ADVERTISEMENT

ಕಥೆ: ಕಿತ್ತಳೆ ಹಣ್ಣಿನ ಉಪಮೆ

ಪ್ರಜಾವಾಣಿ ವಿಶೇಷ
Published 25 ಜೂನ್ 2023, 1:44 IST
Last Updated 25 ಜೂನ್ 2023, 1:44 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ    

ಮೂಲ ಮಲಯಾಳಂ: ಇ. ಸಂತೋಷ್‌ ಕುಮಾರ್‌ | ಕನ್ನಡಕ್ಕೆ: ಸುನೈಫ್

ಈ ಕಿತ್ತಳೆ ಹಣ್ಣು ನೋಡಿದ್ರಾ, ಇದೊಂದು ವಿಶೇಷ ಹಣ್ಣು. ಇದು ಕಸಿ ಗಿಡದಲ್ಲಿ ಬೆಳೆದ ಹಣ್ಣಲ್ಲ.

ಹಲವು ವರ್ಷಗಳ ಹಿಂದೆ ಅಂಗಳದ ಕೈತೋಟದಲ್ಲಿ ಬಿತ್ತಿದ್ದ ಕಿತ್ತಳೆ ಬೀಜಗಳಲ್ಲಿ ಮೂರು ಮೊಳೆತಿದ್ದವು. ಎರಡು ಸಸಿಗಳು ಬಹಳ ಕಾಲವೇನೂ ಉಳಿಯಲಿಲ್ಲ. ಹೇಗೋ ಉಳಿದ ಒಂದು ಮಾತ್ರ ನಿಧಾನಕ್ಕೆ ಬೆಳೆಯಿತು. ಒಂದು ಎಲೆ ಮೂಡಿ ಎರಡಾಯಿತು. ಬಹಳ ನಿಧಾನಕ್ಕೆ. ಅಂದರೆ ನೋಡಿದವರು ಅದು ಬೆಳೆಯುತ್ತಿದೆ ಅಂತ ಹೇಳುವ ಹಾಗೇ ಇರಲಿಲ್ಲ. ಬಿಸಿಲು ಮಳೆ ಮಂಜಿನ ನಡುವೆ ಅದು ಧ್ಯಾನಿಸುತ್ತಾ ನಿಂತಿತ್ತು. ಗಿಡ ನೋಡಿದ ಗೆಳೆಯರು ಹಿರಿಯರು ಎಲ್ಲ ಕೇಳಿದ್ದು ಒಂದೇ ಪ್ರಶ್ನೆ: ‘ಅಲ್ಲಾ, ಇದ್ಯಾವ ಗಿಡ ಮಾರಾಯರೆ?’

ADVERTISEMENT

‘ಆರೆಂಜ್.’

‘ಆರೆಂಜಾ? ಮತ್ಯಾಕೆ ಇದು ಹೀಗೆ ಉಳಿದುಬಿಟ್ಟಿದೆ?’

‘ಹಾಗೇನಿಲ್ಲ. ಅದು ಬೆಳೀತಾ ಉಂಟು. ಬೀಜ ಮೊಳೆತು ಗಿಡ ಆದದ್ದು ಇದು.’

‘ಸುಮ್ನೆ ಇದನ್ನ ಕಿತ್ತು ಕಸಿ ಗಿಡಗಳನ್ನ ತಂದು ನೆಡಿ. ನಾಲ್ಕೈದು ವರ್ಷಗಳಲ್ಲಿ ಹಣ್ಣು ಬಿಡುತ್ತದೆ.’ ಅವರೆಲ್ಲರ ಅಭಿಪ್ರಾಯ ಒಂದೇ ಆಗಿತ್ತು.

‘ಬೇಡ ಬಿಡಿ. ನಿಧಾನಕ್ಕೆ ಬೆಳೆಯಲಿ. ಅದರ ಸಮಯಕ್ಕೆ ಹಣ್ಣು ಬಿಟ್ಟರೆ ಸಾಕು.’

‘ಯಾಕೆ ಮಾರಾಯರೆ? ಸಾಯುವ ಮೊದಲು ಆರೆಂಜ್ ತಿನ್ನಬೇಕು ಅಂತ ಆಸೆ ಇಲ್ವಾ?’

‘ಇಲ್ಲ. ನಾವು ನೆಡುವ ಮರಗಳೆಲ್ಲ ನಮ್ಮ ಕಾಲದಲ್ಲಿಯೇ ಹಣ್ಣು ಬಿಡಬೇಕು ಅಂತ ಯಾಕಿಷ್ಟು ಹಠ?’

‘ನಮಗೆಂತ ಹಠ? ನಿಮ್ಮ ತೋಟ, ನಿಮ್ಮ ಗಿಡ. ನೀವು ಕಾಯಿರಿ. ನಮಗೇನು?’ ಅವರು ಜಾರಿಕೊಳ್ಳುತ್ತಾರೆ.

ಇವತ್ತು ಆ ಕಿತ್ತಳೆ ಗಿಡ ಹಣ್ಣು ಬಿಟ್ಟಿತ್ತು. ತಣ್ಣನೆ ಗಾಳಿ ಬೀಸಿದಾಗ ಎಲೆಗಳ ಮರೆಯಿಂದ ಹಸಿರು ಬಣ್ಣದ ಕಿತ್ತಳೆಯೊಂದು ಇಣುಕಿತು. ಮರುಕ್ಷಣವೇ ಎಲೆಗಳು ಅದನ್ನು ತಬ್ಬಿಕೊಂಡು ಮರೆಸಿದವು.

ಆಗ ನನಗೆ ತಮಾನೆ ನೆನಪಾದ.

***

ಭೂಮಿ ಅಗೆದು ಇತಿಹಾಸವನ್ನು ಕೆದಕಿ ಅಧ್ಯಯನ ಮಾಡುವ ಇಲಾಖೆಯಲ್ಲಿ ಬಹಳ ವರ್ಷ ಕೆಲಸ ಮಾಡಿದ್ದ ಒಬ್ಬ ವ್ಯಕ್ತಿಯನ್ನು ಹಿಂದೊಮ್ಮೆ ನಾನು ಭೇಟಿಯಾಗಿದ್ದೆ. ತಮಾನೆ. ಪೂರ್ತಿ ಹೆಸರು ಗಣೇಶ್ ತಮಾನೆ ಅಂತೇನೋ ಇರಬೇಕು. ಇದು ಹತ್ತು ಹದಿನೈದು ವರ್ಷಗಳ ಹಿಂದಿನ ಕತೆ.

ತೀರಾ ಅಪರಿಚಿತರಾಗಿದ್ದ ನಾವಿಬ್ಬರು ಒಮ್ಮೆ ಬಸ್ ಯಾತ್ರೆಯಲ್ಲಿ ಹಗಲು ಪೂರ್ತಿ ಅಕ್ಕಪಕ್ಕದ ಸೀಟಿನಲ್ಲಿ ಕೂತು ಪಯಣಿಸಿದ್ದೆವು. ಅದು ಬೆಟ್ಟಗುಡ್ಡಗಳ ಪ್ರದೇಶವಾಗಿದ್ದರಿಂದ ಬಸ್ ಬಹಳ ನಿಧಾನಕ್ಕೆ ಓಡುತ್ತಿತ್ತು. ದೊಡ್ಡ ದೊಡ್ಡ ತಿರುವುಗಳಲ್ಲಿ ಇನ್ನು ಹತ್ತುವುದೋ ಬೇಡವೋ ಎಂಬಂತೆ ಬಸ್ ನಿಂತು ಬಿಡುತ್ತಿತ್ತು. ನಡು ನಡುವೆ ಬೆಟ್ಟಗಳ ನಡುವಿನ ಸುರಂಗಳಲ್ಲಿ ತನ್ನನು ತಾನು ಕಳೆದುಕೊಂಡು ಬಿಡುತ್ತಿತ್ತು; ಮತ್ತೆ ಕೆಲ ಹೊತ್ತಿನಲ್ಲೇ ಕಣಿವೆಯ ಮುಸುಕಾದ ಬೆಳಕಿನಲ್ಲಿ ಕಾಣುವ ಸಾಸಿವೆ ಹೊಲಗಳನ್ನು ತೋರಿಸುತ್ತಾ ಮುಂದುವರಿಯುತ್ತಿತ್ತು.

ಪ್ರಯಾಣ ಹೊರಟು ಸಮಯವೇನೂ ಬಹಳ ಆಗಿರಲಿಲ್ಲ. ಆದರೂ ನನಗೆ ಸಾಕಾಗಿ ಹೋಗಿತ್ತು. ಇಷ್ಟು ನಿಧಾನಕ್ಕೆ ತೆವಳುವ ಬಸ್ ಹತ್ತಿದ್ದಕ್ಕೆ ನನ್ನನ್ನು ನಾನೇ ಶಪಿಸಿಕೊಂಡೆ. ತೆವಳುವುದು ಮಾತ್ರ ಅಲ್ಲ, ಆಗಾಗ ನಿಲ್ಲಿಸುತ್ತಲೂ ಇದೆ. ದೂರದಿಂದಲೇ ಯಾರಾದರೂ ಯಾತ್ರಿಕರು ಬರುವುದು ಕಂಡರೆ ಸಾಕು, ಅವರನ್ನು ಕಾಯುತ್ತಾ ನಿಲ್ಲುತ್ತದೆ. ಕರ್ಮ, ಟ್ಯಾಕ್ಸಿ ಹಿಡಿದು ಹೊರಟರೆ ಸಾಕಿತ್ತು. ಹೊರಗಿನ ನೀರಸ ದೃಶ್ಯಗಳನ್ನು ನೋಡುತ್ತಾ ಅಸಮಾಧಾನದಿಂದ ನಾನು ಕೂತಿದ್ದೆ.

ಹೀಗಿರುವಾಗ ಬಸ್ ಒಂದು ಸುರಂಗ ಹೊಕ್ಕಿತು. ಇದ್ದಕ್ಕಿದ್ದಂತೆ ಸುತ್ತ ಕಿತ್ತಳೆ ಹಣ್ಣಿನ ಪರಿಮಳ ಹರಡಿಕೊಂಡಿರುವಂತೆ ಅನ್ನಿಸಿತು. ಪೂರ್ತಿ ಕತ್ತಲೆ. ಅಷ್ಟೇ ನಿಶಬ್ದ. ಅಷ್ಟು ಹೊತ್ತೂ ಇದ್ದ ಹರಟೆಗಳು, ನಗೆಚಟಾಕಿಗಳು ಒಮ್ಮೆಗೇ ನಿಂತುಬಿಟ್ಟವು; ಯಾವುದೋ ಅವ್ಯಕ್ತ ಭಯ ಕಾಡುತ್ತಿರುವಂತೆ. ಕೆಲವೊಮ್ಮೆ ಕತ್ತಲಿನಿಂದ ಆಚೆಗೆ ಜಿಗಿಯಲು ಶತಾಯಗತಾಯ ಶ್ರಮಿಸುತ್ತಿರುವ ಇಂಜಿನ್ನಿನ ಸದ್ದು ಕೇಳಿಸುತ್ತಿತ್ತು. ಆಗಲೇ ಆ ಪರಿಮಳ. ಪ್ರಯಾಣಿಕರಲ್ಲಿ ಯಾರೋ ಆರೆಂಜ್ ತಿನ್ನುತ್ತಿರಬೇಕು. ಯಾರು ಅಂತ ಮಾತ್ರ ಗೊತ್ತಾಗುತ್ತಿಲ್ಲ. ಒಳಗೂ ಹೊರಗೂ ಒಂದೇ ರೀತಿಯ ಕತ್ತಲು. ಅಪರೂಪಕ್ಕೆ ಎದುರಿನಿಂದ ಹಾದು ಹೋಗುವ ವಾಹನಗಳ ಬೆಳಕು ಬಸ್ಸನ್ನು ಕ್ಷಣಕಾಲ ಬೆಳಗಿಸಿತು. ಅಷ್ಟೇ. ಮತ್ತೆ ಅದೇ ಕತ್ತಲು.

ಸುರಂಗ ದಾಟಿ ಆಚೆ ಬಂದಾಗ ಬೆಳಕು ಮರಳಿತು. ಜೊತೆಗೆ ಮಾತುಕತೆಗಳೂ, ಹಾಸ್ಯದಲೆಗಳೂ ಹಿಂದಿಗಿಂತ ಜೋರಾಗಿ ಕೇಳಿಸತೊಡಗಿತು. ಈಗ ನೋಡಿದರೆ ಪಕ್ಕದ ಸೀಟಿನ ವ್ಯಕ್ತಿಯೇ ಆರೆಂಜ್ ತಿನ್ನುತ್ತಿರುವುದು. ಅಯ್ಯೋ ಯಾರೀತ? ಸುರಂಗ ಶುರುವಾಗುವ ಮೊದಲು ಈತನನ್ನು ಗಮನಿಸಿಯೇ ಇರಲಿಲ್ಲ. ನಿಜಕ್ಕೂ ಈತ ಇಲ್ಲೇ ಕೂತಿದ್ದನಾ? ಕತ್ತಲ ಸುರಂಗ ಯಾತ್ರೆ ಆತನನ್ನು ಸ್ವಲ್ಪವೂ ಭಾಧಿಸಿರಲಿಲ್ಲ ಎಂದು ಕಾಣುತ್ತದೆ. ಕಿತ್ತಳೆಯ ಒಂದೆರಡು ಎಸಳುಗಳನ್ನು ಬಾಯಿಗೆ ಹಾಕಿಕೊಂಡು ನಿಧಾನಕ್ಕೆ ಅಗಿಯುತ್ತಿದ್ದಾನೆ. ನಿಧಾನಕ್ಕೆ… ಸುಲಭದಲ್ಲಿ ಜೀರ್ಣವಾಗದ ಯಾವುದೋ ಆಹಾರವನ್ನು ಚೆನ್ನಾಗಿ ಜಗಿದು ತಿನ್ನುವವನಂತೆ… ಒಂದೆಸಲು ಕಿತ್ತಳೆ ತಿನ್ನಲು ಇಷ್ಟೊಂದು ಸಮಯ ಬೇಕಾ? ಆತನ ಮಡಿಲಲ್ಲಿ ಹಾಸಿದ್ದ ಕರ್ಚೀಫಿನಲ್ಲಿ ಸಿಪ್ಪೆ ತುಂಡುಗಳು ಮತ್ತು ಒಂದಷ್ಟು ಬೀಜಗಳು ಬಿದ್ದುಕೊಂಡಿವೆ. ಆ ಕರ್ಚೀಫಿನಲ್ಲಿ ಬಣ್ಣ ಮಾಸಿರುವ ಯಾವುದೋ ಮೃಗದ ಚಿತ್ರ. ಮೃಗದ ಮೇಲಿನ ಚುಕ್ಕಿಗಳಂತೆ ಆರೆಂಜ್ ಸಿಪ್ಪೆಗಳು.

