ಬೆ ಳಗಿನ ಜಾವ ‘ಢಣ್...ಢಣ್...ಢಣ್...ಢಣ್’ ಎಂದು ನಾಲ್ಕು ಬಾರಿ ಗಡಿಯಾರದ ಗಂಟೆ ಬಾರಿಸಿದ್ದು, ಜೋರು ನಿದ್ದೆಯಲ್ಲಿದ್ದ ಯಶೋದಮ್ಮಳಿಗೆ ಅಸ್ಪಷ್ಟವಾಗಿ ಕೇಳಿಸಿತು. ಪ್ರತಿನಿತ್ಯದ ಯಾತನಾಮಯ ಎಚ್ಚರದ ರಾತ್ರಿಗಳನ್ನು ಕಳೆಯುವುದು ಕಷ್ಟಎಂದು ದೂರದ ಊರಿನಲ್ಲಿ ವಾಸವಿರುವ ಮಕ್ಕಳ ಬಳಿ ಹೇಳಿಕೊಂಡರೆ ‘ವಯಸ್ಸಾದಂತೆ ನಿದ್ರಾಹೀನತೆ ಜಾಸ್ತಿ ಅಮ್ಮ, ನಿದ್ದೆ ಬಂದಾಗ ಮಲಗಿಬಿಡು’ ಎಂಬ ಹುಂಬ ಸಲಹೆಗಳನ್ನ ಸಲೀಸಾಗಿ ಕೊಡುವುದು ಅವರಿಗೆ ಸುಲಭದ್ದಾಗಿತ್ತು. ಪಕ್ಕದ ಮನೆಯ ಅಂಬುಜಾಳದ್ದೂಅದೇ ಸಲಹೆ. ಆದರೆ ಅಂದು ಮಾತ್ರ ಎಂದೂ ಇಲ್ಲದ ನಿದ್ದೆಯ ಜೋಂಪು ಹತ್ತಿಬಿಟ್ಟಿದ್ದರ ಹಿಂದೆ ಕಾರಣವಿಲ್ಲದೆ ಇರಲಿಲ್ಲ.
ಮಧ್ಯರಾತ್ರಿ ಕೇಳಿದ ಕರೆಗಂಟೆಯ ಸದ್ದಿಗೆ ಬಾಗಿಲು ತೆರೆದಾಗ ಎದುರು ನಿಂತ ಆಕೃತಿ; ಕಳೆದ ಹತ್ತು ವರ್ಷಗಳ ಹಿಂದೆ ಹೇಳದೆ ಕೇಳದೆ ಓಡಿ ಹೋಗಿದ್ದ, ವರುಷ ನಂತರಗಳಲ್ಲಿ ಬೆಂಗಳೂರಿನಕಡೆಯ ಮಠದಲ್ಲೆಲ್ಲೋ ಸನ್ಯಾಸ ದೀಕ್ಷೆ ತೆಗೆದುಕೊಂಡಿದ್ದನೆಂದು ಸುದ್ದಿಯಾಗಿದ್ದ ಅಕ್ಕರೆಯ ಹಿರಿಮಗ. ಗಾಳಿಸುದ್ದಿಯ ಹೆಜ್ಜೆ ಹಿಡಿದು ಅವನಿದ್ದ ಮಠಕ್ಕೆ ಭೇಟಿ ನೀಡಿ ಗೋಗರೆದಾಗಲೂ ತಾನು ಮಾತಿಗಷ್ಟೇ ದಕ್ಕುವುದಾಗಿ ಹೇಳಿ ಫೋನ್ ನಂಬರನ್ನಷ್ಟೇ ಕೊಟ್ಟು ಕಳಿಸಿದ್ದ ಪುತ್ರ ಪ್ರತ್ಯಕ್ಷನಾಗಿಬಿಟ್ಟಾಗ ಅವನೆಡೆಗಿನ ಕೋಪವೆಲ್ಲಾ ಕರಗಿ ಮಾತೃ ಸಹಜ ಮಮತೆಯೇ ಮುನ್ನೆಲೆಗೆ ಬಂದು ಸಹಜವಾಗಿಯೇ ಖುಷಿಗೊಂಡಿದ್ದಳು.
