ಒಂದು
ರಾತ್ರಿಯಿಡೀ ಜಡಿದ ಜಡಿ ಮಳೆಗೆ ನೆಂದು ತೊಪ್ಪೆಯಾಗಿದ್ದ ಹಸಿ ಸೌದೆ ಸೀಳುಗಳಿಗೆ ಸೀಮೆಎಣ್ಣೆ ಸುರುವಿ ಒಲೆಗೆ ಬೆಂಕಿ ತಾಕಿಸಿ, ಕಾರಿದ ದಟ್ಟ ಹೊಗೆ ಜೋಪಡಿಯಲ್ಲಿ ಸುತ್ತಿಕೊಂಡು ತಾಯವ್ವನ ಕಣ್ಣು, ಮೂಗಲ್ಲಿ ರೋಸು ತೊಟ್ಟಿಕ್ಕತೊಡಗಿತು. ಮುದ್ದೆ ತಿರುವಿ ತೊಳೆಸುತ್ತ ‘ದರ್ದಂಬದಿಲ್ಲ, ಬೀಡಿ ಸೀಪ್ಕೆಂಡು ತೇಕ್ತ ಕುಂತ್ರೆ ಕೇಮೆಂಗಾದತು. ಗಲ್ಲೆಬಾನಿಗೆ ದನ್ದ ಚರ್ಮ ನೆನಾಕಿ ಮೂರು ದಿನದೊತ್ತಾತು. ತೊಗಲು ಸೀಳಿ ಬಂಡೆ ಮೇಲೆ ಒಣಾಕಿ ಕೈಲಾದಷ್ಟು ಸೆಳೇವು ಮೆಟ್ನ ಗಂಟಿಕ್ಕಿದ್ರೆ ಆಗ್ತಿತ್ತು. ಅದೇ ಜೀವಾಳ ಅಂಬ ನದ್ರಿಲ್ಲ ಇದ್ಕೆ’ ಒಂದೇ ಉಸುರಿಗೆ ತನ್ನ ಗಂಡ ಕೆಂಚನ ಮೂದಲಿಸುತ್ತ, ಉರಿವ ಒಲೆಗೆ ಕೊಳ್ಳಿ ತಿವಿದು ಕೆಂಡ ಕಾರಿದಳು ತಾಯವ್ವ.
ತಾಯವ್ವ, ನಮನಮ ಅನ್ನುವ ಒಳಗುದಿಗೆ ಮಗ ಗುಡದಯ್ಯ ಕಿವಿಗೊಡದೆ ಲೋಲುಕಾರನಂತೆ ಗಲ್ಲೆಬಾನಿ ಹಾಸುಗಲ್ಲ ಮೇಲೆ ಪಂಕಲ್ ಹೊಡೆಯುತ್ತಿದ್ದವನಿಗೆ, ಹಾವು ಹಾವು ಎಂದು ಕೂಗೆಬ್ಬಿಸಿದ ಕಮ್ಮಾರ ಮಾರನ ಮನೆಯತ್ತ ನೆಗೆದೋಡಿ, ಬಚ್ಚಲ ನೆರಕೆಯಲ್ಲಿ ಕಂಡ ಹಾವು ಹರಿದು ಜಗುಲಿ ಸಾಟಿಂದ ಮಡಕೆ ಸಾಲಿಡಿದು ನುಸುಳಿ... ಜಂತೆ ಹೊಕ್ಕು ಅಡಗಿರುವುದ ಖಾತ್ರಿ ಪಡಿಸಿಕೊಂಡು, ದೆಬ್ಬೆ ಹಿಡಿದು ತಿವಿದು ತಿವಿದೇ ಅರೆಗಾವು ಮಾಡಿ ಬಾಲ ಹಿಡಿದೆಳೆದು ಬೀದಿಗೆ ಎಳೆತಂದು ಪಾಪ ತಟ್ಟದಿರಲೆಂದು ಸರ್ಪದ ಬಾಯಿಗೆ ನಾಣ್ಯವನಿಟ್ಟು ಸುಡುಬೂದಿ ಕೆದಕಿ, ಹುಡುಕಾಡುವ ಹುಡುಗರು ಗದ್ದಲ ಎಬ್ಬಿಸಿದರು.
‘ಹಾವು ಹಿಡಿಯಾಕೆ, ಉಳುಕು ತೆಗೆಯಾಕೆ, ಹೆಂಗಸ್ರ ಭಟ್ಟಿ ನೀವಾಕೆ ಇಂಥವೆ ಅಸವಲ್ಲದು ಮಾಡ್ಕೆಂಡು ಅಲಾಯಿ ಉಲಾಯಿ ಅಂತ ತಿರುಗ್ತವುನೆ, ನಮ್ಮ ಅಮುಲ್ದಾರ. ಅಪ್ಪ ಅಂಗೆ ಮಗ ಇಂಗೆ, ಒಳಗು- ಹೊರಗು ಅದೇಟಮ್ತ ಪೇಚಾಡಿ ಜೀವತೆಯ್ಲಿ ಹೆಣ್ಣೆಂಗ್ಸು ನಾನೊಬ್ಳೆಯ’ ಎಂದು ಕೊಂಡಾಡುತ್ತಿರುವಾಗ, ಮಗ ಬಂದ ಸಪ್ಪಳದ ಸುಳುವಿಗೆ ‘ಹೊತ್ತು ನೆತ್ತಿಗೇರಿದ್ರು ಉಲ್ಲುಲ್‌ಬತ್ತಿ, ಉರ್ಕಲ್ ಬತ್ತಿ ಅಂತ ತಿರುಗಿದ್ರೆ, ಮನೆ ಕಾಪ್ರ ಆತದೇನ್ಲ... ಚಪ್ಪರದಡಿ ಗೂಟದ ಹುರಿ ಮೇಲೆ ನೇತಾಕಿರ ಬಾಡು ಒಣಗಿದ್ರೆ ನಾಕು ಸೆಳೆ ತಗಂಬ. ಕೆಂಡದ ಮೇಲೆ ಸುಟ್‌ಕೊಡ್ತಿನಿ. ನೆಂಚ್ಕೆಂಡುಂಡು ಅಂಗೇ ಹಂದಿಗಳು ಹಸ್ಕಂಡು ಅವುಕವೆ ಕಡದಾಡ್ತವೆ; ಮೇಸ್ಕಂಡ್ ಬರುವಂತೆ. ಲಚ್ಚಿ ಚೊಚ್ಚಲ ಬಸುರಿ ಕಣ. ಈ ಸೂಲಿ ಅದಾದ್ರು ದಂಡಿಯಾಗಿ ಈದ್ರೆ ಪುರ್ನಾಮು ನೆಟ್ಟಗಾಗ್ತೆ. ಅದ್ಕಂದೀಟು ನಿಗ ಮಡಗು. ಕತ್ತಾಳೆ ಗೆಡ್ಡೆನ ವಸಿ ಜಾಸ್ತಿನೆ ಸಣ್ಣಗೆ ಉತ್ರಿಸಿ ಹಾಕು, ವೈನಾಗ್ತದೆ. ನದ್ರಿಲ್ದ ನಿಮ್ಮಪ್ನ ನೆಚ್ಚಿಕೆಂಡ್ರೆ ಕೂಳಿಗು ಬಾಳಿಗು ತಕಥೈನೆ’ ಎಂದು ಅಲವತ್ತುಕೊಂಡು ಮಗನಿಗೆ ಉಣ್ಣಕಿಕ್ಕಿದಳು.
‘ಆಯ್ತೇಳವ್ವ’ ಅಂತ ಗಬಗಬ ಉಂಡವನೆ ಗೂಡಿಗೆ ಅಡ್ಡಲಾಗಿ ಕಟ್ಟಿದ್ದ ತಡಿಕೆ ಬಿಚ್ಚಿದ್ದೆ ತಡ ಹಂದಿಗಳ ಜತೆ ಕುನ್ನಿಗುಳು, ತಿಪ್ಪೆಗುಂಡಿ, ಚರಂಡಿ ಗೂರಾಡ್ತ; ಹಿಂಡು ಹಿಂಡಾಗಿ ಉಜ್ಜಾಡುತ್ತ, ಓಣಿಗುಂಟ ನುಗ್ಗಿ ನೆಲವನೆ ಮೂಸುತ್ತ ಹೊಲಸಿಗೆ ತಾರಾಡಿದವುಗಳ ಅದ್ದಲಿಸಿಕೊಂಡು ಸವ್ವತೊಡಗಿದ ಗುಡದಯ್ಯ ದಿಕ್ಕಾಪಾಲಾಗಿ ಚದುರಿದ ಮಂದೆ ಹಿಂದೆ ಮುಂದೆ ಹೆಗ್ಗಾಲು ಅಪ್ಪಳಿಸುತ್ತ ತಾರಾಡಿದ.
