ಸೋಮನೆಂಬ ಒಬ್ಬ ವ್ಯಕ್ತಿಯಿದ್ದಾನೆಂದುಕೊಳ್ಳೋಣ. ಅವನನ್ನು ಅವನ ಮಗ ‘ಅಪ್ಪಾ’ ಎಂದೂ, ತಂದೆ ತಾಯಿಯಿಂದ ‘ಮಗ’ನೆಂದೂ, ಬೇರೆ ಬೇರೆ ಬಂಧುಮಿತ್ರರು ಇನ್ನೂ ಬೇರೆ ಬೇರೆ ಹೆಸರುಗಳಿಂದಲೂ ಕರೆಯುತ್ತಾರೆ. ಹೀಗೆ ಬೇರೆ ಬೇರೆ ಹೆಸರುಗಳಿಂದ ಕರೆಸಿಕೊಂಡ ವ್ಯಕ್ತಿ ಮಾತ್ರ ಒಬ್ಬನೇ, ಅಲ್ಲವೇ? ಹುಟ್ಟಿದಾಗ ‘ಸೋಮ’ ಎನ್ನುವ ಹೆಸರನ್ನು ಬಿಟ್ಟು ಬೇರೆ ಇಟ್ಟಿದ್ದರೂ ಆ ವ್ಯಕ್ತಿ ಬದಲಾಗುತ್ತಿರಲಿಲ್ಲ. ನಾವೆಲ್ಲರೂ ಹುಟ್ಟಿನಿಂದ ಸಾಯುವ ತನಕ ಬೇರೆ ಬೇರೆ ‘ಉಪಾಧಿ’ಗಳಿಂದ ಕರೆಸಿಕೊಂಡರೂ, ನಮ್ಮಲ್ಲಿನ ಆ ‘ನಾನೆಂಬ’ ಭಾವ ಮಾತ್ರ ಆ ಎಲ್ಲಾ ಉಪಾಧಿಗಳಿಗೂ ಓಗೊಡುತ್ತಿದ್ದರೂ ಒಂದೇ ಆಗಿರುತ್ತದೆಯಲ್ಲವೇ?! ಆ ‘ನಾನು’ ಯಾರು?
ಹಾಗಾದರೆ ಯಾವುದೇ ಹೆಸರಿನ ‘ಉಪಾಧಿ’ಯಿಂದಲೂ ಬದಲಾವಣೆಯಾಗದ ನಮ್ಮ ನಮ್ಮ ಶರೀರ ಮನಸ್ಸು ಮುಂತಾದವುಗಳನ್ನೇ ‘ನಾನು’ ಎನ್ನಬಹುದಲ್ಲವೇ? ‘ಹಿಂದೆ ನಾನು ಬಾಲಕನಾಗಿದ್ದೆ, ಈಗ ವೃದ್ಧನಾಗಿದ್ದೇನೆ’, ‘ಮೊದಲು ಬಹಳ ಅಜ್ಞಾನಿಯಾಗಿದ್ದೆ, ಈಗ ಆ ವಿಷಯವನ್ನು ಚೆನ್ನಾಗಿ ತಿಳಿದಿದ್ದೇನೆ’ ಎಂದೆಲ್ಲಾ ಹೇಳುತ್ತೇವೆ. ಹಾಗಾದರೆ, ಬಾಲ್ಯದಲ್ಲಿಯೂ ವೃದ್ಧಾಪ್ಯದಲ್ಲೂ ಜ್ಞಾನ-ಅಜ್ಞಾನಗಳಲ್ಲಿಯೂ ಆ ‘ನಾನು’ತನ ಮಾತ್ರ ಬದಲಾಗಲಿಲ್ಲವೆಂದಾಯಿತು. ಹಾಗಾಗಿ ತಾತ್ಕಾಲಿಕವಾಗಿ ನಾನು