ಅಷ್ಟಕ್ಕೂ ಅವನು ಬಂದಿದ್ದಾದರೂ ಹೇಗೆ?
ಸುಡುಸುಡು ಕೆಂಡದಂತಹ ಜ್ವರವ ಹೊದ್ದು!
ನಿಸ್ತೇಜ ಮುಖ, ಒಣಗಿದ ತುಟಿಗಳ ಕಂಡ ಕೂಡಲೇ ಕರುಳು ಚುರ್ ಎಂದಂತಾಗಿ ‘ಅಯ್ಯೋ ಹುಲಿಗೆವ್ವ!’ ಎಂದು ಉದ್ಗಾರ ತೆಗೆದು ಒಳಗೆ ಕರೆದುಕೊಂಡವಳೇ ಗಂಜಿ ಮಾಡಿ ಕುಡಿಸಿ, ತಲೆಗೆ ತಣ್ಣೀರು ಬಟ್ಟೆ ಹಾಕಿ, ಎದೆಗೆ ಬೆನ್ನಿಗೆ ಝಂಡು ಬಾಮು ಹಚ್ಚಿ, ಮೂಗಿಗೂ ಒಂದಿಷ್ಟು ಏರಿಸಿ, ತೊಡೆಯ ಮೇಲೆ ತಲೆಯಿರಿಸಿಕೊಂಡು ತಟ್ಟಿ ಮಲಗಿಸಿ ತನ್ನ ಕೋಣೆಗೆ ಮರಳುವಷ್ಟರಲ್ಲಿ ಗಡಿಯಾರ ‘ಢಣ್...ಢಣ್’ ಎಂದು ಎರಡು ಬಾರಿ ಬಾರಿಸಿತ್ತು. ಮಂಚದ ಮೇಲೆ ಅಡ್ಡಾಗಿ ಕರ ಕರ ಸದ್ದು ಮಾಡುತ್ತಾ ತಿರುಗುವ ಫ್ಯಾನನ್ನೇ ದಿಟ್ಟಿಸುತ್ತಾ ಮುಂಜಾನೆಯೇ ಹುಲಿಗಿ ಗುಡಿಗೋಗಿ ಹಣ್ಣು ಕಾಯಿ ಮಾಡಿಸಿ ಕೈಮುಗಿದು ಬರಬೇಕು... ಹಾಗೆ ಬರುವಾಗ ಓಣಿಯ ಕೊನೆ ಮನೆಯ ಡಾಕುಟರ್ ನಿತ್ಯಾಳನ್ನೂ ಕರೆತರಬೇಕು ಎಂದುಕೊಳ್ಳುತ್ತಿರುವಾಗಲೇ ಎರಡನೇ ಆಲೋಚನೆ ಸುಳಿಯಿತು.
ಸ್ವಂತ ತಂಗಿ ಮತ್ತು ತಮ್ಮನ ಮದುವೆಗೆ ಬಾರದೆ ಹೋದವನು, ಚಳಿ, ಗಾಳಿ, ಮಳೆ ಮತ್ತ್ಯಾವುದಕ್ಕೂ ಜಗ್ಗದೆ ಉಳಿದವನು ಹೀಗೆ ಧಿಡೀರನೆ ಬಂದದ್ದಕ್ಕೆ ಬಲವಾದ ಕಾರಣ ಇರದೆ ಇಲ್ಲವಾ? ಅಥವಾ ತಾನೇ ಅತಿಯಾಗಿ ಯೋಚಿಸುತ್ತಿದ್ದೇನೆಯ? ಮನುಷ್ಯರ ಯಾವ ನಡೆಯಲ್ಲೂ ಅವರದ್ದೇ ಆದ ಬಲವಾದ ಕಾರಣಗಳಿರುತ್ತವೆ ಎಂದು ಬಲವಾಗಿ ನಂಬಿದ್ದ ಯಶೋದಮ್ಮ ಮಗ ಬಂದಿರಬಹುದಾದ ನಿಜಕಾರಣವೇನಿರಬಹುದೆಂದು ಯೋಚಿಸತೊಡಗಿದಳು.
