ಆನೆಕೆರೆ ಬಸದಿ ಹೊಕ್ಕ ಸಂದೇಶನಿಗೆ ಇಡೀ ಬಸದಿಯೆಲ್ಲಾ ಯಾವತ್ತಿಗಿಂತಲೂ ಚೆಂದ ವಾಗಿ, ಮಾದಕವಾಗಿ ಕಾಣಲು ಶುರುವಾಗಿತು. ಚಳಿಗಾಲದ ಸಂಜೆಯಲ್ಲೂ ತುಸು ಮಂಜಿನಿಂದ ತುಂಬಿಕೊಂಡು, ಆ ಮಂಜಿಗೆ, ದೋಸೆಗೆ ಚಟ್ನಿಯಂತೆ ಮೆತ್ತಿಕೊಂಡ ಹಾಗೆ ಎಳೆಬಿಸಿಲು ತಾಗಿ ಸುಮನೋಹರವಾಗಿ ಕಾಣುತ್ತಿದ್ದುದು ಈ ಚಳಿಗಾಲದಲ್ಲಿ ಅಪರೂಪ ಅಲ್ಲದಿದ್ದರೂ ಇವತ್ಯಾಕೋ ಇಡೀ ಆನೆಕೆರೆಯ ತಾವರೆಯೆಲ್ಲಾ ಯಾವತ್ತಿಗಿಂತಲೂ ಕೆಂಪಾಗಿ ಅರಳಿಕೊಳ್ಳುತ್ತಾ ಸುಂದರವಾಗಿ ಕಂಡಿತು ಸಂದೇಶನಿಗೆ.
ಸಂದೇಶ ಮೊದಲು ಇಲ್ಲಿಗೆ ಬರುವ ಹಕ್ಕಿಗಳ ಚಿತ್ರಗಳನ್ನು ತನ್ನ ಅಂತರಂಗದ ಕ್ಯಾಮರಾದೊಳಗೆ ಸೆರೆಯಾಗಿಸಿ ಆಮೇಲೆ ಬಗಲಿಗಿದ್ದ ಪುಟ್ಟ ಕ್ಯಾಮೆರಾದ ಲೆನ್ಸನ್ನು ಸರಿದೂಗಿಸಿ ಹಕ್ಕಿಗಳ ಚಿತ್ರ ಸೆರೆಹಿಡಿಯುತ್ತಿದ್ದ. ಕಳೆದೇಹೋದ ತನ್ನತನವನ್ನು ಈ ಆನೆಕೆರೆಯ ಸಮ್ಮುಖದಲ್ಲಿ ಹುಡುಕಾಡಿಕೊಳ್ಳಬೇಕು ಎಂದು ಮತ್ತೆ ಮತ್ತೆ ಆನೆಕೆರೆ ಬಸದಿಗೆ ಬರೋದು, ಫೋಟೊ ಹೊಡೆಯುತ್ತಾ ಅನೂಹ್ಯವಾದ ಏನನ್ನೋ ತನ್ನೊಳಗೆ ಕಂಡುಕೊಂಡು ಹೋಗೋದು ಇವನ್ನೆಲ್ಲಾ ಮಾಡುತ್ತಲೇ ಇದ್ದ ಸಂದೇಶ.
