ADVERTISEMENT

ನಂದಿನಿ ಹೆದ್ದುರ್ಗ ಬರೆದ ಕಥೆ: ಸೊನ್ನೆಯ ಮುಂದಿನ ಸಂಖ್ಯೆ

ನಂದಿನಿ ವಿಶ್ವನಾಥ ಹೆದ್ದುರ್ಗ
Published 17 ಜುಲೈ 2021, 19:30 IST
Last Updated 17 ಜುಲೈ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ಏನ್ ಮಾಡದು ಅಂತ ನೀವೇ ಹಟ್ಯೋರೆಲ್ಲಾ ನಿರ್ಧಾರ ‌ಮಾಡ್ರಪ್ಪಾ’

ಕಲ್ಲೇದೇವರ ಹಳ್ಳಿಯ ಕೆಳ್ಳೆ ಊರಿನ ಒಂದು ಚಾವಾಡಿಯಾಗೆ ಪಂಚಾತ್ಕೆ ಮಾಡಾಕೆ ಅಂತ ಜನ ಸೇರ್ಕೊಂಡಿದ್ರು.

ಹಟ್ಟಿ ಹಿರೀಕ ಜವರಯ್ಯ ಕಟ್ಟೆ ಮ್ಯಾಲೆ ಕುಂತಿದ್ದ. ಪಕ್ಕದಾಗೆ ಚಾವಡಿ ದೇವ್ರು ಪೂಜೆ ಮಾಡೋ ಪೂಜಾರಪ್ಪ, ಜೊತಿಗೆ ಐದನೇ ಕ್ಲಾಸು ಪೇಲಾಗಿ ಚಾವಡಿಯಾಗೆ ಒಂಚೂರು ಇದ್ಯಾಬುದ್ದಿ ತಿಳ್ದೋನು ಅನ್ಸ್‌ಕಂಡಿರೋನು, ಉಳ್ದೊರಂಗೆ ಹೆಬ್ಬೆಟ್ಟಿನ‌ ಬದಲು ಕೋಳಿಕಾಲು ಅಕ್ಷರದಲ್ಲಿ ತನ್ಹೆಸರು ಬರೆಯುವಂತ ಈರಯ್ಯನೂ ಪಂಚಾಯ್ತಿ ಪ್ರಮುಖರ ಜತೆ ನಿತ್ಕಂಡಿದ್ದ.

ADVERTISEMENT

ಇನ್ನು ಈ ಕಡೆ ಮಕ್ಕೆ ಚಾವಡಿ ಗಂಡಸ್ರುಗಳು ಗುಸಗುಸ ಅಂತಿದ್ರೆ, ಹೆಣ್ಣಾಳು ತಲೆಗೊಂದೊಂದು ಮಾತಾಡ್ತಾ ಇದ್ರು.

ಒಂದಿಬ್ರು ಕಣ್ಣೀರು ಸೀಟಗತನೂ ಇದ್ರು.

ಆದದ್ದು ಇಷ್ಟೇ.

‘ದೇವಿರಿ’

ಇಪ್ಪತ್ತೆಂಟರ ಮದುವೆಯಿಲ್ಲದ ಹೆಣ್ಣು. ಚಿಕ್ಕಂದಿನಲ್ಲೇ ಪೋಲಿಯೊ ಬಂದು ಬಲಗೈ ಊನ ಆಗೈತೆ.

ಮುಖ ಮೈಕಟ್ಟು ಲಕ್ಷಣವಾಗಿ ಗಟ್ಟಿಮುಟ್ಟಾಗಿದ್ರೂ ಯಾಕ ಕಣೆ ಆಕಿಗೆ ಲಗ್ನ ಆಗ ಯೇಗಾ ಕೂಡಿ ಬಂದಿರಲಿಲ್ಲ. ಆಕೀನೆ ಈ ಪಂಚಾಯ್ತಿ ಸೇರಾಕೆ ಮುಖ್ಯ ಕಾರಣ. ಊನ ಆಗಿರೊ ತನ್ನ ಕೈನ ಹರಿದೊ ಹೋಗಿರೊ ಸೀರೆ ಸೆರಗಿಂದ ಮುಚ್ಕಂಡ್ರನೂ ಅವ್ಳ ಉಬ್ಬಿರೋ ಕೆಳೊಟ್ಟೆ ಮಾತ್ರ ವೈನಾಗಿ ಕಾಣ್ತಿತ್ತು.

ಆಕೆ ಆರು ತಿಂಗಳ ಬಿಮ್ಮನಸಿ.

ಲಗ್ನ ಆಗಿಲ್ಲಾ ಅಂತ ಮೊದ್ಲೇ ಯೇಳಿದ್ನಲ್ಲ.

‘ಅಕಿಗೆ ಯಾವ ಸಿಕ್ಸೆ ಕೊಟ್ರೆ ಸಮಾ ಆದಾತು’ ಅಂತ ಈ ಪಂಚಾಯತ್ಕೆ.

‘ಅವ್ಳ ಮಕ್ಕೆ ನಾಕ ಇಕ್ರಲಾ, ಗಂಡಸ್ರು ಅನ್ಸಕಂಡಿರೊ ನನ್ ಮಕ್ಳು.

