ADVERTISEMENT

ಬಿ.ಎಲ್ ವೇಣು ಅವರ ಕಥೆ: ನಿರ್ಣಯ

ಬಿ.ಎಲ್.ವೇಣು
Published 27 ಜುಲೈ 2024, 23:30 IST
Last Updated 27 ಜುಲೈ 2024, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಪ್ರಾಯಶಃ ಹೆಣ್ಣು ಎಲ್ಲರ ಪಾಲಿಗೆ ಪ್ರಶ್ನೆಯಾಗೋದು ಯಾವಾಗ ಎಂದರೆ ಅವಳು ಬದುಕಬಾರದ ರೀತಿಯಲ್ಲಿ ಬದುಕುವಂತಾದಾಗ. ಪ್ರಶ್ನೆಯಾದರೆ ಉತ್ತರ ಕಂಡುಕೊಳ್ಳಬಹುದೇನೋ, ಸಮಸ್ಯೆಯಾದರೆ? ಮಾಲಿನಿಯೂ ಅತ್ತೆ ಜಾನಕಮ್ಮನ ಪಾಲಿಗೆ ಬಿಡಿಸಲಾಗದ ಪ್ರಶ್ನೆಯಾಗಿದ್ದರ ಫಲವಾಗಿ ಅತ್ತೆಯ ಅನಾದರ, ನಾದಿನಿಯರ ಉಪೇಕ್ಷೆ, ಗಂಡನ ಪ್ರೀತಿಯಿಂದಲೂ ಒಂದಷ್ಟು ದೂರ. ಹಾಗಂತ ಗಂಡ ನಾರಾಯಣ ಅವಳನ್ನು ಪ್ರೀತಿಸುವುದೇ ಇಲ್ಲ ಎಂಬುದಕ್ಕೆ ಅಂತಹ ಪುರಾವೆಯೇನೂ ಇಲ್ಲ ಬಿಡಿ. ಏಕೆಂದರೆ ಅವರಿಬ್ಬರೂ ಜಗಳವಾಡಿದ್ದನ್ನೆಂದೂ ಮನೆಯವರು ನೋಡಿಲ್ಲ. ಕನಿಷ್ಠ ಮುನಿಸಿಕೊಂಡಿದ್ದನ್ನೂ ಅರಿಯರು. ನಾರಾಯಣ ಖಂಡಿತ ಪ್ರೀತಿಸುತ್ತಾನೆ. ಚಟವೆದ್ದಾಗ ಮಗ್ಗಲಲ್ಲಿ ಮಲಗಿ ಉರುಳಾಡುವುದನ್ನೆ ಪ್ರೀತಿಯೆಂದು ನಂಬಿದವನು. ಮಾಲಿನಿಯೋ ಒಂದಿಷ್ಟು ಭಾವುಕಳು. ಬೇಗನೇ ಅಳಬಲ್ಲ ಆಕೆ ಅಷ್ಟೇ ಬೇಗ ನಗಲೂ ಬಲ್ಲಳು. ಸಿನಿಮಾ, ಟಿವಿ ಧಾರಾವಾಹಿಗಳಲ್ಲಿ ಕಾಣುವ ಗಂಡ ಹೆಂಡಿರ ಅನ್ಯೋನತೆ ಪರವಶತೆ ಚಿನ್ನಾಟ ಹುಡುಗಾಟದ ಮಾತುಗಳನ್ನು ಕೇಳಿ ನಿತ್ಯವೂ ನೋಡಿ ದಾಂಪತ್ಯವೆಂದರೆ ಹೀಗೆ ಏನೋ ಎಂದವಳು ಪುಳಕಗೊಂಡವಳು. ಆದರೆ ತನ್ನ ಅಪ್ಪ ಅಮ್ಮ ಮಾತ್ರ ಹಾಗಿರಲಿಲ್ಲ | ಸದಾ ಕಚ್ಚಾಡುತ್ತಿರುವುದನ್ನು ಕಾಣುತ್ತಲೇ ಬೆಳೆದವಳಾದರೂ ಭ್ರಮನಿರಸನಗೊಂಡವಳಲ್ಲ. ಅಪ್ಪನ ಕಡಿಮೆ ಸಂಬಳದಲ್ಲಿ ತನ್ನನ್ನು ಸೇರಿಸಿ ಮೂವರು ತಮ್ಮಂದಿರೂ ಇರುವ ಕುಟುಂಬ. ಒಬ್ಬರ ದುಡಿಮೆಯಿಂದ ಆರು ಬಾಯಿಗಳು ತುಂಬೋದು ಕಷ್ಟವೇ ಕಾರಣವಾಗಿ ಫ್ಯಾಮಿಲಿ ಫೈಟ್‌ಗಳಿಗೆ ಕಾರಣವಿರಬಹುದೆಂದು ತನಗೆ ತಾನೇ ಸಮಜಾಯಿಷಿ ಕೊಟ್ಟುಕೊಳ್ಳಬಲ್ಲಳು. ಇಂತಿಪ್ಪ ಮಾಲಿನಿ ಎದೆ ಉದ್ದ ಬೆಳೆದು ನಿಂತಾಗ ಮೊಟ್ಟ ಮೊದಲ ಬಾರಿಗೆ ಹೆತ್ತವರ ಪಾಲಿಗೆ ಪ್ರಶ್ನೆಯಾದಳು. ಮನೆಯಲ್ಲಿನ ಅಷ್ಟೂ ಕೆಲಸ ಮಾಡಿಟ್ಟು ಶಾಲೆಗೆ ಹೋದರೂ ತಾಯಿಗೆ ಅವಳು ಓದುವುದೇ ಅಸಮಾಧಾನ. ಇದೇ ವೆಚ್ಚವನ್ನು ಕೂಡಿಟ್ಟು ಗಂಡು ಮಕ್ಕಳಿಗೆ ಓದಿಸಬಹುದಲ್ಲವೆಂಬ ಮಿಡ್ಲ್ ಕ್ಲಾಸ್ ಲೆಕ್ಕಚಾರ. ಇದರ ಸುಳಿವನ್ನರಿತ ಮಾಲಿನಿ, ಯಾಕಮ್ಮ ಚಿಂತೆ ಮಾಡ್ತಿ? ನಾನು ಓದಿ ನೌಕರಿ ಹಿಡಿದು ತಮ್ಮಂದಿರಿಗೆಲ್ಲಾ ಓದಿಸುತ್ತೇನೆಂದು ಆಗೀಗ ಸಂತೈಸಿದರೂ ಜಾನಕಮ್ಮಳ ಕಿರಿಕಿರಿ ತಪ್ಪದು. ‘ನೀನು ಓದಿ ನೌಕರಿ ಹಿಡಿದು ಓದಿಸುವುದೆಲ್ಲಾ ಎಂತಕ್ಕೆ ಮಾರಾಯ್ತಿ. ನೀನು ಮದುವೆಯಾಗಿ ಗಂಡನ ಮನೆಗೆ ಹೋದರಷ್ಟೆ ನಮ್ಮ ಭಾಗ್ಯ. ತಮ್ಮಂದಿರಿಗೆ ಓದಿಸೋಕೆ ನಿಮ್ಮಪ್ಪಯ್ಯ ಉಂಟಲ್ಲ ಎಂಬ ಉದಾಸೀನದ ಮಾತು. ಇಂತಹ ಉಪಚಾರದ ನಡುವೆಯೂ ಮಾಲಿನಿ ಪಿಯುಸಿ ಡಿಸ್ಟಿಂಕ್ಷನ್‌ನಲ್ಲಿ ಮುಗಿಸಿದರೂ ಅಪ್ಪನ ಮುಖದಲ್ಲಿ ನಗುವಿಲ್ಲ. ಮುಂದೆ ಓದುತ್ತೇನೆಂದು ಮಾಲಿನಿಯ ರಂಪಾಟ. “ಅದೆಲ್ಲಾ ಎಂತಕ್ಕೆ? ನೀನು ಹೆಚ್ಚು ಓದಿದರೆ, ನಿನಗಿಂತ ಹೆಚ್ಚು ಓದಿದ ವರನನ್ನು ನಾ ಎಲ್ಲಿಂದ ತರಲಿ ಮಗಳೇ” ಎಂಬ ಅಪ್ಪನ ಧೋರಣೆಯಿಂದಾಗಿ ಓದು ಕ್ಯಾನ್ಸಲ್ ಆಗಿ ಮನೆಗೆಲಸ ಫುಲ್‌ಟೈಮ್ ಆಯಿತು. ಅಷ್ಟಕ್ಕೂ ಮಾಲಿನಿಯೇನೂ ಬಂದ ವರಗಳು ಒಪ್ಪದಷ್ಟು ಕರಾಬ್ ಆಗೇನೂ ಇರಲಿಲ್ಲ. ಆದರೆ ಅವಳಪ್ಪನ ಬಳಿ ವರ ಕೇಳಿದಷ್ಟು ಕೊಡುವ ತ್ರಾಣವಿರಲಿಲ್ಲವಾಗಿ ವರ್ಷಗಟ್ಟಲೇ ಮನೆಯಲ್ಲೇ ಟೆಂಟ್ ಹೊಡೆದ ಮಾಲಿನಿ ಪ್ರಶ್ನೆಯಾಗದೆ ಸಮಸ್ಯೆಯಾದಳು.

