ಬಂಕ್ಸಾಲಿಗೆ ಹೊರಟಿರುವ ಮಾರ ಮತ್ತು ಅರ್ಕಸಾಲಿ ಜೋಡಿಯನ್ನು ಬೇಡ್ತಿ ಹೊಳೆದಂಡೆ ಸಾಲಿನ ದಾರಿಯಲ್ಲಿ ಮುಸ್ಸಂಜೆ ಮುಸುಕಿತು. ಹೊಳೆಯಲ್ಲಿ ನೀರು ಹರಿಯುವುದು ಸೊರಗಿ ತಿಂಗಳಾಯಿತು; ಅಕ್ಟೋಪಸ್ಸಿನ ಅವಯವದಂತಿರುವ ಮುದಿ ಮರಗಳ ಬೇರು ಮೇಲೆದ್ದು ಸಣ್ಣ ಸಣ್ಣ ಮರಳಿನ ಹೊಂಡಗಳಲ್ಲಿ ತುಸುವೇ ನೀರು ನಿಂತಿತ್ತು. ಕಾಡಿನ ತಂಪು ಮೌನದೊಳಗೆ ಮಬ್ಬು ಮುಸ್ಸಂಜೆ ಕತ್ತಲ ವೇಷ ತೊಡಲು ಮರಗಳ ಹಿಂದೆ ಅವಿತು ಅಡಗುತ್ತಿತ್ತು. ಹೊಂಡದ ಸನಿಹ ಬೇಟೆಗೆ ಕೂತಿದ್ದ ಬೆಳ್ಳಕ್ಕಿಯೊಂದು ಹೆಜ್ಜೆ ಸದ್ದಿಗೆ ಹಾರಿ ಹೋಯಿತು. ಮಳೆಯ ನೆನಪಿನಲ್ಲಿ ಜೀರುಂಡೆಯೊಂದು ಕಾಡಿನಲ್ಲೆಲ್ಲೊ ಚೀರುತ್ತಿರುವುದು ಕ್ಷೀಣವಾಗಿ ಕೇಳುತ್ತಿತ್ತು. ಬೇಡ್ತಿ ಸೇತುವೆಯನ್ನು ಬಸ್ಸು ದಾಟಿದ ಸದ್ದು ಹಾದು ಹೋಯಿತು. ದಿಗಂತದಂಚಿನ ನಸುಗೆಂಪು ಬಾನು ವಿಲಕ್ಷಣ ಭಾವ ಮಿಶ್ರಣ ಚೆಲ್ಲಿತ್ತು. ಜನ ಸಂಚಾರವಿಲ್ಲದೆ ಸವೆದಿರದ ದಾರಿಯಲ್ಲಿ ಅರ್ಕಸಾಲಿ ಎಚ್ಚರಿಕೆಯಿಂದ ನಡೆಯುತ್ತಿದ್ದ. ಕಳವಳದ ನೀರವತೆಯನ್ನು ಆಲಿಸುತ್ತ, ಆಗಾಗ ನಿಟ್ಟುಸಿರು ತೆಗೆಯುತ್ತ ಹಣಕಿ ನಡೆಯುತ್ತಿದ್ದ ಮಾರ,“ನನ್ನ ಜನ್ಮದಲ್ಲೇ ಹೀಂಗೆ ನೀರು ಬತ್ತಿದ್ದು ಇದೇ ಮೊದಲು” ಎಂದ. “ನಿಮ್ಮ ಮನೆಗೆ ಬರೋದಕ್ಕೆ ನನಗೆ ಒಂಥರಾ ಮೋರೆ ಹಿಡಿತದೆ” ಎಂದು ಅರ್ಕಸಾಲಿ ಗೊಣಗಿದ. ಹೀಗೆ ತಮ್ಮ ತಮ್ಮ ಕಷ್ಟವನ್ನು ಹೇಳಿಕೊಳ್ಳುತ್ತ ಪರಸ್ಪರ ಸಂಬಂಧವಿಲ್ಲದ ಮಾತಾಡುತ್ತ ಇಬ್ಬರೂ ನಡೆಯುತ್ತಿದ್ದರು.
ಅರ್ಕಸಾಲಿ ಯಲ್ಲಾಪುರದ ಹಿಂದುಳಿದ ವರ್ಗಗಳ ಹಾಸ್ಟೇಲಿಗೆ ಕಳೆದ ವರ್ಷವಷ್ಟೇ ವಾರ್ಡನ್ ಆಗಿ ನೇಮಕಗೊಂಡಿದ್ದ. ಬಡತನದಲ್ಲಿ ಕಷ್ಟಪಟ್ಟು ಓದಿ ಸರಕಾರಿ ಸಂಬಳದ ಕೆಲಸವನ್ನು ಪಡೆದು ನೆಮ್ಮದಿಯ ಸಂಸಾರದ ದಡ ತಲುಪುವಷ್ಟರಲ್ಲೆ ನೌಕರಿಯಿಂದ ಅಮಾನತ್ತುಗೊಂಡಿದ್ದ. ಅದು ಹೆಣ್ಣುಮಕ್ಕಳ ಹಾಸ್ಟೇಲ್; ಊಟೋಪಚಾರದ ವ್ಯವಸ್ಥೆ, ಹುಚ್ಚು ಪ್ರಾಯದ ಪೋರಿಗಳ ಜವಬ್ದಾರಿ ನಿರ್ವಹಣೆಯಲ್ಲಿ ಎಷ್ಟು ಜಾಗ್ರತೆಯಿಂದಿದ್ದರೂ ಕಡಿಮೆಯೇ ಎಂದು ಅವನಿಗೆ ಮನೆಯಲ್ಲಿ ನೀತಿ ಬೋಧನೆಯಾಗಿತ್ತು. ಅಡುಗೆ ಮತ್ತು ದಿನಚರಿಯ ಕೆಲಸಗಳಿಗೆ ನುರಿತ ಸ್ತ್ರೀ ಕರ್ಮಚಾರಿಗಳಿದ್ದಿದ್ದರಿಂದ ಹಾಸ್ಟೇಲಿನ ಮೇಲ್ವಿಚಾರಣೆ ಅವನಿಗೆ ಕಲ್ಪಿಸಿಕೊಂಡಷ್ಟು ಅಪಾಯಕಾರಿಯಾಗಿಯೇನೂ ಕಾಣಲಿಲ್ಲ. ಹಾಸ್ಟೇಲಿನ ರೂಮಿನಲ್ಲಿ ರಾತ್ರಿ ವಸತಿಗಿರುವ ಕಟ್ಟುನಿಟ್ಟಿನ ನಿಯಮ ಪಾಲಕರಾಗಿದ್ದ ಎರಡು ಆಯಾಗಳ ಕಣ್ಗಾವಲು ಹದ್ದುಬಸ್ತಿಯಿಂದಾಗಿ, ಹುಡುಗಿಯರು ಸಹಜವಾಗಿಯೇ ಸಂಭಾವಿತರಾಗಿದ್ದರಿಂದ ಅವನು ಚಿಂತಿಸುವ ಅಗತ್ಯವಿರಲಿಲ್ಲ. ಆದರೆ ಅರ್ಕಸಾಲಿಯ ದುರ್ದೈವ; ಹದಿನೈದು ದಿನಗಳ ಹಿಂದೆ ಹಠಾತ್ತಾನೆ ಒಂದು ರಾತ್ರಿ ಊಟವಾದ ಬಳಿಕ ಕೆಲ ಹುಡುಗಿಯರು ವಾಂತಿ ಮಾಡಿದರು. ಅವರ ವಾರ್ಷಿಕ ಪರೀಕ್ಷೆ ಜಾರಿಯಲ್ಲಿತ್ತು. ಅರ್ಕಸಾಲಿ ಹಾಸ್ಟೇಲಿಗೆ ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಿದ. ತುಸು ಚೇತರಿಸಿಕೊಂಡವರು ಮರುದಿನ ಮತ್ತೆ ಕರುಳೇ ಕಿತ್ತು ಬರುವಂತೆ ವಾಂತಿ ಮಾಡಿದರು. ಮರು ಚಿಕಿತ್ಸೆ ಮತ್ತು ಔಷಧೋಪಚಾರದ ಪ್ರಭಾವದಿಂದ ಕೊನೆಯ ಎರಡು ವಿಷಯಗಳ ಪರೀಕ್ಷೆ ಹೇಗೊ ಮುಗಿಯಿತು. ಆಹಾರದಲ್ಲಿ ಕಲಬೆರಿಕೆಯಾಗಿರುವ ಸಾಧ್ಯತೆಯನ್ನು ವೈದ್ಯರು ಊಹಿಸಿದ್ದೇ ತಡ ಹುಡುಗಿಯರ ಪಾಲಕರು ತಂಡೋಪ ತಂಡವಾಗಿ ಹಾಸ್ಟೇಲಿಗೆ ಬಂದು ತಮ್ಮ ಮಕ್ಕಳು ಪರೀಕ್ಷೆಯನ್ನು ನಿರೀಕ್ಷಿತ ಮಟ್ಟದಲ್ಲಿ ಬರೆಯಲಾಗದಕ್ಕೆ ವಾರ್ಡನ್ ಕಾರಣವೆಂದೂ ಮಕ್ಕಳ ಭವಿಷ್ಯವನ್ನು ಹಾಳುಗೆರೆದ ವಾರ್ಡನ್‍ನಿಗೆ ಶಿಕ್ಷೆಯಾಗಬೇಕೆಂದೂ ಸತ್ಯಾಗ್ರಹಕ್ಕೆ ಕೂತರು. ಅವರ ಹಠಕ್ಕೆ ಮಣಿದು ಮೇಲಾಧಿಕಾರಿಗಳು ತಕ್ಷಣದಲ್ಲಿ ಜಾರಿಗೆ ಬರುವಂತೆ ಅರ್ಕಸಾಲಿಯನ್ನು ಅಮಾನತ್ತು ಮಾಡಿ, ವಿಷಾನ್ನವನ್ನು ಪರೀಕ್ಷೆಗೆ ಕಳುಹಿಸಲಾಗಿದೆಯೆಂದೂ ಹಾಸ್ಟೇಲ್ ಹುಡುಗಿಯರ ವೈದ್ಯಕೀಯ ವೆಚ್ಚವನ್ನು ಸರಕಾರವೇ ಭರಿಸುವುದಾಗಿಯೂ ವಾಗ್ದಾನ ಮಾಡಿ, ಬೇಸಿಗೆ ಸೂಟಿ ಆರಂಭವಾಗಿರುವುದರಿಂದ ಪಾಲಕರು ತಮ್ಮ ಮಕ್ಕಳನ್ನು ಮನೆಗೆ ಕರೆದೊಯ್ಯಬಹುದೆಂದು ಸೂಚಿಸಿ ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಾತ್ಕಾಲಿಕ ನಿಯಂತ್ರಿಸಿದರು.
ಎಲ್ಲಿಯೂ ಲೋಪವಾಗದಂತೆ ಕಾಳಜಿ ವಹಿಸಿದರೂ ಅನ್ನ ಕಲುಷಿತ ಹೇಗಾಯಿತೆಂದು ತಿಳಿಯದೆ ಅರ್ಕಸಾಲಿಯ ತಲೆ ಕೆಟ್ಟು ಹೋಯಿತು. ಅಡುಗೆಯವರ ಸ್ವಚ್ಛತೆಯ ಬಗ್ಗೆ ಅವನಿಗೆ ಅನುಮಾನವಿರಲಿಲ್ಲ. ಭಯ ಪಟ್ಟರೂ ಅವರಿಗೆ ತಮ್ಮಿಂದ ಪ್ರಮಾದವಾಗಿಲ್ಲವೆಂಬ ವಿಶ್ವಾಸವಿತ್ತು. ವಾರದ ಸಂತೆಯ ತರಕಾರಿಯಲ್ಲೊ ಅಂಗಡಿಯ ಗೊಡೌನ್‍ನಲ್ಲಿದ್ದ ಅಕ್ಕಿ-ದಿನಸಿಯಲ್ಲೊ ಏನೊ ಎಡವಟ್ಟಾಗಿರಬಹುದೆಂದು ಅವರವರೇ ಮಾತಾಡಿಕೊಂಡರು. ಅಡುಗೆ ಮನೆಯಲ್ಲಿ ಹಲ್ಲಿ ಅಥವ ಬೇರೆ ಹುಳಹುಪ್ಪಟೆ ಆಹಾರ ಪದಾರ್ಥದಲ್ಲಿ ಬೀಳುವ ಸಾಧ್ಯತೆಯನ್ನು ಪಾಕಶಾಲೆಯ ಇಬ್ಬರು ಹೆಂಗಸರು ತಳ್ಳಿ ಹಾಕಿದ್ದರು. “ಇದೆಂಥ ಗ್ರಾಚಾರ!” ಎಂದು ಅಚ್ಚರಿ ಪಡುವುದನ್ನು ಬಿಟ್ಟು ಅವರು ಬೇರೇನೂ ಮಾತಾಡಲಾರದ ಅಸಹಾಯಕರಾಗಿದ್ದರು. ಈ ಆಕಸ್ಮಿಕ ನಿಗೂಢ ಅವಗಡಕ್ಕೆ ಖಚಿತ ಕಾರಣ ಪತ್ತೆಯಾಗುವವರೆಗೆ ಅವರೆಲ್ಲರೂ ಚಡಪಡಿಕೆಯಲ್ಲಿಯೇ ನರಳುವಂತಾಯಿತು.
ಅರ್ಕಸಾಲಿ ಮದುವೆಯಾಗಿ ಆರು ತಿಂಗಳು ಗತಿಸಿರಬಹುದು. ಯಲ್ಲಾಪುರದಲ್ಲಿ ಬಾಡಿಗೆ ಮನೆ ಹುಡುಕುತ್ತಲೆ ದಿನ ಕಳೆದು ಹೋಗಿತ್ತು. ಚೆಂದದ ಬಾಡಿಗೆ ಮನೆ ಮಾಡಿದ ನಂತರ ತನ್ನ ಹೆತ್ತವರನ್ನೂ ಹೆಣ್ಣು ಕೊಟ್ಟವರನ್ನೂ ವಾರ ಉಳಿಸಿಕೊಂಡು ಗುಡಿ ಗುಂಡಾರ ಸುತ್ತಿಸಿ, ಹೊಸ ಬಟ್ಟೆ ಕೊಡಿಸಿ, ಸಿನೆಮಾ ತೋರಿಸಿ ಕಳುಹಿಸುವ ಕನಸನ್ನು ಹೆಂಡತಿಯೊಂದಿಗೆ ಹಂಚಿಕೊಂಡಿದ್ದ. ಹಗಲಿಡೀ ಹಾಸ್ಟೇಲಲ್ಲಿ ಅವನಿಗೆ ಕೆಲಸವಿರುತ್ತಿತ್ತು. ಮನೆಯಲ್ಲಿ ಒಬ್ಬಳೇ ಕಾಲ ಕಳೆಯುವುದು ಕಷ್ಟವೆಂದು ಹೆಂಡತಿಯೂ ಒತ್ತಾಯಿಸಲಿಲ್ಲ. ವಾರಕ್ಕೊಮ್ಮೆ ಹೂವು-ಹಣ್ಣು-ಸ್ವೀಟು ಕಟ್ಟಿಸಿಕೊಂಡು ಊರಿಗೆ ಹೋಗಿ ಹೆಂಡತಿಯೊಂದಿಗೆ ಇದ್ದು ಬರುವ ರೋಮಾಂಚನ ರೂಢಿಯಾಯಿತು. ತಮ್ಮ ಏಕೈಕ ಪುತ್ರಿಯನ್ನು ಸರಕಾರಿ ನೌಕರಿಯಲ್ಲಿರುವ ಹುಡುಗನಿಗೆ ಮದುವೆ ಮಾಡಿದ ತೃಪ್ತಿ ಅವನ ಅತ್ತೆ-ಮಾವಂದಿರಿಗಿತ್ತು. ತಮ್ಮ ಅಳಿಯ ಒಳ್ಳೆಯವನು; ಲಂಚ-ವಸೂಲಿ ಇಲ್ಲದೆ ಮೆರಿಟ್ ಮೇಲೆ ಗವರ್ನಮೆಂಟ್ ನೌಕರಿ ಪಡೆದವನು ಎಂದೆಲ್ಲ ಬಂಧು-ಬಳಗದವರಲ್ಲಿ ಹೆಮ್ಮೆ, ಅಭಿಮಾನದಿಂದ ಅವರು ಹೇಳಿಕೊಡಿದ್ದರು. ಅವನ ಅಪ್ಪ-ಅಮ್ಮ ಸಮಾಜದಲ್ಲಿ ಮಾನ, ಮರ್ಯಾದೆ ಪ್ರಾಣಕ್ಕೆ ಸಮಾನವೆಂದು ನಂಬಿದವರು. ನೌಕರಿ ಸಿಕ್ಕಿದ ಸಂಭ್ರಮದಲ್ಲಿ ಹಂಚಿದ್ದ ಪೇಢಾ ರುಚಿ ಇನ್ನೂ ನಾಲಗೆಯ ಮೇಲಿರುವಾಗ ತನ್ನನ್ನು ಸಸ್ಪೆಂಡ್ ಮಾಡಿದ ಸುದ್ದಿಯಿಂದ ಅವರಿಗೆ ಆಘಾತಕಾರಿ ಅವಮಾನವಾಗದೇ ಇರದು. ಅರ್ಕಸಾಲಿಗೆ ಮನೆ ಜನರಿಗೆ ಮೋರೆ ಕಾಣಿಸಲು ನಾಚಿಕೆಯಾಯಿತು. ಮೃದು, ಸೂಕ್ಷ್ಮ ಸ್ವಭಾವದವನಾದ ಅವನಿಗೆ ಜೈಲು ಶಿಕ್ಷೆ ಮುಗಿಸಿ ಬಿಡುಗಡೆಯಾಗಿ ಬಂದ ಅಪರಾಧಿಯಂತೆ ಊರಲ್ಲಿ ತಲೆ ಎತ್ತಿ ತಿರುಗಾಡುವುದನ್ನು ಕಲ್ಪಿಸಿಕೊಳ್ಳುವುದನ್ನೂ ಸಹಿಸಲಸಾಧ್ಯವಾಗಿತ್ತು.