ತೊನೆಯುತ್ತ ಲಚ್ಚಿ; ಗೌಡರ ಮನೆಯಂಗಳದಿ ಕಕ್ಕ ಮಾಡುತ್ತಿದ್ದ ಮಗುವಿನ ಹಿಂದೆ ಅಡರುಗಾಲಾಕಿ ನಿಂತು ತಿನ್ನಲು ಹವಣಿಸಿದಂತೆಲ್ಲ; ಕುಂತಲ್ಲೆ ಕುಂತ ಮಗು ತಾವು ಕೊಡದೆ ಸತಾಯಿಸುವುದನ್ನು ಸಹಿಸದೆ ದೂಳು ಅಡರುವಂತೆ ಆಘ್ರಾಣಿಸಿ ಕಕ್ಕ ಮುಕ್ಕಲು ಮಗುವಿನ ಅಂಡು ಮೀಟಿ ಬಾಯಿ ಹಾಕಿತು. ಬಾಯಿ ಹಾಕಿ ಜಬ್ಬರಿಸಿದ ರಭಸಕ್ಕೆ ಮಕಾಡೆ ಬಿದ್ದ ಮಗು ಚಿಟ್ಟನೆ ಚೀರಿ ರೊಳ್ಳೆ ತೆಗೆದು ನೆಲರಾವಿ ರಚ್ಚೆ ಹಿಡಿಯಿತು. ಬರಲಿಡಿದು ಓಡಿ ಬಂದ ಅದರವ್ವ ಒಂದೇ ಸಮನೆ ಬರಸೆಳೆದರೂ ಕದಲದೆ ಅದು ತಿನ್ನುವುದರಲ್ಲೇ ಆನಂದಪಡುತ್ತಿತ್ತು. ಸರೀಕರು ಹುಯಿಲೆಬ್ಬಿಸಿದಾಗ ಹಜಾರದ ಮೂಲೆಗೆ ಆತು ಗುಟುರು ಹಾಕಿತು. ನೆರೆ ಮನೆಗಳಿಗೆ ನುಗ್ಗಿ ಮೈಲಿಗೆ ಮಾಡೀತೆಂದು ಬಡಿಗೆ ಹಿಡಿದು ಚಚ್ಚುವ ಉಡಾಳರ ಎದುರು ಆಯಾಸಗೊಂಡು ಪ್ರತಿರೋಧಿಸದೆ ತೇಕುತ್ತ, ತ್ರಾಸಪಟ್ಟು ಓಡುವುದರ ಹಿಂದೆ ಬಿದ್ದು ‘ನೀವ್ ಎಷ್ಟೇ ಬಡುದ್ರು ಅದು ಜಗ್ಗಲ್ಲ ಕಣ್ರಲಾ, ಮೂತಿಗೆ ಸರಿಯಾಗಿ ಚಚ್ರಿ’ ಎಂದು ಬೊಬ್ಬೆ ಹೊಡೆದವರ ತಡೆಯಲು ಅಡ್ಡಬಿದ್ದ ಗುಡದಯ್ಯನ ಕೆಡವಿ ಲಚ್ಚಿಯ ಘಾಸಿ ಮಾಡಿದರು.
ಘಾತವಾಗಿ ಓಡುವ ಹಂದಿ ಹಿಂದೆ ಬಡಿಗೆ ಹಿಡಿದು ಬಡಿಯುವವರು ಅಟ್ಟಾಡಿಸುವಾಗ; ಹಂದಿ ಗೂಡು ಉಜ್ಜಿ ಗಲೀಜನ್ನು ಗಲ್ಲೆಬಾನಿ ನೀಸು ನೀರಿನ ಜತೆಮಾಡಿ ಕೊಚ್ಚೆಗೆ ಹರಿಯಲು ಅನುವು ಮಾಡುತ್ತಿದ್ದ ತಾಯವ್ವ, ಲಚ್ಚಿ ಉಸಿರುಗಟ್ಟಿ ಕೀರುವುದ ಕಂಡು ‘ಒಡಿಬ್ಯಾಡ್ರಪ್ಪ ಬಿಮ್ಮನಿಸೆ, ನಿಮ್ ದಮ್ಮಯ್ಯ’ ಅಂತ ಗೋಗರೆದು ಕೈಕಾಲು ಕಟ್ಟಿದವಳ ತುರುಬಿಡಿದು ಎಳೆದಾಡಿ, ಆಯಕಟ್ಟಿಗೆ ಒತ್ತರಿಸಿ ಲಚ್ಚಿಯ ಬಡಿದಾಕಿದರು.
ಛಿದ್ರಗೊಂಡ ಒಡಲ ಬಾಯಲ್ಲಿ ನೀರೊಡೆದು, ರಕ್ತಮಿಶ್ರಿತ ಲೋಳೆ ಬಳಬಳನೆ ಸ್ರವಿಸಿ, ಕಸವನ್ನೆಲ್ಲ ಹೊರಹಾಕಿದ ಲಚ್ಚಿ, ಪ್ರಸವ ವೇದನೆ ತಾಳಲಾರದೆ ಅಕಾಲದಲಿ ಹತ್ತಾರು ಮರಿಗಳಿಗೆ ಜನ್ಮ ನೀಡಿ, ನಿತ್ರಾಣಗೊಂಡು ಸದ್ದಡಗಿದ ಜೀವ ಕಂಡು ತಾಯವ್ವನ ಉಸಿರೇ ನಿಂತಂತಾತು. ಸತ್ತ ಲಚ್ಚಿಯ ಮೈದಡವಿ, ಹೆತ್ತ ಹತ್ತಾರು ಮರಿಗಳ ಪೈಕಿ ಒಂದೆರಡು ಕುನ್ನಿಗಳು ಮಿಸುಕಾಡಿ ಕುಟುಕು ಜೀವ ಹಿಡಿದು ಜಗದಗಲ ಕಣ್ಣು ತೆರೆದಾಗ, ಬದುಕುಳಿದ ತಬ್ಬಲಿ ಕಂದಮ್ಮಗಳ ಸಲಹುವ ಕನಸ ಕಂಗಳಲ್ಲಿ ನಿಚ್ಚಳ ಬೆಳಕು ಮೂಡಿ ತನ್ನದೇ ಬಸಿರು ಇಳಿದ ನಿರಾಳ ಭಾವದಲಿ ಬಿಳುಚಿದಳು ತಾಯವ್ವ, ಜೋಗುಳವ ಪಾಡುತ್ತ...
‘ಯಾಕಲಾ ತಾಯಿ ಯಾಕವ್ವ
ಕೂಸನಾಡಿಸುವ ಸೆರಗಲ್ಲಿ
ಕೆಂಡದುಂಡೆಗಳ ಕಟ್ಟಿಕೊಂಡಿರುವೆ||
ಗೋಳು ನಿಲ್ಸೆ ತಾಯಿ ಅದೇಟಮ್ತ ಸಂಕ್ಟಪಡ್ತೀಯ, ಕೊಂದೋರ‍್ನ ಪಾಪ ತಿಂಬದೆ ಬಿಡಲ್ಲ. ಈ ಆತ್ಮಕ್ಕೆ ಸದ್ಗತಿ ಸಿಗಲಿ. ದೈವದಂತೆ ವಪ್ಪ ಮಾಡಿಬಿಡಾನ’ ಎಂದು ನೆರೆದ ಕೇರಿ ಜನ ಸತ್ತ ಮರಿಗಳ ಜತೆ ತಾಯಿ ದೇಹವ ಹಚ್ಚಡದ ಜೋಲಿ ಕಟ್ಟಿ, ಬೆಂಚೆ ಮಾಳಕ್ಕೆ ಹೊತ್ತೊಯ್ದು ಗುದ್ರ ತೋಡಿ ಹರಹರಾ ಶಿವಶಿವಾ ಎಂದು ಒಕ್ಕೊರಲಿನಿಂದ ಶವಗಳ ಗುಂಡಿಯೊಳಗೆ ಹುದುಗಿಸಿ, ತಂಗಟೆ ಸೊಪ್ಪು ಮುರಿದು ಹಾಕುತ್ತ, ಕಲ್ಲುಪ್ಪ ಸುರಿದು ಮೂರಿಡಿ ಮಣ್ಣು ಕೊಟ್ಟು ಗುಡ್ಡೆ ನೇರ್ಪು ಮಾಡಿ, ಕರ್ಪೂರ ಹಚ್ಚಿ, ತೆಂಗಿನಕಾಯಿ ಒಡೆದು, ಊದುಗಡ್ಡಿ ಬೆಳಗಿ ನಾಯಿ, ನರಿಗಳು ಗೆಬರದಂತೆ ಕಳ್ಳೆತೊಟ್ಟು ಜಡಿದು, ಮೇಲೆ ಮೋಟುಗಲ್ಲುಗಳನ್ನೇರಿ ದಫನು ಕಾರ್ಯ ನೆರವೇರಿಸಿ, ಅಲ್ಲಲ್ಲಿ ಜಾಲಿ ಮರದಡಿ ಕುಂತರು.
ಇಂಗಲೊಲ್ಲದ ದುಃಖದಲಿ ತಾಯವ್ವ, ಗುಡ್ಡೆಗೆ ಅಂತಿಮ ನಮನ ಸಲ್ಲಿಸಿ, ಊರತ್ತ ಮುಖಮಾಡಿ ಬೊಗಸೆ ಮಣ್ಣು ತೂರಿ ‘ಯಕ್ಕುಟ್ಟೋಗ’ ಅಂತ ಲಟಿಕೆ ಮುರಿದು ಎದೆಭಾರ ಇಳಿವಂತೆ ಶಪಿಸಿ ಶಮನಗೊಂಡಳು. ತಿರುಗಿ, ತೊಟ್ಟಿ ನೀರಲ್ಲಿ ಕೈಕಾಲು ಮುಖಕ್ಕೆ ನೀರೆರಚಿಕೊಂಡು, ಗಲ್ಲೆಬಾನಿಗೆ ಮರಳಿ ಗೂಡಲ್ಲಿ ಹಚ್ಚಿಟ್ಟ ಜ್ಯೋತಿಗೆ ಕೈಮುಗಿದು ಜೀವ ಜಲವಾದ ಗಲ್ಲೆಬಾನಿ ಶಾಸ್ತ್ರದ ನೀರನ್ನು ಚಿಮುಕಿಸಿ ಶುಭ್ರಗೊಂಡು ಅಂತಿಮ ಯಾತ್ರೆ ಮುಗಿಸಿದರು.
‘ತಿಂಬ ವಸ್ತುನ ಮಣ್ಣು ಮಾಡಿ ಅದೇನ್ ಮುಕ್ತವೆ’ ಎಂದು ಕ್ಯಾತೆ ತೆಗೆದು ನಲುಮುತ್ತಿದ್ದ ತನ್ನ ಗಂಡನತ್ತ ದುರುಗಟ್ಟಿ ‘ಮಾನಗೇಡಿ, ತುಟುಕರೀದ ಈ ಜಲುಮಕ್ಕೆ... ನೆಕ್ ಜಾರ‍್ಲನು...’ ಎಂದಾಡುತ್ತ ಸೆರಗು ಬಾಯಿಗೆ ತುರುಕಿ, ಒತ್ತರಿಸುವ ದುಃಖವ ಗಂಟಲಲ್ಲಿ ಅದುಮಿಕೊಂಡು ಸೈರಣೆ ತಂದುಕೊಂಡಳು ತಾಯವ್ವ.
