ADVERTISEMENT

ಕಥೆ: ರಿಜೆಕ್ಟೆಡ್‌ ಕಾಲ್‌

ಶಿವಕುಮಾರ್ ಕಂಪ್ಲಿ
Published 24 ಮಾರ್ಚ್ 2024, 0:12 IST
Last Updated 24 ಮಾರ್ಚ್ 2024, 0:12 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

 ‘ಇದೇನು?, ಆ ಭಾಗ್ಯಲಕ್ಷ್ಮಿಯ ಪೋನ್‌ ಬಂದ್ರೆ ಯಾಕ್‌ ಈಕಿ ಎತ್ತುವಳ್ಳು. ಅದ್ಯಾಕ್ ಹಂಗ್‌ ಕಟ್‌ ಮಾಡತಾಳೆ!?’ ಅಂತ ನಮ್ಮ ಮನೆಯಾತ ತಿಳಿವಲ್ಲದೇ.. ಕೇಳಿದ.

ಆದರೆ… ಆ ಪೋನ್‌ ನನ್ನ ಹಳೇ ಗಾಯವನ್ನ ಮತ್ತಷ್ಟೂ ಕೆರೆದು ರಕ್ತಕಾರಿಸುವಂತೆ... ಆ ಗಾಯವು ಮತ್ತೆ ಊದಿ ತಡೆಯಲಾಗದಂತಹ ನೋವು ಮೂಡಿಸುವಂತೆ…

ADVERTISEMENT

ಆ ಪೋನ್‌ ನಾನು ರಾತ್ರೆಯಲ್ಲಾ, ನಿದ್ದೆಗೆಟ್ಟು ಕಣ್ಣೀರಿಟ್ಟ ಗಳಿಗೆಗಳನ್ನೇ… ನೆನಪಿಸುತ್ತದೆ.
ಆ ಪೋನ್‌ ನನ್ನ ಬಾಲ್ಯವನ್ನ… ಎಲ್ಲಿಗಲ್ಲಿಯೇ ಕೊಯ್ದು ಆ ಸಂಭ್ರಮವನ್ನೆಲ್ಲಾ…ಗುಡಿಸಿ ಕುಪ್ಪೆಯಿಟ್ಟಂತೆಯೇ ….

ಆ ಪೋನ್‌ ನನ್ನನ್ನ ಪಾತಾಳಲೋಕಕ್ಕೆ ಹಾಕಿ ತುಳಿದಂತೆ, ನನ್ನನ್ನ ಕನಿಷ್ಠ ಮನುಷ್ಯಳನ್ನಾಗಿಯೂ ನೋಡದ ಅವಮಾನದಂತೆ….

ಆ ಪೋನ್‌ ಎತ್ತಿಕೊಂಡರೆ ನನ್ನ ಮೆದುಳನ್ನು ನಾನೇ ಕೆದಕಿ ತಿವಿದುಕೊಂಡಂತೆಯೇ…
ಆ ಪೋನ್‌ ನಾನು ಹಿಂದೆ ಹೈಸ್ಕೂಲಿನೊಳಗೆ ಓದುತ್ತಿದ್ದ ದಿನಗಳಲ್ಲಿ ನನ್ನನ್ನು ’ಮಾದರ ಹುಡುಗಿ’, ಮಾದಿಗರವಳೇ,ʼ ಎಂದು ಮನಿ ಹೊರಗೆ ನಿಲ್ಲಿಸಿದ, ನನ್ನ ಕ್ಲಾಸ್‌ಮೇಟ್‌ ಭಾಗ್ಯಲಕ್ಷ್ಮಿ‌ಯದು.
 ***
ನಾನಾಗ ಕೊಮಾರನಹಳ್ಳಿ ಗೌರ‍್ಮೆಂಟ್ ಸಾಲಿಯೊಳಗ ಎಂಟನೇ ಕ್ಲಾಸ್‌ ಓದ್ತಿದ್ದೆ. ನಮ್ಮ ಹೆಡ್‌ ಮೇಸ್ಟರಮ್ಮಾ ಆಗಸ್ಟ್‌ 15 ರ ಪ್ರೋಗ್ರಾಮ್‌ಗಾಗಿ ಕ್ಲಾಸಿನಲ್ಲಿ ಕೆಂಪಗೆ, ಚಂದಕೆ, ಎತ್ತರಕ್ಕೆ ಕಣ್ಣಿಗೆ ಆಸರೆಯಾಗುವಂತಿರುವವರ ಕೈಲ್ಲೇ ಡ್ಯಾನ್ಸ, ಹಾಡು, ನಾಟಕಗಳನ್ನು ಮಾಡಿಸುತಿದ್ದರು.
ಈ ಭಾಗ್ಯಲಕ್ಷ್ಮಿಯೂ… ನಮ್ಮ ಹಳ್ಳಿಯೊಳಗ ಇದ್ದ ಗೌಡರಾಕಿ. ಈಕಿಯು ನೋಡಲು ಚಂದವಾಗಿರುವಳೆಂದು ನಮ್ಮ ಹೆಡ್‌ ಮೇಸ್ಟರಮ್ಮಾ ಈಕಿ ಕೈಲೇ ಜಗ್ಗಿ ಡ್ಯಾನ್ಸ್‌ಮಾಡಿಸುತಿದ್ದರು. ನಮ್ಮ ಸಾಲಿ ವಳಗ ಯಾವ್ ಪಂಕ್ಷನ್‌ ನಡೆದರೂ ಭಾಗ್ಯಲಕ್ಷ್ಮಿಯದೇ ಡ್ಯಾನ್ಸ ಇರಬೇಕು. ಆಕಿ ಕಡೇ ಬೆಂಚ್‌ ನಲ್ಲಿ ಕುಂದ್ರುತ್ತಿದ್ದಳು. ನಮ್ಮ ಕ್ಲಾಸ್‌ ನೊಳಗ ಉದ್ದನರೆಲ್ಲಾ ಹಿಂದಿನ ಬೆಂಚು, ಗಿಡ್ಡನರೆಲ್ಲಾ ಮುಂದಿನ ಬೆಂಚ್‌ ನಲ್ಲಿ ಕುಂದ್ರುತಿದ್ದೆವು.

