ಪುಟ್ಟಜ್ಜಿಯ ಮನೆಗೆ ಮಕ್ಕಳು ಬಂದಾಗ ಪುಟ್ಟಜ್ಜಿ ಗೋಡೆಯ ಮೇಲಿನ ‘ಅಕ್ಷರ ಮಾಲೆ’ಯನ್ನು ಒರೆಸುತ್ತಿದ್ದಳು.
‘ಧೂಳು ಕೂತಿದೆ ಕಿಲೀನ್ ಮಾಡ್ತಿದೀನಿ’ ಎಂದಳು ಪುಟ್ಟಜ್ಜಿ ಮಕ್ಕಳ ಮುಖ ನೋಡಿ. ‘ಅದ್ಯಾಕ್ ಪುಟ್ಟಜ್ಜಿ ಅಕ್ಷರ ಮಾಲೆ ಮೇಲೆ ನಿನ್ನ ಕಣ್ಣು’ ಎಂದು ಕೋಮಲ ನಕ್ಕಳು.
‘ಹಾಗೆ ಹೇಳಬೇಡ. ನನಗೂ ಅಕ್ಷರ ಬರುತ್ತೆ. ಅದನ್ನ ಗೋಡೆ ಮೇಲೆ ತೂಗು ಹಾಕಿ ನಾನೂ ಅಕ್ಷರ
ಕಲ್ತಿದೀನಿ’ ಎಂದಳು ಪುಟ್ಟಜ್ಜಿ. ‘ಹೌದಾ, ಹಾಗಾದರೆ ಅಕ್ಷರ ಮಾಲೆ ಮೇಲಿರೋ ಅಕ್ಷರ ತೋರಸ್ತೀಯ?’ ಎಂದು ನಾಲ್ಕನೇ ತರಗತಿಯ ಜಲಜ ಸವಾಲು ಹಾಕಿದಳು.
‘ಹಾಗಾದ್ರೆ ಕ ತೋರಿಸು’ ಎಂದಳು ಕಮಲ.
‘ಇದು ನೋಡು ಕ’
‘ಮ ತೋರಿಸು’ ಎಂದಳು ಶಾಲಿನಿ. ‘ಇದು ಮ’ ಎಂದಳು ಪುಟ್ಟಜ್ಜಿ.
‘ಓ ಅಜ್ಜಿಗೂ ಓದಲಿಕ್ಕೆ ಬರುತ್ತೆ’ ಎಂದು ಎಲ್ಲ ಮಕ್ಕಳೂ ಒಟ್ಟಿಗೇ ಕೂಗಿಕೊಂಡವು ಸಂತಸ ಮತ್ತು ಸಂಭ್ರಮದಿಂದ. ಅಜ್ಜಿ ಹೆಮ್ಮೆಯಿಂದ ಬೀಗಿ ನಿಂತಳು.
‘ಓದು ಬರಹ ಕಷ್ಟ ಅಲ್ಲ. ಮುಖ್ಯವಾಗಿ ಮನಸ್ಸು ಬೇಕು, ಕಷ್ಟ ಪಡಬೇಕು’ ಎಂದಳು ಅಜ್ಜಿ. ಯಾವುದೋ ಕತೆ ಹೇಳಲು ಅಜ್ಜಿ ತಯಾರಿ ನಡೆಸಿದ್ದಾಳೆ ಅನ್ನುವುದು ಮಕ್ಕಳಿಗೆ ಖಚಿತವಾಯಿತು.
‘ಅಜ್ಜಿ ಆ ಕತೆ ಹೇಳು ಹಾಗಾದ್ರೆ’ ಎಂದವು ಮಕ್ಕಳು. ಅಜ್ಜಿ ಗಂಟಲು ಸರಿ ಮಾಡಿಕೊಂಡಳು.
‘ಹೀಗೆಯೆ ಒಂದೂರು ಅದರ ಹೆಸರು ರಾಜಗಿರಿ
ರಾಜಗಿರಿಯ ಹತ್ತುವುದು ಬಹಳ ಕಷ್ಟವು
ಪರ ಊರ ಯುವಕರೆಲ್ಲ ಬಂದು ಗಿರಿಯ ಹತ್ತಿ
ಕುಣಿದಾಡುತ್ತಿದ್ದರು ಅದರ ಸೊಗಸ ಕಂಡು.
