ಮಧ್ಯಾಹ್ನದ ಬಿಸಿಲು ಕರಗಿ ಸಂಜೆಯ ತಂಪು ನಗರವನ್ನು ಅವರಿಸಿಕೊಳ್ಳುವಾಗ ಲಂಕೇಶರು ಅಸಹನೆಯನ್ನು ಹೊತ್ತುಕೊಂಡೇ ಹೋಟೆಲಿನೊಳಕ್ಕೆ ನುಗ್ಗಿದರು, ರಿಸೆಪ್ಷನಿಸ್ಟ್ ಚಾರ್ಲ್ಸ್ ಕುಳಿತಿದ್ದ ಜಾಗದಲ್ಲಿ ಎದ್ದು ನಿಂತ, ಲಂಕೇಶರು ಕೇಳುವ ಮುನ್ನವೇ ಅವರ ಮುಖಕ್ಕೆ ರೂಮ್ ನಂಬರ್ 412 ಕೀ ಹಿಡಿದು ನಿಂತ. ಲಂಕೇಶರ ಅಚ್ಚುಮೆಚ್ಚಿನ ರೂಮು.
"ಸರಿ ಕಣಯ್ಯಾ" ಎಂದು ಮುಖ ನೋಡಿ ಸಿಟ್ಟು ಧುಮ್ಮುಕ್ಕುತ್ತಿದ್ದರೂ ನಗಲು ಪ್ರಯತ್ನಿಸುತ್ತಾ "ಒಂದ್ ವಾರ ಕಣಯ್ಯಾ" ಎಂದು ಹೇಳಿ ಹಿಂದೆ ಕೂಡ ತಿರುಗದೇ ಮೆಟ್ಟಿಲು ಹತ್ತತೊಡಗಿದರು. ಸಿಟ್ಟಿನಿಂದ ಹೆಜ್ಜೆ ಇಡುತ್ತಿದ್ದ ಲಂಕೇಶರನ್ನು ಇದೇನು ಹೊಸದಲ್ಲ ಎಂದು ನೋಡುತ್ತಾ ಚಾರ್ಲ್ಸ್ ಚೇರ್ ಮೇಲೆ ಕೂತ.
ಬ್ರಿಟಿಷ್ ಕಾಲದಲ್ಲಿ ಕಟ್ಟಿದ ಮೆಕ್ಗ್ರತ್ ರೋಡಿನ ಏಳು ಮಹಡಿಗಳ ‘ಹೋಟೆಲ್ ಪೊಯೆಟ್ರಿ’ಯಲ್ಲಿ ಲಿಫ್ಟ್ ಕೆಲಸ ಮಾಡೋದು ನಿಂತು ಎಷ್ಟೋ ವರ್ಷಗಳಾಗಿವೆ. ಮೂರು ಸಲ ಹೋಟೆಲ್ ಒಡೆದು ಕಾಂಪ್ಲೆಕ್ಸ್ ತಲೆ ಎತ್ತಬೇಕಿತ್ತು. ಚಾರ್ಲ್ಸ್ ಡಿ ಸೀನಿಯರ್ ತನ್ನ ಕಣ್ಣು ಮಂಜಾಗುವರೆಗೂ ಹೋಟೆಲ್ ಬಿಟ್ಟುಕೊಡದೆ ಲಂಡನಿನಲ್ಲಿ ಸತ್ತ. ಅವನ ಮಗ ಸಿನಿಮಾ ಇಂಡಸ್ಟ್ರಿಗೆ ಸೇರಿದಾಗ ಬೆಂಗಳೂರಿನ ಈ ಹೋಟೆಲನ್ನು ಸಿನಿಮಾಗಳಿಗೆ ರೆಂಟು ಕೊಡಲು ಶುರುಮಾಡಿ ಚೆನ್ನಾಗಿ ದುಡ್ಡು ಮಾಡಿದ, ಲಂಡನ್ನಿನಲ್ಲಿ ಕೂತು ನಿಯಂತ್ರಿಸಲು ಅಸಾಧ್ಯವಾದಾಗ ಸದಾ ಮಂಕಾಗಿದ್ದ ಬದುಕಿನಲ್ಲಿ ಅಸ್ತವ್ಯಸ್ತವಾಗಿದ್ದ ತನ್ನ ಏಕೈಕ ಮಗ ಚಾರ್ಲ್ಸ್ ಡಿ ಜೂನಿಯರ್ ಅನ್ನು ಬೆಂಗಳೂರಿಗೆ ಅಟ್ಟಿದ.