ನನಗೂ ಕೂಡಾ ಡ್ಯಾನ್ಸು, ಹಾಡು,ನಾಟಕದ ಪರ‍್ಟುಗಳೆಂದರೆ ಪ್ರಾಣ. ಇದನ್ನ ನೋಡಿದ್ದ ಕ್ಲಾಸ್‌ ಟೀಚರ್‌ ಒಮ್ಮೆ ನನಿಗೆ ರೆಕಮೆಂಡ್‌ ಮಾಡಿದರೂ, ನಮ್ಮ ಹೆಡ್‌ ಮೇಸ್ಟರಮ್ಮಾ ಮಾತ್ರ ಅಸಲು ಒಪ್ಪಿಕೊಳ್ಳಲೇ ಇಲ್ಲ!

‘ಅಯ್ಯೋ, ಡ್ಯಾನ್ಸ ಅಂದ್ರೆ ಏನು? ಆ ಹುಡುಗಿನ್ನ ನೋಡ್ರೀ… ಕರ‍್ರಗೆ, ತೆಳ್ಳಗೆ; ಆ ಹುಡುಗಿ, ಊದಿದರೆ ಹಾರಿ ಬೀಳಂಗೈತೆ!‌ ಜನರ ಕಣ್ಣಿಗಂತಾ.. ಒಂದು ಚಂದ ಇರಬೇಡವಾ …?” ಅಂತ ಕೊಸರಿಬಿಟ್ಟರು.

ನಮ್ಮ ಕ್ಲಾಸ್‌ ಟೀಚರ್! ‘ಲೇ… ಹುಡುಗಿ …ಚಂದಾಗಿ ತಿಂದುಂಡು ದುಂಡಗೆ ಬೆಳಿ’ ಅಂದು ಸುಮ್ಮನೆ ಬೆನ್ನುಸವರಿ ಕಳಿಸಿಬಿಟ್ಟಿದ್ದರು.

ಹೋಗಲಿ ಅನ್ನಲಿಕ್ಕೆ, ನಾನು ಕ್ಲಾಸಿನೊಳಗ ಮಾತ್ರ ಮೊದಲ ಬೆಂಚ್‌ ಅಲ್ಲ. ಓದಿನೊಳಗೂ ಕೂಡಾ ಮೊದಲಿನವಳೇ ಆಗಿದ್ದೆ..ಅದಕ್ಕೇ ಎಲ್ಲಾ …ಟೀಚರ್‌ಗಳ ಕಣ್ಣಿಗೆ ಬೀಳುತಿದ್ದೆ. ಆದರೆ ಹಾಳಾದ ನನ್ನ ರೂಪ ಮಾತ್ರ ಅವರ ಕಣ್ಣಿಗೆ ಹಿಡಿಸದ್ದರಿಂದ ನನಗೆ ನಾನೇ…. ಉಸಿರಾಕಿಕೊಂಡು ಒಬ್ಬಳೇ ಕುಂತು ಮುಗಿಲು ನೋಡುತ್ತಾ….ಅತ್ತು ಬಿಡುತಿದ್ದೆ.

ಒಂದಿನ ಎಲ್ಲರ ಕಣ್ಣಿಗೆ, ಮುಖ್ಯವಾಗಿ ಹೆಡ್‌ ಮೇಸ್ಟರಮ್ಮನ ಕಣ್ಣಿಗೆ ರೂಪವತಿ ಅನಿಸುತಿದ್ದ ಭಾಗ್ಯಲಕ್ಷ್ಮಿ ಕ್ಲಾಸಿಗೆ ಬಂದಿರಲಿಲ್ಲ… ಆ… ದಿನಾನೇ.. ನಮ್ಮ ಹೆಡ್‌ ಮೇಸ್ಟರಮ್ಮ ಅರ್ಜೆಂಟಾಗಿ ಬಂದು ‘ಭಾಗ್ಯಲಕ್ಷ್ಮಿಗೆ ಡ್ಯಾನ್ಸ ಬಗ್ಗೆ ಏನೋ ಹೇಳೋದೈತಿ, ಕರಿರಿ ಆಕಿನ್ನ’ ಎಂದು ಕ್ಲಾಸ್‌ ಟೀಚರ್‌ ಗೆ ಆರ್ಡರ್‌ ಮಾಡಿದರು.

ನಮ್ಮ ಕ್ಲಾಸ್‌ ಟೀಚರ್‌ ಬಂದವರೇ… ‘ಭಾಗ್ಯಲಕ್ಷ್ಮಿ ಮನಿ ಕಡಿ ಯಾರಿದ್ದೀರಾ?’ ಎನ್ನಲು, ನಾನು ಸ್ಪ್ರಿಂಗ್‌ ನಂಗೆ.. ಎದ್ದು ‘ನಾ ಇದ್ದೇನ್‌ ಟೀಚರ್…‌’ ಎಂದೆ.

‘ಹಂಗಾರೆ ಹೋಗಿ ಆ ಹುಡುಗಿನ ಗಡಾನ…ಕರಕೊಂಡು ಬಾ..’ ಅಂತ ಸ್ವರೂಪಳನ್ನು ನನಿಗೆ ಜೊತೆ ಮಾಡಿ ಕಳಿಸಿದರು. ನಾವಿಬ್ಬರೂ ಅಜಮಾಸು ಒಂದುವರೆ ಕಿಲೋಮೀಟರ್‌ ತನ ಓಡುತ್ತಾ ಎಗರುತ್ತಾ ಭಾಗ್ಯಲಕ್ಷ್ಮಿಯ ಮನಿ ಮುಟ್ಟಿದೆವು.

ಸ್ವರೂಪಳ ಕೈ ಹಿಡಕೊಂಡು, ಹೊಸಿಲತ್ತಿರ ನಾನು ಬರುತ್ತಲೇ … ಭಾಗ್ಯಲಕ್ಷ್ಮಿ ನನ್ನನ್ನು ಕೆಕ್ಕರಿಸಿ ನೋಡಿ, ಅಸಹ್ಯ ಪಟ್ಟಕೊಂಡು…

‘ಏ ಭದ್ರಾ ಹೊರಾಗ್ ನಿಂತುಕೊಳ್ಳೇ’ ಅಂತಾ ಮಾತಿನಲ್ಲೇ ತಡೆದಳು. ಆ ಸ್ವರೂಪಳನ್ನು ಮನಿಯೊಳಗ ಕರಕೊಂಡೋಗಿ ಮಂಚದ ಮೇಲೆ ಕೂಡಿಸಿದಳು.

