‘Justice is the means by which established injustices are sanctioned’- Anatole France
ರಾತ್ರಿ 10 ಗಂಟೆಯ ಸಮಯ. ಠಾಕು-ಠೀಕಾಗಿ ಬಟ್ಟೆ ಧರಿಸಿದ್ದ ಮಹನೀಯರೊಬ್ಬರು ಪೋಲೀಸ್ ಠಾಣೆ ಪ್ರವೇಶಿಸಿದರು. ಅಲ್ಲಿದ್ದ ಇನ್ಸ್‌ಪೆಕ್ಟರ್‌ಗೆ ತಮ್ಮ ಪರಿಚಯ ಮಾಡಿಕೊಳ್ಳುತ್ತಾ ‘ನಾನು ಶಂಕರ ಪಾಟೀಲ ಅಂತ. ಇಲ್ಲೆ ಖಾಸಗಿ ಕಂಪನಿಯೊಳಗ ಅಕೌಂಟಂಟ್ ಆಗಿನ್ರಿ’ ಅನ್ನುತ್ತಾ ಅವರು ತೋರಿಸಿದ ಕುರ್ಚಿಯಲ್ಲಿ ಕುಳಿತರು.
ಇನ್‌ಸ್ಪೆಕ್ಟರ್ ‘ಹೂಂ! ಹೇಳ್ರಿ. ಏನಾಗಬೇಕು?’ ಅಂತ ಪ್ರಶ್ನಿಸಿದ್ದಕ್ಕೆ, ಪಾಟೀಲ ಸಾಹೇಬರು ತಮ್ಮ ಸಮಸ್ಯೆ ವಿವರಿಸಿದರು. ಹಬ್ಬದ ಖರೀದಿಗೆಂದು ಮಾರುಕಟ್ಟೆಗೆ ಬಂದುದಾಗಿಯೂ, ಖರೀದಿಯೆಲ್ಲಾ ಮುಗಿದ ಮೇಲೆ ಹೂವು-ಹಣ್ಣು-ತರಕಾರಿಗಳಿಂದ ತುಂಬಿದ್ದ ನಾಲ್ಕು ಚೀಲಗಳ ಪೈಕಿ ಎರಡನ್ನು ಕೊನೆಯಲ್ಲಿ ವ್ಯಾಪಾರ ಮಾಡಿದ ಹಣ್ಣಿನ ಅಂಗಡಿಯಲ್ಲಿಯೇ ಬಿಟ್ಟು, ಮೊದಲಿಗೆ ಎರಡು ಚೀಲಗಳನ್ನು ನೂರು ಅಡಿ ದೂರದಲ್ಲಿದ್ದ ಕಾರಿನಲ್ಲಿ ಇಡುವಾಗ ತಮ್ಮ ಪರ್ಸನ್ನು ಅಲ್ಲಿಯ ಸ್ಟೇರಿಂಗ್ ಹಿಂದೆ ಇಟ್ಟು ಬಂದುದಾಗಿಯೂ, ಬಾಕಿ ಉಳಿದ ಚೀಲಗಳನ್ನು ವಾಪಸ್ ತಂದಿಡುವಾಗ ನೋಡಿದರೆ ಇಟ್ಟಿದ್ದ ಜಾಗದಲ್ಲಿ ಪರ್ಸ್ ಇರಲಿಲ್ಲವೆಂದೂ, ಎಷ್ಟೇ ಹುಡುಕಿದರೂ ಕಾರಿನಲ್ಲೆಲ್ಲೂ ಸಿಗಲಿಲ್ಲವೆಂದೂ, ಹಾಗಾಗಿ ಪೋಲೀಸು ಠಾಣೆಗೆ ಬರಬೇಕಾಯಿತೆಂದು ಹೇಳಿ, ‘ದಯಮಾಡಿ ನನ್ನ ಪರ್ಸ್ ಹುಡುಕಿಸಿ ಕೊಡ್ರಿ ಸಾಹೇಬ್ರೇ!’ ಎಂದು ವಿನಂತಿಸಿದರು. ಇನ್‌ಸ್ಪೆಕ್ಟರ್ ‘ಪರ್ಸಿನೊಳಗ ಭಾಳ ಮಾಲು ಇತ್ತೇನ್ರಿ!’ ಅಂತ ಜೋರಾಗಿ ನಗುತ್ತಾ ಪ್ರಶ್ನಿಸಿದರು. ಅದಕ್ಕುತ್ತರವಾಗಿ ಪಾಟೀಲರು ‘ಅಂತದ್ದೇನೂ ಇಲ್ರಿ. ಸಾಮಾನು ತಗೊಳ್ಳದರಾಗ ಚಿಲ್ಲರ ಎಲ್ಲಾ ಖಾಲಿ ಆಗಿ, ಎರಡು ಸಾವಿರದ್ದು ಮತ್ತು ಐದು ನೂರು ರೂಪಾಯಿದು ಒಂದೊಂದು ನೋಟ್ ಅಷ್ಟ ಇದ್ದವು’ ಎಂದರು.
ನಗರದ ಪ್ರತಿಷ್ಟಿತ ವ್ಯಕ್ತಿಯೊಬ್ಬರು ಪಂಚತಾರಾ ಹೋಟೆಲಿನಲ್ಲಿ ಆಯೋಜಿಸಿದ್ದ ಗುಂಡು ಪಾರ್ಟಿಗೆ ಹೊರಡುವ ಧಾವಂತದಲ್ಲಿದ್ದ ಇನ್‌ಸ್ಪೆಕ್ಟರ್ ಅಲ್ಲಿದ್ದ ಪೇದೆಗಳಿಬ್ಬರಿಗೆ ‘ಇವರ ಹತ್ರ ಸ್ಟೇಟ್ ಮೆಂಟ್ ಬರ್ಕೊಂಡು, ಆಮೇಲೆ ಅವರ ಜೊತೆ ಹೋಗಿ ಅದೇನು ನೋಡ್ಕೊಂಡು ಬನ್ರೀ’ ಎಂದು ಸೂಚಿಸಿ, ಪಾಟೀಲರಿಗೆ ‘ಸರ್! ನೀವು ಡೀಟೇಲ್ಸ್ ಬರೆಸಿ ಕಂಪ್ಲೇಂಟು ಕೊಟ್ಟು, ಮಾರ್ಕೇಟಿಗೆ ಕರ್ಕೊಂಡು ಹೋಗಿ ಜಾಗ ತೋರಿಸಿ, ಎಲ್ಲ ಹೇಳಿ ಹೋಗ್ರಿ, ನಾನು ಮುಂದಿನದನ್ನು ನೋಡಿಕೊಳ್ತಿನಿ’ ಎನ್ನುತ್ತಾ ಹೊರಟೇ ಹೋದರು.