ಲಂಡನ್ನಿನ ಚಳಿಗೆ ಮುದುರಿ ಮಂಕಾಗಿದ್ದ ಚಾರ್ಲ್ಸ್ ಬೆಂಗಳೂರಿನ ವಾತಾವರಣಕ್ಕೆ ಚಿಗುರಿಕೊಂಡ, ಸಿನಿಮಾ ಲೋಕದ ರಂಗು ಗುಂಗುಗಳನ್ನು ನೋಡುತ್ತಲೇ ಚಿಗುರತೊಡಗಿದ, ಭಾರತದ ಜೂನಿಯರ್ ಆರ್ಟಿಸ್ಟುಗಳಿಗೆ ಭಾಯ್ ಆದ, ಭಾರತದ ಗೋಧಿ ಬಣ್ಣದ ಹುಡುಗಿಗೆ ಮನ ಸೋತು ಮೈ ಸೋತು ಅವಳನ್ನು ಕಟ್ಟಿಕೊಂಡ ಮತ್ತು ಇನ್ನಿಲ್ಲದಂತೆ ಪ್ರೀತಿಸುತ್ತಿದ್ದ.
ದೀವಾರ್ ಸಿನಿಮಾ ಶೂಟಿಂಗ್ ಅದೇ ಹೋಟೆಲಿನಲ್ಲಿ ನಡೆಯುತ್ತಿದ್ದಾಗ ಲಿಫ್ಟ್ ಒಳಗೆ ನಡೆಯುವ ಸಾಹಸ ದೃಶ್ಯದ ಸಮಯದಲ್ಲಿ ಅಮಿತಾಭ್ ಬಚ್ಚನಿಗೆ ಗಾಯವಾಗಿ ಅದೇ ವಿಷಯವಾಗಿ ಅವನ ಅಭಿಮಾನಿಗಳು ಹೋಟೆಲಿಗೆ ನುಗ್ಗಿ ದಾಂಧಲೆ ನಡೆಸಿದಾಗ ಲಿಫ್ಟ್ ಕೆಟ್ಟು ಹೋಯ್ತು, ಅದೇ ದಾಂಧಲೆಯಲ್ಲಿ ಚಾರ್ಲ್ಸ್ ಹೆಂಡತಿ ಕಾಲ್ತುಳಿತಕ್ಕೆ ಸಿಕ್ಕಿ ಸತ್ತು ಹೋಗಿದ್ದಳು.
ಅವತ್ತು ಚಾರ್ಲ್ಸ್ ಹೆಂಡತಿ, ಚಾರ್ಲ್ಸ್ ನ ಯೌವ್ವನ, ಅವನ ಲವಲವಿಕೆ ಜೊತೆಗೆ ಹೋಟೆಲ್ ಪೊಯೆಟ್ರಿಯ ಲಿಫ್ಟ್ ಒಟ್ಟಿಗೆ ಸತ್ತು ಹೋದವು.
ಅವತ್ತಿನಿಂದ ಸಿನಿಮಾ ಶೂಟಿಂಗಿಗೆ ಹೋಟೆಲ್ ಕೊಡಲು ಹೋಗಲಿಲ್ಲ, ಚಾರ್ಲ್ಸ್ ಅಪ್ಪನೂ ಮರುವರ್ಷವೇ ಕ್ಯಾನ್ಸರ್ ರೋಗದಿಂದ ಸತ್ತುಹೋದ. ಹೋಟೆಲ್ ಖಾಲಿ ಹೊಡೆದು ಚಾರ್ಲ್ಸ್ ಬದುಕು ಮತ್ತಷ್ಟು ಹದಗೆಟ್ಟಿತು.
ಹೋಟೆಲ್ ಪೊಯೆಟ್ರಿಯಲ್ಲಿ ಸಿನಿಮಾ ಶೂಟಿಂಗ್ ಬಂದ್ ಆದರೂ, ಅದೇ ಹೋಟೆಲಿನಲ್ಲಿ ರೂಮ್ ಬುಕ್ ಮಾಡಿ ಕತೆ, ಚಿತ್ರಕತೆ ಬರೆದು ತಯಾರಾದ ಸಿನಿಮಾಗಳು ಸೂಪರ್ ಡೂಪರ್ ಆದವು ಗಲ್ಲಾಪೆಟ್ಟಿಗೆಯನ್ನು ದೋಚಿದವು, ಹೋಟೆಲ್ ಪೊಯೆಟ್ರಿಯಲ್ಲಿ ಸಿಟ್ಟಿಂಗ್ ಹಾಕಿ ಬರೆದ ಚಿತ್ರಗಳಿಗೆ ಲಕ್ಷ್ಮಿ ಒಲಿಯುತ್ತಾಳೆ ಎನ್ನುವ ಸುದ್ದಿಯಿಂದಾಗಿ ಮತ್ತೆ ಹೋಟೆಲ್ ರೂಮುಗಳು ಬುಕ್ ಆಗತೊಡಗಿದವು, ಸಿನಿಮಾ ಮಂದಿಯಿಂದ ತುಂಬಿ ತುಳುಕಾಡಿತು. ಸಿನಿಮಾ ಮಂದಿ ಬಂದ ಮೇಲೆ ಅವರ ಹಿಂದೆ ಸಾಹಿತಿಗಳ, ಪತ್ರಕರ್ತರ, ಆಕ್ಟಿವಿಸ್ಟ್‌ಗಳ ಅಡ್ಡ ಆಗತೊಡಗಿತು.
