ADVERTISEMENT

ಜ್ಯೋತಿ ಅವರ ಕಥೆ: ಇರಾವಂತ ಮತ್ತು ಬರ್ಬರೀಕರ ಹರಟೆ

ಡಾ.ಜ್ಯೋತಿ
Published 18 ಫೆಬ್ರುವರಿ 2023, 19:30 IST
Last Updated 18 ಫೆಬ್ರುವರಿ 2023, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕುರುಕ್ಷೇತ್ರ ಯುದ್ಧದ ಹದಿನೆಂಟನೇ ದಿನದ ರಾತ್ರಿ. ಮಧ್ಯರಾತ್ರಿಯ ಕಡುಕತ್ತಲಲ್ಲಿ ನರಿಗಳ ಊಳಿಡುವ ಸದ್ದಿನ ನಡುವೆ, ಆರುತ್ತಿರುವ ಕೊಳ್ಳಿ ಬೆಳಕಿನಲ್ಲಿ, ಇರಾವಂತ ಮತ್ತು ಬರ್ಬರೀಕರ ರುಂಡಗಳು ಎದುರು ಬದಿರಾಗಿ ಸಂಭಾಷಿಸುತ್ತಿವೆ. ಕೃಷ್ಣನ ನಿರ್ಗಮನದ ನಂತರ ಇರಾವಂತ, ಬರ್ಬರೀಕನಲ್ಲಿ ಪಿಸುಗುಟ್ಟಿದ:

‘ನೀನೆ ಹೇಳು ಬರ್ಬರೀಕ, ಇವರಿಗೆ ಏನಾದರೂ ಮಾನ ಮರ್ಯಾದೆ ಇದೆಯಾ ಭೂಮಿಯ ಮೇಲೆ ಇವರಿಗೆ ಅಧಿಕಾರ ನಡೆಸುವ ಹಕ್ಕಿದೆಯಂತೆ. ವಂಶ ಪಾರಂಪರ್ಯವಾಗಿ ಪಟ್ಟ ತಮಗೆ ಸಲ್ಲಬೇಕಾದುದು ಎನ್ನುವ ವ್ಯಾಜ್ಯಕ್ಕೆ ಕಿತ್ತಾಡಿಕೊಂಡ ಈ ದಾಯಾದಿಗಳು ಯುದ್ದ ಮಾಡಿಭೂಮಾಲೀಕತ್ವವನ್ನು ನಿರ್ಧರಿಸಬೇಕೆಂದುಕೊಂಡರು. ಅದಕ್ಕಾಗಿ, ಇಲ್ಲಿ ಬೃಹತ್ ಮಾರಣಹೋಮ ಸೃಷ್ಟಿಸಲು ಜಗತ್ತಿನ ಸೇನೆಗಳನ್ನು ಕುರುಕ್ಷೇತ್ರಕ್ಕೆ ಕರೆಸಿಕೊಂಡರು. ಹದಿನೆಂಟು ದಿನಗಳ ಸೆಣಸಾಟದ ನಂತರ ಯುದ್ಧಭೂಮಿಯಲ್ಲಿ ಉಳಿದಿದ್ದು ಲಕ್ಷಗಟ್ಟಲೆ ಮನುಷ್ಯರ, ಕುದುರೆಗಳ, ಆನೆಗಳ ಕೊಳೆಯುತ್ತಿರುವ ಹೆಣಗಳ ರಾಶಿ. ಅದರಲ್ಲಿ, ಕೃಷ್ಣನ ಕೃಪಾಕಟಾಕ್ಷದಿಂದ ಬದುಕುಳಿದ ಪಂಚ ಪಾಂಡವರು, ಈಗ ಹೆಣಗಳ ಅಡಿಪಾಯದ ಮೇಲೆ ಗದ್ದುಗೆ ಏರುವ ಸಿದ್ಧತೆ ನಡೆಸುತ್ತಿದ್ದಾರೆ. ತಮ್ಮ ತೋಳ್ಬಲ ಸರಿಸಾಟಿಯಾಗದ್ದು ಎಂದು ಜಗತ್ತಿಗೆ ತೋರಿಸಿಕೊಳ್ಳುವ ಸಲುವಾಗಿ, ನಿರ್ದಾಕ್ಷಿಣ್ಯವಾಗಿ ಅಸಲಿ ಶಕ್ತಿವಂತರಾದ ನಮ್ಮಿಬ್ಬರ ತಲೆ ಕಡಿದು ಬಲಿ ತೆಗೆದುಕೊಂಡರು. ಈಗ ನೋಡು, ಯಾವುದೇ ನಾಚಿಕೆಯಿಲ್ಲದೆ ನಮ್ಮಲ್ಲಿಗೆ ಬಂದು, ‘ಯುದ್ಧದಲ್ಲಿ ಯಾವ ಯೋಧನ ಪರಾಕ್ರಮ ಅಮೋಘವಾಗಿತ್ತು?’ ಎನ್ನುವ ಯುದ್ಧೋತ್ತರ ವಿಶ್ಲೇಷಣೆ ಕೇಳುತ್ತಿದ್ದಾರೆ. ಇವರ ಅಹಂಕಾರ ನೋಡಿದರೆ ನಗು ಬರುತ್ತದೆ. ಇವರಿಗೂ ಗೊತ್ತಿತ್ತು ತಾನೆ, ಒಂದು ವೇಳೆ ನಮ್ಮ ರುಂಡ ಮುಂಡ ಜೊತೆಯಾಗಿದ್ದಿದ್ದರೆ, ಈ ಮಹಾಯುದ್ಧವನ್ನು ಒಂದೇ ದಿನದಲ್ಲಿ ಮುಗಿಸಿ ಬಿಡುತ್ತಿದ್ದೆವು. ನಮ್ಮ ಹಳ್ಳಿಗಾಡಿನ ತೋಳ್ಬಲದ ಮುಂದೆ, ಈ ಪಾಂಡವ–ಕೌರವರ ತರಬೇತಿ ಹೊಂದಿದ ಕೌಶಲ ಯಾವ ಲೆಕ್ಕವೂ ಅಲ್ಲ. ಅದಕ್ಕಾಗಿಯೇ ಅವರು ನಮ್ಮನ್ನು ಮೂಕಪ್ರೇಕ್ಷಕರನ್ನಾಗಿಸಿದರು. ಬಾರ್ಬರಿಕ...ಯಾಕೆ ಈ ಮೌನ? ನಾನೊಬ್ಬನೇ ಒಟಗುಟ್ಟುತ್ತಿದ್ದೇನೆ. ನಿನಗೇನೂ ಅನ್ನಿಸುತ್ತಿಲ್ಲವೇ?’

ಬರ್ಬರೀಕ ಅಭ್ಯಾಸ ಬಲದಂತೆ ದೀರ್ಘವಾಗಿ ಉಸಿರೆಳೆದುಕೊಳ್ಳುವ ಪ್ರಯತ್ನ ಮಾಡಿದ. ಉಸಿರು ಗಂಟಲಲ್ಲಿ ಸಿಕ್ಕಿಹಾಕಿಕೊಂಡಿತು. ಅವನಿಗೆ ಏನೂ ಉತ್ತರಿಸಲಾಗಲಿಲ್ಲ. ಯುದ್ಧಭೂಮಿಗೆ ಅವನ ಕಣ್ಣಿಂದ ಒಂದು ತೊಟ್ಟು ನೀರು ಬಿತ್ತಷ್ಟೆ. ಇರಾವಂತ ಒಂದು ಕ್ಷಣ ಮೌನವಾದ. ನಂತರ ಅವನೇ ಮುಂದುವರಿಸಿದ.

ADVERTISEMENT

‘ಮೊದಮೊದಲು ನೀನು ವಟಗುಟ್ಟುತ್ತಿದ್ದೆ. ನಾನು ಮೌನವಾಗಿ ಕೇಳಿಸಿಕೊಳ್ಳುತ್ತಿದ್ದೆ. ಎಲ್ಲಾ ಮುಗಿದ ಮೇಲೆ ಈಗ ಯಾಕೆ ಕಣ್ಣೀರು? ಯುದ್ಧ ನೋಡಲೆಂದು ಉತ್ಸಾಹದಿಂದ ಬಂದ ಅತ್ಯಂತ ಬಲಿಷ್ಠ ಸೇನಾನಿ ಬರ್ಬರೀಕ, ಇಂದು ಕೇವಲ ‘ಮಾತಾಡುವ ರುಂಡ’ವಾಗಿ ಬದಲಾಗಿ ಪ್ರೇಕ್ಷಕನಾಗಬೇಕಾಯಿತೆಂದೇ? ಅಥವಾ ನಿನ್ನ ಅಮ್ಮನ ನೆನಪಾಗುತ್ತಿದೆಯೇ? ನನ್ನದೊಂದು ಪ್ರಶ್ನೆ ನಿನಗೆ, ಅಮ್ಮನಲ್ಲಿ ನೀನು ಏನೆಂದು ಹೇಳಿಕೊಂಡು ಇಲ್ಲಿಗೆ ಬಂದೆ? ಯುದ್ಧದಲ್ಲಿ ನನ್ನಂತೆ ಯೋಧನಾಗಿ ಪಾಲ್ಗೊಳ್ಳಲು ಬಂದೆಯೋ ಅಥವಾ ಕೇವಲ ನೋಡಲೆಂದೋ? ನಿನ್ನ ಅಪ್ಪನೂ ಕೂಡ ಇದೇ ಯುದ್ಧಭೂಮಿಯಲ್ಲಿ ಹೇಳ ಹೆಸರಿಲ್ಲದೆ ಸತ್ತನಲ್ಲವೇ? ಈಗ, ಅಮ್ಮನಿಗೆ ನಿನ್ನ ಪರಿಸ್ಥಿತಿ ತಿಳಿದಿದೆಯೋ?’

ಬರ್ಬರೀಕ ಅಂತೂ ಬಾಯಿ ತೆರೆದ.

