ಬೆಳಿಗ್ಗೆಯೇ ಮನೆಯವರ ಶುಗರ್ ಚೆಕ್ ಅಪ್ ಅಂತ ಹಾಸನಕ್ಕೆ ಹೋಗಿದ್ದರಿಂದ ದಿನಚರಿ ತಪ್ಪಿ ಸಂಜೆಗೆ ರಾಶಿ ಕೆಲಸ ಬಾಕಿ ಉಳಿದಿತ್ತು. ಜೊತೆಗೆ ನಿನ್ನೆಯ ಕವನಕ್ಕೆ ಪ್ರತಿಕ್ರಿಯಿಸಲು ಕರೆಮಾಡಿದ ಅಭಿಮಾನಿಯೊಬ್ಬರ ‘ನೀವು ತುಂಬಾ ಚೆನ್ನಾಗಿದೀರಿ, ಕಾಂಪ್ಲೆಕ್ಷನ್ ಚೆನ್ನಾಗಿದೆ’ ಅನ್ನುವ ಅಭಿಮಾನದ ಮಾತುಗಳನ್ನು ಅರ್ಧಕ್ಕೆ ಮುಗಿಸಲು ಕಷ್ಟವಾಗಿ, ಮುಕ್ಕಾಲು ಗಂಟೆಗೆ ಮಾತು ಮುಗಿಸಿದ ಮಹಾನುಭಾವನಿಗೆ ಮನಸಲ್ಲೆ ಥ್ಯಾಂಕ್ಸ್ ಹೇಳಿ, ಕೊಟ್ಟಿಗೆಗೆ ಓಡಿ, ಕರು ಕಟ್ಟಿಹಾಕಿ ಶೆಡ್ ಬಾಗಿಲು ಹಾಕಿ, ಹೊಸಿಲು ತೊಳ್ದು, ದೇವರ ದೀಪ ಹಚ್ಚಿ.... ಸಾಕಾಯ್ತು. ಸುಧಾರಿಸಿಕ್ಕೊಳ್ಳೊಣಾ ಅನ್ನುವಷ್ಟರಲ್ಲಿ, ನಾಳೆ ಊಟಕ್ಕೆ ಕರೆದಿರೊ ಗೆಳತಿಗೆ ರವೆಉಂಡೆ ಮಾಡಿಕೊಂಡು ಬರತೀನಿ ಅಂದಿದ್ದು ನೆನಪಾಗಿ, ಒಂದೇ ಉಸುರಿಗೆ ಬಾದಾಮಿ ಹೆಚ್ಚಲು ತೊಡಗಿದೆ.
ಉಂಡೆಯ ಕೆಲಸಗಳು ಸುಸೂತ್ರ ಮುಗಿದು, ಡಬ್ಬಿಗಳಿಗೆ ಹಾಕಿಟ್ಟು, ಒಂಚೂರು ಮೊಬೈಲು ನೋಡೋಣಾ ಅಂತ ಕುಳಿತವಳಿಗೆ, ನೆಚ್ಚಿನ ಕಥೆಗಾರನ ಕಥೆಯ ಪಿಡಿಎಫ್ ನೋಡಿ, ಖುಷಿಯಾಗಿ, ಸ್ಟಾರ್ ಹಾಕಿಟ್ಟು ಚ್ಯಾಟ್ ಡಿಲೀಟು ಕೊಟ್ಟು, ಕೋಣೆಯ ಆಪ್ತ ಏಕಾಂತದಲ್ಲಿ ಓದಲೆಂದು ಕುಳಿತಾಗಲೇ 'ಕೆಳ್ಳೆ ಊರಿಂದ' ಅಬ್ಬರದ ಸಂಗೀತ ಡಿ.ಜೆ ಕೇಳಿಸಿ ಕಿರಿಕಿರಿ ಅನಿಸ್ತು.
ಏನ್ ಕಾಲನಪ್ಪಾ.
ಹತ್ತು ಮನೆಯಿರೋ ಹಳ್ಳಿಯಲ್ಲೂ ಹೀಗೆ ಮದುವೆ, ನಾಮಕರಣ, ಜಾತ್ರೆ, ತೇರು ಅಂತ ದೂರದ ಊರಿಂದ ಡಿ.ಜೆ ಕರೆಸಿ ಅವರು ಕೇಳಿದಷ್ಟು ಸುರಿದು, ಕುಡಿದು, ಕುಣಿವ ಈ ಸಂಸ್ಕೃತಿ ಅದೆಷ್ಟು ಸರಿ ಅನಿಸುವಾಗಲೇ ನನ್ನ ಯೋಚನೆಗೆ ನನಗೆ ನಗುಬಂತು.
ಮೊನ್ನೆಮೊನ್ನೆಯಿನ್ನೂ ಭಾವನ ಮಗಳ ಆರತಿಗೆ ಇದೇ ಸಂಗೀತದ (?) ಅಬ್ಬರವನ್ನೂ, ಖುಷಿ ಕುಣಿತವನ್ನೂ ರಾತ್ರಿಯೀಡಿ ನೋಡಿದವಳಿಗೆ ಕೆಳ್ಳೆ ಊರಿನಮದುವೆ ದಿನದ ರಾತ್ರಿಯ ಒಂದಷ್ಟು ಮೋಜು -ಮಜಾ ಹಳ್ಳಿಯ ಸಂಸ್ಕೃತಿಯ ಉಳಿವಿನ ಪ್ರಶ್ನೆಯಾಗಿದ್ದು ತಮಾಷೆ ಅನಿಸ್ತು.
ಮೊನ್ನೆ ಪಿರಿಪಿರಿ ಶುರುವಾದ ಪುನರ್ವಸು ಮಳೆಯ ಮುಂಜಾವಿನಲಿ ನಾನು ದೇವರಿಗೆ ಹೂ ತರುವುದಕ್ಕೆ ಅಂತ ಚಳಿಗೆ ಗಡಗುಡುತ ಅಂಗಳಕಿಳಿವುದಕ್ಕೂ, 'ಪುಡ್ಸಾಮಿ' ಓರಣವಾಗಿ ತಲೆಗಿಲೆ ಬಾಚಿ ಠಾಕುಠೀಕಾಗಿ ರೆಡಿಯಾಗಿ ಒಂದು ಪ್ಲಾಸ್ಟಿಕ್ ಕವರನ್ನು ಮುರುಗುಡಿಸುತ ನಮ್ಮನೆ ಗೇಟು ತೆಗೆಯುವುದಕ್ಕೂ ಸರಿಹೋಯ್ತು.
ಯಾರೇ ಗೇಟಿನೊಳಗೆ ಬಂದರೂ ಆಕಾಶ ಭೂಮಿ ಒಂದು ಮಾಡುವ ನನ್ನ ನಾಯಿ 'ಬ್ರೂನೋ' ಏನೋ ಅವನು ಬಾಳಾ ಹಳೆ ಪರಿಚಯದವನಂತೆ ಕಿವಿ ಹಿಂದೆ ಮಾಡಿ ಕಣ್ಣಗಲಿಸಿ ಮೂತಿ ಆಚೀಚೆ ತೋರಿ ಯಾವ ಸಿನಿಮಾ ನಟಿಗೂ ಕಮ್ಮಿ ಇಲ್ಲದ ಹಾಗೆ ವೈಯಾರ ಮಾಡುತ್ತಾ ಅವನ ಪ್ರದಕ್ಷಿಣೆ ಹಾಕುತ್ತಿದ್ದದ್ದು ನೋಡಿ 'ಎಲಾ ಇದರಾ' ಅಂದುಕ್ಕೊಳ್ಳುವಾಗಲೇ
'ಅಮಾರೆ...ಅಣ್ಣಾರು ಇಲ್ವ್ರಾ' ಅಂತ ಅವ ಕೋಲ್ಗೇಟ್ ನಗುವಿನೊಂದಿಗೆ ಕೇಳಿದಾಗ ನಾನು ಕೊಂಚ ಬಿಗುಮಾನದಲ್ಲೇ 'ಇಲ್ಲ, ಸ್ನಾನ ಮಾಡ್ತಿದಾರೆ' ಅಂದೆ.
ಅಚ್ಚುಕಟ್ಟಾಗಿ ಅಂಗಿ ಧರಿಸಿ ಬಂದು ತೆಗೆದ ಬಾಯಿಗೆ ಐನೂರೋ ಸಾವಿರವೋ ಕೇಳೋ ಕೆಳ್ಳೇ ಊರವ್ರನ್ನ ಕಂಡ್ರೆ ಯಾಕೋ ಒಂಥರಾ ಉದಾಸೀನ.
'ನಾಳಿಕೆ ನನ್ನ ಮದ್ವೆ ಅಮಾರೆ. ಖಂಡ್ತಾ ಬರಬೇಕು ನೀವು ಅಣ್ಣಾರೂ ಇಬ್ರೂವೆ' ಅಂತ ಮತ್ತದೇ ಹೂನಗೆಯೊಂದಿಗೆ ಕವರಿನಿಂದ ಮದುವೆ ಆಮಂತ್ರಣ ಪತ್ರಿಕೆ ಕೊಟ್ಟಾಗ ಥತ್ ನನ್ನ ಯೋಚನೆಗಿಷ್ಟು., ಮದುವೆಗೆ ಕರೆಯುವುದಕ್ಕೆ ಬಂದವನನ್ನು ಏನೋ ಅಂದುಕೋಬಿಟ್ನಲ್ಲಾ ಅನಿಸಿ, ಯಾಕೋ ಅವನ ಮುಖ ನೇರ ನೋಡಲಿಕ್ಕೆ ಕಷ್ಟವಾಗಿ' ಆಗಲಪ್ಪಾ ಒಳ್ಳೇದು, ಒಳ್ಳೇದಾಗ್ಲಿ' ಅಂತ ಕಾಗದ ಇಸ್ಕೊಂಡು ನೋಡೋ ಅಷ್ಟರಲ್ಲಿ ಅವನು ತನ್ನ ಕೆಂಪು ಬಣ್ಣದ ಹೊಸ ಸ್ಪ್ಲೆಂಡರ್ ಬೈಕ್ ಸ್ಟಾರ್ಟ್ ಮಾಡ್ತಿದ್ದ.
