6 ಅಗಸ್ಟ್, 1945
ಅಮೆರಿಕಾದ ಸೈನಿಕರು ಜಪಾನಿನ ಔದ್ಯೋಗಿಕ-ನಗರ ಹಿರೋಶಿಮಾದ ಮೇಲೆ ಬಾಂಬ್ ಹಾಕಿದ ದಿನ. ಅದು ಮೊದಲ ಪರಮಾಣು ಬಾಂಬ್ ಆಗಿದ್ದು, ಮನುಷ್ಯರು ವಾಸವಾಗಿರುವ ಪ್ರದೇಶದ ಮೇಲೆ ಹಾಕಲಾಗಿತ್ತು, ಇದರಿಂದಾಗಿ ಲಕ್ಷಾಂತರ ಜನರು ಸತ್ತರು, ಅಂಗವಿಕಲರಾದರು ಹಾಗೂ ಮನೆ-ಮಠಗಳನ್ನು ಕಳೆದುಕೊಂಡರು.
ಮೊದಲ ಮಹಾಯುದ್ಧದಲ್ಲಿ ತೊಂಬತ್ತೆಂಟು ಲಕ್ಷ ಜನರ ಹತ್ಯೆಯಾಯಿತು, ಇವರಲ್ಲಿ ಸರಾಸರಿ ಐವತ್ತರಷ್ಟು ಜನ ಅಸೈನಿಕರಾಗಿದ್ದರು. ಎರಡನೆಯ ಮಹಾಯುದ್ಧದಲ್ಲಿ ಐದು ಕೋಟಿ ಜನರು ಸತ್ತರು, ಇವರಲ್ಲೂ ಸರಾಸರಿ ನಲವತ್ತೆಂಟುರಷ್ಟು ಜನ ಅಸೈನಿಕರಾಗಿದ್ದರು. ಕೋರಿಯಾದ ಯುದ್ಧದಲ್ಲಿ ತೊಂಬತ್ತೆರಡು ಲಕ್ಷ ಜನ ಸಾವಿಗೀಡಾದರು; ಇಲ್ಲಿಯೂ ಸಹ ಸರಾಸರಿ ಎಂಬತ್ತನಾಲ್ಕರಷ್ಟು ಸಾವಿಗೀಡಾದ ಜನ ಅಸೈನಿಕರಾಗಿದ್ದರು.
ಅಸೈನಿಕರು ಶೀಘ್ರ-ಗತಿಯಲ್ಲಿ ನಿಧನರಾಗಲು ಭಯಾನಕ ಮತ್ತು ಅಮಾನವೀಯ ಶಸ್ತ್ರಗಳು ಕಾರಣವಾಗಿದ್ದವು. ಈ ಶಸ್ತ್ರಗಳನ್ನು ಎರಡನೆಯ ಮಹಾಯುದ್ಧದಲ್ಲಿ ಆವಿಷ್ಕರಿಸಲಾಗಿತ್ತು. ಈ ಶಸ್ತ್ರಗಳನ್ನು ಪ್ರಯೋಗಿಸುವುದರಿಂದ ನಗರಗಳನ್ನು ನಾಶ ಮಾಡಬಹುದಿತ್ತು. ಹಿರೋಶಿಮಾ ಈ ಶಸ್ತ್ರಗಳಿಗೆ ಮೊದಲ ಬಲಿಯಾಗಿತ್ತು.
ಹೀರೋಶಿಮಾದ ಮೇಲೆ ಪರಮಾಣು ಬಾಂಬನ್ನು 1,850 ಅಡಿ ಎತ್ತರದಿಂದ ಹಾಕಲಾಯಿತು. ಇದರ ಶಕ್ತಿ ಇಪ್ಪತ್ತು ಕಿಲೋಟನ್ [ಒಂದು ಕಿಲೋಟನ್‌ಗೆ ಸಾವಿರ ಟನ್ ಸಮ ಹಾಗೂ ಒಂದು ಟನ್ ಸುಮಾರು ಇಪ್ಪತ್ತೆಂಟು ಮಣಕ್ಕೆ ಸಮ] ವಿಸ್ಫೋಟಕ ವಸ್ತುಗಳಿಗೆ ಸಮನಾಗಿತ್ತು.
ಹಿರೋಶಿಮಾದ ಮೇಲೆ ಬಾಂಬ್ ಹಾಕಿದ ಆ ಚಾಲಕ ಈಗ ಏನು ಯೋಚಿಸುತ್ತಿರಬಹುದು?