ಇನ್‌ಸ್ಪೆಕ್ಟರ್ ಹೋದ ಮೇಲೆ ಎಲ್ಲ ವಿವರಗಳನ್ನು ನೀಡಿದ ಪಾಟೀಲರು, ಪೇದೆಗಳ ಜೊತೆ ಮಾರ್ಕೇಟಿಗೆ ಹೋಗಿ ತಾವು ಕಾರು ನಿಲ್ಲಿಸಿದ ಕ್ಷಣದಿಂದ ಹಿಡಿದು ಎಲ್ಲೆಲ್ಲಿ ಏನೇನು ಖರೀದಿಸಿದೆ ಎಂಬುದರ ಸಹಿತ ಕಾರ್ ಹತ್ತುವವರೆಗೆ ತಮ್ಮ ಚಟುವಟಿಕೆಗಳ ಪೂರ್ಣ ಕಥೆ ವಿವರಿಸಿದರು. ಪೇದೆಗಳಲ್ಲೊಬ್ಬ ‘ನಿಮಗೆ ಯಾರ ಮೇಲಾದ್ರೂ ಅನುಮಾನ ಐತೇನ್ರಿ’ ಎಂದು ಕೇಳಿದಾಗ ಪಾಟೀಲರು ಇಲ್ಲ ಎಂಬಂತೆ ತೆಲೆ ಅಲ್ಲಾಡಿಸಿ, ತಾವು ಕಾರು ನಿಲ್ಲಿಸಿದ ಜಾಗದ ಪಕ್ಕದಲ್ಲಿಯೇ ತಳ್ಳುಗಾಡಿಯಲ್ಲಿ ಬಾಳೆ ಹಣ್ಣು ಮಾರುವ ಹುಡುಗನೊಬ್ಬನು ತನ್ನ ಗಾಡಿಯನ್ನು ಅಲ್ಲಿನ ಕಂಬಕ್ಕೆ ಕಟ್ಟುತ್ತಾ ಇದ್ದನು ಎಂದರುಹಿದರು. ಪೇದೆಗಳು ಸುತ್ತ ಕಣ್ಣಾಡಿಸಲು ಅಲ್ಲಿ ಯಾರು ಕಾಣಿಸಲಿಲ್ಲ. ಅಷ್ಟರಲ್ಲಿ ಪಾಟೀಲರು ತಮಗೆ ತಡವಾಗುತ್ತಿದೆಯಾದ್ದರಿಂದ ನಾಳೆ ಬಂದು ಸಾಹೇಬರನ್ನು ಭೇಟಿ ಮಾಡುವುದಾಗಿ ಹೇಳಿ ಹೊರಟುಹೋದರು.
ಅಕ್ಷರಶಃ ನಿರ್ಮಾನುಷವಾದಂತೆ ಕಂಡ ಮಾರ್ಕೆಟಿನ ನಾಲ್ಕೂ ನಿಟ್ಟಿನಲ್ಲಿ ಕಣ್ಣಾಡಿಸಿ ನೋಡಿದ ಪೇದೆಗಳು ಅಲ್ಲಿಗೆ ಬಂದ ಹುಡುಗನನ್ನು ಕರೆದು ಮಾತನಾಡಿಸಿದರು.
‘ಏ! ನಿಂದೇ ಏನೋ ಈ ಗಾಡಿ? ಬಾರಲೇ ಇಲ್ಲಿ, ಏನು ನಿನ್ನ ಹೆಸರು?’ ಮುಂತಾಗಿ ಪೋಲೀಸ ವರಸೆ ತೋರಿಸುತ್ತಿದ್ದಂತೆ ಆ ಹುಡುಗ ‘ನನ್ನ ಹೆಸರು ಕಲ್ಲೇಶಿ ಅಂತರಿ, ಸರ್. ಇದೇ ಜಾಗದಾಗ ಬಾಳೆಹಣ್ಣು ಮಾರತೀನ್ರಿ. ಇದು ನಂದ ಗಾಡೀರಿ…. ಸಾಹೇಬ್ರ’ ಎಂದು ವಿನಯದಿಂದ ನುಡಿಯುತ್ತಾ ಕೈ ಕಟ್ಟಿ ನಿಂತನು.
ಒಬ್ಬ ಪೇದೆ ‘ಅಲಲಾ! ಎಲಾ ಇವ್ನ! ಎಷ್ಟ ಮಳ್ಳ ಮಂಗ್ಯಾನಂಗ ನಾಟಕ ಮಾಡ್ತೀಲೆ. ಖರೆ ಹೇಳು. ಇಲ್ಲೊಂದು ಕಾರ್ ನಿಂತಿತ್ತಲ್ಲ, ಅದರಾಗಿಂದ ಪರ್ಸ್ ನೀನ ಹೊಡದಿ ಹೌದಲ್ಲೋ?’ ಎಂದು ಜಬರಿಸಿ ಕೇಳಿದಾಗ ವಿಚಲಿತನಾದ ಕಲ್ಲೇಶಿ ಕಂಗಾಲಾದ ದನಿಯಲ್ಲಿ ‘ಇಲ್ಲರೀ ಸಾಹೇಬ್ರ. ನಂಗೇನೂ ಗೊತ್ತಿಲ್ರಿ! ನನ್ನಷ್ಟಕ್ಕ ನಾನು ಹಣ್ಣು ಮಾರೋದು ಮುಗಿಸಿ, ಚಿಲ್ಲರ ಎಲ್ಲಾ ಕೊಟ್ಟು 500 ರೂಪಾಯಿ ಗಟ್ಟಿನೋಟು ಇಸ್ಕೊಂಡು ಬರಾಕ ಅಂತ ಬಾಜೂ ರಸ್ತೆದಾಗ ಇರೋ ಹೋಟೆಲಿಗೆ ಹೋಗಿದ್ನೀರಿ. ಇದರ ಹೊರತಾಗಿ ನನಗೇನೂ ಗೊತ್ತಿಲ್ರಿ’ ಎಂದು ಅಳುಕುತ್ತಲೇ ಉತ್ತರಿಸಿದನು. ‘ನಡಿಯೋ ಮಗನ… ಸ್ಟೇಷನ್ನಿಗೆ’ ಎನ್ನುತ್ತಾ ಪೇದೆಗಳಿಬ್ಬರೂ ಕೊಸರಾಡುತ್ತಿದ್ದ ಕಲ್ಲೇಶಿಯನ್ನು ಎಳೆದುಕೊಂಡು ಠಾಣೆಗೆ ಹೋದರು.
