ADVERTISEMENT

ತವರಿನ ಬಳುವಳಿ

ಸಿ.ಮರಿಜೋಸೆಫ್
Published 21 ಡಿಸೆಂಬರ್ 2019, 19:30 IST
Last Updated 21 ಡಿಸೆಂಬರ್ 2019, 19:30 IST
ಕಲೆ: ನಾಗಲಿಂಗ ಬಡಿಗೇರ್‌
ಕಲೆ: ನಾಗಲಿಂಗ ಬಡಿಗೇರ್‌   

ನಮ್ಮಮ್ಮ ಇಳಿವಯಸ್ಸಿನಲ್ಲಿ ಯಾರಿಗೂ ಹೊರೆಯಾಗದೆ ಯೇಸುಪಾದ ಸೇರಿದರು. ನನಗೂ ಅಕ್ಕಂದಿರಿಗೂ ಬಹುವಾಗಿ ಹೃದಯ ಕಲಕಿದ ದಿನವದು. ಚಿಕ್ಕವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡು ಜಂಜಾಟಗಳ ನಡುವೆಯೂ ಬದುಕನ್ನು ಪ್ರೀತಿಸಿ ಮಕ್ಕಳು ಮೊಮ್ಮಕ್ಕಳ ಮೇಲೆ ವಾತ್ಸಲ್ಯದ ಹೊಳೆ ಹರಿಸಿದಾಕೆಯನ್ನು ಕಳೆದುಕೊಂಡ ಆ ನೋವು ಏನೆಂಬುದು ನಮಗೆ ಮಾತ್ರ ಗೊತ್ತು. ಕೆಲವು ದಿನಗಳಾದ ಮೇಲೆ, ನಾವೆಲ್ಲ ಮತ್ತೆ ಅಮ್ಮನ ಮನೆಯಲ್ಲಿ ಸೇರಿದೆವು. ಹಳೆಯ ಸಂತಸದ ದಿನಗಳನ್ನೆಲ್ಲ ಮೆಲುಕು ಹಾಕುತ್ತಾ ಮನಸಾರೆ ನಕ್ಕೆವು. ಈ ಸಂದರ್ಭದಲ್ಲಿ ಅಮ್ಮನಿಲ್ಲವಲ್ಲಾ ಎಂದು ಉಮ್ಮಳಿಸಿ ದುಃಖಿಸಿದೆವು. ಹೀಗೇ ಮಾತಾಡುತ್ತಾ, ತಾಯಿಯಿಲ್ಲದ ತವರಿಗೆ ಬಂದು ಮಾಡುವುದಾದರೂ ಏನು, ಅಮ್ಮನ ಈ ಮನೆಯನ್ನು ಮಾರಿಬಿಡೋಣ ಎಂಬ ತೀರ್ಮಾನಕ್ಕೆ ಬಂದೆವು. ಅಮ್ಮ ಇರುವವರೆಗೂ ಇದು ಅಮ್ಮನ ಮನೆ. ಈಗ..?

ಮನೆಯೊಳಗಿನ ವಸ್ತುಗಳನ್ನು ಅಮ್ಮನ ನೆನಪಿಗಾಗಿ ಹಂಚಿಕೊಳ್ಳೋಣ ಎಂದುಕೊಂಡೆವು. ಅಮ್ಮನ ಒಂದೊಂದೇ ವಸ್ತುಗಳನ್ನು ನನಗೆ ತನಗೆ ಎಂದು ಒಬ್ಬೊಬ್ಬರೂ ಅಪ್ಯಾಯತೆಯಿಂದ ಎತ್ತಿಟ್ಟುಕೊಳ್ಳುವಾಗ, ಹಳೆಯ ಅದಾವುದೋ ಸಿನಿಮಾದಲ್ಲಿ ಮಕ್ಕಳು ತಮ್ಮ ಅಪ್ಪಅಮ್ಮನ ಆಸ್ತಿಗಾಗಿ ಹೊಡೆದಾಡಿ ಬಡಿದಾಡಿಕೊಂಡ ದೃಶ್ಯ ಕಣ್ಣಮುಂದೆ ಹಾದುಹೋಯಿತು. ಸದ್ಯ, ಇಲ್ಲಿ ಹಾಗೇನೂ ನಡೆಯಲಿಲ್ಲ. ಒಬ್ಬೊಬ್ಬರೂ ತ್ಯಾಗ ಮನೋಭಾವದಿಂದ ಪಾಲಿಗೆ ಬಂದದ್ದೇ ಪಂಚಾಮೃತ ಎಂಬಂತೆ ಒಡವೆಗಳನ್ನು, ಹಳೆಯ ಕಾಲದ ಭಾರೀ ರಾಣಿಮಂಚವನ್ನು, ತೇಗದ ಮೇಜು ಕುರ್ಚಿಗಳನ್ನು ಯಾವುದೇ ಕಿತ್ತಾಟವಿಲ್ಲದೆ ಹಂಚಿಕೊಂಡೆವು. ಮನೆಯಲ್ಲಿ ಅಮ್ಮನ ಆತ್ಮವೇ ಸುಳಿದಾಡುತ್ತಾ, ತನ್ನ ನಾಲ್ಕೂ ಹೆಣ್ಣುಮಕ್ಕಳಿಗೆ ಹಾಗೂ ಮೊಮ್ಮಕ್ಕಳಿಗೆ ತನ್ನೆಲ್ಲ ವಸ್ತುಗಳನ್ನು ಸರಿಸಮನಾಗಿ ಹಂಚುತ್ತಿದೆಯೇನೋ ಎಂಬಂತೆ ಎಲ್ಲವೂ ನಾಜೂಕಾಗಿ ನಡೆದವು.