ಇಂತ ಮಾನಗೆಟ್ಟ ಮುಂಡೆರು ಇರೋದ್ರಿಂದ್ಲೆಯಾ ಚಾವಡಿ ಮಾನ ಬೀದಿಗೆ ಬರಾದು’ ನಾಕು ಹರೇದ ಗಂಡುಮಕ್ಕಳ ತಂದೆ ಮತ್ತಿವಳ ಬಸುರಿಗೆ ಕಾರಣ ಅಂತ ಗೊತ್ತಿರೊ ಮಾರ ತಾನೇನೋ ಬಾರಿ ಸಂಪನ್ನ ಅನ್ನೊ ಅಂಗೆ ದೇವಿರಿಗೆ ಹೊಡಿಯಾಕೆ ಎಗರಿ ಬಂದ.

ದೇವಿರಿ ಒಮ್ಮೆ ತಣ್ಣಗೆ ಅವನನ್ನು ನಿರುಕಿಸಿದ್ಲೆ ಹೊರತಾಗಿ ಬಾಯಿ ಬುಡಲಿಲ್ಲ.

ಯೆಂಗಾರು ಮಾತಾಡಾಳು.

ಆಕಿ ಏನಾರ ಬಾಯಿ ಬುಟ್ಟ ಅಂದ್ರೆ ಮಾರನ ಮಾನ ಮೂರು ಕಾಸಿಗೆ ಅರಾಜು ಆಗೋಯ್ತದೆ.

ಇನ್ನ ಅವನ ಬೆಳ್ದ ಗಣ್ಮಕ್ಕಳು ಅಪ್ಪ ಅನ್ನದೂ ಕಾಣ್ದೆ ನಾಯಿಗ್ ಬಡ್ದಾಂಗೆ ಬಡೀತಾರೆ.

ಅವನ ಹೆಂಡ್ತಿ ಭೂಮಿ ಆಕಾಸ ಒಂದ್ ಮಾಡಾಂಗೆ ರಂಪಾಟ ಮಾಡ್ತಾಳೆ. ಆಕೀಗ್ ಯಾರಾನ ಬಾಯಿ ಕೊಡಾಕ ಆದಾದ.

‘ಒಡ್ಯಾದು ಬಡ್ಯಾದು ಬ್ಯಾಡೇಳಿ. ಈಕೀನ ನಮ್ ಊರಿಂದ್ಲೆ ಗಡಿಪಾರು ಮಾಡ್ಬೇಕೂಂತ ನಾವು ಪಂಚಾಯ್ತಿ ಪ್ರಮುಕ್ರು ನಿರ್ಧಾರ ಮಾಡೇವಿ. ಇಲ್ಲಾ, ಯಾರಾನ ಅವ್ಳ ಹೊಟ್ಟಿಗೆ ವಾರ್ಸದಾರ ಇದ್ದೋನು ದೆಯ್ರವಾಗಿ ಮುಂದೆ ಬಂದು ಅಕಿ ಕೈ ಹಿಡಿದರೆ ಇದೆಲ್ಲಾ ಇಲ್ಲಿಗೇ ಮುಗಿತದೇಳಿ’

ಅಂತ ಹಿರೀಕ ಜವರಯ್ಯ ಹೇಳ್ದಾಗ ಎಲ್ರೂ ತಮತಮಗೆ ತೋಚ್ದಂಗೆ ಮಾತಾಡಕತ್ತೀರು.

‘ಗಡಿಪಾರು ಮಾಡೋದೆ ಲೇಸೇಳಿ’ ಅಂತ ಒಬ್ಳು ಅಂದ್ರೆ

‘ಕಾಣೆ ಕನೆ ಯವ್ವಾ, ಕೈ ಊನಗಿರೋ ಎಣ್ಣು. ಎಲ್ಲಿಗೇಂತ ಓಯ್ತದೊ ದ್ಯಾವ್ರೆ’ ಅಂತ ಇನ್ನೊಬ್ಬಾಕಿ ಸೆರಗು ಬಾಯಿಗ್ ಅಡ್ಹಿಡದ್ಳು.

ಒಟ್ನಾಗೆ ಯಾರೊಬ್ಬ ಗಂಡಸೂ ತಾನು ಆಕೀ ಹೊಟ್ಟೆಗೆ ಕಾರಣ ಅಂತ ಮುಂದೆ ಬರಲಿಲ್ಲ. ಈಕೀನೂ ಇಂತಾರು ಅಂತ ಬಾಯಿ ಬುಡಲಿಲ್ಲ.

‘ಹಂಗಾರೆ ಇವತ್ತು ಸಂಜೀವಳಗ ಗಂಟುಮೂಟೆ ಕಟ್ಕಂಡು ಊರ ಬುಡ್ಬೆಕು. ಇಲ್ಲಾಂದ್ರೆ ನಾವೇ ಜುಲ್ಮೆ ಮ್ಯಾಲೆ ಕಳ್ಸಬೇಕಾಯ್ತದೆ’

ಅಂತ ಪೂಜಾರಪ್ಪ ಪಂಚಾಯ್ತಿಕೆ ಹೇಳ್ತು.

ದೇವಿರಿ ಒಂದೇ ಸಮನೆ ಕಣ್ಣೀರು ಆಕಾವ್ಳೆ ಒರತು ಬ್ಯಾರೇನೂ ಹೇಳಾಂಗಿಲ್ಲ.

‘ಹಿಂಗಿಗಾತು. ಇಂತರು ಅಂತ್ಲಾರು ಯೊಳೆ ಪುಣ್ಯಾತಗಿತ್ತಿ’ ಅಂತ ಅಲ್ಯಾರೊ ಸಮಾಧಾನ ಮಾಡ್ತಾವ್ರೆ.

***

ದೇವಿರಿ ತಂಗಿ ಒಂಬಾಳೆ.

ಒಂಬಾಳೆ ಗಂಡ ಹೊಟ್ಟೆನಿಂಗ.

ಒಂಬಾಳೆನೂ ದೇವಿರಿನೂ ಒಂದು ಸಲಕ್ಕೂ ಮುನಿಸ್ಕಂಡಿಲ್ಲ.

ಜಗ್ಳಗಿಗ್ಳ ಅಂತ ಜನ್ಮದಾಗ ಮಾಡಿಲ್ಲ.

ಅಕ್ಕತಂಗಿ ಅಂದರೆ ಗಂಗೆಗೌರಿ ಇದ್ದಂಗೆ ಇದ್ರು.

ತನ್ನ ಅಕ್ಕನ್ನ ಒಂಬಾಳೆ ಹೆತ್ತವ್ವ ಅನ್ನಂಗ ಕಾಣ್ತಿದ್ಳು.

ಆಕೀನೂ ಅಂಗೇ ಇದ್ಳು.

‘ಏನ್ ಗತಿ ಬಂತೇ ಯಕ್ಕಾ. ಯಾರೂ ಅಂತನಾರೂ ವಸಿ ಬಾಯಬುಡೆ ನನ್ನವ್ವ’ ಅಂತ ಒಂಬಾಳೆ ಗೋಳಾಡಕತ್ತಿದ್ಳು.

ದೇವಿರಿ ಮಾತ್ರ ಬಾಯಬುಟ್ರೆ ಒಂದಿಡೀ ಸಂಸಾರ ಆಳಾಯ್ತದೆ ಅಂತ್ಲೋ ಎನೋ ಅಟಿಪಿಟಿ ಅನ್ಲಿಲ್ಲ.

‘ಸರಸರಿ. ಇವತ್ತು ಸಂಜೀಮಟ ಆಕೀ ಈ ಊರನಾಗ ಇರಬಾರದು. ಇದೇ ಪಂಚಾಯ್ತಿ ತೀರ್ಮಾನ’ ಅಂತ ಇದ್ಯೆ ಕಲ್ತಿರೊ ಈರಯ್ಯ ತೀರ್ಮಾನ ಯೇಳ್ತು.

ಎಲ್ರು ಅವರವರ ಜಾಗದಿಂದ ಏಳಕೆ ಅಂತ ತಮ್ಮ ತಳ ಎತ್ತಿದ್ರು.

‘ಹಿರೀಕ್ರು ಸಟಿಗೆ ಸಮಾಧಾನ ತಗಬೇಕು. ಆಕಿ ಹೊಟ್ಟಿಗೆ ವಾರಸುದಾರ ಯಾರಾನ ಆಗ್ಲಿ.

ಆದ್ರೆ ಆಕೀನ ಇನ್ ಮುಂದ್ಕೆ ನಾನೇ ಸಾಕ್ಕತೀನಿ. ಅಕೀ ಹೊಟ್ಟೆ ಕೂಸಿಗೆ ನಾನೇ ಅಪ್ಪ ಅಂತ ಅನಿಸ್ಕಂತೀನಿ.

ಎಣ್ಣೆಂಗ್ಸು..

ಊರು ಬುಟ್ಟೋಗು ಅಂದ್ರೆ ಎಲ್ಲೊಯ್ತದೆ ಪಾಪ.

ಕೂಲಿನಾಲಿ ಮಾಡ್ತದೆ ಅನ್ನಕೆ ಕೈ ಊನ.

ಆಕೀ ಏನಾರ ತೆಪ್ಪು ಮಾಡಿರ್ಲಿ.

ತೆಪ್ನೆಲ್ಲಾ ಹೊಟ್ಯಾಗ ಹಾಕ್ಕಂಡ ತಾವೆಲ್ಲ ದೊಡ್ಡ ಮನ್ಸುಮಾಡಿ ಆಕೀನ ನಮ್ ಮನ್ಯಾಗೆ ಒಬ್ಬಾಕಿ ಅನ್ನಹಂಗ್ ಬದುಕಾಕೆ ಬುಡಬೇಕು. ಶರಣು ಮಾಡ್ರಿ ಪೂಜಾರಪ್ಪ.’