ಎಷ್ಟೇ ಬೇಡಿಕೊಂಡರೂ ಒತ್ತಡ ಹಾಕಿದರೂ ಚಾರ್ಲ್ಸ್ ಲಿಫ್ಟ್ ರಿಪೇರಿಗೆ ಒಪ್ಪಲಿಲ್ಲ.
ಎಷ್ಟೋ ಸಲ ಮೊದಲ ಮೂರು ಮಹಡಿ ತುಂಬಿ ಮಿಕ್ಕ ನಾಲ್ಕು ಮಹಡಿಗಳಿಗೆ ರೂಮ್ ಬುಕ್ ಮಾಡಿ ಬರುವವರು ಚಾರ್ಲ್ಸ್ ಗೆ ಇನ್ನಿಲ್ಲದ ಶಾಪ ಹಾಕಿ ಮೆಟ್ಟಿಲು ಹತ್ತುತ್ತಿದ್ದರು. ಚಾರ್ಲ್ಸ್ ಕಣ್ಣಿಗೆ ನಿಯತ್ತಿನಂತೆ ಕಂಡವರಿಗೆ ಇಷ್ಟು ಅಂತ ಚಾರ್ಜ್ ಮಾಡುತ್ತಿರಲಿಲ್ಲ, ಅವರು ಕೊಟ್ಟಷ್ಟು ಕೊಟ್ಟಾಗ ತೆಗೆದುಕೊಳ್ಳುತ್ತಿದ್ದ. ಮಿಕ್ಕವರಿಗಾದರೆ ಮೊದಲು ಒಟ್ಟು ಬಾಡಿಗೆ ತೆಗೆದುಕೊಂಡು ಆಮೇಲೆ ಕೀ ಕೊಡುತ್ತಿದ್ದ.
ಒಂದು ಸಲ ಏಳನೇ ಮಹಡಿಯಲ್ಲಿದ್ದ ಉತ್ತರ ಭಾರತದ ಸಿನಿಮಾ ಮಂದಿಯವನೊಬ್ಬ ರೂಮು ಖಾಲಿ ಮಾಡದೇ ಒಂದು ದಿನ ಎಕ್ಸ್ಟ್ರಾ ಕೇಳಿದ್ದಕ್ಕೆ, ಚಾರ್ಲ್ಸ್ ತನ್ನ ರೂಮಿನಲ್ಲಿದ್ದ ಮಾವ್ರಿಕ್ ಮಾದರಿಯ ಗನ್ ತೋರಿಸಿ ಓಡಿಸಿದ್ದ. ಅವತ್ತಿನಿಂದ ಯಾರೂ ಎಕ್ಸ್ಟ್ರಾ ಕೇಳೋದಿಲ್ಲ, ಉಳಿಯೋದು ಇಲ್ಲ.
ಲಂಕೇಶರು ಮೆಟ್ಟಿಲು ಹತ್ತುವಾಗ ಮೂವತ್ತರ ಯುವಕ ಮಾರ್ಕ್ವೆಜ್ ದುಡುದುಡು ಮೆಟ್ಟಿಲು ಇಳಿದು ಓಡುತ್ತಿದ್ದ, ಅದೇ ಆತುರದಲ್ಲಿ ಲಂಕೇಶರಿಗೂ ಗುದ್ದಿದ, ಎರಡು ಶ್ರೇಷ್ಠ ಸಾಹಿತ್ಯ ಕ್ರಿಯಾಶಕ್ತಿಗಳು ಗುದ್ದಿಕೊಂಡ ಅಪರೂಪದ ಗಳಿಗೆಯದು. ಲಂಕೇಶರಿಗೆ ಇವನನ್ನು ಎಲ್ಲೋ ನೋಡಿದ್ದೇನೆ ಎನಿಸಿತು, ಮಾರ್ಕ್ವೆಜ್ ಲಂಕೇಶರಿಗೆ ಸಾರಿ ಹೇಳಿ ಮೆಟ್ಟಿಲು ಇಳಿಯುತ್ತಿದ್ದ, ಕೆಳಗೆ ಅವನಿಗಾಗಿ ಅವನ ಮಡದಿ ಮರ್ಷಿಡಿಸ್ ಕಾಲ್ ಮಾಡಿದ್ದಳು, ಕೊಲಂಬಿಯಾದಿಂದ.
