ಸಣ್ಣ ಊರು ಮೋಳೆ. ಬರಗಾಲದ ಬರಡು ನೆಲದಲ್ಲಿಯೂ ಬೆವರು ಸುರಿಸಿ ನಡುಬಗ್ಗಿಸಿ ನಟ್ಟು ಕಡೆವ ಮಂದಿ, ಮಳೆಗಾಲದ ಹಸಿರು ನೋಡೇ ಹೊಟ್ಟೆ ತುಂಬಿಸಿಕೊಳ್ಳುವ ಮಂದಿ. ಹಾಸಿ ಹೊದೆಯವಷ್ಟು ಬಡತನವ ಆರೋಪಿಸಲು ಇವರಿಗೊಬ್ಬ ಊರ ದೇವರಿದ್ದಾನೆ- ಹೆಸರು ಸಿದ್ಧೇಶ್ವರ. ಹತ್ತು ಹಳ್ಳಿಗೆ ಪ್ರಸಿದ್ಧ. ಈ ದೇವರ ಮಹಿಮೆಯ ಪದಕಟ್ಟಿ ಹಾಡುವ ಹಾಲುಕುರುಬರು ಡೊಳ್ಳು ಕಟ್ಟಿ ಕುಣಿಯುತ್ತ ಹಾಡುವ ಹಾಡು ಕೇಳಲು ಎರಡು ಕಿವಿ ಸಾಲದು ಮತ್ತು ಈ ಸಿದ್ಧೇಶ್ವರ ದೇವರವೆಂಬ ಬಂಗಾರದ ಉತ್ಸವಮೂರ್ತಿಯ ಚೆಲುವು ನೋಡಲು ಎರಡು ಕಣ್ಣು ಸಾಲದು.
ಬಂಗಾರವೆಂದರೆ ಅಸಲೀ ಬಂಗಾರ. ಕೊರಳತುಂಬಾ ಬಂಗಾರದ ರುದ್ರಾಕ್ಷಿ ಸರ. ಎಷ್ಟು ಕೆ.ಜಿ ತೂಗುತ್ತಿದ್ದವೋ? ಇಂತಹ ದೇವರ ಪಲ್ಲಕ್ಕಿ ನೋಡಲು ಅದರೆದಿರುವ ಡೊಳ್ಳು ಬಾರಿಸುತ್ತ ಕುಣಿಯುವ ಹಾಲುಮತದ ಕುರುಬರ ಡೊಳ್ಳು ಕುಣಿತ ನೋಡಲು ನನಗೆ ಕಾಣಿಸದಿದ್ದಾಗ ನಮ್ಮಪ್ಪ ನನ್ನನ್ನು ತನ್ನ ಹೆಗಲ ಮೇಲೆ ಕೂಡ್ರಿಸಿಕೊಂಡು ಆ ಪಲ್ಲಕ್ಕಿ ತಿರುಗಿದಲ್ಲೆಲ್ಲ ನನ್ನ ಹೊತ್ತು ತಿರುಗುತ್ತಿದ್ದರು.
ಸಂಜೆ ಮನೆಗೆ ಬಂದು ಅಪ್ಪನ ಬಳಿ ಮಲಗಿ, ನಾನು ಕತೆ ಹೇಳು ಹೇಳೆಂದು ಪೀಡಿಸಿದಾಗ ಈ ದೇವರ, ಈ ಸಿದ್ಧೇಶ್ವರನೆಂಬ ಪವಾಡಪುರುಷನ ಕತೆಗಳನ್ನು ಮನಮುಟ್ಟವಂತೆ ಹೇಳಿ ದೇವರೊಬ್ಬ ನಮ್ಮ ಪಾಲಿನ ಹೀರೋ ಆಗಿ ಹೋಗಿದ್ದ. ಹೀಗಿರುತ್ತ ಒಂದು ದಿನ ದೇವರ ಬೆಲೆಬಾಳುವ ಬೆಳ್ಳಿ ಬಂಗಾರದಿಂದ ಸಿಂಗಾರಗೊಂಡ ಉತ್ಸವಮೂರ್ತಿಯ ಕಳುವಾದ ಸುದ್ದಿ ಊರ ತುಂಬ ಹಬ್ಬಿದಾಗ, ನಾವು ಅಲ್ಲೇ ದೇವರ ಪಲ್ಲಕ್ಕಿ ಇಡುವ ವಾಡೆಯ ಅಂಗಳದಲ್ಲೇ ಚಿನ್ನಿದಾಂಡು ಆಡುತ್ತಿದ್ದೆವು.
