ADVERTISEMENT

ಕಥೆ ‌| ರಜನಿ‌ ಹೇರ್‌ಸ್ಟೈಲ್ಸ್‌

ಮುನವ್ವರ್ ಜೋಗಿಬೆಟ್ಟು
Published 16 ಏಪ್ರಿಲ್ 2022, 19:30 IST
Last Updated 16 ಏಪ್ರಿಲ್ 2022, 19:30 IST
ರಜನಿ ಹೇರ್‌ಸ್ಟೈಲ್ಸ್‌
ರಜನಿ ಹೇರ್‌ಸ್ಟೈಲ್ಸ್‌   

ಮಾರ್ಣೇಮಿ ಕಟ್ಟೆಯ ಬೆಳಗ್ಗಿನ ಜಾವ ಕೋಳಿ ಕೂಗಿದ ಬಳಿಕ ಕಳೆದ ಹದಿನೈದು ವರ್ಷಗಳಿಂದ ಮಂಗಳವಾರ ಒಂದು ದಿನ ಬಿಟ್ಟು ಉಳಿದೆಲ್ಲಾ ದಿನಗಳಲ್ಲಿ ಸಾರ್ವಜನಿಕರಿಗೆ ತಪ್ಪದೆ ಕೇಳಿಸುತ್ತಿದ್ದ ಶಬ್ದವೆಂದರೆ ‘ಮಣಿಮಾರನ್’ನ ಕ್ಷೌರದಂಗಡಿಯ ಶಟರ್ ಎಳೆಯುವ ಸದ್ದು. ಸಾಲು ಅಂಗಡಿಗಳಲ್ಲಿ ಮೊದಲು ಬಾಗಿಲು ತೆರೆಯುವುದು ಮತ್ತು ಕೊನೆಗೆ ಬಾಗಿಲು ಮುಚ್ಚುವುದು ಅವನೇ. ‘ರಜನಿ ಹೇರ್‌ಸ್ಟೈಲ್ಸ್’ ಎಂದು ಒಂದೇ ಮೊಳೆಯ ಬಲದಲ್ಲಿ ಎಡ ಭಾಗದ ಕಡೆಗೆ ಕೊಂಚ ವಾಲಿ ನಿಂತ ಬೋರ್ಡು. ಅದರಲ್ಲಿ ಕಪ್ಪು ಕನ್ನಡಕ ಧರಿಸಿ ತುಟಿಗಳ ಮಧ್ಯೆ ತುಂಟನಗು ತಂದುಕೊಂಡು ಗಾಳಿಯಲ್ಲಿ ಕೈ ಬೀಸುವ ರಜನಿಕಾಂತ್ ಫೋಟೋ.

ಇನ್ನೂ ಸರಿಯಾಗಿ ಮುಸುಕು ಹರಿಯದಿರುವಾಗಲೇ ಶಟರ್ ತೆರೆಯುತ್ತದೆ. ಮಣಿ‌ಮಾರನ್ ಲೈಟು ಹಾಕಿ ನಿನ್ನೆಯ ಪತ್ರಗಳನ್ನೆಲ್ಲಾ ಕಪಾಟಿನೊಳಗೆ ತುಂಬಿದ ಮೇಲೆ ಇಂದಿನ ಪತ್ರಗಳನ್ನು ಗಾಜಿನ ಟೀಪಾಯಿಯ ಮೇಲೆ ಹರಡಿ ಬಿಡುತ್ತಾನೆ. ಮತ್ತೆ ಕಬ್ಬಡ್ಡಿ ಆಟಗಾರರು ಮಾಡುವಂತೆ ಬಲಗಾಲಿಟ್ಟು ಬಗ್ಗಿ ಹೊಸ್ತಿಲು ಮುಟ್ಟಿ ನಮಸ್ಕರಿಸಿ ಅಂಗಡಿಯೊಳಗೆ ಬರುತ್ತಾನೆ. ಆಗಲೇ ಅವನ ಅಂಗಿಯ ಮೇಲಿನ ಗುಂಡಿ ಹಾಕದೆ ತೆರೆದಿಟ್ಟ ರೋಮಗಳು ಮುಚ್ಚಿದ ಕಪ್ಪು ಎದೆ ತೆರೆದು ಕಾಣುತ್ತದೆ. ಎಣಿಸಿದರೆ ಹತ್ತೋ ಇಪ್ಪತ್ತೋ ಕೂದಲೇ ಇರುವ ಬೊಕ್ಕ ತಲೆಯ ಪ್ರದರ್ಶನವಾಗುತ್ತದೆ. ಅವನು ಅಲ್ಲೇ ಇದ್ದ ಬೆಂಕಿಪೊಟ್ಟಣ ಗೀರಿ ಅಗರ ಬತ್ತಿ ಪೊಟ್ಟಣದಿಂದ ಮೂರೋ ನಾಲ್ಕೋ ಅಗರಬತ್ತಿ ಹಚ್ಚುತ್ತಾನೆ. ಅದು ಮೆಲ್ಲಗೆ ಬೆಂಕಿ ಹೊತ್ತಿಕೊಳ್ಳುವಷ್ಟರಲ್ಲಿ ಎರಡು ಕಡ್ಡಿಗಳು ಅನಾಥ ಶವಗಳಾಗುತ್ತವೆ. ಆ ಅಗರಬತ್ತಿಗಳನ್ನು ಮೂರು ಬಾರಿ ಗಾಳಿಯಲ್ಲಿ ‌ಸುತ್ತುತ್ತಾನೆ. ಮತ್ತೆ ಅದರದ್ದೇ ಕಂಪು ಅಲ್ಲೆಲ್ಲವೂ ನೆಲೆಸಿ ಬಿಡುತ್ತದೆ. ದೇವರ ಫೋಟೋದ ಎದುರು ಇರಿಸಿದ್ದ ಸಾಬೂನು ತುಂಡಿನೊಳಗೆ ಅದರ ಬಾಲಗಳು ಹೂತು ಹೋಗುತ್ತವೆ. ಅಷ್ಟರಲ್ಲಿ ಹಳೆಯ ಟೇಪ್ ರೆಕಾರ್ಡರಿನಲ್ಲಿ ಕನ್ನಡ ಭಜನೆ ಪ್ರಾರಂಭಗೊಂಡು ಬಿಡುತ್ತದೆ. ‘ಎಷ್ಟು ಸಾಹಸವಂತ.. ನೀನೇ ಬಲವಂತ....’ ಪದ್ಯ ಅಲ್ಲಿ ತುಂಬಿ ಹೋಗುತ್ತದೆ. ಆ ತಾಳಕ್ಕೆ ಕುಣಿಯುತ್ತವೆಯೋ ಎಂದು ತೋರುವ ಥರಥರದ ಪೌಡರು ಡಬ್ಬಿಗಳು, ಕ್ರೀಮ್ ಬಾಟಲ್ಗಳು ಅಗರ ಬತ್ತಿ ಘಮದೊಂದಿಗೆ ಪರಿಮಳ ಹಂಚಿಕೊಂಡು ಅಲ್ಲಿ ವಿಶೇಷ ಅನುಭೂತಿಯನ್ನು ನಿರ್ಮಿಸಿ ಬಿಡುತ್ತದೆ. ಮಣಿಮಾರನ್ ಕಪಾಟಿನ‌ ಹಿಂದೆ ಅಡಗಿಸಿಟ್ಟ ಹಿಡಿಸೂಡಿ ತೆಗೆದು ಅಲ್ಲೊಮ್ಮೆ ಚೊಕ್ಕವಾಗಿ ಗುಡಿಸುತ್ತಾನೆ. ಅಲ್ಲೇ ಹತ್ತಿರದಲ್ಲಿ ಗಾಜಿಗೆ ತಾಗುವಂತೆ ಅಂಟಿಸಿದ ಸವಿತಾ ಸಮಾಜದ ಸಣ್ಣ ಬೋರ್ಡು, ಕಟ್ಟಿಂಗ್ 100, ಶೇವಿಂಗ್ 90 ಹೀಗೆ ಮಾಂಸದಂಗಡಿಯಂತೆ ಒಂದೊಂದಕ್ಕೂ ಬೇರೆ ಬೇರೆ ದರ ಮುದ್ರಿಸಿರುತ್ತದೆ. ಮತ್ತೊಮ್ಮೆ ಎದೆ ಮೈ ಮುಟ್ಟಿಕೊಂಡು ದೇವರ ಫೋಟೋದ ಹೂವಿನ ಬಳಿ ಹತ್ತು ರೂಪಾಯಿ ಜೊತೆಗೆ ಕೂದಲ ಜೊತೆಗಿನ ಯುದ್ಧದಲ್ಲಿ ಅಪ್ರತಿಮ ಅಸ್ತ್ರಗಳಾದ ಕತ್ತರಿ ಮತ್ತು ಬಾಚಣಿಗೆ ಇಟ್ಟು ಮತ್ತೆ ನಿಂತಲ್ಲೇ ಕಣ್ಮುಚ್ಚಿ ಸ್ವಲ್ಪ ಹೊತ್ತು ಧ್ಯಾನಸ್ಥನಾಗಿ ಬಿಡುತ್ತಾನೆ.

ಮಣಿಮಾರನ್ ಮೂಲತಃ ತಮಿಳುನಾಡಿನವನು. ಮಂಗಳೂರಿಗೆ ಬಂದು ಹದಿನೈದು ವರ್ಷಗಳಿಂದ ಈ ಸೆಲೂನ್ ಇಟ್ಟು‌ಕೊಂಡು ಬಾಡಿಗೆ ಮನೆಯಲ್ಲಿ ನೆಲೆಸಿ ಈಗ ಸ್ಥಳೀಯನಾಗಿ ಬಿಟ್ಟಿದ್ದಾನೆ. ಈ ಸುಪ್ರಭಾತ ಮುಗಿಯುವಷ್ಟರಲ್ಲಿ ಗ್ರಾಹಕನೊಬ್ಬ ಬಂದು ಅರ್ಧ ತಮಿಳು ಮಿಶ್ರಿತ ಕನ್ನಡದಲ್ಲೇ ‘ಕಟ್ಟಿಂಗ್ ಮಾಡ ಬೇಕಿತ್ತಲ್ವಾ?’ ಅನ್ನುತ್ತಾ ಬೆಳಗಿನ ಪಾತ್ರಃವಿಧಿಯನ್ನೂ ಪೂರೈಸದೆ ಕನಿಷ್ಟ ಬಾಯಿ ಕೂಡ ಮುಕ್ಕಳಿಸದೆ ಆಕಳಿಸುತ್ತಾ ಬಂದು ಸೀಟಿನಲ್ಲಿ ಆಸೀನನಾಗುತ್ತಾನೆ. ಸ್ಪ್ರೇ ಬಾಟಲಿಂದ ನೀರು ಚಿಮ್ಮಿಸಿ ಮಣಿಮಾರನ್ ಮುಗುಳ್ನಗುತ್ತಲೇ ‘ಹಾ.‌‌..’ ಎನ್ನುತ್ತಾ ಚಂದಗೆ ಬಾಚಿ ಅವನ ತಲೆಯಲ್ಲಿನ ಉಳಿದು ಹೋದ ಹಿಂದಿನ ದಿನ ಹಾಕಿದ್ದ ಎಣ್ಣೆಯ ಜಿಗುಟು ವಾಸನೆಯ ಕೋಪಕ್ಕೋ, ಅವನ ಬಾಯಿ ವಾಸನೆಯೋ ಮುಖದಲ್ಲಿ ಕೃತಕ ನಗೆ ತಂದುಕೊಂಡು ಕಚಕಚನೆ ಕೂದಲುಗಳನ್ನು ಕೊಚ್ಚಿ ಹಾಕತೊಡಗುತ್ತಾನೆ. ಹೊಸ ಗಿರಾಕಿಯಾದ ಕಾರಣ ‘ಸರ್ ಕೊನೆಯ ಬಾರಿ ಎಲ್ಲಿ ತೆಗೆದಿದ್ದು?’ ಎಂದು ಕೇಳಿ, ಕೊನೆಯ ಬಾರಿ ಕೂದಲು ತೆಗೆದದ್ದು ಸರಿಯಾಗಿಲ್ಲವೆಂದು ದೂಷಿಸುವುದು ಅವನ ವೃತ್ತಿ ಕೌಶಲ್ಯತೆ. ‘ಕೂದಲು ಉದುರುತ್ತಿದೆ, ಬಹಳ ಬೇಗ ಹೋಗಿ ಬಿಡಬಹುದು. ಹೊಸ ತೈಲ ಬಂದಿದೆ ಉಪಯೋಗಿಸಿ’ ಎಂಬ ವರಸೆಯೂ ತೆಗೆದರೆ ಹೊಸ ಗಿರಾಕಿ ಅವನ ಬುಟ್ಟಿಗೆ ಬಿದ್ದ ಹಾಗೆ. ಅಷ್ಟಕ್ಕೆ ತಲುಪಿ ಬಿಡುವ ಅಂಗಡಿಯ ಮಾಲಕನನ್ನು ಕೂದಲು ತೆಗೆಯುವಲ್ಲಿಂದಲೇ ಮಾರನು ಗುರುತಿಸಿದರೆ, ಅವನು ಪ್ರತಿಯಾಗಿ ಮುಗುಳ್ನಕ್ಕು, ತನ್ನ ಬೆಳ್ಳಗಾದ ಕೂದಲನ್ನು ನೀವಿಕೊಂಡು ಟೀಪಾಯಿ ಬಳಿ ಕುಳಿತುಕೊಂಡು, ಪತ್ರಿಕೆ ಓದುವಂತೆ ನಟಿಸುತ್ತಾನೆ. ಅವನ ಕಣ್ಣುಗಳು ಮಾತ್ರ ಅಲ್ಲಿ ಪತ್ರಿಕೆಯ ಮೇಲಿನ ನಟಿಯರ ಸೌಂದರ್ಯದ ಸುತ್ತ ಹೊರಳುತ್ತಿರುತ್ತದೆ. ಹೀಗೆ ದಿನಾ ಸಂಜೆವರೆಗೂ ಕೂದಲು ಕೊಚ್ಚಿದರೆ ಮಣಿಮಾರನ ಬದುಕು ತೊಂದರೆಯಿಲ್ಲದೆ ಸಾಗುತ್ತದೆ.

