ಒಂದು ಕಾಡಿನಲ್ಲಿ ಹುಲಿ, ಚಿರತೆ, ನರಿ, ನಾಯಿ, ಕೋತಿ, ಹಾವು, ಚೇಳು, ಹಂದಿ, ಕರಡಿ ಸೇರಿದಂತೆ ಹತ್ತಾರು ಪ್ರಾಣಿ–ಪಕ್ಷಿಗಳು ಇದ್ದವು. ಜನ ಕಾಡಿನ ಒಳಗೆ ಹೋಗುತ್ತಿರಲಿಲ್ಲ. ಹೋದವರು ಹಿಂದಿರುಗಿ ಬರುವುದಿಲ್ಲ ಎಂಬ ಪ್ರತೀತಿ ಇತ್ತು. ಮೃಗಗಳು ಅಪ್ಪಿತಪ್ಪಿ ಕೂಡ ಕಾಡಿನಿಂದ ಹೊರಗೆ ಬಂದು ಜನರಿಗೆ ತೊಂದರೆ ಕೊಡುತ್ತಿರಲಿಲ್ಲ.
ಒಂದು ಸಲ ಒಬ್ಬ ಅದೆಲ್ಲಿಂದಲೋ ಬಂದ. ಅವನ ಹೆಸರು ರಂಗ. ಅವನಿಗೆ ಕಾಡಿನಲ್ಲಿ ಪ್ರಾಣಿಗಳಿವೆ ಎಂಬ ಪರಿವೇ ಇರಲಿಲ್ಲ. ಹೆಗಲಿಗೆ ಒಂದು ಬ್ಯಾಗ್ ಹಾಕಿಕೊಂಡು ಸಲೀಸಾಗಿ ನಡೆದ. ಕಾಡಿನಲ್ಲಿ ಗಂವ್ ಎನ್ನುವ ಮೌನ ಇತ್ತು. ನಡೆಯುತ್ತಿರುವಾಗ ‘ಸರ ಸರ’ ಶಬ್ದ ಕೇಳಿ ಬೆಚ್ಚಿಬಿದ್ದು ಅತ್ತಿತ್ತ ನೋಡಿದ. ಮುಂದೆ ಒಂದು ಹಾವು ಹರಿದು ಹೋಗುತ್ತಿತ್ತು. ‘ಸದ್ಯ, ಹಾವನ್ನು ತುಳಿಯಲಿಲ್ಲ. ಬಚಾವಾದೆ’ ಎಂದು ಉಸಿರು ಬಿಟ್ಟ. ಆದರೂ ಎದೆ ಒಡೆದು ಹೋಗುವಂತಹ ಭಯ ಆಗಿತ್ತು.
ಈ ಕಾಡಿನ ಸಹವಾಸ ಬೇಡ ಎಂದು ಹೊರಗೆ ಹೋಗುವ ತೀರ್ಮಾನ ಮಾಡಿದ. ಆದರೆ ದಾರಿ ಗೊತ್ತಾಗಲಿಲ್ಲ. ಸುತ್ತಲೂ ದಟ್ಟವಾಗಿ ಮರಗಳು, ಬಳ್ಳಿಗಳು ಬೆಳೆದಿದ್ದವು. ಪ್ರಾಣಿಗಳ ಗರ್ಜನೆಗಳು ಕೇಳುತ್ತಿದ್ದವು. ಏನು ಮಾಡುವುದು ಎಂದು ನೋಡುತ್ತಾ ನಿಂತ ರಂಗ. ಅವನ ಎದೆ ಹೊಡೆದುಕೊಳ್ಳುತ್ತಿತ್ತು.