ಪುಡ್ಸಾಮಿ...
ನಾನು ಮದುವೆಯಾಗಿ ಈ ಮನೆಗೆ ಬಂದಾಗ ಅವರಮ್ಮ ಮಾದೇವಿ ಅರವತ್ತು ದನಗಳಿದ್ದ ನಮ್ಮಮನೆ ಕೊಟ್ಟಿಗೆ ಹಾಕಲಿಕ್ಕೆ ಬರ್ತಿದ್ದಳು. ಜೊತೆಗೆ ಅವಳ ಸೇರು ಪಾವು ಚಟಾಕಿನಂತ ಮೂರು ಗಂಡುಮಕ್ಕಳೂ ಎರಡು ಹೆಣ್ಣೂಗಳೂ.
ಅವರವ್ವ ವಿಶಾಲವಾದ ಕೊಟ್ಟಿಗೆ ಕೆಲಸ ಮುಗಿಸಿ ಬರೋಷ್ಟರಲ್ಲಿ ಕರು ಆಚೆಗೆ ಕಟ್ಟಿಹಾಕುವ, ಬರಲು ತಂದುಕೊಡು,
ಮಂಕರಿ ತಂದುಕೊಡು ಅನ್ನೊ ಅವರವ್ವ ಹೇಳಿದ ಚಿಕ್ಕ ಪುಟ್ಟ ಕೆಲಸ ಮಾಡುತ್ತಲೋ ಇಲ್ಲಾ ಅಲ್ಲೇ ಇದ್ದ ಹಳೇ ಟೈರನ್ನ 'ಡುರ್' ಅಂತ ಉರುಳಾಡಿಸ್ತಲೋ, ದನಕ್ಕೆ ಅಂತ ಇಟ್ಟಿದ್ದ ಕೋಲನ್ನ ಕಾಲು ಸಂದಿ ಇರಿಸಿ ‘ಟ್ರೋಒಯ್’ ಕುದುರೆಗಾಡಿ ಓಡಿಸುತ್ತಲೋ, ರೈಲು ಆಡ್ತಲೋ ಇರ್ತಿದ್ದ ಆ ಐದೂ ಮಕ್ಕಳು ಮಾದೇವಿ ಕೊಟ್ಟಿಗೆ ಮುಗಿಸಿ ಕೈಕಾಲು ತೊಳೆಯೋ ಮೊದಲೇ ನೀರೊಲೆಯ ನಿಗಿ ನಿಗಿ ಕೆಂಡ ಎಳೆದುಕೊಂಡು ನಮ್ಮ ಅತ್ತೆಯ ಕೈ ಕಾಯ್ತಾ ಕೂತಿರುತ್ತಿದ್ದರು. ಅತ್ತೆ ಕೊಟ್ಟದ್ದನ್ನ ಆ ಆರೂ ಮಂದಿ ಒಂದೇ ತಟ್ಟೆಲಿ ತಿನ್ತಾ ಇದ್ದಿದ್ದು ನಾನು 'ಇನ್ನೊಂಚೂರು ಕಾಫಿ ಬೇಕಾ' ಅಂತ ಕಣ್ಣೊಲೇಲಿ ಇರ್ತಿದ್ದ ಬೆಲ್ಲದ ಕಾಫಿಯನ್ನ ಬಸಿಬಸಿದು ಆ ಮಕ್ಕಳಿಗೆ ಕೊಡ್ತಾ ಇದ್ದಿದ್ದು ಎಲ್ಲಾ ಈಗಲೂ ಇಪ್ಪತೈದು ವರ್ಷ ಕಳೆದ ಮೇಲೂ ಇವತ್ತೇ ಅನಿಸುವಷ್ಟು ಹಸಿರಾಗಿದೆ. ಆ ಆರೂ ಮಕ್ಕಳಲ್ಲಿ ಕೊನೆಯವನೇ ಈ ಪುಡ್ಸಾಮಿ. ಮೇಲಿನವು ಎರಡು ಹೆಣ್ಣು. ಮದ್ವೆಗೆ ಅವನು ಬಂದು ಕರೆದದ್ದು ಹಳೆಯ ನೆನಪಿಗೆ ಕಾರಣ ಆಯ್ತು.
