ಗೇಣುದ್ದದ ಕಣಿಗಿಲೆ ಕವೆಯ ತುದಿಗಳೆರಡನ್ನೂ ಒಂದೊಂದು ಕೈಯ್ಯಲಿಡಿದು ತೋಟದಗಲಕೂ ಸುತ್ತಾಡಿದ ವಿರುಪಣ್ಣ. ಅದೊಂದೆಡೆ ಒಂದೆರಡು ಸಾರ್ತಿ ಹಿಂದಕ್ಕೂ ಮುಂದಕ್ಕೂ ಜಗ್ಗಾಕಿ, ಕೈಯ್ಯಲ್ಲಿದ್ದ ಕವೆ ಮೆಲ್ಲನೆ ಮಿಸುಕಾಡುತ್ತಲೇ, ‘ಇಲ್ಲೊಂದು ಲಾಳ ಐತೆ, ಆದ್ರೆ ಆಗ್ಲಿಂದಾ ಯಪ್ಪೆಸ್ಸೊಡಿತಾಯ್ತೆ’ ಅಂತ ಅನ್ನುತ್ತಾ ಒಂದು ಚಣ ನಿಂತಲ್ಲೇ ನಿಂತು, ಮರು ಚಣ ಹಿಮ್ಮುಖವಾಗಿ ಒಂದೆರಡು ಹೆಜ್ಜೆಯಿಟ್ಟು, ಅಲ್ಲಿ ಬಲಕ್ಕೊರಳಿ, ಒಂಚೂರು ಅತತಾ ನಡೆಯಲು ಕವೆಯ ಬಿರುವು ರವಷ್ಟು ದೀಡಾಗಿ, ‘ಇಲ್ನೋಡಪ್ಪ, ನಿನ್ ತ್ವಾಟ್ಕೆಲ್ಲಾ ಎರ್ಚಾಡೋವಷ್ಟು ನೀರೈತೆ’ ಅಂತ ಅಂದವನೇ ಕವೆ ಕಡ್ಡಿಯನ್ನು ಕೆಳಕ್ಕಾಕಿ,‘ತತಾ ಇಲ್ಲಿ ಅದುನ್ನ’ ಅಂತ ನಿಂಗ್ರಾಜನ ಕೈಯ್ಯಲಿದ್ದ, ಸುಲಿದ ತೆಂಗಿನಕಾಯನ್ನು ಇಸುಕಂಡು ಕಣ್ಣಿಗೊತ್ತಿಕೊಂಡ. ನಂತರ ಅದನ್ನು ಬಲ ಅಂಗೈಯ್ಯಲ್ಲಿ ಜುಟ್ಟನ್ನು ಮುಮ್ಮೊಗಮಾಡಿ ಮಲಗಿಸಿಕೊಂಡು, ಒಂದೆರಡು ಹೆಜ್ಜೆ ಹಾಕಿದ.
ಕಾಯಿ ಕೊಂಚ ಉಲ್ಟಾಡಿ, ನಂತರ ಮೆಲ್ಲಗೆ ಜುಟ್ಟು ಮೇಲ್ಮಾಡಿಕೊಂಡು ನಿಲ್ಲುತ್ತಲೇ ವಿರುಪಣ್ಣ ಅದನ್ನು ತಿರುಗಿ ನಿಂಗ್ರಾಜನ ಕೈಗಿಟ್ಟು, ಬಗ್ಗಿ ಅಲ್ಲೊಂದಷ್ಟು ಮಣ್ಣನ್ನು ಬಗೆಮಾಡಿ, ಅದರೊಳಕ್ಕೆ ಪಕ್ಕದಲ್ಲಿದ್ದ ಕೂಳೆಗಲ್ಲೊಂದನ್ನು ಗುರುತಿಗಾಗಿ ಕೂರಿಸಿ, ‘ಇದೊಂದು ಜಾಗ್ದಲಿ ಬಿಟ್ರೆ ತಮಾಮ್ ತ್ವಾಟದೊಳಗೆ ಎಲ್ಲೂ ಒಂದನಿ ನೀರಿಲ್ಲ’ ಎನ್ನುತ್ತಾ ನಿಂಗ್ರಾಜನತ್ತ ನೋಡಿದ. ನಿಂಗ್ರಾಜ ಅಲ್ಲಿಂದ ಮಾರು ದೂರದಲ್ಲಿದ್ದ, ನಿನ್ನೆಯಷ್ಟೇ ಜಿಯಾಲಜಿಸ್ಟ್ ಮಾಡಿದ್ದ ಪಾಯಿಂಟಿನ ಗುರುತಿಗಾಗಿ ನೆಟ್ಟಿದ್ದ ಕಡ್ಡಿಯನ್ನು ದಿಟ್ಟಿಸುತ್ತಿದ್ದ. ಮಾಗಿ ಕಾಲದ ಮುಗಿಲು ಬೆಳಗಿನಿಂದ ಗೂಡ್ರಾಕಿಕೊಂಡಿತ್ತು. ಅವರಿಬ್ಬರ ಹಿಂದಿದ್ದ ಹಾಲುವಾಣದ ಗುಜ್ಜಿನ ಮೇಲೆ ಗುಚ್ಚಕ್ಕಿಗಳೆರಡು ಕಚ್ಚಾಟಕ್ಕಿಳಿದಿದ್ದವು.