[ಡೈರಿಯ ಒಂದು ಹಾಳೆ]
ಅಶೋಕಾ ಮಾರ್ಕಿಟ್, ಜಮ್ಮು
***
ಸಹೋದರ ಲೋನ್,
ಬದುಕಿಯೇ ಇದ್ದೀಯ! ಸ್ವಾತಂತ್ರ್ಯ ಸಮಾರಂಭದ ಹದಿನೆಂಟನೆಯ ಹುಟ್ಟುಹಬ್ಬಕ್ಕೆ ಶುಭಾಶಯಗಳು. ಆದರೆ ಸಾಹೇಬರೇ, ನಿಮ್ಮ ಋಷಿಗಳು ಮತ್ತು ಮುಸಲ್ಮಾನ ಧರ್ಮಗುರುಗಳ ಉದ್ಯಾನದಲ್ಲಿ ಈ ಅಧ್ಭುತ ಕೆಲಸವೇನು ಮಾಡಿದಿರಿ? 1957ರ ಪರಿಸ್ಥಿತಿಯನ್ನು ಮತ್ತೆ ಸೃಷ್ಟಿಸಿದ್ದೀರೆಂದು ಕೇಳಿದೆ. ಏನಾಗುವುದು ಎಂದು ಯೋಚಿಸುತ್ತೇನೆ. ಮುಸಲ್ಮಾನರಾದ ನಿಮಗೆ ನಾವು ನಮ್ಮ ರಕ್ತ ಕುಡಿಸಿದರೂ ಸಹ ನೀವು ನಿಮ್ಮ ಕೆಟ್ಟ ಕೆಲಸದಿಂದ ದೂರವಿರಲಾರಿರಿ.
ಇಂದಿನ ಈ ಹೊಸ ಜನಾಂಗ ಹೇಗಿದೆ? ಅದು ಅಸ್ತ್ರ-ಶಸ್ತ್ರಗಳಿಂದ ಮುಸಲ್ಮಾನರಾದ ನಿಮ್ಮನ್ನು ‘ಸ್ವತಂತ್ರ’ಗೊಳಿಸಲು ಬಂದಿದ್ದಾರೆಂದು ಕೇಳಿದೆ. ಆದರೆ ನಾವು ಹೇಗೆ ನಿಮ್ಮನ್ನು ನಂಬುವುದಿಲ್ಲವೋ, ಹಾಗೆಯೇ ಈ ಹೋರಾಟಗಾರರು ಸಹ ನಂಬುವುದಿಲ್ಲ. ಏಕೆಂದರೆ ನೀವು ಸಹ ಅವರಿಗೆ ಸಹಕರಿಸುತ್ತಿಲ್ಲವೆಂದು ಕೇಳಿದೆ. ನಿಮಗೆ ಅವರ ಬಗ್ಗೆ ಸಹಾನುಭೂತಿ ಇಲ್ಲವೆಂದಲ್ಲ, ಪ್ರತಿಯಾಗಿ ಭಾರತದ ಸೈನ್ಯ ಈ ಧಾರ್ಮಿಕ ಹೋರಾಟಗಾರರಿಗಿಂತ ಮೊದಲು ನಿಮ್ಮನ್ನೇ ಕೊಂದರೆ ಎಂಬ ಭಯ ನಿಮಗಿದೆ. ಕಾಶ್ಮೀರ ಎಂದೂ ತನ್ನನ್ನು ತಾನು ನಾಶಪಡಿಸಿಕೊಳ್ಳಲು ಬಯಸುವುದಿಲ್ಲವೆಂಬುದು ನನಗೆ ತಿಳಿದಿದೆ. ಅವರಿಗೆ ಸದಾ ಸಿದ್ಧವಾದ ಖೀರು ಸಿಗಬೇಕು. ಅವರು ನಾಯಿಗಳಿಂದ ತೊಂದರೆಗೊಳಗಾಗದೆ ನಿತ್ಯ ಈದ್ ಆಚರಿಸಲು ಬಯಸುತ್ತಾರೆ.
ಸರಿ, ತಮಾಷೆಯ ಮಾತು ಸಾಕು. ಹೊಸ ಕಥೆಯನ್ನು ಬರೆದಿದ್ದೀಯ, ಹೇಳು? ಒಂದು ಹಿಂದಿ ಪತ್ರಿಕೆಯ ಸಂಪಾದಕರು ನನ್ನ ಹಿಂದೆ ಪಟ್ಟುಬಿಡದೆ ಬಿದ್ದಿದ್ದಾರೆ; ಅಲಿ ಮುಹಮ್ಮದ್ ಲೋನರ ಹೊಸ ಕಾಶ್ಮೀರಿ ಕಥೆಯ ಹಿಂದಿ ಅನುವಾದ ಅವರ ಪತ್ರಿಕೆಯಲ್ಲಿ ಪ್ರಕಟವಾಗಬೇಕೆಂಬುದು ಅವರ ಇಚ್ಛೆಯಾಗಿದೆ.
ನೀನು ಸಾಹಿತಿಯಾಗಿದ್ದೀಯ. ನಿನ್ನ ಸುತ್ತಮುತ್ತ ಘಟಿಸುತ್ತಿರುವುದನ್ನು ಗಮನಿಸದೆ, ಒಂದು ಒಳ್ಳೆಯ ಕಥೆಯನ್ನು ಕೂಡಲೇ ನನಗೆ ಕಳುಹಿಸು. ಈಗ ಇಲ್ಲಿ ತುಂಬಾ ಬಿಸಿಲಿದೆ. ನಾನು ಮಂಜಿನಂಥ ತಣ್ಣನೆಯ ಬೀರು ಕುಡಿದು ದಿನಗಳನ್ನು ಕಳೆಯುತ್ತೇನೆ. ನಿಮ್ಮ ಲಿವರ್ ಹಾಳಾಗಿದೆ, ಮದ್ಯವನ್ನು ಸೇವಿಸಬೇಡಿ ಎಂದು ವೈದ್ಯರು ಹೇಳುತ್ತಾರೆ.
ಆದರೆ ಲೋನ್, ನಾನು ಮದ್ಯ ಕುಡಿಯದಿದ್ದರೆ ಏನು ಮಾಡಲೆಂದು ನೀನೇ ಹೇಳಿಬಿಡು. ಎರಡು ದೇಶಗಳ ಈ ಕೆಳಮಟ್ಟದ ರಾಜಕೀಯ ಮತ್ತು ಈ ರಾಜಕೀಯದ ಕೆಟ್ಟ ಮತ್ತು ಸಂಹಾರಕ ಪರಿಣಾಮಗಳು ಒಬ್ಬ ಮನುಷ್ಯನನ್ನು ಸಾಮಾನ್ಯವಾಗಿರಲು ಹೇಗೆ ಬಿಡುತ್ತದೆ?
ಈಗ ಪರಿಸ್ಥಿತಿ ಹೇಗಿದೆಯೋ, ಯಾರಿಗೆ ಗೊತ್ತು? ಆದರೆ ನನಗೆ ಸಾಕಾಗಿ ಹೋಗಿದೆ. ಈ ಜೀವನ ಬದುಕಲು ಯೋಗ್ಯವಾಗಿಲ್ಲ. ಜೀವನ ಬದುಕಲು ಯೋಗ್ಯ ಎನ್ನುವವರು ನನ್ನ ದೃಷ್ಟಿಯಲ್ಲಿ ಮಹಾಮೂರ್ಖರು.
ದೇವರ ದಯೆಯಿಂದ ನೀನು ಸಹ ಅಂಥ ಮೂರ್ಖರಲ್ಲಿ ಒಬ್ಬನಾಗಬೇಡ! ನೀನು ಬದುಕಿದ್ದರೆ ಪತ್ರಕ್ಕೆ ಉತ್ತರಿಸು! ಆದರೆ ಅದಕ್ಕೂ ಮೊದಲು ಕಥೆಯನ್ನು ಕಳುಹಿಸು.
ನಿನ್ನ ಸಹೋದರ,
ಸೇಠಿ.
***
“ನಿನ್ನ ಹೆಸರು?”
“ಅಹಮದ್ ದೀನ್.”
“ಎಲ್ಲಿಯವನು?”
“ಬಾಗ್ ತಾಲ್ಲೂಕು, ಪುಂಛ್.”
“ಎಂದಿನಿಂದ ಸೈನ್ಯದಲ್ಲಿದ್ದೀಯ?”
“ಮೂರೂವರೆ ವರ್ಷಗಳಿಂದ.”
“ಸರಿ, ಇಲ್ಲಿಗೆ ನಿನ್ನನ್ನು ಕಳುಹಿಸಿದವರು ಯಾರು?”
“ಗಡಿಯಾಚೆಗೆ ಹೋಗಲು ಆದೇಶ ಸಿಕ್ತು, ನಾನು ಹೊರಟು ಬಂದೆ.”
“ಇಲ್ಲಿ ನಿನ್ನನ್ನು ಕೊಲ್ಲಲಾಗುತ್ತೆ ಅಂತ ನೀನು ಯೋಚಿಸಲಿಲ್ಲವೇ? ಇಲ್ಲಿ ನಾವಿದ್ದೇವೆ, ನಮ್ಮ ಸೈನ್ಯವಿದೆ, ಹೋಮ್‌ಗಾರ್ಡ್ ಇದೆ.”
“ಸ್ವಾಮಿ, ನಾನು ಸೈನ್ಯಕ್ಕೆ ಸೇರಿದವನು. ನಾವು ಆದೇಶವನ್ನು ಪಾಲಿಸಬೇಕಾಗುತ್ತೆ. ನಿಮ್ಮ ಅಧಿಕಾರಿಯ ಆದೇಶವನ್ನು ನೀವು ಅಲ್ಲಗೆಳೆಯುತ್ತೀರ?”
“ಸರಿ. ನನ್ನ ಇನ್ನೊಂದು ಪ್ರಶ್ನೆಯಿದೆ.”
“ಹೇಳಿ ಸ್ವಾಮಿ!”
“ನಿನಗೆ ಮಕ್ಕಳೆಷ್ಟು?”
“ನನಗೆ ಮಕ್ಕಳು? ಹೇ ಖುದಾ! ನನಗೆ ಮಕ್ಕಳು? ಸ್ವಾಮಿ, ನೀವೇಕೆ ನನಗೆ ಈ ಪ್ರಶ್ನೆಯನ್ನು ಕೇಳಿದಿರಿ? ಬೇರೆ ಪ್ರಶ್ನೆ ಕೇಳಿ! [ರೋದಿಸುತ್ತಾ] ಸಕೀನಾ, ನನ್ನನ್ನು ಕ್ಷಮಿಸು!”