ಮೂರು ದಿವಸದ ದಿನ ಗುಡ್ಡೆಗೆ ಎಡೆ ಇಟ್ಟು ಪೂಜೆ ಮಾಡಿ ಗಲ್ಲೆಬಾನಿ ಅಂಗಳದಲ್ಲಿ ಚಪ್ಪರ ಹಾಕಿ, ಮಂಟೇಸ್ವಾಮಿ, ಅಂಬೇಡ್ಕರ್ ಚಿತ್ರಪಟಕ್ಕೆ ಹಾರ ಹಾಕಿ, ಹಣತೆ ಹಚ್ಚಿಟ್ಟು, ಸೀ ಅಡುಗೆ ಮಾಡಿ, ಕುಲಸ್ಥರನ್ನು ಕರೆದು ತಿಥಿ ಕಾರ್ಯ ಮುಗಿಸಿದರೂ ತಾಯವ್ವನಿಗೆ ಕವಿದಿದ್ದ ಮಂಕು ಬಿಡಲಿಲ್ಲ.
ಎರಡು
ಇಂಥದ್ದನ್ನೆಲ್ಲ ಕಂಡು ಕೇಳರಿಯದೆ, ಕಣ್ಣು ಕಿಸುರಾಗಿ ಎಂಥ ಕಾಲ ಬಂತಪ್ಪ ಎಂದು ಉದ್ಗರಿಸುತ್ತ; ಬೀಸೋ ತಂಗಾಳಿಗೆ ಮೈಯೊಡ್ಡಿ ಹಗ್ಗದುರಿ ಮಂಚದ ಮೇಲೆ ಕುಂತು; ಶಂಖದಾಕಾರ ಮುಷ್ಟಿ ಹಿಡಿದ ಕೈ ಕಿರುಬೆರಳ ಸಂಧಿಯಲ್ಲಿ ಸಿಗರೇಟು ಸಿಕ್ಕಿಸಿ, ಹುಕ್ಕದೋಪಾದಿ ದಮ್ಮೆಳೆದು ಉರುಬಿ ರಿಂಗಣಿಸುತ್ತಿದ್ದ ಪಿಳ್ಳೇಗೌಡ, ಉರಿದು ಕಟ್ಟಿದ್ದ ಬೂದಿಯನ್ನು ಚಿಟಿಕಿ ಹಾರಿಸಿ ಕೊಡವಿದ.
‘ಶರಣು ಗೌಡ್ರೆ’ ಎಂದು ನಮಿಸುತ್ತ ಸನಿಹ ಬಂದು ಕುಳಿತ ಕಾರ್ಯದರ್ಶಿಯನ್ನು ಉದ್ದೇಶಿಸಿ; ‘ಈ ಕೇರಿ ಜನಕ್ಕೆ ಅದೇನಾಗಿದೆ. ಜಗತ್ತಿನಲ್ಲಿ ಇಲ್ಲದ್ದು ಮಾಡ್ತವೆ. ತಿಂಬಾಕೆ ಕೂಳಿಲ್ದೆ ಇದ್ರೂ ಸತ್ತ ಹಂದಿಗೆ ತಿಥಿ ಮಾಡ್ತರಲ್ಲ ಸೆಕೆಟ್ರಿ...’
‘ಕಾಲ ಕೆಟ್ಟೋತು ಗೌಡ್ರೆ, ಹೋಗ್ಲಿ ಬಿಡ್ರಿ ನಮಗ್ಯಾಕೆ... ಮೀಟಿಂಗೆಲ್ಲ ರೆಡಿ ಮಾಡಿದಿನಿ’ ಅಂತ ಹೆಗಲ ಚೀಲದೊಳಗಿಂದ ಕಡತ ತೆರೆದು ‘ಅಧ್ಯಕ್ಷರು ಅನುಮತಿಗೆ ಸಹಿ ಹಾಕಬೇಕು ಅಷ್ಟೆ’ ಅಂದ. ‘ನಾನೇಳಿದ್ದೆಲ್ಲ ಅಜೆಂಡಾದಲ್ಲಿ ಸೇರಿಸಿದಿರೇನ್ರಿ...’ ಕೇಳಿದ ಗೌಡರಿಗೆ ‘ಒಂದಷ್ಟು ಕಾಮಗಾರಿ ಬಿಲ್ಲುಗಳು ಪಾಸು ಮಾಡದು. ಶೌಚಾಲಯ ನಿರ್ಮಾಣಕ್ಕೆ ಮಂಜೂರಾತಿ ನೀಡದು. ಅಂಗೆ ಡಿಸಿಯಿಂದ ಬಂದಿರೊ ಪತ್ರದ ಬಗ್ಗೆ ಚರ್ಚಿಸಿ, ಅದರಂತೆ ತೀರ್ಮಾನ. ಆಮೇಲೆ ಇತರೆ ವಿಷಯಗಳು ಬಂದ್ರೆ ಚರ್ಚೆ: ತೀರ್ಮಾನ’ ಇವಿಷ್ಟೆ.
‘ಶಾಸಕರು ಫೋನ್ ಮಾಡಿ ತಡೆಹಿಡಿದಿರೊ ಬಿಲ್ ಪಾಸ್ ಮಾಡುವಂತೆ ಫುಲ್ ಗರಂ ಆಗಿದ್ರು’ ಅಂತ ವಸಕಾಡಿ ಜೇಬಿನಿಂದ ತೆಗೆದು ಕೊಟ್ಟ ಹಣದ ಕಟ್ಟನ್ನು ದಿಂಬಿನಡಿ ಇಡುತ್ತ; ‘ಲೇ ಇವುಳೆ...’ ಕೂಗಿದ ಕರೆಗೆ ಎಂಜಲು ಮುಸುರೆ ತಿಕ್ಕುತ್ತಿದ್ದ ಮಡದಿ ಮಾರಕ್ಕ; ತೇವದ ಮುಂಗೈ ಸೆರಗಿನಿಂದ ಸೀಟುತ್ತ ಬಂದವಳು; ಟಿಪ್ಪಣಿ ಹಾಳೆ ಕೆಳಗೆ ತೋರು ಬೆರಳು ಮಾಡಿ ಗುರುತಿಸಿದ ಜಾಗದಲ್ಲಿ ಮಾರಕ ಎಂದು ಸಹಿ ಮಾಡಿದಳು. ಕಣ್ಣಾಯಿಸಿದ ಕಾರ್ಯದರ್ಶಿ ಕ ಕೆ ಕಾವತ್ತು ಹಾಕಿ ಅಧ್ಯಕ್ಷರೆ ಎಂದು ಮಾರ್ಗದರ್ಶನ ನೀಡಿದ. ‘ಕ ಕೆಳಗೆ ಸಿಂಬೆ ಸುತ್ತೋದು ಕಲಿ’ ಅಂತ ಗೌಡ ಸಣ್ಣಗೆ ಗದರಿದ ಮೇಲೆ, ಮುಂಗೈ ಬಳೆ ಲೊಳಕ್ಕನೆ ಸರಿಸಿ ಹುಳ್ಳಗೆ ನಗಾಡಿ ಸಿಂಬೆ ಸುತ್ತಿದಳು. ‘ಸರಿ ಗೌಡ್ರೆ ಬತ್ತೀನಿ’ ಎಂದು ಕಡತ ಮಡಚಿ ಚೀಲದೊಳಗೆ ಅಡಗಿಸಿ ಲಗುಬಗೆಯಿಂದ ಹೊರನಡೆದ ಕಾರ್ಯದರ್ಶಿ.
ಸಭೆ ಆರಂಭಿಸಲು ಕೋರಂಗಾಗಿ ಕಾಯುತ್ತಿದ್ದ ಗ್ರಾಮ ಪಂಚಾಯಿತಿ ಸದಸ್ಯರು, ಮಳೆ ಬೆಳೆ ಅದು ಇದು ಅಂತ ಪರಸ್ಪರ ಮಾತಿನ ಮಧ್ಯೆ ಹಾಜರಾದ ಅಧ್ಯಕ್ಷರನ್ನು ಬರಮಾಡಿಕೊಂಡು, ಖುರ್ಚಿಯಿಂದ ಸರಿದು ಕುಳಿತ ಪತಿ ಪಿಳ್ಳೇಗೌಡರ ಪಕ್ಕ ಮಾರಕ್ಕ ಸಭೆಗೆ ವಂದಿಸುತ್ತ, ಅಧ್ಯಕ್ಷರ ಪೀಠದಲ್ಲಿ ಕುಳಿತ ಕೂಡಲೆ ಶಿಷ್ಟಾಚಾರದಂತೆ ಕಾರ್ಯದರ್ಶಿ ಸಭೆ ಆರಂಭಿಸಲು ಅನುಮತಿ ಕೋರಿದ.
ನೀರಗಂಟಿ, ಮಂಡಕ್ಕಿ ಉಸುಲಿ ಜತೆ ಮೆಣಸಿನಕಾಯಿ ಬೋಂಡ ಸಭೆಗೆ ರವಾನಿಸುತ್ತಿದ್ದಂತೆ, ತಿಂದು ಬಾಯಿ ಒರೆಸುವ ಹೊತ್ತಿಗೆ ಸಾಂಗವಾಗಿ ಕಾಮಗಾರಿ ಬಿಲ್ಲುಗಳು ಪಾಸಾದವು. ಅಜೆಂಡಾ ಎರಡರ ವಿಷಯ ಕೈಗೆತ್ತಿಕೊಂಡ ಪಿಳ್ಳೇಗೌಡ ಗ್ರಾಮಕ್ಕೆ ತಲಾ ಹತ್ತಿಪ್ಪತ್ತು ಶೌಚಾಲಯ ನಿರ್ಮಾಣ ಮಾಡಲು ಫಲಾನುಭವಿಗಳನ್ನು ಗುರುತಿಸಿ ಸಭೆಗೆ ಮಂಡಿಸುವಂತೆ ಹಿಂದಿನ ಸಭೆಯಲ್ಲಿ ಠರಾವು ಪಾಸು ಮಾಡಿದ್ದರನ್ವಯ ಪ್ರತಿ ಸದಸ್ಯರಿಂದ ಸಂಗ್ರಹಿಸಿದ ಪಟ್ಟಿಗೆ ತಕರಾರು ಇಲ್ಲದಂತೆ ಕಾಫಿ ಕುಡಿದು ಮುಗಿಸುವ ಹೊತ್ತಿಗೆ ಸರ್ವಾನುಮತದಿಂದ ಅನುಮೋದಿಸಲಾಯಿತು.
