ADVERTISEMENT

ಕಥೆ: ಮೀಟರ್‌ ರೀಡರ್‌ ಮುಕುಂದನೂ ಪ್ರೇತಾತ್ಮ ಬಾಧೆಯೂ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2024, 0:25 IST
Last Updated 22 ಸೆಪ್ಟೆಂಬರ್ 2024, 0:25 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಅವನ ಹೆಸರು ಮುಕುಂದ. ಹತ್ತನೆಯ ತರಗತಿ ಪಾಸಾಗಿದ್ದಾನೆ. ಹತ್ತು ವರ್ಷಗಳಿಂದ ಮನೆಮನೆಗೆ ಹೋಗಿ ವಿದ್ಯುತ್‌ ಮೀಟರನ್ನು ಪರಿಶೀಲಿಸಿ ಖರ್ಚಾದ ವಿದ್ಯುತ್ತಿಗೆ ಬಿಲ್‌ ನೀಡಿ ಬರುವುದಷ್ಟು ಅವನ ಕಾಯಕ. ತಿಂಗಳಿಗೆ ಎರಡು ಸಾವಿರ ಮನೆಗಳಿಗೆ ಭೇಟಿ ನೀಡಬೇಕು. ಕಚ್ಚುವ ನಾಯಿಗಳೊಂದಿಗೆ ಸಳ ಹುಲಿಯೊಡನೆ ಹೋರಾಡಿದ ಹಾಗೆ ಸಮರ ಸಾರಿ ಅವುಗಳ ದಂತಾಘಾತದಿಂದ ಪಾರಾಗಬೇಕು. ʻಇದೇನು ಈ ಸಲ ಇಷ್ಟೊಂದು ಬಿಲ್ಲು? ನಾವು ಈ ತಿಂಗ್ಳಲ್ಲಿ ಒಂದಿನವೂ ಮನೇಲಿ ಸರಿಯಾಗಿ ಇರ‍್ಲೇ ಇಲ್ಲʼ ಎಂಬ ಮನೆಯೊಡತಿಯ ರೋಷವನ್ನು ತಣ್ಣಗೆ ಎದುರಿಸಿ, ʻನಾನೇನ್ಮಾಡ್ಲಿ, ಮೀಟರ್‌ ತೋರಿಸಿದಷ್ಟಕ್ಕೆ ಬಿಲ್‌ ಕೊಟ್ಟಿದೀನಿ. ಅನುಮಾನವಿದ್ರೆ ಮೀಟರ್‌ ಚೆಕ್‌ ಮಾಡಿಸ್ಕೊಳ್ಳಿʼ ಎಂದು ಸಮಜಾಯಿಷಿ ಕೊಟ್ಟು ಬರಬೇಕು. ಕೆಲವು ಕಡೆ ಹರದಾರಿ ದೂರ ಕಾಲ್ನಡಿಗೆಯಲ್ಲೂ ಹೋಗಬೇಕು. ತಿಂಗಳಿಡೀ ಶ್ರಮಪಟ್ಟರೆ ಸಿಗುವ ಹಣ ಬರೇ ಒಂಬತ್ತು ಸಾವಿರ. ಇದಕ್ಕಿಂತ ರಸ್ತೆ ಕೆಲಸಕ್ಕೋ ತೋಟದ ಕೆಲಸಕ್ಕೋ ಹೋದರೆ ಇಮ್ಮಡಿ ಹಣ ಗಳಿಸಬಹುದಿದ್ರೂ ಮುಕುಂದನ ದೃಷ್ಟಿಯಲ್ಲಿ ಇದು ಸರಕಾರಿ ಕೆಲಸ, ಇಜಾರು ಹಾಕಿಕೊಂಡರೆ ಸಿಗುವ ಗೌರವ ಜಾಸ್ತಿ, ಇವತ್ತಲ್ಲ ನಾಳೆ ಈ ಹುದ್ದೇನ ಸರಕಾರ ಪರ‍್ಮನೆಂಟ್‌ ಮಾಡ್ತದೆ, ಆಗ ಮುಪ್ಪಟ್ಟು ಸಂಬಳ ಬತ್ತದೆ, ಗ್ರಾಚ್ಯುಯಿಟಿ, ವಿಮೆ, ಮಣ್ಣು ಮಸಣಾಂತ ಕೈತುಂಬ ಹಣ ಸಿಗ್ತದೆ, ಪ್ರಮೋಷನ್‌ ಆಗಿ ವಿದ್ಯುತ್‌ ಇಲಾಖೆಯ ಕಚೇರಿಯೊಳಗೆ ದೊಡ್ಡ ಕುರ್ಚಿಯಲ್ಲಿ ಕುಳಿತು ತಿರುಗುವ ಫ್ಯಾನಿನ ತಂಗಾಳಿಯನ್ನು ಆಸ್ವಾದಿಸಬಹುದು ಎಂದು ದೂರಗಾಮಿ ಲೆಕ್ಕಾಚಾರ ಹಾಕಿಕೊಂಡಿದ್ದ.

ಆದರೆ ಇದೇ ಮೀಟರ್‌ ಬಿಲ್‌ ಕೊಡೋ ಉದ್ಯೋಗದಲ್ಲಿ ಮುಕುಂದನಿಗಿಂತಲೂ ಹತ್ತು ವರ್ಷ ಹೆಚ್ಚೇ ಸರ‍್ವೀಸ್‌ ಮಾಡಿದ್ದ ನರಸಿಂಹನ ಹತ್ರ ಇದೆಲ್ಲ ಹೇಳಿಕೊಂಡರೆ ನಗುವಿಗಿಂತ ಹೆಚ್ಚು ನೋವನ್ನೇ ಮುಖದಲ್ಲಿ ಬಿಂಬಿಸುವ ನರಸಿಂಹ, ʻಉದ್ಯೋಗ ಪರ‍್ಮನೆಂಟಾ? ಎಲ್ಲಾದ್ರೂ ಉಂಟಾ? ಮರ ಹುಟ್ಟಿ ಮರ ಸತ್ತಂಗೆ ನಮ್ಮ ಬದುಕು. ನಮಗೆ ಈ ಮನೆ ಸುತ್ತೋ ಕೆಲ್ಸ ಕೊಟ್ಟಿರೋದು ಸರಕಾರವೂ ಅಲ್ಲ, ವಿದ್ಯುತ್‌ ಇಲಾಖೆಯ ಮುಂಡೆಮಕ್ಕಳೂ ಅಲ್ಲ. ಯಾವುದೋ ಕಂಪೆನಿ ಗುತ್ತಿಗೆ ವಹಿಸಿಕೊಂಡಿರೋ ಕೆಲಸಕ್ಕೆ ನಮ್ಮನ್ನು ದುಡಿಸ್ಕೊಳ್ತಿದೆ. ಕುಳಿತಲ್ಲೇ ನಮಗೆ ಸಿಕ್ಕಿದಷ್ಟೇ ಹಣ ಆ ಕಂಪೆನಿಗೆ ಒಬ್ಬೊಬ್ಬ ಮೀಟರ್‌ ರೀಡಿಂಗ್‌ ಮಾಡುವವನಿಂದ ಸಿಗ್ತದೆ. ಪ್ರೊಮೋಷನ್‌ ಇಲ್ಲ. ದುಡಿಯೋಕ್ಕಾಗಲ್ಲ ಅಂದ್ರೆ ಪರಿಹಾರವೂ ಇಲ್ಲ. ಹಾಗಾಗಿ ಬೇರೆ ಕೆಲ್ಸ ಸಿಕ್ಕಿದ್ರೆ ಇಲ್ಲಿಂದ ಜಾರಿಕೊಳ್ಳುವುದೇ ಒಳ್ಳೆಯದುʼ ಎಂದಿದ್ದ ಅವನು.