ಅಂತ ಅಲ್ಲಿರೋರೆಲ್ಲಾ ದಂಗಾಗಂಗೆ ಪೂಜಾರಪ್ಪನ ಕಾಲೀಗೂ, ಹಿರೀಕರ ಕಾಲಿಗೂ ನಿಂಗ ಶರಣ ಮಾಡ್ದ.

ಮಂದ್ಯೆಲ್ಲಾ ತಮತಮೊಳಗೆ ಪಿಸುಗುಡಕೆ ಹತ್ಕೊಂಡ್ರು.

‘ಮತ್ತ ಇದ್ನ ಮೊದ್ಲೇ ಹೇಳಬಾರದೆನ್ಲ ನಿಂಗಾ’ ಅಂತ ಪೂಜಾರಪ್ಪ ವಸಿ ಗೇಲಿ ಮಾಡ್ದಾಂಗ ಮಾಡಿ,

‘ಕೇಳ್ರಪ್ಪಾ, ದೇವೀರಿ ಇನ್ ಮುಂದೆ ನಿಂಗನ ಕಿರೆಎಂಡ್ತಿ ಆಯ್ತಾಳೆ.

ಅಕೀ ಕೂಸಿನ ಅಪ್ಪ ನಿಂಗ ಆಯ್ತಾನೆ.

ಏನಾವ ಒಂಬಾಳೆ ನೀ ಏನ್ ಏಳ್ತೀಯಾ’

ಅಂದಾಗ ತನ್ನ ಗಂಡನ ಒಳ್ಳೆತನ ಅರ್ತಿದ್ದ ಒಂಬಾಳೆ ತಲೆತಗ್ಗಿಸಿ ದೇವಿರಿ ಕೈ ಹಿಡಕಂಡ್ಳು.

‘ಇನ್ನೇನಪ್ಪ ಮತ್ತೆ. ಯೋಳೇಳಿ. ಎದ್ದು ಕ್ಯಾಮೆ ನೋಡೇಳಿ’

ಅಂತ ತೀರ್ಮಾನ ಹೇಳಿದ್ದು ಕೇಳ್ಕಂಡು ಎಲ್ರೂ ತಮತಮ್ಮ ಮನಿಗೊದ್ರು.


***


ಇದು ಸುಮಾರು ಮುವ್ವತ್ತು ವರ್ಷದ ಹಿಂದೆ ನಡೆದ ಘಟನೆಯಂತೆ.

ನಾನು ಮದ್ವೆ ಆಗಿ ಕಲ್ಲೇದೇವರ ಹಳ್ಳಿಗೆ ಬಂದಾಗಿನಿಂದಲೂ ಹೊಟ್ಟೆ ನಿಂಗ ನಮ್ಮನೇಲೇ ಕೆಲಸ ಮಾಡ್ತಿದ್ದ.

ತೋಟದ ಕೆಲಸ, ಗದ್ದೆ ಕೆಲಸ, ದನಕರು, ಹಟ್ಟಿ..ಹಿಂಗೆ.

ಇಂಥದ್ದೆ ಅಂತಿಲ್ಲ. ಯಾವ್ದಾದ್ರೂ ಆಯ್ತು.

ಅವನ ಹೆಂಡತಿಯರು ಇಬ್ರೂ ಊರಿನಲ್ಲೇ ಅವರಿವರ ಮನೆಗೆ ಕೂಲಿನಾಲಿ ಅಂತ ಹೋಗ್ತಿದ್ರು. ನಮ್ಮನೆಗೂ ಆಗಾಗ ಕೆಲಸದ ಬಿರುಸು ಇದ್ದಾಗ ಬರ್ತಿದ್ರು.

ನಿಂಗನ ಈ ‘ಕಿರಿಎಣ್ತಿ’ ಕಥೆ ಜನಗಳ ಬಾಯಿಂದ ಬಾಯಿಗೆ ಬಂದು ಸಾಮಾನ್ಯವಾಗಿ ಊರಿಗೆ ಮದುವೆಯಾಗಿ ಬರುವ ಹೊಸ ಸೊಸೆಯರಿಗೆಲ್ಲಾ ಒಂದು ತಿಂಗಳಿನಲ್ಲೇ ವಿಷಯ ತಿಳಿದು ಹೊಟ್ಟೆ ನಿಂಗ ಎಲ್ಲರ ದೃಷ್ಟಿಯಲ್ಲೂ ಒಂಥರ ‘ದೊಡ್ಡ ಮನುಷ್ಯ. ಅಂತಃಕರಣ ವುಳ್ಳವನು’ ಆಗಿಬಿಟ್ಟಿದ್ದ.

ಹಾಗಂತ ಅವನೇನೂ ಬಾರಿ ಒಳ್ಳೆ ‘ಸಾಚಾ’ ಮನುಷ್ಯ ಏನಲ್ಲ.