ಮನೆಯವರ ಪಿರಿಪಿರಿ ತಾಳಲಾರದೆ ತಾನಾಗಿಯೇ ಜನತಾ ಬಜಾರ್‌ಗೆ ಎಡತಾಕಿ ಸೇಲ್ಸ್‌ ಗರ್ಲ್ ನೌಕರಿಗಿಟ್ಟಿಸಿದಳು. ಕೊಡುವ ಐದು ಸಾವಿರಕ್ಕೆ ಡೇ ಅಂಡ್‌ ನೈಟ್ ದುಡಿಯಬೇಕಿತ್ತು. ದುಡಿದಳು. ಕಿಂಚತ್ತೂ ಬೇಸರಿಸದೆ ಮನೆಯಲ್ಲೂ ಗುಡಿಸಿವರೆಸಿ, ಬೇಯಿಸಿಟ್ಟು ಹೋಗಿ ಜನತಾ ಬಜಾರ್‌ನಲ್ಲೂ ಬೆಂದಳು. ಬೆಂದು ಕರಕಲಾಗುವಷ್ಟರಲ್ಲಿ ಅದೆಷ್ಟು ಗಂಡುಗಳು ಅವಳನ್ನು ನೋಡಲೆಂದು ಬಂದು ಹೋದರೋ! ಬಂದವರಿಗೆಲ್ಲಾ ಕೊಟ್ಟ ಕೇಸರಿಬಾತು, ಉಪ್ಪಿಟ್ಟು, ಕಾಫಿ ವೇಸ್ಟ್ ಆಗಿದ್ದೇ ಬಂತು. ಬಂದವರ ಕಣ್ಣುಗಳ ನಾನಾ ನಮೂನೆ ನೋಟಕ್ಕೆ ಕಲ್ಲಾಗಿದ್ದರೆ ಸವೆದು ಬಿಡುತ್ತಿದ್ದಳೇನೋ ಮಾಲಿನಿಯೋ ಕಲ್ಲಿಗಿಂತ ಸ್ಟ್ರಾಂಗ್. ಬಂದವರು ಅವಳನ್ನು ಜರಿಯಲಿಲ್ಲವಾದರೂ ಅವಳಪ್ಪನ ಚೌಕಾಸಿಗೆ ಬೇಸತ್ತು ಪತ್ರ ಹಾಕುತ್ತೇವೆಂದು ಊರಿಗೆ ಹೋದವರು ಇವಳ ಮನೆ ಕಡೆ ತಲೆಹಾಕಿಯೂ ಮಲಗಲಿಲ್ಲ. ಇರುವ ಒಬ್ಬ ಮಗಳನ್ನು ಸಾಲವೋ ಸೊಲವೋ ಮಾಡಿ ಮದುವೆ ಮಾಡಿಕೊಡಬೇಕ್ರಪ್ಪಾ ಅದು ಹೆತ್ತವರ ಕರ್ತವ್ಯವೆಂದು ಅಕ್ಕಪಕ್ಕದವರು ಆಡಿಕೊಳ್ಳುವಾಗ ಮಾಲಿನಿಯ ತಾಯಿ ಗಂಡನ ಮೇಲೆಯೇ ಮುನಿದು ಕದನಕ್ಕಿಳಿದಳು. ಒಟ್ಟಿನಲ್ಲಿ ತನ್ನ ಸಲುವಾಗಿ ಸದಾಮನೆಯಲ್ಲಿ ಹೆತ್ತವರ ಕದನವನ್ನು ಕಾಣುವ ಮಾಲಿನಿಗೆ ಗಂಡ ಹೆಂಡಿರೆಲ್ಲಾ ಹೀಗೆನೇನೋ ಎಂಬ ಭೀತಿಯ ಭೂತ ಕಾಡುವಾಗ ಮತ್ತವಳ ಬೆಂದ ಮನದಲ್ಲಿ ಆಸೆಯ ಚಿಗುರೊಡೆಸುತ್ತಿದ್ದದ್ದು ಮತ್ತದೇ ಟಿವಿ ಸೀರಿಯಲ್ಸ್. ಗಂಡ ಹೆಂಡತಿ ಡ್ಯೂಯೆಟ್ ಹಾಡೋದು, ಅವರಿಗೆ ಮಗುವಾದಾಗ ಜೋಗುಳ ಹಾಡೋದು ಗ್ರೂಪ್‌ಡ್ಯಾನ್ಸ್ ಮಾಡೋದನ್ನು ನೋಡುವಾಗ ಅವಳಿಗೆಂತದೋ ಖುಷಿ. ತಾನು ತಾಯಿಯಾಗಬೇಕು. ಮುದ್ದಾದ ಮಕ್ಕಳನ್ನು ಹೆತ್ತು ಮುದ್ದುಮಾಡಿ ಬೆಳಸಬೇಕೆಂಬ ಹಂಬಲ. ತಾಯಿಯ ಬಾಣಂತನ ವರ್ಷವರ್ಷವೂ ಮಾಡಿ ತಮ್ಮಂದಿರನ್ನೂ ಬೆಳಸಿದವಳೂ ಅವಳೇ, ಕ್ಯಾಲೆಂಡರ್‌ನಲ್ಲಿ ನೇತಾಡುವ ಡುಮ್ಮಗಿನ ಮಕ್ಕಳಿಗೆ ಮುದ್ದಿಟ್ಟು ಹಿಗ್ಗುವ ಅವಳೊಂದು ಪ್ರೀತಿಯ ಒರತೆ.