‘ಗಾ... ಗಂ...’ ಎಂಬ ಭಯಂಕರ ಧ್ವನಿ ಕೇಳಿಬಂತು. ತಲೆ ಎತ್ತಿ ನೋಡಿದ. ಸ್ವಲ್ಪ ದೂರದಲ್ಲಿ ಎಂಟು ಅಡಿ ಎತ್ತರದ ಒಬ್ಬ ಕಪ್ಪನೆಯ ವ್ಯಕ್ತಿ ರಂಗನತ್ತ ಬರುತ್ತಿದ್ದ. ಯಾರಿದು ಈ ರಾಕ್ಷಸ ಎಂದು ದಿಟ್ಟಿಸಿ ನೋಡಿದಾಗ, ಅದು ಮನುಷ್ಯ ಅಲ್ಲ ದೊಡ್ಡ ಕರಡಿ ಎಂಬುದು ಗೊತ್ತಾಯಿತು. ಎಷ್ಟು ಎತ್ತರವೋ ಅಷ್ಟೇ ದಷ್ಟಪುಷ್ಟವಾಗಿತ್ತು ಅದು. ಒಂದೊಂದೇ ಹೆಜ್ಜೆ ಮುಂದಿಡುತ್ತ ರಂಗನತ್ತ ಅದು ಬರುತ್ತಿತ್ತು.
ರಂಗನ ಮೈ ಬೆವರಿತು. ಬಾಯಿ ಒಣಗಿತು. ‘ಎಂತಹ ವಿಪತ್ತಿನಲ್ಲೂ ಧೈರ್ಯ ಕಳೆದುಕೊಳ್ಳಬಾರದು. ಪ್ರಾಣಿಗಳು ಯಾರ ಮೇಲೂ ಎರಗುವುದಿಲ್ಲ. ತಮ್ಮನ್ನು ಹೆದರಿಸಿದರೆ ಅಥವಾ ಕೊಲ್ಲಲು ಬಂದರೆ ಬಿಡುವುದಿಲ್ಲ’ ಎಂದು ಶಾಲೆಯಲ್ಲಿ ಉಪಾಧ್ಯಾಯರು ಹೇಳಿದ ಮಾತು ನೆನಪಾಗಿ ರಂಗ ಹೆದರಿಕೆಯಿಂದ ಥರ ಥರ ನಡುಗುತ್ತಿದ್ದರೂ ಧೈರ್ಯವಂತನಂತೆ ನಿಂತ. ಮೆಲ್ಲಗೆ ನಕ್ಕಂತೆ ಮಾಡಿದ. ಟಾಟಾ ಹೇಳುವಂತೆ ಬಲಗೈ ಆಡಿಸಿದ.
ಕರಡಿ ಮತ್ತೆ ಭಯಂಕರವಾಗಿ ಗರ್ಜಿಸಿತು. ಆಗಲೂ ರಂಗ ಕೈ ಆಡಿಸಿದ. ಕರಡಿ ದುರುಗುಟ್ಟಿ ನೋಡುತ್ತಾ ನಿಂತಿತು. ಹಿಂದೆ ಸರಿಯಲಿಲ್ಲ, ಮುಂದೆ ಬರಲೂ ಇಲ್ಲ. ರಂಗ ಚೀಲದಲ್ಲಿ ಕೈ ಹಾಕಿ ಅದರಲ್ಲಿದ್ದ ಒಂದು ಪಾಕೆಟ್ ತೆಗೆದ. ಇವನು ತನ್ನನ್ನು ಕೊಲ್ಲಲು ಏನೋ ಅಯುಧ ತೆಗೆಯುತ್ತಿದ್ದಾನೆ ಎಂದು ಭಾವಿಸಿದ ಕರಡಿ ಮೈ ಸೆಟೆದು, ಎರಗಲು ಸಿದ್ಧವಾಯಿತು. ಅಪ್ಪಳಿಸುವ ಉದ್ದೇಶದಿಂದಲೋ ಎಂಬಂತೆ ಎರಡೂ ಕೈ ಎತ್ತಿತು.