***
ಮುಂದೆರಡು ದಿನ ಇನ್‌ಸ್ಪೆಕ್ಟರ್ ಯಾವ್ಯಾವುದೋ ಕಾರಣಗಳಿಂದ ಠಾಣೆಗೆ ಬರಲಿಲ್ಲ. ಅವನನ್ನು ಹಿಡಿದು ತಂದ ಪೊಲೀಸರು ಕೂಡ ಸಾಹೇಬ್ರು ಬಂದ ಮೇಲೆ ನೋಡೋಣ ಎಂದು ಸುಮ್ಮನಿದ್ದರು. ‘ನಾ ಏನೂ ಮಾಡಿಲ್ರಿ, ನನ್ನನ್ನು ಬಿಟ್ಟು ಬಿಡ್ರಿ ಸಾಹೇಬ್ರ’ ಎಂಬ ಕಲ್ಲೇಶಿಯ ಪ್ರಲಾಪ ಠಾಣೆಯ ಗೋಡೆಗಳಿಗೆ ಅಪ್ಪಳಿಸಿ ಪ್ರತಿಧ್ವನಿಸಿದ್ದು ಬಿಟ್ಟರೆ, ಪೊಲೀಸರ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ.
ಪೊಲೀಸರು ತನ್ನ ಹತ್ತಿರವಿದ್ದ ಐದು ನೂರು ರೂಪಾಯಿ ನೋಟು ಸೇರಿದಂತೆ ಉಳಿದೆಲ್ಲಾ ದುಡ್ಡು ಕಸಿದುಕೊಂಡಿದ್ದು ಕಲ್ಲೇಶಿಗೆ ಅಂಥಾ ಆಘಾತವನ್ನೆನೂ ಉಂಟು ಮಾಡಲಿಲ್ಲ. ಹೇಗಾದರೂ ಸರಿ ತನ್ನನ್ನು ಬಿಟ್ಟು ಕಳಿಸಿದರೆ ಸಾಕಿತ್ತು.
ಕಲ್ಲೇಶಿಯ ದಾರುಣ ಪರಿಸ್ಥಿತಿ ಕಂಡು, ಚಾ-ತಿಂಡಿ ಸರಬರಾಜು ಮಾಡುತ್ತಿದ್ದ ಹೋಟೆಲ್ ಮಾಣಿಯ ಮನ ಕರಗಿ ‘ನಿಮ್ಮ ಪೈಕಿ ಯಾರಾದ್ರೂ ಇದ್ದಾರೇನೋ ಮಾರಾಯ? ಅಡ್ರೆಸ್ ಕೊಡು, ಹೇಳಿ ಕಳಿಸ್ತೀನಿ’ ಎಂದು ಕೇಳಲು, ಅದಕ್ಕುತ್ತರವಾಗಿ ಊರು-ಮನೆಯ ನೆನಹು ಕ್ಷಣಕಾಲ ಕಾಡಿ, ಏನನ್ನೋ ಹೇಳಲು ಉದ್ಯುಕ್ತನಾದ ಕಲ್ಲೇಶಿಯು ತಟಕ್ಕನೆ ಮನಸ್ಸು ಬದಲಿಸಿ, ನಾಲಿಗೆಯ ತುದಿಗೆ ಬಂದ ಮಾತನ್ನು ನುಂಗುತ್ತ ‘ನಂಗ…. ಯಾರೂ ಇಲ್ರಿ’ ಎಂದು ತಿಳಿಸಿದನು.
ಮೂರನೇ ದಿನ ಇನ್‌ಸ್ಪೆಕ್ಟರ್ ಬರೋವಷ್ಟರಲ್ಲಿ ಅವರ ವರ್ಗಾವಣೆ ಆದೇಶ ಕಾಯುತ್ತಿತ್ತು. ತಮ್ಮೂರಿಗೆ ಮರಳಿ ಟ್ರಾನ್ಸಫರ್ ಆದ ಖುಷಿಯಲ್ಲಿ ಇನ್‌ಸ್ಪೆಕ್ಟರ್, ಕಲ್ಲೇಶಿ ಸೇರಿದಂತೆ ಯಾವ ಕೇಸಿನ ಸಮಾಚಾರವನ್ನೂ ತೆಲೆಗೆ ಹಾಕಿಕೊಳ್ಳಲಿಲ್ಲ.
ಹಿಂದಿನ ದಿನ ಹೋಟೆಲ್ ಒಂದರಲ್ಲಿ ಆಕಸ್ಮಿಕವಾಗಿ ಭೇಟಿಯಾದ ಶಂಕರ ಪಾಟೀಲರು- ಚೀಲಗಳಲ್ಲೊಂದರಲ್ಲಿ ಸಿಲುಕಿಕೊಂಡಿದ್ದ ಪರ್ಸ್ ಸಿಕ್ಕಿತೆಂದೂ, ‘ನಿಮಗೆ ಬಂದು ಹೇಳೋದು ಮರೆತಿದ್ದೆ’ ಎಂದು ತಿಳಿಸಿದ್ದು, ‘ರೀಲಿವ್’ ಆಗುವ ಗಡಿಬಿಡಿಯಲ್ಲಿದ್ದ ಇನ್‌ಸ್ಪೆಕ್ಟರ್ ಸಾಹೇಬರಿಗೆ ನೆನಪಾಗಲಿಲ್ಲ. ಹೀಗಾಗಿ ಆ ಮಹಾಶಯ ತಮ್ಮ ಜಾಗೆಗೆ ಹೊಸದಾಗಿ ಬಂದ ಹೊಸ ಇನ್‌ಸ್ಪೆಕ್ಟರ್‌ಗೆ ಚಾರ್ಜು ವಹಿಸಿಕೊಟ್ಟು ಹೊರಟೇಹೋದರು.
ಹೊಸದಾಗಿ ಬಂದಂಥ ಸಾಹೇಬ್ರು ‘ಕಲ್ಲೇಶಿ ಇಲ್ಲಿ ಯಾಕೆ ತರಲ್ಪಟ್ಟಿದ್ದಾನೆ’ ಎಂದು ಕೇಳಿದಾಗ ‘ಪರ್ಸ್ ಕದ್ದ ಆರೋಪದ ಮೇಲೆ’ ಎಂದು ತಿಳಿದುಬಂತು.