2
ಹತ್ತಾರು ವರ್ಷಗಳಿಂದ ಬತ್ತದಂಗೆ ಓಡುತ್ತಿದ್ದ ಬೋರು ನಿಂತು ಮೂರು ತಿಂಗಳ ಮೇಲಾಗಿತ್ತು. ಅಲ್ಲಿಂದೀಚೆಗೆ ನಿಂಗ್ರಾಜ ಕೊರೆಸಿದ್ದ ಎರಡು ಬೋರುಗಳಲ್ಲಿ ನೀರು ಬರೋದಿರಲಿ, ಒಂಚೂರು ಪಸಿಮೆಯೂ ಕಾಣಿಸಿಕೊಂಡಿರಲಿಲ್ಲ. ಒಂದನ್ನು ‘ಪಾಯಿಂಟ್ ದೇವರು’ ಮಾಡಿತ್ತು. ಮತ್ತೊಂದನ್ನು ಚಿಕ್ರಾಮಯ್ಯ ಅಂಬೋನು ಮಾಡಿದ್ದ. ‘ಇನ್ನು ಈ ಬೋರಿನ ಸವಾಸ ಸಾಕು, ಎಲ್ರಿಗೂ ಆಗಿದ್ದು ನಂಗೂ ಆಗುತ್ತೆ’ ಅಂದುಕೊಂಡುಬಿಟ್ಟಿದ್ದ ನಿಂಗ್ರಾಜ. ಆದರದು ಬಲು ದಿನ ಬಾಳಿಕೆ ಬರಲಿಲ್ಲ. ಯಾವಾಗ ಪೈರಿಗೆ ಬಂದಿದ್ದ ಅಡಕೆ, ತೆಂಗಿನ ಮರಗಳು ಮುಖ ಇಳಿಬಿಟ್ಟವೋ, ನಿಂಗ್ರಾಜನ ಜೀವ ಧಸಕ್ಕೆಂದಿತ್ತು. ಕುಂತರೂ ನಿಂತರೂ ತೋಟವೇ ಕಣ್ಮುಂದೆ ಬಂದು ಕುಕ್ಕತೊಡಗಿತ್ತು.
ಹಂಗಾಗಿ, ನಿಂಗ್ರಾಜ ಮತ್ತೊಂದು ಬೋರ್‌ವೆಲ್ ಕೊರೆಸುವ ತೀರ್ಮಾನಕ್ಕೆ ಬಂದಿದ್ದ. ಆದರೆ ಮೊದಲಿನವರನ್ನು ಬಿಟ್ಟು ಮತ್ಯಾರ ಕೈಯ್ಯಿಂದ ಪಾಯಿಂಟು ಮಾಡಿಸಬೇಕು ಎಂಬ ಗೊಂದಲದಲ್ಲಿ ಒಂದಷ್ಟು ದಿನ ತಳ್ಳಿದ್ದ. ಯಾವಾಗ ತೋಟ ದಿನದಿಂದ ದಿನಕ್ಕೆ ಕುಗ್ಗತೊಡಗಿತೋ ಅನ್ಯ ದಾರಿಯಿಲ್ಲದೆ ಜಿಯಾಲಜಿಸ್ಟ್‌ನನ್ನೂ ಕಡ್ಡಿ ಪಾಯಿಂಟು ಮಾಡುವವನನ್ನೂ ತಲಾಷು ಮಾಡಿದ್ದ. ಒಬ್ಬರಿಗಿಂತ ಇಬ್ಬರು ಲೇಸು ಅನ್ನುವುದು ಅವನ ಲೆಕ್ಕಾಚಾರವಾಗಿತ್ತು. ಒಂದು ಪಕ್ಷ ಅವರಿಬ್ಬರ ಪಾಯಿಂಟುಗಳು ಒಂದೆಡೆಗೇ ಬಂದರೆ, ಬಿಲ್ಕುಲ್ ಅಲ್ಲಿಗೇ ಕೊರಸಿಬಿಡೋದು ಅಂತಾನೂ ತೀರ್ಮಾನಿಸಿಕೊಂಡಿದ್ದ. ಆದರೆ ಇಬ್ಬರ ಪಾಯಿಂಟುಗಳು ಬೇರೆ ಬೇರೆಯಾಗಿದ್ದರಿಂದ, ಆವುಗಳಲ್ಲಿ ಯಾವುದಕ್ಕೆ ಲಾರಿ ನಿಲ್ಲಿಸಬೇಕು ಅನ್ನುವುದಕ್ಕೆ ತಲೆಕೆಡಿಸಿಕೊಂಡಿದ್ದ. ಆಗ ನಿಂಗ್ರಾಜನ ಅವ್ವ ಸಿದ್ರಾಜಮ್ಮ ದೇವರ ಅಪ್ಪಣೆಯ ಮೊರೆಹೋಗಿದ್ದಳು. ಅದಕ್ಕೆ ನಿಂಗ್ರಾಜ ಮತ್ತವನ ಹೆಂಡತಿ ನಾಗವೇಣಿಯೂ ತಲೆಯಾಡಿಸಿದ್ದರು.
