ADVERTISEMENT

ಪ್ರೇಮಕುಮಾರ್ ಹರಿಯಬ್ಬೆ ಅವರ ಕಥೆ: ಸಿಕ್ಕುಗಳು

ಪ್ರೇಮಕುಮಾರ್ ಹರಿಯಬ್ಬೆ
Published 29 ಸೆಪ್ಟೆಂಬರ್ 2024, 0:31 IST
Last Updated 29 ಸೆಪ್ಟೆಂಬರ್ 2024, 0:31 IST
<div class="paragraphs"><p>ಕಥೆ</p></div>

ಕಥೆ

   

‘ನನ್ನ ಕ್ರಿಯೆಟಿವಿಟಿಗೆ ನೀನು ಸಪೋರ್ಟೀವ್‌ ಆಗಿಲ್ಲ...’ ಎನ್ನುತ್ತ ರೇಖಾ, ಪುರುಷಿಯ ಮುಖ ನೋಡಿದಳು.

 ‘ನಂಗೆ ಐದಾರು ಹಾಬಿಗಳಿವೆ. ಲಿಟರೇಚರ್‌, ಡಾನ್ಸ್‌, ಪೇಂಟಿಂಗ್, ಮ್ಯೂಸಿಕ್‌, ಸಿನಿಮಾ. ನಿಂಗೆ ಈ ಯಾವುದರಲ್ಲೂ ಆಸಕ್ತಿ ಇಲ್ಲ. ಈಚೆಗೆ ನನ್ನ ಮಾತುಗಳನ್ನೂ ಕೇಳಿಸಿಕೊಳ್ಳಲ್ಲ. ಕೇಳಿಸಿಕೊಂಡ್ರೂ ರಿಯಾಕ್ಟ್‌ ಮಾಡಲ್ಲ. ನೀನೊಂಥರಾ ನೆಗೆಟಿವ್‌ ಎನರ್ಜಿ ಇದ್ದಹಾಗೆ. ನಿನ್ನ ಜತೆ ಇದ್ದು ನಂಗೂ ನೆಗೆಟಿವ್‌ ಆಲೋಚನೆಗಳು ಬರ್ತಿವೆ...’ ಎಂದು ಅವಳು ಹೇಳಿದಾಗ ತಮಾಷೆ ಮಾಡ್ತಿದ್ದಾಳೆ ಎಂದೇ ಪುರುಷಿ ಭಾವಿಸಿದ್ದ.

ADVERTISEMENT

‘ನಿನ್ನ ಹಾಬಿಗಳಿಗೆ ನನ್ನಿಂದ ಅಡ್ಡಿ ಇರಲ್ಲ ಅಂತ ಮದುವೆಗೆ ಮೊದಲು ಹೇಳಿದ್ದೆ. ಈಗಲೂ ಹೇಳ್ತೀನಿ, ಈ ಮನೆಯಲ್ಲಿ ಅನುಕೂಲಗಳು ಕಡಿಮೆ ಅನ್ನಿಸಿದರೆ ಹೇಳು. ಬೇರೆ ಮನೆಗೆ ಶಿಫ್ಟ್‌ ಆಗೋಣ. ಹುಡುಕಿದರೆ ಇದೇ ಏರಿಯಾದಲ್ಲಿ ಇನ್ನೂ ಒಳ್ಳೇ ಮನೆ ಸಿಗುತ್ತೆ. ಆದರೆ ಸ್ವಂತ ಮನೆಯಲ್ಲಿ ಸಿಗೋ ನೆಮ್ಮದಿ ಬೇರೆ ಕಡೆ ಸಿಗಲ್ಲ...’ ಎನ್ನುತ್ತ ಪುರುಷಿ ಹೆಂಡತಿ ಮುಖ ನೋಡಿದ.

‘ಪುರುಷಿ ಬೀ ಸಿರಿಯಸ್‌, ನಾನೇಳ್ತಿರೋದು ನಿಂಗೆ ಅರ್ಥ ಆಗಿಲ್ಲ...’ ಮನೆ ಬದಲಾಯಿಸೋಣ ಅಂತ ನಾನು ಹೇಳ್ತಿಲ್ಲ. ನಮ್ಮಿಬ್ಬರ ನಡುವೆ ತುಂಬಾ ಗ್ಯಾಪ್‌ ಇದೆ. ಇಂಟೆಲೆಕ್ಚುಯಲಿ ನೀನು ಬಿಲೋ ಅವರೇಜ್‌. ನಿಂಗೆ ಲಿಟರೇಚರ್‌ ಗೊತ್ತಿಲ್ಲ. ಮ್ಯೂಸಿಕ್‌, ಸಿನಿಮಾದಲ್ಲಿ ಆಸಕ್ತಿ ಇಲ್ಲ. ನೋಡೋಕೆ ಚೆನ್ನಾಗಿದ್ದೀಯ ಅನ್ನೋದು ಬಿಟ್ಟರೆ ಬೇರೇನು ಕ್ವಾಲಿಟಿ ಇದೆ ನಿಂಗೆ? ನೀನೊಬ್ಬ ಗುಡ್‌ ಹ್ಯೂಮನ್‌ ಅಷ್ಟೇ. ನಿನ್ನ ವಯಸ್ಸಿನ ಈ ಕಾಲದ ಕಾರ್ಪೋರೇಟ್‌ ಕಂಪನಿಗಳಲ್ಲಿ ಕೆಲಸ ಮಾಡೋರನ್ನು ನೋಡು. ಅವರಿಗೆ ಎಷ್ಟೊಂದು ಟೇಸ್ಟ್‌ಗಳಿವೆ!. ಮನೆಗೆ ಬರೋ ನನ್ನ ಕಲೀಗ್‌ಗಳ ಜತೆ ನಿಂಗೆ ಐದು ನಿಮಿಷ ಮಾತಾಡೋಕೂ ಆಗಲ್ಲ. ನೀನು ಇನ್‌ಫಿರಿಯಾರಿಟಿ ಕಾಂಪ್ಲೆಕ್ಸ್‌ನಿಂದ ನರಳ್ತಾ ಇದ್ದೀಯ. ಹೊರ ಬರೋಕೆ ನೀನು ಟ್ರೈ ಮಾಡ್ತಾ ಇಲ್ಲ ಎಂದು ರೇಖಾ ಹೇಳಿದಾಗ ಪುರುಷಿಗೆ ಅವಮಾನವಾಯಿತು.

‘ಆರ್ಯನೂ ನಿನ್ನಂಗೇ ಆಗ್ತಾನೆ ಅನ್ನೋ ಭಯ ಶುರುವಾಗಿದೆ. ಗಂಡನನ್ನು ಬಿಟ್ಟವಳು ಅನ್ನಿಸಿಕೊಂಡ್ರೂ ಪರವಾಗಿಲ್ಲ. ನಾನು ಸಪರೇಟ್‌ ಆಗಿರಬೇಕು ಅಂತ ಡಿಸೈಡ್‌ ಮಾಡಿದ್ದೀನಿ...’ ಎಂದು ಅವಳು ಹೇಳಿದಾಗ ಪುರುಷಿ ಬೆಚ್ಚಿದ. ಡೈವೋರ್ಸ್‌ ಕೊಡು ಅಂತ ನೇರವಾಗಿ ಹೇಳ್ತಿಲ್ಲ ಅನ್ನಿಸಿ ಮೌನವಾದ. ಸ್ವಲ್ಪ ಹೊತ್ತಿನ ನಂತರ ನಂಗೆ ಇನ್ನೊಂದು ಮದುವೆ ಮಾಡಿಕೊಳ್ಳೋ ಯೋಚನೆ ಇಲ್ಲ ಅಂದಳು. ಅದಕ್ಕೂ ಅವನು ಏನೂ ಹೇಳಲಿಲ್ಲ. ಮೂರು ದಿನ ಇಬ್ಬರೂ ಮಾತೇ ಆಡಲಿಲ್ಲ. ನಾಲ್ಕನೇ ದಿನ ಪುರುಷಿ ಮನೆಗೆ ಬರುವಷ್ಟರಲ್ಲಿ ನಾನು ಅಪ್ಪನ ಮನೆಗೆ ಹೋಗ್ತಿದ್ದೀನಿ ಎಂದು ಲೆಟರ್‌ ಬರೆದಿಟ್ಟು ಮಗನನ್ನು ಕರೆದುಕೊಂಡು ಹೋಗಿದ್ದಳು!

ಪ್ರಿಯ ಓದುಗ, ಪುರುಷಿಯ ಪೂರ್ಣ ಹೆಸರು ಪುರುಷೋತ್ತಮ ಚತುರ್ಭುಜ ಅಂತ. ಚತುರ್ಭುಜ ಅನ್ನೋ ಸರ್‌ನೇಮ್‌ ಹೇಗೆ ಬಂತು ಅನ್ನೋದು ಅವನಿಗೂ ಗೊತ್ತಿಲ್ಲ. ಅವರ ಪೂರ್ವಿಕರು ಚತುರ್ಭುಜ ಅನ್ನೋ ಊರಿನವರಂತೆ! ಆ ಊರು ಎಲ್ಲಿದೆ ಅಂತಲೂ ಪುರುಷಿಗೆ ಗೊತ್ತಿಲ್ಲ. ನಮ್ಮ ಕಥಾನಾಯಕಿ ರೇಖಾಳ ಅಪ್ಪ ಪುರುಷೋತ್ತಮನ ದೂರದ ಸಂಬಂಧಿಕರು. ಮಗಳು ಇಂಜಿನಿಯರಿಂಗ್‌ ಓದಿ ಅಮೆರಿಕಾದಲ್ಲಿ ಓಳ್ಳೆಯ ಕೆಲಸ ಹಿಡಿದು ಅಲ್ಲೇ ಸೆಟಲ್‌ ಆಗಬೇಕು ಎಂದು ಅವರು ಬಯಸಿದ್ದರು. ಆದರೆ ಅವಳು ಹಠಕ್ಕೆ ಬಿದ್ದು ನಂಗೆ ಕಲೆ, ಸಾಹಿತ್ಯದಲ್ಲಿ  ಆಸಕ್ತಿ ಇದೆ. ನಾನು ಲೆಕ್ಚರರ್‌ ಆಗ್ತೀನಿ ಎಂದು ಇಂಗ್ಲಿಷ್‌ ಎಂ.ಎ.ಗೆ ಸೇರಿದ್ದಳು. ಜಾತಿ, ರಿಸರ್ವೇಷನ್‌ ಇತ್ಯಾದಿ ಕಾರಣಗಳಿಂದಾಗಿ ತಕ್ಷಣಕ್ಕೆ ಅವಳಿಗೆ ಲೆಕ್ಚರರ್‌ ಕೆಲಸ ಸಿಕ್ಕಲಿಲ್ಲ. ವಯಸ್ಸಾದರೆ ಗಂಡೂ ಸಿಗಲ್ಲ ಅನ್ನಿಸಿ ಅವಳಪ್ಪ ನೆಂಟರಿಷ್ಟರ ಮನೆಗಳಿಗೆ ಎಡತಾಕಿ ಕೊನೆಗೆ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿದ್ದ  ಪುರುಷೋತ್ತಮನಿಗೆ ಮಗಳನ್ನು ಧಾರೆ ಎರೆದುಕೊಟ್ಟು ನಿರಾಳರಾಗಿದ್ದರು. ಅಳಿಯನಾದರೂ ಅಮೆರಿಕಕ್ಕೆ ಹೋಗಬಹುದು ಅನ್ನೋ ಆಸೆ ಅವರಿಗಿತ್ತು. ಆದರೆ ಅವನಿಗೂ ಆಸಕ್ತಿ ಇಲ್ಲ ಅನ್ನೋದು ಗೊತ್ತಾದ ಮೇಲೆ ಇಬ್ಬರ ಬಗ್ಗೆಯೂ ಒಂದು ಬಗೆಯ ಉಪೇಕ್ಷೆ ತಾಳಿದ್ದರು.