ನಾಲ್ಕು ದಿನಗಳ ಹಿಂದೆ ಮಾಡಿದ ಕರೆಯಲ್ಲಿ ಹೇಳಿದ ಆ ಒಂದು ಮಾತು ಅವನನ್ನ ಇಲ್ಲಿಯವರೆಗೂ ತಲುಪಿಸಿಬಿಟ್ಟಿತಾ?
‘ನಿನ್ನ ಬಾಲ್ಯದ ಗೆಳತಿ ನಿತ್ಯಾಳಿಗೆ ಮುಂದಿನ ತಿಂಗಳು ಮದುವೆ. ಇಲ್ಲೇ ಮನೆ ಹತ್ರ ಇರೋ ಕಲ್ಯಾಣ ಮಂಟಪದಲ್ಲಿ!!!’
ಅಥವಾ ಮಗನನ್ನ ಮನೆಗೆ ಕರೆಸಿಕೊಳ್ಳುವ ಸಲುವಾಗಿ ಹೇಳದಿದ್ದರೂ ನಡೆದುಬಿಡಬಹುದಾದ ಮಾತನ್ನಾಡಿದ್ದೆನಾ? ಗೊಂದಲಗಳಿಂದ ಬಿಡಿಸಿಕೊಳ್ಳುವಷ್ಟರಲ್ಲೇ ನಿದ್ದೆ ಹತ್ತಿಬಿಟ್ಟಿತು.
ಆಯಾಸಕ್ಕೊ, ಆನಂದಕ್ಕೋ ಆವರಿಸಿಬಿಟ್ಟ ನಿದ್ದೆಯಿಂದ ಎಚ್ಚರವಾದದ್ದು ಥರಗುಟ್ಟುವ ಚಳಿಯ ಬೆಳಗಿನಲ್ಲಿ ದೇವರ ಮನೆಯಿಂದ ಬರುತ್ತಿದ್ದ ಪೂಜೆಯ ಮಂತ್ರ ಮತ್ತು ಗಂಟೆಯ ಶಬ್ದದಿಂದ... ಶಾಲು ಹೊದ್ದು, ಮಫ್ಲರ್ ಕಟ್ಟಿಕೊಂಡಿದ್ದ ಯಶೋದಮ್ಮ ಹೊರಬರುವಷ್ಟರಲ್ಲಿ ಮಗ ಹಿತ್ತಲ ತುಳಸಿ ಕಟ್ಟೆಗೆ ಪೂಜೆ ಮಾಡುತ್ತಿದ್ದ. ತಣ್ಣನೆ ಗಾಳಿ ಸುಯ್ಯೆಂದು ಬೀಸುತ್ತಿತ್ತು. ಹಕ್ಕಿಗಳ ಚಿಲಿಪಿಲಿ ಶುರುವಾಗಿದ್ದವು. ಪಕ್ಕದ ಓಣಿಯ ಮಸೀದಿಯಿಂದ ಆಝಾನಿನ ಶಬ್ದವೂ ಹಿನ್ನೆಲೆಯಲ್ಲಿ ಕೇಳಿಸುತ್ತಿತ್ತು. ತನ್ನೆದುರಿಗೆ ಕೇಸರಿ ಮಡಿಯುಟ್ಟು ಮಗ ಮಣ ಮಣ ಮಂತ್ರ ಪಠಿಸುತ್ತಿದ್ದ. ಅದ್ಯಾವ ಮಾಯಕದಲ್ಲಿ ಗರ್ಭಗುಡಿ ತನ್ನ ಮಗನನ್ನ ನುಂಗಿಕೊಂಡಿತೋ ಎಂಬ ಬೇಸರದ ಛಾಯೆಯೊಂದು ಮುಖದಲ್ಲಿ ಸುಳಿದರೂ ತೋರಗೊಡದೆ ಹಿತ್ತಿಲ ಮೆಟ್ಟಿಲ ಮೇಲೆ ಕುಳಿತಳು. ನೆನಪು ಮಾಡಿಕೊಂಡರೆ ಬದುಕು ವಿಚಿತ್ರವೆನಿಸುತ್ತದೆ. ದೈವದ ಮೇಲೆ ನಿಜಕ್ಕೂ ಅತೀವ ಆಸಕ್ತಿಯಿದ್ದದ್ದು ಕೊನೆ ಮಗನಿಗೆ... ದಿನಕ್ಕೆರಡು ಬಾರಿಯಾದರೂ ಗುಡಿಗೆ ಹೋಗದಿದ್ದರೆ ಅವನಿಗೆ ಸಮಾಧಾನವೇ ಇರುತ್ತಿರಲಿಲ್ಲ. ಅವನಿಗದೆಷ್ಟು ದೇವರ ನಾಮ, ಕೀರ್ತನೆಗಳು ಬರುತ್ತಿದ್ದವು! ಈಗ ನೋಡಿದರೆ ಅವನು ಮದುವೆಯಾಗಿ ಶುದ್ಧ ಸಂಸಾರಿಯಾಗಿ ದೂರದ ದೆಹಲಿಯಲ್ಲಿ ವಾಸವಿದ್ದಾನೆ. ಪರಮ ಪೋಲಿಯೆಂದು ಬೈಸಿಕೊಳ್ಳುತ್ತಿದ್ದ, ದೂರದ ಹುಬ್ಬಳ್ಳಿಯಲ್ಲಿ ವೈದ್ಯ ಶಾಸ್ತ್ರ ಓದುತ್ತಿದ್ದ, ಶುದ್ಧ ಲೌಕಿಕನೊಬ್ಬ ಹೀಗೆ ಈ ರೀತಿ ಮಾರ್ಪಾಡಾಗಿದ್ದು ಅಚ್ಚರಿ ತರಿಸುತ್ತದೆ. ಎಲ್ಲಾ ಸರಿಯಿದ್ದಿದ್ದರೆ ಈ ಹೊತ್ತಿಗೆ ಇಡೀ ಓಣಿಗೆ ಗುಲ್ಲಾದ ಇವನ ಮತ್ತು ನಿತ್ಯಾಳ ಪ್ರೇಮ ಫಲಿಸಿ ಅವಳು ಈ ಮನೆ ಸೊಸೆಯಾಗಿರುತ್ತಿದ್ದಳು. ನೆನಪುಗಳ ಸುಳಿಯಲ್ಲಿ ಮುಳುಗಿದ್ದವಳು ವಾಸ್ತವಕ್ಕೆ ಬಂದದ್ದು ಮಗ ನಿಲ್ಲಲಾರದೆ ಬಿದ್ದ ಸದ್ದು ಕೇಳಿಸಿದಾಗ!