ಯಾರನ್ನೂ ಗಮನಿಸದೆ ದೂರಕ್ಕೆಲ್ಲೋ ನೋಟ ಚಾಚಿಕೊಂಡಿದ್ದ ಆತ. ಆದರೆ ಏನನ್ನಾದರೂ ನೋಡುತ್ತಿದ್ದನಾ ಎಂದರೆ ಅದೂ ಇಲ್ಲ. ಯಾವುದೋ ಚಿಂತೆಯ ಆಳಕ್ಕೆ ಬಿದ್ದಿರಬೇಕು. ಸ್ವಲ್ಪ ದಪ್ಪ, ಸಾಮಾನ್ಯ ಎತ್ತರದ ವ್ಯಕ್ತಿ. ಬಿಸಿಲಿನಲ್ಲಿ ಓಡಾಡಿ ಕಪ್ಪಿಟ್ಟಂತಿತ್ತು ಮುಖ. ಹಣೆಯ ಮೇಲೆ ಬಿದ್ದಿರುವ ಕೂದಲು ಬಹುತೇಕ ನೆರೆತಿದೆ. ಎಡಕೈಯಲ್ಲಿ ಅರ್ಧ ತಿಂದು ಉಳಿದ ಸಾಮಾನ್ಯ ಗಾತ್ರದ ಕಿತ್ತಳೆ. ಆತ ತಿನ್ನುತ್ತಿರುವುದು ಕೂಡ ಆತನಿಗೆ ಗೊತ್ತಿಲ್ಲವೆಂದು ಕಾಣುತ್ತದೆ.

ಸ್ವಲ್ಪ ಹೊತ್ತಿನ ನಂತರ ಒಂದೆರಡು ಎಸಳುಗಳನ್ನು ಬಿಡಿಸಿ ಬಾಯಿಯ ಹತ್ತಿರ ತಂದ. ಅಷ್ಟೇ ನಿಧಾನಕ್ಕೆ ಬಾಯಿ ತೆರೆದು ಅದನ್ನು ಒಳಗೆ ಸೇರಿಸಿಕೊಂಡ. ಎಲ್ಲವೂ ಒಂದು ಯಂತ್ರದಂತೆ. ಬಾಯಿ ತೆರೆಯುವುದು, ಮುಚ್ಚುವುದು, ನಿಧಾನಕ್ಕೆ ಜಗಿಯುವುದು, ಬಲಗೈ ಮತ್ತೆ ನಿಧಾನಕ್ಕೆ ಕೆಳಗೆ ಬರುವುದು. ಇಷ್ಟೆಲ್ಲಾ ಸಾವಧಾನದಿಂದ ನಡೆಯುತ್ತಿದ್ದರೂ ಆತನ ಕೈಬೆರಳುಗಳ ನಡುವೆ ಆರೆಂಜ್ ರಸ ಇಳಿಯುತ್ತಿರುವುದನ್ನು ನಾನು ಗಮನಿಸಿದೆ. ಅದು ಕೂಡ ಆತನ ಗಮನಕ್ಕೆ ಬಂದ ಹಾಗಿರಲಿಲ್ಲ.

ಹಾಗೇ ನೋಡುತ್ತಿರುವಾಗ ಒಂದು ಅಚ್ಚರಿ! ಆತನ ಬಲಗೈಯಲ್ಲಿ ಆರನೇ ಬೆರಳು.

ತುಂಬಾ ಚಿಕ್ಕದು. ಕಿರುಬೆರಳಿಗೆ ತಾಗಿಕೊಂಡೇ ಇದೆ. ಅದರಲ್ಲೂ ಕಿತ್ತಳೆಯ ರಸ ಇಳಿಯುತ್ತಿತ್ತು. ಅದು ನನಗೆ ವಿಚಿತ್ರವಾಗಿ ಕಾಣಿಸಿತು. ಆರು ಬೆರಳುಗಳಿರುವ ವ್ಯಕ್ತಿಯನ್ನು ಅಷ್ಟು ಹತ್ತಿರದಿಂದ ಅದೇ ಮೊದಲ ಸಲ ನೋಡುತ್ತಿರುವುದು. ಆ ಬೆರಳು ಇನ್ನೊಬ್ಬ ವ್ಯಕ್ತಿಯ ದೇಹದಲ್ಲಿರುವುದಾದರೂ ನನ್ನನ್ನು ಇನ್ನಿಲ್ಲದಂತೆ ಕಾಡತೊಡಗಿತು. ಅದರಿಂದ ನೋಟ ಕಿತ್ತೆ. ಆದರೂ ಅವಾಗವಾಗ ಓರೆಗಣ್ಣು ಆ ಕಡೆ ಹೊರಳುತ್ತಿತ್ತು. ಹಾಗೆ ನೋಡುವಾಗಲೆಲ್ಲ ಏನೋ ಮಾಡಬಾರದ ತಪ್ಪು ಮಾಡುತ್ತಿರುವಂತೆ ಅನಿಸುತ್ತಿತ್ತು.

ಹಾಗೆ ನೋಡಿದರೆ ಅದರಲ್ಲಿ ಅಂತಹ ವಿಶೇಷತೆ ಏನೂ ಇಲ್ಲ. ಒಂದು ಸಣ್ಣ ಬೆರಳು. ಮಕ್ಕಳ ಬೆರಳುಗಳ ಹಾಗೆ. ಅದರ ಮೇಲೆ ಸಣ್ಣ ಸಣ್ಣ ಗೆರೆಗಳು ಮತ್ತು ಮಡಿಕೆಗಳು. ಪುಟ್ಟ ಉಗುರು. ಆದರೆ ಉಳಿದ ಬೆರಳುಗಳ ಹಾಗೆ ಅಲ್ಲ, ಅದು ಮಾತ್ರ ಅಲುಗಾಡುತ್ತಲೇ ಇಲ್ಲ. ಬಹುಷ ಇದ್ದ ಒಂದೇ ಒಂದು ವ್ಯತ್ಯಾಸ ಅದು ಮಾತ್ರ. ಆತ ಆರೆಂಜಿನ ಎಸಳು ಬಿಡಿಸುವಾಗ, ಅದನ್ನೆತ್ತಿ ಬಾಯಿಗಿಡುವಾಗ ಮತ್ತು ಅದನ್ನು ಜಗಿಯುವಾಗ ಆ ಬೆರಳು ಮಾತ್ರ ನಿಶ್ಚಲ. ಕಿರುಬೆರಳಿಗೆ ಒರಗಿಕೊಂಡು ಮಲಗುತ್ತಿರುವ ಮಗುವಿನಂತೆ.

ಹಠಾತ್ತಾಗಿ ಡ್ರೈವರ್ ಬ್ರೇಕ್ ಹಾಕಿದ. ಎಲ್ಲರೂ ಒಮ್ಮೆ ಕೂತಲ್ಲಿಂದ ಜರುಗಿದರು. ಎದುರಲ್ಲಿ ಎಮ್ಮೆಯೊಂದು ಹಾಯಾಗಿ ರಸ್ತೆ ದಾಟುತ್ತಿತ್ತು. ಆ ಮನುಷ್ಯ ತನ್ನ ಚಿಂತೆಯಿಂದ ಎಚ್ಚೆತ್ತು ಸುತ್ತಲೂ ಒಮ್ಮೆ ನೋಡಿದ. ನನ್ನನ್ನು ನೋಡಿ ಮುಗುಳ್ನಕ್ಕ. ಇಷ್ಟು ಹೊತ್ತು ನಾನು ಆತನನ್ನೇ ಗಮನಿಸುತ್ತಿದ್ದದ್ದು ಆತನಿಗೆ ಗೊತ್ತಾಗಿರಬಹುದಾ ಎಂದು ಕಸಿವಿಸಿಯಾಯಿತು. ಆದರೆ, ನನ್ನ ಪುಣ್ಯಕ್ಕೆ ಆತ ಅದನ್ನು ಗಮನಿಸಿಯೇ ಇರಲಿಲ್ಲ ಎಂದು ಕಾಣುತ್ತದೆ.

ಉಳಿದ ಆರೆಂಜ್ ಎಸಳುಗಳನ್ನು ಆತ ನನಗೆ ಚಾಚಿದ. ‘ತಕೊಳ್ಳಿ, ತಿನ್ನಿ, ಒಳ್ಳೆ ಸಿಹಿ ಕಿತ್ತಳೆ ಇದು. ಆಗಲೇ ಕೇಳಬೇಕಿತ್ತು. ಮರೆತು ಬಿಟ್ಟೆ.’

‘ಬೇಡ.’ ನಾನು ಹೇಳಿದೆ. ಬೇರೇನಿಲ್ಲ, ಒಂದು ವೇಳೆ ಆತನ ಆ ಬೆರಳು ತಾಗಿದ್ದರೆ ಎಂಬ ಭಯ.

ಆತ ಒತ್ತಾಯಿಸಲಿಲ್ಲ. ಸುಮ್ಮನೆ ತಲೆಯಾಡಿಸಿದ. ಮತ್ತೆ ಪುನಹ ದೂರಕ್ಕೆಲ್ಲೋ ನೋಟ ಎಸೆದು ಕೂತ.

ಬಸ್ ಈಗ ಸಮತಟ್ಟು ಬಿಟ್ಟು ಏರು ದಾರಿಯಲ್ಲಿತ್ತು. ಅಷ್ಟು ಹೊತ್ತೂ ಇದ್ದ ಸೆಖೆ ಈಗ ಚೂರು ಇಳಿದಂತೆ ಅನಿಸುತ್ತಿದೆ. ತಂಪು ಗಾಳಿ ಬೀಸುತ್ತಿದೆ. ಕಣ್ಣುಗಳು ಹಾಗೆಯೇ ಮುಚ್ಚಿಕೊಂಡವು. ನಗು-ಹರಟೆಗಳೆಲ್ಲ ಮಾಯವಾಯಿತು.

ಎಷ್ಟು ಹೊತ್ತು ಹಾಗೆ ನಿದ್ದೆ ಹೋದೆನೆಂದು ತಿಳಿಯಲಿಲ್ಲ. ಯಾರೋ ತಟ್ಟಿ ಎಬ್ಬಿಸುತ್ತಿದ್ದಾರೆ. ಎಚ್ಚರವಾಯಿತು. ಕಣ್ಣು ತೆರೆದು ನೋಡಿದರೆ ಪಕ್ಕದ ಸೀಟಿನ ಆ ವ್ಯಕ್ತಿ. ಸಣ್ಣದೊಂದು ಜಂಕ್ಷನ್ನಿನಲ್ಲಿ ಬಸ್ ನಿಂತಿತ್ತು. ಹಲವರು ಬಸ್ ಇಳಿದು ಬೀದಿ ಬದಿ ಅಂಗಡಿಗಳಲ್ಲಿ ಚಾ ಕುಡಿಯುತ್ತಿದ್ದರು.

‘ಕ್ಷಮಿಸಿ. ಒಳ್ಳೆ ನಿದ್ದೆಯಲ್ಲಿದ್ದಿರಿ. ಇಳಿಯಬೇಕಾದ ಜಾಗ ಬಂತೋ ಏನೋ ಅಂತ ಎಬ್ಬಿಸಿದೆ.’

‘ಪರವಾಗಿಲ್ಲ.’ ಅಸಹನೆ ಹೊರಗಡೆ ತೋರಿಸದೆ ಹೇಳಿದೆ. ಎಬ್ಬಿಸಿದ್ದು ಒಳ್ಳೆಯದೇ ಆಯಿತು. ಹೊರಗಡೆ ನೋಟಗಳನ್ನ ನೋಡ್ತಾ ಕೂರಬಹುದು. ಆತನ ಕೈಯಲ್ಲಿದ್ದ ಹಣ್ಣು ಮುಗಿದಿದೆ. ಮಡಿಲಲ್ಲಿದ್ದ ಕರ್ಚೀಫಿನಲ್ಲಿ ಸಿಪ್ಪೆ ತುಂಡುಗಳು ಹೆಚ್ಚಾಗಿದ್ದವು.

ಅಂಗಡಿಗಳ ಬೋರ್ಡಿನಲ್ಲಿ ಆ ಊರಿನ ಹೆಸರು ನೋಡಿದೆ. ಅಷ್ಟೇನೂ ದೂರ ಬಂದಿಲ್ಲವೆಂದು ತಿಳಿಯಿತು.

‘ಎಷ್ಟು ನಿಧಾನಕ್ಕೆ ಹೋಗುತ್ತಿದೆಯಲ್ಲ ಬಸ್ಸು? ಜೊತೆಗೆ ಸಿಕ್ಕಸಿಕ್ಕಲ್ಲೆಲ್ಲ ನಿಲ್ಲಿಸ್ತಾ ಇದೆಯಲ್ಲ.’ ನಾನು ಕೇಳಿದೆ.

ಅದಕ್ಕೆ ಆತ ಉತ್ತರಿಸಲಿಲ್ಲ.

‘ತಮಾನೆ.’ ಆತ ತನ್ನನ್ನು ಪರಿಚಯಿಸಿಕೊಳ್ಳುತ್ತಾ ಕೈ ಚಾಚಿದ. ಬದಲಾಗಿ ನಾನು ಆತನನ್ನು ನೋಡಿ ಮುಗುಳ್ನಕ್ಕೆ. ಆದರೆ ಕೈ ಚಾಚಲಿಲ್ಲ. ಆ ಆರನೇ ಬೆರಳು ತಾಗಿದರೆ ಎಂಬ ಭಯ. ಬಹುಷ ನನ್ನನ್ನು ತಟ್ಟಿ ಎಬ್ಬಿಸುವಾಗ ಆ ಬೆರಳು ತಾಗಿರಬಹುದಾ? ತಾಗಿದ್ದರೆ ಏನೂ ಇಲ್ಲ. ಆದರೂ, ಒಂಥರ ಕಳವಳ. ನಾನು ಕೈ ಚಾಚದೇ ಇದ್ದಾಗ ತಮಾನೆಯ ಮುಖ ಕಳೆಗುಂದಿತು. ಮರುಮಾತಾಡದೆ ಆತ ಹೊರಗೆ ನೋಡತೊಡಗಿದ.

ಚಾ ಕುಡಿಯಲು ಹೋಗಿದ್ದ ಡ್ರೈವರ್ ಮತ್ತು ಕಂಡಕ್ಟರ್ ಮರಳಿ ಬಂದರು.

‘ನಿದ್ದೆ ಮಾಡುವವರನ್ನು ಎಬ್ಬಿಸುವುದು ನನಗೆ ಇಷ್ಟವಿಲ್ಲ.’ ತಮಾನೆ ಹೇಳಿದ. ‘ಅದೊಂದು ಅಭ್ಯಾಸ ಆಗಿಬಿಟ್ಟಿದೆ. ನಿಜ ಹೇಳಬೇಕೆಂದರೆ ನಿದ್ದೆ ಮಾಡುವವರನ್ನು ಎಚ್ಚರಿಸದೆ ಹಾಗೆಯೇ ಅವರ ಬಗ್ಗೆ ತಿಳಿದುಕೊಳ್ಳುವುದೇ ನನ್ನ ಕೆಲಸ.’