3
ಸದ್ಯಕ್ಕೆ ಸಿಕ್ಕಿದ್ದ ಎರಡೂ ನೀರಿನ ಸೆಲೆಗಳು ತೋಟದ ಮೂಲೆಯಲ್ಲಿದ್ದ ಕಲ್ಲುಬಾವಿಯ ಪಕ್ಕದಲ್ಲಿದ್ದವು. ಹೀಗಿರುವಾಗ, ಲಾರಿ ನಾಳೆ ಬರುತ್ತೆ ಅನ್ನುವಾಗ ಅಚಾನಕ್ಕಾಗಿ ನಡೆದ ಘಟನೆಯೊಂದು ನಿಂಗ್ರಾಜನನ್ನು ಹಣ್ಗಾಯಿ ನೀರ್ಗಾಯಿ ಮಾಡಿತ್ತು. ಆವರೆಗೂ ಒಂಚೂರೂ ಅಲುಗಾಡದಿದ್ದ ಬಾವಿಯ ಆ ಬದಿಯ ಕಲ್ಲುಗಳು ಅವತ್ತು ಇದ್ದಕ್ಕಿದ್ದಂತೆ ದಡದಲ್ಲಿದ್ದ ತೇಗದ ಮರವನ್ನೂ ಕೆಡವಿಕೊಂಡು ಪೂರಾ ತಳಕ್ಕೆ ಜರುಗಿಬಿಟ್ಟಿದ್ದವು. ಅವುಗಳೊಂದಿಗೆ ಮಣ್ಣೂ ಕುಸಿದು ಬಾವಿಯನ್ನು ತಟಾಯ್ದು ಅತ್ತ ಹೋಗದಂತೆ ದಾರಿಯನ್ನೇ ಬಂದುಮಾಡಿಬಿಟ್ಟಿದ್ದವು. ಲಾರಿ ಅಲ್ಲಾಸಿಯೇ ಪಾಯಿಂಟುಗಳಿದ್ದ ಜಾಗಕ್ಕೆ ಹೋಗಬೇಕಿದ್ದರಿಂದ ನಿಂಗ್ರಾಜ ಚಿಂತೆಗೀಡಾಗಿದ್ದ.
ಸಂಜೆ ಜಾಗ ನೋಡಲು ಬಂದಿದ್ದ ಲಾರಿಯ ಯಜಮಾನ ಷಣ್ಮುಗಂ ಅದನ್ನು ನೋಡುತ್ತಲೇ ತಲೆಯಳ್ಳಾಡಿಸಿಬಿಟ್ಟಿದ್ದ. ಈಗ ಬಿಟ್ಟರೆ ಲಾರಿಗೆ ಮತ್ಯಾವಾಗ ಸಿಗುತ್ತೋ, ಅಷ್ಟೊತ್ತಿಗೆ ತೋಟದ ಗತಿ ಏನಾಗುತ್ತೋ, ಅನ್ನುವ ಆತಂಕದಿಂದ ನಿಂಗ್ರಾಜ ಮತ್ತೊಂದು ಪಾಯಿಂಟು ಮಾಡಿಸಲೇಬೇಕಾದ ಇಕ್ಕಟ್ಟಿಗೆ ಸಿಲುಕಿದ್ದ. ಹಂಗಾಗಿ, ಮತ್ತೆ ವಿರುಪಣ್ಣನತ್ತ ದೌಡಾಕಿದ್ದ. ‘ಅಯ್ಯೋ ಅದ್ಕೆ ಯಾಕಿಂಗೆ ಆಕಾಶಾನೇ ಮ್ಯಾಲೆ ಬಿದ್ದಾನಂಗೆ ಆಡ್ತೀಯ, ಇನ್ನೊಂದ ಹುಡುಕಿದ್ರಾಯ್ತು ಬಿಡು’ ಅಂತ ವಿರುಪಣ್ಣ ಆ ಚಣವೇ ನಿಂಗ್ರಾಜನೊಂದಿಗೆ ಹೊರಟುಬಂದಿದ್ದ. ನಿಂಗ್ರಾಜ, ‘ಅಲ್ಲಿ ಬಿಟ್ರೆ ತ್ವಾಟದಾಗೆಲ್ಲೂ ಒಂದು ತೊಟ್ಟು ನೀರಿಲ್ಲ ಅಂದಿದ್ದ. ಈ ಮನುಷ್ಯ ಈಗ ಹಿಂಗಂತಾವ್ನಲ್ಲ’ ಅನ್ನುವ ತಾಕಲಾಟಕ್ಕೆ ಬಿದ್ದು, ವಿರುಪಣ್ಣನೊಂದಿಗೆ ಮನೆ ಸೇರಿಕೊಂಡಾಗ ಕತ್ತಲಾಗಿತ್ತು.
