ADVERTISEMENT

ಕಥೆ | ಪಾರ್ವತಿ ಪಿಟಗಿ ಅವರ ಭಗೀರಥ

ಪಾರ್ವತಿ ಪಿಟಗಿ
Published 3 ಡಿಸೆಂಬರ್ 2022, 22:30 IST
Last Updated 3 ಡಿಸೆಂಬರ್ 2022, 22:30 IST
ಸಾಂದರ್ಭಿಕ ಕಲೆ
ಸಾಂದರ್ಭಿಕ ಕಲೆ   

ಆ ಓಣಿಯಲ್ಲಿ ನೀರಿಗೋಸ್ಕರ ದೊಡ್ಡ ಬಡಿದಾಟವೇ ನಡೆದು, ಸುದ್ದಿ ಇಡೀ ಊರನ್ನೇ ವ್ಯಾಪಿಸಿ ಊರಿನ ಮೂಲ ಸೌಕರ್ಯಗಳನ್ನು ಒದಗಿಸುವ ಗ್ರಾಮ ಪಂಚಾಯತಿಯ ಬಾಗಿಲನ್ನೂ ತಟ್ಟಿ, ಜಗಳ ನಡೆದ ವಾರ್ಡಿನ ಸದಸ್ಯರು ವಿಶೇಷ ಸಭೆಯನ್ನು ಕರೆದರು.

ಇತ್ತೀಚೆಗೆ ಆರು ತಿಂಗಳಿನ ಹಿಂದೆಯಷ್ಟೇ ಪ್ರಥಮ ಬಾರಿ ಪಂಚಾಯತಿ ಸದಸ್ಯನಾಗಿ ಆಯ್ಕೆಯಾದ ಯುವಕ ರವಿ ‘ನೋಡ್ರಿ, ನಮ್ಮ ವಾರ್ಡಿನ್ಯಾಗ ಬರೇ ಎರಡ ಬೋರ್ ಅದಾವು. ಅಷ್ಟ ಅಲ್ಲಾ, ಮ್ಯಾಲಿಂದ ಮ್ಯಾಲೆ ಮೋಟರ್ ಸುಟ್ಟಹೋಗಿ ಹತ್ತ ಹನ್ನೆರಡ ದಿನಾ ನೀರ ಬರೂದಿಲ್ಲಾ. ಹಿಂಗ ಆಗಿ ಸಮಸ್ಯೆ ಹುಟ್ಟಾಕತ್ತಾವು. ಏನರ ಆಗಲಿ, ನಮಗಂತೂ ಈ ಸಲಾ ಹದಿನೈದನೇ ಹಣಕಾಸದಾಗ ಮತ್ತೊಂದ ಬೋರ ಕೊರಸಬೇಕ ನೋಡ್ರಿ. ನಾವಂತೂ ಮಂದಿ ಕಡೆ ಬೈಸಿಕೊಂಡ ಸಾಕಾಗೇತಿ’ ಎಂಬ ಮಾತನ್ನು ‘ಏ ಹೌದ್ರಿ ಇನ್ನೊಂದ ಬೋರವೆಲ್ ಬೇಕ ನೋಡ್ರಿ’ ಎಂದು ವಾರ್ಡಿನ ಉಳಿದ ಸದಸ್ಯರೂ ಅನುಮೋದಿಸಿದರು.

ಆ ಊರಿನ ಹಿರಿಯರೂ ಹಾಗೂ ಈಗಾಗಲೇ ನಾಲ್ಕು ಬಾರಿ ಗ್ರಾಮ ಪಂಚಾಯತಿ ಸದಸ್ಯ ಸ್ಥಾನಕ್ಕೆ ಆಯ್ಕೆಯಾದ ಅನುಭವಿ ಕೇಶಪ್ಪನವರು ಎದ್ದು ನಿಂತು, ‘ನೋಡ್ರಿಪಾ, ನಮ್ಮೂರಾಗ ನೀರಿಗೆ ಬರಾ ಇಲ್ಲಾ...’ ಎಂದು ಮುಂದೆ ಮತ್ತಿನ್ನೇನೋ ಹೇಳುತ್ತಿರುವವರನ್ನು ರವಿ ತಡೆದು ‘ನಿಮ್ಮ ವಾರ್ಡಿನ್ಯಾಗ ಸಾಕಷ್ಟ ಬೋರ ಅದಾವು ಅದಕ ನೀವು ಮಾತಾಡತೀರಿ. ಅಲ್ರಿ ನೀರಿಗೆ ಕಡಿಮಿ ಇಲ್ಲ ಅಂತೀರೆಲ್ಲ ಅದರ ಸಮಂದ ಜಗಳಾ ಮಾಡಿ ತಲಿ ಒಡಕೊಂಡಾರಾ’ ಪುರಸೊತ್ತು ಇಲ್ಲದಂತೆ ಎದುರಾಡಿದಾಗ, ‘ತಮ್ಮಾ ನಮ್ಮು ತಲಿ ಕೂದಲಾ ಇದರಾಗ ಬೆಳ್ಳಗಾದು ಹೆಚ್ಚಗಿ ಮಾತಾಡಬ್ಯಾಡಾ. ನಾ ಹೇಳುದನ್ನ ಕೇಳ ಒಂದೀಟ’ ಎಂದು ಸ್ವಲ್ಪ ಜೋರಾಗಿಯೇ ನುಡಿದಾಗ, ಸಭೆ ನಿಶ್ಯಬ್ಧವಾಯಿತು. ‘ನೋಡ್ರಿ ಇಲ್ಲೆ, ಮೊದಲ ನಮ್ಮ ವಾರ್ಡು ನಿಮ್ಮ ವಾರ್ಡು ಅಂತ ಅನ್ನೂದು ಬ್ಯಾಡಾ. ಆ ವಾರ್ಡು ಈ ವಾರ್ಡು ಅನ್ನೂಕ್ಕಿಂತ ಊರು ನಮ್ಮದು ಅಂತ ಅನ್ನೂಣ. ಹಂಗ ವಾರ್ಡಿಗೆ ಇಂತಿಷ್ಟು ಅಂತ ಹೇಳಿ ಮನಿಕಟ್ಟಿದಂಗ ಎಲ್ಲಿ ಬೇಕಾದಲ್ಲಿ ಬೋರ ಕೊರಸಾಕ ಬರತೈತಿ? ಹಿಂಗ ಎಲ್ಲಿ ಬೇಕಾದಲ್ಲಿ ಭೂಮಿ ತಾಯಿನ್ನ ತೂತ ಮಾಡಿ ಒಗದ್ರ ಯಾತಕ ಬಂತ್ರ್ಯೋ? ಅಷ್ಟಕ್ಕೂ ನೀರಿನ ಉಪಯೋಗ ಚೊಲೊತಂಗ ಮಾಡಿದ್ರ ಯಾರಿಗೂ ಕೊರತಿ ಆಗೂದಿಲ್ಲಾ’