‘ನೀವು ಗೂರ್ಖಾ ಕೆಲಸ ಏನಾದರೂ ಮಾಡುತ್ತಿದ್ದೀರಾ?’ ನಾನು ಕೇಳಿದೆ.

‘ಅಂದರೆ ಕಾವಲುಗಾರರು ಯಾರನ್ನೂ ಎಬ್ಬಿಸುವುದಿಲ್ಲ ಅಂತ ನೀವು ಹೇಳುತ್ತಿದ್ದೀರಾ?’ ಆತ ನಗುತ್ತಲೇ ಮಾತು ಮುಂದುವರಿಸಿದ. ‘ನಿಮ್ಮ ಮಾತು ಸರಿಯಲ್ಲ. ಕೆಲವೊಮ್ಮೆ ನಿದ್ದೆಯಿಂದ ಎಬ್ಬಿಸುವುದೂ ಕಾವಲುಗಾರನ ಜವಾಬ್ದಾರಿ.’

ಬಸ್ ಮತ್ತೆ ಹೊರಟಿತು.

‘ನನ್ನ ಕೆಲಸ ಹಾಗಿತ್ತು. ಎಲ್ಲೆಲ್ಲೋ ಅಗೆದು, ಗತಕಾಲದ ಬಗ್ಗೆ ಅಧ್ಯಯನ ಮಾಡುವವರ ತಂಡದಲ್ಲಿ ನಾನು ಕೆಲಸ ಮಾಡುತ್ತಿದ್ದೆ, ನೀವು ಕೇಳಿರಬಹುದು. ಇಗೋ ನೋಡಿ, ನಿನ್ನೆಗೆ ಆ ಕೆಲಸದಿಂದ ಮುಕ್ತಿ ಸಿಕ್ಕಿತು. ಪೆನ್ಶನ್ ಆಯಿತು. ಈಗ ಅದೆಲ್ಲ ಮುಗಿದು ಮನೆಗೆ ಹೊರಟಿದ್ದೇನೆ.’ ತಮಾನೆ ನಕ್ಕ.

‘ಓಹ್, ನಿಮ್ಮನ್ನು ನೋಡಿದರೆ ಪೆನ್ಶನ್ ಆದವರು ಅಂತ ಅನಿಸುವುದೇ ಇಲ್ಲ.’ ನಾನು ಹೇಳಿದೆ.

ಆತ ಕಣ್ಣು ಮುಚ್ಚಿ ಬಲಗೈಯ ಬೆರಳುಗಳನ್ನು ಮಡಚುತ್ತಾ ಮನಸ್ಸಿನಲ್ಲೇ ಲೆಕ್ಕ ಹಾಕುತ್ತಿದ್ದ. ಆರನೇ ಬೆರಳು ಲೆಕ್ಕಕ್ಕೂ ಸಿಗದೇ ಸುಮ್ಮನಿತ್ತು.

‘ಮೂವತ್ತೊಂಬತ್ತು ವರ್ಷ.’ ಆತ ಹೇಳಿದ. ‘ಸುಮಾರು ಮೂವತ್ತೊಂಬತ್ತು ವರ್ಷ ಒಂದೇ ಕೆಲಸದಲ್ಲಿದ್ದೆ.’

ಅದರಲ್ಲಿ ಮೊದಲ ಏಳು ವರ್ಷಗಳ ಕಾಲ ಗುತ್ತಿಗೆ ನೌಕರನಾಗಿದ್ದ. ನಂತರ ಒಬ್ಬ ಮೇಲಧಿಕಾರಿ ಸಹಾಯ ಮಾಡಿ ಖಾಯಂಗೊಂಡಿದ್ದ.

‘ಗುಂಡಿ ತೋಡುವ ಕೆಲಸವೇ.’ ಆತ ವಿಚಿತ್ರವಾಗಿ ನಕ್ಕ. ‘ಆದರೆ ನಾವು ಗುಂಡಿ ತೋಡುವುದು, ಹೆಣಗಳನ್ನು ಹೂಳೋದಕ್ಕೆ ಅಲ್ಲ. ಹೂತ ಹೆಣಗಳನ್ನು ಮತ್ತೆ ಹೊರಗೆ ತೆಗೆಯೋದಕ್ಕೆ.’

‘ಹೀಗೆ ಹಲವು ವರ್ಷಗಳ ಕಾಲ ಒಂದೇ ಕೆಲಸದಲ್ಲಿ ಇದ್ದರೆ ಲೋಕದ ಹಲವು ರೀತಿ ನೀತಿಗಳು ನಮಗೆ ಅಪರಿಚಿತವಾಗುತ್ತವೆ. ಉದಾಹರಣೆಗೆ ನೀವು ಈಗ ತಾನೇ ಹೇಳಿದಿರಲ್ಲ. ಈ ಬಸ್ಸು ಬಹಳ ನಿಧಾನ ಅಂತ. ಅದು ನನಗೆ ಅರ್ಥ ಆಗಲಿಲ್ಲ. ನನ್ನ ಪ್ರಕಾರ ಇದು ಈಗಲೇ ಬಹಳ ವೇಗವಾಗಿ ಓಡುತ್ತಿದೆ.’ ಆತ ಹೇಳಿದ.

‘ಅದು ನಿಜ ನೋಡಿ. ಈಗ ಸಮಯ ಎರಡು ಗಂಟೆ ಕಳೆಯಿತು. ಹೆಚ್ಚೆಂದರೆ ಮೂವತ್ತು ಕಿಲೋ ಮೀಟರ್ ಬಂದಿದ್ದೇವೆ. ಆಗಾಗ ಬೆಟ್ಟ ಹತ್ತೋದರಿಂದ ನಿಧಾನ ಆಗುತ್ತಿರಬೇಕು.’ ನಾನು ಕೋಪ ನುಂಗಿ ಹೇಳಿದೆ.

ನಮ್ಮ ಮಾತುಕತೆಗಳನ್ನ ಕೇಳಿಸಿಕೊಂಡವರಂತೆ ಹೊರಗಡೆಯ ಮರಗಿಡಗಳು, ಅಂಗಡಿಗಳು, ಮನೆಗಳೆಲ್ಲ ವೇಗವಾಗಿ ಹಿಂದಕ್ಕೋಡಿ ಮರೆಯಾಗತೊಡಗಿದವು. ಬಸ್ ಈಗ ಸ್ವಲ್ಪ ವೇಗವಾಗಿ ಓಡುತ್ತಿದೆ. ತಮಾನೆ ಹೊರಗಡೆ ನೋಡಿದ. ಆತನ ಮುಖ ಮತ್ತಷ್ಟು ಕಪ್ಪಿಟ್ಟಿತ್ತು.

‘ನನ್ನ ಕೆಲಸದ ಕಾರಣದಿಂದ ಆಗಿರಬಹುದು.’ ಹೊರಗಡೆ ನೆಟ್ಟಿದ್ದ ನೋಟವನ್ನು ಹಿಂತೆಗೆದು ತಮಾನೆ ಹೇಳಿದ: ‘ಗುಂಡಿ ತೋಡುತ್ತ ಹೋಗುವುದು ಅಂದರೆ ಎಷ್ಟು ನಿಧಾನಕ್ಕೆ ಅಂತ ಗೊತ್ತಾ! ಒಂದೊಂದೇ ಇಂಚು, ಒಂದೊಂದೇ ಅಡಿ ಮಣ್ಣು ಬಿಡಿಸುತ್ತಾ, ಭೂಮಿಗೂ ನೋವಾಗದ ಹಾಗೆ. ನಿಧಾನಕ್ಕೆ, ಬಹಳ ನಿಧಾನಕ್ಕೆ. ಮೊದ ಮೊದಲಿಗೆ ಅದುವೇ ದೊಡ್ಡ ಸಮಸ್ಯೆ. ಆಗೆಲ್ಲ ಸಣ್ಣ ವಯಸ್ಸು. ಗಟ್ಟಿಮುಟ್ಟು ದೇಹ. ಶಕ್ತಿಯಿದೆ. ಎಲ್ಲ ಕಡೆ ಮಾಡುವ ಹಾಗೆ ಬೇಗ ಬೇಗ ಗುಂಡಿ ತೋಡುವ ಆತುರ. ಹಾಗೆ ಮಾಡಬಾರದು. ಅನುಭವ ಇರುವವರು ತಡೆಯುತ್ತಾರೆ. ಬ್ರಶ್ ಹಿಡಿದು ಮಣ್ಣನ್ನು ನಿಧಾನಕ್ಕೆ ಸರಿಸುತ್ತ ಹೋಗಬೇಕು. ಬಹಳ ಜಾಗರೂಕತೆಯಿಂದ. ದಿನಗಳು, ತಿಂಗಳುಗಳು ಹೀಗೆ ತಾಳ್ಮೆಯಿಂದ ಕೆಲಸ ಮಾಡುವಾಗ, ಭಾಗ್ಯವಿದ್ದರೆ ಒಂದು ನಾಣ್ಯ, ಒಂದು ಆಭರಣ, ಒಂದು ಪಾತ್ರೆ, ಆಯುಧ ಹೀಗೆ ಏನಾದರೊಂದು ರೂಪ ಪಡೆಯುವುದನ್ನು ಕಾಣಬಹುದು. ಯಾವುದೋ ಹಳೆಯ ಕಾಲಕ್ಕೆ ಮರಳಿ ಹೋಗುತ್ತೇವೆ. ನಿದ್ದೆಯಲ್ಲಿರುವವರನ್ನು ಎಬ್ಬಿಸದೇ ಸುತ್ತ ನಡೆದಾಡುತ್ತೇವೆ. ಹೀಗೆ ನಡೆಯುತ್ತಾ ನಿದ್ದೆ ಹೋದ ಜನ ಸಮುದಾಯಗಳನ್ನು ಎದುರುಗೊಳ್ಳುತ್ತೇವೆ. ಕೆಲವೊಮ್ಮೆ ದೊಡ್ಡ ನಗರಗಳು. ವರ್ಷಗಳ ಕಾಲ ಕಾಡಿದ ಬೇಸಿಗೆಗೆ ಬರಡಾದ ನದಿಗಳು. ಪ್ರಾಣಿಗಳ ಅಸ್ಥಿಪಂಜರಗಳು. ಅವುಗಳ ಬತ್ತಿದ ಗಂಟಲಲ್ಲಿ ಈಗಲೂ ಕಾಡುತ್ತಿರುವ ದಾಹ.’

‘ಒಂದೊಂದೇ ಇಂಚು, ಒಂದೊಂದೇ ಅಡಿ ಭೂಮಿಯಾಳಕ್ಕೆ ಇಳಿದಂತೆ ನೀವು ದಾಟುವುದು ಗಂಟೆಗಳನ್ನಲ್ಲ, ಜಾವಗಳನ್ನಲ್ಲ, ದಿನಗಳನ್ನಲ್ಲ. ಶತಮಾನಗಳನ್ನು ನೀವು ದಾಟುತ್ತಿರುತ್ತೀರಿ. ಒಂದೊಂದು ಹೆಜ್ಜೆಯಲ್ಲೂ ಅದೆಷ್ಟು ಶತಮಾನಗಳು! ಹಾಗಾಗಿಯೇ ನನಗೆ ಹೊರಗಿನ ವೇಗದೊಂದಿಗೆ ಹೊಂದಿಕೊಳ್ಳಲು ಸಾಧ್ಯವಾಗುತ್ತಿಲ್ಲ ಅಂತ ಕಾಣುತ್ತದೆ.’

ಹಾಗೆ ಬಹಳ ಕಾಲದ ಕೆಲಸದ ನಂತರ ಅವರು ಆತನನ್ನು ಮೇಸ್ತ್ರಿಯಾಗಿ ನೇಮಿಸಿದರು. ಹತ್ತಿಪ್ಪತ್ತು ಕೆಲಸಗಾರರು ಆತನ ಕೈಕೆಳಗೆ ಬಂದರು. ಆತ ಅವರೊಂದಿಗೆ ಹೇಳುತ್ತಾನೆ: ‘ನಮಗಿಲ್ಲಿ ಏನೂ ಗಡಿಬಿಡಿಯಿಲ್ಲ. ಸ್ವಲ್ಪ ತಡವಾದರೂ ಪರವಾಗಿಲ್ಲ. ಯಾಕೆಂದರೆ ನಾವು ಏನನ್ನು ಹುಡುಕುತ್ತಿದ್ದೇವೆಯೋ ಅದು ಅದರ ಜಾಗದಲ್ಲಿಯೇ ಇರುತ್ತದೆ. ಜೊತೆಗೆ ಬೇರೆ ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳುವುದು ಕೂಡ ನಮ್ಮ ಜವಾಬ್ದಾರಿ.’

ತಮಾನೆ ಏನನ್ನೋ ಯೋಚಿಸಿ ಮತ್ತೆ ಮುಂದುವರಿಸಿದ: ‘ನಾನು ಹೇಳುವುದು ಏನೆಂದರೆ, ನಮ್ಮ ಈ ಕೆಲಸಕ್ಕೆ ಕರುಣೆ ಬೇಕು. ಶಕ್ತಿಯೋ ವೇಗವೋ ಅಲ್ಲ. ಭೂತಕಾಲದೊಂದಿಗೆ ಮಾತಿಗಿಳಿಯುವಾಗ ನಿಮ್ಮ ಪ್ರೇಯಸಿ ಎಂಬಂತೆ ಮಮತೆ ತೋರಬೇಕು. ಇಲ್ಲದಿದ್ದರೆ ನಾವು ಹುಡುಕುವ ಲೋಕ ಕೋಪಗೊಂಡು ನಮ್ಮ ಕೈಗೆಟುಕದೇ ಹೋಗಬಹುದು.’

‘ನಿಮ್ಮ ಕೆಲಸ ಬಹಳ ಗಡಿಬಿಡಿಯದ್ದು ಎಂದು ನನಗೆ ಅನಿಸುತ್ತಿದೆ.’ ಸ್ವಲ್ಪ ಸಮಯದ ಮೌನದ ನಂತರ ತಮಾನೆ ಹೇಳಿದ.

‘ಹೌದು.’ ನಾನು ಒಪ್ಪಿದೆ. ‘ಬಹಳಷ್ಟು ಸಂದರ್ಭದಲ್ಲಿ ಸಮಯ ಸಾಕಾಗುವುದೇ ಇಲ್ಲ. ಜೊತೆಗೆ ಟಾರ್ಗೆಟ್ ಬೇರೆ ಇದೆ.’

