ADVERTISEMENT

ಕಥೆ | ಕೋಳಿ ಕಾಲಿನ ಗೆಜ್ಜೆ

ಎಚ್.ಟಿ.ಪೋತೆ
Published 18 ಮೇ 2024, 23:30 IST
Last Updated 18 ಮೇ 2024, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಸಿದ್ದಪ್ಪ ಎಂದಿನಂತೆ ಕಚೇರಿಗೆ ಹೊರಟು ನಿಂತಿದ್ದ, ಸ್ಟೆಲ್ಲಾ ಕೂಡ ಕಚೇರಿಗೆ ಹೊರಡಬೇಕು. ಬಟ್ಟೆ ಧರಿಸುತ್ತ ಕನ್ನಡಿ ಎದುರಿಗೆ ಬಹಳ ಹೊತ್ತು ನಿಂತದ್ದು ನೋಡಿದ ಸಿದ್ದಪ್ಪ ಉರ್ಫ್ ಸಿದ್ಧಾರ್ಥ “ಸ್ಟೆಲ್ಲಾ ಬೇಗ ಹೊರಡಬೇಕು, ಇಷ್ಟು ತಡಮಾಡಿದರೆ ಹೇಗೆ?” ಎಂದು ಜೋರಾಗಿ ಕೂಗಿದ.

“ಆಯಿತ್ರಿ ಬಂದೆ ಬಂದೆ” ಎನ್ನುತ್ತ ಓಡೋಡಿ ಬಂದು ಸಿದ್ದಪ್ಪನನ್ನು ಸೇರಿಕೊಂಡಳು. ಇಬ್ಬರು ಕಾರು ಹತ್ತುತ್ತಿದ್ದಂತೆ ಗೇಟ್‌ಕೀಪರ್ ಬಂದು ಗೇಟ್ ಓಪನ್ ಮಾಡಿ ಸೆಲ್ಯೂಟ್ ಹೊಡೆದು “ಸಾರ್, ಲೆಟರ್ ಬಂದಿದೆ” ಅನ್ನುತ್ತ ಸ್ಟೆಲ್ಲಾ ಅವರ ಕೈಗಿಟ್ಟ.

ADVERTISEMENT

ಪತ್ರದ ಮೇಲೆ ಕಣ್ಣಾಡಿಸಿದ ಸ್ಟೆಲ್ಲಾ “ಊರಿಂದ ಮಾವ ಪತ್ರ ಬರೆದಿದ್ದಾರೆ.....” ಅನ್ನುವ ಮಾತು ಮುಗಿದಿರಲಿಲ್ಲ.

“ಹೌದಾ” ಎಂದು ಸಿದ್ದಪ್ಪ ಉಲ್ಲಾಸಿತನಾದ.
“ಕಚೇರಿಗೆ ಹೋದ ಮೇಲೆ ಓದಿ, ಈಗ ಕಾರ್ ಡ್ರೈವ್‌ಮಾಡಿ” ಎಂದು ಹೇಳುತ್ತ ಸಿದ್ದಪ್ಪನ ಬ್ಯಾಗಿನ ಪೊಟ್ಟಣದಲ್ಲಿ ಪತ್ರ ಇಟ್ಟಳು. ಬಹಳ ದಿವಸಗಳ ಮೇಲೆ ಅಪ್ಪ ಪತ್ರ ಬರೆದಿದ್ದಾನೆ. ಹೇಗಿದ್ದಾನೊ, ಏನ ಮಾಡ್ತಿದ್ದಾನೊ ಎಂದು ಸಿದ್ದಪ್ಪ ಯೋಚಿಸುತ್ತ  ಡ್ರೈವಿಂಗ್‌ ಕಡೆಗೆ ಗಮನ ಹರಿಸಿದ.

ಸ್ಟೆಲ್ಲಾ ಗಂಡ ಚಿಂತಿತನಾಗಿರುವುದು ಕಂಡು “ಚಿಂತಿಸಬೇಡಿ ಸಿದ್ದು, ಮಾವ ಚೆನ್ನಾಗಿರ‍್ತಾರೆ. ಬೇಕಿದ್ದರೆ ಈ ಬಾರಿ ಬೇಸಿಗೆಗೆ ನಾವು ಊರಿಗೆ ಹೋಗಿ ಬರೋಣ” ಎಂದು ಗಂಡನ ಮುಖ ನೋಡಿದಳು.
“ರಿಯಲಿ, ನಿಜವಾಗ್ಲೂ” ಎಂದು ಸಿದ್ದಪ್ಪ ನಗುತ್ತ ಸ್ಟೆಲ್ಲಾಳ ಕೈಗೊಂದು ಮುತ್ತುಕೊಟ್ಟ.

ಎಷ್ಟೋ ವರ್ಷಗಳಾದ ಮೇಲೆ ತನ್ನೂರಿಗೆ ಹೋಗುವ ಕಾಲಕೂಡಿ ಬಂದಿದೆ. ಅದು ಪತ್ನಿ ಸ್ಟೆಲ್ಲಾ ಸ್ವತಃ ಊರಿಗೆ ಹೋಗೋಣ ಅಂತಿದ್ದಾಳೆ. ಅಪ್ಪನನ್ನು ನೋಡಬೇಕು, ಮುದ್ದಾಡಬೇಕು. ಅಪ್ಪನ ಮಡಿಲಲ್ಲಿ ತಲೆ ಇಟ್ಟು ಮಲಗಬೇಕು. ಅವ್ವ ಹೋದ ಮೇಲೆ ಊರಿನ ಮುಖಾನೆ ನೋಡಿಲ್ಲ. ಅವಳ ಮಡಿಲಲ್ಲಿ ಆಡಿದ ನೆನಪೂ ಇಲ್ಲ. ಊರು ಹೇಗಿದೆಯೊ! ಕೇರಿ ಬದಲಾಗಿದೆಯೋ! ಎಲ್ಲವನ್ನು ನೋಡುವ ತವಕ ಮನಸ್ಸಿನಂತರಾಳದಲ್ಲಿ ಪ್ರವಾಹದ ನೀರು ಉಕ್ಕಿಬಂದಂತೆ ಭಾಸವಾಯಿತು.

ಅಷ್ಟರಲ್ಲಿ ಸ್ಟೆಲ್ಲಾಳ ಕಚೇರಿ ಬಂತು. ಇಳಿದು ಬಾಯ್ ಹೇಳಿದಳು. ಸಿದ್ದಪ್ಪ ಪ್ರತಿಯಾಗಿ ಬಾಯ್ ಹೇಳುವಷ್ಟರಲ್ಲಿ ಗ್ರೀನ್ ಸಿಗ್ನಲ್ ಬಿದ್ದಿತು. ಕಾರು ಓಡಿಸುತ್ತ ಯಾವಾಗ ಅಪ್ಪನ ಪತ್ರ ಓದೇನು, ಏನು ಬರೆದಿದ್ದಾನೊ ಎಂದು ಯೋಚಿಸುತ್ತ ಕಚೇರಿಯ ಅಂಡರ್ ಗ್ರೌಂಡ್‌ನಲ್ಲಿ ಕಾರು ನಿಲ್ಲಿಸಿ ಲಿಪ್ಟ್ ಹತ್ತಿದ. ಎದುರುಗೊಂಡವರು “ಏನ್ ಸಾರ್ ಇಂದು ಇಷ್ಟು ಬೇಗ ಬಂದಿದ್ದೀರಿ” ಎಂದವರಿಗೂ ಅವಸರದಲ್ಲಿ ಉತ್ತರಿಸುತ್ತ ಒಳಬಂದವನೆ ಬ್ಯಾಗಿನ ಪೊಟ್ಟಣದಿಂದ ಪತ್ರ ತೆಗೆದು ಓದಲು ಆರಂಭಿಸಿದ. ಅಪ್ಪನ ಕೈಯಿಂದ ಬರೆದ ಮುದ್ದು ಮುದ್ದಾದ ಕನ್ನಡ ಅಕ್ಷರಗಳ ಮೇಲೆ ಕೈಯಾಡಿಸಿದ್ದೇ ತಡ ಭಾವುಕನಾದ. ಸಿದ್ದಪ್ಪನ ಕಪಾಳ ಮೇಲೆ ಕಣ್ಣೀರು ಧಾರೆಯಾದವು. ಅಕ್ಕಪಕ್ಕದ ಉದ್ಯೋಗಿಗಳು ಸಿದ್ದಪ್ಪನನ್ನೇ ನೋಡುತ್ತಿದ್ದರು. ಎಲ್ಲರೂ ತನ್ನತ್ತ ನೋಡುತಿದ್ದಾರೆ ಅನ್ನುವುದು ಅರಿವಿಗೆ ಬರುತ್ತಿದ್ದಂತೆ ಸಿದ್ದಪ್ಪ “Letter, Letter My Father My Father” ಎಂದು ಮುಖ ಸೀಟಿಕೊಳ್ಳುತ್ತ ದುಃಖ ಉಕ್ಕಿ ಬಂದರೂ ನಕ್ಕು ಪತ್ರ ಓದಲು ಅಣಿಯಾದ.

“ಮಗಾ ಸಿದ್ದು ನಿನ್ನ ತಂದೆ ಮಾಡುವ ಆಶೀರ್ವಾದಗಳು, ಇತ್ತ ನಾನು ಸುಖವಾಗಿದ್ದೇನೆ. ಊರಲ್ಲಿ ನಿನ್ನ ಚಿಕ್ಕಪ್ಪ-ಚಿಕ್ಕಮ್ಮ ಎಲ್ಲರೂ ಸದಾ ಕೇಳ್ತರ‍್ತಾರೆ. ನಿನ್ನನ್ನು ಅವರು ಎಂದೂ ನೋಡಿಲ್ಲ. ನೋಡುವ ಹಂಬಲದಿಂದ ದೊಡ್ಡಪ್ಪಾ, ಓದಿ ನೌಕರಿ ಮಾಡುವ ಕೇರಿಯ ಎಲ್ಲರೂ ಆಗಾಗ ಬಂದು ಹೋಗ್ತಾರ. ಅದರಲ್ಲೂ ಪ್ರೊಫೆಸರ್ ಸಾಹೇಬ್ ಬಂದಾಗ ನಮಗೂ ನಮ್ಮ ಅಣ್ಣನ ನೆನಪಾಗ್ತದಂತ ಎಂದು ನಿನ್ನ ತಮ್ಮ ಶರಣ ಹಂಬಲದಿಂದ ಕೇಳ್ತಾನ. ಸಿದ್ದುಗ ಸಣ್ಣವನಿದ್ದಾಗಷ್ಟೇ ನೋಡಿವಿ ಅಂತ ನಿಮ್ಮ ಚಿಕ್ಕಪ್ಪ ಹೇಳ್ತಾನೆ. ಒಂದ ಸಾರಿ ಆದ್ರೂ ಬಂದು ಹೋಗಂತ ಹೇಳು. ನಮ್ಮ ಮನೆತನದಾಗ ಓದಾಂವ-ಬರದಾಂವ ಅದಾನು, ಅದು ವಿದೇಶದಾಗ ಅದಾನಂತ ಹೆಮ್ಮೆಯಿಂದ ಹೇಳಬೇಕ ಅನಸ್ತದ ಎಂದು ಅಲ್ಲಾಕ್ಹತ್ಯಾರ. ಮಗನ ಈ ಬ್ಯಾಸಿಗೀಗಾದರು ಬಂದು ಹೋಗು. ನನಗೂ ವಯಸ್ಸಾತು ಇಂದೊ-ನಾಳೇ ಟೈಮ್ ಹೆಂಗ ಬರ‍್ತದೊ ಹೇಳಾಕ ಬರಾಂಗಿಲ್ಲ, ನಿನಗ ನಿನ್ನಪ್ಪನ್ನ ನೋಡುವ ಮನಸ್ಸಲ್ಲೇನಪಾ! ಈ ಸಾರಿ ಬರ‍್ತಿ ಅನ್ನುವ ವಿಶ್ವಾಸ ನನಗದ ಬರ‍್ತಿಯಲ್ಲಪಾ!” ಎಂದು ಬರೆದ ವಾಕ್ಯ ಓದ ಮುಗಿಸಿದ ಸಿದ್ದುಗೆ ಕಳ್ಳು ಚರ‍್ರೆಂದಿತು.

ಅಪ್ಪನೇ ಎದುರು ಬಂದು ಮಾತಾಡಿಸಿದಂಗಾಯಿತು. “ಮಗಾ ಅಂದಂಗ ನಕ್ಷತ್ರ ಹೇಗಿದ್ದಾಳ. ಮೊಮ್ಮಕ್ಕಳು ಹೇಗಿದ್ದಾರ, ಅವರಿಗೆ ಕೇಳಿದೆ ಎಂದು ಹೇಳು ಮರಿಯಬೇಡ, ನಿನಗಾಗಿ ಕಾಯುತ್ತಿರುವ ನಿನ್ನ ಅಪ್ಪ” ಎಂದು ಪತ್ರದ ಒಕ್ಕಣಿಕೆ ಓದಿ ಮುಗಿಸಿದ್ದ. ಅಪ್ಪ ಯಾವಾಗೊ ಒಂದು ಸಾರಿ “ಅಪಾ ನನ್ನ ಸೊಸಿಯನ್ನು ನೋಡುವ ಭಾಗ್ಯ ನನಗ ಇನ್ನೂ ಬಂದಿಲ್ಲ, ಹೆಸರರೆ ಹೇಳಪಾ!” ಎಂದು ಕೇಳಿದ್ದ. ಆಗ “ಸ್ಟೆಲ್ಲಾ” ಎಂದು ಹೇಳಿದ್ದೆ. “ಅದೆಂತ ಹೆಸರಪಾ” ಅನ್ನುತ್ತಿದ್ದಂತೆ ಅಪಾ “ಅದರರ್ಥ “ನಕ್ಷತ್ರ” ಎಂದು ಹೇಳಿದ್ದು ನೆನಪಿಟ್ಟುಕೊಂಡು ಪತ್ರದಲ್ಲಿ ಪತ್ನಿಯ ಹೆಸರು ನಕ್ಷತ್ರ ಎಂದು ಬರೆದಿದ್ದಾನೆ. ಫೋಟೊದಲ್ಲಿ ಮಾತ್ರ ಸೊಸೆ, ಮೊಮ್ಮಕ್ಕಳನ್ನು ನೋಡಿದ್ದಾನೆ ಎನ್ನುತ್ತ ಪತ್ರಕ್ಕೆ ಮುತ್ತಿಟ್ಟು ಎದ್ದು ಮುಖ ತೊಳೆಯಲು ರೆಸ್ಟ್ ರೂಮಿಗೆ ಹೋದ. ಪಕ್ಕದಲ್ಲಿದ್ದವರು ನೋಡಿ ಅವರಿಗೆ ತಂದೆ ತಾಯಿ ಅಂದ್ರ ಎಂಥ ಆಗಾಧ ಪ್ರೀತಿ ಗೌರವ ಅಲ್ವಾ! ಎಂದು ಕಚೇರಿಯ ಎಲ್ಲರು ಪರಸ್ಪರ ಮಾತಾಡಿಕೊಂಡರು. ಅದಕ್ಕೇರಿ ಅದು ಭಾರತ, ಸಂಸ್ಕೃತಿ ಸಂಸ್ಕಾರಗಳ ಆಗರ. ಆದರss ಒಂದss ಒಂದು ಅಪವಾದ ಅಸ್ಪೃಶ್ಯತೆ. ಆ ದೇಶಕ್ಕ ಅಂಟಿಕೊಂಡದss ಅದರಿಂದ ಪಾರಾಗಲು ಭಾಳ ಮಂದಿ ವಿದೇಶಗಳಲ್ಲಿ ಬಂದು ಉಳದಬಿಡ್ತಾರ ಎನ್ನುತ್ತಿದ್ದಂತೆ That is tragedy ಎಂದು ಹೇಳಿ ತಮ್ಮ ಕೆಲಸದಲ್ಲಿ ತಲ್ಲೀನರಾದರು.