***
ಅಗುಳಿ ಹಾಕದೆ ಬಿಟ್ಟ ಬಾಗಿಲನ್ನು ತಳ್ಳಿನಿತ್ಯಾ ನೇರವಾಗಿ ಒಳಬಂದಳು. ಸ್ಟೆತಸ್ಕೋಪು ಹಿಡಿದು ಎದೆಬಡಿತ ಪರೀಕ್ಷಿಸಿದಳು. ಅವಳಿಗೆ ಪರಿಚಯವಿಲ್ಲದ ಎದೆಬಡಿತವೆ? ಅದೆಷ್ಟು ಬಾರಿ ಅವನ ಎದೆಯ ಮೇಲೆ ಮಲಗಿ ಅವನ ಹೃದಯದ ಬಡಿತ ಆಲಿಸಿಲ್ಲ? ಆದರೆ ಈ ಬಾರಿ ಜ್ವರದ ಪ್ರಭಾವದಿಂದಲೋ ಏನೋ ಚೂರು ಜೋರಾಗಿಯೇ ಹೊಡೆದುಕೊಳ್ಳುತ್ತಿದೆ. ಕಣ್ಣನ್ನು ಪರೀಕ್ಷಿಸಿದಳು. ಅದೆಷ್ಟು ವರ್ಷಗಳಾದವು ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡಿ? ಸುಮಾರು ಒಂಭತ್ತು ವರುಷ ಕಳೆದಿರಬೇಕು. ಪಿಯುಸಿಯಲ್ಲಿ ಒಂದೇ ಕಾಲೇಜಿನಲ್ಲಿ ಓದುವಾಗ ತುಂಟಾತಿತುಂಟ. ಅವನ ಬಟ್ಟಲು ಕಂಗಳ ನೋಡುತ್ತಲೇ ಎಷ್ಟೋ ಸಂಜೆಗಳನ್ನು ಪಾರ್ಕುಗಳಲ್ಲಿ ಕಳೆದಿದ್ದಿಲ್ಲವೆ? ಈಗ ಇವನ ಕಣ್ಣುಗಳು ಜ್ವರದ ಹೊಡೆತಕ್ಕೆ ನಿಸ್ತೇಜವಾಗಿವೆ. ಸುಸ್ತು ಮೈಯೆಲ್ಲಾ ಸುತ್ತಿಕೊಂಡು ಕಳಾಹೀನನಾಗಿದ್ದಾನೆ. ತನ್ನೆದುರು ರೋಗಿಯಾಗಿ ಮಲಗಿರುವವನು ತಾನು ಹತ್ತು ವರ್ಷಗಳ ಹಿಂದೆ ಉತ್ಕಟವಾಗಿ ಪ್ರೇಮಿಸಿದ್ದ ಪ್ರೇಮಿಯೇ ಹೌದೇ ಎಂದು ವ್ಯಾಕುಲಗೊಂಡಿದ್ದವಳು ಥಟಕ್ಕನೆ ಅವನ ತುಟಿಗಳಿಗೆ ಮುತ್ತಿಕ್ಕಿಬಿಟ್ಟಳು. ದೀರ್ಘ ಚುಂಬನ... ತುಸು ಹೊತ್ತು ತಡೆದು ಅವನೇ ಅವಳನ್ನು ದೂರ ತಳ್ಳಿದ. ಅವಳ ಮುಖದಲ್ಲಿ ಯಾವುದೇ ಪಾಪಪ್ರಜ್ಞೆ ಇರಲಿಲ್ಲವಾದರೂ ಅವನು ತೀವ್ರ ಗೊಂದಲದಲ್ಲಿ ಸಿಕ್ಕಿಕೊಂಡವನಂತೆ ಕಣ್ಣುಗಳಲ್ಲಿ ನೀರು ತುಂಬಿಕೊಂಡವು. ಅದೆಷ್ಟು ಬಾರಿ ಈ ಹಿಂದೆ ಇಬ್ಬರ ತುಟಿಗಳು ಚುಂಬನದ ಸುಖವುಂಡಿಲ್ಲ? ಎಲ್ಲದಕ್ಕಿಂತಲೂ ನಿತ್ಯಾಳಿಗೆ ಹಿಡಿಸುತ್ತಿದ್ದುದು ಮಾಧವನ ಕೂದಲು. ರೇಶಿಮೆಯಂತಾ ಕೂದಲು.