‘ನಮಗೆ ಹಾಗೇನಿಲ್ಲ.’ ತಮಾನೆ ನಗುತ್ತಾ ಹೇಳಿದ: ‘ಇಷ್ಟು ಜನರ ಅಸ್ಥಿಪಂಜರಗಳು ಸಿಗಲೇಬೇಕು ಅಂತ ಹೇಳುವುದಕ್ಕೆ ಸಾಧ್ಯ ಇಲ್ಲವಲ್ಲ.’ ಆ ಮಾತನ್ನು ಮುಗಿಸಿ ಆತ ತನ್ನನು ತಾನೇ ಹೊಗಳುವವನಂತೆ ನಕ್ಕ.

‘ನೋಡಿ, ಪೂರ್ತಿ ಜೇಡರ ಬಲೆಗಳಿಂದ ಕೂಡಿರುವ ಪುರಾತನ ಕೋಟೆಯೊಂದಕ್ಕೆ ನೀವು ಹೋಗುತ್ತೀರಿ ಎಂದಿಟ್ಟುಕೊಳ್ಳೋಣ. ಅದರೊಳಗಿನ ಕೋಣೆಗಳಲ್ಲಿ ನೀವು ಓಡಾಡುತ್ತೀರಿ. ತೆರೆದ ಬಾಗಿಲುಗಳನ್ನು ದಾಟುತ್ತೀರಿ. ಆಗ ಆ ಜೇಡರ ಬಲೆಗಳಿಗೆ ಚೂರೇ ಚೂರು ಹಾನಿಯಾಗದಂತೆ ನೋಡಿಕೊಳ್ಳಲು ನಿಮ್ಮಿಂದ ಸಾಧ್ಯವೇ? ಸಾಧ್ಯವಾದರೆ ನೀವು ಜಯಿಸಿದಿರಿ ಎಂದರ್ಥ. ಈ ಕೆಲಸವೂ ಹಾಗೆಯೇ. ಕನಸಿಗೆ ಭಂಗ ತರದೇ ಇನ್ನೊಬ್ಬರ ನಿದ್ದೆಯಲ್ಲಿ ಹಾದುಹೋಗಬೇಕು. ಹಾಗೆ ಹೋಗುವಾಗ ಅವರ ಕನಸುಗಳು ಜೇಡರ ಬಲೆಗಳಂತೆ ನಮ್ಮ ದೇಹಕ್ಕೆ ಅಂಟಿಕೊಳ್ಳಬಾರದು. ಇದು ಬಹಳ ಎಚ್ಚರದ ಕೆಲಸ.’

ಮತ್ತೆ ಸ್ವಲ್ಪ ಸಮಯ ಮೌನ ತಾಳಿದ ನಂತರ ತಮಾನೆ ಗೊಣಗಿಕೊಂಡ: ‘ಆದರೆ, ಅದು ಹೇಗೆ ಸಾಧ್ಯ? ಕಷ್ಟ. ಬಹಳ ಕಷ್ಟ.’ ನಂತರ ಆತ ಏನನ್ನೋ ಒರೆಸಿ ಹಾಕುವವನಂತೆ ಬಲಗೈಯಿಂದ ಮುಖ ತಿಕ್ಕಿಕೊಂಡ. ಆಗಲೂ ನನಗರಿವಿಲ್ಲದೆ ಆ ಆರನೇ ಬೆರಳನ್ನು ಮತ್ತೆ ಗಮನಿಸಿದೆ. ಅದು ಸಮಯ ಪ್ರಜ್ಞೆಯಿಲ್ಲದೆ ನಿದ್ದೆಯಲ್ಲಿದೆ. ಅಥವಾ ಉಳಿದ ಬೆರಳುಗಳೊಂದಿಗೆ ಯಾವುದೋ ಕನಸಿನ ಲೆಕ್ಕ ಹೇಳುತ್ತಿದೆ. ಈ ಸಲ ಮಾತ್ರ ನಾನು ಆ ಬೆರಳನ್ನೇ ನೋಡುತ್ತಿರುವುದು ಎಂದು ಆತನಿಗೆ ತಿಳಿದು ಬಿಟ್ಟಿತು.

ತಮಾನೆ ನನ್ನನ್ನು ನೋಡಿ ವಿಚಿತ್ರವಾಗಿ ನಕ್ಕ. ಆತ ಯಾಕೆ ಹಾಗೆ ನಕ್ಕ ಎಂದು ನನಗೆ ತಿಳಿಯಲಿಲ್ಲ. ಸ್ವಲ್ಪ ಸಮಯ ನಮ್ಮ ನಡುವೆ ಮೌನ ಮುಂದುವರಿಯಿತು.

‘ಮಂದಗತಿಯ ಕೆಲಸ ಮೊದಮೊದಲಿಗೆ ನನಗೂ ಬೇಸರ ಹುಟ್ಟಿಸುತ್ತಿತ್ತು. ಖಾಯಂ ಉದ್ಯೋಗ ಅಂತ ಸಮಾಧಾನ ಪಟ್ಟುಕೊಳ್ಳಬಹುದಾದರೂ ನಮ್ಮ ಯೌವ್ವನವನ್ನೂ ದೇಹದ ಶಕ್ತಿಯನ್ನೂ ಗೇಲಿ ಮಾಡುವ ಎಂತದೋ ಒಂದು ಆ ಕೆಲಸದಲ್ಲಿತ್ತು. ಭೋರ್ಗರೆಯುವ ಯೌವ್ವನವನ್ನು ಅಣೆಕಟ್ಟು ಕಟ್ಟಿ ತಡೆದು ನಿಲ್ಲಿಸಿದ ಹಾಗೆ ಅನಿಸುತ್ತಿತ್ತು. ಗುದ್ದಲಿಯಿಂದ ಬೇಗ ಬೇಗ ಅಗೆದು ಬೇಗನೆ ಆಳಕ್ಕೆ ಇಳಿಯಬೇಕು ಅಂತೆಲ್ಲ ಅನಿಸುತ್ತಿತ್ತು.’

‘ಅಷ್ಟೇ ಅಲ್ಲ, ತಿಂಗಳುಗಳ ಕಾಲ ಒಂದೇ ಜಾಗದಲ್ಲಿ ಕೆಲಸ. ಅಲ್ಲೇ ವಾಸ. ನಿರ್ಜನ ಪ್ರದೇಶ. ಕೆಲವರು ಮಾತ್ರ ಯಾವುದೋ ಅವ್ಯಕ್ತ ನಿರೀಕ್ಷೆಯಲ್ಲಿ ಕೆಲಸ ಮಾಡುತ್ತಿರುತ್ತಾರೆ. ಬಹುತೇಕ ಸಲ ಹೀಗೆ ದುಡಿದರೂ ಅಲ್ಲಿ ಏನೊಂದೂ ಸಿಗುವುದಿಲ್ಲ. ಎಷ್ಟೋ ಮನುಷ್ಯರ ಎಷ್ಟೋ ದಿನಗಳ ದುಡಿಮೆ ಹೀಗೆ ವ್ಯರ್ಥವಾಗುವುದೂ ಉಂಟು. ಅಲ್ಲಿಂದ ಮತ್ತೊಂದು ಜಾಗಕ್ಕೆ, ಸರ್ಕಸ್ ಕಂಪೆನಿಯವರ ಹಾಗೆ. ಒಂದೇ ವ್ಯತ್ಯಾಸ ಅಂದರೆ ಚಪ್ಪಾಳೆ ತಟ್ಟಿ ಹುರಿದುಂಬಿಸಲು ಅಲ್ಲಿ ಪ್ರೇಕ್ಷಕರು ಇರುವುದಿಲ್ಲ.’

ಬಸ್ ಆಗ ಬೆಟ್ಟವೊಂದರ ಇಳಿಜಾರಿನಲ್ಲಿ ಸಂಚರಿಸುತ್ತಿತ್ತು. ಸಂಜೆಯ ಬಿಸಿಲು ಸುತ್ತಲ ಸಾಸಿವೆ ಹೊಲಗಳ ಹಳದಿಯೊಂದಿಗೆ ಬೆರೆತಿತ್ತು.

‘ಹೀಗೆ ಒಮ್ಮೆ ನಾವು ಒಂದು ಇಳಿಜಾರಿನಲ್ಲಿ ಬಿಡಾರ ಹೂಡಿದ್ದೆವು. ತಿಂಗಳುಗಳ ಕಾಲದ ಉತ್ಖನನ. ಸಾಕಾಗಿತ್ತು. ಕೊನೆಗೆ ಒಂದು ಘಟನೆ ನಡೆಯಿತು.’ ತಮಾನೆ ನನ್ನ ಕಡೆಗೇ ನೋಡುತ್ತಿದ್ದ. ಆತನ ಮುಖದಲ್ಲಿ ಒಂಥರಾ ಹಾಸ್ಯಭರಿತ ನಗು ಮೂಡಿದ್ದನ್ನು ನಾನು ಗಮನಿಸಿದೆ.

‘ಎಲ್ಲರೂ ನಿರಾಸೆಯಲ್ಲಿದ್ದರು. ಅಷ್ಟು ದಿನಗಳಿಂದ ಕೆಲಸ ಮಾಡಿ ಏನೂ ಸಿಗಲಿಲ್ಲ ಅಂದರೆ! ಆಳಕ್ಕೆ ಹೋದಂತೆಲ್ಲ ಮೆತ್ತಗಿನ ಮಣ್ಣು ಸಿಗುತ್ತಿತ್ತು. ಅದು ಖಂಡಿತಾ ಏನನ್ನೂ ಉಳಿಸಿರುವುದಿಲ್ಲ ಅಂತ ನಮಗೆಲ್ಲ ಖಾತ್ರಿಯಾಗಿತ್ತು. ಅಥವಾ ಅಲ್ಲಿ ಜನವಾಸ ಇದ್ದೇ ಇರಲಿಕ್ಕಿಲ್ಲ. ಆದರೆ, ಬತ್ತಿ ಹೋದ ನದಿಯೊಂದರ ಹೆಜ್ಜೆ ಗುರುತು ಆ ಜಾಗದ ತನಕ ಹರಡಿತ್ತೆಂದು ನಮ್ಮ ಮುಖ್ಯಸ್ಥ ಹೇಳಿದ್ದ. ನಮ್ಮ ಹುಡುಕಾಟ ಶುರುವಾಗಿದ್ದೇ ಅಲ್ಲಿಂದ. ಸಾಮಾನ್ಯವಾಗಿ ಇಂತಹ ಸಂಗತಿಗಳಲ್ಲಿ ಆತ ಎಡವಿದ್ದಿಲ್ಲ. ಒಂದು ಕಣಿವೆಗೆ ಕೈ ತೋರಿಸಿ ಅಲ್ಲಿ ಪುರಾತನ ನಾಗರಿಕತೆ ಇತ್ತು ಎಂದು ಊಹಿಸಬಲ್ಲಷ್ಟು ಆತ ಅನುಭವಸ್ಥನಾಗಿದ್ದ. ಆದರೆ, ಆ ನದಿಯ ದಾರಿ ಎಲ್ಲಿ ಹೋಯಿತು? ಅದರ ದಡದಲ್ಲಿ ಇದ್ದಿರಬಹುದಾದ ಮನುಷ್ಯರೆಲ್ಲಿ? ನಗರವೆಲ್ಲಿ?

ಏನೂ ಸಿಗಲಿಲ್ಲ. ಎಲ್ಲರೂ ಆ ಜಾಗ ಬಿಟ್ಟು ಹೊರಡಲು ತಯಾರಾಗುತ್ತಿದ್ದರು. ನಿಜ ಹೇಳಬೇಕೆಂದರೆ ಕೆಲಸದವರಿಗೂ ಮೇಸ್ತ್ರಿಗಳಿಗೂ ಒಳಗೊಳಗೆ ಬಹಳವೇ ಖುಷಿಯಾಗಿತ್ತು. ಹಲವು ದಿನಗಳ ಈ ಏಕಾಂತ ವಾಸ ಮತ್ತು ನೀರಸ ಕೆಲಸ ಎಲ್ಲರಿಗೂ ಸಾಕಾಗಿ ಹೋಗಿತ್ತು. ಹೊರಡಲು ತೀರ್ಮಾನಿಸಿದ ಎರಡು ದಿನಗಳ ಮುಂಚೆ, ಒಂದು ಸಂಜೆ ಮುಖ್ಯಸ್ಥ ನನ್ನನ್ನು ಕರೆಸಿದ. ಅಗೆದಿದ್ದ ಜಾಗದ ಒಂದು ಭಾಗಕ್ಕೆ ನಾವು ನಡೆದೆವು. ಹಿಂದೆ ಹಲವಾರು ಕಡೆಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರಿಂದ ನಮ್ಮಿಬ್ಬರ ನಡುವೆ ಅಂತದ್ದೊಂದು ಬಾಂಧವ್ಯ ಬೆಳೆದಿತ್ತು.

ಪ್ಲಾಸ್ಟಿಕ್ ಹಗ್ಗಳಿಂದ ಗುರುತು ಮಾಡಿದ್ದ ದಿಕ್ಕಿನಲ್ಲಿ ನಾವೇ ಕಡಿದು ಮಾಡಿದ್ದ ದಾರಿಯಲ್ಲಿ ನಡೆದೆವು. ವಿಶಾಲಕ್ಕೆ ಹರಡಿಕೊಂಡಿದ್ದ ಆ ಜಾಗ ಪುರಾತನ ಕಾಲದ ಪಳೆಯುಳಿಕೆಯಂತೆಯೇ ಭಾಸವಾಗುತ್ತಿತ್ತು. ಇನ್ನೇನು ಸದ್ಯದಲ್ಲೇ ಇದೆಲ್ಲ ಬಿಟ್ಟು ಹೊರಡಲಿರುವ ಕಾರಣದಿಂದಲೋ ಏನೋ, ಮುಖ್ಯಸ್ಥ ಏನೂ ಮಾತಾಡಲಿಲ್ಲ. ನಾನೇನು ಕೇಳಲೂ ಇಲ್ಲ. ಬಿಡಾರದಿಂದ ಬಹಳ ದೂರಕ್ಕೆ ಬಂದಾಗಿತ್ತು. ಬೆಳಕು ಕೂಡ ಕಡಿಮೆಯಾಗುತ್ತಿತ್ತು. ನಾವು ಹೋಗಿ ತಲುಪಿದ ಜಾಗದಲ್ಲಿ ಭೂಮಿ ಬಿರಿದಿತ್ತು. ಆಳಕ್ಕೆ ಹೊಂಡ ಬಿದ್ದ ಹಾಗೆ. ಸುತ್ತಲೂ ಅಗೆದ ಮಣ್ಣು. ಅದರ ಎದುರಲ್ಲಿ ವೃತ್ತಾಕಾರದಲ್ಲಿ ಒಂದು ದ್ವಾರ. ಈ ಜಾಗದಲ್ಲಿ ಅಗೆಯುತ್ತಿದ್ದಾಗ ಇದು ಅಲ್ಲಿರಲಿಲ್ಲ ಎಂಬುದು ಖಚಿತ. ಬಹುಷ ಕಳೆದ ಒಂದೆರಡು ದಿನಗಳಲ್ಲಿ ಇದು ಮೂಡಿ ಬಂದಿರಬಹುದು. ನಿಜಕ್ಕೂ ಇಲ್ಲಿ ಏನು ನಡೆದಿರಬಹುದು? ಕುತೂಹಲವಿದ್ದರೂ ನಾನು ಕೇಳಲಿಲ್ಲ.

