ADVERTISEMENT

ಕಥೆ | ಅಳಿಸಲಾರದ ಕಪ್ಪುಶಾಯಿ

ಶ್ರೀಧರ ಗಸ್ತಿ
Published 31 ಡಿಸೆಂಬರ್ 2023, 0:30 IST
Last Updated 31 ಡಿಸೆಂಬರ್ 2023, 0:30 IST
   

ನಿರಂಜನ ಕಾರು ಡ್ರೈವ್ ಮಾಡುತ್ತಿದ್ದ. ವೈಷ್ಣವಿ ಪಕ್ಕದ ಸೀಟಿನಲ್ಲಿ ಕುಳಿತು ಗಾಢ ಮೌನಕ್ಕೆ ಶರಣಾಗಿದ್ದಳು. ಮಾತಿಲ್ಲದ ಯಾನ ಅದಾಗಿತ್ತು. ಬಯಲು ಸೀಮೆಯ ಸೂಸಿ ಬರುತಿದ್ದ ಬಿಸಿ ಗಾಳಿಯನ್ನು ಹಿಮ್ಮೆಟ್ಟಿ, ಮಲೆನಾಡಿನ ಕಾನನವನ್ನು ಹೊಕ್ಕಾಗ ತಂಗಾಳಿ ಸುಂಯ್ಯನೇ ಸುಳಿದು ಅಹ್ಲಾದವನ್ನುಂಟು ಮಾಡುತಿತ್ತು. ಇನ್ನೇನಿದ್ರು ಕಾಡಿನೊಂದಿಗೆ ಓಟ ಎನ್ನುವಂತೆ ಕಾರು ಮುನ್ನುಗ್ಗುತ್ತಿತ್ತು. ತಿರುವುಗಳ ತಿರುಗಣಿಗಳಲ್ಲಿ ವಾಹನಗಳ ಸಪ್ಪಳದೇ ಕಾರುಬಾರು. ಸತತ ನಾಲ್ಕು ಗಂಟೆಗಳಿಂದ ಡ್ರೈವ್ ಮಾಡುತಿದ್ದ ನಿರಂಜನ ಟೀ ಕುಡಿಯಲು ಒಂದು ಡಬ್ಬಿ ಅಂಗಡಿಯ ಮುಂದೆ ಕಾರು ನಿಲ್ಲಿಸಿದ. ವೈಷ್ಣವಿಗೆ ಸೌಜನ್ಯಕ್ಕಾದ್ರೂ ಟೀ ಬೇಕೇನು? ಎಂದು ಕೇಳುವ ಗೋಜಿಗೂ ಹೋಗಲಿಲ್ಲ. ಅವಳೂ ಅಷ್ಟೇ. ನೋಡಿಯೂ ನೋಡದಂತೆ, ನಿದ್ರೆ ಬಂದಂತೆ ನಟಿಸುತಿದ್ದಳು. ಮತ್ತೇ ಕಾರು ಹತ್ತಿದ ನಿರಂಜನ ವೈಷ್ಣವಿಗೆ ಬೆಲ್ಟ್ ಹಾಕಿಕೊಳ್ಳಲು ಸೂಚಿಸಿದ. ‘ಏನ್ ಬೇಕಾಗಿಲ್ಲ ನಾನು ಹಾಕಲ್ಲ’ ಎಂದು ಒರಟಾಗಿಯೇ ಉತ್ತರಿಸಿದಳು. ನಿರಂಜನ ಕಾರನ್ನು ಸೈಡ್ ಹಚ್ಚಿ ತಾನೇ ಬೆಲ್ಟ್ ಹಾಕಿದ. ನನ್ನ ಮುಟ್ಟಬೇಡವೋ, ಎಂದು ಕಿರುಚಿದಳು. ‘ವೈಷ್ಣವಿ, ನಿನ್ನ ಮುಟ್ಟಿ ಚಪಲ ತೀರಿಸಿಕೊಳ್ಳೋದಕಲ್ಲ. ತಿರುವು ಅದಾವು ಏನಾದ್ರೂ ಹೆಚ್ಚುಕಡಿಮೆ ಆದ್ರ ನಮ್ಮ ಪತ್ತೆ ಸಿಗದಷ್ಟು ಆಳದಲ್ಲಿ ಬಿದ್ದು ಸತ್ತ ಹೋಗ್ತಿವಿ. ಮೇಲಾಗಿ ನಿನ್ನನ್ನು ಸುರಕ್ಷಿತವಾಗಿ ನಿಮ್ಮ ತಂದೆ ತಾಯಿಗೆ ಒಪ್ಪಿಸೋ ಜವಾಬ್ದಾರಿ ನಂದು Please cooperate me.’ ‘ಆಯ್ತು ಅದೇನೈತೋ ತೀರಿಸ್ಕೋ ಹೋಗ್.’ ಸಿಟ್ಟು ಏರಿಬರುತಿದ್ದರೂ ಸೈರಿಸಿಕೊಂಡ ನಿರಂಜನ ಮತ್ತೇ ಕಾರು ಚಲಾಯಿಸುತಿದ್ದ. ಇದೊಂದು ದಿನ ತಾಳ್ಮೆಯಿಂದಿರು ಅಂತ ಆತನ ಅಂತರಾತ್ಮ ಹೇಳುತಿತ್ತು.

ಮೈಸೂರ ತಲುಪುವ ಹೊತ್ತಿಗೆ ಬೆಳಗಿನ ಆರು ಗಂಟೆ ಸಮಯ. ಮನೆ ತಲುಪುತಿದ್ದಂತೆ ಕಾರಿನಿಂದಿಳಿದ ವೈಷ್ಣವಿ ತನ್ನ ಲಗೇಜನ್ನು ತೆಗೆದುಕೊಂಡು ಮನೆಯ ಬಾಗಿಲಿನ ಕರೆಗಂಟೆ ಒತ್ತಿದಳು. ಈಗ ತನ್ನ ಸರದಿ ಎಂಬಂತೆ, ಸೌಜನ್ಯಕ್ಕೆ ನಿರಂಜನನಿಗೆ ಒಳಗೆ ಕರೆಯಲಿಲ್ಲ. ಆದರೂ ನಿರಂಜನ ಅವಳ ಹಿಂದೆನೇ ಹೋದ. ಇವರು ಬರುವುದು ಮೊದಲೇ ಗೊತ್ತಿದ್ದ ವೈಷ್ಣವಿ ತಂದೆ ತಾಯಿ ಮನೆಯ ಹೊರಾಂಗಣದಲ್ಲಿ ಕಾಯುತ್ತಿದ್ದರು. ಒಳಬಂದ ನಿರಂಜನನಿಗೆ ಮರ್ಯಾದೆ ಕೊಡುವ ಗೋಜಿಗೆ ಹೋಗಲಿಲ್ಲ. ಅದು ಯಾವಾಗಲೂ ಇರಲಿಲ್ಲವೆಂದೇ ಹೇಳಬೇಕು. ಇದೇ ಮೊದಲ ಬಾರಿಗೆ ನಿರಂಜನ ಬಾಯಿಬಿಟ್ಟು ಮಾತನಾಡಿದ್ದ. ವೈಷ್ಣವಿ ತನ್ನೊಂದಿಗೆ ನಡೆದುಕೊಂಡ ರೀತಿ, ಮಾಡಿದ ಎಲ್ಲ ರಂಪಾಟಗಳನ್ನು ಎಳೆಎಳೆಯಾಗಿ ಬಿಚ್ಚಿ ಹೇಳಿದ. ‘ಸಾಕಷ್ಟು ಬಾರಿ ತಿದ್ದಿಕೊಳ್ಳಲು ಅವಕಾಶ ಕೊಟ್ಟರೂ ಅವಳು ಸರಿಪಡಿಸಿಕೊಳ್ಳುವ ಗೋಜಿಗೆ ಹೋಗಲಿಲ್ಲ. ತನ್ನದೇ ಶ್ರೇಷ್ಠ ಎನ್ನುವಂತೆ ಸಾಧಿಸಿದಳು. ನನ್ನ ಮೇಲೆ ಧಮಕಿ, ಬ್ಲ್ಯಾಕ್ ಮೇಲ್ ಮಾಡುವುದು ಸೇರಿದಂತೆ ನನ್ನ ಜೀವ ಹಿಂಡಿದ್ದಾಳೆ. ನಿಮಗೂ ಹಲವು ಬಾರಿ ಹೇಳಿದ್ದೇನೆ. ನೀವೂ ಅವಳಿಗೆ ಏನೂ ಹೇಳಿದಂತಿಲ್ಲ...’ ಎಲ್ಲವನ್ನೂ ಕೇಳುತ್ತಿದ್ದ ವೈಷ್ಣವಿ ತಾಯಿ–ತಂದೆ, ‘ಇದೆಲ್ಲವೂ ನಿಜಾನಾ?’ ಅನ್ನುತ್ತ, ‘ಇರಲಿ ನಮ್ಮ ಮಗಳು ಸ್ವಲ್ಪ ಸೂಕ್ಷ್ಮ,ಸಂಕೋಚ ಸ್ವಭಾವದವಳು. ಇನ್ನೂ ಸ್ವಲ್ಪ ಹುಡುಗಾಟಿಕೆ ಇದೆ. ಜವಾಬ್ದಾರಿ ಕಡಿಮೆ ನೀವೇ ಸ್ವಲ್ಪ ಅನುಸರಿಸಿಕೊಂಡು ಹೋಗಿ’ ಎನ್ನುವ ವಾಡಿಕೆಯ ಮಾತುಗಳನ್ನು ಹೇಳಿದಾಗ, ನಿರಂಜನನಿಗೆ ತಲೆ ಸಿಡಿದಂತಾಯ್ತು. ಮೊದಲೇ ದೂರಿನ ಪ್ರಯಾಣ, ದೇಹವನ್ನು ಸುಸ್ತಾಗಿಸಿತ್ತು. ರೆಸ್ಟ್ ಅವಶ್ಯವಾಗಿ ಬೇಕಿತ್ತು. ‘ನೋಡಿ ನಿಮ್ಮ ಮಗಳನ್ನು ನಿಮಗೆ ಒಪ್ಪಿಸಿದ್ದೇನೆ. ನೀವುಂಟು ನಿಮ್ಮ ಮಗಳುಂಟು’ ಎಂದು ಹೇಳುತ್ತ ಹೊರಬಂದ.