ಮೊದಲೇ ಇಲ್ಲಿ ಒಂದು ನರಪಿಳ್ಳೆಯೂ ಆ ಸಾಯಂಕಾಲ ಬಸದಿಗೆ ಕಾಲಿಡುದಿಲ್ಲ. ಬಸದಿಯ ತೀರ್ಥಂಕರರನ್ನು ಪೂಜೆ ಮಾಡೋ ಇಂದ್ರರಿಗೆ ಬಸದಿ ನೆನಪಾಗೋದು ಬೆಳಗ್ಗೆ 8 ಗಂಟೆಯ ಮೇಲಷ್ಟೇ, ಆಮೇಲೆ ಅವರು ಬರುವುದು ನಾಳೆ ಮತ್ತೆ 8 ಗಂಟೆಯ ಮೇಲೆ. ಅಲ್ಲಿಯವರೆಗೆ ಹಕ್ಕಿಗಳನ್ನು ಹೊರತುಪಡಿಸಿ ಬೇರ‍್ಯಾರೂ ಈ ಬಸದಿಗೆ ಬರುತ್ತಿರಲಿಲ್ಲವಾದ್ದರಿಂದ ಇದು ತಾನೇ ಕಟ್ಟಿದ ರಾಜಧಾನಿಯಂತೆ ಕಂಡು, ಲೋಕದ ಬಂಧನಗಳಿಂದ ಅರೆಕ್ಷಣವಾದರೂ ಮುಕ್ತನಾಗಲು ಇದೇ ಪ್ರಶಸ್ತ ಸ್ಥಳ ಅಂತೆನ್ನಿಸಿ ಸಂದೇಶನ ಕಣ್ಣು ಅದೆಷ್ಟು ಸಲ ಬೆರಗಾಗಿದೆ ಎನ್ನುವುದನ್ನು ಆ ಬಸದಿಯ ಗಂಟೆಯೇ ಹೇಳಬೇಕು. ಆದರೆ ಇವತ್ತು ಬಸದಿ ಹೊಕ್ಕುತ್ತಿದ್ದಂತೆಯೇ ಎಲ್ಲಿಂದಲೋ ತೇಲಿಕೊಂಡು ಬಂದ ಗಾಢವಾದ ಸುಗಂಧವನ್ನು ಅವನು ಇಷ್ಟು ದಿನ ಈ ಬಸದಿಯ ಹಿನ್ನೆಲೆಯಲ್ಲಿ ಆಸ್ವಾದಿಸಿದವನೇ ಅಲ್ಲ. ಒಂದು ದಿವ್ಯ ಸುಗಂಧ ಅವನ ಮೂಗನ್ನು ಪೂಸಿ ಹೋದಾಗ ಸಂದೇಶನ ನರನಾಡಿಗಳಲ್ಲಿ ಅದುವರೆಗೆ ಇರದೇ ಇದ್ದ ಹೊಸ ರೋಮಾಂಚನವೊಂದು ಸ್ಫುರಿಸತೊಡಗಿತು.
ಇಬ್ಬನಿ ಸುರಿದ ಹುಲ್ಲುಹಾಸಿನ ಮೇಲೆ ಹೆಜ್ಜೆ ಇಡುತ್ತಾ ಹೋಗುತ್ತಿದಂತೆಯೇ ಆ ಗಾಢ ಪರಿಮಳ ಅವನೊಳಗೇ ಮತ್ತೂ ಮತ್ತೂ ಸಮೃದ್ದವಾಯ್ತು. ಆನೆಕೆರೆಯಲ್ಲಿ ಪ್ರತೀ ಸಂಜೆಯಲ್ಲೂ ಉಂಟಾಗುವ ಪರಿಮಳ, ವಾಸನೆ, ಶಬ್ದ, ಸ್ಪರ್ಶ, ಅಲುಗಾಟ ಇವೆಲ್ಲದ್ದರ ಪರಿಚಯ ಸಂದೇಶನಿಗೆ ತನಗಿಂತಲೂ ಜಾಸ್ತಿ ಇತ್ತು. ಯಾವುದೇ ಹೊಸ ವಾಸನೆಗಳು, ಶಬ್ದಗಳು, ಅಲುಗಾಟಗಳು ಉಂಟಾದರೂ ಆತನಿಗೆ ತಕ್ಷಣ ಗೊತ್ತಾಗುತ್ತಿತ್ತು. ಈಗ ತನ್ನೊಳಗೆ ಜಾರುತ್ತಿರುವ ಈ ದಿವ್ಯ ಸುಗಂಧ ಯಾವುದು? ಅಂತ ಪ್ರಶ್ನಿಸುತ್ತಲೇ ಹೋಗುತ್ತಿದ್ದ ಸಂದೇಶನಿಗೆ ಏನೊಂದೂ ಅಷ್ಟು ಸುಲಭವಾಗಿ ದಕ್ಕಲಿಲ್ಲ. ಚಿಕ್ಕಂದಿನಿಂದಲೂ ಸಂದೇಶನಿಗೆ ಪರಿಮಳಗಳ ಬಗ್ಗೆ ಅದೇನೋ ಅಪಾರ ಹುಮ್ಮಸ್ಸು. ವಾಸನೆ ಗಳೂ ಕೂಡ ನನ್ನೊಳಗೆ ಏನೋ ಒಂದನ್ನು ಉತ್ತೇಜಿಸುತ್ತವೆ, ಬಾಲ್ಯವನ್ನು, ಯೌವನದ ಕನಸುಗಳನ್ನು ಮರುಸೃಷ್ಟಿಸುತ್ತವೆ ಅಂತ ಗಾಢವಾಗಿ ನಂಬಿದ್ದ ಸಂದೇಶನಿಗೆ ವಾಸನೆಗಳನ್ನು ತನ್ನ ಕ್ಯಾಮೆರಾದೊಳಗೆ ಹೇಗೆ ಸೆರೆಹಿಡಿಯಲಿ ಅನ್ನುವ ಪ್ರಶ್ನೆಗಳು ಕಾಡಿದ್ದಿದೆ. ಕ್ಯಾಮೆರಾ ಸಾಯ್ಲಿ ಆಚೆ, ಈ ಪರಿಮಳದ ಬಗ್ಗೆ ಏನನ್ನಾದರೂ ಸ್ಟಡೀ ಮಾಡಬೇಕು ಅಂದುಕೊಳ್ಳುತ್ತಾ ಸಂದೇಶ ಮಾರ್ಕೆಟ್ಟಿನ ನೂರಾರು ಮೀನಿನ ಪರಿಮಳದಲ್ಲಿ, ಸೆಂಟಿನರಗಿಣಿಯರ ಸುಗಂಧಮಯ ಸಾಮ್ರಾಜ್ಯದಲ್ಲಿ, ದೇವಸ್ಥಾನದ ಧೂಪ ದೀಪ, ಹೋಮ, ಹೂವು, ವಿಭೂತಿ ಇವೆಲ್ಲಾ ಪರಿಮಳಗಳ ಸರಣಿ ಪಂದ್ಯದಲ್ಲಿ ಆಟವಾಡಿದ್ದಾನೆ. ಆದರೆ ಈಗ ತನ್ನನ್ನು ಕಾಡುತ್ತಿರುವ ಈ ಪರಿಮಳ ಯಾವುದು? ಅಂತ ಸಂದೇಶ ತೀರ್ಥಂಕರರ ಬಸದಿಯ ಪ್ರಾಂಗಣದಲ್ಲಿ ಸುತ್ತು ಹೊಡೆಯುತ್ತಲೇ ಕೇಳುತ್ತಾ ಹೋದ. ಅದು ಬೇರೆಯವರಿಗೆ ಅಂತಹ ಗಾಢವಾದ ಪರಿಮಳವಲ್ಲದಿದ್ದರೂ ಏನೋ ಒಂದು ಹೊಸ ತಾಜಾತನ ಸಂದೇಶನ ಮೂಗಿನ ಆಳಕ್ಕೆ ಹೊಕ್ಕಿಬಿಟ್ಟಿತ್ತು. ಅವನ ತಾರುಣ್ಯ ತುಂಬಿದ ಮೀಸೆಗಳಲ್ಲೂ, ನೆರೆತ ಗಡ್ಡದ ಸಂದಿನಲ್ಲಿಯೂ ಆ ಪರಿಮಳ ತಾಕುತ್ತಿತು, ಮತ್ತು ಅಷ್ಟೇ ಫಕ್ಕನೇ ಗಾಳಿಯಲ್ಲಿ ಕರಗಿಹೋಗಿ ಮತ್ತೆ ಹಿಂದಿನ ವರಾತ ಶುರು ಮಾಡುತ್ತಿತ್ತು.
ಸಂದೇಶ ಬಸದಿಯ ಮೆಟ್ಟಿಲಲ್ಲಿ ಕೂತು ತನ್ನ ನೆನಪಿನಕೋಶದಲ್ಲಿ ಜತನವಾಗಿ ಬೇರುಬಿಟ್ಟಿದ್ದ ಸಾವಿರಾರು ಪರಿಮಳಗಳ ಪಟ್ಟಿಯನ್ನು ಈಗ ಹಬ್ಬಿಕೊಂಡಿರುವ ಪರಿಮಳದ ಜೊತೆ ಹೋಲಿಕೆ ಮಾಡುತ್ತಾ ಹೋದ. ಈ ಪರಿಮಳ ಅಷ್ಟು ಸುಲಭಕ್ಕೆ ದಕ್ಕುವುದಿಲ್ಲ ಎಂಬುದು ಸಂದೇಶನಿಗೆ ಗೊತ್ತಾದರೂ ಇದು ತನ್ನ ಪಾಲಿಗೆ ಬರೀ ಪರಿಮಳ ವಲ್ಲ, ತನ್ನೊಳಗಿನ ಒಂದು ಭಾಗ ಅನ್ನಿಸಿದ್ದರಿಂದ ಆತ ಆ ಆಘ್ರಾಣಿಕೆಯಲ್ಲಿ ಪೂರ್ತಿಯಾಗಿ ಕಳೆದೇ ಹೋಗಿಬಿಟ್ಟ. ನಡೆಯುತ್ತಾ ಹೋದರೆ ಎಲ್ಲವೂ ನೆನಪಾಗುತ್ತದೆ ಅಂತಲೂ, ಪರಿಮಳ ದಕ್ಕುವ ಹೆಜ್ಜೆಗಳಲ್ಲಿ ಮತ್ತೂ ಲೀನವಾಗಿ ಹೋದ.