ಆ ಕೂದಲಿನಲ್ಲಿಯೇ ಕೈಯಾಡಿಸುತ್ತಾ ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ನಿದ್ದೆ ಮಾಡಿಸಿದ ನೆನಪು ಇನ್ನೂ ಹಸಿರಾಗಿಯೇ ಇದೆ. ಈಗೆಲ್ಲಿ..? ಸ್ವಾಮಿಯಾಗುತ್ತೀನಿ ಅಂತ ಹೊರಟು ಎಲ್ಲಾ ಕೂದಲು ಬೋಳಿಸಿಕೊಂಡು ಹಿಂದೆ ಶಿಖೆ ಬಿಟ್ಟಿದ್ದಾನೆ. ತಾಯಿ, ತಂಗಿ, ತಮ್ಮ ಮತ್ತು ನಾನು ಎಲ್ಲವನ್ನೂ ತೊರೆದು ಅಲ್ಲೆಲ್ಲೋ ಆಶ್ರಮದಲ್ಲಿ ದೀಕ್ಷೆ ಪಡೆದು ಸನ್ಯಾಸಿಯಾಗಿದ್ದು ಈಗಲೂ ಬಿಡಿಸಲಾಗದ ಒಗಟು. ಇವನ ಬಗ್ಗೆ ಎಲ್ಲಾ ಗೊತ್ತಿದೆಯೆಂದುಕೊಂಡಿದ್ದ ತನಗೆ ಇವನಾಳದಲ್ಲಿದ್ದಿರಬಹುದಾದ ನಶ್ವರತೆಯೆಡೆಗಿನ ತುಡಿತದ ಚಿಕ್ಕ ಸುಳಿವೂ ಸಿಕ್ಕಿರಲಿಲ್ಲವೆಂಬುದು ಆಶ್ಚರ್ಯವೆನಿಸುತ್ತದೆ.
‘ಜ್ವರ ಇದೆ. ಒಂದು ಇಂಜೆಕ್ಷನ್ ಹಾಕಿರ್ತೀನಿ. ಈ ಮಾತ್ರೆ ತೆಕ್ಕೊ. ಸಂಜೆಯೊಳಗೆ ಕಡಿಮೆಯಾಗತ್ತೆ’ ಎಂದು ಹೊರಟವಳನ್ನ ತಡೆದದ್ದು ಅವನದ್ದೇ ದನಿ.
‘ನಿನ್ನ ಮದುವೆ ಫಿಕ್ಸ್ ಆಯ್ತಂತೆ?’ ‘ಹು...’
‘ಯಾರು ಹುಡುಗ?’ ‘ನೀ ಮದ್ವೆಯಾಗ್ತೀಯಾ ಅಂದ್ರೆ ಹೇಳು...ಈ ಕೂಡಲೇ ಆ ಮದ್ವೆ ಮುರಿದು ಓಡಿ ಬರ್ತೀನಿ. ಸನ್ಯಾಸ ಬಿಟ್ಟು ಸಂಸಾರಿ ಆಗ್ತೀಯಾ?’ ‘ಸಂಸಾರ ಅನ್ನೋದೇ ಮಾಯೆ ನಿತ್ಯಾ. ಕಳೆದ ಹತ್ತು ವರ್ಷಗಳಲ್ಲಿ ಲೌಕಿಕದಿಂದ ಬಹು ದೂರ ಬಂದುಬಿಟ್ಟಿದ್ದೀನಿ...’
‘ಇಲ್ಲಿ ಲೌಕಿಕ ಅಂತ ಯಾವುದೂ ಇಲ್ಲವೋ... ಎಲ್ಲವೂ ಆಧ್ಯಾತ್ಮಿಕವೇ! ಹಾಗಂತ ಆಧ್ಯಾತ್ಮಿಕ ಅಂತಾನೂ ಯಾವುದೂ ಇಲ್ಲ... ಎಲ್ಲವೂ ಲೌಕಿಕವೇ!’ ಅವನು ಇದಕ್ಕೆ ಪ್ರತಿಕ್ರಿಯಿಸಲಿಲ್ಲ.
ತುಸುಹೊತ್ತು ಇಬ್ಬರ ನಡುವೆ ದೀರ್ಘ ಮೌನ ನೆಲೆಸಿತ್ತು.
‘ನಿನಗೆ ಲೌಕಿಕದ ಅದ್ಯಾವುದರ ಮೇಲೆ ನಂಬಿಕೆ?’ ಎಂದು ಗಂಭೀರವಾಗಿ ಮಠದ ಸ್ವಾಮಿಯಂತೆ ಪ್ರಶ್ನೆ ಕೇಳಿದ.