ADVERTISEMENT

ಇತ್ತೀಚೆಗೆ ಮಾಲಿನಿಯನ್ನು ನೋಡಲು ಗಂಡುಗಳೇ ಬರದಂತಾದಾಗ ಹೆದರಿ ಹೌಹಾರಿದ್ದು ಮಾಲಿನಿಯೇ ಹೊರತು ಅವಳ ಮನೆಯವರಲ್ಲ. ಅವಳ ದುಡಿಮೆಯಿಂದ ಮನೆಯ ಪರಿಸ್ಥಿತಿ ಸುಧಾರಿಸೋವಾಗ ಆಗೋದೆಲ್ಲಾ ಒಳ್ಳೇದಕ್ಕೆ ಎಂಬ ಅಮೂರ್ತ ಹಿಗ್ಗನ್ನು ಮನೆಯವರಲ್ಲುಂಟು ಮಾಡಿದಳು. ಅವಳಿಗೂ ಡ್ರೆಸ್ ಮಾಡಿಕೊಂಡು ಹೋಗಿ ಗಂಡುಗಳ ಮುಂದೆ ಪರೇಡ್ ಮಾಡುತ್ತಾ ಕಾಫಿ ಉಪ್ಪಿಟ್ಟು ಸಪ್ಲೆ ಮಾಡಿ ಸಾಕಾಗಿತ್ತು. ಖುಷಿಯ ನಿಟ್ಟಿಸಿರು ಬಿಟ್ಟಳು. ಅವಳಿದ್ದದ್ದೇ ಹಾಗೆ ಯಾವ ಪಾತ್ರೆಗೆ ಹಾಕಿದರೆ ಅದೇ ಆಕಾರ ತಾಳುವ ನೀರಿನ ಹಾಗೆ. ಎಂತಹ ಕಷ್ಟಕ್ಕಾದರೂ ಅಂಜದೆ ಅಡ್ಜಸ್ಟ್ ಆಗುವ, ಯಾರೊಂದಿಗಾದರೂ ಮುಜುಗರ ಪಡದೆ ಹೊಂದಿಕೊಳ್ಳುವಷ್ಟು ಫ್ಲೆಕ್ಸಿಬಲ್. ಸ್ವಂತಿಕೆಯೇ ಇಲ್ಲವೆನೋ ಎಂಬಷ್ಟು ಡೌಟ್‌ಪುಲ್. ಬರುಬರುತ್ತಾ ವರಾನ್ವೇಷಣೆಯೇ ಸ್ಥಗಿತಗೊಂಡು ತನ್ನ ವಧು ಪರೀಕ್ಷಾ ಅವಧಿಯೇ ಡೇಟ್ ಎಕ್ಸ್ಪೈರಿ ಆಯಿತೇನೋ ಅನ್ನಿಸಿದಾಗಲೂ ಹತಾಶಳಾಗದೆ ನಿತ್ಯ ಬದುಕಿನ ನದಿಯಲ್ಲಿ ಹುಟ್ಟು ಹಾಕುತ್ತಾ ಲೈಫು ಇಷ್ಟನೇ ಅಂದುಕೊಳ್ಳುವಾಗಲೇ ಅವಳ ದೋಣಿಯನ್ನು ಏರಲೊಬ್ಬ ಎರಡನೇ ದರ್ಜೆ ಗುಮಾಸ್ತನೊಬ್ಬ ಬರಬೇಕೆ! ಬಂದ ನೋಡಿದ ಒಪ್ಪಿಯೇ ಬಿಟ್ಟ. ಅವನಿಗೂ ವಯಸ್ಸಾಗಿತ್ತಾದರೂ ವಿಧುರನಲ್ಲವೆಂಬ ಸಮಾಧಾನವಿತ್ತು. ವರದಕ್ಷಿಣೆ ವರೋಪಚಾರವೆಂದೆಲ್ಲಾ ತೀರಾ ರಿಜಿಡ್ ಆಗದೆ ಅವನು, ಅವನ ಮನೆಯವರೂ ಕೊಟ್ಟಷ್ಟಕ್ಕೆ ರಾಜಿಯಾದ್ದರಿಂದ ನಿರ್ವಿಘ್ನವಾಗಿ ‘ನಾರಾಯಣ ವೆಡ್ಸ್ ಮಾಲಿನಿ’ ಎಂಬ ಬೋರ್ಡ್ ಛತ್ರವನ್ನಲಂಕರಿಸಿ ಮಂಗಳವಾದ್ಯವೂ ಮೊಳಗಿತ್ತು.

ಹೀಗೆ ತಂದೆಯ ಮನೆಯಿಂದ ಪಾರಾಗಿ ನಾರಾಯಣನ ಮನೆಗೆ ಮಾಲಿನಿ ಎಂಟ್ರಿ ಕೊಟ್ಟಳು. ಅದು ಕೂಡ ತನ್ನ ಮನೆಯಂತೆಯೇ ತಮ್ಮ ತಂಗಿಯರು ತುಂಬಿದ ಗದ್ದಲದ ಮನೆಯಲ್ಲಿ ಬಡತನವೂ ತುಂಬಿತುಳುಕುತ್ತಿರುವುದನ್ನು ಗಮನಿಸಿದ ಆಕೆಯದು ತೀರಾ ಮುಳುಗಿದವರಿಗೆ ಚಳಿಯೇನು ಗಾಳಿಯೇನು ಎಂಬ ನಿರ್ಭಾವ. ಮೊದಲ ರಾತ್ರಿಯೇ ಗಂಡ ಗೂಟ ಬಿಚ್ಚಿದ ಗೂಳಿಯಂತಾಡಿದಾಗ ಅವನ ಹಸಿವು ಅಬ್ಬರ ಆಕ್ರಮಣಕ್ಕೆ ನಲುಗಿದ ಮಾಲಿನಿಗೆ ಹಿಂಸೆಯೇ? ಪ್ರೀತಿನಾ ಎಂಬ ಡೌಟು, ಅದೂ ಅಭ್ಯಾಸವಾಯಿತು. “ಮದುವೆ ಆಗೋದೆ ತಡ ವರ್ಷ ತುಂಬೋದ್ರೊಳಗೆ ಅನಿಷ್ಠ ಮಕ್ಕಳು” ಎಂದಾಡಿಕೊಳ್ಳುವ ತನ್ನತ್ತೆ ಹಾಗೂ ನೆರೆಹೊರೆಯವರ ಮಾತನ್ನು ಕೇಳಿಸಿಕೊಳ್ಳುವ ಮಾಲಿನಿಯಲ್ಲೀಗ ರೋಮಾಂಚನ, ತಾನೂ ತಾಯಿಯಾಗಿ ಮಗುವನ್ನು ಹೆತ್ತು ಮೊಲೆಯುಣಿಸಿ, ಹೆಗಲ ಮೇಲೆ ಜೋಪಾನವಾಗಿ ತಟ್ಟೆ ಮಲಗಿಸಿ ತೊಟ್ಟಿಲಿಗೆ ಹಾಕಿ ತೂಗಿ ಜೋಗುಳ ಹಾಡಿ ಮಲಗಿಸುವ ಎಪಿಸೋಡ್‌ಗಳು ಕಂಡವು. ಆದರೆ ಆಗಿದ್ದೇ ಬೇರೆ, ಗಂಡ ತಿಂಗಳು ಕಳೆಯುವುದರಲ್ಲೇ ತಮಗೆ ಈಗಲೇ ಮಕ್ಕಳು ಮರಿ ಬೇಡವೆಂಬ ಹುಕುಂ ಹೊರಡಿಸಿದ. ಈಗಿರುವ ಬಡತನದ ಬೇಗೆಯಲ್ಲಿ ಮಗೂಗೆಲ್ಲಿಂದ ಲೀಟರ್ ಗಟ್ಟಲೇ ಹಾಲು, ಫೇರೆಕ್ಸ್, ಬೇಬಿಜಾನ್ಸನ್ ತರೋದು. ಕಾಯಿಲೆ ಬಿದ್ದರೆ ಮೆಡಿಸೆನ್ನು, ಎಲ್.