ನಿಂಗ್ರಾಜ ಕರೆಯುತ್ತಿದ್ದಂತೆ ವಿರುಪಣ್ಣ ಸಡನ್ನಾಗಿ ನಿಂತ ನಿಲುವಲ್ಲೇ ಹೊರಡಲು ಕಾರಣವಿತ್ತು. ಅದು ವಿರುಪಣ್ಣನಿಗೆ ಫಾಯಿದೆಯ ಕಸುಬಾಗಿತ್ತು. ವಿರುಪಣ್ಣ ಕವೆ ಕಡ್ಡಿ ಹಿಡಿಯುವುದನ್ನು ತನ್ನೂರಿನ ಬೀರಜ್ಜನಿಂದ ಕಲಿತಿದ್ದ. ಆಗ ಅವನಿನ್ನೂ ಪ್ರಾಯದ ಹುಡುಗನಾಗಿದ್ದ. ಕಡ್ಡಿ ಬೀರಜ್ಜನ ಕೈಲಾಡಿದಂತೆ ಅವನ ಕೈಯ್ಯಲ್ಲೂ ಯಾವಾಗ ಆಡತೊಡಗಿತೋ, ತನ್ನಲ್ಲೂ ಅಂಥಾದ್ದೇನೋ ವಿಶೇಷವಿದೆ ಅಂತ ಅವನನ್ನು ನಂಬಿಸಿತ್ತು. ಹೀಗೆ ಕವೆ ಕಡ್ಡಿಯೊಂದಿಗೆ ಪಳಗುತ್ತಿದ್ದ ವಿರುಪಣ್ಣನನ್ನು ತೆಳ್ಳಗೆ ಬಳ್ಳಗೆ ಅವರಿವರು ಕರೆಯತೊಡಗಿದ್ದರು. ಅವನು ತೋರಿದೆಡೆಯಲ್ಲಿ ನೀರು ಸಿಕ್ಕುತ್ತಿದ್ದರಿಂದ ಅವನ ಕೈಗುಣದ ಬಗ್ಗೆಯೂ ಜನರಿಗೆ ನಂಬಿಕೆ ಬಂದಿತ್ತು. ಮೊದಮೊದಲು, ಅಷ್ಟೇ ಕೊಡಿ ಇಷ್ಟೇ ಕೊಡಿ ಅನ್ನದೆ ಅವರು ಕೊಟ್ಟಷ್ಟು ಇಸುಕೊಳ್ಳುತ್ತಿದ್ದ. ಕ್ರಮೇಣ ಒಂದು ಪಾಯಿಂಟಿಗಿಷ್ಟು ಅಂತ ನಿಗಧಿ ಮಾಡಿದ್ದ. ಯಾವಾಗ ಕೈಗೆ ಬಂದಿದ್ದ ಇದ್ದೊಬ್ಬ ಮಗನೂ ಅಪಘಾತದಲ್ಲಿ ತೀರಿಕೊಂಡನೋ, ಅಂಗೈಯಗಲ ಹೊಲವನ್ನೂ ಆಸ್ಪತ್ರೆಯ ಖರ್ಚು ನುಂಗಾಕಿಕೊಂಡಿತೋ, ಆವಾಗಿನಿಂದ ಅದು ವಿರುಪಣ್ಣನ ಅನುಗಾಲದ ಕಸುಬಾಗಿಹೋಗಿತ್ತು.