ಸಿದ್ದಪ್ಪ ಕೈ ತೊಳೆದುಕೊಂಡು ಬರುವಷ್ಟರಲ್ಲಿ ಸ್ಟೆಲ್ಲಾ ಬಂದಿದ್ದಳು.
ಸಿದ್ದಪ್ಪನಿಗೆ ಆಶ್ಚರ್ಯ “ಸ್ಟೆಲ್ಲಾ ನೀನು” ಎಂದು ಸಂತಸದಿಂದ ಹೆಂಡತಿಯನ್ನು ಅಪ್ಪಿಕೊಂಡ.
“ಅಪ್ಪನ ಪತ್ರ ಬಂದಿದೆ. ನೀನು ಮೊದಲೇ ಭಾವುಕ, ದುಃಖಸ್ತಿಯಾ! ನಿನಗೆ ಸಮಾಧಾನ ಮಾಡಬೇಕು, ನಿನ್ನ ಖುಷಿಯಲ್ಲಿ ನಾನೂ ಭಾಗಿಯಾಗಬೇಕು ಅಂತ ಬಾಸ್ ಒಪ್ಪಿಗೆ ಪಡೆದು ಬಂದೆ”.
ಸ್ಟೆಲ್ಲಾ ತಂದಿದ್ದ ಸಿಹಿ ಸಿದ್ದೊನ ಗೆಳೆಯರಿಗೆ ಹಂಚಿದಳು. “ಯಾಕೆ ಈ ಸಿಹಿ ತಿಂಡಿ” ಎಂದು ಯಾರೋ ಕೇಳಿದರು.

“ನಾನು ಮದುವೆ ಆದ ಮೇಲೆ ಮೊದಲ ಬಾರಿಗೆ ಎರಡು ದಶಕ ಕಳೆದ ಮೇಲೆ ಗಂಡನೊಂದಿಗೆ ಭಾರತಕ್ಕೆ ಹೋಗುತ್ತಿದ್ದೇನೆ” ಅಂತ ಹೇಳಿದಳು. ಎಲ್ಲರು ಹೋ ಎಂದು ಹರ್ಷವ್ಯಕ್ತಪಡಿಸಿದರು.
“ಅಪ್ಪಾ ಏನ ಬರದಿದ್ದಾರೆ”
“ಊರಿಗೆ ಬರಲು ಹೇಳಿದ್ದಾರೆ. ಮಕ್ಕಳು, ನಕ್ಷತ್ರಾಳನ್ನು ಕೇಳಿದೆ ಅಂತ ಹೇಳು ಎಂದು ಬ್ಲೆಸ್ಸಿಂಗ್ಸ್ ತಿಳಿಸಿದ್ದಾರೆ” ಸಿದ್ದಪ್ಪ ಹೇಳುತ್ತಿದ್ದಂತೆ ತಬ್ಬಲಿ ಸ್ಟೆಲ್ಲಾಳ ಕಣ್ಣುಗಳು ಒದ್ದೆಯಾದವು. ಪತಿ-ಪತ್ನಿಯರಲ್ಲಿದ್ದ Under Standing ಕಂಡು ಸಿದ್ದಪ್ಪನ ಗೆಳೆಯರೆಲ್ಲ “ಇದ್ದರೆ ಹೀಗಿರಬೇಕು ಗಂಡ ಹೆಣ್ತಿ” ಎಂದು ಇಬ್ಬರನ್ನು ಮತ್ತೊಮ್ಮೆ ಅಭಿನಂದಿಸಿದರು.

“ಬರ‍್ಲಾ ಸಿದ್ದು, ಎಂದು ಸ್ಟೆಲ್ಲಾ ಹೇಳಿ ಹೊರಟು ಹೋದಳು. ಅಪ್ಪನನ್ನು ನೋಡಬೇಕು ಅನ್ನುವ ಹಂಬಲಕ್ಕೆ ಸ್ಟೆಲ್ಲಾ ಪ್ರೀತಿ ಧಾರೆ ಎರೆದು ಪ್ರೋತ್ಸಾಹಿಸಿದ್ದು ಸಿದ್ದಪ್ಪನನ್ನು ಕುಣಿದು ಕುಪ್ಪಳಿಸುವಂತೆ ಮಾಡಿತು.

ಸಿದ್ದಪ್ಪ ಮರಳಿ ಪತ್ರ ಬರೆದು ಬೇಸಿಗೆಯಲ್ಲಿ ಬರುವುದಾಗಿ ತಿಳಿಸಿ ಪೋಸ್ಟ್ ಮಾಡಿದ. ಇಳಿಹೊತ್ತು ಆಗುತ್ತಿದ್ದಂತೆ ಸಿದ್ದಪ್ಪ ಲಗುಬಗೆಯಿಂದ ಮನೆಕಡೆ ಹೊರಟ. ರಸ್ತೆ ಮಧ್ಯದಲ್ಲಿ ಸ್ಟೆಲ್ಲಾ ಬಂದು ಸೇರಿಕೊಂಡಳು. ಹರ್ಷದಿಂದ ಮನೆ ಸೇರುತ್ತಿದ್ದಂತೆ ಮಕ್ಕಳು ಶಾಲೆಯಿಂದ ಬಂದರು. ಪತ್ರದ ವಿಷಯವನ್ನು ಹಂಚಿಕೊಂಡು ಸಂಭ್ರಮಿಸಿದರು. “ನೋಡಿ ಮಕ್ಕಳಾ, ನಿಮ್ಮ ತಾತ ಕನ್ನಡ ಹೇಗೆ ಬರದಿದ್ದಾರೆ, ಎಷ್ಟು ಸುಂದರ ಅಕ್ಷರಗಳು” ಎಂದು ಸಿದ್ದಪ್ಪ ಕನ್ನಡ ಪ್ರೇಮ ತೋರಿಸಿ “ನನ್ನಪ್ಪ ಆ ಕಾಲದಲ್ಲಿ ಅಂದ್ರೆ Post Independent ಕಾಲದಲ್ಲಿ ಮುಲ್ಕಿ ಪರೀಕ್ಷೆ ಪಾಸಾದವರು” ಎಂದು ಅಭಿಮಾನದಿಂದ ಹೇಳಿದ.


“What is the Meaning of Mulki Dad” ಎಂದು ಮಕ್ಕಳು ಕೇಳಿದವು.
“7th Standard Pass” ಎಂದು ಸ್ಟೆಲ್ಲಾ ಹೇಳಿದಳು.
“Mam We thought that it is University Degree” ಎಂದು ಕೇಳಿದವು.
“More than More than, for Knowledge” ಎಂದು ಸಿದ್ದಪ್ಪಾ ಹೇಳಿದಾಗ
“Wonder Full dad that”s why we want to see my grand father”ಎಂದು ಮಕ್ಕಳು ಹೇಳಿದವು.
ಸಿದ್ದಪ್ಪ ಪತ್ರವನ್ನು ಮತ್ತೊಮೆ ಓದಿ ಕಣ್ಣು ವದ್ದೆ ಮಾಡಿಕೊಂಡ. ಸ್ಟೆಲ್ಲಾ “Today we will go outside” ಎಂದು ಹೇಳುತ್ತಿದ್ದಂತೆ “ok” ಎಂದಳು.
“Children's go inside be ready and come fast” ಎಂದು ಸಿದ್ದಪ್ಪ ಮಕ್ಕಳನ್ನು ಹುರಿದುಂಬಿಸಿದ. ಚಳಿಗಾಲ ಮುಗಿದು ಬೇಸಿಗೆ ಸಮೀಪಿಸುತ್ತಿದ್ದಂತೆ ಪಾಸ್‌ಪೋರ್ಟ್, ವಿಸಾ ಎಲ್ಲವನ್ನು ಸಿದ್ಧಗೊಳಿಸ ಹತ್ತಿದರು. ದಿನಗಳು ಉರುಳಿದವು, ಊರಿಗೆ ಹೋಗುವ ದಿನ ಬಂದೇ ಬಿಟ್ಟಿತು.
* * *
“ಅಜ್ಜ ಅಜ್ಜ ಚಿಕ್ಕಪ್ಪನ ಪತ್ರ ಬರ‍್ಲಿಲ್ಲ” ಎಂದು ಮೊಮ್ಮಗ ಜೋರು ಧ್ವನಿಯಲ್ಲಿ ಕೇಳಿದ.
“ಅಲ್ಲ ಜೈಭೀಮ ನನಗ ಕಿವಿ ಕೇಳಸ್ತಾದಪಾ ಸಾವಕಾಸ ಮಾತಾಡು!” ಎಂದು ಹೇಳುತ್ತಿದ್ದಂತೆ
“ರಾಯಣ್ಣ, ರಾಯಣ್ಣ ತಾತಾ” ಎಂದು ಪೋಸ್ಟ್ ಮಾಸ್ಟರ್ ಕೂಗುತ್ತ ಬಂದುದನ್ನು ನೋಡುತ್ತಿದ್ದಂತೆ ರಾಯಣ್ಣನ ಮುಖ ಅರಳಿತು. ಕಾಲಲ್ಲಿ ಶಕ್ತಿ ಇಲ್ಲದಿದ್ದರೂ ಉಲ್ಲಾಸಿತನಾಗಿ ಜಿಂಕೆಯಂತೆ ಚಂಗನೆ ಎದ್ದು ನಿಂತು “ಪೋಸ್ಟ್ ಮಾಸ್ಟರ್ ರ‍್ರಿ ರ‍್ರಿ ಇಕಾಡಿ ರ‍್ರಿ, ಇಲ್ಲಿ ಕೂಡ್ರಿ ಇಲ್ಲಿ ಕೂಡ್ರಿ” ಎಂದು ಉಪಚಾರ ಮಾಡಿದ ರಾಯಣ್ಣ. “ಮಗನಿಂದ ಪತ್ರ ಬಂತೇನ್ರಿ” ಎಂದು ಅವರಸರ ಮಾಡಿ ಕೇಳಿದ.

“ಇರಿ ಇರಿ ರಾಯಣ್ಣ ತಾತಾ, ನೋಡಿ ಅಮೆರಿಕಾದಿಂದ ಬಂದ ಪತ್ರ. ಈ ಸುತ್ತ ಹಳ್ಯಾಗ ನಿಮಗ ಬಿಟ್ರ ಮತ್ತಾರಿಗೆ ಬರ‍್ತದ. ತಾತಾ! ಖರೆ ನಿನ್ನ ಮಗಾ ಎಂಥವನದಾನ, ಹೆಂಗದಾನ ನೋಡಾಕ ಇಲ್ಲಿತನಕ ಆಗಲಿಲ್ಲ. ನಿನಗೆ ಬರುವ ಪತ್ರ, ಚೆಕ್ ಕೊಡೂದಷ್ಟ ನೋಡು” ಎಂದು ಹೇಳುತ್ತ ಪೋಸ್ಟ್ ಮಾಸ್ಟರ್ ರಾಯಣ್ಣ ತಾತನ ಕೈಗೆ ಪತ್ರ ಕೊಟ್ಟ. ತಾತನ ಕಣ್ಣು ಚೆನ್ನಾಗಿ ಇದ್ದಿದ್ದರಿಂದ ತಾನೇ ಪತ್ರ ಓಪನ್ ಮಾಡಿ ಓದಿದ. ಕ್ಷಣ ಹೊತ್ತು ತಾತ ಭಾವುಕನಾದ, ಕಣ್ಣು ತುಂಬಿ ಬಂದ ನೀರು ಕಪಾಳ ಮೇಲೆ ದಳದಳ ಹರಿದವು.

“ಯಾಕ ತಾತಾ ಕಣ್ಣೀರು” ಎಂದು ಕೇಳಿದ ಪೋಸ್ಟ್ ಮಾಸ್ಟರ್ ಎದ್ದು ನಿಂತು ತಾತನ ಹೆಗಲಿಗೆ ಕೈ ಹಚ್ಚಿ ಸಮಾಧಾನ ಮಾಡಿದ. ಅಷ್ಟರಲ್ಲಿ ಮನೆಯವರೆಲ್ಲ ತಾತನನ್ನು ಸುತ್ತುವರೆದರು. “ಯಾಕ ಬಾಬಾ, ಯಾಕ ಅಳಾಕ್ಹತ್ತಿದಿ. ಅಣ್ಣ ಏನರ ಬರದಾನ” ಎಂದು ಕೇಳಿದ.

“ಏ... ಮಗಾ ಅವನಿಗೇನು ಆಗಿಲ್ಲ! ಖುಷಿ ಅಂದ್ರ ನಿಮ್ಮ ಅಣ್ಣ, ಅತ್ತಿಗಿ ಮಕ್ಕಳು ಬುದ್ಧ ಜಯಂತಿಗಿ ಬರ‍್ತಾರಪಾ” ಎಂದು ಹೇಳಿದ್ದು ಕೇಳುತ್ತಿದ್ದಂತೆ ಮಕ್ಕಳು-ಮರಿ, ಬಂಧು-ಬಳಗ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.

“ಪೋಸ್ಟ್ ಮಾಸ್ಟರ್ ಸಾಹೇಬರ ನಮ್ಮ ಮನ್ಯಾಗ ಯಾರೂ ನೌಕರಿಯವರಿಲ್ಲ. ಯಾರೂ ಓದಿಲ್ಲ. ಓದಿದ್ರು ಯಾರೂ ಬರಂಗಿಲ್ಲ ಹೋಗಂಗಿಲ್ಲ ಅಂತಿದ್ರು. ಆದರ ಈಗ ಆ ಕನಸು ನನಸಾತು ನನಸಾತು” ಎಂದು ಹೇಳಿದ ಶರಣ ಆಕಡಿಂದ ಈಕಡಿ ಈಕಡಿಂದ ಆಕಡಿ ಹೆಜ್ಜೆ ಹಾಕುತ್ತ ಒಂದೆಡೆ ನಿಲ್ಲದಾದ.

“ಏ... ಶರಣ ಈ ಚೆಕ್ ತಗೊ ಬ್ಯಾಂಕಿಗಿ ಹಾಕು, ಮಗಾ-ಸೊಸೆ-ಮೊಮ್ಮಕ್ಕಳು ಬಂದ್ರ ಇರಲಾಕ ಛಂದಾಗಿ ವ್ಯವಸ್ಥೆ ಮಾಡು” ಎಂದು ರಾಯಣ್ಣ ತಾತ ಹೇಳಿದ.

“ಆಗಲಿ ದೊಡ್ಡಪ್ಪ” ಎಂದು ಹೂಂಗುಟ್ಟಿದ. ಅಷ್ಟರಲ್ಲಿ ಶರಣ ತಾಯಿ ಚಹಾ ತಂದುಕೊಟ್ಟ.
ಪೋಸ್ಟ್ ಮಾಸ್ಟರ್ ಚಹಾ ಕುಡಿದು, “ನೋಡ ರಾಯಣ್ಣ ತಾತಾ ನಿಮ್ಮ ಮಗಾ ಬಂದಾಗ ನನಗ ಮರಿಬರ‍್ದಾ” ಎಂದು ತಾಕೀತು ಮಾಡಿ ಹೊರಡಲು ಸಿದ್ಧನಾಗುತ್ತಿದ್ದ.
“ರ‍್ರಿ ಪೋಸ್ಟ್ ಮಾಸ್ಟರ್” ಎಂದು ಜೋರಿಲೆ ಕೂಡಲು ರಾಯಣ್ಣತಾತಾ ಹೇಳಿದ.
ಜೈಭೀಮ-ಶರಣ ಇಬ್ರು ಎದ್ದು ಮನೆಯೊಳಗೆ ಹೋದ್ರು.