ನಿರಂಜನ ಕಾರು ಮತ್ತೇ ಯೂಟರ್ನ್ ಮಾಡಿದ. ಮೈಸೂರು ದಾಟುತ್ತಿದ್ದಂತೆ ಒಂದೇ ಸವನೆ ಆಕಳಿಕೆ ಬರುತಿದ್ದವು. ನಿದ್ದೆ ಬೇಕಿತ್ತು. ದೇಹ ಬಸವಳಿದಿತ್ತು. ಕಣ್ಣು ಮಸಕು ಮಸಕಾದಂತೆ ಕಾಣತೊಡಗಿದವು. ಅವ್ವ ರೆಸ್ಟ್ ಮಾಡಿಕೊಂಡು ವಾಪಸ್ ಬಾ ಅಂದಿದ್ದ ನೆನಪು ಮರುಕಳಿಸಿತು. ಪಕ್ಕದಲ್ಲೇ ಕಂಡ ಆದಿತ್ಯ ರೆಸ್ಟೋರೆಂಟ್ ಒಳಗೆ ಕಾರನ್ನು ಪಾರ್ಕ್ ಮಾಡಿದ. ಒಂದು ರೂಮ ಗೊತ್ತುಪಡಿಸಿ ಸ್ನಾನ ಮುಗಿಸಿದ. ಬಿಸಿಬಿಸಿಯಾದ ಇಡ್ಲಿ ಸೇವಿಸಿ ಕಾಫಿ ಹೀರಿದ. ಸ್ವಲ್ಪ ರಿಲ್ಯಾಕ್ಸ್ ಆದಂತಾಯಿತು. ನಿದ್ರಾದೇವಿ ತಾಂಡವ ಆಡುತ್ತಿದ್ದರಿಂದ ಗೊತ್ತಿಲ್ಲದೇ ಆತನನ್ನು ಆವರಿಸಿಬಿಟ್ಟಿದ್ದಳು. ಸಂಜೆಯಾಗುತ್ತಿದ್ದಂತೆ ಮತ್ತೆ ಆತನನ್ನು ಎಚ್ಚರಿಸಿದ್ದು ಅಲಾರ್ಮ್‌ ಬೆಲ್. ಮುಖ ತೊಳೆದುಕೊಂಡು ಮತ್ತೆ ಲೈಟಾಗಿ ಟಿಫನ್ ಮಾಡಿದ. ಭಾರವಾದ ಮನಸ್ಸಿನಿಂದ ದೀರ್ಘ ಉಸಿರೊಂದನ್ನು ಹೊರಹಾಕಿದ. ಮತ್ತೆ ಕಾರು ಧಾರವಾಡದತ್ತ ಮುಖ ಮಾಡಿತು. ಕಾರಿನ ವೇಗ ಆತ ಏನನ್ನೋ ಗೆದ್ದಂತೆ, ಯಾವುದೋ ಬಂಧನದಿಂದ ಮುಕ್ತವಾದಂತೆ, ನಾಗಾಲೋಟದಲ್ಲಿ ಓಡುತ್ತಿತ್ತು. ಮುಖದಲ್ಲಿ ಪ್ರಸನ್ನತೆ ಇತ್ತು. ಅಲ್ಲಲ್ಲಿ ಟೀ ಸೇವಿಸುತ್ತ ಕಾಡುಮೇಡುಗಳನ್ನು ದಾಟಿ ಬೆಳಕು ಹರಿಯುತಿದ್ದಂತೆ ಕಾರು ಮನೆಯ ಮುಂದೆ ನಿಂತಿತು. ಮಗ ಬರುವ ನಿರೀಕ್ಷೆಯಲ್ಲಿದ್ದ ಹರೀಶ ಮತ್ತು ಕಮಲಾ ದಂಪತಿ ಹಾರ್ನ್ ಸಪ್ಪಳಕ್ಕೆ ಹೊರಬಂದರು. ನಿರೀಕ್ಷೆಯಂತೆ ನಿರಂಜನ ಬಂದಿದ್ದ. ನೋವು ತುಂಬಿಕೊಂಡ ಹೃದಯ, ಕಪ್ಪು ಮುಸುಕಿದ ಮೋಡ ಮಳೆ ಸುರಿಯಲು ಸಜ್ಜಾದಂತೆ ತವಕಿಸುತ್ತಿತ್ತು. ತಾಯಿ–ತಂದೆಯನ್ನು ನೋಡುತ್ತಿದ್ದಂತೆ ಆ ಕಾವು ಕನವರಳಿಸಿ ಕಣ್ಣೀರಧಾರೆಯಾಗಿ ಸುರಿಯಲಾರಂಭಿಸಿತು. ನಿರಂಜನ ಚಿಕ್ಕ ಮಗುವಿನಂತೆ ತಾಯಿ–ತಂದೆಯನ್ನು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅತ್ತನು. ಆತನ ಅಳುವಿಗೆ ನೆರೆಹೊರೆಯವರೆಲ್ಲಾ ಗಾಬರಿಯಿಂದ ಓಡೋಡಿ ಬಂದರು. ಎಲ್ಲರ ಕಣ್ಣಾಲಿಗಳು ತೇವವಾಗಿದ್ದವು. ಮನೆ ಕೆಲವು ಗಂಟೆಗಳ ಕಾಲ ದುಃಖದ ಆಗರವಾಗಿತ್ತು. ಅನೇಕ ಕುಟುಂಬಗಳಿಗೆ ಬೆಳಕು ನೀಡಿದ್ದ ತನ್ನ ಕವಡೆ ಶಾಸ್ತ್ರ ಮಗನ ವಿಚಾರದಲ್ಲಿ ಸುಳ್ಳಾಗಿದ್ದಕ್ಕೆ ಹರೀಶ ಜೋಯಿಸರು ಪಾಶ್ಚಾತ್ತಾಪ ಪಡುತಿದ್ದರು.

ADVERTISEMENT

ಪೈಪೋಟಿಯ ಈ ಯುಗದಲ್ಲಿ ಪಾಲಕರಿಗೆ ಮಕ್ಕಳೇ ಆಸ್ತಿ. ಅವರನ್ನು ಚೆನ್ನಾಗಿ ಬೆಳೆಸಬೇಕು ಅನ್ನುವ ಧಾವಂತದಲ್ಲಿ ತಮ್ಮ ಎಲ್ಲ ಕಷ್ಟಗಳನ್ನು ಬದಿಗೊತ್ತಿ ಹರೀಶ ಜೋಯಿಸರು ನಿರಂಜನನಿಗೆ ಒಳ್ಳೆಯ ಶಿಕ್ಷಣ ಕೊಡಿಸಿದ್ದರು. ತಾಯಿ ಕಮಲಾ ಹೇಳುತ್ತಿದ್ದ ನೀತಿ ಕಥೆಗಳು ಆತನಲ್ಲಿ ಸ್ವಾಭಿಮಾನ, ಆತ್ಮವಿಶ್ವಾಸ ಒಳ್ಳೆಯ ಸಂಸ್ಕಾರ ತುಂಬಿಸಿದ್ದವು. ಬಿ.ಇ. ಕಂಪ್ಯೂಟರ್ ಸೈನ್ಸ್ ಮುಗಿಯುತ್ತಿದ್ದಂತೆ ಕೆನಡಾದ ಐಬಿಎಂ ಕಂಪನಿಯಲ್ಲಿ ದೊಡ್ಡ ಮೊತ್ತದ ವೇತನದೊಂದಿಗೆ ನೌಕರಿ ಹಿಡಿದಿದ್ದ. ಕೆನಡಾ ನಮ್ಮ ದೇಶವಲ್ಲ. ಆದರೆ ಒಳ್ಳೆಯ ವೇತನದ ಉದ್ಯೋಗ ಅರಸಿ ತಾಯ್ನಾಡು ಬಿಟ್ಟು ವಲಸೆ ಹೋದವರಿಗೇನು ಕಡಿಮೆಯಿಲ್ಲ.ಆದರೆ ಜೋಯಿಸರು ಅಪ್ಪಟ ದೇಶಾಭಿಮಾನಿ. ಮಗನನ್ನು ಹೊರದೇಶಕ್ಕೆ ಕಳಿಸಲು ಮನಸ್ಸಿರಲಿಲ್ಲ. ಮಗ ನಿರಂಜನ ಹೇಳಿದ ವಿಚಾರಗಳು ಹಿಡಿಸಿದ್ದವು. ಆ ನಂಬಿಕೆಯಿಂದಲೇ ಮಗನನ್ನು ಕೆನಡಾಕ್ಕೆ ಕಳಿಸಲು ಒಪ್ಪಿದ್ದರು. ಹರೀಶ ಜೋಯಿಸರ ಈ ನಿರ್ಧಾರ ಆತನ ಸ್ನೇಹಿತರಿಗೆ ಹಿಡಿಸಿರಲಿಲ್ಲ. ಒಮ್ಮೆ ಆತನ ಸ್ನೇಹಿತರು, ‘ಅಲ್ಲಾ ಜೋಯಿಸ್ರೆ... ನಿಮ್ಮ ಮಗನ್ನ ಕೆನಡಾಕ ಯಾಕ ಕಳಸ್ತೀರಿ? ಇರಾಂವ ಒಬ್ಬ ಮಗಾ ಅದಾನ, ನಮ್ಮ ದೇಶದಾಗೂ ಸಾಕಷ್ಟು ಅವಕಾಶಗಳಾದವ ಇಲ್ಲೇ ಯಾಕ ಪ್ರಯತ್ನಿಸಬಾರದು? ಚಂದ್ರನ ಮೇಲೆ ಲಗ್ಗೆಯಿಟ್ಟು ವಿಶ್ವದ ಗಮನ ಸೆಳೆದ ರಾಷ್ಟ್ರ ನಮ್ಮದು. ನಾವ್ಯಾರಿಗೂ ಕಮ್ಮಿಯಿಲ್ಲ ಅನ್ನೋದು ಸಾಬೀತಾಗಿದೆ.’ ಹರೀಶ ಜೋಯಿಸರು, ‘ನೋಡಿಪಾ ನನಗೂ ಆ ಬಗ್ಗೆ ಹೆಮ್ಮೆ ಇದೆ. ನಾನು ಕಳಸ್ತಾ ಇರೋದು ಹೊರದೇಶದ ಶೈಕ್ಷಣಿಕ ಮತ್ತು ತಾಂತ್ರಿಕ ವಿಚಾರಗಳನ್ನೂ ಸ್ವಲ್ಪ ಕಲೀಲಿ ಅಂತಾ ಅಷ್ಟೇ. ಒಂದೈದು ವರ್ಷ ಹೋಗಿ ಬರಲಿ, ಆ ಅನುಭವವನ್ನು ದೇಶದ ಸಲುವಾಗಿಯೇ ಮುಡಿಪಿಡಲಿ’ ಎಂದಿದ್ದರು.

ನಿರಂಜನನಿಗೆ ತಾನೊಂದು ಹೊಸ ಜಾಗಕ್ಕೆ ಹೋಗ್ತಾ ಇದ್ದೇನೆ ಹೇಗೋ ಏನೋ ಅನ್ನುವ ಆತಂಕವೂ ಇತ್ತು. ಆತನ ಕೆಲವು ಗೆಳೆಯರು ‘ಕಪ್ಪು ಕಡಿ ಆಗಿ ಬರಾಂಗಿಲ್ಲ ಹೆಂಗ ಇರ್ತಿಯೋ?’ ಅಂತಂದ್ರೆ, ಇನ್ನು ಕೆಲವರು ‘ಅಲ್ಲಿಂದ ಬಿಳಿಹೆಂತೀನ ಒಂದ ತಂದಬಿಟ್ರ ಆತು. ಎಲ್ಲಾ ಮಡಿ ಮೈಲಿಗೆ ಅದ್ರಾಗ ಮುಚ್ಚಿಹೋಗಿ ಬಿಡ್ತೈತಿ’ ಅಂತಾ ಜೋಕ್ ಮಾಡಿ ನಕ್ಕಿದ್ರು. ‘ಹಂಗ ಏನ ಆದ್ರುನೂ ಈ ಭಾರತದ ಬಡ ಗೆಳೆಯರನ್ನು ಮಾತ್ರ ಮರಿಬ್ಯಾಡಪಾ’ ಅಂತ ಜೋಕ್ ಮಾಡಿದ್ರು. ಅಂವ ಕೆನಡಾದಿಂದ ಬಂದಾಗೊಮ್ಮೆ ಎಲ್ಲಾರ್ದೂ ಕಣ್ಣ ಅವನಕಡೇನ ಇರ್ತಿತ್ತು. ಅವರ ಮನ್ಯಾಗ ಹೊಸಾದ ಏನರ ಕಂಡ್ರ ಸಾಕು. ಅದು ಫಾರೆನ್‌ದ ಅನ್ನುವ ಲೆಕ್ಕಕ್ಕೆ ಮಾತನಾಡುವುದು ರೂಢಿಯಾಗಿತ್ತು. ಅಂವ ಅಲ್ಲಿಂದ ಬರಾಕತ್ತಾನಂದ್ರ ಸಾಕು, ಮನ್ಯಾಗಿನಾವ್ರಕಿಂತ ಗೆಳ್ಯಾರ್ದ ಒಂದ ಲಿಸ್ಟ್ ರೇಡಿಯಾಗತಿತ್ತು. ಇವ್ರ ಹೇಳೋ ಐಟಮ್‌ಗಳೆಲ್ಲಾ ಅಲ್ಲಿ ಫ್ರೀ ಯಾಗಿ ಸಿಗ್ತಾವೇನೋ ಅನ್ನೋ ತರಾ ಹೇಳ್ತಿದ್ರು. ಕೆಲವ್ರು ಇಲ್ಲಿಕ್ಕಿಂತ ಅಲ್ಲಿ ರೇಟ ಭಾಳ ಕಮ್ಮಿ ಅಂತಲ್ಲೋ, ಅಂತೇಳಿ ತಮಗೆ ಬೇಕಾದ ವಸ್ತುಗಳನ್ನು ತರಸಿಕೊಳ್ತಿದ್ರು. ತಂದಕೊಟ್ಟ ಮ್ಯಾಲ, ‘ದೋಸ್ತ್ ಈ ಸಲ ಇದು ನಿನ್ನ ಗಿಫ್ಟ್ ಅಂತ ತಿಳಕೊಂಡ ಬಿಡ. ಮುಂದ ಖಂಡಿತ ಕೊಡೂನು’ ಅಂತ, ‘ಏನ ಬೇಜಾರ ಇಲ್ಲ ಹೌದಲ್ಲ?’ ಅಂತ ಕೆಲವ್ರು, ಇನ್ನ ಕೆಲವ್ರು ಅರ್ಧ ಹಣ ಕೊಟ್ಟಮ್ಯಾಲ, ‘ದೋಸ್ತ್ Next ಟೈಮ್ ತರ್ತಿಯಲ್ಲ ಆವಾಗ ಅದನ್ನು ಸೇರಿಸಿ ಕೊಡೂನಂತ’ ಅಂತ ಹೇಳಿ ಜಾರ್ಕೋತಿದ್ರು. ನಿರಂಜನ ಸಂಭಾವಿತ. ಜಾಸ್ತಿ ಮಾತಾಡಾಂವ ಅಲ್ಲ. ಹಿಂಗಾಗಿ ಇವರ ಹಕ್ಕೀಕತ್ ಗೊತ್ತಾಗಿ, ಬರಬರುತ್ತ ಆತನೂ ಹೊಸ ರಾಗ ತಗೀತಿದ್ದ. ‘ಅಯ್ಯೋ ಮಿಸ್ ಮಾಡಿ ಬಂದೆ. ಏ ಈ ಸಲ ನಾನು ಮಾರ್ಕೆಟಿಗೆ ಹೋಗಲಿಲ್ಲ’ ಅನ್ನೋ ಸಬೂಬು ಹೇಳಿ ಜಾರ್ಕೊಂಡ ಬಿಡ್ತಿದ್ದ.