ADVERTISEMENT

‘ಏ ಹೌದ್ರಿ ನೀವ ಹೇಳಿದಂಗ ನೀರು ಹರಕೊಂಡ ಹೋಗಿ ಗಟಾರ ತುಂಬಿದ್ರೂ ನಂದ ಅಲ್ಲಾ ನಮ್ಮ ಅಪ್ಪಂದ ಅಲ್ಲಾ ಅಂತ ನೋಡಕೊಂತ ಸುಮ್ಮನ ನಿಂದ್ರತಾರಾ. ಹಿಂಗ ಸತತ ಬೋರ ಚಾಲೂ ಇರೂದಕ್ಕ ವರ್ಷಕ್ಕ ಹತ್ತ ಮೋಟಾರ ಸುಡತಾವು’

‘ಅದಕ ನಾ ಹೇಳೂದು ಮೊದಲು ನೀರಿನ ಬಳಕಿ ಚೊಲೋತಂಗ ಆಗಬೇಕ. ನನಗ ಎರಡ ಕೊಡಾ ಬೇಕಾದಾಗ ನಾ ಬೋರ ಚಾಲೂ ಮಾಡೂದು ನಿನಗ ಬೇಕಾದಾಗ ನೀ ಚಾಲೂ ಮಾಡೂದು ಆದ್ರ ಮೋಟಾರು ಯಾತಕ ಬರತಾವು? ಕರೆಂಟ ಬಿಲ್ಲ ಆದ್ರೂ ಏನ ಆಗಬ್ಯಾಡಾ? ಈಗಂತೂ ಎಲ್ಲಾರ ಮನಿಮುಂದ ಒಂದೊಂದ ನಳಾ ಆಗಿ ಆ ನಳಕ್ಕೂ ಪೈಪ ಹಚ್ಚಿ ಆರಾಮ ಆಗಿ ನೀರು ತುಂಬತಾರಾ. ಹೆಚ್ಚಾದ ನೀರ ಗಟಾರಕ ಬಿಡತಾರಾ. ಅದ ಹೊತ್ತ ತರೂದು ಆಗಿದ್ರ ಹಿಂಗ ಮಾಡತಿದ್ರು? ನೋಡ್ರಿ ನಾವ ಸಣ್ಣಾರಿದ್ದಾಗಂತೂ ಇಡೀ ಊರಿಗೆ ಬರೇ ನಾಕೈದ ಬಾವಿ ಇದ್ದು. ಬಾವಿಯಿಂದ ನೀರ ಸೇದಿ ಕೊಡಾ ಹೊತ್ತ ನೀರ ತುಂಬತಿದ್ರು. ಇಪ್ಪತ್ತ ಮೂವತ್ತ ಬಿಂದಿಗ್ಯಾಗ ಬದಕ ಸಾಗಸತಿದ್ರು...’

ಹಿರಿಯರು ಹೇಳುವಂತೆ ಇಡೀ ಊರಿನ ಬರೀ ನಾಲ್ಕೈದು ಬಾವಿಗಳು ಊರಿನ ಜನರ ತೃಷೆ ಇಂಗಿಸುತ್ತಿದ್ದವು. ನೀರು ಹೊತ್ತು ತರುವುದಾಗಿದ್ದರಿಂದ ಜನರು ಎಷ್ಟು ಬೇಕೋ ಅಷ್ಟೇ ನೀರು ಸೇದುತ್ತಿದ್ದರು. ಇದರಿಂದ ಅನವಶ್ಯಕವಾಗಿ ನೀರು ಪೋಲು ಆಗುತ್ತಿರಲಿಲ್ಲ. ಯಾವಾಗ ನೋಡಿದರೂ ಎಲ್ಲ ಬಾವಿಗಳಲ್ಲಿಯೂ ನೀರು ತುಂಬಿ ತುಳುಕುತ್ತಿತ್ತು. ಜನರು ಹಾಗೂ ಸರಕಾರ ಬೋರವೆಲ್ಲುಗಳನ್ನು ಕೊರೆಸತೊಡಗಿದಾಗ ಅಂತರ್ಜಲ ಬರಿದಾಗುತ್ತ ಬಂದು ಹಾಗೇ ಬಾವಿಗಳ ಬಳಕೆ ಆಗದೇ ಮೂಲೆಗುಂಪಾದವು. ಮೊದಲೊಂದು ದಿನ ಬಾವಿಗಳು ಪ್ರಮುಖ ಜಲಮೂಲಗಳಾಗಿ ಜನರಿಂದ ಪೂಜಿಸಲ್ಪಟ್ಟಂತವು, ಮುಂದೆ ಕಸದ ತೊಟ್ಟಿಗಳಾದದ್ದು ಎಂತಹ ವಿಪರ್ಯಾಸ!