‘ಹೂಂ. ಅಮ್ಮನಿಗೆ ಹೇಳಿಯೇ ಬಂದಿದ್ದೆ-‘ಅಮ್ಮ, ಯುದ್ಧದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿದರೆ ಪಾಲ್ಗೊಳ್ಳುತ್ತೇನೆ. ಜಗತ್ತು ಹಿಂದೆಂದೂ ಕಾಣದ ಮಹಾಯುದ್ಧವಿದು. ನೋಡಿಯಾದರೂ ಕಣ್ತುಂಬಿಕೊಳ್ಳುತ್ತೇನೆ. ಸಾಹಸಿ ಯೋಧನಿಗೆ ಯುದ್ಧ ನೋಡುವುದಕ್ಕಿಂತ, ಸಾಧ್ಯವಾದರೆ, ಭಾಗವಹಿಸುವುದಕ್ಕಿಂತ ಹೆಚ್ಚಿನ ಆನಂದ ಇನ್ನೇನಿದೆ?’ ಅಮ್ಮ ನನ್ನ ಆಸೆಗೆ ತಣ್ಣೀರೆರಚಲಿಲ್ಲ. ಆದರೆ, ಒಂದು ಹಿತನುಡಿ ಹೇಳಿದಳು- ‘ನಿನಗೆ ಯಾರ ಪಕ್ಷ ಬಲಹೀನವೆಂದು ಕಾಣಿಸುತ್ತದೋ, ಅವರ ಕಡೆ ಸೇರಿಕೊಂಡು ಯುದ್ಧ ಮಾಡು. ಒಬ್ಬ ವೀರಯೋಧನಿಗೆ ಅದೇ ಗೌರವ ಮತ್ತು ಆತ್ಮತೃಪ್ತಿ. ನಾನು ಹಾಗೆಯೇ ಮಾಡಬೇಕೆಂದುಕೊಂಡು ಇಲ್ಲಿಗೆ ಬಂದೆ. ಆದರೆ, ಇಲ್ಲಿ ನಡೆದಿದ್ದೇ ಬೇರೆ. ಕೃಷ್ಣ, ನನ್ನೆಲ್ಲಾ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿದ’.

‘ಅಂದರೆ, ನಿನಗೂ ಕೂಡ ಕೃಷ್ಣನಿಂದ ಮೋಸವಾಯಿತೇ? ಅವನು ನಿನಗೇನು ಮಾಡಿದ?’ ಇರಾವಂತ ಸಹಾನುಭೂತಿ ಸೂಚಿಸಿದ. ಬರ್ಬರೀಕ ಆಕಾಶದತ್ತ ಒಮ್ಮೆ ಕಣ್ಣು ಹಾಯಿಸಿ ಮುಂದುವರಿಸಿದ:

‘ಎಲ್ಲಾ ಮುಗಿದ ಮೇಲೆ ಹೇಳಿಕೊಂಡು ಏನು ಪ್ರಯೋಜನ? ನಾವು ಎಷ್ಟೆಂದರೂ ಪೂರ್ವೋತ್ತರ ದೇಶದವರು. ಎಂದಿಗೂ ಹೊರಗಿನವರಾಗಿಯೇ ಉಳಿದುಬಿಡುತ್ತೇವೆ. ನಾವು, ಮನುಷ್ಯ ಭೂಮಿಯ ಕೇವಲ ಒಂದು ಭಾಗವೆಂದು ತಿಳಿದು, ಅದರಂತೆ ಬಾಳುತ್ತೇವೆ. ಅದರ ಮೇಲಿನ ಅಧಿಕಾರಕ್ಕಾಗಿ ಕಿತ್ತಾಡುವುದಿಲ್ಲ. ಆದರೆ, ನಾವು ಅಂಚಿನ ಆಚೆಯವರು, ಅನಾಗರಿಕರು, ಈ ನಾಡಿನ ಮಂದಿ ಮಾತ್ರ, ಪರಮ ಸುಸಂಸ್ಕೃತರು, ನಾಗರಿಕರು. ಈ ಮುಖ್ಯವಾಹಿನಿಯ ಮಂದಿ ನಮ್ಮನೆಂದೂ ತನ್ನವರನ್ನಾಗಿಸಿಕೊಳ್ಳುವುದಿಲ್ಲ. ಹೋಗಲಿ ಬಿಡು. ನನ್ನ ಬಾಲ್ಯದ ಕಥೆಯೊಂದನ್ನು ಹೇಳುತ್ತೇನೆ. ನಮ್ಮೂರು ನಾಗಲೋಕದಲ್ಲಿ ನನ್ನ ಚಿಕ್ಕ ವಯಸ್ಸಿನಲ್ಲಿ, ಅಜ್ಜ ವಾಸುಕಿಯ ಮಾರ್ಗದರ್ಶನದಲ್ಲಿ ನಾನು ಮೂರು ಕೌಶಲಗಳನ್ನು ಸಿದ್ಧಿಸಿಕೊಂಡಿದ್ದೆ. ಅವುಗಳ ಬಲದಿಂದ ನಾನು ಜಗತ್ತನ್ನೇ ಕ್ಷಣಮಾತ್ರದಲ್ಲಿ ಜಯಿಸುವ ಸಾಮರ್ಥ್ಯ ಪಡೆದಿದ್ದೆ. ಅವುಗಳ ವೈಶಿಷ್ಟ್ಯವೇನೆಂದರೆ; ಮೊದಲ ಬಾಣ ಹೂಡಿದಾಗ ನಾನು ನಾಶ ಮಾಡಬೇಕಾದ ಗುರಿಯನ್ನು ಗುರುತು ಹಾಕಿಕೊಳ್ಳಬಹುದಿತ್ತು. ಎರಡನೆಯದರಲ್ಲಿ, ನಾನು ನಾಶದಿಂದ ಹೊರಗಿಡಬೇಕಾದವುಗಳನ್ನು ಗುರುತು ಮಾಡಬಹುದಿತ್ತು. ಹಾಗು ಮೂರನೆಯ ಬಾಣದಲ್ಲಿ ನಾನು ನಾಶಮಾಡಲೆಂದು ಗುರುತು ಮಾಡಿದ ಗುರಿಯನ್ನು ನಿರ್ನಾಮ ಮಾಡುವುದು ಸಾಧ್ಯವಿತ್ತು. ಈ ಕೌಶಲದೊಂದಿಗೆ ಕುರುಕ್ಷೇತ್ರಕ್ಕೆ ಕಾಲಿಟ್ಟವನಿಗೆ, ಕೌರವರ ಹನ್ನೊಂದು ಅಕ್ಷೋಹಿಣಿ ಸೈನ್ಯದ ಮುಂದೆ, ಪಾಂಡವರ ಬಳಿ ಇದ್ದ ಕೇವಲ ಏಳು ಅಕ್ಷೋಹಿಣಿ ಸೈನ್ಯದಿಂದ ಅವರು ಸಹಜವಾಗಿ ದುರ್ಬಲರಾಗಿ ಕಂಡರು. ಜೊತೆಗೆ, ಅವರು ರಕ್ತ ಸಂಬಂಧಿಕರು ಕೂಡ. ಹಾಗಾಗಿ, ಕೃತಜ್ಞತೆಯಿಂದ, ಪ್ರೀತಿಯಿಂದ ಬರಮಾಡಿಕೊಂಡು ಜೊತೆಗೆ ಸೇರಿಸಿಕೊಳ್ಳುತ್ತಾರೆ ಎಂದುಕೊಂಡಿದ್ದೆ. ಆದರೆ, ನನ್ನ ನಿರೀಕ್ಷೆ ಹುಸಿಯಾಗಿತ್ತು. ಅವರಿಗೆ ಸುಲಭವಾಗಿ ಯುದ್ಧ ಜಯಿಸುವುದಕ್ಕಿಂತ, ತಮ್ಮ ಪರಾಕ್ರಮದಿಂದ ದಾಯಾದಿಗಳನ್ನು ಸೋಲಿಸಿದ್ದೇವೆ ಎಂದು ಜಗತ್ತಿಗೆ ತೋರಿಸುವುದೇ ಮುಖ್ಯವಾಗಿತ್ತು. ಅದಕ್ಕಾಗಿ, ಗೆಲುವಿನ ಶ್ರೇಯಸ್ಸು ಎಲ್ಲಿ ನನಗೆ ಸೇರಿ ಬಿಡುತ್ತದೋ ಎಂದು ನನ್ನನ್ನು ಅವರೊಂದಿಗೆ ಸೇರಿಸಿಕೊಳ್ಳಲಿಲ್ಲ. ಆದರೆ, ನಾನು ಎಲ್ಲಿಯಾದರೂ ಕೌರವರ ಪಕ್ಷ ಸೇರಿ ಬಿಡುತ್ತೇನೋ ಎನ್ನುವ ಭಯವಿತ್ತು. ಅದಕ್ಕಾಗಿ, ಅವರ ಆಪತ್ಬಾಂಧವನಾದ ಕೃಷ್ಣನನ್ನು ಮುಂದೆ ಛೂ ಬಿಟ್ಟು ನನ್ನ ಮುಗಿಸಿ ಬಿಡಲು ಯೋಜನೆ ರೂಪಿಸಿದರು’.

ಇರಾವಂತ ತಲೆಯಾಡಿಸಿ ಹೇಳಿದ, ‘ನಿನ್ನ ಮಾತು ನಿಜ. ಈ ಕೃಷ್ಣ ಇಲ್ಲದಿದ್ದರೆ ಪಾಂಡವರನ್ನು ಗಂಭೀರವಾಗಿ ಪರಿಗಣಿಸುವವರಾರು?’

ಬರ್ಬರೀಕ ಆ ದಿನವನ್ನು ನೆನಪಿಸಿಕೊಂಡ.