ಅವಳು ಪ್ರತಿ ನಿತ್ಯ ಅದೇ ಸಮಯಕ್ಕೆ ಫೋನ್ ಮಾಡುತ್ತಿದ್ದಳು. ರೂಮಿನಲ್ಲಿ ಫೋನಿನ ಕನೆಕ್ಸನ್ ಇಲ್ಲ ಜೊತೆಗೆ ಕೆಟ್ಟು ನಿಂತ ಲಿಫ್ಟ್ ಕಾರಣ, ಮಾರ್ಕ್ವೆಜ್ ಪ್ರತಿ ಸಂಜೆ ನಾಲಕ್ಕು ಐವತ್ತೈದಕ್ಕೆ ರೂಮಿನಿಂದ ದುಡುದುಡು ಮೆಟ್ಟಿಲು ಇಳಿದು ಬಂದು ಫೋನ್ ಅಟೆಂಡ್ ಮಾಡುತ್ತಿದ್ದ.
ಲಂಕೇಶರಿಗೆ ಡಿಕ್ಕಿ ಹೊಡೆದ ಕಾರಣ ಇಪ್ಪತ್ತು ಸೆಕೆಂಡುಗಳು ಲೇಟಾಯ್ತು, ಕೆಳಕ್ಕೆ ಬಂದವನೇ ರಿಸೀವರ್ ಎತ್ತಿಕೊಂಡು
"ಹಾಯ್ ಡಿಯರ್" ಎಂದ
"ಇವತ್ತು ಕೂಡ ಮನೆಯ ಓನರ್ ಬಂದು ನಿಂತಿದ್ದಾನೆ, ಮೂರು ತಿಂಗಳ ಬಾಡಿಗೆ ಬಾಕಿ ಇದೆ, ಕೊಟ್ಟರೆ ಸರಿ ಇಲ್ಲ ಮನೆಯಲ್ಲಿರುವ ಸಾಮಾನೆಲ್ಲ ಎಸೆಯುವೆ ಎಂದ, ಈಗಲೂ ಬಾಗಿಲ ಬಳಿಯೇ ಕುಳಿತಿದ್ದಾನೆ" ಎಂದಳು.
ಅವಳ ಧ್ವನಿಯಲ್ಲಿ ನೋವು ದುಃಖ ಅವಮಾನ ಎಲ್ಲವೂ ಅಡಗಿತ್ತು, ಪಕ್ಕದಲ್ಲಿ ಒಡೆದ ಧ್ವನಿಯ ಕೆಮ್ಮು ಕೇಳಿಸಿತು, ಅದು ಅವನದೇ ಸಿಡುಕು ಮುಖದ ಓನರ್, ಕೂತಲ್ಲಿಂದಲೇ
"ಆಗುತ್ತಾ ಇಲ್ವಾ?" ಎಂದು ಬೆದರಿಸುವ ಧ್ವನಿಯಲ್ಲಿ ಕೇಳುತ್ತಿದ್ದಾನೆ.
"ನಿಜ ಹೇಳು ನಿನ್ನ ಕಾದಂಬರಿ ಮುಗಿಸಲು ಇನ್ನೆಷ್ಟು ಸಮಯ ಬೇಕು?"
"ಇನ್ನೊಂದು ಮೂರು ತಿಂಗಳು"
ಕೆಮ್ಮುವ ಧ್ವನಿ ಹತ್ತಿರವಾಯ್ತು, "ಆಗುತ್ತಾ ಇಲ್ವಾ?" ಎಂಬ ಮತ್ತದೇ ಬೆದರಿಕೆಯ ಧ್ವನಿ
"ಗಾಬೋ ಇನ್ನು ಮೂರು ತಿಂಗಳಲ್ಲಿ ಕಾದಂಬರಿ ಮುಗಿಸುತ್ತಾನೆ, ಆರು ತಿಂಗಳ ಬಾಡಿಗೆ ಒಟ್ಟಿಗೆ ಕೊಡುತ್ತೇವೆ, ಇದು ನನ್ನ ಹೊಟ್ಟೆಯೊಳಗೆ ಮಿಸುಕಾಡುತ್ತಿರುವ ಮಗುವಿನ ಮೇಲಾಣೆ" ಎಂದಳು.
"ಸರಿ, ಮೂರು ತಿಂಗಳು ಬಿಟ್ಟು ಬರ್ತೀನಿ" ಎಂದು ಕೆಮ್ಮುವ ಧ್ವನಿ ಕಮ್ಮಿಯಾಗುತ್ತ ಕೊನೆಯಾಯ್ತು.