ವಿಚಾರಣೆ ಮುಗಿಯುವವರೆಗೆ ಅರ್ಕಸಾಲಿ ಹಾಸ್ಟೇಲ್ ಖೋಲಿಯನ್ನು ಖಾಲಿ ಮಾಡಬೇಕೆಂದೂ ಊರಿಗೆ ಹೋಗಬಹುದೆಂದೂ ಸೂಚಿಸಿದರು. ಊರಿಗೆ ಮುಖ ಹಾಕಿ ಮಾನಭಂಗ ಅನುಭವಿಸಲು ಅವನು ತಯ್ಯಾರಿರಲಿಲ್ಲ. ಪೇಟೆಯಲ್ಲಿ ಅವನಿಗೆ ಅಷ್ಟಿಷ್ಟು ಪರಿಚಯವಿರುವ ಮನುಷ್ಯನೆಂದರೆ ಮುನ್ಸಿಪಾಲ್ಟಿ ನೀರು ಬಿಡುವ ಮಾರ ಮಾತ್ರ. ಮಾರ ಪುರಸಭೆಯ ವಾಲ್ವಮನ್ ಚಾಕರಿಗೆ ಸೇರಿ ಐದಾರು ವರ್ಷವಾಗಿರಬಹುದು. ಅವನಾಗಿಯೇ ಅರ್ಜಿ ಗುಜರಾಯಿಸಿ ಉದ್ಯೋಗ ಪಡೆದವನಾಗಿರಲಿಲ್ಲ. ಅವನೂರಿನ ಪುರಸಭೆ ಸದಸ್ಯನೊಬ್ಬ ಮಾರನ ನಿಯತ್ತನ್ನು ನೋಡಿ, ಬೇಡ್ತಿ ಆಣೆಕಟ್ಟಿನ್ನು ವಿರೋಧಿಸಿ ಚಳುವಳಿಯಲ್ಲಿ ಭಾಗವಹಿಸಿದ್ದನ್ನು ನೆನಪು ಮಾಡಿಕೊಂಡು ಒತ್ತಾಯ ಮಾಡಿ ಕೆಲಸವನ್ನು ಕುತ್ತಿಗೆಗೆ ಕಟ್ಟಿದ್ದ. “ತಡವಾಗಿ ಬಸಿರಾದ ಹೆಂಗಸಿನಾಂಗೆ ನನಗೆ ಐವತೈದಕ್ಕೆ ನೌಕರಿ ಅಂದ್ರೆ ಜನ ನಗ್ತಾರೆ” ಎನ್ನುತ್ತ ಸಣ್ಣ ಸಂಕೋಚ, ಪ್ರತಿರೋಧ ಇಟ್ಟುಕೊಂಡೇ ಕೆಲಸಕ್ಕೆ ಹಾಜರಾದ.
ಮಾರ ಬೇಡ್ತಿ ಹೊಳೆಯನ್ನು ನೋಡುತ್ತ ಬೆಳೆದವನು. ಮನೆಯ ಚಿಟ್ಟೆಯಲ್ಲಿ ನಿಂತು ಹೊಳೆಯುವ ಸುಳಿ ತಿರುವನ್ನು ಕತ್ತೆತ್ತಿ ನೋಡುತ್ತ ಮೀಸೆ ಮೂಡಿ ಎತ್ತರವಾದವನು; ನೀರು ಹರಿದು ಅದು ಅವನ ಆಯುಷ್ಯವನ್ನು ಅಳೆದಿತ್ತು; ಅದರ ಸದ್ದು ಅವನ ಜೀವವನ್ನು ತಣ್ಣಗಿಟ್ಟಿದೆ. ಮಳೆಗಾಲದ ಅದರ ಮುನಿಸು ಮತ್ತು ಶೀತಗಾಲದಲ್ಲಿ ಹಕ್ಕಿಗಳೊಂದಿಗೆ ಅದರ ಅಕ್ಕರೆಯ ಮಾತುಕತೆಯನ್ನು ಅವನು ಬಲ್ಲ. ಮಾರನ ಮನೆಜನ ಸಣ್ಣವರಿರುವಾಗ ಹೊಳೆಯ ಗುಂಡಿಯಲ್ಲಿ ಈಜು ಕಲಿತವರು. ಸೇತುವೆ ಕಟ್ಟುವ ಮುಂಚೆ ಅಪ್ಪ ಆಚೀಚೆಯ ಊರಿನವರನ್ನು ಮಳೆಗಾಲದಲ್ಲಿ ಹೊಳೆ ದಾಟಿಸಿದ್ದು ಅವನಿಗೆ ನೆನಪಿದೆ. ಸೇತುವೆ ಕಟ್ಟುತ್ತಿದ್ದಾಗ ಮಾರನಿಗೆ ಭರ್ತಿ ಪ್ರಾಯ. ಅವನ ಮನೆಯ ಹಿಂದಿನ ಬೆಟ್ಟದಿಂದಿಳಿದ ಕೂಸಿನಂತ ಹಳ್ಳ ತಾಯಿ ಬೇಡ್ತಿಯನ್ನು ಸೇರಿಕೊಳ್ಳುತ್ತಾಳೆ. ಬಂಕ್ಸಾಲಿಯವರು ದಿನಚರಿಗೆ ಹಳ್ಳದ ಸಿಹಿ ನೀರನ್ನೆ ನೆಚ್ಚಿಕೊಂಡಿದ್ದಾರೆ. ಹಲವು ಊರು, ಪೇಟೆಗಳನ್ನು ಜೋಡಿಸುವ ರಸ್ತೆಯಂತೆ ಹರಿಯುವ ಬೇಡ್ತಿಯ ಜೊತೆ ಮಾರನಿಗೆ ಆಪ್ತ ಸಂಬಂಧವೇನೂ ಇರಲಿಲ್ಲ. ಅವನ ಪ್ರಕಾರ ಅದರ ಜೀವನ ಸಾರ್ವಜನಿಕವಾದದ್ದು; ಸರಕಾರದ ಕಾಯ್ದೆ-ಕಾನೂನು ಬಾಬತ್ತಿಗೆ ಸೇರಿದ್ದು. ಬೇಡ್ತಿಗೆ ಸೇತುವೆ ಕಟ್ಟಿದಾಗ, ಸೇತುವೆಯ ಸನಿಹದ ಹುಲಿಯಪ್ಪ ದೇವರ ಮಂಟಪದ ಆಚೆ ನೀರು ಸಂಗ್ರಹದ ಕಲ್ಲಿನ ಬೃಹತ್ ಟ್ಯಾಂಕ್ ಕಟ್ಟಿ ನಿಲ್ಲಿಸಿ, ಅದರ ನೀರನ್ನು ಯಲ್ಲಾಪುರ ಪೇಟೆಗೆ ಸರಬರಾಜು ಮಾಡಲಾರಂಭಿಸಿದ ನಂತರ ಅದಕ್ಕೆ ಖಾಸಗಿತನವಿಲ್ಲವೆಂದು ಮಾರನಿಗೆ ಅಧಿಕೃತವಾಗಿ ಅನಿಸಿತು.
ಪುರಸಭೆಯ ಕಾರ್ಮಿಕನಾಗಿ ಬೇಡ್ತಿ ನೀರನ್ನು ಪೇಟೆಗೆ ಪಾಳಿಯಂತೆ ಪೂರೈಸುವ ತನ್ನ ಕೆಲಸ ಅಪ್ಪಟ ಸಾರ್ವಜನಿಕ ವ್ಯವಹಾರಕ್ಕೆ ಸೇರಿದ್ದೆಂದು ಅವನಿಗೆ ಹೆಮ್ಮೆ ಅನಿಸಿತ್ತು. ಮುನಸಿಪಾಲಿಟಿಯ ಹಂಗಾಮಿ ನೌಕರನಾದರೂ ಎಲ್ಲರಂತೆ ಕರ್ತವ್ಯದಲ್ಲಿರುವಾಗ ಸಮವಸ್ತ್ರ ಧರಿಸುವುದು ಅವನಿಗೆ ಘನತೆಯ ಸಂಕೇತ ಎಂದನಿಸಿತ್ತು. ಆರು ವಾರ್ಡುಗಳಿಗೆ ತಲಾ ಒಂದು ತಾಸು ನೀರು ಬಿಡುವುದು ಮಾರನ ನಿತ್ಯದ ಡ್ಯೂಟಿ. ಪೇಟೆಯ ಉಳಿದ ವಾರ್ಡುಗಳಿಗೆ ನೀರು ಬಿಡುವ ಪಾಳಿ ಬೇರೆ ನೌಕರರದ್ದಾಗಿತ್ತು. ಮೊದಲೊಂದು ತಿಂಗಳು ಬಂಕ್ಸಾಲಿಯಿಂದ ನಸುಕಿಗೆ ಹೊರಟು ಸೇತುವೆಯ ಬಳಿ ದಟ್ಟ ಮಂಜಿನ ಮಬ್ಬು ಹಾದು ಬರುವ ದಿನದ ಮೊದಲ ಟ್ರಿಪ್ಪಿನ ಟೆಂಪೊ ಏರಿ ಬರುತ್ತಿದ್ದ. ಪೇಟೆಯ ಜನ ಬೆಳಗಿನ ಚಹಾ ಸೇವಿಸುವ ಸಮಯಕ್ಕೆ ಸರಿಯಾಗಿ ಅಂಗಳದ ನಳದಲ್ಲಿ ಮಾರನ ನೀರು ಬರುತ್ತಿರುವ ಸೂಚನೆಯಾಗಿ ಉಸಿರಿನ ಸದ್ದು ಕೇಳುತ್ತಿತ್ತು. ಮಾರ ಹೆಗಲ ಮೇಲೊಂದು ಇಂಗ್ಲಿಶ್ ಟಿ ಆಕಾರದ ಕಬ್ಬಿಣದ ಸಲಾಕೆಯನ್ನು ಹೊತ್ತು ಓಣ ಯ ಆಯಕಟ್ಟಿನ ಸ್ಥಳಗಳನ್ನು ಸುತ್ತುತ್ತಿದ್ದ. ಸಲಿಕೆಯಿಂದ ವಾಲ್ವ್‌ವನ್ನು ತಿರುವಿ ಒಂದು ತಾಸು ನೀರು ಹರಿಯುವ ತನಕ ರಸ್ತೆಯ ಮೋರಿಯ ಮೇಲೆ ಕೂತು ಬೀಡಿ ಸೇದುತ್ತಲೊ ಕವಳ ಜಗಿಯುತ್ತಲೊ ಕಾಲಯಾಪನೆ ಮಾಡುತ್ತಿದ್ದ. ಎದುರಿನ ಮನೆಯವರು ತಮ್ಮ ಜಗಲಿಗೆ ಕರೆದರೆ, ಚಹಾಕ್ಕೆ ಆಮಂತ್ರಿಸಿದರೆ ಮಾರ ಹೋಗುತ್ತಿರಲಿಲ್ಲ. ಈ ಹಿಂದೆ ಒಂದೆರೆಡು ಸಲ ಆಗ್ರಹಕ್ಕೆ ಮಣಿದು ಉಪಚಾರ ಸ್ವೀಕರಿಸಿ ಸಲುಗೆಯ ಸಲೀಸುತನ ಬೆಳೆದು, “ಮಾರಣ್ಣ ಇಂದು ನಮ್ಮನೆಯಲ್ಲಿ ವಿಶೇಷ; ನೆಂಟರು ಬಂದಿದ್ದಾರೆ; ಸ್ವಲ್ಪ ಹೊತ್ತು ಹೆಚ್ಚಿಗೆ ನೀರು ಬಿಟ್ಟರೆ ಉಪಕಾರವಾಗ್ತಿತ್ತು” ಎಂದು ದುಂಬಾಲು ಬಿದ್ದು ಪೀಡಿಸಿದ್ದರು. ಮಾರನಿಗೆ ಪಜೀತಿಯಾಯಿತು. ನಿಗದಿ ಪಡಿಸಿದ ಸಮಯ ಮೀರಿ ನೀರು ಹರಿಸಿದರೆ ನಿಯಮ ಉಲ್ಲಂಘನೆಯಷ್ಟೇ ಅಲ್ಲ ಅದೊಂದು ರೀತಿಯ ಲಂಚದ ವ್ಯವಹಾರ ನಡೆಸಿದಂತೆ ಎಂದನಿಸಿತು. ಅನ್ನ ಕೊಡುವ ಸಂಸ್ಥೆಗೆ ದ್ರೋಹ ಬಗೆಯಲಾರದೆ ಪುರಜನರ ವಿನಂತಿಯನ್ನು ನಿಷ್ಠುರತೆಯಿಂದ ತಿರಸ್ಕರಿಸಲಾರದೆ ಚಡಪಡಿಸಿದ. ಒಮ್ಮೆ ಮದುವೆ ಮನೆಗೆ ಹತ್ತು ನಿಮಿಷ ಹೆಚ್ಚಿನ ಸಮಯ ನೀರು ಬಿಟ್ಟು ಹೇಗೊ ಮೆಲಾಧಿಕಾರಿಗೆ ದೂರು ಸಲ್ಲಿಕೆಯಾಗಿ, ‘ಮಾರಪ್ಪ, ಅದೇನು ನಿನ್ನ ಮನೆ ಬಾವಿ ನೀರು ಎಂದು ತಿಳಿದಿದ್ದೀಯಾ? ನಾಳೆ ಇನ್ನೊಬ್ಬ ಕೇಳ್ತಾನೆ’ ಎಂದು ತರಾಟೆ ತೆಗೆಂದುಕೊಂಡು ತಪ್ಪೊಪ್ಪಿಕೊಂಡು ಕ್ಷಮೆ ಯಾಚಿಸಿದ್ದ ಪ್ರಸಂಗ ನಡೆದು ಹೋಗಿತ್ತು. ಈ ಹಿಂದೆ ಎಂದೂ ಹೀಗೆ ಮಾನ ಹರಾಜು ಹಾಕಿಸಿಕೊಂಡವನಲ್ಲ ಅವನು. ಜೀವಕ್ಕೆ ಸುಮಾರೆನಿಸಿ ಕೆಲ ದಿನ ತಲೆ ಹಣಕಿ ನಡೆದ. ಆಮೇಲೆ ಓಣಿಯ ಜನರ ಆಮಿಷದಿಂದ ದೂರವಿರಲು ತೀರ್ಮಾನಿಸಿ ಘನಗಂಭೀರನಾಗಿ ಮಾತು ಕಡಿಮೆ ಮಾಡಿದ.
ಮಾರ ಹಾಸ್ಟೇಲಿಗೆ ನೀರು ಬಿಟ್ಟು ಗೇಟಿನ ಎದುರಿನ ಕಟ್ಟೆಯ ಮೇಲೆ ಕೂತಿರುತ್ತಿದ್ದ. ಹಾಸ್ಟೇಲಿಗೆ ಬಾವಿಯ ನೀರು ಇರದ ಕಾರಣ ಎರಡು ನಳಗಳ ಸಂಪರ್ಕ ನೀಡಲಾಗಿತ್ತು. ಪ್ರತಿ ದಿನ ಟ್ಯಾಂಕಿನಲ್ಲಿ ಭರ್ತಿಯಾಗುವ ನೀರಿನ ಮಟ್ಟವನ್ನು ಕಣ್ಣಳತೆಯಲ್ಲಿ ನೋಡಲು ಬರುತ್ತಿದ್ದ ಅರ್ಕಸಾಲಿಯ ಪರಿಚಯ ಮಾಡಿಕೊಳ್ಳಲು ಮಾರನಿಗೆ ಮುಜುಗರವಾಗಲಿಲ್ಲ. ಇದಕ್ಕೆ ಎರಡು ಕಾರಣಗಳಿದ್ದವು: ತಡವಾಗಿ ಜನಿಸಿದ ಅವನ ಮಗಳು ಭಾರತಿ ಇದೇ ಹಾಸ್ಟೇಲಿನಲ್ಲಿ ಓದಲಿದ್ದಳು; ಆ ಕಾರಣದಿಂದ ಹಾಸ್ಟೇಲಿನ ಮೇಲೆ ಅವನಿಗೆ ಅಕ್ಕರೆಯಿತ್ತು. ಅರ್ಕಸಾಲಿಯೂ ತನ್ನ ಹಾಗೆಯೇ ಸಂಬಳಕ್ಕೆ ದುಡಿಯುವ ನೌಕರನಾಗಿದ್ದಿದರಿಂದ ಇಬ್ಬರೂ ಸರಕಾರಕ್ಕೆ ಸಂಬಂಧಪಟ್ಟವರಾಗಿ ತಾವೆಲ್ಲ ಒಂದೇ ಜಾತಿಗೆ ಸೇರಿದವರು ಎಂದು ತರ್ಕಿಸಿದ್ದ. ಅರ್ಕಸಾಲಿ ಹಾಸ್ಟೇಲಿನೊಳಗೆ ಕರೆದು ಮಾರನಿಗೆ ಬೆಳಗಿನ ಮಿಕ್ಕುಳಿದ ಇಡ್ಲಿ, ಚಿತ್ರಾನ್ನ ನೀಡುತ್ತಿದ್ದ. ಇಡ್ಲಿ ಮೆಲ್ಲುತ್ತ, ಹುಳಕು ಹಲ್ಲಿನ ಗುಂಡಿಯಲ್ಲಿ ಎರಕ ಹೊಯ್ದಂತೆ ಮೆತ್ತಿಕೊಂಡಿರುತ್ತಿದ್ದ ತುಣುಕನ್ನು ನಾಲಗೆಯಿಂದ ಎತ್ತಲು ಯತ್ನಿಸುತ್ತ, “ಹಾಸ್ಟೇಲ್ ಮಕ್ಳು ನಮ್ಮೂರಿನ ನೀರನ್ನು ವಾಪರಸ್ತಾರೆ” ಎಂದು ಅಭಿಮಾನದಿಂದ ತೊದಲುತ್ತಿದ್ದ. “ಈ ಹುಡಿಗಯರು ನೀರು ಬಾಳ ಖರ್ಚು ಮಾಡ್ತಾರಪ್ಪ!” ಎಂದು ಅರ್ಕಸಾಲಿ ತಗಾದೆ ತೆಗೆಯುತ್ತಿದ್ದಾಗ ತಾಳಮದ್ದಲೆಯ ಅರ್ಥಗಾರಿಕೆ ನೆನಪಾಗಿ, “ಅವರು ನೀರೆಯರು, ನೀರು ಬಳಸದೆ ಇರುತ್ತಾರೆಯೇ?” ಎಂದು ನಗುತ್ತಿದ್ದ. ಹಾಸ್ಟೇಲಿನ ಹಿತ್ತಲ ತಂತಿಗೆ ಒಣಗಲು ಬಿಟ್ಟ ಹುಡುಗಿಯರ ರಾಶಿ ರಾಶಿ ವಸ್ತ್ರ ನೋಡಿ ಅರ್ಕಸಾಲಿಯ ಮಾತಿನಲ್ಲಿ ಸತ್ಯವಿದೆ ಅನಿಸಿತು.
