ADVERTISEMENT

ಕಥೆ: ರಜಾ ದಿನ.. ಡಿ.ಎನ್. ಶ್ರೀನಾಥ್ ಅವರ ಅನುವಾದಿತ ಕಥೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2024, 0:58 IST
Last Updated 15 ಸೆಪ್ಟೆಂಬರ್ 2024, 0:58 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಹಿಂದಿಯಲ್ಲಿ : ಲಕ್ಷ್ಮಿಧರ ಮಾಲವೀಯ ಕನ್ನಡಕ್ಕೆ : ಡಿ.ಎನ್. ಶ್ರೀನಾಥ್

ನಾನು ತಡಬಡಿಸಿ ಎದ್ದು ಕೂತೆ. ಹಳದಿ ಬಿಸಿಲಿನ ಅನಾಥ ತುಂಡೊಂದು ಮುಚ್ಚಿದ ಕಿಟಕಿಯ ಗಾಜಿನಲ್ಲಿ ಬಂದು ಕೂತಿತ್ತು. ಎಂಟೂ ಕಾಲು ಗಂಟೆಯಾಗಿತ್ತು. ಅವಳು ಸರಿಯಾಗಿ ಒಂಬತ್ತು ಗಂಟೆಗೆ ಭೇಟಿಯಾಗುವುದಾಗಿ ಮಾತು ಕೊಟ್ಟು, “ಈ ಬಾರಿ ನಾನು ಸಮಯಕ್ಕೆ ಸರಿಯಾಗಿ ಬರುವೆ” ಎಂದಿದ್ದಳು. ನಾನು ಬೇಗ-ಬೇಗನೆ ಬಟ್ಟೆಯನ್ನು ಬದಲಿಸಿ, ಎರಡು ಕಡೆಯ ಟ್ರೈನ್‌ ಹತ್ತಿಳಿದು ಸುಮಾರು ಒಂಬತ್ತು ಗಂಟೆಗೆ ಅಲ್ಲಿಗೆ ಹೋಗಬಲ್ಲೆನೆ ಎಂದು ಯೋಚಿಸುತ್ತಾ ಮನೆಯಿಂದ ಹೊರಟೆ. ಎಲ್ಲಿಗಾದರೂ ಬೇಗ ಹೋಗಬೇಕೆಂದಾಗ, ಫ್ಲಾಟ್‌ಫಾರ್ಮ್‌ಗೆ ಹೋಗುವುದಕ್ಕೆ ಒಂದೆರಡು ನಿಮಿಷಗಳ ಮೊದಲೇ  ಟ್ರೈನ್‌ ಹೊರಟು ಹೋಗಿರುತ್ತದೆ ಅಥವಾ ಹೊರ ಹೊರಟಾಗ ರಸ್ತೆಯ ಸಿಗ್ನಲ್ ಈ ಮೊದಲೇ ಕೆಂಪು ಬಣ್ಣಕ್ಕೆ ಬಿದ್ದಿರುತ್ತದೆ. ಆದರೆ ಅಂದು ನಾವಿಬ್ಬರು ಭೇಟಿಯಾಗಲು ಹೋಗಬೇಕಿದ್ದ ಆ ಪುಸ್ತಕದ ಅಂಗಡಿಯೆದುರು ಹೋದಾಗ, ಅಂಗಡಿಯ ಬಾಗಿಲುಗಳು ಮುಚ್ಚಿದ್ದವು. ಎದುರಿಗಿದ್ದ ಸ್ಟೇಷನ್ನಿನ ಕಟ್ಟಡದಲ್ಲಿ ಹಾಕಿದ್ದ ಮೂರು-ಆರು-ಒಂಬತ್ತು ಮತ್ತು ಹನ್ನೆರಡು ಗೆರೆಗಳುಳ್ಳ ಗಡಿಯಾರದಲ್ಲಿ ಒಂಬತ್ತು ಗಂಟೆಯಾಗಲು ಹತ್ತು, ಏಳು ಅಥವಾ ಐದು ನಿಮಿಷದ ವ್ಯತ್ಯಾಸವಿತ್ತು. ಅವಳು ಮಾತು ಕೊಟ್ಟಿದ್ದಾಗ್ಯೂ, ನನಗಿಂತ ಬೇಗನೇ ಬರುವುದಿಲ್ಲವೆಂದು ಯೋಚಿಸಿ ನೆಮ್ಮದಿಯಿಂದ ಉಸಿರಾಡಿದೆ. ನಂತರ ನಾನು ಆ ಗಡಿಯಾರವನ್ನು ನೋಡುತ್ತಾ ಮೊದಲ ಬಾರಿಗೆ, ಒಂದು ವೇಳೆ ಒಂಬತ್ತಾಗಲು ಮೂರು ನಿಮಿಷ ಉಳಿದಿದ್ದರೆ ಈ ಗಡಿಯಾರವನ್ನು ನೋಡಿ, ಒಮ್ಮೆಲೆ ಸರಿಯಾದ ಸಮಯವನ್ನು ತಿಳಿಯಲು ಹೇಗೆ ಸಾಧ್ಯವೆಂದು ಆಶ್ಚರ್ಯಪಟ್ಟೆ. ಪುಸ್ತಕದ ಅಂಗಡಿಯ ಪಕ್ಕದಲ್ಲಿದ್ದ ರೆಸ್ಟೋರೆಂಟಿನ ಒಳಭಾಗದ ಪಾರದರ್ಶಕ ಕಪ್ಪುಗಾಜಿನ ಬಾಗಿಲು ತೆರೆದಿರಲಿಲ್ಲ. ಆ ರೆಸ್ಟೋರೆಂಟಿನ ಮತ್ತು ಪುಸ್ತಕದ ಅಂಗಡಿಯ ಗಿರಾಕಿಗಳು ಸಾಮಾನ್ಯವಾಗಿ ಸಮಾನ ಮನಸ್ಕರಾಗಿದ್ದು ಅವರು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಬಂದು ಹೋಗುತ್ತಿದ್ದರು. ಹೀಗಾಗಿ ಆ ರೆಸ್ಟೋರೆಂಟ್ ಸಹ ಪುಸ್ತಕದ ಅಂಗಡಿ ತೆರೆಯುವುದಕ್ಕಿಂತ ಕೆಲವು ನಿಮಿಷಗಳ ನಂತರ ಅಥವಾ ಮೊದಲು ತೆರೆಯುತ್ತಿತ್ತು ಅಥವಾ ಮುಚ್ಚುತ್ತಿತ್ತು. ಗಾಳಿ ತೀವ್ರವಾಗಿದ್ದು, ತಂಪಾಗಿತ್ತು. ಅದು ಅದೇ ಗಲ್ಲಿಯಿಂದ ಬೀಸಿ ಬರುತ್ತಿತ್ತು; ನಾನು ಕೂಡುರಸ್ತೆಯಲ್ಲಿ ನಿಂತಿದ್ದೆ. ಅಲ್ಲಿಂದ ಎರಡು ರಸ್ತೆಗಳನ್ನು ಒಮ್ಮೆಲೆ ನೋಡಬಹುದಿತ್ತು.
 
 ಗಡಿಯಾರದಲ್ಲಿ ಸರಿಯಾಗಿ ಒಂಬತ್ತು ಗಂಟೆಯಾಗಿತ್ತು. ಆದರೆ ಅವಳು ಬರಲಿಲ್ಲ. ನನ್ನ ಮನಸ್ಸು ನನಗೇ ತಿಳಿಯದ ಕಾರಣದಿಂದ ಖುಷಿಗೊಂಡಿತ್ತು. ಹೀಗಾಗಿ ನಾನು ಚಿಂತಿಸಲಿಲ್ಲ. ಹೇಳಿದ ಸಮಯಕ್ಕಿಂತ ಹದಿನೈದು ನಿಮಿಷ ಮುಂದಕ್ಕೆ ಸಾವನ್ನೂ ಕಾಯಬಹುದು, ಇನ್ನು ಅವಳ ವಿಷಯವೇನು!

ADVERTISEMENT

 ಎದುರು ಸಬ್-ವೇ ಮೆಟ್ಟಿಲಿನ ಮೇಲೆ ಗಂಡು-ಹೆಣ್ಣಿನ ತಲೆ, ನಂತರ ಹೆಣ್ಣಿನ ಮುಂಡ ಹಾಗೂ ಇಡೀ ಶರೀರ ಕಂಡು ಬಂದಾಗ, ನಾನು ಅದನ್ನು ದುರುಗುಟ್ಟಿ ನೋಡುತ್ತಾ, ಅವಳಾಗಿದ್ದರೆ ನಾನು ಮೊದಲೇ ಮುಗುಳ್ನಗಬೇಕೆಂದು ಯೋಚಿಸುತ್ತಿದ್ದೆ.

ಗಲ್ಲಿಯ ಒಳಗಿದ್ದ ಕಾಫಿ ಶಾಪ್ ತೆರೆದಿತ್ತು. ಅದರ ಟೈಧಾರಿ ಮ್ಯಾನೇಜರ್ ಹೊರಗೆ ಬಂದು ಧೂಳು ಹಾರಬಾರದೆಂಬ ಉದ್ದೇಶದಿಂದ, ತನ್ನ ಅಂಗಡಿ ಎದುರಿನ ಫುಟ್‌ಪಾತ್‌ನ ಮೇಲೆ ನೀರನ್ನು ಚಿಮುಕಿಸುತ್ತಿದ್ದ. ಬಾಲ್ಯದಲ್ಲಿ ನಾನು ಹಲ್ಲಿಗಳನ್ನು ಓಡಿಸಲು ಅವುಗಳ ಮೇಲೆ ನೀರಿನ ಹನಿಗಳನ್ನು ಹೀಗೇ ಎರಚುತ್ತಿದ್ದೆ.
 