‘ಊರಲ್ಲಿರೋ ಅಪ್ಪ, ಅಮ್ಮನ ಜವಾಬ್ದಾರಿ ನನ್ನ ಮೇಲಿದೆ. ಅಣ್ಣ ಇಂಗ್ಲೆಂಡಲ್ಲಿದ್ದಾನೆ. ನಾನೂ ಯಾವುದಾದರೂ ದೇಶಕ್ಕೆ ಹೋಗಿ ಬಿಟ್ಟರೆ ಅವರ ಗತಿ ಏನು…?’ ಅನ್ನೋದು ಪುರುಷೋತ್ತಮನ ನಿಲುವು. ಮದುವೆಯಾದ ಹೊಸದರಲ್ಲಿ ರೇಖಾಗೆ ನನ್ನ ಗಂಡ ಸುರಸುಂದರಾಂಗ ಅನ್ನೋ ಖುಷಿ ಇತ್ತು. ಆಮೇಲೆ ಕ್ರಮೇಣ ಅವನ ಬಗ್ಗೆ ಆಸಕ್ತಿ ಕಡಿಮೆ ಆಗ್ತಾ ಬಂತು. ದೈಹಿಕವಾಗಿ ಅವನು ಫರ್ಫೆಕ್ಟ್‌. ಆದರೆ ಒಳ್ಳೆಯ ಟೇಸ್ಟ್‌ಗಳಿಲ್ಲ. ಇಡೀ ಜೀವನ ಅವನ ಜತೆ ಕಳೆಯುವುದು ಕಷ್ಟ ಎಂದು ಅನ್ನಿಸಲು ಶುರುವಾಯಿತು.

‘ನನ್ನ ತಂಗಿ ಮಗನೊಬ್ಬ ಐಎಎಸ್‌ ಮಾಡಿದ್ದ. ಶಿವಪ್ರಸಾದ್‌ ಅಂತ ಅವನ ಹೆಸರು. ರೇಖಾಳನ್ನು ಇಷ್ಟಪಟ್ಟಿದ್ದ. ಇವಳೇ ಅವನನ್ನು ಕುಳ್ಳ ಅಂತ ಜರಿದು ಒಪ್ಪಲಿಲ್ಲ.! ಅವನು ತೀರಾ ಕುಳ್ಳನೇನಲ್ಲ. ರಕ್ತ ಸಂಬಂಧದಲ್ಲಿ ಮದುವೆಯಾದರೆ ಹುಟ್ಟೋ ಮಕ್ಕಳು ಅಂಗವಿಕಲರಾಗುವ ಸಾಧ್ಯತೆ ಹೆಚ್ಚು ಅಂತ ಹೇಳಿದ ಮೇಲೆ ಅವನು ಸುಮ್ಮನಾದ ಎಂದು ರೇಖಾಳ ಅಪ್ಪ ಯಾವಾಗಲೋ ಪುರುಷೋತ್ತಮನಿಗೆ ಹೇಳಿದ್ದರು. ಮಗಳಿಗೆ ಇನ್ನೂ ಒಳ್ಳೆಯ ಸಂಬಂಧ ಹುಡುಕಬಹುದಿತ್ತು ಎಂದು ಅವರು ಯಾರ ಬಳಿಯೋ ಹೇಳಿದ್ದು ಪುರುಷೋತ್ತಮನ ಕಿವಿಗೂ ಬಿದ್ದಿತ್ತು.

ಇಂಗ್ಲಿಷ್‌ ಎಂ.ಎ. ಮಾಡಿ ಮನೇಲಿ ಇರೋಕೆ ಬೇಜಾರು ಎಂದು ರೇಖಾ ಹೇಳಿದಾಗ ಕೆಲಸಕ್ಕೆ ಸೇರಿಕೋ ಅಂತ ಒತ್ತಾಯ ಮಾಡಿದ್ದು ಪುರುಷೋತ್ತಮನೇ. ಯಾವ ಕಾಲೇಜಲ್ಲಿ ಕೆಲಸ ಖಾಲಿ ಇದೆ. ಅಲ್ಲಿನ ಮ್ಯಾನೇಜ್‌ಮೆಂಟ್‌ನಲ್ಲಿ ಯಾರಿದ್ದಾರೆ ಅನ್ನೋದನ್ನೆಲ್ಲ ಪತ್ತೆ ಮಾಡಿ ಗಣ್ಯರೊಬ್ಬರ ಕೈಕಾಲು ಹಿಡಿದು ಅವರಿಗೆ ಕೆಲವು ಲಕ್ಷಗಳನ್ನು ಕೊಟ್ಟು ಮದರ್‌ ಥೆರೇಸಾ ಕಾಲೇಜಲ್ಲಿ ಲೆಕ್ಚರರ್‌ ಕೆಲಸ ಕೊಡಿಸುವಲ್ಲಿ ಯಶಸ್ವಿ ಆಗಿದ್ದ. ಕೆಲಸಕ್ಕಾಗಿ ದುಡ್ಡು ಕೊಟ್ಟಿದ್ದನ್ನು ಅವನು ರೇಖಾಗೆ ಹೇಳಲಿಲ್ಲ. ಕೆಲಸಕ್ಕೆ ಸೇರಿಕೊಂಡ ಮೇಲೆ ರೇಖಾಳಲ್ಲಿ ಹುದುಗಿದ್ದ ಅಭಿರುಚಿಗಳು ಒಂದೊಂದಾಗಿ ಹೊರ ಬಂದವು! ಅದೇ ಸಮಯದಲ್ಲಿ ಅವಳು ಬರೆದ ಪದ್ಯಗಳು, ಕಥೆಗಳು ಪತ್ರಿಕೆಗಳಲ್ಲಿ ಬ್ಯಾಕ್‌ ಟು ಬ್ಯಾಕ್‌ ಪಬ್ಲಿಷ್‌ ಆದ ಮೇಲೆ ಅವಳನ್ನು ಹಿಡಿಯುವವರೇ ಇರಲಿಲ್ಲ. ತನ್ನ ಹೆಂಡತಿ ಕವಿಯತ್ರಿ, ಕಥೆಗಾರ್ತಿ ಅನ್ನೋ ಖುಷಿಯನ್ನು ಪುರುಷೋತ್ತಮನೂ ಅನುಭವಿಸಿದ್ದ. 

*

ಹೆಂಡತಿ, ಮಗು ಇಲ್ಲದ ಮನೆಯಲ್ಲಿ ಒಬ್ಬನೇ ಇರೋದು ಕಷ್ಟ ಅನ್ನೋದು ಕ್ರಮೇಣ ಅಂತ ಪುರುಷೋತ್ತಮನ ಅನುಭವಕ್ಕೆ ಬರತೊಡಗಿತು. ಸಾಹಿತ್ಯ, ಸಿನಿಮಾ, ಸಂಗೀತ ಇತ್ಯಾದಿಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳೋದು ಹೇಗೆ ಎಂದು ಯೋಚಿಸಲು ಶುರು ಮಾಡಿದ.

‘ಮೂವತ್ತನೇ ವಯಸ್ಸಿಗೆ ಹತ್ತು ಸಲ ರಕ್ತದಾನ ಮಾಡಿದ್ದೀನಿ!. ಐದಾರು ಬಡ ಸ್ಟೂಡೆಂಟ್‌ಗಳ ಫೀಸು ಕಟ್ತಿದ್ದೀನಿ. ಕಷ್ಟ ಅಂತ ಹೇಳಿಕೊಂಡು ಬಂದವರಿಗೆ ಕೈಲಾದ ಸಹಾಯ ಮಾಡ್ತೀನಿ. ಇವೆಲ್ಲ ಒಳ್ಳೆಯ ಗುಣಗಳಲ್ಲವೇ? ಒಳ್ಳೆಯ ಟೇಸ್ಟ್‌ ಅಂದರೇನು? ಒಳ್ಳೆ ಟೇಸ್ಟ್‌ ಇರೋ ಮನುಷ್ಯ ಅನ್ನಿಸಿಕೊಳ್ಳೋಕೆ ಏನು ಮಾಡಬೇಕು? ಕವಿತೆ ಓದೋದು, ಸಿನಿಮಾ, ನಾಟಕಗಳನ್ನು ನೋಡೋದು, ಮ್ಯೂಸಿಕ್‌ ಕೇಳ್ತಾ ತಲೆ ಅಲ್ಲಾಡಿಸೋದು ಒಳ್ಳೆಯ ಟೇಸ್ಟ್‌ಗಳೇ ಎಂದೆಲ್ಲ ಯೋಚಿಸಿದ. ಥೀಯೇಟರ್‌ನಲ್ಲಿ ಕೂತು ಸಿನಿಮಾ ನೋಡುವುದೆಂದರೆ ಪುರುಷೋತ್ತಮನಿಗೆ  ಹಿಂಸೆ ಅಗುತ್ತಿತ್ತು. ಸಂಗೀತ ಕೇಳೋದು ಇಷ್ಟವಾದರೂ ಅದಕ್ಕೆ ಪುರುಸೊತ್ತು ಸಿಗ್ತಿರಲಿಲ್ಲ. ವಾರಕ್ಕೆ ಎರಡು ದಿನ ರಜೆ. ಮಾರ್ಕೆಟ್ಟಿಗೆ ಹೋಗೋದು, ಬಟ್ಟೆ-ಬರೆ ಐರನ್‌ ಮಾಡಿಕೊಳ್ಳೋದು, ಹೇರ್‌ ಕಟ್‌ ಮಾಡಿಸೋದರಲ್ಲಿ ಅವನ ರಜೆ ವ್ಯಯವಾಗುತ್ತಿತ್ತು. ಭಾನುವಾರ ಸಂಜೆ ಒಬ್ಬನೇ ಮನೆಯಲ್ಲೇ ಕೂತು ಬಿಯರ್‌ ಕುಡಿಯುತ್ತಿದ್ದ. ಅಷ್ಟರಲ್ಲಿ ಅವನ ರಜಾ ಮುಗಿಯುತ್ತಿತ್ತು. ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳೋಕೆ ನಂಗೂ ಇಷ್ಟ ಆದರೆ ನಂಗೆ ಟೈಮೇ ಇಲ್ಲ  ಎಂದು ಪುರುಷೋತ್ತಮ ಒಂದ್ಸಲ ಕ್ಯಾಷುವಲ್ ಆಗಿ ಹೇಳಿದ್ದಕ್ಕೆ ರೇಖಾ ನಿಂಗೆ ಆಸಕ್ತಿ ಇರೋದು ಕುಡಿಯೋದರಲ್ಲಿ ಮಾತ್ರ ಎಂದು ಕೊಂಕು ಮಾತಾಡಿದ್ದಳು. ಅವಮಾನ ಆದರೂ ಅದೊಂದೇ ನಂಗಿರುವ ಬ್ಯಾಡ್‌ ಟೇಸ್ಟ್‌. ಅಕೇಷನಲ್‌ ಮಿಸ್‌ ಬಿಹೇವಿಯರ್‌ ಎಂದು ಹೇಳಿ ನಕ್ಕು ಸುಮ್ಮನಾಗಿದ್ದ.