ಬೆಳೀತಾ ಬೆಳೀತಾ ಪುಡ್ಸಾಮಿ ಒಳ್ಳೆ ಕಟ್ಟುಮಸ್ತು ಹುಡುಗನಾದ. ವಾರಕ್ಕೆರಡು ದಿನ ಕೂಲಿ ಮಾಡಿದ್ರೆ ಇನ್ನು ನಾಲ್ಕು ದಿನ ಹತ್ತಿರದ ಸಣ್ಣ ಪೇಟೆ ಸುತ್ತೋದು, ಆಟೋ ಓಡಿಸೋದು, ಗೊಬ್ಬರದಂಗಡೀಲಿ ಲೋಡಿಂಗ್ ಮಾಡೋದು, ಕಾಫಿ ಟ್ರೇಡರ್ಸ್ ಹತ್ರ ಅದು ಇದು ಕೆಲಸ ಮಾಡೋದು ಮಾಡ್ತಿದ್ದ. ಮೂರು ದಿನಕ್ಕೆ ಅದೂ ಬೇಸರವಾಗಿ ಕೂಲಿಗೆ ಮರಳಿದರೂ ಮತ್ತದೇ ಪ್ಯಾಟೆ ಆಸೆ ಅವನನ್ನು ಬಿಡ್ತಿರಲಿಲ್ಲ. ಇಂತವನು ಈಗೊಂದೆರಡು ವರ್ಷದಿಂದ ಸಣ್ಣ ಪೇಟೆಯ ಪೆಟ್ರೋಲ್ ಬಂಕ್‌ನಲ್ಲಿ ಕೆಲಸಕ್ಕೆ ಸೇರಿದಾನೆ.
ಹೊಸ ಬೈಕೂ ಖರೀದಿಸಿದ್ದಾನೆ ಅಂತ ತಿಳೀತು. ಕಳೆದ ವಾರ ಫ್ಯೂಯಲ್‌ಗೆ ಅಂತ ಬಂಕಿಗೆ ಹೋದಾಗ ಅವನನ್ನು ಅಲ್ಲಿ ನೋಡಿ 'ಏನೋ ಪುಡ್ಸಾಮಿ ಇಲ್ಲೀ' ಅಂದದ್ದಕ್ಕೆ ಅವನು ಹೆಹೆಹೆ ಅಂತ ನಕ್ಕಿದ್ದನಷ್ಟೆ. ನನ್ನ ವೇಷಭೂಷಣಕ್ಕೂ ನನ್ನ ಭಾಷೆಗೂ ಸಂಬಂಧ ಇಲ್ಲದಂತಾಗಿ ಅಲ್ಲಿದ್ದ ಬೇರೆ ಕಾರಿನವರು ನನ್ನ ಅಡಿಯಿಂದ ಮುಡಿವರೆಗೆ ನೋಡಿದರೂ ನಾನು ಗಮನ ಕೊಡದೆ ಪುಡ್ಸಾಮಿಯನ್ನೇ ನೋಡಿದೆ. ಆರಡಿ ಹುಡುಗನಿಗೆ ಪೆಟ್ರೋಲ್ ಬಂಕಿನ ಈ ಸಮವಸ್ತ್ರ ಬಾಳಾ ಒಪ್ತಿತ್ತು. ಅದೂ ಅಲ್ಲದೇ ಅವನನ್ನು ಒರಿಜಿನಲ್ ಆಗಿ 'ಪುಟ್ಟಸ್ವಾಮಿ' ಅಂತ ಕರೆದರೆ ಅವನು ತಬ್ಬಿಬ್ಬಾಗಿ ಬೇರೆ ಕಡೆ ನೋಡಿ ಗಾಬರಿಯಾಗಿ'ಯೇ...ಸುಮ್ಕೆ ಪುಡ್ಸಾಮಿ ಅನ್ನಿ'ಅಂತಿದ್ದ.
ಅವನ ಬೋಳೆ ಸ್ವಭಾವ ನಂಗೆ ಮೆಚ್ಚುಗೆ ಅನಿಸ್ತಿತ್ತು. ಎಲ್ಲೋ ಒಂದ್ ಕಡೆ ಒಳ್ಳೇದಾಗ್ಲಿ ಅಂತ ಕಾರು ಸ್ಟಾರ್ಟ್ ಮಾಡ್ದೆ.
ಇವತ್ತು ಬೆಳಗಿನಿಂದಲೇ ಕೆಳ್ಳೆ ಊರಲ್ಲಿ ಅಬ್ಬರದ ಗೌಜು. ಈಗೀಗ ಅವರೂ ನಾವು ಮ್ಯಾಲೆ ಊರಿನವರಿಗಿಂತೇನೂ ಕಮ್ಮಿಯಿಲ್ಲ ಅಂತ ತೋರಿಸಿಕೊಳ್ಳೋ ಸಲುವಾಗಿಯಾದ್ರು ಗೌಜು ಮಾಡ್ತಾರೆ. ಪಾಪ. ಮಾಡಲಿ., ಮಾಡಲೇಬೇಕು.
