ADVERTISEMENT

ಕಥೆ | ಅಗೋಚರ

ಬಿ.ಎಲ್.ವೇಣು
Published 10 ಮಾರ್ಚ್ 2024, 0:30 IST
Last Updated 10 ಮಾರ್ಚ್ 2024, 0:30 IST
   

‘ಪೋಸ್ಟ್’ ಎಂದು ಕೂಗಿದ ದನಿ, ಅದರ ಹಿಂದೆಯೇ ಕಾಂಪೌಂಡನಲ್ಲಿ ಪತ್ರ ಒಂದು ಬಿದ್ದ ಶಬ್ಧ ಕೇಳಿ ಬರೆಯುತ್ತಾ ಕೂತಿದ್ದ, ಮದಕರಿ ಡಿಸ್ಟರ್ಬ್‌ ಆಗಿ ಕಿಟಕಿಯಿಂದ ಅಣುಕಿದ. ಉದ್ದನೆಯ ಕವರ್ ಒಂದು ಕಂಡಿತು. ನಿಧಾನವಾಗಿ ಎದ್ದು ಹೋಗಿ ಕವರ್ ಎತ್ತಿಕೊಂಡು ಗೃಧ್‌ನೋಟ ಬೀರದ. ವಿಳಾಸ ಸರಿಯಿದೆ. ಯಾರಿಂದ ಬಂದಿದೆ? ಅತ್ತಿತ್ತ ತಿರುಗಿಸಿ ನೋಡಿದ. ಎಂದಿನಂತೆ ಕಳುಹಿಸಿದವರ ವಿಳಾಸವಿಲ್ಲ ! “ಮತ್ತದೇ ತ್ರೆಟ್ ಲೆಟರ್. ಒಳಗಡೆ ಬಂದು ಟೇಬಲ್ ಮೇಲೆ ತಿರಸ್ಕಾರದಿಂದ ಎಸೆದು ಆಸೀನವಾಗಿ ಮತ್ತೆ ಬರವಣಿಗೆ ಆರಂಭಿಸಲನುವಾದ ಪೆನ್ನು ಮುಂದೆ ಓಡದೆ ಮುಷ್ಕರ ಹಿಡಿಯಿತು, ಮನಸ್ಸೂ ಓಡದಾಯಿತು. ಇದೆಂತಹ ಸಂಕಟ, ಪದೇ ಪದೇ ಬರುತ್ತಿರುವ ಅನಾಮಿಕ ಬರೆದ ಕೊಲೆ ಬೆದರಿಕೆ ಪತ್ರಗಳಿಗೆ ತಾನು ಅಂಜುತ್ತಿದ್ದೇನೆಯೇ ಎಂದು ತನ್ನನ್ನು ತಾನೇ ಪ್ರಶ್ನಿಸಿಕೊಂಡ. ತಾನಷ್ಟು ಅಂಜುಚುರುಕನಾಗಿದ್ದರೆ ಬರೀ ಕಾಲ್ಪನಿಕ ಕಥೆ, ಕಾದಂಬರಿಗಳನ್ನು ಬರೆದುಕೊಂಡಿರುತ್ತಿದೆ. ಪ್ರಸ್ತುತ ವಿದ್ಯಮಾನಗಳ ಕಾಲ್ಪನಿಕ ಅಧ್ಯಯನ ಮಾಡಿ ಇಂದಿನ ಸಮಾಜ, ರಾಜಕಾರಣ, ಭ್ರಷ್ಟಾಚಾರ, ಜಾತಿ, ಮತಾಂಧತೆಗಳನ್ನು ಕೆದಕಿ ಕೆಣಕಿ ಟೀಕಿಸಿ ಬರೆಯುತ್ತಿರಲಿಲ್ಲ.

ಬರೆದದ್ದು ಟೀಕೆಗೊಳಗಾಗದಿದ್ದರೆ, ವೇದಿಕೆಯ ಮೇಲೆ ಆಡುವ ಮಾತುಗಳು ಶೋತೃಗಳನ್ನು ಕೆಣಕದಿದ್ದರೆ ತನ್ನದೆಂತಹ ಬರಹ? ತಾನೆಂತಹ ಸಾಹಿತಿ ಎಂಬ ಜಿಜ್ಞಾಸೆ ಕಾಡುವುದರಿಂದಲೇ ನೇರಾ ನೇರ ಬರಹಗಳಿಗೆ ನಿಷ್ಟೂರ ನುಡಿಗಳಿಗೆ ಮದಕರಿ ಖ್ಯಾತ. ಆತ ಯಾರಿಗೂ ಅಂಜೋನಲ್ಲ, ಖಂಡಿತವಾದಿಯೆಂಬ ಬಿರುದು ಬೇರೆ. ಇದೆಲ್ಲಾ ಇತ್ತೀಚಿನವರೆಗೆ ಅವನಲ್ಲಿ ಆತ್ಮವಿಶ್ವಾಸ, ಅಹಂ, ಸ್ಥೈರ್ಯ ತುಂಬುತ್ತಲೇ ಬಂದಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಊಹಿಸಲಾಗದ ವಿಳಾಸವಿಲ್ಲದ ಬೆದರಿಕೆ ಪತ್ರಗಳು ಆಗೀಗ ಬರಲಾರಂಭಿಸಿದಾಗ ಮೊದಲು ಎಂಜಾಯ್ ಮಾಡುತ್ತಿದ್ದ ಅವನೀಗ ಕಳವಳಕ್ಕೀಡಾಗಿದ್ದ. ಮಿತ್ರ ಸಾಹಿತಿಗಳೊಂದಿಗೆ ಚರ್ಚಿಸಿದ್ದ, ಅವರೆಲ್ಲಾ ಹೇಗಾದರಾಗಲಿ ಪೊಲೀಸ್ ಇಲಾಖೆಯ ಗಮನಕ್ಕೆ ತರುವುದು ಒಳ್ಳೆಯದೆಂದು ಸಲಹೆ ನೀಡದ್ದೂ ಉಂಟು. ಹೋಗಿ ಹೋಗಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾದೀತೆಂದು ತರ್ಕಿಸಿ ಪೊಲೀಸರಿಗೆ ದೂರು ನೀಡುವವರೆಗೂ ಮುಂದುವರೆದಿರಲಿಲ್ಲ.

ಇಂತಹ ವಿಳಾಸವಿಲ್ಲದ ಪತ್ರಗಳಿಗೆಲ್ಲಾ ತಾನು ಅಂಜೋದೆ ಎಂದ ಅಲಕ್ಷಿಸಿದ್ದ. ಟೇಬಲ್ ಮೇಲೆ ಬಿಸಾಕಿದ್ದ ಕವರನ್ನು ಅಲಕ್ಷ್ಯದಿಂದೆತ್ತಿಕೊಂಡು ತೂಗಿ ಮತ್ತೆ ಬಿಸಾಕಿದ. ಓದಬಾರದೆಂದುಕೊಂಡ. ಪದೇ ಪದೇ ಬರೆದಿದ್ದನ್ನೇ ಬರೆದು ಬೆದರಿಸುವ ಅವನಿಗೆ ತಾನೇಕೆ ಪ್ರಾಶಸ್ತ್ಯ ಕೊಡಬೇಕೆಂದು ಕೊಂಡರೂ ಓದುವ ಕುತೂಹಲವಂತೂ ಗರೆಗೆದರಿತು.

