ಅಲ್ಲೊಂದು ಊರು; ಆ ಊರಿನಲ್ಲೊಬ್ಬ ಕುರುಬನಿದ್ದ; ಬಡವ; ಆದರೆ ಪ್ರಾಮಾಣಿಕ. ಅವನಲ್ಲಿ ನಾಯಿ ಒಂದಿತ್ತು; ಅದು ತುಂಬ ಬುದ್ಧಿವಂತ ನಾಯಿ.
ಒಮ್ಮೆ ಆ ಕುರುಬನಿಗೆ ಹಣಕಾಸಿನ ಬಿಕ್ಕಟ್ಟು ತುಂಬ ಹೆಚ್ಚಾಯಿತು. ಸಾಲವನ್ನು ಮಾಡದೆ ಬೇರೆ ದಾರಿಯೇ ಉಳಿಯಲಿಲ್ಲ. ಆದರೆ ಅವನಿಗೆ ಸಾಲವನ್ನು ಯಾರು ಕೊಡುತ್ತಾರೆ? ಪಕ್ಕದ ಹಳ್ಳಿಯ ಸಾಹುಕಾರ ಅವನಿಗೆ ಸಾಲ ಕೊಡಲು ಒಪ್ಪಿದ. ಆದರೆ ಅವನಲ್ಲಿ ಅಡವಿಡಲು ಏನೂ ಇರಲಿಲ್ಲ. ಕೊನೆಗೆ ನಾಯಿಯನ್ನೇ ಆ ಸಾಹುಕಾರನಲ್ಲಿ ಅಡವಿಟ್ಟು ಹಣವನ್ನು ಪಡೆದ.
ಇತ್ತ ಆ ನಾಯಿ ಸಾಹುಕಾರನ ಮನೆಯಲ್ಲಿ ಬೆಳೆಯುತ್ತಿತ್ತು. ಆ ಸಾಹುಕಾರನಿಗೆ ಒಂದು ಪುಟ್ಟ ಕೂಸಿತ್ತು. ಒಂದು ದಿನ ಅವನ ಮನೆಯಲ್ಲಿ ಎಲ್ಲರೂ ಹೊರಗೆ ಇದ್ದಾರೆ. ಮಗು ಹಾಸಿಗೆಯಲ್ಲಿದೆ. ನಾಗರಹಾವೊಂದು ಅಲ್ಲಿಗೆ ಬಂದಿತು. ಇನ್ನೇನು ಮಗುವನ್ನು ಅದು ಕಚ್ಚಬೇಕು; ಆಗ ಆ ನಾಯಿ ಅದನ್ನು ಗಮನಿಸಿತು. ಕೂಡಲೇ ಅದರ ಮೇಲೆರೆಗಿದ ನಾಯಿ ಆ ಹಾವನ್ನು ಕೊಂದುಹಾಕಿತು.
ಅಷ್ಟರಲ್ಲಿ ಸಾಹುಕಾರ ಮತ್ತು ಅವನ ಹೆಂಡತಿ ಅಲ್ಲಿಗೆ ಬಂದರು. ಅಲ್ಲಿಯ ದೃಶ್ಯವೇ ಅವರಿಗೆ ಎಲ್ಲವನ್ನೂ ಹೇಳುವಂತಿತ್ತು. ಮಗುವಿ ಪ್ರಾಣವನ್ನು ಕಾಪಾಡಿದ ನಾಯಿಯ ಬಗ್ಗೆ ಅದವರಿಗೆ ಕೃತಜ್ಞತೆಯ ಭಾವ ಮೂಡಿತು. ಅದರ ಒಡೆಯ, ಕುರುಬನಿಗೆ ಅವರು ಕೊಟ್ಟಿದ ಸಾಲವನ್ನು ಈಗ ಈ ನಾಯಿ ಬಡ್ಡಿ ಸಮೇತ ತೀರಿಸಿದೆ – ಎಂದು ಉದ್ಗರಿಸಿದರು. ಇನ್ನು ಈ ನಾಯಿಯನ್ನು ತಮ್ಮಲ್ಲಿ ಉಳಿಸಿಕೊಳ್ಳುವುದು ಸರಿಯಲ್ಲ ಎಂದು ತೀರ್ಮಾನಿಸಿದರು.‘ಇನ್ನು ನಿನ್ನ ಯಜಮಾನನಲ್ಲಿಗೆ ಹೋಗು’ ಎಂದು ಹೇಳಿ ಅದನ್ನು ಅಟ್ಟಿದರು.