ADVERTISEMENT

ನರಸಿಂಹನ ಮಾತನ್ನು ಮುಕುಂದ ಒಪ್ಪಲು ತಯಾರಿರಲಿಲ್ಲ. ಇವತ್ತಲ್ಲ ನಾಳೆ, ಈ ನೌಕರಿ ಪರ‍್ಮನೆಂಟ್‌ ಆಗೇ ಆಗ್ತದೆ ಎನ್ನುವ ವಿಶ್ವಾಸ ಅವನ ಮನದಲ್ಲಿ ತುಂಬಿದೆ. ಕಳೆದ ಸಲ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಗೆದ್ದಿದ್ದ ಮರಕಾಲಪ್ಪ ಭರವಸೆ ತುಂಬಿದ್ದ. ʻನನ್ನ ಜೀವ ಒಂದಿದ್ರೆ ನಿಮಗೆಲ್ರಿಗೂ ಪರ‍್ಮನೆಂಟ್‌ ಮಾಡಿಯೇ ಮಾಡ್ತೇನೆʼ ಎಂದವನು ಹತ್ತು ಸಲ ಇವರೆಲ್ಲ ಒಗ್ಗಟ್ಟಾಗಿ ತಮ್ಮ ಸಮಸ್ಯೆಗೆ ಪರಿಹಾರ ನೀಡುವಂತೆ ಕೋರಲು ಹೋದಾಗಲೂ, ʻಆಗೆಯೇ ಆಗ್ತದೆ. ಈ ವಿಷಯ ಸದನದಲ್ಲಿ ಮಾತಾಡ್ತೇನೆ. ಆದ್ರೆ ನೋಡಿ, ಈಗ ನಮ್ಮ ಪಕ್ಷದ ಸರಕಾರ ಇಲ್ಲ. ನಾವು ವಿರೋಧ ಪಕ್ಷದಲ್ಲಿ ಇದ್ದೇವೆ. ಬಹುಮತ ಅವರದೇ ಆಗಿದೆ. ನಮ್ಮ ಸರಕಾರ ಬರ‍್ತಿದ್ರೆ ಚಿಟಿಕೆ ಹೊಡೆಯೋದ್ರೊಳ್ಗೆ ಕೆಲಸ ಮುಗೀತಿತ್ತು. ನಾನು ಮಾಡೋ ಪ್ರಯತ್ನ ಮಾಡ್ತೀನಿ. ಆಗ್ಲಿಲ್ಲ ಅಂತಾದ್ರೆ ಮತ್ತೆ ಓಟು ಬರ‍್ತದಲ್ಲ, ಆಗ ನೀವೆಲ್ರೂ ಬಿಲ್‌ ರೀಡಿಂಗ್ ಮಾಡೋದಿಲ್ಲ ಅಂತ ಸ್ಟ್ರೈಕ್‌ ಮಾಡ್ಬೇಕು. ಚುನಾವಣೆ ಸಮಯ. ಸರಕಾರ ಬಗ್ಗಿ ನಿಮ್ಮ ಕೋರಿಕೆ ಈಡೇರಿಸ್ತದೆʼ ಎಂದು ಹೇಳಿಬಿಟ್ಟಿದ್ದ.

ಕಡೆಗೂ ಬಿಲ್‌ ರೀಡರ್‌ ಸಮಸ್ಯೆಗೆ ಸರಕಾರ ಕ್ಯಾರೇ ಅನ್ನದಿದ್ದಾಗ ಎಲ್ಲರೂ ಒಂದಾಗಿ ಬಿಲ್‌ ರೀಡಿಂಗ್‌ ಮಾಡೋದಿಲ್ಲ ಎಂದು ಮುಷ್ಕರ ಹೂಡಿದ್ದೂ ಆಯಿತು. ದಿನವೂ ಪತ್ರಿಕೆ ನೋಡುವುದು, ದೂರದರ್ಶನದಲ್ಲಿ ಸರಕಾರದ ಅಂದಿನ ಕಲಾಪ ವೀಕ್ಷಿಸಿ ತಮಗೆ ಪರ‍್ಮನೆಂಟ್‌ ಆಗ್ತದೆ ಎಂದು ನಿರೀಕ್ಷೆ ಮಾಡುತ್ತಲೇ ಇದ್ದ ಮುಕುಂದನಿಗೆ ತಮ್ಮ ರಾಜ್ಯವ್ಯಾಪಿ ಮುಷ್ಕರಕ್ಕೆ ಪತ್ರಿಕೆಗಳಾಗಲಿ, ಪ್ರಸಾರ ಮಾಧ್ಯಮಗಳಾಗಲಿ ದನಿಯೆತ್ತದಿರುವುದು ಕಂಡು ಕಸವಿಸಿಯಾಗಿತ್ತು. ಊರಿನಲ್ಲಿ ಹೋಗುವಾಗ ಮುಕುಂದನನ್ನು ಕಂಡು ಮನೆಗಳ ಜನ, ʻಈ ತಿಂಗ್ಳಲ್ಲಿ ನೀವು ನಮ್ಮಲ್ಲಿಗೆ ಬರ‍್ಲೇ ಇಲ್ಲ. ಕೆಲ್ಸ ಬಿಟ್ರಾ ಹೇಗೆ?ʼ ಕೇಳಿದ್ರು. ಕೆಲವರು, ʻನೀವು ಕೆಲ್ಸ ಕಳ್ಕೊಂಡ್ರಂತೆ. ಒಳ್ಳೆದೇ ಆಯಿತು. ನಮ್ಗೆಲ್ಲ ಬೇಕಾಬಿಟ್ಟಿ ಬಿಲ್‌ ಹಾಕಿದ್ರೆ ದೇವರು ಫಲ ಕೊಡದೆಇರ‍್ತಾನಾ?ʼ ಎಂದು ಹಂಗಿಸಿದ್ರು.