“ತಾತಾ ಏನೋ ಹೇಳ್ತಿನಿ ಅಂದ್ರಿ” ಎಂದು ಪೋಸ್ಟ್ ಮಾಸ್ಟರ್ ರಾಯಣ್ಣನನ್ನೆ ನೋಡಿದ.
“ಏನಿಲ್ಲ ಮಾಸ್ಟರ್ ನೀವು ಸದಾ ಕೇಳ್ತಿದ್ರಿ. ತಾತಾ ನೀವು ಏನಾಗಿದ್ರಿ, ಯಾವ ಇಲಾಖೆಯಲ್ಲಿ ಕೆಲಸಾ ಮಾಡ್ತಿದ್ರಿ, ನಿಮ್ಮ ಮಗಗ ನಾವ್ಯಾರೂ ನೋಡಿಲ್ಲ ಅಂತಿದ್ರೆಲ್ಲ, ಈಗ ಹೇಳ್ತಿನಿ ಕೇಳ್ರಿ” ಎಂದು ರಾಯಣ್ಣ ತಾತಾ ತನ್ನ ಪೂರ್ವಾಶ್ರಮದ ಬದುಕನ್ನು ನೆನಪಿಸಿಕೊಂಡ. “ನಮ್ಮ ನೆಲ ಮೊದಲSS ನಿಜಾಮನ ಆಡಳಿತದಲ್ಲಿತ್ತು. ನಮ್ಮ ಹರ‍್ಯಾರು ಮಹಾರ್ ಬೆಟಾಲಿಯನ್‌ನಲ್ಲಿ ಸೈನಿಕರಾಗಿದ್ದರು. ನಾನು ನೋಡ್ಲಾಕ ಎತ್ತರ ಧಾಡ್ಸಿ ಇದ್ದೆ. ಓದು ಬರಹ ಬರ‍್ತಿತ್ತು, ವಾರಿಗಿಯವರ ಕೂಡ ಸೇರಿಕೊಂಡು ಸೈನಿಕನಾದೆ. ರಾಮಜೀ ಸಕ್ಪಾಲ್ ಅವರ ಪ್ರಭಾವದಿಂದ ಜಾತಿ ವಿರೋಧಿ ಚಳವಳಿಯಲ್ಲಿ ನಮ್ಮ ಕುಟುಂಬದವರು ಭಾಗಿಯಾಗಿದ್ದರು. ನನಗೂ ಅದರ ಸಂಪರ್ಕ ಬಂದಿತ್ತು. ಅದೇ ಆಗ ಮದುವಿ ಆಗಿತ್ತು. ನಾನು ಮೂರು, ಆರು ತಿಂಗಳಿಗೊಮ್ಮೆ ಬಂದು ಹೋಗುತ್ತಿದ್ದೆ. ಊರವರು ನಮಗೆ ಹೆದರುತ್ತಿದ್ದರು. ಆದರೂ ನಮ್ಮ ವಿರುದ್ಧ ಕುತಂತ್ರ ಮಾಡೂದು ಬಿಟ್ಟಿರಲಿಲ್ಲ. ಜಾತಿ ಅಸ್ಪೃಶ್ಯತೆ ಆಚರಣೆ ಮಾಡುತಿದ್ದವರನ್ನು ಮೊದಲSS ಎದುರ ಹಾಕಿಕೊಂಡಿದ್ದೆವು. ರಜಾಕರ ಹಾವಳ್ಯಾಗ ನಮ್ಮ ಹಿಂದೂಗಳSS ನಮ್ಮ ಮ್ಯಾಲ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದ ಸುದ್ಧಿ ನಮ್ಮ ಕಿವಿಗೂ ಬಿದ್ದಿತ್ತು. ರಾಯಣ್ಣ ಮಹಾರ್ ಸೇನಾಪಡೆಯಲ್ಲಿದ್ದಾನ, ನಿಮ್ಮ ವಿರುದ್ಧ ಪಿತೂರಿ ಮಾಡ್ಲಿಕ್ಹತ್ಯಾನ ಎಂದು ರಜಾಕರಿಗೆ ಚುಗುಲಿ ಹೇಳೂದಟ್ಟ ಸಾಕಾಗಿತ್ತು. ರಜಾಕರ ಹಾವಳಿ ಎದ್ದಾಗ ನಮ್ಮೂರ ಡುಪ್ಲಿಕೇಟ್ ರಜಾಕರು, ಅದss ಹಿಂದೂಗಳು ನಮ್ಮ ಮನಿ-ಗುಡಿಸಲುಗಳಿಗೆ ರಾತೋರಾತ್ರಿ ಉರಿಹಚ್ಯಾರ ನೋಡ್ರಿ. ಒಡಹುಟ್ಟಿದವರು, ಹೆತ್ತವರು ಸುಟ್ಟು ಕರಕಲಾಗಿ ಬಿಟ್ರು. ಅದ್ಹೇಗೋ ನನ್ನ ಹೆಣ್ತಿ-ಮಗು ಬದುಕಿ ಉಳಿದಿದ್ರು. ಭಯಂಕರ ದುರಂತ ಆಗಿತ್ತು. ನನ್ನ ಹೆಂಡ್ತಿ ಗಾಬರಿಗೊಂಡು ಆದ ಆಘಾತದಿಂದ ಅವಳು ಹೊರಗ ಬರಲಿಲ್ಲ. ನೀ ಹ್ಯಾಂಗ ಬದುಕಿ ಉಳುದಿ ಎಂದು ಕೇಳಿದ್ರ ಮುಸ್ಲಿಂ ಕೇರಿಕಡೆ ಕೈಮಾಡುತ್ತಿದ್ದಳು. ಏನೂ ಹೇಳದೆ ನರಳಿ ನರಳಿ ಸತ್ತಳು.

ಹಳ್ಳಿಯ ಅಗಂತುಕನೊಬ್ಬ ಬಾಯಿ ತಪ್ಪಿ ರಾಯಣ್ಣನ ಹೆಂಡ್ತಿ, ಮಗನ್ನ ಕಾಪಾಡಿದವ ಮತ್ತುಲಾಲ್ ಎಂದು ಹೇಳಿದ್ದು ಕಿವಿಗೆ ಬಿದ್ದಿತು. ಇದ್ದೊಬ್ಬ ಮಗನ್ನ ಕರಕೊಂಡು ಊರು ಬಿಟ್ಟೆ, ಯಾರೂ ಅವನು ರಾಯಣ್ಣನ ಮಗಾ ಅನ್ನಬಾರದು, ಗುರುತೇ ಹಿಡಿಬರ‍್ದು ಎಂದು ಗೌಪ್ಯವಾಗಿ ಮಗನಿಗೆ ಹೊರಗಡೆ ಓದಿಸಿದೆ. ಅವನು ದೊಡ್ಡವನಾಗಿ ವಿದೇಶಕ್ಕ ಓದಲು ಹೋದ ಮ್ಯಾಲ ಎಲ್ಲಿರಬೇಕು ಎಂದು ಯೋಚಿಸಿ ದೃಢನಿರ್ಧಾರ ಮಾಡಿ ನಾನು ಊರು ಸೇರಿದೆ. ಹುಚ್ಚನಂಗ ನನ್ನ ಮಗಾ ಹಂಗಿದಾನ, ಹಿಂಗಿದಾನ, ಅಮೆರಿಕದಾಗಿದ್ದಾನ ಎಂದು ಬಡಬಡಿಸುತ್ತ ಇದ್ದೆ. ಇದನ್ನು ಯಾರೂ ನಂಬಿರಲಿಲ್ಲ! ತಲ್ಯಾಗೂ ಹಾಕ್ಕೊಂಡಿರಲಿಲ್ಲ. ಮಗ ಎಂದಿದ್ದರೂ ಒಂದು ದಿನ ಬಂದೇ ಬರ‍್ತಾನ ಎನ್ನುವ ಭರವಸೆ ಇತ್ತು. ಅವನು ಅಲ್ಲೇ ಮದುವಿಯಾದ, ಅವನಿಗೆ ಮಕ್ಕಳೂ ಆದವು. ಮಗ ಸೊಸಿ ಮೊಮ್ಮಕ್ಕಳು ಬರಲಿ ಎಂದು ತಪಾ ಮಾಡುತ್ತ ಬದುಕಿದ್ದೆ. ಇದು ನನ್ನ ದುರಂತ ಕಥೆ ಪೋಸ್ಟ್ ಮಾಸ್ಟರ್. ನನ್ನ ಪತ್ರಕ್ಕ ಬೆಲೆ ಕೊಟ್ಟು ಮಗಾ ಈಗ ಬರ‍್ಲಿಕ್ಹತ್ಯಾನ” ಎಂದು ರಾಯಣ್ಣ ದುಃಖಿಸಿದ.
“ಇರಲಿ ತಾತಾ ನೀನೊಬ್ಬ ಧೀರ. ಆದ್ರ ಮಗನ್ನ ಯಾಕ ಹೊರಗಿನ ದೇಶಾದಾಗ ಇಟ್ಟಿದಿ ಅನ್ನೂದ ಅರ್ಥ ಆಗಿರಲಿಲ್ಲ.”

“ನೋಡ್ರಿ ಪೋಸ್ಟ್ ಮಾಸ್ಟರ್ ಸಾವಿಗೆ ಎಂದೂ ಹೆದರುವುದಿಲ್ಲ. ಆದರss ಜಾತಿ ಅಪಮಾನಕ್ಕ ತುಂಬಾ ಹೆದರಿಕಿ ಆಗ್ತದ. ಬಸವಣ್ಣ ಹುಟ್ಟಿದ ನಾಡಿನಲ್ಲಿ ದಿನ ಬೆಳಗಾದ್ರ ಸಾಕು ನೀ ಯಾವ ಜಾತಿ. ನಮ್ಮದು ಮೇಲಿನ ಜಾತಿ. ನಿಮ್ಮದು ಕೆಳಗಿನ ಜಾತಿ ಇದೇ ತಕರಾರದಲ್ಲೇ ಜೀವನ ಕಳೆಯುತ್ತ ಬಂದೆವು” ಮಾಸ್ಟರ್ ಸಾಬ್ರೆ ಎಂದು ರಾಯಣ್ಣ ಇಲ್ಲಿಯ ಜಾತಿ ವ್ಯವಸ್ಥೆ ಬಗ್ಗೆ ಕೆಂಡಕಾರಿದ.
“ನೀ ಹೇಳುದು ಸರಿಯದ ರಾಯಣ್ಣ ತಾತಾ” ಎನ್ನುತ್ತ ಪೋಸ್ಟ್ ಮಾಸ್ಟರ್ ಆಕಾಡಿ ಇಕಾಡಿ ನೋಡಿದ.

ಬಿಸಲಂದ್ರ ಬಿಸಲು ಎಲ್ಲರೂ ಗುಡಿಸಲು-ಮನೆ ಸೇರಿದ್ರು. ನಾಯಿ-ಬೆಕ್ಕು ಪಕ್ಷಿಗಳು ಎಲ್ಲ ಮರದ ನೆರಳು ಆಶ್ರಯಿಸಿದ್ದವು. ಯಾರೂ ಇಲ್ಲದ್ದು ಖಾತ್ರಿ ಪಡಿಸಿಕೊಂಡ ಪೋಸ್ಟ್ ಮಾಸ್ಟರ್ “ನಾನು ನಿಮ್ಮವನss ಯಾರಿಗರೆ ಗೊತ್ತಾದೀತು ಎಂದು ಹೇಳಿಲ್ಲ. ಯಾಕಂದ್ರ ಮನಿ ಬಾಡಿಗಿ ಕೊಡಂಗಿಲ್ಲ! ಕುಡಿಯಾಕ ನೀರೂ ಕೊಡಂಗಿಲ್ಲ. ಈ ಜಾತಿ ಮರಣ ಶಾಸನ ಇದ್ದಂಗ, ಏನ ಮಾಡ್ತಿ ತಾತಾ. ನಿನ್ನ ನಿರ್ಧಾರ ಸರಿ ಅದ, ಬರ‍್ಲಿ ಬರ‍್ತಿನಿ ಕಾಗದ ಪತ್ರಗಳು ಹಂಚಬೇಕು” ಎಂದು ಎದ್ದು ಹೋಗುತ್ತ ನಿಮ್ಮ ಮಗ ಬಂದಾಗ ಕರೀರಿ ಮರಿಬ್ಯಾಡ್ರಿ ನಾನು ಬರುತ್ತೀನಿ ಎಂದು ಹೇಳಿ ಹೋದ.
* * *
ಸಿದ್ದಪ್ಪ, ಸ್ಟೆಲ್ಲಾ ಎಲ್ಲ ಸಿದ್ಧತೆ ಮಾಡಿಕೊಂಡು ಇನ್ನೇನು ಒಂದೆರಡು ದಿನದಲ್ಲಿ ಹೊರಡಬೇಕು. ಸ್ಟೆಲ್ಲಾ “ಏನ್ರಿ ಈ ಪುಸ್ತಕ ಬೇಕಾ” ಎಂದು ಪತಿ ಸಿದ್ದಪ್ಪಗ ಕೇಳಿದಳು.

“ಅದಾ ನಮ್ಮೂರಿನ ಕಥೆಯ ಪುಸ್ತಕ. ನಮ್ಮ ಹಿರಿಯಣ್ಣ ಬರೆದಾನ.Biopic of my village and my family ನಮ್ಮ ಸಂಬಂಧಿ, ಅವರೀಗ ದೊಡ್ಡ ಲೇಖಕ, ಅವರನ್ನ ನಿನಗೆ ಭೇಟಿ ಮಾಡಸ್ತೀನಿ. ನಾನಿಷ್ಟು ಓದಿ ಇಲ್ಲಿಗೆ ಬರಲು ಅವರss ನನಗ ಪ್ರೇರಣೆ. ಅವರು ಪ್ರೊಫೆಸರ್ ಆಗಿದ್ದಾರ. ಆಗಾಗ ಪತ್ರ ಬರಿತಾರಲ್ಲ ಅವರ” ಎಂದು ಸ್ಟೆಲ್ಲಾಳ ಕೈಯಿಂದ ಪುಸ್ತಕ ತೆಗೆದುಕೊಂಡು “ವಿಮಾನದಲ್ಲಿ ಓದಾಕ ಬೇಕು” ಎಂದು ಜೋಪಾನದಿಂದ ಹೆಗಲ ಬ್ಯಾಗಿಗೆ ಸೇರಿಸಿದ.