‘ನನಗೆ ನಿತ್ಯದ ಬದುಕಿನ ಮೇಲೆ ನಂಬಿಕೆಯಿದೆಯೋ... ಜೀವಿಗಳ ಉಸಿರಿನ ಮೇಲೆ ನಂಬಿಕೆಯಿದೆ... ಗೊಂದಲ ಇರುವುದು ನಿನ್ನಲ್ಲಿ!’ ಎಂಬ ಉತ್ತರಕ್ಕೆ ಪ್ರತಿಕ್ರಿಯೆಯಾಗಿ ಕೇವಲ ವ್ಯಂಗ್ಯವಾಗಿ ತುಟಿ ಕೊಂಕಿಸಿದ.
‘ನಿನ್ನ ಕೊಂಕು ನನಗೆ ಅರ್ಥ ಆಗತ್ತೆ. ಮನುಷ್ಯ ತಡೆಯಲಾರದವುಗಳಲ್ಲಿ ಬಹುಶಃ ಸಾವೇ ಬಹುದೊಡ್ಡ ಸತ್ಯ ಇರಬೇಕು. ಆದರೆ ಅದನ್ನ ಮೀರಲಾಗದ ಬದುಕುವ ಆಸೆ ಇರುತ್ತಲ್ವಾ? ಅದನ್ನ ಜೀವಂತವಾಗಿಡುವ ಪ್ರಯತ್ನದ ಮೇಲೆ ನನಗೆ ನಂಬಿಕೆ’
‘ಹ್ಮ್... ಕಲಿಯುಗದಲ್ಲಿ ಅವನು ನಾಮಾವತಾರಿ ಅಂತಾರೆ. ಅವನ ನಾಮಸ್ಮರಣೆಯಿಂದ ಇಹ ಪರಗಳಿಂದ ಮುಕ್ತಿ ಅಂತಾರೆ. ನನಗೆ ಅಕರ್ಮದ ಮೇಲೆ ನಂಬಿಕೆ’
‘ಹ್ಮ್... ನನಗೆ ಅವೆಲ್ಲ ನಿಲುಕದ ಮಾತುಗಳು...ಅಂದಹಾಗೆ ನಮ್ಮ ನೆನಪು ಆಗೋದೇ ಇಲ್ವಾ?’
‘ಮತ್ತೆ ಹುಷಾರಿಲ್ಲದೆ ಇದ್ದಾಗ ಬಂದ್ರೆ ನೋಡ್ತೀಯಾ?’ ‘ರೋಗ ವಾಸಿ ಮಾಡೋದು ನನ್ನ ವೃತ್ತಿ’ ಎಂದು ನಿರುದ್ವೇಗದಿಂದ ಹೇಳಿ ಸ್ಟೆತಸ್ಕೋಪು ಹಿಡಿದು ಹೊರನಡೆಯುವಾಗ ತನಗೇ ತಿಳಿಯದಂತೆ ಕಣ್ಣುಗಳಲ್ಲಿ ನೀರಿದ್ದವು. ಒಮ್ಮೆ ಹಿಂತಿರಿಗಿ ಅವನ ಮುಖಭಾವವನ್ನೊಮ್ಮೆ ನೋಡಿಬಿಡಬೇಕು ಎನ್ನುವ ಮನಸಿನ ಆಸೆಯನ್ನು ಹತ್ತಿಕ್ಕಿ ಹೊಸಿಲು ದಾಟಿ ನೂರು ಹೆಜ್ಜೆ ಇಡುವಷ್ಟರಲ್ಲಿ ಯಾವುದೋ ಆಂಬುಲೆನ್ಸಿನ ಸದ್ದು ಮುಖ್ಯ ರಸ್ತೆಯಲ್ಲಿ ಹಾದು ಹೋದಂತಾಗಿ ತನ್ನ ನಂಬಿಕೆಯನ್ನೇ ಒಮ್ಮೆ ಅಲುಗಾಡಿಸಿದಂತಾದರೂ ಸಾವರಿಸಿಕೊಂಡು ಕ್ರಮೇಣ ನಿತ್ಯದ ಸಂತೆಯ ಶಬ್ದಗಳಲ್ಲಿ ಲೀನವಾದಳು.