ನೌಕರಿಯಿಂದ ಅಮಾನತ್ತಾದಾಕ್ಷಣ ಅರ್ಕಸಾಲಿ ತನ್ನ ದುಃಖ ಆಲಿಸುವ ಏಕೈಕ ಹಿತೈಷಿಯಾಗಿರುವ ಮಾರನನ್ನು ಹುಡುಕಿ ಹೊರಟ. ಮಾರನಿಗೆ ಮುನಿಸಿಪಾಲಿಟಿಯ ಕಟ್ಟಡದ ಗೊಡೌನಿನ ಒಂದು ಭಾಗದಲ್ಲಿ ವಸತಿಗೆ ವ್ಯವಸ್ಥೆ ಕಲ್ಪಿಸಿದ್ದರು. ನೀರಿನ ಬಟವಾಡೆ ವೇಳಾಪತ್ರಿಕೆ ಪದೇ ಪದೇ ಬದಲಾಗುತ್ತಿದ್ದದರಿಂದ ಊರಿಂದ ನಸುಕಿಗೆದ್ದು ಬರುವುದು ಅವನಿಗೆ ಕಷ್ಟವಾಯಿತು. ಅವನಿಗೆ ಉಸ್ತುವಾರಿ ವಹಿಸಿದ ವಾರ್ಡಗಳಿಗೆ ಬೆಳಗಿನ ಆರಕ್ಕೆ ನೀರು ಬಿಡಬೇಕಿತ್ತು. ಮಾರನ ಕಷ್ಟ ಕೋಟಲೆಯನ್ನು ನೋಡಿ ದಯಾಮಯಿಯಾದ ಪುರಸಭೆಯ ಆಡಳಿತಾಧಿಕಾರಿ ಹೂಗಾರ ಗೊಡೌನಲ್ಲಿ ಉಳಿಯಲು ಅವಕಾಶ ನೀಡಿದ್ದ. ಅರ್ಕಸಾಲಿಯ ಮೋರೆ ರಣರಾವಿನಿಂದ ಬಸವಳಿದಿತ್ತು. ಎರೆಡು ಕ್ಯಾನ್ವಾಸ ಬ್ಯಾಗು ಹಿಡಿದು ನಸುಕಿನಲ್ಲಿ ಪ್ರತ್ಯಕ್ಷನಾದ ಅವನು ಊರಿಗೆ ಹೊರಟಿರಬಹುದೆಂದು ಮಾರ ಊಹಿಸಿದ. ಮಾರ ಚಿಮಣ ಎಣ್ಣೆ ಸ್ಟೋವ್ ಹೊತ್ತಿಸಿ ಚಹಾ ಕುದಿಸುತ್ತಿದ್ದ. ಎಣ್ಣೆಯ ವಾಸನೆ ಹರಡಿದ್ದ ಹೊಗೆಯಲ್ಲಿ ನಿಂತಿತ್ತು. ಅರ್ಕಸಾಲಿ ಅಪಾರ ದಣ ದಿದ್ದ. ಮಣ್ಣು ನೆಲದ ಮೇಲೆ ಕುಸಿದು ಗೋಡೆಗೆ ಚಾಚಿದಲ್ಲೆ ಕಣ್ಣಿಂದ ಬುಳು ಬುಳುನೆ ನೀರ ಹುಂಡುಗಳು ಉದುರಿದವು. ಅದಾಗಲೆ ಹಾಸ್ಟೇಲ್ ಮಕ್ಕಳ ವಾಂತಿ ಪ್ರಕರಣ ಪೇಟೆಯಲ್ಲಿ ಪ್ರಸಾರವಾಗಿತ್ತು. ಹಾಸ್ಟೇಲ್ ಹೆಣ್ಣುಮಕ್ಕಳಿಗೆ ಪ್ರಥಮ ಚಿಕಿತ್ಸೆ ನೀಡಿ ಸೂಟಿ ಪ್ರಕಟಿಸಿ ಮನೆಗೆ ಕಳುಹಿಸಿದ್ದರು. ಮಾರ ತನ್ನ ಮಗಳನ್ನೂ ಮನೆಗೆ ತಲುಪಿಸಿ ಮದ್ದು ಅರೆದು ಕುಡಿಸಿ ಬಂದಿದ್ದ. ಪ್ರಕರಣದ ಉಗ್ರತೆಯನ್ನು ಮಾರ ಅರ್ಕಸಾಲಿಯ ಬಳಲಿಕೆಯಲ್ಲಿ ಕಂಡು ಕರಗಿದ್ದ. “ಸಸ್ಪೆಂಡ್ ಮಾಡ್ಬಿಟ್ರು ನನ್ನ ಮಾರಣ್ಣ. ಮಾನ ಹೋಯ್ತಲ್ಲ; ವಿಷ ಕುಡ್ದು ಸಾಯ್ಬೇಕು ನಾನು” ಎಂದು ಗೋಳಾಡಿದ.
ಬಿಳುಚಿದ ಅವನ ಉದ್ವೇಗದ ಭಯಂಕರ ಮೋರೆ ನೋಡಿ ವಿಷ ಪ್ರಾಶನಕ್ಕೆ ಹಿಂಜರಿಯದ ಗಿರಾಕಿಯಲ್ಲ ಇವನು ಎಂದು ಮಾರನಿಗೆ ಭಯವಾಯಿತು. ಸುಡುತ್ತಿದ್ದ ಚಹಾ ಕಣ್ಣನ್ನು ಒತ್ತಾಯದಿಂದ ಕುಡಿಸಿದ. ಮುನಸಿಪಾಲಿಟಿಯ ಕಚೇರಿಯಲ್ಲಿ ಅರ್ಕಸಾಲಿಯ ಅಮಾನತ್ತಿನ ಬಗ್ಗೆ ಸಿಬ್ಬಂದಿ ಆಡಿದ ಮಾತನ್ನು ನಿನ್ನೆಯೇ ಮಾರ ಆಲಿಸಿದ್ದ. ಅರ್ಕಸಾಲಿಯನ್ನು ಅಮಾನತ್ತು ಮಾಡಿದ್ದಾರೆಯೇ ವಿನಃ ಕೆಲಸದಿಂದ ವಜಾ ಮಾಡಿರಲಿಲ್ಲ; ವಿಚಾರಣೆಯ ಬಳಿಕ ಮರು ಸೇರ್ಪಡೆ ಆಗೇ ಆಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದರು. ಅವರ ಮಾತಿನ ತಾತ್ಪರ್ಯ ಮಾರನ ತಲೆಯಲ್ಲಿ ಅಭಯಪ್ರದವಾಗಿ ನಿಂತಿತ್ತು.
“ಕೆಲಸದಿಂದ ತೆಗ್ದು ಹಾಕ್ಲಿಲ್ಲಾ. ಮತ್ತೆ ನೌಕರಿಗೆ ಸೇರಸ್ಕಳ್ತಾರಂತೆ ಎಲ್ಲ ಹಾಗೇ ಮಾತಾಡ್ತಾ ಇದ್ದಾರೆ” ಎಂದು ತನಗಿರುವ ಅತ್ಯಲ್ಪ ತಿಳುವಳಿಕೆಯ ಆಧಾರದ ಮೇಲೆ ಮಾರ ಸದ್ಯದ ಸಂತ್ರಸ್ತ ಅರ್ಕಸಾಲಿಯನ್ನು ಭರವಸೆ ಮೂಡುವ ಹಾಗೆ ಸಂತೈಸಿದ. “ಮಾರಣ್ಣ ನಿಮ್ಮ ಮಾತಿನಂತೆ ಆದ್ರೆ ಸಾಕು. ಅಲ್ಲಿತನ ನಾನು ಇಲ್ಲೇ ಉಳ್ಕಳ್ತೇನೆ. ಬ್ಯಾಡ ಅಂದ್ರೆ ನನಗೆ ಬ್ಯಾರೆ ಗತಿ ಇಲ್ಲ. ಈ ಮೋರೆ ತಗಂಡು ಊರಿಗೆ ಸರ್ವಥಾ ಹೋಗೋದಿಲ್ಲ” ಮಂಡು ಹಟ ಹಿಡಿದು ಕುಳಿತವನ ಅಕ್ಕಪಕ್ಕ ಲಡ್ಡಾದ ಮುನಸಿಪಾಲಿಟಿಯ ಹಳೆಯ ಕರ ವಸೂಲಿ ದಾಖಲೆ ಪತ್ರಗಳ ಚೀಲಗಳ ಕಂತೆ ನೋಡಿದ. ಇಲಿ ಕತ್ತರಿಸಿದ ಕಾಗದದ ಚೂರು, ಧೂಳು ಮೆತ್ತಿದ ಹಾಳಾದ ಗಾಳಿಪಂಖ, ಮಾಡಿನ ಕೆಳಗೆ ಜೋಲುತ್ತಿದ್ದ ಬಿಂಜಲು ಮಾಲೆ, ಮುರಿದ ಕುರ್ಚಿಯ ಇಕ್ಕಟ್ಟಿನ ನಡುವೆ ಮಾರನ ಮಡಚಿದ ಚಾಪೆ ಹಾಸಿಗೆ, ಅಲ್ಯೂಮಿನೀಯಂ ಪಾತ್ರೆ ಮತ್ತು ಸ್ಟೋವ್ ಇದ್ದವು. ಮೇಲಾಧಿಕಾರಿಗಳ ಅನುಮತಿ ಪಡೆಯದೆ ಅರ್ಕಸಾಲಿಯನ್ನು ಉಳಿಸಿಕೊಳ್ಳುವುದು ತೊಂದರೆಗಿಟ್ಟುಕೊಂಡಿತು. ಆಶ್ರಯವನ್ನು ಬೇಡಿ ಬಂದವನನ್ನು ಬೀದಿಗೆ ತಳ್ಳಲೂ ಮನಸೊಪ್ಪಲಿಲ್ಲ. ಈಗಾಗಲೇ ಆರೋಪಿ ಸ್ಥಾನದಲ್ಲಿರುವ ಅರ್ಕಸಾಲಿಗೆ ನೀಡುವ ಸಹಾಯದಿಂದ ಪ್ರಕರಣದಲ್ಲಿ ತಾನು ಶಾಮೀಲು ಎಂಬ ಶಂಕೆ ಬಾರದಿರದು ಎಂದು ಅಳುಕಿದ. ಮುರಿದ ಕುರ್ಚಿಯ ಮೇಲೆ ಮಾರ ಕೂತು ಯೋಚಿಸಿದ. ಅರ್ಕಸಾಲಿ ಬಂದ ದಿನವಿಡೀ ಚಾದರ ಮುಸುಕು ಹಾಕಿ ಮಲಗಿದ್ದ. ಅದೇ ದಿನ ಸಂಜೆ ಮಾರ, “ಪ್ರಕರಣ ಇತ್ಯರ್ಥ ಆಗೋವರೆಗೆ ಪ್ಯಾಟೆಯ ಸಹವಾಸವೇ ಬ್ಯಾಡ. ನಮ್ಮ ಮನೇಲಿ ಉಳಿಯುವರಂತೆ” ಎಂದು ಕರೆದುಕೊಂಡು ಬಂಕ್ಸಾಲಿಗೆ ಹೊರಟಿದ್ದ.
ಮಾರನದು ತಲೆತಲಾಂತರದಿಂದ ಊರಿಗೆ ನ್ಯಾಯದಾನ ಮಾಡುತ್ತ ಬಂದಿರುವ ಮನೆತನ. ಅರ್ಕಸಾಲಿಯ ಪ್ರಕರಣವನು ತನ್ನ ಸುಪರ್ಧಿಗೆ ತೆಗೆದುಕೊಳ್ಳಲು ಮಾರನಿಗೆ ಅಡ್ಡಬಂದ ತೊಂದರೆ ಎಂದರೆ ಅರ್ಕಸಾಲಿ ಪರೂರಿನವನು ಎಂಬುದು ಒಂದಾದರೆ ಅವನ ಅಮಾತ್ತಿನ ಪ್ರಕರಣ ಸಮಾಜಕಲ್ಯಾಣ ಲಾಖೆಯ ವ್ಯಾಪ್ತಿಗೆ ಸೇರಿದ್ದು ಎಂಬುದು ಎರಡನೆಯದ್ದು. ಆದರೂ ಅವನ ಅಂಕೆ ಮೀರಿ ಅವನಲ್ಲಿ ಪಂಚಾಯತಿ ಮನೋಧರ್ಮ ಆವಾಹನೆಯಾಗಿತ್ತು. ಅದೇ ಆವೇಶದಲ್ಲಿ ಮಾರ, “ನಮ್ಮೂರಲ್ಲಾಗಿದ್ರೆ ಕತೆಯೇ ಬೇರೆ. ಸಂದರ್ಭ ಬಂದರೆ ನಾನು ನಿಮ್ಮ ಪರವಾಗಿ ಸಾಕ್ಷಿ ಹೇಳ್ತೇನೆ” ಎಂದು ಧೈರ್ಯ ತುಂಬಿದ್ದ. ಆದರೆ, ಮಾರಪ್ಪ ಹೇಗೆ ಸಾಕ್ಷೀದಾರನಾಗುತ್ತಾನೆ ಎಂದು ಅವರಿಬ್ಬರಲ್ಲಿ ಯಾರೂ ಯೋಚಿಸಲಿಲ್ಲ.
ಬಂಕ್ಸಾಲಿಯಲ್ಲಿರುವುದು ಕೇವಲ ಒಂಬತ್ತು ಮನೆಗಳ ಕೊಪ್ಪ. ತ್ರಿಕೋನದ ಎರಡು ಬಾಹುಗಳು ಸೇರಿದಂತೆ ಕೂಡಿದ ಹಸುರು ಬೆಟ್ಟದ ಸಾಲುಗಳು ಎರಡು ದಿಕ್ಕುಗಳಲ್ಲಿ ಗೋಡೆಯಾಗಿ ನಿಂತಿದ್ದವು. ಕೊಪ್ಪದ ಎದುರು ಬಯಲಲ್ಲಿ ಅರ್ಧಚಂದ್ರಾಕಾರದ ಮೆಟ್ಟಿಲುಗಳಂತೆ ಭಾಸವಾಗುವ ಗದ್ದೆಯ ಇಳಕಲು ಹಾಳಿಗಳು. ಗದ್ದೆಯ ಕೋವಿನ ಮೂಲಕ ನುಸುಳುವ ಪ್ರಳಯಾಂತಕ ಸುಳಿಗಾಳಿ ಮನೆಗಳನ್ನು ಹಾರಿಸುವಂತೆ ಬೀಸುತ್ತದೆ. ಹಾಗಾಗಿ ತಗ್ಗು ಮಾಡಿನ ಮನೆಗಳು; ಸುತ್ತಲಿನ ಗೋಡೆಗೆ ಕಟ್ಟಿದ ಹುಲ್ಲಿನ ಚಡಿ; ಸಣ್ಣ ಕಿಟಕಿ ಮತ್ತು ಗಿಡ್ಡ ಬಾಗಿಲು. ಸಗಣ ವಾಸನೆ ಸೂಸುವ ಕೊಟ್ಟಿಗೆ. ಕೆಳಗೆ ಡೊಂಕು ಹರಿವಿನ ಬೇಡ್ತಿ. “ನಾಯಿ ಕಚ್ತಾವಾ?” ಅರ್ಕಸಾಲಿ ವಿಚಾರಿಸಿದ. “ನಾಯಿ ಇಲ್ಲದ ಊರು ಇದೊಂದೆ. ಕಿರ್ಬನ ಕಾಟ” ಮಾರ ದೀಪ ಹಚ್ಚಿದ ಕುಟೀರದಂತ ಮನೆಯೊಳಗೆ ಬರ ಮಾಡಿಕೊಂಡ.
ಒಂಬತ್ತೂ ಮನೆಗಳು ಒಂದೇ ಕುಟುಂಬದಂತೆ ಇದ್ದವು. ಎದುರಿನ ಗದ್ದೆಯ ಉಳುಮೆ ಮತ್ತು ಸುಗ್ಗಿಯ ಹಂಚಿಕೆ ಸಾಮೂಹಿಕವಾಗಿ ನಡೆಯುತ್ತ ಬಂದಿದೆ. ಕಳದಲ್ಲಿ ಆರೇಳು ಬುಗುರಿಯಂತ ಭತ್ತದ ಕುತ್ರಿಗಳಿದ್ದವು. ದಪ್ಪ ಕಂಬಗಳ ಅಟ್ಟದ ಮಾಳದಲ್ಲಿ ಹುಡುಗನೊಬ್ಬ ಡಬ್ಬಿ ಬಡಿಯುತ್ತ ಕೂತಿದ್ದ. ತೀರಿ ಹೋದ ಕೊಪ್ಪದ ಹಿರಿಯನ ಹೆಸರಿನಲ್ಲಿದ್ದ ಜಮೀನಿನ ವಾರಸುದಾರಿಕೆ ಹಂಚಿಕೆಯಾಗುವುದು ಯಾರಿಗೂ ಬೇಕಿರಲಿಲ್ಲ. ಜಗಲಿಯ ಗೋಡೆಗೊರಗಿ ಈಚಲು ಹುಲ್ಲಿನ ಚಾಪೆ ನೇಯುತ್ತಿದ್ದ ಮಾರಪ್ಪನ ಹೆಂಡತಿ ಎದ್ದು ನಿಂತು ಗೌರವ ಸಲ್ಲಿಸಿ ಕದಕ್ಕೊರಗಿದಳು. ಅಂಗಳದ ಚಿಟ್ಟೆಯ ಮೇಲೆ ಕೂತು ತೆಳು ಬೆಳದಿಂಗಳಲ್ಲಿ ನೆರಳು ನಿಂತು ನುಣ್ಣಗಾದ ಗದ್ದೆಯ ಬಯಲಲ್ಲಿ ನೆನಪುಗಳನ್ನು ಹೆಕ್ಕುತ್ತ ಕೂತಿದ್ದ ಮುದುಕರಿಬ್ಬರು ಬಾಗಿಲಲ್ಲಿ ನಿಂತು ನಕ್ಕರು. ಅಡುಗೆ ಮನೆಯಿಂದ ಹೊಸದಾಗಿ ಮದುವೆಯಾಗಿ ಬಂದ ಸೊಸೆಯಂದಿರು ಕೈ ಮುಗಿದರು. ಪಂಜಿ ಮಾತ್ರ ಸೊಂಟಕ್ಕೆ ಸುತ್ತಿದ ಪಕ್ಕದ ಮನೆಯ ಗಂಡಸರು ಮರಾಠಿಯಲ್ಲಿ ಮಾರನನ್ನು ಮಾತಾಡಿಸಿದರು. ಮಾರ ಅರ್ಕಸಾಲಿಯನ್ನು ವಾರ್ಡನ್ ಎಂದು ಪರಿಚಯಿಸಿದ. ಅದೊಂದು ದೊಡ್ಡ ಆಫೀಸರ್ ಹುದ್ದೆ ಇರಬೇಕೆಂದು ಅವರೆಲ್ಲ ಅತ್ಯಂತ ಭಯಭಕ್ತಿಯಿಂದ ನಮಿಸಿ ನಿಂತೇ ಇದ್ದರು. “ತುಸು ದಿನ ಇಲ್ಲೇ ಇರ್ತಾರೆ” ಎಂದು ಹೆಂಗಸರ ಮೋರೆ ನೋಡಿದ. ಅದು ಅತಿಥಿಗೂ ಅನ್ನೋಪಚಾರ ಆಗಬೇಕು ಎಂಬುದರ ಸನ್ನೆಯಾಗಿತ್ತು.