ಇತ್ತಿತ್ತಲಾಗಿ ಆತ ತನ್ನ ಗೆಳೆಯರಿಗೆಲ್ಲ ಫೋನ್ ಮಾಡೋದ ಕಡಿಮೆ ಮಾಡಿದ್ದ, ಯಾಕಂದ್ರ ಅವನಿಗೆ ಒಬ್ಬಳು ಬಿಳಿಹೆಂಡತಿ ಸಿಕ್ಕಿದ್ಲು ಅಂತ ಪುಕಾರ ಎದ್ದಿತ್ತು. ಅಸಲಿಗೆ ಅದು ಹಂಗಾಗಿರಲಿಲ್ಲ. ಆತ ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಮಾಡುವಾಗ ಮೈಸೂರಿನ ಹುಡುಗಿ ವೈಷ್ಣವಿ ಜೊತೆ ಸ್ನೇಹವಿತ್ತು. ಆ ಸ್ನೇಹ ಪ್ರೇಮಾಂಕುರವಾಗಿತ್ತು. ನಿರಂಜನ ವಿದ್ಯಾವಂತನಿದ್ದುದರಿಂದ ಒಳ್ಳೆಯ ನೌಕರೀನೆ ಸಿಕ್ಕಿತ್ತು. ಯಾವಾಗ ಇತನಿಗೆ ಕೆನಡಾಕ್ಕೆ ಜಾಬ್ ಆಯಿತೋ, ಆವತ್ತೇ ವೈಷ್ಣವಿಗೂ ಸಹ ಹೆಚ್ಚಿನ ವಿದ್ಯಾಭ್ಯಾಸದ ವಿಚಾರ ಹೊಳೆದಿತ್ತು. ಅದೇ ನೆಪವೊಡ್ಡಿ ಪಾಸ್‌ಪೋರ್ಟ್ ರೆಡಿ ಮಾಡಿಕೊಂಡಿದ್ದಳು. ಹಾಗೆ ಅನ್ನುವಕಿಂತ ನಿರಂಜನನ ಕೈಯಿಂದಲೇ ಮಾಡಿಸಿದ್ದಳು. ವೈಷ್ಣವಿಗೆ ವಿದೇಶಕ್ಕೆ ಹೋಗಿ ಕಲಿಯುವಷ್ಟು ಅನುಕೂಲವಿರಲಿಲ್ಲ. ನಿರಂಜನನ ಜೊತೆಗಿದ್ದ ಪ್ರೇಮ ಅವಳನ್ನು ಕೆನಡಾಕ್ಕೆ ಕರೆದುಕೊಂಡು ಹೋಗಿತ್ತು. ವೈಷ್ಣವಿ ತನ್ನ ಬಡತನದ ದೌರ್ಬಲ್ಯವನ್ನು ಎಲ್ಲಿಯೂ ತೋರಿಸಿಕೊಂಡಿದ್ದಿಲ್ಲ. ಶ್ರೀಮಂತಿಕೆಯ ಪೋಸು ಕೊಡುವಲ್ಲಿ ಯಾವಾಗಲೂ ಮುಂದು. ನಿರಂಜನ ಮುಗ್ಧನಾಗಿದ್ದರಿಂದ ಅವಳ ಪ್ರೀತಿಯ ದಾಸನಾಗಿದ್ದ. ನಿರಂಜನ ಈ ವಿಷಯವನ್ನು ತನ್ನ ತಂದೆತಾಯಿಗೂ ತಿಳಿಸಿದ್ದ. ಅವರದೇ ಕೋಮಿನ ಹುಡುಗಿಯಾದ್ದರಿಂದ ಪ್ರತಿರೋಧವೇನೂ ಬಂದಿರಲಿಲ್ಲ. ಆದರೆ ಹಿರಿಯರನೇಕರು ದೂರದ ಸಂಬಂಧ, ಸಂಸ್ಕೃತಿ ಸಂಪ್ರದಾಯಗಳು, ಆಚಾರ ವಿಚಾರಗಳು ಸ್ವಲ್ಪ ಬದಲಾಗತಾವ. ಭಾಷೆ ಬ್ಯಾರೆ, ಊಟ ತಿಂಡಿ ಬ್ಯಾರೆ, ಸ್ವಲ್ಪ ವಿಚಾರ ಮಾಡಿ ಹೆಜ್ಜಿ ಇಡ್ರಿ ಅಂದಿದ್ರು. ಹರೀಶ ಮತ್ತು ಕಮಲಾ ತಮ್ಮ ಮಗ ಪ್ರೀತಿಸಿ ಮದುವೆಯಾಗುತ್ತಿದ್ದಾನೆ ಅಂದ್ರ ಜನ ಏನಾರ ತಿಳಕೊಂಡಾರು ಅಂತೇಳಿ, ‘ಎಲ್ಲಾರು ಹಂಗ ಇರಾಂಗಿಲ್ಲ ಬಿಡ್ರಿ’ ಅಂತ ತಮ್ಮ ಕವಡೆ ಶಾಸ್ತ್ರದ ಮೊರೆಹೋಗಿದ್ದರು. ಕವಡೆ ಶಾಸ್ತ್ರಕ್ಕೆ ಹೆಸರುವಾಸಿಯಾಗಿರುವ ತಾನು ತನ್ನ ಮಗ ಮತ್ತು ಸೊಸೆಯಾಗಿ ಬರುವವಳ ಜಾತಕ ತಿಳಿಯಲು ತುಂಬಾ ಕುತೂಹಲದಿಂದ ಕವಡೆ ಹಾಕಿದ್ದರು. ಕವಡೆ ಶಾಸ್ತ್ರ ಕೈಹಿಡಿದಿತ್ತು. ಪೂರ್ಣ ಪ್ರಮಾಣದ ಉತ್ತಮ ಫಲವನ್ನು ತೋರಿಸಿತ್ತು. ಹೀಗಾಗಿ ಶಾಸ್ತ್ರ ಸಂಪ್ರದಾಯದ ಪ್ರಕಾರ ಮದುವೆ ವಿಜೃಂಭಣೆಯಿಂದ ನೆರವೇರಿಸಿದರು. ನಿರಂಜನನ ಒತ್ತಾಸೆಯಂತೆ ಯಾವ ವರದಕ್ಷಿಣೆಯಾಗಲಿ, ಕೊಡುಗೆಗಳನ್ನಾಗಲಿ ಪಡೆಯಲಿಲ್ಲ.

ಮಗನ ವಿಜೃಂಭಣೆಯ ಮದುವೆಗೆ ತಾಯಿ ತಂದೆ ಸ್ವರ್ಗಕ್ಕೆ ಮೂರೇ ಗೇಣು ಸಮೀಪ ಎನ್ನುವಂತೆ ಖುಷಿ ಅನುಭವಿಸಿದ್ದರು. ಬಂಧು ಬಳಗವೆಲ್ಲ ಉತ್ತಮ ಜೋಡಿಗೆ ಶುಭ ಹಾರೈಸಿದ್ದರು. ಹರೀಶ ಮತ್ತು ಕಮಲಾ ಮನೆಗೆ ಬಂದ ಸೊಸೆಯ ಮೇಲೆ ಸಾಕಷ್ಟು ಭರವಸೆಗಳನ್ನು ಇಟ್ಟುಕೊಂಡಿದ್ದರು. ಮೊದ ಮೊದಲು ಎಲ್ಲಾನೂ ಚೆನ್ನಾಗೇ ಇತ್ತು. ವೈಷ್ಣವಿಗೆ ಇವರಾಡುವ ಮಾತುಗಳೇ ಹಿಡಿಸಿದ್ದಿಲ್ಲ. ನಿಮ್ಮದೇನು ಭಾಷೆ ಅರ್ಥವೇ ಆಗೋದಿಲ್ಲ ಅಂತಿದ್ದಳು. ಮದುವೆಯಾದ ಹೊಸತರಲ್ಲಿ ಗಂಡನನ್ನು ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳುವಲ್ಲಿ ವೈಷ್ಣವಿ ಯಶಸ್ವಿಯಾಗಿದ್ದಳು. ನಿರಂಜನನಿಗೆ ಒಳ್ಳೆಯ ಸಂಬಳ ಇದ್ದುದರಿಂದ ಆತನ ಸಂಬಳದ ಮುಕ್ಕಾಲುಭಾಗವನ್ನು ತನ್ನ ಖರ್ಚು, ಕೆನಡಾದ ಕಾಲೇಜ ಫೀ ಮತ್ತು ತನ್ನ ತಾಯಿ ತಂದೆಯರ ಖರ್ಚಿಗಾಗಿಯೇ ವ್ಯಯಿಸುತಿದ್ದಳು. ನಿರಂಜನ ಇದಾವುದನ್ನೂ ಪ್ರಶ್ನಿಸುವ ಗೋಜಿಗೆ ಹೋಗಿರಲಿಲ್ಲ. ತನ್ನ ಪ್ರೀತಿ ಯಶಸ್ವಿಯಾಗಿ, ತಂದೆ ತಾಯಂದಿರನ್ನು ಚೆನ್ನಾಗಿ ನೋಡಿಕೊಂಡ್ರೆ ಸಾಕು ಅಂತಿದ್ದ. ಅಡುಗೆ ಮನೆಯಲ್ಲಿ ಅತ್ತೆ ಮಾಡುವ ಅಡುಗೆಯನ್ನೇ ಹೊಗಳಿ, ನೀವು ಎಷ್ಟು ಚೆನ್ನಾಗಿ ಅಡುಗೆ ಮಾಡ್ತಿರಾ, ತನಗೆ ಇದಾವುದು ಬರುವದಿಲ್ಲವೆಂದು ಜಾರಿಕೊಂಡಿದ್ದಳು. ಮೇಲಾಗಿ ಬಹಳ ಹೊತ್ತು ಅವರೊಂದಿಗೆ ಬೆರೆಯುತ್ತಲೂ ಇರಲಿಲ್ಲ. ಅಷ್ಟೇ ಅಲ್ಲದೇ ನಿರಂಜನ ತನ್ನ ತಂದೆ ತಾಯಿ, ಬಂಧು ಬಳಗದ ಜೊತೆ ಖುಷಿ ಖುಷಿಯಾಗಿ ಇರೋದನ್ನು ಕಂಡು ಕಸಿವಿಸಿಗೊಂಡಿದ್ದಳು. ಆರಂಭದಲ್ಲಿ ಹರೀಶ ಮತ್ತು ಕಮಲಾಳಿಗೆ ಸೊಸೆಯ ವರ್ತನೆ ಸರಿ ಬರದಿದ್ದರೂ ತೋರಿಸಿಕೊಳ್ಳಲಿಲ್ಲ. ಸರಿಪಡಿಸಲು ಎಷ್ಟೇ ಪ್ರಯತ್ನಿಸಿದರೂ ಮೊಂಡುತನ ಕಡಿಮೆಯಾಗಿರಲಿಲ್ಲ . ಆದರೆ ಮಗನೊಂದಿಗೆ ಚೆಂದಾಗಿ ಇರುವುದನ್ನು ನೋಡಿ ಖುಷಿಪಡುತ್ತಿದ್ದರು. ಆರಂಭದಲ್ಲಿ ಹಿಂಗಾಗ್ತದ ಮುಂದ ಸರಿ ಹೋಗ್ತಾರ ಅಂತ ಅಂದುಕೊಂಡು ಸುಮ್ಮನಾಗಿದ್ದರು. ನಿರಂಜನ ಯಾವಾಗಲೂ ಅವಳ ಸಾಮೀಪ್ಯದಲ್ಲಿಯೇ ನಗುನಗುತಾ ಇರುವುದನ್ನು ಕಂಡು ಖುಷಿಪಟ್ಟಿದ್ದರು. ಆದರೆ ಆತ ಅವಳ ಅಧೀನದಲ್ಲಿ ಇದ್ದಂತಿತ್ತು. ತನ್ನ ಅನುಮತಿಯಿಲ್ಲದೇ ಏನನ್ನೂ ಮಾಡುವಂತಿರಲಿಲ್ಲ. ತನ್ನ ತಂದೆ ತಾಯಿಯ ಮುಂದೆ ಮಾತನಾಡುವಾಗ ಅತ್ತೆ ಮಾವಂದಿರ ಬಗ್ಗೆ ಮಾತನಾಡುವಾಗ ರಾಹು ಕೇತು ಪದ ಬಳಸಿ ಮಾತನಾಡುತ್ತಿದ್ದಳು. ಒಮ್ಮೆ ನಿರಂಜನ ಕೇಳಿಯೇ ಬಿಟ್ಟಿದ್ದ, ‘ಅದೇನೇ ರಾಹು ಕೇತು ಅಂತೀಯಲ್ಲ ಯಾರೇ ಅದು?’