“ಸಕೀನಾ! ಸಕೀನಾ ಯಾರು?”
“ನನ್ನ ಹೆಂಡತಿ, ಅವಳನ್ನು ನಾನು ಇಬ್ಬರು ಮಕ್ಕಳೊಂದಿಗೆ ಆಚೆಯ ಗಡಿಗೆ ಬಿಟ್ಟು ಬಂದೆ. ಸ್ವಾಮಿ, ಅವಳ ಹೆಸರು ಹೇಳಬೇಡಿ. ನನ್ನೆದೆಗೆ ಚೂರಿ ಹಾಕಿದಂತಾಗುತ್ತದೆ. ಆ ಬಡಪಾಯಿ ತುಂಬಾ ಕಷ್ಟ ಅನುಭವಿಸುತ್ತಿದ್ದಾಳೆ. ಈಗ ಅವಳು ಮಕ್ಕಳನ್ನು ಹೇಗೆ ನೋಡಿಕೊಳ್ತಾಳೆ? ಅಸಲಮ್ ಶಾಲೆಗೆ ಹೇಗೆ ಹೋಗ್ತಾನೆ. ನೀಲೋಫರ್ ಕುರಾನನ್ನು ಓದಲು ಹೇಗೆ ಹೋಗ್ತಾಳೆ? ಈಗ ನನ್ನ ವೃದ್ಧ ತಂದೆಗೆ ಏನು ಕಷ್ಟಗಳು ಬರುತ್ತವೆಯೋ? ನನ್ನ ಮನೆ! ಮನೆಯ ಅಂಗಳ! ಅಂಗಳದಲ್ಲಿನ ಮರಗಳ ಆ ತಂಪನೆ ನೆರಳು. ಯಾ ಖುದಾ, ಈ ಯುದ್ಧ ಏಕಾಯಿತು? ಈ ಯುದ್ಧವನ್ನು ಪ್ರಾರಂಭಿಸಿದವರು ಯಾರು? ಈ ಯುದ್ಧವನ್ನು ಆರಂಭಿಸಿದವನು ತುಂಬಾ ನೀಚ ಮನುಷ್ಯ. ಇಲ್ಲ-ಇಲ್ಲ, ಅವನು ಮನುಷ್ಯನಲ್ಲ, ರಾಕ್ಷಸ. ಅವನ ಎದೆಗೆ ಗುಂಡು ಹಾರಿಸಿ ಎಲ್ಲಾ ಸ್ಟೇನ್‌ಗನ್‌ಗಳನ್ನು ಬರಿದು ಮಾಡಬೇಕು.”
[ಒಂದು ರೇಡಿಯೋ ಸಂದರ್ಶನ]
***
ಇದು ಆಕಾಶವಾಣಿ.
ಈಗ ನೀವು........ರಿಂದ ಸಮಾಚಾರ ಕೇಳಿ.
ಇಂದು ಪಾಕಿಸ್ತಾನದ ಸೈನ್ಯ ಛಂಬ್ ಸೆಕ್ಟರ್ ಮೇಲೆ ಪ್ಯಾಟನ್ ಟ್ಯಾಂಕುಗಳ ಸಹಾಯದಿಂದ ದೊಡ್ಡ ಪ್ರಮಾಣದಲ್ಲಿ ಆಕ್ರಮಣವೆಸಗಿತು. ನಮ್ಮ ವಾಯುಸೇನೆಯ ವಿಮಾನಗಳು ಈ ಟ್ಯಾಂಕುಗಳ ಮೇಲೆ ಗುಂಡಿನ ಮಳೆಗೆರೆದವು.....
[ರೇಡಿಯೋ ಒಂದರ ಸುದ್ದಿ]
***
ಶ್ರೀನಗರ,
ಸೆಪ್ಟೆಂಬರ್, 1965
ಸಹೋದರ ಸೇಠಿ,
ನಿನ್ನ ಪತ್ರಕ್ಕೆ ಸಮಯಕ್ಕೆ ಸರಿಯಾಗಿ ಉತ್ತರಿಸಲಿಲ್ಲ, ಇದಕ್ಕೆ ನನಗೆ ನಾಚಿಕೆಯಾಗುತ್ತದೆ. ನಿನಗೆ ನನ್ನ ಕಥೆಯನ್ನು ಸಹ ಕಳುಹಿಸದಾದೆ. ಆದರೆ ನಿನಗೆ, ನಾನ್ಯಾವ ಮಾನಸಿಕ ಯಾತನೆಯಿಂದ ದಿನಗಳನ್ನು ಕಳೆಯುತ್ತಿದ್ದೇನೆ ಎಂಬುದು ತಿಳಿದಿದೆ. ಹಗಲು ವಿಶ್ರಾಂತಿಯಿಲ್ಲ, ರಾತ್ರಿಯೂ ನೆಮ್ಮದಿಯಿಲ್ಲ. ಮನಸ್ಸು ಮತ್ತು ಮಿದುಳು ಸುಳಿಯೊಂದರಲ್ಲಿ ಸಿಲುಕಿವೆ. ಈ ಸುಳಿಯಿಂದ ಹೊರ ಬರುವ, ಈ ಸುಳಿಯಿಂದ ಪಾರಾಗುವ ಅಥವಾ ದಡ ಸೇರುವ ಯಾವ ಸಾಧ್ಯತೆಯೂ ಕಾಣ ಬರುವುದಿಲ್ಲ.
