ADVERTISEMENT

ಕಥೆ: ಚಕ್ರಬಂಧ

ನಂದಿನಿ ವಿಶ್ವನಾಥ ಹೆದ್ದುರ್ಗ
Published 17 ಏಪ್ರಿಲ್ 2021, 19:30 IST
Last Updated 17 ಏಪ್ರಿಲ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ರೀ..ಇವತ್ತು ಕೆಲಸದವರು ಬರ್ತಾರಾ…?

ರೂಫಿಂಗಿನವರು ಬಂದ್ರೆ ಮೊದಲು ಡೈನಿಂಗ್ ಹಾಲ್ ಗ್ಲಾಸ್ ಫಿಟ್ಟಿಂಗ್ ಕೆಲಸ ಮುಗಿಯಲಿ.

ರೀ..ಕೇಳಿದ್ರಾ?’

ADVERTISEMENT

ಮೊಬೈಲಿನಲ್ಲಿ ಯಾವುದೋ ವಿಡಿಯೋ ನೋಡ್ತಾ ಕುಳಿತವನಿಗೆ ತನ್ನ ಮಾತು ಕೇಳಿತೋ ಇಲ್ಲವೋ ಅನುಮಾನವಾಗಿ ಜಾಹ್ನವಿ

‘ರೀ...ಇವತ್ತು ಡೈನಿಂಗ್ ಹಾಲ್‌ದು…’ ಮತ್ತೆ ಕರೆಯುತ್ತಾ ಹೊರಜಗುಲಿಗೆ ಬಂದಳು.

ಅವನು ಬಚ್ಚಲು ಮನೆ ಕದ ಮುಚ್ಚಿದ್ದು ಕೇಳಿತು.

ಅದೂ ಸರಿಯೇ.ಕೇಳಿರುತ್ತೆ.

ಅಮ್ಮ ಮೊನ್ನೆಯಷ್ಟೆ ಹೇಳಿದ್ದಳು.‘ನಿನ್ನ್ ಗಂಡ ಮನೆ ಕೆಲಸಕ್ಕೆ ಮನಸ್ಸು ಕೊಟ್ಟಿರುವುದೇ ದೊಡ್ಡದು. ಅದೂ ಇದೂ ಅಂತ ಮಾತಾಡಿ ಅವನನ್ನು ಸಿಟ್ಟಿಗೇಳಿಸಬೇಡ.ಮೊದಲೇ ಮುಂಗೋಪಿ.ಕೆಲಸದವರು ಇದ್ದಾರೆ ಅಂತ್ಲೂ ನೋಡಲ್ಲ ಅವನು..ಮಾತಾಡಿ ನೀ ಮನಸ್ಸು ಕೆಡಿಸ್ಕೊಳ್ತೀಯಾ’

ಸದಾ ಅವನ ಪರವಾಗಿಯೇ ಮಾತಾಡ್ತಾಳೆ ಅನಿಸಿದ್ರೂ

ಅಮ್ಮ ಹೇಳುವುದರಲ್ಲಿ ಅರ್ಥವಿದೆ.ಕೆಲಸ ಅಪರೂಪದಲ್ಲಿ ಅಪರೂಪವಾಗಿ ನಡೀತಿದೆ. ಅದೂ ಅವನ ಸ್ವಇಚ್ಛೆಯಿಂದ. ಅವನ ಮೂಡು ಹಾಳಾಗದಂತೆ ಎಚ್ಚರದಿಂದಿರಬೇಕು.

ಅವನು ಸ್ನಾನ ಮುಗಿಸಿದ ಅನಿಸುತ್ತೆ.

‘ರೀ ಜಯಮ್ಮ ಇವತ್ತು ಮನೆ ಹತ್ರ ಬರಲಿ.ಒಂದಷ್ಟು ಕೆಲಸಗಳಿವೆ. ಗಿಡದ ಕಳೆ ತೆಗೀಬೇಕು.ಅಟ್ಟ ಕ್ಲೀನ್ ಮಾಡಬೇಕಿತ್ತು.

ರೀ..

ತಿಂಡಿಗೆ ಬರ್ತೀರಾ

ರೊಟ್ಟಿ ಕೆಂಡಕ್ಕೆ ಹಾಕಲಾ?’

ಅವನು ಫೋನಿನಲ್ಲಿ ಯಾರೊಂದಿಗೋ‌ ಮಾತಾಡ್ತಿದ್ದಾನೆ.

ಹೊರಗಡೆಯಿಂದ ಧ್ವನಿ ಕೇಳಿಸ್ತಿದೆ.

‘ಅಚ್ಚಕಟ್ಟಾಗಿ ತೆಗೀಬೇಕು.ಸೋತರೆಕ್ಕೆ ,ಒಣರೆಕ್ಕೆ ,ಗಂಡು ರೆಕ್ಕೆಗಳನ್ನು ಗಿಡದಲ್ಲಿ ಉಳಿಸಬೇಡಿ.ಹಂಗಂತ ಮುಂಡಗಸಿನೂ ಬ್ಯಾಡ..ನಾನು ಸ್ವಲ್ಪ ತಡೆದು ತೋಟಕ್ಕ ಬರ್ತೀನಿ.ಎಂಟು ಜನವೂ ಬೇರೆಬೇರೆ ಸಾಲು ಹಿಡ್ಕೊಳಿ ಆಯ್ತಾ.

ಇಬ್ರಿಬ್ರೂ ಒಂದೇ ಸಾಲು ಹಿಡ್ಕೊಂಡು ಎಲೆಕುಂಚಿಗೆ ಬಿಚ್ಕೊ ಕೂತಿರಬೇಡಿ ಮತ್ತೆ.