ಕುಂಟ, ದಪ್ಪ, ಸುಂದರ, ಸುಖಿ-ದುಃಖಿ ಎಂದು ಶರೀರ ಮನಸ್ಸುಗಳ ಧರ್ಮಗಳನ್ನು, ಸೋಮ ಮುಂತಾದ ಹೆಸರುಗಳನ್ನು ‘ನನ್ನಲ್ಲಿ’ ಆರೋಪಿಸಿಕೊಂಡು ನಿತ್ಯಜೀವನದಲ್ಲಿ ವ್ಯವಹರಿಸುತ್ತೇವಷ್ಟೇ. ಇವೆಲ್ಲವೂ ಬದಲಾದರೂ ಅಥವಾ ನಾಶವಾದರೂ ಅನುಸ್ಯೂತವಾಗಿ ಆ ಎಲ್ಲ ಭಾವಗಳನ್ನೂ ಅನುಭವಿಸುತ್ತ ‘ನಾನು’ ಮಾತ್ರ ಹಾಗಿಯೇ ಇರುತ್ತೇನೆ ಎಂಬುದು ಅನುಭವವೇದ್ಯ. ಈ ‘ನಾಮರೂಪ’ಗಳೆಂಬ ಉಪಾಧಿಗಳೆಲ್ಲವನ್ನೂ ಅನುಭವಿಸುತ್ತ, ಅವು ಬದಲಾದರೂ ಬದಲಾಗದೇ ಇರುವ ಆ ‘ನಾನು’ ಯಾರು?
ಒಂದು ನಾಟ್ಯರಂಗವನ್ನು ಕಲ್ಪಿಸಿಕೊಳ್ಳೋಣ. ಬುದ್ಧಿಯೆಂಬ ನರ್ತಕಿ ನವಭಾವಗಳನ್ನು ಹೊರಹೊಮ್ಮಿಸುತ್ತ ನರ್ತಿಸುತ್ತ ಶಬ್ದಾದಿ-ವಿಷಯಗಳೆಂಬ ಸಭಿಕರನ್ನು ರಂಜಿಸುತ್ತಾಳೆ. ಇಂದ್ರಿಯಗಳು ತಾಳ ಹಾಕುತ್ತವೆ. ಅಹಂಕಾರವೇ ಈ ನರ್ತನದ ಪ್ರಭು. ಹೀಗೆ ಎಲ್ಲರೂ ಸುಖದುಃಖಗಳನ್ನು ರಸಗಳನ್ನು ಅನುಭವಿಸುತ್ತಿದ್ದಾಗ, ಇವರೆಲ್ಲರನ್ನೂ ಪ್ರಕಾಶಿಸುತ್ತ ದೀಪವೊಂದು ಶಾಂತವಾಗಿ ಬೆಳಗುತ್ತಿರುತ್ತದೆ. ಆ ದೀಪದ ಪ್ರಭೆಯಿಂದಲೇ ಅಲ್ಲವೇ ನಾಟ್ಯರಂಗವೂ ನರ್ತಕಿಯೂ ಸಭಾಸದರೂ ಬೆಳಗುವುದು?! ಅವರಾರೂ ಇಲ್ಲದಿದ್ದರೂ ಅದು ಮಾತ್ರ ಬೆಳಗುತ್ತಲೇ ಇರುತ್ತದೆ! ಹೀಗೆ ಸಾಕ್ಷಿರೂಪವಾಗಿ ಸಂಸಾರವೆಂಬ ನಾಟ್ಯರಂಗವನ್ನು ಬೆಳಗುವ ಆ ‘ಕೂಟಸ್ಥ’ದೀಪವೇ ‘ನಾನು’.