ಸೇಠಿ!
ಇದೇನಾಯಿತು ನಮಗೆ? ನಾವೆಂಥ ಜನ?
ಇನ್ನೊಬ್ಬರ ಶಕ್ತಿಯನ್ನು ನೋಡಿ ಹೆದರುವವರು, ಕುಣಿಯುವವರು ನಾವು! ನಮ್ಮ ಬಳಿ ತಿನ್ನಲು ಆಹಾರವಿಲ್ಲ. ಜನ ಇನ್ನೂ ಬಡತನ, ಅಜ್ಞಾನ ಮತ್ತು ರೋಗಗಳಿಗೆ ಬಲಿಯಾಗಿದ್ದಾರೆ. ನಮ್ಮ ಮಕ್ಕಳು ಇಂದು ಹಸಿದು ದಿನಗಳನ್ನು ಕಳೆಯುತ್ತಾರೆ. ನಮ್ಮ ಹೆಂಡತಿ, ತಾಯಿಂದಿರು, ಸಹೋದರಿಯರು ಇಂದೂ ಸಹ ಗುಲಾಮಗಿರಿಯ ಪರಿಸ್ಥತಿಯಲ್ಲಿ ಜೀವನವನ್ನು ಕಳೆಯುತ್ತಾರೆ. ನಮ್ಮ ಗಂಡಸರು ಇಂದೂ ಸಹ ಹೊಟ್ಟೆಗಾಗಿ ಮನೆ-ಮನೆ ಅಲೆಯುತ್ತಾರೆ. ಹೀಗಿರುವಾಗ ಈ ಯುದ್ಧಕ್ಕೇನು ಅರ್ಥವಿದೆ?
ನೀನು ಅರ್ಥಶಾಸ್ತ್ರವನ್ನು ಓದಿರಬಹುದು. ಅದರಲ್ಲಿ ಮೂರು ಶಬ್ದಗಳಿವೆ; ಇವುಗಳಿಂದ ರಾಷ್ಟ್ರವೊಂದರ ಜೀವನ ಮಟ್ಟವನ್ನು ಅಳೆಯಲಾಗುತ್ತದೆ-
-ಅವಶ್ಯಕತೆಗಳು.
-ಅನುಕೂಲತೆಗಳು.
-ಮತ್ತು ವಿಲಾಸದ ವಸ್ತುಗಳು.
ಇನ್ನೂ ನಮ್ಮ ಆವಶ್ಯಕತೆಗಳು ಈಡೇರುವುದಿಲ್ಲ, ಹೀಗಿರುವಾಗ ಅನುಕೂಲತೆಗಳ ಮಾತು ದೂರವೇ. ವಿಲಾಸತೆಯನ್ನು ಅನುಭವಿಸುವ ಶಕ್ತಿ ಸ್ವತಃ ನಮ್ಮ ಅನ್ನದಾತರಿಗೇ ಇಲ್ಲದಿರುವಾಗ ನಾವೇಕೆ ವಿಲಾಸದ ಬಗ್ಗೆ ಯೋಚಿಸಬೇಕು? ಈಗ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿರುವ ಯುದ್ಧವೇ ಆ ವಿಲಾಸ!
ಎರಡು ದೇಶಗಳು ಕೆಲವು ದಿನಗಳು ಮಾತ್ರ ಹೋರಾಡುತ್ತದೆ ಎಂಬ ನಂಬಿಕೆ ನನಗಿದೆ. ನಂತರ ಒಂದು ದೇಶದ ವಸ್ತು-ಸಾಮಾನುಗಳೂ ಮುಗಿದು ಹೋಗುತ್ತವೆ, ಎರಡನೆಯ ದೇಶದ ವಸ್ತು-ಸಾಮಾನುಗಳೂ ಮುಗಿದು ಹೋಗುತ್ತವೆ. ಆಗಲೇ ಎರಡು ದೇಶಗಳಿಗೆ ಬುದ್ಧಿ ಬರುತ್ತದೆ, ಆಗ ಅವುಗಳು ಇದೇನಾಯಿತು, ನಾವೆಂಥ ಮೂರ್ಖತನದ ಕೆಲಸ ಮಾಡಿದೆವು ಎಂದು ಯೋಚಿಸುತ್ತವೆ. ಇಂದು ಯಾರ ಭೂಮಿಯನ್ನು ಸಹ ಗೆಲ್ಲುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಹೌದು, ಜನರನ್ನು ನಿರ್ಜನಗೊಳಿಸುವುದು, ಅವರನ್ನು ಕೊಲ್ಲುವುದು ಹಾಗೂ ಅವರ ಸಂಪತ್ತನ್ನು ನಾಶ ಮಾಡುವುದು ಸಾಧ್ಯ.