‘ತಮಾನೆ, ನೀವು ಇಲ್ಲಿ ನಿಂತಿರಿ.’ ಮುಖ್ಯಸ್ಥ ಹೇಳಿದ. ನಂತರ ಆತನ ಕಪ್ಪು ಕೋಟು ಬಿಚ್ಚಿ ನನ್ನ ಕೈಗಿಟ್ಟ. ‘ನಾನು ಕೆಳಗೆ ಹೋಗಿ ಒಮ್ಮೆ ನೋಡುತ್ತೇನೆ. ಏನೂ ಇರಲಿಕ್ಕಿಲ್ಲ. ಆದರೂ ಮತ್ತೊಮ್ಮೆ ನೋಡಿ ಖಾತರಿ ಮಾಡಿಕೊಳ್ಳೋದು ಒಳ್ಳೆಯದು ಅಂತ ನನ್ನ ಮನಸ್ಸು ಹೇಳುತ್ತಿದೆ. ನೀವು ಇಲ್ಲೇ ನಿಂತಿರಿ. ನಾನು ಕೂಗಿ ಹೇಳುತ್ತೇನೆ, ಹಾಗೆ ಮಾಡಬೇಕು.’ ಹಾಗೆ ಹೇಳಿ ಆತ ಕೆಳಗಿಳಿದು ಹೋದ. ವೃತ್ತಾಕಾರದ ಆ ದ್ವಾರದ ಒಳಗೆ ನಿಧಾನಕ್ಕೆ ಕಣ್ಮರೆಯಾದ. ಆತ ಹೇಳಿದ ಹಾಗೆ ನಾನು ಅಲ್ಲೇ ಕಾವಲು ನಿಂತೆ.

ಸ್ವಲ್ಪ ಸಮಯ ಕಳೆಯಿತು. ನಾನು ಕಿವಿ ನಿಮಿರಿಸಿ ಕಾಯುತ್ತಿದ್ದೆ. ಏನಾದರು ಸದ್ದು ಕೇಳಿಸುತ್ತಿದೆಯಾ? ಏನೂ ಇಲ್ಲ. ಈಗ ಅಲ್ಲಿ ನಾನಲ್ಲದೆ ಇನ್ನೊಬ್ಬರು ಇದ್ದಾರೆ ಎಂಬುದರ ಕುರುಹೂ ಇರಲಿಲ್ಲ. ನಾನು ಯೋಚಿಸಿದೆ: ‘ಆತ ಆ ದ್ವಾರದ ಒಳಗೆ ಹೋಗಿದ್ದಾನೆ ಅಂತ ಬೇರೆ ಯಾರಿಗಾದರೂ ಗೊತ್ತಾ? ಬಹುಷ ನನ್ನ ಕೈಯಲ್ಲಿರುವ ಈ ಕೋಟಲ್ಲದೆ ಬೇರೆ ಯಾವ ಸಾಕ್ಷಿಯೂ ನನ್ನ ಕೈಯಲ್ಲಿಲ್ಲ. ಸಮಯ ಉರುಳುತ್ತಿದೆ. ಪೂರ್ತಿ ನಿಶ್ಶಬ್ದ. ನನಗೆ ಭಯ ಶುರುವಾಯಿತು. ಕೋಟನ್ನು ಹೆಗಲಿಗೆ ಹಾಕಿ ಕೈಗಳನ್ನು ಬಾಯಿಗೆ ಹಿಡಿದು ಜೋರಾಗಿ ಸದ್ದು ಮಾಡಿದೆ. ಉತ್ತರವಿಲ್ಲ. ಪುನಹ ಆತನ ಹೆಸರು ಜೋರಾಗಿ ಕೂಗಿ ಕರೆದೆ. ಅದಕ್ಕೂ ಉತ್ತರವಿಲ್ಲ. ಪ್ರತಿಧ್ವನಿ ಕೂಡ ಬರಲಿಲ್ಲ. ಏನಾಗಿರಬಹುದು? ಏನು ಮಾಡುವುದೆಂದು ತೋಚದೆ ನಾನು ಹಾಗೆಯೇ ನಿಂತಿದ್ದೆ. ಆತ ಎಲ್ಲಿ ಹೋದ? ಯಾವ ಕಾಲಕ್ಕೆ ತಲುಪಿರಬಹುದು?

ಅಲ್ಲೇ ನಿಂತಿರಬೇಕೆಂದು ನನಗೆ ಹೇಳಿದ್ದ. ಹಾಗಂತ ಏನಾದರು ಆಪತ್ತು ನಡೆದಿದ್ದರೆ ಉಳಿದವರನ್ನು ಕರೆಯುವುದೇ ಒಳ್ಳೆಯದು. ಆದರೂ ನಾನು ಬಹಳ ಹೊತ್ತು ಆತನಿಗಾಗಿ ಕಾಯುತ್ತಾ ನಿಂತೆ. ಮತ್ತೆ ಯಾರನ್ನಾದರು ಕರೆಯೋಣವೆಂದು ಹಿಂತಿರುಗಿ ನಡೆದೆ.

‘ತಮಾನೆ, ತಮಾನೆ.’ ಸ್ವಲ್ಪವೇ ದೂರ ನಡೆಯುವಷ್ಟರಲ್ಲಿ ಹಿಂದಿನಿಂದ ಆತನ ದನಿ ಕೇಳಿಸಿತು. ನಾನು ತಿರುಗಿ ಓಡಿದೆ.

‘ಕೈ ಕೊಡಿ ತಮಾನೆ!’ ಆತ ಹೇಳಿದ. ಮೆಟ್ಟಿಲುಗಳ ಕೆಳಗೆ ಆತ ದಣಿದು ಕುಸಿದಿದ್ದ. ಬಟ್ಟೆಯಲ್ಲೆಲ್ಲ ಕೆಸರು. ಕೆದರಿದ ತಲೆಕೂದಲು. ಬಿಳುಚಿದ ಮುಖ. ದಣಿದ ಕಣ್ಣುಗಳು.

ಮರಳಿ ಬರುವಾಗ ಮುಖ್ಯಸ್ಥ ಹೇಳಿದ: ‘ನನಗೇನೋ ಸಂಶಯ ಇತ್ತು. ಅಪರಿಚಿತವಾದ ಏನೋ ಅಲ್ಲಿ ಕೆಳಗಡೆ ಸಿಗಬಹುದು ಅಂತ. ಅಲ್ಲದಿದ್ದರೆ ಯಾಕಾಗಿ ಭೂಮಿ ಬಿರಿಯಿತು? ನಾನು ಆ ವೃತ್ತದೊಳಗೆ ನಡೆದೆ. ಕೆಳಗಿಳಿದೆ. ಒಬ್ಬನಿಗೆ ನಡೆಯುವಷ್ಟು ಎತ್ತರ ಇತ್ತು. ಕೆಲವು ಕಡೆ ಕುಳಿತುಕೊಂಡೇ ಮುಂದೆ ಹೋಗಬೇಕು. ಹಾಗೆ ತುಂಬಾ ದೂರ ಹೋದಾಗ ತಣ್ಣಗಿನ ಗಾಳಿ ಬೀಸಿದಂತೆ ಅನಿಸಿತು. ನದಿ ಹರಿಯುವ ಹಾಗೆ ಸದ್ದು. ಆದರೆ ಅದು ಎಲ್ಲಿಂದ ಅಂತ ಮಾತ್ರ ಸರಿಯಾಗಿ ಗೊತ್ತಾಗಲಿಲ್ಲ. ಮುಂದಕ್ಕೆ ದಾರಿಯೂ ಇರಲಿಲ್ಲ. ಬಂಡೆಯ ಹಾಗೆ ಇರುವ ಗೋಡೆಯ ಮುಂದೆ ತಲುಪಿದೆ. ನಾನು ಅಲ್ಲೇ ಕುಳಿತುಕೊಂಡೆ.’

ಹಾಗೆ ಸ್ವಲ್ಪ ಹೊತ್ತು ಕುಳಿತಿರಬೇಕಾದರೆ ಆತನಿಗೆ ಉಸಿರುಗಟ್ಟಲು ಶುರುವಾಯಿತು. ಯಾವುದೋ ವಿಷ ಗಾಳಿ ಸೇವಿಸುತ್ತಿರುವ ಹಾಗೆ. ಸುತ್ತ ಚೂರೇ ಚೂರು ಬೆಳಕಿಲ್ಲ. ಕತ್ತಲಿನಿಂದ ಹೇಗೆ ಹೊರಬರುವುದು ಎಂದು ಯೋಚಿಸತೊಡಗಿದ. ಬಂದ ದಾರಿಯಲ್ಲಿ ನಡೆದರೆ ಅಲ್ಲಿಯೂ ಬಂಡೆ. ಸಹಾಯಕ್ಕಾಗಿ ಯಾರನ್ನಾದರೂ ಕರೆಯೋಣವೆಂದರೆ ದನಿಯೇ ಹೊರಡುತ್ತಿಲ್ಲ. ಉಸಿರಾಡಲು ಹೆಣಗುತ್ತಾ ಕತ್ತಲಲ್ಲಿ ಯಾವ ದಿಕ್ಕಿಗೆ ಹೋಗಬೇಕೆಂದು ತೋಚದೇ ಮುಖ್ಯಸ್ಥ ಹೆಜ್ಜೆ ಹಾಕಿದ. ಹಾಗೆ ನಡೆಯುತ್ತಿರಬೇಕಾದರೆ ಬೆಳಕಿನ ಕೊಳವೆಯೊಂದು ತನ್ನತ್ತಲೇ ಬರುತ್ತಿರುವಂತೆ ಕಂಡಿತು. ‘ಹಾಗೆ ಇದೋ ಇಲ್ಲಿ ತಲುಪಿದೆ.’ ಆತ ಮರುಜೀವ ಪಡೆದು ಬಂದವನಂತೆ ನನ್ನನ್ನು ನೋಡಿ ನಕ್ಕ. ಆತ ನಮ್ಮ ಹಳೆಯ ಮುಖ್ಯಸ್ಥನಲ್ಲವೆಂದೂ, ಹಲವು ಶತಮಾನಗಳಷ್ಟು ಪ್ರಾಯ ಇರುವ ಬೇರೆ ಯಾರೋ ಇರಬೇಕೆಂದು ನನಗೆ ಅನ್ನಿಸಿತು.

‘ಆದರೂ ಒಂದು ಸಂಗತಿ ದೃಢ ಆಯಿತು ತಮಾನೆ.’ ಆತ ಹೇಳಿದ. ‘ಇನ್ನು ಇಲ್ಲಿ ಹುಡುಕೋದು ಏನೂ ಉಳಿದಿಲ್ಲ. ಬಹುಷ ನದಿ ಇಲ್ಲಿಯೇ ಬತ್ತಿ ಹೋಗಿರಬಹುದು. ನಾವು ಹುಡುಕುತ್ತಿರುವ ಯಾವುದೂ ಕೂಡ ಇಲ್ಲಿ ಸಿಗಲಿಕ್ಕಿಲ್ಲ. ಪುರಾತನ ಕಾಲದಲ್ಲಿ ಇಲ್ಲಿ ಜನವಾಸ ಇರಲಿಲ್ಲವೆಂದೇ ಭಾವಿಸಬೇಕು. ಪರವಾಗಿಲ್ಲ. ಹಾಗೆ ನೋಡಿದರೆ ಇದೂ ಕೂಡ ನಮ್ಮ ಹುಡುಕಾಟದ ಭಾಗವೇ ತಾನೇ. ಹಾಗೊಂದು ಸಂಗತಿ ಇಲ್ಲವೆಂದು ಸಾಬೀತು ಪಡಿಸಿದ ಹಾಗೂ ಆಗುತ್ತದೆ. ನಮ್ಮ ಎಲ್ಲ ಊಹೆಗಳೂ ತಪ್ಪಾಗಿದ್ದವು.’

ಆತ ನನ್ನಿಂದ ಕೋಟು ಪಡೆದುಕೊಂಡು ಧರಿಸಿದ. ಹೆಚ್ಚೇನೂ ಮಾತನಾಡದೆ ಬಿಡಾರದ ಕಡೆಗೆ ನಡೆದೆವು.

ನನಗೆ ಮಾತ್ರ ಬೇಸರವಾಗಿತ್ತು. ಅವತ್ತು ರಾತ್ರಿ ನಿದ್ದೆಯಿಲ್ಲದೆ ಮಲಗಿದಾಗ ಆತ ಹೇಳಿದ ಅನುಭವಗಳನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಿದ್ದೆ. ನೆಲ ಬಿರಿದಿದ್ದ ಜಾಗದಲ್ಲಿ ಉಂಟಾಗಿದ್ದ ವೃತ್ತಾಕಾರದ ದ್ವಾರದ ಮೂಲಕ ಹೋದರೆ ಸಿಗುವ ಜಾಗ, ನದಿಯ ಹರಿವಿನಂತಹ ಸದ್ದು, ಬೀಸುವ ಗಾಳಿ. ನನ್ನ ಯೋಚನೆಗಳೆಲ್ಲ ಅಲ್ಲಿಯೇ ಹೋಗಿ ನಿಲ್ಲುತ್ತಿದ್ದವು. ಯಾವುದೋ ಅಪರಿಚಿತ ಸಂಗತಿ ನನ್ನನ್ನು ತಟ್ಟಿ ಕರೆಯುತ್ತಿರುವ ಹಾಗೆ. ನನಗೂ ಒಮ್ಮೆ ಅಲ್ಲಿ ಹೋಗಬೇಕು, ಕಷ್ಟ ಪಟ್ಟಾದರೂ ಸರಿ ಆ ಸದ್ದುಗಳನ್ನೆಲ್ಲ ಕೇಳಿಸಿಕೊಳ್ಳಬೇಕು ಅಂತ ಅನ್ನಿಸತೊಡಗಿತು. ಆ ರಾತ್ರಿ ನನಗೆ ನಿದ್ದೆ ಹತ್ತಲೇ ಇಲ್ಲ.