ಮ್ಯಾನೇಜರ್ ನೀರು ಚಿಮುಕಿಸುವುದನ್ನು ಗಮನವಿಟ್ಟು ನೋಡಿದೆ. ಅವಳು ಬಂದರೆ, ಮುಂದಿನ ಬಾರಿ ಬೆಳಿಗ್ಗೆ ಇಷ್ಟು ಬೇಗ ನಾವು ಭೇಟಿಯಾಗುವುದಿದ್ದರೆ, ಈ ಕಾಫಿಶಾಪ್‌ನಲ್ಲಿ ಭೇಟಿಯಾಗೋಣ, ಯಾಕೆಂದರೆ ಇದು ಒಂಬತ್ತು ಗಂಟೆಗೆ ಮೊದಲು ತೆರೆಯುತ್ತದೆ ಎಂದು ಅವಳಿಗೆ ಹೇಳಬೇಕೆಂದೂ ಯೋಚಿಸಿದೆ. ಪುಸ್ತಕದ ಅಂಗಡಿಯ ಹಿಂದಿನ ಗಲ್ಲಿಯಲ್ಲಿ ಒಂದು ಸಾರ್ವಜನಿಕ ಸ್ಥಳವಿತ್ತು. ನಾನು ಬೇಗನೆ ಅಲ್ಲಿಗೂ ಹೋಗಿ ಬಂದೆ. ಯಾಕೆಂದರೆ, ಬೆಳಿಗ್ಗೆ ತಡವಾಗಿ ಎಚ್ಚರವಾಗಿತ್ತು. ಎದ್ದು ಅಲ್ಲಿಗೆ ಹೋಗಲು ಮತ್ತು ಉಳಿದ ಸಮಯ ಟ್ರೈನ್‌ನಲ್ಲಿ ಮತ್ತು ರಸ್ತೆಗಳಲ್ಲಿ ವೇಗವಾಗಿ ಹೆಜ್ಜೆ ಹಾಕುವಲ್ಲಿಯೇ ಕಳೆದುಹೋಗಿತ್ತು. ಪುಸ್ತಕದ ಅಂಗಡಿಯ ಹಿಂದಿನ ಶಟರ್ ಅರ್ಧ ಮಾತ್ರ ತೆರೆದಿತ್ತು ಅಥವಾ ಅರ್ಧ ಮಾತ್ರ ಮುಚ್ಚಿತ್ತು. ಒಳಗೆ ಐದಾರು ಜನ ನೌಕರರಿದ್ದರು, ಅವರು ಅಂಗಡಿ ತೆರೆಯುವುದಕ್ಕೂ ಮೊದಲೇ ನಿಯಮದಂತೆ ಬಂದಿದ್ದು ಕಂಡು ಬಂತು. ಅವರು ಪುಸ್ತಕಗಳ ಮೇಲೆ ಕೋಳಿ ಪುಕ್ಕದಂತಹ ಧೂಳು ಒರೆಸುವ ಪೊರಕೆಯನ್ನು ಒಂದೇ ಸಮನೆ ಆಡಿಸುತ್ತಿದ್ದರು. ಅಲ್ಲದೆ ಪುಸ್ತಕಗಳೆಡೆಗೆ ನೋಡುತ್ತಾ ಕ್ಷಮೆ ಯಾಚಿಸುವಂತೆ, ಒಬ್ಬರಿಗೊಬ್ಬರು ನಮಸ್ಕಾರ ಹೇಳುತ್ತಾ ‘ಓಹಾಯೋಗೋಜಾಯಿಮಾಸ್’ ಎನ್ನುತ್ತಿದ್ದರು.
 
ನಾನು ಕೆಲವು ಕ್ಷಣ ಅಲ್ಲಿಯೇ ನಿಂತು, ಅವರು ಪುಸ್ತಕಗಳ ಮೇಲಿನ ಧೂಳನ್ನು ಹೊಡೆಯುವುದನ್ನು ನೋಡಿದೆ. ನಂತರ ನನಗೆ ಸಂಕೋಚವೆನಿಸಿತು. ಆದರೆ ನಾನು ಒಳನುಗ್ಗಿದೆ. ನಾನು ಬಾಗಿ ಒಳಬರುವುದನ್ನು ಅವರೆಲ್ಲರೂ ನೋಡಿದ್ದರು, ಆದರೆ ಇನ್ನೊಬ್ಬ ನೌಕರ ತನ್ನ ಕೈಗಡಿಯಾರವನ್ನು ನನ್ನ ಮೂಗಿಗೆ ಹಿಡಿಯುತ್ತಾ ‘ಇನ್ನೂ ಹನ್ನೆರಡು ನಿಮಿಷ ತಡವಿದೆ’ ಎಂದ. ಅಲ್ಲದೆ ನನ್ನ ಅನುಕೂಲಕ್ಕೆ ತಕ್ಕಂತೆ ಹೊರಹೋಗಲು ಬಾಗಿಲ ಶಟರನ್ನು ಸ್ವಲ್ಪ ಮೇಲಕ್ಕೆತ್ತಿದ. ನಾನು ಸಂಕೋಚದಿಂದ ಕುಗ್ಗಿದೆ. ಆದರೆ ಹೊರ ಹೊರಟಾಗ ಅವನು ಶಟರನ್ನು ನೆಲದವರೆಗೆ ಎಳೆದು ಒಳಗಿನಿಂದ ಬಂದ್ ಮಾಡಿದ.

ದಡೂತಿ ಹುಡುಗಿಯೊಬ್ಬಳು ಫುಟ್‌ಪಾತ್‌ನಲ್ಲಿ ಮೆಲ್ಲಮೆಲ್ಲನೆ ನಡೆದುಕೊಂಡು, ಅಂಗಡಿಯೆದುರು ಬಂದಳು. ಇಲ್ಲ, ಅವಳು, ‘ಅವಳಾಗಿರಲಿಲ್ಲ', ಯಾಕೆಂದರೆ ಅವಳು ಈ ಹುಡುಗಿಯಂತೆ ದಡೂತಿಯಾಗಿಲ್ಲ. ನಾನು ಇದನ್ನು ದೂರದಿಂದಲೇ ಈ ಹುಡುಗಿಯನ್ನು ನೋಡಿ ತಿಳಿದುಕೊಂಡಿದ್ದೆ. ಈ ಬಗ್ಗೆ ಉದಾಸೀನನಾಗಿದ್ದೆ. ದಡೂತಿ ಹುಡುಗಿ ಅಂಗಡಿಯ ಮುಚ್ಚಿದ ಬಾಗಿಲುಗಳ ಮೇಲೆ ನಾಚಿಕೆಯಿಂದ ನೋಡುತ್ತಾ ಮುಂದುವರಿದು ಹೋದಳು. ಅವಳು ಕೆಲವು ಹೆಜ್ಜೆ ಮುಂದಕ್ಕೆ ಹೋಗಿ, ಮರಳಿ ಬಂದಳು. ಬಾಗಿಲುಗಳ ಎದುರಿನಿಂದ ಹಾದು ಹೋದಳು. ಮತ್ತೆ ಹೊರಳಿದಳು. ಈ ರೀತಿ ಮರ‍್ನಾಲ್ಕು ಬಾರಿ ಬಂದು-ಹೋಗಿ, ಕ್ರಮವಾಗಿ ನಿಲ್ಲುವ ಪೆಂಡುಲಮ್‌ನಂತೆ ಅಂಗಡಿಯ ಮುಚ್ಚಿದ ಬಾಗಿಲುಗಳ ನಡುವೆ ನಿಂತಳು.


 -2-

ಬೆಳಿಗ್ಗೆ ಅಷ್ಟು ಬೇಗನೆ ರಜಾ ದಿನವಾಗಿದ್ದಾಗ್ಯೂ ಪುಸ್ತಕದ ಅಂಗಡಿಗೆ ಹೋಗುವುದನ್ನು ಹೊರತುಪಡಿಸಿದರೆ ಓರ್ವ ದಡೂತಿ ಹುಡುಗಿಯ ಅದೃಷ್ಟದಲ್ಲಿ ಬೇರೇನೂ ಸಂಭವಿಸಲಿಲ್ಲ! ನಾನು ಖುಷಿಯಾಗಿದ್ದು, ಮನಸ್ಸಿನಲ್ಲಿಯೇ ಆ ಹುಡುಗಿ ಬರದಿದ್ದರಿಂದಾಗಿ ದಡೂತಿ ಹುಡುಗಿಯ ಬಗ್ಗೆ ಗೇಲಿ ಮಾಡುತ್ತಿದ್ದೆ.

ಎರಡು ನಿಮಿಷಗಳೂ ಆಗಿರಲಿಲ್ಲ, ಆ ಹುಡುಗಿ ತಕ್ಷಣ ಹೊರಳಿ, ಹೊರಟು ಹೋದಾಗ ನಾನು ಮನಸ್ಸಿನಲ್ಲಿ, ಪರ್ವಾಗಿಲ್ಲ, ಬೇಕಾದ್ರೆ ನೋಡು, ನಿನ್ನೊಂದಿಗೆ ಮತ್ತೆ ಖಂಡಿತ ಭೇಟಿಯಾಗುತ್ತೆ! ರಜಾ ದಿನ, ಅವಸರವೇನಿಲ್ಲ!’ ಎಂದು ಹೇಳಿಕೊಂಡೆ.
 ಅಂಗಡಿ ಒಂಬತ್ತೂವರೆಗೆ ಸರಿಯಾಗಿ ತೆರೆಯಿತು!
 