ತಿಂಗಳು ಕಳೆದರೂ ಮುಷ್ಕರಕ್ಕೆ ಯಾವ ಸ್ಪಂದನವೂ ಸಿಗಲಿಲ್ಲ. ತಿಂಗಳ ಕೊನೆಗೆ ಬರುತ್ತಿದ್ದ ವೇತನವೂ ಖಾತೆಗೆ ಬೀಳಲಿಲ್ಲ. ಬದಲು ಉದ್ಯೋಗದಾತ ಕಂಪೆನಿಯಿಂದ ಒಂದು ನೋಟೀಸ್‌ ಬಂತು. ʻನೀವು ನೌಕರಿಗೆ ಸೇರುವಾಗಲೇ ದಿನಗೂಲಿ ಎಂದು ಸ್ಪಷ್ಟಪಡಿಸಲಾಗಿತ್ತು. ಕರಾರು ಪತ್ರಕ್ಕೆ ಸಹಿ ಮಾಡುವಾಗ ವೇತನ ಏರಿಕೆ ಮತ್ತಿತರ ಯಾವುದೇ ಸವಲತ್ತಿಗೆ ಮುಷ್ಕರ ಹೂಡುವುದಿಲ್ಲ ಎಂಬುದನ್ನು ನೀವು ಒಪ್ಪಿಕೊಂಡಿದ್ದೀರಿ. ಮೂರು ದಿನಗಳ ಒಳಗೆ ಬೇಷರತ್ತಾಗಿ ನೌಕರಿಗೆ ಹಾಜರಾಗದೆ ಹೋದರೆ ನಿಮ್ಮನ್ನು ಉದ್ಯೋಗದಿಂದ ಕಿತ್ತುಹಾಕಿ ಹೊಸಬರನ್ನು ಆಯ್ಕೆ ಮಾಡಲಾಗುತ್ತದೆ, ನೆನಪಿರಲಿʼ ಎಂದು ಅದರಲ್ಲಿ ತಿಳಿಸಲಾಗಿತ್ತು.

ʻಕಂಪೆನಿಯ ಗೊಡ್ಡು ಬೆದರಿಕೆಗೆ ಮಣಿಯಬಾರದು. ನಾನಂತೂ ಉದ್ಯೋಗಕ್ಕೆ ಹಾಜರಾಗುವುದಿಲ್ಲ. ನ್ಯಾಯಾಲಯಕ್ಕೆ ಹೋದರೆ ನಮ್ಮ ಪರವಾಗಿಯೇ ತೀರ್ಪಾಗುತ್ತದೆʼ ಎಂದು ಉಳಿದವರಿಗೆ ಹುರಿದುಂಬಿಸಿದ ಮುಕುಂದ.
ʻಹೌದಪ್ಪ, ನನಗೆ ಶಾಲೆಗೆ ಹೋಗುವ ಇಬ್ಬರು ಮಕ್ಕಳಿದ್ದಾರೆ. ಹೆಂಡತಿಯ ಕಾಯಿಲೆಗೆ ದಿನನಿತ್ಯ ಔಷಧಿ ಬೇಕು. ವಯಸ್ಸು ಐವತ್ತಾಯಿತು. ಈ ನೌಕರಿ ಬಿಟ್ಟು ತೋಟದ ಕೆಲಸ ಮಾಡೋಣ ಅಂದ್ರೆ ದೇಹ ಕೇಳೋದಿಲ್ಲ. ಈಗ್ಲೇ ಒಂದು ತಿಂಗಳ ಸಂಬಳ ಕಳೆದುಕೊಂಡಾಗಿದೆ. ಇನ್ನೊಂದು ತಿಂಗಳು ಬರಿಗೈಯಲ್ಲೇ ಮನೆಗೆ ಹೋದಾರೆ ವಿಷ ಕೂಡ ಕುಡಿಯಲಾಗದೆ ಮಲಗಿದಲ್ಲೇ ಸಾಯಬೇಕಷ್ಟೇ. ನಿನಗಾದರೆ ಚಿಕ್ಕ ವಯಸ್ಸು, ಇನ್ನೂ ಮದುವೆಯಾಗಿಲ್ಲ. ಹೋರಾಡಿ ಗೆಲ್ಲುವ ಹುಮ್ಮಸ್ಸು ಇದೆ, ನನ್ನ ಹಾಗೆ ಅಲ್ಲʼ ಎಂದು ಹೇಳಿ ಮರುದಿನದಿಂದಲೇ ನೌಕರಿಗೆ ಹಾಜರಾಗುವ ನಿರ್ಧಾರ ಪ್ರಕಟಿಸಿದ ನರಸಿಂಹ. ಅವನ ಹಾಗೆಯೇ ಸಂಸಾರವಿರುವ ಇತರರೂ ಅದೇ ತೀರ್ಮಾನ ಮಾಡಿದಾಗ ಮುಕುಂದ ಒಬ್ಬಂಟಿಯಾಗಿ ಉಳಿದುಕೊಂಡ.

ಮನೆಗೆ ಕಾಲಿಡುವ ಹಾಗಿಲ್ಲ, ಮುಕುಂದನ ದಾರಿ ಕಾಯುತ್ತಿರುವ ಅವನ ಅವ್ವ, ʻಏನಾಯ್ತು ಪರ‍್ಮನೆಂಟ್‌ ಆಯ್ತಾ?ʼ ಒಂದೇ ಪ್ರಶ್ನೆ ಕೇಳ್ತಾಳೆ. ʻಇಲ್ಲ ಅವ್ವ, ಇನ್ನೂ ಏನೂ ಗೊತ್ತಾಗಿಲ್ಲʼ ದಿನವೂ ಮುಕುಂದ ಕೊಡುವ ಉತ್ತರ ಒಂದೇ. ʻಹಾಗಿದ್ರೆ ನಿನ್ನ ಮದುವೆ ಯಾವಾಗ್ಲೋ? ಇವತ್ತು ಕೂಡ ರಮಣಿ ಬಂದುಹೋಗಿದ್ಳು. ಅತ್ತೆ, ಮನೇಲಿ ಅಪ್ಪ ಬೇರೆ ಸಂಬಂಧ ನೋಡೋದ್ರಲ್ಲಿದ್ದಾರೆ. ನಂಗೆ ಮುಕುಂದ ಭಾವನ ಬಿಟ್ಟು ಬೇರೆ ಮದ್ವೆ ಅಂದ್ರೆ ಇಷ್ಟ ಇಲ್ಲ. ಪರ‍್ಮನೆಂಟ್‌ ಆಗದೋನಿಗೆ ಹುಡುಗಿ ಕೊಡೋದಿಲ್ಲ. ಅಟೆಂಡರ್‌ ಆದ್ರೂ ಸರಿ, ನೋಕ್ರಿ ಖಾಯಂ ಆಗರ‍್ಬೇಕು ಅಂತಾರೆ ಅಪ್ಪ. ಮೇಲಿನ ಆಫೀಸರಿಗೆ ದುಡ್‌ ಗಿಡ್‌ ಏನಾದ್ರೂ ಕೊಟ್ಟಾದ್ರೂ ನೋಕ್ರಿ ಪರ‍್ಮನೆಂಟ್‌ ಮಾಡಿಸ್ಕೋಬಹುದಲ್ಲ ಅಂತ ಭಾವಂಗೆ ಹೇಳಿ ಅಂತ ಹೇಳಿ ಹೋದ್ಳು ಕಣೋʼ ಅಂತ ಇವತ್ತು ಹೇಳಿದಳು.