ಮರುದಿನ ಬೆಳಗ್ಗೆಯೇ ಆ ಕಡೆಗೆ ಹೊರಟೆ. ಈ ಸಲ ಒಬ್ಬನೇ. ಅಲ್ಲಿಗೆ ಹೋಗುವ ವಿಷಯ ಜೊತೆಗಾರರಿಗೆ ಹೇಳಿದರೆ ಅವರೆಲ್ಲ ಸೇರಿ ಸರಿಯಾಗಿ ಬಯ್ಯಬಹುದು. ಅವರಿಗೆ ಅಲ್ಲಿಯ ಕೆಲಸಗಳೆಲ್ಲ ಸಾಕಾಗಿ ಹೋಗಿದೆ ಅಂತ ಆಗಲೇ ಹೇಳಿದೆನಲ್ಲ. ಆದಷ್ಟು ಬೇಗ ಅಲ್ಲಿಂದ ಜಾಗ ಖಾಲಿ ಮಾಡುವ ಯೋಜನೆಯಲ್ಲಿದ್ದರು ಅವರೆಲ್ಲ. ಸುಮ್ಮನೆ ಯಾಕೆ ಅವರೊಂದಿಗೆ ಜಗಳ ಕಾಯೋದು? ನನ್ನ ಮೇಲಾಧಿಕಾರಿಗೆ ಹೇಳಿದರೆ ಆತ ಕೂಡ ತಡೆಯುತ್ತಿದ್ದ. ಮೊದಲನೆಯದಾಗಿ, ಅಲ್ಲಿರಬಹುದಾದ ಆಪತ್ತು. ಮತ್ತೊಂದು ಅದರೊಳಗಡೆ ಏನೂ ಇಲ್ಲವೆಂದು ಆತ ಖಚಿತವಾಗಿ ಹೇಳಿದ್ದ. ಅದರ ಮೇಲೂ ನಾನಲ್ಲಿಗೆ ಹೋಗುತ್ತೇನೆ ಅಂದರೆ ಆತನ ಮೇಲೆ ನನಗೆ ನಂಬಿಕೆ ಇಲ್ಲ ಎಂದು ತಾನೇ ಅರ್ಥ? ಒಬ್ಬ ಮೇಲಾಧಿಕಾರಿ ಕ್ಷಮಿಸಬಹುದಾದ ತಪ್ಪಾ ಅದು?

ನಾನು ಕೆಳಗಿಳಿದೆ. ನನ್ನ ಬಟ್ಟೆ ಬಿಚ್ಚಿ ಹೊರಗಡೆ ಒಂದು ಕಂಬಿಯ ಮೇಲೆ ಕಟ್ಟಿ, ಕಂಬಿಯನ್ನು ನೆಲಕ್ಕೆ ಊರಿದೆ. ಕೆಲಸದ ಸಮಯದಲ್ಲಿ ಧರಿಸುವ ನೀಲಿ ಬಟ್ಟೆ ಮತ್ತು ಟೊಪ್ಪಿ ಹಾಕಿಕೊಂಡೆ. ಸಣ್ಣದೊಂದು ಟಾರ್ಚ್ ಕೂಡ ಕೈಯಲ್ಲಿತ್ತು. ನಿಧಾನಕ್ಕೆ ಮೆಟ್ಟಿಲಿಳಿಯುತ್ತಾ ಒಳಗೆ ಹೋದೆ. ಬಗ್ಗಿಕೊಂಡು ವೃತ್ತಾಕಾರ ಮಣ್ಣಿನ ಬಾಗಿಲು ದಾಟಿದೆ. ಅಷ್ಟರಲ್ಲಿ ಕತ್ತಲು ತಬ್ಬಿಕೊಂಡಿತು.

ಆತ ಹೇಳಿದ ಹಾಗೆಯೇ ಇತ್ತು. ಮೊದಲಿಗೆ ಒಬ್ಬಾತನಿಗೆ ನಡೆಯುವಷ್ಟು ಎತ್ತರ. ನಡೆಯುತ್ತಾ ಮುಂದೆ ಹೋದ ಹಾಗೆ ಎತ್ತರ ಕಡಿಮೆಯಾಗುತ್ತಾ ಹೋಯಿತು. ಎಲ್ಲಿಂದಲೋ ಗಾಳಿ ಬೀಸಿದ ಹಾಗನಿಸಿತು. ತಂಪಾದ ಗಾಳಿ. ಆದರೆ, ನದಿಯದ್ದಾಗಲೀ ಅದರ ಹರಿವಿನದ್ದಾಗಲೀ ಸದ್ದು ಕೇಳಿಸಲೇ ಇಲ್ಲ. ಹಲವು ಸಲ, ಹಲವು ದಿಕ್ಕಿಗೆ ಕಿವಿಯಾಣಿಸಿದರೂ ಅದು ಮಾತ್ರ ಕೇಳಿಸಲೇ ಇಲ್ಲ. ಬಹುಷ ಆತನಿಗೆ ಹಾಗೆ ಅನಿಸಿರಬಹುದು. ಕೊನೆಗೆ ಟಾರ್ಚಿನ ಬೆಳಕು ಒಂದು ಗಟ್ಟಿಯಾದ ಮಣ್ಣಿನ ಗೋಡೆಯ ಮೇಲೆ ಬಿದ್ದಿತು. ಮುಖ್ಯಸ್ಥ ಹೇಳಿದ್ದು ನಿಜವಾಗಿತ್ತು.

ನಾನು ಒಮ್ಮೆ ಕೆಮ್ಮಿದೆ.

ಒಂದು ಕೆಮ್ಮು ಮಾತ್ರ. ಆದರೆ, ಅಲ್ಲಿ ಅಸಾಧಾರಣವಾದ ಸದ್ದು ಕೇಳಿಸಿತು. ಹೆದರಿಬಿಟ್ಟೆ. ದೊಡ್ಡ ಡೊಳ್ಳು ಬಡಿದ ಹಾಗೆ. ಧುಂ... ಧುಂ... ಅಂತ. ಆ ಸದ್ದಿನಲ್ಲಿ ಇನ್ಯಾರೋ ನನ್ನ ಕೆಮ್ಮನ್ನು ಅನುಕರಿಸುತ್ತಿದ್ದಾರೆ.

ನಾನು ತಿರುಗಿ ಬರಲು ತೀರ್ಮಾನಿಸಿದೆ. ಎರಡು ಹೆಜ್ಜೆ ಇಟ್ಟಿರಬಹುದು.

ಇದ್ದಕ್ಕಿದ್ದಂತೆ, ಭೂಮಿ ಬಿರಿಯುತ್ತಿರುವ ಹಾಗೆ. ನಿಂತ ಜಾಗದಿಂದ ಜಾರಿ ಆಳವಾದ ಗುಂಡಿಯೊಳಗೆ ಬಿದ್ದು ಬಿಟ್ಟೆ. ತಲೆಯ ಮೇಲೆ ಮಣ್ಣಿನ ಉಂಡೆಗಳು ಬೀಳುತ್ತಿವೆ. ನನ್ನ ಕತೆ ಮುಗಿಯಿತು ಅಂತ ಅನಿಸಿತು. ಇಷ್ಟು ಆಳದಿಂದ ಮತ್ತೆ ಮೇಲಕ್ಕೆ ಬರುವುದಾದರೂ ಹೇಗೆ? ಬೆಳಕು ಕೂಡ ಇಲ್ಲ.

ಅದು ಹೇಳುವಾಗ ತಮಾನೆಯ ಮುಖದಲ್ಲಿ ಭಯದ ನೆರಳು ಮೂಡಿದ್ದನ್ನು ನಾನು ಗಮನಿಸಿದೆ. ಆತ ನಡುಗುತ್ತಿದ್ದ.

‘ನಾನು ಸ್ವಲ್ಪ ಹೊತ್ತು ಹಾಗೆಯೇ ಬಿದ್ದುಕೊಂಡಿದ್ದೆ. ಆಮೇಲೆ ನಿಧಾನಕ್ಕೆ ಎದ್ದು ನಿಂತೆ. ಈ ಗುಂಡಿಯಿಂದ ಈಗ ಮೇಲಕ್ಕೆ ಏರಬೇಕು. ತಿರುಗಿ ಹೋಗೋದಕ್ಕೆ ಇರುವ ದಾರಿ ಅದು ಮಾತ್ರ. ಆದರೆ, ಹೇಗೆ? ಸುತ್ತಲೂ ಕೈಗಳನ್ನು ಬೀಸಿದೆ.

ಒಂದು ಕಡೆ ನನ್ನ ಕೈ ಯಾವುದಕ್ಕೋ ತಾಗಿತು. ಹಿಂದೆ ಕೇಳಿದ ತರದ ಸದ್ದು ಪುನಹ ನನ್ನನ್ನು ಆವರಿಸಿತು. ಯಾವುದೋ ಮಣ್ಣಿನ ಪಾತ್ರೆ ತಾಗಿದ ಸದ್ದು.

ಕತ್ತಲು ಕಣ್ಣಿಗೆ ಪರಿಚಯವಾಗುತ್ತಾ ಬಂದಾಗ ಆಳೆತ್ತರದ ಮಣ್ಣಿನ ಭರಣಿಯಂತಹ ಏನೋ ಒಂದು ಕಂಡಿತು. ಅದರ ಸುತ್ತ ಕಪ್ಪು ಬಣ್ಣ ಆವರಿಸಿಕೊಂಡಿದೆ. ಕೆಲವು ಕಡೆ ಮಣ್ಣಿನೊಂದಿಗೆ ಸೇರಿಕೊಂಡಿತ್ತು. ಆ ಸಂಕಷ್ಟದ ಹೊತ್ತಿನಲ್ಲೂ ನನಗೆ ಗಟ್ಟಿಯಾಗಿ ಕೂಗಬೇಕೆಂದು ಅನಿಸಿತು. ಅದೆಷ್ಟೋ ದಿನಗಳಿಂದ ನಾವು ಹುಡುಕುತ್ತಿದ್ದ ಏನೋ ಒಂದು ನನ್ನ ಮುಂದೆಯೇ ಇದೆ. ಆದರೆ, ಅದೇನಾಗಿರಬಹುದು? ನಾನು ಅದನ್ನು ತೆರೆದು ನೋಡುವ ಗೋಜಿಗೆ ಹೋಗಲಿಲ್ಲ. ಕಷ್ಟಪಟ್ಟು ಅದರ ಗಟ್ಟಿಯಾದ ಭಾಗ ಹಿಡಿದು ಹತ್ತಿ ಹೇಗೋ ಮೇಲೆ ಬಂದೆ. ಅಲ್ಲಿಂದ ಮುಂದಕ್ಕೆ ನಡೆಯತೊಡಗಿದೆ. ಸ್ವಲ್ಪ ದೂರ ನಡೆದಾಗ ಮುಖ್ಯಸ್ಥ ಹೇಳಿದ ಹಾಗೆ ಬೆಳಕಿನ ಕೊಳವೆಯೊಂದು ನನ್ನ ಕಡೆ ಬರತೊಡಗಿತು. ಆ ಕಡೆಗೆ ನಡೆದು, ಮೆಟ್ಟಿಲುಗಳನ್ನು ಹತ್ತಿ ಬಿಡಾರದ ಕಡೆಗೆ ಓಡಿದೆ.ʼ

ಇಷ್ಟು ಹೇಳಿದ ನಂತರ ತಮಾನೆ ತನ್ನ ನೆನಪಿನಾಳಕ್ಕೆ ಇಳಿದು ಸ್ವಲ್ಪ ಹೊತ್ತು ಮೌನವಾಗಿ ಕೂತ.

ಬಸ್ ಯಾವುದೋ ಸಣ್ಣ ಪಟ್ಟಣದ ಸ್ಟೇಷನ್ನಲ್ಲಿ ಬಂದು ನಿಂತಿತು. ನಾವೆಲ್ಲ ಚಾ ಕುಡಿಯಲು ಇಳಿದೆವು. ಅಂಗಡಿಯಲ್ಲಿ ಜನ ಜಂಗುಳಿಯಿತ್ತು. ನಮಗೆ ಕೂರಲು ಕೂಡ ಜಾಗ ಸಿಗಲಿಲ್ಲ. ಚಾ ಕುಡಿದು ಹೊರಗೆ ಬಂದಾಗ ಇಬ್ಬರು ವಯಸ್ಸಾದ ಭಿಕ್ಷುಕರು ಕೈ ಚಾಚಿದರು. ಅವರ ಕೈಯಲ್ಲಿ ಅವರಿಗಿಂತ ಎತ್ತರದ ಊರುಗೋಲುಗಳಿದ್ದವು. ಆಗಾಗ ಅದನ್ನು ನೆಲಕ್ಕೆ ಕುಟ್ಟಿ ನಮ್ಮ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದರು. ನಾನು ಪರ್ಸಿನಲ್ಲಿದ್ದ ಚಿಲ್ಲರೆ ತೆಗೆದು ಕೊಟ್ಟೆ. ತಮಾನೆ ಅವರನ್ನು ಗಮನಿಸಲೇ ಇಲ್ಲ. ಭಿಕ್ಷುಕರು ಸ್ವಲ್ಪ ಹೊತ್ತು ಆತನ ಬಳಿ ನಿಂತು ಆಮೇಲೆ ಏನೋ ಗೊಣಗುತ್ತಾ ಹೋದರು. ಊರುಗೋಲನ್ನು ನೆಲಕ್ಕೆ ಬಡಿಯುವ ಸದ್ದು ಮತ್ತೂ ಸ್ವಲ್ಪ ಹೊತ್ತು ಕೇಳಿಸುತ್ತಲೇ ಇತ್ತು.

‘ವಯಸ್ಸಾದವರಲ್ವಾ, ಅದಕ್ಕೆ...’ ಮರಳಿ ಬಸ್ಸಿನ ಬಳಿ ಬರುವಾಗ ನಾನು ಬಿಕ್ಷೆ ಕೊಟ್ಟ ಬಗ್ಗೆ ಹೇಳಿದೆ.

ತಮಾನೆ ಜೋರಾಗಿ ನಕ್ಕ. ‘ನನ್ನ ಪ್ರಕಾರ ಈಗ ಭೂಮಿಯ ಮೇಲೆ ಬದುಕಿರುವ ಯಾರು ಕೂಡ ಅಷ್ಟು ವಯಸ್ಸಾದವರಲ್ಲ.’

ನಾವು ಪುನಹ ಬಸ್ ಹತ್ತಿದೆವು.

ಬೀದಿಯಾಚೆ ದೊಡ್ಡ ಮಣ್ಣು ಅಗೆಯುವ ಯಂತ್ರವೊಂದು ಹಳೆಯ ಬಹುಮಹಡಿ ಕಟ್ಟಡದ ಮೇಲೆ ದಾಳಿಗಿಳಿದಿತ್ತು. ಪ್ರತಿ ಏಟಿನ ನಂತರವೂ ಅದು ಸ್ವಲ್ಪವೇ ಹಿಂದಕ್ಕೆ ಸರಿದು ಪುನಹ ನೆಗೆಯುತ್ತಿತ್ತು. ಕಟ್ಟಡ ನೆಲಸಮವಾಗುವುದನ್ನು ನೋಡಲು ಕಾಯುತ್ತಾ ಜನರು ಗುಂಪುಗೂಡಿ ನಿಂತಿದ್ದರು. ಆ ಕಡೆ ಒಮ್ಮೆ ನೋಡಿದ ತಮಾನೆ ಅಲ್ಲಿಂದ ನೋಟವನ್ನು ಕಿತ್ತ. ಆತ ತನ್ನ ಕರ್ಚೀಫಿನಲ್ಲಿ ಏನನ್ನೋ ಭದ್ರವಾಗಿ ಕಟ್ಟಿಕೊಳ್ಳುತ್ತಿದ್ದ.