ಭಾರತಿ ಓಡೋಡಿ ಬಂದು ಅರ್ಕಸಾಲಿಗೆ ಸರ್ ಎನ್ನುತ್ತ ನಮಿಸಿ, ಅಪ್ಪನಿಗೊರಗಿದಳು. ಚಾಪೆ ನೇಯುತ್ತಿದ್ದ ಹೆಂಗಸು ದೀಪ ಹಿಡಿದು ಹತ್ತಿರ ಬಂದು ಭಾರತಿಯ ಕೊರಳು, ತೋಳಿನ ಮೇಲೆ ಸುಟ್ಟು ಬಾಡಿದಂತೆ ಕಾಣುವ ಚರ್ಮದ ತೇಪೆಯನ್ನು ತೋರಿಸಿ ಮಾರನಿಗೆ ಮರಾಠಿಯಲ್ಲಿ ಏನೇನೊ ಹೇಳಿದಳು. ಭಾರತಿ ತುರಿಕೆಯಾದ ಭಾಗವನ್ನು ಪರಚುತ್ತ ಹೋಗುವುದನ್ನು ಮಾರ ನೋಡಿ ಚಿಂತಾಕ್ರಾಂತನಾದ. ತಾನು ಸಸ್ಪೆಂಡಾದ ವಿಷಯವನ್ನು ಮಾರ ಹೇಳದೆ ಮಾನ ಕಾಪಾಡಿದ ಎಂದು ಅರ್ಕಸಾಲಿಗೆ ಸಮಾಧಾನದ ಜೊತೆಯಲ್ಲಿ ಅಳಕೂ ಕಾಡಿತು. ಊಟ ಮಾಡಿ ಮಲಗುವಷ್ಟರಲ್ಲಿ ಬಂಕ್ಸಾಲಿಯಲ್ಲಿ ಮಾರ ವರ್ಚಸ್ಸಿನ ಮನುಷ್ಯ ಎಂಬುದು ಅರ್ಕಸಾಲಿಗೆ ಪಕ್ಕಾ ಆಯಿತು. ದೀಪ ಆರಿಸುವ ಮುನ್ನ ಕವಳ ಹಾಕುತ್ತ ಚಾಪೆಯ ಮೇಲೆ ಕೂತಿದ್ದ ನೆಂಟ ಯದ್ವಾತದ್ವಾ ರಾತ್ರಿಡೀ ಸೋಮೇಶ್ವರದಿಂದ ಸಿಡ್ಲಗುಂಡಿಯವರೆಗೆ ನೀರು ಪಂಪ್ ಮಾಡಿದ್ದರಿಂದ ಬೇಡ್ತಿ ಬತ್ತಿದೆಯಂತಲೂ ಹುಬ್ಬಳ್ಳಿಯ ಕೊಳಚೆ ಕಿರವತ್ತಿಯ ಆಚೆ ನಿಂತು ನಾರುತ್ತಿರುವ ನರಕವಾಗಿದೆ ಎಂತಲೂ ಲೋಕಾಭಿರಾಮವಾಗಿ ಮಾತಾಡುತ್ತ ನಿದ್ರೆಗೆ ಜಾರಿದ್ದ. ಆಳ ಮೌನದ ರಾತ್ರಿಯ ಪಾತಾಳದಲ್ಲಿ ಮಲಗಿ, ಬೆರಗಿನಲ್ಲಿ ನೆಂಟನ ಮಾತನ್ನು ಆಲಿಸುತ್ತ ಅರ್ಕಸಾಲಿಯ ರೆಪ್ಪೆ ಮುಚ್ಚಿ ಹೋಯಿತು. ನಿದ್ದೆ ಬಾರದೆ ಹೊರಳಾಡುತ್ತಿದ್ದ ಮಾರನಿಗೆ ಕೊಳಚೆ ಸೇರಿದ ನೀರಿಗೂ ಭಾರತಿಯ ಚರ್ಮದ ತುರಿಕೆಗೂ ಹಾಸ್ಟೇಲ್ ಪ್ರಕರಣಕ್ಕೂ ಇರಬಹುದಾದ ಸಂಬಂಧ ಸ್ಪಷ್ಟವಾಗುತ್ತ ಹೋದಂತೆ ನಡು ರಾತ್ರಿ ದಾಟಿದರೂ ಕಣ್ಣು ಕೂರದೆ ಚಡಪಡಿಸುತ್ತಲೆ ಬೆಳಗು ಮಾಡಿದ್ದ. ನಸಕು ಹರಿಯುತ್ತಲೆ ಕಿರವತ್ತಿಯ ಸಮೀಪದ ಹೊಳೆಯ ಕೊಳಚೆಯನ್ನು ನೋಡಿ ಬರುವ ನಿರ್ಧಾರವನ್ನು ಗಟ್ಟಿ ಮಾಡಿದ. ಮಗಳ ಚರ್ಮದ ಕಾಯಿಲೆಗೆ ಸಿಡ್ಲಗುಂಡಿಯ ಬೆಟ್ಟದಿಂದ ಗಿಡಮೂಲಿಕೆ ಔಷಧಿಯನ್ನು ತರುವುದನ್ನು ಕಲ್ಪಿಸಿಕೊಳ್ಳಲು ಅವನು ಮರೆಯಲಿಲ್ಲ.
ಬೇಡ್ತಿ ಹೊಳೆಗೆ ಚಾಚಿರುವ ಕೊಪ್ಪದ ಹಲವು ಹಳ್ಳಿಗಳಿಗೆ ಮಾರ ಬೇಕಾದ ಮನುಷ್ಯನಾಗಿದ್ದ. ಪುಂಡಿ ನಾರಿನ ಹಗ್ಗ, ಬೆತ್ತದ ಬುಟ್ಟಿ, ಗಾಂವ್ಟಿ ಮದ್ದು, ಸುಗ್ಗಿಯಲ್ಲಿ ಗುಮ್ಟೆಪಾಂಗು ನುಡಿಸೋದು, ಸಣ್ಣ ಪುಟ್ಟ ಪಂಚಾಯತಿ ಎಂಬಿತ್ಯಾದಿ ಕರ್ಮಜಾಲದಲ್ಲಿ ಅವನು ಸಿಲುಕಿದ್ದ. ಈ ಎಲ್ಲ ವಿದ್ಯೆಗಳಿಗೆ ಅವನೇ ಕೊನೆಯವನಾಗಿದ್ದ. ಯಾವ ಸಂಕೋಚವಿಲ್ಲದೆ ಅತ್ಯಂತ ಮುಗ್ಧವಾಗಿ ಈ ವಿದ್ಯೆಗಳಲ್ಲಿ ತನ್ನನ್ನು ಮೀರಿಸುವವರು ಹುಟ್ಟಿಲ್ಲ, ಹುಟ್ಟುವುದೂ ಇಲ್ಲವೆಂದು ಹೇಳಿಕೊಂಡು ತಿರುಗಾಡುತ್ತಿದ್ದ. ಕೊಪ್ಪದಲ್ಲಿ ಮಾರನ ದೊಡ್ಡಸ್ತಿಕೆಗೆ ಪ್ರಾಪ್ತವಾದ ಮಾನಮರ್ಯಾದೆ ನೋಡಿದ ಅರ್ಕಸಾಲಿಗೆ ಮಾರ ಮುನಸಿಪಾಲಿಟಿಯ ಸಾಮಾನ್ಯ ಕರ್ಮಚಾರಿಯಾಗಿ ಪೇಟೆಯಲ್ಲಿ ಓಡಾಡಿಕೊಂಡಿರುವುದು ಅವಮಾನವೆಂದು ಅನಿಸಿತ್ತು. ಅರ್ಕಸಾಲಿಯ ವಾದವನ್ನು ಒಪ್ಪದೆ ನಾಲ್ಕು ಜನರಿಗೆ ನೀರು ನೀಡುವುದು ಪುಣ್ಯದ ಕೆಲಸವೆಂದು ಮಾರ ತತ್ವ ನುಡಿದಿದ್ದ. ಈಗ ಅವನ ಗಮನ ಸಕಾಲದಲ್ಲಿ ಪೇಟೆಯ ವಾರ್ಡುಗಳಿಗೆ ನೀರು ಹರಿಸಿ ಗಳಿಸಿದ ಮನೆಯವರ ಮಂದಹಾಸದ ಮೆಚ್ಚುಗೆಯಲ್ಲಿ ಕೃತಾರ್ಥತೆಯನ್ನು ಅನುಭವಿಸುವುದರತ್ತವಿತ್ತು. ಅನಾದಿ ಕಾಲದಿಂದ ನಡೆದು ಬಂದ ಮನೆತನದ ಕಸುಬಿನ ಮುಂದೊರೆದ ಭಾಗವಾಗಿಯೇ ಮುನಸಿಪಾಲಿಟಿಯ ವಾಲ್ವ್ ತಿರುಗಿಸುವ ಕೆಲಸವನ್ನು ಭಾವಿಸಿದ್ದ. ನಿನ್ನೆ ಮುಸ್ಸಂಜೆ ಮನೆಗೆ ಬಂದ ನೆಂಟ ತಂದ ಸುದ್ದಿಯಿಂದ ಮಾರ ವಿಚಲಿತನಾಗಿದ್ದ.
ಚಹಾಕ್ಕೂ ಕಾಯದೆ ಮಾರ ಬಾನಗೆಂಪಿನ ನಸುಕಿಗೆದ್ದು ಕಿರವತ್ತಿಯ ಹಾದಿ ಹಿಡಿದ. ವಾರದಿಂದ ನಿದ್ದೆ ಮಾಡಿರದ ಅರ್ಕಸಾಲಿ ಗೊರಕೆ ಹೊಡೆಯುತ್ತಿದ್ದ. ಒಲೆ ಹೊತ್ತಿಸುತ್ತಿದ್ದ ಹೆಂಡತಿಗೆ ತಾನು ಮನೆಗೆ ಮರಳುವುದು ಮಧ್ಯಾಹ್ನವಾಗಬಹುದೆಂದು ಸೂಚನೆ ನೀಡಿ ಹೊರಟಿದ್ದ. ದೂರದಲ್ಲೆಲ್ಲೊ ಕಾಡು ಕೋಳಿ ಬಿಟ್ಟು ಬಿಟ್ಟು ನಿಯಮಿತವಾಗಿ ಕೂಗುತ್ತಿತ್ತು. ಮಾರನ ದಾಪುಗಾಲಿಗೆ ಒಳದಾರಿಯ ಕಿರವತ್ತಿ ಬಹಳ ದೂರವೇನೂ ಅಲ್ಲ. ಮಳೆಗಾಲದಲ್ಲಿ ಉಕ್ಕಿದ್ದ ಹೊಳೆ ಬೆಟ್ಟದಿಂದ ತೇಲಿಸಿ ತಂದ ಒಣಮರದ ಕಾಂಡವನ್ನು ಮರದ ಟೊಂಗೆಯ ಮೇಲಿಟ್ಟು ಮರೆತು ಸಾಗಿತ್ತು. ಹಿನ್ನೀರಿನಲ್ಲಿ ಮುಳುಗಿದ ಮರಗಳು ಬೇಸಿಗೆಯಲ್ಲಿ ಅಸ್ಥಿಪಂಜರದಂತೆ ಕಾಣುವ ಹಾಗೆ ನೀರು ಬಳಸಿದ ಹೊಳೆಯೊಳಗಿನ ಮರಗಳು ಮರಣಾವಸ್ಥೆಯನ್ನು ತಲುಪಿದ್ದವು. ನೀರಿನ ಕೊರತೆಯಿಂದ ಮರಗಳು ಹೀಗೆ ಸಾಯಲಾರವು ಎಂಬುದು ಅವನಿಗೆ ಗೊತ್ತು; ಅಕಾಲದಲ್ಲಿ ವೃದ್ಧಾಪ್ಯ ತಲುಪಿ ಮರಣ ಶಯ್ಯೆಯಲ್ಲಿರುವ ಮರಗಳ ಅವಸಾನಕ್ಕೆ ಕಾರಣ ಏನಿರಬಹುದೆಂದು ಮಾರ ಯೋಚಿಸುತ್ತ ಹೆಜ್ಜೆ ಹಾಕಿದ.
ಕಿರವತ್ತಿಯ ಸರಹದ್ದಿಗೆ ಕಾಲಿಡುತ್ತಲೆ ಕಾಡು ನುಂಗಿದ ಬಕಾಸುರ ಬಯಲಲ್ಲಿ ಗಾಳಿಗೆ ನಗುತ್ತಿರುವ ಹತ್ತಿಯ ಗಿಡಗಳ ಅಕ್ಷಯ ಗದ್ದೆಯ ಸನಿಹ ಬೇಡ್ತಿ ಹೊಳೆಯ ಹೆಣ ಕೊಳೆಯುತ್ತ ಬಿದ್ದಿತ್ತು! ನೆಂಟನ ಮಾತು ಕಿಂಚಿತ್ತೂ ಉತ್ಪ್ರೇಕ್ಷೆಯಾಗಿರಲಿಲ್ಲ. ಹುಬ್ಬಳ್ಳಿ ನಗರ ವಿಸರ್ಜಿಸಿದ್ದ ತ್ಯಾಜ್ಯ ಚರಾಚರಾ ವಸ್ತುಗಳು ನಾರುತ್ತಿದ್ದವು. ವಿಷ ಸೇವಿಸಿದವನ ಬಾಯಿಂದ ನೊರೆ ಜಿನಗುವಂತೆ ಹರಿಯಲಾರದ ಅತ್ಯಲ್ಪ ನೀರಲ್ಲಿ ಸೋಪಿನ ಬುರಗಿನಂತ ಬಿಳಿ ಪದಾರ್ಥ ತೇಲುತ್ತಿತ್ತು. ಕೂದಲು, ಸ್ಯಾನಿಟರಿ ಪ್ಯಾಡು, ವಿಧವಿಧವಾದ ಪ್ಲ್ಯಾಸ್ಟಿಕ್ ಚೀಲ, ಮೂಟೆ ಕಟ್ಟಿದ ಕೊಳೆತ ಮಾಂಸದ ಉಚ್ಛಿಷ್ಟ, ಉಬ್ಬಿದ ರಬ್ಬರ್ ಟ್ಯೂಬಿುನಂತ ನಾಯಿಯ ಶವ, ಅವುಗಳಿಂದ ಸೂಸುತ್ತಿದ್ದ ದುರ್ವಾಸನೆಯಿಂದ ಸಾಕ್ಷಾತ್ ನರಕ ಪ್ರತ್ಯಕ್ಷವಾಗಿತ್ತು. ಹಾಸ್ಟೇಲಿನಲ್ಲಿ ತನ್ನ ಮಗಳೂ ಸೇರಿ ಅಮಾಯಕ ಹುಡುಗಿಯರು ಅಸಹ್ಯವೂ ಅಪಾಯಕಾರಿಯೂ ಆಗಿರುವ ಇದೇ ನೀರನ್ನು ಕುಡಿದು ಜೀವ ಹಿಡಿದು ಬದುಕಿದ್ದಾರಲ್ಲ ಎಂದು ವಿಷಾದ, ಭಯ, ಸೋಜಿಗ ಆಯಿತು. ವಿಷಪ್ರಾಶನದಿಂದ ನದಿಪಾತ್ರದ ಮರಗಳು ಅಸು ನೀಗಿದ್ದರ ಬಗ್ಗೆ ಅವನಿಗೆ ಸಂಶಯವಿರಲಿಲ್ಲ. ಈ ವಿಷಯದ ವರದಿಯನ್ನು ಹೂಗಾರ ಸಾಹೇಬರಿಗೆ ತಲುಪಿಸಲು ಕಾತುರನಾದ. ಮರಳುವಾಗ ಚರ್ಮ ರೋಗಕ್ಕೆ ಉಪಯೋಗಿಸುತ್ತಿದ್ದ ಸಿಡ್ಲಗುಂಡಿಯ ಸೇತುವೆಯ ಸಮೀಪದಲ್ಲಿದ್ದ ಮದ್ದಿನ ಮರದ ತೊಗಟೆ ಸುಲಿಯಲು ಯೋಚಿಸಿದ. ಅವನ ಪೂರ್ವಾನುಮಾನದಂತೆ ಹೊಳೆಯ ನೀರುಂಡ ಮದ್ದಿನ ಮರ ಒಣಗಿ ನೆಲಕ್ಕೊರಗಲು ಬಾಗಿತ್ತು. ಎಷ್ಟು ವರ್ಷಗಳಿಂದ ಶಹರದ ಗಲೀಜು ನೀರಿಗೆ ಹರಿದು ಬರುತ್ತಿದೆ? ಯಾರ ಗಮನಕ್ಕೂ ಬರಲಿಲ್ಲವೆ? ಹೊಲಸು ಚೆಲ್ಲಿ ಮನುಷ್ಯರನ್ನು ಸಾಯಿಸ ಬೇಡಿ ಎಂದು ಶಹರದವರಿಗೆ ಯಾರೂ ಹೇಳಲಿಲ್ಲವೆ? ಮಾರ ತಳಮಳಿಸಿದ. ಮನೆಯಲ್ಲೂ ತುಟಿ ಬಿಚ್ಚಲಿಲ್ಲ. ತಾನು ನೀರು ಬಿಟ್ಟು ಬರುವುದಾಗಿಯೂ ಅರ್ಕಸಾಲಿ ಮುಜುಗರ ಪಡದೆ ಮನೆಯಲ್ಲೆ ಉಳಿಯಬೇಕೆಂದೂ ಆಗ್ರಹಿಸಿ ಮಾರ ಪೇಟೆಯ ಪುರಸಭೆಗೆ ನಡೆದ. ಹಾಸ್ಟೇಲ್ ರಾದ್ದಾಂತದಲ್ಲಿ ಅರ್ಕಸಾಲಿ ನಿರಪರಾಧಿ; ಕಲುಷಿತ ನೀರಿನ ಹೊಣೆ ಪುರಸಭೆಯವರದ್ದೆಂದು ಮತ್ತೆ ಮತ್ತೆ ಅಂತಃಕರಣ ಮಿಡಿಯಿತು. ಅಂದರೆ, ಪುರಸಭೆಯ ರಾದ್ಧಾಂತದಲ್ಲಿ ನೌಕರನಾದ ತನ್ನ ಪಾತ್ರ, ಪಾಲುಗಾರಿಕೆ ಇರಬೇಕಾಯಿತ್ತಲ್ಲ; ಹಾಗಾದರೆ ಪ್ರಕರಣ ತನ್ನ ಕೊರಳಿಗೆ ಸುತ್ತಿಕೊಳ್ಳುವುದು ನಿಶ್ಚಿತ; ಅಂತಹ ಸಾಧ್ಯತೆಯನ್ನು ಕಲ್ಪಿಸಿಕೊಂಡೇ ಅಧೀರನಾದ.