ಎಷ್ಟು ದಿನ ಅಪ್ಪನ ಮನೆಯಲ್ಲಿ ಇರ್ತಾಳೋ ನೋಡ್ತೀನಿ. ಸಿಟ್ಟು ಇಳಿದ ಮೇಲೆ ಬಂದೇ ಬರ್ತಾಳೆ ಎಂಬ ಪುರುಷೋತ್ತಮನ ಲೆಕ್ಕಾಚಾರ ಉಲ್ಟಾ ಆಯಿತು. ಮನೆ ಬಿಟ್ಟು ಹೋಗಿ ಎರಡು ತಿಂಗಳು ಕಳೆದರೂ ಅವಳು ಪುರುಷಿಗೆ ಫೋನ್‌ ಮಾಡಲಿಲ್ಲ. ಮಗನನ್ನು ನೋಡಬೇಕು ಅನ್ನಿಸಿದರೂ ಇವನೂ ಹೋಗಲಿಲ್ಲ. ನಾನೇ ಹೋಗಿ ಮನೆಗೆ ಬಾ ಎಂದರೆ ಅವಳ ಕಣ್ಣಲ್ಲಿ ಇನ್ನಷ್ಟು ಸಣ್ಣವನಾಗ್ತೀನಿ ಅನ್ನೋ ಅಹಂಕಾರ ಅವನಲ್ಲಿ ಜಾಗೃತವಾಗಿತ್ತು. ಮೂರು ತಿಂಗಳು ಕಳೆದವು. ರೇಖಾಳಿಂದ ಡೈವೋರ್ಸ್‌  ನೋಟೀಸ್‌ ಬರಬಹುದು ಎಂದು ಊಹಿಸಿದ್ದ. ಅದೂ ಬರಲಿಲ್ಲ. ಅವಳಪ್ಪನ ಮನೆಗೆ ಹೋಗಿ ನಿನ್ನ ಕೊನೆ ನಿರ್ಧಾರ ಹೇಳಿಬಿಡು ಎಂದು ಕೇಳೋಣ ಅನ್ನಿಸಿದರೂ ಹೋಗಲಿಲ್ಲ.                                                     

 ಈ ನಡುವೆ ಐದಾರು ದಿನ ರಜೆ ಹಾಕಿ ಮೂರ್ನಾಲ್ಕು ಕನ್ನಡ, ಹಿಂದಿ, ಇಂಗ್ಲಿಷ್‌ ಸಿನಿಮಾಗಳನ್ನು ನೋಡಿದ. ಟ್ರೆಂಡ್‌ ಸೆಟ್ಟರ್‌ ಎಂದು ಟೀವಿಗಳಲ್ಲಿ ಪ್ರಚಾರ ಪಡೆದಿದ್ದ ಸಿನಿಮಾಕ್ಕೆ ಬ್ಲ್ಯಾಕ್‌ನಲ್ಲಿ ಟಿಕೆಟ್‌ ತಗಂಡು ಹೋದ. ಉದ್ದನೆ ತಲೆ ಕೂದಲು, ಗಡ್ಡ ಮೀಸೆ ಬೆಳೆಸಿಕೊಂಡ ಹೀರೋ, ಥೇಟ್‌ ಅವನ ತಮ್ಮನ ಹಾಗೇ ಕಾಣುತ್ತಿದ್ದ ಐದಾರು ಮಂದಿ ವಿಲನ್‌ಗಳಿದ್ದ ಸಿನಿಮಾ ಅದು. ತೆರೆಯ ಮೇಲೆ ಅರೆಬರೆ ಕತ್ತಲು. ಏಳೆಂಟು ಜನ ಕಾರಣವೇ ಇಲ್ಲದೆ ಹಿಗ್ಗಾ ಮುಗ್ಗಾ ಹೊಡೆದಾಡುತ್ತಿದ್ದರು! ಯಾರು ಯಾರಿಗೆ ಹೊಡೆದರು ಅನ್ನೋದು ಪುರುಷೋತ್ತಮನಿಗೆ ಗೊತ್ತೇ ಆಗಲಿಲ್ಲ. ಹೀರೊ ಮೂರ್ನಾಲ್ಕು ಜನರನ್ನು ಗುಂಡಿಕ್ಕಿ ಕೊಂದ. ಆದರೂ ಪೊಲೀಸರು ಬರಲಿಲ್ಲ. ಅವನ ಮೇಲೆ ಕೇಸೂ ಆಗಲಿಲ್ಲ!. ಶಿಸ್ತಾಗಿ ಪ್ಯಾಂಟು, ಕೋಟು ತೊಟ್ಟುಕೊಂಡು ಪೌರುಷದ ಡೈಲಾಗ್‌ ಹೊಡೆಯುತ್ತಿದ್ದ ಅವನ ವಿಚಿತ್ರ ಮ್ಯಾನರಿಸಂಗಳನ್ನು ನೋಡಿ ಪುರುಷೋತ್ತಮನಿಗೆ ತಲೆ ಚಿಟ್ಟು ಹಿಡಿಯಿತು. ಸಿನಿಮಾ ನಡುವೆಯೇ ಎದ್ದು ಹೋಗಿ ಎರಡು ಚಿಲ್ಡ್‌ ಬಿಯರ್‌ ಕುಡಿದು ಬಂದ. ಗಾಢ ನಿದ್ದೆ ಆವರಿಸಿತು. ಸಿನಿಮಾ ಮುಗಿದ ಮೇಲೆ ಪಕ್ಕದ ಸಿಟಿನಲ್ಲಿ ಕೂತಿದ್ದವನು ತಟ್ಟಿ ಎಬ್ಬಿಸುತ್ತ ನಡೀರಿ, ಸಿನಿಮಾ ಮುಗೀತು, ಮನೆಗೆ ಹೋಗಿ ಮಲಗಿಕೊಳ್ಳಿ ಎಂದು ಹೇಳುತ್ತ ನಕ್ಕ. ಅವನು ನಕ್ಕ ಪರಿ ಕಂಡು ಪುರುಷಿಗೆ ಮಜುಗರವಾಗಿತ್ತು. ಇನ್ಮುಂದೆ ಇಂಥ ಸಿನಿಮಾಗಳಿಗೆ ಹೋಗಬಾರದು ಎಂದು ನಿರ್ಧರಿಸಿದ. ಸಿನಿಮಾ, ಲಿಟರೇಚರ್‌, ಮ್ಯೂಸಿಕ್‌ ಗೊತ್ತಿದ್ದವನನ್ನು ಟೇಸ್ಟ್‌ ಇರೋ ಮನುಷ್ಯ ಅನ್ನೋದಾದರೆ ನಾನು ಅಂಥ ಮನುಷ್ಯ ಆಗೋಕೆ ತಯಾರಿಲ್ಲ ಎಂದು ನಿರ್ಧರಿಸಿದ.  ಹೆಂಡತಿಯನ್ನು ಮರೆಯುವ ಪ್ರಯತ್ನ ಮಾಡಿದ. ಆದರೆ ಮಗ ಆರ್ಯ ಪದೇ ಪದೇ ನೆನಪಾಗುತ್ತಿದ್ದ. ಆಗೆಲ್ಲ ಮನಸ್ಸಿಗೆ ನೋವಾಗುತ್ತಿತ್ತು. ಅಂಥ ಸಮಯದಲ್ಲಿ ಸುಮ್ಮನೆ ಕೂತು ಬಿಡುತ್ತಿದ್ದ. ದಿನ ಕಳೆದಂತೆ ಅವಳು ಬರೋದಿಲ್ಲ ಅಂತ ಅವನ ಮನಸ್ಸು ಹೇಳಿತು.

ಒಂದು ಸಂಜೆ ಮಿಲೇನಿಯಮ್‌ ಮಾಲ್‌ನಲ್ಲಿರೋ ಕಾಟನ್‌ ಹೌಸಿನೊಳಕ್ಕೆ ಹೋಗುವಾಗ ರೇಖಾ ಎದುರಾದಳು! ಅವಳು ಪುರುಷಿಯನ್ನು ನೋಡಲಿಲ್ಲ. ಹಿಂದೂಸ್ತಾನಿ ಹಾಡುಗಾರನಂತೆ ಕಾಣುತ್ತಿದ್ದವನ ಜತೆ ಮಾತಾಡುತ್ತ ಎದುರಿಗೇ ಬಂದು ಅವನ ಪಕ್ಕವೇ ಹಾದು ಹೋದಳು!. ಒಂದೆರಡು ಅಡಿ ಅಂತರದಲ್ಲಿ ನಡೆದು ಹೋಗುವಾಗ ಅವಳು ಪೂಸಿಕೊಂಡ ಫಾರಿನ್‌ ಇಂಟಿಮೇಟಿನ ಪರಿಮಳ ಅವನ ಮೂಗಿಗೆ ಅಡರಿತು. ಅರೆ, ಇಂಟಿಮೇಟನ್ನೂ ಬದಲಾಯಿಸಿದ್ದಾಳೆ! ಅವಳ ಟೇಸ್ಟುಗಳು ಬದಲಾಗಿರಬಹುದು ಅನ್ನಿಸಿತು. ಆರ್ಯ ಜತೆಯಲ್ಲಿ ಇಲ್ಲ! ಮನೆಯಲ್ಲಿ ಅವಳಮ್ಮನ ಜತೆ ಬಿಟ್ಟು ಬಂದಿರಬಹುದು ಅಂದುಕೊಂಡ. ತಿರುಗಿ ನೋಡಬೇಕು ಅನ್ನಿಸಿದರೂ ನೋಡಲಿಲ್ಲ.