ಒಂದು ಥ್ರಿಲ್ಲರ್ ಸಿನಿಮಾ ನೋಡುತ್ತಿದ್ದೇವೆಂದುಕೊಳ್ಳೋಣ. ನೋಡುತ್ತ ನೋಡುತ್ತ ಅಲ್ಲಿನ ಪಾತ್ರಗಳೊಂದಿಗೆ ಒಂದಾಗಿ ತನ್ಮಯರಾಗುತ್ತೇವೆ. ಕ್ಲೈಮ್ಯಾಕ್ಸ್‌ನಲ್ಲಿ ತುದಿಗಾಲಿನಲ್ಲಿ ಕುಳಿತುಕೊಳ್ಳುವಂತಾಗುತ್ತದೆ. ದೃಶ್ಯಗಳಿಗನುಗುಣವಾಗಿ ಸಂತೋಷ, ಭಯ, ಆತಂಕ, ಕುತೂಹಲ, ಆಶ್ಚರ್ಯ ಮುಂತಾದ ಭಾವಗಳನ್ನು ಬಯಸಿಯೇ ಅನುಭವಿಸುತ್ತೇವೆ. ಅಷ್ಟು ಹೊತ್ತು ಸೋಫಾಸನದಲ್ಲಿ ಕುಳಿತು ನೋಡುತ್ತಿರುವ ನಾನು ಬೇರೆಯೇ ಎಂಬುದನ್ನು ಮರೆಯುತ್ತೇವೆ. ಈ ಮರೆವೇ ಮಾಯೆಯಿರಬಹುದೇ?! ಸಾಹಿತ್ಯ-ಚಲನಚಿತ್ರದಲ್ಲಿಯಂತೆ, ಜೀವನದಲ್ಲಿಯೂ ಸಹ - ಹಾಸ್ಯ-ಶೃಂಗಾರಗಳಂತೆ ಭಯ-ಬೀಭತ್ಸ-ರೌದ್ರಗಳೂ ರಸಗಳೇ, ಸುಖ-ದುಃಖಗಳೆರಡೂ ಅನುಭೂತಿಗಳೇ, ಎಲ್ಲವನ್ನೂ ಅನುಭವಿಸಿದಂತೆ ತೋರುತ್ತಿದ್ದರೂ ‘ನಾನು’ ಕೂಟಸ್ಥನಾಗಿ ಕುಳಿತಿರುವ ಸಾಕ್ಷಿ ಮಾತ್ರ - ಎಂದು ಅರಿತರೆ ನಾವೂ ಶಾಂತಿಯೆಂಬ ಚರಮರಸಕ್ಕೆ ಅಧಿಕಾರಿಗಳಾಗಬಹುದೇನೋ?
ಸುಮ್ಮನೊಬ್ಬಂಟಿಯೆಂತಿಹುದು? ಬೇಸರವಹುದು |
ಹೊಮ್ಮುವೆನು ಕೋಟಿರೂಪದಲಿ ನಾನೆಂದು ||
ಬೊಮ್ಮನೆಳಸಿದನಂತೆ. ಆಯೆಳಸಿಕೆಯೆ ಮಾಯೆ |
ನಮ್ಮಿರವು ಮಾಯೆಯಲಿ – ಮಂಕುತಿಮ್ಮ
– ಎನ್ನುತ್ತಾರೆ ಪೂಜ್ಯ ಡಿವಿಜಿಯವರು.