ADVERTISEMENT

ನಿಧಾನವಾಗಿ ಎತ್ತಿಕೊಂಡು ಪೋಸ್ಟಲ್ ಮುದ್ರೆ ನೋಡಿದ. ಈ ಸಲ ತರೀಕೆರೆಯಿಂದ ಪೋಸ್ಟಾಗಿತ್ತು. ಒಂದೊಂದು ಪತ್ರವೂ ನಾನಾ ಊರುಗಳಿಂದ ಪೋಸ್ಟಾಗಿ ಬರುತ್ತಿದ್ದುದರಿಂದ ಪತ್ರ ಬರೆಯುತ್ತಿದ್ದವನು ಇಂತಹ ಸ್ಥಳದವನೇ ಎಂದು ನಿರ್ಧರಿಸಲಾಗುತ್ತಿರಲಿಲ್ಲ. ಈಗೀಗ ‘ತ್ರೆಟ್‌ ಲೆಟರ್‌’ಗಳು ಬೆಂಗಳೂರಿನಲ್ಲಿರುವ ಕೆಲವು ವಿಚಾರವಾದಿ ಸಾಹಿತಿಗಳಿಗೂ ಬರುತ್ತಿರುವುದು, ಅವರುಗಳು ಪೊಲೀಸ್ ಪ್ರೊಟಕ್ಷನ್ ಪಡೆದಿರುವುದೂ ಪತ್ರಿಕೆಗಳಲ್ಲಿ ರಂಜಿಸಿತ್ತು. ತನಗಿಂತಹ ನೆಗೆಟಿವ್‌ ಪಬ್ಲಿಸಿಟಿ ಅನಗತ್ಯವೆಂದುಕೊಂಡಿದ್ದ. ‘ಮದಕರಿ’ ಎಂಬ ಪೆನ್‌ನೇಮ್ ಇಟ್ಟುಕೊಂಡಿರುವಂತಹ ತಾನು ಹೆದರುವುದೇ ಎಂಬ ಬಿಗುಮಾನ ಬೇರೆ. ಕವರ್ ತುದಿ ಕಿತ್ತು ಒಳಗಿರುವ ಪತ್ರ ತೆಗೆದುಕೊಂಡ. ಐದಾರು ಪುಟಗಳಾದರೂ ಇದ್ದೀತು. ಕಣ್ಣಾಡಿಸಿದ ಅದೇ ಹೊಲಸು ಮಾತುಗಳು, ಬೆದರಿಕೆ. ತಾನು ವೇದಿಕೆಯ ಮೇಲೆ ಸಾವರ್ಕರ್ ಕುರಿತು ಆಡಿದ ಮಾತುಗಳಿಗೆ ‘ಕ್ಷಮೆ’ ಕೇಳಬೇಕೆಂಬ ಹುಯಿಲು.

‘ಹಿಂದುತ್ವದ ಬಗ್ಗೆ ನಿಂದಿಸುವ ನೀನು ಗಂಡಸಾಗಿದ್ದರೆ ಮುಸ್ಲಮರನ್ನು ಟೀಕಿಸು’ ಎಂಬ ಘಮಲು. ಗಾಂಧಿಯನ್ನು ಗೋಡ್ಸೆ ಕೊಂದಿದ್ದು ಸರಿ ಎಂಬ ಅಳಲು. ಸಂವಿಧಾನ ಬದಲಿಸುತ್ತೇವೆಂಬ ಅಮಲು. ಹಿಂದೂ ರಾಷ್ಟ್ರ ಮಾಡುತ್ತೇವೆಂಬ ಬುಗುಲು. ಸಾವರ್ಕರ್ ದೇಶಭಕ್ತ ಅವರನ್ನು ‘ಸಾರಿ ಸಾವರ್ಕರ್’ ಅಂದ ನೀನು ಕ್ಷಮೆ ಯಾಚಿಸದಿದ್ದಲ್ಲಿ ಶೀಘ್ರದಲ್ಲಿಯೇ ಹುಚ್ಚು ನಾಯಿಗಿಂತಲೂ ಕೀಳಾಗಿ ಬೀದಿ ಹೆಣವಾಗುವೆ. ಅಪಮೃತ್ಯು ನಿನ್ನ ಹಿಂದಿದೆ. ಇತ್ಯಾದಿ ಸಾಲುಗಳ ಪುನರಾವರ್ತನೆ. ಎಂದಿನಂತೆ ಕೊನೆಯಲ್ಲಿ ‘ಸಹಿಷ್ಣು ಹಿಂದು’ ಎಂಬ ಸಹಿ. ಓದುವಾಗ ಉರಿದುಕೊಳ್ಳುತ್ತದೆ. ಗಂಡಸೇ ನೀನಾಗಿದ್ದರೆ ಉತ್ತರ ಕೊಡು ಎಂದು ಬರೆದು ರೇಗಿಸುವ, ವಿಳಾಸ ಕೊಡದೆ ಬರೆವ ಇಂಥಾ ಯಾವ ಸೀಮೆ ಗಂಡಸು ಅಂದುಕೊಂಡರೂ ಹೇಳೋದು ಯಾರಿಗೆ? ಪತ್ರ ಓದಿ ಮುಗಿಸಿದಾಗ ನಿಜಕ್ಕೂ ಅರಣ್ಯರೋಧನ ಬುಸುಗುಟ್ಟುವುದಷ್ಟೇ ಸಮಾಧಾನ. ಮಿತ್ರರಿಂದ ಇದನ್ನರಿತ ಪತ್ರಕರ್ತ ಮಿತ್ರರುಗಳೊಮ್ಮೆ ಮನೆಗೆ ಬಂದು ಕಾಳಜಿ ತೋರಿದಾಗ ಮದಕರಿ ಪತ್ರಗಳನ್ನವರ ಮುಂದಿಟ್ಟ. ಅವರೂ ಪೊಲೀಸ್ ಡಿಪಾರ್ಟ್ಮೆಂಟ್‌ಗೆ ದೂರು ಸಲ್ಲಿಸಿ. ನೆಗ್ಲೇಟ್ ಮಾಡಬೇಡಿ ಮನೆ ಮುಂದೆ ಗನ್‌ಮ್ಯಾನ್ ಹಾಕುತ್ತಾರೆಂದೆಲ್ಲಾ ಸಲಹೆ ನೀಡಿದರು. ಅವರು ಹೇಳೋದನ್ನೆಲ್ಲಾ ಕೇಳಿ ಆಯಿತೆಂದು ಸುಮ್ಮನಾದ. ಆದರೆ ಪತ್ರಕರ್ತ ಮಿತ್ರರು ಸುಮ್ಮನೆ ಕೂರಲಿಲ್ಲ.

ಅವನ ಭಾವಚಿತ್ರ ಹಾಕಿ ರಾಜ್ಯಮಟ್ಟದ ಸುದ್ದಿ ಮಾಡಿ ಬಿಟ್ಟರು. ಇದೀಗ ಬೆಂಗಳೂರಿನಲ್ಲಿರುವ ಮಿತ್ರ ಸಾಹಿತಿಗಳೂ ಅವನಿಗೆ ಫೋನ್ ಮಾಡಿ ಯೋಗಕ್ಷೇಮ ಹಂಚಿಕೊಂಡರು. ಕೆಲವರು ತಾವೀಗಾಗಲೆ ಪೊಲೀಸ್ ಪ್ರೊಟಕ್ಷನ್ ತೆಗೆದುಕೊಂಡಿರುವುದಾಗಿ ತಲೆ ತಿಂದರೂ ಇಂವಾ ತಲೆ ಕೆಡಿಸಿಕೊಳ್ಳಲಿಲ್ಲ. ಇಷ್ಟೆಲ್ಲಾ ನಡೆವಾಗ ನಾನು ಮಹಾನ್ ಎದೆಗಾರನೆಂದುಕೊಂಡಿದ್ದ ಮದಕರಿಯ ಎದೆಯ ಮೂಲೆಯಲ್ಲೆಲ್ಲೋ ಅಳುಕಿನ ಅಲಾರಾಂ ಹೊಡೆದುಕೊಳ್ಳಲಾರಂಭಿಸಿತ್ತು. ತಮ್ಮೂರಿನ ಸಮಾರಂಭಕ್ಕೆ ಆಗಮಿಸಿದ್ದ ಸಾಹಿತಿಗಳಾದ ಸಿದ್ಧರಾಮಯ್ಯ, ವಸುಂಧರಾ ಸಂಜೆ ತನ್ನೊಡನೆ ‘ಟೀ’ಗೆಂದು ಮನೆಗೆ ಬಂದಾಗ, ಅವರಿಗೂ ತ್ರೆಟ್‌ ಲೆಟರ್ಸ್‌ ಬಂದ ಬಗ್ಗೆ ಪ್ರಸ್ತಾಪಿಸಿದ್ದ. ಅವರು ಅವನ ಫೈಲ್‌ನಲ್ಲಿರುವ ಲೆಟರ್‌ಗಳನ್ನು ನೋಡಿ ಚಕಿತರಾಗಿ, ‘ಸೇಮ್ ಲೆಸ್‌ ! ಸೇಮ್ ಹ್ಯಾಂಡ್‌ರೈಟಿಂಗ್ ಕಣ್ರಿ. ಯಸ್, ಈ ಸಹಿಷ್ಣ ಹಿಂದೂನೇ ನಮಗೂ ಬರೆಯುತ್ತಿರೋದು? ಏನಿವೇ, ಇವನ್ನೆಲ್ಲಾ ಜೆರಾಕ್ಸ್ ಮಾಡಿಸಿ ಪೋಸ್ಟ್ ಮೂಲಕ ಎಸ್.ಪಿ ಅವರ ಗಮನಕ್ಕೆ ತರೋದು ಸೇಫ್’ ಎಂಬ ಸಲಹೆ ನೀಡಿದರು.

