ಅದು ರಾಮಪುರ ಎಂಬ ಹಳ್ಳಿ. ಆ ಹಳ್ಳಿಯಲ್ಲಿ ವ್ಯವಸಾಯ ಮಾಡುವವರೇ ಹೆಚ್ಚು ಜನ. ಇಂತಹ ಊರಿನಲ್ಲಿ ರಂಗಪ್ಪ ಮತ್ತು ತಿಮ್ಮಣ್ಣ ಎಂಬ ಇಬ್ಬರು ರೈತರಿದ್ದರು. ಅಕ್ಕಪಕ್ಕದಲ್ಲಿಯೇ ಇವರ ಜಮೀನು ಇದ್ದಿದ್ದರಿಂದ ಆತ್ಮೀಯ ಗೆಳೆಯರಂತೆ ಇದ್ದರು. ರಂಗಪ್ಪನದು ಕೊಳವೆ ಬಾವಿ ಇತ್ತು. ನೀರಿನ ವ್ಯವಸ್ಥೆ ಇದ್ದಿದ್ದರಿಂದ ಹೊಲದಲ್ಲಿ ತೆಂಗಿನ ಮರಗಳನ್ನು ಬೆಳೆಸಿದ್ದ. ತಿಮ್ಮಣ್ಣನಿಗೆ ನೀರಿನ ಕೊರತೆಯಿಂದ ರಾಗಿ, ಜೋಳ, ನವಣೆಯಂತಹ ಬೆಳೆಗಳನ್ನು ಮಾತ್ರ ಬೆಳೆಯುತ್ತಿದ್ದನು.
ತಿಮ್ಮಣ್ಣ ಒಂದು ದಿನ ಜಮೀನಿನಲ್ಲಿ ಕೆಲಸ ಮಾಡುತ್ತಿರುವಾಗ ಬಾಯರಿಕೆಯಾಯಿತು. ಊರು ಜಮೀನಿನಿಂದ ದೂರವಿದ್ದರಿಂದ ಹೋಗಿ ಬರುವಷ್ಟರಲ್ಲಿ ಸಂಜೆಯಾಗುತ್ತದೆ ಎಂದು ಯೋಚಿಸುತ್ತ ನಿಂತ. ಜಮೀನಿನ ಸುತ್ತಲು ಎಲ್ಲೂ ನೀರು ಸಿಗುತ್ತಿರಲಿಲ್ಲ. ಇದನ್ನು ಅರಿತ ತಿಮ್ಮಣ್ಣ ಪಕ್ಕದಲ್ಲಿದ್ದ ರಂಗಪ್ಪನ ತೆಂಗಿನ ತೋಟಕ್ಕೆ ಹೋದ. ತೆಂಗಿನ ಮರ ಏರಿ ನಾಲ್ಕೈದು ಎಳನೀರನ್ನು ಕಿತ್ತು ಕುಡಿಯಲು ಪ್ರಾರಂಭಿಸಿದ. ಜಮೀನಿನ ಕಡೆಗೆ ಬರುತ್ತಿದ್ದ ರಂಗಪ್ಪ ದೂರದಲ್ಲಿಯೇ ತಿಮ್ಮಣ್ಣ ಎಳನೀರು ಕುಡಿಯುವುದನ್ನು ನೋಡಿದ. ತಕ್ಷಣ ಜೋರಾಗಿ ಹೆಜ್ಜೆ ಹಾಕುತ್ತ ತಿಮ್ಮಣ್ಣನ ಹತ್ತಿರ ಬಂದು ಗಲಾಟೆ ಮಾಡಲು ಶುರುಮಾಡಿದ. ತಿಮ್ಮಣ್ಣ ಏನೇ ಹೇಳಿದರೂ ಕೇಳಲಿಲ್ಲ. ಅವನ ಮೇಲೆ ಕಳ್ಳತನದ ಆಪಾದನೆ ಮಾಡುತ್ತ ಊರಿನ ಕಡೆಗೆ ನಡೆದ.