ಅಮ್ಮನ ಸಂದೂಕದಲ್ಲಿ ಕ್ರಿಸ್ಮಸ್ ಗೊಂಬೆಗಳ ಒಂದು ಪೆಟ್ಟಿಗೆಯಿತ್ತು. ಅಪ್ಪ ಅಮ್ಮ ಮದುವೆಯಾದ ಹೊಸದರಲ್ಲಿ ಆತ್ಮೀಯನಾಗಿದ್ದ ಬಡಗಿಯೊಬ್ಬ ಅದನ್ನು ಕ್ರಿಸ್ಮಸ್ ಕೊಡುಗೆಯಾಗಿ ಕೊಟ್ಟಿದ್ದನಂತೆ. ಆದರೆ ನಮ್ಮೆಲ್ಲರಿಗೂ ದೊಡ್ಡವರಾದ ರೀತಕ್ಕ ಅಂದುಕೊಂಡಿರುವುದೇ ಬೇರೆ. ನಮ್ಮ ರಸ್ತೆಯಲ್ಲೇ ವಾಸವಿದ್ದ ಕತರೀನಮ್ಮನವರು ಒಮ್ಮೆ ಯಾಕೋ ಏನೋ ಮನಸು ಕೆಟ್ಟು ಅದನ್ನು ತಿಪ್ಪೆಗೆ ಬಿಸಾಡುವಾಗ ಅಮ್ಮ ನೋಡಿ ಇಸಕೊಂಡರಂತೆ.

ADVERTISEMENT

ಅಮ್ಮನ ಆ ಕ್ರಿಸ್ಮಸ್ ಗೊಂಬೆಗಳ ಪೆಟ್ಟಿಗೆಯಲ್ಲಿದ್ದದ್ದು ಬೀಟೆಯ ಮರದಲ್ಲಿ ಸರಳ ಸುಂದರವಾಗಿ ಕೆತ್ತಲಾದ ಹುಲ್ಲಿನ ಗೋದಲಿಯ ಮೇಲೆ ಮಲಗಿದ ಯೇಸುಕಂದ, ಮೊಣಕಾಲೂರಿ ಅವನತ್ತ ಅಕ್ಕರೆಯ ನೋಟ ಬೀರಿದ ಜೋಸೆಫ್ ಮತ್ತು ಮರಿಯಾ ಗೊಂಬೆಗಳು ಮಾತ್ರವೇ. ಜೊತೆಗೆ ಒಂದು ಪುಟ್ಟ ಚಾವಣಿ, ಒಂದು ನೆಲಹಾಸು ಮತ್ತು ಅದರ ಸುತ್ತ ಪುಟ್ಟ ಕಟಾಂಜನ ಅಷ್ಟೆ. ಕಟಾಂಜನದ ಮುಂದಿನ ಗೇಟು ತಿರುಗಣಿ ಕಿತ್ತುಹೋಗಿ ಕೆಳಕ್ಕೆ ಜಾರಿತ್ತು.