ನ್ಯೂಯಾರ್ಕಿನಿಂದ ವಿಮಾನ ಹತ್ತಿದ ಸಿದ್ದಪ್ಪನ ಕುಟುಂಬ ದೆಹಲಿ, ದೆಹಲಿಯಿಂದ ಊರಿಗೆ ಬರಬೇಕಾದ್ರೆ ಎರಡು-ಮೂರು ದಿನಗಳು ಕಳೆದವು. ರಾಯಣ್ಣ ಮಗನ ಬರುವಿಕೆಗಾಗಿ ಕಾಯುತ್ತಿದ್ದ. ಮಗಾ ಬಂದು ಅಪಾ ನೀನು ಸೈನಿಕನಾದವನು ಹಿಂಗಿದ್ದಿಯಲ್ಲ ಅಂತ ಏನಾದ್ರು ಅಂದಗಿಂದಾನು ಎಂದು ಬಿಟ್ಟಿದ್ದ ದಾಡಿ ತೆಗೆದು, ಕಟಿಂಗ್ ಮಾಡಿಕೊಂಡಿದ್ದ. ನಿತ್ಯ ಹಾಕೊಳ್ಳುತ್ತಿದ್ದ ಲಾಂಗ್ ಕೋಟು ತೆಗೆದು ಬಿಳಿ ಬಟ್ಟೆ ಧರಿಸಿ, ಶರಣ-ರಾಯಣ್ಣ ಇಬ್ಬರೂ ಕಾರು ತಗೊಂಡು ಮಗ, ಸೊಸಿ ಮೊಮ್ಮಕ್ಕಳನ್ನು ಕರೆಯಲು ರೈಲು ನಿಲ್ದಾಣಕ್ಕೆ ಹೊರಟರು. ದೊಡ್ಡವನಾದ ಮೇಲೆ ಸಿದ್ದಪ್ಪನನ್ನು ಯಾರೂ ನೋಡಿರಲಿಲ್ಲ. ಹೀಗಾಗಿ ರಾಯಣ್ಣ “ನಾನ... ಬರ‍್ತಿನಿ ನಡೀಪಾ” ಎಂದು ಮಗನಿಗಾಗಿ ನಿಲ್ದಾಣದಲ್ಲಿ ಬಂದು ರೈಲು ಬರುವುದನ್ನೇ ಕಾಯುತ್ತ ನಿಂತಿದ್ದ. ರೈಲು ಬಂದಿತು, ಎಲ್ಲರೂ ಇಳಿಯುತ್ತಿದ್ದಂತೆ ಸಿದ್ಧ, ಸ್ಟೆಲ್ಲಾ ಮಕ್ಕಳು ಇಳಿದರು. ಇಂಗ್ಲಿಷ ಹೆಣ್ಣು ಮಗಳನ್ನು ನೋಡುತ್ತಿದ್ದಂತೆ ಜನರೆಲ್ಲ ಕಕ್ಕಾಬಿಕ್ಕಿಯಾದರು. ಸಿದ್ದಣ್ಣ ಬಂದು ಅಪ್ಪನ ಪಾದ ಮುಟ್ಟಿ ನಮಸ್ಕರಿಸಿದ. ಸ್ಟೆಲ್ಲಾ ಮಕ್ಕಳು ರಾಯಣ್ಣನನ್ನು ಅಪ್ಪಿಕೊಂಡರು. “ಶರಣ ಬಾಯಿಲ್ಲಿ. ನೋಡು ಸಿದ್ದ ಇವನು ನಿನ್ನ ಚಿಕ್ಕಪ್ಪನ ಮಗಾ! ನಾ ಇವನ ಜೊತೇನ ಇರುದು. ರೀತಿಲೆ ನಿನ್ನ ತಮ್ಮ” ಎನ್ನುತ್ತಿದ್ದಂತೆ ಇಬ್ಬರೂ ಅಲಾಬಲಾ ತಗೊಂಡು ಕಾರು ಹತ್ತಿದರು.

ಕೇರಿ ಹತ್ತಿರ ಬರುತ್ತಿದ್ದಂತೆ ಬಾಜಾ-ಭಜಂತ್ರಿಯವರು ವಾದ್ಯ ಘೋಷಗಳನ್ನು ಮೊಳಗಿಸಿದರು. ಊರು ಕೇರಿಯವರೆಲ್ಲ ಬಾಯಿ ಮೇಲೆ ಬೆರಳಿಟ್ಟುಕೊಂಡು ಗಾಬರಿಯಾಗಿ ನೋಡುತ್ತ “ರಾಯಣ್ಣನ ಮಗಾ ಅಮೆರಿಕಾದಲ್ಲಿದ್ನಂತ. ಸೊಸಿನು ಅಮೆರಿಕಾದವಳು ನೋಡಪಾ ಎಟ್ಟ ಕೆಂಪಗಿದ್ದಾಳ. ಮಕ್ಕಳ ಬೆಳ್ಳಗಂದ್ರ ಬೆಳ್ಳಗ ಅದಾವು, ರಾಯಣ್ಣನ ತಪಾ ನೋಡು, ತಿಪ್ಪಿಸೆಣಿ ಹರಿತಾದಂತ ಮನಷ್ಯಾನ ಸೆಣಿ ಹರೆಂಗಿಲ್ಲೇನು? ಹಂಗss ರಾಯಣ್ಣನ ಮಗಾ ಬರ‍್ಲಿಲ್ಲ ಅನ್ನುವ ಬರ ಹಿಂದಾತು” ಎಂದು ಪಕ್ಕದ ರಸ್ತೆಯಲ್ಲಿ ನಿಂತವರು ಮಾತಾಡುತ್ತಿದ್ದರು. ರಾಯಣ್ಣನ ಮಗಾ, ಸೊಸಿ, ಮೊಮ್ಮಕ್ಕಳು ಅಮೆರಿಕಾದಿಂದ ಬಂದಾರ ಎನ್ನುವ ಸುದ್ಧಿ ಊರಲ್ಲ ಹರಡಿ, ಹಂಗss ಬಂದು ಮಾತಾಡಿಸಿ ಹೋಗುವವರು ಹೆಚ್ಚಾದರು.

“ಅಪಾ ಅಮ್ಮನ ಸಮಾಧಿಗಿ ಹೋಗಿ ನಮಸ್ಕಾರ ಮಾಡಬೇಕು ಆಶೀರ್ವಾದ ಪಡಿಬೇಕು” ಎಂದು ಸಿದ್ದಪ್ಪ ಹೇಳತ್ತಿದ್ದಂತೆ
“ಯಣ್ಣಾ ಅಗಲ, ಕಾಯಿ, ಪೂಜೆಗೆ ಏನೇನುಬೇಕು ಎಲ್ಲಾ ಸಾಮಾನುಗಳನ್ನು ರಡಿ ಮಾಡಿನಿ ನಡಿರಿ ಹೋಗಾನು” ಎಂದು ಶರಣ ಹೇಳಿದ. ಎಲ್ಲರೂ ಕುಟುಂಬ ಸಮೇತ ಹೋಗಿ ಪೂಜೆ ಸಲ್ಲಿಸಿ ಬಂದರು.
ಸಿದ್ದಪ್ಪನ ಮಕ್ಕಳು ತಾತನನ್ನು ಬಿಟ್ಟು ದೂರ ಸರಿಯದಾದರು. ಸ್ಟೆಲ್ಲಾ ತನ್ನ ಹರಕ ಮುರಕ ಕನ್ನಡದಲ್ಲಿ ಮನೆಯವರನ್ನು ಮಾತಾಡಿಸುತ್ತ ಸ್ನೇಹ ಬೆಳೆಸುತ್ತಿದ್ದಳು. ರಾಯಣ್ಣ ಪತ್ರದಲ್ಲಿ ಯರ‍್ಯಾರಿಗೆ ಏನೇನ ಬೇಕು ಮೊದಲss ಬರೆದು ತಿಳಿಸಿದ್ದ. ಅದಕ್ಕ ಅಮೆರಿಕಾದಿಂದ ಏನೇನು ತಂದಿದ್ರು ಅದನ್ನೆಲ್ಲ ಎಲ್ಲರಿಗೂ ಪ್ರೀತಿಯಿಂದ ಕೊಟ್ಟರು. ಸಂಜೆಯಾಯಿತು, ಮನೆಯಲ್ಲಿ ಸಂಭ್ರಮ ಸಡಗರಕ್ಕೆ ಮೇರೆಯೇ ಇರಲಿಲ್ಲ. ಕತ್ತಲಾಗ್ತಾ ಬಂದಿದ್ದರಿಂದ ಊಟ ಮಾಡಿ ಮಲಗಲು ಸಿದ್ಧರಾಗುತ್ತಿದ್ದರು. ಸಿದ್ದಪ್ಪನಿಗೆ ಮಾತ್ರ ನಿದ್ದೆ ಬರುತ್ತಿಲ್ಲ. ಮಕ್ಕಳು ಸ್ಟೆಲ್ಲಾ ಹೈರಾಣಾಗಿದ್ದರಿಂದ ಮಲಗಲು ಅಣಿಯಾದರು.
ಅಪ್ಪನ ಪಕ್ಕದಲ್ಲಿ ಕೂತ ಸಿದ್ದಪ್ಪ “ಅಪಾ ನಮ್ಮ ಊರು-ಕೇರಿ ಮೊದಲಿನಂಗಿಲ್ಲ. ತುಂಬಾ ಬದಲಾಗಿದೆಯಲ್ಲ!” ಎಂದು ಕೇಳಿದ. ತಂದೆ ಮಗನ ನಡುವಿನ ಸಂವಾದ ಕೇಳಲು ಶರಣ ಬಂದು ಸೇರಿಕೊಂಡ.
“ಮಗಾ ನೀನು ಓದು ಮುಗಿಸಿ ವಿದೇಶಕ್ಕ ಹೋಗಿ ಇಪ್ಪತ್ತ ವರ್ಷಗಳ ಮ್ಯಾಲಾತು. ಹ್ಯಾಂಗ ಬದಲಾಗಂಗಿಲ್ಲ. ಬದಲಾವಣೆ ಜಗದ ನಿಯಮಲ್ಲೇನಪಾ. ಹಂಗ ಊರು ಕೇರಿ ಬದಲಾಗ್ಯಾವ. ಅಪಾ ಹೊಸದಂದ್ರ ಊರ ಸಾಲಿ ಮುಂದ ಬಸವಣ್ಣ ಮೂರ್ತಿ ಆಗ್ಯಾದ. ಕೇರಿಯ ಸೇದುಬಾವಿ ಮೇಲ ಬಾಬಾಸಾಹೇಬರ ಮೂರ್ತಿ ಕುಂಡ್ರಸ್ಯಾರ. ಬುದ್ಧವಿಹಾರ ನಿರ್ಮಾಣ ಮಾಡ್ಯಾರ. ಇದರಿಂದಾಗಿ ಊರಾಗ ಹೈಸ್ಕೂಲು, ಕಾಲೇಜು ಎಲ್ಲ ಆಗ್ಯಾವಲ್ಲಪಾ! ಈಗೆಲ್ಲ ಗಾಂಜಿ ಸೇದವರಿಲ್ಲ, ಇಸ್ಪೇಟ್ ಆಡವರಿಲ್ಲ” ಎಂದು ರಾಯಣ್ಣ ಮಗನಿಗೆ ಹೇಳುತ್ತಿದ್ದ.
“ಇದೆಲ್ಲ ಹೇಗಪಾ” ಎಂದು ಸಿದ್ದಪ್ಪ ಅಪ್ಪನನ್ನು ಕೇಳಿದ.
“ಶರಣ ಒಂದೀಟು ನೀರು ತಾತಾ” ಎಂದು ಹೇಳುತ್ತಿದ್ದಂತೆ ಶರಣ ಹೋಗಿ ನೀರು ತಂದು ಕೊಟ್ಟ.
ನೀರು ಕುಡಿದ ರಾಯಣ್ಣ “ಮಗಾ ಇದೆಲ್ಲ ನಮ್ಮ ದೊಡ್ಡಣ್ಣನ ಮಗ ಪ್ರೊಫೆಸರ್ ಸಾಹೇಬರು ಅವರ ಗೆಳ್ಯಾರು ಮಾಡ್ಯಾರ. ಅಷ್ಟೆಲ್ಲ ಓದಿ ಬರದವರು ಮಾಡ್ದೆ ಇರತಾರೇನಪಾ! ಅಡವ್ಯಾಗ ಆಶ್ರಮಸಾಲಿ ತಂದಾರ”
“ಹೌದಪಾ...” ಎಂದು ಆಶ್ಚರ್ಯ ಚಕಿತನಾದ.
“ಅಲ್ಲಿನು ಅಂಗನವಾಡಿ ಮಾಡಸ್ಯಾರ” ಎಂದು ರಾಯಣ್ಣ ಹೇಳುತ್ತಿದ್ದಂತೆ,
“ಪ್ರೊಫೆಸರ್ ಸಾಹೇಬರು ಕೊಟಗೀಟ ಹಾಕ್ಕೊಂಡ ಬಂದ್ರ ನೋಡಬೇಕ. ನೋಡಬೇಕ ಅನಸ್ತದ ಯಣ್ಣಾ” ಎಂದು ಶರಣ ನಡೂಕ ಹೇಳಿದ.
“ಮಾತಾಡಾಕ ನಿಂತಂದ್ರ ಬಾಬಾಸಾಹೇಬರನ್ನು ಎದುರಿಗಿ ತಂದ ನಿಲ್ಲಿಸಿ ಬಿಡ್ತಾನ. ಸುತ್ತಮುತ್ತ ಅವನ್ಹಂಗ ಮಾತಾಡವ್ರು ಯಾರೂ ಇಲ್ಲ ಮಗಾ” ಎಂದು ರಾಯಣ್ಣ ಸಂಭ್ರಮಿಸಿದ.
“ಅದೊಂದು ದೊಡ್ಡ ಕತಿ ಐತಿ ಮಗಾ ಹೇಳಬೇಕಂದ್ರ ಟೈಮ್ ಸಾಲಾಂಗಿಲ್ಲ. ನೀ ಹ್ಯಾಂಗೂ ಹೈರಾಣ ಆಗಿಬಂದೀದಿ ಮಲಗು ನಾಳಿಗಿ ಹೇಳ್ತಿನಿ” ಎಂದು ರಾಯಣ್ಣ ಸಾಗ ಹಾಕಲು ನೋಡಿದ.
“ಇಲ್ಲಪ್ಪ ಈಗ ಹೇಳು, ನಾಳಿಗಿ ಬೇಕಿದ್ರ ಅವರು ಏನೇನು ಮಾಡ್ಯಾರ ಅದೆಲ್ಲಾ ನೋಡಿ ಬರೂನು” ಎಂದು ಬಲವಂತ ಮಾಡಿದ.
“ಆಗಲಿ ಹೇಳ್ತಿನಪಾ. ಶರಣ ನಿಮ್ಮಣ್ಣಗ ಒಂದ ತಲಿದಿಂಬು ತಂದು ಕೊಡು” ಎಂದು ರಾಯಣ್ಣ ಕೈಸನ್ನೆ ಮಾಡಿದ.
“ಬೇಡಪ್ಪಾ, ಏss ತಮಾ ತರಬ್ಯಾಡ” ಎಂದು ಹೇಳಿ
“ನಾ ನಿನ್ನ ಪಕ್ಕದಲ್ಲೇ ಕೂತು ಕೇಳ್ತಿನಿ ಹೇಳು” ಎಂದು ಸಿದ್ದಪ್ಪ ರೆಡಿಯಾಗಿ ಅಪ್ಪನ ಪಕ್ಕದಲ್ಲಿ ಹಂಬಲಿಸಿ ಕುಳಿತ.
“ಸಾಹೇಬ್ ಓದಿದ ರೀತಿ, ಬರೆದದ್ದು ನೋಡಿದ್ರ ಆಶ್ವರ್ಯ ಆಗ್ತದ. ಎಂದೇ ಬರ‍್ಲಿ ಯಾವಾಗss ಬರ‍್ಲಿ ಊರು-ಕೇರಿ ಜನರನ್ನು ಮಾತಾಡಿಸಿಕೊಂಡು ಹೋಗುದು ಸಾಹೇಬ್‌ನ ಗುಣ. ಊರವರು ಯಾರೇ ಅವರತ್ತ ಹೋದ್ರ ಏಟಿಲ್ಲೇಟು ಸಹಾಯ ಮಾಡ್ತಾನ. ಎಲ್ಲೇರೆ ಭಾಷಣ ಇತ್ತಂದ್ರ ನಮಗೆಲ್ಲ ಬರಾಕ ಹೇಳ್ತಿದ್ದ. ಅವರಪ್ಪ ಅಂದ್ರ ನಿಮ್ಮ ದೊಡ್ಡಪ್ಪ, ನಾನು ತಪ್ಪದೇ ಹೋಗಿ ಬರ‍್ತಿದ್ದೀವು. ಅಣ್ಣ ಮಗನ ಭಾಷಣಾಕೇಳಿ ಖುಷಿ ಖುಷಿಯಿಂದ ಅಳ್ತಿದ್ದ. ಅವನಂಥ ಖುಷಿ ಮನಷ್ಯಾನss ನಾ ಎಲ್ಲಿ ನೋಡಿಲ್ಲ. ನೀನು ಅಮೆರಿಕಾಕ್ಕ ಹೋದ ಮ್ಯಾಲ ಬಾರದ ಲೋಕಕ್ಕ ಹೋಗಿ ಬಿಟ್ಟ. ಏನ್ ಮಾಡೂದು” ಎಂದು ರಾಯಣ್ಣ ಕಣ್ಣು ಪಿಳಕಿಸುತ್ತಿದ್ದಂತೆ ಕಣ್ಣು ರೆಪ್ಪೆಯ ಅಂಕೆಗೆ ಸಿಗದ ನೀರಹನಿ ಕಪಾಳ ಸೇರಿತು.