ಒಮ್ಮೆ ಕುಂವಿ ಸಿಕ್ಕಾಗಲೂ ಇದನ್ನೇ ಹೇಳಿ, ‘ಇಂತಹ ಲೆಟರ್‌ಗಳ ಬರೋದೇ ನಿಜವಾದ ಸಾಹಿತಿಗಳಿಗೆ ಕಣ್ರೆ. ಡೋಟ್‌ವರಿ’ ಎಂದು ಅವರದ್ದೇ ಶೈಲಿಯಲ್ಲಿ ಸಾಂತ್ವನಿಸಿದ್ದರು. ಏಕೋ ಗೋಜಲು ಗೋಜಲುಗಳಿನಿಸಿತು ಮದಕರಿಗೆ. ಇಷ್ಟಾದರೂ ಪೊಲೀಸರಿಗೆ ದೂರು ನೀಡಲಿಲ್ಲವಾದರೂ ತನ್ನನ್ನು ಸಾವಿನ ಭಯ ಕಾಡಲಾರಂಬಿಸಿದ್ದು ಕನ್ನಡಿಯಲ್ಲಿ ಕಂಡಿತು. ತಾನು ಸೊರಗಿದ್ದೇನೆನಿಸಿತು. ಮೊರೆ ಕಳೆಗುಂದಿದಂತೆ ಕಂಡರೂ ಮನಸ್ಸು ಸಮ್ಮತಿಸದೆ ಹೋಯಿತು.

ಸಂಜೆ ಒಬ್ಬನೇ ಐದಾರು ಮೈಲಿ ದೂರ ವಾಕ್ ಹೋಗಲು ಅಳಕು ಕಾಡಿತ್ತು. ವಾಕ್ ಬರುವವರೊಡನೆ ಮಾತನಾಡಲು ಬಿಂಕ ಬಿಗುಮಾನ ಪಡುತ್ತಿದ್ದ ಅವನು ಒಂದಿಬ್ಬರನ್ನು ತಾನೇ ಮಾತನಾಡಿಸಿ ಜೊತೆ ಮಾಡಿಕೊಂಡ. ಎದುರಿಗೆ ಜೋರಾಗಿ ಕಾರು ಬಂದರೂ, ಹಿಂದೆಲ್ಲಾದರೂ ಪೊದೆಗಳಲ್ಲಿದ್ದ ದನ ಸರಕ್ಕನೆ ಓಡಿ ಬಂದರೂ ಅಗತ್ಯಕ್ಕಿಂತ ಹೆಚ್ಚೂ ಗಾಬರಿಗೀಡಾಗುತ್ತಿದ್ದ. ಅಪಮೃತ್ಯು ಕಾದಿದೆ ಎಂಬ ಸಾಲುಗಳು ಕಣ್ಣು ಮುಂದೆ ಕ್ಷಣ ಪಾಸ್ ಆದಂತೆ ಭಾಸ. ಸಂಜೆಗತ್ತಲಾದ ಮೇಲೆ ಯಾರಾದರೂ ಬಾಗಿಲು ತಟ್ಟಿದರೆ ಬಾಗಿಲು ತೆಗೆಯಲು ಎಂತದೋ ದಿಗಿಲು. ‘ವೋಯ್ ಯಾರ್ ನೋಡೋ. ಯಾರಂತ ಕೇಳಿ ಒಳಗಡೆ ಬಿಡಿ’ ಅನ್ನುವಷ್ಟು ಬದಲಾದ. ವಾಕ್ ಹೋಗುವಾಗ ಸಾಹಿತಿಯೆಂದು ಗೌರವಿಸಿ, ಪ್ರೀತಿಯಿಂದ ಮಾತನಾಡಿಸಿದವರನ್ನೂ ಅನುಮಾನದಿಂದ ನೋಡುತ್ತಾ ಬೆದರುಗೊಂಬೆಯಂತಾಗಿ ಬಿಟ್ಟ ಮದಕರಿ. ವೇದಿಕೆಯ ಮೇಲೆ ಭಾಷಣ ಬಿಗಿಯುವಾಗಲು ಎದುರಿಗೆ ಕೂತಿರುವ ಜನಸ್ತೋಮದಲ್ಲಿ ‘ಸಹಿಷ್ಣು ಹಿಂದು’ ಯಾರಿದ್ದಾನು ಎಂದು ತೀಕ್ಷ್ಣ ನೋಟ ಬೀರಿದ.

ಆಟೋಗ್ರಾಫ್ ಹಿಡಿದು ಬಂದ ಓದುಗ ಅಭಿಮಾನಗಳತ್ತಲೂ ವಕ್ರನೋಟ ಬೀರುತ್ತಾ ಸಹಿ ಗೀಚಿದ. ಸೆಲ್ಫಿ ತೆಗೆಸಿಕೊಳ್ಳುವವರ ಹಾವಳಿ ಬೇರೆ. ಅದರಲ್ಲಿ ಯಾವನಾದರೂ ಚೂರಿ ಹಾಕಿದರೆ ಎಂಬ ಢವಢವ. ಇಷ್ಟೊಂದು ಪಬ್ಲಿಕ್ ಆಗಿ ಕೊಲೆ ಮಾಡುವಷ್ಟು ದಮ್ಮು ಕಿಡಿಗೇಡಿಗಳಿಗಿರುವುದಿಲ್ಲವೆಂದು ತನ್ನನ್ನು ತಾನೇ ಸಂತೈಸಿಕೊಂಡ. ಎಲ್ಲಿಗೆ ಹೋದರೂ ಎಲ್ಲಿದ್ದರೂ ಸಮಾಧಾನವಿಲ್ಲ. ದಿನಗಳು ಕರಾಬ್ ಆದವು. ಕಾದಂಬರಿ ಇರಲಿ, ಸಣ್ಣದೊಂದು ಕಥೆ ಬರೆಯಲೂ ಆಗದಷ್ಟು ಎದೆಗುದಿ, ಎಲ್ಲವನ್ನೂ ಒಳಗಿಟ್ಟುಕೊಂಡು ಧೀರತನದ ನಟನೆಗೈದ, ಇಂತಹ ಕೃತಕತೆಯ ಬದುಕಿನಿಂದ ಬಸವಳಿದ ಹೋದ ಮದಕರಿ. ತನ್ನ ಅಂಕಿತನಾಮವನ್ನೇ ಬದಲಿಸಿಕೊಳ್ಳಬೇಕೆಂಬಷ್ಟು ನಾಚಿದ.