‘ನಾನು ಇನ್ನೊಂದು ಮದುವೆ ಆಗಬೇಕು ಅಂತ ನಿನ್ನಿಂದ ಸಪರೇಟ್‌ ಆಗ್ತಿಲ್ಲ...’ ಅಂತ ಸುಳ್ಳು ಹೇಳಿದಳೇ? ಬೇರೊಬ್ಬ ಗಂಡಸಿನ ಜತೆ ಇರೋ ಹೆಂಡತಿಯನ್ನು ನೋಡಿ ಇಲ್ಲದನ್ನೆಲ್ಲ ಊಹಿಸಿಕೊಳ್ಳುತ್ತಿದ್ದೇನೆ ಅನ್ನಿಸಿತು. ಅವಳು ಸಂಗೀತ ಕಲಿಯುತ್ತಿರಬಹುದು. ಅಂದುಕೊಂಡ. ಅಕ್ಕ,ಪಕ್ಕ ಯಾರು ಬರ್ತಿದ್ದಾರೆ ಅನ್ನೋದನ್ನೂ ಗಮನಿಸದೆ ಅವನ ಜತೆಯಲ್ಲಿ ಮಾತಾಡುವಂಥ ವಿಷಯ ಏನಿರಬಹುದು ಎಂದು ಯೋಚಿಸುತ್ತ ಮನೆಗೆ ಬರುವ ಹೊತ್ತಿಗೆ ಸಿಟ್ಟು, ಬೇಸರ, ಹತಾಶೆಗಳ ಮೂಟೆಯಾಗಿದ್ದ. ರಾತ್ರಿ ಹೊತ್ತಿಗೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಅನ್ನಿಸಿತು. ಬಹಳ ಹೊತ್ತಿನ ತನಕ ಯೋಚಿಸುತ್ತ ಸುಮ್ಮನೆ ಕೂತಿದ್ದ. ವಾರಕ್ಕೊಮ್ಮೆ ಬಿಯರ್‌ ಕುಡಿಯುತ್ತಿದ್ದವನು ಅವತ್ತು ಬಾರ್‌ಗೆ ಹೋಗಿ ಎರಡು ಪೆಗ್‌ ಲೋಕಲ್‌ ವಿಸ್ಕಿ ಕುಡಿದ. ಬರುವಾಗ ಒಂದು ಫುಲ್‌ ಬಾಟಲ್‌ ತಂದ. ಹನ್ನೆರಡು ಗಂಟೆಗೆ ಮತ್ತೆ ಕುಡಿಯಲು ಶುರು ಮಾಡಿದ. ಎಷ್ಟೊ ಹೊತ್ತಿನ ತನಕ ಕುಡಿಯುತ್ತ ಕೂತಿದ್ದವನು ಹಾಗೇ ನಿದ್ದೆಹೋದ. ಎಚ್ಚರವಾದಾಗ ಮರುದಿನ ಮಧ್ಯಾಹ್ನ ಒಂದು ಗಂಟೆ ದಾಟಿತ್ತು.                                                                           

ಹೆಂಡ್ತಿ, ಮಗ ಮನೆಯಿಂದ ಹೋಗಿ ಮೂರು ತಿಂಗಳಾದವು. ಈ ವಿಷಯವನ್ನು ಅಪ್ಪ,ಅಮ್ಮನಿಗಾದರೂ ತಿಳಿಸಬೇಕಿತ್ತು ಅನ್ನಿಸಿತು. ಆದರೆ ತಿಳಿಸಲು ಹಿಂಜರಿಕೆ. ಎರಡು ದಿನ ರಜೆ ಹಾಕಿ ತಿರುಪತಿಗೆ ಹೋಗಿ ಬಂದ. ಮನಸ್ಸಿನ ಗೊಂದಲಗಳು ಕಡಿಮೆ ಆಗಲಿಲ್ಲ. ಕೆಲಸ ಬಿಟ್ಟು ಊರಿಗೆ ಹೋಗಿ ಅಪ್ಪ,ಅಮ್ಮನ ಜತೆ ಇದ್ದು ಬಿಡಬೇಕು ಅನ್ನಿಸಿತು. ಅಂಥ ಯೋಚನೆ ಬಂದಾಗ ಸ್ವಲ್ಪ ನಿರಾಳವೆನ್ನಿಸುತ್ತಿತ್ತು. ಒಬ್ಬನೇ ಹೋದರೆ ರೇಖಾ ಮತ್ತು ಮಗೂನ ಯಾಕೆ ಕರಕೊಂಡು ಬರಲಿಲ್ಲ ಅಂತ ಅಮ್ಮ ಕೇಳಿದರೆ ಏನು ಹೇಳೋದು? ವಿಷಯ ಗೊತ್ತಾದರೆ ಅಪ್ಪ ಏನು ಹೇಳಬಹುದು ಎಂದು ಯೋಚಿಸಿದ.

‘ಸಣ್ಣ ವಿಷಯಕ್ಕೆ ಸಿಟ್ಟು ಮಾಡಿಕೊಂಡು ಅವಳು ಅಪ್ಪನ ಮನೆಗೆ ಹೋಗಿರಬಹುದು. ನೀನೇ ಹೋಗಿ ಕರಕಂಡು ಬರೋದು ಬಿಟ್ಟು ಸುಮ್ಮನಿದ್ದೀಯಲ್ಲ ...’ ಅಂತ ಅಮ್ಮ ಆಕ್ಷೇಪಿಸಬಹುದು. ಅಥವಾ ಅವಳು ನಿಂಗೆ ಸರಿ ಹೋಗಲ್ಲ ಅಂತ ನಂಗೆ ಗೊತ್ತಿತ್ತು ಅನ್ನಬಹುದು. ಮಗನ ಸಂಸಾರ ಹೀಗಾಯಿತಲ್ಲ ಅಂತ ಅಪ್ಪ ಬೇಸರ ಮಾಡಿಕೊಳ್ಳಬಹುದು. ಅಣ್ಣನಿಗೆ ಗೊತ್ತಾದರೆ ಡೈವೋರ್ಸ್‌ ಕೊಟ್ಟು ಇನ್ನೊಬ್ಬಳನ್ನು ಮದುವೆ ಆಗಯ್ಯ ಅನ್ನಬಹುದು. ನೆಂಟರಿಗೆ ಗೊತ್ತಾದರೆ ಅವರು ನಿನ್ನ ಹಣೆಬರಹ ಇಷ್ಟೇ ಅಂತ ನಮಗೆ ಗೊತ್ತಿತ್ತು ಅಂತ ಕೊಂಕು ಮಾತು ಹೇಳಬಹುದು. ಅವಳು ಹೋದರೆ ಏನಾಯ್ತೋ, ನಮ್ಮ ಬಳಗದಲ್ಲಿ ಹುಡುಗಿಯರಿಗೆ ಬರವೇ? ನೀನು ಹೂಂ ಅನ್ನು  ತಿಂಗಳೊಪ್ಪತ್ತಿನಲ್ಲಿ ನಿಂಗೆ ಸರಿ ಹೋಗೋ ಹುಡುಗಿ ತಂದು ನಿನ್ನ ಮುಂದೆ ನಿಲ್ಲಿಸ್ತೀವಿ ಅನ್ನಬಹುದು ಎಂದೆಲ್ಲ ಯೋಚಿಸಿದ.    

*           

ಅರ್ಧ ಗಂಟೆಯಲ್ಲಿ ಒಂಬತ್ತು ಮಿಸ್ಡ್‌ ಕಾಲ್‌! ಯಾರು ಮಾಡಿರಬಹುದು? ರೇಖಾ ಬೇರೆ ನಂಬರಿಂದ ಮಾಡಿರಬಹುದೇ ಅಂದುಕೊಳ್ಳುತ್ತಿರುವಷ್ಟರಲ್ಲಿ ಅದೇ ನಂಬರ್‌ನಿಂದ ಕಾಲ್‌ ಬಂತು!. ರಿಸೀವ್‌ ಮಾಡುತ್ತಿದ್ದಂತೆ, ಯಾರು, ಪುರುಷೋತ್ತಮ್‌ ಅವರಾ? ಅರ್ಧ ಗಂಟೆಯಿಂದ ನಿಮಗೆ ಟ್ರೈ ಮಾಡ್ತಲೇ ಇದೀನಿ. ನೀವು ರಿಸೀವ್‌ ಮಾಡ್ತಾನೆ ಇಲ್ಲವಲ್ಲ ಸಾರ್‌? ನನ್ನೆಸರು ನಾರಾಯಣ ಅಂತ. ಊರಲ್ಲಿ ನಿಮ್ಮನೆ ಎದುರು ಮನೆಯಲ್ಲಿ ಬಾಡಿಗೆ ಇದ್ದೀನಿ. ನಿಮ್ಮ ತಂದೆಯವರನ್ನು ನಿನ್ನೆ ಸಂಜೆ ದಾವಣಗೆರೆಯ ಧನಂಜಯ ನರ್ಸಿಂಗ್‌ ಹೋಮ್‌ಗೆ ಸೇರಿಸಿದ್ವಿ. ಗಾಬರಿಯಾಗುವಂಥದ್ದೇನೂ ಇಲ್ಲ. ಬಿಪಿ ಸ್ವಲ್ಪ ಲೋ ಆಗಿತ್ತು. ಈಗ ನಾರ್ಮಲ್‌ಗೆ ಬಂದಿದೆ. ಇವತ್ತು ಸಂಜೆ ಅಥವಾ ನಾಳೆ ಬೆಳಿಗ್ಗೆ ಡಿಸ್ಚಾರ್ಜ್‌ ಮಾಡಿಸಿಕೊಂಡು ಊರಿಗೆ ಕರಕಂಡ್‌ ಹೋಗ್ತೀವಿ. ಈ ವಿಷಯವನ್ನು ನಿಮಗೆ ತಿಳಿಸು ಅಂತ ನಿಮ್ಮ ತಾಯಿ ಹೇಳಿದರು. ಸಾಧ್ಯವಾದರೆ ಬರೋ ಭಾನುವಾರ ನೀವು ಊರಿಗೆ ಬಂದು ಹೋಗಬೇಕಂತೆ. ನಿಮ್ಮ ತಾಯಿಯವರು ಆಸ್ಪತ್ರೆಗೆ ಹೊರಡೋ ಗಡಿಬಿಡಿಯಲ್ಲಿ ಫೋನ್‌ ತರೋದು ಮರೆತಿದ್ದರು. ನನ್ನತ್ರ ನಿಮ್ಮ ನಂಬರ್‌ ಇರಲಿಲ್ಲ. ಹೇಗೋ ಪತ್ತೆ ಮಾಡಿ ಫೋನ್‌ ಮಾಡ್ತಾಇದ್ದೀನಿ. ತಾಯಿಯವರು ವಾರ್ಡ್‌ನಲ್ಲಿ ನಿಮ್ಮ ತಂದೆ ಜತೆ ಇದ್ದಾರೆ. ಆಸ್ಪತ್ರೆ ಒಳಗೆ ಫೋನ್‌ ಮಾಡೋಹಾಗಿಲ್ಲ. ಅದಕ್ಕೆ ಹೊರಕ್ಕೆ ಬಂದು ಮಾತಾಡ್ತಿದ್ದೀನಿ ಎಂದು ವರದಿ ಒಪ್ಪಿಸಿದ. 