ರಮಣಿ ಮುಕುಂದನ ಸೋದರ ಮಾವನ ಮಗಳು. ಬಾಲ್ಯದಿಂದಲೇ ಇಬ್ಬರೂ ಒಟ್ಟಾಗಿ ಓಡಿಯಾಡಿ ಅನ್ಯೋನ್ಯವಾಗಿದ್ದರಿಂದ ಮದುವೆ ಮಾಡಿಕೊಳ್ಳುವ ನಿರ್ಧಾರಕ್ಕೂ ಬಂದಿದ್ರು. ಮಾವ ಅರಣ್ಯ ಇಲಾಖೆಯಲ್ಲಿ ಉದ್ಯೋಗಿಯಾಗಿ ನಿವೃತ್ತರಾದವರು. ಅಸ್ಥಿರ ಉದ್ಯೋಗಿಗೆ ಹೆಣ್ಣು ಕೊಡಲು ಅವರಿಗೆ ಒಪ್ಪಿಗೆಯಿಲ್ಲ. ತಂದೆಯ ಆಶಯವನ್ನು ಮೀರಿ ಭಾವನ ಜತೆಗೆ ಬರಲು ರಮಣಿಯೂ ತಯಾರಿಲ್ಲ. ಆದರೆ ಉದ್ಯೋಗ ಖಾಯಮಾತಿಯಾಗುವ ಯಾವ ಲಕ್ಷಣವೂ ಗೋಚರಿಸುತ್ತಿಲ್ಲ. ನಿರಾಶೆಯಿಂದ ತಲೆ ತಗ್ಗಿಸಿ ಮುಕುಂದ, ʻಇಲ್ಲವ್ವ. ಅವಳಿಗೆ ಬೇರೆ ಅನುಕೂಲದ ಸಂಬಂಧ ಹುಡುಕಿ ಮದುವೆಯಾಗಲು ಹೇಳುವುದೇ ಒಳ್ಳೆಯದು. ನನ್ನ ಉದ್ಯೋಗ ನಂಬಿದ್ರೆ ಅವಳು ಮದ್ವೆಯಿಲ್ಲದೆ ಮುದುಕಿಯಾಗುತ್ತಾಳೆ ಅಷ್ಟೆʼ ಎನ್ನುತ್ತ ಜಿನುಗಿದ ಕಂಬನಿಯನ್ನು ತಾಯಿಗೆ ತಿಳಿಯದ ಹಾಗೆ ಒರೆಸಿಕೊಂಡ.
ಮಗನ ದುಃಖ ತಾಯಿಗೆ ಅರ್ಥವಾಗದಿರುತ್ತದೆಯೆ? ಅವ್ವ ಹೇಳಿದಳು, ʻನೋಡು ಮಗ, ನೇರಳಕಟ್ಟೇಲಿ ಒಬ್ರು ಒಳ್ಳೆ ಜೋಯಿಸರಿದ್ದಾರಂತೆ. ಅವರು ಪ್ರಶ್ನೆ ನೋಡಿ ಗ್ರಹಚಾರಕ್ಕೆ ಏನು ಕಾರಣ ಅಂತ ಖಚಿತವಾಗಿ ಹೇಳ್ತಾರಂತೆ. ಅವ್ರ ಹತ್ರ ಒಂದ್ಸಲ ಯಾಕೆ ಹೋಗ್ಬರ‍್ದು?ʼ

ʻಅದೆಲ್ಲ ಆಗ್ತದೋ ಅವ್ವ? ನನ್ಗೆ ಪರ‍್ಮನೆಂಟ್‌ ಆಗದಿರೋದಕ್ಕೂ ಗ್ರಾಚಾರಕ್ಕೂ ಏನ್‌ ಸಂಬಂಧ ಅಂತ ಮಾತಾಡ್ತಿದಿಯೋ ಅರ್ಥವಾಗೋದಿಲ್ಲ. ಅವ್ರು ತಾನೇ ಏನ್‌ ಮಾಡೋದಕ್ಕೆ ಸಾಧ್ಯ?ʼ ಹತಾಶ ಭಾವದಲ್ಲಿ ಕೇಳಿದ.
ʻನಿಂಗೆ ಗೊತ್ತಿಲ್ಲ ಕಣಪ್ಪ. ಅವ್ರೇನೂ ಚಿಲ್ರೆ ಜೋಯಿಸ್ರು ಅಲ್‌ ಕಣ ಮಗ. ಮುರಿದು ಹೋದ ಸಂಬಂಧ ಒಂದ್‌ ಮಾಡ್ತಾರಂತೆ. ಒಪ್ಪದ ಹುಡುಗಿ ಒಲಿದು ಹತ್ರ ಬರೋ ಹಂಗೆ ಮಾಡ್ತಾರಂತೆ. ನೌಕರಿ ಸಿಗೋ ಹಂಗೂ ಮಾಡ್ತಾರಂತೆ. ಒಂದಪ ಹೋಗಿ ಪ್ರಶ್ನೆ ಇಟ್ಟು ಪರಿಹಾರ ಮಾಡಿದಿ ಅಂದ್ರೆ ನೌಕ್ರೀನೂ ಖಾಯಮ್ಮಾಗುತ್ತೆ. ರಮಣೀನ ಮನೆ ತುಂಬ್ಕೊಳ್ಳೊದಕ್ಕೂ ಸಲೀಸಾಗುತ್ತೆʼ ಎಂದಳು ಅವ್ವ.

ಮೊದಮೊದಲು ಮುಕುಂದ ಅವ್ವನ ಮಾತಿಗೆ ಹ್ಞೂ ಅಂದಿರಲಿಲ್ಲ. ಅವ್ವನ ಕಣ್ಣ ನೀರು, ಉಪವಾಸ ಮುಷ್ಕರ, ಆತ್ಮಹತ್ಯೆಯ ಬೆದರಿಕೆ ಅವನನ್ನು ಮಣಿಸಿತು. ನೂರೋ ಇನ್ನೂರೋ ವೆಚ್ಚ ಮಾಡಿ ಬದುಕು ಸುಧಾರಿಸ್ತಾದಾದ್ರೆ ಯಾಕೆ ಒಲ್ಲೆ ಅನ್ಬೇಕು? ಒಂದು ಭಾನುವಾರ ರಜಾ ಇತ್ತು. ನೇರಳಕಟ್ಟೆ ಜೋಯಿಸರ ಮನೆ ಯಾವ್ದು ಅಂತ ವಿಚಾರಿಸಿಕೊಂಡು ಹೋದ. ಪ್ರಶ್ನೆ ಕೇಳಲು ಬಂದವರು ತುಂಬ ಜನ ಇದ್ದರು. ಅವರ ಸಾಲಿನಲ್ಲಿ ತಾನೂ ಸೇರಿಕೊಂಡ. ತನ್ನ ಸರದಿ ಬಂದಾಗ ಜೋಯಿಸರ ಮುಂದೆ ಕುಳಿತು ರಾಶಿ ಚಕ್ರದಲ್ಲಿ ಹತ್ತರ ನೋಟು ಇಟ್ಟ. ಕಣ್ಣು ಕೆಕ್ಕರಿಸಿ ನೋಡಿದರು ಜೋಯಿಸರು. ʻಹತ್ತು ರೂಪಾಯಿಗೆ ಪ್ರಶ್ನೆ ಇಡುವ ಯುಗ ಮುಗಿದುಹೋಯಿತು. ಐನೂರು ರೂಪಾಯಿಗಿಂತ ಕಡಿಮೆಗೆ ಪ್ರಶ್ನೆ ಇಡುವ ಪದ್ಧತಿ ಇಲ್ಲʼ ಎಂದರು ಖಡಕ್ಕಾಗಿ. ಬ್ಯಾಂಕ್‌ ಸಾಲದ ಬಡ್ಡಿ ಕಟ್ಟಲಿಕ್ಕೆ ಅಂತ ಜೋಪಾನ ಮಾಡಿದ ಐನೂರರ ನೋಟು ಇತ್ತು. ʻಸರಿʼ ಎಂದು ಅದನ್ನೇ ಅಲ್ಲಿಗೆ ಇಟ್ಟ.