ಬೇಗಬೇಗ ತೆಗಿಬೇಕು’

ಹೆಣ್ಣಾಳಿಗೆ ಅವತ್ತಿನ ಕೆಲಸ ಹೇಳ್ತಿದ್ದಾನೆ. ಈ ಸರ್ತಿ ತೋಟದಲ್ಲಿ ಫಸಲು ಜಾಸ್ತಿ ಇದ್ದಿದ್ದಿರಿಂದ ಗಿಡಗಸಿಯೂ ಜಾಸ್ತಿ ಇದೆ ಅಂತ ಮೊನ್ನೆ ಅವರ ಭಾವನ ಹತ್ರ ಹೇಳ್ತಿದ್ದ.

‘ಎಂಟಾಳಿದ್ದವರು ಈ ವಾರಕ್ಕೆ ಐದಾಗಿದ್ದಾರೆ.ಗೊಬ್ಬರ ಹಾಕೋ ಟೈಮ್ ಬಂದ್ರೂ ತೋಟದ್ದು ಗಿಡಗಸಿ ಆಗಿರಲ್ಲ ಭಾವಯ್ಯ ಈ ಸರ್ತಿ ನಮ್ದು .

ವಾರದಿಂದ ವಾರಕ್ಕೆ ಹೆಣ್ಣಾಳು ಕಮ್ಮಿ ಆಗ್ತಿದ್ದಾರೆ.

ಗದ್ದೆಕೊಯ್ಲು,ಹೊಲಬತ್ತ ,ಜೋಳ ಮುರಿತಿದೀವಿ ಅನ್ನೋದೇ ಮುಗಿತಿಲ್ಲ.

ಹಬ್ಬ ತಿಥಿ ಒಸಗೆ ಮುಗಿಯಲ್ಲ ಅವರಿಗೆ.

ಏನ್ ಕಥೆ ಮಾಡೋದೋ ಏನೋ’

ಬೇಸರದಲ್ಲಿ ಹೇಳಿದ್ದು ಜಾಹ್ನವಿಗೂ ಕೇಳಿತ್ತು.

‘ರೀ ಜಯಮ್ಮನ ಮನೆ ಹತ್ರ ಬರಲಿ ಅಂದಿದ್ದೆ.ನೀವು ನೋಡಿದ್ರೆ ತೋಟಕ್ಕೆ ಕಳಿಸಿ ಆಯ್ತು.,ನಾಳೆ ತಪ್ಪಿಸಬೇಡಿ ಆಯ್ತಾ...ರೀ..ಕೇಳಿಸ್ತಾ?’

ಹೇಗೆ ಕೆಲವು ಪ್ರಶ್ನೆ ಗಳಿಗೆ ಉತ್ತರವಿರುವುದಿಲ್ಲವೋ ಹಾಗೆ ಇಲ್ಲಿ ಜಾಹ್ನವಿ ಕೇಳುವ ಯಾವ ಪ್ರಶ್ನೆಗಳೂ ಉತ್ತರಿಸಲ್ಪಡುವುದಿಲ್ಲ.

ಹಾಗೆ ಉತ್ತರ ಸಿಕ್ಕದ ತನ್ನ ಪ್ರಶ್ನೆಗಳಿಗಾಗಿ ಅವಳೆಂದೂ‌ ನೊಂದದ್ದು ಕಂಡಿಲ್ಲ.

ತನ್ನ ಪ್ರಶ್ನೆಗಳಿಗೆ ತಾನೇ ಉತ್ತರವನ್ನೂ ಅವನಿಗೆ ಪ್ರಶ್ನೆ ರೂಪದಲ್ಲೇ ಕೇಳಿ ಅದಕ್ಕೆ ಪ್ರಶ್ನೆಯಾದರೂ ಉತ್ತರ ರೂಪದಲ್ಲಿ ದೊರಕದೆ ಮತ್ತೆ ಉತ್ತರವನ್ನೂ ಇವಳೇ ಕೇಳ್ತಾ...

ಅದೊಂದು ಚಕ್ರಬಂಧ.

ಜಾಹ್ನವಿಗೆ ತನ್ನ ಬಂಧನದ ಅರಿವಿದ್ದರೂ ಪರಿವೆ ಇಲ್ಲದಂತೆ ಇರುವುದು ಅಭ್ಯಾಸ ಆಗಿಹೋಗಿದೆ.

ಆದರೆ

ಹಾಗಿರುವುದು ಹೇಳುವಷ್ಟು ಸುಲಭವಲ್ಲ.

ಮನೆಯಿಂದ ಹೊರಹೋದಾಗ ಜಾಹ್ನವಿಗೆ ಉತ್ತರಗಳು, ಪ್ರಶ್ನೆಗಳು,ಪ್ರಶ್ನೋತ್ತರಗಳು, ಗಂಟೆಗಟ್ಟಲೆ ಮಾತಾಡುವ ಅವಕಾಶಗಳು ಎಲ್ಲವೂ ಇವೆ.

ಜಾಹ್ನಿವಿಯ ಈ ಎರಡು ತದ್ವಿರುದ್ಧ ಮುಖಗಳು ಕೆಲವೊಮ್ಮೆ ಅವಳಿಗೇ ಅಚ್ಚರಿ ತರುತ್ತಾದಾದರೂ ಅದರ ಬಗ್ಗೆಯೆಲ್ಲಾ ಅಷ್ಟೊಂದು ಗಮನಿಸದ ಸ್ವಭಾವ ಅವಳದ್ದು.

ಯಾರೂ ಇಲ್ಲದಾಗ ಆಗಾಗ

ತನ್ನ ಗಡಸು ಸ್ವರ ತೆಗೆದು ಜೋರಾಗಿ ಹಾಡು ಹೇಳ್ತಾಳೆ ಜಾಹ್ನವಿ.