ಅಲ್ಲೊಂದು ಇಲ್ಲೊಂದು ಎಂದೆಲ್ಲ ಬೋರವೆಲ್ಲುಗಳು ನಾಯಿಕೊಡೆಯಂತೆ ಊರು ತುಂಬ ಹಬ್ಬಿ ಆ ಹಿರಿಯರು ಹೇಳಿದಂತೆ ಭೂಮಿತಾಯಿಯನ್ನು ತೂತುಮಾಡಿ ಒಗೆದಿದ್ದರು. ಆ ಊರಿನಲ್ಲಿ ಬಹಳ ಆಳದಲ್ಲಿದ್ದ ಅಂತರ್ಜಲ ಅತಿಯಾದ ಸಂಖ್ಯೆಯ ಬೋರವೆಲ್ಲುಗಳಿಂದ ಮತ್ತಷ್ಟು ಕುಸಿದುಹೋಯಿತು. ಸಾಲದ್ದಕ್ಕೆ ಬೋರವೆಲ್ಲುಗಳು ನಿರಂತರವಾಗಿ ಕಾರ್ಯಪ್ರವೃತ್ತವಾಗಿ ಸತತ ನೀರನ್ನು ಹರಿಬಿಡುತ್ತಿದ್ದುದರಿಂದ ಮೇಲಿಂದ ಮೇಲೆ ಮೋಟಾರ ಸುಟ್ಟುಹೋಗುತ್ತಿದ್ದವು. ಇದರಿಂದ ಪಂಚಾಯತಿ ನಷ್ಟ ಅನುಭವಿಸುವಂತಾಗುತ್ತಿತ್ತು. ಜನರು ಕಟ್ಟಿದ ನೀರಿನ ಕರದ ಹಣವೆಲ್ಲ ಇಲ್ಲಿಯೇ ಖರ್ಚಾಗಿ ಹೋಗುತ್ತಿತ್ತು.

ಸಭೆ ಹಾಗೇ ಮುಂದುವರೆದು ಚರ್ಚೆ ಎಲ್ಲಿಂದ ಎಲ್ಲಿಗೋ ಸಾಗಿತ್ತು. ಮಾತು ಮುಂದುವರಿಸಿದ ಹಿರಿಯರು ಹೀಗೆ ಅಂದಿನ ನೀರಿನ ವ್ಯವಸ್ಥೆಯ ಕುರಿತಾಗಿ ಹೇಳುತ್ತಿರುವಾಗಲೇ ‘ಸಾಕ ಬಿಡ್ರಿ ಹಿರಿಯಾರ ಹಿಂದಕಿಂದ ತಗದ ಹಿತ್ತಲದಾಗ ಕುಂತ ಅತ್ತರಂತ. ಆಗ ಹಂಗಿತ್ತು ಈಗ ಹಂಗ ಇಲ್ಲಾ. ಈಗಿನ ಸಮಸ್ಯೆ ಬಗಿಹರಸರಿ’

‘ನೋಡ ತಮ್ಮಾ ಕಾಲಾ ಬದಲ ಆಗಿರಬಹುದು, ಮನಷ್ಯಾನೂ ಬದಲ ಆಗಿರಬಹುದು ಆದ್ರ ಪ್ರಕೃತಿ? ಪ್ರಕೃತಿಗೆ ಶೆಡ್ ಹೋಡೀತಿರೆನ? ಹೊಡೀರಿ ನೋಡೂಣ? ಅಷ್ಟಕ್ಕೂ ನಾ ಸಮಸ್ಯ ಮೂಲನ ಹೇಳಾಕತ್ತೀನಿ ತಿಳಕೋ. ಹಂಗ ನೀರ ಪಡಕೊಳ್ಳಾಕೂ ಋಣಾ ಬೇಕ’

‘.-----’

ಹೀಗೆ ಜೋರಾದ ಚರ್ಚೆ ನಡೆದು ಅಂತಿಮವಾಗಿ ರವಿ ತನ್ನ ವಾರ್ಡಿನ ಕೆಲಸಕ್ಕಾಗಿ ಇರುವ ಅನುದಾನವನ್ನು ಬೋರವೆಲ್ ಕೊರೆಸಲು ಬಳಸುವುದೆಂದು ತೀರ್ಮಾನವಾಯಿತು. ಇದರಿಂದ ಕೇಶಪ್ಪನವರು ಬೇಸರಗೊಂಡರಾದರೂ ರವಿ ವಾದ ಮಾಡಿ ಗೆದ್ದಿದ್ದ.

ಆ ದಿನದ ಜಗಳ, ಬಡಿದಾಟದಲ್ಲಿ ಜನರು ನಲ್ಲಿಯನ್ನು ಮುರಿದಿದ್ದರಿಂದ ಅವರಿಗೆ ಮತ್ತೊಂದು ಬೋರವೆಲ್ಲಿನ ನೀರೇ ಗತಿಯಾಗಿ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿತ್ತು. ರವಿ ಸದ್ಯದ ಪರಿಸ್ಥಿತಿಯಲ್ಲಿ ಮುರಿದುಹೋದ ನಳದ ರಿಪೇರಿ ಮಾಡಿಸಿ ನೀರಿನ ವ್ಯವಸ್ಥೆ ಮಾಡುವುದನ್ನು ಬಿಟ್ಟು ಹೊಸ ಬೋರ ತೆಗೆಸುವ ತರಾತುರಿಯಲ್ಲಿದ್ದ. ಅದಕ್ಕಾಗಿ ಆ ಭಾಗದ ಜನರನ್ನು ಸೇರಿಸಿ ಬೋರವೆಲ್ ಕೊರೆಸುವುದಕ್ಕಾಗಿ ಸ್ಥಳ ಆಯ್ಕೆ ಮಾಡಿದ. ಎಂಜಿನಿಯರರನ್ನು ಕರೆಸಿ ನೀರು ಲಭ್ಯವಿರುವ ಸ್ಥಳ ಪರಿಶೀಲನೆ ಮಾಡಿಸಿದ. ಅಷ್ಟೇ ಸಾಲದೆಂಬಂತೇ ಭೂತಜ್ಞರನ್ನು ಕರೆಸಿ ತೆಂಗಿನ ಕಾಯಿಹಿಡಿದು ಪರೀಕ್ಷೆ ಮಾಡಿಸತೊಡಗಿದ. ಹೊಸ ಬೋರವೆಲ್ ಕೊರೆಸಲು ನಡೆದ ಪ್ರಯತ್ನಗಳನ್ನು ಕಂಡು ಜನ ಶಾಂತರಾದರು.