ʻಯಾವ ಪ್ರಶ್ನೆ ಕೇಳಬೇಕಿತ್ತು?ʼ ಜೋಯಿಸರು ಮುಖ ನೋಡಿದರು.
ʻಉದ್ಯೋಗ ಖಾಯಮಾಗಿಲ್ಲ, ಮದ್ವೆ ಆಗಿಲ್ಲ. ದೋಷ ಏನು ಅಂತ ತಿಳೀಬೇಕಿತ್ತುʼ ಹೇಳಿದ ಮುಕುಂದ.
ವಿಚಿತ್ರ ಜೋಯಿಸರು. ಎಲ್ಲರ ಹಾಗೆ ಕವಡೆ ಬಳಸಿ ಪ್ರಶ್ನೆ ಹೇಳುವುದಲ್ಲ. ಕೆಂಪಕ್ಕಿಯ ಕಾಳುಗಳನ್ನು ಕಲಸಿ ಕಲಸಿ ಒಂದು ಹಿಡಿ ತೆಗೆದು ಪ್ರತ್ಯೇಕವಾಗಿಟ್ಟರು. ಒಂದೊಂದಾಗಿ ಲೆಕ್ಕ ಮಾಡಿ, ಹನ್ನೆರಡರ ಸಂಖ್ಯೆಯಲ್ಲಿ ವಿಭಾಗಿಸಿದರು. ಉಳಿದ ಶೇಷವನ್ನು ಮೇಷ, ವೃಷಭ ಎಂದು ಲೆಕ್ಕ ಹಾಕಿ ಏನೋ ಪೊಟ್ಟು ಶ್ಲೋಕ ಹೇಳಿದರು. ʻಲಗ್ನಾಧಿಪತಿ ಶನಿ. ಎಂಟರಲ್ಲಿ ಮಾಂದಿಯಿದ್ದಾನೆ. ನಿಮ್ಮ ಮನೆಯಲ್ಲಿ ಆರು ತಿಂಗಳಿನಿಂದೀಚೆಗೆ ಮೂರು ಮರಣಗಳು ಸಂಭವಿಸಿವೆಯೇ?ʼ ಕೇಳಿದರು.
ಮುಕುಂದ ಯೋಚಿಸಿದ. ʻಹ್ಞಾ, ಆರು ತಿಂಗಳ ಹಿಂದೆ ಅಪ್ಪ ಆಕಸ್ಮಿಕ ತೀರಿಕೊಂಡರು. ಆಮೇಲೆ ಒಂದು ಕೋಳಿ, ಒಂದು ನಾಯಿ ಸತ್ತದ್ದು ಬಿಟ್ಟರೆ ಮನುಷ್ಯರಿಗೇನೂ ಆಗಿಲ್ಲʼ ಎಂದ.
ʻರಾತ್ರೆ ಹೊತ್ತಿನಲ್ಲಿ ಅದೂ ಅಮಾವಾಸ್ಯೆಯ ಸಮೀಪ ಮನೆಯ ಸುತ್ತಲೂ ಯಾರೋ ನಡೆದಾಡಿದಂತೆ ಅನುಭವವಾಗುತ್ತಿದೆಯಾ?ʼ
ʻನನಗೆ ಗೊತ್ತಾಗಿಲ್ಲ. ಆದರೆ ಅವ್ವ ಹಾಗೆಂದು ಹೇಳಿದ್ರು. ಕತ್ತಲಲ್ಲಿ ಯಾರೋ ಆಚೀಚೆ ಹೋಗ್ತಾ ಇದಾರೆ ಅಂತʼ ಮುಕುಂದ ಹೇಳಿದ.
ಜೋಯಿಸರ ಮುಖದಲ್ಲಿ ಕಿರುನಗೆ ತೇಲಿತು. ʻಅದು ಪ್ರೇತ ಸಂಚಾರʼ ಎಂದರು.
ʻಪ್ರೇತವೆ?ʼ ಮೆಟ್ಟಿ ಬಿದ್ದ ಮುಕುಂದ ಕೇಳಿದ, ʻಯಾರದು ಪ್ರೇತ?ʼ
ʻನೀನು ಗರುಡ ಪುರಾಣ ಓದಿದರೆ ಎಲ್ಲ ಸಂಗತಿ ಗೊತ್ತಾಗುತ್ತದೆ. ಪ್ರೇತ ಅಂದರೆ ನಿಂತಲ್ಲಿ ನಿಲ್ಲದೆ ಚಲಿಸುವ ಜೀವಾತ್ಮ ಎಂದರ್ಥ. ಸರಿಯಾದ ಸದ್ಗತಿ ಕ್ರಮಗಳನ್ನು ಮಾಡಿದರೆ ಸತ್ತವರು ಪಿತೃಗಳಾಗುತ್ತಾರೆ. ಅದರಲ್ಲಿ ಲೋಪವಾದರೆ ಪ್ರೇತಗಳಾಗಿ ಕಾಟ ಕೊಡುತ್ತಾರೆ. ಇಲ್ಲಿ ಕಾಣುವ ಪ್ರಕಾರ ನಿನ್ನ ಅಪ್ಪ ಪ್ರೇತವಾಗಿದ್ದಾನೆ. ಅವನಿಗಿಂತ ಹಿಂದೆ ಸತ್ತಿರುವ ಮೂವತ್ತೈದು ಕುಟುಂಬಸ್ಥರಿಗೂ ಮೋಕ್ಷ ಸಿಕ್ಕಿಲ್ಲ. ಎಲ್ಲರೂ ರಾತ್ರೆ ನಿನ್ನ ಮನೆಯ ಬಳಿಗೆ ಬರುತ್ತಾರೆ. ನಾಯಿಯೋ ಬೆಕ್ಕೋ ಸಿಕ್ಕಿದ್ದನ್ನು ಹಿಡಿದು ರಕ್ತ ಕುಡಿಯುತ್ತಾರೆʼ ಜೋಯಿಸರು ವಿವರಿಸಿದರು.
ʻಅಂದರೆ ನನಗೆ ನೌಕರಿ ಖಾಯಮಾತಿಯಾಗದಿರುವುದು, ಮದುವೆಗೆ ವಿಘ್ನ ತಂದಿರುವುದು ಅವರೇ ಇರಬಹುದಾ?ʼ ಜೋಯಿಸರು ಹೇಳಬೇಕಾದುದನ್ನು ಸಂದೇಹದ ರೂಪದಲ್ಲಿ ಮುಕುಂದ ಮಂಡಿಸಿದ.