ಮಾರ್ಕ್ವೆಜನಿಗೆ ಹೃದಯ ತುಂಬಿ ಬಂತು, ಪಕ್ಕದಲ್ಲಿದ್ದರೆ ಹೆಂಡತಿಯ ತುಟಿಗಳನ್ನು ಕಚ್ಚಿ ಗಾಯಗೊಳಿಸುತ್ತಿದ್ದ, ಅವಳೋ ಬಲು ದೂರದಲ್ಲಿದ್ದಾಳೆ, "ಲವ್ ಯೂ ಮರ್ಸಿ" ಎಂದ, ಮರ್ಸಿ "ಲವ್ ಯು ಗಾಬೋ" ಎಂದಳು.
ರೂಪಸಿ ಹೆಂಡತಿಯ ನೆನಪುಗಳಿಂದ ಮಂಜಾದ ಕಣ್ಣಿನಲ್ಲಿ ಮಾರ್ಕ್ವೆಜ್ ತನಗೆ ಬಂದ ಪತ್ರಗಳನೆಲ್ಲ ಮಗುವಿನಂತೆ ಎತ್ತಿಕೊಂಡು ಒಂದೊಂದೇ ಮೆಟ್ಟಿಲನ್ನು ಏರತೊಡಗಿದ.
ಒಂದೊಂದು ಮೆಟ್ಟಿಲು ಏರತೊಡಗಿದಂತೆ ತನ್ನ ತಾತನ ನೆನಪಾಯ್ತು, ಅವನೊಟ್ಟಿಗೆ ಕಳೆದ ಅದ್ಭುತ ಗಳಿಗೆಗಳು ನೆನಪಾದವು, ತಾತ ಹೇಳುತ್ತಿದ್ದ ಯುದ್ಧದ ಕತೆಗಳು, ರಾಜಕೀಯ ಕತೆಗಳು ನೆನಪಾದವು, ತನಗೆಂದು ಬಾರದ ಪಿಂಚಣಿಯ ಕಷ್ಟ ನೋವು ಎಲ್ಲವೂ ಹಂಚಿಕೊಂಡ ನೆನಪುಗಳು ತೇಲಿಬಂದವು, ಮನೆಯ ಸುತ್ತಲೂ ದೆವ್ವಗಳು ಕಾಣುತ್ತಿವೆ ಎನ್ನುತ್ತಿದ್ದ ಅಜ್ಜಿಯ ನೆನಪಾಯ್ತು, ಊರ ಹಾಸ್ಪೆಟ್ಟಿಲಿನಲ್ಲಿ ಕೆಲಸ ಮಾಡುತ್ತಿದ್ದ ಅವನ ಮೊದಲ ಪ್ರಿಯತಮೆಯ ತುಟಿಗಳು ನೆನಪಾದವು.
ತಲೆಯಲ್ಲಿ ಕತೆಯೊಂದು ಹುಟ್ಟಿತು, ವೇಗವಾಗಿ ಮೆಟ್ಟಿಲು ಹತ್ತತೊಡಗಿದ.
ಇತ್ತ ಲಂಕೇಶರು ಸಿಗರೇಟು ಮೇಲೆ ಸಿಗರೇಟು ಸುಡುತ್ತಿದ್ದರು. ಅವರಿಗೆ ಐನೂರು ರೂಪಾಯಿಯ ಸಾಲ ಕುತ್ತಿಗೆಗೆ ಬಂದಿತ್ತು. ಸಾಲ ಕೊಟ್ಟವನು ಹೃದಯ ದಾರಿದ್ರ್ಯ ಮೆತ್ತಿಕೊಂಡವನು. ಹೆಂಡತಿ ಇಂದಿರಾಳ ಸೀರೆ ಅಂಗಡಿ ಬಳಿ ಹೋಗಿ ಲಂಕೇಶರನ್ನು ಬೈಯ್ದಿದ್ದ, ಇಂದಿರಾ ಲಂಕೇಶರಿಗೆ ಹೇಳಿದಾಗ, ಲಂಕೇಶರು ಹಲ್ಲು ಕಡಿದು ‘ರಾಸ್ಕಲ್’ ಎಂದು ಬೈದಿದ್ದರು.
ಕೂಡಲೇ ಅವರಿಗೆ ಐನೂರು ರೂಪಾಯಿ ಅವನ ಮುಖಕ್ಕೆ ಎಸೆಯಬೇಕು ಅನಿಸಿತ್ತು. ಇರುವುದೊಂದೇ ದಾರಿ ಬೆನ್ನು ಬಿದ್ದ ಯಾವುದಾದರೊಬ್ಬ ಪ್ರಕಾಶಕನಿಗೆ ಒಂದು ಪುಸ್ತಕ ಬರೆದು ಕೊಡುವುದು. ಸಾವಿರ ಪ್ರತಿಗೆ ಐನೂರು ರಾಯಧನ.