 ನನಗೆ ಕೆಲಸಗಳೆಲ್ಲವೂ ಸರಿಯಾದ ವೇಳೆಗೆ ನಡೆಯುತ್ತವೆಯೆಂದು ಸಮಾಧಾನವಾಯಿತು.
 ಈ ಬಾರಿ ನಾನು ಕಳ್ಳನಂತೆ ಹಿಂದಿನ ಬಾಗಿಲಿನಿಂದ ಪ್ರವೇಶಿಸದೆ, ಗಿರಾಕಿಯಂತೆ ಎದುರಿನ ಬಾಗಿಲಿನಿಂದ ಅಂಗಡಿಯನ್ನು ಪ್ರವೇಶಿಸಿದಾಗ ನೌಕರರು ಉತ್ಸಾಹದಿಂದ ನಮ್ಮನ್ನು ಸ್ವಾಗತಿಸಿದರು. ಯಾಕೆಂದರೆ ನನ್ನ ಹಿಂದಿಂದೆ ಸರಿಯಾಗಿ ಆ ದಡೂತಿ ಹುಡುಗಿಯೂ ಒಳಗೆ ಬಂದಿದ್ದಳು. ನಾನು ಹೇಳಿರಲಿಲ್ಲವೇ ! ನಾವು ಬೇರೆ-ಬೇರೆ ಪತ್ರಿಕೆಗಳನ್ನು ತೆರೆದು ನೋಡಲಾರಂಭಿಸಿದೆವು. ಅವಳು ಈ ನಡುವೆ ಪತ್ರಿಕೆಯನ್ನು ಮಡಚುತ್ತಾ ತನ್ನ ಎಡ ಮಣಿಕಟ್ಟನ್ನು ನೋಡಿಕೊಂಡಾಗ ನನಗೆ ಸಮಯ ತಿಳಿಯಬೇಕೆಂಬ ವಿಷಯ ನೆನಪಾಯಿತು. ಹತ್ತು ಗಂಟೆಯಿಂದ ಒಂದು ನಿಮಿಷದ ನಂತರ ನಾನು ಹೊರಬಂದು ಅವಳ ಮನೆಗೆ ಫೋನ್ ಮಾಡಿದೆ. ಅತ್ತಲಿಂದ ಗಂಡು ಧ್ವನಿಯೊಂದು ‘ಹಲೋ’ ಎಂದಾಗ ನಾನೂ ಇತ್ತಲಿಂದ ‘ಹಲೋ’ ಎಂದೆ. ಆದರೆ ನಮ್ಮಲ್ಲಿ ಬಹುಶಃ ಒಬ್ಬರಿಗೆ, ಇನ್ನೊಬ್ಬರ ಧ್ವನಿ ಕೇಳಿಸುತ್ತಿರಲಿಲ್ಲ, ಹೀಗಾಗಿ ನಾವು ಗಟ್ಟಿಯಾಗಿ, ನಾವು ಎದುರು-ಬದಿರು ನಿಂತಿದ್ದು ಕ್ರೋಧಾವೇಶದಲ್ಲಿ ಪರಸ್ಪರ ನಿಂದಿಸಿಕೊಳ್ಳುತ್ತಿರುವಂತೆ ಹಲೋ-ಹಲೋ ಎಂದಷ್ಟೇ ಕಿರುಚಿದ್ದೆವು. ನಾನು ಸೋತು ರಿಸೀವರನ್ನು ಕೆಳಗಿಡಬೇಕೆಂದಿದ್ದೆ, ಆದರೆ ಆಗಲೇ ಅತ್ತ ಕಡೆಯಿಂದ ಹಲೋ ಎಂಬ ಹೆಣ್ಣು ಧ್ವನಿ ಕೇಳಿಸಿತು. “ನೀನು ಮನೆಯಿಂದ ಫೋನ್ ಮಾಡ್ತಿದ್ದೀಯಾ?” ಇದು ಅವಳ ಧ್ವನಿಯಾಗಿತ್ತು. “ನಾನು ಒಂದು ಗಂಟೆಯಿಂದ ನಿನ್ನ ನಿರೀಕ್ಷೆಯಲ್ಲಿ ಸ್ಟೇಷನ್ನಿನ ಎದುರಿಗಿರುವೆ...” ಎಂದೆ.
 “ನನಗೇನೂ ಕೇಳಿಸ್ತಿಲ್ಲ. ಇನ್ನೇನು ಹೊರಟೆ...”
 “ಆದ್ರೆ ಕೇಳು, ನಾನು ಮನೇಲಿ ಇಲ್ಲ ! ಸದಾ ಎಲ್ಲಿ....ಹಲೋ”
 “ಆದರೆ ಅವಳು ಫೋನ್ ಕಟ್ ಮಾಡಿದಳು. ಅವಳಿಗೆ ನನ್ನ ಮಾತು ಕೇಳಿರಲೇ ಇಲ್ಲವೇನೋ !
 ಒಂದು ದೊಡ್ಡ ರಸ್ತೆ-ಅಪಘಾತವನ್ನು ಕಂಡು ಭಯಭೀತನಾದಂತೆ ನನ್ನೆದೆ ಜೋರಾಗಿ ಬಡಿದುಕೊಂಡಿತು. ಫೋನಿನಿಂದ ದೂರಕ್ಕೆ ಸರಿದೆ. ರೆಸ್ಟೋರೆಂಟಿನ ಕಪ್ಪು ಬಾಗಿಲು ತೆರೆದಿತ್ತು. ಬೆಳಿಗ್ಗೆ ಅಷ್ಟು ಬೇಗ ನಾನು ಅಲ್ಲಿಗೆ ಮೊದಲ ಬಾರಿಗೆ ಹೋಗಿದ್ದೆ. ಅಲ್ಲಿ ನನಗೆ ಅತ್ಯಂತ ಹಿತವೆನಿಸುತ್ತಿದ್ದುದೆಂದರೆ, ಅಲ್ಲಿ ಕೆಲಸ ಮಾಡುವ ಓರ್ವ ವೇಟ್ರಸ್‌ಳ ಅಂದವಾದ ಕಾಲುಗಳು! ಆ ವೇಟ್ರಸ್ ಸದಾ ನನಗೆ, ಇದೀಗ ತಾನೇ ಆಲೀವ್ ಎಣ್ಣೆಯಿಂದ ಮಾಲೀಶ್ ಮಾಡಿದ ಓರ್ವ ಆರೋಗ್ಯಕರ ಶಿಶುವನ್ನು ನೆನಪಿಸುತ್ತಿದ್ದಳು. ಅವಳು ಮೇಕಪ್ ನಂತರ ಅದರ ಮೇಲೆ ವ್ಯಾಸಲೀನ್ ಅಥವಾ ಕ್ರೀಮ್‌ನಂತಹ ನುಣುಪು ವಸ್ತುವನ್ನು ಮುಖಕ್ಕೆ ಖಂಡಿತ ಹಚ್ಚಿಕೊಳ್ಳುತ್ತಿರಬಹುದು. ಏನಾದರಾಗಲಿ, ಅಲ್ಲಿ ತಿನ್ನಲು-ಕುಡಿಯಲು ಏನೂ ಇರಲಿಲ್ಲ, ಟೇಬಲ್ ಕುರ್ಚಿ ಸಹ ಇರಲಿಲ್ಲ, ಅತ್ತ-ಇತ್ತ ಬಂದು ಹೋಗುತ್ತಿದ್ದ ಅವಳ ಆ ಸುಂದರ ಕಾಲುಗಳನ್ನು ಓರ್ವ ದಾರ್ಶನಿಕನಂತೆ ನೋಡುತ್ತಾ ಗಂಟೆಗಟ್ಟಲೆ ಕೂತಿರಬಹುದಿತ್ತು.
 ಆದರೆ ಅವಳು ಹನ್ನೊಂದು ಗಂಟೆ ಐದು ನಿಮಿಷಕ್ಕೆ ಅಲ್ಲಿಗೆ ಬಂದು, ತಡವಾದುದಕ್ಕೆ ಬಂದೊಡನೆಯೇ ಕ್ಷಮೆ ಯಾಚಿಸಿದಳು.
 ಅವಳು ಎರಡೂ ಕೈಗಳಿಂದ ನನ್ನ ಅಂಗೈಯನ್ನು ಬಿಗಿಯಾಗಿ ಹಿಡಿದುಕೊಂಡು ‘ಸೋ ಸ್ಸಾರಿ!’ ಎಂದಳು.
 ಅವಳು ಆಗಾಗ್ಗೆ ತಮಾಷೆಗಾಗಿ ಇಂಗ್ಲಿಷ್‌ನಲ್ಲಿ ಮಾತನಾಡಲು ಪ್ರಾರಂಭಿಸುತ್ತಿದ್ದಳು. ಅಂದರೆ ವಾಕ್ಯದ ಮೊದಲ ಕೆಲವು ಶಬ್ದಗಳನ್ನಷ್ಟೇ ಇಂಗ್ಲೀಷ್‌ನಲ್ಲಿ ಹೇಳುತ್ತಿದ್ದಳು. ಉಳಿದ ವಿಷಯಗಳನ್ನು ನಾನು ತಿಳಿದುಕೊಳ್ಳುತ್ತಿದ್ದೆ. ಫೋನ್ ಕೆಟ್ಟಿತ್ತು. ನನ್ನ ಎಲ್ಲಾ ಮಾತುಗಳು ಕೇಳಿಸಲೇ ಇಲ್ಲ ಎಂದು ಅವಳು ಹೇಳಿದಳು. ನಾನು ಅವಳನ್ನು ಮನೆಗೆ ಕರೆಯುತ್ತಿದ್ದೇನೆಂದು ಊಹಿಸಿದಳು.
 ನಾವು ಅಲ್ಲಿ ಕೂರದೆ, ಎದ್ದು ಹೊರಗೆ ಬಂದೆವು. ಅಂದವಾದ ಕಾಲುಗಳ ವೇಟ್ರಸ್ ನಮಗೆ ಧನ್ಯವಾದ ಹೇಳಿದಳು.
 “ನಿನ್ನ ನೋಡುತ್ತಲೇ ನನ್ನ ಸಿಟ್ಟೆಲ್ಲಾ ಮಾಯವಾಯ್ತು” ನಾನು ಹೊರ ಬಂದೊಡನೆಯೇ ಅವಳನ್ನು ನೋಡುತ್ತಾ ಹೇಳಿದೆ. ಅವಳು ತನ್ನ ಹುಬ್ಬುಗಳನ್ನು ಹೊಸ ರೀತಿಯಲ್ಲಿ ಅಲಂಕರಿಸಿಕೊಂಡಿರಲಿಲ್ಲ, ಆದ್ದರಿಂದ ಅವಳ ಮುಖ ಕಳೆದ ಬಾರಿಯಂತೆ ಆಕರ್ಷಕವಾಗಿ ಕಾಣಿಸುತ್ತಿರಲಿಲ್ಲ.
 “ಇಂದು ನಾವು ‘ಕ್ಯೋತೋ’ ಗೆ ಹೋಗಿ ಇಡೀ ದಿನ ‘ಅರಾಶಿಯಾಮಾ’ ದ ನದಿ ತೀರದಲ್ಲಿ ಸುತ್ತಾಡೋಣ ಅಂತ ನಾನು ಯೋಚಿಸಿದ್ದೆ. ಆದರೆ ಈಗ ತಡವಾಗಿದೆ. ಅಲ್ಲದೆ ಅಮ್ಮ ಸಂಜೆಗೆ ಮೊದಲೇ ಮನೆಗೆ ಮರಳಿ ಬರಲು ಹೇಳಿದ್ದಾಳೆ”.
 “ಚಿಂತೆಯಿಲ್ಲ” ನಾನು ನಿರಾಶನಾಗದೆ ಹೇಳಿದೆ, “ನಾವು ನಗರದಲ್ಲಿಯೇ ಅಡ್ಡಾಡೋಣ”.
 “ಎಲ್ಲಾದರೂ ಸರಿ” ಅವಳು ನನ್ನ ಬಾಹುಗಳಲ್ಲಿ ಕೈ ಹಾಕಿದಳು.
 ನಾವು ಹತ್ತಿರದಲ್ಲಿದ್ದ ಪಾರ್ಕ್ನಲ್ಲಿ ಹೋಗುತ್ತಿದ್ದೆವು.
 “ಕೇಳಿ! ನನಗೇನು ಮಾಡಬೇಕೆಂದು ತಿಳೀತಿಲ್ಲ” ಅವಳು ತನ್ನ ಇನ್ನೊಂದು ಕೈಯಲ್ಲಿ ಹಿಡಿದುಕೊಂಡಿದ್ದ ಬಾದಾಮಿ ಬಣ್ಣದ ಕವರನ್ನು ನನಗೆ ತೋರಿಸುತ್ತಾ ಹೇಳಿದಳು, “ಕಚೇರಿಯಲ್ಲಿ ನನಗೆ ಇದರ ಅನುವಾದ ಮಾಡುವಂತೆ ಹೇಳಿದ್ದಾರೆ. ಆದರೆ ಈ ಇಂಗ್ಲೀಷ್ ಎಷ್ಟು ಕಷ್ಟವಾಗಿದೆಯೆಂದರೆ, ನಿನ್ನೆ ರಾತ್ರಿ ತುಂಬಾ ಹೊತ್ತು ಎಚ್ಚರವಿದ್ದು ಅನುವಾದ ಮಾಡಿದೆ. ಆದರೆ ಒಂದು ಪುಟಕ್ಕಿಂತ ಹೆಚ್ಚು ಮಾಡಲು ಸಾಧ್ಯವಾಗಲಿಲ್ಲ. ನಾನು ಒಂದು ಸಾಮಾನ್ಯ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೆ ಎಷ್ಟೋ ಚೆನ್ನಾಗಿತ್ತು”.
 ಅವಳು ಕಷ್ಟದ ಕೆಲಸದಿಂದ ಬೇಸತ್ತು ಒಂದು ಒಳ್ಳೆಯ ನೌಕರಿಯನ್ನು ಬಿಡುತ್ತಿದ್ದಾಳೆ ಎಂದು ಯೋಚಿಸಿದೆ, ಆದ್ದರಿಂದ ನಾನು ಅವಳಿಗೆ ತಿಳಿವಳಿಕೆ ಹೇಳಿ, ಧೈರ್ಯ ತುಂಬಿದೆ.
 “ಓಹ್, ಪ್ಲೀಸ್ ಹೆಲ್ಪ್ ಮಿ !” ಅವಳು ತನ್ನ ಬಾಹುಗಳಲ್ಲಿದ್ದ ನನ್ನ ಬಾಹುವನ್ನು ಅದೆಷ್ಟೋ ಬಾರಿ ಜಕ್ಕಿಸುತ್ತಾ ಹೇಳಿದಳು.
 “ನನ್ನ ಇಂಗ್ಲಿಷ್ ಮತ್ತೂ ಕಳಪೆಯಾಗಿದೆ ಎಂಬುದು ನಿನಗೆ ಗೊತ್ತಿದೆ. ಆದ್ರೆ ನೀನು ಮಾಡಬಲ್ಲೆ ಎಂಬ ದೃಢ ವಿಶ್ವಾಸ ನನಗಿದೆ”.