ನಂದು ನಮ್ಮಣ್ಣುಂದು ಒಂದೇ ಭಾವ. ಅವನ ಹಾದಿ ತುಳದss ನಿನಗೆ ಓದ್ಸಿದೆ. ಅಣ್ಣ ಹೋದ ಮ್ಯಾಲ ಮಕ್ಕಳೆಲ್ಲ ಕೂಡಿ ಸಂಸಾರ ಛಂದ್ ಮಾಡಕೋತು ಬಂದ್ರು. ಒಬ್ಬಲ್ಲ ಇಬ್ರು ಪಂಚಾಯತಿ ಅಧ್ಯಕ್ಷರಾದರು. ಸಾಹೇಬನ ಹೆಣ್ತಿ ನಿಮ್ಮ ಅತ್ತಿಗಿ ಲಲಿತಮ್ಮ ತಾಲೂಕ ಪಂಚಾಯಿತಿ ಅಧ್ಯಕ್ಷಳಾದಳು. ಸಾಹೇಬ್ ಅಪ್ಪ ಹಾಕಿಕೊಟ್ಟ ಹಾದಿ ತುಳಿಬೇಕಂದ್ರ ತುಳಿಬೇಕು. ಕೂಡಿದ್ದ ಒಟ್ಟು ಸಂಸಾರ, ಬಂಧು ಬಳಗ, ಊರು ಕೇರಿ ಮ್ಯಾಲ ನಜರ ಇಟಗೋತ ಬಂದ. ಸಾವಿರ ವರ್ಷಾದ್ರ ಸಾವತಪ್ಪಿಲ್ಲ, ನೂರು ವರ್ಷಾದ್ರು ಬ್ಯಾರಿ ತಪ್ಪಿಲ್ಲಂತ ಹರ‍್ಯಾರು ಹೇಳ್ಯಾರ. ಹಂಗ ಅಣ್ಣನ ಮಕ್ಕಳ ನಡುವಿನ ಅನೇಕಾನೇಕ ಕಾರಣಗಳಿಂದ ಸಂಸಾರ ಒಡದು ಒಂದ ಒಲಿ ಹೋಗಿ ನಾಲ್ಕಾರು ಒಲಿ ಆಗಿ ಬ್ಯಾರಿ ಆದ್ರು” ಏನ್ನುತ್ತಿದ್ದಂತೆ,
“ಅಪಾ ಈಗ ಅಣ್ಣಗೋಳು ಕೂಡಿಲ್ಲಲ” ಎಂದು ಸಿದ್ದಪ್ಪ ಗಾಬರಿಯಿಂದ ಕೇಳಿ ಖಾತರಿಪಡಿಸಿಕೊಂಡ.
“ಬ್ಯಾರೆಂದ್ರ ಬ್ಯಾರಿ ಆಗ್ಯಾರ. ಆದರೂ ಸಾಹೇಬರು ಯಾರಿಗೂ ಕೈ ಬಿಟ್ಟಿಲ್ಲ. ಸಾಹೇಬರ ಚಿಕ್ಕ ತಮ್ಮ ಪ್ರೊಫಸರ್ ಇದಾನ. ದೊಡ್ಡಣ್ಣನ ಮಗಾನು ಪ್ರೊಫೆಸರ್ ಅದಾನ. ಏನೋ ಅಂತಾರಲ್ಲ ಲಕ್ಷ್ಮಿ ಕಾಲ ಮುರಕೊಂಡು ಬಿದ್ದಾಳ ಅಂದಂಗ. ಅಕ್ಷರ ಅಕ್ಷರದೇವತೆ ಅಂದ್ರ ಜೈಭೀಮನ ಅವರ ಮನಿ ಸರ‍್ಯಾನ ನೋಡಪಾ!” ಎಂದು ರಾಯಣ್ಣ ಹೇಳಿ ನೀರು ಕುಡುದು ಎಲಿ ಅಡಕಿ ಹಾಕಿಕೊಂಡ. “ಅಣ್ಣ ತಮ್ರು ಬ್ಯಾರಿ ಆಗಾಕ ನಿಂತಾಗ ಸಾಹೇಬ್, ಸಾಹೇಬನ ಗೆಳ್ಯಾರು ಬಂದಿದ್ರು, ಮಾಡುದೇನು? ನಮ್ಮ ಮನೆತನದ ನ್ಯಾಯಾ ಹೊರಗಿನವರು ಬಂದು ಎಂದೂ ಹರದಿರಲಿಲ್ಲ. ಹೊರಗಿನವರು ಬಂದು ನ್ಯಾಯಾ ಮಾಡಾದು ಸಾಹೇಬಗ ತುಸು ಕಸಿವಿಸಿ ಆತು. ಕಾಲಬಂದದ ಏನಾಗ್ತದ ಆಗಲಿ ಎಂದು ಯೋಚಿಸುತ್ತ ಕೂಸಿನಂಗ ಕೂತಿದ್ದ. ಹರ‍್ಯಾರು, ದೈವದವರು ‘ಸಾಹೇಬರ ಹೊಲ ಮನಿ ಎಲ್ಲವೂ ಏಳು ಪಾಲಾ ಮಾಡಬೇಕಲ್ರಿ’ ಎಂದು ಕೇಳಿದರು.

ಸಾಹೇಬ್ ಎದ್ದು ನಿಂತು ‘ತಂದಿಗಿ ಮಾತ ಕೊಟ್ಟಿನಿ ಅದರಂತೆ ನಡಿಬೇಕು. ಅಪ್ಪಗ ಕೊಟ್ಟ ಮಾತು ತಪ್ಪಬಾರದು. ನನಗ ಬಿಟ್ಟು ಆರು ಭಾಗ ಮಾಡ್ರಿ’ ಎಂದು ದೈವದೆದುರಿಗೆ ವಿನಂತಿ ಮಾಡಿಕೊಂಡ. ಸಣ್ಣ ತಮ್ಮನು ಎದ್ದು ನಿಂತು ನನಗೂ ಬಿಡ್ರಿ ಐದು ಭಾಗ ಮಾಡ್ರಿ ಎಂದು ಹೇಳಿದ. ನೋಡ್ರಿ ಸಾಹೇಬರ, ಊರಿಗಿ ಬಂದು ಹೋಗಿ ಮಾಡಬೇಕಾಗ್ತದ, ಕಳ್ಳು-ಬಳ್ಳಿ ಬೇಕಬೇಕು. ಅಂದಂಗ ನಮಗ ಬಿಟ್ಟರ ಬಿಡಬಹುದು ನಿಮಗ ಬಿಡ್ತದೇನು? ಜಗದ ನಿಯಮದ ನೋಡ್ರಿ! ಒಂದೀಟು ಜಮೀನಪಮೀನ ಬರ‍್ಲಿ ಎನ್ನುತ್ತಿದ್ದಂತೆ “ಇಲ್ಲ ಇಲ್ಲ” ಎಂದು ನಿರಾಕರಿಸಿದ ಸಾಹೇಬ್ ಕೈಮುಗಿದ. ನಿರ್ವಾಹ ಇಲ್ಲದಕ ದೈವದವರು ಏಳು ಭಾಗ ಮಾಡುವ ಬದಲು ಐದು ಭಾಗ ಮಾಡಿದ್ರು. ‘ಇನ್ನೊಂದಿಷ್ಟು ಕಾಲ ಕೂಡಿ ಹೋಗಿದ್ರ ಛಂದಾತೀತು’ ಎಂದು ಮರುಗುತ್ತ ಗೆಳೆಯರೊಂದಿಗೆ ಕಾರು ಹತ್ತುವಾಗ ‘ನೋಡ ರಾಯಣ್ಣ ಕಾಕಾ ತಾಯಿ ಇರುತನ ಬರಬೇಕಲ್ಲ. ಹಂಗss ಒಡಹುಟ್ಟಿದವರು ಕರದ್ರ ಬರ‍್ತೀನಿ, ಕರೀದಿದ್ರೂ ಬರ‍್ತೀನಿ ಯಾಕಂದ್ರ ಆಂಗಾಲಿಗಿ ಹೇಸಿಗಿಲ್ಲ ಕಳ್ಳಿಗಿ ನಾಚಿಗಿಲ್ಲ ಅಂತಾರಲ್ಲ ಹಂಗss ಬರೂದು ಹೋಗುದಪಾ’ ಎಂದು ಮತ್ತೊಮ್ಮೆ ಕೈಬೀಸಿ ಸಾಹೇಬ್ ನಡೆದ.

ದೈವದವರು ರಾಯಣ್ಣ ತಾತಾ ಭಾಳಮಂದಿ ನೌಕರಿಗಿ ಹೋಗ್ಯಾರ. ಯಾರೂ ಹೊಲಮನಿ ಬಿಟ್ಟಕೊಟ್ಟಿಲ್ಲ, ಬಿಗೆ, ಗುಂಟೆ ಜಮೀನಿದ್ರೂ ಹಂಚಗೊಂಡು ಹೋಗ್ಯಾರ. ಆದರ, ಸಾಹೇಬ್ ಮಾತ್ರ ಅಪ್ಪಗ ಹುಟ್ಟಿದ ಮಗಾ ನೋಡ್ರಿ, ಮಾತಿಗ ತಕ್ಕಂತೆ ನಡೆದಕೊಂಡ ನೋಡ್ರಿ ಎಂದು ಮಾತನಾಡುತ್ತ ಜನ ಹೊಂಟು ಹೋದರು. ತಾಯಿ ಅಂಬವ್ವ ಹಲುಬಿದಳು. ಸಾಲಿ ಮಕ್ಕಳು ಬರಾದು ಹೋಗಾದು ಹ್ಯಾಂಗ, ಅವರು ನಿಮಗೇನು ಮಾಡಿಲ್ಲೇನು? ಎಂದು ಸಣ್ಣ ಮಕ್ಕಳ ಜೀವಾ ತಿಂದಳು. ‘ಅವರಿಬ್ರು ಭ್ಯಾಡಂದ್ರು ಮುತ್ಯಾನ ಥಡಗಿಕಡಿ ಬಿಡಗಾವಲಿ ಅಚ್ಚಿಕೀನ ನಾಲ್ಕೆಕರೆ ಹೊಲ ಅವರಿಗಿ ಮಾಡಾನೇಳು’ ಎಂದು ಮಡ್ಯಾರ. ಅದನ್ನೂ ಬಡತಂಗಿಗಿ ಕೊಡ್ರಿ ಎಂದು ಸಾಹೇಬ್ ಹೇಳಿದ್ದ. ತಮ್ಮಗೋಳು ಕೇಳಲಿಲ್ಲ. ಸಣ್ಣ ತಮ್ಮನ ಹೆರ‍್ಗೆ ಮಾಡ್ಯಾರ. ‘ಅಣ್ಣಾ ಸಾಹೇಬರದು ದೊಡ್ಡ ಮನಸ್ಸು, ತನ್ನ ನೌಕರಿ ಮಾಡಕೋತು ಏನೇನ ಬರಿತಾನ ಅದನ್ನೆಲ್ಲ ಅಂತರ್ಜಾಲ ಪೇಪರನಲ್ಲಿ ಓದಿದೀನಪಾ!’ ನಮ್ಮ ಮನೆತನದಾಗ ಅಣ್ಣಂದು ದೊಡ್ಡ ಹೆಸರಪಾ!” ಎನ್ನುತ್ತ ಸಿದ್ದಪ್ಪ ಅಭಿಮಾನ ಪಟ್ಟಕೊಂಡ.
“ಸಭಾ ಮಾಡ್ತಾರಲ್ಲ, ಅದರ ಅಧ್ಯಕ್ಷ ಆಗಿದ್ದ.”
“ದೊಡ್ಡಪ್ಪಾ ಅದು ಸಾಹಿತ್ಯ ಸಮ್ಮೇಳನ” ಎಂದು ಶರಣ ನಡೂಕ ಹೇಳಿದ.
“ಹಾಂ ಅದೆ ನೋಡಪಾ! ಹಂಗಂತ ಊರವರೆಲ್ಲ ಸೇರಕೊಂಡು ಸಾಹೇಬ್ ಇದ್ದಲ್ಲಿಗೆ ಹೋಗಿದ್ದೆವು. ಕಚೇರಿ ತೋರಸ್ದಾ, ಬಸವ-ಬೋಧಿಸತ್ವರ, ಫುಲೆ-ಪೆರಿಯಾರ್‌ರ ಮೂರ್ತಿ ತೋರಿಸಿದ. ಸಾಹೇಬ್ ಕೋಟು ಹಾಕ್ಕೊಂಡು ಕೂತಿದ್ದ, ಅವನಂಗ ನಮ್ಮಲ್ಲಿ ಯಾರೂ ಇಲ್ಲ ಬಿಡು. ದೊಡ್ಡ ಸಭಾ ನಡದಿತ್ತು, ಪ್ರಶಸ್ತಿ ಬಂದಿತ್ತಂತ. ನಮ್ಮ ಊರು ಕೇರಿಯವರು ಜನ-ಜಂಗಳಿ ನೋಡಿ ಬೆಕ್ಕಸ ಬೆರಗಾದರು. ಜನಾಂದ್ರ ಜನ. ಇರವಿ ಮುಕರದಂಗ ನೋಡಪಾ, ಸಭಾ ಮುಗೀತು ಊಟ ಮಾಡಿ ಸಾಹೇಬ್‌ನ ಎದುರಿಗಿದ್ದ ಕುರ್ಚಿ ಮ್ಯಾಲ ಕೂತಿದ್ದೆವು. ‘ನೋಡ್ರಪಾ ಊರಾಗ ಬಾಬಾಸಾಹೇಬರ ಮೂರ್ತಿ ಕೂಡಿಸಿದೆವು ಅದೂ ಕಂಚಿಂದು ಚಿಕ್ಕದದ, ಬಸವಣ್ಣನದೊಂದು ಮೂರ್ತಿ ಊರಲ್ಲಿ ಕೂಡಿಸಿದ್ರ ಛಂದ್ ಆಗ್ತದ’ ಎಂದು ಸಾಹೇಬ್ ಹೇಳಿದ. ‘ಅಟ್ಟ ರೊಕ್ಕಾ ಕೊಟ್ಟು ಯಾರೂ ಮೂರ್ತಿ ಮಾಡಾಲೇಳು ಸಾಹೇಬಾ’ ಎಂದು ನಾನೇ ನಿರಾಸಕ್ತಿಯಿಂದ ಹೇಳಿದೆ. ‘ಹಂಗಲ್ಲ ಕಾಕಾ ನೀನss ಹಿಂಗ ನಿರಾಸಕ್ತಿ ತೋರಿಸಿದ್ರ ಹೆಂಗ, ಅಣ್ಣಗ ಹೇಳು, ನನ್ನ ಹತ್ರ ಬಸವಣ್ಣನ ಮೂರ್ತಿ ಇದೆ, ಆದರ ಅದು ಪಂಚಲೋಹದ್ದಲ್ಲ ಪೈಬರ್‌ದಿಂದ ಮಾಡಿದ್ದದ...’ ಎನ್ನುತ್ತಿದ್ದಂತೆ ನಮ್ಮೆಲ್ಲರ ಕಿವಿ ನಿಗಿರಿದವು. ಊರಾನವರಿಂದ ಇದು ಆಗಲಾರದು, ನಮ್ಮ ಕೇರಿಯವರಿಂದಾಗ್ತದಂದ್ರ ಆಗಲಿ ಸಾಹೇಬಾ! ಮಾಡಿಬಿಡು ಎಂದು ಹೇಳಿದೆವು. ಖುಷಿಯಿಂದ ಬಂದು ಊರು ಸೇರಿದೆವು, ಲೀಡರ್ ಅಣ್ಣನಿಗೆ ಹೇಳುತ್ತಿದ್ದಂತೆ ಸಾವುಕಾರ ಈರಪ್ಪ, ಸಾಹೇಬರಿಗೆ ಪೋನ್‌ಮಾಡಿ ಮಾತಾಡಿದರು, ಪಂಚಾಯಿತಿ ಠರಾವ್ ಮಾಡ್ರಿ ಬಸವಣ್ಣನ ಮೂರ್ತಿ ನಾ ವ್ಯವಸ್ಥೆ ಮಾಡ್ತಿನಿ ಎಂದು ಸಾಹೇಬ್ ಹೇಳಿದ. ಮೂರ್ತಿಗೆ ಸಂಬಂಧಿಸಿದಂತೆ ಮಾತಾಡಲು ಸಾಹೇಬ್ ಬರ‍್ತಾರ ಅನ್ನುವುದು ಊರೆಲ್ಲ ಸುದ್ದಿ ಆತು.