ಸೇಠಿ, ಎರಡೂ ದೇಶಗಳಿಗೆ ಕಿರುಚಿ, ‘ದುಷ್ಟರೇ, ಈ ಹುಚ್ಚುತನ ಬಿಡಿ, ಈ ಯುದ್ಧವನ್ನು ನಿಲ್ಲಿಸಿ, ಮುಂದಿಟ್ಟ ಹೆಜ್ಜೆಗಳಿಂದ ಹಿಂದಕ್ಕೆ ಸರಿಯಿರಿ, ಯುದ್ಧದಿಂದ ಏನೂ ಲಭಿಸದು, ನೀವು ನಾಶವಾಗುವಿರಿ. ಈ ಯುದ್ಧದ ಶೂಲ ಯುಗ-ಯುಗಾಂತರದವರೆಗೆ ನಿಮ್ಮ ಹೃದಯಕ್ಕೆ ಚುಚ್ಚುತ್ತಿರುತ್ತದೆ’ ಎಂದು ಹೇಳಲು ಮನಸ್ಸಾಗುತ್ತದೆ.
ಆದರೆ ಯಾರಿಗೆ ಹೇಳಲಿ?
ಕೇಳುವವರು ಯಾರು?
ಕಾನೂನು ಪ್ರವೇಶಿಸಿ ಅಲಿ ಮುಹಮ್ಮದ್ ಲೋನನನ್ನು ಬಂಧಿಸುತ್ತದೆ. ಅಲಿ ಮುಹಮ್ಮದ್ ಲೋನ್ ದೇಶದ್ರೋಹಿ, ಅವನು ದೇಶಭಕ್ತನಲ್ಲ ಎನ್ನಲಾಗುತ್ತದೆ, ಅವನು ನಮ್ಮ ಯುದ್ಧದ ಸಿದ್ಧತೆಗಳಲ್ಲಿ ತಡೆವೊಡ್ಡುತ್ತಿದ್ದಾನೆ ಎನ್ನಲಾಗುತ್ತದೆ, ಅವನ ನಾಲಿಗೆಯನ್ನು ತುಂಡರಿಸಬೇಕು ಎಂದೂ ಹೇಳಲಾಗುತ್ತದೆ.
ಮತ್ತೆ ಸೇಠಿ?
ಆ ಸಮಯದಲ್ಲಿ ನೀನೂ ಹೀಗೆ ಹೇಳುತ್ತೀಯ- ‘ಹೌದು, ಎಷ್ಟಾದರೂ ಮುಸಲ್ಮಾನ! ಶಾಂತಿಯ ಮುಖವಾಡ ಧರಿಸಿ ಅಶಾಂತಿಯ ಮಾತುಗಳನ್ನಾಡುತ್ತಾನೆ. ಗೆಳೆತನದ ಮಾತನಾಡಿ ನಮ್ಮ ಜನರನ್ನು ಹೇಡಿ ಮಾಡುವ ಸಂಚು ಮಾಡುತ್ತಾನೆ, ಇವನಿಗೆ ಗಲ್ಲು ಶಿಕ್ಷೆಯಾಗಬೇಕು.’
ಸೇಠಿ, ನಾನು ಭಾವುಕನಾಗಲಿಲ್ಲ ತಾನೇ?
ನಿನ್ನ ಸಹೋದರ,
ಅಲಿ ಮುಹಮ್ಮದ್ ಲೋನ್.
***
“ಹೋಗ್ಲಾ?”
“ಹೂಂ.”
“ಇವತ್ತು ಬೇಗ ಬನ್ನಿ, ನನ್ನ ಕಣ್ಣುಗಳು ಬಡಿದುಕೊಳ್ತಿವೆ.”
“ಆಧಾರವಿಲ್ಲದ ಭಯ...!”
“ಆದರೆ ಇವತ್ತು ಸ್ವಲ್ಪ ಬೇಗ ಬಂದರೆ ತೊಂದರೆ ಏನು?”
“ಸರಿ-ಸರಿ. ಕರ್ಫ್ಯೂ ಹಾಕೋದಕ್ಕಿಂತ ಮೊದಲೇ ಬರ್ತೀನಿ.”
“ನನಗೆ ತುಂಬಾ ಚಿಂತೆಯಾಗ್ತಿದೆ.”
“ಎಲ್ಲಾ ಬೊಗಳೆ. ಸರಿ, ನಾನು ಹೊರಟೆ. ಮಕ್ಕಳನ್ನು ಅಲ್ಲಿ-ಇಲ್ಲಿ ಅಂತ ಎಲ್ಲಿಗೂ ಕಳಿಸಬೇಡ.”
“ನಿಮಗೆ ಸದಾ ಮಕ್ಕಳ ಚಿಂತೆ, ನಿಮ್ಮ ಬಗ್ಗೆ ಚಿಂತೆಯೇ ಇಲ್ಲ.”
“ಏನ್ ಮಾಡ್ಲಿ? ಕೆಟ್ಟ ಜೀವನ, ಕೆಟ್ಟ ಪರಿಸ್ಥಿತಿ!”