 -3-

 ಪಾರ್ಕ್ನ ಪ್ರತಿಯೊಂದು ಬೆಂಚನ್ನು ಒಂದೊಂದು ಜೋಡಿ ಆಕ್ರಮಿಸಿಕೊಂಡಿತ್ತು. ಆ ಜೋಡಿಗಳು ಚಳಿಯಿಂದ ನಡುಗುತ್ತಿದ್ದು ಬಿಸಿಲನ್ನು ಕಾಯಿಸುತ್ತಿದ್ದರು. ಕೊಳದಲ್ಲಿಯೂ ಜೋಡಿಗಳು ಚಿಕ್ಕ-ಚಿಕ್ಕ ದೋಣಿಗಳಲ್ಲಿ ಕೂತಿದ್ದು ಪರಸ್ಪರ ಚೆಲ್ಲಾಟವಾಡುತ್ತಿದ್ದರು.
 “ನಾವು ಆ ಕಡೆ, ಮೂಲೆಯ ಗೋಳದ ಮೇಲೆ ಹೋಗಿ ಕೂರೋಣ” ನಾನು ಹೀಗೆಂದಾಗ ಅವಳು ನನ್ನೆಡೆಗೆ ನೋಡಿ ಮೆಲ್ಲನೆ ಮುಗುಳ್ನಕ್ಕಳು.
 ಗೋಳದ ಮುಂದಿನ ಬೆಂಚಿನಲ್ಲಿಯೂ ಜೋಡಿಯೊಂದು ಕೂತಿತ್ತು, ಆದರೆ ನಡುವೆ ಪೊದೆಗಳಿದ್ದುದರಿಂದಾಗಿ ಅವರು ಅಲ್ಲಿಂದ ನನ್ನನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ.
 ಅವಳು ಕಲ್ಲಿನ ಗೋಡೆಯ ಬಳಿ ಕೂರುವುದಕ್ಕೆ ಬದಲು ನನ್ನ ಮೊಣಕಾಲುಗಳ ಮೇಲೆ ಕೂತಳು. ಇದು ಸರಿಯಲ್ಲ ಎಂದಾಗ ಎದ್ದು ಎರಡೂ ಕಾಲುಗಳನ್ನು ಗೋಡೆಯ ಮತ್ತೊಂದೆಡೆಗೆ ಜೋತುಬಿಟ್ಟುಕೊಂಡು ನನ್ನ ಪಕ್ಕದಲ್ಲಿ ಕೂತಳು. ಅವಳ ಎಡ ಸ್ತನ ಬಟ್ಟೆಗಳ ಕೆಳಭಾಗದಿಂದ ಹೊರಹೊಮ್ಮಿ ಗಡಸು ಮತ್ತು ಕೋಮಲವಾಗಿ ಕಾಣಿಸುತ್ತಿತ್ತು.
 ಅರವತ್ತು ಸೆಕೆಂಡ್‌ಗಳು ಕಳೆದಿರಲಿಲ್ಲ, ಅವಳು ನಗುತ್ತಾ ಇಂಗ್ಲಿಷ್‌ನಲ್ಲಿ ‘ಐ ಲವ್ ಯೂ’ ಎಂದು ಮತ್ತೇನೋ ಹೇಳಿದಳು.
 ನಾನು ಅವಳ ಮುಖದೆಡೆಗೆ ನೋಡಿ “ಏನು?” ಎಂದು ಕೇಳಿದೆ.
 “ಹೌದು” ಅವಳು ಹಾಗೆಯೇ ನಗುತ್ತಾ ಉತ್ತರಿಸಿ, ಎದ್ದು ನಿಂತಳು.
 ಅವಳು ಪಾರ್ಕ್ನಿಂದ ಹೊರ ಬಂದಾಗ ಶೂನ್ಯ ರಸ್ತೆಯೆಡೆಗೆ ನೋಡುತ್ತಾ ರೇಗಿ ನಗಲಾರಂಭಿಸಿದಳು.
 “ಬೇಕು ಅಂದ್ರೆ, ಟ್ಯಾಕ್ಸಿ ಸುಲಭವಾಗಿ ಸಿಗಲ್ಲ” ಅವಳೇ ಹೇಳಿದಳು.
 ನಾನೀಗ ಅವಳ ಮಾತಿನ ಅರ್ಥವನ್ನು ಅರಿತುಕೊಂಡೆ, ಆದರೆ ಏನೂ ಹೇಳಲಿಲ್ಲ. ನನಗೆ ಬೆಳಿಗ್ಗೆ ಯೋಚಿಸಿದ ಮಾತು ನೆನಪಾಯಿತು. ನಾವು ಪಾರ್ಕ್ನಿಂದ ಹೊರಗೇ, ಬೇರೆಡೆಗೆ ಸಾಗುತ್ತಿದ್ದೆವು - ಅಲ್ಲಿ ಟ್ಯಾಕ್ಸಿ ಸಿಗುವ ಸಾಧ್ಯತೆ ಹೆಚ್ಚಿತ್ತು. ನಮ್ಮ ಮುಖಗಳಲ್ಲಿ ಯಾವುದೇ ಭಾವನೆಗಳಿರಲಿಲ್ಲ, ನಮ್ಮ ಹೃದಯಗಳು ಸಹಜಕ್ಕಿಂತಲೂ ಹೆಚ್ಚು ವೇಗದಿಂದ ಬಡಿದುಕೊಳ್ಳುತ್ತಿರಲಿಲ್ಲ. ನಾವು ನಿಶ್ಚಿಂತೆಯಿಂದ, ಪಾರ್ಕ್ನ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಹೋಗುತ್ತಿದ್ದೆವು?  
 ಹೊಟೇಲ್ ಅಂಗಡಿಯಂತಿದ್ದು ಅದರ ಒಳಗೆ ಹೋದಾಗ ಏನೂ ಹೇಳುವ ಅಗತ್ಯವುಂಟಾಗಲಿಲ್ಲ. ಬದಲಾಗಿ, ಅಂಗಡಿಯ ಮುದಿ ಹೆಂಗಸೇ ನಮಗೆ, ‘ನೀವು ಮೆಟ್ಟಿಲುಗಳನ್ನು ಹತ್ತಿ ಮೇಲೆ ಹೋಗಿ, ಎದುರಿನ ಇಪ್ಪತ್ತಮೂರನೆ ನಂಬರ್‌ನ ರೂಮು ಖಾಲಿ ಇದೆ’ ಎಂದಳು.
 ಆದರೆ ರೂಮಿನೊಳಗೆ ಹೋಗಿ ತಕ್ಷಣ ಮತ್ತೆ ಕೆಳಗೆ ಬರಬೇಕಾಯಿತು. ಯಾಕೆಂದರೆ ಇಪ್ಪತ್ತಮೂರನೆ ನಂಬರ್‌ನಲ್ಲಿ ಜಮಖಾನೆ ಮತ್ತು ಒಂದು ಚಿಕ್ಕ ಟೇಬಲ್ ಮಾತ್ರವಿತ್ತು.
 “ಹೊದಿಕೆ-ರಜಾಯಿ ಮತ್ತು ಸೀಮೆಯೆಣ್ಣೆಯ ಸ್ಟೋವನ್ನು ಅದರ ಪಕ್ಕದ ಚಿಕ್ಕ ಕೋಣೆಯಲ್ಲಿಡಲಾಗಿದೆ” ಎಂದು ಮುದುಕಿ ನಗುತ್ತಾ “ಸಂಧಿವಾತದಿಂದಾಗಿ ನನಗೆ ಮೆಟ್ಟಿಲುಗಳನ್ನು ಹತ್ತಲು ಸಾಧ್ಯವಾಗ್ತಿಲ್ಲ” ಎಂದು ಕ್ಷಮೆ ಯಾಚಿಸಿದಳು.
 ಮತ್ತೆ ಮೇಲೆ ಬಂದಾಗ ನಸುಗತ್ತಲಿನ ಕೋಣೆಯಲ್ಲಿ ಅವಳ ನೀಲಿ ದೇಹ ಹೊಳೆಯುತ್ತಿತ್ತು. ಅವಳು ದೀಪ ಹಚ್ಚಿರಲಿಲ್ಲ. ಸ್ವಲ್ಪ ಬೆಳಕಷ್ಟೇ ಒಳ ಬರುವಂತೆ ದಪ್ಪ ಹಸಿರು ಪರದೆಯನ್ನು ಎಡಗಡೆಯ ಭಾಗದಲ್ಲಿ ಸ್ವಲ್ಪ ಸರಿಸಿದ್ದಳು.
 ಒಂದು ವೇಳೆ ಅವಳು ಹೀಗೆ ಮಾಡಿರದಿದ್ದರೆ ಬೇಸರವಾಗುತ್ತಿರಲಿಲ್ಲ, ಆದರೆ ಈಗ ಏನೂ ಹೇಳುವ-ಕೇಳುವ ಸ್ಥಿತಿಯಲ್ಲಿರಲಿಲ್ಲ.
 ನೀಲಿ ದಿಂಬಿನ ಮೇಲೆ ಬಟ್ಟೆಯ ಕವರ್ ಬದಲು ಬಿಳಿಯ ತೆಳು ಕಾಗದವನ್ನು ಸುತ್ತಲಾಗಿತ್ತು. ಅದು ಈ ಮೊದಲೇ ಅನೇಕ ಕಡೆಗಳಲ್ಲಿ ಹರಿದುಹೋಗಿತ್ತು. ನಾನು ರಗ್ಗಿನ ಮೇಲೆ ನನ್ನ ಓವರ್‌ಕೋಟನ್ನು ಸ್ವಚ್ಛತೆಯ ಕಾರಣಕ್ಕಾಗಿ ಹಾಕಿಕೊಂಡೆ.
 ಅವಳು ಅಪರಿಚಿತ ಮತ್ತು ಪರಸ್ಥಳದ ಬಗ್ಗೆ ಯೋಚಿಸದೆ ಹೊರ ಭಾಗದವರೆಗೂ ಕೇಳಿಸುವಂಥ ಗದ್ದಲ ಮಾಡಿದಳು. ನಂತರ ಕ್ರಮೇಣ ಶಾಂತಳಾಗಿ ಬೇರೆ ಮಾತುಗಳನ್ನಾಡಲು ಪ್ರಾರಂಭಿಸಿದಳು.
 “ಈ ನೌಕರಿಯನ್ನು ನಾನು ಹೆಚ್ಚು ದಿನ ಮಾಡಲಾರೆ”
 “ಹಾಗಾದ್ರೆ ನೀನು ಬೇರೆ ಕಡೆ ಕೆಲಸ ಮಾಡಬೇಕಾಗುತ್ತೆ. ಅದು ಇಂಥದ್ದೆ ಅಥವಾ ಇದಕ್ಕಿಂತಲೂ ಕೆಟ್ಟ ಸ್ಥಳವಾಗಬಹುದು.”
 “ನಾನು ನೌಕರಿ ಮಾಡಲ್ಲ”
 “ಮತ್ತೇನು ಮಾಡ್ತೀಯ ?”
 ಅವಳು ಉತ್ತರಿಸಲಿಲ್ಲ ! ಈಗ ಅವಳಿಗೆ ಚಳಿಯಾಗುತ್ತಿರಲಿಲ್ಲ. ಅವಳು ಹೊದಿಕೆಯನ್ನು ಕಾಲಿನಿಂದ ಆಚೆಗೆ ತಳ್ಳಿದ್ದಳು. ಅವಳ ದೇಹದಿಂದ ಸೆಂಟ್ ಮತ್ತು ಕಾಸ್ಮೆಟಿಕ್ ಸುಗಂಧ ಮಾಯವಾಗಿ, ಹೊಸ ರಬ್ಬರ್‌ನ ಸುವಾಸನೆ ಬರುತ್ತಿತ್ತು.
 “ನೀನು ನಿನ್ನ ಹುಬ್ಬುಗಳನ್ನು ಹೀಗೆಯೇ ಅಲಂಕರಿಸಿಕೋ, ಇದು ನಿನ್ನ ಮುಖಕ್ಕೆ ಚೆನ್ನಾಗಿ ಕಾಣಿಸುತ್ತದೆ” ನಾನು ಮಾತಿನ ಕೊಂಡಿಯನ್ನು ಬೇರೆಡೆಗೆ ಹೊರಳಿಸಲು ಬಯಸುತ್ತಿದ್ದೆ.
 ಆದರೂ ಅವಳು ಏನೂ ಹೇಳಲಿಲ್ಲ. ಅವಳು ಬೇರೊಂದು ವಿಷಯವನ್ನು ಯೋಚಿಸುತ್ತಿದ್ದಳು.
 “ನಿಜವಾಗಿ, ನಾನೇನು ಮಾಡಬೇಕೆಂಬುದು ತಿಳೀತಿಲ್ಲ” ಸಾಕಷ್ಟು ಹೊತ್ತಿನ ನಂತರ ಅವಳು ಹೇಳಿದಳು, “ನೀನು ಮಾಡಬೇಕೆಂದಿರುವುದನ್ನೇ ಮಾಡ್ತಿದ್ದೀಯಾ?”
 “ಗೊತ್ತಿಲ್ಲ, ಆದ್ರೆ ನಾನು ಈ ಬಗ್ಗೆ ಯೋಚಿಸುವುದಿಲ್ಲ. ಇಂದು ರಜಾ ದಿನ. ಇವತ್ತು ಬಿಡುವಾಗಿದ್ದೇನೆ”
 “ನಾನೂ ಬಿಡುವಾಗಿದ್ದೇನೆ”.
 ನಂತರ ಅವಳು ತುಂಬಾ ಹೊತ್ತು ಏನೇನು ಹೇಳುತ್ತಿದ್ದಳೋ, ನನಗೆ ತಿಳಿಯಲಿಲ್ಲ. ಅವಳು ತುಂಬಾ ಮಾತನಾಡುತ್ತಿದ್ದಳು, ಮೆಲ್ಲನೆ ಧ್ವನಿಯಲ್ಲಿ ಅವಳೊಂದಿಗೆ ಮಾತನಾಡುವುದು ಸಾಧ್ಯವಿರಲಿಲ್ಲ. ಅವಳು ಗಂಟೆಗಟ್ಟಲೆ ಮಾತನಾಡುತ್ತಿದ್ದಳು. ನನ್ನ ಗಮನ ಅವಳೆಡೆಗೆ ಮತ್ತು ಯಾವ ಕಡೆಗೂ ಇರಲಿಲ್ಲ. ಅಲ್ಲಿ ಗಮನಕ್ಕೆ ಬಾರದ ಉದಾಸೀನತೆಯಿದ್ದು, ಅದು ಎಲ್ಲವನ್ನೂ ಗಾಳಿಯ ಲಘು ಹೊಡೆತದಂತೆ ಮೇಲಕ್ಕೆ ಹಾದು ಹೋಗಲು ಹೇಳುತ್ತಿತ್ತು. ಕನಸು ಮತ್ತು ವಾಸ್ತವ ಹಾಗೂ ಕಲ್ಪನೆ - ಈ ಮೂರು ಪರಸ್ಪರ ತೊಡಕಾಗಿ ಸಿಕ್ಕಿಕೊಂಡವು. ಅವುಗಳನ್ನು ಬೇರೆ ಮಾಡಲು ಸಾಧ್ಯವಿರಲಿಲ್ಲ.


