ಇಬ್ಬರು ಬೌದ್ಧಭಿಕ್ಷುಗಳು; ವಿಹಾರದಿಂದ ಊರಿನ ಕಡೆಗೆ ಹೊರಟಿದ್ದಾರೆ – ಭಿಕ್ಷೆಯನ್ನು ಸಂಪಾದಿಸಲು. ಊರಿಗೂ ವಿಹಾರಕ್ಕೂ ನಡುವೆ ಹೊಳೆಯೊಂದು ಹರಿಯುತ್ತಿದೆ. ದಿನವೂ ಅದನ್ನು ದಾಟಿ ಹೋಗಬೇಕಿತ್ತು.
ಇಂದೂ ಆ ಹೊಳೆಯ ಹತ್ತಿರ ಬಂದಿದ್ದಾರೆ. ಅಲ್ಲೊಬ್ಬಳು ತರುಣಿ – ಸುಂದರಿ ಕೂಡ – ಹೊಳೆಯನ್ನು ದಾಟಬೇಕೆಂದು ಅಲ್ಲಿಯೇ ನಿಂತಿದ್ದಾಳೆ. ಆದರೆ ಹೊಳೆಗೆ ಇಳಿಯಲು ಅವಳಿಗೆ ಮನಸ್ಸಾಗುತ್ತಿಲ್ಲ. ಅವಳ ಕಳವಳವನ್ನು ಗಮನಿಸಿದ ಆ ಇಬ್ಬರು ಭಿಕ್ಷುಗಳಲ್ಲಿ ಒಬ್ಬ, ಅವಳನ್ನು ಎರಡೂ ಕೈಗಳಿಂದ ಎತ್ತಿಕೊಂಡ; ಹೊಳೆಯನ್ನು ದಾಟಿಸಿಯೇ ಬಿಟ್ಟ!
ಮತ್ತೊಬ್ಬ ಭಿಕ್ಷುವಿಗೆ ಅದನ್ನು ನೋಡಿ ಗಾಬರಿಯೇ ಆಯಿತು. ಬೌಧ್ಧಸನ್ಯಾಸಿಗಳು ಸ್ತ್ರೀಯನ್ನು ಸ್ಪರ್ಶಿಸುವುದು ಸರಿಯೇ – ಎಂಬ ಪ್ರಶ್ನೆ ಅವನನ್ನು ಕೊರೆಯಲು ತೊಡಗಿತು. ತುಂಬ ಹೊತ್ತು ಅದೇ ಪ್ರಶ್ನೆ ಅವನನ್ನು ಕಾಡುತ್ತಿತ್ತು. ಅವನಿಗೆ ಅವನೇ ಯೋಚಿಸಿ ಯೋಚಿಸಿ, ಕೊನೆಗೆ ಧೈರ್ಯಮಾಡಿ ಅವನ ಸಹಚರನನ್ನು ಕೇಳಿಯೇಬಿಟ್ಟ: ‘ನೀನು ಆ ಹುಡುಗಿಯನ್ನು ಹಾಗೆ ಎತ್ತಿಕೊಂಡದ್ದು ಸರಿಯೆ?’
ನಗುತ್ತ ಆ ಭಿಕ್ಷು ಉತ್ತರಿಸಿದ: ‘ಅದೋ! ನಾನು ಅವಳನ್ನು ಆಗಲೇ ಇಳಿಸಿಬಿಟ್ಟೆ. ನೀನಿನ್ನೂ ಅವಳನ್ನು ಹೊತ್ತುಕೊಂಡೇ ತಿರುಗುತ್ತಿರುವೆಯಾ?’
* * *
ಇದೊಂದು ಝೆನ್ ಕಥೆ; ತುಂಬ ಪ್ರಸಿದ್ಧವಾದುದು. ಆದರೆ ಮತ್ತೆ ಮತ್ತೆ ನೆನಪಿಗೆ ತಂದುಕೊಳ್ಳುತ್ತಲೇ ಇರಬೇಕಾಗುತ್ತದೆಯೆನ್ನಿ!