ಅದು ಶತಶತಮಾನಗಳ ನೋವು. ಕಳೆಯೋಕೆ ಇನ್ನೂ ಜನ್ಮಗಳೇ ಬೇಕು. ಅವರು ಹಂಗೆ ಖುಷಿಖುಷಿಯಾಗಿದ್ರೇ ಚಂದ ಅಂದುಕೊಂಡೆ. ಸಣ್ಣ ಪೇಟೆಯ ಅಗ್ಗದ ಕಲ್ಯಾಣ ಮಂಟಪದಲ್ಲಿ ಮದುವೆ ಮುಗಿದು, ನಾಳಿನ ಬೀಗರೂಟಕ್ಕೆ ಮೂರು ಹಂದಿ ಖರೀದಿ ಮಾಡಿ ಅದನ್ನೂ ಗಂಡು ಹೆಣ್ಣು ಬಂದ ಲಾರಿಯಲ್ಲಿಯೇ ಇಟ್ಕೊಂಡು ಊರಿಗೆ ಮರಳಿದಾಗ ಸಂಜೆ ಆರೂವರೆ ಆಗಿರಬಹುದು.
ಈ ಪುಡ್ಸಾಮಿ ಹೆಂಡತಿ ಹೇಗಿರಬಹುದೆಂಬ ಕುತೂಹಲ ನನ್ನ ಆಗಾಗ್ಗೆ ಕಾಡಿ ಮರೆಯಾಗ್ತಿತ್ತು. 'ಥತ್ ಅವನ ಹೆಣ್ಣು, ಹೇಗಿದ್ರೆ ನಂಗೇನೂ' ಅಂತ ಉಂಡೆಗೆ ರವೆ ಹುರಿಯಲು ಕುಳಿತಾಗಲೇ 'ಮೂರೇ ಮೂರು ಪೆಗ್ಗಿಗೆ' ಅಂತ ಆಕಾಶ ತೂತು ಬೀಳೋ ಹಾಗೆ ಮೈಕು ಸೌಂಡು.. ಢಗಾಢಗ್್, ಢಗಾಢಗ್ ಅಂತ ಕೆಳ್ಳೆ ಊರು, ಮ್ಯಾಲೆ ಊರಿನ ಮಂದಿಯ ಹೃದಯವೇ ಕಳಕೊಂಡು ಬೀಳೊ ಹಾಗೆ ಬ್ಯಾಂಡು ಬಡೀತಾ ಇದ್ದದ್ದು ಮೊದಲಿಗೆ ಕಿರಿಕಿರಿ ಅನಿಸಿದ್ರೂ, ಶತಮಾನಗಳಿಂದ ನೋವಲ್ಲೇ ಬದುಕಿದವರು, ಕುಣಿಯಲಿ, ಆಡಲಿ, ಹಾಡಲಿ, ಸಂತೋಷ ಪಡಲಿ ಅನಿಸಿ ಸಣ್ಣದೊಂದು ನಗುವಿನೊಂದಿಗೆ ಮನೆ ಕೆಲಸ ಮುಗಿಸಿ ಕೋಣೆಗೆ ಬಂದಾಗಲೂ ಅವ್ಯಾಹತ ನಡದೇ ಇತ್ತು ಹಿಗ್ಗು ಸುಗ್ಗಿ ಎಲ್ಲಾ.
ಸ್ಟಾರ್ ಹಾಕಿಟ್ಟ ಕಥೆಯನ್ನು ಓದೋದಿಕ್ಕೆ ಆರಂಭ ಮಾಡುವುದಕ್ಕೂ ಕೆಳ್ಳೆ ಊರಿನ ಮ್ಯೂಸಿಕ್ಕು ಗಕ್ಕನೆ ನಿಂತು ಎಷ್ಟಷ್ಟೋ ಧ್ವನಿಗಳು ಒಟ್ಟೊಟ್ಟಿಗೆ ವಿಕಾರವಾಗಿ ವಿಚಿತ್ರವಾಗಿ ಕೂಗಾಡುವುದಕ್ಕೂ ಸರಿಹೋಯ್ತು.!
ಯಾಕೋ ಒಂದು ಕ್ಷಣ ಮೈಮೇಲೆ ಚಳಿಗುಳ್ಳೆದ್ದವು. ಮನಸು ಮುಕ್ಕೋಟಿ ದೇವರಿಗೂ 'ದೇವ್ರೆ, ಏನೂ ಕೆಡುಕು ಆಗದಿರಲಿ' ಅಂತ ಬೇಡಿಕೊಂಡವಳಿಗೆ, ಛೇ ಛೆ. ಒಂಚೂರು ಸಂಭ್ರಮ ಇದ್ದಾಗ ಹುಡುಗ್ರು ಹೀಗೆ ಖುಷಿಗೆ ಕಿರುಚಾಡೋದು ಸಹಜವೇ ಅನ್ನಿಸಿ ನನ್ನ ಮನಸು ಬರೀ ಕೆಟ್ಟದ್ದನ್ನೇ ಯೋಚಿಸುತ್ತೆ ಅಂತ ಅಂದುಕೊಳ್ತಿರುವಾಗಲೇ ಮತ್ತೊಮ್ಮೆ ಒಟ್ಟೊಟ್ಟಿಗೆ ಜನರ ಅರಚಾಟ ಕಿರುಚಾಟ ಚೀತ್ಕಾರಗಳು ಶುರುವಾಗಿ ಅದನ್ನು ಕೇಳಿಸಿಕೊಂಡ ಊರಿನ ಹಿರಿ-ಮರಿ ನಾಯಿಗಳೆಲ್ಲವೂ ಒಂದೇ ಸಮನೆ ಬೊಗಳಲಿಕ್ಕೆ ಶುರು ಹಚ್ಚಿದವು.