 -4-
 
 ನನ್ನ ದೇಹದಿಂದಲೂ ರಬ್ಬರ್‌ನ ಸುಗಂಧ ಬಂದಿತು. ನಾನು ನನಗೇ ‘ನೀನು ಹೆಚ್ಚುಗಾರಿಕೆ ಮಾಡ್ತಿದ್ದೀಯಾ, ಅದು ನಿನ್ನ ಶಕ್ತಿಯನ್ನು ಪರೀಕ್ಷಿಸುವಂತಿದೆ’ ಎಂದು ಹೇಳಿಕೊಂಡೆ.
 ಆಗಲೇ ತಲೆಯ ಬಳಿಯಿದ್ದ ಟೆಲಿಫೋನ್ ರಿಂಗಾಯಿತು, ಅವಳು ಕಿಲಕಿಲನೆ ನಕ್ಕಳು.
 “ಒಂದು ಗಂಟೆಯಾಯ್ತು” ಫೋನ್‌ನಲ್ಲಿ ಮುದುಕಿಯ ಧ್ವನಿ ಮತ್ತೂ ರೋಗಗ್ರಸ್ತವೆನಿಸಿತು.
 “ಸರಿ.”
 “ನೀನೇನು ತಿಂದೆ?” ಕೋಣೆಯಿಂದ ಹೊರಬರುವುದಕ್ಕೂ ಮೊದಲು ನಾನು ಅವಳನ್ನು ಪ್ರಶ್ನಿಸಿದೆ.
 “ಏನಿಲ್ಲ. ಆದ್ರೆ ನನಗೆ ಸ್ವಲ್ಪವೂ ಹಸಿವಾಗಿಲ್ಲ”.
 ಜಮಖಾನೆಯ ಮೇಲೆ ಒಂದು ಹೇರ್‌ಪಿನ್ ಬಿದ್ದಿತ್ತು. ಅವಳದೇ ಇರಬೇಕು. ಅದನ್ನೆತ್ತಿಕೊಂಡು ನನ್ನ ಅಂಗಿಯ ಜೇಬಿಗೆ ಹಾಕಿಕೊಂಡೆ. ಅವಳು ನಕ್ಕಳು.
 “ಮುಂದಿನ ಸಲ ನಿನಗಾಗಿ ಒಂದು ಪ್ಯಾಕೆಟ್ ಹೇರ್‌ಪಿನ್ ತಗೊಂಡು ಬರ‍್ತೀನಿ”
 “ಬೇಡ, ನನಗೆ ಒಂದು ಬಾರಿಗೆ ಒಂದಕ್ಕಿಂತ ಹೆಚ್ಚು ಹೇರ್‌ಪಿನ್‌ಗಳು ಬೇಡ.”
 ಅಲ್ಲಿಂದ ಹೊರ ಹೊರಟಾಗ ಸಂಜೆ ಬಹಳ ಹೊತ್ತಾಗಿತ್ತು. ಪೋಸ್ಟರ್, ಜಾಹೀರಾತು ಮತ್ತು ನಿಯಾನ್ ಸೈನ್ ಬೆಳಕು ಚೆಲ್ಲುತ್ತಿದ್ದವು. ಗೇಮ್ ಸೆಂಟರ್‌ನ ಹೊರಗಿಟ್ಟಿದ್ದ ಮೋಟರ್-ರೇಸ್‌ನ ಯಂತ್ರದ ಸ್ಕ್ರೀನ್‌ನ್‌ನಲ್ಲಿ ಬಣ್ಣದ ವಿಸ್ಫೋಟವಾಯಿತು. ಪಕ್ಕದ ಅಂಗಡಿಯಿಂದ ಬರುವ ಹಳೆ ಹಾಡುಗಳ ತುಣುಕುಗಳು ಕೇಳಿಸಿದವು. ಒಂದು ಬಾರ್‌ನ ಬಾಗಿಲ ಬಳಿ ಇಬ್ಬರು ನೌಕರರು ನಿಂತು, ಗ್ರಾಹಕರನ್ನು ಒಳ ಬರುವಂತೆ ಕರೆಯುತ್ತಿದ್ದರು. ಗುಂಪು ಇದ್ದಕ್ಕಿದ್ದಂತೆ ಹೆಚ್ಚಿತ್ತು. ಬಂದು-ಹೋಗುತ್ತಿದ್ದ ಜನ ಇರುವೆಗಳಂತೆ ಮುಂದೆ ಸಾಗುತ್ತಿದ್ದರು. ಅವರು ಸಮಸ್ಯೆಯಲ್ಲಿ ಸಿಲುಕಿರುವಂತೆ ತೋರುತ್ತಿತ್ತು.
 ನಾನು ವರ್ಷಗಟ್ಟಲೆ ಅಂಧಕಾರದ ಗುಹೆಯೊಳಗಿದ್ದು, ಹೊರಗಿನ ಜಗತ್ತಿಗೆ ಮೊದಲ ಬಾರಿಗೆ ಬರುತ್ತಿದ್ದೇನೆಂದು ಅನ್ನಿಸಿತು. ಅವಳೆಲ್ಲಿಯಾದರೂ ಗುಂಪಿನಲ್ಲಿ ನನ್ನಿಂದ ಅಗಲಿ ಹೋಗಲಿಲ್ಲ ತಾನೇ ಎಂದು ಹೊರಳಿ ನೋಡಿದೆ.
 “ಪ್ರೀತಿ ತುಂಬಾ ದೊಡ್ಡ ವೇದನೆ” ಅವಳು ಮುಂದೆ ಬಂದು ನನ್ನ ಕೈಯನ್ನು ಹಿಡಿದುಕೊಳ್ಳುತ್ತಾ ಹೇಳಿದಳು, “ಆದ್ರೆ ಜೀವಮಾನವಿಡೀ ಮೋಜು-ಮಸ್ತಿ ಮಾಡಿದ ನಂತರ ಸಾಯುವುದಕ್ಕೂ ಮೊದಲು ಕ್ರಾಸ್ ಹೊತ್ತು ಹೋಗುವ ಅಥವಾ ಬುದ್ಧತ್ವದ ಮುಖವಾಡ ಧರಿಸುವ ನಕಲಿ ಮನುಷ್ಯರ ಬಗ್ಗೆ ನನಗೆ ತುಂಬಾ ಜಿಗುಪ್ಸೆ ಬರುತ್ತೆ”.
 ಅವಳು ಎದುರಿಗೆ ಬರುತ್ತಿದ್ದ ವ್ಯಕ್ತಿಯೊಬ್ಬನನ್ನು ನೋಡಿ ಹೀಗೆ ಹೇಳಿರಬಹುದು, ಯಾಕೆಂದರೆ ಅವನು ತನ್ನೆರಡೂ ಕೈಗಳಲ್ಲಿ ಕ್ರಾಸ್‌ನಂತಹ ವಸ್ತುವನ್ನು ಎತ್ತಿಕೊಂಡಿದ್ದ. ಅವನು ಬಂದು-ಹೋಗುತ್ತಿದ್ದ ಗುಂಪಿನ ನಡುವೆ, ನಿದ್ರಾ ಸಂಚಾರಿಯಂತೆ ನಡೆದು ಹೋಗುತ್ತಿದ್ದ. ಆದರೆ ಇದು ಸಾಧ್ಯವಿಲ್ಲ; ಯಾಕೆಂದರೆ ಅವನು ಎತ್ತಿಕೊಂಡಿದ್ದ ವಸ್ತು ಮೊದಲ ನೋಟಕ್ಕೆ ಕ್ರಾಸ್‌ನಂತೆಯೇ ತೋರುತ್ತಿತ್ತು. ಆದರೆ ಅದು ಅದೇ ಹೊಟೇಲ್ ಜಾಹೀರಾತಿನ ಪ್ಲೇಕಾರ್ಡ್ ಆಗಿತ್ತು.
 “ನನಗೆ ಪ್ರೀತಿ ಅಂದ್ರೇನು ಅಂತ ಸರಿಯಾಗಿ ತಿಳಿದಿಲ್ಲ” ನಾನು ಅವಳ ಮಾತಿನ ಮೊದಲ ಕೊಂಡಿಗೆ ಉತ್ತರಿಸಿದೆ.
 ನನ್ನ ಕಣ್ಣುಗಳು ಒಂದು ಚೀನೀ ರೆಸ್ಟೋರೆಂಟಿನ ಸೈನ್‌ಬೋರ್ಡನ್ನು ಹುಡುಕುತ್ತಿದ್ದವು.