ADVERTISEMENT

ರವಿವಾರ ಬಂದರೆ ಸಾಕು, ಯುವಕರೆಲ್ಲರೂ ಸೆಲೂನ್ಗೆ ದೌಡಾಯಿಸುತ್ತಾರೆ. ಕೆಲವರು ಟಿವಿ ಇಡಬೇಕೆಂಬ ಅಪೇಕ್ಷೆ ಹೊಂದಿದ್ದ ಕಾರಣ ಸೆಲೂನಿನಲ್ಲಿ ಟಿವಿ ಇಟ್ಟದ್ದೂ ಆಗಿತ್ತು. ಆದರೆ ಐಪಿಎಲ್ ದಿನಗಳಲ್ಲಿ ಯುವಕರೆಲ್ಲಾ ಬರೀ ಆಟ ನೋಡಲಿಕ್ಕಾಗಿಯೇ ಕಿಕ್ಕಿರಿದು ಬರುವ ಗ್ರಾಹಕರಿಗೂ ಜಾಗವನ್ನು ಕೊಡದಾಗ, ಇದ್ದ ಟಿವಿಯನ್ನೂ ಮಾರನ್ ಮಾರಬೇಕಾದದ್ದು‌ ದುರಂತ. ಈಗ ಇರುವುದು ಟೇಪ್ ರೆಕಾರ್ಡರ್. ಅದು ಬೆಳಗ್ಗಿನ ಒಂದು ಘಂಟೆ ಭಜನೆ ಹಾಡಿದರೆ, ಮುಂದೆ ಮುಹಮ್ಮದ್ ರಫಿಯ ಹಾಡುಗಳು, ಇಳಯರಾಜ, ಎ.ಆರ್. ರಹಮಾನ್‌ರ ಹಾಡುಗಳು ಸಂಜೆಯ ತನಕ ಅಲ್ಲಿ ನೆಲೆಸುತ್ತದೆ. ರವಿವಾರ ಶೇವಿಂಗ್ ಕಟ್ಟಿಂಗ್ ಎನ್ನುತ್ತಾ ಯುವಕರು ಮಧ್ಯಾಹ್ನದ ಊಟಕ್ಕೂ ಸಮಯ ಕೊಡದಷ್ಟು ಮಾರನನ್ನು ದಣಿಸಿಬಿಡುತ್ತಾರೆ. ಅವನ ಕೈಗಳಲ್ಲಿ ಮಾಸಾಜ್ ಮಾಡಿಸಲಿಕ್ಕಾಗಿಯೇ ಕಾದು ನಿಲ್ಲುವ ಅದೆಷ್ಟೋ ಶಾಶ್ವತ ಗಿರಾಕಿಗಳು ಊರಲ್ಲಿ ಈಗ ತುಂಬಿ ಹೋಗಿದ್ದಾರೆ. ಯಾವ ಹೊಸ ಫ್ಯಾಶನ್ ಬಂದರೂ ಅಷ್ಟು ಕರಾರುವಕ್ಕಾಗಿ ಕೇಶಲಂಕಾರ ನಡೆಸಿ ಕೊಡುವ ಮಣಿಮಾರನ್ಗೆ ಊರು ತುಂಬಾ ಬೇಡಿಕೆ.

ಒಂದು ಬುಧವಾರ, ಮುಸುಕಿಗೆ ಮಣಿಮಾರನ್ ಅಂಗಡಿಗೆ ಬಂದಿದ್ದರೂ ಯಾವೊಬ್ಬ ಗಿರಾಕಿಯೂ ಬೋಣಿ‌ ಮಾಡಿರಲಿಲ್ಲ‌‌‌. ಅಷ್ಟರಲ್ಲೇ ಅಗಂತುಕನೊಬ್ಬ ಬಂದ. ಮಧ್ಯ ವಯಸ್ಕ, ತಲೆ ತುಂಬಾ ಕಪ್ಪು ಬಿಳಿ ಮಿಶ್ರಿತ ದಪ್ಪ ಗುಂಗುರು ಕೂದಲು. ತೆಳುವಾದ ಕುರುಚಲು ಗಡ್ಡ. ಮಾರನ್ಗೆ ಹಿಂದೆ ನೋಡಿದ ಪರಿಚಯವಿಲ್ಲ. ನೇರ ಬಂದವನೇ ಆಸೀನನಾದ. ‘ಕಟ್ಟಿಂಗ್.. ಸ್ವಲ್ಪ ಗಿಡ್ಡ ಮಾಡಿದರೆ ಸಾಕು’ ಅಂದು ಹಂದಾಡದೆ ಕುಳಿತು ಬಿಟ್ಟ. ಮಾರನ್ ‘ಆಗಲಿ’ ಎನ್ನುತ್ತಾ ಒಳಗಿನಿಂದ ಹಾಸು ಬೈರಾಸನ್ನು ಆಗಂತುಕನ ಕರಿ ಬಂಡೆಯಂತಹ ಅಗಾಧ ದೇಹಕ್ಕೆ ಹಾಸಿದ. ಕತ್ತರಿಯನ್ನು ಗಾಳಿಯಲ್ಲಿ ಹಿಚ್- ಕಿಚ್ ಎಂದು ಹೊಡೆದುಕೊಂಡ. ಇನ್ನೇನು ಸ್ಪ್ರೇ ಬಾಟಲಿನಿಂದ ನೀರು ಚಿಮುಕಿಸಬೇಕು ಅನ್ನುವಷ್ಟರಲ್ಲಿ, ‘ಹೇಯ್ ನೀರು ಏನು ಹಾಕ್ತೀಯಾ...ಶೀತ ಶೀತ ಜ್ವರ ಬಂದಿದೆ ನನ್ಗೆ’ ಅಂದ. ‘ಸಾರಿ... ಸಾರಿ ಸರ್’ ಎಂದ ಮಾರನ್ ಆ ಸೆಣಬಿನ ನಾರಿನಂತಹ ಕೂದಲನ್ನು ಹೇಗೆ ಕತ್ತರಿಸುವುದೆಂದು ಚಿಂತಿಸತೊಡಗಿದ. ಒಂದೊಂದು ಕೂದಲನ್ನು ಕತ್ತರಿಸಲು ಕಷ್ಟವಾಗುವಷ್ಟು ದಪ್ಪ ಕೂದಲುಗಳವು. ಹೇಗೂ ಕಷ್ಟಪಟ್ಟು ಕತ್ತರಿಸಿ ಮುಗಿಸಿದ. ‘ಸರ್ ಹಿಂದೆ ಎಲ್ಲಿ ಕೂದಲು ಕತ್ತರಿಸಿದಿರಿ’ ಎಂದು ಮಾರನ್ ಪ್ರಶ್ನಿಸಿದ. ‘ಎಲ್ಲಾದರೂ ನಿನ್ಗೇನಯ್ಯಾ, ನಿನಗೆ ಕೂದಲು ಕತ್ತರಿಸುವ ಕೆಲಸ’ ಎಂದು ಕಟುವಾಗಿ ಅವನು ಮರು ಉತ್ತರಿಸಿದ್ದ. ಕೂದಲು ಕತ್ತರಿಸಿದ್ದು‌ ಮುಗಿಯಿತು. ‘ಶೇವಿಂಗ್ ಮಾಡು’ ಅಂದ. ಮಾರನ್ ಅವನ ಕುರುಚಲು ಗಡ್ಡಕ್ಕೆ ಸಾಬೂನು ನೊರೆ ಹಚ್ಚಿದ‌. ಅವನ ಅಗಾಧ ಮುಖ ತುಂಬಾ ಬಿಳಿಯ ನೊರೆಯೇ ತುಂಬಿ ಸಂತಕ್ಲಾಸ್‌ನ ಹಾಗೆ ಕಾಣಿಸುತ್ತಿದ್ದ. ಬಿಳಿಯ ಗಡ್ಡವನ್ನು ನುಣ್ಣಗೆ ನೀವಿ ಬೋಳಿಸುವಾಗ ಅವನ ಬೆವರ ವಿಚಿತ್ರ ವಾಸನೆ ಅಲ್ಲಿ ನೆಲೆಸಿತ್ತು. ಫ್ಯಾನ್ ಹಾಕಿದರೂ ವಿಪರೀತವಾಗಿ ಬೆವರುವ ಅವನ ಗಡ್ಡ ಬೋಳಿಸಬೇಕಾದರೆ ಮಾರನ್ಗೆ ಸಾಕುಸಾಕಾಯಿತು. ನಾಲ್ಕೈದು ಬಾರಿ ‘ಎದ್ದು ಹೋಗಿ’ ಎಂದು ಹೇಳಲು ಮನಸ್ಸಾದರೂ ಗಂಟಲಲ್ಲಿಯೇ ತಡೆದು ಸುಮ್ಮನಾಗಿದ್ದ. ಗಡ್ಡ ಬೋಳಿಸಿ ಮುಗಿದಾಗ ಮಣಿಮಾರನ್ ಅವನ ಮುಖಕ್ಕೆ ಕ್ರೀಂ ಹಾಕಿ ಮುಖವನ್ನು ಉಜ್ಜಿದ. ಮೆಲ್ಲಗೆ ಅವನ ಮೆಲು ವಸ್ತ್ರ ತೆಗೆಯಬೇಕು ಅನ್ನುವಷ್ಟರಲ್ಲಿ ಆತ ಆಸನಂದಿಳಿದು ತೊಟ್ಟಿದ್ದ ಟೀ ಶರ್ಟಿನಿಂದ ಕೈಗಳಲ್ಲಿ ಹಾರಿಸಿ ಕಂಕುಳವೆತ್ತಿದ, ಮೂಗು ಮುಚ್ಚಿಕೊಳ್ಳಬೇಕೆನಿಸಿತು. ತೋರುಗೊಡದೆ ಅದನ್ನು ಸಾವಧಾನದಿಂದ ಸ್ವಚ್ಛಗೊಳಿಸಿದ. ಅದು ಮುಗಿದ ಕೂಡಲೇ ಎಡ ಕಂಕುಗಳವೂ ಆಯಿತು. ಆಗಂತುಕ ಬಂಡೆ ಕಲ್ಲಿನಂತೆ ಮತ್ತೆ ಆಸೀನನಾದ. ‘ಮಸಾಜ್’ ಎಂದಷ್ಟೇ ಹೇಳಿದ. ಮಣಿಮಾರನ್ ತಲೆಯ ಮೇಲೆ ಎಣ್ಣೆ ಹಾಕಿ ಚೆನ್ನಾಗಿ ತಿಕ್ಕ ತೊಡಗಿದ. ಅವನ ಒರಟು ಕೈಗಳು ಆ ಸ್ಥೂಲಕಾಯನ ತಲೆಯ ತುಂಬಾ ಚಲಿಸಿದವು. ಅವನು ಕಣ್ಣುಮುಚ್ಚಿ ಸುಮ್ಮನೆ ಕುಳಿತಿದ್ದ. ಕೈಗಳ ನೆಟಿಗೆ ಮುರಿದು, ಅವನ ಬೆನ್ನಿಗೆ‌ ‘ಧಬ್ ಧಬ್’ ಎಂದು ಎರಡೇಟ್ ಬಿಗಿದಾಗ, ಮಸಾಜ್ನ ಜೊಂಪಿಗೆ ನಿದ್ದೆ ಹೋಗಿದ್ದ ಆಗಂತುಕ ಎಚ್ಚರಗೊಂಡಿದ್ದ. ಮೆಲ್ಲನೆ ಆಸನದಿಂದ ಇಳಿದಾಗ ಅವನ ಧಡೂತಿ ದೇಹದಿಂದ ಬಿಡುಗಡೆ ಸಿಕ್ಕ ಖುಷಿಗೆ ಮಾರನ್‌ನ ತಿರುಗುವ ಕುರ್ಚಿ ‘ಟರ್... ಟರ್’ ಎಂದು ನಿಡುಸುಯ್ಲು ಬಿಟ್ಟಿತ್ತು . ‘ಎಷ್ಟಾಯಿತು?’ ಅಂದಾಗ ಮಾರನ್ ‘ಮೂನ್ನೂರೈವತ್ತು’ ಎಂದಿದ್ದಕ್ಕೆ ನೂರರ ಮೂರೇ ನೋಟು ಕೊಟ್ಟು ಹೊರಟು ಹೋಗಿದ್ದ. ಆ ಬಳಿಕ ಅವನು ವಾರದ ಎಲ್ಲಾ ಬುಧವಾರವೂ ಬರುತ್ತಿದ್ದ, ಹತ್ತೋ ಇಪ್ಪತ್ತೋ ಕಮ್ಮಿಯೇ ಕೊಟ್ಟು ಹೋಗುತ್ತಿದ್ದ. ಆದರೆ ಶಾಶ್ವತ ಗಿರಾಕಿ ಇದ್ದಷ್ಟು ಒಳ್ಳೆಯದೇ ಎಂದು ತೀರ್ಮಾನಿಸಿ ಮಣಿಮಾರನ್ ಮೌನಕ್ಕೆ ಶರಣಾಗಿದ್ದ. ಹೀಗೆ ಸಂಪಾದಿಸುವುದರಲ್ಲಿ ಮಣಿ ಮಾರನ್ಗೆ ತಿಂಗಳಲ್ಲಿ ಉಳಿಯುವುದು ಒಂದುವರೆ, ಎರಡುವರೆ ಸಾವಿರ ರೂಪಾಯಿಗಳು. ಅದರಲ್ಲೂ ಒಂದೆರಡು ಜನ ವಾರ ವಾರ ಶೇವಿಂಗ್ ಮಾಡಿಸಿ ತಿಂಗಳ ಕೊನೆಗೆ ಲೆಕ್ಕ ಮುಗಿಸುವವರು. ಕೆಲವೊಮ್ಮೆ ಮರೆತು ಬಿಟ್ಟು ಒಂದುವರೆ ತಿಂಗಳೂ ಕಳೆಯುವುದಿದೆ. ಮಾರನ್ಗೆ ಪತ್ರಿಕೆ ಓದದಲಾಗದಿದ್ದರೂ ಪತ್ರಿಕೆ ತರಿಸಬೇಕು. ತಿಂಗಳ ಕೊನೆಯಲ್ಲಿ ಗ್ಯಾಸ್, ಕರೆಂಟು, ಮನೆ ಬಾಡಿಗೆ, ಹೆಂಡತಿಯ ಔಷಧಿ ಎಲ್ಲವನ್ನೂ ಕೊಂಡಾಗ ಕೆಲವೊಮ್ಮೆ ಏನೇನೂ ಉಳಿಯದು. ಕೆಲವೊಮ್ಮೆ ಅಡುಗೆ ಸಾಮಾನುಗಳನ್ನು ಕೊಳ್ಳುವಾಗ ಸಾಲವಾಗಿದ್ದೂ ಇದೆ. ದಿನದ ಕೊನೆಯಲ್ಲುಳಿದ ಸ್ವಲ್ಪ ಹಣ ಪಿಗ್ಮಿಗೆ ಕಟ್ಟಿದ್ದು ಮಾತ್ರ ಉಳಿತಾಯ.

ಹೀಗೆ ಮಣಿಮಾರನ್ ಹೇಳಿಕೊಳ್ಳಲಾಗದ ಸಿಟ್ಟು- ಸೆಡವುಗಳನ್ನೆಲ್ಲಾ ಕೂದಲಿನೊಂದಿಗೆ ತೀರಿಸಿ ಬಿಡುತ್ತಾನೆ. ದಪ್ಪ- ತೆಳು- ಗುಂಗುರು ಕೂದಲುಗಳು ಕೊಚ್ಚಿ, ಅವರ ತಲೆಗಳನ್ನು ತಿಕ್ಕಿ ತೀಡಿದ್ದರ ಫಲವಾಗಿ ರಾತ್ರಿ ಸಿಡಿಯುವ ಕೈಯನ್ನು ನೀವಿಕೊಂಡು ನಿದ್ದೆ ಮಾಡುತ್ತಾನೆ. ಮನೆಯಲ್ಲಿರುವುದು ರೋಗಿ ಹೆಂಡತಿ ಒಬ್ಬಳೇ. ‘ಗರ್ಭ ಕೋಶದಲ್ಲಿ ಗೆಡ್ಡೆಯಾಗಿದೆ’ ಎಂದು ಡಾಕ್ಟರ್ ಶರಾ ಬರೆದ ಬಳಿದ ಬಳಿಕ ಅವಳಿಗೆ ಹೆಚ್ಚೇನೂ ಕೂಡದು. ಅವಳ ಉಪಚಾರ ಮಾಡಿಕೊಂಡು ಮಕ್ಕಳಿಲ್ಲದ ಬೇಸರ ನೀಗಲು ಅವಳನ್ನು ಲಾಲಿಸಿ ಮುದ್ದಿಸಿ ಊಟ ಸ್ನಾನಗಳನ್ನು ಮಾಡಿಸುತ್ತಾನೆ. ‘ಹೊಸತೊಂದು ಸ್ಕೂಟರ್ ಕೊಂಡರೆ ಹೇಗೆ’. ಮಧ್ಯಾಹ್ನ ಕೆಲವೊಮ್ಮೆ ಊಟಕ್ಕೆ ಬರುವುದಕ್ಕೂ, ಪೇಟೆಗೆ ಹೋಗಲು ಸುಲಭವಾಗಲೆಂದು ಅವನ ಎಣಿಕೆ. ಮರು‌ದಿನ ಹೋಗಿ ಪಿಗ್ಮಿಯವನಲ್ಲಿ ಕೇಳಿದರೆ, ಅವನು ಪಿಗ್ಮಿಯಲ್ಲಿ 25 ಸಾವಿರ ಇರುವುದಾಗಿಯೂ ಹೇಳಿದಾಗ ಮಾರನ್ಗೆ ಖುಷಿಯೋ ಖುಷಿ. ಅದನ್ನು ತೆಗೆದುಕೊಂಡು ಹೋಗಿ ಮೊದಲ ಕಂತನ್ನು ಕಟ್ಟಿ ಹೇಗೂ ಸ್ಕೂಟರ್ ರಸ್ತೆಗಿಳಿಸಿದ್ದ. ಹೊಸ ಸ್ಕೂಟರ್ ಬಂದಿರುವುದನ್ನು ವಾಟ್ಸಾಪ್ ಸ್ಟೇಟಸ್ ಹಾಕಿದರೆ, ಊರಿನ ಸೋದರ ಮಾವನೊಬ್ಬ ‘ಈ ತಿಂಗಳಲ್ಲಿ ಮಗಳಿಗೆ ಮದುವೆ ಇದೆ, ನಿನ್ನಿಂದ ಏನಾದರೂ ನಿರೀಕ್ಷಿಸುತ್ತೇನೆಂದು’ ಪ್ರತಿಕ್ರಿಯೆ ಕೂಡ ಕೊಟ್ಟಾಗಿತ್ತು. ತಿಂಗಳಲ್ಲಿ ಉಳಿಸುವ ಸಾವಿರ ರೂಪಾಯಿ ಬೈಕ್ ಕಂತು ಎಂಬ ಪೆಡಂಭೂತವು ತಿಂದು ಹಾಕುವಾಗ ಮದುವೆಗೆಂದು ಹೇಗೆ ಹಣ ಕೊಡುವುದು. ದುಬಾರಿ ಬೆಲೆಯ ಮಾಗಝೀನ್ಗಳಿಗೆ ಸಬ್ಸ್ಕ್ರೈಬ್ ಮಾಡದಿದ್ದರೆ ಪಡ್ಡೆ ಹುಡುಗರಾದರೂ ನೋಡಲು ಬರುವ ಸಮಯದಲ್ಲಿ ಗಡ್ಡ ಸೆಟ್ಟಿಂಗೋ, ಹೇರ್ ಕಟ್ಟಿಂಗೋ ಮಾಡಿಯಾರು. ಎಲ್ಲೂ ಖರ್ಚು ಇಳಿಸುವಂತಿಲ್ಲ. ಹೋದಷ್ಟು ದಿನ ಹೋಗಲಿ ಎಂದೆಲ್ಲಾ ಚಿಂತಿಸಿ, ನಾಳೆ ಬುಧವಾರವಾದ್ದರಿಂದ ಆ ದಢೂತಿ ಆಸಾಮಿ ಬರುವ ದಿನವೆಂದು ಲೆಕ್ಕ ಹಾಕಿ ‘ಅಯ್ಯೋ ಕರ್ಮವೇ’ ಎಂದು ಅರೆನಿದ್ರೆಗೆ ಜಾರಿದ.