ಕ್ಯಾಮೆ ತಪ್ಪಿಸಿಕೊಳ್ಳುವುದಕ್ಕೆ ಸುಳ್ಳು ಹೇಳುವುದು, ಕೂಲಿ ಹೊತ್ತಲ್ಲಿ ಬೀಡಿ ತರುವುದಕ್ಕೆ ಹೋಗುವ ಸಲುವಾಗಿ ‘ಪೂರ ತಲೆನೋಯ್ತಿತ್ತು ಕಣೇಳಿ, ಮಾತ್ರೆ ತರಾನ ಅಂತ ಅಂಗ್ಡಿ‌ ಮನೆಗೆ ಓಗಿದ್ದೆ’

ಅಂತ ಕತೆ ಹೇಳುವುದು, ಕೆಲಸ ಮುಗಿಯೊ ಮೊದಲೇ ಏನೋ ನೆವ ಹೇಳಿ ಮನೆಗೆ ಹೋಗದು.

ತಿನ್ನಾ ಪದಾರ್ಥ ಏನೇ ಇದ್ರೂ ಹುಡುಗ್ಗ್ ತಗತಿನಿ ಕಣೇಳಿ ಅಂತ ತನ್ನ ಸೊಂಟದ ಚೀಲಕ್ಕೆ ಸೇರಿಸಿಯೆ ಬಿಡವುದು...ಹೀಗೇ.

ಇಂತವು ಅನ್ನಂಗಿಲ್ಲ.

ಆದರೆ ‌ಕೈ ಶುದ್ಧದ ವಿಚಾರದಲ್ಲಿ ಬೆರಳು ಮಡಚೋ ಹಾಗಿರಲಿಲ್ಲ. ಕದ್ಯೋದು ಗಿದ್ಯೊದು ಅವೆಲ್ಲಾ ಅವನ ಜನ್ಮದಲ್ಲಿ ಇಲ್ಲ. ಹಾಗಾಗಿ ನಾನಂತೂ ಮೈಗಳ್ಳತನಕ್ಕೆ ಅವನು ಹೇಳುತ್ತಿದ್ದ ಎಲ್ಲ ಸುಳ್ಳನ್ನೂ ನಗನಗ್ತಾ ನಿಜ ಅನ್ನುವ ಹಾಗೇ ಒಪ್ಕೊಂಡು ಇವ್ರ ಹತ್ರ ಬೈಸಿಕೊಳ್ತಿದ್ದೆ.

ಇದರ ಮಧ್ಯೆ ದೇವಿರಿನ ತನ್ನ ಕಿರಿಎಣ್ತಿ ಅಂತ ಊರವರ ಮುಂದೆ ಪಂಚಾಯ್ತಿಕೇಲಿ ಸ್ವೀಕಾರ ಮಾಡಿದ ನಿಂಗ ಆಕೆಯನ್ನು ತನ್ನ ಜೀವದ ಗೆಳತಿಯ ಹಾಗೇ ನಡೆಸಿಕೊಳ್ತಾನೆಂದು, ತನ್ನ ಮೊದಲ ಹೆಂಡತಿ ಒಂಬಾಳೆಗೂ ದೇವಿರಿಗೂ ಎಂದಿಗೂ ತರತಮ ಮಾಡಲಿಲ್ಲವೆಂದೂ ಕೇಳಿ ನನಗೆ ನಿಂಗನ ಮೇಲಿನ ಅಭಿಮಾನ ಮತ್ತಷ್ಟು ಹೆಚ್ಚಾಯಿತು.

ದೇವಿರಿಯ ಆತ್ಮಗೌರವಕ್ಕೆ ಎಂದೂ ಚ್ಯುತಿ ಬಾರದ ಹಾಗೆ ನಡೆದುಕೊಳ್ತಿದ್ದ ಎನ್ನುವುದು ಅವನು ಅವಳ ಬಗ್ಗೆ ಆಡುತ್ತಿದ್ದ ಮಾತುಗಳಿಂದ ನನಗೆ ತಿಳಿಯುತಿತ್ತು.

‘ಜೀವದ ಗೆಳತಿ..ಆತ್ಮಗೌರವ’ ಇವೆಲ್ಲಾ ಪಾಪ ನಮ್ ನಿಂಗನಿಗೆ ಗೊತ್ತಾಗದ ದೊಡ್ಡ ದೊಡ್ಡ ಪದಗಳಾಗಿದ್ದವು.

ಅವನ ಮಾತಿನಲ್ಲೇ ಹೇಳೊದಾದ್ರೆ

‘ಆತ್ಮದಾಗೇ ಸುದ್ದ ಇರಬೇಕು ಕಣೇಳಿ…’

..

ದೇವಿರಿ ಆಗೀಗ ಕೂಲಿಗೆ ಬಂದಾಗ ಹಟ್ಟಿ ಗುಡಿಸಕೆ ಕರೆದ್ರೆ ‘ತಂಗ್ಯಮ್ಮನ್ನೂ, ನಿಂಗನ್ನೂ ತಂಪೊತ್ನಲ್ಲಿ ನೆನಿಬೇಕು ಬುಡಿ ಯವ್ವಾ’

ಅಂತಿದ್ಳು.

ನನಗೂ ಹಾಗೇ ಅನಿಸ್ತಿತ್ತು.

ಒಂಬಾಳೆಯ ತ್ಯಾಗ ಕಡಿಮೆಯದ್ದೇನೂ ಆಗಿರಲಿಲ್ಲ.