ಇತ್ತೀಚೆಗೆ ರವಿ ಯಾವುದೇ ಊರಿಗೆ ಹೋದರೂ ಅಲ್ಲಿಯ ನೀರಿನ ವ್ಯವಸ್ಥೆ ಕುರಿತು ವಿಚಾರಿಸಿ ತಿಳಿದುಕೊಳ್ಳುತ್ತಿದ್ದ. ಕುಳಿತರೂ ನಿಂತರೂ ಅದೇ ಧ್ಯಾನದಲ್ಲಿರುತ್ತಿದ್ದ. ಹೀಗಿರುವಾಗ ಆತ ಕಾರಣಾಂತರದಿಂದ ಹತ್ತಿರದ ಊರಿನ ಸಂಬಂಧಿಗಳ ಮನೆಗೆ ಹೋಗಬೇಕಾಯಿತು. ಅಲ್ಲಿಯೂ ಕೂಡ ಆತ ಅಲ್ಲಿಯ ನೀರಿನ ವ್ಯವಸ್ಥೆಯ ಬಗ್ಗೆ ವಿಚಾರಿಸತೊಡಗಿದಾಗ ಆ ಊರಿನಲ್ಲಿಯೂ ನೀರಿನ ಸಮಸ್ಯೆ ಇದ್ದು ಅವರು ಕೂಡ ನೀರಿಗಾಗಿ ಪರದಾಡುತ್ತಿರುವುದು ತಿಳಿದು ‘ಅಲ್ರಿ ನೀವೂ ಒಂದ ಬೋರ್ ತಗಸಬಾರದನ? ನೀವೇನ ಸಾಕಷ್ಟ ಸೌಕಾರ ಅದೀರಿ, ನಿಮಗೇನ ಕಡಿಮಿ ಆಗೇತಿ?’ ಎಂದು ಕೇಳಿದಾಗ, ಮನೆಯ ಹಿರಿಯರು ಬೇಸರಗೊಂಡರು.

ರವಿ ಹೇಳಿದಂತೆ ಆ ಮನೆಯವರು ಸಾಕಷ್ಟು ಶ್ರೀಮಂತರೇ, ಆದರೆ ಬೋರವೆಲ್ ಕೊರೆಸಿ ನೀರು ಪಡೆಯಲು ವಿಫರಾಗಿದ್ದರು. ಅವರು ತಮ್ಮ ಹೊಸ ಮನೆಯನ್ನು ಕಟ್ಟುವಾಗಲೇ ಬೋರವೆಲ್ ಕೊರೆಸುವ ಪ್ರಯತ್ನ ಮಾಡಿದ್ದರು. ನೀರು ಕಂಡುಹಿಡಿಯುವ ತಜ್ಞರು ನಾಲ್ಕೈದು ಜಾಗದಲ್ಲಿ ನೀರು ಇರುವುದಾಗಿ ತಿಳಿಸಿದರು. ಅವರು ಹೇಳಿದ ಸ್ಥಳವೊಂದನ್ನು ಆಯ್ದುಕೊಂಡು ಬೋರವೆಲ್ ಕೊರೆಸಲು ಸಿದ್ಧರಾದರು. ಕೂಸು ಹುಟ್ಟುವುದಕ್ಕಿಂತ ಮುಂಚೆ ಕುಲಾಯಿ ಎಂಬಂತೆ ಆ ಸ್ಥಳದಿಂದ ತಮಗೆ ಬೇಕಾದಲ್ಲೆಲ್ಲ ಪೈಪಲೈನ್ ಕನೆಕ್ಷನ್ ಕೊಟ್ಟರು. ಆದರೆ ನೆಲವನ್ನು ನೂರು ಫೂಟ್ ಆಳದವರೆಗೆ ಅಗೆದರೂ ನೀರು ಸಿಗುವ ಸೂಚನೆ ಸಿಗಲಿಲ್ಲ ಮುಂದೆ ಎರಡು....ಹಾಗೇ ಮೂರು ನೂರು ಆಳದವರೆಗೆ ಅಗೆದು ಕೈಚೆಲ್ಲಿದರು.

ಆ ಮನೆಯ ಹಿತ್ತಲು ಹಾಗೂ ಮುಂಭಾಗದಲ್ಲಿ ಸಾಕಷ್ಟು ಜಾಗವಿತ್ತು. ಮನೆಯ ಹಿಂದೆ ಎಕರೆಗಟ್ಟಲೆ ಜಾಗವಿತ್ತು. ಹಾಗಾಗಿ ಆರು ತಿಂಗಳ ನಂತರ ಆ ಸ್ಥಳಬಿಟ್ಟು ಬೇರೊಂದು ಸ್ಥಳದಲ್ಲಿ ಬೋರವೆಲ್ ಕೊರೆಸಲು ಸಜ್ಜಾದರು. ಭೂತಜ್ಞರಿಂದ ಸರಿಯಾಗಿ ನೀರು ಇರುವ ಜಾಗವನ್ನು ಶೋಧ ಮಾಡಿಸಿ ಮತ್ತೆ ಬೋರವೆಲ್ ಕೊರೆಸಿದರು. ಈ ಬಾರಿ ಐವತ್ತು ಫೂಟ್ ಆಳ ಕೊರೆಯುವುದರಲ್ಲಿ ದೊಡ್ಡದಾದ ಕೊರೆಯಲು ಬಾರದಂತಹ ಬಂಡೆಗಲ್ಲು ಸಿಲುಕಿ ಮುಂದೆ ಕೊರೆಯಲು ಸಾಧ್ಯವೇ ಇಲ್ಲ ಎಂಬಂತಾಗಿ ಅವರು ಧೃತಿಗೆಟ್ಟಿದ್ದರು.