ಪರಿಮಳಗಳಿಗೂ ನಮ್ಮ ಮನಸ್ಸನ್ನು ನಿಯಂತ್ರಿಸುವ, ನಮ್ಮೊಳಗಿನ ಅಪರಿಚಿತ ಲೋಕವನ್ನು ಪರಿಚಿತ ಮಾಡುವ ಶಕ್ತಿ ಇದೆ ಎಂದು ಸೈಕಾಲಜಿಯಲ್ಲಿ ಸ್ಮೆಲ್‌ಗಳ ಬಗ್ಗೆ ವಿಶೇಷ ಅನುಭೂತಿಯನ್ನು ತನ್ನೊಳಗೆ ತಂದುಕೊಂಡೇ ಸಂದೇಶ ಓದಿದ್ದ. ಒಂದು ನೆನಪಿನೊಂದಿಗೆ ಪರಿಮಳವೂ ಇರುತ್ತದೆ, ಪರಿಮಳವೊಂದು ಮೂಡಿದಾಗ ಆ ಪರಿಮಳ, ಹಿಂದೆ ಅನುಭವಿಸಿದ್ದ ಕ್ಷಣವನ್ನು, ಸ್ಥಳವನ್ನು ಕಣ್ಣ ಮುಂದೆ ತರುತ್ತದೆ ಎನ್ನುವುದನ್ನು ಸಂದೇಶ ಗಾಢವಾಗಿ ನಂಬಿದ್ದ. ಯೋಚಿಸುತ್ತಾ ಹೋದವನ ಮನಸ್ಸು ಥಟ್ಟನೇ ಪಲ್ಲವಿ ಪಲ್ಲವಿ ಎಂದು ಗುನುಗತೊಡಗಿ ಉತ್ತೇಜಿತವಾಯ್ತು, ಮತ್ತೆ ಆ ಪರಿಮಳವನ್ನು ಯಾವುದೋ ತಾದ್ಯಾತ್ಮದಲ್ಲಿ ಧೇನಿಸತೊಡಗಿದ. ಅವನ ಮನಸ್ಸು, ಕಣ್ಣು ಖಚಿತವಾದಂತೆ ಕುಲುಕಿತು. ಪಲ್ಲವಿ! ಮತ್ತೆ ತನ್ನಷ್ಟಕ್ಕೆ ಹೇಳಿ ಅಲ್ಲಿಂದ ಎದ್ದು ಇಡೀ ಬಸದಿಗೆ ಪ್ರದಕ್ಷಿಣೆ ಹಾಕುತ್ತಾ ಹೋದ. ಪರಿಮಳಗಳು ತಿಳಿಯಾಗಿ ಅವನ ಮೂಗನ್ನು ಮತ್ತೆ ಮತ್ತೆ ಸಲುಹಿದವು. ಹೌದು, ಪಲ್ಲವಿಯದೇ ಪರಿಮಳ.