***


‘ಇವತ್ತು ಊರಿಂದ ಅಪ್ಪಯ್ಯ ಬರ್ತಾರೆ ನಿಂಗ. ಒಂದೈದಾರು ಒಳ್ಳೆ ಕೆಂಪ್ಳ್ನೀರು ಕೊಚ್ಚಿಡು.

ನೀನೂ ಒಂದು ಕುಡಿ’

ಅಂತ ಹೇಳಿ ಅಪ್ಪಯ್ಯಂಗೆ ಆಸೆ ಅಂತ ಮೀನು ಸಾರಿಗೆ ಮಸಾಲೆ ರುಬ್ಬತೊಡಗಿದೆ.

ನನ್ನ ತವರುಮನೆ ಬೆಂಗಳೂರು ಹತ್ತಿರದ ಒಂದು ಸಣ್ಣ ಹಳ್ಳಿ. ನಾವು ಮೂವರು ಮಕ್ಕಳು. ನಾನು, ನನ್ ತಂಗಿ, ದೊಡ್ಡಣ್ಣಯ್ಯ.

ನನ್ನನ್ನು ದೊಡ್ಮನೆ, ದೊಡ್ಡ ಸಂಸಾರ ಅಂತ ದೂರದ ಈ ಹಳ್ಳಿಗೆ ಮದುವೆ ಮಾಡಿಕೊಟ್ಟಾಗ ಎಷ್ಟೋ ಬಾರಿ ತವರನ್ನು ನೆನೆದು ದುಃಖಿಸ್ತಿದ್ದೆ.

ಬಯಲುಸೀಮೆಯ ಊರಿಂದ ಶುದ್ಧ ಮಳೆಯೂರಿಗೆ ಬಂದಾಗ ನಿಜಕ್ಕೂ ತಬ್ಬಿಬ್ಬಾಗಿತ್ತು. ವರ್ಷದ ಆರು ತಿಂಗಳು ಬಿಡದೆ ಸುರಿಯುವ ಜಡಿಮಳೆಯ ದಿನಗಳಂತೂ ತವರಿನ ನೆನೆಕೆಯಲ್ಲೇ ಮುಗಿಯುತಿದ್ವು.

ನಾನು ಕಣ್ಣೀರಿಡುವುದನ್ನು ನೋಡಿದಾಗೆಲ್ಲಾ ಇದೇ ನಿಂಗ

‘ಎಳ್ಳೇಳಿ ಅವ್ವಾರೆ. ಎದ್ದು ಕ್ಯಾಮೆ ನೋಡೇಳಿ. ಎಲ್ಲಾ ಎಣ್ಮಕ್ಕಳು ಒಂದಲ್ಲಾ ಒಂದು ಜಿಸ ಅಪ್ಪನ ಮನೆ ಬಿಟ್ಟು ಬರದೇಯಾ‌. ಬಂದ ಮ್ಯಾಗಿಂದೂ ಅವರವ್ರ ಅಣೆಬರಾ ಇದ್ದಂಗ ಆಯ್ತದೆ.

ಎಣ್ಮಕ್ಕಳು ಸಂಜೀಮುಂದ ಅಂಗೆಲ್ಲಾ ಕಣ್ಣೀರಾಕಬಾರದು ಕಣೇಳಿ’

ಅಂತ ಸಮಾಧಾನ ಮಾಡ್ತಿದ್ದ.

ತಂಗೀನ ಬೆಂಗಳೂರು ನಗರದಲ್ಲೇ ಇರುವ ಇಂಜಿನಿಯರ್ ಪ್ರಸಾದ್‌ಗೆ ಮದುವೆ ಮಾಡಿಕೊಟ್ಟರು.

ಪ್ರಸಾದ್ ಒಳ್ಳೆಯ ವಿದ್ಯಾವಂತ. ಬುದ್ದಿವಂತ. ಸಾಹಿತ್ಯ ಓದಿಕೊಂಡಿರುವವ. ನನ್ನ ತಂಗೀನಂತೂ ಬಾಳಾ ಚೆನ್ನಾಗಿ ನೋಡಿಕೊಳ್ತಿದ್ದ.

ಅವ್ಳು ಅವನ ಕಣ್ಣಿಗೆ ಚೆನ್ನಾಗಿ ಅಲಂಕಾರ ಮಾಡಿಕೊಂಡು ಓಡಾಡ್ತಿದ್ರೆ ಸಾಕು. ವಾರಕೊಂದ್ಸಾರಿ ಸಿನೆಮಾ, ಹೋಟೆಲ್ ಅಂತ ತಿರುಗಾಡಿಕೊಂಡು ರಾಣಿ ಹಾಗಿದ್ಳು ನನ್ನ ತಂಗಿ.

ಒಮ್ಮೊಮ್ಮೆ ತಂಗಿಯ ಅದೃಷ್ಟಕ್ಕೆ ನಾನು ಕರುಬಿದ್ದೂ ಇದೆ.