ಉಳಿದಂತೆ, ಡಿ.ಸಿ. ಸಾಹೇಬರ ಪತ್ರವನ್ನು ಕಾರ್ಯದರ್ಶಿ ಓದಲನುವಾದ. ಗ್ರಾಮಕ್ಕೆ ಸಂತೆ ಮೈದಾನ, ಅಂಗೆ ಬಸ್‌ಸ್ಟಾಂಡಿಗೆ ಜಾಗ ಗುರುತಿಸುವುದು ಎಂದು ಪತ್ರದ ಸಾರಾಂಶ ಓದಿ ಮುಗಿಸುತ್ತಿದ್ದಂತೆ ‘ಆಗಬಹುದು ನಮ್ಮದೇನು ಅಭ್ಯಂತ್ರ ಇಲ್ಲ. ಆದ್ರೆ ಸಂತೆ ಮೈದಾನಕ್ಕೆ, ಬಸ್‌ಸ್ಟಾಂಡಿಗೆ ಜಾಗ ಎಲ್ಲಿಂದ ತರ್ತೀರಿ?’ ಎಂದು ಪ್ರಶ್ನೆ ಎತ್ತಿದ ಅಗಸರ ಈರಣ್ಣ. ಸಹಮತದಂತೆ ‘ಅದೆ ಎಲ್ಲೈತೆ’ ಎಂದು ಗೊಣಗಿದ ಕುರುಬರ ಹಂಪಣ್ಣ ಅಸಮಾಧಾನ ಹೊರಹಾಕಿದ.
‘ತುಂಬಿ ತುಳಿಕಿ ಇಕ್ಕಟ್ಟಾದ ಸಂದಿಗೊಂದೀಲಿ ಹಟ್ಟಿ ಜನ ಸಂಸಾರ ಮಾಡದು ಬ್ಯಾಡ. ಗ್ರಾಮ ಠಾಣದಲ್ಲಿ ಸೈಟು ವಿಂಗಡಿಸಿ, ಇಂದಿರಾ ಆವಾಸ್ ಯೋಜನೆಯಡಿ ಜೋಪಡಿಗೊಂದರಂತೆ ಮನೆ ಕಟ್ಟಿ, ಗುಚ್ಚ ಗ್ರಾಮ ನಿರ್ಮಾಣ ಮಾಡದು. ಅವರು ಸ್ವಚ್ಛ ಬೆಳಕು ಗಾಳಿ ಕುಡಕಂಡು ನಿರುಮ್ಮಳವಾಗಿ ಇರಲಿ. ಗಲ್ಲೆಬಾನಿ ನೀಸು ನೀರು, ಕೊಚ್ಚೆ ದುರ‍್ನಾತ ಕುಡಕಂಡು, ತುಳಕಂಡು ತಿರುಗಾಡದು ತಪ್ಪುತ್ತೆ. ಇದರಿಂದ ಯಾರಿಗೇನು ಲುಕ್ಸಾನಿಲ್ಲ. ಹಟ್ಟಿ ತೆರವು ಮಾಡನ...’ ಎಂದು ಪ್ರಸ್ತಾವದ ಜತೆಗೆ ಪರಿಹಾರ ಸೂಚಿಸುತ್ತಿದ್ದಂತೆ, ಪಿಳ್ಳೇಗೌಡರನ್ನೆ ಮೆಚ್ಚುವಂತೆ ‘ಆಗಬಹುದು, ಗ್ರಾಮದ ಅಭಿವೃದ್ಧಿ ಕಾರ್ಯ ಆದಂಗಾಗುತ್ತೆ’ ಎಂದು ಸ್ವಪಕ್ಷೀಯರು ಒಪ್ಪಿಗೆ ಸೂಚಿಸುತ್ತಿದ್ದಂತೆ ‘ಸುತಾರಾಂ ನಮ್ಮ ಜನ ಒಪ್ಪಲ್ಲ. ಪೂರ್ವಿಕರ ಕಾಲ್ದಿಂದ ನಾವಿಲ್ಲೆ ನೆಲೆ ನಿಂತಿರೋದು. ಗಲ್ಲೆಬಾನಿ ನಮ್ಮ ಜೀವಾಳ. ಅದ್ನ ಮುಕ್ಕಾಗಕೆ ನಾವು ಬಿಡಲ್ಲ’ ಎಂದು ಉಪೇಕ್ಷಿಸಿದಳು ದ್ಯಾಮವ್ವ. ದ್ಯಾಮವ್ವನ ಮಾತಿಗೆ ಇತರೆ ಪ್ರತಿಪಕ್ಷದ ಸದಸ್ಯರು ‘ಅದೆಂಗಾಗುತ್ತೆ’ ಎಂದು ಸಹಮತದಿಂದ ದನಿಗೂಡಿಸಿದರು.
ಇಂಥ ಬೆಳವಣಿಗೆ ಸಹಿಸದೆ, ಸಂಚು ರೂಪಿಸಿ, ಎಂಗಾರ ಮಾಡಿ ಹಟ್ಟಿ ತೆರವುಗೊಳಿಸಿ, ಊರ ವಲಮಾರಿನಿಂದಾಚೆ ಗದುಮ ಬೇಕೆನ್ನುವ ಹುನ್ನಾರ ಹೂಡಿದ್ದ ಊರವರು ಅನಿರೀಕ್ಷಿತ ಮರ್ಮಾಘಾತಕ್ಕೆ ಈಡಾದವರಂತೆ ದಂಗಾದರು. ಕಗ್ಗಂಟಾದ ಸಭೆ ಇತರೆ ವಿಷಯಗಳ ಮೇಲಿನ ಚರ್ಚೆಯನ್ನು ಕೈಬಿಟ್ಟು ಸಭೆಯನ್ನು ಕಮಕ್ ಕಿಮಕ್ ಅನ್ನದೆ ಬರಕಾಸ್ತುಗೊಳಿಸಲಾಯಿತು.
* * *
ಮುನ್ನೆಚ್ಚರಿಕೆ ಕ್ರಮವಾಗಿ ತರಾತುರಿಯಲ್ಲಿ ಗಲ್ಲೆಬಾನಿ ನವೀಕರಿಸಿ, ಪಕ್ಕದಲ್ಲಿ ಗುಡಿ ಕಟ್ಟಿ ಕುಲದೇವರಾದ ಮಂಟೆಸ್ವಾಮೀನ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಿ; ಹೆಗ್ಗಾಲಿನ ಗುಡದಯ್ಯನನ್ನು ಪೂಜಾರಿ ಮಾಡಿದರು. ಗುಡದಯ್ಯ ಯಾನೆ ಕುಂಟ ಗುಡದಯ್ಯ ಉರುಫ್ ಪೂಜಾರಿ ಕುಂಟ ಗುಡದಯ್ಯನಾಗಿ ಚಾಲ್ತಿಗೆ ಬಂದು ನಿತ್ಯ ಪೂಜೆ ಪುನಸ್ಕಾರ ಮಾಡಿ ಪ್ರತಿ ಶನಿವಾರ ವಾರದ ದಿನವೆಂದು ನಡೆದುಕೊಳ್ಳತೊಡಗಿದರು.
ಗುಡಿ ಉಸ್ತುವಾರಿಗೆ ಯಜಮಾನ ಪಟ್ಟವನ್ನು ಹಿರೀಕ ಮೇಗಳ ಹಟ್ಟಿ ದಂಡೋರಸ್ವಾಮಿಗೆ ಕಟ್ಟಿ; ಎಲ್ಲ ಹಬ್ಬ ಹರಿದಿನಗಳಲ್ಲೂ ಪೂಜಾ ಕೈಂಕರ‍್ಯ ಕೈಗೊಳ್ಳುತ್ತ, ಊರ ಕೈವಾಡದವರೆಲ್ಲ ಸೇರಿ ಒಂದಾಗಿ ಬಲಗೊಂಡರು.
ಇಂಥ ಬೆಳವಣಿಗೆ ಕಂಡು ಸಹಿಸದ ಊರವರು ತತ್‌ಕ್ಷಣಕ್ಕೆ ತಡವಿಕೊಳ್ಳಲು ಆಸ್ಪದವಾಗದೆ, ಹಟ್ಟಿ ತೆರವು ಕಾರ್ಯ ನನೆಗುದಿಗೆ ಬಿದ್ದು; ಬಗ್ಗು ಬಡಿಯುವ ಅಂಥದೊಂದು ಕಾಲಕ್ಕಾಗಿ ಕುಪಿತಗೊಂಡು ಕಾಯತೊಡಗಿದರು.
ಮೂರು
ಕಾಲಾಂತರದಲ್ಲಿ ಊರು ಊರಾಗಿ ಉಳಿಯದೆ, ಕೇರಿ ಕೇರಿಯಾಗಿ ಉಳಿಯದೆ ದಿಕ್ಕೆಟ್ಟು ಬೆಳೆದವು. ಊರ ಹಬ್ಬವಾದ ಮಂಟೆಸ್ವಾಮಿ ಜಾತ್ರೆ ಈ ಸಾರಿ ಬಲು ವಿಜೃಂಬಣೆಯಿಂದ ಆಚರಿಸಬೇಕೆಂಬ ಕಾಲಕ್ಕೆ ಸರಿಯಾಗಿ ಪಂಚಾಯ್ತಿ ಚುನಾವಣೆ ಘೋಷಣೆಯಾಗಿ ಊರೊಳಗೆಲ್ಲ ಸಂಚಲನವುಂಟಾಯಿತು. ವಿಸ್ತಾರವಾಗಿ ಬೆಳೆದ ಊರನ್ನು ತಮ್ಮ ತಮ್ಮ ಕೋಮಿನವರ ತೆಕ್ಕೆಗೆ ದಕ್ಕಿಸಿಕೊಳ್ಳಲು ಚುನಾವಣಾ ಕಣವನ್ನು ಸಜ್ಜುಗೊಳಿಸಲು ಜಾತ್ರೆಯಲ್ಲಿ ಪರಸ್ಪರ ಅಣಿಯಾಗತೊಡಗಿದರು.