ಚಿಕ್ಕವಯಸ್ಸಿನಲ್ಲಿ ನಾವೆಲ್ಲ ಕ್ರಿಸ್ಮಸ್ ಬಂದರೆ ನಲಿದಾಡುತ್ತ ಕ್ರಿಸ್ಮಸ್ ಅಲಂಕಾರಗಳನ್ನು ಮಾಡುತ್ತಿದ್ದೆವು. ಅಮ್ಮ ತನ್ನ ಸಂದೂಕದಿಂದ ಹುಷಾರಾಗಿ ತೆಗೆದುಕೊಡುತ್ತಿದ್ದ ಆ ಕೊಟ್ಟಿಗೆಯಲ್ಲಿ ನಾಜೂಕಾಗಿ ಯೇಸುಕಂದನನ್ನು ಎತ್ತಿಡುವಾಗ ನಾವೆಲ್ಲ ಪುಳಕಗೊಳ್ಳುತ್ತಿದ್ದೆವು. ಇದೀಗ ಕ್ರಿಸ್ಮಸ್ ಅಲ್ಲದ ಈ ಸಂದರ್ಭದಲ್ಲಿ ನಾವು ಈ ಪೆಟ್ಟಿಗೆಯನ್ನು ತೆರೆದಾಗ ಇಷ್ಟು ದೊಡ್ಡ ಜಗಳವಾಗುತ್ತದೆಂದು ಅಂದುಕೊಂಡಿರಲೇ ಇಲ್ಲ. ಮೇರಕ್ಕ ತನಗೆ ಈ ಪೆಟ್ಟಿಗೆಯೊಂದೇ ಸಾಕೆಂದೂ ಅಮ್ಮನ ಬೇರಾವ ವಸ್ತುವೂ ಬೇಡವೆಂದು ಖಡಾಖಂಡಿತವಾಗಿ ಹೇಳಿಬಿಟ್ಟರು. ಅಷ್ಟರಲ್ಲಾಗಲೇ ರೋಜಕ್ಕ ಅಮೆರಿಕದಲ್ಲಿದ್ದ ತನ್ನ ಮಗಳ ಜೊತೆ ಫೋನಿನಲ್ಲಿ ಮಾತಾಡುತ್ತಿದ್ದವಳು ತನ್ನ ಕೈಫೋನಿನ ಸ್ಪೀಕರನ್ನು ಎಲ್ಲರಿಗೂ ಕೇಳಿಸುವಂತೆ ಮಾಡಿದಳು. ಅತ್ತಲಿಂದ ಸಹನಾ ಮಾತಾಡುತ್ತಾ ಅಜ್ಜಿ ತಾನು ಸತ್ತ ಮೇಲೆ ಆ ಕ್ರಿಸ್ಮಸ್ ಗೊಂಬೆಗಳ ಪೆಟ್ಟಿಗೆ ತನಗೇ ಸೇರುತ್ತದೆಂದು ಹೇಳಿದ್ದರು ಎಂದು ಅಳುತ್ತಾ ತನ್ನ ಹಕ್ಕು ಮಂಡಿಸಿದಳು.

ಮೇರಕ್ಕ ರೋಜಕ್ಕ ಈಗ ದೊಡ್ಡದಾಗಿ ಕೂಗಾಡುತ್ತಾ ಜಟಾಪಟಿಗೇ ಇಳಿದುಬಿಟ್ಟರು. ಕ್ರಿಸ್ಮಸ್ ಕೊಟ್ಟಿಗೆ ರಾದ್ಧಾಂತವನ್ನೇ ತಂದಿತೇನೋ ಎಂಬಂತೆ ನಾವೆಲ್ಲ ಪೆಚ್ಚಾದೆವು. ಮೇರಕ್ಕ ರೋಜಕ್ಕ ಇಬ್ಬರಲ್ಲಿ ಯಾರೂ ಸೋಲುವಂತೆ ಕಾಣಲಿಲ್ಲ. ಅವರ ಜಗಳದ ಮಾತಿನ ಭರದಲ್ಲಿ ಇಷ್ಟು ವರ್ಷ ಜತನದಿಂದ ಕಾಪಾಡಿಕೊಂಡು ಬಂದ ಕುಟುಂಬದ ಎಷ್ಟೋ ಗುಟ್ಟುಗಳು ಹೊರಬಿದ್ದು ಚೆಲ್ಲಾಡಿದವು. ಸಮಸ್ಯೆ ಬಗೆಹರಿಯುವಂತೆ ಕಾಣದಾದಾಗ ರೋಜಕ್ಕ ತಾವೇ ದನಿ ತಗ್ಗಿಸಿ ತಮ್ಮದೊಂದು ಸಲಹೆ ಮುಂದಿಟ್ಟರು. ಅಮ್ಮ ಸತ್ತು ಇನ್ನೂ ತುಂಬಾ ದಿನ ಆಗಿಲ್ಲ, ಇಷ್ಟು ವರ್ಷ ಅನ್ಯೋನ್ಯವಾಗಿದ್ದ ನಾವು ಇಷ್ಟು ಬೇಗ ನಾಯಿ ಬೆಕ್ಕಿನಂತೆ ಕಿತ್ತಾಡುವುದೇಕೆ ಎಂದರು. ಒಂದು ರೀತಿಯಲ್ಲಿ ನನಗೂ ಆ ಕ್ರಿಸ್ಮಸ್ ಗೊಂಬೆಗಳು ಸಹನಾಗೇ ಸೇರಬೇಕು ಅನಿಸಿತ್ತು. ಆದರೆ ಈಗ ಸಹನಾಳ ಅಮ್ಮ ರೋಜಕ್ಕ ಸುಮ್ಮನಾಗಿದ್ದು ಒಂಥರಾ ಕುತೂಹಲ ಮೂಡಿಸಿತ್ತು.