ನನ್ನ ಮನೆಯ ನೆರೆಹೊರೆಯ ಗಂಡಸರು 'ಎಂಥಾದ್ಲಾ ಇದು' ಅಂತ ಕಟ್ಟಿಕೊಂಡಿದ್ದನ್ನ ಕ್ಯಾಕರಿಸಿ ಉಗಿದು ಗಂಟಲು ಸರಿಪಡಿಸಿಕೊಂಡು ಬೀಡಿ ಕಚ್ಕೊಂಡು ಹೊಗೆ ಬಿಡ್ತಾ ಇದ್ದದ್ದನ್ನ ನೋಡಿ ನನ್ನ ಬ್ರೂನೋ ಇನ್ನಷ್ಟು ವಿಕಾರವಾಗಿ ಬೊಗಳಲಾರಂಭಿಸಿತು.. ಥೂ ಇವರಾದ್ರೂ ಮನೇಲಿ ಇದ್ದಿದ್ರೆ ಹೋಗಿ ನೋಡಿಬನ್ನಿ ಎನ್ಬಹುದಿತ್ತು. ಇವರಿಗೆ ಇವರ ಖುಷಿಯೇ ಹೆಚ್ಚಾಯ್ತು ಅಂದುಕೊಳ್ತಾ ಬಾಗಿಲು ತೆಗೆಯಲು ಹೆದರಿ ಒಳಗಿಂದಲೆ ಬ್ರೂನೋಗೆ ಹೆದರಿಸಿ ಮಲಗಲು ಹೇಳಿದೆ. ಅಷ್ಟರಲ್ಲಿ ಮ್ಯಾಲೆ ಊರಿನ ರಸ್ತೆಗಳಲ್ಲೂ ಯಾರನ್ನೊ ಅರಚುತ್ತ ಅಟ್ಟಿಸಿಕೊಂಡು ಹೋಗ್ತಿರೋ ಹಾಗೆ ಶಬ್ದವಾಗತೊಡಗಿತು. ಏನಾಯ್ತಪ್ಪ ದೇವರೇ.
ಪುಡ್ಸಾಮಿಗೂ ಅವನ ಹೊಸ ಹೆಣ್ಣಿಗೂ ಅವನ ಕುಟುಂಬಕ್ಕೂ ಏನೂ ಆಗದಿರಲಿ ಅಂತ ಮತ್ತೊಮ್ಮೆ ಮನಸಲ್ಲೇ ಮುಡಿಪಿಟ್ಟೆ.
ಯಾಕೋ ಅವನ ಬಗ್ಗೆ ಆಗಾಗ್ಗೆ ಕೇಳುತ್ತಿದ್ದ ನಾನು ಸುಳ್ಳಿರಬಹುದು ಎಂದುಕೊಂಡಿದ್ದ ಆ ಘಟನೆ ನೆನಪಿಗೆ ಬಂದು ಒಂದು ಕ್ಷಣ...ಒಂದು ಕ್ಷಣ...ಪ್ರೀತಿ, ಪ್ರೇಮದ ಸುಳಿಯೊಳಗೆ ಸಿಲುಕಿ ಆ ಪುಟ್ಟ ವಿಧವೆಯೇನಾದರೂ ಅನಾಹುತ ಮಾಡಕೊಂಡ್ಳಾ ಅನಿಸಿ ಎದೆ ನೋವಿನ ಮುದ್ದೆಯಾಯಿತು. ದೇವರೆ...ಆ ಪುಟ್ಟ ವಿಧವೆಗೂ ಏನೂ ಆಗದಿರಲಿ, ಪುಡ್ಸಾಮಿ ಯಾರಿಗೂ ಅನ್ಯಾಯ ಮಾಡೋ ಹುಡುಗನಲ್ಲ ಅನಿಸಿದರೂ ಒಂದು ಕ್ಷಣ ನಿಶ್ಯಬ್ದವಾಗುತ್ತಿದ್ದ ಊರು ಇದ್ದಕಿದ್ದಂತೆ ಚೀರಾಟದಲ್ಲಿ ಮುಳುಗಿದಾಗ ಏನಾಗ್ತಿರಬಹುದೆಂಬ ದಿಗಿಲು, ಆತಂಕ ಎದೆಯೊಳಗೆ ಜಾಸ್ತಿಯಾಗ್ತಲೇ ಹೋಯ್ತು. ರಾತ್ರಿ ಒಂದರ ಸುಮಾರಿಗೆ ಎಲ್ಲವೂ ತಣ್ಣಗಾದಾಗ ನಾನೂ ಕಂಬಳಿ ಹೊದ್ದು ಕಣ್ಣುಮುಚ್ಚಲು ಯತ್ನಿಸಿದೆ.