ಮನೆಯ ಹಿರಿಯರು ಬೇಸರಗೊಂಡು ಒಂದು ವರ್ಷದ ಕಾಲ ಬೋರವೆಲ್ ವಿಷಯವನ್ನೇ ಕೈಬಿಟ್ಟಿದ್ದರು. ಆದರೆ ಆಗಾಗ ಮನೆಗೆ ನೆಂಟರಿಸ್ಟರು ಬಂದಾಗ, ಆಳುಗಳು ಹೊತ್ತು ತಂದ ನೀರು ಸಾಲದೇ ಬಂದವರ ಮುಂದೆ ಮುಜುಗರವಾಗುತ್ತಿತ್ತು. ಹಾಗಾಗಿ ಮರಳಿ ಯತ್ನವ ಮಾಡು ಎಂಬಂತೆ ಮೂರನೇ ಬಾರಿ ಬೋರವೆಲ್ ಕೊರೆಸಲು ಪ್ರಯತ್ನಿಸಿದರು. ಈ ಸಲ ಶಾಸ್ತ್ರ ಕೇಳಿ ನೋಡಿದಾಗ, ಮನೆಯಲ್ಲಿ ದೊಡ್ಡ ಪೂಜೆ ಹೋಮ ಹವನ ಮಾಡಿಸಬೇಕೆಂದರು. ಅದೂ ನಡೆದೇಬಿಡಲಿ ಎಂದು ಭಕ್ತಿಭಾವದಿಂದ ಅದ್ಧೂರಿ ಪೂಜೆ ಮಾಡಿ ಊರಿಗೆ ಊಟ ಹಾಕಿಸಿದರು. ಹಾಗೇ ಮನೆಯ ಮುಂದಿದ್ದ ಜಾಗದಲ್ಲಿ ಬೋರವೆಲ್ ಕೊರೆಸಲು ಸನ್ನದ್ಧರಾದರು. ವಿಶೇಷ ತಜ್ಞರನ್ನು ಕರೆಸಿ ಜಾಗ ಹುಡುಕಿ ಬೋರವೆಲ್ ಕೊರೆಸಿದರು. ನೂರಾರು ಫೂಟ ಆಳದಲ್ಲಿ ಕೊರೆದಾಗ ನೀರು ಏನೋ ಸಿಕ್ಕಿತು ಆದರೆ ಅದು ಮಟ್ಟಿನೀರು.

ಕಥೆ ಕೇಳಿ ರವಿ ದಂಗಾಗಿಹೋದ. ಆ ದಿನ ವಿಶೇಷ ಸಭೆಯಲ್ಲಿ ಹಿರಿಯರು ಆಡಿದ ಮಾತು ‘ಪ್ರಕೃತಿಗೆ ಶೆಡ್‌ ಹೋಡೀತೀರಿ? ಎಲ್ಲಾ ಪಡಕೊಳ್ಳಾಕ ಋಣಾ ಬೇಕ’ ಎಂಬ ಮಾತುಗಳು ನೆನಪಾಗಿ ಆತನ ಉತ್ಸಾಹಕ್ಕೆ ಕಡಿವಾಣ ಹಾಕಿದ್ದವು.

** ** **

ರವಿ, ತನ್ನ ವಾರ್ಡಿನ ನೀರಿನ ಸಮಸ್ಯೆ ಬಗೆಹರಿಯಲೆಂದು ಸ್ವಂತ ಹಣವನ್ನು ಖರ್ಚು ಮಾಡಿ ಪೂಜೆಗೈದು ಓಣಿಯ ಜನರಿಗೆ ಊಟವನ್ನೂ ಹಾಕಿದ್ದ. ಈತನ ಕೆಲಸಗಳನ್ನು ನೋಡಿ ಓಣಿಯ ಹೆಂಗಸರೆಲ್ಲ ‘ತಮ್ಮಾ ನೀ ಹಿಂಗ ಕೆಲಸಾ ಮಾಡೀದಿ ಅಂದ್ರ ಮುಂದಿನ ಸಲಾನೂ ನೀನ ಆರಿಸಿ ಬರತಿ ನೋಡ. ನೀ ಬರೇ ಗ್ರಾಮ ಪಂಚಾಯತಿ ಮೆಂಬರ್‌ ಅಷ್ಟ ಅಲ್ಲಾ ತಾಲೂಕ ಪಂಚಾಯ್ತಿ ಮೆಂಬರೂ ಆಕ್ಕಿ ನೋಡಪಾ’ ಎಂದೆಲ್ಲ ಹಾಡಿ ಹೊಗಳಿದಾಗ, ತನ್ನ ಬದುಕೇ ಸಾರ್ಥಕವಾಯಿತು ಎಂದು ಉಬ್ಬಿಹೋದ.