ದಿಗ್ಭ್ರಾಂತನಾದ್ದರೂ ಮಾರ ತನ್ನ ಸೇವಾವಧಿಯಲ್ಲಿ ಘನವಾದ ಕರ್ತವ್ಯವನ್ನು ನಿರ್ವಹಿಸುತ್ತಿರುವ ಗಾಂಭೀರ್ಯದಲ್ಲೆ ಪುರಸಭೆಯ ಮೆಟ್ಟಿಲೇರಿದ. ಆರೇಳು ಆಯತಾಕಾರದ ಕೋಣೆಯೊಳಗೆ ಮೇಜು ಹಾಕಿ ಕುಳಿತ ಹುಡುಗಿಯರು ಕಂಪ್ಯೂಟರಿನಲ್ಲಿ ಮುಳುಗಿದ್ದರು. ಕರ ಸಂದಾಯ ಮಾಡಲು ಬಂದವರು ಅಲ್ಲಲ್ಲಿ ನಿಂತು, ಕುಳಿತು, ಗೋಡೆಗೆ ಚಾಚಿ ಪುರಸಭೆಯ ನೀರು ವಾರಕ್ಕೆರೆಡು ಸಲವೂ ಬಾರದಿದ್ದಾಗೆ ಹಣ ಪಾವತಿಸುವುದು ಯಾವ ನ್ಯಾಯ ಎಂದು ತಕರಾರು ಎತ್ತಿ ಗಲಾಟೆಗೆ ತೊಡಗಿದ್ದರು. “ಹೊಳೆಯಲ್ಲಿ ನೀರು ಬರಿದಾಗಿದೆ; ನೀವು ಸಹಕರಿಸಬೇಕು” ಹೂಗಾರ್ ಮಾಡಿದ ಮನವಿಯನ್ನು ಯಾರೂ ಕೇಳಲು ತಯ್ಯಾರಿರಲಿಲ್ಲ. ಮನೆ ಮನೆಗೆ ತೆರೆಳಿ ನೀರಿನ ಬಿಲ್ ಕೊಟ್ಟು ಹಣ ವಸೂಲಿ ಮಾಡಿದ್ದರೆ ಗಲಾಟೆಯನ್ನು ತಪ್ಪಿಸಬಹುದಿತ್ತು ಎಂದು ಹೂಗಾರ ಸಾಹೇಬರು ವಾಲ್ವ್‌ಮನ್ ಕರೆಸಿ ಹೇಳಿದ್ದರು. ಜವಾನ ಬಂದು ಸಾಹೇಬರು ಕರೆಯುತ್ತಿದ್ದಾರೆಂದು ಮಾರನಿಗೆ ಹೇಳಿ ಹೋದ. ಚೇಂಬರ್‍ಲ್ಲಿ ಕುಳಿತಿದ್ದ ಹೂಗಾರನ ಮುಖದಲ್ಲಿ ಉದ್ವೇಗವಿತ್ತು. “ನಿನ್ನೆಯಿಂದ ರೂಮಿಗೆ ಬೀಗ ಹಾಕಿತ್ತು. ಎಲ್ಲಿಗೆ ಹೋಗಿದ್ದೆ?” ಉತ್ತರ ಬೇಕಿಲ್ಲದ ಸಾಹೇಬ ಅದೇ ಅವಸರದ ಉಸಿರಲ್ಲಿ, “ದಿನಾಲು ನೀರು ಬಿಡುವ ಕೆಲ್ಸ ಇಲ್ಲ ಈಗ. ವಾರ್ಡಿಗೆ ಹೋಗಿ ನೀರಿನ ಕರ ವಸೂಲಿ ಮಾಡೋದು ನಿನ್ನ ಜವಾಬ್ದಾರಿ” ಎಂದ. ಮಾರ ನಿಂತೇ ಇದ್ದ. “ಯಾಕೆ ಜನರ ಗಲಾಟೆ ಕಂಡು ಹೆದ್ರಿಕೆ ಆಯ್ತಾ? ನೀನು ಮುನಸಿಪಾಲಿಟಿ ನೌಕರ. ಯಾರಿಗೂ ನಿನ್ನ ಮೈ ಮುಟ್ಟೊ ಧೈರ್ಯ ಇಲ್ಲ” ಎಂದ. ಮಾರ ಮಿಸುಕಾಡಲಿಲ್ಲ. “ಅರ್ಕಸಾಲಿ ನಿನ್ನ ಜತಿ ಓಡಾಡ್ತಾನಂತೆ!” ಹೂಗಾರನ ಮಾತಿನಲ್ಲಿ ಆಕ್ಷೇಪದ ಛಾಯೆಯಿತ್ತು. “ಅದಲ್ಲ ಸಾಹೇಬ್ರೆ, ಬೇಡ್ತಿ ಹೊಳೆ ನೀರು ಕೊಳಚೆಯಾಗಿದೆ. ಹೊಲಸು ನೀರು ಬಿಡೋದು ಗೊತ್ತಾದ್ರೆ ಜನ ಸುಮ್ನಿರೋದಿಲ್ಲ. ಹತ್ತಾರು ರೋಗ ಬರ್ತದೆ. ಹಾಸ್ಟೇಲ್ ಗಲಾಟೆಗೂ ಇದೇ ಕಾರಣ.” ಎಂದ. “ನಿನಗೆ ಹ್ಯಾಂಗೆ ಗೊತ್ತಾತು?” “ಕಣ್ಣಾರೆ ನಾನೇ ನೋಡಿ ಬಂದೆ.” ಎಂದ. ತಾನು ನುಡಿದ ಸತ್ಯವನ್ನು ಸಾಹೇಬರು ಕೊಂಡಾಡುತ್ತಾರೆಂದೂ ತಕ್ಷಣ ನೀರಿನ ಸ್ವಚ್ಛತೆಯ ಬಗ್ಗೆ ಕ್ರಮ ಜರಗಿಸುತ್ತಾರೆಂದೂ ನಿರೀಕ್ಷಿಸಿ ಬಂದ ಮಾರನಿಗೆ ಹೂಗಾರ್ ಉತ್ತರ ಆಘಾತವನ್ನುಂಟು ಮಾಡಿತ್ತು.
“ನೀರು ಪರೀಕ್ಷಿಸಿ ಬಾ ಅಂತ ನಿನ್ನ ಯಾರು ಕಳಿಸಿದ್ದಾರೆ? ಅಂತ ಅಧಿಕಾರ ನಿನಗಿಲ್ಲ. ಹಾಸ್ಟೇಲ್ ಮಕ್ಕಳು ಹುಷಾರಿಲ್ಲ ಎಂದು ಹೇಳೋದಕ್ಕೆ ನೀನೇನು ಆರೋಗ್ಯ ಅಧಿಕಾರಿಯಾ? ಮೂರು ವರ್ಷದಿಂದ ಪೇಟೆ ಜನ ಅದೇ ನೀರು ಬಳಸ್ತಿದ್ದಾರೆ, ಅವರೆಲ್ಲ ಸತ್ತು ಹೋದ್ರಾ? ಕುಡಿಯೊ ನೀರಿನ ಯೋಜನೆಗೆ ಕೋಟ್ಯಾಂತರ ರೂಪಾಯಿ ಖರ್ಚಾಗಿದೆ. ಅದನ್ನು ನೀನು ಬರಸ್ತಿಯಾ? ಬೇಡ್ತಿ ನೀರು ಪೂರೈಕೆ ನಿಲ್ಲಿಸಿದ್ರೆ ಪೇಟೆಗೆ ಮತ್ತೆಲ್ಲಿಂದ ನೀರು ತರ್ತಿಯಾ? ಇದೆಲ್ಲ ರಾಜಕೀಯ ನಿನಗೆ ಅರ್ಥ ಆಗೋದಿಲ್ಲ. ನಾನು ಹೇಳಿದಷ್ಟು ಮಾಡು” ಎಂದು ಗದರಿಸಿದ. ಮಾರ ಕಲ್ಲಿನಂತೆ ನಿಂತೇ ಇದ್ದ. ಸತ್ಯ ಹೇಳಿದರೆ ರಾಜಕೀಯ ಹೇಗೆ ಆಗುತ್ತದೆ, ನಷ್ಟ ಭರಿಸಲು ಸಿದ್ಧವಿರದ ಸರಕಾರ ವಿಷನೀರು ಕುಡಿದು ಜನ ಸಾಯುವುದನ್ನು ಮುಚ್ಚಿಹಾಕುತ್ತಿರುವುದು ನ್ಯಾಯವಾ, ಈ ಅಧಿಕಾರಿಗಳು ಪ್ರಾಮಾಣ ಕತೆ ಪದ ಕೇಳಿದೊಡನೆಯೆ ಯಾಕೆ ಪರಚಿಕೊಳ್ಳುತ್ತಾರೆ, ಕಂಡದ್ದನ್ನು ಜನರ ಒಳ್ಳೆಯದಕ್ಕೆ ಹೇಳುವುದು ತಪ್ಪು ಹೇಗೆ ಎಂಬೆಲ್ಲ ಪ್ರಶ್ನೆಗಳು ಅವನ ಲೋಕಗ್ರಹಿಕೆಯನ್ನು ಅಸಂಬದ್ಧಗೊಳಿಸದವು.
“ಸರಕಾರಿ ನೌಕರರ ಕ್ವಾರ್ಟರ್ಸ್, ಹಾಸ್ಟೇಲ್, ಹೊಟೇಲ್ ಹೊರತು ಪಡಿಸಿ ಉಳಿದ ಪೇಟೆಯವರು ತಮ್ಮ ಕಂಪೌಂಡ್ ಬಾವಿ ನೀರನ್ನು ಬಳಸ್ತಾರೆ. ಮುನಸಿಪಾಲಿಟಿ ನೀರನ್ನು ಬಟ್ಟೆ ತೊಳೆಯೋದಕ್ಕೆ, ಗಿಡಗಳಿಗೆ ಉಪಯೋಗಿಸ್ತಾರೆ. ಈ ವರ್ಷ ಬಾವೀಲಿ ನೀರು ಪಾತಾಳಕ್ಕೆ ಇಳಿದಿದೆ. ಹಾಸ್ಟೇಲ್ ಹುಡುಗೀರ ಕತೆ ಅವರದ್ದೂ ಆಗಬಾರ್ದಲ್ಲ ಅದಕ್ಕೆ ಹೇಳ್ದೆ” ಎಂದ.
ಪುರಸಭೆಯ ಹಂಗಾಮಿ ಕರ್ಮಚಾರಿಯೊಬ್ಬ ತನ್ನ ಅಧಿಕಾರಕ್ಕೆ ಸವಾಲೆಸೆಯುವಂತೆ ಎದುರು ವಾದಿಸುವುದು ಹೂಗಾರನಿಗೆ ಸಹನೆಯಾಗಲಿಲ್ಲ. ಅವನು ಸರ್ ಎಂದು ತನ್ನನ್ನು ಸಂಬೋಧಿಸದಿರುವುದಕ್ಕೆ ಅವನ ದುರಹಂಕಾರವೇ ಕಾರಣ ಎಂದು ರೇಗಿಕೊಂಡೇ ಇರುತ್ತಿದ್ದ. ಮಾರನಿಗೆ ಸರಕಾರಿ ಕಚೇರಿಯಲ್ಲಿ, ಅಧಿಕಾರಸ್ಥ ಮನುಷ್ಯರ ಮುಂದೆ ವಿನಯವನ್ನು ನಟಿಸುವುದು ಗೊತ್ತಿರಲಿಲ್ಲ. ಹುಬ್ಬಳ್ಳಿಯ ಹೊಲಸು ಹರಿದು ಬೇಡ್ತಿಗೆ ಸೇರುವ ವಿಚಾರ ಹೂಗಾರನಿಗೆ ಹೊಸತಲ್ಲ. ಎಲ್ಲ ನದಿಗಳ ಹಣೆಬರಹ ಹೀಗೆಯೇ ಅಲ್ಲವೆ, ಮಳೆಯಲ್ಲಿ ಕೊಳಚೆ ತೊಳೆದು ಹೋಗುತ್ತದೆ, ನೀರನ್ನು ಶುದ್ಧೀಕರಿಸುವ ಘಟಕವಿದೆಯಂತೆ ಮುಂತಾದ ಸಮಜಾಯಿಷಿಯಲ್ಲಿ ಪುರಜನರು ಅಗಾಗ ಬೀಸುತ್ತಿದ್ದ ಗಾಳಿ ಸುದ್ದಿಯನ್ನೊ ವದಂತಿಯನ್ನೊ ಕೇಳಿದ ಕ್ಷಣಮಾತ್ರದಲ್ಲಿ ಮರೆಯುತ್ತಿದ್ದರು. ಮುಖ್ಯವಾಗಿ ಇಂಥ ಸಮಾಚಾರವನ್ನು ಆಲಿಸಲು ಅವರಿಗೆ ಪುರಸೊತ್ತಿರಲಿಲ್ಲ.
“ನೀರಿನ ದೋಷದಿಂದಲೇ ಹುಡುಗಿಯರಿಗೆ ಹುಷಾರಿರಲಿಲ್ಲ ಎಂದಾಯಿತೆಂದು ಇಟ್ಟುಕೊ. ಆಗ ಕೇಸು ಬರೋದು ನಿನ್ನ ಮ್ಯಾಲೆ. ಮೊದಲು ಜೈಲಿಗೆ ಹೋಗವನು ನೀನು! ತಲೆ ಮ್ಯಾಲೆ ಕಲ್ಲು ಹಾಕ್ಕೊಳಬ್ಯಾಡ.” ಬುದ್ಧಿ ಹೇಳಿದನು.
ಧೃತಿಗೆಡದ ಸಂಯಮದ ಮಾರಪ್ಪನ ಮಾತು-ವರ್ತನೆ ನೋಡಿ ಹೆದರಿದವನು ಹೂಗಾರನಾಗಿದ್ದನು. ನೀರು ಹೊಲಸೆಂದು ಗೊತ್ತಿದ್ದೂ ಮುಗ್ಧ ಪುರಜನರಿಗೆ ವಿಷಯುಕ್ತ ಜಲವನ್ನು ಉಣ ಸುತ್ತಿದ್ದದ್ದು ತನ್ನ ಅಧಿಕಾರದ ವ್ಯಾಪ್ತಿಯೊಳಗಿನ ಶಿಕ್ಷಾರ್ಹ ಬೇಜವಾಬ್ದಾರಿತನ, ನಿರ್ಲಕ್ಷತನ ಎಂಬ ಪರಿಜ್ಞಾನವಿಲ್ಲದಷ್ಟು ದಡ್ಡನೇನೂ ಆಗಿರಲಿಲ್ಲ. ಜಲಕಾಮಗಾರಿಯಲ್ಲಿ ಶಾಸಕರು, ಗುತ್ತಿಗೆದಾರರೊಂದಿಗೆ ಹೂಗಾರನದ್ದೂ ಲಂಚದ ಪಾಲಿರುವುದರ ಬಗ್ಗೆ ಜನ ಮಾತಾಡಿಕೊಳ್ಳುತ್ತಿದ್ದರು. ಅರ್ಕಸಾಲಿಯ ಕಡೆಗೆ ಪ್ರಕರಣವನ್ನು ವಾಲುವಂತೆ ಹೂಗಾರ ಜಾಣ ತಂತ್ರಗಾರಿಕೆಯನ್ನು ಪ್ರಯೋಗಿಸಿದ್ದ. ತನ್ನ ಮುಂಜಾಗ್ರತಾ ಉಪಾಯದ ನಡೆ ತನಗೇ ತಿರುಗುಬಾಣವಾಗುವ ಸೂಚನೆ ಮಾರಪ್ಪನ ಧೋರಣೆಯಲ್ಲಿ ಗೋಚರಿಸಿ ಆತಂಕಗೊಂಡಿದ್ದ. ಹಾಸ್ಟೇಲ್ ಪ್ರಕರಣ ನಡೆದ ಮರುದಿನ ಕರೆದ ಪುರಸಭೆಯ ಮೀಟಿಂಗಿನಲ್ಲಿ ಸದಸ್ಯನೊಬ್ಬ ಬೇಡ್ತಿ ಹೊಳೆಯ ನೀರು ಕುಲಷಿತವಾದ ಸುದ್ದಿಯನ್ನು ಚರ್ಚೆಗೆ ಎಳೆಯುವ ಪ್ರಯತ್ನ ಮಾಡಿದ್ದ. ಅವನ ದನಿಗೆ ಇತರರ ಬೆಂಬಲವಿಲ್ಲದೆ ವಿಷಯ ದುರ್ಬಲವಾಗಿ ನಿಂತು ಹೋಗಿತ್ತು. “ಗಂಗಾ ನದಿಯಲ್ಲಿ ಹೆಣಾ ಕೊಳ್ತು ತೇಲ್ತವಂತೆ. ಆ ನೀರು ಕುಡಿದು ಜನ ಸತ್ತಿಲ್ಲ; ನಮ್ಮ ಮನೆ ದೇವರ ಪೀಠದಲ್ಲಿ ಗಂಗಾ ಜಲದ ಕಾಶಿ ಗಿಂಡಿ ಇಟ್ಟಿರ್ತೇವೆ. ಹರಿಯುವ ನೀರು ಯಾವಾಗ್ಲೂ ಶುದ್ಧವಂತೆ” ಹೂಗಾರನ ವಾದಕ್ಕೆ ಪ್ರತಿವಾದ ಮಂಡಿಸಲು ತಕ್ಷಣ ಅಲ್ಲಿದ್ದವರಿಗೆ ಹೊಳೆಯಲಿಲ್ಲ. ಸದ್ಯ ಬೇಡ್ತಿಯಲ್ಲಿ ಹುಬ್ಬಳ್ಳಿಯ ಕೊಳಚೆ ಹರಿಯುವಷ್ಟು ನೀರು ಬರುತ್ತಿಲ್ಲವೆಂದೂ ಪಟ್ಟಣಕ್ಕೆ ಪೂರೈಕೆಯಾಗುತ್ತಿರುವ ಅತ್ಯಲ್ಪ ನೀರು ಬೇಡ್ತಿಯನ್ನು ಸೇರುವ ಉಪನದಿಯದ್ದೆಂದೂ ಹೂಗಾರ ವಿಷಯದ ಉಪಸಂಹಾರ ಮಾಡಿದ್ದ.