ಪೂಜಾರಿ ಕುಂಟ ಗುಡದಯ್ಯ ಕರಿ ದಿರಿಸು ಧರಿಸಿ, ಕೈಯಲ್ಲಿ ಧೂಪದ ಹರಿವಾಣ ಹಿಡಿದು, ಬಾಯಿಗೆ ಬಟ್ಟೆ ಕಟ್ಟಿಕೊಂಡು ತಮಟೆ ಸದ್ದಿಗೆ ಪರಿವಾರದವರ ಜತೆ ಲಘುವಾಗಿ ಕುಣಿಯುತ್ತ; ದಂಡೋರ ಸ್ವಾಮಿಯ ವಾಡೆಗೆ ಪ್ರವೇಶಿಸುತ್ತಿರಲು, ತಮಟೆಯ ಕಿವಿಗಡಚಿಕ್ಕುವ ಸದ್ದು ಕ್ರಮೇಣ ಕ್ಷೀಣಿಸುತ್ತ ಸ್ತಬ್ದವಾಗುತ್ತಿದ್ದಂತೆ; ಉಲಾರದ ಗೂಡೆ ಬದಿಗಿತ್ತು ಮಂಟೆಸ್ವಾಮಿಗೆ ‘ಉಧೋ ಉಧೊ...’ ಎಂದು ವಿನಮ್ರಿಸಿ ಕುಳಿತ ಪೂಜಾರಿಯ ತಲೆ ಮೇಲೆ ಅಂಗೈ ಮಡಗಿದ ದಂಡೋರ ಸ್ವಾಮಿ ‘ಮುಂದೇನು’ ಎಂದು ಆಜ್ಞಾಪಿಸಲಾಗಿ...
ಪೂಜಾರಿ ಬಾಯಿಗೆ ಕಟ್ಟಿದ್ದ ಬಟ್ಟೆ ಸರಿಸಿ, ವರ್ಷಂಪ್ರತಿಯಂತೆ ಉಲಾರ ಉಡಿ ತುಂಬಿಸಿ ಜಾತ್ರೆ ನೆರವೇರಿಸಲು ಊರಾಗೆ ಹೂ ಚಲ್ಲುವ ಕಾರ್ಯಕ್ಕೆ ಅನುವು ಮಾಡಿಕೊಡಬೇಕೆಂದು ಕೋರಿಕೆ ಸಲ್ಲಿಸಿದ. ತಂದಿತ್ತ ಉಲಾರ ಗೂಡೆಗೆ ದಂಡೋರ ಸ್ವಾಮಿಯ ಮಡದಿ ಮಾದೇವಿ ತೇವದ ಕೈಯಲ್ಲಿ ಅರಿಷಿಣ ಕುಂಕುಮವ ಮೆತ್ತಿ, ಮಲ್ಲಿಗೆ ದಂಡೆ ಸುತ್ತಿ, ಊದುಬತ್ತಿ ಬೆಳಗಿ, ಮಡ್ಲಕ್ಕಿ ತುಂಬಿ ನಮಿಸಿದ ಬಳಿಕ ದಂಡೋರಸ್ವಾಮಿಗಳು ಅಸ್ತು ಎಂದು ನುಡಿಯಲಾಗಿ-
‘ಆರೆ ಅಲ್ಲಾರೆ
ಗ್ವಾಡ್ ಬಿದ್ರೆ ಜಲ್ಲಾರೆ
ಆ ಮನೆಯಿಂದ ಈ ಮನೆಗೆ
ಈ ಮನೆಯಿಂದ ಆ ಮನೆಗೆ’
-ಎಂದು ಹಾಡುತ್ತ ಊರುಕೇರಿ ಮನೆ ಮನೆಯಂಗಳಕ್ಕು ಹೂ ಚಲ್ಲುತ್ತ, ಉಲಾರ ಉಡಿ ತುಂಬಿದ ಗೂಡೆ ಹೊತ್ತು ಸಾಲಿಡಿದು ಸಾಲು ಸಾಲು ಮಂಕರಿಗಳಿಗೆ ತಮ್ಮ ತಮ್ಮ ಶಕ್ತ್ಯಾನುಸಾರ ದವಸ-ಧಾನ್ಯ, ಬೇಳೆ ಬೆಲ್ಲ, ಕಣ ಕಾಣಿಕೆ ತುಂಬಿದ ಉಡುಗೊರೆ ಪಡೆಯುತ್ತ, ‘ಮಾಘ ಮಾಸದ ಮೊದಲ ಸೋಮವಾರದಿಂದ ಮೂರು ದಿನ ಜಾತ್ರೆ, ಕೊಂಡೋತ್ಸವ, ದಾಸೋಹ, ಕೊನೆ ದಿನ ಬಲಿ’ ಎಂದು ತಮಟೆ ಸದ್ದಿನೊಂದಿಗೆ ಸಾರುತ್ತ ಸಾಗಿ, ಮನೆ ಮನಗಳಲ್ಲಿ ಲೀನವಾಯಿತು.
ಸೆಳೇವು ಹುಯ್ಯುತ್ತ ಹರಕೆ ಹೊತ್ತ ಊರುಕೇರಿ ಮಂದಿ ಮೀಸಲು ಉರುವಲು ಕಾಣಿಕೆ ನೀಡಿ ಸಾಗಾಕುತ್ತ, ತೋಪಿನ ಮಜ್ಜನ ಬಾವಿಗೆ ತೆರಳಿ ಶುದ್ಧೀಕರಿಸಿ, ಮಂಟೆಸ್ವಾಮಿ ಉತ್ಸವ ಮೂರ್ತಿಯನ್ನು ತಂದು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಿ, ಮೊದಲ ಪೂಜೆ ಕೈಂಕರ್ಯ ನೆರವೇರಿಸಿದ ಬಳಿಕ ಗ್ರಾಮದ ದೇವಾನುದೇವತೆಗಳಾದ ಏಳು ಮಂದಕ್ಕ, ತಾಯಿ ದುಗ್ಗವ್ವ, ಹನುಮಂತರಾಯ, ಭೂತಪ್ಪ ದೇವರುಗಳು ಆಗಮಿಸಿ ಗಲ್ಲೆಬಾನಿ ಆವರಣದಲ್ಲಿ ಅಭಿಮುಖವಾಗಿ ಪ್ರತಿಷ್ಠಾಪನೆಗೊಂಡವು. ಮೀಸಲು ಉರುವಲು ದೇವಾಲಯದ ಚಾಳದಲ್ಲಿ ಒಟ್ಟಿ ಸಾಲು ಸಾಲು ದೇವರುಗಳಿಗೆ ಪೂಜೆ ಸಲ್ಲಿಸಿ, ತೀರ್ಥ ಪ್ರೋಕ್ಷಣೆ ಮಾಡಿ, ಕಿಚ್ಚು ತಾಕಿಸಿ ಕೊಂಡವನ್ನು ದಂಡೋರಸ್ವಾಮಿ ಹಾಯ್ದ ನಂತರ ಇತರೆ ಕೈವಾಡದವರು ಭೇದವೆಣಿಸದೆ ಅನುಸರಿಸಿ ಹರಕೆ ತೀರಿಸಿದರು. ದಾಸೋಹಕ್ಕೆ ಗ್ರಾಮಸ್ಥರು ಉಡಿ ತುಂಬಿದ ದವಸ ಧಾನ್ಯದಿಂದಲೆ ಪ್ರಸಾದ ತಯಾರಿಸಿ, ಸಹಪಂಕ್ತಿಯಲ್ಲಿ ಸೇವಿಸಿ ಕೃತಾರ್ಥರಾದರು.
* * *
ಕೊನೆ, ಮೂರನೆ ದಿನ ಬಲಿ. ಕೋಳಿ ಕೂಗುವುದಕ್ಕೂ ಕಾಯದೆ ನಸುಕಿನಲ್ಲಿ ಜಳಕ ಮಾಡಿ, ಮಡಿಯುಟ್ಟು ಮುತ್ತೈದೆಯರು ಅಕ್ಕಿಹಿಟ್ಟಿನ ತಂಬಿಟ್ಟು ಮೆದ್ದು ಹಣತೆಗೆ ಎಣ್ಣೆ ದೀಪವ ಹಚ್ಚಿ ಆರತಿ ಕಳಸ ಹೊತ್ತು ಸಾಗಿದ ಹಟ್ಟಿ ಹೆಂಗಸರ ಹಿಂದೆ ಊರ ಹೆಂಗಳೆಯರು ಸಾಲುಗಟ್ಟಿ, ಪಂಜು ತಮಟೆ ವಾಲಗದವರೊಂದಿಗೆ ಸಡಗರದೊಂದಿಗೆ ಗುಡಿಗೆ ಬಂದು ಪೂಜೆ ನೆರವೇರಿಸುವ ಹೊತ್ತಿಗೆ, ತಿಂಬೋರು, ಹರಕೆ ಹೊತ್ತೂರು ಕುರಿ ಕೋಳಿಗಳನ್ನು ತಮ್ಮ ಇಚ್ಛಾನುಸಾರ ತಂಡೋಪತಂಡವಾಗಿ ಬಲಿ ಕೊಟ್ಟು ಬೆಳಗಿನ ಜಾವಕ್ಕೆ ಖಾರ ಮಸಾಲೆ ರುಬ್ಬುವ ಕಾರ್ಯ ಮುಗಿಸಿ, ಬಿಸಿಲ ಝಳ ಹೊಡೆಯುವ ಹೊತ್ತಿಗೆ ಬಾಡು ಬೇಯಿಸಿ, ಗಡದ್ದಾಗಿ ತಿಂದುಂಡು ಊರುಕೇರಿ ಸಂತೃಪ್ತಿಯಿಂದ ಬಸವಳಿಯಿತು.