ನಾರಾಯಣ ಅವರೇ, ನಾನೀಗ ಮುಂಬೈಗೆ ಆಫೀಸ್‌ ಕೆಲಸದ ಮೇಲೆ ಬಂದಿದ್ದೀನಿ. ನಿಮ್ಮ ಫೋನ್‌ ಬಂದಾಗ ನಾನು ಮೀಟಿಂಗ್‌ನಲ್ಲಿದ್ದೆ. ಫೋನ್‌ ಸೈಲೆಂಟ್‌ ಮೂಡಲ್ಲಿತ್ತು. ನಾಳೆ ಬೆಳಿಗ್ಗೆ ಅಮ್ಮನಿಗೆ ಫೋನ್‌ ಮಾಡ್ತೀನಿ ಅಂತ ಹೇಳಿ. ನಿಮ್ಮ ನಂಬರ್‌ ಸೇವ್‌ ಮಾಡಿಕೊಳ್ತೀನಿ ಏನಾದರೂ ಅರ್ಜೆಂಟ್‌ ಇದ್ದರೆ ಫೋನ್‌ ಮಾಡಿ ಪ್ಲೀಸ್‌ ಎಂದು ಹೇಳಿ ಮಾತು ಮುಗಿಸಿದ.

ಕಳೆದ ವಾರ ಅಮ್ಮ ಫೋನ್‌ ಮಾಡಿದ್ದಾಗ ನಿಮ್ಮಪ್ಪ ಗದುಗಿನ ಭಾರತ ಓದೋಕೆ ಶುರು ಮಾಡಿದ್ದಾರೆ! ಈಚೆಗೆ ಅವರ ನಡವಳಿಕೆಯಲ್ಲಿ ಬದಲಾವಣೆ ಆಗಿದೆ. ಅಸಂಬದ್ಧವಾಗಿ ಒಬ್ಬೊಬ್ಬರೇ ಏನೇನೋ ಮಾತಾಡಿಕೊಳ್ಳೋದು ಜಾಸ್ತಿ ಆಗಿದೆ ಎಂದು ಹೇಳಿದಾಗ ಪುರುಷೋತ್ತಮನಿಗೆ ತಮಾಷೆ ಅನ್ನಿಸಿತ್ತು. 

‘ಪದೇ ಪದೇ ಬಚ್ಚಲಿಗೆ ಹೋಗಿ ಕೈತೊಳೆದುಕೊಂಡು ಬರ್ತಾರೆ. ಟವೆಲ್ಲಿನಿಂದ ಒರೆಸಿಕೊಂಡು ಅಂಗೈಗಳನ್ನು ಮೂಸಿ ನೋಡ್ತಾ, ರಕ್ತದ ವಾಸನೆ ಹೋಗೇ ಇಲ್ಲ ಅಂತಾರೆ! ಅಡಿಗೆ ಮನೆಗೆ ಹೋಗಿ ತಂಗಳು ಸಾರೋ, ಹುಳಿಮಜ್ಜಿಗೇನೋ ಇದ್ದರೆ ತಂದು ಹಾಕು ಆಗಲಾದರೂ ಈ ವಾಸನೆ ಹೋಗಬಹುದು ಅಂತಾರೆ. ಅವರ ಕೈಗೆ ರಕ್ತದ ವಾಸನೆ ಎಲ್ಲಿಂದ ಬರುತ್ತೆ? ನಂಗೆ ಭಯವಾಗ್ತಿದೆ ಪುರುಷಿ ಎಂದು ಅಮ್ಮ ಹೇಳಿದ್ದೂ ನೆನಪಾಯಿತು.

‘ಐದಾರು ದಿನಗಳ ಹಿಂದೆ ನಿಮ್ಮಪ್ಪ ಬೆಳಿಗ್ಗೆಯಿಂದ ಮನೆ ಜಗುಲಿ ಮೇಲೆ ಕೂತಿದ್ದರು. ಹನ್ನೆರಡು ಗಂಟೆ ಹೊತ್ತಲ್ಲಿ ನಾನು ಹೋಗಿ, ಎದ್ದು ಬಂದು ಸ್ನಾನ ಮಾಡಿ. ತಟ್ಟೆ ಹಾಕ್ತೀನಿ..’ ಅಂದೆ. ಅದಕ್ಕೆ ನಿಮ್ಮಪ್ಪ ಪರಾಶರ ಮುನಿಗಳು ಬರ್ತೀನಿ ಅಂದಿದ್ದರು. ಹನ್ನೆರಡಾದರೂ ಆಸಾಮಿ ಪತ್ತೆ ಇಲ್ಲ. ಏನು ತೊಂದರೆಯೋ? ಕಾರು ಕೆಟ್ಟಿರಬಹುದು. ಇನ್ನೂ ಯಾಕೆ ಬರಲಿಲ್ಲ ಎಂದು ಕೇಳೋಣ ಅಂತ ಫೋನ್‌ ಮಾಡಿದರೆ ಆಸಾಮಿ ಔಟಾಫ್‌ ಕವರೇಜ್‌ ಏರಿಯಾದಲ್ಲಿದ್ದಾರೆ ಅಂದರು.

ಪರಾಶರ ಮುನಿ ಯಾರು? ಅವರೇಕೆ ಬರ್ತಿದ್ದಾರೆ ಎಂದು ಕೇಳಿದೆ. ನಾಡಿದ್ದು ಅಮ್ಮನ ತಿಥಿ ಅಲ್ಲವೇನೆ? ನೀವೇ ನಿಂತು ತಿಥಿ ಮಾಡಿಸಬೇಕು ಅಂತ ಫೋನ್‌ ಮಾಡಿದ್ದೆ. ನೀವೇನೂ ಯೋಚನೆ ಮಾಡಬೇಡಿ. ನಾನೇ ಎಲ್ಲಾ ಕಾರ್ಯಗಳನ್ನೂ ಸಾಂಗೋಪಾಂಗವಾಗಿ ಮಾಡಿಸ್ತೀನಿ ಅಂತ ಅವರು ಹೇಳಿದ್ದರು ಅಂದರು.

‘ನಾವು ಪಿತೃಗಳ ಅಪರಕರ್ಮಗಳನ್ನು ಸರಿಯಾಗಿ ಮಾಡಿಲ್ಲವಂತೆ!. ವರ್ಷಕ್ಕೊಮ್ಮೆಯಾದರೂ ಹಿರಿಯರಿಗೆ ಒಂದು ತುತ್ತು ಅನ್ನವನ್ನೂ ಹಾಕ್ತ ಇಲ್ಲವಂತೆ! ನಿಮ್ಮ ಹಿರಿಯರ ಆತ್ಮಗಳು ಅತೃಪ್ತಗೊಂಡಿವೆ. ಮೊದಲು ಅವನ್ನು ತೃಪ್ತಿಪಡಿಸಿ ಅಂತ ಮುನಿಗಳು ಹೇಳಿದರು. ಹಿರಿಯರ ಆತ್ಮಗಳನ್ನು ತೃಪ್ತಿಪಡಿಸೋದು ಹೇಗೆ ಅಂತ ಕೇಳಿದ್ದಕ್ಕೆ ಸ್ವಲ್ಪ ಜನರಿಗೆ ಅನ್ನದಾನ ಮಾಡಿ. ಒಂದು ಕರೆಯೋ ಹಸುವನ್ನು ಯಾರಿಗಾದರೂ ದಾನ ಕೊಡಿ ಅಂದರು. ಹೊಸಳ್ಳಿ ರಂಗಪ್ಪನಿಗೆ ಪೋನ್‌ ಮಾಡಿ ಹೇಳಿದ್ದೀನಿ, ಒಂದು ಕರೆಯೋ ಹಸು ಇದ್ದರೆ ನೋಡು ಅಂತ. ತಿಥಿ ಹೊತ್ತಿಗೆ ಹಸು, ಕರೂನ ತಂದು ನಿಮ್ಮನೆ ಮುಂದೆ ಕಟ್ಟಾಕ್ತೀನಿ ಅಂದಿದ್ದಾನೆ. ಅದನ್ನು ಅಶ್ವತ್ಥಾಮಾಚಾರ್ಯರಿಗೆ  ಕೊಡಬೇಕು ಅಂತ ತೀರ್ಮಾನ ಮಾಡಿದ್ದೀನಿ...’ ಅಂದರು. 

ತಿಥಿಗೆ ಏನು ಅಡಿಗೆ ಮಾಡಬೇಕು ಅನ್ನೋದನ್ನು ಪರಾಶರರು ಬಂದ ಮೇಲೆ ಹೇಳ್ತಾರೆ. ತಿಥಿ ಇರೋದು ನಾಡಿದ್ದು. ಹನ್ನೆರಡು ಗಂಟೆ ಹೊತ್ತಿಗೆ ಅಡುಗೆ ರೆಡಿಯಾದರೆ ಸಾಕು. ನೂರು ಜನಕ್ಕೆ ಊಟಕ್ಕೆ ಹೇಳಿದ್ದೀನಿ. ಅಷ್ಟು ಜನರಿಗೆ ಅಡುಗೆ ಮಾಡೋದು ನಿನ್ನೊಬ್ಬಳಿಂದ ಆಗಲ್ಲ. ನಮ್ಮ ಆಪರೇಟರ್‌ ನಾರಾಯಣನಿಗೆ ಹೇಳಿದ್ದೀನಿ. ಅವನು ಮೂರು ಸಾವಿರ ಕೇಳಿದ. ಕೊನೆಗೆ ಎರಡೂವರೆ ಸಾವಿರಕ್ಕೆ ಒಪ್ಪಿಸಿದ್ದೀನಿ. ಬ್ರಾಹ್ಮಣಾರ್ಥಕ್ಕೆ ಕೃಪಾಚಾರ್ಯರು ಬರ್ತಾರೆ ಅಂದರು. ನಿಮ್ಮಪ್ಪ ಎಂದೂ ಹೀಗೆಲ್ಲ ಮಾತಾಡಿದವರಲ್ಲ. ನಮ್ಮನೆಯಲ್ಲಿ ಯಾರ ತಿಥಿಗಳನ್ನೂ ಮಾಡಲ್ಲ ಅನ್ನೋದು ನಿಂಗೂ ಗೊತ್ತಲ್ಲ. ಅವೆಲ್ಲ ಕರ್ಮಠರ ಪದ್ಧತಿಗಳು. ಅಪ್ಪ ತೀರಿಕೊಂಡಾಗ ನಾವೆಲ್ಲ ಸಣ್ಣವರು. ಅಮ್ಮ ನಮ್ಮ ಕೈಲಿ ತಿಥಿ ಮಾಡಿಸಿದ ನೆನಪಿಲ್ಲ. ನಾವು ಇಬ್ಬರು ಗಂಡು ಮಕ್ಕಳಿದ್ದರೂ ಅಮ್ಮ ಕೊನೆಗಾಲದಲ್ಲಿ ಮಗಳ ಮನೆಯಲ್ಲಿದ್ದರು. ಈಗ ಅಪ್ಪ, ಅಮ್ಮನ ತಿಥಿ ಮಾಡಿದರೆ ಏನು ಪ್ರಯೋಜನ ಅಂತ ಹೇಳ್ತಿದ್ದವರು, ಅಮ್ಮನ ತಿಥಿ ಮಾಡ್ತೀನಿ ಅಂತಿದ್ದಾರೆ! 