ನಾಲ್ಕಾರು ಗೆಳೆಯರೊಂದಿಗೆ ಸಾಹೇಬ್ ಬಂದರು. ಸಂಗಪ್ಪ ಸಾವುಕಾರನ ತ್ವಾಟದಾಗ ಸಭೆ ನಡೀತು. ಪುಟಾಣಿ ಬಾಬುಗೌಡ್ರು, ಖಟಗರತ್ವಾಟದ ಅಣ್ಣಪ್ಪಗೌಡ್ರು, ಈರಪ್ಪ ಸಾವುಕಾರ, ಮಾದಪ್ಪ ಸಾವುಕಾರ, ಘಟಾನುಘಟಿ ಹಿರಿಕಿರಿಯರೆಲ್ಲರೂ ಸೇರಿದ್ರು. ಸಾಹೇಬ್ ಕಾರಿನಿಂದಿಳಿದು ಬಂದು ಸಾವುಕಾರ ಮನಿಕಟ್ಟಿ ಮ್ಯಾಗ ಕೂಡುತ್ತಿದಂತೆ, ಗೆಳೆಯರು ಹಿಂಬಾಲಿಸಿದರು. ಜನಾ ನೆರಿತು, ‘ನೋಡ ಸಾಹೇಬಾ ಎಂಥಿಂಥವರು ಆಗಿ ಹೋಗ್ಯಾರ, ನೀನ ಒಬ್ಬ ಊರ ಹಿಡಕೊಂಡು ಹೊಂಟಿದಿ. ಬಸವಣ್ಣೆಪ್ಪನ ಮೂರ್ತಿಕೊಡೂದು ಕೊಡ್ತಿ ಪೈಬರದು ಬ್ಯಾಡ, ಪಂಚಲೋಹದ್ದು ಕೊಡು’ ಎಂದು ಬೇಡಿಕೆ ಇಟ್ಟರು. ಫ್ರೊಫೆಸರ್ ಸಾಹೇಬ್ ಸ್ವಲ್ಪ ಹೊತ್ತು ಸುಮ್ಮನಾದ. ‘ಸುಮ್ಮನ್ಯಾಕಾದ್ರಿ ಫ್ರೊಫೆಸರ್ ಸಾಹೇಬ್ ಇದು ನಿನ್ನಿಂದ ಮಾತ್ರ ಸಾಧ್ಯ ಆಗ್ತದ’ ಎಂದು ಈರಪ್ಪ ಸಾವುಕಾರ ಒತ್ತಾಯಿಸಿದ. ಎಲ್ಲರೂ ಹೌದು ಹೌದೆಂದರು. ‘ಹೌದಲ್ಲ, ಪೈಬರದು ಕೊಟ್ಟರ ಬಿಸಲಿಗೆ ಸೀಳಿ ಹಾಳಾದ್ರ ಇಂಥವನ ಮಗಾ ಕೊಟ್ಟ ಹಿಂಗಾತು ಎಂದು ಮೂರ್ತಿ ಇರುವ ತನಕ ಜನ ನಿತ್ಯ ಆಡಕೊಳ್ಳತಾರ’ ಎಂದು ಯೋಚಿಸಿ ಪಂಚಲೋಹದ್ದು ಕೊಟ್ಟರಾತು ಎಂದು ಮನಸಲ್ಲಿ ನಿರ್ಧರಿಸಿ ‘ಹಾಗೆ ಆಗಲಿ ನಮ್ಮ ತಂದೆ ಹೆಸರಮ್ಯಾಲ ಅವರ ನೆನಪಿಗಾಗಿ ಕೊಡ್ತಿನಿ’ ಎಂದು ಸಾಹೇಬ್ ಸಮ್ಮತಿಸಿದ.

ದೈವದವರು ಹಸನ್ಮುಖಿಗಳಾದ್ರು. ಚಹಾ ತಂದ್ರು. ಚಹಾ ಕುಡಿದು ಸಾಹೇಬ್ ಎಲ್ಲರಿಗೂ ನಮಸ್ಕಾರ ಹೇಳಿ ಎದ್ದು ಕಾರು ಹತ್ತಿದ. ಕಾರು ಕೇರಿ ಕಡೆಗೆ ಮುಖಮಾಡಿತ್ತು, ‘ಕಾಕಾ ಬಾ ಮನಿತನಕ ಬಿಟ್ಟ ಹೋಗ್ತಿನಿ’ ಎಂದು ನನಗ ಕರದ. ನಾನು ಖುಷಿಯಿಂದ ಹೋಗಿ ಕಾರಲ್ಲಿ ಕೂತೆ, ಕಾರು ಚಲಿಸಿತು. ಸಾಹೇಬನ ಜೊತೆಗೆ ಬಂದಿದ್ದ ಗೆಳ್ಯಾರು ‘ಏನ್ ಸಾಹೇಬ್ರ ನೀವು ಪಂಚಲೋಹದ ಬಸವಣ್ಣನ ಮೂರ್ತಿ ಕೂಡಾಕ್ಹತ್ತಿರಿ. ಅದಕ್ಕರೆ ಅವ್ರು ಜಾತಿ ಬಿಡಬೇಕಿತ್ತು. ಚಹಾ ತಮಗೆ ಪ್ಲಾಸ್ಟಿಕ್ ಕಪ್ಪನ್ಯಾಗ ಕೊಟ್ಟು ತಾವು ಮಾತ್ರ ಸ್ಟೀಲ್ ಗ್ಲಾಸಿನ್ಯಾಗ ಕುಡುದ್ರು’ ಎಂದು ಹಳಹಳಿಸಿದರು. ‘ಇವತ್ತಿನ ಅವ್ರ ನಮ್ಮ ಭೇಟಿ ಗಾಂಧಿ ಜೊತೆಗೆ ಬಾಬಾಸಾಹೇಬರು ಮಾಡಿದ ಸಂವಾದ ಇದ್ದಂಗ ಇತ್ತು. ತಾವು ಓದಿದ ಸಾಲಿ ಮುಂದಿನ ಸರ್ಕಲ್‌ನ್ಯಾಗ ಮೂರ್ತಿ ಕೂಡಸಬೇಕು. ಎಲ್ಲ ಜಾತಿ ಧರ್ಮದವರಿಗಿ ಕರದು ಕಾರ್ಯಕ್ರಮ ಧಾಮ ಧೂಮ ಮಾಡಬೇಕು ಅಂತ ಹೇಳಿದ್ರಿ. ಆದರss ಯಾಕೊ ಅವ್ರು ಗುಣಾ ಸರಿ ಕಾಣಸಿಲಲ್ಲ. ಅವರೇನು ನಾವು ನೀವು ಹೇಳಿದ್ಹಾಂಗ ಮಾಡ್ಲಿಕಿಲ್ಲ ಎಂದು ಈಶ್ವರ ಮಾತಾಡಿದರು.’ ‘ಏನ ಮಾಡ್ತೀರಿ ಸರ್, ಜಾತಿ ಆಚರಣೆ ಮಾಡುದ್ರಾಗಟ್ಟ ಇಲ್ಲ ರಕ್ತದಾಗೂ ಐತಿ ಮಾಡುವುದೇನು? ಮಾತಕೊಟ್ಟಿನಿ, ಮಾತಿನಂಗ ನಡದ ತೋರಿಸಿದ ಮ್ಯಾಲಾದ್ರೂ ಬದಲಾದಾರು ಎಂಬ ನಂಬಿಕೆ ಇದೆ’ ಎಂದು ಸಾಹೇಬ್ ಗೆಳೆಯರಿಗೆ ಸಮಾಧಾನ ಹೇಳಿದ” ಎಂದು ರಾಯಣ್ಣ ನೆನಪಿಸಿ ಕೊಂಡು ಹಳಹಳಿಸಿದ.
“ಹಂಗಿದ್ರ ಯಾಕ ಕೊಡಬೇಕಾಪಾ!” ಎಂದು ಸಿದ್ದಪ್ಪ ಸಿಟ್ಟು ಮಾಡಿದ.
“ಹಂಗಲ್ಲಪಾ ಆ ಕಾಲದಾಗ ಬಸವಣ್ಣ ಏನೆಲ್ಲ ಮ್ಯಾಡ್ಯಾನಪಾ. ಸಾಹೇಬ್ ಬಸವಣ್ಣನ ಅನುಯಾಯಿ ಅಲ್ಲೇನ? ಹಿಂಗಾಗಿ ಸಾಹೇಬ್ ಪಂಚಲೋಹದ್ದು ಅವರಿಗಿ ಕೊಟ್ಟರು. ನಮಗೂ ಬಾಬಾಸಾಹೇಬರ ಮೂರ್ತಿ ಪಂಚಲೋಹದಲ್ಲಿ ಮಾಡಿಸಿ ಕೂಡಪಾ ಎಂದು ಅವರಣ್ಣ ಲೀಡರ್ ಕೇಳಿದ. ಸುಮ್ನ ಕೇಳ್ಲಿಲ್ಲ, ನಾನು ಒಂದಿಷ್ಟು ರೊಕ್ಕಾ ಕೊಡ್ತೀನಿ ಎಂದು ಒತ್ತಾಯ ಮಾಡಿದ. ಅದಕ್ಕೂ ಸಾಹೇಬ್ ಆಗಲಿ ಎಂದು ಒಪ್ಪಿಕೊಂಡ. ಊರಲ್ಲಿ ಸಾಹೇಬ್ ಓದಿದ ಶಾಲೆ ಎದುರಿನ ಸರ್ಕಲ್‌ನಲ್ಲಿ ಮೂರ್ತಿ ಕೂಡುಸ್ತಾರಂದ್ರ ಮುಸ್ಲಿಂ ವ್ಯಾಪಾರಿಗಳ ಅಂಗಡಿ ಮುಂಗಡಿ ಇದ್ದು. ಜಾಗಾ ಹತ್ತಿ ಇತ್ತು. ಸಾಹೇಬನ ಮುಖಾ ನೋಡಿ ತಮ್ಮ ತಮ್ಮ ಅಂಗಡಿಗೋಳು ಇದ್ದ ಜಾಗದಿಂದ ನಾಕನಾಕ ಮೊಳಾ ಹಿಂದಕ ಸರಸಿದ್ರು. ಯಾರೂ ತಕರಾರು ಮಾಡ್ಲಿಲ್ಲ. ಕೇರಿ ಸೇದುಬಾವಿ ಮ್ಯಾಲ ಅಂಬೇಡ್ಕರ್ ಮೂರ್ತಿ, ಸಾಲಿ ಸರ್ಕಲ್‌ನ್ಯಾಗ ಬಸವಣ್ಣನ ಮೂರ್ತಿ ಸ್ಥಾಪನೆಗೆ ಅಧಿಕೃತ ಠರಾವು ಆತಪಾ! ‘ಮೂರ್ತಿ ನೀವ ಯಾರರೆ ಹೋಗಿ ತರತೀರಿ ಅಥವಾ ನಾನss ಕಳಿಸುವ ವ್ಯವಸ್ಥೆ ಮಾಡ್ಲಿ’ ಎಂದು ಸಾಹೇಬ್ ಕೇಳಿದರು. ಮೂರ್ತಿ ಬರೂತನಕ ನಿತ್ಯ ಸಾಹೇಬರ ಗುಣಗಾನ ಊರಲ್ಲಿ ನಡೀತಿತ್ತ. ನೀವ ಕಳಸ್ರಿ ಎಂದು ಹೇಳಿದರು. ಎರಡೂ ಮೂರ್ತಿ ಒಂದ ಕಾರಿನ್ಯಾಗ ಬಂದುವಪಾ! ಮೂರ್ತಿ ಸ್ವಾಗತ ಮಾಡ್ಲಿಕ್ಕೆ ಬಾಜಾ-ಭಜಂತ್ರಿ, ಡೊಳ್ಳು-ಹಲಗೆ ಮೇಳಗಳು ಸಿದ್ದವಾಗಿ ನಿಂತಿದ್ದವು. ಹೆಣ್ಣು ಮಕ್ಕಳು ನೀರ ಹಾಕಿ ಸ್ವಾಗತಿಸಲು ರೆಡಿಯಾಗಿದ್ದರು. ಎರಡು ಮೂರ್ತಿಗಳ ಮೆರವಣಿಗೆ ಮಾಡ್ತಾರಂತ ನಾವು ಅನಕೊಂಡ್ರ ಬಸವಣ್ಣನ ಮೂರ್ತಿ ಒಂದss ತಮ್ಮ ಎತ್ತಿನ ಬಂಡಿಯಲ್ಲಿ ಇಟಕೊಂಡ ಮೆರವಣಿಗೆ ಮಾಡಿಕೊಂಡು ಹೋದರು. ನಾವು ಬಾಬಾಸಾಹೇಬರ ಮೂರ್ತಿ ಹೊತ್ತ ತಂದು ಲೀಡರ್ ಮನ್ಯಾಗ ಇಟ್ಟೇವೆನಪಾ! ಎಂದು ರಾಯಣ್ಣ ಕ್ಷೀಣ ದನಿಯಲ್ಲಿ ಉಲಿದ. ಇದೆಂಥ ಅಪಮಾನಪಾ!” ಎಂದು ಸಿದ್ದಪ್ಪ ಹಳಹಳಿಸಿದ.
“ಅವರೆಲ್ಲ ಎಷ್ಟು ದೊಡ್ಡವರದಾರ ಅಂತ ಆವತ್ತ ಗೊತ್ತಾತು” ಎಂದು ನೊಂದುಕೊಂಡು ರಾಯಣ್ಣ ನಡೆದದ್ದೆಲ್ಲ ಕತಿ ಮಾಡಿ ಹೇಳಿದ.
“ಬಸವಣ್ಣನ ಮೂರ್ತಿ ಪ್ರತಿಷ್ಠಾಪನೆ ಹೆಂಗ ಮಾಡಬೇಕು, ಯರ‍್ಯಾರನ್ನು ಕರೀಬೇಕು ಎಂದೆಲ್ಲ ಸಾಹೇಬ್ ಮೊದಲss ಹೇಳಿ ತಾಕೀತು ಮಾಡಿದ್ದ. ಅದು ಹಂಗ ನಡೀಲಿಲ್ಲ. ನಮ್ಮ ಜನಪ್ರತಿನಿಧಿಗಿ ಕರೀಲಿಲ್ಲ. ಕೇಸರಿ ಬಣ್ಣದ ಮತಾಂಧ ಯಂಗಪುಂಗ್ಲಿಗಳ ತರಹ ಇರುವ ಕಟ್ಟರ್ ಹಿಂದುವಾದಿಯನ್ನು ಕರದ್ರು. ಅವ್ರು ನಮ್ಮೂರಿಗಿ ನಮ್ಮ ಕ್ಷೇತ್ರಕ್ಕ ಸಂಬಂಧ ಇರಲಿಲ್ಲ. ಸಾಹೇಬ್ ಆಗ ಡೆಲ್ಲಿಗಿ ತುರ್ತು ಕೆಲಸಕ್ಕೆ ಹೋಗಿದ್ದ. ಊರೆಲ್ಲ ಕೇಸರಿಮಯವಾಯಿತು. ಸಾಧು ಸಂತರು ಬಂದು ಮೂರು ದಿವಸಗಳ ಕಾಲ ಬಸವಣ್ಣ ಹೇಳಿದ್ದು ಚರ್ಚಿಸಲಿಲ್ಲ. ಮಠದ ಜಾತ್ರಿ ನಡದಂಗ ನಡೀತು. ಕೇಸರಿ ಶಾಲಿನವ ಬರ‍್ತಾನ ಊರಾಗ ಏನೂ ಗದ್ದಲ ಆಗದಿದ್ರ ಸಾಕು ಎಂದು ಸಾಹೇಬ್ ಮೇಲಿಂದ ಮೇಲೆ ಪೋನ್ ಮಾಡಿ ಕೇಳತ್ತಿದ್ದ. ಅವ್ರು ಮಾಡದ್ರ ಮಾಡಕೊಳ್ಳಲಿ ಎಂದು ಸಾಹೇಬ್ ನಮಗೆ ಸಮಾಧಾನ ಹೇಳಿದ. ಮೂರ್ತಿ ಯಾರ ಕೊಟ್ಟಾರ ಅವರ ಹೆಸರಿಲ್ಲ. ಅವರಪ್ಪನ ಹೆಸರಿಲ್ಲ. ಕಡೀಕ ಅವರವ್ವ ಊರಿಗೆ ಹರ‍್ಯಾಳತಿ ಅಕಿನರೆ ಕರದು ಒಂದು ಹೂವಿನಹಾರ ಹಾಕಿ ಸನ್ಮಾನ ಮಾಡಿದ್ರ ನಡೀತಿತ್ತು ಅದುನೂ ಮಾಡ್ಲಿಲ್ಲ” ಎಂದು ರಾಯಣ್ಣ ಹೇಳಿತ್ತಿದ್ದ.
“ಬಿಡು ದೊಡ್ಡಪ್ಪ ಅವರದೇನ ಹೇಳ್ತಿ ಕಲ್ಲ ಕಟ್ಟದವ್ರು ಬಲ್ಲಿ ಕರಣ ಇರಂಗಿಲ್ಲಂತಾರಲ್ಲ ಅದು ಹಂಗss ಆತು. ಅಣ್ಣ ಮೂರ್ತಿ ಕೊಡಬಾರದಾಗಿತ್ತು” ಎಂದು ಶರಣ ಸಿಟ್ಟು ಮಾಡಿಕೊಂಡ.
“ಅಪಾ ಶರಣ ಹೇಳಾದು ಸರಿ ಐತಿ” ಎಂದು ಹೇಳಿ ಸಿದ್ದಪ್ಪ ಅಪ್ಪನ ಮಡಿಲಲ್ಲಿ ಅಡ್ಡಾಗಿದ.
“ಹಿಂಗ್ಯಾಕಾತು ಎಂದು ಯಾರೇ ಕೇಳಿದ್ರು ಸಾಹೇಬ್ ವ್ಯಂಗ್ಯವಾಗಿ ನಕ್ಕು ಬಿಡ್ತಿದ್ದ. ಯಾಕಂದ್ರ ಅವ್ರು ತುಂಬಿದ ಕೊಡಾನೋಡಪಾ!” ಎಂದು ರಾಯಣ್ಣ ಸುಮ್ಮನಾದ.