4
ಬೆಳಕರಿಯೋ ಮುಂಚೇನೇ ಎದ್ದು ಕೂತಿದ್ದ ವಿರುಪಣ್ಣ, ‘ಮೊನ್ನೆ ದಿಸ ಕೊಟ್ಟಿದ್ದ ತೆಂಗಿನ ಕಾಯ್ನ ವಸಿ ತಗಂಬಾ’ ಅಂತೇಳಿ ತರಿಸಿಕೊಂಡು, ಕವೆ ಕಡ್ಡಿಯನ್ನು ಹಿಡುಕಂಡು, ಬೆಳಕರಿಯುವುದನ್ನೇ ಕಾಯುತ್ತಿದ್ದ. ನಿಂಗ್ರಾಜ ಕೊಟ್ಟಿಗೆಯೊಳಗಿಂದ ಸೀಮೆ ಹಸುವನ್ನು ಆಚೆ ಕಟ್ಟಿ, ಹಾಲು ಕರೆಯುವ ಹೊತ್ತಿಗಾಗಲೇ ಬೆಳಕಾಗತೊಡಗಿತ್ತು. ತೋಟದೊಳಗಿನ ಒಂಟಿ ಮನೆಯೆದುರಿಗಿದ್ದ ಮೆದೆಯ ಮೇಲೆ ಕರಿ ಬೆಕ್ಕೊಂದು ಕತ್ತಲನ್ನು ಮುಕ್ಕುತ್ತಾ, ದಿಟಗೊಳ್ಳುತ್ತಿದ್ದ ಸೂರ್ಯನಿಗೆ ಮೈಯ್ಯೊಡ್ಡಿ ಬಿಸಿಲು ಕಾಸಿಕೊಳ್ಳಲು ಕಾದು ಕೂತಿತ್ತು. ಸೂರ್ಯನ ಎಳೆಯ ಬೆಳಕು ಅಂಗಳದಲ್ಲಿದ್ದ ಕರಿಬೇವಿನ ಮರದ ಎಲೆಗಳಿಂದ ತೊಟ್ಟಿಕ್ಕುತ್ತಿದ್ದ ಇಬ್ಬನಿಯ ಹನಿಗಳನ್ನು ಮಿನುಗಿಸುತ್ತಾ, ಜಗಲಿಯ ಮೇಲಿದ್ದ ಹಾಲಿನ ಚಂಬನ್ನು ಫಳಾರಿಸುತ್ತಿತ್ತು.
ಇಬ್ಬನಿಗೆ ತೊಯ್ದು ತೊಪ್ಪೆಯಾಗಿದ್ದ ಚಡಾವನ್ನು ಮೆಟ್ಟಿಕೊಂಡು, ಬಗಲ ಚೀಲವನ್ನು ನೇತಾಕಿಕೊಂಡು, ಕವೆ ಕಡ್ಡಿಯೊಂದಿಗೆ ವಿರುಪಣ್ಣ ಅವತ್ತಿನಂತೆ ತೋಟದೊಳಕ್ಕಿಳಿದ. ಹಲವು ಸಲ ಸುತ್ತೇ ಸುತ್ತಿದ. ಕೈಲ್ಲಿದ್ದ ಕವೆ ತಿರುಗೋದಿರಲಿ, ಒಂಚೂರೂ ಮಿಸುಕಾಡಲಿಲ್ಲ. ಮತ್ತೆ ಮತ್ತೆ ನಡೆದಲ್ಲೇ ನಡೆದ, ಹಿಡಿದಲ್ಲೇ ಹಿಡಿದ. ಅದು ಜಪ್ಪಯ್ಯ ಅನ್ನದಿದ್ದಾಗ, ‘ಇಲ್ಲಿ ನಿಜಕ್ಕೂ ನೀರಿಲ್ವಾ,ಅಥವಾ ನಂಗೇ ಪಿಗ್ಗಿ ಬೀಳುಸ್ತೈತಾ’ ಅನ್ನುವ ಅನುಮಾನಕ್ಕೊಳಗಾದ. ಹಂಗನಿಸುತ್ತಲೇ ಆ ಕವೆಯನ್ನು ಬಿಸಾಕಿ, ಮತ್ತೊಂದು ಕವೆಯನ್ನು ಮುರುಕಂಡು, ಮತ್ತೆ ಸುತ್ತಿದ. ಆಗಲೂ ಕವೆ ಕಮಕ್‍ಕಿಮಕ್ ಅನ್ನಲಿಲ್ಲ. ವಿರುಪಣ್ಣನಿಗೆ ಒಳಗೆಲ್ಲೋ ಸೋಲಿನ ಅನುಭವಾಗತೊಡಗಿತು. ಆದರನ್ನು ಬಡಪಟ್ಟಿಗೆ ಒಪ್ಪಿಕೊಳ್ಳಲು ವಿರುಪಣ್ಣ ತಯಾರಿರಲಿಲ್ಲ. ಇಳುಗಾಲದಲ್ಲಿ ಈ ಕಸುಬೂ ತನ್ನನ್ನ ಅನಾಥನನ್ನಾಗಿಸಿಬಿಟ್ಟರೆ, ಕೈ ಗುಣ ಕೈ ಕೊಟ್ಟರೆ ಯಾರೂ ಮೂಸುವುದಿಲ್ಲ ಅನ್ನುವ ಆತಂಕ ವಿರುಪಣ್ಣನನ್ನು ಕಂಗೆಡಿಸತೊಡಗಿತು. ಜೊತೆಗೆ, ನಿಂಗ್ರಾಜ ಯಾವುದೇ ಕಾರಣಕ್ಕೂ ಬೋರನ್ನು ಕೊರಸದೆ ಬಿಡಲ್ಲ ಅನ್ನೋದು ಗೊತ್ತಿತ್ತು. ಹಂಗಾಗಿ, ‘ನಿಲ್ಲಿ ಸುತ್ರಾಂ ನೀರಿಲ್ವೇ ಇಲ್ಲಾ ಅಂದು, ಮತ್ಯಾವನೋ ಬಂದು ತೋರಾಕಿಬಿಟ್ರೆ’ ಅನ್ನುವ ದಿಗಿಲು ಅವನೊಳಗಿನ ಒಂಚೂರು ಹುರುಪನ್ನೂ ಹುರಿದಾಕಿತು.