ಈ ಕಡೆ ಆ ಕುರುಬ ನಾಯಿಯನ್ನು ದಾಸ್ಯದಿಂದ ಬಿಡಿಸಿಕೊಳ್ಳಬೇಕೆಂಬ ಹಟದಿಂದ ಹಣವನ್ನು ಕಷ್ಟಪಟ್ಟ ಹೊಂದಿಸಿಕೊಂಡ. ಸಾಲವನ್ನು ಹಿಂದುರಿಗಿಸಿ, ಅದನ್ನು ಕರೆದುಕೊಂಡು ಬರಲು ಸಾಹುಕಾರನ ಊರಿನತ್ತ ನಡೆದ. ದಾರಿಯಲ್ಲಿ ಆ ನಾಯಿಯೇ ಎದುರಾಯಿತು. ‘ಅರೆ! ನಾನು ನಿನ್ನನ್ನು ಬಿಡಿಸಿಕೊಂಡು ಬರಲು ಬರುತ್ತಿದ್ದರೆ, ನೀನು ಅಲ್ಲಿಂದ ತಪ್ಪಿಸಿಕೊಂಡು ಓಡಿಬರುತ್ತಿರುವೆಯಾ? ನಿನ್ನಿಂದ ನಾನು ಅಪರಾಧಿ ಸ್ಥಾನದಲ್ಲಿರುವಂತಾಗಿದೆ’ ಎಂದು ಒದರಿದ; ಅವನಿಗೆ ತುಂಬ ಸಿಟ್ಟು ಕೂಡ ಬಂದಿತ್ತು. ಹತ್ತಿರದಲ್ಲೇ ಇದ್ದ ಮರದ ತುಂಡಿನಿಂದ ಅದನ್ನು ಹೊಡದೇಬಿಟ್ಟ! ನಾಯಿ ಆ ಪೆಟ್ಟಿನ ರಭಸಕ್ಕೆ ಸತ್ತುಹೋಯಿತು.
ಸತ್ತ ನಾಯಿಯ ಕೊರಳಲ್ಲಿದ್ದ ಚೀಟಿಯೊಂದು ಅವನಿಗೆ ಕಂಡಿತು. ಆ ಸಾಹುಕಾರನೇ ಅದನ್ನು ಅದರ ಕೊರಳಿನಲ್ಲಿ ಕಟ್ಟಿದ್ದ. ‘ನಿನ್ನ ನಾಯಿ ನನ್ನ ಮಗುವಿನ ಪ್ರಾಣವನ್ನು ಉಳಿಸಿದೆ. ನನ್ನ ಸಾಲವನ್ನು ಮಾತ್ರವೇ ಅದು ತಿರಿಸಿಲ್ಲ; ಈಗ ನಾವೇ ಅದರ ಋಣದಲ್ಲಿದ್ದೇವೆ. ದಯವಿಟ್ಟು ಇದನ್ನು ಸ್ವೀಕರಿಸು’ ಎಂದು ಅದರಲ್ಲಿ ಒಕ್ಕಣಿಸಲಾಗಿತ್ತು.
ಅದನ್ನು ಓದಿದ ಕುರುಬನಿಗೆ ಪ್ರಜ್ಞೆಯೇ ತಪ್ಪಿದಂತಾಯಿತು. ತನ್ನ ದುಡುಕತನಕ್ಕೆ ತಾನೇ ನಿಂದಿಸಿಕೊಂಡ.
* * *
ತಾಳ್ಮೆಯನ್ನು ಕಳೆದುಕೊಂಡರೆ ಅಪಾಯಗಳೂ ಅನಾಹುತಗಳೂ ಎದುರಾಗುತ್ತವೆಯಷ್ಟೆ. ನಮಗೆ ಕಣ್ಣಿಗೆ ಕಾಣುವುದಷ್ಟೇ ಸತ್ಯ ಆಗಿರುವುದಿಲ್ಲ. ನಾವು ಕಂಡದ್ದನ್ನು ಪರಾಮರ್ಶಿಸಿಬೇಕು; ಸಮಾಧಾನದಿಂದ ವಿಶ್ಲೇಷಿಸಬೇಕು. ದುಡುಕಿನಲ್ಲಿ ನಿರ್ಣಯಗಳನ್ನು ತೆಗೆದುಕೊಂಡರೆ ಅದರ ‘ಫಲ’ವನ್ನು ನಾವೇ ಅನುಭವಿಸಬೇಕು. ಕೋಪದಲ್ಲಿ ಕತ್ತರಿಸಿಕೊಂಡು ಮೂಗು ಮತ್ತೆ ಬಾರದು, ಅಲ್ಲವೆ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.