ಭಾಗ್ಯಲಕ್ಷ್ಮಿ ಮಾತ್ ಕೇಳಿ ನನ್ ಪ್ರಾಣ್ವೇ ಹಾರಿ ಹೋದಂಗಾತು. ಹೊರಗೆ ನೋಡಿದ್ರ ಉರಿಬಿಸಿಲು ಸುರಿಯುತಿತ್ತು. ಆದ್ರೆ ನನಿಗೆ ಆ ಉರಿಬಿಸಿಲಿಗಿಂತ್ಲೂ ‘ಏ ಭದ್ರಾ.. ..ಹೊರಾಗ್ ನಿಲ್ಲೇ..!’ ಅಂದ ಆಕಿ ಮಾತಿನ ಉರಿಯೇ ಹೆಚ್ಚು ಸುಡ ಹತ್ತಿತ್ತು. ‘ಅಯ್ಯೋ, ನಾನು ಅದೇನ್ ಪಾಪ ಮಾಡಿದ್ನೋ, ನನ್ನ್ಯಾಕ ಹಿಂಗ ಹೊರಾಗ್ ನಿಲ್ಲಿಸಿದಳು?’ ಅಂತಾ ಪ್ರಶ್ನೆಗಳಲ್ಲೇ ಮುಳುಗಿಹೋದೆ.
 

***
ಹಂಗ್ ನೋಡಿದ್ರೆ ನಮ್‌ ಕ್ಲಾಸ್‌ ನಲ್ಲಿ ನಾನೇ ಮಾರಾಣಿ!, ಕ್ಲಾಸ್‌ ನ ಒಳಕ್ಕೆ‌ ನಮ್ ಟೀಚರ್‌ ಗಳು ನಾ ಬಂದಿನೋ …ಇಲ್ಲವೋ ..? ಅಂತ ನೋಡಿ ಬರತಾರೆ. ಭಾಗ್ಯಲಕ್ಷ್ಮಿಯೂ.. ನನ್ ಬಗ್ಗೆ ತಿಳಕೊಂಡಾಕಿನೇ. ನನ್ ನೋಟ್ಸಗಳನ್ನೆಲ್ಲಾ ಬರಕೋಳ್ಳತಾಳೆ. ನೋಟ್ಸ್‌ ಗಾಗಿ ನಮ್ಮನಿಗೆ ಆಕಿ ಬಂದಾಗಲೆಲ್ಲಾ… ನಾನೆಷ್ಟು ಪ್ರೀತಿಯಿಂದ ಕಾಣುತಿದ್ದೆ!, ಆದ್ರೆ ಅಂಥಾ… ನನ್ನನ್ನ, ಇವತ್ತು ಈಕಿ ಹೊರಾಗ್… ನಿಲ್ಲಿಸಿ, ಜೊತಿಗೆ ಬಂದ ಸ್ವರೂಪನ್ನ ಒಳಾಕ ಕರಕೊಂಡು ಹೋಗಿ ಕೂಡಿಸಿಬಿಟ್ಟಳಲ್ಲಾ…. ಬಾಲ್ಯದ ‘ಆ…’  ನೋವನ್ನ ನನಗ ಅಕ್ಷರದೊಳಗೂ… ಹಿಡಿಯಲಾಗದು! ಆ ನೋವು…. ನನ್ನ ಎಲುಬುಗಳನ್ನೆಲ್ಲಾ ಪುಡಿ ಪುಡಿಮಾಡಿ ಕರಗಿಸುವಂತದ್ದು.

ನಾವು ಕ್ಲಾಸಿನೊಳಗೆಲ್ಲಾ ನಾವು ಜೊತಿಗೇ.. ಕುಂದ್ರುತಿದ್ವಿ.ನಮ್‌ ಕೋಣೆಯೆಲ್ಲಾ ಒಂದೇ… ಹಸಿರು ಲಂಗ, ಬಿಳಿ ಜಾಕೇಟು, ಕಪ್ಪು ರಿಬ್ಬನ್ನುಗಳು. ಹಂಗ ನೋಡಿದ್ರ ನನಗೂ ಭಾಗ್ಯಲಕ್ಷ್ಮಿಗೂ ಯಾವ್ ಮುನಿಸೂ, ಬಡಿದಾಟಗಳೂ ಇರಲಿಲ್ಲ.

ಆಕಿ ಮಾತು ಅಷ್ಟಾ… ಬಾಳ ಚಂದ.

ಭಾಗ್ಯಲಕ್ಷ್ಮಿಯು ಒಳಗ ಬರಬೇಡ ಎನ್ನಲಿಕ್ಕ ಆ ಮನಿಯೊಳಗ ದೊಡ್ಡೋರು ಯಾರೂ ಇದ್ದಂಗಿರಲಿಲ್ಲ, ಅವ್ರ ಮನಿಯೋರು? ಅವ್ರು ಯಾವತ್ತೂ ನನ್ನನ್ನ ಹೆಸರು ಹಿಡಿದು ಕರೆದದ್ದನ್ನ ನಾ, ಕೇಳೇ ಇಲ್ಲ! ‘ ಗೇ.. ಮಾದರ ಹುಡ್ಗಿ, ಗಾ.. ಮಾದ್ಗಿರವಳೆಂದೇ’ ಅಂತಿದ್ದ್ರು. ಅವ್ರು, ಹೊರಕೇರಿಯ ಹುಡುಗಿ.. ಹೊರಗೇ ಇರಬೇಕು ಅನ್ನೋರು.

‘ಯಾಕ್… ದೇವರೇ ನನ್ನನ್ನ ಇಂಥಾ ಕುಲದೊಳಗೆ ಹುಟ್ಟಿಸಿದಿ?, ಅವ್ರು ಎತ್ತು ಎಮ್ಮೆಗಳನ್ನು ಮನಿಯೊಳಗೇ ಕಟ್ಟಿಕೊತಾರ. ಬೆಕ್ಕು, ನಾಯಿಗಳನ್ನ ಎತ್ತಿಗೋತಾರ, ಅವನ್ನ ಬೇಕಾರಾ…ಮನಿಯೆಲ್ಲಾ ತಿರುಗಿಸುತಾರ. ಮಂಚಗಳ ಮೇಲೆ, ಹಾಸಿಗಿಗಳ ಮ್ಯಾಲೆನೇ ಮಲಗಿಸುತಾರ!
ಅವುಕಿಂತ್ಲೂ ನಾವು ಹೀನವಾ!? ನಮ್ ಹುಟ್ಟೇ ತಪ್ಪಾ…ನಮ್ ಬದುಕೇ ತಪ್ಪಾ…?, ನಾವು ಪಶುವಾಗಿ ಹುಟ್ಟಿದ್ದರೂ.. ಅವ್ರ ಮಡಿವಂತಿಕೆ ಇಂಗೇ….ಇರತಿತ್ತಾ?, ಮಡಿ, ಮೈಲಿಗೆ ಎನ್ನುವ ಅವರ ನಾಲಿಗೆಯ ಚಾಕು ನನ್ನನ್ನ ಇರಿದು ಚುಚ್ಚುವ ನೋವು ಬಾಲ್ಯದಿಂದಲೂ… ನನ್ನಿಂದ ದೂರವಾಗಲೇ ಇಲ್ಲ!
 ***

 ಹೀಗೆ… ಕೊರಗುತಾ, ದುಃಖ ಪಡುತ್ತಾ… ಸುಡುವ ಉರಿಬಿಸಿಲಲ್ಲಿ ತಲಬಾಗಿಲ ಹೊರಗೇ ನಿಂತಿದ್ದೆ. ಮನಿಯೊಳಗೆ ಅವರು ಆ ಸ್ವರೂಪಳಿಗೆ ಸ್ಟೀಲ್‌ ಬಟ್ಟಲಲ್ಲಿ ಏನನ್ನೋ… ತಿನ್ನಲು ಕೊಟ್ಟಿದ್ರು. ಯಾವುದೋ ಹಳೆ ಪೇಪರ್‌ ಸುತ್ತಿಕೊಂಡು ತಂದು, ನನಗೆ …

‘ಅಯ್ಯೋ ಕುಂತ್ಗಾಳೇ.. ಭದ್ರಾ..’ ಅಂತಾ, ಹಳೆಯ ಮೋಟು ಗೋಡೆಗೆ ಅಂಟಿ ಕುಂತ ಹಳೆಯಮಣ್ಣಿನ ಸೋರೆಯನ್ನು ತೋರಿಸಿದಳು ಭಾಗ್ಯ.

ನಾನು ಮುಖ ಸಣ್ಣದು ಮಾಡಿಕೊಂಡು…‘ಗಡಾ ತಯಾರಾಗೇ ,ಹೆಚ್‌ ಎಮ್.‌ ನಿನ್ನ ಅರ್ಜೆಂಟ್‌ ಕರಕಂಬಾ ಅಂದಾರ. ನಾವು ಸೆಕೆಂಡ್‌ ಪಿರೇಡ್‌ ಒಳಗೇ ಸಾಲಿ ಸೇರ್‌ ಕ್ಯಾಬೇಕು’ ಅಂತ ಹೇಳಿದೆ.
ಭಾಗ್ಯಲಕ್ಷ್ಮಿ ‘ ಸರಿ ಬಿಡೇ’ ಅಂತಾ .. ಒಳಗೆ ಹೋಗುತ್ತಾ…‘ತೊಗೋ… ಕಾರ ಮಂಡಾಳು ತಿನು’ ಎಂದು ಮುದುಡಿದ ಹಳೇ ಪೇಪರ್‌ ನೀಡಿದಳು.

ನನಗೆ ವಾಂತಿ ಬಂದಾಗಾತು, ಅವು ನನಗೆ ವಿಷದ ಹುಳುಗಳಂತೆಯೇ ಕಂಡವು. ‘ಬ್ಯಾಡ, ನಾನಾಗಲೇ ತಿಂದೀನಿ’ ಅಂತ ಆಕಿ ಕೈಗೆ ಅಡ್ಡ ಮಾಡಿದೆ.

ಆಕಿ ‘ಅಯ್ಯೋ ತಿನ್ನೇ ಭದ್ರಾ ಚಲೋ ಅದಾವು..’ ಎನ್ನುತ್ತಲೇ… ಅವನ್ನ ತಗಂಡೋಗಿ ಕಸದ ಮೂಲೆಗೆ ಎಸೆದಳು!

ನನಗಲ್ಲಿ ನಿಲ್ಲಲಾಗಲಿಲ್ಲ. ‘ಅಯ್ಯೋ ಎಂಬಂತೆ’ ನೋಡಿದ ಸ್ವರೂಪಳ ಆಗಿನ ಆ ನೋಟ ಈಗಲೂ.. ನನ್ನನ್ನು ಇರಿಯುತ್ತಲೇ ಇದೆ!