ಬೆಳಗ್ಗಿನ ಜಾವ; ಚಹಾ ಕುಡಿದು, ದೇವರಿಗೆ ನಮಸ್ಕರಿಸಿ ಮಣಿಮಾರನ್ ಸ್ಕೂಟರ್ ಹತ್ತಿದ. ಎಂದಿನಂತೆಯೇ ‘ಡುರ್ರೆಂದ್’ ಎಕ್ಸಲೇಟರ್ ಎಳೆದು ಹೊರಡುವುದನ್ನೇ ಕಾಯುತ್ತ ಹೆಂಡತಿ ಬಾಗಿಲ ಬಳಿ ನಿಂತು ಕಾಯುತ್ತಿದ್ದಳು. ಮಣಿಮಾರನ್ ಮನೆಯ ಗೇಟು ದಾಟುವಾಗಲೇ ಸಣ್ಣ ಕಲ್ಲು ಚಕ್ರದಡಿಗೆ ಸಿಕ್ಕಿ ಬೈಕ್ ಒಂದು ಬಾರಿ ಬೀಳ ಬಹುದೆನ್ನಿಸಿ ಮತ್ತೆ ಹತೋಟಿಗೆ ಬಂದಾಗಲೇ ಇವತ್ತಿನ ಗ್ರಹಚಾರ ಸರಿಯಿರಲಿಕ್ಕಿಲ್ಲವೆಂದು ತೋಚಿತ್ತು. ಮತ್ತೆ ಮೆಲ್ಲಗೆ‌ ಗೇಟು ದಾಟಿ ಅಂಗಡಿಯ ದಾರಿ ಹಿಡಿದ. ದಾರಿಯಲ್ಲಿ ಬೆಕ್ಕೊಂದು ರಸ್ತೆ ದಾಟುವ ಸನ್ನಾಹದಲ್ಲಿತ್ತು. ಅದು ದಾಟುವುದಕ್ಕೂ ಮೊದಲು ದಾಟಲೇ ಬೇಕೆಂದನಿಸಿದರೂ ಕೊನೆಯ ಗಳಿಗೆಯಲ್ಲಿ ಅದು ರಸ್ತೆ ದಾಟಿ ಹೋಗಿಯೇ ಬಿಟ್ಟಿತು. ‘ಇವತ್ತಿನ ದಿನ ಅಪಶಕುನ ಖಂಡಿತ’ ಎಂದು ಬಗೆದವನೇ ಅಂಗಡಿಯ ಮುಂದೆ ಬಂದು ಸ್ಕೂಟರ್ ನಿಲ್ಲಿಸಿದ. ಸ್ಕೂಟರಿನ ಡಿಕ್ಕಿ ತೆರೆದು ಅಂಗಡಿಯ ಕೀ ತೆಗೆದುಕೊಂಡು ಹೋಗಿ ಬಾಗಿಲು‌ ತರೆದ ಮಾರನ್ ಪೂಜೆ ಮಾಡಿ ಅಗರಬತ್ತಿ ಹೊತ್ತಿಸಿ ದೇವರ ಪಟದೆದುರು ಇಟ್ಟ. ಅಷ್ಟರಲ್ಲೇ ಮೂಲೆಯಲ್ಲಿದ್ದ ಹಲ್ಲಿಯೊಂದು ಲೊಚಗುಟ್ಟಿದ್ದು ಕೇಳಿಸಿತು.

ಮಾರನ್ ಮೆಲ್ಲಗೆ ‘ಎಷ್ಟು ಸಾಹಸವಂತ..’ ಭಕ್ತಿಗೀತೆ ಚಾಲು‌ ಮಾಡಿದ. ಪೇಪರ್ ಹಾಕುವವನ ಬೆಲ್ ಬಾರಿಸಿದ ಸದ್ದಿನ ಬೆನ್ನಿಗೆ ‘ಟಪ್’ ಎಂದು‌ ಪೇಪರ್ ಹಾಕಿದ ಸದ್ದು‌ ಕೇಳಿಸಿದರೂ ಕೊಂಚ ಉದಾಸೀನದಿಂದಲೇ ಪೂಜೆ ಮುಗಿಸಿ ಬಂದು ಪೇಪರ್ ಎತ್ತಿಕೊಂಡ. ಮೊದಲೇ ಪುಟದಲ್ಲಿ ಪಾಂಪ್ಲೆಟ್ ಒಂದು ಕಂಡು ಹೌಹಾರಿದ. ‘ಪರ್ಫೆಕ್ಟ್ ಸೆಲೂನ್’ ದಪ್ಪ‌ ಅಕ್ಷರಗಳಲ್ಲಿ ‘ಓಪನಿಂಗ್ ಸೂನ್’ ಎಂದು‌ ಇಟಾಲಿಕ್ ಫೋಂಟ್ನಲ್ಲಿ ಬರೆಯಲಾಗಿತ್ತು. ಅವನ ಕರುಳು ಬಾಯಿಗೆ ಬಂದಿತ್ತು. ಮುಂದಿನ ವಾರವೇ ಹೊಸ ಸೆಲೂನ್ ಒಂದು ‘ರಜನಿ ಹೇರ್‌ಸ್ಟೈಲ್ಸ್’ ಮುಂದಿನ ಹೊಸ ಕಟ್ಟಡದಲ್ಲಿ ತೆರೆದುಕೊಳ್ಳುತ್ತಿತ್ತು. ಮಾರನ್‌ನ ಜಂಘಾಬಲವೇ ಉಡುಗಿ ಹೋಗಿತ್ತು. ಕೈ ಕಾಲುಗಳಲ್ಲಿ ತ್ರಾಣ ಕಳೆದುಕೊಂಡಾಗಿತ್ತು. ಇನ್ನು ಸ್ಕೂಟರನ್ನು ಬ್ಯಾಂಕಿನವರು‌ ಕೊಂಡು ಹೋಗಬಹುದು. ಅಂಗಡಿ‌ ಮಾಲಕ ಮೊದಲೇ ಬಾಡಿಗೆ ಸಾಲುತ್ತಿಲ್ಲವೆಂದು ಹೇಳುತ್ತಿದ್ದಾನೆ, ಮದುವೆಗೆಂದು ಮಾವ ಸ್ವಲ್ಪ ಹಣವನ್ನೂ ಕೇಳಿದ್ದಾನೆ, ಹೇಗೂ ನನ್ನ ತಂಗಿಯ ಮದುವೆಗೆ ಸಹಾಯ‌ ಮಾಡಿದ್ದಕ್ಕಾದರೂ ಕೃತಾರ್ಥನಾಗಲೇ ಬೇಕು. ಮನೆಯ ಬಾಡಿಗೆ ಗತಿ ಹೇಗೋ?. ‌ಒಂದೂ ತೋಚದೆ ಅಳುಗಣ್ಣಾಗಿ ಮಾರನ್ ದೇವರ ಪೋಟೋವನ್ನೇ‌ ನೋಡಿದ. ಎದುರು ಕಟ್ಟಡದಲ್ಲಿ ಹೊಸ ಸೆಲೂನಿನ ಚಂದದ ಬೋರ್ಡು ಅವನನ್ನು ಇನ್ನಷ್ಟು ಕುಸಿಯುವಂತೆ ಮಾಡಿತು. ಸುಮ್ಮನೆ ಕುಳಿತ. ಹೊತ್ತು‌ ಕಳೆದದ್ದೆ ತಿಳಿಯಲಿಲ್ಲ. ತಟ್ಟನೆ‌‌ ಯಾರೋ ತಟ್ಟಿದಂತಾಗಿ‌ ಹಿಂತಿರುಗಿ ನೋಡಿದರೆ ದಢೂತಿ ದೇಹದ ಗಿರಾಕಿ ನಿಂತಿದ್ದಾನೆ. ಯಾಂತ್ರಿಕವಾಗಿ ಎದ್ದವನೇ ನೊರೆಯನ್ನು ಗಡ್ಡದ ಮೇಲೆ ಹಾಕಿ‌ ಅಳುಗಣ್ಣಲ್ಲೇ ಶೇವೀಂಗ್ ಮಾಡಿದ.‌ ಕೆಲಸದ ಮಧ್ಯೆ ಸ್ವಲ್ಪ ಬ್ಲೇಡ್ ಕೂಡಾ ತಾಗಿದಾಗ, ‘ಓಯ್ ಕಣ್ಣು ಕಾಣುವುದಿಲ್ವಾ ಮಾರಾಯ? ಸ್ವಲ್ಪ ಮೆತ್ತಗೆ’ ಎಂದು ಬಡಬಡಿಸಿದಾಗ, ‘ಹಾ ಸಾರಿ... ಸಾರಿ’ ಎಂದು ಹೇಳಿಕೊಂಡಿದ್ದ ಮಣಿಮಾರನ್ ಮತ್ತೆ ಕೆಲಸದಲ್ಲಿ ತೊಡಗಿದ. ಕಂಕುಳವನ್ನೂ ಸ್ವಚ್ಫ ಗೊಳಿಸಿದ. ತಲೆಗೂ ಗಡದ್ದಾಗಿ ಮಸಾಜ್ ಹಾಕಿದ. ಈ ಮಧ್ಯೆ ರಫಿಯ ‘ಕ್ಯಾ ಹುವ ತೇರ ವಾದಾ..’ ಗೀತೆಯನ್ನು ಕಾಕತಾಳೀಯವಾಗಿ ಟೇಪ್ ಹಾಡುತ್ತಲೇ ಇತ್ತು. ಎಲ್ಲ ಮುಗಿಸಿ ‘ಎಷ್ಟು’ ಎಂದು ಕೇಳಿದ್ದಕ್ಕೆ ಯಾವ ಉತ್ತರವೂ ಇಲ್ಲದೆ ಮಾರನ್ ಮೌನವಾಗಿದ್ದಕ್ಕೆ ಇನ್ನೂರು ರುಪಾಯಿ ಟೇಬಲ್ ಮೇಲಿಟ್ಟು ಅವನು ಹೊರಟು ಹೋಗಿದ್ದ.‌ ಇನ್ನಷ್ಟು ಗಿರಾಕಿಗಳು ಬಂದರೂ ಯಾರೊಬ್ಬರನ್ನು ಗಣನೆಗೆ ತೆಗೆದುಕೊಳ್ಳದೆ‌ ಅವರು ಮಾತನಾಡಿದರೂ ಮಾತನಾಡಲು‌ ಮನಸ್ಸು ಬಾರದೇ, ‘ಈ ಜನರೆಲ್ಲಾ ಕೃತಘ್ನರು, ಇನ್ನು‌ ಹೊಸತು‌‌ ಬಂದಾಗ ಹಳೆಯದನ್ನು ಎಸೆದು ಹೋಗುತ್ತಾರೆ’ ಎಂದು ಮನಸ್ಸಿನಲ್ಲೇ ಮನುಷ್ಯ ಜನ್ಮಕ್ಕೂ ಬೈದುಕೊಂಡ. ಒಂದಿಬ್ಬರು ಹುಡುಗರು ಬಂದು ‘ಮಾರಣ್ಣ‌ ಹೊಸ ಸೆಲೂನ್ ಬರುತ್ತಲ್ವಾ’ ಎಂದು ಕನಿಕರದಿಂದಲೋ, ವಿಘ್ನ ಸಂತೋಷ ಪಡಲೋ ಹೇಳಿ ಹೋದರೆ ಯಾವ ಮಾತಿಗೂ ಪ್ರತಿಕ್ರಯಿಸದೆ ಮಾರನ್ ಆ ವಾರ ತುಂಬಾ ಅಂತರ್ಮುಖಿಯಾಗಿ ಬಿಟ್ಟ.