ಸ್ವಪ್ನದಲ್ಲಿ ಹುಲಿಯೊಂದು ನಮ್ಮ ಮೇಲೆರಗಿದಂತಾಗಿ ಧುತ್ತನೆ ಎಚ್ಚರಗೊಳ್ಳುತ್ತೇವೆ. ಅಲ್ಲಿಯವರೆಗೆ ನಮ್ಮಿಂದ ಬೇರೆಯೇ ಆಗಿ ಕಾಣುತ್ತಿದ್ದ ಆ ಸ್ವಪ್ನದ ಪರಿಸರ, ಹುಲಿ ಎಲ್ಲವೂ ಮಾಯವಾಗಿ, ಇರುವುದು ನಾನೊಬ್ಬನೇ, ಇದೆಲ್ಲ ನನ್ನದೇ ಕನಸು ಮಾತ್ರ ಎಂದು ಅರಿವಾಗಿ ನಿರಾಳರಾಗುತ್ತೇವೆ. ಕನಸಿನಲ್ಲಿ ಮುಖ್ಯವೆಂಬಂತೆ, ಸಹಜವೆಂಬಂತೆ ಕಂಡ ಅನುಭವಿಸಿದ ಪ್ರಸಂಗಗಳೆಲ್ಲ ಎಚ್ಚರದಲ್ಲಿ ನೆನಪಾದಾಗ ಪೆದ್ದು ಎನಿಸಿ ನಗುವಂತಾಗುತ್ತದೆ. ನಾವು ಎಚ್ಚರವೆಂದುಕೊಳ್ಳುವ ಸ್ಥಿತಿಯೂ ಒಂದು ಕನಸೇ ಆಗಿರಲಾರದೇ? ಈ ಕನಸಿನಿಂದಲೂ ನಾವು ಎಚ್ಚೆತ್ತುಕೊಂಡರೆ ಅದೆಂತಹ ಭವ್ಯವಾದ ಜಾಗೃತಿ, ಪರಮಾರ್ಥಸ್ಥಿತಿ ನಮ್ಮದಾಗಬಹುದು?! ಹುಲಿಯಂತೆ ನಮ್ಮನ್ನು ಹೆದರಿಸುವ ಪ್ರಪಂಚದ ವಿಷಯಗಳೆಲ್ಲಾ ಸುಳ್ಳೇ, ಅದೆಲ್ಲ ನನ್ನದೇ ಸೃಷ್ಟಿ, ಇರುವುದು ನಾನೊಬ್ಬನೇ ಎಂಬುದು ಅದೆಂಥ ನಿರಾಳ, ಶಕ್ತಭಾವ!!
ಮೇಲೆ ಹೇಳಿದ ದೃಷ್ಟಾಂತ(ಉದಾಹರಣೆ)ಗಳೆಲ್ಲ ಶ್ರೀವಿದ್ಯಾರಣ್ಯರು ರಚಿಸಿದ ಪಂಚದಶಿಯವು. ಹೆಸರೇ ಸೂಚಿಸುವಂತೆ ಪಂಚದಶಿಯಲ್ಲಿ ಹದಿನೈದು ಪ್ರಕರಣಗಳಿವೆ. ಗ್ರಂಥವು ಇನ್ನೂ ಬೇರೆ ಬೇರೆ ದೃಷ್ಟಾಂತಗಳ ಮೂಲಕ ‘ನಾನು ಯಾರು?’ ಮುಂತಾದ ಸನಾತನ ಪ್ರಶ್ನೆಗೆ ಉತ್ತರವನ್ನೀಯುತ್ತದೆ. ಅದೊಂದು ರೀತಿ ವೇದವೇದಾಂತಗಳೆಂಬ ಗುಳಿಗೆಗಳನ್ನು, ನುಂಗಲು ಸುಲಭವಾಗುವಂತೆ ಅರೆದು, ಸಿಹಿಭಕ್ಷ್ಯದಲ್ಲಿ ಸೇರಿಸಿ ನಮಗೆ ತಿಳಿಯದಂತೆ ತಿನ್ನಿಸಿದಂತೆ. ವೇದಾಂತಭಾವನೆ ಕೇವಲ ಮುಮುಕ್ಷುಗಳಿಗೆ ಮಾತ್ರ ಬೇಕಾದದ್ದಲ್ಲ. ವಿಷಮಸನ್ನಿವೇಶವನ್ನು ಎದುರಿಸುತ್ತಿರುವವರಿಗೆ ನೀನೇನನ್ನೂ ಕಳೆದುಕೊಂಡಿಲ್ಲ ಎಂದು ಬೆನ್ನುತಟ್ಟಿ ಸಮಾಧಾನಿಸುವ ಸ್ನೇಹಿತ, ಸುಖದಲ್ಲಿ ಮೈಮರೆತಿರುವವನಿಗೆ ಇದೇನೂ ಶಾಶ್ವತವಲ್ಲ ಎಂದು ಎಚ್ಚರಿಸುವ ಬಂಧುವೂ ಹೌದು!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.