‘ಮನುಷ್ಯ ಸತ್ತ ಮೇಲೆ ಏನಾಗ್ತಾನೆ ಅನ್ನೋದು ವಿಜ್ಞಾನಿಗಳಿಗೂ ಸರಿಯಾಗಿ ಗೊತ್ತಿಲ್ಲ. ಇನ್ನು ಈ ತಿಥಿ, ಗೋದಾನ ಇತ್ಯಾದಿಗಳಿಗೆ ಅರ್ಥವಿಲ್ಲ ಅನ್ತಿದ್ದವರು. ಅನ್ನದಾನ ಮಾಡ್ತೀನಿ, ಗೋದಾನ ಕೊಡ್ತೀನಿ ಅಂತಿದ್ದಾರೆ. ನಂಗೆ ಭಯವಾಗ್ತಿದೆ ಪುರುಷಿ, ನಿಮ್ಮಪ್ಪನಿಗೆ ಏನೋ ಆಗಿದೆ. ಯಾರಾದರೂ ಮಾಟ ಮಾಡಿಸಿರಬಹುದು ಎಂದು ಅಮ್ಮ ಹೇಳಿದ್ದು ನೆನಪಾಯಿತು.

ಮೂರು ತಿಂಗಳ ಹಿಂದೆ ಆಪರೇಟರ್‌ ನಾರಾಯಣನ ಹೆಂಡತಿಯನ್ನು ಜತೆಯಲ್ಲಿ ಕರಕೊಂಡು ನಿಮ್ಮಪ್ಪನ್ನ ದುರ್ಗದಲ್ಲಿ ಶೆಟ್ಟಿ ಡಾಕ್ಟರಿಗೆ ತೋರಿಸಿಕೊಂಡು ಬಂದೆ. ಡಾಕ್ಟರು ನಿಮ್ಮಪ್ಪನ ಜತೆ ಒಂದು ಗಂಟೆ ಅದೂ,ಇದೂ ಮಾತನಾಡಿ ಕೊನೆಗೆ ಏನೂ ಸಮಸ್ಯೆ ಇಲ್ಲ, ವಯಸ್ಸಾಗಿದೆಯಲ್ಲ. ನೆನಪುಗಳು ಕೈಕೊಡ್ತಿರಬಹುದು. ನಿದ್ದೆ ಮಾತ್ರೆ ನುಂಗಿದ ಮೇಲೂ ಸರಿಯಾಗಿ ನಿದ್ದೆ ಬರದಿದ್ದರೆ ಕೆಲವರಿಗೆ ಹೀಗಾಗುತ್ತೆ. ನಿದ್ದೆ ಮಾತ್ರೆ ಅವರ ಕೈಗೆ ಸಿಗದಂತೆ ನೋಡಿಕೊಳ್ಳಿ ಅಂದಿದ್ದರು. 

‘ಎಂದೋ ನಡೆದ ಸಂಗತಿಗಳನ್ನು ನೆನಪು ಮಾಡಿಕೊಂಡು ಎದುರಿಗೆ ಯಾರೋ ಕೂತು ಕೇಳ್ತಿದ್ದಾರೆ ಅಂದುಕೊಂಡು ಹೇಳೋ ಗೀಳು ಇದು. ಹತ್ತು ಲಕ್ಷ ಜನರಲ್ಲಿ ಒಬ್ಬರಿಗೆ ಇಂಥ ಲಕ್ಷಣಗಳು ಕಾಣಿಸಿಕೊಳ್ಳುತ್ತೆ. ಕೆಲವರಿಗೆ ಹಿಂದೆ ಯಾವಾಗಲೋ ತಪ್ಪು ಮಾಡಿದ್ದೀನಿ ಅಂತಲೋ ಅಥವಾ ನನ್ನಿಂದ ಯಾರಿಗೋ ತೊಂದರೆ ಆಗಿದೆ ಅನ್ನೋ ಭ್ರಮೆಯಲ್ಲಿ ಅಸಹಜವಾಗಿ ಮಾತಾಡಿಕೊಳ್ತಾರಂತೆ. ಯಜಮಾನರನ್ನು ಒಬ್ಬರೇ ಇರೋಕೆ ಬಿಡಬೇಡಿ. ಏನಾದರೂ ನೆಪ ಮಾಡಿಕೊಂಡು ಆಗಾಗ ಮಾತಾಡಿಸ್ತಾ ಇರಿ. ನೀವು ಮನೆಯಲ್ಲೇ ಇದ್ದೀರಿ ಅನ್ನೋದನ್ನು ಅವರಿಗೆ ನೆನಪು ಮಾಡ್ತಾ ಇರಿ. ಒಂಟಿಯಾಗಿರಲು ಬಿಟ್ಟರೆ ಏನೇನೋ ಯೋಚನೆಗಳು ಬರ್ತವೆ. ಆಗ ಮನಸ್ಸಿನಲ್ಲಿರೋದನ್ನೆಲ್ಲ ಗಟ್ಟಿಯಾಗಿ ಹೇಳಿ ಕೊಳ್ತಾರೆ. ಕೇಳಿಸಿಕೊಂಡವರಿಗೆ ವಿಚಿತ್ರ ಅನ್ನಿಸಬಹುದು. ಹುಚ್ಚು ಹಿಡಿದಿದೆ ಅನ್ನಿಸಬಹುದು ಎಂದು ಹೇಳಿ ಎರಡು ನಮೂನೆ ಮಾತ್ರೆ ಬರೆದು ಕೊಟ್ಟಿದ್ದರು. ಮಾತ್ರೆ ನುಂಗಿಸಿದ ಮೇಲೆ ಸರಿಹೋಗಿದ್ದರು ಎಂದು ಅಮ್ಮ ಹೇಳಿದ್ದು  ನೆನಪಾಯಿತು.

*

ಮಾರನೇ ದಿನ ಬೆಳಂಬೆಳಿಗ್ಗೆ ಮತ್ತೆ ಅಮ್ಮನ ಫೋನ್‌ ಬಂತು. ‘ಪುರುಷಿ, ನಿನ್ನೆ ಮಧ್ಯಾಹ್ನ ನಿಮ್ಮ ಚಿಕ್ಕಪ್ಪನ ಮಕ್ಕಳು ಗುರು, ಅವನಣ್ಣ ರಮೇಶ ಬಂದಿದ್ದರು! ಹೈವೇ ಪಕ್ಕದಲ್ಲಿರೊ ಜಮೀನು ಪಿತ್ರಾರ್ಜಿತ ಆಸ್ತಿ. ಅದರಲ್ಲಿ ನಮಗೂ ಪಾಲು ಬರಬೇಕು. ನೀವು ಅದನ್ನು ಮಾರಾಟ ಮಾಡಬೇಕು ಅಂತ ಪ್ಲಾನು ಮಾಡ್ತಿದ್ದೀರಂತೆ ಅಂತ ಕೂಗಾಡಿ ನಿಮ್ಮಪ್ಪನ್ನ ದಬಾಯಿಸಿದರು. ಅವರ ವಯಸ್ಸಿಗೂ ಬೆಲೆ ಕೊಡದೆ ಗುರು ಬಾಯಿಗೆ ಬಂದಂಗೆ ಮಾತಾಡಿದ. ನಿಮ್ಮಪ್ಪ ಏನೂ ಹೇಳದೆ ಪೆಚ್ಚಾಗಿ ಪಿಳಿಪಿಳಿ ಕಣ್ಣು ಬಿಡ್ತ ಕೂತಿದ್ದರು!. ಹೋಗುವಾಗ ಗುರು, ಜಮೀನು ಮಾರಿದರೆ ನಾನು ಸುಮ್ಮನಿರಲ್ಲ. ನಿಮ್ಮ ತೋಟಕ್ಕೆ ಬಂದು ಕೂತ್ಕೋತೀನಿ ಅದೆಂಗೆ ನನ್ನ ಹೊರ ಹಾಕ್ತೀರೋ ನೋಡ್ತೀನಿ. ನಾನು ಮೂರೂ ಬಿಟ್ಟು ನಿಂತಿದ್ದೀನಿ. ಯಾರಿಗೂ ಕೇರ್‌ ಮಾಡಲ್ಲ ಅಂತ ನನ್ನ ಕಡೆ ನೋಡ್ತ ಹೇಳಿ ಹೋದ...’

ಇಬ್ಬರೂ ಹೋದಮೇಲೆ ನಿಮ್ಮಪ್ಪ, ಈಗ ಬಂದಿದ್ದನಲ್ಲ ಅವನು ಪಕ್ಕದ ದೇಶದ ರಾಜಕುಮಾರ. ಅವನ ಜತೆ ಬಂದವನು ಅವನ ಸೇನಾಧಿಪತಿ. ನನ್ನ ಪಟ್ಟದ ಕುದುರೆ ಕಟ್ಟಿ ಹಾಕಿ ಯುದ್ಧಕ್ಕೆ ಆಮಂತ್ರಣ ಕೊಟ್ಟು ಹೋಗಿದ್ದಾನೆ! ಅವನು ಯಾರಾದರೆ ನನಗೇನು,  ಯುದ್ಧ ಮಾಡಿ ಅವರ ತಲೆ ಕತ್ತರಿಸಿ ಹಾಕಿ ಕುದುರೆಯನ್ನು ಬಿಡಿಸಿಕೊಂಡು ಬರ್ತೀನಿ ಅಂದರು.

