ಬೋಧಿಸತ್ವನು ಈಗ ವಾರಣಸಿಯಲ್ಲಿ ಹುಟ್ಟಿ, ದೊಡ್ಡ ಗುರುಕುಲವೊಂದರ ಆಚಾರ್ಯನಾಗಿದ್ದನು. ಅವನಲ್ಲಿ ಐನೂರು ಶಿಷ್ಯರಿದ್ದರು. ಅವರಲ್ಲಿ ಸಂಜೀವ ಎಂಬ ಶಿಷ್ಯನೊಬ್ಬನಿದ್ದ; ಸತ್ತವರನ್ನು ಬದುಕಿಸಬಲ್ಲಂಥ ವಿದ್ಯೆಯನ್ನು ಅವನಿಗೆ ಬೋಧಿಸತ್ವನು ಕಲಿಸಿಕೊಟ್ಟ.
ಶಿಷ್ಯರೆಲ್ಲರೂ ಒಂದು ದಿನ ಕಾಡಿಗೆ ಕಟ್ಟಿಗೆಯನ್ನು ತರಲು ಹೋದರು. ಸಂಜೀವ ಅಲ್ಲೊಂದು ಸತ್ತ ಹುಲಿಯನ್ನು ನೋಡಿದ. ‘ಈ ಹುಲಿಯನ್ನು ನಾನು ಈಗ ಬದುಕಿಸುವೆನು’ ಎಂದು ಹೇಳುತ್ತ, ಅವನು ಮಂತ್ರವನ್ನು ಪಠಿಸಲು ತೊಡಗಿದ.
ಆ ಸತ್ತ ಹುಲಿಗೆ ಕೂಡಲೇ ಜೀವ ಬಂದಿತು. ಎದುರಿಗಿದ್ದ ಸಂಜೀವನ ಮೇಲೆಯೇ ಅದು ಹಾರಿತು; ಅವನನ್ನು ಕೊಂದು ತಿಂದು, ಅದರ ಹಸಿವನ್ನು ನೀಗಿಸಿಕೊಂಡಿತು.
* * *
ಇದು ಬುದ್ಧನ ಜಾತಕಕಥೆಗಳಲ್ಲಿ ಒಂದು; ಬೇರೆ ಬೇರೆ ಸಂಗ್ರಹಗಳಲ್ಲಿಯೂ ಈ ಕಥೆ ಇದೆಯೆನ್ನಿ!
ಈ ಕಥೆಗಿರುವ ಸ್ವಾರಸ್ಯಗಳು ಹಲವು.
ಅಪಾತ್ರರಿಗೆ ನಾನು ಮಾಡುವ ಸಹಾಯವೂ ನಮಗೆ ಅಪಾಯವನ್ನೇ ಉಂಟುಮಾಡಬಹುದು – ಎಂಬುದನ್ನೂ ಇದು ಹೇಳುತ್ತಿದೆ.
ಅಷ್ಟೇ ಅಲ್ಲ, ನಾವು ಯಾವ ಕೆಲಸವನ್ನೇ ಆಗಲಿ, ಅದನ್ನು ಮಾಡುವ ಮೊದಲು ಹಲವು ಸಲ ಯೋಚಿಸಬೇಕು. ‘ನಾನು ಈ ಕೆಲಸವನ್ನು ಮಾಡಿದರೆ ಅದರ ದೆಸೆಯಿಂದ ಏನಾಗುವುದು‘ ಎಂದು ಮನನ ಮಾಡಿ ಆ ಕೆಲಸದಲ್ಲಿ ತೊಡಗಬೇಕು.
ಸಹಾಯ ಮಾಡುವುದು ಒಳ್ಳೆಯದು, ಹೌದು. ಆದರೆ ನಾವು ಯಾರಿಗೆ ಸಹಾಯ ಮಾಡಲು ಹೊರಟಿದ್ದೇವೆಯೋ ಅವರಿಗೆ ನಿಜವಾಗಿಯೂ ಅದರ ಅಗತ್ಯ ಇದೆಯೋ – ಎಂಬುದೂ ವಿಚಾರಾರ್ಹ. ಇಷ್ಟು ಮಾತ್ರವಲ್ಲ, ಅವರು ಈ ಸಹಾಯಕ್ಕೆ ಎಷ್ಟು ಅರ್ಹರು ಎಂಬುದನ್ನೂ ಯೋಚಿಸಬೇಕಾಗುತ್ತದೆ. ದುಷ್ಟರಿಗೆ ಮಾಡುವ ಸಹಾಯ ನಮಗೂ ಸಮಾಜಕ್ಕೂ ಕೇಡನ್ನು ಉಂಟುಮಾಡುತ್ತದೆಯೇ ಹೊರತು ಒಳಿತನ್ನು ಉಂಟುಮಾಡದು.
ನಾವು ಕಲಿತಿರುವ ವಿದ್ಯೆಯೆಲ್ಲವೂ ಒಳಿತನ್ನೇ ಉಂಟುಮಾಡುತ್ತದೆ ಎನ್ನುವಂತೆಯೂ ಇಲ್ಲ; ಸಮಯ–ಸಂದರ್ಭಗಳು ಒಳಿತು–ಕೆಡಕುಗಳನ್ನು ನಿರ್ಧಾರ ಮಾಡುತ್ತವೆ. ಮಕ್ಕಳನ್ನು ಮುದ್ದು ಮಾಡಬೇಕಾದ್ದು ಕರ್ತವ್ಯ. ಆದರೆ ಅವರು ತಪ್ಪುಮಾಡಿದಾಗಲೂ ಅವರನ್ನು ಮುದ್ದು ಮಾಡುವುದು ತಪ್ಪೇ ಆಗುತ್ತದೆ. ಯಾವಾಗ ಅವರನ್ನು ರಮಿಸಿಬೇಕು, ಯಾವಾಗ ಶಿಕ್ಷಿಸಬೇಕು ಎಂಬ ಪರಿಜ್ಞಾನ ನಮಗಿರಬೇಕು.
ಸಂಜೀವನಿಗೆ ಸತ್ತವರನ್ನು ಬದುಕಿಸುವ ವಿದ್ಯೆ ಗೊತ್ತಿತ್ತು. ಆದರೆ ಆ ವಿದ್ಯೆಯನ್ನು ಉಪಯೋಗಿಸುವ ಮೊದಲು ಅವನು ಅದರ ಸಾಧಕ–ಬಾಧಕಗಳನ್ನು ಕುರಿತು ಯೋಚಿಸಲಿಲ್ಲ. ‘ಇವನು ನನಗೆ ಪ್ರಾಣವನ್ನು ಕೊಟ್ಟವನು, ಇವನನ್ನು ಕೊಲ್ಲಬಾರದು’ ಎಂಬ ಅರಿವು ಹುಲಿಗೆ ಮೂಡುವುದಾದರೂ ಹೇಗೆ?
ಹೀಗಾಗಿ ನಾವು ಯಾವುದೇ ಕೆಲಸವನ್ನು ಮಾಡುವ ಮೊದಲು ಅದರ ಫಲಾಫಲಗಳನನ್ನು ಕುರಿತು ಹತ್ತು ದಿಕ್ಕಿನಿಂದ ಯೋಚಿಸುವುದು ಒಳಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.