ಮೆಟ್ಟಿದ್ದ ಚಡಾವನ್ನು ಬಿಟ್ಟು, ಒಂದರೆ ಗಳಿಗೆ ಕಣ್ಮುಚ್ಚಿ ನಿಂತು ಮಂದೇವರನ್ನು ನೆನೆದ. ಕಣ್ಬಿಟ್ಟವನಿಗೆ ಆವರೆವಿಗೂ ಕಣ್ಣಿಗೆ ಬೀಳದಿದ್ದ ಬೇಲಿಯೊಳಗಿನ ಮೊಳದುದ್ದದ ಮೂಗುತ್ತವೊಂದು ಕಾಣುತ್ತಲೇ ಕಳೆಗುಂದಿದ್ದ ಮುಖ ಲಳೇವಾಗಿ ಸೀದಾ ಅದರತ್ತ ಧಾವಿಸಿದ. ವಿರುಪಣ್ಣನ ಸದ್ಯದ ನಡೆ ನಿಂಗ್ರಾಜನಿಗೆ ವಿಚಿತ್ರವಾಗಿ ಕಾಣತೊಡಗಿತು.‘ಇದೊಂದು ಜಾಗ್ದಲಿ ಬಿಟ್ರೆ...’ ವಿರುಪಣ್ಣನ ಮೊನ್ನೆಯ ಮಾತುಗಳು ಗುಯ್ಗುಡಹತ್ತಿದ್ದವು. ಅಲ್ಲಿಯೂ ವಿರುಪಣ್ಣ ಅಂದುಕೊಂಡಂತೆ ಆಗಲಿಲ್ಲ. ಕಾಟಾಚಾರಕ್ಕೆ ಅನ್ನುವಂತೆ, ಕವೆ ಒಂಚೂರು ಕೊಸರಾಡಿ, ಮಿಕ್ಕದನ್ನು ವಿರುಪಣ್ಣನ ಕೈಚಳಕಕ್ಕೆ ಒಪ್ಪಿಸಿತು. ಮರು ಚಣವೇ ಕವೆ ಮೆಲ್ಲನೆ ಒಂದು ಸುತ್ತಾಕಿತು. ಆಮೇಲೆ ಎರಡು, ಮೂರು, ಮತ್ತೆಚ್ಲಿ ಅನ್ನುವಂತೆ ತಿರುಗತೊಡಗಿತು. ‘ಇಗಾ ನೋಡಿಲ್ಲಿ ಸಿಕ್ತು, ಇದ್ರು ಮುಂದೆ ಅದೇನೂ ಅಲ್ಲ’ ಅಂತನ್ನುವಾಗ ವಿರುಪಣ್ಣನ ಎದೆಯೊಳಗೆ ಚಳುಕಾಡಿದಂತಾಯ್ತು. ಆ ಅಳುಕಿಲ್ಲೇ ಅವನು ಹುತ್ತಕ್ಕೆ ಶರಣು ಮಾಡಿಕೊಳ್ಳಲೆಂದು ಬಾಗಿದ. ಆಗವನ ಚೀಲದೊಳಗಿದ್ದ ಕಾಯಿ ಪುಸಕ್ಕನೆ ಆಚೆ ಬಿತ್ತು. ಅದನ್ನು ಚಕ್ಕನೆತ್ತಿಕೊಂಡು ಮತ್ತೆ ಬ್ಯಾಗಿಗಾಕಿಕೊಳ್ಳುತ್ತಿದ್ದಾಗ. ‘ಆಗಿದ್ದಾಗ್ಲಿ ಕೊರ್ಸಾದೇ, ಹಣೇಬರ ಇದ್ದಂಗಾಗ್ಲಿ’ ಅಂತ ಅಂದುಕೊಳ್ಳುತ್ತಾ ನಿಂಗ್ರಾಜ ನೆತ್ತಿಗೇರುತ್ತಿದ್ದ ಸೂರ್ಯನನ್ನೇ ದಿಟ್ಟಿಸುಟ್ಟಿದ್ದ.