ಇಂತಹ ದಿಕ್ಕೆಟ್ಟ ದಿನಗಳ ನಡುವೆ ಒಮ್ಮೆ ಮೊಬೈಲ್‌ನಲ್ಲಿ ಅನಾಮಧೇಯ ಕರೆಯೊಂದನ್ನು ಸ್ವೀಕರಿಸಿದ. ‘ಗುಡ್‌ಮಾರ್ನಿಂಗ್ ಸಾರ್, ನಮ್ಮ ಎಸ್.ಪಿ. ಸಾಹೇಬರು ಮಾತಾಡ್ತರಂತೆ ಸಾ’ ಎಂದಿತೊಂದು ದನಿ. ಕೆಲವು ಸೆಕೆಂಡುಗಳಲ್ಲೇ ‘ಹಲೋ ಗುಡ್‌ಮಾರ್ನಿಂಗ್, ಎಸ್.ಪಿ ಸ್ಫೀಕಿಂಗ್ ಎಂಬ ದನಿ. ಇವರ‍್ಯಾಕಪ್ಪ ಫೋನ್ ಮಾಡಿದರೆಂಬ ತಲ್ಲಣದಲ್ಲೇ ‘ಹೇಳಿ’ ಅಂದ. ‘ನಾನೀಗ ತಮ್ಮ ಮನೆಗೆ ಬರ್ತಾ ಇದೀನಿ ಸಾರ್, ಮನೇಲಿ ಇದ್ದೀರ ತಾನೆ’ ಜಬರ್‌ದಸ್ತ್ ವಾಯ್ಸ್ ಕೇಳಿತು. ಮನೇಲಿಲ್ಲವೆಂದು ಸುಳ್ಳು ಹೇಳೆಂದು ಮನಸ್ಸು ಮುಲುಗಿದರೂ, ಯಾಕೆ? ಎಂದು ಕೇಳಬೇಕೆನಿಸಿದರೂ ‘ಇದ್ದೇನೆ ಬನ್ನಿ’ ಅಂದ. ಹದಿನೈದು ನಿಮಿಷಗಳಲ್ಲೇ ಮನೆಯ ಮುಂದೊಂದು ದೊಡ್ಡ ಕಾರ್ ಬಂದು ನಿಂತಿತು. ಎಸ್.ಪಿ ಜೊತೆ ಸಿಪಿಐ, ಒಂದಿಬ್ಬರು ಪಿಸಿಗಳೊಡನೆ ಒಳ ಬಂದರು ಎಸ್.ಪಿ ಸಾಹೇಬ ಕೂರಿಸಿದ. ‘ನಿಮಗೆ ತ್ರೆಟ್ ಲೆಟರ್‌ಗಳು ಬರುತ್ತಿವೆಯಂತೆ ನಮಗ್ಯಾಕೆ ತಿಳಿಸಲಿಲ್ಲ’? ಪ್ರಶ್ನಿಸಿದರು.

‘ತಿಳಿಸಬೇಕೆನಿಸಲಿಲ್ಲ’ ಚುಟುಕಾಗಿ ಉತ್ತರಿಸಿದ. ‘ನಾವು ಪತ್ರಿಕೆಗಳಲ್ಲಿ ಓದಿಕೊಂಡೆವು. ನೀವು ದೂರು ಕೊಡಬೇಕಿತ್ತು ಮದಕರಿ ಸಾರ್, ನಮಗೆ ಇಂಟಲಿಜೆನ್ಸ್ನಿಂದ ಕರೆ ಬಂತು. ಅವರು ನಿಮ್ಮನ್ನು ಕಂಡು ಡಿಟೇಲ್ಸ್ ಕಳುಹಿಸಲು ನಮಗೆ ಸೂಚಿಸಿದ್ದಾರೆ. ಯು ಹ್ಯಾವ್ ಡನ್ ಎ ಮಿಸ್ಟೇಕ್. ನಾಳೆ ನಿಮಗೇನಾದರೂ ತೊಂದರೆಯಾದರೆ ನಮ್ಮ ತಲೆಗೆ ಬರುತ್ತೆ ಕಣ್ರಿ’ ಬೇಸರ ವ್ಯಕ್ತಪಡಿಸಿದರು. ‘ಎಲ್ರೀ ಆ ಲೆಟರ‍್ಸ್?’ ಕುತೂಹಲ ತೋರಿದರು. ಅವನು ಮೌನವಾಗಿ ಫೈಲ್ ಇಟ್ಟ. ಅಬ್ಬಾ ಇಷ್ಟು ಲೆಟರ‍್ಸ್ ? ಎಂದು ಅಚ್ಚರಿಪಡುತ್ತಾ ಒಂದೊಂದನ್ನೇ ಓದುತ್ತಾ ಕೂತರು. ಮುಜುಗರವಾಯಿತು.

‘ಇದನ್ನೆಲ್ಲಾ ಓದಿದಾಗ ನಿಮಗೆ ಭಯವಾಗಲಿಲ್ಲವೆನ್ರಿ ಸಾರ್?’ ಕೇಳಿದರು ಸರ್ಕಲ್ ಇನ್ಸ್ಪೆಕ್ಟರ್.
‘ಇಲ್ಲ’ ಅಂದ ಸುಳ್ಳು ಹೇಳ್ತಿದಿಯಲ್ಲೋ ಅಂದಿತು ಮನ. ನಂತರ ಎಸ್.ಪಿ ಮಾತನಾಡಿದರು. ‘ನಾನು ನಿಮ್ಮ ಕಾದಂಬರಿಗಳ ಅಭಿಮಾನಿ ಸಾರ್. ನಿಮ್ಮ ಐತಿಹಾಸಿಕ ಕೃತಿಗಳಲ್ಲಿ ದೇಶಭಕ್ತಿ ಕಾಣುತ್ತದೆ. ಈ ಸಹಿಷ್ಣು ಹಿಂದು ನಿಮಗೇ ದೇಶದ್ರೋಹಿ ಅಂದಿದ್ದಾನೆಯೇ?’ ಎಂದು ನಕ್ಕರು. ‘ನಾನೇನು ಸೀರಿಯಸ್ ಆಗಿ ತಗೊಂಡಿಲ್ಲ ಸಾರ್’ ಅಂದ. ‘ನಾವ್ ಸೀರಿಯಸ್ ಆಗಿ ತಗೋತೀವಿ. ರ‍್ಯಾಸ್ಕಲ್‌ನ ಪತ್ತೆ ಹಚ್ಚುತ್ತೀವಿ ಬಿಡಿ. ನಿಮಗೊಬ್ಬ ಗನ್‌ಮ್ಯಾನ್ ಅಗತ್ಯವಿದೆ. ಈ ತರಾ ಪತ್ರ ಬರೆಯೋರು ಉಗ್ರರಿಗಿಂತ ಡೇಂಜರ್. ಒಂತರಾ ಸೈಕಿಕ್ ಮೋರ್ ಓವರ್ ಸ್ಯಾಡಿಸ್ಟ್ಗಳು ಅಂದರು ಎಸ್.ಪಿ. ‘ಗನ್‌ಮ್ಯಾನ್ ಎಲ್ಲಾ ಬೇಡ ಸಾರ್’ ಅಂದ. ‘ಯಾಕ್ರಿ ಮದಕರಿ? ‘ತೀಕ್ಷ್ಣ ನೋಟ ಬೀರಿದರು. ‘ನಮ್ಮದು ಮಿಡ್ಲುಕ್ಲಾಸ್‌  ಫ್ಯಾಮಿಲಿ ಪುಟ್ಟ ಮನೆ. ದೊಡ್ಡ ಬಂಗಲೆ ಎದುರು ಗನ್ ಮ್ಯಾನ್ ನಿಂತರೆ ಅದೊಂದು ಶೋಭೆ. ನಮ್ಮ ಮನೆ ಮುಂದೆ ನಿಂತರೆ ನ್ಯೂಸೆನ್ಸ್. ಬೀದಿನಲ್ಲಿ ಹೋಗಿ ಬರುವವರ ಕಣ್ಣಿಗೆಲ್ಲಾ ಅವನು ಆಹಾರವಾಗಿ ಬಿಡುತ್ತಾನೆ.