“ಸಾಹೇಬಗ ಹಿಂಗಾತಲ್ಲ ಎಂದು ನಮಗೆಲ್ಲ ನೋವಾತು. ಬಾಬಾಸಾಹೇಬರ ಮೂರ್ತಿ ಅನಾವರಣ ಕಾರ್ಯಕ್ರಮ ಮಾಡಬೇಕಲ್ಲ. ಸಾಹೇಬರು ಯಾವಾಗ ಬರ‍್ತಾರ, ಅವರ ಡೇಟ್ ತಗೊಂಡು ನಮ್ಮ ಜನಪ್ರತಿನಿಧಿಗಿ ಕರದು ಮಾಡದೆವು. ಹೆಚ್ಚು-ಕಮ್ಮಿ ಇಡೀ ಊರಿನವರು, ಸುತ್ತಹಳ್ಳಿಯವರೆಲ್ಲ ಬಂದಿದ್ರು. ಸಾಹೇಬ್ ನಮ್ಮ ಕಾರ್ಯಕ್ರಮದ ಮದುಮಗ ಕಂಡಂಗ ಕಾಣ್ತಿದ್ದ. ಸಾಹೇಬ್ ಮಾತಾಡಿದ್ರ ಎಲ್ಲರ ಕಣ್ಣ ತುಂಬಿ ಬಂದಿದ್ದವು. ಬಸವನಮೂರ್ತಿ ತಗೊಂಡವ್ರು ಯಾರೂ ಬಂದಿರಲಿಲ್ಲ. ಕಾರ್ಯಕ್ರಮ ಮೂಗೀತ ಖರೆ ಯಾರೂ ಹೊರಗ ಸುಳೀಲಿಲ್ಲ. ‘ಯಾರಿಗಾಗಿ ಹಾದಿ ನೋಡ್ತಿ ಅರ‍್ಯಾರು ಬರಾಂಗಿಲ್ಲ ಮಗಾ’ ಎಂದು ಅಂಬವ್ವಕ್ಕ ಹೇಳಿ ಸಾಹೇಬ್‌ಗ ಸಮಾಧಾನ ಮಾಡಿದಳು. ಸಾಹೇಬ್ ಮಾತಾಡಿದ್ದು, ಪೇಪರ ತುಂಬಾ ಜಾಹಿರಾತಪಾ! ಇಟ್ಟ ಇವರೆಲ್ಲ ಅಪಮಾನ ಮಾಡಿದ್ರು ಸಾಹೇಬ್ ಚಕಾರೆತ್ತಲಿಲ್ಲ. ಮೊನ್ನಿ ಅವರಪ್ಪನ ಹೆಸರಿನ ಮ್ಯಾಲ ಕ್ರಿಕೆಟ್ ಟೂರ್ನಾಮೆಂಟ್ ಮಾಡಿದ್ರು. ಸಾಹೇಬ್ ಬಂದಿದ್ದ, ಹೊರಗಿಂದ ಬಂದು ಹಂಗss ಹೊರಗಿನಿಂದ ಹೋದ. ಏನ ಮಾಡ್ತಿ ಮಗಾ ಈ ದೇಶ ಬದಲಾಗಲ್ಲ ಬದಲಾಗಲ್ಲ, ನಾವss ಬದಲಾಗಬೇಕು. ಧರ್ಮ ಬಿಡಬೇಕು ನನಗ ಈಗ ನೀ ಅಮೆರಿಕಾಕ್ಕ ಹೋಗಿದ್ದ ಸರಿ ಅದ ಅನಸ್ತದ. ಆಗ ನೀ ಹೋದಾಗ ತುಂಬಾ ಬೇಸರಾಗಿತ್ತು. ಸಾಹೇಬಗ ಊರವ್ರು ಮಾಡಿದ ಅಪಮಾನ ನೋಡಿದ ಮ್ಯಾಲ ನನ್ನ ಮಗನ ತೀರ್ಮಾನನ ಸರಿ ಅನಸ್ತದ ನೋಡಪಾ!” ಎಂದು ಹೇಳಿ ರಾಯಣ್ಣ ಸುಮ್ಮನಾದ.

“ಎಷ್ಟ ಜನರಂತ ಊರ ಬಿಟ್ಟು ಹೋಗುದುಪಾ! ಎಲ್ಲರಿಗೂ ಸಾಧ್ಯವಿಲ್ಲ!” ಎಂದು ಸಿದ್ದಪ್ಪ ತಂದೆಯ ಮುಖ ನೋಡಿದ.
“ಇಲ್ಲಂದ್ರ ಮಗಾ ಬಾಬಾಸಾಹೇಬರು ಹೇಳಿದ್ಹಂಗ ಅವ್ರ ದಾರಿ ಹಿಡಿಬೇಕು. ಅದಿಲ್ಲದ ಭಾಗಿಲ್ಲ. ನಿನಗ ಗೊತ್ತಿಲ್ಲ. ಇನ್ನಾನು ಕೆರಿ, ಭಾವಿ ಮುಟ್ಟಾಂಗಿಲ್ಲ. ಗುಡಿ ಪ್ರವೇಶ ಮಾಡುವಂಗಿಲ್ಲ, ಯಾವಾಗಪ್ಪ ಇದು ಬದಲಾಗೂದು” ಎಂದು ರಾಯಣ್ಣ ಖೇದ ವ್ಯಕ್ತಪಡಿಸಿದ.

“ನಮ್ದೇನೋ ಕಾಲ ಮುಗೀತು. ಹೇಳ್ಲಾಕ ನೋವಾಗ್ತದ ನಮ್ಮ ಹೆಣಮಕ್ಕಳ ತ್ರಾಸ ನೋಡವರಿಲ್ಲ. ಕೂಲಿ ಮಾಡವ್ರ ಗೋಳ ಕೇಳರ‍್ಯಾರು ಮಗ!” ಎಂದು ರಾಯಣ್ಣ ಚಡಪಡಿಸಿದ.
“ನೀನss ಹೇಳ್ದೆಲ್ಲಪಾ! ಓದ ಬೇಕು, ಧರ್ಮ ತ್ಯಜಿಸಬೇಕು” ಎಂದು ಸಿದ್ದಪ್ಪ ಅಪ್ಪನ ಮುಖ ನೋಡಿದ.
“ನೋಡು ನೀನು ಧರ್ಮ ಬಿಟ್ಟಿ ಅದಕ್ಕ ನೀನು ನಿನ್ನ ಹೆಣ್ತಿ ಮಕ್ಕಳು ಸುಖವಾಗಿದ್ದೀರಿ. ಅದಕ್ಕ ನಮಗ ಸರಿಕಂಡ ಧರ್ಮಕ್ಕ ಹೋಗಬೇಕಪಾ! ಬಾಬಾಸಾಹೇಬರು ಸುಮ್ನ ಹೇಳಿಲ್ಲ. ಶೋಷಣೆಯಿಂದ ಮುಕ್ತರಾಗಬೇಕಂದ್ರ ಸರಿಕಂಡ ಧರ್ಮಕ್ಕ ಹೋಗ್ರಿ ಅಂದಾರಿಲ್ಲ! ಹಂಗss ಬುದ್ಧನ ಹಾದಿ ತುಳುದು ಮಾರ್ಗ ತೋರಿದಾರ. ಓದಿ ಬರದರ ಮಾತ್ರ ಇದೆಲ್ಲ ಸಾಧ್ಯ ಮಗಾ!” ಎಂದು ರಾಯಣ್ಣ ಮಗನ ತೆಲಿಮೇಲೆ ಕೈಯಾಡಿಸಿದ.

“ಇಲ್ಲಿ ಹೆಸರಿನಿಂದ ಅಪಮಾನ ಧರ್ಮದಿಂದ ಅಪಮಾನ ಅದಕ್ಕಪಾ ನನ್ನ ಹೆಸರು ಸಿದ್ದಪ್ಪ ಅಲ್ಲ. ಸಿದ್ದಾರ್ಥ ಎಂದು ಹೇಳಿದ. ನಿನಗ ಮಾತ್ರ ನಾನು ಸಿದ್ದಪ್ಪ ಬೇರೆಯವರಿಗೆ ಸಿದ್ದಾರ್ಥ!” ಎಂದು ಅಭಿಮಾನದಿಂದ ಅಪ್ಪನಿಗೆ ಹೇಳಿದ.

“ಏss ಮಗಾ ನೀ ನನಗೂ ಸಿದ್ಧಾರ್ಥss ಸಿದ್ಧಾರ್ಥನ ಅನತಿರಬೇಕಾದರೆ ಚಂದ್ರ ಮೇಲೆ ಬಂದಿದ್ದನ್ನು ನೋಡುತ್ತ ಆಕಳಿಸಿ ಚುಕ್ಕೆ ಚಂದ್ರಮರ ನಾಡಿನಲ್ಲಿ ನನ್ನಾಕೆ ಇರಬಹುದಲ್ಲ” ಎಂದು ಆಕಾಶದ ಚುಕ್ಕಿಗಳನ್ನು ದಿಟ್ಟಿಸಿ ಎಣಿಸಲೆತ್ನಿಸಿದ. ಮಹಾರ್ ಬೆಟಾಲಿಯನ್ನಿನ ನಾಯಕನ ಹೆಸರು ಸಿದ್ದನಾಕ, ಆ ಮಹಾಧಿರನ ಹೆಸರು ಮಗನಿಗಿಟ್ಟಿದ್ದೇನೆಂದು ಚಿಂತಿಸುತ್ತ ಹಾಗೆಯೇ ಆಕಾಸ ನೋಡುತ್ತಿರಬೇಕಾದರೆ ಘಳಿಗ್ಹೊತ್ತು ಕಳೆಯಿತು. “ಸಿದ್ಧಾರ್ಥss ಸಿದ್ಧಾರ್ಥ” ಎಂದು ರಾಯಣ್ಣ ಮಗನಿಗೆ ಕರೆದ.

ಸಿದ್ದಾರ್ಥನಿಗೆ ಆಗತಾನೆ ನಿದ್ದೆ ಹತ್ತಿತ್ತು. ಮಗ ಬಹಳ ದಿವಸದ ಮ್ಯಾಲ ಬಂದಾನ ಮಡಿಲಲ್ಲಿ ಮಲಗ್ಯಾನ ಮಲಗಲಿ ಎಂದು ರಾಯಣ್ಣ ಗೋಡೆಗೆ ಬೆನ್ನು ಆನಿಸಿದ. ಬೆಳಗಿನ ಐದು ಗಂಟೆಗೆ ಅಲಾರಾಮ ಬಾರಿಸಿತು. ತಂದೆ ಮಗ ಎದ್ದರು. ಅಣ್ಣಾ ಸಾಹೇಬನ ಸಾಧನೆ ನೋಡಲು ತಂದೆ ಮಗ ಸೇರಿ ಹೋಗಿ ದೂರದಿಂದ ಬಸವಣ್ಣನ ಮೂರ್ತಿ ನೋಡಿದರು. ಕೇಸರಿ ಬಣ್ಣದಲ್ಲಿ ಮಿಂದೆದ್ದ ಬಸವಣ್ಣನ ಮೂರ್ತಿ ಸಿದ್ಧಾರ್ಥನಿಗೆ ಸರಿಕಾಣಲಿಲ್ಲ. ಸಿದ್ಧಾರ್ಥನಿಗೆ ಇವ ನಮ್ಮವ ಇವ ನಮ್ಮವ ಎಂದು ಕರೆದ ಭಾವ ಮೂರ್ತಿಯಲ್ಲಿ ಹೊಳೆಯಲಿಲ್ಲ. ಸಿದ್ಧಾರ್ಥನ ಮನಸ್ಸಿಗೆ ಕಸಿವಿಸಿ ಅನಿಸಿತು. ಸರ್ಕಲ್‌ನ ಪೆಡಸ್ಟಾಲ್ ಮೇಲೆ ಕುಳಿತ ಬಸವೇಶ್ವರ ಬಸವಣ್ಣನಾಗಿ ಬಂದು “ಜಾತಿ ಸಂಕೋಲೆಯಲ್ಲಿ ನನ್ನನ್ನು ಬಂಧಿಸಿದ್ದಾರೆ” ಎಂದು ಹೇಳಿದಂತೆ ಸಿದ್ಧಾರ್ಥನಿಗೆ ಭಾಸವಾಯಿತು. “ಅಣ್ಣ ಅಣ್ಣ ಬಸವಣ್ಣ” ಎನ್ನುತ್ತ ಎದ್ದು ನೋಡುತಾನೆ ಬಸವನ ಮೂರ್ತಿಯೂ ಇಲ್ಲ. ಸರ್ಕಲ್ಲು ಇಲ್ಲ. ಅಪ್ಪನ ತೊಡೆ ಮೇಲೆ ಮಲಗಿದ್ದು ನೋಡಿ ರಾತ್ರಿಯಲ್ಲ ನಾನು ಹೀಗೆ ಮಲಗಿದೆನಾ? ಎಂದು ಎದ್ದು ನೋಡಿದರೆ ಅಪ್ಪ ನಿದ್ರೆಗೆ ಜಾರಿದ್ದ.