 ತನಗೆ ಹಸಿವಿಲ್ಲವೆಂದು ಅವಳಂತೂ ಹೇಳಿದ್ದಳು, ಆದರೆ ಅವಳು ಉಣ್ಣುವುದಕ್ಕಿಂತಲೂ ಹೆಚ್ಚಿಗೆಯೇ ಉಂಡಳು. ಮರಳಿ ಬರುವಾಗ ಅವಳು ಒಂದು ಅಗತ್ಯ ಕೆಲಸಕ್ಕಾಗಿ ತನ್ನ ಕಂಪನಿಯ ಅಧಿಕಾರಿಯೊಬ್ಬರ ಮನೆಗೆ ಹೋಗಬೇಕಿತ್ತು. ನಾವು ನಮ್ಮ- ನಮ್ಮ ಟಿಕೆಟ್ ಖರೀದಿಸಿ ಒಂದೇ ರೈಲಿಗೆ ಹತ್ತಿದೆವು. ಪ್ರಯಾಣದ ಮಧ್ಯೆ ಮೌನ ವಹಿಸಿದ್ದೆವು. ಆದರೆ ಮೌನರಾಗಿದ್ದಾಗ್ಯೂ ವಿಷಯವನ್ನು ನಾವು ಪರಸ್ಪರರಿಗೆ ಹೇಳಿಕೊಳ್ಳುತ್ತಿದ್ದೆವು. ನಾವು ಗುಡ್‌ಬೈ ಹೇಳಿ ಪರಸ್ಪರರನ್ನು ಸಂಕೋಚಕ್ಕೊಳಪಡಿಸಿಕೊಳ್ಳುವುದಿಲ್ಲವೆಂ ದು ಬೆಳಿಗ್ಗೆ ಫೋನ್‌ನಲ್ಲಿ ಮಾತನಾಡಿಕೊಂಡಿದ್ದೆವು. ಅವಳು ವಿಷಯವನ್ನು ಅರ್ಥ ಮಾಡಿಕೊಳ್ಳುತ್ತಲೂ ಇದ್ದಳು.
 ಟ್ರೈನ್‌ನಲ್ಲಿ ಮೈ ತುಂಬಾ ಬಟ್ಟೆಗಳನ್ನು ಧರಿಸಿ ಊದಿಕೊಂಡ ಪ್ರಯಾಣಿಕರು ಕಿಕ್ಕಿರಿದು ತುಂಬಿದ್ದರು. ಆದರೆ ಚಳಿಗಾಲವಾದ್ದರಿಂದ ಗುಂಪು ಇರುವುದು ಅಹಿತವೆನಿಸುತ್ತಿರಲಿಲ್ಲ. ಅವಳ ಮುಖ ಮಾತ್ರ ಕಾಣಿಸುತ್ತಿರಲಿಲ್ಲ, ಆದರೆ ಅವಳು ತನ್ನ ತೊಡೆಗಳ ಮಧ್ಯೆ ಎರಡೂ ಕೈಗಳಿಂದ ಒಂದು ಟೇಪ್ ರೆಕಾರ್ಡರ್ ಹಿಡಿದು ಮಲಗಿದ್ದಳು. ತಮ್ಮ-ತಮ್ಮ ಮನೆಗಳಿಗೆ ಮರಳಿ ಹೋಗುವ ಆ ಪ್ರಯಾಣಿಕರೆಲ್ಲರೂ ಪ್ರತಿಮೆಗಳಂತೆ ದುರುಗುಟ್ಟಿ ನೋಡುತ್ತಾ ತಮ್ಮ-ತಮ್ಮ ಜಾಗದಲ್ಲಿ ಮೌನದಿಂದ ನಿಂತಿದ್ದರು, ಆದರೆ ಟ್ರೈನ್ ಹೊರಟಾಗ, ಸ್ವಲ್ಪ ಗಾಳಿಯಾಡುತ್ತಿತ್ತು. ಆಗ ಅವಳು ಒಮ್ಮೆ ತನ್ನ ಒಂದು ನಗ್ನ ಮೊಣಕಾಲನ್ನು ಮತ್ತೊಮ್ಮೆ ಇನ್ನೊಂದು ಮೊಣಕಾಲನ್ನು ಹೊರಗಡೆಗೆ ಚಾಚುತ್ತಿದ್ದಳು. ಮಗುದೊಮ್ಮೆ ತನ್ನ ಹೊಟ್ಟೆಯನ್ನು ಬೆನ್ನುಮೂಳೆ ಸಮೇತ ಕೆಳಗೆ ತುರುಕಿಕೊಳ್ಳುತ್ತಿದ್ದಳು, ಇನ್ನೊಮ್ಮೆ ಅದನ್ನು ಉದ್ರೇಕಿಸುವಂತೆ ಮೇಲ್ಭಾಗಕ್ಕೆ ಉಬ್ಬಿಸುತ್ತಿದ್ದಳು. ಆದರೆ ಯಾರೂ ಅವಳೆಡೆಗೆ ನೋಡುತ್ತಿರಲಿಲ್ಲ. ಅವಳಂತಿರುವ ಸಜೀವ ಮತ್ತು ಲವಲವಿಕೆಯ ಇನ್ನೊಂದು ಪೋಸ್ಟರನ್ನು ನಾನು ನೋಡಲಿಲ್ಲ! ಮೋರ್ ಫ್ರೀಡಮ್ ಹಸಿರು ಹುಲ್ಲು ಮೇಲೆ, ಬಾಗಿಲ ಪಕ್ಕದಲ್ಲಿ ನೇತಾಡುತ್ತಾ ಮತ್ತೊಂದು ಪೋಸ್ಟರ್ ಮೇಲೆ ಹರಡಿತ್ತು.
 ಇಳಿಯಬೇಕಿದ್ದ ಸ್ಟೇಶನ್‌ನಲ್ಲಿ ಟ್ರೈನ್ ನಿಂತಾಗ ಅವಳು ಮುಗುಳ್ನಗುತ್ತಾ “ಮತ್ತೆಂದಾದರೂ ಭೇಟಿಯಾಗೋಣ” ಎಂದಳು.
 “ಖಂಡಿತ,” ನಾನು ಮುಗುಳ್ನಕ್ಕೆ. ಟ್ರೈನ್ ಮುಂದಕ್ಕೆ ಚಲಿಸಿದಾಗ ಅವಳು ಫ್ಲಾಟ್‌ಫಾರ್ಮ್ನಲ್ಲಿ ಹೋಗುತ್ತಿರುವುದು ಮತ್ತೆ ಕಂಡಿತು. ನಮ್ಮ ಕಣ್ಣುಗಳು ಕಲೆತಾಗ ಅವಳು ತುಟಿಗಳನ್ನು ಮುಂದೆ ಮಾಡಿಕೊಂಡು ಸಂಜ್ಞೆ ಮಾಡಿ, ಒಂದು ಕೈಯನ್ನು ಮೇಲೆತ್ತಿ ‘ಬೈ-ಬೈ’ ಹೇಳಿದಳು. ಅವಳು ಕೆಲವು ಸೆಕೆಂಡ್‌ಗಳವರೆಗೆ ಕಾಣಿಸಿದಳು.
 ಫ್ಲಾಟ್‌ಫಾರ್ಮ್ನಲ್ಲಿ ಇಳಿಯುತ್ತಲೇ ಲೌಡ್‌ಸ್ಪೀಕರ್‌ನಲ್ಲಿ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸಿದ್ದಕ್ಕೆ ಧನ್ಯವಾದದ ವಾಕ್ಯಗಳು ಕೇಳಿಸಿದವು, “ಗೋಜ್ಯೋಶಾ ಕುದಾಸಾಯಿಮಾಶಿತೆ, ಅರಿಗಾತೋಓ ಗೋಜಾಯಿಮಾಸು”.
 ಎಷ್ಟೇ ಚಳಿ-ಶೆಖೆ ಇರಲಿ, ಎಂಥ ಗುಂಪೇ ಇರಲಿ, ಇದೇ ವಾಕ್ಯಗಳು ! ಧನ್ಯವಾದ ಹೇಳುವವರಿಗೆ ಇದು ಖಂಡಿತ ತಿಳಿಯುವುದಿಲ್ಲ. ಯಾಕೆಂದರೆ ಅದು ಟೇಪ್ ಮಾಡಿದ ಧ್ವನಿಯಾಗಿತ್ತು.