ಸ್ವರೂಪಳೇ ಏನು? ಯಾಕೆ, ಇದೆಲ್ಲಾ…? ಅಂತಾ ಕೇಳಬಹುದಿತ್ತಲ್ಲ? ಆಕೆ ಕೇಳಲಿಲ್ಲ…. ನನ್ನ ಮುಖ ಸುಟ್ಟ ಇದ್ದಿಲಂತೆ ಕರ‍್ರಗಾಗಿ ಬಾಡಿಹೋತು. ಕಾಲ ಅಡಿಗೆ ಸುಡುವ ಕೆಂಡದಂತಹ ಬಂಡೆಗಳು. ಚಪ್ಪಲಿಗಳು ಕೂಡಾ ಇರಲಿಲ್ಲ. ಮೊದಲೇ ಎಳೇ… ಮನುಷ್ಯಳು,ಜೊತೆಗೆ ಬಳ್ಳಾರಿಯ ಉರಿಬಿಸಿಲ ಬಾಧೆ. ನನಗೆ ನನ್ನ ಕಾಲುಗಳು ಸುಡುವ ಬಾಧೆಗಿಂತಲೂ….ಆಕಿಯ ಮನೆಯವರು ನನ್ನನ್ನ ಆ ತಲಬಾಗಿಲಹೊರಾಗೇ.. ನಿಲ್ಲಿಸಿದ್ದು,ಹಳೆಯ ಹಾಳಿಯೊಳಗ ತಿನ್ನಲು ನೀಡಿದ್ದು, ನಾ.. ಬೇಡಾ ಅಂದದ್ದನ್ನೇ ಹೊಯ್ದು ಕಸದ ಮೂಲೆಗೆ ಎಸೆದದ್ದನ್ನ ನೋಡಿದ ನೋವೇ… ಉರಿ ಬಿಸಿಲಿಗಿಂತಲೂ ಹೆಚ್ಚು ಸುಡ ಹತ್ತಿತ್ತು.ಆ ಬೆಂಕಿಗೆ ನನ್ನ ಚರ‍್ಮ, ಹೊಟ್ಟೆ,ಗುಂಡಿಗೆ ಎಲ್ಲಾ….ಸಿಕ್ಕಿ ಉರಿದು ಬೂದಿಯಾಗಿ ಹೋದವು.
 ***

 ನಾನು, ಏನೂ.. ಮಾತಾಡದೆ,ಇಬ್ಬರನ್ನೂ.. ಸುಮ್ಮನೇ ಕರಕೊಂಡು ಕ್ಲಾಸಿಗೆ ಬಂದೆ.ಭಾಗ್ಯ ನನಗೆ ಇಷ್ಟು ಮಾಡಿಯೂ… ನನ್ನನ್ನ ಇಷ್ಟು ಹಿಂಸೆಗೊಳಿಸಿಯೂ… ಏನೂ ತಿಳಿಯಲಾರದವಳಂತೆಯೇ…. ಕ್ಲಾಸಿನಲ್ಲಿ ಹರಟೆಹೊಡೆಯುತ್ತಿದ್ದಳು.

ನಾನು ರಾತ್ರಿಯೆಲ್ಲಾ…ನಿದ್ದೆ ಮಾಡಲೇ ಇಲ್ಲ. ಆ.. ಅವಮಾನವು ನನ್ನನ್ನ ಕಡಿದು ತುಂಡು ತುಂಡು ಮಾಡಿತ್ತು.

ನನ್ನ ಕೇರಿಯ ಬಂಧುಗಳು ಇಂತಹ ಮಡಿ ಮೈಲಿಗೆಗಳನ್ನ ಈಗಲೂ…ನೀರ ಬಳಿ,ಗುಡಿಯ ಬಳಿ,ಮಠಗಳ ಬಳಿ ಅನುಭವಿಸುತ್ತಲೇ ಇದ್ದಾರೆ.

ಸರ್ಕಾರವು ಬೋರ್‌ ವೆಲ್ ಹಾಕಿಸಿದರೂ … ಇಲ್ಲಿ ಇವರು ಇವರದೇ ಕಾನೂನು ಮಾಡಿದ್ದಾರೆ. ಅವರು ನೀರು ಹಿಡಿಯುತ್ತಿದ್ದರೆ, ಸುತ್ತ ತೋಡಿದ ಗುಂಡಿಯ ಆಚೆಗೆ ನಾವು ನಿಲ್ಲಬೇಕು. ಅವರು ನೀರು ಹಿಡಿದು ಹೋಗುವ ತನಕವೂ.. ಕಾದು ಕೂರಬೇಕು. ಅವರಿಗಾಗಲೀ ಅವರ ಕೊಡಕ್ಕಾಗಲೀ ನಮ್ಮ ಕೈ ಬೆರಳುಗಳು ತಾಗುವಂತಿಲ್ಲ! ಅದು ನಮ್ಮ ನೆರಳೆಂಬ ಅನುಮಾನ ಬಂದರೂ… ಅವರು ತಮ್ಮ ಕೊಡದ ನೀರನ್ನೆಲ್ಲಾ ಚೆಲ್ಲಿ, ಮತ್ತೆ ಕೊಡವನ್ನೂ, ನಲ್ಲಿಯನ್ನೂ… ತೊಳೆದು ನೀರು ಹಿಡಿದುಕೊಳ್ಳುತ್ತಾರೆ. ಅಕಸ್ಮಾತ್‌ ನಾವು ನೆಲದಲ್ಲಿಟ್ಟ ನಮ್ಮ ಬಿಂದಿಗೆಗಳು ಗಾಳಿಗೆ ಉರುಳಿ ಅವರ ಬಿಂದಿಗೆಗೆ ತಾಗಿದರೆ? ಮೈಲಿಗೆ ಆಯಿತೆಂದು ಅವರ ಬಿಂದಿಗೆಯನ್ನ ಅಲ್ಲಿಯೇ ಎತ್ತಿ ಒಡೆದು ಹಾಕಿ, ಅದರ ದುಡ್ಡನ್ನ ನಮ್ಮಿಂದಲೇ ಬಲವಂತವಾಗಿ ವಸೂಲಿ ಮಾಡುತ್ತಾರೆ! ನಮ್ಮ ಬೆರಳುಗಳು ತಾಗಿದರೆ ಸಿಡಿದೇಳುವ ಅವರು ನಮ್ಮ ಹಣವನ್ನು ಮಾತ್ರ ಯಾಕೆ ಹಾಗೆ ನೋಡುವುದಿಲ್ಲ?
 ಇಂತಹ ಬಗೆ ಬಗೆಯ ಪ್ರಶ್ನೆಗಳನ್ನ, ಅವಮಾನಗಳನ್ನ ನಾನು ಚಿಕ್ಕವಳಿದ್ದಾಗಿನಿಂದಲೂ ನೋಡುತ್ತಲೇ ಇರುವೆ. ಇವೆಲ್ಲಾ ಹೀಗೇಕೆ? ಎಂದು ಪ್ರಶ್ನಿಸಿಕೊಂಡು ವದ್ದಾಡಿರುವೆ.