ಕೆ.ಜಿ ಅಡ್ಮಿಷನ್ಗೆ ಲಕ್ಷಗಟ್ಟಲೇ ಡೋನೇಶನ್ನು ಎಲ್ಲಿಂದ ತರೋದು ಎಂದೆಲ್ಲಾ ಮೈಪರಚಿಕೊಂಡು ಆರ್ಥಿಕ ಹೊರೆಯ ಬಡ್ಜಟ್ ಮಂಡಿಸಿದ. ಸಪ್ಪಗಾದಳು ಮಾಲಿನಿ. ಸದ್ಯ ರಾತ್ರಿಕಾಟ ತಪ್ಪಿತಲ್ಲ ದೈವವೇ ಅಂದು ದೈವಕ್ಕೆ ಥ್ಯಾಂಕ್ಸ್ ಹೇಳಿದಳು. ಆಗಿದ್ದೇ ಬೇರೆ, ಸರ್ಕಾರಿ ಆಸ್ಪತ್ರೆಗೆ ತೆರಳಿದ ನಾರಾಯಣ ಕಂತೆಗಟ್ಟಲೇ ಕಾಂಡೋಮ್ಸ್ ತಂದಿಟ್ಟುಕೊಂಡು ಮಾಲಿನಿಯ ಜೀವತಿಂದ ತನಗೆ ತೃಪ್ತಿ ಸಿಗದೆಂದು ಕಿರಿಕಿರಿ ಮಾಡುತ್ತಾ ಮಾಲಾ-ಡಿ ಮಾತ್ರೆಗಳನ್ನು ತಂದು ದಿನವೂ ರಾತ್ರಿ ಮಾಲಿನಿಗೆ ನುಂಗಲು ಸೂಚಿಸಿದ. ಎದುರಿಗೆ ನಿಂತು ನುಂಗಿಸಿಯೇ ಮೈ ಮೇಲೇರಿದ. ಕಾಲುಗಳಿಗೆ ಹಗ್ಗ ಕಟ್ಟಿಸಿಕೊಂಡು ತಪ್ಪಗೆ ಬಿದ್ದು ಲಾಳಾ ಕಟ್ಟಿಸಿಕೊಳ್ಳುವ ದನಗಳ ಪರಿಸ್ಥಿತಿಗಿಂತ ಅವಳ ಸ್ಥಿತಿಯೇನೂ ಭಿನ್ನವಾಗಿರಲಿಲ್ಲ. ಮೊದಲಿನಿಂದಲೂ ಹೊಂದಿಕೊಂಡೇ ಗೊತ್ತಿರುವ ಮಾಲಿನಿಗೆ ಹೋರಾಡಿ ಗೊತ್ತಿಲ್ಲ. ಅದವಳ ಸ್ಟ್ರೆಂಥೋ, ವೀಕನೆಸ್ಸೋ ಅವಳಿಗೇ ಗೊತ್ತಿಲ್ಲವಾದರೂ ಈವರೆಗೆ ಬದುಕಿಗೇನಂತಹ ಘಾಸಿಯಾಗಿರಲಿಲ್ಲವಾಗಿ.

********

ದಿನವೂ ಮಾತ್ರೆಗಳನ್ನು ನುಂಗಿದರೆ ಕ್ಯಾನ್ಸರೋ ಕ್ಷಯವೋ ಬರುತ್ತದೆಂದು ಅದೆಲ್ಲೋ ಓದಿದ್ದ ಅವಳು ಕನಲಿದಳು-ಕೆಂಡವಾಗಲಿಲ್ಲ, ಮನೆಯಲ್ಲಿ ದಾರಿದ್ರ್ಯ, ತಂಗಿಯರಿಬ್ಬರ ಮದುವೆ ಮಾಡುವ ಹೊಣೆಗಾರಿಕೆ, ತಮ್ಮಂದಿರಿಗೆ ಓದಿಸುವ ಜವಾಬ್ದಾರಿ ಗಂಡನಿಗಿತ್ತು. ಅದೂ ತಪ್ಪು ಎಂದೂ ಅವಳಿಗನ್ನಿಸಿರಲಿಲ್ಲ. ಇದರ ನಡುವೆ ತನ್ನ ಕುಡಿಯೊಂದು ಹೊರ ಬಂದರೆಂತ ಭಾರವಪ್ಪಾ ಅನ್ನಿಸಿದರೂ ನಾರಾಯಣನ ಬಳಿ ಬಾಯಿ ಬಿಡಲಿಲ್ಲ. ಮಾಲಿನಿಯೇ ಹಾಗೆ ಮೆಲ್ಲನೆ ಹರಿವ ನದಿಯ ಹಾಗೆ. ವರ್ಷಗಳುರುಳಿದರೂ ಮೊಮ್ಮಕ್ಕಳನ್ನು ನೀಡದ ಮಡಿಕೋಲಿನ ಪ್ರತಿ ರೂಪದಂತಿರುವ ಝಿರೋ ಸೈಜನ ತನ್ನ ಸೊಸೆಯನ್ನು ಕಂಡಾಗಲೆಲ್ಲಾ ಜಾನಕಮ್ಮಳೀಗ ಸಿಡಿಮಿಡಿಗೊಂಡಳು. ಐದು ವರ್ಷ ವೃಥಾ ಕಳೆದುಹೋದ ನಂತರವಂತೂ ಉರಿವ ಬೆಂಕಿಯಾದಳು. ನೆರೆಹೊರೆಯವರು ಅದಕಷ್ಟು ಉಪ್ಪು ಸುರಿದರು. ಕೆಟ್ಟ ನಿರ್ಧಾರಕ್ಕೆ ಬಂದ ಜಾನಕಮ್ಮ ಮಗನಿಗೆ ಇನ್ನೊಂದು ಮದುವೆ ಮಾಡುವ ವಿಚಾರ ಮುಂದಿಟ್ಟಳು. ಈಗ ಹೌಹಾರಿದ್ದು ಮಾಲಿನಿ, ಯಾರೊಡನೆ ಹೇಳಿಕೊಳ್ಳೋದು? ತವರು ಮನೆಯವರೋ ಮರತೇಬಿಟ್ಟಿದ್ದಾರೆ. ಗೌರಿಹಬ್ಬಕ್ಕೂ ಕರೆದವರಲ್ಲ. ಈಗ ತಂದೆ ಬೇರೆ ರಿಟೈರ್ಡ್‌. ಅವರದ್ದೇ ಅವರಿಗೆ ಹಾಸಲುಂಟು ಹೊದೆಯಲುಂಟು. ತನ್ನ ಕಳವಳವನ್ನು ಗಂಡನೊಡನೆ ಹಂಚಿಕೊಂಡಳು. ಅವನೋ ಹರ ಇಲ್ಲ ಶಿವ ಇಲ್ಲ, ಮಾತ್ರೆ ನುಂಗಿಸುವುದನ್ನೂ ಬಿಡಲಿಲ್ಲ. ಮನೆಯಲ್ಲಿ ಪಾತ್ರೆ ಮುಸುರೆ, ಕಸನೆಲ, ಅಡಿಗೆಯೆಂದೆಷ್ಟು