ಗೋಡೌನ್ ರೂಮಿಗೆ ಬಂದು ಮಾರ ಚಹಾ ಕಾಯಿಸಿ ಕುಡಿದ. ನಿಷ್ಪಾಪದ ಅರ್ಕಸಾಲಿ ಬಲಿಪಶುವಾದ ಎಂದು ಖೇದಪಟ್ಟ. ವಿಚಾರಣೆ ತಪ್ಪು ದಾರಿ ಹಿಡಿಯದಿದ್ದರೆ ಅರ್ಕಸಾಲಿಯ ಅಮಾನತ್ತನ್ನು ಹಿಂದೆಗೆಯಬಹುದು. ಮಗಳ ಚರ್ಮದ ಮೇಲಿನ ಸುಟ್ಟಂತ ವೃಣ ನೆನಪಾಯಿತು. ಕಿರವತ್ತಿಯ ನರಕದ ಚಿತ್ರ ಮೂಡಿದಾಗಲೆಲ್ಲ ಹುಟ್ಟಿದ ಹೇಸಿಗೆಗೆ ದೇಹದ ಮೇಲೆ ಲೋಳೆ ಹುಳ ತೆವಳಿದಂತಾಗುತ್ತದೆ. ಬಂಕ್ಸಾಲಿಯ ಪಂಚಾಯತಿ ಯಾರೂ ಮೀರದ ನಿಯಮದ ಚೌಕಟ್ಟಿನೊಳಗೆ ಇತ್ಯರ್ಥವಾಗುತ್ತಿತ್ತು. ನಗರದ ವ್ಯವಹಾರದ ನಿಘಂಟಿನಲ್ಲಿ ನೇರ ನಡೆ ಮತ್ತು ನುಡಿ ಶಬ್ದಗಳಿದ್ದ ಪುಟವನ್ನು ಕಿತ್ತು ಹಾಕಿದ್ದರು. ವಾಲ್ವ್ ತಿರುಗಿಸುವ ಟಿ ಸಲಾಕೆ ಮೂಲೆಯಲ್ಲಿ ಒರಗಿಕೊಂಡಲ್ಲಿಂದ ಮಾರನನ್ನು ಅಣುಕಿಸುವಂತೆ ನೋಡುತ್ತಿತ್ತು. ಜವಾನ್ ಕೊಟ್ಟ ಕರ ವಸೂಲಿ ಬಿಲ್ ಹಿಡಿದು ವಾರ್ಡ ಬೀದಿಯ ದಾರಿ ಹಿಡಿದ.
ದೇವರು ಮೆಚ್ಚದ ಪಾಪದ ಕೆಲಸದಲ್ಲಿ ತಾನು ಭಾಗಿಯಾಗುತ್ತಿದ್ದೇನೆ ಎಂದು ಮಾರ ಅಳುಕಿದ. ವಿಷದ ನೀರು ಹರಿಸುವುದು, ಅದಕ್ಕೆ ತೆರಿಗೆ ವಸೂಲಿಮಾಡುವುದು ಎರಡೂ ಅಪರಾಧವೆಂದನಿಸಿತು. ತೆರಿಗೆ ವಸೂಲಿಗೆ ಹೋದರೆ ಜನರ ಬೈಗಳವನ್ನು ನುಂಗಿಕೊಳ್ಳಬೇಕೆಂದು ಅವನು ಮನಸನ್ನು ಗಟ್ಟಿಗೊಳಿಸಿದ್ದ. ಅವನ ನಿರೀಕ್ಷೆಯಂತೆ ಪುರಜನರು ಸಿಟ್ಟಿನ ಕೋಡಿನಿಂದ ಹಾಯಲು ಬರಲಿಲ್ಲ. ಒಂದೂ ಹರಿಯಲಾರದ ಕರ ವಸೂಲಿ ಪಾವತಿ ವಹಿಯನ್ನು ಹಿಡಿದು ದೈನ್ಯದಿಂದ ಅಂಗಳದಲ್ಲಿ ನಿಂತ ಮಾರನನ್ನು, “ನೀನೇನು ಮಾಡಬಲ್ಲೆ ಕೂಳಿಗೆ ಸಂಬಳ ಪಡೆಯೊ ಬಡವ. ನಿನ್ನ ಕಳ್ಸಿದ ಸಾಹೇಬನಿಗೆ ಅಕಲು ಬೇಕಿತ್ತು” ಎಂದು ಕರುಣೆ ಉಕ್ಕಿ ಮಾತಾಡಿಸಿದರು. ಮಾರ ಮತ್ತು ಅರ್ಕಸಾಲಿಯ ಗೆಳತನವನ್ನು ಬಲ್ಲ ವಾರ್ಡಿನ ಕೆಲವರು ಓಣಿಯಲ್ಲಿ ಎದುರಾದಾಗ, “ಹಾಸ್ಟೇಲ್ ವಾರ್ಡನ್ ಎಲ್ಲಿ ಹೋದ್ರು ಮಾರಾಯಾ? ಕಾಣದೆ ವಾರ ಆಯ್ತು. ಹಾಸ್ಟೇಲ್‍ದ್ದು ಅದೆಂತ ರಾಮಾಯಣ?” ಎಂದು ವಿಚಾರಿಸಿದರು. ಉತ್ತರವೆನ್ನುವಂತೆ ಮಾರ ಸಾರ್ವಜನಿಕ ನಗುವನ್ನು ಮೋರೆ ಮೇಲೆ ಇಟ್ಟುಕೊಂಡು ಓಡಾಡಿದ. ಯಾವ ವಿವೇಕವಿಲ್ಲದ, ಕೇವಲ ಅನ್ನದ ಹಂಗಿನಲ್ಲಿ ನರಳುವ ಯಕಃಶ್ಚಿತ ಹುಳಕ್ಕೆ ಸಮಾನವಾಗಿ ತನ್ನ ಬಾಳನ್ನು ನೋಡುತ್ತಿರುವವರ ಬಗ್ಗೆ ಬೇಸರ ಪಟ್ಟ. ಪುರಸಭೆಯ ಕೋಟೆಯಿಂದ ಹೊರಗೆ ಬಂದು, ನೌಕರಿಯ ಮಿತಿಯನ್ನು ಮೀರಿ, ಪೇಟೆಯನ್ನೆ ಝಾಡಿಸಿ ಒದ್ದಂತೆ, “ನಾನು ಕರ ಕಟ್ಟಿ ಎಂದು ಹೇಳಲು ಬಂದವನಲ್ಲ. ಮುನಸಿಪಾಲಿಟಿ ನೀರನ್ನು ಉಪಯೋಗಿಸುತ್ತಿದ್ರೆ ನಿಲ್ಲಿಸಿ ಇಲ್ಲದಿದ್ರೆ ರೋಗ ಬಂದು ಸಾಯ್ತೀರಿ, ಹಾಸ್ಟೇಲ್ ಕತೆ ಕೇಳಿದ್ದೀರಲ್ಲ. ಬೇಡ್ತಿ ಹೊಳೆ ನೀರ ಕುಡಿಯೋದಿರ್ಲಿ ಮುಕಳಿ ತೊಳೆಯೋದಕ್ಕೂ ಲಾಯಕ್ಕಲ್ಲ” ಎಂದು ನಡು ರಸ್ತೆಯಲ್ಲಿ ನಿಂತು ಡಂಗುರ ಹೊಡೆದ. ಸ್ವತಃ ಮುನಸಿಪಾಲಿಟಿಯ ಕರ್ಮಚಾರಿ ತನ್ನ ಕಚೇರಿಯ ವಿರುದ್ಧ ಸಾರಿದಂತಿರುವ ಯುದ್ಧ ಕೆಲವರಿಗೆ ವಿಚಿತ್ರ ಎನಿಸಿತು. ಬಂಕ್ಸಾಲಿಯ ಒರಟು ಮಾತಿನ ಮಾರನ ವರ್ತನೆ ಅಸಹಜವೆನಿಸಿದರೂ ಕಠೋರ ಸತ್ಯವನ್ನು ನುಡಿಯುತ್ತಿದ್ದಾನೆಂದು ತಿಳಿದವರೂ ಇದ್ದರು. “ನೀರು ಬಿಡೋದಿಲ್ಲಾಂತ ಖಡಕ್ಕಾಗಿ ನಿನ್ನ ಸಾಹೇಬ್ರಿಗೆ ನೀನೇ ಮೊದ್ಲು ಹೇಳೋ” ಎಂದು ಓಣಿಯ ಕಂಪೌಡಿಂದ ಒಂದು ಅಶರೀರ ವಾಣಿ ಧ್ವನಿಸಿತು. ಕೇಳಿದ ಕ್ಷಣದಲ್ಲೆ ಆ ದನಿ ಮಾರನ ಜೀವಶಕ್ತಿಯನ್ನು ಕಂಪಿಸಿ ಬಿಟ್ಟಿತು. ಅಪ್ಪಳಿಸಿದ ಅಲ್ಲೋಲಕಲ್ಲೋಲದ ಅಲೆ ಮಾರನನ್ನು ಹೂಗಾರನ ಎದುರು ಎಳೆದು ತಂದು ನಿಲ್ಲಿಸಿತು. ಮಡಚಿದ ಸಮವಸ್ತ್ರ, ವಾಲ್ವ್ ತಿರುಗಿಸುವ ಸಲಾಕೆ, ರಶೀದಿ ಪುಸ್ತಕ ಮತ್ತು ಗೋಡೌನ್ ಚಾವಿಯನ್ನು ಮೇಜಿನ ಮೇಲಿಟ್ಟು ಮಾರ ಸ್ವತಂತ್ರ ಹೆಜ್ಜೆಗಳನ್ನು ಮುನಸಿಪಾಲಿಟಿಯ ಮೆಟ್ಟಿಲುಗಳ ಮೇಲಿಡುತ್ತ ಇಳಿದು ಬಂದ. ಹೂಗಾರನಿಗೆ ಇದೊಂದು ಕ್ಷಿಪ್ರಕ್ರಾಂತಿ ಎಂದೆನಿಸಿತು. ತಾನು ಕ್ಷೇಮವಾಗಿರಲು ಅವನ ಸವಾರಿ ಊರಿಗೆ ಹೋಗುವುದು ಸದ್ಯದ ಅಗತ್ಯವಾಗಿತ್ತು ಎಂದು ಹೂಗಾರ ತಳಮಳಿಸಿದ. ಮಾರನನ್ನು ಮುನಸಿಪಾಲಿಟಿಯ ಕರ್ಮಚಾರಿಯನ್ನಾಗಿ ನೇಮಿಸಲು ಕಾರಣನಾಗಿದ್ದ ಸದಸ್ಯ, “ಇದು ಮಾರನ ಸ್ವಂತ ಬುದ್ಧಿಯಲ್ಲ. ಕಳೆದ ಚುನಾವಣೆಯಲ್ಲಿ ನಮ್ಮ ವಿರುದ್ಧ ಸೋತವರ ಕುತಂತ್ರ” ಎಂದು ಹಗರಣವನ್ನು ಇನ್ನಷ್ಟು ಜಟಿಲಗೊಳಿಸಿದ.
ಕೈಯಾರೆ ವಿಷ ಉಣಿಸಿದ ಪಾಪ ಪ್ರಾಯಶ್ಚಿತಕ್ಕಾಗಿ ಮಾರನಿಗೆ ಏನಾದರೂಂದು ದಾರಿ ಹುಡುಕಬೇಕಿತ್ತು; ಆದರೆ ಬಿಡುಗಡೆಯ ದಾರಿ ಕೆಲಕಾಲ ಅವನಿಗೆ ಅಸ್ಪಷ್ಟವಾಗಿಯೇ ಉಳಿಯಿತು. ಪೇಟೆಯ ಪರಿಚಯಸ್ಥರಲ್ಲಿ ನದಿಯ ಘೋರ ನರಕದ ವರ್ಣನೆ ಮಾಡಿದ; ಗರುಡ ಪುರಾಣದ ಕುಂಬೀಪಾತದ ವರ್ಣನೆಯೇ ಜಡ್ಡಾಗಿ ಹೋದ ಅವರೊಳಗೆ ಮಾರನ ಮಾತು ಚಲಿಸಲೇ ಇಲ್ಲ. “ ಮಾರಣ್ಣ ನೀನು ಹೇಳೋದು ನಿಜವೇ; ಇದ್ರ ಬಗ್ಗೆ ಏನಾದ್ರೂ ಮಾಡೋದಕ್ಕೆ ನಾನಂತು ರೆಡಿ; ನಮ್ಮಿಬ್ರ ಬಿಟ್ರೆ ಉಳಿದವ್ರಿಗೆ ಇದು ಬ್ಯಾಡ” ಎಂದು ಬರೆದುಕೊಟ್ಟಂತಿದ್ದ ಸಂಭಾಷಣೆಯನ್ನು ಎಲ್ಲರೂ ಏಕಪ್ರಕಾರವಾಗಿ ಪುನರುಚ್ಛರಿಸುತ್ತ ಆ ಅಮೂರ್ತ ‘ಉಳಿದವರನ್ನು’ ಆಕ್ಷೇಪಿಸುತ್ತ ಜಾರಿಕೊಂಡರು. ಬಂಕ್ಸಾಲಿಯ ಬಂಧುಗಳೆಲ್ಲ ಒಟ್ಟಾಗಿ ಸೇರಿ ನದಿಯ ನರಕವನ್ನು ಸ್ವಚ್ಛಗೊಳಿಸಬಹುದೆಂಬ ಆಲೋಚನೆಯೂ ಸುಳಿದು ಹೋಯಿತು. ನೂರಾರು ಮೈಲುಗಳುದ್ದದ ನದಿಪಾತ್ರದ ಅಕ್ಷಯ ಹೊಲಸನ್ನು ಬಾಚಿ ಪೂರೈಸಲು ಅಸಾಧ್ಯವೆನಿಸಿತು. ಬಾಚಿದಂತೆಲ್ಲ ಹೊಲಸು ಹರಿದು ಅದೊಂದು ಅರ್ಥಹೀನ ಸಾಹಸವಾದೀತೆಂದು ಯೋಚಿಸಿದ. ಹೊಲಸು ಬಿಡುವ ಹುಬ್ಬಳ್ಳಿಯ ನಗರದವರಿಗೆ ತಿಳಿಹೇಳುವುದು ಸೂಕ್ತವೆಂದನಿಸಿತು.
ಬಾಸುಂಡೆ ಗಾಯದಂತೆ ಭಾರತಿಯ ಮುಖ, ಕೊರಳು, ತೊಡೆಯ ಮೇಲೆ ಕೆಂಪು ತೇಪೆಗಳು ಗೋಚರಿಸಿದವು. ಮಾರನ ಹೆಂಡತಿ ಕೆರಳಿದ್ದಳು. ಪೇಟೆಯಲ್ಲಿ ಮಗಳನ್ನು ಓದಿಸಲು ಅವಳಿಗೆ ಇಷ್ಟವಿರಲಿಲ್ಲ. ಮೈ ಮೇಲೆ ಕಲೆಯಿರುವ ಹುಡುಗಿಯ ಮದುವೆ ಮಾಡುವುದು ಕಷ್ಟವೆಂದು ಅವಳ ಸಂಕಟ. “ಮೈ ಕೊಳೆತು ಹೊಗಭೌದು ಮಾರಾಯ. ದೊಡ್ಡ ಡಾಕ್ಟರಿಗೆ ತೋರಿಸಿ ಬಾ” ಎಂದು ಕೊಪ್ಪದ ಹಿತೈಷಿಗಳು ಒತ್ತಾಯಿಸಿದರು. ಮಗಳೊಂದಿಗೆ ಮರುದಿನದ ಹುಬ್ಬಳ್ಳಿಯ ಮೊದಲ ಬಸ್ಸಿಗೆ ಮಾರ ಹೊರಟ. ಚರ್ಮರೋಗದ ತಜ್ಞ ವೈದ್ಯರು ತಪಾಸಣೆ ನಡೆಸಿ, ರೋಗಿಯನ್ನು ಎರಡು ದಿನ ಚಿಕಿತ್ಸಾ ನಿಗಾದಲ್ಲಿ ನಿರೀಕ್ಷಣೆಯಲ್ಲಿಡಬೇಕಾದ್ದರಿಂದ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಬೇಕೆಂದರು. ಆಸ್ಪತ್ರೆಯ ಸ್ವಚ್ಛ ನೆಲ, ನರ್ಸಗಳ ಶುಭ್ರ ಬಿಳಿ ವಸ್ತ್ರ, ಕಾಟಿನ ಮೇಲೆ ಹಾಸಿದ್ದ ಗರಿ ಗರಿ ಬೆಡ್‍ಶೀಟ್, ಔಷಧದ ವಾಸನೆಗೆ ಭಾರತಿಯ ಕಣ್ಣೊಳಗೆ ಭರವಸೆಯ ಹೊಳಪು ಮೂಡಿತು. “ಗುಣ ಆಗ್ತದೆ. ದೊಡ್ಡ ದವಾಖಾನೆ ಇದು” ಎಂದು ಮಾರ ಅಭಯ ನೀಡುತ್ತ ಮಗಳ ಕಾಟಿನ ಕೆಳಗೆ ಗೋಡೆಗೆ ಚಾಚಿ ಕೂತ. ಔಷಧಿಯ ಪ್ರಭಾವದಿಂದ ಅವಳು ನಿದ್ದೆ ಮಂಪರಿನಲ್ಲಿ ಮಲಗಿರುತ್ತಿದ್ದಳು. “ನೀರಿಂದಲೇ ಬಂದ ರೋಗವಾ?” ಎಂದು ಮಾರ ಡಾಕ್ಟರ್ ಜೀವ ಹಿಂಡಿದ. “ರಿಪೋರ್ಟ್ ಬರ್ಬೇಕು” ಎಂದಷ್ಟೆ ಹೇಳುತ್ತಿದ್ದರು. ಆಸ್ಪತ್ರೆಯ ಹೊಲಸೂ ಬೇಡ್ತಿಗೆ ಸೇರುವುದೆಂದೇ ಅವನ ತರ್ಕ. ನಗರದ ನಿತ್ಯ ತ್ಯಾಜ್ಯ ವಿಸರ್ಜನೆಯ ಹಳ್ಳ ದುರ್ನಾತ ಸೂಸುತ್ತ ನಾರುತ್ತ ಮಹಾದೇವ ಜವಳಿ ಗಿರಣ ಯ ಸನಿಹದ ಸೇತುವೆ ಕೆಳಗೆ ಹರಿಯುತ್ತಿರುವುದನ್ನು ಮೂಗು ಮುಚ್ಚಿ, ನೋಡುತ್ತ ನಿಂತ. ಹಳ್ಳವಾಗಿ ಹರಿಯುವ ಬಸ್ ಸ್ಟ್ಯಾಂಡ್ ಟಾಯ್ಲೆಟ್ಟಿನ ಮೂತ್ರ, ಅಪಾರ್ಟಮೆಂಟುಗಳ ಕೊಳೆ, ಕೈಗಾರಿಕೆಗಳ ಕಸ, ಸಲೂನುಗಳ ಕೂದಲ ಪೆಂಡೆ, ಹೊಟೇಲುಗಳ ಮುಸುರೆ ರಾಶಿ ರಾಶಿ ತೇಲಿ ಹೋಗುತ್ತಿದ್ದವು. ಮಗಳಿಗೆ ಊಟ ತಂದು ಕೊಟ್ಟವನೆ ನಗರಸಭೆಗೆ ನಡೆದ. ಅದರೊಳಗಿನ ನೂರಾರು ವಿಭಾಗಗಳು ಜನರ ಗದ್ದಲ ಅವನ ದಿಕ್ಕೆಡಿಸಿದವು. ದಯೆ ಬೀರಿದ ಗುಮಾಸ್ತನೊಬ್ಬ ಹುಬ್ಬಳ್ಳಿಯ ಹೊಲಸು ಬೇಡ್ತಿ ಹೊಳೆಗೆ ಸೇರುತ್ತಿರುವುದರ ಬಗ್ಗೆ ಯಾರೊ ಪಾಪದ ಪ್ರಾಣಿ ದೂರು ನೀಡುತ್ತಿದ್ದಾನೆಂದು ಅನುಕಂಪ ಹುಟ್ಟಿ ಮಾರನ ಮಾತನ್ನು ಅತ್ಯಂತ ಪ್ರಯಾಸದಿಂದ ತಿಳಿದುಕೊಂಡು ಜಲಮಂಡಳಿಗೆ ಸಾಗುಹಾಕಿದ. ಜಲಮಂಡಳಿಯ ಜವಾನ ಒಳಚರಂಡಿಯವರನ್ನು ವಿಚಾರಿಸಬಹುದು ಎಂದು ಸೂಚಿಸಿದ. ಅಲ್ಲಿ ಒಳಗೆ ಬಿಡದ ಪೇದೆ ಅದಕ್ಕೆಲ್ಲ ತಹಶೀಲ್ದಾರ ಅನುಮತಿ ಬೇಕಾಗುತ್ತದೆ ಎಂದ. ತಹಶೀಲ್ದಾರ ನದಿ ಎರಡು ಜಿಲ್ಲೆಗಳಲ್ಲಿ ಹರಿಯುತ್ತಿರುವುದರಿಂದ ಎರಡೂ ಜಿಲ್ಲೆಗಳ ಡಿ. ಸಿ. ಸಾಹೇಬರು ಸೇರಿ ತೆಗೆದುಕೊಳ್ಳಬೇಕಾದ ತೀರ್ಮಾನವೆಂದ. ಹೀಗೆ ಒಂದು ಕಚೇರಿಯಿಂದ ಇನ್ನೊಂದಕ್ಕೆ ದಬ್ಬಿಸಿಕೊಳ್ಳುತ್ತ ತಲೆ ಗೊಂದಲದ ಗೂಡಾಗಿ ಆಸ್ಪತ್ರೆಯಲ್ಲಿ ರಕ್ತದೊತ್ತಡವನ್ನು ತಪಾಸಣೆ ಮಾಡಿಸಿಕೊಂಡು ಮಗಳಿಗೆ ಬರೆದ ಔಷಧ ಕೊಂಡು ಮಾರ ಬಂಕ್ಸಾಲಿಗೆ ಮರಳಿದ.