ಇರಲಿ. ಅವಳಾದರೂ ನಗರ ಸೇರ್ಕೊಂಡು ಸುಖವಾಗಿದ್ದಾಳಲ್ಲ. ಅಷ್ಟು ಸಾಕು. ಅಣ್ಣ ಊರಲ್ಲಿ ದೊಡ್ಡ ಜಮೀನು ನೋಡ್ಕೊತಿದ್ದ.

‘ತಗಳಿ ಅವ್ವಾ.ಎರಡ್ಯಾಕೆ,

ನಾಕು ಎಳ್ನೀರು ಕೊಚ್ಚಿಟ್ಟಿನಿ. ಗೌಡ್ರು ಬಿಸಿಲ್ನಾಗೆ ಬರ್ತಾರೆ. ಕುಡೀಲಿ. ನಿಮಗೂ ಒಂದು ಕೊಚ್ಚಿಟ್ಟಿನೇಳಿ. ನಾನೊಂದು ಕುಡ್ದೀನಿ ಮತ್ತೆ’

ನಿಂಗ ಕೂಗಿದಾಗ ವಾಸ್ತವಕ್ಕೆ ಬಂದ ನಾನು ಅವನು ಕೊಟ್ಟ ಎಳನೀರು ಕುಡೀತಾ ನೀರೊಲೆ ಹತ್ರ ಎರಡು ಒಳ್ಳೆ ಆಕಾರದ ಎಳನೀರು ಬುರುಡೆ ಬಿದ್ದಿದ್ದನ್ನು ನೋಡಿ ನಿಂಗನ ಮುಖ ನೋಡ್ದೆ.

‘ಯೇ...ಒಂದ್ರಾಗೆ ನೀರೇ ಇರ್ಲಿಲ್ಲಾ ಕಣೇಳಿ. ಕುಡುದ್ ಮ್ಯಾಗೆ ಬಾಯಾರ ವಸಿ ನೆನಿಬ್ಯಾಡ್ವ್ರಾ’ ಅಂತಂದ. ಅವನನ್ನು ನಸುನಗುತ್ತಾ ನೋಡಿ ಎಳೆಗಾಯಿ ತಿನ್ನತೊಡಗಿದೆ.

ಒಳಗೆ ಮೊಬೈಲು ರಿಂಗಾದ ಸದ್ದು ಕೇಳಿಸ್ತು.

ತಂಗಿ ಬೆಂಗಳೂರಿಂದ ಫೋನ್ ಮಾಡಿದ್ದಾಳೆ.

ಫೋನು ಎತ್ತಿಕೊಂಡು

‘ಹಲ್ಲೋ ಸುಮಿ...ಚೆನ್ನಾಗಿದ್ದಿಯೇನೆ’

ಅಂತ ಮಾಮೂಲು ಅಕ್ಕರೆಯಲ್ಲಿ ಕೇಳುತ್ತಿದ್ದ ಹಾಗೇ

‘ಏನ್ ಚಂದ ಕಣೇ ಅಕ್ಕ.ನನ್ನ ಜೀವನ ಹಾಳಾಗೋಯ್ತು’

ಅಂತ ಒಂದೇ ಸಮನೆ ಅಳತೊಡಗಿದಳು.

ನನ್ನ ಕೈಕಾಲು ತಣ್ಣಗಾದವು.

ಪ್ರಸಾದ್ ಜೀವಕ್ಕೇನಾದರೂ ಆಯ್ತೇ...ದೇವರೇ..ಏನೂ ಕೆಡುಕು ಆಗದಿರಲಪ್ಪಾ ಎಂದುಕೊಂಡವಳು ನಡುಗುವ ಸ್ವರವನ್ನು ಅಡಗಿಸಿ

‘ಸುಮ..ಏನಾಯ್ತಮ್ಮಾ.

ಏನೂ ಹೇಳದೆ ಹೀಗೆ ಅಳ್ತಾ ಕೂತ್ರೆ ನನಗೇ ಏನು ತಿಳಿಯುತ್ತೆ ಹೇಳು. ಪ್ರಸಾದ್ ಹೇಗಿದಾರೆ, ಸಮಾಧಾನವಾಗಿ ಏನಾಯ್ತು ಅಂತ ಹೇಳು’ ಅಂದಾಗ

‘ಅಕ್ಕಾ., ನಿನ್ನೆ ನಾನು ಮಾರ್ಕೆಟ್‌ಗೆ ಹೋಗಿ ಬರುವಾಗ ಟ್ರಾಫಿಕ್ಕಲಿ ಸಿಕ್ಕಿಕೊಂಡು ಬರುವಾಗ ಸ್ವಲ್ಪ ತಡ ಆಯ್ತು ಕಣೇ.

ಬಸ್ಸಿಳಿದಾಗ ಅಲ್ಲೇ ಇದ್ದ ನಮ್ಮೂರ ಚನ್ನೇಗೌಡರ ಮಗ ಅಕ್ಷಯ ನನ್ನನ್ನು ನೋಡಿ ಇಷ್ಟೊತ್ತಿನಲ್ಲಿ ಒಬ್ರೆ ಹೋಗ್ತಿರಾ ಅಕ್ಕ. ಬನ್ನಿ ನಾನು ಡ್ರಾಪ್ ಮಾಡ್ತೀನಿ ಅಂದ. ಅವನು ಇಲ್ಲೇ ನಮ್ಮ ಮನೆ ಹತ್ತಿರ ಇರುವ ಸಾಫ್ಟ್‌ವೇರ್ ಕಂಪೆನಿಲಿ ಕೆಲಸ ಮಾಡುವುದು ನಿಂಗೊತ್ತಲ್ವಾ ಅಕ್ಕಾ.