ದೇಖಿದರೂ ಯಾರಿಗೂ ತನ್ನ ಮೇಲೆ ಪ್ರೀತಿ ಇರಲಿ ಎಳ್ಳಷ್ಟು ಅನುಕಂಪವೂ ಇಲ್ಲವೆಂಬುದ ಬಂದ ಕೆಲವೇ ತಿಂಗಳಲ್ಲಿ ಅರಿತಿದ್ದರೂ ನಿರಾಶೆಗೊಂಡವಳಲ್ಲ. ಸಂಬಳವಿಲ್ಲದ ತನ್ನ ಸ್ಥಾನವನ್ನಂತೂ ಯಾರೊ ಕಿತ್ತುಕೊಳ್ಳಲಾರರೆಂಬ ಅದಮ್ಯ ಭರವಸೆ. ಆದರೆ ಬಂಜೆಸಿಕ್ಕಿಬಿಟ್ಟಳೆ ನಮ್ಮ ವಂಶೋದ್ಧಾರ ಆಗೋದು ಹೆಂಗೆ ಎಂದು ತನ್ನ ಹೆಣ್ಣು ಮಕ್ಕಳ ಜೊತೆ, ನೆರೆಮನೆಯವರೊಡನೆ ಹಾಡಿ ಜಾನಕಮ್ಮ ಅಲವತ್ತುಕೊಳ್ಳುವಾಗ ಸತ್ಯವನ್ನು ತಾನು ಹೇಳುವುದಕ್ಕಿಂತ ಹೇಳಬೇಕಾದವರು ಹೇಳಲೆಂದು ಮಾಲಿನಿ ಸಾವರಿಸಿಕೊಂಡಳು. ತನ್ನ ತಾಯಿ ತನಗೀಗ ಬೇರೊಂದು ಸಂಬಂಧವನ್ನು ನೋಡುತ್ತಿದ್ದಾರೆಂದು ಖಾತರಿಯಾದಾಗ ಒಂದಿನ ನಾರಾಯಣನೇ ತಾಯಿಯನ್ನು ಕೂರಿಸಿಕೊಂಡು, ತಾನೀ ಮನೆಗಾಗಿ ಮಾಡುತ್ತಿರುವ ತ್ಯಾಗದ ಬಗ್ಗೆ ಬಣ್ಣಿಸಿ ‘ಶಹಭಾಷ್‌ಗಿರಿ’ ಪಡೆದುಕೊಂಡ. ತಂಗಿಯರು ಮದುವೆಯಾಗುವವರೆಗೂ ತನಗೆ ಮಕ್ಕಳು ಬೇಡವೆಂದು ನಿಟ್ಟುಸಿರಾದ. ಅವನ ತಂಗಿಯರ ಮುಖದಲೇ ಮದುವೆಯಾದಷ್ಟು ಪರಮಾನಂದ ಜಾನಕಮ್ಮನ ಮುಖವಂತೂ ಊರಗಲ್ಲ, ದಿಗಿಲಿಗೆ ಬಿದ್ದಿದ್ದು ಮಾಲಿನಿ. ಅದೇನೇ ಇರಲಿ ಗಂಡ ಸತ್ಯವನ್ನು ಹೊರಗೆಡವಿ ತನ್ನ ಘನತೆ ಉಳಿಸಿದನೆಂಬ ನಿರಾಳ. ಜಾನಕಮ್ಮ ಅಷ್ಟಕ್ಕೆ ಸುಮ್ಮನಾಗುವ ಹೆಂಗಸಲ್ಲ. “ಅಲ್ಲೋ ನಾಣಿ, ತಂಗಿಯರ ಮದುವೆಯಾದ್ರೆ ಮುಗಿಲಿಲ್ಲೋ ಅವರ ಬಸಿರು ಬಾಣಂತನ ಅಂತ ನೂರೆಂಟು ಇರ್ತದೆ. ಕೊನೆಗಾಲಕ್ಕೆ ನಿಮಗೆ ಮಕ್ಕಳು ಬೇಕೆನಿಸಿದರೆ ನಿಮ್ಮಕ್ಕ ಗಾಯತ್ರಿಗೆ ಆರು ಹೆಣ್ಣು ಮಕ್ಕಳಿವೆ. ಪಾಪ ಅದರಲ್ಲಿ ಒಂದನ್ನು ದತ್ತು ತಗೊಂಡು ಸಾಕಿದ್ರಾತಲ್ವೆ. ಆ ಕಾಲಕ್ಕೆ ಇವಳಿಗೆ ಮುಟ್ಟೂ ನಿಂತ್ತಿರುತ್ತೆ” ಎಂಬ ಉಪದೇಶವೂ ನಡೆಯಿತು.

ನಾರಾಯಣನಂತೂ ಕೋಲೆ ಬಸವನಂತೆ ತಲೆದೂಗಿದ. ಅವನ ಬಕ್ಕತಲೆ ಇರೋದೆ ಅಮ್ಮನ ಮಾತಿಗೆ ತಲೆದೂಗಲೆಂಬ ಸತ್ಯ ಅವಳಿಗೆ ಈ ಮನೆಗೆ ಬಂದು ಹೊಸದರಲ್ಲೇ ಅರ್ಥವಾಗಿತ್ತು. ಮಾಲಿನಿಯ ಅಭಿಪ್ರಾಯ, ತೀರ್ಮಾನಗಳನ್ನು ತವರಿನಲ್ಲೂ ಕೇಳಿದವರಿಲ್ಲ. ಇಲ್ಲೂ ಅದೇ ರಿಪೀಟು. ಎಂತಹ ಸ್ವಾರ್ಥಿಗಳಪ್ಪಾ, ಇವರೂವೆ ಅನ್ನಿಸಿತವಳಿಗೆ, ಹಾಗಾದರೆ ತಾನು ಎಂದೂ ತಾಯಿಯಾಗುವಂತಿಲ್ಲವೆ. ಯಾರ ಯಾರದ್ದೋ ತೆವಲುಗಳಿಗೆ ತನ್ನ ಹೆಣ್ತನದ ಬಲಿಯಾಗಬೇಕೆಂದು ಚಿಂತಿಸಿ ಮೊದಲ ಬಾರಿ ನೊಂದುಕೊಂಡಳು. ತವರು ಮನೆಯಲ್ಲಿದ್ದಾಗ ಆಗೀಗ ಅತ್ತರೆ ತಮ್ಮಂದಿರಾದರೂ ವಿಚಾರಿಸುತ್ತಿದ್ದರು. ಇಲ್ಲಿ ತನ್ನ ಕಣ್ಣೀರಿಗೆ ಮೂರು ಕಾಸಿನ ಬೆಲೆಯೂ ಇಲ್ಲವೆಂದು ಅರಿತಾಗ ಕಣ್ಣೀರಿನ ಕೊಳವೂ ಬತ್ತಿತ್ತು. ಮನಸ್ಸಂತೂ ಗೊಂದಲದ ಗೂಡು. ವರ್ಷಗಳುರುಳಿದಂತೆ ನಾರಾಯಣನ ತಂಗಿಯರನ್ನು ನೋಡಲು ಬರುತ್ತಿದ್ದ ಗಂಡುಗಳೂ ಬಾರದಾದಾಗ. ಕಂಗೆಟ್ಟಿದ್ದು ಜಾನಕಮ್ಮ. ಕಂಗೆಡಲು ಮಾಲಿನಿಯಲ್ಲೇನಿತ್ತು?