‘ಇನ್ನಾರು ನಿಮ್ಮಪ್ಪ ನಿಮ್ಮವ್ವ?’

ನಿರಂಜನ ಸಿಟ್ಟು ನೆತ್ತಿಗೇರಿ ಹೊಡೆಯಲು ಕೈ ಎತ್ತಿದ್ದ.‌ ಅಷ್ಟರಲ್ಲಿ ತಾಯಿ ಕಮಲಾ ನಡುವೆ ಬಂದು ತಪ್ಪಿಸಿದ್ದಳು.

‘ಯಾಕೋ ಅವಳ ಮೇಲೆ ಕೈ ಮಾಡತಿ?’ ಅಂದಾಗ, ಎಲ್ಲಾ ನಿಮ್ಮಿಂದನ ಅಂತಾ ವ್ಯಂಗ್ಯವಾಗಿ ಮಾತನಾಡಿದ್ದಳು.

ಮಗನಿಂದ ರಾಹು ಕೇತುವಿನ ವಿಷಯ ಬಹಿರಂಗವಾಗಿತ್ತು. ಆರಂಭದಲ್ಲಿಯೇ ಜಗಳ ಜಾಪತ್ರಿ ಬೇಡವೆಂದು ಸುಮ್ಮನಾಗಿದ್ದರು. ಮನೆಯಲ್ಲಿ ಇರುವಷ್ಟು ದಿನ ತಮ್ಮ ರೂಮನ್ನು ಬಿಟ್ಟು ಹೊರಬರುತ್ತಿದ್ದಿಲ್ಲ. ಹೊರಗೆ ಹೋಗಬೇಕಾದ್ರೂ ತನ್ನ ರೂಮನ್ನು ಲಾಕ್ ಮಾಡಿಕೊಂಡು ಹೋಗುತ್ತಿದ್ದಳು. ನಿರಂಜನ ಎಲ್ಲರ ಜೊತೆಗೆ ಖುಷಿಯಾಗಿರುತ್ತಿದ್ದ, ವೈಷ್ಣವಿಯನ್ನೂ ಸೇರಿಸಿಕೊಳ್ಳಲು ಪ್ರಯತ್ನಿಸಿದ್ದ. ಆದರೆ ಅವಳು ಹೇಟ್ ಮಾಡುತ್ತಿದ್ದಳು. ಹೊಸದರಲ್ಲಿ ಒಂಟಿತನ ಬಯಸೋದು ಸಹಜವೆಂದು ಹರೀಶ ಮತ್ತು ಕಮಲಾ ಅಂದುಕೊಂಡಿದ್ದರು. ಮದುವೆಯಾದ ತಿಂಗಳೊಪ್ಪತ್ತಿನಲ್ಲಿ ಕೆನಡಾಕ್ಕೆ ಪ್ರಯಾಣ ಬೆಳೆಸಿದರೂ ಯಾವ ತಕರಾರೂ ಮಾಡಿದ್ದಿಲ್ಲ.

ಕೆನಡಾಕ್ಕೆ ಹೋದ ಮರುಕ್ಷಣದಲ್ಲೇ ನಿರಂಜನ ತನ್ನ ತಾಯಿ ತಂದೆಯೊಂದಿಗೆ ಬಹಳ ಹೊತ್ತು ಮಾತನಾಡಿದ್ದನ್ನು, ‘ಏನ್ರಿ? ಎಷ್ಟೊತ್ತದು ಮಾತಾಡೋದು, ನಿನ್ನೆ ತಾನೇ ಬಂದಿರೋದು? ಅವರ ಜೊತೆನೇ ಮಾತಾಡೋದಾದ್ರೆ ನನ್ನನ್ಯಾಕೆ ಲಗ್ನವಾದ್ರಿ’ ಅಂತಾ ಫೋನ್‌ನಲ್ಲಿ ಜಾಸ್ತಿ ಹೊತ್ತು ಮಾತನಾಡುವುದಕ್ಕೆ ಬ್ರೇಕ್ ಹಾಕಿದ್ದಳು. ತಾನು ಮಾತ್ರ ತನ್ನ ತಾಯಿ–ತಂದೆ ಕೂಡ ತಾಸಗಟ್ಟಲೇ ಮಾತನಾಡುತ್ತಿದ್ದಳು. ನಿರಂಜನ ಅಷ್ಟೊಂದು ಕ್ಷುಲ್ಲಕ ಮನಸ್ಸಿನವನಾಗಿರಲಿಲ್ಲ. ಅವನ ಮಾತೂ ಅಷ್ಟೇ. ಸೂಕ್ಷ್ಮ ಸರಳ ನಿಷ್ಕಲ್ಮಶ ಮನಸ್ಸಿನವ. ಎಲ್ಲವನ್ನೂ ಹೇಳುತ್ತಿದ್ದ. ಅವಳ ಸ್ವಾತಂತ್ರ್ಯಕ್ಕೂ ಯಾವ ಅಡೆತಡೆ ಮಾಡುತ್ತಿರಲಿಲ್ಲ. ಮದುವೆಯಾದ ಹೊಸತರಲ್ಲಿ ತಿರುಗಾಟ ಮಾತ್ರ ಜೋರಾಗೇ ಇತ್ತು. ಆದರೆ ಅವನ ಸಾಮೀಪ್ಯ ಮತ್ತು ದೈಹಿಕ ಸಂಪರ್ಕದಿಂದ ದೂರವಿರಲು ಅಪೇಕ್ಷಿಸುತಿದ್ದಳು. ಆ ವಿಚಾರ ಬಂದಾಗ, ‘ಅದಕ್ಕೇನು ಅವಸರ, ಇನ್ನೂ ಕಲಿಯೋದಿದೆ ಇನ್ನೇನು ಎರಡು ವರ್ಷ ಹಾಂ! ಅನ್ನುವುದರಲ್ಲಿ ಮುಗಿದು ಹೋಗುತ್ತದೆ’ ಎನ್ನುತ್ತಿದ್ದಳು. ಹಾಗಂತ ಆತ ದೂರವಿದ್ದರೂ ಸಹಿಸುತ್ತಿರಲಿಲ್ಲ. ಏನಾದರೂ ಒಂದು ಕೊಂಕುಮಾತು ಇರುತ್ತಿತ್ತು.

ಯಾರಾದರೂ ಅವಳನ್ನು ನೋಡುತ್ತಿದ್ದರೆ ಸಾಕು. ಅವಳಿಗೆ ಸೊಕ್ಕೋ ಅಹಮ್ಮೋ ಗೊತ್ತಿಲ್ಲ. ಚೆನ್ನಾಗಿ ಪೋಸು ಕೊಡುತ್ತಿದ್ದಳು. ನಿರಂಜನ ಇದಾವುದನ್ನು ತಲೆಗೆ ಹಚ್ಚಿಕೊಳ್ಳುತ್ತಲೇ ಇರಲಿಲ್ಲ. ಹಾಗಂತ ಅವಳು ಸುಮ್ಮನಾಗುತ್ತಿರಲಿಲ್ಲ. ‘ನೀವು ಗಂಡಸು ತಾನೆ! ಅವರೆಲ್ಲಾ ನನ್ನ ನೋಡಿ ಲೈನ್ ಹೊಡೀತಿದ್ದರೆ ನಿನಗೆ ಸಿಟ್ಟು ಬರೋದಿಲ್ವಾ?’ ಅಂತಾ ಕುಟಕುತಿದ್ದಳು. ಅವರನ್ನು ಹೊಡೆದು ಬರುವಂತೆ ಪ್ರೇರೇಪಿಸುತ್ತಿದ್ದಳು. ನಿರಂಜನ ಮುಗುಳ್ನಕ್ಕು, ‘ವೈಷ್ಣವಿ, ಒಂದು ಸುಂದರವಾದ ಹೂವು ಅಂದಾಗ ನೋಡುವವರು ಜಾಸ್ತಿನೇ. ನೋಡಲಿ ಬಿಡು, ಅದು ವಿಕಾರ ಸ್ವರೂಪ ತಾಳಬಾರದು ಅಷ್ಟೆ’ ಅಂತಾ ಹೇಳಿ ಮಾತು ಮುಗಿಸುತಿದ್ದ. ಮತ್ತೊಮ್ಮೆ, ‘ಈ ಬಿಳಿ ಸುಂದರಿಯರ ನಾಡಲ್ಲಿ ನಿನ್ನಲ್ಲೇನೋ ವಿಶೇಷ ಕಂಡಿರಬಹುದು ಅದಕ್ಕೇ ನೋಡ್ತಿರಬಹುದು ಬಿಡು’ ಅಂತಿದ್ದ. ಮಗದೊಮ್ಮೆ ‘ನಿನ್ನ ಈ ಉಬ್ಬು ತಗ್ಗಿನ ಹಲ್ಲುಗಳು, ಸದಾ ಗಬ್ ಎಂದು ನಾರುವ ಸೆಂಟ್ ವಾಸನೆ ಸೆಳೆದಿರಬೇಕು’ ಅಂತಾ ನಗೆ ಬೀರುತ್ತಿದ್ದ. ಇದ್ಯಾವುದನ್ನೂ ಅವಳು ಪಾಸಿಟಿವ್ ಆಗಿ ತೆಗೆದುಕೊಳ್ಳಲೇ ಇರುತ್ತಿರಲಿಲ್ಲ. ಎಲ್ಲದಕ್ಕೂ ಒಂದು ಒರಟಾದ ಉತ್ತರ ಅವಳದಾಗಿರುತ್ತಿತ್ತು.