 -5-

 ಸ್ಟೇಶನ್ನಿನ ಮೆಟ್ಟಿಲುಗಳಿಂದ ಇಳಿಯುವಾಗ, ಕೆಳಗೆ ಹಳದಿಯ ದಟ್ಟ ಬೆಳಕಿನಲ್ಲಿ ಚಿಕ್ಕಿ ಚೌಕುಳಿಗಳುಳ್ಳ ಉದ್ದಗಲದ ನೆಲಗಟ್ಟಿನ ಮೇಲೆ ಒಬ್ಬ ವ್ಯಕ್ತಿ ಬಿದ್ದಿರುವುದು ಕಂಡಿತು. ಅವನನ್ನು ಯಾರೋ ಥಳಿಸಿದ್ದರು, ಯಾಕೆಂದರೆ ಅವನ ಮೂಗಿನಿಂದ ಬಿಸಿ ರಕ್ತ ಹೊಳೆಯುತ್ತಿತ್ತು.
 ಬಿಳಿ ಟೋಪಿ ಧರಿಸಿ ಅಂಗಡಿಯಾತನಂತೆ ಕಾಣಿಸುತ್ತಿದ್ದ ವ್ಯಕ್ತಿಯೊಬ್ಬ ಅವನ ಮೇಲೆ ಬಾಗಿ, ಬಹುಶಃ ಸಾಕಷ್ಟು ಸಮಯದಿಂದಲೇ ಅವನಿಗೆ ನಿರಂತರವಾಗಿ ಸಮಾಧಾನ ಹೇಳುತ್ತಿದ್ದ. ಅವನು ಬಿದ್ದಿದ್ದ ವ್ಯಕ್ತಿಯ ಕಪ್ಪು ಬ್ಯಾಗನ್ನು ತನ್ನ ಕೈಗೆ ನೇತುಹಾಕಿಕೊಂಡು, “ಇದನ್ನು ತೆಗೆದುಕೊಂಡು, ಈಗಲಾಗದರೂ ನಿನ್ನ ಮನೆಗೆ ಮರಳಿ ಹೋಗು” ಎನ್ನುತ್ತಿದ್ದ.
 ರೈಲುಗಳಿಂದ ಇಳಿದು ಮತ್ತು ಹತ್ತಲು ಹೋಗುತ್ತಿದ್ದ ಜನರ ಗುಂಪು ಅವರಿಬ್ಬರೆಡೆಗೆ ಉದಾಸೀನದ ದೃಷ್ಟಿ ಬೀರಿ ಮುಂದಕ್ಕೆ ಸಾಗುತ್ತಿತ್ತು.
 ಆ ಬಿಳಿ ಟೋಪಿಧಾರಿ ವ್ಯಕ್ತಿ ಈ ನಡುವೆ ಯಾವಾಗಲೋ ರಹಸ್ಯಮಯವಾಗಿ, ಹಳದಿ ಬೆಳಕಿನ ಕೆಳಗೆ ಅವನು ಮತ್ತು ಅವನ ಬ್ಯಾಗನ್ನು ಬಿಟ್ಟು ಕಣ್ಮರೆಯಾಗಿದ್ದ !
 ಅವನೆದ್ದು ಕೂತ, ಆದರೆ ತಲೆತಗ್ಗಿಸಿಕೊಂಡು ಒಂದೇ ಸಮನೆ ರೋದಿಸುತ್ತಿದ್ದ.
 ಪಾಪ, ಅವನು ಒಮ್ಮೆಲೆ ಒಂಟಿಯಾಗಿದ್ದ.
 ನಾನು ಅವನಿಗೆ ಸಹಾಯ ಮಾಡುವ ಇಚ್ಛೆಯಿಂದ ಅವನ ಬಳಿಗೆ ಹೋದಾಗ ಅವನು ನನ್ನನ್ನು ಹೆಂಡತಿಯಂತೆ ಅಥವಾ ಶತ್ರವಿನಂತೆ ಅಪ್ಪಿಕೊಂಡ.
 ಅವನು ನನಗಂಟಿಕೊಂಡು ರೋದಿಸುತ್ತಾ ಒಂದೇ ಸಮನೆ ಕ್ಷಮೆಯಾಚಿಸುತ್ತಿದ್ದ, ಅವನೂ ಸಹ ರಜಾ ದಿನದ ಮಜ ಅನುಭವಿಸಿ ಮರುಳುತ್ತಿದ್ದು, ಸಾಕಷ್ಟು ನಶೆಯಲ್ಲಿದ್ದ. ಹೀಗಾಗಿ ನಾನು ಅವನನ್ನು ಒಪ್ಪುವುದಿಲ್ಲವೆಂಬ ಕಿಂಚಿತ್ ಭಯವೂ ಆಗುತ್ತಿರಲಿಲ್ಲ.
 “ನಾನು ಹುಟ್ಟಿದ್ದು ಸನ್ 38ರಲ್ಲಿ.” ಅವನು ಬಿಕ್ಕಳಿಸಿದ.
 ನಾನು ತಕ್ಷಣ ಲೆಕ್ಕ ಹಾಕಿದೆ. ವಯಸ್ಸಿನಲ್ಲಿ ಅವನು ನನಗಿಂತ ದೊಡ್ಡವನಾಗಿದ್ದ!
 “ನನ್ನನ್ನು ನೋಡ್ತೀದ್ದೀಯಲ್ಲ!” ಅವನು ಮತ್ತೆ ಬಿಕ್ಕಳಿಸಿದ.
 ಅವನ ಎಡಗಲ್ಲದ ಮೇಲೆ, ಕಣ್ಣಿನ ಕೆಳಗೆ ಉಗುರಿನಿಂದ ಪರಚಿದ ಒಂದು ದೊಡ್ಡ ಕೆಂಪು ಗೆರೆ ಮೂಡಿತ್ತು- ಹಗಲು ವೇಳೆಯಲ್ಲಿ ತೀವ್ರ ಬೆಳಕಿನಂತೆ !
 “ಹೌದು” ನಾನು ಅವನಿಗೆ ಮೆದು ಧ್ವನಿಯಲ್ಲಿ ಹೇಳಿದೆ, “ನೀವಿಲ್ಲಿ ಕೂತು ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯಿರಿ”.
 ಆದರೆ ಆ ದಡಿಯ ಒಂದೇ ಸಮನೆ, ನನ್ನನ್ನಪ್ಪಿಕೊಂಡು ರೋದಿಸುತ್ತಿದ್ದ !
 ಅವನ ಮೂಗಿನಿಂದ ರಕ್ತ ಬೆರೆತ ಹಳದಿ ಸಿಂಬಳ ಸುರಿಯುತ್ತಿತ್ತು. ನಾನು ಬೆಲೆಬಾಳುವ ಓವರ್‌ಕೋಟ್ ಧರಿಸಿದ್ದೆ.
 ಅವನನ್ನು ನೋಡಿದೆ, ಮತ್ತೂ ಬಹಳಷ್ಟು ಜನರನ್ನು ನೋಡಿದೆ. ಆದರೆ ದಿನವಿಡೀ ಒಂದೂ ಮುಖವನ್ನು ನೋಡದಾದೆ. ‘ನೀನು ನನ್ನನ್ನು ನೋಡ್ತಿದ್ದೀಯಾ?’ ಅಂತ ನಾನು ಅವನಿಗೆ ಅಥವಾ ಯಾರಿಗೂ ಕೇಳಲಿಲ್ಲ.
 ನೀನು ಐದು ನಿಮಿಷ ಕೂತು ವಿಶ್ರಾಂತಿ ಪಡಿ ಎಂದು ಅವನಿಗೆ ಪದೇ-ಪದೇ ಹೇಳಿದೆ. ಆದರೆ ಅವನು ನನ್ನನ್ನು ಶತ್ರುವೆಂದು ತಿಳಿದು ನನ್ನನ್ನು ಬಿಗಿಯಾಗಿ ಹಿಡಿದು ರೋದಿಸುತ್ತಲೇ ಇದ್ದ !
 ಕಡೆಗೆ ನಾನು ಅವನಿಂದ ಹೇಗೋ ಪಾರಾಗಿ ಮುಂದಕ್ಕೆ ಹೋದೆ.
 ರಸ್ತೆಯ ಫುಟ್‌ಪಾತ್‌ನಲ್ಲಿ ವ್ಯಕ್ತಿಯೊಬ್ಬ ನನ್ನೆದುರು ಹೋಗುತ್ತಿದ್ದ. ಅವನು ಸಣ್ಣ ನೆಕ್-ಟೈಯನ್ನು ಕಳಚಿ ಅದನ್ನು ಬಲಗೈಯಲ್ಲಿ ಹಿಡಿದು ನೊಣಗಳನ್ನು ಓಡಿಸುವ ಯಂತ್ರದಂತೆ ಅತ್ತ-ಇತ್ತ, ಹಿಂದೆ-ಮುಂದೆ ಕೊಡವುತ್ತಿದ್ದ. ರಾತ್ರಿ ವೇಳೆ ನೊಣಗಳು ಹಾರುವುದಿಲ್ಲ, ಆದರೂ ಕೊಡವುತ್ತಿದ್ದ. ಮನೆ ಬಂದಾಗ ಹಾಗೆಯೇ ಕೊಡವುತ್ತಾ ಓರ್ವ ವಿಜೇತನಂತೆ ಠೀವಿಯಿಂದ ಮನೆಯೊಳಗೆ ನುಗ್ಗಿದ.
 ಸರ್ಕಲ್‌ನ ಒಂದು ಮೂಲೆಯಲ್ಲಿ ಅನೇಕ ಅಂತಸ್ತುಗಳುಳ್ಳ ಬದನೆ ಬಣ್ಣದ ಎತ್ತರವಾದ ಕಟ್ಟಡವಿತ್ತು. ಹೊರಗೆ ಕಬ್ಬಿಣದ ಸಂಕೀರ್ಣ ಸುರುಳಿಯಾಕಾರದ ಮೆಟ್ಟಿಲಿತ್ತು. ಅದು ಫುಟ್‌ಪಾತ್‌ನಿಂದ ಕಟ್ಟಡದ ಅತಿ ಎತ್ತರದ ಅಂತಸ್ತಿನವರೆಗೂ ಹೋಗುತ್ತಿತ್ತು. ಅಲ್ಲಿಂದ ಒಬ್ಬನೂ ಎಂದೂ ಮೇಲೆ ಹತ್ತಿರಲಾರ, ಯಾಕೆಂದರೆ ಅದು ಬೆಂಕಿ ಅಥವಾ ಭೂಕಂಪದಂತಹ ಅಪಘಾತದ ಸಂದರ್ಭಗಳಲ್ಲಿ ಮೇಲಿನಿಂದ ಕೆಳಗೆ ಇಳಿಯಲು ನಿರ್ಮಿಸಲಾಗಿತ್ತು. ರಾತ್ರಿ ಮತ್ತು ಚಳಿಯಿಂದಾಗಿ ಆ ಕಟ್ಟಡ ಮತ್ತೂ ಕಂಪಿಸುತ್ತಿರುವಂತೆ ಹಾಗೂ ಕಪ್ಪಾಗಿರುವಂತೆ ತೋರುತ್ತಿತ್ತು.
 ಬೆಳಿಗ್ಗೆ ಹೊರಟವನು ಕತ್ತಲಾದ ನಂತರ ಎಂದಿನಂತೆ ರಜಾ ದಿನದಂದೂ ದಣಿದು ಮನೆಗೆ ಮರಳಿ ಬಂದಿದ್ದೆ. ನಗುವ ಹುಚ್ಚನೊಬ್ಬ ಕ್ರಮೇಣ ಗಂಭೀರನಾಗುವಂತೆ ಹಾಗೂ ಕೊನೆಗೆ ಪೂರ್ಣ ರೂಪದಲ್ಲಿ ಗಂಭೀರನಾದಂತೆ ಆ ದಿನವಿತ್ತು !
 ಭಾನುವಾರವಾದ್ದರಿಂದ ಎಲ್ಲೆಲ್ಲೂ ಮೌನವಿತ್ತು. ಬಳಿಯಿದ್ದ ರಸ್ತೆಯಲ್ಲಿ ಆಗಾಗ್ಗೆ ಕಾರು ಹಾದುಹೋದಾಗ ನಿಶ್ಶಬ್ದತೆಗೆ ಭಂಗ ಬರುತ್ತಿತ್ತು - ಆದರೆ ಅದೂ ಸಹ ವಿಳಂಬವಾಗಿ. ಸಂಜೆ ನಂತರದ ಬೆಳಕು ಪೂರ್ಣವಾಗಿ ಮರೆಯಾಗಿರಲಿಲ್ಲ. ನಾನು ಅತ್ತ-ಇತ್ತ, ದೂರ-ಸಮೀಪದ ಅಲ್ಪ-ಸ್ವಲ್ಪ ಧ್ವನಿಗಳನ್ನು ಕೇಳುತ್ತಾ ತೀವ್ರ ಬೆಳಕು ಅಥವಾ ದಟ್ಟ ಅಂಧಕಾರವನ್ನು ತಡಕಾಡುತ್ತಿದ್ದೆ.
 ಸುಮಾರು ಒಂಬತ್ತು ಗಂಟೆಗೆ ಫೋನ್ ಬಂತು. ಫೋನ್ ಅವಳೇ ಮಾಡಿದ್ದಳು. ಅವಳ ಧ್ವನಿ ಭಾರವಾಗಿತ್ತು.
 “ಎಲ್ಲಿದ್ದೀಯಾ?”
 “ನನ್ನ ಮನೆ ಬಳಿ”.
 ನಾನು ಚಿಂತಿಸಬಾರದೆಂದು ಅವಳು ಫೋನ್ ಮಾಡಿದ್ದಳು. ಅವಳ ಧ್ವನಿಯಿಂದ, ಅವಳು ರೋದಿಸುತ್ತಿದ್ದಾಳೆಂದು ಅನ್ನಿಸಿತು. ಅವಳ ಮನಸ್ಸಿನಲ್ಲಿ ಏನೋ ಇದೆ, ಅದನ್ನು ಅವಳು ಹೇಳಲು ಬಯಸುತ್ತಿದ್ದಳು. ಆದರೆ ಹೇಳಲು ಸಾಧ್ಯವಾಗುತ್ತಿರಲಿಲ್ಲವೆಂದು ಅನ್ನಿಸಿತು. ಕೇಳಿದರೂ ಅವಳು ಹೇಳಲಿಲ್ಲ.