‘ದೇವರಿಗೊಂದು ಕಾಗದ ಬರೆದು ಭೂಮಿಗೆ ಕರೀಬೇಕು…’

ಅಡುಗೆ ಮನೆಯಲ್ಲಿ ಸಾರು ಪಲ್ಯದ ಜೊತೆಗೆ, ಅನ್ನದ ಜೊತೆಗೆ ,ಪುಲಾವಿನ ಜೊತೆಗೆ ಸಣ್ಣ ಸ್ವರದಲ್ಲಿ ಮಾತಾಡ್ತಿರ್ತಾಳೆ.

ಆಚೆ ಬಂದ್ರೆ ಗುಬ್ಬಕ್ಕನ್ನ ,ನಾಯೀಮರೀನಾ,ಮೊಳೆಯುತ್ತಿರುವ ಹುರುಳಿ ಬೀಜವನ್ನು,ಆಚೆ ಮನೆ ಹಸುವನ್ನ 'ಏನೇ...ಊಟ ಆಯ್ತಾ'ಅಂತ ಕರೀತಾಳೆ.

ಅದ್ಯಾವುದೂ ಇಲ್ಲದಾಗ

ತನ್ನ ಪೋರ್ಟಿಕೊದಲ್ಲಿ ಕೂತ್ಕೊಂಡು ಏನಾದರೂ ಓದುತ್ತಾಳೆ.

ಆಗಾಗ ಮಂಜು ಮಸುಗುಗಣ್ಣಿನಲ್ಲಿ ದೂರದ ಗದ್ದೆ ಬಯಲು ನಿರುಕಿಸಿ ಮತ್ತೆ ಮತ್ತೆ ರೆಪ್ಪೆ ಪಟಗುಡಿಸಿ ಕಾಣದಂತೆ ಕೆನ್ನೆ ಒರೆಸಿ

ಮೂಡುವ ಮುಳುಗುವ ಸೂರ್ಯನನ್ನು ನೋಡುತ್ತಾ 'ಉಹುಹುಹು..ಸುಂದರಾಂಗ'ಅಂತಾಳೆ.

ಅಲ್ಲೆಲ್ಲಿಂದಲೋ ಕೇಳುವ ನವಿಲಿನ‌ ಕೂಗಿಗೆ ಮುಗಿಲಾಗುತ್ತಾಳೆ.

ಅವನು ಸುತ್ತಾಮುತ್ತಾ ಇದಾನೆ ಅಂದಾಗ

‘ರೀ...ಕಿರಿಯೂರಿನ ಸಾದೇವ್ ಫಾರ್ಚೂನರ್ ತಗೋಂಡ್ನಂತೆ ಹೌದಾ?’

ಅಂತಲೋ

‘ನಿಮ್ಮ ಫ್ರೆಂಡ್ ಮಗಳಿಗೆ ಮೆಡಿಕಲ್ ಸೀಟ್ ಆಯ್ತೇನ್ರೀ? ಅಂತಲೋ

‘ನಾಳೆಗೆ ದೋಸೆಗೆ ನೆನೆ ಹಾಕಲಾ?’ ಅಂತಲೋ

‘ಅವಳು ವಿಪರೀತ ದಪ್ಪಗಾಗಿದ್ದಾಳೆ ಗಮನಿಸಿದ್ರಾ?’ ಅಂತಲೋ

‘ಹೆಂಗಿದ್ರೂ ರಾತ್ರಿ ಒಬ್ಬಳೇ ಅಲ್ವಾ...ಊಟದ ಬದಲು ಹಾಲು ಕುಡಿದ್ರೆ ಆಯ್ತು.’

ಒಟ್ಟಾರೆ ಏನಾದರೊಂದು ಮಾತಾಡುತ್ತಲೇ ಇರುತ್ತಾಳೆ.

ಅವನು ಮನೆಯಲ್ಲಿರುವ ಅಷ್ಟೂ ಹೊತ್ತೂ ಮೊಬೈಲಿನಲ್ಲಿ ತಲೆ ತೂರಿಸ್ಕೊಂಡಿದ್ದರೂ ಇವಳ ಮಾತೇನೂ ನಿಲ್ಲವುದಿಲ್ಲ

ಹೆಚ್ಚಿನ ಬಾರಿ ಇವಳ ಪ್ರಶ್ನೆಗಳು ಮುಗಿದಿರುವುದೇ ಇಲ್ಲ. ಅವನು ಫೋನಿನಲ್ಲಿ ಯಾರೊಂದಿಗೋ ಮಾತು ಆರಂಭಿಸಿರ್ತಾನೆ.

‘ರೀ..ಬಡ್ಸಿದ್ದೀನಿ..ಬಂದ್ರಾ’

ಪೂಜೆ ಮುಗಿಸಿ

ಹಣೆಯಲ್ಲಿ ವಿಭೂತಿ ಗಂಧ ಧರಿಸಿ ಬಂದವನನ್ನೇ ನೋಡ್ತಾ

‘ಚೆಂದ ಕಾಣ್ತೀದ್ದೀರಾ ಕಣ್ರೀ’

ಒಂದು ರೊಟ್ಟಿಯನ್ನು ಮೂರೇ ತುತ್ತಿಗೆ ತುರಕುವನನ್ನು ನೋಡ್ತಾ ಸುಮ್ಮನೇ ಹೇಳಿದಳು.

ಅವನೊಮ್ಮೆ ಕತ್ತೆತ್ತಿದವನು ಮತ್ತೆ ತಟ್ಟೆ ನೋಡ್ತಾ ರೊಟ್ಟಿಯನ್ನು ಮುರಿದು‌ ಚಟ್ನಿಗೆ ಅದ್ದಿದ.

‌‘ರೀ…

ರೂಫಿಂಗಿನವರು ಬಂದ್ರೆ….’