ರೋಜಕ್ಕ ಮಾತಾಡುತ್ತಾ, ತಮಗೆ ಗೊತ್ತಿರುವ ಮರದ ಆಚಾರಿಯ ಹತ್ತಿರ ಅಂಥದ್ದೇ ಇನ್ನೊಂದು ಸೆಟ್‌ ಕ್ರಿಸ್ಮಸ್ ಗೊಂಬೆಗಳನ್ನು ಮಾಡಿಸೋಣ ಎಂದರು. ತಿಗುಳರಪೇಟೆ ರಾಯಪ್ಪಾಚಾರಿ ಒಳ್ಳೆಯ ಶಿಲ್ಪಿ. ದೇವರ ಮಂಟಪ, ಪೂಜಾಪೀಠ, ಮೇಣದ ಬತ್ತಿಯ ನಿಲುಗಂಬಗಳನ್ನು ಕಲಾತ್ಮಕವಾಗಿ ಮಾಡುತ್ತಿದ್ದ. ರೋಜಕ್ಕ ಅವನ ಬಳಿ ಹೋಗಿ ಕ್ರಿಸ್ಮಸ್ ಕೊಟ್ಟಿಗೆಗಾಗಿ ಮನೆಯಲ್ಲಿ ನಡೆದ ರಾದ್ಧಾಂತವನ್ನೆಲ್ಲ ತಿಳಿಸಿ, ಅಂಥದೇ ಇನ್ನೊಂದನ್ನು ಮಾಡಿಕೊಡಲು ವಿನಂತಿಸಿದರು. ರಾಯಪ್ಪಾಚಾರಿ ಅದನ್ನು ತೂಗಿ, ‘ಈ ಗೊಂಬೆಗಳಿಗೋಸ್ಕರ ಅಷ್ಟೊಂದು ಜಗಳವಾಯ್ತೇ?’ ಎಂದು ಜೋರಾಗಿ ನಕ್ಕ. ‘ಅಯ್ಯೋ ಏನಪ್ಪ ಮಾಡೋದು, ನಮ್ಮಮ್ಮ ಇದನ್ನು ಜೋಪಾನವಾಗಿ ಕಾಪಾಡಿದ್ದಾರೆ, ನಾವೆಲ್ಲ ಈ ಗೊಂಬೆಗಳ ಜೊತೇನೇ ನಮ್ಮೆಲ್ಲ ಕ್ರಿಸ್ಮಸ್ಸುಗಳನ್ನು ಕಳೆದಿರೋದು’ ಎಂದು ಅಲವತ್ತುಕೊಂಡರು ರೋಜಕ್ಕ. ಅವರ ಕಳಕಳಿ ಅರ್ಥ ಮಾಡಿಕೊಂಡ ರಾಯಪ್ಪಾಚಾರಿ, ‘ಸರಿ ಇದನ್ನು ಇಲ್ಲೇ ಬಿಟ್ಟುಹೋಗಿ’ ಎಂದು ಆಶ್ವಾಸನೆ ಕೊಟ್ಟ. ಬಡಗಿಯಿಂದಾದ್ರೂ ಈ ಜಗಳ ಇತ್ಯರ್ಥವಾಗಲಿ ಎಂದುಕೊಂಡ ರೋಜಕ್ಕ ಮನೆಗೆ ಮರಳಿದರು. ಒಂದೆರಡು ದಿನಗಳಾದ ಮೇಲೆ ರಾಯಪ್ಪಾಚಾರಿ ಕ್ರಿಸ್ಮಸ್ ಕೊಟ್ಟಿಗೆ ಸಿದ್ಧವಾಗಿದೆ ಬಂದು ತಗೊಂಡು ಹೋಗಿ ಎಂದು ಫೋನ್ ಮಾಡಿದ. ಎರಡು ಕ್ರಿಸ್ಮಸ್ ಕೊಟ್ಟಿಗೆಗಳು ಅಲ್ಲಿದ್ದವು. ಆ ಕೊಟ್ಟಿಗೆಯ ಮುಂದಿನ ಗೇಟು.. ಅದೇ ತಿರುಗಣಿ ಮುರಿದು ವಾಲಿತ್ತಲ್ಲ ಅದು.. ಎರಡರಲ್ಲೂ ಅದು ವಾಲಿತ್ತು. ಯಾವುದು ಹೊಸದು, ಯಾವುದು ಹಳೆಯದು ಎಂಬುದು ಗೊತ್ತೇ ಆಗುತ್ತಿರಲಿಲ್ಲ. ರೋಜಕ್ಕ ಉದ್ವೇಗದಿಂದ ಕಣ್ತುಂಬಿಕೊಂಡು, ‘ಕ್ರಿಸ್ಮಸ್ ಕೊಟ್ಟಿಗೆಯ ಕಾರಣದಿಂದ ಯಾವುದೇ ಮನೆಯಲ್ಲಿ ಜಗಳ ಬರಬಾರದು ಕಣಪ್ಪ, ತುಂಬಾ ಚೆನ್ನಾಗಿ ಕೆಲಸ ಮಾಡಿದ್ದೀಯ, ಎಷ್ಟಾಯತ್ತಪ್ಪಾ’ ಎಂದರು.