ಈ ಮಧ್ಯೆ ನಿರಂಜನ ದಿನಂಪ್ರತಿ ತನ್ನ ತಾಯಿ ತಂದೆಯೊಂದಿಗೆ ಹಾಗೂ ತಂಗಿ ಶರ್ಮಿಳಾ ಕೂಡ ಮಾತನಾಡುವುದು ಕಡಿಮೆಯಾಗಿತ್ತು. ಏನೇ ಇದ್ದರೂ ತನ್ನ ಮುಂದೆ ಮಾತನಾಡಲು ಹೇಳುತ್ತಿದ್ದಳು. ಇಲ್ಲದ ಸಂಶಯ ಮಾಡುತ್ತಿದ್ದಳು. ಏನಾದರೂ ಹೇಳಲು ಬಂದರೆ ಧಮಕಿ ಹಾಕುತ್ತಿದ್ದಳು. ಒಮ್ಮೊಮ್ಮೆ ಆತನ ಕೊರಳ ಪಟ್ಟಿ ಹಿಡಿದು ಜಗಳ ಮಾಡುತ್ತಿದ್ದಳು. ನಿರಂಜನ ತನ್ನ ತಂದೆ–ತಾಯಿಗೆ ಏನನ್ನೂ ಹೇಳದಂತೆ ಕಟ್ಟಪ್ಪಣೆ ಹಾಕುತ್ತಿದ್ದಳು. ಈ ರೀತಿ ದಿನಂಪ್ರತಿ ಕಿರುಕುಳ ನಿರಂಜನನ ಜೀವ ಹಿಂಡುತ್ತಿತ್ತು. ಒಂದು ದಿನ ಧೈರ್ಯ ಮಾಡಿ ತನ್ನ ತಾಯಿಯ ಮುಂದೆ ಹೇಳಲು ಶುರುಮಾಡೋದೇ ತಡ, ಕೈಯಲ್ಲಿ ಚಾಕು ತೆಗೆದುಕೊಂಡವಳೇ ತನ್ನ ಕೈಯನ್ನು ಕೊಯ್ದುಕೊಂಡಿದ್ದಳು. ರಕ್ತ ಸುರಿಯಲು ಪ್ರಾರಂಭವಾಗಿತ್ತು. ತಕ್ಷಣ ಆಸ್ಪತ್ರೆಗೆ ಹೋದರು. ಕೆನಡಾದಲ್ಲಿ ಇಂಥ ಪ್ರಕರಣಗಳನ್ನು ಆಸ್ಪತ್ರೆಯವರು ಮುಟ್ಟುವುದಿಲ್ಲ. ತಕ್ಷಣದಲ್ಲಿ ಪೊಲೀಸರು ಕ್ರಮ ತುಗೋತಾರೆ. ಅವರು ಕೇಳುವ ಅಷ್ಟೊಂದು ಪ್ರಶ್ನೆಗಳಿಗೆ ಉತ್ತರ ಕೊಡಲು ಸಾಕು ಸಾಕಾಗಿತ್ತು. ಅಲ್ಲಿ ಕಾನೂನು ಎಷ್ಟೊಂದು ಬಿಗಿ ಇದೆ ಎಂಬುದು ಗೊತ್ತಾಗಿದ್ದೇ ಆವಾಗ. ಅದರಲ್ಲೂ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಆಗಲು ಬಿಡುವುದಿಲ್ಲ. ಅಡುಗೆ ಮಾಡುವಾಗ ನಾನೇ ಕೊಯ್ದುಕೊಂಡಿದ್ದು ಅಂತಾ ಹೇಳಿ ವೈಷ್ಣವಿ ಚಿಕಿತ್ಸೆ ಪಡೆದುಕೊಂಡಿದ್ದಳು. ಯಾವಾಗ ಅಲ್ಲಿಯ ಕಾನೂನು ಬಿಗಿ ಇದೆ ಅನ್ನುವುದು ಗೊತ್ತಾಯ್ತೋ ಅದನ್ನೇ ಅಸ್ತ್ರ ಮಾಡಿಕೊಂಡು ಬ್ಲ್ಯಾಕ್‌ಮೇಲ್ ಮಾಡಲು ಶುರುಮಾಡಿದ್ದಳು. ಸದಾ ಪ್ರೀತಿ ಬಯಸುವ ಹೃದಯಕ್ಕೆ ಕೊಳ್ಳಿ ಇಟ್ಟಿದ್ದಳು. ನಿರಂಜನ ಒಮ್ಮೆ ಕೇಳಿಯೂ ಕೇಳಿದ್ದ, ‘ವೈಷ್ಣವಿ ನಾವು ಪ್ರೀತಿಸಿ ಮದುವೆಯಾಗೇವಿ ಅಲಾ?’

‘ಹೌದು, ಇಲ್ಲ ಅಂದವರಾರು?’

‘ಮತ್ತೇ ನಮ್ಮಲ್ಲಿ ಹೊಂದಾಣಿಕೆನೇ ಇಲ್ವಲ್ಲ?

ಅಂದ್ರೆ ನಾನು ತಪ್ಪು ಮಾಡೇನಿ ಅಂತಾ ಅರ್ಥವೇನು?’

‘ಹಾಗಲ್ಲ ಚಿನ್ನು, ಯಾಕೆ ನೀನು ಸದಾ ಸಿಡಿ ಸಿಡಿಯಾಗಿರ್ತಿಯಾ?’

‘ಒಂದ ಪ್ರೀತಿ ಮಾತಿಲ್ಲ ಕಥೆಯಿಲ್ಲ ಸಂಜೆ ಆಗತಿದ್ದಂಗ ಕಿತ್ತಾಡ್ತಾ ಇರ್ತಿವಲ್ಲ ಯಾಕ?’

‘ಆ ನಿಮ್ಮವ್ವ, ಪ್ರೀತಿ ತಂಗಿ ಕೂಡಾ ಮಾತಾಡ್ತೀಯಲ್ಲ, ತಾಸಗಟ್ಟಲೇ ಮಾತಾಡ್ರಿ. ನಾನ್ಯಾದಕ್ಕ ಬೇಕ ನಿಮಗ.’ ಆಗ ನಿರಂಜನ, ‘ಅಲ್ಲ! ನಾವು ದೂರದ ದೇಶದಲ್ಲಿದ್ದೇವೆ. ಅಪ್ಪ, ಅವ್ವ, ತಂಗಿ ಮತ್ತ ಸಂಬಂಧಿಕರು ಮಾತಾಡೋದು ಸಹಜ. ಛುಲೋ ಕೆಟ್ಟ ಕೇಳೋದು ಇದ್ದ ಇರ್ತದ. ಮೇಲಾಗಿ ನೀನೂ ಮಾತಾಡ್ತಿಯಲ್ಲ? ಅದಕ್ಕ ನಾನೇನು ತಕರಾರ ಮಾಡೇ ಇಲ್ಲ. ನಾ ಅವರ ಕೂಡಾನೂ ಮಾತಾಡ್ತೇನಿ. ನೀನ ನೋಡು ನಮ್ಮಪ್ಪ ಅವ್ವ ಅಂದ್ರ ಸಿಡದ ಬಿಳ್ತೀಯ ಯಾಕ, ಯಾಕ ಹಿಂಗ ಮಾಡ್ತಿ?’ ‘ನಿರಂಜನ ಅವ್ರೆ ನೀವು ಬಾಳ ಹಿಂದ ಅದೇರಿ. ಹೆಂಡತಿನ ಹೆಂಗ ನೋಡಕೋಬೇಕು ಅನ್ನೋದು ನಿನಗ ಗೊತ್ತ ಇಲ್ಲ. ಇಂತಹ ಮುಂದುವರೆದ ದೇಶದಾಗ ಅದೇವಿ, ಅದೇನೂ ನಿಂಗ ಕಾಣೋದ ಇಲ್ಲೇನ.?’

‘ವೈಷ್ಣವಿ ದೇಶ ಬಿಟ್ಟು ದೇಶಕ್ಕ ಬಂದಮ್ಯಾಲ ಸಂಸ್ಕೃತಿ ಸಂಪ್ರದಾಯಗಳನ್ನು ಬಿಡಾಕ್ಕಾಗಲ್ಲ. ನಾವು ಭಾರತೀಯರು ಅನ್ನೋ ಅಭಿಮಾನ ಇಲ್ಲಿ ಜನಕ್ಕ ಇರ್ತದ. ನಾವೂ ಇಲ್ಲಿಯವ್ರಂಗ ಆಗಿಬಿಟ್ರ ನಮಗೂ ಅವ್ರಿಗೂ ವ್ಯತ್ಯಾಸ ಗೊತ್ತಾಗೋದಿಲ್ಲ. ಹಾಗೇನಾದ್ರೂ ಮಾಡಾಕತ್ರ ನಮ್ಮನ್ನ ನೋಡಿ ನಗ್ತಾರ.’

‘ಏ! ಈ ಬುರುಡೆ ಭಾಷಣ ನಂಗ ಹಿಡಿಸಲ್ಲ. ನಿನಗ ರಸಿಕತನ ಅನ್ನೋದೇ ಇಲ್ಲ’ ಅಂತಾ ಮಾತು ಮುಗಿಸಿದ್ದಳು.

‘ವೈಷ್ಣವಿ ನಾವು ಪ್ರೀತಿಸಿ ಮದುವೆಯಾಗಿದ್ದೇವೆ. ಆದ್ರೆ ನಮ್ಮಲ್ಲಿ ಹೊಂದಾಣಿಕೆನೇ ಇಲ್ಲ. ನಾನು ಏನಾದರೂ ತಪ್ಪಾಗಿ ನಡೆದುಕೊಂಡಿದ್ದರೆ ಹೇಳು ಸರಿಪಡಿಸಿಕೊಳ್ಳುತ್ತೇನೆ’ ಅಂತಾ ಅನೇಕ ಬಾರಿ ಹೇಳಿದ್ದ. ತನ್ನ ಜೀವನ ಈ ರೀತಿ ಆಗುತ್ತಿರುವುದಕ್ಕೆ ಸದಾ ಪಾಶ್ಚಾತ್ತಾಪ ಪಡುತ್ತಿದ್ದ.

‘ಮಲೆನಾಡ ಅಡಿಕೆ ಮೈಸೂರ ವೀಳ್ಯದೆಲೆ ಬೆರೆತರೇ ಕೆಂಪು’ ಅಂತಾರೆ. ಧಾರವಾಡ ಮಲೆನಾಡಿನ ಶೆರಗಿನ ಅಂಚಿನಲ್ಲಿ ಬರುವ ಊರು. ಊರುಕೇರಿಗಳೆಲ್ಲ ಎಷ್ಟೊಂದು ಚೆನ್ನಾಗಿವೆ. ಮೈಸೂರು ಸಹ ಅಷ್ಟೇ ಅಚ್ಚು ಮೆಚ್ಚಿನ ವಿಶಾಲವಾದ ಸ್ವಚ್ಛ ಸುಂದರ ನಗರ. ಇವೆಲ್ಲ ಒಪ್ಪವಿದ್ದರೂ ಮನುಷ್ಯನ ಮನಸ್ಸು ಹಾಗಿರಬೇಕಲ್ಲ? ವೈಷ್ಣವಿಯ ವರ್ತನೆಗಳ ಚಿಂತೆಯೇ ನಿರಂಜನನಿಗೆ ದೊಡ್ಡ ಗುಡ್ಡವಾಗಿತ್ತು. ಊರಿಗೆ ಬಂದಾಗಲಂತೂ ಯಾರೊಂದಿಗೂ ಬೆರೆಯಲು ಬಿಡುತ್ತಿರಲಿಲ್ಲ. ಮಗ ಸೊಸೆ ಮಧ್ಯೆ ಬಿರುಕು ಬಿಟ್ಟಿದೆ ಎಂಬುದು ಎಲ್ಲರಿಗೂ ಅರ್ಥವಾಗಿತ್ತು. ವೈಷ್ಣವಿ ತನ್ನ ತೌರಿಗೆ ಹೋದ ಸಂಧರ್ಭದಲ್ಲಿ ನಿರಂಜನ ತನ್ನ ತಾಯಿ ತಂದೆ ಮುಂದೆ ಎಲ್ಲವನ್ನೂ ಹೇಳಿ ಗೊಳೋ ಅಂತ ಅತ್ತಿದ್ದ. ವಿಷಯ ಕೇಳಿ ಸ್ನೇಹಿತರೂ ಸಹ ದೂಃಖತಪ್ತರಾಗಿದ್ದರು. ನಿರಂಜನನಿಗೆ ಅವಳ ಬಗ್ಗೆ ಜಾಗೃತಿಯಿಂದ ಇರಲು ಹೇಳಿದ್ದರು. ಸಾಧ್ಯವಾದರೆ ಅವಳು ಬ್ಲ್ಯಾಕ್‌ಮೇಲ್ ಮಾಡುವ ಮತ್ತು ಜಗಳದ ಸಂಧರ್ಭದಲ್ಲಿ ಅವಳಿಗೆ ಗೊತ್ತಿಲ್ಲದಂತೆ ರೆಕಾರ್ಡಿಂಗ್ ಮಾಡಿಕೊಳ್ಳಲು ಸಲಹೆ ನೀಡಿದ್ದರು. ಜೀವನವೇ ಸಾಕೆಂದು ಸುಸೈಡ್‌ಗೆ ಪ್ರಯತ್ನಿಸಿದ್ದ. ಸಾವಿಗೆ ಶರಣಾಗಲು ಹೊರಟವ ತಂದೆ ತಾಯಿ ಸಲುವಾಗಿ ಎಲ್ಲವನ್ನೂ ಎದುರಿಸಲು ರೆಡಿಯಾಗಿದ್ದ. ತಾನೇನಾದರೂ ಕೆಟ್ಟ ನಿರ್ಧಾರ ತೆಗೆದುಕೊಂಡರೆ ಹೆತ್ತವರಿಗೆ ಸಂಕಟ ಆಗುವುದಿಲ್ಲವೇ? ಅಂತಾ ನೊಂದುಕೊಂಡಿದ್ದ.