ಬೋರವೆಲ್‌ ಕೊರೆಯುವ ಮಶೀನ ಬಂದಾಗ, ಒಂದು ಕಡೆಗೆ ನೀರು ಉಕ್ಕಿ ಹರಿದಷ್ಟೇ ಸಂಭ್ರಮ. ಮತ್ತೊಂದು ಕಡೆಗೆ ನೀರು ಬರದೇ ಹೋದಲ್ಲಿ ಎಂಬ ಆತಂಕ ಕಾಡತೊಡಗಿತು. ಅಂತೂ ಮಶೀನು ‘ಗಡ ಗಡ....’ ‘ಬಾಂವ್‌ ಬಾಂವ್‌’ ಎಂದು ಸದ್ದು ಮಾಡತೊಡಗಿತು. ಆ ಸದ್ದು ಕೇಳಿ ಜನರು ‘ರವ್ಯಾನ್ನ ಬೋರ ಮಶೀನು ಹಡ್ಡಾಕತೈತಿ ನೀರು ಬಂತು ಚೊಲೋ ಇರಲೀಕ ಭಾಳ ಫಜೀತಿ ಆಕ್ಕತಿ’ ಎನ್ನತೊಡಗಿದರು. ಒಂದು ಬೆಳಗಿನಿಂದ ಶುರುವಾದ ಅಗೆತದ ಶಬ್ದ ಮಧ್ಯಾಹ್ನವಾದರೂ ನಿಲ್ಲಲೇ ಇಲ್ಲ. ‘ಕೊಯ್’ ‘ಕೊರ್’ ‘ಡಗ್ ಡಗ್ ಡಗ್’ ಎಂಬ ಮೊರೆತ ಹೊಮ್ಮುತ್ತಲೇ ಇತ್ತು. ರವಿ ಕ್ಷಣ ಕ್ಷಣಕ್ಕೂ ಆತಂಕದಿಂದ ‘ಎಷ್ಟ ಆಳ ಆತರಿ? ನೀರ ಬಂತರಿ?’ ಎಂದು ಕೇಳುತ್ತಲೇ ಇದ್ದ. ಬೋರವೆಲ್ಲ ಕೊರೆವವರು ‘ತಮ್ಮಾ ನೀ ಮನಿಗೆ ಹೋಗಿ ಉಂಡ ಮಕ್ಕೊ. ನೀರ ಬಂತ ಅಂದ್ರ ನಾವೆಲ್ಲಾ ಹೇಳಿ ಕಳಸ್ತೀವಿ’ ಎಂದು ಆತನನ್ನು ಸಾಗಹಾಕಿದ್ದರು. ಅಷ್ಟರಲ್ಲಿಯೇ ಎರಡುನೂರು ಮೀಟರ್ ಆಳಕ್ಕೆ ಕೊರೆದರೂ ನೀರು ಸಿಗುವ ಲಕ್ಷಣಗಳಾವವೂ ತೋರಲಿಲ್ಲ. ಮುಂದೆ ಒಂದು ಅರ್ಧ ಗಂಟೆಯೊಳಗೆ ಆತ ಮರಳಿದಾಗ ಅಲ್ಲಿ ಯಾವ ಸುದ್ದಿಯೂ ಇಲ್ಲದೆ ಮುಖ ಒಣಗಿಸಿಕೊಂಡು ನಿಂತ. ಹಾಗೇ ಮುನ್ನೂರು ಫೂಟ ಆಳದವರೆಗೂ ಕೊರೆದರೂ ನೀರಿಲ್ಲದೇ ಎಲ್ಲರೂ ಕಂಗೆಟ್ಟು ಹೋದರು. ಬೋರ ಕೊರೆವವರು ‘ಏನ ಮಾಡೂದು ತಮ್ಮಾ ಯಾರ ಭೂಮಿ ಒಳಗ ಹೊಕ್ಕು ನೋಡಾಕ ಆಕೈತಿ? ನೀ ನಿನ್ನ ಪ್ರಯತ್ನ ಮಾಡಿ. ಅದಕ ಯಾರ ಏನ ಮಾಡೂದು? ಬಿಲ್ಲ ತುಗೊಂಡಿದ್ದಕ್ಕ ನಾವೂ ನಮ್ಮ ಕೆಲಸಾ ಮಾಡೀವಿ. ನಾವು ಬೋರ ಕೊರದ ಎಲ್ಲಾ ಕಡೆ ನೀರು ಹತ್ತೂದಿಲ್ಲಾ ಭಾಳ ಕಡೆ ಹಿಂಗ ಆಕೈತಿ. ನೀ ಚಿಂತಿ ಮಾಡಬ್ಯಾಡಾ ನಾವು ಆ ತೂತ ಮತ್ತ ಮುಚ್ಚಿ ಹೊಕ್ಕಿವಿಪಾ. ಅಷ್ಟಕ್ಕೂ ರೊಕ್ಕಾ ಸರಕಾರದ್ದ ಬಿಡ ಹಿಂಗ ಎಷ್ಟ ಕಡೆ ಹಾಳ ಆಕೈತಿ?’ ಎಂದೆಲ್ಲ ಸಮಾಧಾನದ ಮಾತನಾಡಿ ಮುನ್ನಡೆದಿದ್ದರು.

ಹೇಗೂ ಹೊಸ ಬೋರವೆಲ್ ಆಗಿ ತಮ್ಮ ನೀರಿನ ಸಮಸ್ಯೆ ದೂರಾಗುವುದು ಎಂಬ ನಂಬಿಕೆಯಲ್ಲಿ ಜನರು ಈಗಿರುವ ತಮ್ಮ ನೀರಿನ ಸಮಸ್ಯೆಯನ್ನು ಮರೆತು ಸುಮ್ಮನಿದ್ದರು. ಆದರೆ ಅಲ್ಲಿ ನೀರು ಬರದೇ ಹೋದಾಗ ಅವರ ಸಮಸ್ಯೆ ದ್ವಿಗುಣಗೊಂಡು ಉದ್ವಿಗ್ನರಾದರು. ಮರುದಿನವೇ ಮತ್ತೆ ಪಂಚಾಯತಿಗೆ ಮುತ್ತಿಗೆ ಹಾಕಿ ‘ಏನಾರ ಮಾಡ್ರಿ ನಮಗ ನೀರ ಕೊಡ್ರಿ’ ಎಂದು ಕೂಗಾಡತೊಡಗಿದರು. ‘ಅಲ್ರಿ ನಿಮ್ಮ ಸಮಂದ ನಾವು ಖರ್ಚ ಮಾಡಿ ಬೋರ ತಗಿಸಿ ಕೈ ಸುಟಗೊಂಡಿವಿ. ನೀರ ಹೊಂಡಲೀಕ ನಾವೇನ ಮಾಡೂಣ?’ ಎಂದಾಗ ‘ಅಯ್ಯ ತಮ್ಮಾ ಈಗ ಮುರದ ನಳಾನರ ರಿಪೇರಿ ಮಾಡ್ರಿ’ ಎಂದೆಲ್ಲಾ ಹೇಳುವಾಗಲೇ ರವಿ ಕಾಣಿಸಿಕೊಂಡು ‘ಬಂದ್ಯಾ ಬಾರಪಾ ನಾವು ಈಗ ಕುಡಿಯು ನೀರಿಗೆ ಏನ ಮಾಡೂದು ಹೇಳ್ರೆಪಾ. ಹ್ಯಾಂಗಾರ ಮಾಡಿ ನಳಾ ರಿಪೇರಿ ಮಾಡ್ರಿ’ ಎಂದು ಸೌಮ್ಯವಾಗಿಯೇ ಹೇಳಿ ಹೋದರು.