ಮನೆಯಲ್ಲಿ ಒಂದಕ್ಷರವೂ ಮೂಡದೇ, ಸೀದಾ ನಾಲ್ಕು ಶರ್ಟ್ ಪ್ಯಾಂಟ್ ಒಂದಿಷ್ಟು ಓದಬೇಕಾದ ಪುಸ್ತಕಗಳು ಎರಡು ಪ್ಯಾಕ್ ಸಿಗರೇಟು ಹಿಡಿದು ಸೀದಾ ಹೋಟೆಲ್ ಪೊಯೆಟ್ರಿಗೆ ಬಂದಿದ್ದರು.
ಬಂದು ಎರಡು ದಿನವೂ ತಲೆಗೆ ಒಂದು ಅಕ್ಷರವೂ ಹತ್ತಲಿಲ್ಲ, ಪೆನ್ನಿನಲ್ಲಿ ಒಂದಕ್ಷರವೂ ಮೂಡಲಿಲ್ಲ, ಎಷ್ಟೋ ವಿಷಯಗಳ ದೊಡ್ಡ ಟಿಪ್ಪಣಿಯ ಪುಸ್ತಕ ಇದ್ದರೂ ಅದರಲ್ಲಿ ಹೆಕ್ಕಿಕೊಂಡು ಒಂದೇ ಗುಕ್ಕಿನಲ್ಲಿ ಬರೆದು ಮುಗಿಸುವ ಯಾವ ವಿಷಯಗಳು ಇರಲಿಲ್ಲ.
ಸಿಗರೇಟು ಸೇದೋದು, ಹೋಟೆಲ್ ಹೊರಗಿದ್ದ ಪೆಟ್ಟಿಗೆ ಅಂಗಡಿಯ ಟೀ ಕುಡಿಯೋದು, ಬನ್ ತಿನ್ನೋದು, ಪತ್ರಿಕೆ ಶುರು ಮಾಡಲು ಬೇಕಾದ ಸಿದ್ಧತೆಗಳ ಪಟ್ಟಿ ಮಾಡೋದು, ದಿನಕ್ಕೊಮ್ಮೆ ಮನೆಗೆ ಫೋನ್ ಮಾಡಿ "ಆ ರಾಸ್ಕಲ್ ಸಾಲ ಕೇಳಕ್ಕೆ ಮತ್ತೆ ಬಂದಿದ್ನ?" ಎಂದು ಕೇಳಿ ಬಂದಿದ್ರೆ ಹಲ್ಲು ಕಡಿದು ಫೋನ್ ಇಟ್ಟುಬಿಡೋದು ಇಷ್ಟೇ ಆಗುತ್ತಿತ್ತು.
ಮೂರನೇ ದಿನ ಟೀ ಕುಡಿಯಲು ಮೆಟ್ಟಿಲು ಇಳಿಯುವಾಗ ಮಾರ್ಕ್ವೆಜ್ ಮತ್ತೆ ಲಂಕೇಶರಿಗೆ ಗುದ್ದಿದ, ಈ ಸಲ ಮಾರ್ಕ್ವೆಜ್ ಬಲು ಗೆಲುವುನಲ್ಲಿದ್ದ, ನೀಟಾಗಿ ಗಡ್ಡ ಸೇವ್ ಮಾಡಿಕೊಂಡಿದ್ದ, ಸಾರಿ ಕೇಳಿ ಲಂಕೇಶರನ್ನು ತಬ್ಬಿ ಮೆಟ್ಟಿಲು ಇಳಿದಿದ್ದ, ಏಕಾಏಕಿ ಗಂಡಸೊಬ್ಬ ತನ್ನನು ತಬ್ಬಿಕೊಂಡಿದ್ದು ಯಾರಾದರೂ ನೋಡಿದ್ದಾರಾ ಎಂದು ಲಂಕೇಶರು ಒಮ್ಮೆ ಸುತ್ತ ಕಣ್ಣಾಡಿಸಿ "ಈಡಿಯಟ್" ಎಂದು ಬೈದು ಕೆಳಗೆ ಇಳಿದು ಟೀ ಅಂಗಡಿ ಕಡೆ ಹೋದರು. ಮಾರ್ಕ್ವೆಜ್ ತನ್ನ ಹೆಂಡತಿ ಜೊತೆ ಬಲು ಖುಷಿಯಲ್ಲಿ ಫೋನಿನಲ್ಲಿ ಮಾತಾಡುತ್ತಿದ್ದ.