ಎಷ್ಟೋ ಸಂಗತಿಗಳಿಗೆ ನಾವು ಅನಗತ್ಯವಾಗಿ ತಲೆ ತಲೆಕೆಡಿಸಿಕೊಳ್ಳುತ್ತಿರುತ್ತೇವೆ. ಅವುಗಳಲ್ಲಿ ಕೆಲವು ನಮಗೆ ಸೇರದ ವಿಷಯಗಳೂ ಇರುತ್ತವೆ; ಮತ್ತೆ ಕೆಲವು ನಮಗೆ ಸೇರಿದ್ದರೂ ಅವುಗಳ ಪ್ರಸ್ತುತತೆ ಮುಗಿದಿರುತ್ತದೆ. ಆದರೆ ನಾವು ಅದೇ ವಿಷಯಗಳ ಗುಂಗಿನಲ್ಲಿಯೇ ಮುಳುಗಿಹೋಗಿರುತ್ತೇವೆ. ಇಂಥ ಅನವಶ್ಯಕವಾದ ಚಿಂತೆ ನಮ್ಮ ಸಮಯವನ್ನೂ ಶಕ್ತಿಯನ್ನೂ ಹ್ರಾಸ ಮಾಡುತ್ತಿರುತ್ತದೆ. ಯಾವ ವಿಷಯದ ವ್ಯಾಪ್ತಿ ಎಷ್ಟರ ತನಕ ಎಂಬ ವಿವೇಕ ನಮ್ಮಲ್ಲಿ ಇರಬೇಕು.
ಆ ಭಿಕ್ಷು ಆ ತರುಣಿಯನ್ನು ಹೊಳೆ ದಾಟಿಸಿದ್ದು ಸಹಜ ಪ್ರಕ್ರಿಯೆಯಷ್ಟೆ. ಅವಳಿಗೆ ಸಹಾಯ ಮಾಡಬೇಕೆಂಬ ಏಕೈಕ ಉದ್ದೇಶವೇ ಅವನನ್ನು ಅಂಥ ಪ್ರಕ್ರಿಯೆಗೆ ತೊಡಗಿಸಿತು. ಅವಳನ್ನು ಹೊಳೆ ದಾಟಿಸಿದ ಮೇಲೆ ಅವನು ಅವಳನ್ನು ಮರೆತ. ಆದರೆ ಇನ್ನೊಬ್ಬ ಭಿಕ್ಷುಕ ಅತಿಯಾಗಿ ಯೋಚಿಸಿದ. ಅವಳನ್ನು ಸ್ಪರ್ಶಿಸಿದ್ದು ಸರಿ–ತಪ್ಪೇ ಎಂಬ ಹೊಯ್ದಾಟದಲ್ಲಿ ತೊಡಗಿದ. ಅವಳನ್ನು ಅವನು ತನ್ನ ಮನಸ್ಸಿನಲ್ಲಿ ಹೊತ್ತುಕೊಂಡೇ ತಿರುಗುತ್ತಿದ್ದ; ಆ ಭಿಕ್ಷು ಅವಳನ್ನು ಭೌತಿಕವಾಗಿ ಹೊತ್ತೊಯ್ದು ಇಳಿಸಿದ ಮೇಲೂ ಇವನು ಮಾತ್ರ ಅವಳನ್ನು ತನ್ನ ಮನಸ್ಸಿನಿಂದ ಇಳಿಸಲು ಸಿದ್ಧವಿಲ್ಲ! ಎಲ್ಲ ಕಲ್ಮಶಗಳಿಗಿಂತಲೂ ಮಾನಸಿಕ ಕಲ್ಮಶವೇ ಹೆಚ್ಚು ಅಪಾಯಕಾರಿ, ದೋಷ. ಮನಸ್ಸಿನಲ್ಲಿ ಕುಳಿತ ಕೊಳೆಗಳನ್ನು ಸುಲಭವಾಗಿ ತೊಲಗಿಸಲು ಸಾಧ್ಯವಿಲ್ಲ. ಹೀಗಾಗಿ ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳುವುದೇ ದಿಟವಾದ ಸಾಧನೆ. ಹೊರಗೆ ತರುಣಿಯನ್ನು ಹೊತ್ತಿಕೊಂಡಿರುವುದು ಎಲ್ಲರಿಗೂ ಕಾಣುತ್ತದೆ; ಆದರೆ ನಮ್ಮ ಮನ್ಸಸಿನಲ್ಲಿ ಹೊತ್ತುಕೊಂಡು ತಿರುಗುತ್ತಿರುವ ರಾಗ–ದ್ವೇಷಗಳು ಯಾರಿಗೂ ಕಾಣುವುದಿಲ್ಲ. ‘ನೀನಿನ್ನೂ ಅವಳನ್ನು ಹೊತ್ತುಕೊಂಡೇ ತಿರುಗುತ್ತಿರುವೆಯಾ?’ ಎಂಬ ಮಾತು ಮನನೀಯ. ಮನಸ್ಸು ಶುದ್ಧವಾಗಿರದ ಹೊರತು ಯಾವ ಸಾಧನೆಯೂ ಪೂರ್ಣವಾಗುವುದಿಲ್ಲ. ಮನಸ್ಸೇ ನಮ್ಮ ಎಲ್ಲ ಪಾಪ–ಪುಣ್ಯಗಳಿಗೂ ಕಾರಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.