ʻಅನುಮಾನವೇ ಇಲ್ಲ. ಪ್ರೇತ ಮೋಕ್ಷವಾಗದೆ ಹೋದರೆ ಜೀವಕ್ಕೂ ಅಪಾಯ ಇದೆ. ನೌಕರಿ ಖಾಯಮ್ಮಾಯಿತು ಅನ್ನುವಾಗ ತಡೆಯುತ್ತಿರುವುದು ಪ್ರೇತಗಳೇʼ ಜೋಯಿಸರು ಕಣ್ಣಿಗೆ ಕಂಡಂತೆ ಹೇಳಿದರು.
ʻಮೋಕ್ಷವಾಗಿಲ್ಲವೆ? ಅಪ್ಪಯ್ಯನ ಉತ್ತರಕ್ರಿಯೆ ಭೂಕೈಲಾಸ ಅನಿಸಿದ ಉಪ್ಪಿನಂಗಡಿಯಲ್ಲಿ ಮಾಡಿ ಸಂಗಮ ಸ್ಥಳದಲ್ಲಿ ಅಸ್ಥಿ ವಿಸರ್ಜನೆ ಮಾಡಿದ್ದೇನೆ. ಮತ್ಯಾಕೆ ಮೋಕ್ಷವಾಗಿಲ್ಲ?ʼ ಕೇಳಿದ ಮುಕುಂದ.
ʻನೀನು ವಿಧಿಪ್ರಕಾರ ಮಾಡಿರಬಹುದು ಕಣಯ್ಯ. ಆದರೆ ಹಿಂದಿನ ತಲೆಮಾರಿನ ಯಾರೋ ಒಬ್ಬರ ಉತ್ತರಕ್ರಿಯೆ ವಿಧಿಪ್ರಕಾರ ಆಗಿರದೆ ಹೋಗಿರಬಹುದು. ಆನಂತರ ಪ್ರೇತವಾಗಿಯೇ ಉಳಿದ ಆ ವ್ಯಕ್ತಿ ಯಾರಿಗೂ ಮೋಕ್ಷವಾಗಲು ಬಿಟ್ಟಿರುವುದಿಲ್ಲ. ಈಗ ಎಲ್ಲರನ್ನೂ ಕರೆದು ಬೆಳ್ಳಿಯ ಮಹಾವಿಷ್ಣು ಪ್ರತಿಮೆಗೆ ಆಹ್ವಾನಿಸಿ, ತಿಲಹೋಮ ಮಾಡಿ ಉಪ್ಪಿನಂಗಡಿಗೆ ಹೋಗಿ ಪಿಂಡಪ್ರದಾನ ಮಾಡಿ ಈ ಪ್ರತಿಮೆಗಳನ್ನು ಸಂಗಮದಲ್ಲಿ ವಿಸರ್ಜಿಸಬೇಕುʼ ಎಂದರು ಜೋಯಿಸರು.
ʻಹೀಗೆ ಪರಿಹಾರ ಮಾಡಿದರೆ ಕಷ್ಟಗಳು ತೀರಬಹುದಾ?ʼ ಮುಕುಂದ ಬೆವತುಬಿಟ್ಟಿದ್ದ.
ʻಖಂಡಿತ. ಯೋಗ್ಯ ಮಂತ್ರವಾದಿಗಳಿಂದ ಸುದರ್ಶನ ಹೋಮ ಮಾಡಿಸಿ ಪ್ರೇತಗಳನ್ನು ಪ್ರತಿಮೆಗೆ ಆಹ್ವಾನಿಸಬೇಕು. ಕೆಲವು ಪ್ರೇತಗಳು ಸುಲಭದಲ್ಲಿ ಬರಲು ಒಪ್ಪುವುದಿಲ್ಲ. ಮೊಂಡು ಹಿಡಿಯುತ್ತವೆ. ಆಗ ಬೇರೆ ಬೇರೆ ಪರಿಹಾರ ವಿಧಿಗಳನ್ನು ಮಾಡಿ ಸೆರೆ ಹಿಡಿಯಬೇಕು. ತುಂಬ ಕೆಲಸವಿದೆ. ಅಷ್ಟೇ ಹಣ ಬೇಕಾಗುತ್ತದೆ. ಪ್ರೇತಗಳು ಬಂದಿವೆಯೋ ಇಲ್ಲವೋ ತಿಳಿಯಲು ನಾನು ಅಲ್ಲಿಯೇ ಇದ್ದು ರಾಶಿ ಇಟ್ಟು ನೋಡಬೇಕಾಗುತ್ತದೆʼ ಜೋಯಿಸರು ವಿವರಿಸಿದರು.
ʻನಾನು ತುಂಬ ಸೋತಿದ್ದೇನೆ. ಎಷ್ಟು ಹಣ ಬೇಕಾಗಬಹುದು?ʼ ಜೋಯಿಸರ ಮುಖ ನೋಡಿದ ಮುಕುಂದ.
ʻಅದು ಪ್ರೇತಗಳ ತೀವ್ರತೆ ನೋಡಿ ನಿರ್ಧರಿಸಬೇಕಾಗುತ್ತದೆ. ಕೆಲಸ ಹೆಚ್ಚಾದಷ್ಟೂ ಹಣ ಹೆಚ್ಚು ಬೇಕಾಗುತ್ತದೆ. ಕುಂಡ ಭಟ್ಟ ಎಂಬ ಮಂತ್ರವಾದಿಯಿದ್ದಾರೆ. ಅವರೇ ಎಲ್ಲ ಸಾಮಗ್ರಿ ತಂದು ವೈದಿಕರನ್ನೂ ಕರೆತಂದು ಅಚ್ಚುಕಟ್ಟಾಗಿ ಕೆಲಸ ಮಾಡಿಕೊಡುತ್ತಾರೆ. ಒಂದರಿಂದ ಒಂದೂವರೆ ಲಕ್ಷ ಅವರಿಗೆ ಕೊಡಬೇಕಾದೀತು. ನಾನು ರಾಶಿ ಇಟ್ಟದ್ದಕ್ಕೆ ಹದಿನೈದು ಸಾವಿರ. ಸಾಮಗ್ರಿಗಳು, ಊಟೋಪಚಾರ, ಶಾಮಿಯಾನ ಎಲ್ಲ ಸೇರಿದರೆ ಎರಡು ಲಕ್ಷ ಬೇಕಾದೀತುʼ ಜೋಯಿಸರು ಅಂದಾಜು ಲೆಕ್ಕ ಕೊಟ್ಟರು.