ಮಾರ ಹುಬ್ಬಳ್ಳಿಯಿಂದ ವಾಪಸ್ಸಾಗುವಷ್ಟರಲ್ಲಿ ಪರೀಕ್ಷೆಗೆ ಕಳುಹಿಸಿದ್ದ ಹಾಸ್ಟೇಲ್ ಕಲಬೆರಿಕೆ ಊಟದ ವರದಿ ಬಂದಿತ್ತು. ಅನ್ನದಲ್ಲಿ ಸೇರಿದ ವಿಷ ಪದಾರ್ಥ ಪತ್ತೆಯಾದ ಬಗ್ಗೆ ಉಲ್ಲೇಖವಿತ್ತು. ಇನ್ನು ಮೇಲೆ ಫುಡ್ ಪಾಯಿಸನ್ ಆಗದಂತೆ ಎಚ್ಚರವಹಿಸಲು ಹಾಸ್ಟೇಲ್ ನೌಕರರಿಗೆ ಎಚ್ಚರಿಕೆ ನೋಟಿಸ್ ನೀಡಿ ಅರ್ಕಸಾಲಿಯನ್ನು ವರ್ಗ ಮಾಡಿದ್ದರು. “ನೀರಿನಿಂದಲೇ ಫುಡ್ ಪಾಯಿಸನ್ ಆಗಿರ್ತದೆ ಮತ್ತೆ” ಎಂದು ಮಾರ ತನ್ನ ವಾದವನ್ನು ಹಠದಿಂದ ಸಾಧಿಸಲು ಹೋಗಿ ದಣಿದಿದ್ದ.
ಬಂಕ್ಸಾಲಿಯ ರೈತರು ಮಳೆಗಾಲ ಪೂರ್ವ ಬೇಸಾಯ ಕೆಲಸಕ್ಕೆ ಅಣ ಗೊಳ್ಳುತ್ತ ಚುರುಕಾಗಿದ್ದರು. ಕೊಪ್ಪದವರದ್ದು ಸ್ವಂತ ದುಡಿಮೆ. ಗದ್ದೆಗೆ ಗೊಬ್ಬರ ಹೊತ್ತು ಸಾಗಿಸುವುದು, ಕಳಚಿದ ಬೇಲಿ ದುರಸ್ತಿ ಮಾಡುವುದು, ಕಳದ ಕುತ್ರಿ ಬಡಿದು ಕಣಜಕ್ಕೆ ಭತ್ತ ತುಂಬುವುದು, ಜೋಡಿ ಎತ್ತುಗಳಲ್ಲಿ ಅಬಲಾದದನ್ನು ಉಳುಮೆಯ ನೊಗಕ್ಕೆ ಬದಲಾಯಿಸುವುದು, ಮನೆಯ ಸುತ್ತ ಗೋಡೆಗೆ ಚಡಿ ಕಟ್ಟುವುದು ಇತ್ಯಾದಿ ಭರದಿಂದ ಸಾಗಿದ್ದವು. ಈ ಎಲ್ಲ ಕಾಮಗಾರಿಯ ಉತ್ಸಾಹಕ್ಕೆ ಮಾರನ ಸಾರಥ್ಯವಿರುತ್ತಿತ್ತು. ಹುಬ್ಬಳ್ಳಿಯಿಂದ ವಾಪಸ್ಸಾದ ಗಳಗೆಯಿಂದ ಮಂದಮತಿಯಂತಾದ ಅವನನ್ನು ನೋಡಿ ಕೊಪ್ಪದ ಪರಿವಾರ ಚಿಂತೆಗೊಳಗಾಗಿತ್ತು. ಎಲ್ಲರಿಗಿಂತ ಮೊದಲು ಉಮೇದಿಯ ಉಬ್ಬರದಲ್ಲಿ ಅವಸರ ಮಾಡುತ್ತಿದ್ದ ಮಾರ ಗದ್ದೆಯತ್ತ ಮುಖ ಹಾಕದೆ ಇರುವಷ್ಟು ಕೊರಗುತ್ತಿರುವುದು ಏಕೆಂದು ಯೋಚನೆಯಾಯಿತು. ಮುಗ್ಗಿದ ವಾಸನೆಯ ಚಾದರ ಮುಸುಕು ಹಾಕಿ ಜಗಲಿಯ ಮೂಲೆಯಲ್ಲಿ ಮಲಗಿರುತ್ತಿದ್ದ. ಪೇಟೆಯ ಸಹವಾಸ ದೋಷದಿಂದ ಅವನೊಳಗೆ ವಿಕೃತವಾದದ್ದೇನೊ ಹೊಕ್ಕಿದೆ ಎಂದು ಅವನ ಹೆಂಡತಿಯಾದಿಯಾಗಿ ಕಳವಳಕ್ಕೊಳಗಾದರು. ಒಂದೆರೆಡು ಮಳೆ ಬಿದ್ದು ಮಣ್ಣಲ್ಲಿ ಕಂಪರಳುತ್ತಿದ್ದಂತೆ ಗಡಿ ಹಬ್ಬದ ತಯ್ಯಾರಿ ನಡೆಯಿತು. ಕೊಪ್ಪದ ಯಜಮಾನ ಮಾರ ಪೂಜೆ ಸಲ್ಲಿಸಬೇಕಿತ್ತು. “ನಾನು ಮೀಯದೆ ವಾರವಾಯ್ತು. ಪೂಜೆ ಮಾಡೋದಿಲ್ಲ” ಎಂದ. ಅವನ ಅಸಂಗತ ಮಾತಿನರ್ಥವಾಗದೆ ಮಾರನನ್ನು ಅವನ ಪಾಡಿಗೆ ಬಿಟ್ಟು ಉಳಿದವರು ದಿನಚರಿಗೆ ತೊಡಗಿದರು.
ಮಾನವ ಜಾತಿಯಲ್ಲಿ ಜನಿಸಿದ ತಾನು ಕಣ್ಣು ಮುಚ್ಚುವ ಮೊದಲು ತನ್ನ ಕರ್ತವ್ಯ ಪಾಲನೆ ಮಾಡಿ ಹೋಗಬೇಕೆಂಬ ಮಹದಾಸೆ ಮಾರನನ್ನು ಕಾಡುತ್ತಲೆ ಇತ್ತು. ಯಲ್ಲಾಪುರಕ್ಕೆ ಹೊರಟ ಟೆಂಪೋಕ್ಕೆ ಕೈ ಅಡ್ಡ ಮಾಡಿ ಹತ್ತಿದ. ಮಾರ ಯಲ್ಲಾಪುರದ ಪೇಟೆಯಲ್ಲಿ ಮುನಸಿಪಾಲಿಟಿಯ ಧೈತ್ಯನನ್ನು ಸಂಹರಿಸಲು ಪ್ರತ್ಯಕ್ಷವಾದ ಆದಿಶಕ್ತಿಯ ಅವತಾರದಂತೆ ಹೂಗಾರನಿಗೆ ಕಂಡ. ಮಾರನನ್ನು ಪುರಸಭೆಯ ಕಚೇರಿಗೆ ಕರೆಯಿಸಿ, ಮರುನೇಮಕಾತಿಯ ಪ್ರಸ್ತಾವನೆಯನ್ನು ಎದುರಿಗಿಟ್ಟು, “ಮಳೆ ಶುರುವಿನಲ್ಲಿ ಬಾವಿಗೆ ಬ್ಲೀಚಿಂಗ್ ಹಾಕ್ಸೋದು ವಾಡಿಕೆ. ನೀನು ಹೋಗ್ತಿದ್ದ ವಾರ್ಡಿಗೆ ಪ್ಯಾಕೇಟ್ ಹಂಚಿ ಬಾ” ಎಂದ. ಸಾಹೇಬರನ್ನು ಅಪಹಾಸ್ಯದಲ್ಲಿ ಅವಮಾನಿಸುವಂತೆ ಗಹಗಹಿಸಿ ನಕ್ಕ.
ಹೀಗೆ ನಕ್ಕು ಐದಾರು ತಿಂಗಳು ಕಳೆಯಿತು. ನಗುವಿನ ಅಲೆಯ ಕಂಪನ ನಿಂತಿರಲಿಲ್ಲ. ಮಾರ ಪೇಟೆಯ ಜೋಡುಕೆರೆಯ ಅರಳಿ ಮರದ ನೆರಳಲ್ಲಿದ್ದ ಹನುಮಂತ ದೇವರ ಗುಡಿಯ ಚಂದ್ರಶಾಲೆಯಲ್ಲಿ ಎರಡು ಕಲ್ಲಿನ ಒಲೆ ಬಿಡಾರ ಹೂಡಿದ. ಉದ್ದುದ್ದ ಗಡ್ಡದ ಅಲೆಮಾರಿ ಬಾವಾಜಿಗಳು ಆಗಾಗ ಅಲ್ಲಿ ಅನ್ನ ಬೇಯಿಸುತ್ತಿದ್ದರು. ಹಗಲಿಡೀ ಅವನು ಪೇಟೆಯ ಕೆಲ ಚೌಕಗಳಲ್ಲಿ ವಿಗ್ರಹದಂತೆ ನಿಂತಿರುತ್ತಿದ್ದ. ಅವನು ತೊಟ್ಟಿರುತ್ತಿದ್ದ ಕೋಟು ಮತ್ತು ಅದರೊಳಗಿ ಎರಡು ಅಂಗಿಗಳು ಅಸಹ್ಯವಾಗುವಷ್ಟು ಗಲೀಜಾಗಿದ್ದವು. ನೀರು ಕಂಡಿರದ ತಲೆಗೂದಲು ಜಡೆಗಟ್ಟಿದಂತಾಗಿತ್ತು. ಎಣ್ಣೆಗಪ್ಪಿನ ಅವನ ಶರೀರವನ್ನು ತಿಕ್ಕಿದರೆ ಬೆವರಿನ ದಾರ ಸುರುಳಿಗಟ್ಟಿ ಬರುತ್ತಿದ್ದವು. ವಿಲಕ್ಷಣ ವೇಷದಿಂದಾಗಿ ಪೇಟೆಯಲ್ಲಿ ಓಡಾಡುವವರಿಗೆ ಅವನ ಗುರುತಾಗುತ್ತಿರಲಿಲ್ಲ. ಗುರುತಿಸಿದವರಿಗೆ ಮೊದಲ ಸಲ ಬೇಡ್ತಿ ಹೊಳೆಗೆ ಸೇತುವೆ ಕಟ್ಟುತ್ತಿದ್ದಾಗ ಹಳಬರು ಹೇಳುತ್ತಿದ್ದ ಕತೆ ನೆನಪಾಯಿತು. ಕಟ್ಟಿದ ಸೇತುವೆ ಎರಡು ಸಲ ಕುಸಿಯಿತಂತೆ; ಗುತ್ತಿಗೆದಾರನ ಕನಸಿನಲ್ಲಿ ಸೇತುವೆ ನರಬಲಿ ಕೇಳಿತಂತೆ; ಯಲ್ಲಾಪುರ ಪೇಟೆಯಲ್ಲಿ ಭಿಕ್ಷೆ ಬೇಡುತ್ತಿದ್ದವಳನ್ನು ತಂದು ಬಲಿ ಕೊಟ್ಟ ಬಳಿಕ ಸೇತುವೆ ನಿಂತಿತಂತೆ.
ಬೇಡುತ್ತಿದ್ದವಳ ಬಲಿ ಪಡೆದ ನದಿಗೆ ಬೇಡ್ತಿ ಎಂದು ನಾಮಕರಣವಾಯಿತಂತೆ. ಸೇಡು ತೀರಿಸಿಕೊಳ್ಳಲು ಭಿಕ್ಷುಕಿಯೇ ಅಪರಾವತಾರ ತಾಳಿ ಮಾರನ ಮಾರುವೇಷದಲ್ಲಿಕಾಣಿಸಿಕೊಂಡಿದೆ ಎಂದು ಜನರು ಹೊಸ ಪುರಾಣ ಕಟ್ಟಿದರು. ಈ ಪುರಾಣದ ಬೆನ್ನಲ್ಲೆ ಕೆಲವೊಂದು ಅಸಹಜ ಸಂಗತಿಗಳಿಗೆ ಅವನು ಸಾಕ್ಷಿಯಾದ: ಮಾರ ನಿಂತಿರುತ್ತಿದ್ದ ಜಾತ್ರೆಯ ಗದ್ದಿಗೆಯ ಪಕ್ಕದಲ್ಲಿ ಡೋಬಿ ಏಕನಾಥನ ಲಾಂಡ್ರಿ ಇತ್ತು. ಎಷ್ಟು ನೀರು ಹಾಕಿ ತೊಳೆದರೂ ಬಟ್ಟೆಯಿಂದ ಸಬಕಾರದ ನೊರೆ ಹೋಗುವುದಿಲ್ಲವೆಂದು ಗೊಣಗುತ್ತಿದ್ದ. ಒಣಗಿದಾಗ ಬಟ್ಟೆಯ ನೆರಿಗೆ ಅಂಟಿಕೊಂಡು ಇಸ್ತ್ರಿ ಉಜ್ಜಿದಾಗ ಯದ್ವಾತದ್ವ ಗೆರೆಗಳು ಮೂಡಿ ಗಿರಾಕಿಗಳು ಜಗಳ ಮಾಡುತ್ತಿದ್ದದನ್ನು ಮಾರ ನೋಡಿದ್ದ. ಇದೊಂದು ಬಗೆಯ ಪಿಶಾಚಿ ಚೇಷ್ಟೆಯೇ ಎಂದು ಏಕನಾಥ ನಂಬಿ ಹತಾಶನಾಗಿದ್ದ.