‘ಇರಾವಂತ, ನಾನು ಹಸ್ತಿನಾಪುರಕ್ಕೆ ಯುದ್ಧದ ಹಿಂದಿನ ದಿನವೇ ತಲುಪಿದ್ದೆ. ಆ ರಾತ್ರಿ ಕೃಷ್ಣ ಎಲ್ಲಾ ಯೋಧರನ್ನು ಉದ್ದೇಶಿಸಿ, ಯುದ್ಧದಲ್ಲಿ ಪಾಲಿಸಬೇಕಾದ ನಿಯಮ ಮತ್ತು ನಿಬಂಧನೆಗಳನ್ನು ವಿವರಿಸಿದ. ಕೊನೆಯದಾಗಿ, ಎಲ್ಲರಲ್ಲಿ ಒಂದು ಕುತೂಹಲಕಾರಿ ಪ್ರಶ್ನೆ ಕೇಳಿದ- ‘ನಿಮ್ಮ ಪ್ರಕಾರ, ಈ ಯುದ್ಧವನ್ನು ಎಷ್ಟು ದಿನಗಳಲ್ಲಿ ಗೆಲ್ಲಬಹುದು?’ ಅಲ್ಲಿದ್ದ ಅತಿರಥ ಮಹಾರಥರಾದ ಭೀಷ್ಮ, ದ್ರೋಣ, ಕರ್ಣ, ಅರ್ಜುನ ಎಲ್ಲರೂ ತಮ್ಮ ವೈಯಕ್ತಿಕ ಬಲಾಬಲದ ಆಧಾರದ ಮೇಲೆ ಅಂದಾಜು ಇಪ್ಪತ್ತರಿಂದ ಮೂವತ್ತು ದಿನಗಳವರೆಗೆ ತಗಲಬಹುದೆಂದು ಹೇಳಿದರು. ಆಗ, ಬಹಳ ಹಿಂದಿನ ಸಾಲಿನ ಮೂಲೆಯಲ್ಲಿ ಕುಳಿತಿದ್ದ ನಾನು ಕೈ ಎತ್ತಿದೆ. ಇದನ್ನು ಗಮನಿಸಿದ ಕೃಷ್ಣ ಕೇಳಿದ- ‘ಯಾರಯ್ಯ ನೀನು? ನಿನ್ನ ಪ್ರಕಾರ ಈ ಯುದ್ಧ ಗೆಲ್ಲಲು ಎಷ್ಟು ದಿನ ಬೇಕಾಗಬಹುದು?’ ನಾನು ತಕ್ಷಣ ಎದ್ದು ನಿಂತು ಹೇಳಿದೆ- ‘ನನಗೆ ಕೇವಲ ಒಂದು ದಿನ ಸಾಕು’. ಎಲ್ಲರೂ ನನ್ನತ್ತ ನೋಡಿ ಜೋರಾಗಿ ನಕ್ಕು ಗೇಲಿ ಮಾಡಿದರು. ಕೃಷ್ಣ ಮಾತ್ರ ಮೌನವಾದ. ಎಲ್ಲರೂ ತಂತಮ್ಮ ಬಿಡಾರ ಸೇರಿದರು."

ಬರ್ಬರೀಕ ಒಂದು ಕ್ಷಣ ಆ ದಿನದ ನೆನಪುಗಳಲ್ಲಿ ಕಳೆದುಹೋಗಿ ಮಾತು ಮರೆತ. ಇರಾವಂತ ಎಚ್ಚರಿಸಿದಾಗ, ತನ್ನ ಕಥೆ ಮುಂದುವರಿಸಿದ:

‘ಮುಂಜಾನೆ, ನಾನು ಕಣ್ಣು ಬಿಡುವಾಗ ಕೃಷ್ಣ ನನ್ನೆದುರು ಪ್ರತ್ಯಕ್ಷನಾಗಿದ್ದ. ಬಹುಶಃ, ಅವನಿಗೆ ರಾತ್ರಿ ನಿದ್ರೆ ಬಂದಿರಲಿಲ್ಲವೆನಿಸುತ್ತದೆ. ಸೂತ್ರದಾರನಿಗೆ, ತನ್ನ ಸೂತ್ರ ಕೈತಪ್ಪಿದಂತೆ ಅನ್ನಿಸಿರಬೇಕು. ಮೆಲುದನಿಯಲ್ಲಿ ಕೇಳಿದ- ‘ನೀನು ಯಾವ ಧೈರ್ಯದಲ್ಲಿ ಹೇಳಿದೆ, ಯುದ್ಧ ಒಂದೇ ದಿನದಲ್ಲಿ ಗೆಲ್ಲಬಹುದೆಂದು?’ ನಾನು ನನ್ನ ಮೂರು ಕೌಶಲಗಳ ಕುರಿತು ಅವನಿಗೆ ವಿವರಿಸಿದೆ. ಅದಕ್ಕೆ ಅವನೆಂದ- ‘ನಾನು ಹೇಗೆ ನಂಬಲಿ, ನನ್ನೆದುರು ಪ್ರಾತ್ಯಕ್ಷಿತವಾಗಿ ತೋರಿಸು’. ನಾನು ಅಲ್ಲಿಯೇ ಪಕ್ಕದಲ್ಲಿದ್ದ ಆಲದ ಮರದತ್ತ ಅವನನ್ನು ಕರೆದುಕೊಂಡು ಹೋದೆ. ಒಂದು ಕ್ಷಣ ಕಣ್ಮುಚ್ಚಿ ಪ್ರಾರ್ಥಿಸಿ, ಮೊದಲ ಬಾಣದಿಂದ ಆ ಮರದಿಂದ ಉದುರಿಸಬೇಕಾದ ಎಲ್ಲಾ ಎಲೆಗಳನ್ನು ಗುರುತು ಮಾಡಿಕೊಂಡೆ. ಎರಡನೆಯ ಬಾಣದಿಂದ, ಉದುರಿಸಬಾರದ ಎಲೆಗಳನ್ನು ಗುರುತು ಮಾಡಿಕೊಂಡೆ. ಮೂರನೆಯ ಬಾಣದಿಂದ ಈಗಾಗಲೇ ಉದುರಿಸಬೇಕೆಂದು ಗುರುತು ಮಾಡಿದ್ದ ಎಲೆಗಳನ್ನು ಧರೆಗೆ ಉರುಳಿಸಿದೆ. ಆದರೆ, ಆ ಮೂರನೆಯ ಬಾಣ ಕೃಷ್ಣನ ಕಾಲಿನ ಸುತ್ತಲೂ ಸುಳಿದಾಡತೊಡಗಿತ್ತು. ಏನಾಗಿತ್ತೆಂದರೆ, ಜಾಣ ಕೃಷ್ಣ ಒಂದು ಎಲೆಯನ್ನು ಕಿತ್ತು ಚಾಣಾಕ್ಷತನದಿಂದ ತನ್ನ ಕಾಲಿನಡಿಯಲ್ಲಿ ಅಡಗಿಸಿದ್ದ. ಅವನು ಕಾಲೆತ್ತಿದಾಗ, ನನ್ನ ಬಾಣ ಅದನ್ನು ಗುರುತಿಸಿತು. ಒಟ್ಟಿನಲ್ಲಿ, ನನ್ನ ಕೌಶಲ ಕೃಷ್ಣನನ್ನು ಅವಕ್ಕಾಗಿಸಿತು. ಅವನಿಗೆ, ‘ಯುದ್ಧದ ನಿರ್ದೇಶಕ ನಾನು, ಈ ಹುಡುಗ ನನ್ನ ಯೋಜನೆಯನ್ನು ಹಾಳುಗೆಡವುತ್ತಿದ್ದಾನಲ್ಲ’ ಎಂದು ಅನ್ನಿಸಿರಬೇಕು. ಒಂದು ವೇಳೆ ಈ ಹುಡುಗ ಯುದ್ಧದ ಮುಂಚೂಣಿಯಲ್ಲಿದ್ದರೆ, ಎರಡೂ ಕಡೆಯವರು ಸಂಪೂರ್ಣ ನಾಶವಾಗಿ, ಇಚ್ಚಾಮರಣಿ ಭೀಷ್ಮ ಮಾತ್ರ ಬದುಕಿ ಉಳಿಯುತ್ತಾನೆ, ಎಂದು ಯೋಚಿಸಿ ಕೃಷ್ಣ ನನ್ನ ತಲೆದಂಡದ ಯೋಜನೆ ರೂಪಿಸಿದ. ಆದರೆ, ನಾನ್ಯಾಕೆ ಅವನ ಮಾತಿನಂತೆ ನಡೆದುಕೊಂಡೆ ಎನ್ನುವುದೇ ನನಗಿನ್ನೂ ಉತ್ತರ ಸಿಗದ ಪ್ರಶ್ನೆ’.

ಬರ್ಬರೀಕ ಪುನಃ ಯೋಚನೆಗೆ ಸಿಲುಕಿ ಕಳೆದುಹೋದ. ಇರಾವಂತ ಕೂಡ ಸ್ವವಿಮರ್ಶೆಯಲ್ಲಿ ತೊಡಗಿದ. ಹತ್ತಿರದಲ್ಲಿಯೇ ನರಿಗಳ ಸದ್ದು ಬೊಬ್ಬಿರಿಯುವಂತೆ ಕೇಳಿಸತೊಡಗಿತು. ಎಚ್ಚೆತ್ತ ಬರ್ಬರೀಕನಿಗೆ ತನ್ನ ಕಥೆಗೊಂದು ಪೂರ್ಣವಿರಾಮ ಹಾಕಬೇಕೆನಿಸಿ ಮಾತು ಮುಂದುವರಿಸಿದ:

‘ಕೃಷ್ಣ ಬಹಳ ಪ್ರೀತಿಯಿಂದ ನನ್ನ ಕೈಹಿಡಿದು ತನ್ನ ಡೇರೆಗೆ ಕರೆದೊಯ್ದು ಕನ್ನಡಿಯ ಮುಂದೆ ನಿಲ್ಲಿಸಿ ಹೇಳಿದ- ‘ನಿನ್ನಂತಹ ಶೂರನನ್ನು ನಾನು ನೋಡಿಯೇ ಇಲ್ಲ. ನಿನ್ನಿಂದ ನನಗೊಂದು ಸಹಾಯ ಬೇಕು’. ನಾನು ಸಂತೋಷದಿಂದ ಉಬ್ಬಿ ಹೋದೆ. ಕೃಷ್ಣ ನನ್ನಲ್ಲಿ ವರ ಕೇಳುವುದರೆಂದರೇನು! ಹಿಂದೆ ಮುಂದೆ ಯೋಚಿಸದೆ ಮುಗ್ದವಾಗಿ ಹೇಳಿದೆ- ‘ಏನು ಬೇಕು ಕೇಳು. ಖಂಡಿತ ಕೊಡುತ್ತೇನೆ. ಕೃಷ್ಣ ನಸುನಗುತ್ತಾ ಹೇಳಿದ-‘ಈ ಕನ್ನಡಿಯಲ್ಲಿ ಕಾಣುವ ಶೂರನ ರುಂಡ ಬೇಕು’. ನನಗೆ ಅವನ ಮಾತು ಕೇಳಿ ಹೃದಯಾಘಾತವಾದಂತಾಯಿತು. ಅಲ್ಲಿಯೇ ಕುಸಿದು ಹೋದೆ. ಏನೇನೋ ಕನಸು ಕಂಡು ಕುರುಕ್ಷೇತ್ರಕ್ಕೆ ಬಂದವನಿಗೆ ಅಂತಿಮದಿನ ಅಂದೇ ಆದಂತಿದೆ. ಹೇಳಿ ಕೇಳಿ, ನಾನು ನಾಗಲೋಕದವನು, ‘ಕೊಟ್ಟ ಮಾತು ತಪ್ಪುವುದನ್ನು ನಮಗೆ ಹಿರಿಯರು ಹೇಳಿ ಕೊಟ್ಟಿಲ್ಲ. ಅದು ನಮ್ಮ ರಕ್ತದಲ್ಲಿಲ್ಲ. ಹಾಗಾಗಿ, ನನ್ನ ರುಂಡವನ್ನು ಅವನಿಗೆ ಒಪ್ಪಿಸಲೇ ಬೇಕಿತ್ತು. ಅದಕ್ಕಿಂತ ಮೊದಲು, ನನ್ನ ಕೊನೆಯ ಆಸೆಯನ್ನು ಅವನ ಮುಂದಿಟ್ಟೆ- ‘ಮೂಲತಃ, ನಾನೊಬ್ಬ ಯೋಧ. ಸಂಪೂರ್ಣ ಯುದ್ಧ ನೋಡಬೇಕೆಂಬ ಮಹದಾಸೆಯಿಂದ ಅಷ್ಟು ದೂರದಿಂದ ಬಂದಿದ್ದೇನೆ. ಈಗ, ನಾನು ಹೆಣವಾಗಿ ಯುದ್ಧ ಹೇಗೆ ವೀಕ್ಷಿಸಲಿ?’. ಕೃಷ್ಣ ತಕ್ಷಣ ಒಂದು ಪರಿಹಾರ ಹೇಳಿದ-‘ಚಿಂತಿಸಬೇಡ. ನಿನ್ನ ರುಂಡವನ್ನು ನಾನು ಹಾಗೆಯೇ ಜೀವಂತವಿರಿಸುತ್ತೇನೆ. ಯುದ್ಧಭೂಮಿಯಲ್ಲಿಯೇ ಸುರಕ್ಷಿತವಾಗಿ ಇರಿಸುವ ವ್ಯವಸ್ಥೆ ಮಾಡಿಸುತ್ತೇನೆ. ನೀನು ಮುಂಡವಿಲ್ಲದ ರುಂಡವಾಗಿ ಯುದ್ಧ ನೋಡಬಹುದು’. ನನಗೆ ಮಾತನಾಡಲು ಇನ್ನೇನು ಉಳಿದಿರಲಿಲ್ಲ. ನನ್ನ ಕೈಯಲ್ಲಿದ್ದ ಖಡ್ಗದಿಂದ ಕನ್ನಡಿಯೆದುರೇ ತಲೆ ಕತ್ತರಿಸಿಕೊಂಡು ಅವನ ಕೈಗೆ ಕೊಟ್ಟೆ. ಪಾಂಡವರ ಶಕ್ತಿಗೆ ನನ್ನಿಂದ ಪೈಪೋಟಿ ತಪ್ಪಿಹೋಗಿ ಅವರಿಗೆ ನೆಮ್ಮದಿಯಾಯಿತು. ಅಂತೂ, ಯುದ್ಧ ಶುರುವಾಯಿತು. ಆರಂಭದಲ್ಲಿ ನನ್ನ ಈ ರುಂಡವನ್ನು ಯುದ್ಧಭೂಮಿಯ ಅಂಚಿನಲ್ಲಿಯೇ ನೆಲದ ಮೇಲೆ ಇರಿಸಲಾಗಿತ್ತು. ನನಗೆ ಈ ಪರಾಕ್ರಮಿ ಯೋಧರೆನಿಸಿಕೊಂಡ ಬಲಹೀನರು ಹರಸಾಹಸ ಪಡುತ್ತಿರುವುದನ್ನು ಕಂಡು ಜೋರಾಗಿ ನಗು ಬರುತ್ತಿತ್ತು. ನನ್ನ ಕುಹಕದ ನಗು ಈ ವೀರಯೋಧರಿಗೆ ಅಪಹಾಸ್ಯದಂತೆ ಕಂಡು ಅವರೆಲ್ಲಾ ಕೃಷ್ಣನಿಗೆ ದೂರಿತ್ತರು. ನನ್ನನ್ನು, ‘ಮಾತನಾಡುವ ರುಂಡ’ ವೆಂದು ಹೆಸರಿಟ್ಟರು. ಅವರನ್ನು ಖುಷಿಪಡಿಸಲು ಕೃಷ್ಣ, ‘ಮುಂಡವಿಲ್ಲದ ರುಂಡ ಎಲ್ಲಿದ್ದರೇನು? ನನ್ನ ಕೆಲಸ ಮುಗಿಯಿತು ತಾನೆ?’ ಎಂದುಕೊಂಡು ನನ್ನ ಜುಟ್ಟನ್ನು ಹಿಡಿದುಕೊಂಡು, ಕೃಷ್ಣ ಹತ್ತಿರದ ಬೆಟ್ಟದ ತುದಿಯಲ್ಲಿಟ್ಟ. ಅಲ್ಲಿಂದ ಯುದ್ದವೇನೋ ಕಾಣಿಸುತ್ತಿತ್ತು. ಆದರೆ ಯೋಧರ ಸೋಲಿನ ಮುಖಭಾವವಲ್ಲ. ಜೊತೆಗೆ, ನನ್ನೊಂದಿಗೆ ಮಾತನಾಡಲು ಹತ್ತಿರದಲ್ಲಿ ಜನರಾರೂ ಇಲ್ಲದ ಕಾರಣ, ತೀವ್ರ ಒಂಟಿತನ, ಅಮ್ಮನ ನೆನಪು, ಮತ್ತು ನನ್ನ ಒಳ್ಳೆಯತನಕ್ಕೆ ಮುಗಿದುಹೋದ ಜೀವನ, ಎಲ್ಲಾ ನೆನಪಾಗಿ ದುಃಖವಾಗುತ್ತಿತ್ತು. ಅಂತೂ ಒಂಬತ್ತನೆಯ ದಿನ ನೀನು ಬಂದು ಜೊತೆಯಾದೆ, ನನ್ನಂತೆಯೇ, ಕೃಷ್ಣನ ಕೃಪೆಯಿಂದ ಮುಂಡವಿಲ್ಲದ ರುಂಡವಾಗಿ. ಅಂದಿನಿಂದ ನನಗೆ ಸ್ವಲ್ಪ ನಿರಾಳತೆ ಕಾಣಿಸಿತು. ನನ್ನ ಕಥೆ ಇಷ್ಟೇ, ಏನೂ ಸ್ವಾರಸ್ಯವಿಲ್ಲದ ಜೀವನ, ಕಂಡ ಕನಸುಗಳನ್ನು ಸಾಧಿಸಲಾಗದ ಎಳೆಯವಯಸ್ಸಿನಲ್ಲಿ ಬರಿ ರುಂಡವಾಗಿ ಮೊಟುಕಾದ ಬದುಕು. ನಿನ್ನ ಕಥೆಯೇನೂ ಕಡಿಮೆಯದ್ದೇ? ಕಳೆದ ಒಂಬತ್ತು ದಿನ ನನಗೆ ನೂರಾರು ಸಲ ಹೇಳಿದ್ದಿ. ಇನ್ನೊಮ್ಮೆ, ಕೊನೆಯ ಬಾರಿಗೆ ವಿವರವಾಗಿ ಹೇಳು."

ಇರಾವಂತ ಮುಖ ಸಪ್ಪಗೆ ಮಾಡಿಕೊಂಡ. ಇಬ್ಬರ ನಡುವೆ ದೀರ್ಘ ಮೌನ. ಆಮೇಲೆ, ಇರಾವಂತ ಬಾಯಿ ತೆರೆದ:

‘ಹೂಂ. ನೀನು ಹೇಳುವುದು ಸರಿ. ನಿನ್ನ ಕಥೆಗಿಂತ ನನ್ನ ಕಥೆಯೇನೂ ಬೇರೆಯಿಲ್ಲ. ನಾನೂ ಕೂಡ ನಿನ್ನಂತೆ ನಾಗಲೋಕದವನು. ನೀನು ಬಲಭೀಮನ ಮೊಮ್ಮಗನಾದರೆ, ನಾನು ಅವನ ತಮ್ಮ ತ್ರಿವಿಕ್ರಮ ಅರ್ಜುನನಿಗೆ ಹುಟ್ಟಿದವನು. ನನ್ನಮ್ಮ ಉಲೂಪಿಗೆ ನಾಗಲೋಕದಲ್ಲಿ ಎಲ್ಲಾ ಸವಲತ್ತು ಇತ್ತು. ಗರುಡ, ಅವಳ ಮೊದಲ ಗಂಡನನ್ನು ಸಾಯಿಸಿದ ನಂತರ ಅವನ ನೆನಪಲ್ಲಿಯೇ ಶೋಕದಲ್ಲಿದ್ದ ಅಮ್ಮನಿಗೆ, ವಿಶ್ವಪರ್ಯಟನದಲ್ಲಿದ್ದ ಅರ್ಜುನ ಎದುರಿಗೆ ಕಾಣಸಿಕ್ಕ. ಅವನನ್ನು ನೋಡಿದ ಮೇಲೆ ಅವಳಿಗೆ ತನ್ನೆಲ್ಲಾ ಹಿಂದಿನ ನೋವು ಮರೆತು ಹೋಯಿತು. ಆದರೆ, ಅರ್ಜುನನಿಗೆ ನನ್ನಮ್ಮನೇನೂ ಬೇಕಿರಲಿಲ್ಲ. ಆದರೆ, ಅಮ್ಮನ ಒತ್ತಾಯಕ್ಕೆಂದು ಒಂದು ರಾತ್ರಿಯ ಸಾಂಕೇತಿಕ ವಿವಾಹವಾಯಿತು, ಅಷ್ಟೇ. ಆಮೇಲೆ ಅವನು ಅಮ್ಮನನ್ನು ಮರೆತೇ ಬಿಟ್ಟಿದ್ದ. ಪುನಃ ಅವನನ್ನು ಅಮ್ಮ ನೋಡಿದ್ದು, ಹಲವಾರು ವರ್ಷಗಳ ನಂತರ, ನಮ್ಮ ನೆರೆ ರಾಜ್ಯದ ಚಿತ್ರಾಂಗದೆಯ ಮಗ ಬಬ್ರುವಾಹನನ ಅರಮನೆಯಲ್ಲಿ. ಅಂದು, ತನ್ನ ಮಗನ ಕೈಯಲ್ಲಿ ಸೋತು ಸಾವು ತಂದುಕೊಂಡ ಅರ್ಜುನನನ್ನು ಬದುಕಿಸಬೇಕೆಂದು ಅಲ್ಲಿದ್ದವರೆಲ್ಲಾ ಪ್ರಯತ್ನಿಸಿ
ವಿಫಲರಾದಾಗ, ಚಿತ್ರಾಂಗದೆಗೆ ನೆನಪಾದುದು, ನಾಟಿವೈದ್ಯ ಪರಿಣಿತಿ ಹೊಂದಿದ್ದ ನನ್ನಮ್ಮ ಉಲೂಪಿ. ವಿಷಯ ತಿಳಿದು ಓಡೋಡಿ ಅಲ್ಲಿಗೆ ಹೋದ ಅಮ್ಮ, ತನ್ನಲ್ಲಿದ್ದ ನಾಗಮಣಿಯನ್ನು ಅವನ ಎದೆಯ ಮೇಲಿಟ್ಟು ಬದುಕಿಸಿದಳು. ಎಚ್ಚರಗೊಂಡ ಅರ್ಜುನನಿಗೆ, ಎದುರಿಗೆ ಕಂಡ ನನ್ನಮ್ಮನ ಪರಿಚಯವಾಗದೆ ತಡವರಿಸಿದ. ಆದರೆ, ಪಕ್ಕದಲ್ಲಿದ್ದ ಚಿತ್ರಾಂಗದೆಯನ್ನು ಗುರುತಿಸಿದ. ಇದರಿಂದ, ಅಮ್ಮನಿಗೆ ಅತ್ಯಂತ ನೋವಾಯಿತು. ಮತ್ತೆಂದೂ ಅವನ ಮುಖ ನೋಡಬಾರದೆಂದು ನಿರ್ಧರಿಸಿ ನಾಗಲೋಕದತ್ತ ಹೆಜ್ಜೆ ಹಾಕಿದಳು. ಅಮ್ಮನ ಈ ಹುಚ್ಚು ಪ್ರೀತಿಯಿಂದ ಅವಳ ಅಣ್ಣನಿಗೆ ಕೋಪ ಬಂದಿತ್ತು. ಅದರ ಪರಿಣಾಮ ನನ್ನ ಮೇಲಾಯಿತು. ನನ್ನನೆಂದೂ ಅವನು ಪ್ರೀತಿಯಿಂದ ಮಾತನಾಡಿಸಲಿಲ್ಲ, ತನ್ನ ಮನೆತನದವನೆಂದು ಒಪ್ಪಿಕೊಳ್ಳಲಿಲ್ಲ. ಇದರಿಂದ, ನನ್ನೂರಿನಲ್ಲಿ ಪರಕೀಯತೆ ಅನುಭವಿಸಿದ ನಾನು, ನನ್ನತನ ಗುರುತಿಸಿಕೊಳ್ಳಲು ಊರು ಬಿಟ್ಟು ಹೊರನಡೆದೆ. ಹೊರಡುವಾಗ ಅಮ್ಮ ಒಂದು ಮಾತು ಹೇಳಿದಳು- ‘ದಯವಿಟ್ಟು, ನಿನ್ನ ಅಪ್ಪನೆನಿಸಿಕೊಂಡವನಲ್ಲಿಗೆ ಎಂದಿಗೂ ಹೋಗಬೇಡ. ಸ್ವಾಭಿಮಾನ ಉಳಿಸಿಕೊಂಡು ತಲೆಯೆತ್ತಿ ಬಾಳು. ನೀನು, ಅವರ ರಾಜಕೀಯದಲ್ಲಿ ಸಿಕ್ಕಿ ಕಳೆದುಹೋಗಬೇಡ’. ಅಂದೇ ನಾನು ಅಮ್ಮನನ್ನು ಕೊನೆಯ ಬಾರಿಗೆ ನೋಡಿದ್ದು.”

ಇರಾವಂತನ ಕಣ್ಣು ತುಂಬಿಕೊಂಡಿತು. ಬಾರ್ಬರಿಕ ಕೇಳಿದ-

‘ಇಲ್ಲಿ ಬಂದವನಿಗೆ ಕೃಷ್ಣ ಏನು ಆಟವಾಡಿ ನಿನ್ನ ರುಂಡವಾಗಿಸಿದ?’

ಇರಾವಂತ ಮುಂದುವರಿಸಿದ:

‘ಅದೊಂದು ಹೇಳಿಕೊಳ್ಳಲಾಗದ ಭಯಾನಕ ಕಥೆ. ನಾನೊಬ್ಬ ಸಾಮಾನ್ಯ ಯೋಧನಂತೆ ಬಂದು ಪಾಂಡವರ ಪಕ್ಷ ಸೇರಿಕೊಂಡು ಯುದ್ಧದಲ್ಲಿ ಪಾಲ್ಗೊಂಡೆ. ಎಂಟು ದಿನಗಳ ಯುದ್ಧ ಮಗಿಯಿತು. ಪ್ರತಿದಿನ ಲಕ್ಷಗಟ್ಟಲೆ ಯೋಧರು, ಆನೆಗಳು, ಕುದುರೆಗಳು ಸತ್ತವೇ ಹೊರತು, ಗೆಲುವು ಯಾರದಾಗುತ್ತದೆ ಎನ್ನುವ ಸೂಚನೆ
ಕಾಣಲಿಲ್ಲ. ಕೌರವರ ಮಹಾಸೇನಾನಿ ಭೀಷ್ಮ ಮುದುಕನಾಗಿದ್ದರೂ ಅಪಾರ ಯುದ್ಧ ಕೌಶಲ ಹೊಂದಿದ್ದ. ಅವನು ಪಾಂಡವರನ್ನು ಸಾಯಿಸದಿದ್ದರೂ, ಅವರ ಸೈನ್ಯಕ್ಕೆ ಅಪಾರ ಹಾನಿ ಮಾಡುತ್ತಲೇ ಇದ್ದ. ಇದರಿಂದ, ಕೃಷ್ಣನಿಗೆ ಚಿಂತೆಯಾಯಿತು. ಈ ಯುದ್ಧ ಗೆಲ್ಲಲು ಏನು ಮಾಡಬೇಕು ಎಂದು ಎಲ್ಲಾ ಸಭೆ ಸೇರಿ ಚರ್ಚಿಸಲಾರಂಭಿಸಿದರು. ಆಗ, ಒಬ್ಬರು, ಕಾಳಿದೇವಿಗೆ ನರಬಲಿ ಕೊಟ್ಟಲ್ಲಿ, ದೇವಿ ತೃಪ್ತಳಾಗಿ ಜಯ ಒಲಿಯಬಹುದೆಂಬ ಸಲಹೆ ನೀಡಿದರು. ಆದರೆ, ಬಲಿಯಾಗಲು ಸಿದ್ಧರಿರುವ ವೀರಯೋಧ ಯಾರು? ದೇವಿ ಎಲ್ಲರನ್ನೂ ಬಲಿ ತೆಗೆದುಕೊಳ್ಳುವುದಿಲ್ಲ. ಅದಕ್ಕೆ ಸೂಕ್ತವಾದ ಯೋಧನ ಮೈಮೇಲೆ ಮೂವತ್ತೆರಡು ಗಾಯದ ಕಲೆಗಳಿರಬೇಕು, ಎನ್ನುವ ನಂಬಿಕೆಯಿತ್ತು. ಅಂದರೆ, ಅವನು ನಿಜವಾಗಿಯೂ ಪಳಗಿದ ಯೋಧನಾಗಿರಬೇಕು. ಅದು ಅವನ ಸಾಹಸ ಜೀವನದ ಪ್ರತೀಕ. ಅಲ್ಲಿದ್ದ ಎಲ್ಲರ ಮೇಲ್ವಸ್ತ್ರ ಕಳಚಿ ಪರಿಶೀಲಿಸಿದರೆ, ಕೇವಲ ಮೂವರು ಮಾತ್ರ ಮೂವತ್ತೆರಡು ಗಾಯವನ್ನು ಹೊಂದಿದ್ದರು; ಕೃಷ್ಣ, ಅರ್ಜುನ ಮತ್ತು ನಾನು. ಆದರೆ, ಕೃಷ್ಣನನ್ನಾಗಲಿ, ಅರ್ಜುನನನ್ನಾಗಲಿ ಬಲಿ ಕೊಡಲಾಗುತ್ತದೆಯೇ? ಆದ್ದರಿಂದ, ಎಲ್ಲರ ಕಣ್ಣು ನನ್ನತ್ತ ನೆಟ್ಟಿತು. ಎಲ್ಲರ ಮನಸ್ಸಿನಲ್ಲಿದ್ದ ಅಚ್ಚರಿಯ ಒಂದೇ ಪ್ರಶ್ನೆ- ‘ಈ ಹುಡುಗ ಯಾರು?’ ಕುಚೋದ್ಯವೆಂದರೆ, ನನ್ನಪ್ಪ ಅರ್ಜುನನೇ ಕೇಳಿದ- ‘ನೀನು ಯಾರ ಮಗ?’. ನಿರೀಕ್ಷೆಯಂತೆ, ಅವನಿಗೆ ನೆನಪಾಗಲಿಲ್ಲ. ಆದರೆ, ನಾನು ಹೇಳಿದ ಮೇಲೆ ಒಂದು ಮಾತಂದ- ‘ನೀನು ನನ್ನ ಮಗನೇ ಆಗಿದ್ದರೆ, ಸಾಯಲು ಹೆದರದೆ ಧೈರ್ಯವಾಗಿ ತಲೆಕೊಡು’. ಇವನೆಂತಹ ಅಪ್ಪ! ಪರಿಚಯ ಉಳಿಸಿಕೊಂಡಿಲ್ಲ, ಒಂದು ದಿನ ಪ್ರೀತಿಯಿಂದ ಮಾತನಾಡಿಸಿಲ್ಲ, ನೋಡಿಕೊಂಡಿಲ್ಲ. ಈಗ ಅಪ್ಪ ಎನ್ನುವ ಅಧಿಕಾರದಿಂದ ನನ್ನ ರುಂಡ ಕೇಳುತ್ತಿದ್ದಾನೆ. ಆ ಕ್ಷಣದಲ್ಲಿ ನನ್ನಮ್ಮನ ಮಾತು ನೆನಪಾಯಿತು- ‘ಇದು ಅವರ ಯುದ್ಧ. ನೀನು ಅಲ್ಲಿ ಹೋಗಿ ಅವರಿಗೆ ಕಾಲೊರೆಸುವ ಬಟ್ಟೆಯಾಗಬೇಡ. ನೀನು ಅವರಿಗೆ ಏನೂ ಅಲ್ಲ ಎನ್ನುವ ವಾಸ್ತವದಲ್ಲಿ ಬದುಕು ಕಟ್ಟಿಕೋ’. ‘ಅಂದು ನನಗೆ ಅಮ್ಮನ ಮಾತು ಸಂಪೂರ್ಣ ಅರ್ಥವಾಯಿತು. ಈ ಕೃಷ್ಣನಿಗೆ ಪಾಂಡವರು ಉಳಿಯುವುದಷ್ಟೇ ಮುಖ್ಯವಾಗಿತ್ತು. ಅದಕ್ಕಾಗಿ, ಉಳಿದವರೆಲ್ಲಾ ನಿರ್ದಾಕ್ಷಿಣ್ಯವಾಗಿ ಬಲಿಯಾಗಲೇಬೇಕಿತ್ತು’.

