ರಾಮದಾಸು ಒಬ್ಬ ಒಳ್ಳೆಯ ಕೆಲಸಗಾರ. ಊರ ಗೌಡರ ಜಮೀನಿನಲ್ಲಿ ನಿಷ್ಠೆಯಿಂದ ವ್ಯವಸಾಯದ ಕೆಲಸಗಳನ್ನು ಹಲವಾರು ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದ. ಗೌಡರೂ ನಂಬಿಗಸ್ಥನಾದ ರಾಮದಾಸುವನ್ನು ವಿಶ್ವಾಸದಿಂದ ಕಾಣುತ್ತಿದ್ದರು. ಅವನ ದುಡಿಮೆ ಹೊಟ್ಟೆಗೆ ಬಟ್ಟೆಗೆ ಸಾಕು ಎನ್ನುವಂತಿತ್ತು. ಅವನಿಗೆ ಉಳಿತಾಯ ಮಾಡಲು ಆಗುತ್ತಿರಲಿಲ್ಲ. ಆದರೂ ಅವನಿಗೆ ಒಂದು ಮಹತ್ತರವಾದ ಆಸೆಯಿತ್ತು. ‘ನನಗೂ ಒಂದು ಕಡೆ ಸ್ವಲ್ಪ ಸ್ವಂತ ಜಮೀನಿದ್ದರೆ ಏನೆಲ್ಲಾ ಬೆಳೆಯಬಹುದಿತ್ತು. ಕಷ್ಟಪಟ್ಟು ದುಡಿಯುವುದಂತೂ ಗೊತ್ತಿದೆ. ಜಮೀನು ಇದ್ದರೆ ಒಳ್ಳೆಯ ರೈತ ಅನ್ನಿಸಿಕೊಳ್ಳುತ್ತಿದ್ದೆ’ ಎಂದು ಮನಸ್ಸಿನಲ್ಲೇ ಕನಸು ಕಟ್ಟುತ್ತಿದ್ದ. ಆದರೆ ಜಮೀನು ಕೊಳ್ಳುವಷ್ಟು ಹಣ ಅವನಲ್ಲಿ ಎಲ್ಲಿ ಬರಬೇಕು? ಅವನಾಸೆ ಈಡೇರಿರಲಿಲ್ಲ.
ರಾಮದಾಸು ದೈವಭಕ್ತನಾಗಿದ್ದ. ಪ್ರತಿದಿನ ಮುಂಜಾನೆ ತನ್ನ ಕೆಲಸಕ್ಕೆ ಹೋಗುವ ಮೊದಲು ಸೂರ್ಯಭಗವಾನನಿಗೆ ನಮಸ್ಕರಿಸಿ ಹೋಗುತ್ತಿದ್ದ. ರಾತ್ರಿ ನಿದ್ದೆ ಮಾಡುವ ಮೊದಲು ಕ್ಷಣಕಾಲ ತನ್ನ ನಂಬುಗೆಯ ದೇವರಿಗೆ ಪ್ರಾರ್ಥನೆ ಸಲ್ಲಿಸಿಯೇ ಮಲಗುತ್ತಿದ್ದ. ಎಂದಾದರೊಂದು ದಿನ ಖಂಡಿತ ತನ್ನ ಮನದಾಸೆಯನ್ನು ದೇವರು ಈಡೇರಿಸುತ್ತಾನೆಂದು ಬಲವಾಗಿ ನಂಬಿದ್ದ.
ಒಂದು ರಾತ್ರಿ ರಾಮದಾಸುವಿನ ಕನಸಿನಲ್ಲಿ ದೇವರು ಪ್ರತ್ಯಕ್ಷನಾದ. ಅವನಿಗೆ ಹಿಡಿಸಲಾರದಷ್ಟು ಸಂತೋಷವಾಯಿತು. ಭಗವಂತನಿಗೆ ನಮಸ್ಕರಿಸಿ ವಿನಯದಿಂದ ಅವನೆದುರಿಗೆ ನಿಂತುಕೊಂಡ. ದೇವರ ಮಾತುಗಳು ಅವನಿಗೆ ಕೇಳಿಸಿದವು. ‘ರಾಮದಾಸು, ನೀನು ತುಂಬಾ ಒಳ್ಳೆಯ ಮನುಷ್ಯ. ಆದ್ದರಿಂದ ನಿನಗೇನಾದರೂ ಸಹಾಯ ಮಾಡೋಣವೆಂದು ಬಂದೆ. ಏನಾದರೂ ಕೋರಿಕೆಯಿದ್ರೆ ಸಂಕೋಚವಿಲ್ಲದೆ ಕೇಳು’.