"ಇಲ್ಲಿಂದ ಮೊದಲು ಕ್ಲಿಯರ್ ಮಾಡ್ತಾ ಹೋಗಿ..ಒಂದು ಕಡೆಯಿಂದ ಕೆಲಸ ಆದ ಹಾಗೆ ಆಗುತ್ತೆ.

ಪ್ಲೈನ್ ಗ್ಲಾಸ್ ತಂದಿದ್ದೀರಾ ಅಲ್ವಾ"

ಜಾಹ್ನವಿ ಗಡಿಬಿಡಿಯಲ್ಲಿ ಅಮ್ಮನದೊಂದು ಹಳೆಯ ಸೀರೆಯನ್ನೂ, ತನ್ನ ದುಪ್ಪಟ್ಟಾಗಳನ್ನು ಡೈನಿಂಗ ಟೇಬಲ್ಲು ಕುರ್ಚಿಗಳಿಗೆ ಧೂಳಾಗದಂತೆ ಮುಚ್ಚಿದಳು.

‘ಇವರೇ..

ನಾ ಹೇಳಿದ್ದು .ಪ್ಲೈನ್ ಗ್ಲಾಸು.ತಂದಿದ್ದೀರಾ ತಾನೇ?’

ಸ್ವಲ್ಪ ಏರುಸ್ವರದಲ್ಲಿ ಕೇಳಿದಳಾದರೂ

ರೂಫಿಂಗಿನವರು ಹೊರಗಿದ್ರು ಕಾಣುತ್ತೆ.

ಯಾರೂ ಉತ್ತರಿಸಲಿಲ್ಲ.

‘ಇದಕ್ಕೆ ಏಣಿ ಹಾಕ್ಕೊಳ್ಳಿ.ಒಂದೇ ಸ್ಟೂಲ್ ತಂದ್ರೆ ಸಾಕಾಗುತ್ತೇನಪ್ಪಾ.

ಮೋಸ್ಟಲಿ ಇದು ಸರಿಯಾಗಬಹುದು ನೋಡಿ’

ರೂಫಿಂಗನವರಿಗೆ ಅವನೇನೋ ಹೇಳ್ತಿದ್ದಾನೆ.

ಹೊರಜಗುಲಿಯ ಕೆಲಸಕ್ಕೆ ಅಳತೆ ನೋಡ್ತಿದ್ದಾರೆ‌

ಕೆಲಸದವರು.

ಹೊರಗಿಂದ ಏಣಿ ಇಟ್ಕೊಳ್ತಿದ್ದಾರೆ ಗೋಡೆಗೆ.

‘ಅಲ್ಲಾ..ಡೈನಿಂಗ್ ಹಾಲಿಂದ ಶುರು ಮಾಡಿ ಅಂದಿದ್ದೆ ನಾನು..’

ಹೇಳಬೇಕೆಂದಿದ್ದನ್ನು ಹಾಗೇ ನುಂಗಿಕೊಂಡು

ಜಾಹ್ನವಿ ಸುಮ್ಮನಾದಳು.

ಇಲ್ಲ.

ತಾನು ಏನೂ ಕೇಳಬಾರದು.

ಕೆಲಸದವರ ಎದುರೇ ಅವನು ಧ್ವನಿ ಎತ್ತರಿಸಿದರೆ ಅಥವಾ ನನ್ನ ಮಾತನ್ನು ನಿರ್ಲಕ್ಷ್ಯ ಮಾಡಿದರೆ.?

ಉಹೂ.

ಎರಡೂ ಅಪಮಾನವೇ.

ಹೊರಗಿನ ಜನಗಳಿಗೆ ಒಳಗಿನ ನಾನು ತಿಳಿಯಬಾರದು.

ಯಾಕೆಂದರೆ ಸಮಾಜಕ್ಕೆ 'ಜಾಹ್ನವಿ ಬನದೂರು 'ಅಂದರೆ ವಿಶೇಷ ಗೌರವ ಇದೆ.

ಅದು ಎಲ್ಲೂ ತೆಳುವಾಗಬಾರದು.

ತಮಾಷೆ ಅಂದ್ರೆ

ಹೀಗೆಲ್ಲಾ ಅಂದುಕೊಳ್ಳುವುದೂ ಕೂಡ ಅವಳಿಗೆ ಬರುವುದಿಲ್ಲ.

ಒಂದೊಮ್ಮೆ ಅವಳು ಹಾಗೆ ಅಂದುಕೊಂಡಿದ್ದರೆ.?

ಛೆಛೆ...ಇಲ್ಲ… ಹಾಗೆ ಯೋಚಿಸಲೂ ಆಗುವುದಿಲ್ಲ.

‘ರೀ?’

ಅಭ್ಯಾಸ ಬಲ.

ಕರೆಯುತ್ತಾಳೆ.

ಉಹು ..ಅವನ ಮೂಡ್ ಹಾಳಾಗಿಸಬಾರದು.ಸದ್ಯ ಅದು ಮುಖ್ಯ.

ರೂಫಿಂಗಿನವರು ಗೋಡೆಯನ್ನು ಸಣ್ಣಗೆ ಡ್ರಿಲ್ ಮಾಡ್ತಿದ್ದಾರೆ.ಮೊದಲೇ ಹಳೆಮನೆ ಗೋಡೆ.ಮಣ್ಣಿಗೆ ಸಿಮೆಂಟಿನ ಪ್ಲ್ಯಾಸ್ಟರಿಂಗು.

ಹೊರಗೆ ನೋಡ್ಲಿಕ್ಕೆ ವಿಪರೀತ ನಾಜೂಕಾಗಿ ಗಟ್ಟುಮುಟ್ಟಾಗಿ ಕಾಣುತ್ತೆ.