ಇಂತಹ ಪವಾಡ ಪುರುಷ ದೇವರನೊಬ್ಬನನ್ನು ರಾತ್ರೋ ರಾತ್ರಿ ಕಳ್ಳರು ಕದ್ದೊಯ್ಯುವುದೆಂದರೇನು? ಊರವರ ಸಂಕಟ ಸೂತಕವಾದರೆ, ನನಗೆ ಈ ಸಂಗತಿ ಕೇವಲ ಉಡಾಫೆಯ, ತಮಾಷೆಯ ಸಂಗತಿಯಾಗಿತ್ತು. ಇಲ್ಲ ಸಾಧ್ಯವಿಲ್ಲ; ಇದು ಸ್ವತಃ ದೇವರದೇ ಪಿತೂರಿ! ಊರವರ ತಾಳ್ಮೆ ಪರೀಕ್ಷಿಸಲು ಈ ತುಂಟ ದೇವರು ಇಲ್ಲೆಲ್ಲೋ ಬನ್ನಿಯ ಮರದಲ್ಲೋ ಬಿಲ್ವಪತ್ರೆಯ ಮರದಲ್ಲೋ ಅಥವಾ ತುಸು ದೂರದ ಹುಣಸೆಯ ಮೆಳೆಯಲ್ಲೋ ಅಡಗಿ, ಇವರನ್ನೆಲ್ಲ ಗೋಳು ಹೊಯ್ದುಕೊಳ್ಳುವ ಸಂಚು ಮಾಡಿರಬಹುದೆಂದೂ ಅಥವಾ ಒಂದು ವೇಳೆ ಈ ಪವಾಡಪುರುಷ ದೇವನನ್ನು ಕಳ್ಳರು ಹೊತ್ತೊಯ್ದಿದ್ದರೂ ದೇವರು ಆ ಕಳ್ಳರನ್ನೆಲ್ಲಾ ಕೊಂದು ಅವರನ್ನು ತಂದು ಊರ ಕೆರೆಯಲ್ಲಿ ಮುಳುಗಿಸುತ್ತಾನೆ ನೋಡ್ತಿರಿ ಅಂತ ನನ್ನ ಗೆಳೆಯನಿಗೆ ಹೇಳಿದ್ದೆ.
ಹೀಗೆ ಹೇಳಿದ ಸರಿಯಾಗಿ ಮಾರನೇ ದಿನಕ್ಕೆ ಊರಕೆರೆಯಲ್ಲಿ ದೇವರ ಮೈಮೇಲಿನ, ಉತ್ಸವ ಮೂರ್ತಿಯ ಬಟ್ಟೆಗಳು ತೇಲಬೇಕೇ! ತೇಲಿದ್ದು ನಿಜ; ಆದರೆ ಇದು ಕಳ್ಳರು ತಾವು ಪೊಲೀಸರ ನಾಯಿಗೆ ಸಿಗಬಾರದೆಂದು ದೇವರ ಒಡವೆಗಳನ್ನೆಲ್ಲಾ ಬಟ್ಟೆಯಿಂದ ಬೇರ್ಪಡಿಸಿ ಆ ಬಟ್ಟೆಗಳನ್ನು ಅಲ್ಲೇ ಬಿಟ್ಟು ತಾವೂ ಮುಳುಗು ಹಾಕಿ (ಮುಳುಗು ಹಾಕಿದರೆ ಮುಗಿಯಿತು. ಪೊಲೀಸರ ನಾಯಿಗಳಿಗೆ ಕಳ್ಳರ ವಾಸನೆ ಸಿಗುವುದಿಲ್ಲ ಎಂಬ ಪುರಾತನ ನಂಬಿಕೆಯೊಂದಿದೆ.!) ಹೋಗಿದ್ದರು.