ಹಟ್ಟಿಯಲ್ಲಿ ಇಳಿಸಂಜೆ ಹೊತ್ತಿಗೆಲ್ಲ ನಿಶೆಯಾಗಿ, ಪುರಲೆ ಹಾಕಿ ಹದವಾಗಿ ತಮಟೆ ಕಾಯಿಸಿ, ಅರೆಬೆತ್ತಲಾಗಿ ಮೈದುಂಬಿ ಲಯಬದ್ಧವಾಗಿ ಪಸಿಗೆ ಹಾಕುತ್ತ, ಜಿನುಗುವ ಬೆವರ ಹನಿಯ ಹಣೆಯಿಂದ ನಾಣ್ಯ ಹೆಕ್ಕುವುದು ಒಂದಾಟವಾದರೆ, ತಮಟೆ ಸದ್ದಿನ ಸೂತ್ರದ ಮೂಲಕ ಬಚ್ಚಿಟ್ಟ ನಾಣ್ಯದ ಜಾಡು ಹಿಡಿದು ಪತ್ತೆ ಹಚ್ಚಲು ಬಾಜಿ ಕಟ್ಟಿ ಮೋಜು– ಮಸ್ತಿ ಮಾಡುತ್ತಿದ್ದುದು ಮತ್ತೊಂದಾಟ. ಗುಂಪು ಗುಂಪಾಗಿ ಎಗ್ಗಿಲ್ಲದೆ ಜೂಜಾಡುವುದು, ಊರುಕೇರಿ ಗೌಜು ಗದ್ದಲದ ತಾಣವಾಗಿ ಎಲ್ಲ ಭಂಗವ ಮರೆತು ಉಂಡುಟ್ಟು ಸಡಗರದಿಂದ ಸಂಭ್ರಮಿಸಿತು.
ನಾಲ್ಕು
ಗಮ್ಮಕ್ಕೆ ಹಾರೊಡೆದು ಬಿದ್ದುಕೊಂಡ ಊರುಕೇರಿಗೆ ಮಂಪರು ಆವರಿಸಿತು. ಜೂಜು ಅಡ್ಡೆಯಿಂದ ಕೊಸರಿ ಮಬ್ಬುಗತ್ತಲಿನಿಂದ ಹೊರಬಿದ್ದ ಪೂಜಾರಿ ಕುಂಟ ಗುಡದಯ್ಯ, ತಲೆ ಮೇಲೆ ವಲ್ಲಿ ಮುಸುಕೆಳೆದು ಹನುಮಂತರಾಯನ ಗುಡಿ ಮಗ್ಗಲು ಮರೆಯಾಗಿ ಸೀದಾ ಜಯಮ್ಮನ ಮನೆ ಸಾಟಿಗೆ ನಿಂತು ಜಯಮ್ಮನ ಗಂಡ ಸಿದ್ಲಿಂಗ ಅಂಗಳದಲ್ಲಿ ಸೊಳ್ಳೆಗಳ ಕಾಟಕ್ಕೆ ತನ್ನ ಪೀಚು ದೇಹವ ಕುಗ್ಗಿಡಿದು ಗೋಣಿ ಚೀಲದೊಳಗೆ ಹುದುಗಿಸಿ, ಗೊರಕೆ ಹೊಡೆಯುತ್ತಿದ್ದವನ ಗೋಣು ಸೇರಿಸಿ, ಚೀಲದ ಬಾಯಿ ಕಟ್ಟಿ ಒಣ ಕೆಮ್ಮು ಕೆಮ್ಮಿದ. ಕಾದಿದ್ದವಳಂತೆ ಕತ್ತು ಗುಣುಕಾಕಿ, ಕೈಸನ್ನೆ ಮಾಡಿ ಪೂಜಾರಿ ಕುಂಟ ಗುಡದಯ್ಯನ ಜತೆ ಸೇರಿ ಅಗುಳಿ ಜಡಿದುಕೊಂಡಳು ಜಯಮ್ಮ.
ಮೂರು ದಿನವೂ ಎಡೆಬಿಡದೆ ಬೆಂಡು– ಬೆತ್ತಾಸು, ಖಾರ ಚುರುಮುರಿ, ಕರಿದ ಪದಾರ್ಥ ತಿಂದುದಲ್ಲದೆ ಹುಗ್ಗಿ ಉಂಡು ಅರಗುವ ಮುನ್ನವೇ ಹೊಟ್ಟೆ ಬಿರಿಯ ಬಾಡೂಟ ಜಡಿದಿದ್ದರಿಂದ ಒಡಲೊಳಗೆ ಕಡಗೋಲು ಕಟಿದು ಪಿಟಗರಿದಂತಾಗಿ; ಗುಟುರು ಹಾಕುತ್ತ ಸಣ್ಣಗೆ ತಳ ವಸರಿದಂತೆ ಮುಕ್ಕುರಿದು, ರಭಸವಾಗಿ ಭೇದಿ ಸಿಡಿಯುವುದನ್ನು ತಹಬದಿಗೆ ಒತ್ತರಿಸಿಕೊಳ್ಳುತ್ತ ಇನ್ನೇನು ಸಿಕ್ಕಸಿಕ್ಕ ರಂಧ್ರಗಳಲ್ಲಿ ಚಿಮ್ಮುವ ಪರಿ ದೇಹಬಾಧೆ ತಾಳಲಾರದೆ ಕೊಸರಾಡಿದ ಸಿದ್ಲಿಂಗನಿಗೆ ಉಸಿರುಗಟ್ಟಿದಂತಾಗಿ ಮೂಟೆ ಕಟ್ಟಿದ್ದು ಅರಿವಿಗೆ ಬಂದು ಒದ್ದಾಡುವಾಗ, ಹನುಮಂತರಾಯನ ಗುಡಿ ಅಂಗಳದಲ್ಲಿ ನಿಟ್‌ಗೆಟ್ಟು ಮಲಗಿದ್ದ ಭಜನಾ ಮಂಡಳಿ ಹುಡುಗರು ದಿಗಿಲುಬಿದ್ದು ಮಂಪರಿನಲ್ಲಿ ಏನಾಯ್ತೆಂದು ಚಕಿತರಾಗಿ ಗೋಣಿ ಚೀಲದ ಬಾಯಿ ಬಿಚ್ಚಿದರು. ‘ಇದೆಲ್ಲ ಕುಂಟುಂದೆ ತಿಟವಟ’ ಎಂದು ನಿಗುರಿ ಬಾಗಿಲು ಗುದ್ದುತ್ತ ಎಗರಾಡತೊಡಗಿದ ಸಿದ್ಲಿಂಗ. ‘ಏನೊ ಎಡವಟ್ಟಾಗಿದೆ ಕಣ್ರಲಾ...’ ಎನ್ನುತ್ತ ಮಂಡಳಿ ಹುಡುಗರು ಮನೆಗೆ ಮುತ್ತಿಗೆ ಹಾಕಿದರು.
ಒಳಗೆ ಎಣೆಬಿದ್ದು ಘಾತವಾಗಿ, ಗುಬರಾಕಿದ ಗೂಡೆ ಮೇಲೆ ಹತ್ತಿ, ನಿಲುವು ಕಂಬಕ್ಕೆ ಆತುಕೊಂಡ ಜಯಮ್ಮನ ಬಾಗಿದ ಭುಜವನ್ನೆ ಏಣಿ ಮಾಡಿ, ಬಿಚ್ಚಿದ್ದ ಸೀರೆ ಸೆರಗ ಗವಾಕ್ಷಿಗೆ ನಿಲುವು ಬಿಗಿದು ಅಡರಿ ಮಾಳಿಗೆ ಬಲ್ಟದಿಂದ ತೂರಿ ಕುಪ್ಪಳಿಸುತ್ತ ಪೇರಿ ಕಿತ್ತ. ಇತ್ತ ಕುಂಟನ ಮಂಡಳಿ ಹುಡುಗರು ಎಷ್ಟು ಬೆದಕಾಡಿದರು ಸಿಗದೆ ಪಾರಾದ ಪರಿಗೆ, ಅಟ್ಟದ ಮೇಲೆ ಜೂಗರಿಸುತ್ತಿದ್ದ ಕೋಳಿಗಳು ಪತರುಗುಟ್ಟಿ ಹೊತ್ತಿಗೆ ಮುಂಚೆ ಕೂಗಿದ ಸುದ್ದಿ ಮಬ್ಬುಗತ್ತಲಿಂದ ಎಚ್ಚೆತ್ತ ಊರುಕೇರಿ ತುಂಬೆಲ್ಲ ಗುಲ್ಲೋಗುಲ್ಲು.