[ಕಚೇರಿಗೆ ಹೋಗುವುದಕ್ಕೆ ಮೊದಲಿನ ಸಂಭಾಷಣೆ]
***
“ಹಲೋ ಲೋನ್.”
“ಓಹೋ ಪ್ರಾಣ್, ನೀನಿವತ್ತು ಯಾವ ವಿಷಯದ ಬಗ್ಗೆ ಖುಷಿಯಾಗಿದ್ದೀಯ?”
“ಅದನ್ನು ಆಮೇಲೆ ಹೇಳ್ತೀನಿ. ಈ ಕಾಂಟ್ರಾಕ್ಟ್ ಮೇಲೆ ಸಹಿ ಮಾಡು. ಈ ನಾಟಕಕ್ಕೆ ನಾನು ಐವತ್ತು ರೂಪಾಯಿಗಳನ್ನಿಟ್ಟಿದ್ದೇನೆ? ಸರಿಯಾಗುತ್ತೆ.”
“ಸರಿಯೇ. ಒಳ್ಳೇದು ನಾನು ಹೊರಟೆ. ನನಗೆ ತಡವಾಗ್ತಿದೆ.”
“ಇರಲಿ ಬಿಡು, ನೀನು ಅಕಾಡೆಮಿಯಲ್ಲಿ ಮಾಡುವುದಕ್ಕಾದರೂ ಏನಿರುತ್ತೆ? ಇನ್ನೂ ಸ್ವಲ್ಪ ಹೊತ್ತು ಕೂತ್ಕೋ. ಬಾ, ಕಾಫಿ ಕುಡುಯೋಣ. ಮತ್ತೆ ಒಳ್ಳೆಯ ಸುದ್ದಿಯನ್ನೂ ಕೇಳು.”
“ಒಳ್ಳೆ ಸುದ್ದಿ ಏನು?”
“ಸಾಹೇಬರೇ, ಲಾಹೋರನ್ನು ಗೆಲ್ಲಲಾಯಿತು!”
“ನೀನೆಲ್ಲಿ ಕೇಳಿದೆ?”
“ವಿಶೇಷ ಸುದ್ದಿ ಬಂದಿದೆ. ಒಂದು ಗಂಟೆಯ ಬುಲೆಟಿನ್ ಕೇಳು. ವೆರಿ ಗುಡ್!”
“ಈಗ ಛಂಬ್ ಮೇಲೆ ಆಕ್ರಮಣ ಮಾಡಿದರೆ ಏನು ಪರಿಣಾಮವಾಗುತ್ತೆ ಅನ್ನೋದು ತಿಳಿಯುತ್ತೆ!”
[ರೇಡಿಯೋ ಸ್ಟೇಷನ್‌ನಲ್ಲಿನ ಒಂದು ಮಾತುಕತೆ]
***
“ಸಾಹೇಬರೇ, ನಮಸ್ಕಾರ!”
“ಸುಖವಾಗಿರು, ಆರೋಗ್ಯವಾಗಿರು. ಇವತ್ತೇಕೆ ತಡಮಾಡಿದೆ?”
“ಸ್ವಾಮಿ, ಸ್ವಲ್ಪ ರೇಡಿಯೋ ಸ್ಟೇಷನ್‌ವರೆಗೆ ಹೋಗಿದ್ದೆ!”
“ಏನಾದ್ರು ಕೇಳಿದೆಯಾ?”
“ಕೇಳಿದೆ. ಲಾಹೋರನ್ನು ಗೆದ್ದುಕೊಳ್ಳಲಾಯಿತೆಂದು ಹೇಳಲಾಗುತ್ತಿದೆ.”
“ಓಹ್ ಗಾಡ್!”
“ಸಾಹೇಬರೇ, ನೀವೇಕೆ ಹೆದರಿದಿರಿ?”
“ಲೋನ್, ನಮಗೇನಾಗಿದೆ? ನಮಗೆ ಯಾವಾಗ ಬುದ್ಧಿ ಬರುತ್ತೆ?”
“ಖುದಾನಿಗೇ ಗೊತ್ತು!”
“ನೀನು ನಮಾಜ್ ಓದಲ್ವಾ?”
“ಸ್ವಾಮಿ, ತುಂಬಾ ದಿನಗಳಿಂದ ಓದಿಲ್ಲ.”
“ಇವತ್ತು ನನಗಾಗಿ ಓದು. ಯುದ್ಧ ನಿಲ್ಲಲೆಂದು ಖುದಾನಲ್ಲಿ ಬೇಡಿಕೋ.”
“ಸಾಹೇಬರೇ, ನಾನು ಬೇಡಿಕೊಂಡರೆ ಏನಾಗುತ್ತೆ?”
“ಏನಾದರೂ ಆಗಬಹುದು. ನೋಡು ಲೋನ್, ಇವತ್ತು ರಾತ್ರಿ ಒಂದು ವಿಚಿತ್ರ ಘಟನೆ ಸಂಭವಿಸಿತು. ನನ್ನ
ಹೆಂಡತಿ ರಾತ್ರಿ ಒಂದು ಕ್ಷಣವೂ ನಿದ್ರಿಸಲಿಲ್ಲ.”