ನಾನಂತೂ… ಬೋರ್‌ ವೆಲ್‌ ಬಳಿ ಜನವಿರುವಾಗ ಅಸಲು ಹೋಗುತ್ತಲೇ ಇರಲಿಲ್ಲ. ಅವರು, ನಿನ್ನ ಮಗಳ ಕಾಲು ತಾಗಿತೆಂದು, ಗಾಳಿಗೆ ಹಾರಿ ಲಂಗವು ನಲ್ಲಿಗೆ ಬಡಿಯಿತೆಂದು, ರಿಬ್ಬನ್‌ ತಗಲಿತೆಂದು ದಂಡ ವನ್ನ ಹಾಕಿಬಿಟ್ಟರೆ!? ಆ ಹಣವನ್ನ ಕಟ್ಟಲಾಗದೇ,ಜೋಡಿಸಲಾಗದೇ…. ನಮ್ಮ ಅಪ್ಪ,ಅಣ್ಣಂದಿರು …ಇರುವ ಜೀತವನ್ನೂ ಕಳೆದುಕೊಳ್ಳುವುದಿಲ್ಲವೇ…?

 ಅವರು ಬದುಕಿದಂತೆಯೇ ನಾವೂ ಬದುಕುತಿದ್ದೇವೆ. ಅವರು ಕೂಲಿ ಮಾಡುವಂತೆಯೇ ನಾವೂ ಮಾಡುತ್ತಿದ್ದೇವೆ, ನಮ್ಮಂತೆಯೇ ಅವರು. ಅವರಿಗೇನೂ ಕೊಂಬು ಬಂದಿಲ್ಲ. ಆದರೂ… ನಮಗೇ ಯಾಕೆ ಹೀಗೆ…? ನೀರ ಬಳಿ, ದೇವರ ಬಳಿ, ಮಠ ಮಾನ್ಯಗಳ ಬಳಿ ನಮ್ಮನ್ನ ಯಾಕಿಷ್ಟು ಘೋರವಾಗಿ ಅವಮಾನಿಸುತ್ತಾರೆ.?

ಯಾಕೆ ಹೀಗೆ ನಮ್ಮನ್ನು ಅಷ್ಟು ಹೀನವಾಗಿ ಕಾಣುತ್ತಾರೆ.?

 ಪ್ರತಿರಾತ್ರಿಯೂ… ಇಂತಹ ಪ್ರಶ್ನೆಗಳ ಇರಿತದಿಂದ…ನನ್ನ ಮಿದುಳು ಉರಿಗೆ ತಗುಲಿದ ಕೆಂಡದಂತಾಗುತಿತ್ತು. ನನ್ನ ಬಾಲ್ಯವೆಲ್ಲಾವೂ… ಇಂತಹ ಹಿಂಸೆಗಳಲ್ಲೇ ಕರಕಾಗುತಿತ್ತು.

ಹೈಸ್ಕೂಲು ಮುಗಿದಮೇಲೆ ನಗರದ ಕಾಲೇಜು ಸೇರಿದೆ. ಪಿ.ಜಿ.ಯನ್ನು ಓದಲು ಹೊರಟೆ.ಆಮೇಲೆ ಹಳ್ಳಿಯ ಕಡೆಗೆ, ಕೇರಿಯ ಕಡೆಗೆ ಹೋಗುವುದನ್ನೇ ಬಿಟ್ಟುಬಿಟ್ಟೆ.ಏನೋ…ವರ್ಷಕ್ಕೊಮ್ಮೆ ಹೋದರೆ ಹೋದೆ.ಬಿಟ್ಟರೆ ಬಿಟ್ಟೇ ಬಿಟ್ಟೆ.ಅಲ್ಲಿಗೆ ಹೋದರೂ… ನಾನು ಯಾರೊಂದಿಗೂ ಮಾತಾಡುತ್ತಿರಲಿಲ್ಲ.
 ಒಂದು ಸಾರಿ ಭಾಗ್ಯಲಕ್ಷ್ಮಿಯು ನಮ್ಮ ಅಣ್ಣನಿಂದ ನನ್ನ ಅಡ್ರಸ್ಸು ಪಡೆದು ನಮ್ಮ ಹಾಸ್ಟಲ್‌ ಗೇ.. ಬಂದಳು. ನಾನು ಅವಳನ್ನು ಎಷ್ಟು ದೂರವಿಟ್ಟರೂ… ಅವಳೇ ನನ್ನ ಬಳಿಗೆ ಸರಿಯುತ್ತಾ.. ಸರಿಯುತ್ತಾ.. ಹಾಸ್ಟಲ್‌ ಹುಡುಗಿಯರಂತೆಯೇ ನನ್ನ ಸುತ್ತ ಬರ ಹತ್ತಿದಳು.

ಸಿಟಿಯೊಳಗೆ ಆ ಕೆಲಸ.. ಈ ಕೆಲಸ ಎನ್ನುತ್ತಾ…

ಆಸ್ಪತ್ರೆ ಕೆಲಸ ಎಂದು..

ಅವಳ ಅಣ್ಣನ ಮಕ್ಕಳ ಪರೀಕ್ಷೆಯೆಂದು…

ಆಕೆಯ ಸಂಬಂಧಿಕರ ಮದುವೆಯ ಕೆಲಸವೆಂದು ಬಂದು, ನಮ್ಮ ಹಾಸ್ಟಲ್‌ ನೊಳಗೇ ಭಾಗ್ಯಲಕ್ಷ್ಮಿಯು ಬಿಡಾರ ಹೂಡತೊಡಗಿದಳು.

 ಭದ್ರಾ, ಭದ್ರಾ …ಎಂದು ಭಲೇ ಸಿಹಿಯಾಗಿ ಮಾತಾಡುತ್ತಾ….ನಮ್ಮ ಪಿ.ಜಿ. ಗೆಳತಿಯರಿಗೆ ‘ನಮ್ಮ ಭದ್ರಾ ತುಂಬಾ ಜಾಣಿ, ಈಕಿನೇ.. ಕ್ಲಾಸ್‌ ನಲ್ಲಿ ಯಾವಾಗಲೂ ಫಸ್ಟ್.‌ ನಾವು ಜಿಗರಿ ದೋಸ್ತ್‌ ಗಳೆಂದು’ ಹೇಳಿಕೊಳ್ಳುತ್ತಿದ್ದಳು.