‘ಸ್ವಾಮಿ, ನಿಮಗೆ ತಿಳಿಯದ್ದೇನಿದೆ. ನಾನಿಷ್ಟು ವರ್ಷ ಬೇರೆಯವರ ಹೊಲದಲ್ಲಿಯೇ ಕೆಲಸ ಮಾಡಿದ್ದೇನೆ. ನನ್ನದೆಂಬ ಒಂದು ತುಂಡು ಹೊಲ ಕೂಡ ಇಲ್ಲ. ನೀವು ಕರುಣೆ ತೋರಿ ಅದೊಂದನ್ನು ನನಗೆ ಕೊಟ್ಟರೆ ನನ್ನ ಜೀವನದ ಆಸೆ ಪೂರ್ತಿಯಾದೀತು. ದಯವಿಟ್ಟು ಅದನ್ನು ದಯಪಾಲಿಸಿ’ ಎಂದು ಕೈ ಮುಗಿದು ಬೇಡಿಕೊಂಡ.
‘ಆಗಲಿ, ನಾಳೆ ಮುಂಜಾನೆ ಸೂರ್ಯೋದಯಕ್ಕೆ ನೀನು ಗುಡ್ಡದ ಬಳಿಯ ಆಂಜನೇಯನ ಗುಡಿಯ ಹತ್ತಿರ ಬಂದು ಕಾಯ್ದಿರು. ನಾನೂ ಬರುತ್ತೇನೆ. ನಾನು ಹೇಳಿದಂತೆ ನಡೆದುಕೊಂಡರೆ ನೀನು ಬಯಸಿದಷ್ಟು ಭೂಮಿ ನಿನ್ನದಾಗುವುದು’ ಎಂದು ಹೇಳಿ ದೇವರು ಮಾಯವಾದನು.
ರಾಮದಾಸುವಿಗೆ ಎಚ್ಚರವಾಯಿತು. ಕನಸಲ್ಲಿ ಕಂಡದ್ದು ನಿಜವಾದೀತೇ? ಎಂಬ ಸಂಶಯ ಮೂಡಿತು. ಆದರೂ ಮಾರನೆಯ ದಿನ ಭಗವಂತನು ಹೇಳಿದಂತೆ ಆಂಜನೇಯನ ಗುಡಿಯ ಮುಂದೆ ಸೂರ್ಯೋದಯಕ್ಕೆ ಮುನ್ನವೇ ಹೋಗಿ ಕಾಯ್ದು ನಿಂತ. ಒಬ್ಬ ಗಡ್ಡದಾರಿ ಮುದುಕು ಕೋಲೂರಿಕೊಂಡು ಅವನತ್ತ ಬಂದನು. ಹತ್ತಿರ ಬಂದು ರಾಮದಾಸನನ್ನು ‘ನೆನ್ನೆ ರಾತ್ರಿ ಹೇಳಿದ ಮಾತು ನೆನಪಿದೆಯೇ? ನಾನು ನಿರ್ದೇಶನ ಕೊಟ್ಟಂತೆ ನೀನು ಈ ಮಾವಿನ ಮರದಿಂದ ಪ್ರಾರಂಭಿಸಿ ಸಂಜೆ ಸೂರ್ಯಾಸ್ತವಾಗುವವರೆಗೆ ಎಷ್ಟು ಪ್ರದೇಶವನ್ನು ಕ್ರಮಿಸಿ ಇದೇ ಮಾವಿನ ಮರದ ಬಳಿ ಹಿಂತಿರುಗಬೇಕು. ಈ ಸುತ್ತು ಇಲ್ಲಿಂದ ಪ್ರಾರಂಭವಾಗಿ ಇಲ್ಲಿಯೇ ಕೊನೆಗೊಳ್ಳುತ್ತದೆ. ಮಧ್ಯೆ ಎಲ್ಲೂ ನಿಲ್ಲಬಾರದು. ಸೂರ್ಯ ಮುಳುಗುವ ಮೊದಲು ಇದೇ ಜಾಗಕ್ಕೆ ಬಂದು ಸೇರಬೇಕು. ಅಷ್ಟು ಸಮಯದ ನಿನ್ನ ನಡಿಗೆಯಲ್ಲಿ ಎಷ್ಟು ಪ್ರದೇಶವನ್ನು ಸುತ್ತು ಹಾಕಿ ಬರುತ್ತೀಯೋ ಅಷ್ಟೂ ಭೂಮಿಯನ್ನು ನಿನಗೆ ಕೊಡುತ್ತೇನೆ’ ಎಂದು ವಾಗ್ದಾನ ಮಾಡಿದನು.