ಅಪರೂಪಕ್ಕೊಮ್ಮೆ ನಾರಾಯಣನಿಗೆ ಚಳಿಜ್ವರ ಬಂದು ಹಾಸಿಗೆ ಹಿಡಿದು ತನ್ನ ಬಳಿ ಸುಳಿಯದಿದ್ದಾಗ ಮಾಲಿನಿಗದು ಪರಮ ಸುಖದ ರಾತ್ರಿಗಳು. ಮಾತ್ರೆ ನುಂಗುವಂತಿಲ್ಲ, ಮೈ ಒಪ್ಪಿಸುವಂತಿಲ್ಲ. ತನ್ನ ಗಂಡ ಮೃಗವಾಗಿ ಹುಟ್ಟಬೇಕಿತ್ತೆಂದೂ ಅದೆಷ್ಟೋ ಸಲ ಅನ್ನಿಸಿದ್ದಿದೆ. ಸೆಕ್ಸ್ ಯಾವತ್ತೂ ಸೂತಕವೆನ್ನಿಸಬಾರದು, ಸುಖಕರವೆನ್ನಿಸಬೇಕು. ಅಪೇಕ್ಷ ಹುಟ್ಟಿಸಬೇಕು, ಅಸಹ್ಯವನ್ನಲ್ಲವೆಂದು ನಿಡುಸುಯ್ದಳು. ಆದರೇನು ಜ್ವರಬಿಟ್ಟ ರಾತ್ರಿಯೇ ನಿದ್ದೆಗಣ್ಣಿನಲ್ಲಿ ನಾರಾಯಣ ಹಸಿದ ಹುಲಿಯಂತೆ ಮೈ ಮೇಲೆ ಬಿದ್ದು ಸುಖವನ್ನುಂಡ. ಮಾತ್ರೆ ನುಂಗದೆ ತಾವು ಒಂದಾಗಿದ್ದು ಈರ್ವರಿಗೂ ನೆನಪಾಗಲಿಲ್ಲ. ನಂತರದ ದಿನಗಳಲ್ಲಿ ಮಾತ್ರೆ ನುಂಗಿ ವಾಂತಿ ಮಾಡಿಕೊಂಡ ಮಾಲಿನಿ, ಮಾತ್ರೆ ನುಂಗುವುದಿಲ್ಲವೆಂದು ಪ್ರತಿಭಟನೆಗಿಳಿದಳು. ಅನ್ಯಥ ಶರಣಂ ನಾಸ್ತಿ ಎಂದು ನಾರಾಯಣ ಆಸ್ಪತ್ರೆಗೆ ಹೋಗಿ ಕಾಂಡೋಮ್ಸ್ ತಂದಿಟ್ಟುಕೊಂಡ. ಅಷ್ಟರಲ್ಲಾಗಲೆ ಮಾಲಿನಿಗೆ ಗರ್ಭನಿಂತಿತ್ತು. ಮೂರು ತಿಂಗಳಾದರೂ ನೀರು ಹೊಯ್ಕಳ್ಳಲಿಲ್ಲವೆ ಎಂಬುದು ನೆನಪಾಗಿ ಜಾನಕಮ್ಮ ಹಿಡಿಶಾಪ ಹಾಕುವಾಗ ಮಾಲಿನಿಗೋ ಒಳಗೆ ಖುಷಿ. ‘ಅಯ್ಯೋ ಕಾಂಡೋಮ್ಸ್ನಲ್ಲೂ ಡೂಪ್ಲಿಕೇಟ್ ಬರ್ತಾವಂತಮ್ಮ’ ಪೇಚಾಡಿದ್ದು ನಾರಾಯಣ. ಜ್ವರ ಬಿಟ್ಟ ರಾತ್ರಿಯ ಪ್ರಭಾವವಿದು ಅನ್ನಿಸಿದರೂ ಬಾಯಿ ಬಿಡುವಂತಿಲ್ಲ. ಮಾಲಿನಿಯು ಮೌನವಾಗಿ ಸಂತಸ ಹೀರಿದಳು. ಆ ಸಂತಸವೂ ಬಹಳ ದಿನ ಉಳಿಯಲಿಲ್ಲ. ಅತ್ತೆ ಹಾಸಿಗೆ ಹಿಡಿದು ಅನ್ನ ನೀರು ಬಿಟ್ಟಳು. ಮಗನ ಬಕ್ಕತಲೆಗೆ ಅದೇನು ತಿಕ್ಕಿದಳೋ ಜಾನಕಮ್ಮ, ನಾರಾಯಣ ಒಂದು ದಿನ ದುಡು ದುಡು ಬಂದವನು ‘ಅಬಾರ್ಷನ್’ ಬಗ್ಗೆ ಉಪನ್ಯಾಸ ಮಾಡಿದ. ‘ನಿನಗೆ ಸರಿ ಅನ್ನಿಸಿದನ್ನು ಮಾಡಪ್ಪಾ ನಾಣಿ’ ಎಂದು ಜಾನಕಮ್ಮ ಅಡ್ಡಗೋಡೆ ಮೇಲೆ ದೀಪ ಮಡಗಿದಳು. ‘ಇಲ್ಲಿಲ್ಲ ತನಗೆ ತನ್ನದೇ ಮಗು ಬೇಕು. ನನ್ನ ತುತ್ತಿನಲ್ಲಿ ಪಾಲಿಟ್ಟು ಸಾಕುತ್ತೇನೇರಿ’ ಎಂದೆಲ್ಲಾ ಮಾಲಿನಿ ಗೋಗರೆದಳು, ಕಾಡಿದಳು, ಬೇಡಿದಳು. ಯಾರೊಬ್ಬರೂ ಕರಗಲಿಲ್ಲವಾಗಿ ದಿಕ್ಕೆ ತೋಚದಂತಾದಳು. ದಿನಗಳುರುಳಿದಂತೆ ಮನೆಯವರ ಒತ್ತಡ ಹೆಚ್ಚಾಯಿತು. ಸಮಯ ಮೀರಿದರೆ ಅಬಾರ್ಷನ್ ಜೀವಾಪಾಯವೆಂದು ವೈದ್ಯರೂ ನಾರಾಯಣನಿಗೆ ಬೆದರಿಸಿದರು. ಕಾನೂನು ಬಾಹಿರವೆಂದು ದುಡ್ಡೂ ಸುಲಿದರು. ‘ಬಾರೆ ತಡವಾದ್ರೆ ಜೀವಕ್ಕೇ ಕುತ್ತು ಕಣೆ’ ಎಂದು ಮಾಲಿನಿಯನ್ನು ಹೆದರಿಸಿದ. ಅವಳದ್ದು ನೋ ರೀ ಆಕ್ಷನ್. ತಾಳ್ಮೆಗೆಟ್ಟ ಅವನು ಮಾಲಿನಿಯನ್ನು ಹೊಡೆದು ಬಡಿದು ಬಲವಂತ ಮಾಡಿದಾಗ ನೆರೆಹೊರೆಯವರೂ ಬಂದು ಪಂಚಾಯ್ತಿ ಮಾಡುವಂತಾಯಿತು. ಎಲ್ಲರೂ ಮಾಲಿನಿಯನ್ನು ವಹಿಸಿಕೊಂಡೇ ಮಾತನಾಡುವಾಗ ಅವಳ ಮನದಲ್ಲೆಂತದೋ ಆಶಾಬೀಜಾಂಕುರ. ‘ನಿಮಗೆ ಮೊಮ್ಮಗ ಬೇಡ್ವಾ ಜಾನಕಮ್ಮ’ ಎಂದು ನೆರೆಯಾಕೆ ರಾಗ ಎಳೆದಾಗ, ‘ಅವಲ್ಲ ನನ್ನ ಮಗಳ ಮಕ್ಕಳು’ ಎಂದು ಬಾಯಿ ಬಡಿದಳು ಜಾನಕಮ್ಮ. ಮಾಲಿನಿಗೆ ತನ್ನ ತವರಿಗಾದರೂ ಓಡಿ ಬಿಡಲೆ ಎಂಬ ತಹತಹ. ಕಳ್ಳತನದಲ್ಲೇ ಕಾರ್ಡ್ ಬರೆದು ಪೋಸ್ಟ್ ಮಾಡಿದಳು. ಒಂದಕ್ಕೂ ಉತ್ತರವಿಲ್ಲವಾಗಿ ತವರು ಇದೆಯೆಂದು ತಿಳಿದದ್ದು ತನ್ನದೇ ಅಪರಾಧವೆಂದು ಮಂಕಾದಳು. ಒಂದು ದಿನ ಆಟೋ ತಂದು ಮನೆಯ ಮುಂದೆ ನಿಲ್ಲಿಸಿದ ನಾರಾಯಣ ‘ನರ್ಸಿಂಗ್ ಹೋಮ್‌ಗೆ ನಡಿಯೆ’ ಎಂದು ಜೋರು ಮಾಡಿದಾಗ ಮನೆಯವರೂ ಕುಮ್ಮಕ್ಕು ಕೊಟ್ಟರು. ಹಲ್ಲೆಗಿಳಿದು ಗದ್ದಲವಾದಾಗ ಕೇರಿಯ ಮಂದಿ ನಿಂತು ನೋಡಿತು.