5
ಬೆಳಗ್ಗೇನೇ ಬರಬೇಕಾಗಿದ್ದ ಲಾರಿ ಸಂಜೆಗೆ ಬಂದು, ಕೊರೆಯಲಣಿಯಾಗುವ ಹೊತ್ತಿಗೆ ಊಟದ ಹೊತ್ತೂ ಮೀರಿತ್ತು. ಮಿಂಚುಳಗಳು ಕತ್ತಲೆದೆಯಲ್ಲಿ ಪುಟಾಣಿ ಹಣತೆಗಳಂತೆ ಎಲ್ಲೆಲ್ಲೂ ಪುಳುಗುಡುತ್ತಿದ್ದವು. ಕೊರೆಯಲು ಶುರುವಾಗುತ್ತಿದ್ದಂತೆ ಅದರ ಸದ್ದಿಗೆ ನಿದ್ದೆಯ ಮತ್ತಿನಲ್ಲಿದ್ದ ಹಕ್ಕಿಗಳೆಲ್ಲಾ ಒಮ್ಮೆಗೇ ಕೂಗಾಕುತ್ತಾ, ದಿಕ್ಕೆಟ್ಟು ದಿಕ್ಕು ದಿಕ್ಕಾಪಾಲಾಗತೊಡಗಿದವು. ಲಾರಿಯವರು ಮಾಡಿದ್ದ ಅಡಿಗೆಯ ಘಮಲು ಮೂಗು ಕಚ್ಚುತ್ತಿತ್ತು.
ನಿಂಗ್ರಾಜ ತಲೆಗೊಂದು ವಲ್ಲಿಯನ್ನು ಸುತ್ತಿಕೊಂಡು, ಕೂತಲ್ಲಿ ಕೂರಲಾಗದೆ, ನಿಂತಲ್ಲಿ ನಿಲಲಾಗದೆ ಚಡಪಡಿಸುತ್ತಿದ್ದ. ವಿರುಪಣ್ಣ ಕೊರೆಯುವುದನ್ನೇ ಚಣ ಹೊತ್ತು ದಿಟ್ಟಿಸಿ, ನಂತರ ಅಲ್ಲೇ ಹತ್ತಿರದಲ್ಲಿದ್ದ ತೆಂಗಿನ ಸಸಿಯ ಬುಡದಲ್ಲಿ ಉಟ್ಟಿದ್ದ ಲುಂಗಿಯನ್ನೇ ಹೊದ್ದು, ಕುಂತಲ್ಲೇ ತೂಕಡಿಸುತ್ತಿದ್ದ. ನಿಂಗ್ರಾಜನ ಹೆಂಡತಿ ಮತ್ತೆ ಅವ್ವ ಕೊಂಚ ದೂರದಿಂದ ಲಾರಿಯನ್ನೇ ದಿಟ್ಟಿಸುತ್ತಿದ್ದರು. ಆಗಾಗ ಕೊಡುತ್ತಿದ್ದ ಗಾಳಿಗೆ ಕೇಸಿಂಗ್ ಪೈಪಿನೊಳಗಿಂದ ಧೂಳು ಬಗ್ಗನೇಳುತ್ತಾ ಸಿಕ್ಕ ಸಿಕ್ಕವುಗಳ ಮೇಲೆಲ್ಲಾ ವಕ್ಕರಿಸಿಕೊಳ್ಳುತ್ತಿತ್ತು.