ಕಲ್ಲೇಶಿಯನ್ನು ಕರೆಸಿ ಕೇಳಿದರು. ಆತ ‘ನಾ ಕಳುವು ಮಾಡಿಲ್ರಿ’ ಎಂದು ಸಾಹೇಬರ ಕಾಲಿಗೆರಗಿ ಪ್ರಲಾಪ ಆರಂಭಿಸಿದ. ಅವನನ್ನು ಗದರಿ ಸುಮ್ಮನಿರಿಸಿ, ಪೇದೆಗಳನ್ನು ‘ಏನ್ರೀ! ಇವನ ಕತೆ?’ ಎಂದು ವಿಚಾರಿಸಿದರು. ಪೇದೆಗಳು ಕೇಸು ಡೈರಿಯಲ್ಲಿದ್ದ ಕಂಪ್ಲೆಂಟಿನ ವಿವರ ನೀಡಿದರು.
ಎಲ್ಲ ಕೇಳಿಸಿಕೊಂಡು ಆದ ಮೇಲೆ ಸಾಹೇಬರು ‘ಇವನೇನೂ ಮಾಡೇ ಇಲ್ಲ ಅಂತಿದ್ದಾನೆ?’ ಎಂದರು. ಪೇದೆಗಳು ‘ಇಲ್ಲ ಸರ್! ಕ್ರೈಮ್ ಸ್ಪಾಟ್‌ನಲ್ಲಿ ಇವನೊಬ್ಬನೇ ಸಸ್ಪೆಕ್ಟು! ಕಂಪ್ಲೇಂಟ್ ಕೊಟ್ಟ ಪಾಟೀಲರು ಕೂಡ ಇವನ ಮೇಲೆಯೇ ಅನುಮಾನ ಪಟ್ಟಿದ್ದರು. ಅದಕ್ಕೆ ಹಿಡ್ಕೊಂಡು ಬಂದಿದ್ದೆವೆ’ ಎಂದರುಹಿದರು.
ಕಲ್ಲೇಶಿ ಮಧ್ಯೆ ಬಾಯಿ ಹಾಕಿ ‘ಇಲ್ಲ ಸರ್! ನಾ ಕಳುವು ಮಾಡಿಲ್ಲರಿ. ನಿಮ್ಮ ಪೊಲೀಸ್ರೆ ನನ್ನ ಹತ್ರ ಇದ್ದ ಅಷ್ಟು ರೊಕ್ಕ ಕಸಗೊಂಡು ಈಗ ನಾನೇ ಕಳ್ಳ ಅಂತ ಸುಳ್ಳು-ಸುಳ್ಳೇ ಅಂತಾರ ನೋಡ್ರಿ’ ಎಂದು ಏರುದನಿಯಲ್ಲಿ ನುಡಿದನು.
ಮುಂಚೆ ತಾವಿದ್ದ ಕಡೆ ತಮ್ಮ ಮೇಲೆ ವಿನಾಕಾರಣ ಕೇಳಿಬಂದ ಆರೋಪದಿಂದಾಗಿ ಇಲ್ಲಿಗೆ ವರ್ಗಾಯಿಸಲ್ಪಟ್ಟಿದ್ದ ಹೊಸ ಸಾಹೇಬ್ರು, ಈ ಮಾತುಗಳನ್ನು ಕೇಳುತ್ತಿದ್ದಂತೆ, ತಮ್ಮೊಳಗೆ ಕುದಿಯುತ್ತಿದ್ದ ಅಸಹನೆಯನ್ನು ಕಲ್ಲೇಶಿಯ ಮೇಲೆ ತೋರಿಸಲು ಉದ್ಯುಕ್ತರಾದರು. ‘ಏನಲೇ ಬಾಂಚೋದ! ಮಾಡೋದು ಮಾಡಿ ಈಗ ನಮ್ಮ ಮ್ಯಾಲೆ ಆರೋಪ ಮಾಡ್ತೀ’ ಎಂದು ಲಾಠಿಯಿಂದ ರಪ-ರಪ ಚಚ್ಚಿದರು.
‘ಅಯ್ಯೋ-ಅಮ್ಮಾ! ಇಲ್ರಿ! ನಾ ಏನು ಮಾಡಿಲ್ರಿ! ನನ್ನ ಹೊಡೀ ಬ್ಯಾಡ್ರಿ.......’ಮುಂತಾಗಿ ಅಂಗಲಾಚುತ್ತಾ ಕಲ್ಲೇಶಿ ಎಷ್ಟು ಬೇಡಿಕೊಂಡರೂ ಸಾಹೇಬರ ಸಿಟ್ಟು ತಣಿಯಲಿಲ್ಲ. ಅವರ ರೌದ್ರಾವತಾರಕ್ಕೆ ಬ್ರೇಕ್ ಹಾಕಲು ಅನುಭವಸ್ಥ ಪೊಲೀಸ್ ಪೇದೆಯೊಬ್ಬನು ಧೈರ್ಯವಹಿಸಿ ‘ಸುಮ್ನೆ ನೀವ್ಯಾಕ ದಣಕೊತೀರಿ ಸಾಹೇಬ್ರ. ಅವನ ವಿಷಯ ನಮಗ ಬಿಡ್ರಿ. ನಾವು ನೋಡ್ಕೋತೀವಿ’ ಎಂದು ಸಮಾಧಾನಪಡಿಸಿದನು. ಸಾಹೇಬ್ರು ‘ಸೂ.. ಮಗನೇ. ನಮ್ಮ ಮ್ಯಾಲೆ ಇಲ್ಲದ್ದೆಲ್ಲಾ ಮಾತಾಡ್ತಿ. ಇವನ್ನ ಹಂಗ ಬಿಟ್ಟರೆ ನಾಳೆ ಮಂದಿ ನಮ್ಮನ್ನ ನೋಡಿ ನಗೋ ಹಂಗ ಆಕ್ಕೇತಿ. ಇಂವಾ ‘ಕಳ್ಳತನ ಮಾಡಿದ್ದು ನಾನೇ’ ಅಂತ ಒಪ್ಕೊಂಡ್ರೆ ಸರಿ. ಇಲ್ಲಾಂದ್ರೆ ನಾಳೆ ಕೋರ್ಟಿಗೆ ಪ್ರೊಡ್ಯೂಸ್ ಮಾಡ್ರಿ’ ಎಂದು ಆದೇಶಿಸಿ ಹೊರಟುಹೋದರು.