ಇರಾವಂತನ ಗಂಟಲು ತುಂಬಿಕೊಂಡಿತು. ಬಾರ್ಬರಿಕ ಅವನ ಮುಖವನ್ನೇ ದಿಟ್ಟಿಸಿದ. ಇರಾವಂತ ಒಂದು ಕ್ಷಣ ಸುಧಾರಿಸಿಕೊಂಡು ಮುಂದುವರಿಸಿದ:

‘ಹೇಗಿದ್ದರೂ ನನ್ನದು ಯಾರಿಗೂ ಬೇಡವಾದ ಬದುಕು, ಯಾವುದೇ ಹೊಸ ನಿರೀಕ್ಷೆಗಳಿಲ್ಲದ ಭವಿಷ್ಯ. ಅದಕ್ಕಾಗಿ, ಕೃಷ್ಣನಲ್ಲಿ ಹೇಳಿದೆ- ‘ಸರಿ ಕೃಷ್ಣ. ನನ್ನ ಬಲಿಯಿಂದ ನೀವು ಯುದ್ಧ ಗೆಲ್ಲುವುದಾದರೆ ಹಾಗೆಯೆ ಆಗಲಿ. ಆದರೆ, ನನ್ನ ಮೂರು ಷರತ್ತುಗಳನ್ನು ನೀನು ನೆರವೇರಿಸಬೇಕು- ಮೊದಲನೆಯದಾಗಿ, ನನಗೆ ಬ್ರಹ್ಮಚಾರಿಯಾಗಿ ಸಾಯಲು ಇಷ್ಟವಿಲ್ಲ. ನಮ್ಮ ಪದ್ದತಿಯಂತೆ ಬ್ರಹ್ಮಚಾರಿಗಳನ್ನು ಹೂಳುತ್ತಾರೆ, ಸುಡುವುದಿಲ್ಲ. ಇದರಿಂದ ಮುಕ್ತಿ ಸಿಗುವುದಿಲ್ಲ. ನನ್ನ ದೇಹಕ್ಕೆ ಶಾಸ್ತ್ರೋಕ್ತವಾಗಿ ಅಂತ್ಯ ಸಂಸ್ಕಾರವಾಗಬೇಕು. ಎರಡನೆಯದಾಗಿ, ನನಗೆ ಪರಾಕ್ರಮಿಯಾದ ಆಲಂಬುಷನೊಂದಿಗೆ ಹೋರಾಡಿ ವೀರ ಮರಣ ಸಿಗುವಂತಾಗಬೇಕು. ಮೂರನೆಯದಾಗಿ, ನನಗೆ ಈ ಯುದ್ಧ ಹೇಗೆ ಅಂತ್ಯ ಕಾಣುತ್ತದೆ ಎನ್ನುವ ಕುತೂಹಲವಿದೆ. ಅದನ್ನು ನಾನು ಸಂಪೂರ್ಣ ನೋಡುವಂತಾಗಬೇಕು. ಕೃಷ್ಣ ನನ್ನ ಬಲಿಕೊಡುವುದನ್ನು ತಡಮಾಡುವಂತಿರಲಿಲ್ಲ. ಮಾರನೆಯ ದಿನ ಯುದ್ಧ ಆರಂಭವಾಗುವ ಮೊದಲೇ ನೆರವೇರಿಸಬೇಕಿತ್ತು. ಒಂದು ರಾತ್ರಿಯೊಳಗೆ, ಇನ್ನೇನು ಕೆಲವೇ ಕ್ಷಣಗಳಲ್ಲಿ ಬಲಿಯಾಗುವವನಿಗೆ, ತಕ್ಷಣ ಮದುವೆ ಮಾಡಿಸಲು ಯಾರು ಹೆಣ್ಣು ಕೊಡುತ್ತಾರೆ? ತನ್ನ ನಿಷ್ಠರ ಕಷ್ಟಗಳಿಗೆ ತಕ್ಷಣ ಪ್ರತಿಕ್ರಿಯಿಸುವ ಕೃಷ್ಣ, ಪಾಂಡವರಿಗಾಗಿ ಇನ್ನೊಮ್ಮೆ ತಾನು ಹೆಣ್ಣಾಗಲು ನಿರ್ಧರಿಸಿದ. ಹೆಣ್ಣಾಗಿ ಆ ಕ್ಷಣವೇ ನನ್ನ ಮದುವೆಯಾಗಿ, ನನ್ನ ಜೀವನದ ಕೊನೆಯ ರಾತ್ರಿಯನ್ನು ನನ್ನೊಂದಿಗೆ ಕಳೆದ. ಮಾರನೆಯ ದಿನ ಬೆಳಿಗ್ಗೆ ಯುಧಿಷ್ಠಿರ ಕಾಳಿಮಾತೆಯನ್ನು ಪೂಜಿಸಿ, ಅವಳ ಮೂರ್ತಿಯೆದುರು ನನ್ನನ್ನು ಮೂವತ್ತೆರಡು ತುಂಡುಗಳಾಗಿ ಕತ್ತರಿಸಿ ಬಲಿ ಶಾಸ್ತ್ರ ನೆರವೇರಿಸಿದ. ಅವನ ಹರಕೆ ತೀರಿದ ಮೇಲೆ ನನ್ನಜ್ಜ ಆದಿಶೇಷ ಪ್ರತ್ಯಕ್ಷನಾದ. ಅವನು ನನ್ನ ತುಂಡು ತುಂಡಾಗಿದ್ದ ದೇಹವನ್ನು ಸುತ್ತುವರಿದು ಒಟ್ಟುಗೂಡಿಸಿ ಪುನಃ ಜೀವಕೊಟ್ಟ. ಆಗ, ಕೃಷ್ಣ ಗರುಡನನ್ನು ಆಹ್ವಾನಿಸಿದ. ಅವನನ್ನು ನೋಡಿದ ತಕ್ಷಣ ನನ್ನಜ್ಜ ಕೋಪದಲ್ಲಿ ಅವನ ಮೇಲೆ ಎರಗಲು ಓಡಿದ. ಇದೇ ಸಂದರ್ಭದಲ್ಲಿ ಎದುರಾಳಿಯಾಗಿ ಬಂದ ಆಲಂಬುಷ ನನ್ನೊಂದಿಗೆ ಕಾದಾಡುತ್ತಾ ನನ್ನ ರುಂಡ ಬೇರ್ಪಡಿಸಿದ. ಹೀಗೆ ನನ್ನ ದೇಹಾಂತ್ಯವಾಯಿತು. ನನ್ನ ದೇಹವನ್ನು ಈಗಾಗಲೇ ಸುಟ್ಟಿದ್ದಾರೆ ಅಂದುಕೊಂಡಿದ್ದೇನೆ. ಕೃಷ್ಣ, ನನ್ನ ರುಂಡವನ್ನು ತೆಗೆದುಕೊಂಡು ಬಂದು ನಿನ್ನ ಜೊತೆಯಲ್ಲಿ ಇರಿಸಿದ. ಆ ದಿನದಿಂದ ನಾಗಲೋಕದ ಈ ಇಬ್ಬರು ವೀರ ಯೋಧರು ಜೊತೆಯಾಗಿಯೇ ಯುದ್ಧ ನೋಡಿದೆವಲ್ಲಾ?’