 -6-


 “ನೀನು ನನ್ನನ್ನು ನಿಜವಾಗ್ಲೂ ಪ್ರೀತಿಸ್ತೀಯಾ?” ಅವಳು ಇದ್ದಕ್ಕಿದ್ದಂತೆ ಕೇಳಿದಳು.
 “ಈಗೇಕೆ ಈ ಪ್ರಶ್ನೆ ? ನಾಳೆ ಮತ್ತೆ ಫೋನ್ ಮಾಡಬೇಕೆಂದು ಅನ್ನಿಸಿದರೆ ಫೋನ್ ಮಾಡು”.
 “ಹೂಂ, ಮಾಡ್ತೀನಿ.”
 “ಎಷ್ಟು ಗಂಟೆಗೆ?”
 “ಬೆಳಿಗ್ಗೆ ಆಫೀಸ್‌ಗೆ ಹೋಗುವಾಗ.”
 “ನಾನು ಕಾಯ್ತೀನಿ.”
 ನನ್ನ ಕೋಣೆಯೆಡೆಗೆ ಮರಳಿ ಹೋಗುವಾಗ ಮತ್ತೆ ಫೋನ್ ಬಂತು.
 “ಈ ರೀತಿ ಪದೇ-ಪದೇ ಫೋನ್ ಮಾಡ್ತಿರೋದಕ್ಕೆ ಕ್ಷಮಿಸು”
 “ನೀನು ಹೇಳಬೇಕೆಂದಿರುವುದನ್ನು ಹೇಳಿ ಬಿಡು”
 “ನಿನ್ನನ್ನು ಭೇಟಿಯಾಗಲು ಇಷ್ಟವಿಲ್ಲ”
 “ಯಾರನ್ನು? ನನ್ನನ್ನು?”
 “ಹೂಂ, ಇನ್ನು ನಿನ್ನನ್ನು ಭೇಟಿಯಾಗಲು ಇಷ್ಟವಿಲ್ಲ. ನಾನೇನು ಆಟದ ವಸ್ತುವಲ್ಲ. ಒಂದು ವೇಳೆ ನಿನಗೆ ಒಂದೇ ಆಟದ ವಸ್ತು ಬೇಕೆಂದರೆ ಇನ್ನೊಂದನ್ನು ಹುಡುಕಿಕೋ”.
 “ನೀನು ಹೇಳೋದು ಸರಿ, ಆದರೆ ಆಟದ ವಸ್ತು ಯಾರು, ನೀನೋ ಅಥವಾ ನಾನೋ, ನನಗೆ ತಿಳಿದಿಲ್ಲ. ಬಹುಶಃ ಇಬ್ಬರೂ ಇರ‍್ಬೇಕು. ಒಂದು ವೇಳೆ ನೀನು ನನ್ನನ್ನು ಈಗ ಭೇಟಿಯಾಗಲು ಇಷ್ಟಪಡದಿದ್ದರೆ, ಇದೂ ಸರಿಯೇ. ನಾನು ಈ ಮೊದಲೇ, ಬೆಂಕಿ ಪೊಟ್ಟಣಕ್ಕೆ ಕಡ್ಡಿ ಗೀರಿದ ಮೇಲೆ ಬೆಂಕಿಯಂತೆ ನೀನು ಸ್ವತಂತ್ರಳು ಅಂತ ಹೇಳಿದ್ದೆ !”
 ಅವಳು ಎರಡು ಅಥವಾ ಮೂರು ಸೆಕೆಂಡ್ ಮೌನಿಯಾಗಿದ್ದು ನಂತರ ಹೇಳಿದಳು, “ಹೌದು, ನಾನು ತೀರ್ಮಾನಿಸಿರುವೆ. ಸಾಯೋನಾರಾ!”
 ಅವಳು ರಿಸೀವರ್ ಇಟ್ಟಳು.
 ಕೇವಲ ಒಂದು ದಿನ, ಅಲ್ಲ ಒಂದು ದಿನವೂ ಅಲ್ಲ, ಅರ್ಧ ದಿನ. ಸೆಕ್ಸ್ ಕಂಪ್ಲೀಟ್ ವಿದ್ ಡಿನ್ನರ್ ಎಂದು ಅವಳೇ ಹೇಳಿದ್ದಳು. ಇಡೀ ಮಧ್ಯಾಹ್ನ ಗಂಡು-ಹೆಣ್ಣು ಮೊಲಗಳಂತೆ ಪರಸ್ಪರ ದೇಹದೊಂದಿಗೆ ಸೆಣಸಾಡಿ ನಂತರ, ಹೊಟ್ಟೆ ತುಂಬಾ ಉಂಡು, ಸ್ಟೇಶನ್ ಫ್ಲಾಟ್‌ಪಾರ್ಮ್ನಲ್ಲಿ ತುಟಿಗಳನ್ನು ಮುಂದೆ ಮಾಡಿ ಗಾಳಿಯಲ್ಲಿ ಮುತ್ತಿಕ್ಕಿ, ಮೂವತ್ತು ನಿಮಿಷಗಳ ನಂತರ ಅವಳ ಬಾಯಿಯಲ್ಲಿ ‘ನಾನು ಅವಳನ್ನು ಪ್ರೀತಿಸುತ್ತೇನೆಯೇ?’ (ಇದಕ್ಕೂ ಮುವತ್ತು ನಿಮಿಷ ಮೊದಲಲ್ಲ) ಎಂಬ ಪ್ರಶ್ನೆ ಎದುರಾದದದ್ದು ಆಶ್ಚರ್ಯವಲ್ಲವೇ? ನಾನು, ಅವಳು, ನಾವೆಲ್ಲಾ ಪರಸ್ಪರ ಸ್ಪರ್ಶಿಸಿದಾಗ ಮೃದು ಮತ್ತು ಬೆಚ್ಚಗಿನ ಸ್ಪರ್ಶದಿಂದ ಕಲ್ಲಾಗುತ್ತೇವೆ. ನಾವೆಲ್ಲಾ ದೇವರಿಗೆ ಪ್ರತಿಕೂಲವಲ್ಲವೆ !
 ಒಂದೇ ಬಣ್ಣದ ಪೋಸ್ಟರ್, ಅಲ್ಲಲ್ಲಿ ಅಂಟಿಸಿದ ಪ್ರತಿಯಂತೆ ಆಕರ್ಷಕ ಮತ್ತು ನಿರರ್ಥಕವಾಗಿ ಕಂಡಿತು. ಮತ್ತೊಂದು ದಿನ ಕಳೆಯಿತು !
***

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.