‘ನಾಜೂಕಾಗಿ’

ಯಾಕೋ ಸಣ್ಣಗೆ ನಗುಬಂತು ಕತೆಗಾರ್ತಿಗೆ.

ಎಷ್ಟೊಂದು ವಿಟ್ಟಿ ಪದ ಈ 'ನಾಜೂಕಾಗಿ'ಎಂಬುದು!!

ಕಥೆ ಮುಂದುವರೆಯಿತು.

ಮತ್ತೊಮ್ಮೆ ಮಂಜುಗಟ್ಟಿದ ತನ್ನ ಕಣ್ಣಿನ ರೆಪ್ಪೆ ಪಟಪಟ ಬಡಿದು ಸರಿಗೊಳಿಸಿಕೊಂಡಳು ಜಾಹ್ನವಿ.

ಹೇಗಿದ್ದರೂ ಅವರು ಹೊರಗಿನ ಜಗುಲಿಯಲ್ಲಿ ಕೆಲಸ ಮಾಡ್ತಿರುವುದರಿಂದ ಅಡುಗೆ ಮನೆಯಲ್ಲಿ ತನ್ನ ಎಂದಿನ ಗಡಸು ಸ್ವರದಲ್ಲಿ ಹಾಡು ಆರಂಭಿಸಿದಳು.

'ದೇವರು ಹೊಸೆದ ...ದಾರ'

ಮದ್ಯದ 'ಪ್ರೇಮದ' ಪದವನ್ನು ಹುಹುಹು ಎನ್ನುವುದರೊಂದಿಗೆ ಸರಿಗಟ್ಟುವುದು ಅವಳಿಗೆ ಎಂದಿನಿಂದಲೂ ಬಂದ ಅಭ್ಯಾಸ.

'ಓಹು..ಮರೆತೇಬಿಟ್ಟಿದ್ದೆ'

ಗಡಿಬಿಡಿಯಲ್ಲಿ ಅಮ್ಮನ ಹಳೆಯ ಸೀರೆ ದುಪ್ಪಟ್ಟಾಗಳನ್ನು ಎತ್ತಿ ಹೊರಜಗುಲಿಯ ಆರಾಮು ಚೇರುಗಳ ಮೇಲೆ ಹೊದಿಸಿದಳು.

ಧೂಳು ಹಿಡಿದ್ರೆ ಕ್ಲೀನಿಂಗು ಕಷ್ಟ.

ಹೌದು

ಧೂಳು ಹಿಡಿಯದಂತೆ ನೋಡಿಕೊಳ್ಳುವುದಷ್ಟೇ ಮುಖ್ಯ. ಯಾವುದನ್ನೂ.


'ಇಲ್ಲಾರಿ..ಅದು ಸರಿಯಾಗಲ್ಲ ನನಗೆ.ನೋವಾಗುತ್ತೆ. ಬಾಳಾ ಹೊತ್ತು ಕಿರಿಕಿರಿ. ರೀ..'

ಅವಳ ಯಾವ ವಾಕ್ಯಗಳೂ, ಪ್ರಲಾಪಗಳೂ ಕೊನೆಗೆ ಆಲಾಪಗಳೂ ಈ‌ ಮನೆಯಲ್ಲಿ ಆಲಿಸಲ್ಪಡುವ ಮುಲಾಜಿಗೊಳಗಾಗುವುದಿಲ್ಲ.

ಈಗಿನದು ಅವನ ಅರ್ಜು.

ವರ್ಷಕ್ಕೆರಡು ಮೂರು ಬಾರಿ ಅವನ ಮರ್ಜಿಯಂತೆ ಅದೂ ಆಗ್ತದೆ.

'ನೋವಾಗುತ್ತೆ .ರೀ'

ಥಟ್ಟನೆ ಬಿಟ್ಟು ಸರಿದ ಅವನು.

ಇದು ಅರ್ದಕ್ಕೆ ನಿಲ್ಲಿಸಿದ್ದಾ ಅಥವಾ ಅದು ಅಷ್ಟೇನಾ.?

ಮತ್ತೆ ಆಗಾಗ ಎಲ್ಲೆಲ್ಲೋ ಓದಿದ್ದು,ಕೇಳಿದ್ದು,ನೋಡಿದ್ದು..?

ಶಿಖರ ಉಚ್ರ್ಛಾಯ ಮಣಿ ಮಣ್ಣು ಮಸಿ…?

ಇಷ್ಯೀ...


ಮೊನ್ನೆ ಗೆಳತಿಯರ ಗುಂಪಿನಲ್ಲಿ ಇದೇ ಎಕ್ಸ್ ಮ್ಯಾಟರ್ಸು.

''ನನ್ ಬಾಡೀಲಿ ಉಳಿದ ಪಾರ್ಟೂ ಇವೆ ಅನ್ನುವುದು ನಂಗ್ ಮರ್ತೇಹೋಗಿದೆ ಮಾರಾಯ್ತಿ…

ಹೋದೆಯಾ ಪುಟ್ಟಾ ಬಂದೆಯಾ ಪುಟ್ಟಾ.

ಅಷ್ಟೇ ಅಗೋಗಿದೆ"

ಮುವ್ಚತೈದರ ರಾಧಾ ಮಾತಿಗೆ ಉಳಿದವರೆಲ್ಲರೂ ಹೋ ಅಂತ ಜೋರು ನಕ್ಕರು.

ಇನ್ನೊಬ್ಬಳು ..

ಮದುವೆಯಾಗಿ ಹನ್ನೆರಡು ವರ್ಷ ಕಳೆದಿದೆ. ಭಯಂಕರ ಜೋರಿನ ಹುಡುಗಿ. ನೀನು ಅಂದರೆ ನಿನ್ನಪ್ಪ ಅನ್ನುವವಳು.