ಪ್ಲೀಸ್ ಬೇಡ ಅಂದ ಮದಕರಿ. ‘ಮೇಲಿಂದ ಫ್ರೆಶರ್ ಬಂದಿದೆ, ಇಲ್ಲದಿದ್ದರೆ ನಾವ್ಯಾಕೆ ಬರ್ತೀವಿ ಯುಸೀ, ಅಂತ ಎಲ್ಲರೂ ಲೆಸನ್ ತಗೊಂಡ್ರೂ ಒಪ್ಪಲಿಲ್ಲ ಇಂವಾ. ‘ಹೋಗ್ಲಿಬಿಡಿ. ನಿಮ್ಮ ಮನೆ ಹೊರಗೆ ಒಳಗೆ ಸಿಸಿಟಿವಿ ಕ್ಯಾಮರನಾದ್ರು ಹಾಕ್ಸಿ ಇಮಿಡಿಯೇಟ್ ಆಗಿ’ ತಿಳಿ ಹೇಳಿದರು ಸಿ.ಪಿ.ಐ. ಅದಕ್ಕೂ ಅವನು ಒಪ್ಪಲಿಲ್ಲ. ಗುಂಜಾಡಿದ. ಖರ್ಚು ಎಷ್ಟಾದೀತು ಎಂದು ಮೌನಕ್ಕೆ ಜಾರಿದ. ದೊಡ್ಡ ಸಾಹಿತಿಗಳಾಗಿ ಹೀಗಾಡಿದರೆ ಹೇಗೆ ಎಂದಾಕ್ಷೇಪಿಸಿದ ಎಸ್.ಪಿ. ಪರಶುರಾಮ್, ಹೋಗ್ಲಿಬಿಡಿ ಸಾರ್. ನಮ್ಮ ಅಭಿಮಾನಿಯಾಗಿ ನಾನೇ ಎರಡು ಸಿಸಿಟಿವಿ ಕ್ಯಾಮೆರಾ ಗಳನ್ನು ಹಾಕಿಸುತ್ತೇನೆ ಎಂಬಲ್ಲಿಗೆ ಒಬ್ಬರಿಗೊಬ್ಬರು ರಾಜಿಯಾದರು. ಬಗೆಹರಿಯಿತಲ್ಲ ಎಂದು ನಿಡುಸುಯ್ದ ಸಾಹಿತಿ ಮದಕರಿ. ‘ಮೋರ್ ಓವರ್ ನನಗನಿಸುತ್ತೆ ಸಾರ್. ನೀವು ಒಂದು ಗನ್ ಪರ್ಚೇಸ್ ಮಾಡಿ ಸೇಫ್ಟಿಗೆ ಇಟ್ಟುಕೊಳ್ಳೋದು ಬೆಟರ್’ ಅಂದರು ಸಿಪಿಐ. ಉಳಿದ ಅವರ ಪಡೆ ಹೌದೌದೆಂದು ತಲೆಯಾಡಿಸಿತು. ಗನ್ ಮಾರುವವನ ವಿಸಿಟಿಂಗ್ ಕಾರ್ಡ್‌ ಕೊಟ್ಟು ರೇಟಿನ ಬಗ್ಗೆ ಚರ್ಚೆಗಿಳಿದರು.

‘ಮನೇಲಿ ಒಂದು ಗನ್ ತೂಗು’ ಹಾಕಿದರೆ ಬಂದವರು ಒಂತರಾ ಹೆದರ್ತಾರೆ ಸಾ’ ಅಂದಿದ್ದು ಹೆಡ್‌ಕಾನ್ಸ್ಟೇಬಲ್ ಗೀತಮ್ಮ. ಅದರ ರೇಟು, ಕ್ಲೀನಿಂಗ್ ಕೇಳಿದಾಗ ಈ ರೇಜಿಗೆ ಎಲ್ಲಾ ನನಗೆ ಬೇಕೆ ಎಂದು ತನ್ನನ್ನು ತಾನೇ ಪ್ರಶ್ನಿಸಿಕೊಂಡ ಅವನು, ‘ಸಾರಿ ಸಾರ್. ನಾಟ್ ನೆಸಸರಿ-ಪ್ಲೀಸ್ ‘ ಅನ್ನುತ್ತಾ ಮುಜಗರಕ್ಕೀಡಾದ. ‘ಹೀಗಾಡಿದ್ರೆ ಹೇಗೆ ಸಾರ್? ಗನ್ ಮ್ಯಾನ್ ಬೇಡ ಅಂತಿರಾ? ಸಿಸಿಟಿವಿ ಬೇಡ ಅಂತಿರಾ? ಅಟ್‌ಲೀಸ್ಟ್ ನೀವು ಟೂರ್ ಹೊರಟಾಗ, ಯಾವುದಾದರೂ ಸಮಾರಂಭಕ್ಕೆ ಭಾಷಣಕಾರರಾಗಿ ಹೋಗುವಾಗ ಒಬ್ಬರೆ ಖಂಡಿತ ಹೋಗ್ಲೇಬೇಡಿ. ನಾವೊಬ್ಬ ಪಿಸಿ ಕೊಡ್ತೀವಿ ಜೊತೆಗಿರ್ತಾನೆ. ಕರ‍್ಕೊಂಡು ಹೋಗಿ ಕರ‍್ಕೊಂಡ್ ಬರ್ತಾನೆ’ ಎಂದು ಎಸ್.ಪಿ ಅಲವತ್ತುಕೊಳ್ಳುವಾಗ ಇದೊಳ್ಳೆ ಕಾಟವಾಯಿತೆ ಅಂದುಕೊಂಡ ಮದಕರಿ, ‘ಸರಿಬಿಡಿ’ ಎಂದು ಗೋಣು ಆಡಿಸಿದ.  ಮದಕರಿಯಿಂದ ದೂರು ಬರೆಸಿಕೊಂಡರು. ಅಷ್ಟರಲ್ಲಿ ಮದಕರಿಯ ಮನೆಯಾಕೆ ಎಲ್ಲರಿಗೂ ‘ಟೀ’ ತಂದಿಟ್ಟರು.

‘ಮನೇಲೆ ನೀವೆಷ್ಟು ಜನ ಇದ್ದಿರಾ?’ ಕೇಳಿದರು ಎಸ್.ಪಿ. ‘ನಾವಿಬ್ಬರೆ ಸಾ. ಮಕ್ಕಳಿಬ್ಬರು ಬೆಂಗಳೂರಲ್ಲಿ ಕೆಲಸದಲ್ಲವರೆ’ ಅಂದರು ಮಿಸೆಸ್ ಮದಕರಿ. ‘ಐ ಸೀ ನೋಡಿಯಮ್ಮಾ, ನಿಮ್ಮ ಒಳ್ಳೇದಕ್ಕೆ ಹೇಳ್ತಿದೀನಿ. ಮನೆಗೆ ಯಾರು ಯರ‍್ನೋ ಬಿಟ್ಕೋ ಬೇಡಿ. ಯಾರೇ ಬಾಗಿಲು ಬಡಿದರೂ ಬೆಲ್ ಮಾಡಿದರೂ ನೀವೇ ದಯಮಾಡಿ ಬಾಗಿಲು ತೆಗೆಯಿರಿ. ಸಾಹಿತಿಗಳು ತೆಗೆಯೋದು ಬೇಡ’ ಎಂದೆಚ್ಚರಿಸಿದ ಎಸ್.ಪಿಯವರು ಎಂ.ಎಸ್. ಕಲ್ಬುರ್ಗಿಯವರ ಹತ್ಯೆಯ ವಿವರಣೆ ನೀಡುತ್ತಾ ದಾಬೋಲ್ಕರ್, ಪಾನ್ಸಾರೆ, ಗೌರಿ ಲಂಕೇಶ್ ಬಗ್ಗೆಯೆಲ್ಲಾ ಹೇಳಿ ಮಿಸೆಸ್ ಮದಕರಿಯನ್ನು ಹೆದರಿಸಿ ಬಿಟ್ಟರು. ಕಣ್ ಕಣ್ ಬಿಡುವ ಆಯಮ್ಮನಲ್ಲಿ ಭಯಾಂಕುರವಾಗಿರೋದು ಗೋಚರಿಸಿತು. ‘ಹಂಗಾದ್ರೆ, ಅವಳನ್ನು ಕೊಲೆ ಮಾಡಬಹುದಾ?’ ಹಾಯಾಗಿ ನಕ್ಕು ಬಿಟ್ಟರು ಸಾಹಿತಿಗಳು ‘ಹಾಗಲ್ಲ ಸಾರ್.