ವಾಪಸು ಹೋಟೆಲೊಳಗೆ ಬರುತ್ತಾ "ಯಾರೀ ಅವನು ಹುಚ್ಚ ಯಾವಾಗಲೂ ಗುದ್ದುಕೊಂಡು" ಎಂದು ಚಾರ್ಲ್ಸ್ ನನ್ನ ಕೇಳಿದರು. ಚಾರ್ಲ್ಸ್ ಅವನ ಹೆಸರು ಮಾರ್ಕ್ವೆಜ್ ಎಂದು, ಪತ್ರಕರ್ತ ಕೂಡ, ಒಳ್ಳೊಳ್ಳೆ ಕತೆ ಬರೀತಾನೆ, ಇವಾಗ ಏನು ಬರೆದಿಲ್ಲ, ಮನೇಲಿ ಬೇರೆ ಬಡತನ, ಏನಾದ್ರೂ ಮಾಡಿ ಒಂದು ಕಾದಂಬರಿ ಬರೀಬೇಕು ಅಂತ ಹಠಕ್ಕೆ ಬಿದ್ದಿದ್ದಾನೆ. ಆ ಕಾದಂಬರಿಯಿಂದ ಬದುಕು ಹೊಸ ದಿಕ್ಕಿಗೆ ಹೋಗುತ್ತೆ ಅಂತ ಇನ್ಟ್ಯೂಷನ್ ಅಂತೇ, ಹಠಕ್ಕೆ ಬಿದ್ದು ಬರೀತಾ ಇದ್ದಾನೆ, ಇವತ್ತು ಮುಗೀತಂತೆ, ಅದನ್ನೇ ಹೆಂಡತಿ ಜೊತೆ ಮಾತಾಡ್ತಿದ್ದ ಎಂದು ಹೇಳಿ ನಿಲ್ಲಿಸಿದ.
"ಪರವಾಗಿಲ್ಲ ರೀ" ಎಂದು ಲಂಕೇಶರು ಕಣ್ಣರಳಿಸಿ ಸಿಗರೇಟು ಎಳೆದುಕೊಂಡರು ಜೇಬಿನಿಂದ, ಜೊತೆಗೆ ಚಾರ್ಲ್ಸ್ ನಿಗೂ ಕೊಟ್ಟರು. "ತಲೆ ಕೆಟ್ಟೋಗಿದೆ ಕಣಯ್ಯಾ, ಒಂದಕ್ಷರನು ಬರೀಯಕ್ ಆಗ್ತಿಲ್ಲ" ಎಂದರು ಹೊಗೆ ಬಿಡುತ್ತ, ಚಾರ್ಲ್ಸ್ "ನೀವು ಒಳ್ಳೆಯ ರೈಟರ್, ನೀವು ಯಾಕೆ ನನ್ನ ಕವಿತೆಗಳನ್ನು ಅನುವಾದಿಸಬಾರ್ದು? ನನಗೂ ಕನ್ನಡಕ್ಕೆ ನನ್ನ ಕವಿತೆ ಬಂದ್ರೆ ಖುಷಿ ನೆಮ್ಮದಿ ಆರಾಮಾಗಿ ಪ್ರಾಣ ಬಿಡ್ತೀನಿ" ಎಂದ. ತೀರಾ ಅಸ್ತವ್ಯಸ್ತವಾಗಿ ಕಾಣುವ ಇವನಲ್ಲೂ ಕವಿತೆ ಅರಳಿರೋದು ಕೇಳಿ ಲಂಕೇಶರು ಒಂದು ಕ್ಷಣ ದಂಗುಬಡಿದಂತೆ ನಿಂತರು. ಆಮೇಲೆ ನಾನ್ಯಾಕೆ ಸೃಜನಶೀಲತೆಯನ್ನ ಮುಖದಿಂದ ಅಳೆಯುತ್ತಿದ್ದೇನೆ ಎಂದು ತನ್ನನು ಹಳಿದುಕೊಂಡು
"ಪರವಾಗಿಲ್ಲ ಕಣಯ್ಯಾ, ನೀನು ಕವಿತೆ ಕುಟ್ಟುತ್ತಿಯಾ?" ಎಂದು ಚಾರ್ಲ್ಸ್ ಕೈಗಿತ್ತ ಮಸಿ ಮಸಿ ಹಾಳೆಗಳಲ್ಲಿದ್ದ ಇಂಗ್ಲಿಷ್ ಭಾಷೆಯಲ್ಲಿದ್ದ ಕವಿತೆಗಳ ಗುಚ್ಛವನ್ನು ಹಿಡಿದು ರೂಮಿಗೆ ಹೋದರು.