ಪೇದೆಗಳು ‘ಸುಮ್ನೆ ಒಪ್ಪಿಕೊಂಡು ಪರ್ಸ್ ಎಲ್ಲಿದೆ ಅಂತಾ ಹೇಳಿಬಿಡು. ಸಾಹೇಬರಿಗೆ ನಾವೇ ಏನೋ ಒಂದು ಹೇಳಿ ನಿನ್ನ ಬಿಟ್ಟು ಕಳಿಸ್ತೀವಿ’ ಮುಂತಾಗಿ ಪುಸಲಾಯಿಸಿದರೂ ಕಲ್ಲೇಶಿ ಮಾತ್ರ ‘ಮಾಡದೇ ಇರುವ ಕುಕೃತ್ಯವನ್ನು ಯಾಕೆ ಒಪ್ಪಿಕೊಳ್ಳಬೇಕು’ ಎನ್ನುವ ಹಟ ತಾಳಿದ್ದನು. ಅದೂ ಅಲ್ಲದೇ, ಕಲ್ಲೇಶಿಗೆ ಒಂದು ಸಾರಿ ‘ಕಳುವು ಮಾಡೀನಿ’ ಅಂತ ಒಪ್ಪಿಕೊಂಡರೆ, ಆಮೇಲೆ ಈ ಸರಹದ್ದಿನಲ್ಲಿ ಯಾವುದೇ ಕಳ್ಳತನವಾದರೂ ತನ್ನನ್ನೂ ‘ಶಂಕಿತ’ ಎಂದು ಪರಿಗಣಿಸಿ ಎಳೆದುಕೊಂಡು ಬಂದು ‘ನಾದುತ್ತಾರೆ’ ಎನ್ನುವಷ್ಟು ಲೋಕಜ್ಞಾನವಿತ್ತು.
ಹಾಗಾಗಿ ಕಲ್ಲೇಶಿ ಪೊಲೀಸರು ಎಷ್ಟು ಭೀಕರವಾಗಿ ಬೆದರಿಸಿದರೂ-ಮೈ ಮೂಳೆ ಮುರಿಯುವಂತೆ ಒದ್ದರೂ, ‘ನಾನು ಕಳುವು ಮಾಡಿಲ್ಲ’ ಎಂಬ ರಾಗ ಹಾಡುತ್ತಿದ್ದನು. ಕಳೆದು ಹೋದ ಪರ್ಸ್ ಹಾಗೂ ನೋಟು-ಇವೆರಡೂ ಕಲ್ಲೇಶಿಯ ಹತ್ತಿರ ಸಿಕ್ಕಲಿಲ್ಲವಾಗಿ ಇವನು ಅಮಾಯಕ ಎಂಬುದು ಅರಿವಿಗೆ ಬಂದಿದ್ದರೂ, ಹಿಡಿದ ಮಿಕವನ್ನು ಬಿಡಬಾರದು ಎಂಬ ಅಘೋಷಿತ ನಿಯಮ ಪಾಲನೆಯ ಅನಿವಾರ್ಯತೆ ಪೊಲೀಸರಿಗಿತ್ತು. ಮೇಲಾಗಿ ತಾವು ನೀಡುತ್ತಿದ್ದ ಚಿತ್ರಹಿಂಸೆ ತಾಳದೆ, ಮಾಡದೆ ಇರುವ ಕೊಲೆ-ಅತ್ಯಾಚಾರಗಳಂಥ ಗಂಭೀರ ಆಪಾದನೆಗಳನ್ನೂ ಆಪಾದಿತರು ಒಪ್ಪಿಕೊಳ್ಳುತ್ತಿದ್ದ ಭವ್ಯ ಇತಿಹಾಸ ಪ್ರಜ್ಞೆ ಇದ್ದ ಪೊಲೀಸರಿಗೆ ಕಲ್ಲೇಶಿಯ ‘ನಾನು ಕಳುವು ಮಾಡಿಲ್ರಿ’ ಎಂಬ ಹಠಪೂರಿತ ನಿರಾಕರಣೆ ಸಹಜವಾಗಿಯೇ ರೊಚ್ಚಿಗೆಬ್ಬಿಸಿತ್ತು.
ಈ ಎಲ್ಲದರ ಪರಿಣಾಮವಾಗಿ ಪೊಲೀಸರು ಕೊನೆಗೆ ಸಾಹೇಬ್ರು ಆದೇಶಿಸಿದಂತೆ ಕೋರ್ಟಿಗೆ ಹಾಜರುಪಡಿಸಿದರು.
ಅಸಂಖ್ಯಾತ ಕೇಸುಗಳ ವಿಲೇವಾರಿ ಮಾಡಬೇಕಾದ ಒತ್ತಡದ ಮಧ್ಯೆ ಕೇಸಿನ ಹಿಯರಿಂಗ್ ನಡೆಸಿದ ನ್ಯಾಯಾಧೀಶರು ‘ನಿನ್ನ ಪರ ವಾದಿಸೋದಕ್ಕೆ ವಕೀಲರು?’ ಎಂದು ಕೇಳಿದ್ದಕ್ಕೆ ಉತ್ತರವಾಗಿ ‘ನಾ ಕಳುವು ಮಾಡಿಲ್ರಿ’-ಎಂಬ ಕಲ್ಲೇಶಿಯ ಅಪಲಾಪ ಗಣನೆಗೆ ತೆಗೆದುಕೊಳ್ಳದೇ, ತನಿಖೆ ಮುಂದುವರೆಸುವಂತೆ ಆದೇಶಿಸಿ, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಈ ರೀತಿಯಾಗಿ ಕಲ್ಲೇಶಿ ವಿಚಾರಣಾಧೀನ ಕೈದಿಯ ರೂಪದಲ್ಲಿ ಕಾರಾಗೃಹ ಸೇರಿದ.
***
ಯಾವುದೋ ಅಲಿಖಿತ ನಿಯಮದಂತೆ ಕಲ್ಲೇಶಿ ಆಗಾಗ ಕೋರ್ಟಿಗೆ ಹಾಜರಿ ಹಾಕುವುದು, ನ್ಯಾಯಾಧೀಶರು ಕೇಳಿದಾಗ ‘ತಾನು ಕಳುವು ಮಾಡಲಿಲ್ಲ’ ಎಂದು ಸೋತ ದನಿಯಲ್ಲಿ ಹೇಳುವುದು, ಮತ್ತೆ ಮುಂದಿನ ವಿಚಾರಣೆವರೆಗೆ ಬಂಧನದ ಅವಧಿ ವಿಸ್ತರಿಸುವುದು- ಹೀಗೆ ಪುನಾರಾವರ್ತಿತವಾಗುತ್ತಾ ಹೋಯಿತು. ಕಾನೂನು-ನ್ಯಾಯಾಲಯ ಎಂಬ ಸಂವೇದನಾರಹಿತ ವ್ಯವಸ್ಥೆಯ ತಿರುಗಣಿಗೆ ಸಿಲುಕಿದ ಕಲ್ಲೇಶಿಯು ಮಾನಸಿಕವಾಗಿ ಜರ್ಜರಿತನಾದನು. ಯಾರೊಂದಿಗೂ ಮಾತಿಲ್ಲ. ಊಟ-ನಿದ್ದೆ ಕಡೆ ಲಕ್ಷ್ಯವಿಲ್ಲ. ದಿನಗಳೆದಂತೆ ಕಲ್ಲೇಶಿ ಉಸಿರಾಡುತ್ತಾ ಚಲಿಸುವ ಗೊಂಬೆಯಂತಾಗಿ ಹೋದನು.