"ಮದುವೆಯಾದಾಗಿಂದ ಅವನ ಪರ್ಫಾಮೆನ್ಸಿಗೆ ಗ್ರೇಡು ಕೊಡ್ತಿದ್ದೆ.

ಇತ್ತೀಚೆಗೆ ಬರೀ ಡೀಗ್ರೇಡು. ಹೀಗೆ ಆದ್ರೆ ಕ್ಲಾಸಿಂದ ಹೊರಗೆ ನಿಲ್ಲಿಸಬೇಕಾಗುತ್ತೆ ಅಂತ ವಾರ್ನಿಂಗ್ ಕೊಟ್ಟಿದ್ದೀನಿ.'

ಅವಳ ಮಾತಿಗೆ

ಉಳಿದ ಗೆಳತಿಯರಿಗೆ ಇನ್ನೂ ಜೋರಾದ ನಗು.

ಯಾರೋ ಒಂದಿಬ್ರೂ ಅವರವರೆ ಸಣ್ಣಗೆ ಮಾತಡಿಕೊಂಡ್ರು.

'ಅದೇ.ಅಲ್ವಾ.?'

ಜಾಹ್ನವಿಯೂ ನಕ್ಕೇ ನಕ್ಕಳು

ಹೊಟ್ಟೆ ಹಿಡಿದು ನಕ್ಕಳು.

ಮತ್ತೂ ನಕ್ಕಳು.

ಅವಳು ಹೀಗೆ ಗೆಳತಿಯರೊಟ್ಟಿಗೆ ಮಾತಿಗೆ ಕೂತಾಗ ನಕ್ಕುನಕ್ಕೂ ಕಣ್ಣೀರ ಧಾರೆ ಹರಿಯುತ್ತದೆ…

"ಓ‌ ನಮ್ಮ ಬಾಷ್ಣದ್ದು ಮೇಡಮ್ಮು ನಗೆ ತಡೆಯಕಾಗದೆ ಅಳ್ತಾವ್ರೆ…"

ಅಂತ ಇನ್ನೊಬ್ಳು ಹೇಳಿದ್ರೆ ಈ ಬಜಾರಿ

'ಏನಿತ್ತು ರಾತ್ರಿ...ಅದೇ ಅನ್ನಸಾರಾ.?

ಹಪ್ಳಗಿಪ್ಳಾ?'

ದೇವರೇ..ಗೋಳಾಡ್ಸಿತಾಳೆ.

ಜಾಹ್ನವಿಗೂ ತುದಿಬಾಯಿಗೆ ಗೆಳತಿಯರೊಟ್ಟಿಗೆ ಹೇಳಿಕೊಳ್ಳಲೇಬೇಕಾದ ಸಂಗತಿಯೊಂದು ಜಾರಿದಂತೆನಿಸಿದರೂ ತಡೆಯುತ್ತಾಳೆ.

'ಸಂಸಾರ ಗುಟ್ಟು ವ್ಯಾಧಿ ರಟ್ಟು' ಏನೇ ಇದ್ರೂ ಮುಚ್ಚಿಟ್ಕೋಬೇಕು.

ಹಗುರಾಗಲಿಕ್ಕೆಂತ ಆಡಿದ ಮಾತು ಬುಡಕ್ಕೇ ಕೊಡಲಿಯಿಡುತ್ತದೆ.ಜಾಗ್ರತೆ'

ಅಮ್ಮ ತನ್ನ ಮದುವೆಯಾದಾಗಿನಿಂದಲೂ ನೈತಿ'ಕತೆ' ಯ ಕುರಿತು ಹೇಳುತ್ತಲೇ ಇದ್ದಳು.

ಮಕ್ಕಳಾದವಲ್ಲ ತನಗೆ.

ಹೌದು.

ಮಕ್ಕಳಾದ ಮೇಲೆ ಮತ್ತೇನು?

ಗಡಸು ಸ್ವರದಲ್ಲಿ ಆ ಸಂಜೆಯಲ್ಲಿ ಹಾಡಿಕೊಂಡಳು


'ಹೋದೆಯಾ ದೂರ ಓ ಜೊತೆಗಾರ ಸೇರಲು ಬಂದಾಗ'

'ರೀ...ಕಾಫಿ ತರ್ಲಾ'

ಅವನು ಕನ್ನಡಿಯ ಎದುರಿಗೆ ತಲೆ ತೀಡ್ಕೋತಾ ಇದ್ದ.

'ರೀ?'

ಒಂದೂವರೆ ನಿಮಿಷದ ನಂತರ

'ಸಿದ್ರಾಮು ಅವರ ಮನೆ ಪದ್ಮ ಪ್ರೆಗ್ನೆಂಟಂತೆ ಹೌದಾ'

ಮೊಬೈಲಿನೊಳಗಿಂದ ಒಮ್ಮೆ ಕತ್ತೆತ್ತಿ ನೋಡಿದವನು

'ಯಾರು ಹೇಳಿದ್ದು '

ಅಂದ.!!

ದೇವರೆ..ಏನಾಶ್ಚರ್ಯ!!!!

ಎಷ್ಟೋ ವರ್ಷಗಳ ನಂತರ ಜಾಹ್ನವಿಯ ಪ್ರಶ್ನೆಗೆ ಪ್ರತಿಪ್ರಶ್ನೆ ಆ ಮನೆಯಲ್ಲಿ ಕೇಳಲ್ಪಟ್ಟಿತು.

ನಡುಕೋಣೆಯ ಪ್ಲಾಸ್ಟಿಕ್ ಹೂವುಗಳಿಗೆ ಪೂಸಿದ್ದ ಸೆಂಟಿಗೆ ಜೋರು ಗಾಳಿ ಬೀಸಿದಂತೆನಿಸಿ ಘಮ್ಮೆಂತು.