 ನಾನು ಬೇಡವೆಂದರೂ, ‘ಹೇ ಭದ್ರಾ… ಅಮ್ಮಾ ಮಾವಿನಕಾಯಿ ಉಪ್ಪಿನಕಾಯಿ ಮಾಡಿ ಕಳಿಸಿದ್ದಾಳೆ ತಕೋ, ಹಾಸ್ಟಲ್‌ ಊಟಗಳು ಸಪ್ಪಗಿರುತ್ತವೆ’ ಎಂದು ನೀಡುತಿದ್ದಳು.

‘ಭದ್ರಾ… ನೀನು ಎಂ.ಎ. ತನಕ ಬಂದದ್ದು ಗ್ರೇಟ್‌ …ಚನ್ನಾಗಿ ತಿನ್ನು’ ಅಂತ ಪ್ರೇಮದಿಂದ, ಆತ್ಮೀಯತೆಯಿಂದ ಮಾತಾಡುತ್ತಿದ್ದಳು.

ದಿನಗಳೆದಂತೆಲ್ಲಾ….

ನನ್ನ ಹಳೆಯ ಗಾಯಗಳನ್ನ… ಮಾಯಿಸುವಂತೆ ಮೈ ಮರೆಸಿಬಿಟ್ಟಳು.

ಭಾಗ್ಯಲಕ್ಷ್ಮಿ ಹೆಚ್ಚು ಓದಲಿಲ್ಲ, ಡಿಗ್ರಿಯನ್ನು ಅರ್ಧದಲ್ಲೇ ನಿಲ್ಲಿಸಿದ್ದಳು. ಪ್ರವೇಟ್‌ ಕಂಪನಿಯಲ್ಲಿ ಚಿಕ್ಕ ಉದ್ಯೋಗಕ್ಕೆ ಸೇರಿದ್ದಳು. ಹಾಗಾಗಿಯೇ…ಈಕೆ ಆಗಾಗ ನಮ್ಮ ಹಾಸ್ಟಲ್‌ ನಲ್ಲಿದ್ದು ತನ್ನ ಕೆಲಸಗಳನ್ನು ಮುಗಿಸಿಕೊಂಡು ಹೋಗುತ್ತಿದ್ದಳು.

ಮೆಲ್ಲಗೆ ನಾನೂ … ಭಾಗ್ಯಲಕ್ಷ್ಮಿಯ ಸ್ನೇಹದೊಳಗೆ ಮತ್ತೆ ಬಿದ್ದುಬಿಟ್ಟೆ.

‘ಭದ್ರಾ.. ನಮ್ಮ ಮನೆಗೆ ಬಾ.. ಅಮ್ಮಾ ಬಾ..ಅಂತಿದ್ದಾಳೆ. ನೋಡಬೇಕು ಅಂತಿದ್ದಾಳೆ’ ಅಂತಾ ಅನೇಕ ಸಲ ಹೇಳುತಿದ್ದಳು.

‘ನೀನು ಊರಿಗೆ ಯಾವಾಗ ಬರುತ್ತೀ?, ಯಾವಾಗ ಮನೆಗೆ ಹೋಗುತ್ತೀ, ಹೇಳೋದೇ ಇಲ್ಲ ನೋಡು!?. ಈ ಸರತಿ ಬಂದಾಗ ಬರಲೇಬೇಕು ಭದ್ರಾ.. ಇಲ್ಲಾಂದ್ರೆ ನಾನು ಸುಮ್ಮನಿರಲ್ಲ ನೋಡು’ ಅಂತೆಲ್ಲಾ… ಸುಮ್ಮನೇ ನನ್ನ ಕಿವಿ ಊದುತಿದ್ದಳು.

 ಸರಿಬುಡೆಂದು,

ಒಂದು ಸಾರಿ ಹೋದೆ.

ಭಾಗ್ಯಲಕ್ಷ್ಮಿಯ ಮನಿಗೆ. ಹೊಸ ಮನುಷ್ಯಳಾಗಿ.

ಆದ್ರೆ ಅದು ನನ್ನನ್ನ ಅವಮಾನಿಸಿ ತಲಬಾಗಿಲ ಹೊರಗೇ ನಿಲ್ಲಿಸಿದ ಮನಿಯಲ್ಲ, ಅದು ಬೇರೆ ಮನಿ,ಅದನ್ನ ತಿಳಕೊಂಡೇ ಹೋಗಿದ್ದೆ.ನಾನು ನನ್ನ ಹಳೆಯ ನೋವುಗಳನ್ನು ನುಂಗಿಕೊಂಡು, ಹಳೆಯ ಕಾಲದವರು, ಈಗೇನಿಲ್ಲವೆಂದು… ಇವರೆಲ್ಲಾ…. ಈಗ ಬದಲಾಗಿದ್ದಾರೆ….ಎಂದು ನನಗೆ ನಾನೇ ನಿರ್ಣಯಿಸಿಕೊಂಡು, ಒಪ್ಪಿಕೊಂಡು ಹೋಗಿದ್ದೆ.

 ನಾನು, ಆಕೆ ಕೂಡಿ..
 ಹೊಸ ಮನೆ ಸುತ್ತುತ್ತಾ..
 ನಮ್ಮ ಕ್ಲಾಸಿನವರು ಈಗ ಏನೇನು ಮಾಡುತಿದ್ದಾರೆ!,ಯರ‍್ಯಾರಿಗೆ ವಿವಾಹವಾಗಿದೆ?, ಯರ‍್ಯಾರು ಉದ್ಯೋಗದಲ್ಲಿದ್ದಾರೆ!, ಯರ‍್ಯಾರು ಎಲ್ಲೆಲ್ಲಿದ್ದಾರೆಂದು ವಿಚಾರಿಸಿಕೊಂಡೆವು…
ಹಂಗೇ …ನನಗಿಷ್ಟವಾದ ಟೀಚರ್‌ ಗಳು, ಆಕೆಗೆ ಇಷ್ಟವಾದ ಟೀಚರ್‌ ಗಳ ಕುರಿತು ಕೂಡಾ ಮಾತಾಡಿಕೊಂಡೆವು.