ಬೇರೆಲ್ಲ ಕೈದಿಗಳ ಸಂಬಂಧಿಗಳು ಆಗಾಗ ಬಂದು ತಮ್ಮವರನ್ನು ಮಾತನಾಡಿಸುತ್ತಿದ್ದರು. ಆದರೆ ಕಲ್ಲೇಶಿಗಾಗಿ ಎಲ್ಲಿಂದಲೂ ಯಾರೂ ಬರುತ್ತಿರಲಿಲ್ಲ. ಜೈಲಿನೊಳಗಿದ್ದ ಇತರೆ ಕೈದಿಗಳು ಒತ್ತಾಯಿಸಿ ಕೇಳಿದಾಗ ‘ನನಗ್ಯಾರೂ ಇಲ್ಲ’ ಎನ್ನುತ್ತಿದ್ದ. ಹಾಗಾಗಿ ಜೈಲಿನೊಳಗಡೆ ಇದ್ದವರಿಗೆಲ್ಲಾ ಈ ಹತಭಾಗ್ಯನ ಬಗೆಗೆ ಅನುಕಂಪವಿತ್ತು.
ಹೀಗಿರುವಾಗ ಮಹಾತ್ಮ ಜಯಂತಿ ಅಂಗವಾಗಿ ಕೈದಿಗಳನ್ನು ಸಜ್ಜುಗೊಳಿಸಿ, ಜೈಲಿನ ಆವರಣದಲ್ಲಿ ಸಮಾರಂಭ ಆಯೋಜಿಸಲಾಗಿತ್ತು. ಸ್ವಾಗತ ಗೀತೆ, ಭಾಷಣ, ದೇಶಭಕ್ತಿ ಗೀತೆ, ನಾಟಕ ಮುಗಿದ ಮೇಲೆ ನಾಲ್ಕಾರು ಯುವಕ-ಯುವತಿಯರ ಗುಂಪು ಅಲ್ಲಿರುವ ಖೈದಿಗಳಿಗೆ ಸಿಹಿತಿಂಡಿ-ಹಣ್ಣುಗಳನ್ನು ಹಂಚುತ್ತಾ ಅವರ ಬಗ್ಗೆ ವಿವರಗಳನ್ನು ಸಂಗ್ರಹಿಸತೊಡಗಿತು. ಅವರೆಲ್ಲ ‘ಆಶಾದೀಪ’ ಎಂಬ ಒಂದು ಸ್ವಯಂ ಸೇವಾ ಸಂಸ್ಥೆಯೊಂದರ ಕಾರ್ಯಕರ್ತರಾಗಿದ್ದರು.
ದೇಶದ ವಿವಿಧ ಜೈಲುಗಳಲ್ಲಿರುವ ಲಕ್ಷಾಂತರ ವಿಚಾರಣಾಧೀನ ಕೈದಿಗಳ ಅಧ್ಯಯನ ಮಾಡಿ, ಅವರಿಗೆ ಅಗತ್ಯ ನೆರವಿನ ಹಸ್ತ ಚಾಚುವ ಉದ್ದೇಶದೊಂದಿಗೆ ‘ಆಶಾದೀಪ’ ಕೆಲಸ ನಿರ್ವಹಿಸುತ್ತಿತ್ತು. ಅಲ್ಲದೇ ಜೈಲಿನ ಸ್ಥಿತಿ-ಗತಿ ಸುಧಾರಣೆ ಬಗ್ಗೆಯೂ ಕ್ರಮ ಕೈಗೊಳ್ಳುವಂತೆ ಸರ್ಕಾರದ ಗಮನ ಸೆಳೆದು ಕೈದಿಗಳ ಕಷ್ಟ ಪರಿಹಾರಕ್ಕೆ ಒತ್ತಾಸೆಯಾಗಿ ನಿಲ್ಲುತಿತ್ತು.
ಆಶಾದೀಪದ ಕಾರ್ಯಕರ್ತರು ಕಲ್ಲೇಶಿಯನ್ನೂ ಸಂದರ್ಶಿಸಿದರು. ಮಾತೇ ಮರೆತು ಹೋದಂಥ ಸ್ಥಿತಿ ತಲುಪಿದ್ದ ಕಲ್ಲೇಶಿ ಯಾವ ಪ್ರಶ್ನೆಗೂ ಉತ್ತರ ಕೊಡದೇ ಸುಮ್ಮನಿದ್ದನು. ಆಗ ಕೇಸಿನ ವಿವರ ಓದುತ್ತಾ ಒಬ್ಬ ಕಾರ್ಯಕರ್ತನು- ಅಲ್ಲೋ ತಮ್ಮಾ! ಈಗಾಗಲೇ ನೀನು ಇಲ್ಲಿಗೆ ಬಂದು ಹತ್ತು ತಿಂಗಳ ಮೇಲಾಯಿತು. ನೀ ಕಳ್ಳತನ ಮಾಡಿಯೊ ಇಲ್ಲೊ? ಎಂಬುದಾಗಿ ಕೇಳಲು ಕಲ್ಲೇಶಿ ‘ಇಲ್ಲ’ ಎಂಬಂತೆ ತೆಲೆ ಅಲ್ಲಾಡಿಸಿದನು. ‘ನೀನು ಕಳ್ಳತನ ಮಾಡಿಲ್ಲ ಅಂತಾದ್ರೆ, ನಿನ್ನನ್ನು ಇಲ್ಲಿ ಯಾಕೆ ಇಟ್ಕೊಂಡಿದ್ದಾರೆ. ಇಷ್ಟೊತ್ತಿಗೆ ನಿನ್ನ ಕೇಸು ಖುಲಾಸೆ ಆಗಬೇಕಿತ್ತು. ಯಾಕಂದ್ರ… ನಿನ್ನ ಮ್ಯಾಲೆ ಚಿಲ್ಲರೆ ಕಳ್ಳತನದ ಆರೋಪ ಅಷ್ಟೇ ಇದೆ. ಶಿಕ್ಷೆ ಏನು ಬಹಳ ಇರೋದಿಲ್ಲ ಭಾಳ ಅಂದ್ರ ಮೂರು ತಿಂಗಳು ಅಷ್ಟೆ!’ ಎಂದು ಅವರೆಲ್ಲ ಅಚ್ಚರಿಪಡುತ್ತಿರುವಾಗ ಅಲ್ಲಿಯೇ ಇದ್ದ ಜೈಲರ್ ಸಾಹೇಬ್ರು-ಇವನು ಕಳ್ಳತನ ಮಾಡೀನಿ ಅಂತ ಒಪ್ಕೊಂಡುಬಿಟ್ಟಿದ್ರೆ ಇಷ್ಟೊತ್ತಿಗಾಗಲೇ ಇವನು ಬಿಡುಗಡೆ ಆಗಬೇಕಿತ್ತು. ಆದರೆ ಇವನು ‘ನಾನು ಕಳ್ಳತನ ಮಾಡಿಲ್ಲ’ ಅಂತಾನೆ ಎಂದು ಹೇಳಿದರು.