‘ಆರೆಂಜು ಬೀಜಗಳು.’ ಆತ ಹೇಳಿದ. ‘ನೆಟ್ಟು ಗಿಡ ಮಾಡಬೇಕು ಅಂತ ಆಸೆ.’

‘ಇದು ಮೊಳೆಯುವುದು ಕಷ್ಟ ಅಲ್ವಾ?’ ನಾನು ಹೇಳಿದೆ: ‘ಒಂದು ವೇಳೆ ಮೊಳೆತರೂ ಅದು ಬೆಳೆದು ದೊಡ್ಡದಾಗೋದಕ್ಕೆ ಹತ್ತು ಹದಿನೈದು ವರ್ಷಗಳಾದರೂ ಬೇಕು. ಕಸಿ ಗಿಡ ತಂದು ನೆಡೋದೆ ವಾಸಿ. ಅದು ನಾಲ್ಕೈದು ವರ್ಷಗಳಲ್ಲಿ ದೊಡ್ಡದಾಗುತ್ತದೆ.’

‘ಯಾಕೆ ಗಡಿಬಿಡಿ? ಪ್ರತಿ ಗಿಡವೂ ಬೆಳೆದು ದೊಡ್ಡದಾಗಲು ಅದರದ್ದೇ ಆದ ಸಮಯ ತೆಗೆದುಕೊಳ್ಳುತ್ತದೆ.’ ತಮಾನೆ ಸಣ್ಣದನಿಯಲ್ಲಿ ನಕ್ಕ. ‘ಮತ್ತೆ ಈ ಸಮಯ ಅನ್ನೋದು ಭೂಮಿಯ ಮೇಲೆ ಹಾಗೆ ಬಂದು ಹೀಗೆ ಹೋಗುತ್ತೇವೆ ಎಂದು ಭಾವಿಸುವವರ ಸಮಸ್ಯೆ. ಸ್ವಲ್ಪವೇ ದೂರ ಓಡುವವರ ಗೊಣಗಾಟ. ಈ ಓಟ ನಿಲ್ಲಲಿಕ್ಕಿಲ್ಲ ಅಂತ ಭಾವಿಸಿ ನೋಡಿ. ಅಥವಾ ನೀವು ನಿಲ್ಲಿಸಿದಲ್ಲಿಂದ ಇನ್ಯಾರೋ ಓಟ ಶುರು ಮಾಡುತ್ತಾರೆ ಅಂತ ಯೋಚಿಸಿ. ಅಲ್ಲಿಗೆ ನಿಮ್ಮ ಗೊಂದಲಗಳು ಮುಗಿಯುತ್ತವೆ.’ ಆತ ಹೇಳಿದ. ಮತ್ತೆ ಮೌನವಾದ.

‘ನನಗೆ ಗಡಿಬಿಡಿಯಿಲ್ಲ. ಭೂಮಿಯ ಅಡಿಯಿಂದ ಸಿಗುವುದನ್ನೆಲ್ಲ ಜೋಪಾನವಾಗಿ ಎತ್ತಿಡುವುದರಿಂದ ಇರಬೇಕು, ಬಹುಷ ನಾವೆಲ್ಲ ಈ ಲೋಕದಲ್ಲಿ ಬದುಕಲು ಅರ್ಹತೆ ಕಳೆದುಕೊಂಡಿದ್ದೇವೆ. ನಡಿಗೆ ಕೂಡ ಎಷ್ಟೊಂದು ನಿಧಾನ. ಸಾಮಾನುಗಳೆಲ್ಲ ಹಳೆಯ ಕಾಲದ ಮಣ್ಣಿನ ಪಾತ್ರೆಗಳಂತೆ ಒಡೆದು ಹೋಗಬಹುದೇನೋ ಅಂತ ಭಯ. ಹೆಂಡತಿಯನ್ನು ಕೂಡ ಅದೆಷ್ಟು ಹಗುರಕ್ಕೆ ಅಪ್ಪಿಕೊಳ್ಳುತ್ತೇನೆ ಗೊತ್ತಾ! ಅವಳು ಕೂಡ ಒಡೆದು ಹೋಗಬಹುದೆಂಬ ಭಯ.’ ತಮಾನೆ ಸದ್ದಿಲ್ಲದೆ ನಕ್ಕ.

ತಮಾನೆಯ ಕತೆಯ ಬಾಕಿ ಕೇಳಿಸಿಕೊಳ್ಳಲು ನನಗೆ ಆಸೆಯಿತ್ತು. ಆ ಭರಣಿಯಲ್ಲಿ ಆತನಿಗೆ ಸಿಕ್ಕ ನಿಧಿ ಏನಾಗಿತ್ತು? ಆದರೆ ಆತ ಮಾತ್ರ ಅದನ್ನು ಅಲ್ಲಿಗೇ ಮರೆತುಬಿಟ್ಟಿದ್ದ.

‘ತಮಾನೆ ಅವರೇ, ನೀವು ಕತೆಯ ಬಾಕಿ ಹೇಳಲಿಲ್ಲ. ಆ ಜಾಗಕ್ಕೆ ಪುನಹ ಹೋಗಿ ನೋಡಿದಿರಾ?’ ನಾನು ಕೇಳಿದೆ.

‘ಕತೆಯಾ? ಎಲ್ಲಿ?’ ತಮಾನೆ ಏನೊಂದೂ ಅರ್ಥವಾಗದವನಂತೆ ನನ್ನನ್ನು ನೋಡಿದ. ‘ಓ, ಆ ಉತ್ಖನನದ ವಿಷಯವಾ? ಖಂಡಿತಾ. ಆದರೆ ಅದು ಕತೆ ಅಲ್ಲ. ನಡೆದ ಘಟನೆ ಅದು.’

ಬಸ್ ಹೊರಟಿತು. ಮಣ್ಣು ಅಗೆಯುವ ಯಂತ್ರ ಉರುಳಿಸಿದ ಕಟ್ಟಡದಿಂದ ಬಂದ ಮಣ್ಣು ಮತ್ತು ಧೂಳು ಪಟ್ಟಣವನ್ನೂ ಆ ಸಂಜೆಯನ್ನೂ ಆವರಿಸಿತು.

‘ಎಂತದಿಲ್ಲ. ಆ ದೊಡ್ಡ ಮಣ್ಣಿನ ಭರಣಿಯಲ್ಲಿ ಒಂದು ಶವ ಸಂಸ್ಕಾರ ಮಾಡಿದ್ದರು.’ ತಮಾನೆ ಹೇಳಿದ. ‘ಕುಳಿತುಕೊಂಡ ಭಂಗಿಯಲ್ಲಿ. ಅದ್ಭುತವೇ ಅದು. ಅಲ್ವಾ? ಬಹುಷ ಒಂದಲ್ಲ ಎರಡು ಅದ್ಭುತಗಳು.’

‘ಇದರಲ್ಲಿ ಎಂತ ಅದ್ಭುತ? ಹಿಂದೆಯೂ ಹಲವು ಕಡೆ ಮಣ್ಣಿನ ಪಾತ್ರೆಗಳಲ್ಲಿ ಶವ ಸಂಸ್ಕಾರ ಮಾಡಿದ್ದು ಸಿಕ್ಕಿತ್ತಲ್ಲ? ಕುಳಿತುಕೊಂಡ ಭಂಗಿಯ ಬಗ್ಗೆಯೂ ಓದಿದ ನೆನಪು.’

‘ಹೌದೌದು.’ ಆತ ಒಪ್ಪಿದ. ‘ಆದರೆ ಅಲ್ಲಿ ಅಷ್ಟು ವಿಸ್ತಾರದ ಜಾಗದಲ್ಲಿ ಎಷ್ಟೇ ಹುಡುಕಿದರೂ ಮತ್ತೊಂದು ಶವ ಸಂಸ್ಕಾರದ ಕುರುಹು ಕೂಡ ಸಿಗಲಿಲ್ಲ. ಒಬ್ಬನೇ ಒಬ್ಬ ಮನುಷ್ಯ. ಆತನನ್ನು ಅಂತಹ ನಿರ್ಜನ ಪ್ರದೇಶದಲ್ಲಿ ತಂದು ಹೂತಿಟ್ಟವರು ಯಾರಿರಬಹುದು? ಇದೇ ನೋಡಿ ಅದ್ಭುತ.’

‘ಆತ ಅವರ ರಾಜನಾಗಿರಬಹುದಲ್ಲ?’ ನಾನು ಊಹಿಸಿದೆ.

‘ರಾಜನೇ ಆಗಿದ್ದರೆ ಅವನ ಪ್ರಜೆಗಳೆಲ್ಲಿ? ಬಂಧು ಬಳಗ, ನಂತರದ ರಾಜರುಗಳು? ಯಾರು ಕೂಡ ಇಲ್ಲವೆಂದರೆ! ಇಂತಹ ಏಕಾಂತತೆಗೆ ಹೊರಡಲು ಆತನ ಬದುಕಿನಲ್ಲಿ ಏನೆಲ್ಲ ನಡೆದಿರಬಹುದು? ಯಾವ ಉತ್ತರವೂ ನಮಗೆ ಸಿಗಲಿಲ್ಲ. ಹಲವಾರು ಜನರು ಬಂದು ಅಧ್ಯಯನ ಮಾಡಿದರು. ಏನು ಪ್ರಯೋಜನ? ಎಲ್ಲವೂ ಊಹೆಗಳಲ್ಲಿ ಮುಕ್ತಾಯಗೊಂಡವು. ಅಥವಾ ಅದು ಹಾಗೆ ಮುಂದುವರಿಯುತ್ತಿದೆ.’

ನಾವು ಮೌನವಾದೆವು. ಯಾತ್ರೆಯ ಉಳಿದ ಸಮಯವೆಲ್ಲ ಶವವೊಂದರ ಏಕಾಂತತೆ ನಮ್ಮನ್ನು ಆವರಿಸಿತು.

‘ಮುಂದಿನ ಸ್ಟಾಪಲ್ಲಿ ನಾನು ಇಳಿಯುತ್ತೇನೆ.’ ತಮಾನೆ ಹೊರಗಡೆ ನೋಡುತ್ತಾ ಹೇಳಿದ. ಮತ್ತೆ ಎದ್ದು ಮೇಲಿಂದ ಮತ್ತು ಸೀಟಿನ ಅಡಿಯಿಂದ ಚೀಲಗಳನ್ನೂ ಪೆಟ್ಟಿಗೆಗಳನ್ನೂ ಹೊರತೆಗೆಯತೊಡಗಿದ. ನಾಲ್ಕೈದು ಟ್ರಂಕುಗಳಿದ್ದವು. ಆತ ನಿವೃತ್ತನಾಗಿ ಬಂದಿರುವುದರಿಂದ ಇಷ್ಟು ಸಾಮಾನುಗಳಿವೆ ಎಂದು ನಾನು ಊಹಿಸಿದೆ.

ಕೊನೆಗೆ ಆತ ಬೀಳ್ಕೊಡಲು ಎದ್ದು ನಿಂತಾಗ ನಾನು ಕೂಡ ಎದ್ದು ನಿಂತೆ. ‘ಪೆಟ್ಟಿಗೆಗಳನ್ನು ಇಳಿಸೋದಕ್ಕೆ ನಾನು ಸಹಾಯ ಮಾಡುತ್ತೇನೆ.’

‘ತುಂಬಾ ಸಂತೋಷ. ದೊಡ್ಡ ಉಪಕಾರವಾದೀತು. ನಾನು ಇಳಿದ ನಂತರ ತೆಗೆದು ಕೊಟ್ಟರೆ ಸಾಕು.’ ತಮಾನೆ ಹೇಳಿದ.

ಬಸ್ ಸಮತಟ್ಟಾದ ಪ್ರದೇಶದಲ್ಲಿ ಸಂಚರಿಸುತ್ತಿತ್ತು. ದೂರದಲ್ಲಿ ಬೆಟ್ಟದ ನೆರಳು ಕಾಣುತ್ತಿತ್ತು. ಅಲ್ಲಿಂದ ತಂಪಾದ ಗಾಳಿ ಬೀಸುತ್ತಿದೆ. ಹೊರಗಡೆ ಕತ್ತಲು ಸುರಿಯತೊಡಗಿತು. ಇದ್ದಕ್ಕಿದ್ದ ಹಾಗೆ ಆತ ಕತೆಯಲ್ಲಿ ಎರಡು ಅದ್ಭುತ ಇತ್ತೆಂದು ಹೇಳಿದ್ದು ನೆನಪಾಯಿತು. ಆತ ಹೇಳದೇ ಉಳಿದದ್ದು ಏನಾಗಿರಬಹುದೆಂಬ ಕುತೂಹಲ ಮೂಡಿತು.

‘ಅದೂ!’ ನಾನು ಕೇಳಿದಾಗ ತಮಾನೆ ಜೋರಾಗಿ ನಕ್ಕ. ‘ಹಾಗೆ ನೋಡಿದರೆ ನಿಜಕ್ಕೂ ಅದ್ಭುತ ಅಂದರೆ ಅದು. ಅದು ಮಾತ್ರವೇ ಅದ್ಭುತ. ಉಳಿದದ್ದೆಲ್ಲ ನೀವೇ ಹೇಳಿದ ಹಾಗೆ ಸಾಮಾನ್ಯ ಸಂಗತಿಗಳು. ಹಿಂದಿನ ಕಾಲದ ಮನುಷ್ಯರು ದೊಡ್ಡ ಮಣ್ಣಿನ ಪಾತ್ರೆಗಳಲ್ಲಿ ಶವ ಸಂಸ್ಕಾರ ಮಾಡುತ್ತಿದ್ದರು. ಬಂಡೆಗಳ ನಡುವೆ ಅದನ್ನು ಇಡುತ್ತಿದ್ದರು. ಸರಿ. ಆದರೆ, ಎರಡನೇ ಸಂಗತಿ ನಿಜಕ್ಕೂ ಅದ್ಭುತ.’

ನಾನೀಗ ಕೂತೂಹಲದಿಂದ ಆತನನ್ನೇ ನೋಡುತ್ತಿದ್ದೆ.

‘ಆ ಭರಣಿಯಿಂದ ಹೊರತೆಗೆದು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಆ ಶವದ ಬಲಗೈಯಲ್ಲಿ ಆರು ಬೆರಳುಗಳಿದ್ದವು.’ ತಮಾನೆ ತನ್ನ ಕೈಯನ್ನು ನಿಧಾನಕ್ಕೆ ಮೇಲೆತ್ತಿ ತೋರಿಸುತ್ತಾ ಮತ್ತೆ ಜೋರಾಗಿ ನಕ್ಕ.