‘ಈ ಕೆಲಸ ಸುರು ಮಾಡ್ದಾಗಿಂದ ನನ್ನ ಮನಸಿನಲ್ಲಿ ಏನೋ ಒಂಥರಾ ನೆಮ್ಮದಿ ಕಣಮ್ಮ’ ಎಂದ ರಾಯಪ್ಪಾಚಾರಿ, ‘ನನಗೆ ಏನೂ ಬೇಡಮ್ಮ, ಈ ಕ್ರಿಸ್ಮಸ್ ಕೊಟ್ಟಿಗೆಯಿಂದ ಒಂದು ಕುಟುಂಬದಲ್ಲಿ ಶಾಂತಿ ಸಮಾಧಾನ ಬರುವುದಾದರೆ ಅಷ್ಟೇ ಸಾಕು’ ಎಂದ. ಎಷ್ಟು ಹೇಳಿದರೂ ದುಡ್ಡು ತೆಗೆದುಕೊಳ್ಳಲೇ ಇಲ್ಲ. ‘ಎಲ್ಲ ಕ್ರಿಸ್ಮಸ್ಸುಗಳಿಗಿಂತ ಈ ಸಲದ ಕ್ರಿಸ್ಮಸ್ ನಿಮಗೆ ತುಂಬಾ ಸಂತೋಷವಾಗಿರಲಿ ಕಣಮ್ಮ’ ಎಂದು ಹಾರೈಸಿದ.

ಎರಡೂ ಕ್ರಿಸ್ಮಸ್ ಕೊಟ್ಟಿಗೆಗಳು ಮನೆಗೆ ಬಂದಾಗ ಎಲ್ಲರಿಗೂ ತುಂಬಾ ಖುಷಿಯಾಯಿತು. ಮೇರಕ್ಕ ರೋಜಕ್ಕನ ಕೈ ಹಿಡಿದುಕೊಂಡು ತನ್ನನ್ನು ಕ್ಷಮಿಸುವಂತೆ ಕೇಳಿಕೊಂಡರು, ಅಲ್ಲದೆ ಹೊಸದಾಗಿ ಮಾಡಿಸಿದ ಕೊಟ್ಟಿಗೆ ತನಗೇ ಇರಲೆಂದೂ, ಸಹನಾಳಿಗೆ ಅಮ್ಮನ ಹಳೆಯ ಕ್ರಿಸ್ಮಸ್ ಕೊಟ್ಟಿಗೆಯನ್ನೇ ಕೊಡಬೇಕೆಂದೂ ಹೇಳಿದರು. ಎರಡು ದಿನಗಳಿಂದ ಸ್ಮಶಾನ ಮೌನ ಆವರಿಸಿದ್ದ ಮನೆಯಲ್ಲಿ ಮತ್ತೆ ಲವಲವಿಕೆಯ ಗಾನ ತೇಲಿಬಂತು.

(Kathy Melia Levine ಅವರ Sharing a Legacy of Love shortಎಂಬ ಇಂಗ್ಲಿಷ್ ಕಥೆಯಿಂದ ಪ್ರೇರಣೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.