ಮುಕುಂದನಿಗೆ ನಾಲಿಗೆ ಪಸೆ ಒಣಗಿತು. ತಂದೆಯ ಉತ್ತರಕ್ರಿಯೆಗೆ ಮಾಡಿದ ಸಾಲವೇ ಪೂರ್ಣ ಮುಗಿದಿಲ್ಲ. ಇನ್ನು ಇದಕ್ಕೆ ಎರಡು ಲಕ್ಷ! ಆದರೆ ದೋಷ ಪರಿಹಾರವಾಗಿ ನೌಕರಿ ಖಾಯಮ್ಮಾದರೆ ತಿಂಗಳಿಗೆ ಕಡಿಮೆ ಎಂದರೂ ನಲುವತ್ತು ಸಾವಿರ ಬರಬಹುದು. ಐದು ತಿಂಗಳಲ್ಲಿ ಇಷ್ಟು ಮೊತ್ತ ಕೈಸೇರುತ್ತದೆ. ರಮಣಿಯ ಜೊತೆಗೆ ಮದುವೆಯೂ ಆಗಬಹುದು. ಹೀಗೆ ಲೆಕ್ಕ ಹಾಕಿದ. ʻಯಾವುದಕ್ಕೂ ಒಂದ್ಮಾತು ಅವ್ವನ್ನ ಕೇಳಿ ನಾಳೆ ಬಂದು ಹೇಳ್ತೀನಿʼ ಎಂದು ಮನೆಗೆ ಬಂದ.
ಅವ್ವನಿಗಂತೂ ಆಕಾಶ ಕೈಯಲ್ಲಿ ಹಿಡಿದಷ್ಟೇ ಸಂಭ್ರಮ. ʻಮೊದ್ಲೇ ಹೇಳಿದ್ನಲ್ಲ ಮಗ? ಏನೋ ದೋಷ ಇದ್ದೇ ಹೀಗಾಗಿದೆ, ಮದ್ವೆಯಾಗಿಲ್ಲ, ನೌಕರಿ ಖಾಯಮ್ಮಾಗಿಲ್ಲ ಅಂತ ನನ್ನ ಮನಸು ಹೇಳ್ತಾ ಇತ್ತು. ಈಗ ಖಚಿತವಾಯ್ತಲ್ಲ. ಯೋಚ್ನೆ ಮಾಡೋದಕ್ಕೇನಿದೆ? ಪ್ರೇತಗಳಿಗೆ ಮೋಕ್ಷ ಮಾಡ್ಸಿಬಿಡುʼ ಎಂದು ಒಪ್ಪಿಗೆ ಸೂಚಿಸಿದಳು.
ʻಹುಡುಗಾಟಿಕೆಯ ಮಾತೇನವ್ವ ಇದು? ಖರ್ಚಿಗೆ ಎರಡು ಲಕ್ಷ ಬೇಕು ಅಂದಿದಾರೆ ಜೋಯಿಸ್ರು. ಹಣ ಏನು ಗುಡ್ಡ ಕಿತ್ತು ತೆಗಿಯೋಕಾಗುತ್ತ?ʼ ಕೇಳಿದ ಮುಕುಂದ.
ʻಎಣ್ಣೆ ಬಂದಾಗ ಕಣ್ಣು ಮುಚ್ಕೋತಾರೇನಯ್ಯ? ಗ್ರಾಚಾರ ಮುಗ್ದು ಒಳ್ಳೆ ಕಾಲ ಬತ್ತದೆ ಅಂತಾದ್ರೆ ಹೆಂಗಾದ್ರೂ ಹಣ ಮಾಡ್ಬೇಕು. ಪಕ್ಕದ್ಮನೆ ಹುಸೇನ್‌ ಸಾಬಿ ಅಳಿಯನಿಗೆ ಉಡುಗೊರೆ ಕೊಡೋದಕ್ಕೆ ಒಂದು ಮನೆ ಬೇಕಂತೆ. ಎರಡು ಲಕ್ಷ ಕೊಡ್ತೇನೆ ನಿಮ್‌ ಮನೆ ಮರ‍್ತೀರಾ ಅಂತ ಕೇಳಿದ್ದೆ. ಇಲ್ಲ ಅಂತಿದ್ದೆ. ಈಗ ಅವ್ನಿಗೇ ಮನೆ ಮಾರಿದ್ರಾಯ್ತು. ಸೊಲ್ಪ ದಿನ ತಾನೆ ಬಾಡಿಗೆ ಮನೇಲಿರೋಣ. ನೌಕ್ರಿ ಕಾಯಮ್ಮಾಯಿತು ಅಂದ್ರೆ ಸಿಟೀಲಿ ಒಳ್ಳೆ ಮನೆ ತಗಂಡ್ರಾಯ್ತು. ರಮಣಿ ಕೂಡ ಓದಿದ ಹುಡುಗಿ. ಈ ಹಳ್ಳಿ ಕೊಂಪೇಲಿ ಇರೋದ್‌ ಚೆನ್ನಾಗಿರೋಲ್ಲ, ಸಿಟಿಗೆ ಹೋಗೋಣ ಅಂತ ಹೇಳೇ ಹೇಳ್ತಾಳೆʼ ಅವ್ವ ಮರ‍್ಗೋಪಾಯ ಸೂಚಿಸಿದಳು.

ಹುಸೇನ್‌ ಸಾಬಿ ಮನೆ ಮಾರಾಟದ ಕರಾರು ಪತ್ರ ಬರೆಸಿಕೊಂಡು ಹಣ ಕೊಟ್ಟುಬಿಟ್ಟ. ನಿಗದಿತ ದಿನದಂದು ಕುಂಡ ಭಟ್ಟರು ಸಹಚರರೊಂದಿಗೆ ಬಂದು ಯಾಗ ಮಾಡಿದರು. ಕುಂಕುಮದ ನೀರಿನಲ್ಲಿ ಕೈ ಅದ್ದಿ ಬೊಗಸೆಯಲ್ಲಿ ಅರಳು ತುಂಬಿಸಿಕೊಂಡು ಮಧ್ಯೆ ಒಂದು ಕರ್ಪೂರದ ಬಿಲ್ಲೆ ಉರಿಸಿಟ್ಟು ಒಂದೊಂದಾಗಿ ಪ್ರೇತಗಳನ್ನು ಹೆಸರು ಹಿಡಿದು ಕರೆದರು. ಜೋಯಿಸರು ರಾಶಿಪ್ರಶ್ನೆಗೆ ಕುಳಿತರು. ಅಂತೂ ಮೂವತ್ತೈದು ಪ್ರೇತಗಳನ್ನು ಕರೆದು ಬೆಳ್ಳಿ ಪ್ರತಿಮೆಗೆ ಸೇರಿಸುವಾಗ ಮಧ್ಯರಾತ್ರೆಯಾಗಿತ್ತು. ಅನ್ನದಿಂದ ತಯಾರಿಸಿದ ಘೋರರೂಪದ ಮುಖಕ್ಕೆ ಮಂಗಳಾರತಿ, ಆರಾಧನೆ ನಡೆಯಿತು. ಪ್ರೇತಗಳಿರುವ ಪ್ರತಿಮೆಗಳನ್ನು ಬಟ್ಟೆಯಲ್ಲಿ ಬಿಗಿಯಾಗಿ ಕಟ್ಟಿ ಮುಕುಂದನ ಕೈಗೆ ಕೊಟ್ಟರು. ʻನಾಳೆ ಬೆಳಗ್ಗೆ ಕ್ಷೇತ್ರಕ್ಕೆ ಹೋಗಿ ಸಂಗಮದಲ್ಲಿ ಹಾಕಿಬಿಡಿ. ಪಿಂಡ ಪ್ರದಾನ ಮಾಡಿ ಬನ್ನಿ. ಕೆಳಗಿಡಬೇಡಿ. ಮಕ್ಕಳು ಮುಟ್ಟದಂತೆ ನೋಡಿಕೊಳ್ಳಿʼ ಎಂದು ಎಚ್ಚರಿಸಿ ಹೊರಟುಹೋದರು.

