಬ ತಾಯಿಯ ಸೇವೆಯನ್ನು ಮಾಡದಾದೆವಲ್ಲ.. ಮಗ ತಾಯಿಯ ಪೋಷಕನೇ? ಯಾವ ದೃಷ್ಟಿಯಿಂದ ಪೋಷಕ? ಯಾತಕ್ಕಾಗಿ ಪೋಷಕ? 

ದೇಶದ ಆಯ-ವ್ಯಯದ ಅಂಕಿ-ಅಂಶಗಳನ್ನು ನೋಡಿಕೊಳ್ಳುವ ಆನಂದರು ತಮ್ಮ ಕರ್ತವ್ಯಗಳ ಅಂಕಿ-ಅಂಶಗಳನ್ನಿಡದಾದರು. ಎದುರಿಗೆ ಪ್ರಶ್ನೆಗಳು ಮಾತ್ರ ಇದ್ದವು, ಆದರ ಈ ಪ್ರಶ್ನೆಗಳಿಗೆ ಆನಂದರ ಬಳಿ ಯಾವುದೇ ಉತ್ತರಗಳಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.