“ಹೊಳೆ ನೀರು ಚೇಂಜ್ ಮಾಡಿ ನೋಡಿ. ಇಸ್ತ್ರಿ ಕೂರದಿದ್ರೆ ನನ್ನ ಹೆಸರು ತೆಗಿರಿ”. ಮಾರನ ಮಾತನ್ನು ಅವನು ದಿವ್ಯ ಉದಾಸೀನತೆಯಿಂದ ಅಲಕ್ಷಿಸಿದ. ಹೆದ್ದಾರಿಯ ಪಕ್ಕದ ವಟರ್ ಸರ್ವಿಸ್ ಸೆಂಟರ್‍ಲ್ಲಿ ಮೇಸ್ತ್ರಿ ಮತ್ತು ಕಾರಿನ ಮಾಲೀಕರು ಜಗಳಾಡುವಾಗ ಮಾರ ಅಲ್ಲೆ ನಿಂತಿದ್ದ. ತೊಳೆದ ಗಾಡಿಯ ಬಾಡಿಯ ಮೇಲೆ ಬಿಳಿಯ ರಾಸಾಯನಿಕ ಪದಾರ್ಥದ ಪದರು ಶಾಶ್ವತ ನಿಂತು ವಾಹನದ ಸೌಂದರ್ಯ ಹಾಳಾಯಿತೆಂದೂ ಅದರ ಹಾನಿ ಭರಿಸಬೇಕೆಂದೂ ಪಟ್ಟು ಹಿಡಿದಿದ್ದರು. ಹಿಂದೆಂದೂ ಹೀಗಾಗಿರದ ನಿಗೂಢ ನಡೆಯ ಬಗ್ಗೆ ಅಚ್ಚರಿ, ವಿಷಾದ ಪಡುತ್ತ ಕಾರಷ್ಟೇ ಅಲ್ಲದೆ ತನ್ನ ಕಸುಬಿಗೂ ಡ್ಯಾಮೇಜ್ ಆಯಿತೆಂದು ಮರಗುತ್ತಿದ್ದ ಮೇಸ್ತ್ರಿಯ ಮುಂದೆ ಮಾರ ನಲ್ಲಿಗೆ ಜೋಡಿಸಿದ್ದ ಪೈಪಿನಿಂದ ನೀರು ಚಿಮ್ಮಿಸಿ, “ಇದೇ ನಿಮ್ಮ ಶನಿ” ಎಂದವನೆ ದೃಢವಾದ ಹೆಜ್ಜೆ ಹಾಕುತ್ತ ನಡೆದ. ಖಾನಾವಳಿಯ ಊಟದಲ್ಲಿ ಬರುತ್ತಿದ್ದ ಔಷಧಿಯ ವಾಸನೆ, ನೀರು ಹಿಡಿದಿಟ್ಟ ಡ್ರಮ್ಮುಗಳ ತಳದಲ್ಲಿ ಶೇಖರಣೆಯಾದ ಹಿಟ್ಟಿನಂತ ಪದಾರ್ಥ, ತುತ್ತದ ನೀಲಿ ಬಣ್ಣಕ್ಕೆ ಬದಲಾದ ನೀರು ಸೂಸುತ್ತಿದ್ದ ಕೊಳೆತ ಮೀನಿನ ದುರ್ಗಂಧ, ಸಂತೆಯಲ್ಲಿ ಚಿಮುಕಿಸುತ್ತಿದ್ದ ನೀರಿಗೆ ಮಧ್ಯಾಹ್ನದೊಳಗೆ ಹಸುರು ಸೊಪ್ಪು ಬಾಡುವುದು, ರಸ್ತೆ ಮೇಲೆ ತಿರುಗಾಡುತ್ತಿದ್ದ ಕೆಲವರು ನಾಚಿಕೆ ಬಿಟ್ಟು ಎಲ್ಲರೆದುರು ಶರೀರದ ಗುಪ್ತ ಭಾಗಗಳಿಗೆ ಕೈ ತೂರಿ ಕೆರೆದು ಕೊಳ್ಳುವುದು, ಚರ್ಮರೋಗದ ತಜ್ಞ ವೈದ್ಯರ ಆಸ್ಪತ್ರೆಯಲ್ಲಾದ ಜನ ದಟ್ಟಣೆ ಮುಂತಾದ ನಿತ್ಯ ಚಿತ್ರಗಳು ಮತ್ತು ಅವುಗಳ ಕುರಿತಾದ ದೂರು ದುಮ್ಮಾನಗಳು ಮಾರನ ಮೌನ ಪ್ರತಿಭಟನೆಯನ್ನು ಪರೋಕ್ಷವಾಗಿ ಸಮರ್ಥಿಸುವಂತಿದ್ದವು. ವರ್ಷ ಕಳೆಯುವಷ್ಟರಲ್ಲಿ ಅದಾಗಲೆ ಪೇಟೆಯಲ್ಲಿ ಓಡಾಡಿಕೊಂಡಿದ್ದ ಕುರೂಪಿ ಭಿಕ್ಷುಕರ ಸಾಲಿಗೆ ಮಾರ ಸೇರಿದ.
ದುರ್ವಾಸನೆಯನ್ನು ಪಸರಿಸುತ್ತ ಓಡಾಡುತ್ತಿದ್ದ ಮಾರನ ಸನಿಹದಲ್ಲಿ ಹಾದುಹೋಗುತ್ತಿದ್ದವರು ಮೈಗೆ ನೀರು ಹಾಕದೆ ಅದೆಷ್ಟು ಜನ್ಮ ಕಳೆಯಿತೊ ಎಂದು ಅವನ ಮಾನಸಿಕ ಆರೋಗ್ಯವನ್ನು ಅನುಮಾನಿಸಿದರು. ಪೇಟೆಯ ವ್ಯಾಪಾರ-ವ್ಯವಹಾರದಲ್ಲಿ ಕಾಣಿಸಿದ ವಿಲಕ್ಷಣ ವರ್ತನೆ ಗಮನಿಸಿದ ಪತ್ರಿಕೆಯ ವರದಿಗಾರನಿಗೆ ಮಾರನ ಅಸಹಜ ಅಭಿನಯ ಮುನಸಿಪಾಲಿಟಿಯ ಅವಾಂತರದಲ್ಲಿ ಮುಚ್ಚಿ ಹಾಕಿದ ಸತ್ಯವೊಂದನ್ನು ನಟಿಸುತ್ತಿದೆ ಎಂದು ರೋಮಾಂಚನವಾಯಿತು. ಒಂದು ದಿನ ವರದಿಗಾರ ಜೋಡುಕೆರೆ ಗುಡಿಯಲ್ಲಿ ಮಾರನನ್ನು ಮಾತಾಡಿಸಿದ. ಪೇಟೆಗೆ ಬೇಡ್ತಿ ಹೊಳೆಯ ನೀರು ಪೂರೈಕೆಯಾಗುವುದು ನಿಲ್ಲುವವರೆಗೆ ಮೀಯಬಾರದೆಂದು ಪ್ರತಿಜ್ಞೆ ಮಾಡಿದ್ದಾಗಿಯೂ ಈ ವ್ರತವನ್ನು ಒಂದು ವರ್ಷದಿಂದ ಕಾಪಾಡಿಕೊಂಡು ಬಂದಿರುವುದಾಗಿಯೂ ತನ್ನ ಅಚಲ ತೀರ್ಮಾನವನ್ನು ದೃಢ ಪಡಿಸಿದ. ಮರುದಿನ ಪತ್ರಿಕೆಯಲ್ಲಿ ಮಾರನ ಆದಿಮಾನವನಂತಹ ಫೋಟೊ ಜತೆಗೆ ವರದಿ ಪ್ರಕಟವಾಯಿತು. ಯಲ್ಲಾಪುರ ಪೇಟೆಗೆ ಪುರಸಭೆಯವರು ಸರಬರಾಜು ಮಾಡುತ್ತಿರುವ ಬೇಡ್ತಿ ಹೊಳೆಯ ಕಲುಷಿತ ನೀರು ನಿಲ್ಲಿಸುವಂತೆ ಮಾರ ಕಳೆದ ಒಂದು ವರ್ಷದಿಂದ ಸ್ನಾನ ಮಾಡದೆ ವಿನೂತನ ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ವಿವರವಾದ ಮಾಹಿತಿಯ ಸುದ್ದಿ ಪ್ರಕಟವಾಯಿತು. ಹಾಸ್ಟೇಲ್ ವಾರ್ಡನ್ ಅರ್ಕಸಾಲಿಯನ್ನು ಆರೋಪಿ ಮಾಡಿ ಮುನಸಿಪಾಲಿಟಿಯವರು ತಾವು ಎಸಗಿದ ತಪ್ಪಿನಿಂದ ಪಾರಾದ ಬಗ್ಗೂ ಉಲ್ಲೇಖವಿತ್ತು. ಮುನಸಿಪಾಲಿಟಿ ಸದಸ್ಯರು ಮತ್ತು ಹೂಗಾರ ಜನರ ಆಕ್ರೋಶವನ್ನು ಎದುರಿಸಬೇಕಾಯಿತು. ಇದ್ದಕಿದ್ದಂತೆ ಮಾರ ಬೆಳಕು ಹರಿಯುವಷ್ಟರಲ್ಲಿ ಜನ ನಾಯಕನಾಗಿ ಬೆಳೆದಿದ್ದ.
ಮಾರನ ಕಳಕಳಿಯನ್ನು ಕೊಂಡಾಡಿದ ಮುನಸಿಪಾಲಿಟಿಯವರು ನೀರಿನ ಟ್ಯಾಂಕಿಗೆ ಶುದ್ಧೀಕರಣ ಘಟಕವನ್ನು ಅಳವಡಿಸಲಾಗುವುದೆಂದು ಕಸ ವಿಲೇವಾರಿ ವಾಹನದ ಮೈಕ್‍ಲ್ಲಿ ಪ್ರಚಾರ ಮಾಡಿದರು. ಬಂಕ್ಸಾಲಿಯ ಕೊಪ್ಪದವರಿಗೆ ಮಾರನನ್ನು ಕರೆದೊಯ್ಯಲು ಮನವಿ ಪತ್ರ ಕಳುಹಿಸಿದರು. ಹೂಗಾರ ಮತ್ತು ಪುರಸಭೆಯ ಕೆಲ ಸದಸ್ಯರು ಮಾರನನ್ನು ಹುಡುಕುತ್ತ ಮಾರುತಿ ಗುಡಿಗೆ ಹೋದರು. ಹೂಗಾರ, “ಸ್ನಾನ ಮಾಡದ ನಿನ್ನಿಂದ ಚರ್ಮದ ಅಂಟು ರೋಗ ಪೇಟೆಯಲ್ಲಿ ಹರಡ್ತಾ ಇದೆ. ಊರಿಗೆ ಹೋಗಿ ಚೊಕ್ಕ ಸ್ನಾನ ಮಾಡು. ನಿನ್ನ ಕರೆಯೋದಕ್ಕೆ ಹೆಂಡ್ತಿ ಬಂದಿದ್ದಾಳೆ” ಎಂದು ಮನವೊಲಿಸಲು ಯತ್ನಿಸಿದ. ಮಾರ ಮಾತಾಡಲಿಲ್ಲ. “ಹೊಳೆ ನೀರು ಮೀಯೋದಕ್ಕೆ ಹೆದ್ರಿಕೆಯಾದ್ರೆ ಸೋಡಾ ವಾಟರಲ್ಲಿ ಪುಣ್ಯ ಸ್ನಾನ ಮಾಡ್ಸೋಣ” ಹೂಗಾರ ತನ್ನ ಮಾತಿಗೆ ತಾನೆ ನಕ್ಕ. ಮಾರನಿಗೆ ಮಾರುತಿ ಗುಡಿಯ ಅರಳಿ ಮರದ ಕಲ್ಲಿನ ಮೇಲೆ ಮೀಯಿಸುವುದೆಂದು ಪುರಸಭೆ ಸಾರ್ವಜನಿಕ ಕಾರ್ಯಕ್ರಮವನ್ನು ನಿಯೋಜಿಸಿತು. ಸ್ಥಳಿಯ ಶಾಸಕರು ಮತ್ತು ತಾಲ್ಲೂಕಿನ ಅಧಿಕಾರಿಗಳಿಗೆ ಅಭ್ಯಂಜನ ಕಾರ್ಯಕ್ರಮಕ್ಕೆ ಆಮಂತ್ರಣ ರವಾನೆಯಾಯಿತು.
ಪುರಸಭೆಯವರಿಂದ ಆಶ್ವಾಸನೆ ದೊರೆಯುವವರೆಗೆ ಮಾರ ಪ್ರತಿಭಟನೆ ನಿಲ್ಲಿಸಲು ಸಿದ್ಧನಿರಲಿಲ್ಲ. ಆದರೆ, ಹೊಳೆಯ ನೀರು ಬೇಸಿಗೆಯಲ್ಲಿ ಬತ್ತಿ ಹೋಗುತ್ತಿದ್ದದರಿಂದ ಜಲ ಯೋಜನೆಯೇ ಚರಮ ಸ್ಥಿತಿ ತಲುಪಿ ಸ್ಥಗಿತವಾಗುವ ಹಂತಕ್ಕೆ ಬಂದಿತ್ತು. ಮಾರನ ಹೋರಾಟವನ್ನು ಪ್ರಕೃತಿಯೇ ಸೋಲಿಸಿದೆ ಎಂದುಕೊಂಡ ಪುರಸಭೆಯವರಿಗೆ ಅನಾಯಾಸ ವರ ಪ್ರಾಪ್ತವಾಗಿತ್ತು. ಮಾರನೂ ದಣಿದಿದ್ದ. ಹೊಳೆಗೆ ಅನುಕಂಪ ಉಂಟಾಯಿತೆ ಹೊರತು ಪುರಸಭೆಯವರಿಗೆ ಬುದ್ಧಿ ಬರಲಿಲ್ಲ ಎಂದುಕೊಂಡ. ಮುಖ್ಯವಾಗಿ ಅವನಿಗೆ ಮಹಾನಾಯಕನಾಗಿ ಮೆರೆಯಬೇಕೆಂಬ ಮಹತ್ವಾಕಾಂಕ್ಷೆ ಇರಲಿಲ್ಲ. ಹುಚ್ಚ ಎಂದು ಹಣೆಪಟ್ಟಿ ಕಟ್ಟಿ ನಾಗರಿಕ ಜಗತ್ತಿನಿಂದ ತನ್ನನ್ನು ಹೊರಗಟ್ಟಬಹುದೆಂದು ಆತಂಕವಿತ್ತು. ಪೂರ್ವಜನ್ಮದ ಸ್ಮತಿಯಂತೆ ಕೊಪ್ಪದ ಸಾಲು ಗದ್ದೆಗಳ ವರ್ಣಚಿತ್ರಗಳು ಅವನ ಮನೋಪಟಲದ ಮೇಲೆ ಹರಿಯುತ್ತಲೆ ಬೋಳು ಮರ ಜೀವ ಧರಿಸುವಂತೆ ಕನಸು ಚಿಗುರಿ ಉಲ್ಲಾಸ ಉಕ್ಕಿತು. ಪೇಟೆ ತಾನು ಮೀಯದಿರುವುದನ್ನು ಗಮನಿಸುವಂತಾದ್ದದ್ದು ಅವನಿಗೆ ಸಮಾಧಾನ ಉಂಟು ಮಾಡಿತ್ತು. ಮನಸಿಲ್ಲದಿದ್ದರೂ ಹಠ ಸಡಿಲಿಸಿ ಮುನಸಿಪಾಲಿಟಿಯ ವಿಧಿಕಾಂಡಕ್ಕೆ ಒಪ್ಪಿದ.
ಪುರಸಭೆಯ ಸಪಾಯಿ ಕರ್ಮಚಾರಿಗಳು ಗುಡಿಯಲ್ಲಿ ಹೂಡಿದ್ದ ಕಲ್ಲು ಒಲೆಗಳ ಮೇಲೆ ಕಡಾಯಿಯಿಟ್ಟು ನೀರು ಕಾಯಿಸಿದರು. ಗುಡಿಯಿಂದ ಹೊರಟ ಹೊಗೆ ಅರಳಿಮರದ ಸುತ್ತ ಹಾರುವುದನ್ನು ಕಂಡು ಪಾದಾಚಾರಿಗಳು ಹೋಮ-ಹವನ ನಡೆಯುತ್ತಿದೆಯೆಂದು ಕೈ ಮುಗಿದು ಮುನ್ನೆಡೆದರು. ಸುದ್ದಿ ಕೇಳಿದ ಕೆಲವರು ಮಹಾಮಸ್ತಕಾಭಿಷೇಕ ನೋಡಲೆಂಬಂತೆ ಹಾಜರಾಗಿದ್ದರು. ಗುಡಿಯ ಹಿಂದೆ ಕೈ ತೊಳೆಯುವ ಜಾಗದ ಹಾಸುಗಲ್ಲಿನ ಮೇಲೆ ಮಾರನನ್ನು ಅರೆಬೆತ್ತಲೆಯಲ್ಲಿ ಕುಳ್ಳಿರಿಸಿದ್ದರು. ಸಲೂನಿವನು ಅದಾಗಲೆ ಮಾರನ ಕ್ಷೌರ್ಯ ಮಾಡಿ ಮುಖ ನುಣ್ಣಗೆ ತಾಮ್ರದಂತೆ ಮಿಂಚುತ್ತಿತ್ತು. ದೇಹದ ಚರ್ಮ ಒಣಗಿದ ಮೇಣದಂತಾಗಿತ್ತು. ಹೂಗಾರ ಮತ್ತು ಪುರಸಭೆಯ ಕೆಲ ಸದಸ್ಯರು ಮಹಾಮಂಗಳರಾತಿಗೆ ಕಾದಿರುವಂತೆ ನಿಂತಿದ್ದರು. ಮೊದಲ ತಂಬಿಗೆಯ ಬೆಚ್ಚಗಿನ ನೀರು ಸುರಿಯುತ್ತಿದ್ದಂತಯೇ ಮಾರ, “ನನಗೆ ಮೀಯೋದಕ್ಕೆ ಬರ್ತದೆ” ಎಂದು ತಂಬಿಗೆಯನ್ನು ಬೇಡಿದ.
“ಬೆನ್ನ ಮ್ಯಾಲಿನ ಕೆಸರು ತೊಳೆಯೋದಕ್ಕೆ ನಿನ್ನ ಕೈ ಮುಟ್ಟೋದಿಲ್ಲ” ಎಂದು ಮಾಜಿ ಸಹದ್ಯೋಗಿಯೊಬ್ಬ ಸಬಕಾರ ಹಾಕಿ ಉಜ್ಜಿದ. ಸೂತಕದ ಮನೆಯಲ್ಲಿ ಬೆತ್ತಲ ಶವಕ್ಕೆ ಮಾಡುತ್ತಿದ್ದ ಕೊನೆಯ ಸ್ನಾನದಂತೆ ಭಾಸವಾಗಿ ಮಾರ ಬೆಚ್ಚಿದ. ಮಾರನ ಹಲವು ಭಾವ-ಭಂಗಿಗಳ ಫೋಟೊ ಸೆರೆ ಹಿಡಿದರು. ಹೊಸ ಬಟ್ಟೆ ತೊಡಿಸಿ ಅವನನ್ನು ಪುರಸಭೆಯ ವಾಹನದಲ್ಲಿ ಕೂರಿಸಿ ಬಂಕ್ಸಾಲಿಗೆ ಕಳುಹಿಸಿದರು.
ವಾರದ ನಂತರ ಮಾರ ತೀರಿಕೊಂಡನಂತೆ ಎಂದು ಅವನು ನೀರು ಬಿಡುತ್ತಿದ್ದ ವಾರ್ಡಿನವರು ಮರಗಿದರು. ಮಾಜಿ ನೌಕರನಾಗಿದ್ದ ಮಾರನಿಗೆ ಸಂತಾಪ ಸೂಚಿಸಿದ ಮುನಸಿಪಾಲಿಟಿ ಅವನ ಪ್ರತಿಮೆಯನ್ನು ಪೇಟೆಯ ಚೌಕದಲ್ಲಿ ನಿಲ್ಲಿಸುವ ನಿರ್ಣಯವನ್ನ ಅಂಗೀಕರಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.