ಕಪಾಟಿನೊಳಗಿಟ್ಟಿದ್ದ ಲ್ಯಾವಿಗಂಟು ಒಮ್ಮೆ ಆಕಳಿಸಿ ಹೊರಳಾಡಿ ಕಣ್ತೆರೆಯಿತು.

ಅವಳ ನೆಚ್ಚಿನ ಡಾಗಿಮರಿ ಜೋರು ಸದ್ದಿನಲಿ ಅಡುಗೆ ಕೋಣೆಯ ಕಿಟಿಕಿ ಕೆಬರಹತ್ತಿತು.

ಜಾಹ್ನವಿಗೆ ಒಂದು ಕ್ಷಣ ಗಾಬರಿಯಾಯಿತು.

ಏನುತ್ತರಿಸಬೇಕೆಂದು ತಿಳಿಯದೆ ಒದ್ದಾಡಿದಳು.

ಮೊದಲ ಬಾರಿಗೆ ಅವಳಿಗೆ ಪ್ರತಿಕ್ರಿಯೆ ಸಿಕ್ಕಿದೆ ಮತ್ತು ಅವಳಿಂದ ಉತ್ತರ ಕೇಳಲು ಅವನು ಕಾಯುತ್ತಿದ್ದಾನೆ.

ಜಾಹ್ನವಿ ಗಾಬರಿಗಾಬರಿಯಲಿ

'ನಿನ್ನೆ ಅವರ ಅಕ್ಕನ ಮಗಳ ಪ್ರೋಫೈಲ್ ಯಾರೋ ಕೇಳಿದ್ರೂಂತ ಫೋನ್ ಮಾಡಿದ್ದೆ.ಆಗ ವಿಷಯ ತಿಳಿಯಿತು. ಆಮೇಲೆ.. ನೀವದನೆಲ್ಲಾ ಮಾತಾಡಕೆಹೋಗಬೇಡಿ ಆಯ್ತಾ.

ಅವರವರ ಮನೆ ಉಸಾಬರಿ.ಬಿಟ್ಟುಹೋದವ ಮತ್ತೆ ಕಟ್ಕೋಬಹುದು..ಅಲ್ವಾ..ಕಾಫಿ ತರ್ತೀನಿ ಇರಿ.

ರೀ.'

ಕಾಫಿ ಹಿಡಿದು ಆಚೆ ಹೋದರೆ ಊರಿನ ಮೂರುದಾರಿ ಕೂಡುವ ಸೋಮಾರಿ ಸರ್ಕಲ್ಲಿನಲ್ಲಿ ಅವನ ಜೋರು ಮಾತು ನಗು ಕೇಳಿತು.

ಒಬ್ಬಳೇ ಗಡಸು ಸ್ವರದಲ್ಲಿ ಹಾಡು ಹೇಳಿಕೊಂಡಳು.

'ಯಾವ ಹೂವು ಯಾರ ಮುಡಿಗೋ

ಯಾರ ಒಲವು ಯಾರ ಕಡೆಗೋ'

ಅದೆಲ್ಲಿದ್ದವೋ ಗುಬ್ಬಚ್ಚಿಗಳು ದಂಡಿನಲಿ ಬಂದು ಮುದ್ದು ಮುದ್ದಾಗಿ ಕತ್ತು ಕೊಂಕಿಸುತ್ತಾ ಕಂಪೌಂಡಿನ ಮೇಲೆ ಕುಳಿತವು.

ಅದರಲ್ಲಿ ಒಂದಂತೂ ಅವಳು ಕಾಳು ಹಾಕುವುದು ತಡಮಾಡಿದಷ್ಟೂ ಅವಳ‌ ಮುಖದ ಮೇಲೆ ಮೂರ್ನಾಲ್ಕು ಬಾರಿ ಹಾರಾಡುತ್ತದೆ.ಆ ಮುದ್ದು ಹಕ್ಕಿಗಳು ತಮ್ಮ ಕಿಚಪಚ ಬಾಷೆಯಲ್ಲಿ ಸೆಕೆಂಡಿಗೆ ಇಪ್ಪತ್ತು ಸರ್ತಿ ಅತ್ತಿತ್ತ ಕೊಂಕಿಸಿ ಅಂಗುಳ ತೆರೆಯುತ್ತವೆ.ಆ ಚಂದ ನೋಡುವುದಕ್ಕಾಗಿಯೇ ಜಾಹ್ನವಿ ಒಂದರೆ ನಿಮಿಷ ಕಾಳು ಹಾಕುವುದು ನಿಧಾನಿಸುತ್ತಾಳೆ.

ಏನೇ ಗುಬ್ಬಕ್ಕಾ..ಎಲ್ ಹೋಗಿದ್ರಿ ಇಷ್ಟು ಹೊತ್ತು ಅಂತೇನೇನೋ ಅಭ್ಯಾಸದಂತೆ ಮಾತಾಡಿದಳು.

ಹಕ್ಕಿ ಜೊತೆಗೆ ಮಾತ್ರವಲ್ಲ. ಅವಳ ದಾಸವಾಳಗಳು ಕೆಲವೊಮ್ಮೆ ಅವಳ ಜೊತೆಗೆ ಮಾತಿಗಿಳಿಯುತ್ತವೆ.

ಊರಿನ ಸೋಮಾರಿ ಸರ್ಕಲ್ಲಿನಲ್ಲಿ ಮಾತು ಕ್ರಮೇಣ ಕ್ಷೀಣಿಸಿದವು.ನಾಕಾರು ಬೈಕುಗಳು ಮೂರೂ ದಾರಿಯಲ್ಲು ಸದ್ದು‌ಮಾಡುತ್ತಾ ಹೊರಟವು.