ಅವರ ಟಾರ್ಗೆಟ್ ಯಾರೋ ಅವರನ್ನು ಮಾತ್ರ ಕೊಲ್ಲುತ್ತಾರೆಂಬುದು ಪ್ರೂವ್ ಆಗಿದೆ. ನಾವಿನ್ನು ಬರ್ತೀವಿ, ಕೇರ್‌ಫುಲ್ ಆಗಿರಿ ಸಾ. ನೀವು ನಮ್ಮ ಕರ್ನಾಟಕದ ಸೊತ್ತು’ ಅಂತ ಮೇಲೆದ್ದರು. ಅವರೆಲ್ಲಾ ಎದ್ದು ಕಾರಲ್ಲಿ ಹಾರಿಹೋದ ಮೇಲೆ ಮನೆ ಬೀಕೋ ಅನಿಸಿತು. ಗಾಬರಿಗೊಂಡಿರುವ ಶ್ರೀಮತಿಯವರ ಮೊರೆ ನೋಡಿ ಮದಕರಿ ಸಹ ಮೂಡ್ ಔಟ್ ಆದ. ವಾಕ್ ಹೋಗಲು ಯೋಚಿಸುವಂತಾಯಿತು. ಕಾಂಪೌಂಡಲ್ಲಿ ಕುರ್ಚಿ ಹಾಕಿಕೊಂಡ ರಾತ್ರಿ ನಿದ್ರೆ ಬರೋವರೆಗೆ ಎಂದಿನಂತೆ ಹೊರಗೆ ಕೂರಲು ದಂಪತಿ ತಲ್ಲಣಿಸಿದರು.

ಎಸ್.ಪಿ.ಯವರು ಡಿಪಾರ್ಟ್ಮೆಂಟಿಗೆ ಹೇಳಿ ಸಿ.ಸಿ.ಟಿ.ವಿಗಳನ್ನೇನೋ ಹಾಕಿಸಿ ಅಭಿಮಾನ ಮೆರೆದರು. ಒಂದೆರಡು ಕಡೆ ಭಾಷಣಕ್ಕಾಗಿ ಹೊರಟಾಗ ಸಬ್‌ಇನ್ಸ್ಪೆಕ್ಟರ್ ದಿವಾಕರ್‌ಗೆ ಮದಕರಿ ಫೋನ್‌ಮಾಡಿ ಕರೆಸಿಕೊಂಡು ಹಿಂದಿಟ್ಟುಕೊಂಡು ಹೋಗಿ ಎಲ್ಲರ ಕಣ್ಣಿಗೆ ಆಹಾರವಾಗುವ ಮೂಲಕ ಚರ್ಚಾವಸ್ತುವಾದರು. ಏಕೋ ಜೀವನವೇ ಜಿಗುಪ್ಸೆಗೊಳಗಾದಂತೆ ಕಳವಳ. ಇಷ್ಟಾದರೂ ಮತ್ತೆರೆಡು ತ್ರೆಟ್ ಲೆಟರ್‌ಗಳು ವಾರಕ್ಕೊಂದರಂತೆ ಚಿಕ್ಕಮಂಗಳೂರಿನಿಂದ, ಶಿವಮೊಗ್ಗದಿಂದ ಬಂದು ಬಿದ್ದವು. ಅದನ್ನು ಪೊಲೀಸರ ಗಮನಕ್ಕೆ ತರಲಾಯಿತು. ‘ಇದೀಗ ಸೈಬರ್ ಕ್ರೈನೋರು ಜೊತೆಯಾಗಿದ್ದಾರೆ ಕಣ್ರಿ. ಇಷ್ಟರಲ್ಲೇ ಹಿಡಿತೀವಿ ನೋಡ್ತಿರಿ’ ಅಂದರು ಎಸ್.ಪಿ ಸಾಹೇಬ. ಮನೆಗೆ ಪೊಲೀಸರು ಬಂದು ಯೋಗಕ್ಷೇಮ ವಿಚಾರಿಸಿಕೊಂಡು ಹೋಗೋದು ಖುಷಿಕೊಡದೆ ದಂಪತಿಯನ್ನು ಕಂಗೆಡಿಸಿತು. ಒಂದೆರೆಡು ಫಂಕ್ಷನ್‌ಗಳಿಗೆ ಪಿಸಿ ಕರೆದೊಯ್ಯದೆ ಹೋದರು. ಮದಕರಿ, ನಂತರದಲ್ಲಿ ಅದು ಹೇಗೋ ವಿಷಯ ತಿಳಿದ ಎಸ್.ಪಿ ಫೋನ್ ಮಾಡಿ ತಾಕೀತು ಮಾಡಿದ್ದು ಆಯಿತು. ದಿನಗಳೆದಂತೆ ಊಟ ತಿಂಡಿ ರುಚಿಸದಾಯಿತು. ನಿದ್ರೆ ಬಾರದಂತಾಯಿತು.

ಯಾವನಪ್ಪಾ ಲೆಟರ್ ಬರಿತಿರೋದು ಎಂಬ ಕಾತರದಲ್ಲಿ ಎಲ್ಲರನ್ನೂ ಅನುಮಾನದಿಂದ ನೋಡುವಂತಾಗಿ ಹೊಸದಾಗಿ ಬರೆಯುತ್ತಿದ್ದ ಕಾದಂಬರಿ ಮುಂದೆ ಓಡದಂತಾಗಿ ಬದುಕು ನೀರಸವಾಯಿತು. ‘ವಿರೋಧಿಗಳೀರಬೇಕು ಕಣ್ರಿ. ವಿರೋಧಿಗಳೇ ಇಲ್ಲದ ಜೀವನ ಬೋರ್ ಹೊಡಿತದೇರಿ ಎನ್ನುತ್ತಿದ್ದ ಸಾಹಿತಿಗೀಗ ಅಗೋಚರ ವಿರೋಧಿಯಿಂದಾಗಿ ಬದುಕು ಭಾರವಾಯಿತು. ‘ಇನ್ನು ಮೇಲೆ ಬೆದರಿಕೆ ಪತ್ರಗಳು ಬಂದರೆ ನೀವು ಕವರ್ ಓಪನ್ ಮಾಡದೆ ನಮಗೋಪ್ಪಿಸಬೇಕೆಂಬ’ ಆಣತಿ ಎಸ್.ಪಿಯಿಂದ ಬಂತು. ಫಿಂಗರ್ ಪ್ರಿಂಟ್‌ನಿಂದ ಪತ್ತೆ ಹಚ್ತಾರೇನೋ ಎಂದು ಮದಕರಿ ಒಬ್ಬನೇ ಗೊಣಗಿಕೊಂಡ, ನೊಂದುಕೊಂಡ. ಪೊಲೀಸರ ಗಸ್ತಿನಿಂದಾಗಿ ಅಕ್ಕಪಕ್ಕದ ಮನೆಯವರೆದುರು ಅಪರಾಧಿಯಂತಾದರು. ಮಕ್ಕಳೂ ಒಮ್ಮೆ ಬಂದು ಹುಷಾರಾಗಿರಿಯೆಂದು ಗದರಿ ಹೋದರು. ಅಕ್ಕಪಕ್ಕದ ಮನೆಯವರ ಅನಾವಶ್ಯಕ ಎನ್‌ಕ್ವೈರಿಯಿಂದಾಗಿ ಮಿಸೆಸ್ ಮದಕರಿ ಪತಿಯ ಮೇಲೆಯೇ ರೇಗುವಂತಾಯಿತು. ಗಂಡ ಹೆಂಡತಿ ಹಾವು ಮುಂಗಸಿಯಂತಾದರು. ದೇಶದ ಆಗುಹೋಗುಗಳ ಬಗ್ಗೆ ಮಾತನಾಡಬೇಡಿ. ಬರೆಯಬೇಡಿ ಎಂದು ಮಿಸೆಸ್ ಕೈಲಿ ಬುದ್ಧಿ ಹೇಳಿಸಿಕೊಳ್ಳುವ ಪರಿಸ್ಥಿತಿ ಗೀಡಾದರು ಮದಕರಿ.