ಕಾರ್ಯಕರ್ತರೆಲ್ಲ ಇಂಗ್ಲೀಷ್‌ನಲ್ಲಿ ತಮ್ಮೊಳಗೆ ಗುಸು-ಗುಸು ಮಾತಾಡಿಕೊಂಡು ‘ಇಲ್ಲಿ ನೋಡು ಕಲ್ಲೇಶಿ. ಕಳ್ಳತನಕ್ಕೆ ವಿಧಿಸೋ ಶಿಕ್ಷೆ ಪ್ರಮಾಣ ನೀನು ಇಲ್ಲಿ ಕಳೆದಿರೋ ಸಮಯಕ್ಕಿಂತಾ ಬಹಳ ಕಡಿಮೆ. ಆದ್ದರಿಂದ ನೀನು ಕಳ್ಳತನ ಮಾಡಿದ್ದೇನೆ ಅಂತ ಒಪ್ಪಿಕೊಂಡ್ರೆ ಶಿಕ್ಷೆಯ ಅವಧಿ ಮುಗಿದಿದೆ ಅಂತ ತೀರ್ಮಾನಿಸಿ ಬಿಡುಗಡೆ ಮಾಡುತ್ತಾರೆ’ ಎಂಬುದಾಗಿ ತಿಳಿಹೇಳಿದರು. ಮೊದಮೊದಲು ಕೇಳಿಸಲಿಲ್ಲವೆಂಬಂತೆ ಸುಮ್ಮನಿದ್ದ ಕಲ್ಲೇಶಿಯು ಪದೇಪದೇ ಅವರು ಆ ಮಾತನ್ನು ಹೇಳುತ್ತಿದ್ದರಿಂದ ಆಕ್ರೋಶಗೊಂಡು ‘ನಾ ಕಳುವು ಮಾಡಿಲ್ಲ ಅಂದ್ರೂ ಅದ್ಹೆಂಗ ಒಪ್ಕೊಳ್ಳಾಕ ಬರ್ತೆತ್ರಿ. ನೀವಾ.. ಹೇಳ್ರಿ’ ಎಂದು ಚೀರುತ್ತಾ ರೋಧಿಸಿದನು. ತಾವು ಇಷ್ಟು ಹೇಳಿದ್ರೂ ತನ್ನದೇ ಹಟ ಸಾಧಿಸುತ್ತೀರೋ ಇವನೆಂಥ ಹುಚ್ಚ ಇರಬೇಕು ಎಂದು ಆಶಾದೀಪ ಕಾರ್ಯಕರ್ತರಿಗೆ ಅನಿಸಿತು. ಹೋಗಲಿ ಜಾಮೀನಿಗಾದ್ರೂ ಪ್ರಯತ್ನಿಸೋಣ ಎಂದರೆ ಜಾಮೀನಾಗಲು ಕಲ್ಲೇಶಿಗೆ ತನ್ನವರು ಅಂತ ಯಾರೂ ಇಲ್ಲದಿರುವುದು ಹಾಗೂ ಸಾವಿರಾರು ರೂಪಾಯಿ ಜಾಮೀನಿನ ಮೊತ್ತ-ಇವೆರಡೂ ಅಂಶಗಳು ಅಡ್ಡಿಯಾದವು. ಹೀಗಾಗಿ ಅಸಹಾಯಕರಾದ ಕಾರ್ಯಕರ್ತರು ‘ಓಕೆ! ನಾವು ಹೇಳೋದು ಹೇಳಿ ನೋಡಿದ್ವಿ. ಆದ್ರೆ ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕ್ಕೊತೀನಿ ಅಂದ್ರೆ ನಾವೇನು ಮಾಡೋದು?’ ಎಂದು ಮಣ-ಮಣಗುಟ್ಟುತ್ತಾ ಅಲ್ಲಿಂದ ಚದುರಿದರು.
***
ಅಸಂಖ್ಯಾತ ಹಾಜರಿ-ವಾಯಿದೆ-ಹಾಜರಿಗಳ ಯಾಂತ್ರೀಕೃತ ಚಕ್ರದಂತೆ ಕಲ್ಲೇಶಿಯನ್ನು ಇಂದೂ ಕೂಡ ನ್ಯಾಯಾಲಯಕ್ಕೆ ಕರೆತಂದಿದ್ದರು. ಅಲ್ಲಿ ತನ್ನ ಸರದಿಗಾಗಿ ಕಾಯುತ್ತಿರುವಾಗ ಒಬ್ಬ ಮಧ್ಯವಯಸ್ಕನು ಕಲ್ಲೇಶಿಯನ್ನು ನೋಡಿ ಅಚ್ಚರಿ ಸೂಸುತ್ತಾ ‘ಲೇ ಕಲ್ಲೇಶಿ! ಎಲಾ.... ಇವನೌನ. ಇಲ್ಲೇನು ಮಾಡಾಕಹತ್ತಿಲೆ? ಅಲ್ಲಿ ಊರಾಗ ನಿನ್ನ ಅಜ್ಜ ‘ನನ್ನ ಮೊಮ್ಮಗ ಇಂದು ಬರತಾನು, ನಾಳೆ ಬರತಾನು’ ಅಂತ ಹಾದಿ ಕಾಯ್ಕೊಂತ ಹಾಸಿಗಿ ಹಿಡದಾನು. ನೀ ನೋಡಿದ್ರ ಹಿಂಗ ಪೊಲೀಸರ ಸಂಗಾಟ ಕೋರ್ಟಿನ ಕಟ್ಟಿಮ್ಯಾಲೆ ಬಂದು ಕುಂತಿದಿ’ ಎಂದು ಕೇಳಿದನು.