ಮುದುಕರು ಬುದ್ಧಿ ಹೇಳಲು ಮುಂದಾದರು. ‘ನಮ್ಮ ಮನೆ, ನಮ್ಮ ಸಂಸಾರದ ವಿಸ್ಯ ಯಾವನೇನ್ ಬುದ್ಧಿ ಹೇಳಾದು? ನಾವೇನ್ ಅನ್‌ಎಜುಕೇಟೆಡ್ ಬ್ರೂಟ್ಸಾ? ಎಂದೆಲ್ಲಾ ನಾರಾಯಣ ಎಗರಾಡಿದ. “ಬದುಕಿದರೆ ಬಾಯಿ ಬಡ್ಕೋತಿರಾ. ಸತ್ತರೆ ತಿಕ ಬಡ್ಕೋತಿರಾ. ನಿಮ್ಮಗಳ ಎಲೆಯ ಮೇಲೆ ಕತ್ತೆ ಸತ್ತು ಬಿದ್ದದೆ. ಕಂಡೋರ ಎಲೆ ಮ್ಯಾಗಿನ ನೊಣ ಜಾಡಿಸಬ್ಯಾಡಿ......ಹೋಗಿ...... ಎಲ್ಲಾವಳ ಮನೆ ಹಿಸ್ಟರಿ ನಾತಿಳಿನೆ ? ಬಾಯಿ ಬಿಟ್ಟರೆ ಬಣ್ಣಗೇಡು” ಎಂದೆಲ್ಲಾ ಜಾನಕಮ್ಮ ವಾಚಮಗೋಚರವಾಗಿ ನಿಂದಿಸೋವಾಗ ಜನ ಹಿಮ್ಮೆಟ್ಟಿದರು. ಮಾಲಿನಿಯ ಕಣ್ಣೀರಿಗೆ ಸಿಕ್ಕಿದ್ದು ಬರೀ ಲಿಪ್‌ಸಿಂಪಥಿಯಷ್ಟೆ. ಅದೇನೋ ನೀರಿನಂತಹ ಸ್ವಭಾವದ ಮಾಲಿನಿ ಈವತ್ತು ಧುಮ್ಮಿಕ್ಕುವ ಜಲಪಾತವಾಗಬೇಕೆ! ಅವಳು ಜಪ್ಪಯ್ಯ ಅಂದರೂ ಆಟೋ ಹತ್ತಲಿಲ್ಲ. ಇವರನ್ನು ಮುಗಿಯದ್ದು ನಾಟಕವೆಂದು ಬೇಸತ್ತ ಆಟೋದವನೂ ಹೊರಟು ಹೋದ. ‘ಹಿಂಗೆ ನಮಗೆ ತಿರುಗಿ ಬಿದ್ಯೋ ಈ ಮನೇಲಿ ನಿನಗೆ ಸ್ಥಾನವಿಲ್ಲ. ಈಗಿಂದೀಗ್ಲೆ ಹೊರಟು ಹೋಗೆಲೆಲೆ’ ಜಾನಕಮ್ಮ ಅಂತಿಮವೆಂಬಂತೆ ಬ್ಲಾಸ್ಟ್ ಆದಳು. ಮೈಕೈ ಗಾಯವಾಗಿ ತಲೆಗೂದಲು ಕೆದರಿ, ಸೀರೆ ಅಸ್ತವ್ಯಸ್ತವಾಗಿ ಹೈರಾಣವಾಗಿದ್ದರೂ ಅಂಜದ ಮಾಲಿನಿ, ‘ನೀವು ಹೇಳಬಿಟ್ಟರೇ ಆಯ್ತೆ ಅತ್ತೆ? ಇದೇ ಮಾತನ್ನು ತಾಳಿಕಟ್ಟೆದ ಗಂಡ ಹೇಳ್ಳಿ?” ಎಂದು ಅದೆಂತದೋ ಭರವಸೆಯ ಮೇಲೆ ಸವಾಲ್ ಹಾಕಿದಳು. ಕ್ರುದ್ಧನಾದ ನಾರಾಯಣ ಅವಳ ತಲೆಗೂದಲು ಹಿಡಿದು ಗುಂಜಾಡಿ ಕೆನ್ನೆಗೆ ರಪರಪನೆ ಬಾರಿಸಿ ಕೇರಿ ಜನರೆದುರು ಗಂಡಸ್ತನ ಮೆರೆದ. ‘ನಾನು ಬೇರೆ ಹೇಳಬೇಕೆನಲೆ? ನಮ್ಮ ತಾಯಿ ಬಾಯಿಂದ ಬಂದ ಮಾತು ಸುಪ್ರೀಂ ಕೋರ್ಟುನ ತೀರ್ಪಿದ್ದಂಗೆ. ಗಂಟು ಮೂಟೆ ಕಟ್ಕೊಂಡು ಹೊಂಡ್ತರ‍್ಬೇಕು’ ಎಂದೆಲ್ಲಾ ಚೀರಾಡಿದ. ನಿಂತವರೆಲ್ಲಾ ಲೊಚ ಲೊಚ ಗುಟ್ಟಿದರು. ಮಾಲಿನಿ ಒಳಹೋಗಿ ತನ್ನ ಬಟ್ಟೆ ಬರೆ ತರಲು ಮುಂದಾದಳು. ನಾದಿನಿಯರು ಬಾಗಿಲಿಗೆ ಅಡ್ಡನಿಂತರು. ಉಟ್ಟ ಬಟ್ಟೆಯಲ್ಲೇ ಮಾಲಿನಿ ಹೊರಟೇ ಬಿಟ್ಟಳು. ಎಲ್ಲಿಗೆ ಎಂಬುದು ಅವಳಿಗೂ ಗೊತ್ತಿಲ್ಲ. ಗೊತ್ತಿರೋದಿಷ್ಟೆ ತನಗೆ ತನ್ನ ಮಗು ಬೇಕು. ನಡೆಯುತ್ತಲೇ ತಲೆಗೂದಲನ್ನು ಬರಿಗೈಯಿಂದಲೇ ಒಪ್ಪ ಮಾಂಡಿಕೊಂಡಳು. ನೇರ ಬಸ್ ನಿಲ್ದಾಣಕ್ಕೆ ಹೊರಟಳು. ಅಲ್ಲಿದ್ದ ಸುಲಭ್ ಶೌಚಾಲಯಕ್ಕೆ ತರಳಿ ಮಾಸಿದ ಸೀರೆ ಸರಿಪಡಿಸಿಕೊಂಡು ಮುಖ ಮೂತಿ ತೊಳೆದು ಸೆರಗಿನಿಂದ ವರೆಸಿಕೊಂಡಳು. ಹೊರಟ್ಟಿದ್ದ ಬಸ್ ಏರಿ ಕುಳಿತಳು. ಸೀರೆಗಂಟಿನಲ್ಲಿ ಪುಡಿನೋಟುಗಳಿದ್ದವು. ರಾತ್ರಿ ಹತ್ತಿರ ಸೇರಿಸದೆ ನಾರಾಯಣನೆಂಬ ಕಾಮಪಿಶಾಚಿಯನ್ನು ಆಚೀಚೆ ತಳ್ಳಿದಾಗ ತನ್ನನ್ನು ಬಗ್ಗಿಸಿಕೊಳ್ಳಲು ಅಂವಾಕೊಟ್ಟ ಪುಡಿಗಾಸದು. ಒಳಗೇ ನಗುಬಂತು. ದಡಬಡಿಸಿ ಬಸ್ ಹೊರಟೆತು. ‘ಟಿಕೇಟ್ ಟಿಕೇಟ್’ ಎಂದು ಕಂಡಕ್ಟರ್ ಬಂದ. ಆಧಾರ್‌ಕಾರ್ಡ್ ಕೇಳಿದ. ಇವಳು ಇಲ್ಲವೆಂದಳು ‘ಎಲ್ಲಿಗೆ ಮೇಡಮ್?’ ಎಂದು ಪ್ರಶ್ನಿಸಿದ. ‘ಈ ಬಸ್ ಎಲ್ಲಿವರೆಗೆ ಹೋಗ್ತದೋ ಅಲ್ಲಿವರೆಗೆ’ ಅಂತ ನಿರಾಳವಾಗಿ ನಕ್ಕಳು. ಕಂಡಕ್ಟರ್ ಕಾಸು ಪಡೆದು ಟಿಕೆಟ್ ಕೊಟ್ಟು ಸುಮ್ಮ ಸುಮ್ಮನೇ ನಗುವ ಅವಳನ್ನೇ ತಿನ್ನುವ ಪರಿ ನೋಡಿದ. ತೆಳ್ಳಗೆ ಬೆಳ್ಳಗೆ ಇದ್ದಳು. ಬಾಡಿ ವೀಕ್ ಇದ್ದರೂ ಬಲ್ಕಿ ಮೊಲೆಗಳು. ರವಂಡ್ ರವಂಡ್ ಕಣ್ಣುಗಳು ಅವನನ್ನು ಬೆಚ್ಚಗಾಗಿಸಿದವು. ನೋಡು ನೋಡುತ್ತಿದ್ದಂತೆಯೇ ಬಸ್ ತುಂಬಾ ಹೆಣ್ಣು ಮಕ್ಕಳದ್ದೆ ದರ್ಬಾರು. ಹಳ್ಳಿಯ ಮೇಲೆ ಹೋಗುವ ಸೆಟ್ಲ್ ಬಸ್. ಸ್ಟಾಪ್‌ಗಳೂ ಜಾಸ್ತಿ. ಲಾಸ್ಟ್ ಸ್ಟಾಪಿನ ಹತ್ತಿರವಂತೂ ಜನ ಖಾಲಿಯಾಗೋದೇ ಹೆಚ್ಚು ಆಗ ಇವಳನ್ನು ವಿಚಾರಿಸಿಕೊಂಡರಾಯಿತೆಂದುಕೊಂಡ ಕಂಡಕ್ಟರ್, ಡ್ರೈವರ್‌ನೊಡನೆ ಗುಸುಗುಟ್ಟೆ ಉಲ್ಲಸಿತನಾದ. ಜನ ಖಾಲಿಯಾದಂತೆ ಅವಳ ಬಳಿ ಕೂತ ಅವನು, ‘ಯಾವ ಊರು? ಎಲ್ಲಿಗೆ ಹೊರಟಿದ್ದೀರಾ? ತುಂಬಾ ಬಳಲಿದಂತೆ ಕಾಣ್ತೀರಾ’ ಎಂದು ಹೆಚ್ಚು ಅನುಕಂಪ ತೋರಿದ. ಇಲ್ಲಿ ಸ್ಟಾಪ್ ಇದೆ. ಕಾಫಿಗೆ ಬರ್ತಿರಾ ಎಂದೆಲ್ಲಾ ಶುರು ಹಚ್ಚಿಕೊಂಡ. ಅವಳು ತುಟಿ ಬಿಚ್ಚಲಿಲ್ಲ. ಅವಳು ಬೀರಿದ ತಿರಸ್ಕಾರದ ನೋಟಕ್ಕೆ ಅರ್ಧ ಡೈಲ್ಯೂಟ್ ಆದ. ಅವನ ಚಟ ಮತ್ತೆ ಸಾಲಿಡ್ ಆಯಿತು. ಕಿಟಕಿಗೆ ಮುಖಮಾಡಿಕುಳಿತಿದ್ದ ಮಾಲಿನಿಯದು ನಿರ್ಭಾವ. ಅದೆಷ್ಟೋ ಊರುಗಳು ಹಿಂದಕ್ಕಾದವು. ಊರೊಂದು ಹತ್ತಿರವಾಯಿತು, ಅಲ್ಲೊಂದು ಭಾರಿ ‘ಫ್ಲೈ ಓವರ್’ ಕಟ್ಟುತ್ತಿರುವುದು, ನೂರಾರು ಜನ ದುಡಿಯುತ್ತಿರುವುದು ಕಣ್ಣಿಗೆರಾಚಿತು. ತನ್ನಲ್ಲಿನ್ನೂ ಕಸುವಿತ್ತು. ಕೂಲಿನಾಲಿ ಮಾಡಿಯಾದರೂ ತಾನು ಬದುಕಬಲ್ಲೆ ಕಂದನನ್ನು ಸಾಕಿಕೊಳ್ಳನೆಂಬ ಛಲವೂ ಮೈಮನಗಳಲ್ಲಿ ಹೆಪ್ಪುಗಟ್ಟಿದ್ದರಿಂದ ತಟ್ಟನೆ ನಿರ್ಧಾರಕ್ಕೆ ಬಂದಳು. ತಕ್ಷಣ ಬದುಕುಲು ಸಿಕ್ಕ ಮಾರ್ಗವನ್ನು ಕಡೆಗಣಿಸುವಂತಹ ಸ್ಥಿತಿಯೂ ಅವಳದ್ದಲ್ಲ. ತಾನು ಈವರೆಗೂ ಮಾಡಿದ್ದೂ ಕೂಲಿ ಕೆಲಸವೇ ಅನ್ನಿಸುವಾಗಲೇ ಬಸ್ ನಿಂತಿತು. ಇಳಿಯುವವರೊಡನೆ ತಾನೂ ಇಳಿದಳು. ಕಂಡಕ್ಟರ್ ತಬ್ಬಿಬ್ಬಾದ ದಡಗುಟ್ಟುತ್ತಾ ಬಸ್ ಹೊರಟಿತು. ಇಳಿದವರು ತಮ್ಮ ಮನೆಯ ಹಾದಿ ಹಿಡಿದರು. ಕೆಲವರು ಆಟೋ ಹಿಡಿದರು. ಮಾಲಿನಿ ಮಾತ್ರ ಕೆಲಸ ನಡೆಯುವತ್ತ ಧೃಡಹೆಜ್ಜೆ ಇಟ್ಟಳು. ತಾನಿನ್ನೂ ಗರ್ಭಿಣಿಯಂತೆ ಕಾಣಲು ಹಲವು ತಿಂಗಳಾದರೂ ಬೇಕು. ಆಗೊಬ್ಬ ದೇವರಿದ್ದಾನೆಂದು ನೆನೆದು ತಾನೀಗ ಗರ್ಭಿಣಿ ಎಂದು ಗೊತ್ತಾದರೆ ತನ್ನ ಕೆಲಸಕ್ಕೆ ಕಲ್ಲು ಬಿದ್ದೀತೆಂದು ಅಂಜಿದಳು. ತನಗೆ ಅನುಕಂಪದ ಅಗತ್ಯಕ್ಕಿಂತ ಹಣದ ಅಗತ್ಯವಿದೆ. ದುಡಿದು ತಾನು, ತನ್ನೊಳಗೆ ಉಸಿರಾಡುತ್ತಿರುವುದನ್ನೂ ಕಾಪಾಡಿಕೊಳ್ಳಬೇಕಿದೆ ಎಂಬ ನಿರ್ಣಯಕ್ಕೆ ಬರುತ್ತಲೇ ಹೆಚ್ಚು ಯೋಚಿಸದೆ ಕೂಲಿಗಳ ಗುಂಪಿನಲ್ಲಿ ಮೇಸ್ತ್ರಿಯಂತೆ ಕಾಣುತ್ತಿದ್ದ ತಲೆಗೆ ಹ್ಯಾಟ್ ಹಾಕಿದವನತ್ತಲೇ ದಾಪುಗಾಲು ಇಟ್ಟಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.