***

ಆ ಬುಧವಾರ ಬಂತು. ಹೊಸ ಸೆಲೂನ್ ಉದ್ಘಾಟನೆಗೊಳ್ಳಲಿರುವ ದಿನ. ‘ತನ್ನ ವೃತ್ತಿ ಮುಗಿದು ಹೋಯಿತು, ಇನ್ನು ಯಾವ ದಿನಚರಿ ಪಾಲನೆಗೂ ಸುಖವಿಲ್ಲ’ ಎನ್ನುತ್ತಾ ಬೆಳಕಾದರೂ ಮಾರನ್ ಎದ್ದೇಳದೆ ಮಲಗಿಯೇ ಇದ್ದಾನೆ. ಬೆಳಕು ಹರಿದು ಹೊತ್ತು ಕಳೆದದ್ದು ನೋಡಿ ಮಾರನ್ ಹೆಂಡತಿ ‘ರೀ ಎದ್ದೇಳಿ’ ಕರೆದು ಎಬ್ಬಿಸಿದಾಗಿ, ಮಾರನ್ ಉದಾಸೀನನಾಗಿಯೇ ಎದ್ದು ಕೆಲಸಕ್ಕೆ ಹೊರಟು ಬಿಟ್ಟ. ಜಗಲಿ ದಾಟಿ ಹೋಗುತ್ತಿದ್ದಂತೆ ಬೆಕ್ಕೊಂದು ದಾಟಿ ಹೋಗಿದ್ದೂ ಆಯಿತು. ‘ಇನ್ನೇನು‌ ಉಳಿದಿದೆ ಶನಿಯೇ ಬದುಕಲ್ಲಿ ತುಂಬಿ ಹೋಗಿದೆ’ ಎಂದು ಮಾರನ್ ಎಕ್ಸಲೇಟರ್ ಹಿಂಡಿದ. ಸ್ಕೂಟರ್ ಅಂಗಡಿ ತಲುಪುವ ಹೊತ್ತಿಗೆ ಅಂಗಡಿ ಹೊರಗೆ ದಢೂತಿ ಮನುಷ್ಯ ಕಾಯುತ್ತಿದ್ದಾನೆ. ಮಾರನನ್ನು ನೋಡಿದವನೇ ‘ಏನು ತಡವಾಗಿ ಬರುತ್ತಿಯಾ?.. ನಮ್ಗೆ ಬೇರೇನೂ ಕೆಲಸವೇ ಇಲ್ವಾ’ ಎಂದು ಖಾರವಾಗಿಯೇ ಕೇಳಿ ಬಿಟ್ಟ. ಮಾರನ್ ಮರು ಮಾತನಾಡದೆ, ಆಚೀಚೆ ನೋಡುವ ಧೈರ್ಯವೂ ಸಾಲದೆ ಸುಮ್ಮನೆ‌ ಬಂದು ‘ಡರ್, ಡರ್’ ಎಂದು ಬಾಗಿಲು ತೆರೆದ. ಅಗರಬತ್ತಿ ಹಚ್ಚಿ ದೇವರಿಗೆ ನಮಸ್ಕರಿಸಿದ. ಶೇವಿಂಗ್ ಮಾಡಲು ಗಲ್ಲ ತುಂಬ ನೊರೆ ಹಾಕುತ್ತಾ, ಅಳುಕುತ್ತಲೇ ಎದುರಿನ ಹೊಸ ಸೆಲೂನ್ ಕಡೆಗೆ ನೋಡಿದ. ಅರೇ! ಬಾಗಿಲು ಹಾಕಿಯೇ‌ ಇದೆ. ಬ್ಯಾನರನ್ನೂ ಕಿತ್ತು ತೆಗೆದಿದ್ದಾರೆ.‌ ಮತ್ತೆ ಮತ್ತೆ ಕಣ್ಣುಜ್ಜಿಕೊಂಡು ನೋಡಿದ. ಇಲ್ಲ ಬಾಗಿಲು ತೆರೆದೇ ಇಲ್ಲ. ತನ್ನನ್ನೇ ನಂಬದ ಮಾರನ್ ಮೆಲ್ಲಗೆ ಗೊಣಗಿದ. ‘ಅಲ್ಲ ಸರ್ ಈ ಹೊಸ ಸೆಲೂನ್ ಇವತ್ತು ಪ್ರಾರಂಭ ಇತ್ತಲ್ವಾ’ ಎಂದು ಮಾತು ತೆಗೆದ. ‘ಓ‌ ಅದಾ.. ನಾನು ಇಲ್ಲಿಗೆ ಬಂದ ಹೊಸ ಮುನ್ಸಿಪಲ್ ಆಫೀಸರ್.‌ ಮೊನ್ನೆ ದಿನ‌ ಅಂಗಡಿ‌ ತರೆಯುವುದಕ್ಕಾಗಿ ಲೈಸನ್ಸಗೆ ಬಂದಿದ್ದ. ಮೊದಲೇ ಆ ಕಟ್ಟಡದ ದಸ್ತಾವೇಜುಗಳು ಸರಿ ಇರಲಿಲ್ಲ. ಹಾಗಂತ ಹೊಸ ಅಂಗಡಿಯ ಪರವಾನಿಗೆ ತಡೆಯುಲು ಸಾಧ್ಯವಿಲ್ಲ. ಆದರೆ ಅದೇ ಕಟ್ಟಡದಲ್ಲಿ ವಾಸಿಸುವರಿಂದ ಎನ್.ಒ.ಸಿ ಸರ್ಟಿಫಿಕೇಟ್‌ನ ಅವಶ್ಯಕತೆಯನ್ನು ಕೇಳಿದ್ದೆ. ಪುಣ್ಯಕ್ಕೆ ಎಲ್ಲರೂ ನಿನ್ನ ಗಿರಾಕಿಗಳಾದ್ದರಿಂದ ಯಾರೊಬ್ಬರೂ ಎನ್ ಒ ಸಿ ಕೊಡಲು ಒಪ್ಪದಾದರು‌. ಹೇಗೂ‌ ನನಗೆ ನೀನು ಶೇವಿಂಗ್, ಮಸಾಜ್ ಮಾಡುವ ಸುಖ ಯಾರಲ್ಲಿ ಮಾಡಿಸಿದರೂ ಸಿಗುವುದಿಲ್ಲ. ಇನ್ನು ಅರ್ಜಿಯನ್ನು ತಳ್ಳಿ ಹಾಕಲು ನನಗೆ ಬೇರೆ ಕಾರಣ ಬೇಕಿರಲಿಲ್ಲ’ ಎಂದು ಹೇಳಿ ನಿರ್ಲಿಪ್ತನಾದ. ಮಾರನ್ಗೇ ಏನು ಹೇಳಬೇಕೆಂದೇ ತೋಚಲಿಲ್ಲ. ಅವನ ಬೆವರಿದ ತಲೆಯನ್ನು ಅಪ್ಪಿ ಹಿಡಿದು ಜೋರಾಗಿ ಅಳ ಬೇಕೆನಿಸಿತು. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡು ತನ್ನ ವೃತ್ತಿ ಬದುಕಿನ ಅತ್ಯುತ್ತಮ ಸೇವೆಯನ್ನರ್ಪಿಸಲು ಮುಂದಾದ. ಹಿನ್ನೆಲೆಯಲ್ಲಿ ‘ಬಾರ್, ಬಾರ್ ದೇಕೋ... ಹಝಾರ್ ಬಾರ್ ದೇಕೋ..’ ಎಂಬ ರಫಿಯ ಪದ್ಯ ಸುಂದರವಾಗಿ ಅಲ್ಲಿ ನೆಲೆಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.