‘ಹಮ್ಮಯ್ಯಾ… ಭಾಗ್ಯಲಕ್ಷ್ಮಿ ಈಗ ಪೂರ್ತಿ ಬದಲಾಗಿದ್ದಾಳೆ’ ಎಂಬ ನಂಬಿಕೆ ನನಗೆ ಬಂದಿತು.
ಮನಿ ಹೊರಗೆ ಉರಿಬಿಸಿಲಲ್ಲಿ ನಿಲ್ಲಿಸಿದ ಆ ಭಾಗ್ಯಲಕ್ಷ್ಮಿ ಈಗ ನನ್ನನ್ನು ಅವರ ಮನಿಯ ಹಾಲಲ್ಲಿ ಕೂಡಿಸಿದ್ದಾಳೆ. ಒಳ್ಳೆಯದು. ಆದರೂ… ನಾನು ಗಮನಿಸುತ್ತಲೇ ಇದ್ದೇನೆ. ಈ ಭಾಗ್ಯಲಕ್ಷ್ಮಿ ಬೆಳಗಿನಿಂದಲೂ ನನಗೆ ಒಂದೇ ಕಪ್ಪಿನೊಳಗೇ… ನೀರು ಕೊಡುತಿದ್ದಾಳೆ. ಯಾಕೆ ಬದಲಿಸುತ್ತಿಲ್ಲ? ಬೆಳಿಗ್ಗೆ ಉಪ್ಪಿಟ್ಟು ತಿನ್ನುವಾಗ ಅದೇ ಕಪ್ಪು, ಮತ್ತೆ ಮಧ್ಯಾಹ್ನ ಊಟ ಮಾಡುವಾಗಲೂ ಅದೇ ಕಪ್ಪು. ನೀರನ್ನ ಕೂಡಾ ತುಂಬಾ ಜಾಗ್ರತೆಯಿಂದ ಎತ್ತಿ ಹಾಕುತ್ತಾಳೆ. ನಾನೇ ನೀರಿಡಿದುಕೊಳ್ಳಲು ಹೋದರೆ …

’ಏ ಭದ್ರಾ ನಾನೇ ಹಾಕುತ್ತೇನೆ ನಿಲ್ಲು’ ಅಂತ ಓಡಿಬರುತ್ತಾಳೆ. ಬೇರೆ ಕಪ್ಪಿನಿಂದ ನನ್ನ ಕಪ್ಪಿಗೆ ನೀರಾಕುತ್ತಾಳೆ. ನನಗೆ ಯಾವ ವಸ್ತುವನ್ನೂ ಮುಟ್ಟಲು ಬಿಡುತ್ತಿಲ್ಲ.

‘ಪ್ಲೇಟ್‌ ತುಂಬಾ ಹಾಕೀಯ, ಇಷ್ಟೊಂದು ಬ್ಯಾಡ ತೆಗಿತೀನೇ’ ಅಂತ ನಾನು ತೆಗೆಯಲು ಹೋದರೆ…
‘ಬ್ಯಾಡ ಭದ್ರಾ ಉಳಿಲಿ ಬಿಡು…ನೀನು ಚನ್ನಾಗಿ ತಿನು’ ಅಂತಾ ಪಾತ್ರೆ ತಾಕದಂತೆ ಜಾಣತನ ತೋರುವುದು… ಸಾರು ಹಾಕಿಕೊಳ್ಳಲು ಹೋದರೆ…

‘ಬ್ಯಾಡ ಭದ್ರಾ…ನಾನಾಕ್ತಿನಲ್ಲಾ ಅಂತ …ತಡೆದು, ನೀ.. ಹಾಕ್ಕೊಂಡರೆ ಕಡಿಮಿ ಹಾಕ್ಕೊಳ್‌ತೀಯ’, ಎನ್ನೋ ಅವಳ ಜಾಣತನಗಳೇ ನನ್ನ ಮರೆತ ಗಾಯವನ್ನು ನೆನಪಿಸಿತು.

‘ಭಾಗ್ಯಲಕ್ಷ್ಮಿ ಬದಲಾಗಿದ್ದಾಳೆ’ ಎಂದುಕೊಂಡು ಅವಳ ಮನಿಗೆ ಹೋಗಿದ್ದು ನನ್ನದೇ ಹುಚ್ಚುತನ. ನಾನು ಈಕೆ ಸಮಾನ ಎಂದುಕೊಂಡದ್ದು ನನ್ನದೇ ತಪ್ಪು.

ಇನ್ನೂ… ಇವಳ ಬುದ್ಧಿ ಬದಲಾಗಿಲ್ಲ. ತಲೆಮಾರು ಬದಲಾದರೂ, ಇವರ ಜಾತಿ ಬುದ್ಧಿ ಬದಲಾಗಿಲ್ಲ. ‘ಈಕೆಯ ನ್ಯಾಕುಗಳನ್ನ ಅರ್ಥ ಮಾಡಿಕೊಳ್ಳಲಾರೆನಾ? ಈಕೆ ನನ್ನನ್ನು ದೂರವಿಡುವುದೇನು! ನಾನೇ ಈಕೆಯನ್ನು ದೂರವಿಡುತ್ತೇನೆ’ ಎಂದು ನಿರ್ಧರಿಸಿದೆ.

ಸಿಟಿಯೊಳಗೆ ತನ್ನ ಕೆಲಸವಿದ್ದಾಗ,
ತನಗೆ ಅಗತ್ಯ ಬಿದ್ದಾಗ…
ಸುಮ್ಮನೆ ಪೋನ್‌ಗಳನ್ನು ಮಾಡುತಿರುತಾಳೆ.
ಇನ್ನುಮೇಲೆ ಇವಳ ಪೋನ್‌ ನಂಬರನ್ನು ರಿಜೆಕ್ಟ್‌ ಕಾಲ್‌ನೊಳಗೆ ಹಾಕಿ, ಮೂಡಿದ ನನ್ನ ಗಾಯಕ್ಕೆ ಹೊಸ ಮದ್ದು ಹಾಕಿಕೊಳ್ಳುವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.