ಮುನ್ನೂರು ಅಡಿ ನೋಡಿದರೂ ಧೂಳು ತೇಲಲಿಲ್ಲ. ನಿಂಗ್ರಾಜ ಕಂಗಾಲಾದ. ಕರೇವಿನ ಹಸುಗಳನ್ನು ಮಾರಿದ್ದ, ಒಡವೆಗಳನ್ನು ಅಡವಿಟ್ಟು ಹೊಂದಿಸಿಕೊಂಡಿದ್ದರಲ್ಲಿ ಅಬ್ಬಬ್ಬಾ ಅಂದರೆ ಐನೂರು ಅಡಿಗಳವರೆಗೆ ದೇಗಬಹುದಿತ್ತು. ಆಗಲೂ ನೀರು ಬೀಳದಿದ್ದರೆ ಏನಪ್ಪಾ ಗತಿ ಅಂತ ನಿಂಗ್ರಾಜ ನಡುಗಿಹೋದ. ಗಂಡನ ಸಂಕಟ ನಾಗವೇಣಿಗೂ ತಾಕಿ,‘ಇಷ್ಟೇ ಆಗೈತೆ ನೋಡಾನ ತಡಿ’ ಅಂದಳು. ಹಂಗೇನಾದ್ರೂ ಆದರೆ ಇನ್ನೊಂದು ಹಸೂನೂ ಮಾರಾಕೋದು ಅನ್ನುವುದವಳ ನಿರ್ಧಾರವಾಗಿತ್ತು. ಹೆಂಡತಿಯ ಮಾತುಗಳನ್ನು ಕಿವಿಗಾಕಿಕೊಂಡು ಅಲ್ಲಿಂದ ವಿರುಪಣ್ಣನ ಹತ್ತಿರ ಹೋಗಿ ತೂಕಡಿಸುತ್ತಿದ್ದವನನ್ನು ಏಳಿಸಿದ.
‘ಎಷ್ಟಾಗೈತೆ, ಏನಾರ ನೀರು ಕಾಣಿಸ್ಕಣ್ತ’ ಎದ್ದವನೇ ವಟಗುಟ್ಟಿದ. ನಿಂಗ್ರಾಜ ಕೈ ಸನ್ನೆಯಲ್ಲಿ ಇಲ್ಲ ಅಂದ. ‘ಎಲ್ಲಿಗೋಗುತ್ತೆ ಬೀಳ್ದೆಯಾ, ಬಿದ್ದೇ ಬೀಳುತ್ತೆ’ ಅಂತ ಅನ್ನುತ್ತಾ ಸೀದಾ ಲಾರಿಯ ಹತ್ತಿರಕ್ಕೋಗಿ, ಒಂದು ಗಳಿಗೆ ಲಾರಿಯನ್ನು ಬಂದುಮಾಡಿಸಿ, ಮತ್ತೊಮ್ಮೆ ಪೂಜೆಯ ಶಾಸ್ತ್ರ ಮುಗಿಸಿ, ತಿರುಗಿ ಮಲಗಿದ್ದಲ್ಲಿಗೆ ನಡೆವಾಗ, ವಿರುಪಣ್ಣ ತನ್ನ ಕಸುಬಿನಲ್ಲಿ ಓನಂಪ್ರಥಮಕ್ಕೆ ಇನ್ನಿಲ್ಲದ ದಿಗಿಲಿಗೊಳಗಾಗಿದ್ದ. ಇದ್ದದ್ದನ್ನ ಇದ್ದಂಗೆ ಹೇಳಿಬಿಡಬೇಕಿತ್ತು ಅನಿಸತೊಡಗಿ ಸಂಕಟಕ್ಕೊಳಗಾದ. ನಿಂಗ್ರಾಜನ ಅವ್ವ ಸಿದ್ರಾಜಮ್ಮ,‘ಭಗವಂತಾ ಬಡುವುರ್ನ ಸ್ವಲ್ಪ ನೋಡಪ್ಪಾ’ ಅಂತ ಬೇಡಿಕೊಳ್ಳುತ್ತಿದ್ದಳು. ಅವ್ವನ ಸಂಕಟ ನಿಂಗ್ರಾಜನಿಗೂ ತಟಾಯ್ದು, ‘ಐನೂರು ಅಡಿಗೂ ನೀರು ಬೀಳ್ಲುಲ್ಲ ಅಂದ್ರೆ ನಿಲ್ಲಿಸಿಬಿಡು’ ಅಂತ ಗೆಳೆಯ ಅಲ್ಕೂರನಿಗೆ ಹೇಳಿದವನೇ, ಅಲ್ಲಿ ನಿಲ್ಲಲಾಗದೆ ಸೀದಾ ಕರೆಂಟು ರೂಮಿನತ್ತ ನಡೆದು ಅದರ ಗೋಡೆಗೊರಗಿದ. ಹತ್ತಿಕ್ಕಲಾಗದ ಸಂಕಟಕ್ಕೋ, ಎಲ್ಲಾ ಕಳಕಂಡು ಬೀದಿಗೆ ಬೀಳುವ ಭೀತಿಗೋ, ನಿನ್ನೆ ಇರುಳಿಡೀ ಕಣ್ಣುಮುಚ್ಚದ್ದಕ್ಕೋ ನಿಂಗ್ರಾಜನನ್ನು ನಿದ್ದೆ ತನ್ನ ಸುಪರ್ದಿಗಾಕಿಕೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.