* * *
ಜಾತ್ರೆಯ ಕಮಟಿಯ ಘಮಲು ಊರಲ್ಲಿ ಹಬ್ಬಿರುವಾಗಲೆ ಮಹಾ ಮಂಗಳಾರತಿ ಮಾಡಿ, ಕೂಟ ದೇವರುಗಳ ಸ್ಥಾನಪಲ್ಲಟಗೊಳಿಸಿ, ಸಕಲ ಮರ್ಯಾದೆಯಿಂದ ಸ್ವಸ್ಥಾನಕ್ಕೆ ಬೀಳ್ಕೊಡುವ ಮೊದಲು, ದೇವರುಗಳಿಗೆ ಸಿಂಗಾರ ಮಾಡಿ, ಪಲ್ಲಕ್ಕಿಗೆ ಹೆಗಲು ಕೊಟ್ಟು, ಬೇವಿನ ಸೀರೆಯುಟ್ಟ ಹೆಂಗಸರ, ಭಕ್ತರ, ಮಕ್ಕಳು ಮರಿಗಳನು ಕಣ್ಣಾಗೆ ನೋಡುವ ಹಣ್ಣು– ಕಾಯಿ ಮಾಡಿಸುವ, ದೋಣಿ ಸೇವೆಗೆ ಅಣಿಗೊಳಿಸಿ, ಗೊರವಯ್ಯಗಳ ಕುಣಿತ, ಪಂಜು ಕೊಂಬು ಕಹಳೆ ಶಂಖ ಜಾಗಟೆ ನಗಾರಿ ನಾದದಲ್ಲಿ ಮೇಳೈಸಿ, ಭಕ್ತಾದಿಗಳ ದಟ್ಟಣೆ ಹೆಚ್ಚಾದಂತೆ; ಉರುಮೆ ವಾಲಗ ತಮಟೆ ಸದ್ದಿನೊಂದಿಗೆ ನುಸುಳಿದ ಭಜನಾ ಮಂಡಳಿ ಹುಡುಗರು ಗಳಗಂಟೆ ಬಾರಿಸಿಕೊಂಡು ಮಹಾ ಮಂಗಳಾರತಿ ಎತ್ತಲು ಉದ್ಯುಕ್ತನಾದ ಪೂಜಾರಿ ಕುಂಟ ಗುಡದಯ್ಯನ ಅಟಕಾಯಿಸಿಕೊಂಡು ಏಕಾಏಕಿ ಹಿಗ್ಗಾಮುಗ್ಗ ಹಲ್ಲೆ ನಡೆಸುವಾಗ ಭಕ್ತ ಸಮೂಹ ಏನಾಗ್ತಿದೆ ಎಂಬ ಅರಿವಿಗೆ ಬರುವ ಮುನ್ನವೇ ದೇವರುಗಳನ್ನು ಅನಾಮತ್ತಾಗಿ ಬಿಟ್ಟು ಜೀವಭಯದಲ್ಲಿ ಚಲ್ಲಾಪಿಲ್ಲಿಯಾಯಿತು.
ಮಂಟೆಸ್ವಾಮಿ ಗುಡಿಯ ಗಲ್ಲೆಬಾನಿ ಚಾಳದಲ್ಲಿ ಅಡಗಿದ್ದ ಕುಂಟ ಪೂಜಾರಿಯನ್ನು ಉದ್ರಿಕ್ತರು ಹೊರಗೆಳೆದು ತರಲು ನುಗ್ಗಿದವರನ್ನು ನಿರ್ಬಂಧಿಸಿದ ಕೇರಿ ಹುಡುಗರು ತಿಕ್ಕಾಟಕ್ಕಿಳಿದು ಗುಡಿ ಪ್ರವೇಶಿಸದಂತೆ ಜೈ ಭೀಮ್... ಜೈ ಅಂಬೇಡ್ಕರ್ ಎಂದು ಕೋಲಾಹಲ ಸೃಷ್ಟಿಸುತ್ತಿದ್ದಂತೆ ಪೀಕಲಾಟಕ್ಕೆ ಸಿಲುಕಿದ ಗ್ರಾಮಸ್ಥರು ‘ಈಗ ದೇವರುಗಳು ಬೀದಿಯಲ್ಲಿ ಅನಾಥವಾಗಿ ಬಿದ್ದು; ಅಪಚಾರ ಮಾಡಿ ಭಂಗ ತರೋದು ತರವಲ್ಲ... ಮೊದಲು ದೇವರುಗಳ್ನ ಮರ್ಯಾದೆಯಿಂದ ಬೀಳ್ಕೊಟ್ಟು, ನಂತ್ರ ಅದೇನಿದ್ರು ಪಂಚಾಯ್ತಿಲಿ ನ್ಯಾಯ ತೀರ್ಮಾನ ಮಾಡಾನ. ಈಗ ಶಾಂತಿಯಿಂದ ವರ್ತಿಸಿ. ಸಹನೆ ಸಹನೆ...’ ಎಂದರೂ ಮಣಿಯದವರ ಹಿಮ್ಮೆಟ್ಟಿ ದೇವರುಗಳ್ನ ಹೈರಾಣದಿಂದ ಪಾರು ಮಾಡಿದರು.
ಐದು
ನಿಚ್ಚಳವಾಗಿ ಪಪ್ಪು ಹೊಡೆದು ಹೋಳಾದಂತೆ ಕಾಣುವ ಗುಂಪುಗಳ ನಡುವಿನ ಪಂಚಾಯ್ತಿ ಬಿಗುವಿನಿಂದ ಕೂಡಿತ್ತು. ಪೂಜಾರಿ ಕುಂಟ ಗುಡದಯ್ಯನ ಪ್ರಸಂಗವೇ ಪ್ರಧಾನವಾಗಿದ್ದರೂ ಈ ಕಂಟಕದಿಂದ ಪಾರಾಗಲು ಕುಸ್ತಿಪಟುಗಳಂತೆ ಪುಟಿಯುತ್ತಿದ್ದ ಹಟ್ಟಿಗರ ಹಣಿಯಲು ಇದು ಸಕಾಲ ಎಂದು ಈರ್ಷೆಗೊಂಡು ಊರವರು ಕುದಿಯಾಗಿ ಕುಂತಿದ್ದರು.
ಮಳ್ಳನಂತೆ ಕುಳಿತಿದ್ದ ಪೂಜಾರಿ ಕುಂಟ ಗುಡದಯ್ಯನನ್ನೇ ಹರಿದು ಮುಕ್ಕುವಂತೆ ಸಜ್ಜಾದ ಭಜನಾ ಮಂಡಳಿ ಹುಡುಗರು ‘ಊರು ಊರಾಗಿ ಉಳಿದಿಲ್ಲ. ಮಾನವಂತ ಹೆಂಗಸ್ರು ಊರಾಗೆ ನೆಟ್ಟಗೆ ಬಾಳಂಗಿಲ್ಲ. ಲಫಂಗರ ಹಾವಳಿ ಹೆಚ್ಕಂಡದೆ. ಕುಲನೆಲೆಗೆ ಬೆಲೆ ಇಲ್ಲ. ಮಾದಿಗರು ಮಲಗಾರು ಸೈತ ಸಸಾರ ಒಕ್ಕಲು ಮಕ್ಕಳ ಮನೆ ಒಕ್ಕಂಗಾಗೈತೆ’ ಎಂದು ಪೀಠಿಕೆ ಹಾಕುತ್ತಿದ್ದಂತೆ ‘ಸದ್ದು... ಎಲುಬಿಲ್ಲದ ನಾಲಿಗೆ ಹಲ್ಲೊಳಗೇ ಇದ್ರೆ ಸರಿ. ಜಾತಿ ನಿಂದನೆ ಮಾಡಿದ್ರೆ ಪುರ್ನಾಮ ನೆಟ್ಟಗಿರಲ್ಲ. ಏಕುಪೂಕು ತಿಳೀದೆ ಬಾಯಿಗೆ ಬಂದದ್ದು ಒದ್ರಾದು ಅವಲಕ್ಷಣ’ ಎಂದು ಹಟ್ಟಿ ಹುಡುಗರು ಧಮಕಿ ಹಾಕಿದರು.
ಗುಂಪಿನಲ್ಲೊಬ್ಬ- ‘ಬಪ್ಪರೆ, ನೀವೇನು ಬ್ರಾಮುಣ್ರಾ’ ಎಂದು ಕೆಣಕಿದ ಕಿಡಿಗೆ, ಚಟಾರನೆ ಸಿಡಿದಂತೆ ‘ಹೌದ್ರಿ ಬ್ರಾಮುಣ್ರಿಗಿಂತ ಅತತಾ ಕಂಡ್ರಿ ನಾವು’ ಎಂದು ಕಾರಿದವರಿಗೆ ‘ಊರುಕೇರಿ ಒಂದಾಗಿರ‍್ಲಿ. ಮೇಕೆ ಮಲೆಯಂಗೆ ನಾವೆಲ್ಲ ಒಂದೇ ತಾಯಿ ಮಕ್ಕಳಂಗಿರಬೇಕಮ್ತ, ದೇವರು ದಿಂಡ್ರು, ಜಾತ್ರೆ ಜಾಪತ್ತು ಮಾಡಿದ್ರೆ... ಎಂದೂ ನೀವು ಬದಲಾಗಲ್ಲ’ ಎಂದ ನರಸಿಂಹ ಶಾಸ್ತ್ರಿಗಳಿಗೆ... ಬಾಯಿ ಬಡಿದಂತೆ, ‘ಎಷ್ಟಾದ್ರೂ ಅವುರು ಸರ್ಕಾರಿ ಬ್ರಾಮುಣ್ರು ಅಲ್ವೇನ್ರಿ?’ ಎಂದು ಕೊಂಕು ನುಡಿದವರಿಗೆ ಕೆಂಡಾಮಂಡಲವಾದ ಕೇರಿ ಹುಡುಗರು ‘ಸರ್ಕಾರಗೋಳು ಕಿಸ್ತಿರೋದು ಅಷ್ಟ್ರಾಗೆ ಐತೆ. ಸರ್ಕಾರದಿಂದ ನಮಗೆಲ್ಲ ತೊಕ್ಕೇ ಸಿಕ್ಕಿರೋದು. ಮೀಸಲಾತಿ, ಒಳ ಮೀಸಲಾತಿ ಅಂತ ಪೂಸಿ ಬಿಡ್ತ ಕಾಲು ನೆಕ್ಕೊ ಚೂರುಪಾರು ಚಾಕರಿ ನೀಡಿ, ಅಲ್ಲಿಗಲ್ಲಿಗೆ ಮಟ್ಟಾ ಹಾಕ್ತವೆ. ರಾಜ ಮಹಾರಾಜರು ಕಾಲ್ದಲ್ಲೆ ಒಡೆಯರು ಮೀಸಲಾತಿ ಹರಿಕಾರರಾಗಿದ್ರು. ತುಳಿತಕ್ಕೆ ಒಳಗಾದವ್ರ ಬೆನ್ನು ಕಾದ್ರು ಎಂದು ಇತಿಹಾಸ ಕೆದಕುತ್ತ ನೀವು ಮಾಡ್ತಿರೋದೇನು? ಪಾಪದವ್ರು ಅಂತ ನಮ್ನ ಮೇಲೇಳದಂಗೆ ನೆತ್ತಿ ಮೇಲೆ ಮೊಳೆ ಜಡಿತಾನೆ ಬಂದ್ರಿ. ಇದು ನ್ಯಾಯವಾ?’