ಪ್ರೇತ ಪರಿಹಾರದ ಎಲ್ಲ ವಿಧಿಗಳನ್ನೂ ಶ್ರದ್ಧೆಯಿಂದ ಮುಗಿಸಿದ ಮುಕುಂದ. ಒಂದೆರಡು ದಿನದಲ್ಲಿ ತಲೆಮಾರಿನಿಂದ ವಾಸವಾಗಿದ್ದ ಹಳೆಯ ಮನೆಯ ಜೊತೆಗಿದ್ದ ಭಾವನಾತ್ಮಕ ಅನುಬಂಧವನ್ನು ಅಂತ್ಯಗೊಳಿಸಿ ಮನೆಯನ್ನು ಸಾಬಿಗೆ ಒಪ್ಪಿಸಿ ಅವ್ವನ ಜೊತೆಗೆ ಹೊರಗೆಬಂದ. ಬಾಡಿಗೆಗೆ ಒಂದು ಹರಕು ಮನೆಯನ್ನು ಗೊತ್ತುಪಡಿಸಿಕೊಂಡ.
ದಿನಗಳು ಉರುಳುತ್ತಿದ್ದವು. ಒಂದು ದಿನ ಮೀಟರ್‌ ರೀಡಿಂಗ್‌ ಮುಗಿಸಿ ಮುಕುಂದ ಮನೆಗೆ ಬಂದ. ʻಅವ್ವ, ನಿನಗೊಂದು ವಿಷಯ ಗೊತ್ತುಂಟ? ನಮ್ಮ ಪ್ರೇತ ಮೋಕ್ಷ ಮಾಡಿಸಲು ಬಂದಿದ್ರಲ್ಲ ಕುಂಡ ಭಟ್ಟರು...ʼ ಅರ್ಧದಲ್ಲೇ ಅವನ ಮಾತನ್ನು ಮೊಟಕು ಮಾಡಿ ಅವ್ವ ಕೇಳಿದಳು, ʻಏನಾಯ್ತು ಸತ್ಹೋದ್ರ?ʼ
ʻಇಲ್ಲವ್ವ, ಅವ್ರಿಗೇನೂ ಆಗಿಲ್ಲ. ಅವ್ರ ಒಬ್ನೇ ಮಗ ನಲುವತ್ತು ವಯಸ್ಸು ದಾಟಿದ್ರೂ ಮದ್ವೆಯಾಗಿಲ್ಲ ಅಂತ ಚೀಟಿ ಬರೆದಿಟ್ಟು ಕುತ್ತಿಗೆಗೆ ಹಗ್ಗ ತಗಂಡು ಸತ್ಹೋದ್ನಂತೆʼ ದುಃಖದ ಸಂಗತಿ ಹೇಳಿದ ಮುಕುಂದ.
ಕುಂಡಭಟ್ಟರ ಪುತ್ರ ವಿಯೋಗದ ಬಗ್ಗೆ ಅವ್ವ ತುಂಬ ದುಃಖಿಸಿದಳು. ʻತುಂಬ ಕಲಿತವರು. ನಮಗಾಗಿ ರಾತ್ರೆಯಿಡೀ ಮಂತ್ರವಾದ ಮಾಡಿ ಕಷ್ಟಪಟ್ಟರು. ಅವ್ರಿಗೂ ಪ್ರೇತಬಾಧೆ ಇತ್ತೋ ಏನೊ! ಊರವರ ಪ್ರೇತ ಬಾಧೆ ಕಳೆಯುವಾಗ ತನ್ನ ದೋಷ ಗಮನಕ್ಕೆ ಬಂದಿರಲಿಕ್ಕಿಲ್ಲ. ಅದಿರಲಿ, ನಿನ್ನ ನೌಕ್ರಿ ಖಾಯಮಾತಿಯ ಪತ್ರ ಏನಾದರೂ ಬಂತೇನಪ್ಪ?ʼ ಕೇಳಿದಳು.
ʻಇನ್ನೆಲ್ಲಿಯ ಖಾಯಮಾತಿ ಅವ್ವ? ನಾಳೆಯಿಂದ ಕೆಲಸ ಇಲ್ಲ. ಹೊಸ ಕಂಪೆನಿಯವರು ಗುತ್ತಿಗೆ ವಹಿಸಿಕೊಂಡು ಮೀಟರ್‌ ರೀಡಿಂಗ್‌ ಮಾಡೋದಕ್ಕೆ ಬೇರೆಯದೇ ಜನ ಕರೆಸಿದ್ದಾರಂತೆ. ನಮ್ಮನ್ನೆಲ್ಲ ಕೆಲಸದಿಂದ ಕೈಬಿಟ್ಟಿದ್ದಾರೆʼ ಮುಕುಂದನಿಗೆ ಮಾತಿನ ಮಧ್ಯೆ ಅಳುವೇ ಬಂತು.
ʻಅಯ್ಯೋ ಹೀಗಾಯ್ತ? ರಮಣಿ ನಿನ್ನನ್ನೇ ಕಾದಿದ್ದಾಳಲ್ಲ, ಅವ್ಳಿಗೆ ಏನೂಂತ ಹೇಳಲೋ?ʼ ಅವ್ವ ದುಗುಡದಿಂದ ಕೇಳಿದಳು.
ʻನೀನು ಏನೂ ಹೇಳಬೇಕಾಗಿಲ್ಲ ಅವ್ವ. ಅವಳಿಗೆ ಬೇರೆ ಕಡೆ ಒಳ್ಳೆ ಶ್ರೀಮಂತರ ಸಂಬಂಧ ನೋಡಿ ಮಾವ ಮದುವೆ ನಿಶ್ಚಯ ಮಾಡಿ ಲಗ್ನ ಪತ್ರಿಕೆ ಕಳುಹಿಸಿದ್ದಾರೆ. ಹೋಗಿ ಊಟ ಮಾಡಿ ಬರುವಿಯಂತೆ. ನಾನೀಗ ನನಗೆ ಗ್ರಹಚಾರ ಪರಿಹಾರವಾಗಿ ಭಾಗ್ಯೋದಯವಾಗುತ್ತೆ ಅಂತ ಭವಿಷ್ಯ ಹೇಳಿದ್ರಲ್ಲ. ಆ ಜೋಯಿಸರು ಹೇಗಿದಾರೆ, ಆರಾಮವಾಗಿದಾರೆಯೆ ಅಂತ ನೋಡಿ ಬರ‍್ತೇನೆʼ ಎನ್ನುತ್ತ ಅಂಗಳಕ್ಕಿಳಿದ ಮುಕುಂದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.