ಆದರೆ ಮುಂದೆ ಎರಡು ದಿನಗಳಲ್ಲಿಯೇ ನೀರಿನ ಗಲಭೆ ಶುರುವಾಗಿ ಹೆಂಗಸರೆಲ್ಲ ರವಿಯ ಮನೆಗೆ ಮುತ್ತಿಗೆ ಹಾಕಿದರು. ರವಿಯ ತಾಯಿ ಕೋಪಗೊಂಡು ಮೊದಲು ಮಗನನ್ನು ‘ಭಾಡ್ಯಾ ನಿನಗ ಬೇಕಾಗಿತ್ತನ ಇಂತಾ ಊರ ಉಸಾಬರಿ?’ ಎಂದು ಬೈದು ನಂತರ ಜಗಳಕ್ಕೆ ಬಂದ ಜನರನ್ನು ಚದುರಿಸಲು ‘ಯಾಕ? ಈ ವಾರ್ಡಿಗೆ ಇವಾ ಒಬ್ಬ ಮೆಂಬರ್ ಅದಾನು? ಉಳದಾರು ಉದ್ದ ಹುರಿತಾರಾ? ಕೇಳಹೋಗ್ರಿ’

‘ಅಯ್ಯ ಉಳದಾರು ಉದ್ದ ಹುರಿವಲ್ಲರು ನಿನ್ನ ಮಗಾ ಈಗ ಅಳ್ಳ ಹುರದ ನಮ್ಮ ವಾರ್ಡಿಗೆ ಇರೂ ರೊಕ್ಕಾ ಖರ್ಚಮಾಡ್ಯಾನಲ್ಲ? ಅವರನ್ನ ಕೇಳಾಕ ಹೋದ್ರ ಇವನ್ನ ಹೆಸರ ಹೇಳತಾರಾ’

‘ಅಲ್ಲಪಾ ತಮ್ಮಾ ಬೋರಿಗೆ ನೀರ ಬರಲೀಕ ಹ್ಯಾಂಗ ಅಂತ ಮೊದಲ ವಿಚಾರ ಮಾಡಬೇಕಿತ್ತು’

‘ಏ ಭಾಡ್ಯಾ ನಾವು ನಿನ್ನೇನ ಚೆಂದಕ ಆರಿಸಿ ತಂದೀವಿ? ನೀರಿನ ಸಮಸ್ಯೆ ಇಲ್ಲದಂಗ ಮಾಡತೀನಿ ಅಂದಮ್ಯಾಲೆನ ನಿನ್ನ ಆರಿಸಿ ತಂದೀವಿ’

ಹೀಗೆ ತಲೆಗೊಬ್ಬರು ತಮಗೆ ತಿಳಿದಂತೆ ಮಾತಾಡತೊಡಗಿದಾಗ, ಪಿತ್ತ ನೆತ್ತಿಗೇರಿದ ಆತನ ತಾಯಿ ‘ಅಲ್ರೆ ಹಿಂಗ ಮಾತಾಡಾಕ ತಿಳಿಯೂದಿಲ್ಲಾ? ನನ್ನ ಮಗಾ ಎಲ್ಲಾರ ಗೋಳ ತಪ್ಪಲಿ ಅಂತ ಬೋರ ಹೊಡಿಸಿದಾ....’ ಎಂದೆಲ್ಲ ಕೂಗಾಡತೊಡಗಿದಳು. ಒಂದು ಕಡೆಗೆ ಓಣಿಯ ಹೆಂಗಸರು, ಮತ್ತೊಂದು ಕಡೆ ತಾಯಿ. ಜೋರಾದ ವಾಗ್ವಾದ ಜಗಳವಾಗಿ ತಾರಕಕ್ಕೇರಿತು. ರವಿಗೆ ದಿಕ್ಕು ತೋಚದೇ ‘ಅಯ್ಯೋ ಸಾಕ ಬಿಡ್ರಿ ಇನ್ನ’ ಎಂದು ಜೋರಾಗಿ ಕಿರುಚಿ ಒಮ್ಮೆಲೇ ಎಚ್ಚರಗೊಂಡ.

ಬೆಳಿಗ್ಗೆಯಿಂದಲೂ ರಾತ್ರಿ ಕಂಡ ಕನಸು ಸತಾಯಿಸುತ್ತಲೇ ಇತ್ತು. ವಿರಾಮವಾದಾಗೆಲ್ಲ ಆ ಕುರಿತಾಗಿ ಯೋಚಿಸತೊಡಗಿದ. ಆ ಕನಸು ನಿಜವಾಗಿದ್ದಲ್ಲಿ? ಎಂದುಕೊಂಡು ಬೆಚ್ಚಿದ. ಅಕಸ್ಮಾತ್ ಹಾಗೇನಾದ್ರೂ ಆಗಿದ್ದಲ್ಲಿ ಎಂಥಹ ಗೋಳಾಟವಾಗುತ್ತಿತ್ತು? ವಾರ್ಡಿಗೆ ಇರುವ ಹಣವೂ ಖರ್ಚಾಗಿದ್ದಲ್ಲಿ ತಾನು ಎಲ್ಲಿಂದ ಹಣ ತರಬಹುದಿತ್ತು? ಮನೆಯ ಹಣ ಖರ್ಚು ಮಾಡಲು ಬಿಡುವರೆ? ಖರ್ಚು ಮಾಡದೇ ಜನರು ಸುಮ್ಮನಿರುವರೇ? ಬೇಡ ಇಂತಹ ಅಪಾಯ ತೆಗೆದುಕೊಳ್ಳುವುದೇ ಬೇಡವೆಂದುಕೊಂಡ.

** ** **

‘ಯಾಕಪಾ ತಮ್ಮಾ ಎಲ್ಲಿ ಐತಿ ನಿನ್ನ ಬೋರ ಮಶೀನು?’