ಮೂರು ದಿನ ಲಂಕೇಶರಿಗೆ ಈಚೆ ಬರಲು ಆಗಲಿಲ್ಲ, ಚಾರ್ಲ್ಸ್ ಬೋದಿಲೇರ್ ಎನ್ನುವ ಪೂರ್ತಿ ಹೆಸರಿನ ಆ ವ್ಯಕ್ತಿ ತನ್ನ ಅವಮಾನವನ್ನ, ವಿಕ್ಷಿಪ್ತತೆಯನ್ನ, ತನ್ನ ವಾಂಛೆಯನ್ನ, ಹಾದರವನ್ನ, ಪ್ರೀತಿಯನ್ನ, ಸ್ತ್ರೀ ಲೋಲುಪ್ತತೆಯನ್ನ, ಕಾಮವನ್ನ, ಬದುಕನ್ನ ಪದಗಳಲ್ಲಿ ಹೊಸೆದು ಹೊಸೆದು ಗೀಚಿದ ಪದ್ಯಗಳು, ಸ್ವಗತಗಳು, ನೀಳ್ಗವಿತೆಗಳು ಲಂಕೇಶರನ್ನು ಯಾವ ಮಟ್ಟಿಗೆ ಕಾಡಿತ್ತೆಂದರೆ ಆ ಕವಿತೆಗನ್ನು ಅನುವಾದಿಸಲೆಂದೇ ತನಗೆ ಬರಹ ದಕ್ಕಿದೆ ಎಂದು ಕೂತು ಬರೆಯತೊಡಗಿದರು.
ಒಂದು ವಾರ ಈಚೆ ಬರಲಿಲ್ಲ.
ಇತ್ತ ಚಾರ್ಲ್ಸ್ ‘ತಾನು ಕವಿತೆ ಕೊಟ್ಟು ತಪ್ಪು ಮಾಡಿದೆ, ಹರಿದು ಬಿಸಾಕಿರ್ತನೆ’ ಎಂದುಕೊಂಡ.
ಹತ್ತನೇ ದಿನಕ್ಕೆ ಲಂಕೇಶರು ಈಚೆ ಬಂದರು. ತಾನು ಅನುವಾದಿಸಿದ ಕವಿತೆಗಳ ಗುಚ್ಛವನ್ನು ಅವನ ಕೈಗಿತ್ತು, ಅವನ ಕೈ ಹಿಡಿದು ಮಗುವಂತೆ ಅತ್ತುಬಿಟ್ಟರು.
ಚಾರ್ಲ್ಸ್ ಕೈಯಲ್ಲಿದ್ದ ಹಸ್ತಪ್ರತಿಯಲ್ಲಿ ಲಂಕೇಶರು ಅನುವಾದಿಸಿದ ಕವಿತಾ ಸಂಕಲನದ ಶೀರ್ಷಿಕೆ ಅವರ ಕೈಬರಹದಲ್ಲೇ ಇತ್ತು.
"ಪಾಪದ ಹೂಗಳು"
ಮರುದಿನವೇ ಲಂಕೇಶರು ಹೊಟೇಲಿಂದ ಚೆಕ್ ಔಟ್ ಆದರು. ಒಂದು ತಿಂಗಳಲ್ಲೇ ಚಾರ್ಲ್ಸ್ ಬೋದಿಲೇರ್ ನ ಕವಿತೆಗಳು ಕನ್ನಡದಕ್ಕೆ ಬಂದಾಯ್ತು. ಲಂಕೇಶರ ಐನೂರು ರೂಪಾಯಿ ಸಾಲ ತೀರಿಸಲು ಹುಟ್ಟಿದ ಪುಸ್ತಕ ಹಲವು ನೊಂದ ಮನಸುಗಳನ್ನು ತಟ್ಟಿದ್ದು ಆಯಿತು, ಇತ್ತ ಲಂಕೇಶರ ಪಾಪದ ಹೂಗಳು ಅರಳಿ ನಿಂತರೆ, ಅಲ್ಲಿ ಮಾರ್ಕ್ವೆಜನ ‘ನೋ ಒನ್ ರೈಟ್ಸ್ ಟು ಕರ್ನಲ್’ ಭರ್ಜರಿಯಾಗಿ ಸೇಲ್ ಆಗುತ್ತಿತ್ತು, ಆರು ತಿಂಗಳ ಬಾಡಿಗೆ ಕೊಟ್ಟು ಆದರೆ ಮಾರ್ಕ್ವೆಜ್ ಕಾಣೆಯಾಗಿದ್ದ.
ಅವನ ಕಾರು ತಾನು ಕಂಡ ಬಾಲ್ಯದ ಊರಿನ ಕಡೆ ಹೊರಟಿತ್ತು, ಜೊತೆಗೆ ಮರ್ಸಿಡಿಸ್ ಮತ್ತು ಪುಟ್ಟ ಕಂದ, ಮಾರ್ಕ್ವೆಜ್ ಮನದಲ್ಲಿ ಆಗಲೇ 'ಥೌಸಂಡ್ ಇಯರ್ಸ್ ಆ ಸಾಲಿಟ್ಯೂಡ್' ಎಂಬ ಬೃಹತ್ ಕಾದಂಬರಿಯ ಹೆಜ್ಜೆ ಗುರುತುಗಳು ಮೂಡುತ್ತಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.