ಅವನು ಡ್ರಾಪ್ ಮಾಡಿದ್ದನ್ನು ಆಚೆಯೇ ಇದ್ದ ಪ್ರಸಾದ್ ನೋಡಿ ನನ್ನ ಅವನ ಮೇಲೆ ಇಲ್ಲದ ಸಂಬಂಧವನ್ನು ಕಟ್ಟಿ ಡೈವೋರ್ಸ್ ಪೇಪರ್ ತಂದಿಟ್ಟಿದಾರೆ. ನಂಗೇನೂ ತೋಚ್ತಿಲ್ಲ ಅಕ್ಕ. ಅಪ್ಪನಿಗೆ ಏನಂತ ಹೇಳಲಿ.

ನಾನು ಡ್ರಾಪ್ ತಗೊಂಡಿದ್ದು ತಪ್ಪಾ ಅಕ್ಕ. ಅವನೂ ನಾವೂ ಒಟ್ಟಿಗೆ ಆಡಿ ಬೆಳೆದವರಲ್ವಾ. ಇವರಿಗೆ ಏನು ಹೇಳಿದ್ರು ಅವರ ಕೆಟ್ಟ ಯೋಚನೆಯಿಂದ ಹೊರಗೆ ಬರ್ತಿಲ್ಲ ಕಣೇ.

ಏನ್ಮಾಡಲಿ ಅಕ್ಕಾ’

ಒಂದು ಕ್ಷಣ ದಿಗ್ಞೂಡಳಾದೆ.

ಆ ಬದಿಯಲ್ಲಿ ಎದೆ ಒಡೆದು ಹೋಗುವಂತೆ ಅಳುತಿದ್ಳು ನನ್ ತಂಗಿ ಸುಮ.

ಅವಳು ನನ್ನಂತೆ ಹಳ್ಳಿ ಸೇರುವುದು ಬೇಡ ಅಂತ ಅವಳಿಗೆ ವಿದ್ಯೆ ಬುದ್ದಿ ಇರುವ ಹುಡುಗನನ್ನು ಹುಡುಕಿ ಮದುವೆ ಮಾಡಿ ಅವಳು ನೆಮ್ಮದಿಯಾಗಿದ್ದಾಳೆ ಎನ್ನುವಾಗ ಇದೆಲ್ಲಾ ಏನು?

ಹಾಗಾದ್ರೆ ಪ್ರಸಾದನ ಒಳ್ಳೆತನ ಎಲ್ಲವೂ ಮುಖವಾಡವೇ.?

ಆ ಮುಖವಾಡವನ್ನೇ ನಾವು ಅಸಲಿ ಮುಖವೆಂದು ನಂಬಿದ್ದೆವಾ?

ಅಯ್ಯೋ..ದೇವರೇ. ಈಗೇನ್ಮಾಡುವುದು?

ನಿಲ್ಲಲಾಗದೇ ಅಲ್ಲೇ ಕುಸಿದೆ.

‘ಏನಂತಿ ಅವ್ವಾ.ಗೌಡ್ರು ಒಂಟರಂತಾ ಊರಿಂದ.

ನಾನು ವಸಿ ಬೇಗ ಮನಿಗೋಗ್ಬೇಕೇಳಿ. ನಮ್ ದೇವಿರಿಗೆ ಯಾಕ ಮೈ ಉಸಾರಿಲ್ಲಾ. ಬೆಳಿಗ್ಗಿನಿಂದ ಜರದ ಕಾವು ಇಳಿಯಂಗಿಲ್ಲ ಕಣೇಳಿ. ಹುಡುಗ್ಗೂವೆ ಕುಂಡೆ ಮ್ಯಾಲೆ ಕುರೆದ್ದು ‘ಬಿರ್ರನ್ ಬಾರೋಪ್ಪೊ’ ಅಂದಿತ್ತು. ನಾ ಬತ್ತಿನಿ. ಗೌಡ್ರನ ನಾಳಿಕ ಮಾತಾಡ್ಸಿತಿನಿ ಕಣೇಳಿ’

ಅಂತ ಅಂದು ಒಳಗೆ ಇಣುಕಿದ ಹಂಗ್ ಮಾಡಿ ‘ದೇವಿರಿಗೆ ಒಂದು ಎಳ್ನಿರು ತಗೋಯ್ತಿನೇಳಿ’

ಅಂತ ಉತ್ತರಕ್ಕೂ ಕಾಯದೆ ಎಳನೀರು ಹಿಡಿದು ಹೊರಟ.

ಸುಮೀ ಆ ಕಡೆಯಿಂದ ಎದೆ ಒಡೆದು ಹೋಗುವಂತೆ ಅಳುತ್ತಲೇ ಇದ್ದಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.