**********


ಒಂದು ದಿನ ದೊಡ್ಡ ಕಾರೊಂದು ಬಂದು ನಿಂತಾಗ, ಮತ್ತದೇ ಪೊಲೀಸ್ ಪಡೆ. ಆದರೆ ಎಲ್ಲಾ ಹೊಸ ಮುಖಗಳೆ. ಅವರೇ ನಿರಾಳವಾಗಿ ಬಂದು ಕೂತು ಪರಿಚಯ ಮಾಡಿಕೊಂಡರು. ತಾವು ಸಿಸಿಬಿಯವರು ಬೆಂಗಳೂರಿಂದ ಬಂದಿದ್ದೀವಿ ಅಂದರು. ಒಬ್ಬರು ನಾನು ಎ.ಸಿ.ಪಿ ಎಂದು ಮುಗುಳ್ನಗೆ ಚೆಲ್ಲಿದರು. ಬೆದರಿಕೆ ಪತ್ರಗಳ ಫೈಲ್ ನೋಡಿದರು. ‘ಚೆನ್ನಾಗಿ ಫೈಲ್ ಮಾಡಿಟ್ಟು ಕೊಂಡಿದ್ದೀರಿ ಗುಡ್. ಬೇರೆ ಸಾಹಿತಿಗಳು ಹೋಫ್ ಲೆಸ್’ ಎಂದು ಎಸಿಪಿ ಹೊಗಳಿದಾಗಲೂ ಮದಕರಿ ಪ್ರಸನ್ನವದನನಾಗಲಿಲ್ಲ. ಇಡೀ ಫೈಲ್ ನಲ್ಲಿನ ಲೆಟರ‍್ಸ್ ಎಲ್ಲವನ್ನು ಒಬ್ಬ ಜೆರಾಕ್ಸ್ ಮಾಡಿಸಿಕೊಂಡು ಬಂದ. ಡಿಟೇಲ್ ಎನ್‌ಕ್ವೈರಿದೊರೆಯಿತು. ‘ಡೋಂಟ್‌ವರಿ ಸಾರ್. ಆದಷ್ಟು ಬೇಗ ಅವನ್ನ ಅರೆಸ್ಟ್ ಮಾಡ್ತೀವಿ’ ಎಂಬ ಭರವಸೆ ನೀಡಿ ‘ಟೀ’ ಕುಡಿದೆದ್ದು ಹೋದರು.

ಎಂತೆಂತಹ ಕೊಲೆ ಕೇಸ್‌ಗಳನ್ನು ಎರಡೇ ದಿನದಲ್ಲಿ ಹಿಡಿತಾರೆ, ಇದೇಕೆ ಈ ಕೇಸ್‌ನಲ್ಲಿ ಹಿಂದೆ ಬಿದ್ದಿದ್ದಾರೆ? ಸರ್ಕಾರ ಬದಲಾದ ಮೇಲಾದರೂ ಅಧಿಕಾರಿಗಳ ಮನೋಸ್ಥಿತಿ ಬದಲಾಗಲೇಬೇಕಲ್ಲ. ಸಾಹಿತಿಗಳ ಜೀವಕ್ಕೆ ಬೆಲೆಯೇ ಇಲ್ಲವೆ ಹಂಗಾದ್ರೆ? ಆಗೀಗ ಪತ್ರಿಕೆಗಳಲ್ಲಿ ವರದಿಗಳಾದದ್ದು, ತಮ್ಮನ್ನು ತಾವು ಡಿಪಾರ್ಟ್ಮೆಂಟಿನವರು ಹೊಗಳಿಕೊಂಡದ್ದು ಬಿಟ್ಟರೆ ಮತ್ತೆಂತದೂ ಪ್ರೊಗಸ್ ಕಾಣಲಿಲ್ಲ. ಬೆಂಗಳೂರಿನಿಂದ ಸಿಸಿಬಿನವರು ಬಂದು ಹೋದರು ಪ್ರತಿಫಲ ಶೂನ್ಯ. ಯಾರನ್ನು ಬಯ್ಯೋದು ಏನಂತ ಬಯ್ಯೋದು? ಬುದ್ಧಿಜೀವಿ ಸಾಹಿತಿಗೀತ ಬುದ್ಧಿಯೇ ಓಡದಂತಾಯಿತು. ಊಹಿಸದ ದಿನ ಒಂದು ಎದುರಾಯಿತು. ಅಂದಿನ ರಾತ್ರಿ ಕರಾಳರಾತ್ರಿಯಾದೀತೆಂದು ಮದಕರಿ ಕೂಡ ಊಹಿಸಿರಲಿಲ್ಲ.

ಯಾರೋ ಬಾಗಿಲು ಬಡಿಯುತ್ತಿದ್ದಾರೆ ಎಚ್ಚರವಾಯಿತು. ಗೋಡೆ ಮೇಲಿನ ಗಡಿಯಾರ ರಾತ್ರಿ ಎರಡುಗಂಟೆ ತೋರಿತು. ‘ಯಾರು ನೋಡೇ?’ ಪಿಸುಗಿದ ಮದಕರಿ. ‘ಅಯ್ಯೋ ಹೆದರಿಕೆಯಾಗುತ್ರೀ. ನೀವೂ ಬನ್ನಿ’ ಅಂದರು ಮಿಸೆಸ್. ಇಬ್ಬರೂ ಕಾಲೆಳೆದುಕೊಂಡು ಹೋಗಿ ಬಾಗಿಲ ಬಳಿ ನಿಂತು, ‘ಯಾರು? ಯಾರು? ಎಂದು ಕೇಳಿದರೂ ಉತ್ತರವಿಲ್ಲ. ಬಾಗಿಲು ಬಡಿತ ನಿಲ್ಲಲಿಲ್ಲ. ‘ನಾನು ಕಣೋ ನಿನ್ನ ದೋಸ್ತು’ ಹೊರಗಡೆಯಿಂದ ರೇಗಿಸಿದಂತಾಯಿತು. ಬೋಲ್ಟ್ ತೆಗೆದದ್ದೇ ತಡ ಒಬ್ಬ ಮುಸುಕುಧಾರಿ ನುಗ್ಗಿ ಬಂದ. ಅವನ ಕೈಲಿ ಹೊಳೆವ ಚಾಕು ಕಂಡಿತಷ್ಟೇ. ಎರಡು ಮೂರು ಸಲ ಎಲ್ಲೆಂದರಲ್ಲಿ ಹಿರಿದಂತಾಯಿತು. ನೋವು ನೆತ್ತಿಗೇರಿ ಚೀರಿದಷ್ಟೇ ಗೊತ್ತು.


********


ಎಚ್ಚರವಾದಾಗ ಸಾಹಿತಿ ಆಸ್ಪತ್ರೆಯ ಬೆಡ್ ಮೇಲಿದ್ದರು. ನಿಧಾನವಾಗಿ ಕಣ್ಣು ತೆರೆದಾಗ ಒಂದು ಕಡೆ ರೆಕ್ಕೆ ಮುರಿದ ಹಕ್ಕಿಯಂತೆ ನಿಂತ ಮಿಸೆಸ್. ಆಕೆಯ ಹಿಂದೆ ಡಾಕ್ಟರ್ ನರ್ಸ್ಗಳು. ಇನ್ನೊಂದು ಕಡೆ ಎಸ್.ಪಿ. ಮತ್ತವರ ಪಡೆ. ಮಾತನಾಡಲೆತ್ನಿಸಿದ. ಸಿನಿಮಾಗಳಲ್ಲಿ ಕೇಳ್ತಾರಲ್ಲ ‘ನಾನೀಗ ಎಲ್ಲಿದ್ದೀನಿ?’ ಅಂತ ಕೇಳಲು ಹೊರಟರೂ ದನಿಯೇ ಹೊರಬರಲಿಲ್ಲ. ಮೂಗಿಗೇನೋ ಹಾಕಿದ್ದರು. ಆಕ್ಸಿಜನ್ನೋ ಏನೋ ಮೈತುಂಬಾ ನಳಿಕೆಗಳು ಡ್ರಿಪ್‌ಸ್ಟಾಂಡ್, ಗ್ಲುಕೋಸ್ ಬಾಟಲ್. ಎಂತೆಂತದೋ ಸುಡುಗಾಡು ಕಾಣುವ ತಾನೀಗ ಐಸಿಯುನಲ್ಲಿ ಪವಡಿಸಿದ್ದೇನೆಂದುಕೊಂಡ. ವಾರಗಳು ಕಳೆವಾಗ ಮಕ್ಕಳೂ ಬಂದರು. ಪೊಲೀಸರ ತಪಶೀಲಿಗೂ ಒಳಗಾದ. ಇದೀಗ ಕುತ್ತಿಗೆಗೆ ಹಾಕಿದ್ದ ನಳಿಕೆ ತೆಗೆದು, ನೇರವಾಗಿ ಬಾಯಿಂದ ಆಹಾರ ತೆಗೆದುಕೊಳ್ಳುವಂತಾದಾಗ, ‘ಹಿ ಈಸ್ ಔಟ್ ಆಪ್ ಡೇಂಜರ್’ ಎಂದರು ಸರ್ಜನ್. ಒಂದು ವಾರೊತ್ಪತ್ತಿನಲ್ಲಿ ಡೆಸ್ಚಾರ್ಜ್ ಮಾಡಿದರು. ಮಿಸೆಸ್ ಮುಖದಲ್ಲಂತೂ ಮಂದಹಾಸ.