“ಏಕೆ, ಎಲ್ಲರೂ ಕ್ಷೇಮವೇ ಅಥವಾ...”
“ಲೋನ್, ಏನು ಮಾತಾಡ್ತೀಯ! ಮಗ ಯುದ್ಧಭೂಮಿಯಲ್ಲಿದ್ದಾಗ ತಾಯಿ ನಿದ್ರಿಸಲು ಸಾಧ್ಯವೇ?”
“ನೀವು?”
“ನಾನು? ನಾನು ದೇವರನ್ನು ಸ್ಮರಿಸುತ್ತೇನೆ. ನಾನು ತಂದೆ. ಅಪ್ಪನ ಮನಸ್ಸಿನಲ್ಲಿ ಮಕ್ಕಳ ಬಗ್ಗೆ ತಾಯಿಯಷ್ಟು ಮಮತೆ ಇರಲ್ಲ ಅಂತ ಹೇಳ್ತಾರೆ. ಇದು ಸರಿಯಿರಬಹುದು. ಈ ಯುದ್ಧ ಆರಂಭವಾದಾಗಿನಿಂದ ನಾನು ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಕುಂದಿದ್ದೇನೆ.”
[ತನ್ನ ಅಧಿಕಾರಿಯೊಂದಿಗೆ ಮಾತುಕತೆ]
***
ಪರಿಸ್ಥಿತಿ ಎಷ್ಟು ಹಾಳಾಗಿದೆ ಎಂಬುದು ಈ ಮಕ್ಕಳಿಗೆ ಅರ್ಥವಾಗುವುದಿಲ್ಲ?
ನಾಹಿದ್ ಹಿಂದು-ಮುಂದು ಯೋಚಿಸದೆ ಹಾಡುತ್ತಿದ್ದಾಳೆ-
“ಮೈ ಕ್ಯಾ ಕರೂಂ ರಾಮ್ ಮುಝೆ ಬುಡ್ಢಾ ಮಿಲ್ ಗಯಾ”
ವಿಕಾರ ಖಾಕಿ ಬಣ್ಣದ ಮಣ್ಣಿನಿಂದ ಸೇಬು ಹಣ್ಣುಗಳನ್ನು ಮಾಡುತ್ತಿದ್ದಾಳೆ.
ಶಮಶಾದ್ ಗೌತಮ ಬುದ್ಧನ ಬಗ್ಗೆ ಪೀಠಿಕೆ ಬರೆಯುತ್ತಿದ್ದಾಳೆ. ಮಕ್ಕಳ ತಾಯಿ ಚಳಿಗಾಲಕ್ಕೆ ಟೊಮೇಟೋದ ಒಣ ಹೋಳುಗಳನ್ನು ಮಾಲೆಯಲ್ಲಿ ಪೋಣಿಸುತ್ತಿದ್ದಾಳೆ. ನಾಳೆ ಏನಾಗುವುದು? ನಾಳೆ ಇಂದಿನಂಥ ಪರಿಸ್ಥಿತಿ ಇರಲಾರದು ಎಂದು ಅವಳು ಯೋಚಿಸುತ್ತಿರಬೇಕು; ಯುದ್ಧ ಕೊನೆಗೊಳ್ಳುವ ಸಂಭವವಿದೆ ಎಂದು ಆಶಿಸುತ್ತಿರಬೇಕು!
ಖುದಾ ಕೇಳಿಸಿಕೊಳ್ಳಲಿ, ಈ ಯುದ್ಧ ನಿಲ್ಲಲಿ!
ಮತ್ತೆ ನಾನೊಂದು ಹೊಸ ಕಥೆಯನ್ನು ಬರೆಯಲು ಸಾಧ್ಯವಾಗಬಹುದು, ಅದರ ಹಿಂದಿ ಅನುವಾದವನ್ನು ಸೇಠಿಗೆ ಕಳುಹಿಸಲು ಸಾಧ್ಯವಾಗಬಹುದು!
[ಡೈರಿ ಪುಟ]
____________________________________________________
ಮೂಲ ಲೇಖಕರು: ಅಲಿ ಮುಹಮ್ಮದ್ ಲೋನ್
1926 ರಲ್ಲಿ ಜನಿಸಿದ ಇವರು ಅನೇಕ ನಾಟಕಗಳು, ಕಾದಂಬರಿಗಳು ಮತು ಕಥೆಗಳನ್ನು ಬರೆದಿದ್ದಾರೆ. ಇವರು ನಾಟಕಕಾರರಾಗಿ ಮತ್ತು ಕಥೆಗಾರರಾಗಿ ಜನಪ್ರಿಯರಾಗಿದ್ದರು. 1972 ರಲ್ಲಿ ಇವರ ‘ಸುಯ್ಯಾ’ ಕೃತಿಗೆ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಲಭಿಸಿದೆ.
ಕನ್ನಡಕ್ಕೆ: ಡಿ.ಎನ್. ಶ್ರೀನಾಥ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.