ಅದು ಅಕ್ಟೋಬರ್ ದಸರಾ ಸಮಯ. ಹಬ್ಬಕ್ಕಾಗಿ ಕಳೆದ ಸಲದಂತೆ ಈ ಸಲವೂ ಹೋಗಲಿಕ್ಕೆ ತಯಾರಿಯಲ್ಲಿದ್ದಳು. ವೈಷ್ಣವಿ ಎರಡು ಲಕ್ಷ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಳು. ನಿರಂಜನ ಯಾವ ಪ್ರತಿಕ್ರಿಯೆಯನ್ನೂ ನೀಡಿದ್ದಿಲ್ಲ. ಮೈಸೂರಿಗೆ ಹೋಗಲು ಏರ್ ಟಿಕೆಟ್ ಸಿಗದೇ ಇದ್ದುದರಿಂದ ಹುಬ್ಬಳ್ಳಿವರೆಗೆ ಪ್ಲೈಟ್ ಬುಕ್ ಮಾಡಿದ್ದಳು. ಈ ಸಲ ನಿರಂಜನ ಗಂಭೀರನಾಗಿದ್ದ ಬಿಡೆಬಿಟ್ಟು ಎಲ್ಲವನ್ನೂ ಅವರ ತಾಯಿ ತಂದೆಗೆ ಹೇಳಿ, ಕೈತೊಳೆದುಕೊಳ್ಳಲು ನಿರ್ಧರಿಸಿದ್ದನು. ಹರೀಶ ಮತ್ತು ಕಮಲಾ ಅಂತೂ ರೋಸಿಹೋಗಿದ್ದರು. ಒಂದೆರಡು ಬಾರಿ ಹಿರಿಯರೆಲ್ಲ ಬುದ್ಧಿವಾದ ಹೇಳಿದ್ದರೂ ದಾರಿಗೆ ಬಂದಿರಲಿಲ್ಲ. ಹೀಗಾಗಿ ನೀನು ಹುಬ್ಬಳ್ಳಿಗೆ ಬಂದ ಕೂಡಲೇ ಅವಳನ್ನು ಇಲ್ಲಿ ಕರೆತರಬೇಡ. ಹೇಗೂ ಕಾರು ಕಳಿಸಿರ್ತಿವಿ ಮೈಸೂರಿಗೆ ಹೋಗಿ ಅವರ ತಂದೆ–ತಾಯಿಗಳಿಗೆ ಎಲ್ಲವನ್ನೂ ಹೇಳಿ ಬಂದುಬಿಡು. ನಾವಿಲ್ಲಿ ವಕೀಲರನ್ನು ಕಂಡು ಡೈವೋರ್ಸ್‌ಗೆ ಅಪ್ಲೈ ಮಾಡ್ತಿವಿ ಅಂದಿದ್ದರು. ಫ್ಲೈಟ್ ಹುಬ್ಬಳ್ಳಿಗೆ ಬರುತಿದ್ದಂತೆ ವೈಷ್ಣವಿ, ನಿರಂಜನನಿಗೆ ಧಾರವಾಡದಲ್ಲಿ ಒಂದೇ ದಿನ ಇದ್ದು ಮೈಸೂರಿಗೆ ಹೋಗೋಣ ಎಂದು ರಾಗ ತೆಗೆದಿದ್ದಳು. ತಕ್ಷಣದಲ್ಲಿ ಪ್ರತಿಕ್ರಿಯಿಸಿದ ನಿರಂಜನ, ‘ಅದೇಕೆ? ಅಲ್ಲಿ ಹೋಗೋದೇ ಬೇಡ ಮೈಸೂರಿಗೆ ಹೋಗೋಣ.’ ‘ಏನು? ರಾಯರಿಗೆ ಮೈಸೂರಿನ ಮೇಲೆ ಅಷ್ಟೊಂದು ಪ್ರೀತಿ?’ ‘ನಿನ್ನ ಸಹವಾಸವೇ ಸಾಕಾಗಿದೆ. ಮೈಸೂರಿಗೆ ಬಿಟ್ಟು ಬರುವೆ ಕಾರು ಹತ್ತು’ ಅಂದಾಗ ವೈಷ್ಣವಿಗೆ ಶಾಕ್ ಆಗಿತ್ತು. ‘ಏನು? ಯಜಮಾನ್ರು ಒಮ್ಮೆಲೇ ಚಿಗುರಿದ್ದೀರಿ?’

‘ಯಾರು ನಿನ್ನ ಯಜಮಾನ?’

‘ನೀವೇ ಮಹಾರಾಜರೇ, ನನ್ನನ್ನು ಪ್ರೀತಿಸಿ ಮದುವೆಯಾದವ್ರು?’

‘ಅದೇ ಹೇಸಿಗೆಯಾಗ್ತಿದೆ. ನಿನ್ನ ಸಹವಾಸವೇ ಬೇಡಾ ಅನಸ್ತಿದೆ.’

‘ಯಾಕೆ ? ಅಷ್ಟೊಂದು ಬೇಸರ. ಅಷ್ಟು ಸರಳವಾಗಿ ನಾನು ಬಿಡಬೇಕಲ್ಲ?’

‘ಯಾವ ಪುರುಷಾರ್ಥಕ್ಕೆ ಇದೆಲ್ಲ? ಏನು ಸುಖ ಕೊಟ್ಟಿದ್ದೀಯ? ಮದುವೆಯಾಗಿ ವರ್ಷವಾತು. ನಮ್ಮಲ್ಲಿ ಯಾವ ಸಂಬಂಧವಿದೆ? ನಮ್ಮ ತಂದೆ ತಾಯಿ ಬ್ಯಾಡಾ, ಊರು ಬ್ಯಾಡಾ. ನಿನಗೆ ಬೇಕಿರೋದು ಹಣ ತಾನೆ, ಕೊಡ್ತಿನಿ ನಿಮ್ಮೂರಲ್ಲೇ ಬಿದ್ದಾಡು.’ ಯಾಕೋ ವೈಷ್ಣವಿಯಲ್ಲಿ ಅಳುಕಿನ ಭಾವ ಮೂಡಿದ್ದರೂ ತೋರಿಸಿಕೊಳ್ಳದೇ, ‘ಆಯ್ತು ನೀನೇನೋ ಸುರಸುಂದರಾನಾ ಹೋಗು ಹೋಗೋ! ಅದೇನು ಕಿಸೀತಿಯೋ ನೋಡ್ತೀನಿ’ ಅಂತಾ, ಹುಬ್ಬಳ್ಳಿಯ ವಿಮಾಣ ನಿಲ್ದಾಣದಲ್ಲಿಯೇ ರಂಪಾಟ ಮಾಡಿದ್ದಳು. ಕಾರು ಹತ್ತಿದವಳೇ ಜೋರಾಗಿ ಡೋರ್ ಹಾಕಿಕೊಂಡಳು. ಜೊತೆಗೆ ತನ್ನ ಹಿಂದೆ ಏನೋ ಮಸಲತ್ತು ನಡೀತಿದಿದೆಯೆಂದೂ ಅರ್ಥಮಾಡಿಕೊಂಡಿದ್ದಳು.

ಇತ್ತ ಧಾರವಾಡದಲ್ಲಿ ಹರೀಶ ಜೋಯಿಸರು ಪತ್ನಿ ಕಮಲಾ, ಕ್ರಿಮಿನಲ್ ಲಾಯರ್ ನೀಲಕಂಠ ಅವರನ್ನು ಭೇಟಿಯಾಗಿ ಎಲ್ಲ ವಿಷಯವನ್ನು ಪ್ರಸ್ತಾಪಿಸಿದ್ದರು. ಗೊತ್ತಿರುವ ವಕೀಲ ಮತ್ತು ಸ್ನೇಹಿತನಾದ್ದರಿಂದ ಜಾಸ್ತಿ ಏನೂ ಹೇಳುವದಿರಲಿಲ್ಲ. ನೇರವಾಗಿ ಇರುವ ಕಾನೂನಿನ ಚೌಕಟ್ಟಿನಲ್ಲಿ ಡೈವೋರ್ಸ್ ನೋಟಿಸನ್ನು ಜಾರಿಗೊಳಿಸಿದ್ದರು. ಡೈವೋರ್ಸ್ ನೋಟಿಸ್ ನಿರೀಕ್ಷಿಸಿರದ ವೈಷ್ಣವಿ ಕಂಗಾಲಾಗಿದ್ದಳು. ಅವರ ತಂದೆ–ತಾಯಿ ಶ್ರೀಮಂತರಲ್ಲ. ಶಾಸ್ತ್ರ, ಕುಂಡಲಿ ಹೇಳಿಕೊಂಡು ಜೀವನ ಸಾಗಿಸುವ ಜ್ಯೋತಿಷಿಗಳಿಗೆ, ವಕಾಲತ್ತು ದುಸ್ತರವೇ? ಆದಾಗ್ಯೂ ಬಂದದ್ದನ್ನು ಸ್ವೀಕರಿಸಬೇಕಲ್ಲ. ಹೀಗಾಗಿ ನೋಟಿಸನ್ನು ಸ್ವೀಕರಿಸಿದ್ದಳು.ಇಲ್ಲೀತನ ಕೆನಡಾದ ತಾನು ಕಲಿಯುತ್ತಿರುವ ಕಾಲೇಜು ಫೀಜು, ತನ್ನ ಖರ್ಚು, ತನ್ನ ತೌರಿನ ಬಹುಪಾಲು ಖರ್ಚನ್ನು ನಿರಂಜನನಿಂದ ವ್ಯಯಿಸುತ್ತಿದ್ದಳು. ಅದೆಲ್ಲದಕ್ಕೂ ಬ್ರೆಕ್ ಬಿದ್ದಿತ್ತು. ಅಲ್ಲದೇ ಕೆನಡಾದ ಹೈಯರ್ ಎಜುಕೇಶನ್ ಇನ್ನೂ ಒಂದೂವರೆ ವರ್ಷ ಹೇಗಪಾ ನಿಭಾಯಿಸೋದು ಅಂತಾ ಸಂಕಟ ಪಟ್ಟಿದ್ದಳು. ಮೊದಲ ಬಾರಿಗೆ ತನ್ನ ತಪ್ಪಿನ ಅರಿವಾಗಿತ್ತು. ಸರಿಪಡಿಸಿಕೊಳ್ಳಲು ಅವಕಾಶವೇ ಇರಲಿಲ್ಲ. ‘ನಿರಂಜನ ಸಾಕಷ್ಟು ಬಾರಿ ಅವಳಿಗೆ ಪ್ರೀತಿಯಿಂದಲೇ ತನ್ನ ಗುಣ ಸ್ವಭಾವಗಳನ್ನು ಸರಿಪಡಿಸಿಕೊಳ್ಳಲು ಹೇಳಿದ್ದ. ನನ್ನ ಸಲುವಾಗಿ ಆತ ಏನೆಲ್ಲವೂ ಮಾಡಲು ರೇಡಿಯಿದ್ದ. ಆದರೆ ನಾನು! ನಾನು! ಆತನಿಗೆ, ಅವನ ತಂದೆ ತಾಯಿಗೆ ಒಂದು ಪ್ರೀತಿಯ ಮಾತೂ ಆಡಲಿಲ್ಲ. ಬೆರಿಲಿಲ್ಲ ಅವರ ಮನೆಯ ಕಸ ಹೊಡೆಯಲಿಲ್ಲ, ರಂಗೋಲಿ ಬಿಡಲಿಲ್ಲ, ದೇವರ ಕೋಣೆಯನ್ನೇ ನೋಡಲಿಲ್ಲ. ಅಡುಗೆ ಮನೆಗಂತೂ ಒಮ್ಮೆಯೂ ಇಣುಕಲಿಲ್ಲ. ಯಾಕೆ ನಾನೇಕೆ ಹಾಗೆ ಮಾಡಿದೆ...ನನ್ನ ಹಟವೇ? ಅಥವಾ ಸೊಕ್ಕೇ? ಅಯ್ಯೋ ದೇವರೇ?..’