ಹೀಗೆ ತಲೆಗೊಂದು ಮಾತಾಡಿ ತಿಕ್ಕಾಟಕ್ಕಿಳಿದು ಗೋಜಲಾದ ಪಂಚಾಯ್ತಿ ದಿಕ್ಕು ತಪ್ಪಿ ‘ಸಂಬಂಧ ಸೂತ್ರ ಇಲ್ಲುದ್ನ ಇಲ್ಲಿ ಎಳೆದು ತಂದು ಅದ್ಕು ಇದ್ಕು ತಾಕಹಾಕದು ಎಷ್ಟು ಸರಿ. ಲೇ ಸಿದ್ಲಿಂಗ ಮೊದ್ಲು ಅದೇನು ನಿಂದು ದೂರು ದುಮ್ಮಾನ ಸಭೆ ಮುಂದೆ ಇಡಯ್ಯ’ ಎಂದು ತಾಕೀತು ಮಾಡಲಾಗಿ... ನುಲಿಯುತ್ತ ‘ಸೆಖೆ ಅಮ್ತ್ತ, ಮನೆ ಅಂಗಳದಾಗೆ ಮಕ್ಕಂಡಿದ್ದೆ. ಅದ್ಯಾವ ಮಂಗ ಮಾಯದಲ್ಲೊ ಬಂದ ಈ ಕುಂಟ ನನ್ನ ಗೋಣಿ ಚೀಲ್ದಾಗೆ ಕಟ್ಟಿ ನಮ್ಮೆಂಡ್ರುನ...’ ‘ಸಾಕು ಸಾಕು ಕಣಲೇ... ನಿನ್ ತ್ಯಾಮಾನ ನೆಟ್ಟಗಿಲ್ದೆ... ಇದ್ಕೇನ್ಲ ನಿನ್ ಜವಾಬು’ ಕೇಳಿದ ಗುಂಡೇಗೌಡರ ಮಾತಿಗೆ ಕಣುಮ ‘ಇದ್ಕೇ ಸಾಕ್ಷಿ ಪುರಾವೆ ಎಲ್ಲೈತೆ ತೋರುಸ್ಲಿ’ ಎಂದು ಪೂಜಾರಿ ಪರ ವಕಾಲತ್ತು ವಹಿಸಿದವನಿಗೆ ಸೆಟೆದು ‘ತಕಳಿ ಸಾಕ್ಷಿ’ ಎಂದು ಕುಂತಲ್ಲೆ ಕೊಸರಾಡಿ ಕಂಕುಳಲ್ಲಿ ಗಂಟಿಕ್ಕಿದ್ದ ಪೂಜಾರಿ ಮೆಟ್ಟು, ಬಟ್ಟೆ– ಬರೆ ಸಭೆ ಮುಂದೆ ವಗೆದ ಸಿದ್ಲಿಂಗ.
‘ಇದೆಲ್ಲ ಏನು ಬ್ಯಾಡ. ನೀನು ಕಣ್ಣಾರೆ ಕಂಡಿದ್ನ ಹೇಳಯ್ಯ ಸಾಕು’ ಎಂದು ಸಾರಾಸಗಟಾಗಿ ತಳ್ಳಿಹಾಕಿದ ದಂಡೋರ ಸ್ವಾಮಿ ಮಾತಿಗೆ ತಾನೇ ಮುಂದಾದ ಪೂಜಾರಿ ‘ಸಿದ್ಲಿಂಗಣ್ಣಂಗೇ ಎಲ್ಲ ಗೊತ್ತೈತೆ. ಅವಕ್ಕಯ್ಯನ ಬೆನ್ನು ಎದೆ ಭುಜದ ಮೇಲೆ ದದ್ದಾಗಿ ಅವು ಕುಲ್ಲುಪ್ರಿ ಥರ ಒಂದು ನಮೂನೆ ಗಜ್ಜುಗದ ಗಾತ್ರ ಬಾತಿದ್ವು. ಜಾತ್ರೇಲಿ ಕರಿದ ಪದಾರ್ಥ ಹೆತೇಚ್ಚ ತಿಂದು ತುರಿಕೆ ತಡೀಕಾಗ್ದೆ; ಮದ್ದು ಅರೆಯೋಕೆ...’ ಮುಂದೆ ಪ್ರವರ ಬಿಚ್ಚದಂತೆ ತುಂಡರಿಸಿದ ಗೊಗ್ಗರು ಶರೀರ ವಾಣಿಯೊಂದು ‘ತೊಡೆ ತುರಿಕೆ ಸೊಪ್ಪು ತಿಕ್ಕಾಕೋಗಿತ್ತು ಗೊಗ್ಗಯ್ಯ’ ಎಂದು ಉಲಿದ ಕೂಡಲೆ ತಲೆ ಮಾಸಿದವರು ನಗಾಡುತ್ತಿದ್ದವರತ್ತ ಗುರಾಯಿಸಿ ‘ತಮಾಸೆ ಸಾಕು, ಅಮಾಸೆ ಆದತು. ಎಲ್ಲಾರ ಉಂಟೇನ್ರಿ. ಅಲಲಾ ಬಲ್‌ನನ್ ಮಗ ಕಂಡ್ರಿ ಇವುನು. ಅದೆಂಥ ಮಾಯಕದ ಕಥೆ ಕಟ್ತನಲ್ರಯ್ಯ’ ಎಂದು ಬಾಜು ಕುಂತವರು ತಪರಾಕಿ ಹಾಕಿದರು.
ದೈನೇಸಿತನದಿಂದ ಸೆರಗ ಬಾಯಿಗೆ ತುರುಕಿ, ಉಮ್ಮಳಿಸುವ ಜಯಮ್ಮನ ಮುಸುಕು ಜಾರಿದ ಸೆರಗು ಹೊದ್ದಿಸಿ, ತವಕಪಟ್ಟ ಜಯಮ್ಮನ ಅಕ್ಕ ಲೊಟ್ಟೆ ಹನುಮಕ್ಕ ಸಿಡುಕುತ್ತ ‘ಅಪದ್ಧ ನುಡಿತನೆ ಮಾನಗೇಡಿ, ನಿನ್ ಬಾಯಾಕ್ ನನ್... ಸೀರೆ ಅಡರಿಸಿ; ಬೂಸಿ ಬಿತ್ತನೆ ಬೋಳಿಕೆ’ ಎಂದು ಜಾಡಿಸಲು ಸಿಡಿದೆದ್ದಳು.
‘ರೀ ಸ್ವಾಮಿ ಪಿಳ್ಳೇಗೌಡ್ರೆ ಏನ್ರಿ ಈ ದೌರ್ಜನ್ಯ, ಇಂಥ ದರ್ಪಕ್ಕೆಲ್ಲ ನಾವು ಮಣಿಯಲ್ಲ ಕಂಡ್ರಿ. ಸುಖ ಸುಮ್ನೆ ಕೆಣಕಬ್ಯಾಡ್ರಿ. ಈ ನೆಲ್ದಾಗಿನ್ನೂ ಪೊಲೀಸು, ಕೋರ್ಟು, ಕಾನೂನು, ಕೇಸು ಅಂತ ಐತೆ. ಸರಿಯಾಗಿ ನಿಂತು ಗುಮ್ಮಿದ್ರೆ’ ಎಂದು ಜಟಾಪಟಿ ನಡೆಸಿದ ಕೇರಿ ಹುಡುಗರು ‘ಎರಡು ಕೈ ಸೇರಿದ್ರೇನೆ ಚಪ್ಪಾಳೆ ತಿಳ್ಕಳಿ’ ಎಂದು ಚಕ್ಕ ತಟ್ಟುತ್ತ ಪಂಚಾಯ್ತಿ ಧಿಕ್ಕರಿಸಿ ಹೊರನಡೆದರು.
ಯಾವ ನಿಲುವೂ ತಾಳದೆ, ಏನೇ ಚಕಮಕಿ ನಡೆದರೂ ನನೆಗುದಿಗೆ ಬಿದ್ದ ಪಂಚಾಯ್ತಿ ಕೊನೆಗೂ ನುರಿಯದೆ, ಜಾಣ ಸೆಡವಿನಿಂದ ಪಂಚೆ ಅಡರುಗಟ್ಟಿ ಅರುಗು ಬೀಳುತ್ತಿದ್ದವರನ್ನ ನಿಲೆ ಹಾಕಿ ‘ಇದ್ಯಾವ ಸೀಮೆ ಪಂಚಾಯ್ತಿ, ಬರಿ ಲೊಡಬಗ್ಗು’ ಎಂದು ತಗಲಿಕೊಂಡ ಹುಡುಗರನ್ನ ಸಂಬಾಳಿಸಲಾಗದೆ ಇರುಸು ಮುರುಸಾಗಿ ‘ಈಗಿನ ಪರಿಸ್ಥಿತಿ ನೆಟ್ಟಗಿಲ್ಲ. ಇಂಥ ಕೇಡುಗಾಲ್ದಾಗೆ ಮುಟ್ಟಬಾರ್ದರ‍್ನ ಮುಟ್ಟಿ ಅಸಿಸಿ ಅನಿಸ್ಕಂಡು ನಲುಗಬಾರ್ದು ಕಣ್ರಲಾ... ಮುಟ್ದಂಗೆ ಮುಗಿಸಬೇಕು ವಸಿ ತಾಳ್ಮೆ ತಂದ್ಕಳ್ರಿ. ಎಲೆಕ್ಷನ್ ಮುಗೀಲಿ...’ ಎಂದು ತ್ಯಾಪೆ ಹಚ್ಚುತ್ತ ಕವಲೊಡೆದು ಕದಲಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.