‘ಇನ್ನ ಎಷ್ಟದಿನಾ ಅಂತ ಗೋಳಾಡೂಣು’ ‘ಅಲ್ಲಪಾ ಗೆದ್ದಮ್ಯಾಲೆ ನೀರಿನ ಸಮಸ್ಯೆ ದೂರ ಮಾಡತೀನಿ ಅಂತ ಹೇಳಿದ ಮಾತು ಎಲ್ಲೆ ಐತಿ?’ ಎಂದೆಲ್ಲ ಶುರುವಾದ ಗೊಣಗಾಟ ಮುಂದೆ ನಾಲ್ಕು ದಿನಗಳಲ್ಲಿ ಪಂಚಾಯತಿ ಜೊತೆಗೆ ರವಿಯ ಮನೆಗೂ ಮುತ್ತಿಗೆಹಾಕುವ ಮಟ್ಟಕ್ಕೆ ಬಂತು. ಉಳಿದ ಸದಸ್ಯರಂತೂ ‘ನೋಡಪಾ ನೀನ ಏನ ಮಾಡ್ತಿಯೋ. ನೀರಿನ ಆಶ್ವಾಸನೆ ಕೊಟ್ಟಾವ ನೀನ. ಮತ್ತ ಮೀಟಿಂಗನ್ಯಾಗೂ ಬೋರತಗಸ್ತೀನಿ ಅಂತ ಹೇಳಿ’ ಎಂದೆಲ್ಲ ಸಮಸ್ಯೆಯನ್ನು ಈತನ ಮೇಲೆ ಹೇರಿ ತಾವು ಜಾರಿಕೊಂಡರು.

ಕುಳಿತರೂ ನಿಂತರೂ ರವಿಗೆ ಅದೇ ನೀರಿನ ಸಮಸ್ಯೆ ಕಾಡಿ ತಲೆಚಿಟ್ಟುಹಿಡಿಸಿತು. ತಾನು ಯಾಕಾದರೂ ಆಯ್ಕೆಯಾದೆನೋ ಎನ್ನಿಸಿದ್ದಲ್ಲದೇ ಮನೆಯ ಸದಸ್ಯರೂ ಕೂಡ ಜನರಿಂದ ಬೈಗುಳ ಎದುರಿಸುವಂತಾದಾಗ ಊರನ್ನೇ ಬಿಟ್ಟು ಹೋಗಬೇಕೆನ್ನುವಷ್ಟು ಬೇಸರವಾಯಿತು. ಇಷ್ಟರಲ್ಲಾಗಲೇ ಮುರಿದ ನಳ ರಿಪೇರಿ, ಅದೂ ಇದು ಮಾಡುತ್ತಲೇ ಇದ್ದರೂ ಸಮಸ್ಯೆ ಬಗೆಹರಿದಿರಲಿಲ್ಲ.

ಆ ಓಣಿಯ ಕಾಳವ್ವ ಥೇಟ ಭದ್ರಕಾಳಿಯ ಅವತಾರವೇ ಸರಿ. ಆಕೆಗೆ ಅಂದು ನೀರು ಸಿಗದೇ ರವಿಯ ಮನೆಗೆ ಬಂದು ‘ಏ ರವ್ಯಾ, ಇದ ಕಡೀ ವಾರ್ನಿಂಗ್‌ ನೋಡಪಾ. ಇನ್ನ ನಾಕ ದಿನದಾಗ, ನೀ ಹ್ಯಾಂಗರ ಮಾಡ ನಮಗ ಸಾಕಾಗುವಂಗ ನೀರ ಸಿಕ್ಕರ ಸೈ. ಇರಲೀಕ ನಿನ್ನ ಮೆಂಬರಕಿಲಿಂದ ತಳಗ ಇಳಸೂದು ಹ್ಯಾಂಗ ಅಂತ ನನಗ ಗೊತ್ತ ಐತಿ’ ಎಂದು ಕೂಗಾಡಿ ಹೋದಾಗ, ರವಿ ಜೀವಂತ ಶವವಾದ. ಮತಿಗೆಟ್ಟವರಂತೆ ಮನೆಬಿಟ್ಟು ಹೊರನಡೆದ. ಸ್ವಲ್ಪದೂರ ಹೋಗುವುದರಲ್ಲಿ ತಿಪ್ಪೆಗುಂಡಿಯಲ್ಲಿ ಹುಗಿದುಹೋದ ಬಾವಿಯ ಅವಶೇಷ ‌ಕಂಡಾಗ, ‘ಜಗ್’ ಎಂದು ಸಾವಿರ ವೋಲ್ಟಿನ ಬೆಳಕುಬೀರಿದಂತಾಯಿತು. ಅದನ್ನು ದೇವಸ್ಥಾನವನ್ನು ಸುತ್ತುಹಾಕಿದಂತೆ ಸುತ್ತಿದ. ಹಿರಿಯರು ಹೇಳಿದ, ಆ ಹಿಂದಿನ ಬಾವಿಗಳ ಚಿತ್ರಣ ಕಣ್ಮುಂದೆ ಸುಳಿದಂತಾಗಿ ಮೈಮನಗಳಲ್ಲಿ ಅರಿಯದ ಉತ್ಸಾಹ ಹುಟ್ಟಿಕೊಂಡಿತು. ತನ್ನ ಸಮಸ್ಯೆಗೆ ಪರಿಹಾವೊಂದು ದೊರಕಿದ ಖುಷಿಯಲ್ಲಿಯೇ ತಡಮಾಡದೇ ಕಾರ್ಯಪ್ರವೃತ್ತನಾದ. ಕಾಳವ್ವನ ಗಡುವು ಮುಗಿಯುವುದರಲ್ಲಿ ಆ ಓಣಿಯ ಜನರು ಸಾಕುಬೇಕಾಗುವಷ್ಟು ನೀರಿನಲ್ಲಿ ಮಿಂದೆದ್ದು ಸಂತೃಪ್ತರಾಗಿ ರವಿಗೆ ‘ಜೈಹೋ’ ಎಂದು ಜೈಕಾರ ಹಾಕಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.