ಕೆನಡಾದಿಂದ ಬರುವಾಗ ಜೊತೆ ಜೊತೆಯಾಗಿ ಬಂದರೂ ನಾವು ಮಾತನಾಡಲೇ ಇಲ್ಲ. ಈ ಸಲ ಅದೇಕೋ ನಿರಂಜನ ಬಹಳ ಗಂಭೀರನಾಗಿದ್ದ. ಮಾತನಾಡಿದರೂ ನಂದು ಒಂದೇನಾದರೂ ಕೊಂಕುತನ ಇದ್ದೇ ಇರುತಿತ್ತು. ಈಗ ಮರಳಿ ಹೋಗುವಾಗ ಇಬ್ಬರಿಗೂ ಒಂಟಿತನ. ಈ ರೀತಿ ಆಗ್ತದ ಅಂತ ವೈಷ್ಣವಿ ಕನಸು ಮನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ನಿರಂಜನ ಒಳ್ಳೆಯವನೇ, ನಂದೇ ಜಾಸ್ತಿಯಾಯ್ತು. ಅವನಿಂದ ಎಲ್ಲವನ್ನೂ ಕಿತ್ತುಕೊಂಡೆ. ನಾನೇನೂ ಕೊಡಲಿಲ್ಲ. ಆದರೆ ಈಗ ನಾನು ಒಂಟಿ. ನನಗೆ ಆತ ಬೇಕು ಅನಸ್ತಿದೆ, ಆದ್ರೆ ಅದೂ ಸಾಧ್ಯವೇ ಇಲ್ಲದಷ್ಟು ದೂರ. ವೈಷ್ಣವಿಗೆ ಮೊದಲ ಬಾರಿ ಆಘಾತವಾಗಿತ್ತು. ಇತ್ತ ನಿರಂಜನ ಮಾತ್ರ ನೀರಾಳನಾಗಿದ್ದ. ಬಿಡುಗಡೆ ಹೊಂದಿದ ಹಕ್ಕಿಯಂತೆ ಹಾರುತಿದ್ದ, ಜಿಂಕೆಯಂತೆ ಜಿಗಿಯುತಿದ್ದ. ನನಗಿನ್ನೂ ಯಾವ ಮದುವೆ ಗೊಂದಲವೇ ಬೇಡವೆನ್ನುವಷ್ಟು ಕಠೀಣವಾಗಿದ್ದ, ಕೆನಡಾದತ್ತ ಪಯಣ ಬೆಳೆಸಿದ್ದ. ವೈಷ್ಣವಿ ಕೆನಡಾಕ್ಕೆ ಹೋದ ತಕ್ಷಣ ತನ್ನ ಹತ್ತಿರವಿರುವ ಕೀ ಬಳಸಿ ತನ್ನೆಲ್ಲ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಳು. ನಿರಂಜನನಿಗೆ ಸಂಬಂಧಿಸಿದ ದೇವರ ಫೋಟೋವನ್ನು ಮತ್ತು ಆತನ ಬಟ್ಟೆಬರೆಗಳನ್ನು ಬಿಟ್ಟು ಎಲ್ಲವನ್ನೂ ಸಾರಿಸಿ ಗುಂಡಾಂತರ ಮಾಡಿದ್ದಳು.

ನಿರಂಜನ ಇನ್ನೂ ತಾನಿದೇ ಮನೆಯಲ್ಲಿದ್ದರೇ ಇವಳಿಂದ ತೊಂದರೆ ಆಗಬಹುದು ಎಂದು ಅರಿತುಕೊಂಡು ಆ ಮನೆ ಬಿಟ್ಟು ಬೇರೆಡೆ ಹೋಗಲು ನಿರ್ಧರಿಸಿದ್ದ. ಆ ಮನೆಯ ಮಾಲಿಕ ಸುಮನ್ ಈತನ ಅತ್ಯಂತ ಆತ್ಮೀಯ ಗೆಳೆಯನಾಗಿದ್ದ. ‘ನಿನಗೇನೂ ತೊಂದರೆಯಾಗೋದಿಲ್ಲ. ಮನೆ ಕೀಲಿ ಚೇಂಜ್ ಮಾಡೋಣ. ಅವಳು ಎಂತಹ ಕ್ರಿಮಿನಲ್ ಆಗಿರಲಿ ಬುದ್ಧಿ ಕಲಿಸೋಣ. ನೀ ಸುಮ್ಕಿರು’ ಅಂದಾಗ ನಿರಂಜನ ದೋಸ್ತ್‘ ನಾನಿಲ್ಲೇ ಇದ್ದರೆ ಅವಳು ಕಾಡಿದ ನೆನಪುಗಳು ನನ್ನ ಆರೋಗ್ಯವನ್ನು ಕಬಳಿಸುತ್ತವೆ. ಬೇಡಾ ನನಗೆ ಮತ್ತೊಂದು ರೂಮ್ ಕೊಡಿಸು’ ಎಂದಿದ್ದ. ಸುಮನ್ ಪಕ್ಕದ ಅಪಾರ್ಟ್ಮೆಂಟ್ ಒಂದರಲ್ಲಿ ಒಂದು ಸಣ್ಣ ರೂಮನ್ನು ಬಾಡಿಗೆಗೆ ಕೊಡೆಸಿದ್ದ. ಇತ್ತ ಇಂಡಿಯಾದಲ್ಲಿ ಡೈವೋರ್ಸ್ ಕೇಸ್ ಮೂರು ಮುದ್ದತ ಮುಗಿದಿದ್ದವು. ಮೂರು ಬಾರಿ ದೇಶದಿಂದ ದೇಶಕ್ಕೆ ಅಲೆದಾಟವೂ ಆಗಿತ್ತು. ವೈಷ್ಣವಿ ಕೇಸನ್ನು ಧಾರವಾಡದಿಂದ ಮೈಸೂರಿಗೆ ವರ್ಗಾಯಿಸಿಕೊಂಡಿದ್ದಳು. ಅವಳು ಯಾವ ತಪ್ಪು ಮಾಡಿಲ್ಲವೆಂದು ಸಾಧಿಸಲು ವಿಫಲಳಾದ್ದರಿಂದ ಎಲ್ಲ ಸಾಕ್ಷಿಗಳು ಅವಳ ವಿರುದ್ಧವೇ ಇದ್ದವು. ನಿರಂಜನ ತನ್ನ ಸ್ನೇಹಿತರು ಕೊಟ್ಟ ಸಲಹೆಗಳಂತೆ ವಕೀಲರಿಗೆ ಬೇಕಾಗುವ ಎಲ್ಲ ಸಾಕ್ಷ್ಯಗಳನ್ನು ಒದಗಿಸಿದ್ದ. ಕೊನೆಯ ಕ್ಷಣದಲ್ಲಿ ಆತ ಮಾಡಿದ್ದ ಎಲ್ಲ ರೆಕಾರ್ಡಿಂಗ್ ವಿಡಿಯೊಗಳು, ಆತನಿಗೆ ಸಹಾಯ ಮಾಡಿದ್ದವು. ಹೇಗಾದರೂ ಮಾಡಿ ಆದಷ್ಟು ಬೇಗನೇ ಡೈವೋರ್ಸ್ ಪಡೆಯಲು ಆತುರನಾಗಿದ್ದ. ವೈಷ್ಣವಿಗೆ ಯಾವ ದಾರಿಗಳೂ ಇರಲಿಲ್ಲ. ಹೇಗಾದರೂ ಮಾಡಿ ಇನ್ನಷ್ಟು ಹಣ ಬಾಚಲು ಮುಂದಾಗಿದ್ದಳು. ಆಕೆಯ ವಕೀಲರ ಯಾವ ಕಸರತ್ತು ಕೆಲಸ ಮಾಡಿರಲಿಲ್ಲ. ಹೀಗಾಗಿ ಡೈವೊರ್ಸ್ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ಕೊನೆಯ ತೀರ್ಪಿನ ದಿನಾಂಕ ಪ್ರಕಟವಾಗಿತ್ತು. ನಿರಂಜನ ಅವಳಿಂದ ಆದಷ್ಟು ಬೇಗನೇ ಬಿಡುಗಡೆ ಹೊಂದಲು ತವಕಿಸುತಿದ್ದ. ಆತನ ತಂದೆ ತಾಯಿ ಸಂಭ್ರಮದಲ್ಲಿದ್ದರು.

ಅಂದು ನ್ಯಾಯಾಧೀಶರು ಕೊನೆಯ ತೀರ್ಪನ್ನು ಪ್ರಕಟಿಸುವದಿತ್ತು. ಆದರೆ ಕೋರ್ಟಿನಲ್ಲಿ ಆಕೆಯ ವಕೀಲ ತುಂಬಾ ಗಂಭೀರನಾಗಿದ್ದ. ಆತನ ವರ್ತನೆಗಳು ಮತ್ತೇನೋ ಹೇಳುತ್ತಿವೆ ಅನ್ನುವುದು ಗೊತ್ತಾಗಿತ್ತು. ಏನೇ ಆಗಲೀ ಗೆಲ್ಲುತ್ತೇವೆ ಎನ್ನುವ ಹುಮ್ಮಸ್ಸು ನಿರಂಜನನ ಪರ ವಕೀಲರದಾಗಿತ್ತು. 11 ಗಂಟೆಗೆ ಪ್ರಕಟವಾಗಬೇಕಿದ್ದ ತೀರ್ಪು ವಿಳಂಬವಾಗುತಿತ್ತು. ವಾದ, ಪ್ರತಿವಾದಗಳು ಆರಂಭವಾಗುತ್ತಿದ್ದಂತೆ, ವೈಷ್ಣವಿ ಕಟಕಟೆಯಲ್ಲಿ ನಿಂತು, ‘ಮೈ ಲಾರ್ಡ್ ಇಲ್ಲಿವರೆಗೆ ಅವರು ನನ್ನ ವಿರುದ್ಧ ಹೇಳಿದ್ದೆಲ್ಲವೂ ನಿಜವಿರಬಹುದು. ಆದರೆ ನನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿಗೆ ಏನು ಹೇಳುವಿರಿ?’ ಅಂದಾಗ ಅಲ್ಲಿದ್ದ ನಿರಂಜನ ಮತ್ತು ಆತನ ಪರಿವಾರದವರೆಲ್ಲ ಮತ್ತೆ ಶಾಕ್ ಆಗಿದ್ದರು. ಇಬ್ಬರೂ ವಕೀಲರ ವಾದ, ಪ್ರತಿವಾದಗಳು ಜರುಗಿ ಕೇಸು ಮತ್ತೇ ಮುಂದೆ ಹೋಗಿತ್ತು. ನಿರಂಜನ ಮಾತ್ರ ಇದನ್ನು ಒಪ್ಪಲು ಸಿದ್ಧನಿರಲಿಲ್ಲ. ಆದರೆ ಅವಳು ಹೇಳಿದ ಆ ಪ್ರಸಂಗ ‘ನಾನ್ಯಾವಾಗ ಆ ರೀತಿ ಮಾಡಿದೆ’ ಎಂದು ಪದೆ ಪದೇ ನೆನಪಿಸಿಕೊಳ್ಳುತಿದ್ದ. ಮತ್ತೆ ಕೇಸು ಉಲ್ಟಾ ಹೊಡೆದದ್ದರಿಂದ ಅವಳಿಗೆ ಹುಟ್ಟುವ ಮಗುವಿನ ಸಂರಕ್ಷಣೆ ಮತ್ತು ಜೀವನಾಂಶವೆಂದು ಕೋಟಿ ಮೊತ್ತದ ಬೇಡಿಕೆಗೆ ನ್ಯಾಯಾಲಯ ಸಮ್ಮತಿಸುವ ಲಕ್ಷಣಗಳಿತ್ತು. ಕೊನೆಯ ತೀರ್ಪಿನ ದಿನಾಂಕ ಬರುವ ಹೊತ್ತಿಗೆ ನಿರಂಜನ ತುಂಬಾ ಚಿಂತಾಕ್ರಾಂತನಾಗಿದ್ದ. ಆತನ ತಾಯಿ–ತಂದೆಯಂತೂ ತಲೆ ಮೇಲೆ ಕೈಹೊತ್ತು ಕುಳಿತಿದ್ದರು. ವಕೀಲರು ಧೈರ್ಯದಿಂದ ಇರುವಂತೆ ಸಲಹೆ ನೀಡಿದ್ದರು.