ಇರಾವಂತ ಬರ್ಬರೀಕನನ್ನು ಒಮ್ಮೆ ದಿಟ್ಟಿಸಿ ನೋಡಿ ಮೌನವಾದ. ಬರ್ಬರೀಕ ಮುಂದುವರಿದ:

‘ಹೂಂ. ಹೌದು. ಇವರಿಗೆ ಯುದ್ಧ ನಾವೇ ಗೆದ್ದಿದೇವೆ ಎಂದು ಜಗತ್ತಿಗೆ ಹೇಳಿಕೊಳ್ಳುವುದು ಮುಖ್ಯವಾಗಿತ್ತೇ ಹೊರತು, ನಮ್ಮ ಸಹಾಯದಿಂದ ಯುದ್ಧ ಬೇಗ ಜಯಿಸಿ, ಅಪಾರ ಸಾವು ನೋವು ತಪ್ಪಿಸುವುದಲ್ಲ. ಯಾದವ ವಂಶದ ಕೃಷ್ಣನಿಗಂತೂ, ತನ್ನ ಮಾತು ಕೇಳದ ಕುರುವಂಶದ ಕೌರವರಿಗಿಂತ ತನ್ನ ಮಾತಿನ ಅಣತಿಯಂತೆ ನಡೆಯುವ ಹಾಗು ಸ್ವಂತ ಬುದ್ಧಿಯಿಂದ ನಿರ್ಧಾರ ತೆಗೆದುಕೊಳ್ಳದ ಪಾಂಡವರು ಬದುಕುಳಿಯುವುದು ಮುಖ್ಯವಾಗಿತ್ತು. ನಿನಗೂ ಗೊತ್ತಿರುವಂತೆ, ಯಾದವರು ಮತ್ತು ಕುರು ವಂಶದವರ ನಡುವೆ ಭೂಮಿಯ ಮೇಲಿನ ಪ್ರಭುತ್ವಕ್ಕಾಗಿ ಅನಾದಿಕಾಲದಿಂದಲೂ ಜಗಳ ನಡೆಯುತ್ತಲೇ ಇದೆ. ಕೃಷ್ಣನ ಈ ಆಟ ತಿಳಿಯದ ಪಾಂಡವರು ಅಥವಾ ತಿಳಿದೂ(ಕೌರವರ ಮೇಲಿನ ಜಿದ್ದಿನಿಂದ), ಕುಟುಂಬದ ಹೊರಗಿನವನಾದ ಕೃಷ್ಣನ ಮಾರ್ಗದರ್ಶನದಲ್ಲಿ ಯುದ್ಧ ಗೆದ್ದು, ತಾವೇನೋ ಮಹಾನ್ ಸಾಧಿಸಿದ್ದೇವೆಂದು ಸಂಭ್ರಮಿಸಿದರು. ನೀನೇ ಹೇಳು, ಅವರೇನೂ ನ್ಯಾಯಯುತವಾಗಿ ಯುದ್ಧ ಗೆದ್ದರೇನು? ಖಂಡಿತವಾಗಿಯೂ ಇಲ್ಲ. ಪ್ರತಿ ಹಂತದಲ್ಲೂ ಅವರು ಯುದ್ಧದ ನಿಯಮವನ್ನೆಲ್ಲಾ ಗಾಳಿಗೆ ತೂರಿದರು- ಶಿಖಂಡಿಯನ್ನು ಮುಂದಿರಿಸಿ, ಭೀಷ್ಮನನ್ನು ಶರಶಯ್ಯೆಯಲ್ಲಿ ಮಲಗಿಸಿದರು. ಅಶ್ವತ್ಥಾಮ ಸತ್ತನೆಂದು ಸುಳ್ಳು ಹೇಳಿ ದ್ರೋಣನ ಕಥೆ ಮುಗಿಸಿದರು. ಕರ್ಣನಿಂದ ಅರ್ಜುನನನ್ನು ಉಳಿಸಲಿಕ್ಕಾಗಿ, ನನ್ನಪ್ಪ ಘಟೋತ್ಕಚನನ್ನು ಬಲಿತೆಗೆದುಕೊಂಡರು. ನಿಶಸ್ತ್ರನಾಗಿದ್ದ ಕರ್ಣನನ್ನು ಸಾಯಿಸಿದರು. ಸೂರ್ಯಾಸ್ತದ ನಂತರ, ಜಯದ್ರಥನನ್ನು ಸಾಯಿಸಿದರು. ದುರ್ಯೋಧನನನ್ನು ಸೊಂಟದ ಕೆಳಗೆ ಹೊಡೆದು ಧರೆಗುರುಳಿಸಿದರು. ಇಷ್ಟೆಲ್ಲಾ ಅಧರ್ಮ ಮಾಡಿದವರು, ಕೌರವರಿಗಿಂತ ಹೇಗೆ ಭಿನ್ನವಾಗುತ್ತಾರೆ? ಜೊತೆಗೆ, ತಾವೊಬ್ಬರೇ ಸಚ್ಚಾರಿತ್ರ್ಯರು ಎನ್ನುವ ಅಹಂಕಾರ ಬೇರೆ."

ಬರ್ಬರೀಕ ದೀರ್ಘ ನಿಟ್ಟುಸಿರಿನೊಂದಿಗೆ ಮೌನಕ್ಕೆ ಶರಣಾದ. ಸ್ವಲ್ಪ ಸಮಯದ ನಂತರ ಇರಾವಂತನಲ್ಲಿ ಹೇಳಿದ:

‘ನೋಡು, ಈ ರಾತ್ರಿ ನಮಗೆ ಬಹಳ ದೀರ್ಘ ಮತ್ತು ಕೊನೆಯ ರಾತ್ರಿ. ಈಗಷ್ಟೇ ಕೃಷ್ಣ ಬಂದು ಹೇಳಿ ಹೋದನಲ್ಲ, ನಾಳೆಯಿಂದ ಈ ರಣರಂಗದಲ್ಲಿ ಕೊಳೆಯುತ್ತಾ ಬಿದ್ದಿರುವ ಎಲ್ಲಾ ದೇಹಗಳ ಸಂಸ್ಕಾರ ಕಾರ್ಯಾಚರಣೆ ಆರಂಭಗೊಳ್ಳಲಿದೆ. ಇದರಲ್ಲಿ ನಮ್ಮ ರುಂಡಗಳಿಗೆ ಪ್ರಥಮ ಪ್ರಾಶಸ್ತ್ಯವಿದೆ ಎಂದು. ಹಾಗಾಗಿ, ಕಣ್ಣು ಮುಚ್ಚದೆ ಹರಟುತ್ತ ಕಾಲ ಕಳೆಯೋಣ. ಏನೆನ್ನುತ್ತೀಯಾ?’

ಯಾವುದೊ ಹಿಂದಿನ ನೆನಪಿನಲ್ಲಿ ಕಳೆದುಹೋಗಿದ್ದ ಇರಾವಂತನಿಗೆ ಅದನ್ನು ಹಂಚಿಕೊಳ್ಳಬೇಕೆನಿಸಿ ಹೀಗೆಂದ:

‘ಸರಿ, ಹಾಗೆಯೇ ಮಾಡೋಣ. ನೋಡು, ನನಗೆ ಈ ಪಾಂಡವರನ್ನು ನೋಡಿದರೆ ನಿಜವಾಗಿಯೂ ನಗು ಬರುತ್ತದೆ. ಈಗಷ್ಟೇ, ತಮ್ಮ ಎಲ್ಲಾ ಮಕ್ಕಳನ್ನು ಕಳೆದುಕೊಂಡಿದ್ದಾರೆ. ಅವರು ನಿಜವಾಗಿ ಪುತ್ರ ಶೋಕದಲ್ಲಿರಬೇಕಿತ್ತು. ಆದರೆ, ಅವರಿಗೆ ಈ ಯುದ್ಧ ಯಾರಿಂದ ಗೆದ್ದಿರುವುದು ಎನ್ನುವುದು ಮುಖ್ಯವಾಯಿತಲ್ಲ! ಜೊತೆಗೆ, ನಾನು ಅರ್ಜುನನ ಮಗ, ನೀನು ಭೀಮನ ಮೊಮ್ಮಗ (ನಮ್ಮನ್ನು ಅವರು ತಮ್ಮವರೆಂದು ಪರಿಗಣಿಸಿಲ್ಲ ಎನ್ನುವುದು ಬೇರೆ ಮಾತು). ಈಗ ಉತ್ತರೆಯ ಗರ್ಭದಲ್ಲಿರುವ ಮಗುವನ್ನು ಹೊರತುಪಡಿಸಿ, ಅವರ ಸಂತಾನ ಮುಂದುವರಿಸಲು ಯಾರೂ ಬದುಕುಳಿದಿಲ್ಲ. ಆದರೂ ಈ ಅಹಂಕಾರ ಬಿಟ್ಟಿಲ್ಲ. ಅವರಿಗೂ ಗೊತ್ತಿರುವಂತೆ, ಈ ಯುದ್ಧ ಗೆಲ್ಲುವ ಸಾಮರ್ಥ್ಯವಿದ್ದುದು ನಮ್ಮಿಬ್ಬರಿಗೆ ಮಾತ್ರ. ಕೃಷ್ಣ ನಮ್ಮನ್ನು ನಿರ್ದಾಕ್ಷಿಣ್ಯವಾಗಿ ಮುಗಿಸಿದ ಮೇಲೆ, ಆ ಸಾಮರ್ಥ್ಯವಿದ್ದುದು ಕೇವಲ ಅವನಿಗೆ ಮಾತ್ರ. ಈ ಉಳಿದವರೆಲ್ಲಾ ಲೆಕ್ಕಕ್ಕೆ ಸಿಗದವರು. ಸ್ವಲ್ಪ ಸಮಯದ ಹಿಂದೆ ಕೃಷ್ಣ ಪಾಂಡವರೊಂದಿಗೆ ನಮ್ಮಲ್ಲಿಗೆ ಬಂದು-'ನೀವಿಬ್ಬರು ಯುದ್ಧವನ್ನು ಸಂಪೂರ್ಣವಾಗಿ ವೀಕ್ಷಿಸಿದವರು. ಈಗ ಹೇಳಿ, ಈ ಯುದ್ಧ ಗೆದ್ದಿರುವುದು ಯಾರ ಪರಾಕ್ರಮದಿಂದ?' ಎಲ್ಲರಿಗೂ ತಮ್ಮ ಹೆಸರನ್ನು ಕೇಳಿಸಿಕೊಳ್ಳಬೇಕೆಂಬ ಮಹಾದಾಸೆಯಿತ್ತು. ವಿಶೇಷವಾಗಿ, ನಮ್ಮ ರಕ್ತ ಸಂಬಂಧಿಗಳಾದ ಅರ್ಜುನ ಮತ್ತು ಭೀಮ, ಎದೆಯುಬ್ಬಿಸಿ ನಿಂತಿದ್ದರು. ನನಗೆ ಒಂದು ಕ್ಷಣ ಹೀಗೆ ಹೇಳಬೇಕೆಂದು ಅನ್ನಿಸಿತು- ‘ನೋಡಿ, ನಾವಿಬ್ಬರು ಬದುಕಿದ್ದಿದ್ದರೆ, ಈ ಪ್ರಶ್ನೆಯ ಅಗತ್ಯವಿರಲಿಲ್ಲವೆಂದು ನಿಮಗೂ ಗೊತ್ತು. ಈ ಯುದ್ಧ ಕೇವಲ ಒಂದೇ ದಿನದಲ್ಲಿ ಮುಗಿದುಹೋಗುತ್ತಿತ್ತು. ಆದ್ದರಿಂದ, ಈಗ ನಾವು ಹೇಳಲಿರುವ ಹೆಸರು ನಮ್ಮನ್ನು ಹೊರತುಪಡಿಸಿ, ಎನ್ನುವುದನ್ನು ಮರೆಯಬೇಡಿ’. ಅವರ ಮೌನದ ಪ್ರತಿಕ್ರಿಯೆಗೆ ನಾನು ಒಂದೇ ಮಾತಿನಲ್ಲಿ ಉತ್ತರಿಸಿದೆ- ‘ನಮ್ಮಿಬ್ಬರಿಗೂ, ರಣರಂಗದಲ್ಲಿ ಕೃಷ್ಣನ ನಿರ್ದೇಶನ ಬಿಟ್ಟರೆ, ಅದಕ್ಕಿಂತ ವಿಶೇಷವಾದುದು, ಇನ್ನೇನೂ ಕಾಣಿಸಲಿಲ್ಲ’. ನನ್ನ ಯುದ್ಧ ವಿಶ್ಲೇಷಣೆ ಕೇಳಿಸಿಕೊಂಡ ಅರ್ಜುನ ಮತ್ತು ಭೀಮನ ಮುಖದಲ್ಲಿ ಒಮ್ಮೆಲೇ ಆಕ್ರೋಶ, ಆಮೇಲೆ ನಿಧಾನವಾಗಿ ನಿರಾಶೆ ಕಾಣಿಸಿಕೊಂಡಿದ್ದನ್ನು ನೀನು ಗಮನಿಸಿದೆಯಾ?"