ಇವನಿಗೆ ಎಲ್ಲವೂ ಮೌನದೊಳಗೆ ಮುಳುಗಿದಂತೆ ಅನ್ನಿಸುತ್ತಿರುವಾಗಲೇ ತನ್ನದೇ ಉಚ್ವಾಸ ನಿಶ್ವಾಸದ ಬಿಸಿಯುಸಿರಿನ ಶಬ್ದವೂ ಕ್ರಮೇಣ ಸ್ಪಷ್ಟವಾಗಿ ಕೇಳತೊಡಗಿತು.
***
ನಿತ್ಯಾ ಮತ್ತು ಮಗನ ಮಧ್ಯೆ ಪವಾಡವೆಂಬಂತಾದರೂ ಮತ್ತೆ ಪ್ರೀತಿ ಚಿಗುರಲಿ ಎಂಬ ಆಸೆ ಹೊತ್ತಿದ್ದ ಯಶೋದಮ್ಮ ದೇವಸ್ಥಾನದಿಂದ ಸಂಜೆಗೆ ವಾಪಸ್ಸಾದಳು. ಬರುತ್ತಾ ಪಕ್ಕದ ಮನೆಯ ಅಂಬುಜಾಳಿಗೆ ಹಾರಿ ಹೋಗಿದ್ದ ನಿದ್ರೆ ಮನೆಗೆ ಜೋಪಾನವಾಗಿಮರಳಿದೆಯೆಂದೂ, ಇನ್ನು ಮೇಲಾದರೂ ಕಣ್ತುಂಬ ನಿದ್ದೆ ಮಾಡಬಹುದೆಂದೂ ಖುಷಿಯಿಂದ ಹೇಳಿಬಂದಿದ್ದಳು. ಆದರೆಮನೆಗೆ ಮರಳಿದಾಗ ಬಾಗಿಲು ತೆರೆದೇ ಇತ್ತು. ಕೋಣೆಯಲ್ಲಿ ಅವನಿರಲಿಲ್ಲ. ಅವನು ಮಲಗಿದ್ದ ಮಂಚದ ಪಕ್ಕದಲ್ಲಿದ್ದ ಟೀಪಾಯಿಯ ಮೇಲೆ ಒಂದು ಪುಟ್ಟ ಪತ್ರವಿತ್ತು.
‘ಪ್ರೀತಿಯ ಅಮ್ಮ...
ನನ್ನ ಹುಡುಕುವ ಪ್ರಯತ್ನ ಮಾಡಬೇಡ
ನಾನೇ ಸ್ವತಃ ಹುಡುಕಾಟದಲ್ಲಿದ್ದೇನೆ...’
ಮಾತು ಹೊರಡಲಿಲ್ಲ. ಪತ್ರದ ಮೇಲಿನ ಶಬ್ದಗಳು ನಿರ್ಭಾವುಕತೆಯಿಂದ ಹೇಳಬೇಕಾದ್ದನ್ನು ಹೇಳಿದ್ದವು. ಕ್ಷಣ ಹೊತ್ತು ಅಗಾಧ ಮೌನವೊಂದು ಆವರಿಸಿ ತನ್ನ ಹೃದಯದ ಬಡಿತದ ಶಬ್ದವೇ ಕೇಳಿಸತೊಡಗಿತು.
‘ಢಣ್...ಢಣ್...ಢಣ್...ಢಣ್ ...ಢಣ್ ...ಢಣ್’ ಎಂದು ಕೋಣೆಯ ಗಂಟೆಯ ಶಬ್ದ ತಾನಿದ್ದೇನೆಂಬ ಅಭಯ ಹಸ್ತ ನೀಡುವಂತೆ ಹೊಡೆದುಕೊಳ್ಳುತ್ತಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.