ಅವನು ಗೇಟು ತೆಗೆದು ಒಳಬಂದ.

ದಾಸವಾಳದ ಜೊತೆಗೆ ಡೀಪ್ ಡಿಸ್ಕಷನ್ನಲಿ ತೊಡಗಿದವಳು ಇವನು ನೋಡಿದೊಡನೆ,

'ಏನ್ರೀ ಅದು ಜೋರು ಜೋರು ಮಾತು.

ಯಾರಿದ್ರು.

ನೋಡಿ ಈ ನೀಲಿಹೂವು ಎಷ್ಟು ಮೈತುಂಬ ಅರಳಿದೆ.

ರೀ.

ಬ್ಯಾಕ್ಪ್ಯಾಕ್ ಸರಿ ಇದೆ ತಾನೇ?

ಈ ಗಿಡಗಳಿಗೆ ಒಂದು ರೌಂಡು ಕಾಂಟಾಫ್ ಹೊಡಿಬೇಕು ಅಲ್ವಾ.ಅವತ್ತು ನರ್ಸರಿಗೆ ಹೋದಾಗ ಅದೇ ಅಲ್ವಾ ಅವರೂ ಹೊಡಿತಿದ್ದಿದ್ದು..ಎಷ್ಟು ಹೂವರಳಿದ್ವು ನೋಡಿ'

ಇವಳ ಮಾತು ಮುಂದುವರೆದಿದೆ.

ಅವನಾಗಲೇ ಕರೆಯೊಂದಕ್ಕೆ ಉತ್ತರಿಸ್ತಿದ್ದಾನೆ.

'ಇಲ್ಲ ಇಲ್ಲ..ಟ್ವೆಂಟಿ ಮಾಡಲ್ಲೇ.ಸಿಂಗಲ್ ಓನರ್ರು.ಕಲರ್ರು ಐವರಿ ವೈಟ್.ಲೋನಿದೆ.ಕೂತ್ರೆ ಹೆಚ್ಚು ಕಮ್ಮಿಗೆ ಆಗುತ್ತೆ.ಡಾಕ್ಯುಮೆಂಟ್ಸೆಲ್ಲಾ ಪಕ್ಕಾ ಇದೆ.ನೀವೊಂದ್ಸಾರಿ ಬಂದು ಗಾಡಿ ನೋಡಿ.ಆಮೇಲೆ ಮಾತಾಡಬಹುದು.'

'ಹಾ. .ನೀವು..?'

ಅವನ ಮಾತು ಮುಗಿಯುವ ಮೊದಲೇ ಇವಳೂ ಫೋನಲ್ಲಿ ಮಾತಾಡ್ತಿದ್ದಾಳೆ.

'ಹಾ..ಯಾವ ಡೇಟ್ ಹೇಳಿದ್ರಿ.ಹು

ಫ್ರಿಯಾಗೇನೋ ಇದೀನಿ.ಆದರೆ ಬೇರೆಯವರನ್ನೂ ಕರೀರಿ.ಕಾರ್ಯಕ್ರಮ ಮಾಡುವವರು ನೀವು.

ಶ್ರಮ ಸಮಯ ಹಣ ಎಲ್ಲವನ್ನೂ ವಿನಿಯೋಗಿಸಿರ್ತೀರಿ.

ಬೇರೆಯವರ ಮಾತಿಗೆ ಸಿಕ್ಕಿಬೀಳಬಾರದಲ್ವಾ..

ಸರಿ.ಬರ್ತೀನಿ.ವಿಷಯ ಏನ್ ಹೇಳಿದ್ರಿ.

ಓಕೆ…

'ಮನೆಯಲ್ಲಿ ಮಾನಸಿಕ ದೌರ್ಜನ್ಯ'

ಸರಿಯೇ.

ಬಹಳ ಮುಖ್ಯವಾದ ವಿಚಾರವೇ ಕೈಗೆತ್ತಿಕೊಂಡಿದ್ದೀರಾ.

ಇತ್ತೀಚಿನ ದಿನಗಳಲ್ಲಿ ಈ ವಿದ್ಯಮಾನಗಳು ಬಹಳ ಕಾಣ್ತಿವೆ.

ಕೆಲವೊಮ್ಮೆ ಅತಿರೇಕಕ್ಕೆ ಹೋಗಿ ಆತ್ಮಹತ್ಯೆಯಲ್ಲೂ ಕೊನೆಯಾಗುವುದಿದೆ.

ಕೆಲವರು ಎದುರಿಸಲಾಗದೆ ಖಿನ್ನತೆಯ ರೋಗಕ್ಕೆ ಬಲಿಯಾಗ್ತಿದ್ದಾರೆ. ಇರಲಿ.ಸಿಗೋಣಾ.

ಶ್ಯೂರ್..ಥ್ಯಾಂಕ್ಯೂ'

ಅವಳ ಮಾತು ಮುಗಿದರೂ,

'ಟೈಯರ್ ಒರಿಜಿನಲ್ಲೇ.ಸೀಟ್ ಕವರ್ರೂ ಒಳ್ಳೆದಿದೆ.

ಅವನ ಮಾತು ಮುಂದುವರೆದೇ ಇತ್ತು.

ಅವನಿರುವನ್ನು ಮೊದಲ ಬಾರಿಗೆ

ಲೆಕ್ಕಿಸದೇ ಜಾಹ್ನವಿ ತನ್ನ ಗಡಸು ಸ್ವರದಲ್ಲಿ

'ಸುಖ ಎಲ್ಲಾರಿಗೆಲ್ಲೈತವ್ವಾ.

ದುಃಖ ತುಂಬ್ಯಾವೆ ಮನುಷ್ಯದಾ ಮ್ಯಾಲೆ'

ಹಾಡತೊಡಗಿದಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.