ರಾಮದಾಸನು ಈಗ ಯೋಚಿಸತೊಡಗಿದ. ‘ಹೇಗಿದ್ದರೂ ದೇವರು ಸಾಯಂಕಾಲದವರೆಗೂ ಸಮಯ ಕೊಟ್ಟಿದ್ದಾನೆ. ಚಿಕ್ಕ ಅಳತೆಯ ಭೂಮಿ ಏಕೆ ಕೇಳಬೇಕು? ಸಾಧ್ಯವಾದಷ್ಟೂ ವಿಶಾಲವಾದ ಪ್ರದೇಶವನ್ನೇ ಸುತ್ತು ಹಾಕಿ ಬಂದರೆ ನಾನೇ ಗೌಡರಿಗಿಂತ ದೊಡ್ಡ ಜಮೀನುದಾರನಾಗಬಹುದು. ಆಗ ನನ್ನ ಬಳಿಯೇ ಹಲವಾರು ಜನ ಕೆಲಸ ಮಾಡುವವರು ಕೂಲಿ ಮಾಡಲು ಬರುತ್ತಾರೆ. ನನ್ನನ್ನೇ ‘ಧಣಿ’ ಎಂದು ಕರೆದು ಗೌರವಿಸುತ್ತಾರೆ. ಎಂದು ಒಳಗೊಳಗೇ ಹಣವಂತನಾದಂತೆ ಭವ್ಯ ಕಲ್ಪನೆ ಮಾಡಿಕೊಂಡನು. ‘ಆಯಿತು ಭಗವಂತ, ನೀನು ಹೇಳಿದಂತೆ ಈಗಲೇ ಹೊರಟೆ’. ಎಂದು ಮಾವಿನ ಮರವನ್ನು ಗುರುತಾಗಿಟ್ಟುಕೊಂಡು ಪೂರ್ವದಿಕ್ಕಿನತ್ತ ಓಡಲು ಪ್ರಾರಂಭಿಸಿದ. ಅವನ ಉದ್ದೇಶ, ನಡೆದರೆ ಹೆಚ್ಚು ಜಾಗವನ್ನು ಸುತ್ತು ಹಾಕಲು ಸಾಧ್ಯವಿಲ್ಲ ಎಂದಿತ್ತು.