ಮದಕರಿ ಮಂಕಾಗಿದ್ದರು. ಲಕ್ಷಾಂತರ ರೂಪಾಯಿಗಳ ಬಿಲ್ ಆಗಿತ್ತು. ‘ಅಲ್ಲಮ್ಮಾ, ನಿನ್ನ ಗಂಡ ಕಥೆ ಕಾದಂಬರಿ ಬರ‍್ಕೊಂಡು ಇರೋದು ಬಿಟ್ಟು ಏನೋ ಮಹಾ ಬುದ್ಧಿಜೀವಿ ಅಂತೆಲ್ಲಾ ಆಡಿದ್ದಕ್ಕೆ ಬಿಲ್ ತೆರೆತ್ತಿರೋರು ನಾವು, ಈವಯ್ಯ ಬರೆದಿದ್ದು ಪ್ರಕಟಿಸೋ ಪತ್ರಿಕೆನೋರು ಬಂದ್ರಾ? ಅಟ್‌ಲೀಸ್ಟ್ ತಿರಿಗಿ ನೋಡಿದ್ರಾ? ನಮ್ಮಕರ್ಮ’ ಮಕ್ಕಳು ಅವರಮ್ಮನಿಗೆ ಶಾಪ ಹಾಕುವುದು ಕೇಳಿತು. ಬಾಡಿಗೆ ಕಾರಿಗೆ ತನ್ನನ್ನು ತುಂಬಿ ತಾವು ಏರಿದರು. ಅವನ್ಯಾವನೋ ಚಾಲಕ ಕಾರು ಜೋರಾಗಿ ಓಡಿಸುತ್ತಿದ್ದ ‘ಗೊ ಸ್ಲೋಲಿ’ ಎಂದರಚಿದ ಮದಕರಿ. ಅವನಿನ್ನೂ ಜೋರಾಗಿ ಓಡಿಸಲಾರಂಭಿಸಿದ. ಹಿಂದಿನ ಸೀಟಿನಲ್ಲಿದ್ದ ಇವನು ಬಾಗಿ ಅವನ ಭುಜ ಎಳೆದ. ಗಕ್ಕನೆ ಚಾಲಕ ತಿರುಗಿ ನೋಡಿದ. ‘ಅವನೆ ! ಅವನೇ ರಾತ್ರಿ ಮನೆಗೆ ನುಗ್ಗಿ ಚಾಕು ಹಾಕಿವದ. ತರತರನೆ ನಡುಗಿ ಹೋದ ಅವನು ‘ಕಿಲ್ಲರ್’ ಎಂದು ಕೂಗಿಕೊಂಡು ಬಿದ್ದ. ದೊಪ್ಪನೆ ಶಬ್ದವಾಯಿತು. ಯಾರೋ ಕೆನ್ನೆ ತಟ್ಟುತ್ತಿದ್ದಾರೆ. ಕಣ್ಣುತೆರೆದು ಕಕ್ಕಾಬಿಕ್ಕಿಯಾಗಿ ನೋಡಿದ. ಮಿಸೆಸ್ ಕಂಡಳು. ‘ಕೆಟ್ಟ ಕನಸು ಬಿತ್ತೇನ್ರಿ? ಮೈಯೆಲ್ಲಾ ಬೆವರು’ ಅಂದಳು. ಅವನು ಎದ್ದು ಕೂತ ಅಬ್ಬ ತಾನು ಅನುಭವಿಸಿದ್ದೆಲ್ಲಾ ಕನಸಲ್ಲವಾ? ಅಬ್ಬಾ! ಪಾರಾದೆ. ಮಂಚದಿಂದ ಕೆಳಗೆ ಬಿದ್ದಿದ್ದ ಅವನು ಪುನಃ ಮಂಚ ಏರದೆ ಕೊಡವಿಕೊಂಡೆದ್ದ.

ಬಾಗಿಲಲ್ಲಿ ಪೇಪರ್ ದೊಪ್ಪನೆ ಬಿದ್ದ ಶಬ್ದ. ಲುಂಗಿ ಸರಿಮಾಡಿಕೊಂಡೆದ್ದು ಬಂದು ಪೇಪರ್ ಎತ್ತಿಕೊಂಡು ರೂಮಿಗೆ ಬಂದು ಕಣ್ಣಾಡಿಸುತ್ತಾ ಕೂತ. ಮೊದಲ ಪುಟದ ಒಂದು ಕಲಮ್ಮನಲ್ಲಿ ಕಂಡ ಹೆಡ್‌ಲೈನ್ಸ್ ನೋಡಿದ. ಎದೆಬಡಿತ ದ್ವಿಗುಣಿಸಿತು. ದೇಹಾದ್ಯಂತ ಕಂಪನ. ಹಿಗ್ಗು ತಡಯಲಾಗಲಿಲ್ಲ. ‘ಅಲ್ಲೇ ಬಾರೇ ಇಲ್ಲಿ’ ಎಂದು ಮಿಸೆಸ್ ಮದಕರಿಯನ್ನು ಕರೆದ. ಆಕೆ ಕಾಫಿ ಲೋಟದೊಡನ ಬಂದು ಟೇಬಲ್ ಮೇಲೆ ಕಾಫಿ ಲೋಟವನ್ನಿಟ್ಟಳು. ‘ನೋಡೇ ಇಲ್ಲಿ ಪೇಪರ‍್ನಾ.... ತೋರಿಸದ’. ‘ಬೆದರಿಕೆ ಪತ್ರ ಬರೆಯುತ್ತಿದ್ದವನ ಬಂಧನ’ ಎಂದು ದೊಡ್ಡದಾಗಿ ಅಚ್ಚಾಗಿದೆ. ವಿವರಗಳ ಮೇಲೆ ಕಣ್ಣಾಡಿಸುತ್ತಾ ನಿಂತಳಾಕೆ. ಮೊಬೈಲ್ ರಿಂಗ್ ಆಯಿತು, ನೋಡಿದ. ಬಂಜಗೆರೆಯವರ ಕಾಲ್. ರಿಸೀವ್ ಮಾಡಿದ. ಅವರೂ ಬೆದರಿಕೆ ಪತ್ರಗಳ ಹಾವಳಿಗೆ ಒಳಗಾವರಾದ್ದರಿಂದ, ‘ವಿಷಯ ತಿಳಿತ್ರಾ?’ ಎಂದು ಒಬ್ಬರಿಗೊಬ್ಬರು ಅಭಿನಂದಿಸಕೊಂಡು ಹಿಗ್ಗಿದರು. ‘ಆ ಎಸಿಪಿನೋರು ಇಲ್ಲಿಗೆ ಬಂದು ಹೋಗಿ ಹದಿನೈದು ದಿನದಾಗೆ ಹಿಡಿದಾರ್ ನೋಡ್ರಿ’ ಎಂದ ಮಿಸೆಸ್ ಮುಖ ಇಷ್ಟಗಲವಾಗಿತ್ತು. ಸಕ್ಕರೆಯಿಲ್ಲದ ಕಾಫಿ ಹೀರಿದರೂ ಬಾಯೆಲ್ಲಾ ಸಿಹಿಸಿಹಿಯಾತು. ಕನಸಲ್ಲಾ ತಾನೆ ಎಂದು ತನ್ನನ್ನು ತಾನೆ ಚಿಮುಟಿಕೊಂಡ ಮದಕರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.