ರಂಗ ತೆಗೆದಿದ್ದು ಬಿಸ್ಕತ್ ಪಾಕೆಟ್. ಪಾಕೆಟ್‌ನಿಂದ ಒಂದು ಬಿಸ್ಕತ್ ತೆಗೆದು ಅದರ ಮುಂದೆ ತಗೋ ಎನ್ನುವಂತೆ ಹಿಡಿದ. ಕರಡಿ ಕೈ ಚಾಚಲಿಲ್ಲ. ಬಿಸ್ಕತ್ತಿನ ಒಂದು ತುಂಡನ್ನು ರಂಗ ತಾನು ತಿಂದು, ಮತ್ತೆ ಅದರತ್ತ ಕೈ ಚಾಚಿದ. ಕರಡಿ ಗಬ್ಬಕ್ಕನೆ ಅದನ್ನು ತೆಗೆದುಕೊಂಡು ತಿಂದಿತು. ಬಿಸ್ಕತ್ತಿನ ರುಚಿ ಅದಕ್ಕೆ ಇಷ್ಟವಾಯಿತು. ಬಾಯಿ ಚಪ್ಪರಿಸಿ ಮತ್ತೆ ಕೈ ಚಾಚಿತು. ರಂಗನಿಗೆ ಸಂತೋಷವಾಗಿ ಪಾಕೆಟ್ಟಿನಿಂದ ಮತ್ತೊಂದು ಬಿಸ್ಕತ್ತು ತೆಗೆಯಲು ಮುಂದಾದ. ಆಗ ಕರಡಿ ಒಂದೇ ಸಲಕ್ಕೆ ಅದನ್ನು ಕಿತ್ತುಕೊಂಡಿತು. ಒಂದು ಬಿಸ್ಕತ್ತು ತೆಗೆದು ಅವನಿಗೆ ಕೊಟ್ಟು ಉಳಿದ ಎಲ್ಲ ಬಿಸ್ಕತ್ತುಗಳನ್ನು ಗಬಗಬನೆ ತಿಂದುಬಿಟ್ಟಿತು.
ಈಗ ರಂಗನಿಗೆ ಕರಡಿಯು ಮನೆಯಲ್ಲಿನ ಬೆಕ್ಕಿನಂತೆ, ನಾಯಿಯಂತೆ, ಹಸುವಿನಂತೆ ಕಂಡಿತು. ಅದರ ಬಗ್ಗೆ ಇದ್ದ ಭಯ ಹೊರಟುಹೋಯಿತು. ಹತ್ತಿರ ಹೋಗಿ ಮೈಸವರಿದಾಗ ಅದು ಇನ್ನಿಷ್ಟು ನೇವರಿಸು ಎಂಬಂತೆ ಮೈ ಒಡ್ಡಿತು. ನಂತರ ಕರಡಿ ಅವನ ಕಡೆ ನೋಡಿ ಮುಂದೆ ಹೊರಟಿತು.
‘ಕರಡಿಯಿಂದ ಬಚಾವಾದೆ’ ಎಂದುಕೊಂಡ ರಂಗ. ಆದರೆ ಕರಡಿ ದಾಪುಗಾಲು ಹಾಕುತ್ತ ಬರತೊಡಗಿತು. ರಂಗ ಹೆದರಿದ, ಓಡಬೇಕು ಅಂದುಕೊಂಡ. ಆದರೆ ಎತ್ತ ಓಡುವುದು ಎಂಬುದು ಗೊತ್ತಾಗಲಿಲ್ಲ. ಅವನ ಕಾಲಲ್ಲಿ ಶಕ್ತಿಯೇ ಇರಲಿಲ್ಲ. ಕರಡಿ ಅವನ ಕೈ ಹಿಡಿದು ತನ್ನ ಹಿಂದೆ ಬಾ ಎನ್ನುವಂತೆ ಎಳೆಯಿತು. ಅವನು ಹಿಂಬಾಲಿಸಿದ. ಸ್ವಲ್ಪ ದೂರದಲ್ಲಿ ಒಂದು ಮರದ ಕೊಂಬೆಗಳಿಗೆ ಜೇನು ಗೂಡುಗಳು ತೂಗಿದ್ದವು. ಕರಡಿ ಒಂದು ಗೂಡು ಕಿತ್ತು, ಒಂದು ಎಲೆಯ ಮೇಲೆ ಜೇನು ಹಿಂಡಿ ಅವನಿಗೆ ಕೊಟ್ಟಿತು. ರುಚಿಯಾದ ಜೇನು ಅದು. ಹಸಿದಿದ್ದ ರಂಗನಿಗೆ ಅದು ಅಮೃತದಂತೆ ಕಂಡಿತು. ಅವನು ಅದನ್ನು ಸಂತೊಷದಿಂದ ಸವಿದಿದ್ದನ್ನು ಕಂಡು ಕರಡಿಯೂ ಖುಷಿಗೊಂಡಿತು.