ಗುರು ಊರಿಗೆ ಬಂದು ಆರು ತಿಂಗಳಾಗಿವೆ. ಅವನ ಜತೆ ಒಬ್ಬ ಹೆಂಗಸೂ ಇದ್ದಾಳಂತೆ! ಅಂದಾನಿ ಗೌಡರ ಮನೆಯನ್ನು ಬಾಡಿಗೆಗೆ ತಗಂಡು ಅಲ್ಲಿದ್ದಾನಂತೆ. ನಿಮ್ಮಪ್ಪನ್ನ ಆಸ್ಪತ್ರೆಗೆ ಸೇರಿಸೋದು ನಾಕು ದಿನ ತಡ ಆದರೂ ಪರವಾಗಿಲ್ಲ. ಮೊದಲು ತೋಟ, ಜಮೀನು ಉಳಿಸಿಕೊಳ್ಳೋ ಯೋಚನೆ ಮಾಡು. ಆಫೀಸಿನ ಕೆಲಸ ಇದ್ದೇ ಇರುತ್ತೆ. ಒಂದ್ಸಲ ಊರಿಗೆ ಬಂದು ಹೋಗು. ಮುಕುಂದನಿಗೆ ಫೋನ್‌ ಮಾಡಿ ಬರೋಕೆ ಹೇಳು ಅನ್ನುವಾಗ ಅಮ್ಮನ ಧ್ವನಿಯಲ್ಲಿ ಭಯ ಇತ್ತು.                                               

ಮರುದಿನ ಪುರುಷಿ, ಮುಕುಂದನಿಗೆ ಫೋನ್‌ ಮಾಡಿ ಅಪ್ಪನ ಅನಾರೋಗ್ಯ, ಚಿಕ್ಕಪ್ಪನ ಮಕ್ಕಳು ಅಪ್ಪನ ಜತೆ ಜಗಳ ಆಡಿದ್ದನ್ನು ಸಾದ್ಯಂತ ವಿವರಿಸಿ ಅಪ್ಪನಿಗೆ ವಿಸ್ಮೃತಿ ಶುರುವಾಗಿದೆ. ಈಚೆಗೆ ಒಬ್ಬರೇ ಮಾತಾಡಿಕೊಳ್ತಾರಂತೆ. ಅಮ್ಮನಿಗೆ ಅಪ್ಪನ ಆರೋಗ್ಯಕ್ಕಿಂತ ಆಸ್ತಿ ಕೈಬಿಟ್ಟುಹೋಗುತ್ತೆ ಅನ್ನೋ ಚಿಂತೆ. ಈಗಲೂ ನಾವು ಸುಮ್ಮನಿದ್ದರೆ ಪರಿಸ್ಥಿತಿ ಕೈಮೀರಿ ಹೋಗುತ್ತೆ. ತೋಟ, ಹೈವೇ ಜಮೀನು, ಮನೆ ಎಲ್ಲವನ್ನೂ ಮಾರಾಟ ಮಾಡೋ ಬಗ್ಗೆ ಅಪ್ಪನ ಜತೆ ಮಾತಾಡಬೇಕು. ಈಗಲೇ ಮಾರಬೇಕಿಲ್ಲ. ಅಮ್ಮನ ಹೆಸರಿಗೆ ಪವರ್‌ ಆಫ್‌ ಅಟಾರ್ನಿ ಮಾಡಿಸಿ, ಖರೀದಿದಾರರು ಸಿಕ್ಕ ಮೇಲೆ ಮಾರಬಹುದು. ನೀನು ಒಂದ್ಸಲ ಬಂದು ಹೋಗು. ನೀನು ವಾಪಸ್‌  ಇಂಡಿಯಾಕ್ಕೆ ಬರೋ ಚಾನ್ಸು ಕಡಿಮೆ. ನಂಗೂ ಊರಿಗೆ ಹೋಗೋಕೆ ಇಷ್ಟವಿಲ್ಲ. ಜಮೀನು, ತೋಟ, ಮನೆ ಇಟ್ಕಂಡು ಏನು ಮಾಡೋದು? ಮಾರಾಟ ಮಾಡಿದ ಮೇಲೆ ಅಪ್ಪ ಅಮ್ಮನ್ನ ನನ್ನ ಜತೆ ಕರೆದುಕೊಂಡು ಬರ್ತೀನಿ. ಅವರನ್ನು ನೋಡಿಕೊಳ್ಳೋ ಜವಾಬ್ದಾರಿ ನಂದು ಎಂದು ಹೇಳಿದ. 

‘ಸದ್ಯಕ್ಕೆ ನಾನು ಊರಿಗೆ ಬರೋ ಸ್ಥಿತಿಯಲ್ಲಿಲ್ಲ! ನನ್ನ ದೊಡ್ಡ ಮಗಳು ಸತ್ಯ ಮನೆ ಬಿಟ್ಟು ಹೋಗಿ ಯಾವನೋ ಟರ್ಕಿಯ ಹುಡುಗನ ಜತೆ ಲಿವಿಂಗ್‌ ರಿಲೇಷನ್‌ನಲ್ಲಿದ್ದಾಳೆ...’ ಎಂದು ತಡವರಿಸುತ್ತ  ಹೇಳಿದ!.

ಐದಾರು ಸೆಕೆಂಡು ಸುಮ್ಮನಿದ್ದು, ಅವಳು ಹೋಗಿ ಮೂರು ತಿಂಗಳಾದ್ವು. ಅವಳಿಗೆ ಮದುವೆ ಮಾಡಬೇಕು ಅಂತ ಇಲ್ಲೇ ಇರೋ ನಂಜನಗೂಡು ಕಡೆಯ ಹುಡುಗನನ್ನು ನೋಡಿದ್ದೆ. ಹುಡುಗ ನಮ್ಮವನೇ. ವರ್ಲ್ಡ್‌ ಬ್ಯಾಂಕ್‌ನಲ್ಲಿ ಟಾಪ್‌ ಟೆನ್‌ ಪೊಸಿಷನ್‌ನಲ್ಲಿದ್ದಾನೆ. ಅವನ ಅಪ್ಪ, ಅಮ್ಮ ಇಬ್ಬರೂ ಡಾಕ್ಟರು, ಇಲ್ಲೇ ಇದ್ದಾರೆ. ತುಂಬಾ ಒಳ್ಳೆ ಜನ. ಸತ್ಯಳಿಗೆ ಇಪ್ಪತ್ತೆರಡು ತುಂಬಿದ ಮೇಲೆ ಮದುವೆ ಮಾಡೋದು ಅಂತ ಮಾತಾಗಿತ್ತು. ನಮ್ಮ ನೆಂಟರೆಲ್ಲ  ಕರ್ನಾಟಕದಲ್ಲೇ ಇದ್ದಾರೆ. ಮದುವೆಯನ್ನು ನಿಮ್ಮ ಊರಲ್ಲೇ ಮಾಡಿಕೊಡಿ ಅಂದಿದ್ದರು. 

ಸತ್ಯಳ ಜತೆ ಇರೋ ಹುಡುಗನ  ಹೆಸರು ಸ್ಯಾಮ್‌. ನೋಡೋಕೆ ಚೆನ್ನಾಗಿದ್ದಾನೆ. ಅವನಪ್ಪ ಮಲಯಾಳಿ ಮುಸ್ಲಿಂ. ಅಮ್ಮ ಜರ್ಮನಿಯವಳಂತೆ. ಸತ್ಯ ನಮ್ಮ ಕೈಬಿಟ್ಟು ಹೋದಳು ಅನ್ನಿಸ್ತಿದೆ. ಈಗ ಏನು ಮಾಡಬೇಕು ಅನ್ನೋದು ಗೊತ್ತಾಗ್ತ ಇಲ್ಲ. ಒಂದೊಂದ್ಸಲ ಊರಿಗೆ ಬಂದು ಅಲ್ಲೇ ಇದ್ದು ಬಿಡಬೇಕು ಅನ್ಸುತ್ತೆ. ಆದರೆ ಅದು ಸಾಧ್ಯವಿಲ್ಲ. ಎರಡನೆಯವಳ ಓದು ಮುಗಿದಿಲ್ಲ. ಅವಳು ಇಲ್ಲೇ ಹುಟ್ಟಿ ಬೆಳೆದವಳು. ಅವಳು ನಮ್ಮ ದೇಶಕ್ಕೆ ಹೊಂದಿಕೊಳ್ಳೋದು ಕಷ್ಟ. ನಾನು ಇಕ್ಕಟ್ಟಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದೀನಿ. ನೀನೇ ಏನಾದರೂ ಮಾಡು. ನಂಗೆ ಈ ಆಸ್ತಿ,ಪಾಸ್ತಿ ಏನೂ ಬೇಡ ಅಂತ ಬರಕೊಡ್ತೀನಿ. ನಿಂಗೆ ಏನು ಮಾಡಬೇಕು ಅನ್ಸುತ್ತೋ ಹಾಗೇ ಮಾಡು ಎಂದು ಹೇಳುವಾಗ ಅವನ ಧ್ವನಿಯಲ್ಲಿ ಅಸಹಾಯಕತೆ ಇತ್ತು. ಮನೆಯ ಸಮಸ್ಯೆ ಜಟಿಲವಾಗ್ತಿವೆ. ಅವುಗಳಿಂದ ಹೊರಬರುವ ದಾರಿ ಕಾಣುತ್ತಿಲ್ಲ ಅನ್ನಿಸಿತು ಪುರುಷಿಗೆ.

ಅಪ್ಪನಿಗೆ ಬುದ್ದಿ ಕೈಕೊಡ್ತಿದೆ. ಅಣ್ಣನಿಗೆ ಮಗಳ ಜೀವನ ಅತಂತ್ರವಾಗುತ್ತೆ ಅನ್ನೋ ಭಯ. ಹೆಂಡ್ತಿ ಬಿಟ್ಟಿರುವ ನನಗೆ ಮುಂದಿನ ಜೀವನದ ಬಗ್ಗೆ ಸ್ಪಷ್ಟತೆ ಇಲ್ಲ. ರೇಖಾಗೆ ಯುಜಿಸಿ ಸಂಬಳದ ಕೆಲ್ಸ ಇದೆ. ಅವಳು ಯಾರನ್ನಾದರೂ ಮದುವೆ ಆಗಬಹುದು. ಆ ಮೇಲೆ ಆರ್ಯನ ಗತಿ ಏನು? ಅಪ್ಪನ ಆರೋಗ್ಯಕ್ಕಿಂತ ಆಸ್ತಿ ಕೈಬಿಟ್ಟು ಹೋಗುತ್ತೆ ಅನ್ನೋ ಚಿಂತೆ ಅಮ್ಮನಿಗೆ.  ಅಪ್ಪನ ಸಮಸ್ಯೆ ಏನು ಅನ್ನೋದು ಅರ್ಥವಾಗ್ತಿಲ್ಲ. ಅವರಿಗೆ ಅಲ್ಜಮೈರ್‌ ಶುರು ಆಗಿರಬಹುದು ಅನ್ನಿಸಿತು. ಸಮಸ್ಯೆಗಳು ಒಂದಕ್ಕೊಂದು ಬಿಡಿಸಲಾಗದಷ್ಟು ಸಿಕ್ಕುಗಟ್ಟಿವೆ ಅನ್ನಿಸಿತು.  