ಆ ದಿನ ಬಂದೇ ಬಿಟ್ಟಿತು. ವೈಷ್ಣವಿ ಪರ ವಕೀಲ ರುದ್ರೇಶ ಜಯದ ತುತ್ತ ತುದಿಯಲ್ಲಿ ನಿಂತು ವಾದ ಮಂಡಿಸಿದ. ನಿರಂಜನನ ಪರ ವಕೀಲನ ಸರದಿ ನಿರ್ಲಿಪ್ತವಾಗಿತ್ತು. ಡಿ ಎನ್ ಎ ಟೆಸ್ಟ್ ಮಾಡಿಸಲು ವಾದ ಮಂಡಿಸಿದ್ದರು. ಅದೂ ಒಂದು ಆಗಿಯೇ ಹೋಗಲಿ ಎಂಬ ನಿರ್ಧಾರಕ್ಕೆ ಬಂದು, ನ್ಯಾಯಾಧೀಶರು ಕೇಸಿನ ತೀರ್ಪನ್ನು ಮುಂದೂಡುವ ನಿರ್ಧಾರ ಪ್ರಕಟಿಸಲಿಕ್ಕೆ ಶುರು ಮಾಡಿದರು. ತೀರ್ಪನ್ನು ಓದಲು ಶುರು ಮಾಡುತಿದ್ದಂತೆ ಮತ್ತೊಂದು ಪ್ರಸಂಗ ನಡೆಯಿತು. ಮೈ ಲಾರ್ಡ್ ನಾನೊಂದು ಮುಖ್ಯವಾದ ಸಾಕ್ಷಿ ತಂದಿದ್ದೇನೆ ಮಾತನಾಡಲು ಅವಕಾಶ ಕೊಡಿ. ಎಂಬ ಗಡುಚಾದ ಧ್ವನಿಯಲ್ಲಿ ಮಾತನಾಡುತ್ತ ಠೀಕು ಠಾಕೀನ ವ್ಯಕ್ತಿಯೊಬ್ಬ ಕಟಕಟೆಯ ಕಡೆ ಬರುವುದು ಕಾಣಿಸಿತು. ಎಲ್ಲರ ಲಕ್ಷ್ಯಆ ಕಡೆ ಕೇಂದ್ರೀಕೃತವಾಯಿತು. ನ್ಯಾಯಾಧೀಶರು, ‘ಯೆಸ್ ಪ್ರೊಸೀಡ್‌... ಯಾರು? ಯಾರು ನೀವು? ಯಾರ ಬಗ್ಗೆ ಹೇಳ್ತೀರಿ?’

‘ಸರ್ ನಾನು ಕೆನಡಾದಿಂದ ಬಂದಿದ್ದೇನೆ. ನನ್ನ ಹೆಸರು ಸುಮನ್ ಅಂತಾ. ನಿರಂಜನ ನನ್ನ ಗೆಳೆಯ, ಅವನಿಗೆ ಅನ್ಯಾಯ ಆಗ್ತಿದೆ ಅಂತಾ ಗೊತ್ತಾಯ್ತು. ಅದೂ ಇವತ್ತೇ ಫೈನಲ್ ಜಜ್ಮೆಂಟ್ ಅಂತಾ ತಿಳಿದು ಬರಬೇಕಾಯ್ತು. ದಯವಿಟ್ಟು ಈ ಫೋಟೋವನ್ನು ನೋಡಿದರೆ, ಒಳ್ಳೆಯದು’ ಅಂತ ಪೋಟೋವನ್ನು ಮತ್ತು ಅದಕ್ಕೆ ಸಂಬಂಧಿಸಿದ ಹಲವಾರು ಸಾಕ್ಷಿ ಪುರಾವೆಗಳನ್ನು ಸಹಾಯಕರ ಮೂಲಕ ತಲುಪಿಸಿದರು. ಮತ್ತೆ ಅಚ್ಚರಿ, ಕೋರ್ಟಿನಲ್ಲಿ ಕೋಲಾಹಲ. ನಿರಂಜನನ ಕೆನಡಾದ ಆತ್ಮೀಯ ಗೆಳೆಯ ಸುಮನ್ ಕೋರ್ಟಿನಲ್ಲಿ ಬಂದದ್ದು ಕಂಡು, ನಿರಂಜನನಿಗೆ ತುಂಬಾ ಆಶ್ಚರ್ಯವಾಗಿತ್ತು. ಯಾವತ್ತೂ ಸವಡೇ ಇಲ್ಲದ ವ್ಯಕ್ತಿ ಕೆನಡಾದಿಂದ ಇಲ್ಲಿಗೆ, ಈಗ, ಅಂತಾ ಕುತೂಹಲದಿಂದ ಅತ್ತಕಡೆ ಕೃತಜ್ಞತಾ ಭಾವದಿಂದ ನೋಡುತ್ತಾನೆ.‌ ನ್ಯಾಯಾಧೀಶರು ಫೋಟೊ ಮತ್ತು ಎಲ್ಲ ದಾಖಲೆಗಳನ್ನು ಪರಿಶೀಲಿಸಿ, ‘ನೋಡಿ ಸುಮನ್ ನೀವು ಕೊಟ್ಟಿರೋ ಈ ಎಲ್ಲ ದಾಖಲೆಗಳಿಂದ ತೀರ್ಪನ್ನು ಬದಲಿಸಲು ಬರುವುದಿಲ್ಲ. ಕೋರ್ಟಿಗೆ ನೀವೇನಾದರೂ ತಲೆಹರಟೆ ಮಾಡ್ತಾ ಇದ್ದೀರಿ ಅಂತಾ ಗೊತ್ತಾದರೆ ದಂಡಸಹಿತ ಶಿಕ್ಷೆ ಅನುಭವಿಸಬೇಕಾಗುತ್ತದೆ. ಈ ಫೋಟೊ ಮತ್ತು ದಾಖಲೆಗಳ ಒರಿಜಿನ್ಯಾಲಿಟಿ ಪರಿಶೀಲಿಸಬೇಕು. ಆಗ ನೋಡೋಣ’ ಅಂತಾ ಕೇಸನ್ನು ಮತ್ತೇ ಒಂದು ತಿಂಗಳು ಮುಂದೆ ಹಾಕಿದ್ದರು.

ಕೋರ್ಟಿನಲ್ಲಿ ಮಂಡಿಸಿದ ಫೋಟೊ ಮತ್ತು ಇತರೆ ಸಾಕ್ಷಿಯ ದಾಖಲೆಗಳು ಒರಿಜಿನಲ್ ಆಗಿದ್ದವು. ಹೀಗಾಗಿ ಕೇಸಿನ ಕೇಂದ್ರ ಬಿಂದು ಸುಮನ್ ಕಡೆ ಎಲ್ಲರೂ ದೃಷ್ಟಿ ಬೀರಿದ್ದರು. ಇದಕ್ಕೆ ಸಂಬಂಧಿಸಿದಂತೆ ವೈಷ್ಣವಿಯವರನ್ನು ವಿಚಾರಣೆ ಮಾಡಬೇಕು. ಅವರು ಕಟಕಟೆಗೆ ಬರಬೇಕು ಅಂತಾ ನಿರಂಜನ ಪರ ವಕೀಲ ನೀಲಕಂಠ ಕೋರಿದರು. ಸಾಕ್ಷಿಗಳಿಗೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳನ್ನು ಕೇಳಿದರು. ಮತ್ತೊಂದು ಕಡೆ ರುದ್ರೇಶ ವಕೀಲರು ಸುಮನ್ ಕಡೆಯಿಂದ ವಿವರ ಪಡೆಯುತಿದ್ದರು. ಕಟಕಟೆಯಲ್ಲಿ ನಿಂತ ಸುಮನ್, ‘ಮೈ ಲಾರ್ಡ್ ನಾನೂ ಕರ್ನಾಟಕದವನೇ... ಹೆಸರು ಸುಮನ್. ಕೆನಡಾದಲ್ಲಿ ನನ್ನದೇ ಕಂಪನಿಗಳಿವೆ. ಬ್ಯುಸಿನೆಸ್ ಮಾಡ್ತಿದ್ದೇನೆ. ನಿರಂಜನ ಮತ್ತು ವೈಷ್ಣವಿ ನನ್ನ ಮನೆಯಲ್ಲಿ ಬಾಡಿಗೆ ಇದ್ರು. ನಿರಂಜನ ನನ್ನ ಆತ್ಮೀಯ ಗೆಳೆಯ. ಇವರಿಬ್ಬರ ಮಧ್ಯೆ ಈ ರೀತಿ ಬಿರುಕು ಬಿಟ್ಟು ಡೈವೋರ್ಸ್ ತನ ಬಂದಿರೋ ವಿಷಯ ಗೊತ್ತಿರಲಿಲ್ಲ. ನಿರಂಜನ ನಮ್ಮ ಮನೆಯಲ್ಲಿ ಬಾಡಿಗೆಯಿದ್ದಾಗ ವೈಷ್ಣವಿಗೆ ಕೊಡಿಸಿದ ದುಬಾರಿ ಸ್ಕೂಟಿಯ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಟ್ರಾಫಿಕ್ ಓವರ್‌ಟೇಕ್ ಮಾಡಿಕೊಂಡು ಹೊರಟಿರುವ ಫೋಟೊವನ್ನು ನಿಮಗೆ ಕೊಟ್ಟಿರುವ ಪತ್ರದಲ್ಲಿ ನೋಡಿದೆ. ನನ್ನ ಸ್ನೇಹಿತನ ಹೆಂಡತಿ ಅದೂ ಹೀಗೆ ತಬ್ಬಿಕೊಂಡು ಹೋಗ್ತಿರೋದನ್ನು ನೋಡಿದಾಗ ನನಗೆ ಅಚ್ಚರಿಯಾಯಿತು. ಟ್ರಾಫಿಕ್ ಓವರ್‌ಟೇಕ್ ಮಾಡಿರುವುದರಿಂದ ಕೆನಡಾ ಟ್ರಾನ್ಸ್‌ಪೋರ್ಟ್‌ನಿಂದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ಫೋಟೊ ಸಹಿತ ದಂಡ ಕಟ್ಟಲು ಬಂದಿರೋ ಪತ್ರ ನನ್ನ ಕೈ ಸೇರಿದ್ದರಿಂದ ತಕ್ಷಣ ನಿರಂಜನಗೆ ಫೋನ್ ಮಾಡಿದೆ. ಆದರೆ ಆತನಿಗದು ರೀಚ್ ಆಗಲಿಲ್ಲ. ಆತನ ಮತ್ತೊಬ್ಬ ಗೆಳೆಯ ರಾಬರ್ಟ್‌ನಿಗೆ ಫೋನ್ ಮಾಡಿದೆ. ನಿರಂಜನ ಭಾರತಕ್ಕೆ ಬಂದಿರುವ ವಿಷಯ ಗೊತ್ತಾಯಿತು. ಮತ್ತು ಆತ ಎಲ್ಲ ವಿಷಯ ತಿಳಿಸಿದ. ನ್ಯಾಯಕ್ಕೆ ಅನ್ಯಾಯವಾಗಬಾರದೆಂದು ಇಲ್ಲಿಗೆ ಬರಬೇಕಾಯ್ತು. ಈ ಫೋಟೊದಲ್ಲಿರೋ ಆರ್ಯವರ್ಧನ್ ಮೋಸ್ಟ್ ವಾಂಟೆಡ್ ಕ್ರಿಮಿನಲ್ಸ್ ಲಿಸ್ಟನಲ್ಲಿರೋ ವ್ಯಕ್ತಿ. ಇದಕ್ಕೆ ಸಂಬಂಧ ಪಟ್ಟಂತೆ ಫೊಟೊ ಜೊತೆಗೆ ಕೆಲವು ದಾಖಲೆಗಳನ್ನು ಕೊಟ್ಟಿದ್ದೇನೆ. ತಾವು ಪರಿಶೀಲಿಸಿರಬಹುದು ಅಂದ್ಕೋತೀನಿ. ಇವನ ಸಲುವಾಗಿ ಕೆನಡಾ ಟ್ರಾನ್ಸ್‌ಪೋರ್ಟ್‌ ಗಸ್ತಿನಲ್ಲಿದೆ.’

ಇದೆಲ್ಲವನ್ನು ಕೇಳುತ್ತಿದ್ದ ವೈಷ್ಣವಿಗೆ ಸಿಡಿಲು ಬಡಿದಂತಾಯಿತು. ಸುಮ್ನೆ ಡೈವೋರ್ಸ್ ಮಾಡಿಕೊಂಡಿದ್ದರೆ ಹೇಗೋ ಬದುಕಬಹುದಿತ್ತು. ಈ ವಿಷಯ ಕೇಳ್ತಾ ವೈಷ್ಣವಿಗೆ ಮತ್ತೆ ಶಾಕ್ ಆಯಿತು. ತಲೆ ಗಿರ್….ರ್..ರ್ ಎಂದು ತಿರುಗಿ ನ್ಯಾಯದ ಬಾಗಿಲಲ್ಲಿ (ಕಟಕಟೆಯಲ್ಲಿ) ಕುಸಿದುಬಿಟ್ಟಳು. ಮೇಲೇಳಲೇ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.