ಬರ್ಬರೀಕ ನಕ್ಕು ಉತ್ತರಿಸಿದ:

‘ಹೌದು, ಸರಿಯಾಗಿ ಗಮನಿಸಿದೆ. ಅವರ ಅಹಂಕಾರ ಇಳಿದು ಹೋಯಿತೆಂದು ಕೊಂಡಿದ್ದೇನೆ’.

ತಮ್ಮ ಸಂಕ್ಷಿಪ್ತ ಜೀವನವನ್ನು ವಿಮರ್ಶಿಸುತ್ತಾ, ಹರಟುತ್ತಾ, ಇರಾವಂತ ಮತ್ತು ಬರ್ಬರೀಕ ಇಬ್ಬರಿಗೂ ತೂಕಡಿಕೆ ಹತ್ತಲಾರಂಭಿಸಿತು. ನಿಧಾನವಾಗಿ ಕತ್ತಲು ಹರಿದು ಮುಂಜಾವಿನ ಬೆಳಕು ಹೆಚ್ಚಾಗಲಾರಂಭಿಸಿತು. ಸುಮಾರು ಒಂದು ಗಂಟೆಯ ನೀರವತೆಯ ನಂತರ ಇರಾವಂತನಿಗೆ ಅವನ ಮುಂದಿರುವ ವಾಸ್ತವ, ನಿದ್ದೆಯ ಜೋಂಪಿನಿಂದ ಹೊರತಂದಿತು ಮತ್ತು ಬರ್ಬರೀಕನನ್ನು ಕೂಗಿ ಎಚ್ಚರಿಸುವಂತೆ ಮಾಡಿತು.

ನಿಧಾನವಾಗಿ ಕಣ್ಣು ತೆರೆಯುತ್ತಿದ್ದ ಬರ್ಬರೀಕನನ್ನು ನೋಡಿ ಇರಾವಂತನೆಂದ:

‘ಬರ್ಬರೀಕ, ಇನ್ನೇನು, ನಮ್ಮ ಸಮಯ ಸನ್ನಿಹಿತವಾಗುತ್ತಿದೆ. ಈ ಜೀವನ ಪಯಣದ ಪೂರ್ಣವಿರಾಮದ ಗಳಿಗೆಯಲ್ಲಿ ನಿಂಗೊಂದು ಕೊನೆಯ ಪ್ರಶ್ನೆ- ‘ನೀನು ನಿನ್ನ ಜೀವನವನ್ನು ಹೇಗೆ ಹಿಂದಿರುಗಿ ಅಳೆಯುತ್ತಿ?’

ಬರ್ಬರೀಕ, ಒಮ್ಮೆ ಇರಾವಂತನನ್ನೇ ದಿಟ್ಟಿಸಿ ನೋಡಿ ಆಲೋಚಿಸತೊಡಗಿದ. ಸ್ವಲ್ಪ ಸಮಯದ ನಂತರ ಬಾಯಿಬಿಟ್ಟ:

‘ಈ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವ ಹುಚ್ಚು ಇರಬಾರದಿತ್ತೆನಿಸುತ್ತಿದೆ. ಬಹುಶಃ, ನಾಗಲೋಕದಲ್ಲಿಯೇ ನಾವು ಬಹಳ ಅರ್ಥಪೂರ್ಣವಾಗಿ ಬದುಕಬಹುದಿತ್ತು. ಅಲ್ಲಿ ನಮ್ಮ ಕುರಿತು ಕಾಳಜಿ ಮಾಡುವವರು ಕೆಲವರಾದರೂ ಇದ್ದರು. ಅದಕ್ಕೆ ವ್ಯತಿರಿಕ್ತವಾಗಿ, ತಮ್ಮ ಅಧಿಕಾರದ ಬಗ್ಗೆಯಷ್ಟೇ ಯೋಚಿಸುವ ಈ ಅತಿ ಸ್ವಾರ್ಥದ, ನಿರ್ಭಾವುಕ ನಾಗರಿಕ ಪ್ರಪಂಚದ ಜನರಿಗಾಗಿ ಪ್ರಾಣ ತ್ಯಾಗ ಮಾಡಬೇಕಾದ ಅಗತ್ಯವೇನೂ ಇರಲಿಲ್ಲವೆನಿಸುತ್ತಿದೆ. ನಮ್ಮ ಪ್ರಾಣಕ್ಕೇನೂ ಬೆಲೆಯಿಲ್ಲವೇ? ನಿನ್ನ ಅಮ್ಮ ಹೇಳಿದ್ದು ಸರಿ- ‘ಇದು ಅವರ ಯುದ್ಧ’. ವ್ರತಃ ಬಲಿಯಾಗುವುದು ಮಾತ್ರ ನಾವು. ವಿಸ್ಮಯವೆಂದರೆ, ಅವರಿಗೇನೂ ಆಗದು, ತಾವು ಬದುಕುಳಿಯಲು ಉಳಿದವರನ್ನು ಅವರು ಬಲಿಕೊಟ್ಟು ಹೆಮ್ಮೆಯಿಂದ ಪಟ್ಟವೇರುತ್ತಾರೆ. ಅವರು ಮುಹೂರ್ತವಿಟ್ಟ ಮಾರಣಹೋಮದಿಂದಾಗಿ, ಅವರ ಸಾಮ್ರಾಜ್ಯದಲ್ಲಿಂದು ಬರಿ ವಿಧವೆಯರು ಮತ್ತು ಅನಾಥ ಮಕ್ಕಳು ಉಳಿದುಕೊಂಡರೂ, ಅವರಿಗೇನೂ ಅನ್ನಿಸುವುದಿಲ್ಲ. ನನ್ನ ಅನಿಸಿಕೆಗೆ, ನಿನ್ನ ಪ್ರತಿಕ್ರಿಯೆಯೇನು?’

ಸದಾ ವಟಗುಟ್ಟುತ್ತಾ, ‘ಮಾತನಾಡುವ ರುಂಡ’ವೆಂದು ಕುಖ್ಯಾತಿಗೊಳಗಾಗಿದ್ದ ಬರ್ಬರೀಕ ಒಂದೇ ಮಾತಿನಲ್ಲಿ ಉತ್ತರಿಸಿದ: ‘ನನಗೂ ನಿನ್ನಂತೆಯೇ ಅನ್ನಿಸುತ್ತಿದೆ. ನನ್ನಪ್ಪ ಧೀರ ಘಟೋತ್ಕಚ ಮತ್ತು ನಾನು, ಇಬ್ಬರೂ ನಮ್ಮೂರಲ್ಲಿಯೇ ಮಹಾರಾಜರಂತೆ ಬದುಕಬಹುದಿತ್ತು. ಆದರೆ, ಇಲ್ಲಿ ಬಂದು ಅಪ್ರಸ್ತುತರಾದೆವು’.

ಆ ಹೊತ್ತಿಗೆ, ಸಂಪೂರ್ಣ ಬೆಳಕಾಯಿತು. ಇಬ್ಬರಿಗೂ ಜಗತ್ತು ಸ್ಪಷ್ಟವಾಗಿ ಕಾಣಿಸಲಾರಂಭಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.