ಮಧ್ಯಾಹ್ನದ ಹೊತ್ತಿನತನಕ ಪೂರ್ವಕ್ಕೆ ಓಡಿ ನಂತರ ತಿರುಗಿ ಉತ್ತರ ದಿಕ್ಕಿನಲ್ಲಿ ಸಾಕಷ್ಟು ದೂರ ಸಾಗಿದನು. ಆಯಾಸವಾಗಿತ್ತು. ದಣಿವಾರಿಸಿಕೊಳ್ಳಲು ಮರವೊಂದರ ಕೆಳಗೆ ಸ್ವಲ್ಪಕಾಲ ವಿಶ್ರಾಂತಿ ಪಡೆದನು. ಆದಿನ ಬೆಳಗಿನ ಹೊತ್ತು ಹೊರಡುವ ಉತ್ಸಾಹದಲ್ಲಿ ಏನೂ ತಿಂದಿರಲಿಲ್ಲ. ಹಾಗಾಗಿ ಹೊಟ್ಟೆ ಹಸಿದಿತ್ತು. ನೀರಡಿಕೆಯೂ ಆಗಿತ್ತು. ಆದರೆ ಹಿಂದಿರುಗಿ ಮಾವಿನ ಮರ ಮುಟ್ಟಬೇಕಾದರೆ ಬಹಳ ದೂರ ಸಾಗಬೇಕಾಗಿತ್ತು. ಹಾಗಾಗಿ ಹಸಿವು ನೀರಡಿಕೆಗಳನ್ನು ತಡೆದುಕೊಂಡು ಪಶ್ಚಿಮದಿಕ್ಕಿಗೆ ಹೆಜ್ಜೆ ಹಾಕತೊಡಗಿದನು. ಸಾಯಂಕಾಲದ ಮುನ್ಸೂಚನೆಯಾದಂತೆ ಭಾಸವಾಗಿ ದಕ್ಷಿಣಕ್ಕೆ ತಿರುಗಿ ಮಾವಿನ ಮರದ ಕಡೆಗೆ ರಭಸವಾಗಿ ನಡೆಯತೊಡಗಿದ. ಕಾಲು ನೋಯುತ್ತಿತ್ತು. ಹಸಿವು ನೀರಡಿಕೆಗಳಿಂದ ಅತಿಯಾದ ಆಯಾಸ ತಲೆದೋರಿತು. ಆದರೆ ತನ್ನ ಗುರಿ ತಲುಪಬೇಕಾದ ಆತುರದಲ್ಲಿ ರಾಮದಾಸು ಇವನ್ನು ನಿರ್ಲಕ್ಷಿಸಿ ವೇಗವಾಗಿ ನಡೆದ. ಓಡಿದ, ಸ್ವಲ್ಪ ಸುಧಾರಿಸಿಕೊಳ್ಳುತ್ತಲೇ ಹೆಜ್ಜೆ ಹಾಕಿದ. ಆದರೆ ಮಾವಿನ ಮರ ಅವನಿಗೆ ಕಾಣಿಸಲಿಲ್ಲ. ಆತಂಕದಿಂದ ಇದ್ದಬದ್ದ ಶಕ್ತಿಯನ್ನೆಲ್ಲಾ ಒಟ್ಟುಗೂಡಿಸಿ ಓಡಿದ. ಗುಡ್ಡವನ್ನು ಏರಬೇಕಾದ ಅನಿವಾರ್ಯತೆ, ಇದರಿಂದ ನಡಿಗೆ ಕಷ್ಟವಾಗಿತ್ತು. ಆದರೂ ‘ಕಷ್ಟ ಇವತ್ತೊಂದು ದಿನ ತಾನೆ, ನಾಳೆ ನಾನು ಜಮೀನುದಾರ’ ಎಂದು ಮನಸ್ಸಿನಲ್ಲಿ ಹುಮ್ಮಸ್ಸನ್ನು ಪ್ರಚೋದಿಸಿ ಮುನ್ನುಗ್ಗಿದ. ಸಾಯಂಕಾಲದ ಸೂರ್ಯ ಪಶ್ಚಿಮದತ್ತ ವಾಲುತ್ತಿದ್ದ. ಇದರಿಂದ ಅವನಿಗೆ ಹೆದರಿಕೆ ಪ್ರಾರಂಭವಾಯಿತು. ‘ನಾನೇನಾದರೂ ಮಾವಿನಮರ ತಲುಪದಿದ್ದರೆ ಬೆಳಗಿನಿಂದ ಮಾಡಿದ್ದೆಲ್ಲವೂ ವ್ಯರ್ಥವಾಗುವುದು. ಏನಾದರೂ ಮಾಡಿ ನನ್ನ ಆಸೆಯನ್ನು ಈಡೇರಿಸಿಕೊಳ್ಳಲೇಬೇಕು’ ಎಂದುಕೊಂಡು ಸೋತ ಕಾಲುಗಳಿಂದ ದಾಪುಗಾಲು ಹಾಕುತ್ತಾ ಗುಡ್ಡವನ್ನು ಏರತೊಡಗಿದ.