‘ಆರು ಬೆರಳುಗಳು!’ ನಾನು ಚೂರು ಜೋರಾಗಿಯೇ ಹೇಳಿದೆ.

‘ಹೌದು. ಆರನೇ ಬೆರಳು.’ ತಮಾನೆಯ ನಗು ಈಗ ಮುಗುಳ್ನಗೆಯಾಗಿತ್ತು.

ತಮಾನೆ ಹೇಳಿದ: ‘ಕ್ಷಮಿಸಿ. ಇಷ್ಟು ದೊಡ್ಡ ಕತೆ ನಿಮ್ಮ ಹತ್ತಿರ ಹೇಳೋದಕ್ಕೆ ಬೇರೆ ಕಾರಣ ಏನಿದೆ ಹೇಳಿ? ನೀವು ನನ್ನ ಆ ಸಣ್ಣ ಬೆರಳನ್ನೇ ನೋಡುತ್ತಿದ್ದದ್ದನ್ನ ನಾನು ಗಮನಿಸಿದೆ. ಬಹುಷ ನಿಮಗದು ವಿಚಿತ್ರವಾಗಿ ಕಂಡಿರಬಹುದು. ಅಥವಾ ಅದನ್ನು ನೋಡಿ ನೀವು ಹೆದರಿಕೊಂಡಿರಬಹುದು. ಆ ಬೆರಳು ತಾಗಿದ್ದರಿಂದಲೇ ಕಿತ್ತಳೆ ಹಣ್ಣು ತಿನ್ನೋದಕ್ಕೆ ನೀವು ಒಪ್ಪಲಿಲ್ಲ ಅಲ್ವಾ?’

ನಾನೇನೂ ಹೇಳಲಿಲ್ಲ.

‘ಪರವಾಗಿಲ್ಲ. ಇದು ನನಗೆ ಅಭ್ಯಾಸ ಆಗಿದೆ; ಈ ಭಯ ಅಥವಾ ವಾಕರಿಕೆ. ಅದು ಯಾರಿಗೂ ಇಷ್ಟವಿಲ್ಲ. ನನ್ನ ಹೆಂಡತಿಗೂ ಆ ಬೆರಳು ತಾಗುವುದು ಇಷ್ಟವಿಲ್ಲ. ಭಿನ್ನವಾದ ಏನೇ ಆದರೂ ಜನರಿಗೆ ಅದರ ಬಗ್ಗೆ ಜಿಗುಪ್ಸೆ. ಅಲ್ವಾ? ಬದಲಾವಣೆಯನ್ನು ತಡೆದು ನಿಲ್ಲಿಸಿಬಿಡುತ್ತಾರೆ. ಹಿಂದೆ ನಾನು ಕೂಡ ಜನರ ಗಮನದಿಂದ ಈ ಬೆರಳನ್ನು ಮರೆಸುತ್ತಿದ್ದೆ. ಯಾಕೆ ಹಾಗೆ ಮಾಡುತ್ತಿದ್ದೆ? ಈ ಬೆರಳಿನಿಂದಾಗಿ ನನಗೇನಾದರೂ ತೊಂದರೆ ಆಗಿದೆಯಾ? ಇಲ್ಲವೇ ಇಲ್ಲ. ನನ್ನ ಸುತ್ತ ಇರುವವರನ್ನು ಬೇಸರ ಪಡಿಸೋದು ಬೇಡ ಅಂತ ಮಾತ್ರ. ಲೋಕದೊಂದಿಗೆ ಹೊಂದಿಕೊಳ್ಳೋದಕ್ಕೆ ಅಥವಾ ಲೋಕರೂಢಿಯೊಂದಿಗೆ ಬೆರೆಯಲು. ಬಹುತೇಕ ಸಲ ನಮಗಾಗಿಯಂತು ಅಲ್ಲವೇ ಅಲ್ಲ; ಲೋಕದ ಕಣ್ಣಿಗೋಸ್ಕರ ನಮ್ಮ ಬದುಕು.’

‘ಹಾಗೆ ನಾನು ಆ ಪುರಾತನ ಮನುಷ್ಯನನ್ನು ಭೇಟಿಯಾದ ದಿನ ನನ್ನೆಲ್ಲ ಜಾಢ್ಯಗಳನ್ನು ಕಿತ್ತು ಬಿಸಾಕಿದೆ. ಒಬ್ಬ ವ್ಯಕ್ತಿ ಭಿನ್ನವಾಗಿಯೂ ಬದುಕಬಹುದು ಎಂದು ಕಂಡುಕೊಂಡೆ. ಜೊತೆಗೆ ಏಕಾಂಗಿಯಾಗಿ ಬದುಕುವುದು, ಏಕಾಂಗಿಯಾಗಿ ಸಾಯುವುದು ಮತ್ತು ಸತ್ತ ಮೇಲೂ ಒಬ್ಬಂಟಿಯಾಗಿರುವುದು ಸಾಧ್ಯ ಎಂಬುದು ಸ್ಪಷ್ಟವಾಗಿ ತಿಳಿಯಿತು.’

‘ವಿಚಿತ್ರಾ ಅಲ್ವಾ?’ ಬಸ್ ನಿಲ್ಲಿಸಲು ಹೊರಟಾಗ ಆತ ಹೇಳಿದ: ‘ಆರು ಬೆರಳಿನ ಆ ಮನುಷ್ಯ ಅದೆಷ್ಟೋ ಶತಮಾನಗಳಿಂದ ಅಲ್ಲಿ ಶಾಂತ ಮೌನವಾಗಿದ್ದ. ಕೊನೆಗೆ ಅಷ್ಟೊಂದು ಅನುಭವ ಹೊಂದಿದ್ದ ನನ್ನ ಮುಖ್ಯಸ್ಥ ಅಷ್ಟು ಹತ್ತಿರ ಹೋದಾಗಲೂ ಆತ ಅವಿತುಕೊಂಡೇ ಇದ್ದ. ಉಸಿರುಗಟ್ಟಿಸಿ ಅಲ್ಲಿಂದ ಓಡಿಸಿದ. ಹೀಗೆ ಯೋಚಿಸುವಾಗ ಆತ ನನ್ನನ್ನೇ ಕಾಯುತ್ತಿದ್ದನೆಂದು ಕಾಣುತ್ತದೆ. ತನ್ನ ಅದೇ ಕುಲಲಾಂಛನ ಹೊಂದಿರುವ ಒಬ್ಬಾತ ಬಂದೇ ಬರುತ್ತಾನೆಂದು ಏಕಾಂಗಿಯಾಗಿ ಕಾಯುತ್ತಿದ್ದ ಹಾಗೆ.’

ತಮಾನೆ ಮತ್ತೇನೂ ಹೇಳಲಿಲ್ಲ. ಬಸ್ಸಿನ ಸದ್ದಿನ ಏಕತಾನತೆ ಮಾತ್ರ ಉಳಿಯಿತು.

ಬಸ್ ನಿಲ್ಲಿಸಿದಾಗ ನಾನು ಆತನ ಪೆಟ್ಟಿಗೆಗಳನ್ನು ಇಳಿಸಿಕೊಟ್ಟೆ. ಬೀದಿ ದೀಪವೊಂದರ ಮಂದ ಬೆಳಕು ಮಾತ್ರ ಅಲ್ಲಿತ್ತು. ಆತ ಪುನಹ ಧನ್ಯವಾದ ಹೇಳಿದ. ಬಸ್ ಹೊರಟಾಗ ನಾನು ಕೈ ಬೀಸಿದೆ. ಆತನೂ ನನಗೆ ಕೈ ಬೀಸಿದ. ಕತ್ತಲಲ್ಲಿ ತಮಾನೆಯ ಆರು ಬೆರಳುಗಳ ಅಸ್ತಿಪಂಜರ ಕೈ ಬೀಸುತ್ತಿರುವಂತೆ ಕಂಡಿತು. ಆ ಕತ್ತಲಲ್ಲಿ ಎಕ್ಸ್ ರೇ ಚಿತ್ರದಂತೆ. ಮಾಂಸವೆಲ್ಲ ಮಾಯವಾಗಿದೆ.

ಮರಳಿ ಸೀಟಿಗೆ ಬಂದಾಗ ಆತ ತನ್ನ ಕರ್ಚೀಫನ್ನು ಮರೆತು ಅಲ್ಲೇ ಬಿಟ್ಟು ಹೋಗಿದ್ದನ್ನು ಕಂಡೆ. ಅದರೊಳಗೆ ಕಿತ್ತಳೆಯ ಬೀಜಗಳನ್ನು ಜೋಪಾನವಾಗಿ ಕಟ್ಟಿಕೊಂಡಿದ್ದಾನೆ. ಅದನ್ನು ಎತ್ತಿ ನನ್ನ ಬ್ಯಾಗಿನೊಳಗಿಟ್ಟೆ.

ಯಾಕೋ ತಮಾನೆಯನ್ನು ಭೇಟಿಯಾದ ವಿಷಯವನ್ನು ಹೆಂಡತಿಯ ಬಳಿಯಾಗಲೀ, ಗೆಳೆಯರ ಬಳಿಯಾಗಲೀ ಹೇಳಿಕೊಳ್ಳಲಿಲ್ಲ. ಬಹುಷ ಆತ ನೆನಪಾದಾಗಲೆಲ್ಲ ಆ ಆರನೇ ಬೆರಳು ಕೂಡ ನೆನಪಾಗುವುದರಿಂದ ಇರಬೇಕು. ನೆನಪಿನಾಳದ ವೃತ್ತಾಕಾರದ ದ್ವಾರ ದಾಟಿ ಆತ ನಡೆದು ಹೋದ ಕತ್ತಲ ಜಾಗ, ಆಳೆತ್ತರದ ಭರಣಿ, ಅದರೊಳಗಡೆ ಏಕಾಂಗಿ ಅಸ್ಥಿಪಂಜರ ಎಲ್ಲವೂ ನೆನಪಾಗುತ್ತದೆ. ನೆನೆಯುವಾಗೆಲ್ಲ ಆ ಕತ್ತಲ ಎಕ್ಸ್ ರೇ ಚಿತ್ರದಲ್ಲಿ ಕಂಡ ತಮಾನೆಯ ಆರು ಬೆರಳುಗಳು. ಮಾಂಸ ಕಳೆದು ಹೋಗಿದೆ. ಬೆರಳುಗಳ ಅಸ್ಥಿಪಂಜರ ಮಾತ್ರ ಬಾಕಿ.

***

ಸ್ವಲ್ಪ ಸಮಯದ ನಂತರ ನಾನು ನನ್ನ ಬಿಡುವಿಲ್ಲದ ಮಾರ್ಕೆಟಿಂಗ್ ಕೆಲಸ ಬಿಟ್ಟು ಬಂದೆ. ಟಾರ್ಗೆಟ್ಟುಗಳು ಮತ್ತು ಸಮಯದ ಕೊರತೆಗಳು ನಂತರ ನನ್ನ ಬೆನ್ನು ಬೀಳಲಿಲ್ಲ.

ಅಂದು ತಮಾನೆಯೊಂದಿಗೆ ಸಂಚರಿಸಿದ್ದ ಮಲೆನಾಡಿನ ದಾರಿಯಲ್ಲಿ ಆಮೇಲೆ ಹೋದಾಗಲೆಲ್ಲ ಸುತ್ತಲ ದೃಶ್ಯಗಳನ್ನು ಕಣ್ತುಂಬಿಕೊಳ್ಳುತ್ತೇನೆ. ವಾಹನಗಳ ಮಂದಗತಿಯಾಗಲೀ ಅವು ದಾರಿ ಮಧ್ಯೆ ನಿಲ್ಲಿಸುವ ಅವಧಿಯ ಬಗ್ಗೆಯಾಗಲೀ ನಾನು ಗಮನ ಹರಿಸುತ್ತಲೇ ಇರಲಿಲ್ಲ. ತಮಾನೆ ಹೇಳಿದ ಹಾಗೆ ಸಮಯವೆಂದರೆ ಭೂಮಿಯ ಮೇಲೆ ಹೀಗೆ ಬಂದು ಹಾಗೆ ಹೋಗುತ್ತೇವೆ ಎಂದು ಭಾವಿಸುವವರ ಸಮಸ್ಯೆ. ಸ್ವಲ್ಪವೇ ದೂರ ಓಡುವವರ ಗೊಣಗಾಟ. ತುಂಬಾ ದೂರಕ್ಕೆ ಓಡುವವರನ್ನು ಒಮ್ಮೆ ಗಮನಿಸಿ ನೋಡಿ. ಅವರು ಸ್ವತಹ ತಮ್ಮನ್ನು ತಾವು ದಾಟುವ ಪ್ರಯತ್ನದಲ್ಲಿರುತ್ತಾರೆ. ಅವರನ್ನು ದಾಟಿ ಹೋಗುತ್ತಿರುವವರ ಬಗ್ಗೆ ಯಾವ ಗಮನವೂ ಇರುವುದಿಲ್ಲ.

ಈ ಕಿತ್ತಳೆ ಗಿಡದ ಹಾಗೆ.

ತನಗಿಂತ ಮೊದಲೇ ಹೂಬಿಟ್ಟು ಹಣ್ಣು ಕೊಟ್ಟ ಮರಗಳನ್ನು ನೋಡಿ ಇದು ಹೆದರಲೂ ಇಲ್ಲ, ಉತ್ಸಾಹದಿಂದ ವೇಗ ಪಡೆದುಕೊಳ್ಳಲೂ ಇಲ್ಲ. ಅದು ತನ್ನಷ್ಟಕ್ಕೆ ತನ್ನದೇ ಸಮಯ ತೆಗೆದುಕೊಂಡು ಬೆಳೆಯಿತು. ಹೂ ಬಿಟ್ಟಿತು. ಭೂಮಿಯಾಳದ ಭೂತಕ್ಕೆ ಬೇರುಗಳನ್ನು ಊರಿ ಭವಿಷ್ಯಕ್ಕೆ ಹಬ್ಬಿಕೊಂಡಿತು.

ತಂಗಾಳಿಗೆ ಕ್ಷಣ ಮಾತ್ರ ತೆರೆದು ಮುಚ್ಚಿದ ಎಲೆಗಳ ಕಿಟಕಿಯಲ್ಲಿ ಕಂಡಿತೊಂದು ಕಿತ್ತಳೆ ಹಣ್ಣು!

ಒಂದೇ ಒಂದು ಹಣ್ಣು. ಹಸಿರು ಬಣ್ಣ. ಬೀಜದಿಂದ ಮೊಳೆತು ಮೂಡಿದ ಹಣ್ಣು.

ಒಂದು ಕಿತ್ತಳೆ, ಒಂದು ಯುಗ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.