ಬೆಳಿಗ್ಗೆ ಬಾಗಿಲು ತೆಗೆಯೋವಾಗಲೇ ಏನೋ ಸುಟ್ಟ ವಾಸನೆ ಮೂಗಿಗೆ ಬಡಿದಂತಾಗಿ ಮುಖ ಕಿವಿಚಿಕ್ಕೊಳ್ಳುವಾಗ ಕೆಳ್ಳೆ ಊರಿನ ಹೂವಿಯೂ, ತೊಂಬತ್ತರ ಮಾರಯ್ಯನೂ ಮನೆ ಅಂಗಳಕ್ಕೆ ಬಂದು ರಂಗೋಲಿ ಹಾಕುತ್ತಿದ್ದ ನನ್ನನ್ನು ನೋಡಿ 'ಅಯ್ಯಾರು ಎದ್ರೇನೇಳಿ?' ಅಂತ ಕೇಳಿದಾಗ ಮಾರಜ್ಜನ ನಾನು ಸುಮ್ಮನೆ ಒಮ್ಮೆ ನೋಡಿದೆ. ಹನ್ನೆರಡು ಚಂದುಳ್ಳಿ ಚೆಲುವೆ ಮಗಳದಿರ ಅಪ್ಪ ಅವ. ಮಕ್ಕಳು ಮೊಮ್ಮಕ್ಕಳು ಮರಿಮಕ್ಕಳೊಂದಿಗಿನ ದೊಡ್ಡ ಕುಟುಂಬದ ಹಿರೀಕ. ಇದ್ದ ಒಂದೇ ಗಂಡು ಸಂತಾನ ತೀರಿಕೊಂಡ ಕಾರಣಕ್ಕೆ ಅಳಿಯಂದಿರದ್ದೇ ಕಾರುಬಾರು. ಅದರಲ್ಲೂ ನಾಕನೇ ಅಳಿಯ ಮಗನಿಗಿಂತಲೂ ಮುತುವರ್ಜಿ ವಹಿಸುವುದರ ಕುರಿತು ಭಾರಿಭಾರಿ ಹೆಮ್ಮೆ. ಈ ಪುಡ್ಸಾಮಿ ಮಾರಜ್ಜನ ಆರನೇ ಮಗಳ ಮಗ.. ಮೊಮ್ಮಗ.
ಹೆಂಗಿದ್ದಿ ಮಾರಜ್ಜ ಅಂತ ಅಜ್ಜನನ್ನು ನೇರ ನೋಡಿದಾಗ ಮತ್ತದೆ ಪುಡ್ಸಾಮಿ ನೆನಪಾದ. 'ಥತ್ ಇವನ್ಯಾಕೋ ನನ್ನ ಚಿತ್ತದಿಂದ ಎತ್ತಂಗಡಿ ಆಗೋ ಹಾಗೆ ಕಾಣ್ತಿಲ್ಲ' ಅನಿಸಿದರೂ ಈ ಚಿತ್ತ ಪ್ರವೃತ್ತಿಯ ಕುರಿತು ಅಚ್ಚರಿ ಅನಿಸ್ತದೆ. ಎರಡೂವರೆ ದಶಕಗಳ ಹಿಂದೆ ಹಟ್ಟಿ ಹಾಕುತ್ತಿದ್ದ ಈ ಪುಟ್ಟ ಹುಡುಗ ನನ್ನ ಮನೋಭೂಮಿಕೆಯೊಳಗೆ ಪದೇಪದೇ ತನ್ನ ಪಾತ್ರ ತೋರಿಸುತ್ತಿರುವ ಕಾರಣವಾದರೂ ಏನು.? ಮುಗ್ಧತೆಯಾ, ಬೋಳೆತನವಾ, ಆರಡಿಯ ಅವನ ಆಳ್ತನವಾ, ಕಟ್ಟುಮಸ್ತಾ ಅಥವಾ ಪುಟ್ಟ ವಿಧವೆಗೆ ಬಾಳು ಕೊಡ್ತಿನಿ ಅಂತ ಅಂದು ಎಲ್ಲರ ವಿರೋಧ ಕಟ್ಟಿಕೊಂಡದ್ದಾ? ಎಲ್ಲವೂ ಒಂಥರಾ ಗೊಂದಲವಾಗಿ ಬೇಡದ ವಿಚಾರಕ್ಕೆ ತೀರ ತಲೆಕೆಡಿಸಿಕ್ಕೊಳ್ಳುತ್ತಿರುವ ನನ್ನ ಬಗ್ಗೆಯೇ ಬೇಸರವಾಗಿ ಮತ್ತೆ ಮಾರಜ್ಜನ ನೋಡಿ 'ಏನ್ ಮಾರಜ್ಜ ನಿನ್ನೆ ಮೊಮ್ಮಗನ ಮದುವೇಲಿ ಬಾರ್ಬಾರಿ ಗಲಾಟೆ ಆಯ್ತಿತ್ತು ಕೆಳ್ಳೆ ಊರಲ್ಲಿ, ಅನ್ನಲು ಬಾಯಿ ತೆರೆದವಳು ಯಾಕೋ ಬೇಡವೆನಿಸಿ 'ಏನ್ ಮಾರಜ್ಜ ಬಂದಿದ್ದು' ಅಂದೆ.