ರಂಗ ಕಾಡಿನಿಂದ ಹೊರಗೆ ಹೊರಟುಬಿಡಬೇಕು ಎಂದು ಎರಡು ಹೆಜ್ಜೆ ಮುಂದಿಟ್ಟು ನೋಡಿದಾಗ, ಹುಲಿ, ನರಿ, ನಾಯಿ ಎಲ್ಲ ನಿಂತಿರುವುದು ಕಂಡಿತು. ಒಂದು ತೋಳ ಇವನನ್ನು ಬಗೆದು ತಿನ್ನಲು ನಾಲಿಗೆ ಚಾಚಿ ನಿಂತಿತ್ತು. ಇವನು ತತ್ತರಿಸಿಹೋದ. ಅವನಿಗೆ ಕರಡಿಯೇ ತನ್ನ ರಕ್ಷಕನಾಗಿ ಕಂಡಿತು. ಹೆದರಿ ಕಂಗಾಲಾಗಿ ಅದರ ಬಳಿ ಓಡಿದ.
ಕರಡಿ ಅವನನ್ನು ಹಿಡಿದುಕೊಂಡು ಸುತ್ತಲೂ ದುರುಗುಟ್ಟಿ ನೋಡಿತು. ಉಳಿದ ಪ್ರಾಣಿಗಳು ಒಂದು ಹೆಜ್ಜೆ ಮುಂದೆ ಇಡಲೂ ಹೆದರಿದವು. ಕರಡಿ ಅವನ ಕಡೆ ನೋಡಿ ಮುಂದೆ ನಡೆಯಿತು. ರಂಗನೂ ಅದರ ಹಿಂದೆ ನಡೆಯತೊಡಗಿದ. ಪ್ರಾಣಿಗಳು ಮಿಕಿಮಿಕಿ ನೋಡುತ್ತ ಅಲ್ಲೇ ನಿಂತವು. ಕೊನೆಗೆ ಕರಡಿ ಕಾಡಿನಿಂದ ಹೊರಬಂತು, ಅದರ ಹಿಂದೆ ರಂಗನೂ ಬಂದ.
‘ಇದು ನಾಡು. ನನ್ನ ಕಾಡು ನನ್ನದು, ನಿನ್ನ ಊರು ನಿನ್ನದು’ ಎನ್ನುವಂತೆ ಕರಡಿ ನಿಂತುಕೊಂಡಿತು. ‘ಹೋಗು, ಮನೆ ಸೇರಿಕೋ’ ಎನ್ನುವಂತೆ ರಂಗನನ್ನು ಮೆಲ್ಲಗೆ ತಳ್ಳಿತು. ಒಂದೆರಡು ಹೆಜ್ಜೆ ಮುಂದಿಟ್ಟ ರಂಗನಿಗೆ ಅದೇಕೋ ಕರಡಿಯ ಮೇಲೆ ಮಮಕಾರ ಬೆಳೆದಂತೆ ಇತ್ತು. ಹಿಂದಿರುಗಿ ಅದರ ಹತ್ತಿರ ಬಂದು ಮತ್ತೆ ಒಂದು ಬಿಸ್ಕತ್ ಪಾಕೆಟ್ ಕೊಟ್ಟ. ಕರಡಿ ಅದನ್ನು ತೆಗೆದು ಕೊಂಡು ಅವನ ತಲೆಯ ಮೇಲೆ ಕೈ ಆಡಿಸಿ ಟಾಟಾ ಮಾಡಿತು. ಅದರ ಕಣ್ಣಲ್ಲಿ ನೀರು ಇತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.