‘ಮೇಲೆ ಏರಿ ನಿಂತರೆ ಸೂರ್ಯ ಚಂದ್ರ ಹತ್ತಿರ
ಹತ್ತಿರದ ಹಳ್ಳಿಯಂತು ಇನ್ನೂ ಹತ್ತಿರ
ಬಸ್ಸು ಹಾದಿ ಗಾಡಿ ರಸ್ತೆ ಎಲ್ಲ ಕೈಗೆ ಸಿಗುವುದು
ಸೂರ್ಯ ಮುಳುಗೆ ಬಣ್ಣದಲ್ಲಿ ನಮ್ಮ ಸ್ನಾನವು
‘ಗಿರಿಯನೇರಿ ಹೋಗಲು ಇಲ್ಲ ನೇರ ದಾರಿ
ಜಾರು ಬಂಡೆ ಹತ್ತಿ ಇಳಿದು ಮೇಲೆ ಏರಬೇಕು
ಕಾಲಿನಿಂದ ಮಾತ್ರವಲ್ಲ ಕೈಯನೂರಬೇಕು
ಬಂಡೆಗಳನ್ನು ಕಚ್ಚಿ ಹಿಡಿದು ಗಿರಿಯ ಗೆಲ್ಲಬೇಕು
‘ಗಿರಿ ರಾಜನ ಪಾದದಲ್ಲಿ ಒಂದು ಸಣ್ಣ ಹಳ್ಳಿ
ಹತ್ತು ಮನೆ ನೂರು ಜನ ಒಂದು ಅಂಗಡಿ
ಗಿರಿಯ ಹತ್ತಿ ದಣಿದ ಜನ ಬರುವುದೇನೆ ಇಲ್ಲಿಗೆ
ತಮ್ಮ ಸಂತಸ ಹಂಚಿಕೊಂಡು ಚದುರಿ ಹೋಗ್ವರು
‘ಅಂಗಡಿ ಮನೆಯಲ್ಲಿಯೇ ಓರ್ವ ಹುಡುಗನಿದ್ದ
ಎರಡು ಕಾಲು ಇಲ್ಲ ಪಾಪ ನಡೆಯಲಾರನು
ಜಗಲಿ ಏರಿ ಕುಳಿತುಕೊಂಡು ಜನರ ನೋಡುವ
ಗಿರಿಯನೇರಿ ಬಂದವರ ಮಾತ ಕೇಳುವ
‘ಹಿರಿಯರಿವನ ಬಾಗಿಲಾಚೆ ಹೋಗದಂತೆಯೇ
ಮನೆ ಅಂಗಡಿಯಲಿ ಬೆದರಿಸಿ ಬಂಧಿಸಿಟ್ಟರು
ಒಂದು ದಿನ ಕಾಣೆಯಾದ ಕಾಲಿಲ್ಲದ ಹುಡುಗ.
ಊರ ಜನ ಮನೆಯ ಜನ ಹುಡುಕಾಡಿದರಿವನ
‘ಹುಡುಗನಿಲ್ಲ ಎಂದು ಅವನ ತಂದೆ ತಾಯಿಯು
ಹಳ್ಳಿ ಹಳ್ಳಿಗಳಿಗೆ ಹೋಗಿ ಹುಡುಕಿ ಬಂದರು
ಎಲ್ಲು ಇಲ್ಲ ಕಾಲಿಲ್ಲದ ಈ ಹುಡುಗನು
ತಾಯಿ ಪಾಪ ಭೋರಿಡುತ್ತ ಅಳುತ ಕುಳಿತಳು.
‘ಗಿರಿಯನೇರಿ ಹೋದ ಜನ ಸುದ್ದಿ ತಂದರು
ಕಾಲಿಲ್ಲದ ಹುಡುಗನೋರ್ವ ಅಲ್ಲಿಹನೆಂದರು
ಊರ ಜನ ಸುದ್ದಿ ಕೇಳಿ ಗಿರಿಯ ಹತ್ತಲು
ಸಂತಸದಿ ಕುಳಿತಿದ್ದನು ಊರ ನೋಡುತ.
ಕತೆ ಮುಗಿಸಿ ಪುಟ್ಟಜ್ಜಿ ನಗುತ್ತ ಹೇಳಿದಳು. ‘ಆ ಹುಡುಗ ಹೇಗೆ ಬೆಟ್ಟ ಹತ್ತಿದನೋ ಹಾಗೇ ನಾನು ಈ
ಅಕ್ಷರ ಮಾಲೆ ಇಟ್ಟುಕೊಂಡು ಅಕ್ಷರ ಬರೆಯುವುದನ್ನೂ ಓದುವುದನ್ನೂ ಕಲಿತೆ.’
ಎರಡೂ ವಿಷಯ ತಿಳಿದು ಮಕ್ಕಳಿಗೆ ಸಂತಸವಾಯಿತು, ಅವರ ನಡುವೆ ಇದ್ದ ಆನಂದ ‘ಅಕ್ಷರ ಕಲಿತ ಪುಟ್ಟಜ್ಜಿಗೆ ಜೈ’ ಎಂದ.
‘ಕಾಲಿಲ್ಲದ ಹುಡುಗನಿಗೂ ಜೈ’ ಎಂದ ಇನ್ನೊಬ್ಬ. ಉಳಿದ ಮಕ್ಕಳೂ ಜೈ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.