'ಯೇ ..ಅಯ್ಯಾರ ತಾವ್ಲೇ ಮಾತಡಬೇಕಿತ್ರಾಪ.'
ಅಂದವನೇ 'ನಡ್ ರಾತ್ರಿವರೆಗೆ ಈ ಹುಡ್ಳು ಉದ್ಯಾಗ ಬಾರಸಕತಾ ಸುಗ್ಗಿ ಕುಣೀತಾ ಬಾಡೂಟುಕೆಂತ ಇಟ್ಟಿದ ಎಲ್ಡಟ್ಟಿ ಸೌದೆ ಎಲ್ಲಾನೂ ಸುದ್ದಾಂ ಸೂಕ್ತ ಮಾಡಾವೆ. ಅದೆಂತದ 'ಕ್ಯಾಮಪೇರು' ಅಂತೆ. ಹಂದಿ ಕಡ್ದು ಸುದ್ದ ಮಾಡ್ತಾ ಎಣ್ಣೆಂಗಸ್ರು ಸೌದಿಲ್ಲ ಅಂತ ಗೊಡಗಡ್ತಾ ಅವೆ. ಅದಕೆ ತ್ವಾಟದಾಗೆ ಒಂದ್ಗಾಡಿ ಸೌದಿ ಇದ್ರೆ ಇಸ್ಕನ್ ಹೋಗಾಮ ಅಂತ ಬಂದೆ ಕನಿ.ಇದ್ದವ್ರಾ.?'
ಅಂದ ಮಾರಜ್ಜನ ಮುಖವನ್ನು ಕಡು ಅಚ್ಚರಿಯೆಂಬಂತೆ ಮತ್ತೊಮ್ಮೆ ನೋಡಿದೆ. ಹಾಗಾದರೆ, ಹಾಗಾದರೆ ...
ರಾತ್ರಿ, ನಡುರಾತ್ರಿವರೆಗೆ ಹಾಗೆ ಅಕರಾಳ ವಿಕರಾಳ ಕಿರುಚಾಡಿದ್ದು'ಕ್ಯಾಂಪ್ ಫೈರ್ ' ಮಾಡಿಕೊಂಡಾ.! ಪುಡ್ಸಾಮಿಯ ಹೊಸ ಹೆಂಡತಿ, ಹಳೆ ಗೆಳತಿ ಕುರಿತು ನಾ ಏನೇನೋ ಊಹಿಸಿದ್ದು ಭ್ರಮೆಯಾ.? ಮೇಲೆ ಊರಿನ ರಸ್ತೆಗಳಲೆಲ್ಲಾ ನಡುರಾತ್ರಿವರೆಗೆ ಕಿರುಚಾಡಿ ಓಡಿದ್ದಾದರೂ ಯಾಕೆ.? ಭರ್ತಿ ಎರಡಟ್ಟಿ ಸೌದೆನಾ ಕ್ಯಾಂಪ್ ಪೈರನ್ನಲ್ಲಿ ಸುಡಲಿಕ್ಕೆ ಸಾಧ್ಯವಾ.? ಊರಲೆಲ್ಲಾ ಹರಡಿರುವ ಈ ಸುಟ್ಟ ವಾಸನೆಯಾದರೂ ಯಾವುದರದು.? ಮಾರಜ್ಜ ಏನೋ ಮುಚ್ಚಿಡತಿರಬಹುದಾ.? ಏನದು..? ನೂರಾರು ಪ್ರಶ್ನೆಗಳು ನನ್ನೊಳಗೆ ಹುಟ್ಟಿ ಉತ್ತರ ಕಂಡುಕೊಳ್ಳಲಾಗದ ಅಸಹಾಯಕತೆಯಲ್ಲಿ ನಾ ಪರದಾಡುವಾಗ, ಹೂವಿ 'ಅಗಾಳ್ ಅಜ್ಜ. ಆಕಡಿ ಮಕ್ಕ್ ಬಂದ್ರು ಅಯ್ಯಾರು, ನಡ್ ನಡಿ ಕೇಳಿಯಂತೆ' ಎನ್ನುತ್ತಾ ಮನೆಯ ಹಿಂಬದಿಗೆ ನಡೆದರು.
......
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.