ಊರಿನ ಹಿರಿಯರೆಲ್ಲರಿಗೂ ’ತಿಮ್ಮಣ್ಣ ನನ್ನ ಹೊಲದಲ್ಲಿ ಕಳ್ಳತನ ಮಾಡಿದ್ದಾನೆ‘ ಎಂದು ದೂರು ಹೇಳಿದ. ಮರುದಿನ ಊರಿನ ಜನರು, ಹಿರಿಯರೆಲ್ಲಾ ಸೇರಿ ಪಂಚಾಯಿತಿ ಕರೆದರು. ಎಳನೀರನ್ನು ಕಿತ್ತಿರುವುದಾಗಿ ತಿಮ್ಮಣ್ಣ ಒಪ್ಪಿಕೊಂಡನು. ಪಂಚಾಯಿತಿಯಲ್ಲಿ ಭಾಗವಹಿಸಿದ್ದ ಜನರೆಲ್ಲಾ ‘ರಂಗಪ್ಪನ ಜಮೀನಿನಲ್ಲಿ ಯಾರೂ ಇಲ್ಲಾದಿದ್ದಾಗ ಏಕೆ ಕೀಳಬೇಕು ಎಳನೀರನ್ನು?’ ಎಂದು ಗುಸು ಗುಸು ಶಬ್ದ ಮಾಡುತ್ತಿದ್ದರು. ಪಂಚಾಯಿತಿಯ ಹಿರಿಯರು ಸಹ ತಿಮ್ಮಣ್ಣನದೇ ತಪ್ಪು ಎಂದು ತೀರ್ಮಾನ ಮಾಡಿ ಐದು ಸಾವಿರ ರೂಪಾಯಿ ದಂಡ ವಿಧಿಸಿದರು.
ಈ ಘಟನೆ ಮುಗಿದು ಐದಾರು ವಾರಗಳು ಕಳೆದಿದ್ದವು. ಅದೊಂದು ದಿನ ರಂಗಪ್ಪ ಜಮೀನಿನ ಕಡೆಗೆ ಬಂದನು. ತೆಂಗಿನ ಮರದಲ್ಲಿ ಕೋತಿಗಳು ಇರುವುದನ್ನು ಕಂಡನು. ಆದಾಗಲೇ ಏಳೆಂಟು ಕೋತಿಗಳು ಎಳನೀರನ್ನು ಕುಡಿದು ನೆಲದ ಮೇಲೆ ಹಾಕಿರುವುದು ಕಂಡಿತು. ಪ್ರತಿ ಮರದ ಕೆಳಗೆ ಖಾಲಿಯಾಗಿ ಬಿದ್ದಿದ್ದ ಎಳನೀರಿನ ಬುರುಡೆಯನ್ನು ನೋಡಿದನು. ಅವುಗಳನ್ನು ನೋಡಿದವನೇ ದಿಗ್ಭ್ರಮೆಗೊಂಡು ನೆಲದ ಮೇಲೆ ಕುಳಿತನು.
ಹಾಗೇ ಯೋಚಿಸುತ್ತ ಕುಳಿತಿದ್ದಾಗ ತಿಮ್ಮಣ್ಣ ನೆನಪಿಗೆ ಬಂದ. ತನ್ನ ಮನಸ್ಸಿನಲ್ಲಿಯೆ ರಂಗಪ್ಪ ‘ತಿಮ್ಮಣ್ಣ ನಾಲ್ಕೈದು ಎಳನೀರನ್ನು ಕಿತ್ತು ಕೊಂಡಿದ್ದಕ್ಕೆ ನಾನು ಕಳ್ಳತನದ ಅಪಾದನೆ ಮಾಡಿ, ಐದು ಸಾವಿರ ದಂಡ ಪಡೆದೆ. ಆದರೆ ಈಗ ಕೋತಿ ತನ್ನೆಲ್ಲ ಎಳನೀರುಗಳನ್ನು ಕುಡಿದು ನಾಶ ಮಾಡಿವೆ. ಅವುಗಳನ್ನು ಏನೂ ಮಾಡಲಾಗದು’ ಎಂದು ಯೋಚಿಸುತ್ತ ತಿಮ್ಮಣ್ಣನ ಮನೆಯ ಕಡೆಗೆ ಹೊರಟನು. ತಿಮ್ಮಣ್ಣ ನೀಡಿದ ಐದು ಸಾವಿರ ರೂಪಾಯಿ ಹಣವನ್ನು ಹಿಂದಿರುಗಿಸಿ ಕ್ಷಮೆ ಕೇಳಿದನು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.