ಸೂರ್ಯನ ಬೆಳಕು ಮಂದವಾಗತೊಡಗಿತು. ಹೊತ್ತು ಮುಳುಗುವ ಸಮಯ ಹತ್ತಿರ ಬರುತ್ತಿತ್ತು. ಏದುಸಿರು ಬಿಡುತ್ತಾ ರಾಮದಾಸು ತಲೆಎತ್ತಿ ನೋಡಿದ. ಮಾವಿನ ಮರ ಸಮೀಪದಲ್ಲೇ ಕಾಣಿಸುತ್ತಿತ್ತು. ಆಸೆ ಮರುಕಳಿಸಿತು. ಮುಂದೆ ನಡೆದ ದೇಹ ಪೂರ್ಣ ಸೋತು ಹೋಗಿತ್ತು. ಹಲವಾರು ಹೆಜ್ಜೆ ನಡೆಯುವಷ್ಟರಲ್ಲಿ ಕಣ್ಣು ಕತ್ತಲಿಟ್ಟಿತು. ತಲೆ ಸುತ್ತಿದಂತೆ ಅನುಭವವಾಗಿ ಮುಂದುವರೆಯುವುದು ಅಸಾಧ್ಯವಾಗಿತ್ತು. ಕುಸಿದು ನೆಲದ ಮೇಲೆ ಕುಳಿತನು. ಒಂದು ಹೆಜ್ಜೆ ಇಡುವುದೂ ಅವನಿಂದ ಅಸಾಧ್ಯವಾಯಿತು. ಇನ್ನು ಕೆಲವೇ ಮಾರುಗಳ ದೂರದಲ್ಲಿ ಮಾವಿನ ಮರ. ಅದರೆ ಚೈತನ್ಯ ಉಡುಗಿತ್ತು. ನೆಲದ ಮೇಲೇ ಒರಗಿದ ಅಷ್ಟರಲ್ಲಿ ಸೂರ್ಯಾಸ್ತವೂ ಆಯಿತು. ನಿರಾಸೆ ರಾಮದಾಸುವಿನ ಹೃದಯತುಂಬಿ ಸಂಕಟವಾಯಿತು. ಜೋರಾಗಿ ಅಳತೊಡಗಿದನು. ಬೆಳಗ್ಗೆ ಕಂಡ ಮುದುಕ ಅವನ ಬಳಿ ಬಂದ. ‘ಅಯ್ಯಾ, ರಾಮದಾಸು ನಾನು ನನ್ನ ವಾಗ್ದಾನದಂತೆ ನಿನಗೆ ಭೂಮಿ ನೀಡಲು ಸಿದ್ಧನಿದ್ದೆ. ಆದರೆ ನೀನು ಮೊದಲು ಒಂದು ತುಂಡು ಭೂಮಿ ಸಿಕ್ಕರೆ ಸಾಕು ಎಂದವನು ಅತಿಯಾದ ದುರಾಸೆಯಿಂದ ಹಿಗೆ ಅಸಹಾಯಕ ಪರಿಸ್ಥಿತಿಗೆ ತಲುಪಿದೆ. ಪಂಥದಂತೆ ನೀನು ಹೊರಟ ಜಾಗಕ್ಕೆ ಬಂದು ಸೇರಲಿಲ್ಲ. ಆದ್ದರಿಂದ ನಿನಗೆ ಏನೂ ಸಿಗದು. ಇದಕ್ಕೆ ನೀನೇ ಕಾರಣ. ಅತಿಯಾಸೆಯಿಂದ ಗತಿ ಕೆಟ್ಟಿತು’ ಎಂದು ಹೇಳಿ ಮಾಯವಾದನು.
ರಾಮದಾಸು ತನ್ನ ಹಣೆಯಬರಹದಲ್ಲಿ ಜೀತ ಮಾಡುವುದೇ ಬರೆದಿದೆ. ಕೈಗೆ ಬಂದದ್ದು ಬಾಯಿಗೆ ಬರಲಿಲ್ಲ ಎಂದುಕೊಂಡು ನಿರಾಸೆಯಿಂದ ಮನೆಯತ್ತ ಹೆಜ್ಜೆ ಹಾಕಿದನು.
(ಲಿಯೊ ಟಾಲ್‌ಸ್ಟಾಯ್ ಅವರ ಒಬ್ಬ ಮನುಷ್ಯನಿಗೆಷ್ಟು ಭೂಮಿ ಬೇಕು?‘ ಎಂಬ ಕಥೆಯ ಆಧಾರಿತ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.