“ಅಪಾ ರಾತ್ರಿಯೆಲ್ಲ ಇಲ್ಲೆ ಮಲಗಿದ್ನಾ” ಎಂದು ಸಿದ್ಧಾರ್ಥ ಅಪ್ಪನನ್ನು ಎಬ್ಬಿಸಿ ಕೇಳಿದ.
“ಹೌದಪ್ಪ ಅಷ್ಟು ದೂರದಿಂದ ಬಂದಿದ್ದಿಯಾ! ಮಲಗಲಿ ಎಂದು ಎಬ್ಬಿಸಲಿಲ್ಲ. ಮಲಗಿದಾಗ ಏನೋ ಬಡಬಡಸ್ತಾ ಇದ್ದೆ ಎಂದು ಮಗನಿಗೆ ಕೇಳಿದ. ಏನದು”
“ಅದೇಪಾ ಬಸವಣ್ಣನ ಮೂರ್ತಿ ನೋಡಲು ಸರ್ಕಲ್ಲಿಗೆ ಹೋದಂಗಾಗಿತ್ತು. ಬಸವಣ್ಣ ನನ್ನನ್ನು ಬಣ್ಣದಲ್ಲಿ ಬಂಧಿಸಿದ್ದಾರೆ ಅಂತಿದ್ದ. ಹೌದಪ್ಪಾ” ಎಂದು ಅಪ್ಪನಿಗೆ ಕೇಳಿದ. ರಾಯಣ್ಣ ತಲೆಹಾಕಿ ಸಮ್ಮತಿಸಿದ.
ಪೂರ್ವ ನಿರ್ಧಾರದಂತೆ ಮೊಮ್ಮಕ್ಕಳು, ಸೊಸಿ ನಕ್ಷತ್ರಾ, ಸಿದ್ಧಾರ್ಥ ಎಲ್ಲರೂ ಬಾಬಾಸಾಹೇಬರ ಮೂರ್ತಿಗೆ ವಂದಿಸಲು ನಡೆದರು. ಎಲ್ಲರೂ ರಸ್ತೆಗಿಳಿಯುತ್ತಿದ್ದಂತೆ ರಾಯಣ್ಣನ ಮಗ-ಸೊಸೆ-ಮೊಮ್ಮಕ್ಕಳನ್ನು ತದೇಕ ಚಿತ್ತದಿಂದ ನೆರೆದವರೆಲ್ಲ ನೋಡುತ್ತಿದ್ದರು. ಬಾಬಾಸಾಹೇಬರಿಗೆ ಗೌರವದಿಂದ ನಮಸ್ಕರಿಸಿದರು.
“ಅಪಾ ಬಸವಣ್ಣನಿಗೆ ರಾತ್ರಿ ಕನಸಿನಲ್ಲಿ ನೋಡಿರುವೆ. ಅಲ್ಲಿಯೂ ಹೋಗಿ ಬರೋಣ” ಎಂದು ಸಿದ್ಧಾರ್ಥ ಕೇಳಿದ.
“ನೋಡ ಮಗಾ ದೂರದಿಂದಲೇ ನೋಡಬೇಕು”
“ಯಾಕಪಾ!”
“ಎಲ್ಲ ಜಾತಿ ಮಹಿಮೆ ಕಣಪ್ಪ”
“ಆಗಲಿ ನಡೀಪಾ” ಎಂದು ಕಾರಿನಲ್ಲಿ ಬಸವನ ಮೂರ್ತಿ ಇರುವ ಶಾಲೆಯ ಸರ್ಕಲ್‌ಗೆ ಹೊರಟರು. ಕಾರಿನಿಂದ ಇಳಿಯುತ್ತಿದ್ದಂತೆ,
“ಏನ್ ರಾಯಣ್ಣ ಅರವತ್ತಾದ ಮ್ಯಾಲ ಅಜ್ಜಿ ಮೈನೆರದಂಗಾತು ನಿನ್ನ ಬಾಳ್ವೆ. ಏನ ನಿನ್ನ ಮಗನ ಹೆಸರು” ಎಂದು ಸಾವುಕಾರ ದರ್ಪಿನಿಂದ ಕೇಳಿದ.
“ಸಿದ್ಧಾರ್ಥ”
“ಯಾರೋ ಸಿದ್ಯಾ ಅಂತಿದ್ರು” ಎಂದು ಈರಪ್ಪ ಸಾವುಕಾರ ಅಪಮಾನ ಆಗುವಂಗ ಮಾತಾಡಿದ.
ಅಲ್ಲೆ ಇದ್ದ ಮತ್ತುಲಾಲ್ ಅಣ್ಣವರಿಗೆ ಇದು ಸರಿಕಾಣಲಿಲ್ಲ. “ಈರಪ್ಪ ಸಾವುಕಾರ ಸ್ವಲ್ಪರ ಬುದ್ಧಿ ಆದಿಲ್ಲ ನಿಮಗ. ಅವರಪ್ಪ ಸಿದ್ಧಾರ್ಥ ಅಂತ ಹೇಳಾಕ್ಹತ್ಯಾನ, ನೀವು ಏನ್ರಿ ನಿಮಗ ಸ್ವಲ್ಪರ ಗಂಧ ಗಾಳಿ ಇಲ್ಲ ಕಾಣಸ್ತದ. ಓದಿ ದೂರದ ದೇಶದಿಂದ ನಮ್ಮೂರು ಕೇರಿ ಅಂತ ಅಭಿಮಾನದಿಂದ ಬಂದಾರ ಅವರಿಗೂ ಮಾನ ಮರ‍್ಯಾದೆ ಇರಲ್ಲೇನು. ನಿಮ್ಮ ಜನ್ಮದಾಗ ಬಸವಣ್ಣನ ಮೂರ್ತಿ ಕೂಡ್ಸಾದು ಆಗ್ತಿರಲಿಲ್ಲ. ಅದು ಅವ್ರು ಕುಟುಂಬದವರ ಕೊಟ್ಟಾರ, ಅದನೂ ಖಬರಿಲ್ಲ. ಏನ್ರಿ ಕಳಬೇಡ, ಕೊಲಬೇಡ, ಹುಸಿಯ ನುಡಿಯಲುಬೇಡ, ಇದಿರು ಅಳಿಯಲು ಬೇಡ ತನ್ನ ಬಣ್ಣಿಸಬೇಡ ಎಂದು ಬಸವಣ್ಣ ಹೇಳ್ಯಾನಂತ ನೀವss ದೊಡ್ಡ ದೊಡ್ಡ ಸಭಾದಾಗ ಸಾರಿ ಸಾರಿ ಹೇಳ್ತಿರಿ” ಎನ್ನುತ್ತಿದ್ದಂತೆ ನೆರೆದವರ ಎದುರಿಗೆ ಸಾವುಕಾರಗ ಅಪಮಾನ ಆದಂಗಾತು.

“ಸಿದ್ಧಾರ್ಥ ಸಾಹೇಬರ ಊರ ಪರವಾಗಿ ನಾನss ಕ್ಷಮಾ ಕೇಳ್ತಿನ್ರಿ” ಎಂದು ಮತ್ತುಲಾಲ್ ಹೇಳಿದ.
“ಇರ‍್ಲಿ ಬಿಡ್ರಿ ದಾದಾ” ಎಂದು ರಾಯಣ್ಣ ನಮ್ರವಾಗಿ ಮಾತಾಡಿ ಅಲ್ಲಿಂದ ನಿರ್ಗಮಿಸಿದರು.
“ಏನ್ರಿ ಮುತ್ತುಲಾಲ್ ಆ ಜಾತಿಯವರ ಪರವಾಗಿ ಮಾತಾಡಾಕ್ಹತ್ತಿರಿ ಇದು ಯಾವಾಗ ಕಲ್ತೀರಿ” ಎಂದು ಈರಪ್ಪ ಸಾವುಕಾರ ಸಲಿಗೆಯಿಂದ ಕೇಳಿದ.
“ನೀವು ನಾಲ್ಕಕ್ಷರ ಕಲತವ್ರದೀರಿ ನಾಲ್ಕ ಮಂದ್ಯಾಗ ಕುಂಡ್ರತೀರಿ ಅವ್ರಂಥ ಸುಶಿಕ್ಷಿತ ಕುಟುಂಬ ನಮ್ಮೂರಿಂದು ಅನ್ನೂದss ಒಂದ ಭಾಗ್ಯ ಸಾವುಕಾರ, ಜಿಲ್ಲಾದಾಗ ಹುಡುಕಾಡಿದ್ರ ಇಟ್ಟ ಓದಿದವರು ಸಿಗ್ತಾರೇನ್ರಿ! ನೀವ ಹೇಳ್ರಿ” ಎಂದು ಮತ್ತುಲಾಲ್ ಸಲಿಗಿಯಿಂದ ಗದರಿದರು.
“ಅಷ್ಟು ಅವರಿಗಿ ಸ್ವಾಭಿಮಾನ ಇದ್ರ ಸುಮ್ಮನ್ಯಾಕ ಹೋದ್ರು”
“ನೋಡು ಸಾವುಕಾರ ಅವರಲ್ಲಿ ಸ್ವಾಭಿಮಾನ ಇಲ್ಲಂತಲ್ಲ. ನಿನ್ನಂಗ ದುರಭಿಮಾನ ಇಲ್ಲ. ನಿನ್ನ ಕೂಡ ಜಗಳಾಡಿದ್ರ ಪೋಲಿಸು ಕಚೇರಿ ಅಂತ ಓಡಾಡಿದ್ರ ಲಾಭ ಏನು?” ಎಂದು ಮತ್ತುಲಾಲ್ ಕೇಳಿದ.
ಸುಮ್ಮನಿರದ ಸಾವುಕಾರ “ಮತ್ತss ಅವ್ರ ಲೀಡರ್ ಇಲ್ಲೆ ನಿಂತಾನ ನಾ ಏನಂದ್ರು ಏನು ಕೇಳಲಿಲ್ಲ” ಎಂದು ಕುಹಕದಿಂದ ಮಾತಾಡಿದ.
“ನೋಡಪಾ ಸಾವುಕಾರ ಲೀಡರ್ ಚುನಾವಣೆಗೆ ನಿಂತಾನ ನಿನ್ನ ಮತ ಅವನಿಗ ಬೇಕಲ್ಲ ಹೌದಲ್ಲೊ” ಅನ್ನುತ್ತ ಮತ್ತುಲಾಲ್ “ಕೋಳಿ ಕಾಲಿಗೆ ಗೆಜ್ಜೆ ಕಟ್ಟಿದಂಗಾಯಿತು” ಎಂದು ಮಾರ್ಮಿಕವಾಗಿ ನುಡಿದ.
ಅಲ್ಲಿ ನೆರದವರು ಹೌದೆಂದು “ಮತ್ತುಲಾಲ್ ನಿಮದss ಸರಿ ಅದ. ಬಸವಣ್ಣನ ಮೂರ್ತಿ ಉದ್ಘಾಟನ ಮಾಡುವಾಗ ಮೂರ್ತಿ ಕೊಟ್ಟವರಿಗೇ ಬಿಟ್ಟು ಮಾಡಿದ್ದು ನಮ್ಮ ಸಣ್ಣತನ ತೋರಸ್ತು. ನಮ್ಮ ಮುಂದ ಅವರss ದೊಡ್ಡವರಾದರು. ನೋಡ್ರಿ ಸಾವುಕರ‍್ರ ನಮ್ಮ ಜನ್ಮದಾಗ ನಾವು ನಮ್ಮ ಮಕ್ಕಳು ಇಂಗ್ಲೆಂಡ್, ಅಮೆರಿಕಾಕ ಹೋಗ್ತಿವೇನ್ರಿ. ಅವರಿಂದ ನಮ್ಮೂರಿಗೆ ಹೆಸರ ಬಂದದss ನಮ್ಮಿಂದ ಅವರಿಗೇನು ಲಾಭ ಇಲ್ಲ. ನಾವು ಅವರಿಗೆ ಬರೀ ಅಪಮಾನ ಅವಮಾನ ಮಾತ್ರ ಕೊಟ್ಟಿದೆವು. ಅವರಿಂದ ನಮಗ ನಮ್ಮೂರಿಗೆ ಲಾಭ ಹೆಚ್ಚದ, ನಡಿರಿ ಛಲೊ ಇದಿರಿ” ಎಂದು ಹೇಳುತ್ತಿದ್ದಂತೆ ಎಲ್ಲರೂ ನಿರ್ಗಮಿಸಿದರು.

ಇತ್ತ ಸಿದ್ಧಾರ್ಥ ಅಣ್ಣಾಸಾಹೇಬನ ಸಾಧನೆ ನೋಡಿ ಕೇಳಿ ಆನಂದಿಸಿದ. ಒಂದೆರಡು ದಿನ ಕಳೆದು ಕೇರಿಯವರೊಂದಿಗೆ ಪ್ರೀತಿ ಅಭಿಮಾನದಿಂದ ಬೆರೆತು ಮತ್ತೆ ದೂರದ ಅಮೆರಿಕಾಕ್ಕೆ ಪ್ರಯಾಣ ಬೆಳೆಸಿದರು.

‘ದೂರದ ಊರಲ್ಲಿ ಜಾತಿ ಅಸ್ಪೃಶ್ಯತೆ ಮರೆತು ಬಾಳುತ್ತಿದ್ದ ಮಗನಿಗೆ ಕರೆದು ಜಾತಿ ನೆನಪಿಸಿ, ಹೃದಯಕ್ಕೆ ಗಾಯ ಮಾಡಿದಂಗಾತು’ ಎಂದು ರಾಯಣ್ಣ ಕಾರು ಹೋದ ದಾರಿಯನ್ನೊಮ್ಮೆ ಬಾಬಾಸಾಹೇಬರ ಮೂರ್ತಿಯನ್ನೊಮ್ಮೆ ನೋಡುತ್ತ ನಮ್ಮ ಪೂರ್ವ ಸೂರಿಗಳಾದ ಸಿದ್ಧಾರ್ಥ-ಸಿದ್ದನಾಕ-ಬೋಧಿಸತ್ವರ ಚಿಂತನೆಗಳು ಮಗನಿಗೆ ಶಕ್ತಿ ತುಂಬಲಿ ಎಂದು ಹರಸುತ್ತ ಸೂರ್ಯನ ದಿಕ್ಕಿಗೆ ಮುಖ ಮಾಡಿದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.