ದೇವರು ಬಂದೇ ಬರುತ್ತಾನೆ ಎಂಬ ನಂಬಿಕೆಯಲ್ಲಿ ನಾನು ದೊಡ್ಡವನಾಗುತ್ತಿದ್ದೆ. ಅಂದಿನಿಂದ ಕೆಲ ವರ್ಷಗಳವರೆಗೆ ದೇವರ ಪಲ್ಲಕ್ಕಿ ಏಳಲಿಲ್ಲ, ಜಾತ್ರೆ ನೆರೆಯಲಿಲ್ಲ. ದೇವರಿಲ್ಲದ ಊರಿನಲ್ಲಿ ದಿಕ್ಕು ತೋಚದ ಮಂದಿ, ಹರಕೆ ಹೊರಲು, ದೀರ್ಘದಂಡ ಹಾಕಲು, ಕೊನೇ ಪಕ್ಷ ದೇವರೊಂದಿಗೆ ಜಗಳವಾಡಲೂ ದೇವರಿಲ್ಲ. ಊರಿಗೆ ದೇವರು ಬರಲಿಲ್ಲ, ನಾನು ಊರು ಬಿಟ್ಟೆ.ಆಮೇಲೆ ಊರವರೆಲ್ಲ ಸೇರಿ ಕಾಸಿಗೆ ಕಾಸು ಹೊಂದಿಸಿ, ತಾಯಂದಿರು ಕಾಸು ಕರಿಮಣಿ ಕೊಟ್ಟು ದೇಣಿಗೆ ಎತ್ತಿ, ಊರ ಉತ್ಸವ ದೇವರ ಬಂಗಾರದಮೂರ್ತಿ ಮಾಡಿದರೆಂದೂ ಜಾತ್ರೆ ನೆರೆಯುವುದೆಂದೂ, ಪಲ್ಲಕ್ಕಿ ಏಳುವುದೆಂದೂ, ನೀನು ನೋಡಲು ಬರಬೇಕೆಂದೂ ಗೆಳೆಯ ಪತ್ರ ಬರೆದಿದ್ದ.
ಗೆಳೆಯನ ಆಣತಿಯಂತೆ ನಾನು ಹೋಗಿದ್ದೆ ಕೂಡ. ಆದರೆ, ಯಾಕೋ ಈ ದೇವರು ನನ್ನ ದೇವರಲ್ಲ ಎನಿಸಲು ಶುರುವಾಯಿತು. ಇದು ತಪ್ಪಲ್ಲವೇ? ದೇವರು ಸಾಕಾರವೂ ಹೌದು; ನಿರಾಕಾರವೂ ಹೌದು. ಇವೆರಡನ್ನೂ ಮೀರಿದವನೂ ಹೌದೆನ್ಬುವ ‘ಪ್ರಬುದ್ಧ’ತೆಯನ್ನು ನನಗೆ ನಾನು ಆರೋಪಿಸಿಕೊಳ್ಳಲು ಏಕೆ ಸಾಧ್ಯವಾಗುತ್ತಿಲ್ಲ?
ಈಗ ಊರ ದೇವರಿಲ್ಲ, ತಲೆಯ ಮೇಲೆ ಹೊತ್ತು ತಿರುಗಿದ ಅಪ್ಪನೂ ಇಲ್ಲ.
ಆದರೂ ಬಂದೇ ಬರುತ್ತಾನೆ ನನ್ನ ಬಾಲ್ಯದ ದೇವರು ಮತ್ತು ನನ್ನಪ್ಪ ಎಂದು ಕಾಯುವುದರಲ್ಲೇ ಎಂಥಾ ಸುಖವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.