*     

ಐದಾರು ದಿನಗಳು ಕಳೆದ ಮೇಲೆ ಅಮ್ಮನ ಫೋನ್‌ ಬಂತು. ನಿನ್ನೆ ಸಂಜೆ ನಿಮ್ಮಪ್ಪನಿಗೆ ಮತ್ತೆ ಬಿಪಿ ಲೋ ಆಗಿತ್ತು. ದಾವಣಗೆರೆ ಡಾಕ್ಟರಿಗೆ ಫೋನ್‌ ಮಾಡಿ ಆಸ್ಪತ್ರೆಗೆ ಕರಕೊಂಡು ಬರಲೇ ಅಂತ ಕೇಳಿದ್ದಕ್ಕೆ ಬೇಡ, ಮಾತ್ರೆ ಕೊಡಿ ಸಾಕು ಅಂದರು. ಮಧ್ಯ ರಾತ್ರಿ ತನಕ ನಿಮ್ಮಪ್ಪ ಏನೇನೋ ಮಾತಾಡಿಕೊಳ್ತಿದ್ದರು. ಏನು ಹೇಳ್ತಿದ್ದಾರೆ ಅನ್ನೋದು ನಂಗೆ ಗೊತ್ತಾಗಲಿಲ್ಲ. ಬೆಳಿಗ್ಗೆ ದುರ್ಗದ ಶೆಟ್ಟಿ ಡಾಕ್ಟರಿಗೆ ಫೋನ್‌ ಮಾಡಿ ಹಿಂಗಿಂಗೆ ಅಂತ ಹೇಳಿದೆ. ಬೆಂಗಳೂರಲ್ಲಿ ಯಾರಾದರೂ ದೊಡ್ಡ ಡಾಕ್ಟರಿಗೆ ತೋರಿಸಿ ಅಂದರು. ನಂಗೇನೂ ತೋಚ್ತಾ ಇಲ್ಲ. ಐದಾರು ವರ್ಷಗಳ ಹಿಂದೆ ಗುರು, ರಮೇಶ ನಮ್ಮ ಆಸ್ತಿ ನಮಗೆ ಕೊಡಿ ಅಂತ ಕೇಳಲು ಬಂದಿದ್ದರು. ಆಗ ನಿಮ್ಮಪ್ಪ, ಅಪ್ಪಯ್ಯ ಸತ್ತ ಮೇಲೆ ಈ ಮನೆ ನಡೆಸಿದ್ದು ನಾನೇ. ನಿಮ್ಮಪ್ಪನ್ನ ಓದ್ಸಿ, ಕೆಲ್ಸ ಕೊಡ್ಸಿ, ಮದುವೆ ಮಾಡಿದ್ದೂ ನಾನೇ. ಅದೆಲ್ಲ ನಿಮಗೆ ಗೊತ್ತಿಲ್ಲ. ಅಪ್ಪ ಸತ್ತ ಮೇಲೆ ಭಾಗ್ಯನಿಗೆ ಗಂಡು ನೋಡಿ ವರದಕ್ಷಿಣೆ ಕೊಟ್ಟು ನಾನೇ ಮದುವೆ ಮಾಡಿಸಿದೆ. ಅಪ್ಪಯ್ಯನಿಗೆ ಇದ್ದದ್ದು ಹಳ್ಳದ ಪಕ್ಕದ ಮೂರೆಕರೆ ಬೆದ್ದಲು ಹೊಲ ಅಷ್ಟೇ. ಅದನ್ನು ಬೇಕಾದರೆ ನಿಮಗೇ ಕೊಡ್ತೀನಿ...’ ತೋಟ, ಹೈವೇ ಜಮೀನು ನನ್ನ ಸ್ವಯಾರ್ಜಿತ. ಬೇಕಾದರೆ ಕ್ರಯ ಪತ್ರ ತಂದು ತೋರಿಸ್ತೀನಿ ಎಂದು ನಿಮ್ಮಪ್ಪ ದಬಾಯಿಸಿ ಕಳಿಸಿದ್ದರು. ಈಗ ಗುರು, ರಮೇಶ ಇಬ್ಬರೂ ಬದಲಾಗಿದ್ದಾರೆ. ನಮ್ಮ ಆಸ್ತಿಯನ್ನು ನಮ್ಮ ದೊಡ್ಡಪ್ಪ, ಅವರ ಮಕ್ಕಳು ಅನುಭವಿಸ್ತಿದ್ದಾರೆ ಊರ ತುಂಬಾ ಹೇಳಿಕೊಂಡು ಓಡಾಡ್ತಿದ್ದಾರೆ. ಅವರು ಕೋರ್ಟಿಗೆ ಹೋಗೋಕೆ ರೆಡಿ ಆಗ್ತಿದ್ದಾರಂತೆ!. ಊರಿಗೆ ಬಂದು ಹೋಗು ಅಂತ ನಿಂಗೆ ಹೇಳ್ತಾ ಇದ್ದೀನಿ. ಅಪ್ಪ, ಅಮ್ಮನ ಮುಖ ನೋಡಬೇಕು ಅಂತಲೂ ನಿಂಗೆ ಅನ್ನಿಸ್ತಿಲ್ಲ, ನೀನೆಂಥ ಮಗ ಎಂದು ಅಮ್ಮ ಬೇಸರದಲ್ಲಿ ಹೇಳಿ ಫೋನ್‌ ಕಟ್‌ ಮಾಡಿದರು.

*

‘ಸರ್‌, ಯಾರೋ ನಿಮ್ಮನ್ನು ಕೇಳ್ಕಂಡ್‌ ಬಂದಿದ್ದಾರೆ. ನಿಮ್ಮ ಸಂಬಂಧಿಕರಂತೆ. ವಿಸಿಟರ್ಸ್‌ ಕ್ಯಾಬಿನ್‌ನಲ್ಲಿ ಕೂರಿಸಿ ಕಾಫಿ ತರಿಸಿ ಕೊಟ್ಟಿದ್ದೀನಿ. ನೀವು, ಮೀಟಿಂಗ್‌ನಲ್ಲಿದ್ದೀರಿ ಅಂತ ಹೇಳಿದ್ದೀನಿ ಎಂದು ಆಫೀಸ್‌ ಬಾಯ್‌ ಚೇಂಬರಿಗೆ ಬಂದು ಹೇಳಿ ಹೋದ. ಆಫೀಸಿನ ತನಕ ಹುಡುಕಿಕೊಂಡು ಬಂದವರು ಯಾರಿರಬಹುದು ಎಂದು ಪುರುಷೋತ್ತಮ ಯೋಚಿಸಿದ.

ಹತ್ತು ನಿಮಿಷ ಕಳೆದ ಮೇಲೆ ವಿಸಿಟರ್ಸ್‌ ಕ್ಯಾಬಿನ್‌ಗೆ ಹೋಗಿ ನೋಡಿದರೆ ರೇಖಾ ಅಪ್ಪ! ತಲೆ ತಗ್ಗಿಸಿ ಕೂತಿದ್ದರು. ಏನನ್ನೋ ಯೋಚಿಸುತ್ತಿದ್ದಾರೆ. ಎದುರಿಗೆ ಕಪ್‌ನಲ್ಲಿ ಕಾಫಿ ಹಾಗೇ ಇದೆ! ತಲೆ ಎತ್ತಿ ನೋಡಿ ಎದ್ದು ನಿಂತರು. ಸೋತಿದ್ದೇನೆ ಎಂದು ಅವರ ಮುಖ ಹೇಳುತ್ತಿತ್ತು. ನಿಂತವರು ಹಾಗೇ ಕೂತು ತಲೆ ತಗ್ಗಿಸಿದರು. ಏನನ್ನೋ ಹೇಳಬೇಕು ಅಂತ ಬಂದು ಹೇಳಲಾಗದೆ ಚಡಪಡಿಸುತ್ತಿದ್ದಾರೆ ಅನ್ನಿಸಿ ಹೇಳಿ ಅಂಕಲ್‌, ಏನು ವಿಷಯ ಅಂದ.

‘ಸಾರಿ, ಹೀಗಾಗುತ್ತೆ ಅಂತ ಅಂದ್ಕೊಂಡಿರಲಿಲ್ಲ. ಇವತ್ತು ಬೆಳಿಗ್ಗೆ ಆರ್ಯ ತೀರಿಕೊಂಡ. ಬ್ರೈನ್‌ ಫಿವರ್‌ ಆಗಿತ್ತು. ರೇಖಾ ಲಿಟರರಿ ಫೆಸ್ಟಿವಲ್ಲಿಗೆ ಅಂತ ಡೆಲ್ಲಿಗೆ ಹೋಗಿದ್ದಾಳೆ. ಮಗೂನ ನಮ್ಮ ಫ್ಯಾಮಿಲಿ ಡಾಕ್ಟರಿಗೆ ತೋರಿಸಿದ್ದೆ. ವೈರಲ್‌ ಫಿವರ್‌ ಅಷ್ಟೇ, ಗಾಬರಿ ಆಗೋದು ಬೇಡ ಅಂದಿದ್ರು. ರಾತ್ರಿ ಜ್ವರ ಜಾಸ್ತಿ ಆಯ್ತು. ನಮ್ಮನೆ ಹತ್ರ ಇರೋ ಆರ್‌.ಕೆ. ನರ್ಸಿಂಗ್‌ ಹೋಂಗೆ ಸೇರಿಸಿದೆ. ರಾತ್ರಿ ನಾನು, ಅವಳು ಇಬ್ಬರೂ ಆಸ್ಪತ್ರೆಯಲ್ಲೇ ಇದ್ವಿ. ಮಗು ಸಾಯುವಾಗ ಅಪ್ಪ ಅಪ್ಪ ಅಂತ ನಿಮ್ಮನ್ನು ಕೇಳ್ತಿತ್ತು. ರೇಖಾಗೆ ನಿನ್ನೆ ಸಂಜೆಯಿಂದ ಫೋನ್‌ ಮಾಡ್ತಲೇ ಇದ್ದೀನಿ ಅವಳು ಫೋನ್‌ ಆಫ್‌ ಮಾಡಿಕೊಂಡಿದ್ದಾಳೆ!. ಮಗು ಬಾಡಿ ಮನೆಯಲ್ಲಿದೆ. ಫೋನ್‌ ಮಾಡಿ ವಿಷಯ ಹೇಳುವ ಧೈರ್ಯ ಇಲ್ಲದೆ ನಿಮ್ಮನ್ನು ಕರಕಂಡು ಹೋಗೋಣ ಅಂತ ಬಂದೆ. ಸಾರಿ ಪುರುಷೋತ್ತಮ್‌, ನನ್ನನ್ನು ಕ್ಷಮಿಸಿಬಿಡಿ ಎನ್ನುತ್ತ  ಅವನ ಕೈಹಿಡಿದು ಅಳತೊಡಗಿದರು.

ಪುರುಷೋತ್ತಮನಿಗೆ ಕಾಲುಗಳು ಸೋತ ಅನುಭವ ಆಯ್ತು. ನಿಜವಾಗಿಯೂ ಕುಸಿದು ಕುಳಿತ. ಎಚ್ಚರವಾದಾಗ ವಿಸಿಟರ್ಸ್‌ ಕ್ಯಾಬೀನ್‌ನ ಕುರ್ಚಿಯಲ್ಲಿ ಕೂತಿದ್ದೇನೆ ಅನ್ನೋದು ಅರಿವಿಗೆ ಬಂತು. ತನಗೇನಾಗಿದೆ ಅನ್ನೋದು ಅವನಿಗೆ ಗೊತ್ತೇ ಆಗಲಿಲ್ಲ. ತಲೆ ಎತ್ತಿ ನೋಡಿದ. ಎದುರಿಗೆ ಯಾರೋ ಒಬ್ಬರು ತಲೆ ತಗ್ಗಿಸಿ ನಿಂತಿರೋದು ಕಾಣಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.