ಆಗ ಕಲ್ಲೇಶಿಯೂ ಸಂಭ್ರಮದಿಂದ ‘ಅರೆ! ಬಸಪ್ಪ ಮಾವಾ! ಊರಿಂದ ಬಂದಿ? ಖರೆವಂದ್ರೂ ಅಜ್ಜ ನನ್ನ ನೆನೆಸಾಕ ಹತ್ಯಾನ? ಮತ್ತ ನಂಗ ದನಕ್ಕ ಬಡದಂಗ ಬಡಿಯೋವಾಗ ಎಲ್ಲಿ ಹೋಗಿತ್ತಂತ ಅವನ ಕಳ್ಳು?’ ಎಂದೆಲ್ಲಾ ಪ್ರಶ್ನಿಸಲಾರಂಭಿಸಿದನು.
ಬಸಪ್ಪ ‘ಮಳ್ಳ! ಹುಚ್ಚ ಮಳ್ಳ! ಅಲ್ಲೋ, ಮೊಮ್ಮಗ ಒಂದೀಟು ಓದು-ಬರಾ ಕಲ್ತು ಸಾಯೇಬ ಆಗ್ಲಿ ಅಂತ ಸಾಲಿಗೆ ಹಾಕಿದ್ರ, ನೀ ಸಾಲಿ ತಪ್ಪಿಸಿ ಗೆಣ್ಯಾರ ಜೋಡಿ ಹಳ್ಳದಾಗ ಈಜಾಕ ಹೋಗಿದ್ದಿ? ಏನೋ ಸಿಟ್ಟು ಬಂದು ನಿನಗ ಬುದ್ಧಿ ಕಲಿಸಾಕಾ ಅಂತ ನಾಕೇಟು ಹೊಡದ್ರ, ಅದಕ್ಕ ನೀ ಭಾರೀ ದೊಡ್ಡ ಗಂಡಸಿನ ಹಂಗ ಸಿಟ್ಟು ಮಾಡಿಕೊಂಡು ಊರ ಬಿಟ್ಟು ಹೇಳದ-ಕೇಳದ ಓಡಿ ಬಂದುಬಿಡೊದಾ? ನಿಮ್ಮಜ್ಜ ನಿನ್ನನ್ನ ಎಲ್ಲೆಲ್ಲಿ ಅಂತ ಹುಡುಕಿಸಿದ! ಈಟು ದಿನ ಆದ್ರ್ರೂ ನೀನೂ ಊರ ಕಡೆ ಕಾಲು ಹಾಕ್ಲಿಲ್ಲ. ಎಂತ ಕೆಟ್ಟ ಹಠಾನೋ ನಿಂದು. ಹುಚ್ಚ ಖೋಡಿ! ಊರಾಗ ನಿಮ್ಮಜ್ಜ ‘ತಂದಿ-ತಾಯಿ ಇಲ್ಲದ ಅನಾಥ ಹುಡುಗನ್ನ ನನ್ನ ಪಾಪಿ ಕೈಯಾಗ ಹೊಡದು ಎಂಥಾ ತಪ್ಪು ಮಾಡಿದೆ’ ಅಂತ ನರಳಿಕೊಂತ ಮಕ್ಕೊಂಡಾನ! ನಿನ್ ಬಿಟ್ರ ಅವಂಗೂ ಬೇರೆ ಯಾರ ಅದರಾ? ನಡಿ ಹೋಗೋಣು! ನಿನ್ನ ಸಲುವಾಗಿ ನಿಮ್ಮಜ್ಜ ಪ್ರಾಣ ಹಿಡ್ಕೊಂಡಾನ’ ಎಂದು ಕಲ್ಲೇಶಿಯನ್ನು ಎಳೆಯುತ್ತಾ ಕರೆದೊಯ್ಯುವ ಯತ್ನ ಮಾಡಿದನು. ಇಷ್ಟೊತ್ತಿಗಗಾಗಲೇ ಕಲ್ಲೇಶಿಯ ಕಪಾಳ ಕಣ್ಣೀರಿಂದ ತೊಯ್ದು ಹೋಗಿದ್ದವು.
ಅಷ್ಟರಲ್ಲಿ ಕೋರ್ಟಿನ ದರಬಾನ ಜೋರಾಗಿ ‘ಕಲ್ಲೇಶಿ! ಕಲ್ಲೇಶಿ! ಕಲ್ಲೇಶಿ!’ ಎಂದು ಮೂರು ಸಾರಿ ಕೂಗಿ, ಕೂಗಿ ಕರೆದನು. ಪಕ್ಕದಲ್ಲಿಯೇ ಯಾರೊಂದಿಗೋ ಮಾತಾಡುತ್ತಾ ನಿಂತಿದ್ದ ಪೊಲೀಸಪ್ಪ ಧಾವಿಸಿ ಬಂದು ‘ಏ ಕಲ್ಲೇಶಿ ! ನಡಿಯೋ!’ ಎಂದು ಅವಸರಿಸಿ ಕೋರ್ಟಿನೊಳಗೆ ಕರೆದೊಯ್ದನು.
ನ್ಯಾಯಾಧೀಶರು ಕೇಸಿನ ವಿವರಗಳನ್ನೊಮ್ಮೆ ಓದಿ ‘ಏನಪ್ಪಾ ಕಲ್ಲೇಶಿ! ನಿನ್ನ ಮೇಲಿರೋ ಕಳ್ಳತನದ ಆಪಾದನೆ ಬಗ್ಗೆ ಏನು ಹೇಳ್ತೀಯಾ?’ ಎಂದು ಕೇಳಿದರು. ಊರಿನಲ್ಲಿ ತನ್ನ ಬರುವಿಕೆಗಾಗಿಯೇ ಜೀವ ಹಿಡಿದುಕೊಂಡಿದ್ದ ತನ್ನಜ್ಜನ ಸುಕ್ಕುಗಟ್ಟಿದ್ದ ಮುಖ ನೆನೆಯುತ್ತಾ ಕಲ್ಲೇಶಿಯು ‘ಹೌದ್ರಿ ಸಾಯೇಬ್ರ! ನಾನು ಕಳುವು ಮಾಡಿದ್ದು ಖರೆರಿ..... ನನಗ ಶಿಕ್ಷಾ ಕೊಡ್ರಿ’ ಎಂದು ಕಟಕಟೆಯೊಳಗೆ ಕುಸಿದನು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.