ಸಂದೇಶ ಕಾಮನಬಿಲ್ಲೊಂದರ ಬಣ್ಣವಾಗಿ ಹೋದ. ತನ್ನ ಇಡೀ ಬಾಳನ್ನು ಹೊನಲ ದೀಪದಂತೆ ಪೊರೆಯೋ ಸಹಚಾರಿಣಿಯಾದ ಪಲ್ಲವಿ ಸಂದೇಶನ ಆತ್ಮದೇಗುಲದಲ್ಲಿ ಆರಾಧ್ಯದೇವಿಯಾಗಿದ್ದಳು. ಅವಳಿಗೂ ಇವನು ಬಿರುಬಿಸಿಲಲ್ಲೂ ಮಳೆಹೊಯ್ಯುವ ಚೆಲುವನಾಗಿದ್ದ. ಆದರೂ ಅವಳಿದ್ದದ್ದು ಮಹಾ ನಗರದಲ್ಲಿ, ಅಲ್ಲಿನ ಜೀವನಶೈಲಿ, ಯಾರದ್ದೋ ತುಂಟನಗೆ, ಇವ್ಯಾವುದೋ ಹುಂಬಾಟಿಕೆ, ಯಾರೂ ನನ್ನ ನೋಡುತ್ತಿಲ್ಲ ಅನ್ನುವ ಭದ್ರತೆಗಳ ನಡುವೆ ಅವಳು ಪಲ್ಲವಿಯೇ ಆಗಿರದೇ ಬೇರೆಯೇ ಆಗಿಹೋಗಿದ್ದಾಳಾ ಅನ್ನುವ ಭಯವೊಂದು ಸಂದೇಶನನ್ನು ಆಗಾಗ ಬೆನ್ನಟ್ಟುತ್ತಿತ್ತು. ಆದರೂ ಅವನು ಅವಳ ಹೆಸರಲ್ಲಿ ನೆಮ್ಮದಿ ಹುಡುಕುತ್ತಿದ್ದ. ಅವಳು ಊರಿನಿಂದ ಬಂದು ಕೆಲ ಕಾಲ ಊರಲ್ಲೇ ಇದ್ದು ಮರಳಿ ಮಹಾನಗರದ ಬಸ್ಸು ಹಿಡಿಯೋ ಮೊದಲು ಇದೇ ಬಸದಿಯಲ್ಲಿ ಕೊಂಚ ಕೂತು, ಏನನ್ನೋ ಕಂಡುಕೊಂಡು ಭಾರದ ಹೆಜ್ಜೆಯಲ್ಲೋ, ಮತ್ತೆ ಇಲ್ಲಿ ಬರೋದೇ ಇಲ್ಲ ಅಂತ ತಾನೇ ಸಾರುತ್ತಲೋ ಮಹಾನಗರದ ಬಸ್ಸು ಹಿಡಿದು ಹೋಗುತ್ತಿದ್ದಳು. ಇದೇ ವೇಳೆಯಲ್ಲಿ ಆಕೆ ಸಂದೇಶನಿಗೆ ಸಿಕ್ಕಿ ಎಷ್ಟು ಸಲ ಮಾತಾಡಿಲ್ಲ? ಇದೇ ಬಸದಿಯಲ್ಲಿ ಸಿಕ್ಕಿ ಎಷ್ಟೋ ಸಂಜೆಗಳನ್ನು ಅವನಿಗಾಗಿಯೇ ಕೊಟ್ಟಿದ್ದಳು. ಆದರೆ ಈಗೀಗ ಸಂದೇಶ ಮತ್ತು ಪಲ್ಲವಿಗೆ ತಮ್ಮ ಸಂಬಂಧ ಬರೀ ಹೀಗೇ ಇದ್ದು ಬಿಡಬೇಕಾ? ಅಸ್ಪಷ್ಟವಾಗಿ ಕಡಲಿನ ಅಲೆಯೋ? ನದಿ ಅಲೆಯೊ? ಗೊತ್ತಾಗದ ಹಾಗೇ ನಾಮಶೂನ್ಯವಾಗಿರಬೇಕಾ ಅನ್ನಿಸಲು ಶುರುವಾಗಿತ್ತು. ಇದು ಜಾಸ್ತಿಯಾಗಿ ಅನ್ನಿಸಿದ್ದು ಸಂದೇಶನಿಗೆ.
ಅವನಿಗೆ ಈಗ 28 ತುಂಬಿತ್ತು. ತನ್ನ ಬಾಳಿಗೆ ಪಲ್ಲವಿಯೇ ಸಹಚಾರಿಣಿಯಾಗಬೇಕು ಅಂತ ಅವನಿಗೆ ಗಾಢವಾಗಿ ಅನ್ನಿಸಿದೆ. ಆದರೆ ಅದೇ ಗಾಢತನ ಪಲ್ಲವಿಯಲ್ಲಿಲ್ಲ. ಅವನು ಹಾಗೆಲ್ಲಾ ಹೇಳೋವಾಗ ಆಕೆ ಕಂಪಿಸುತ್ತಾಳೆ. ಅವಳು ಅವನನ್ನು ಇಷ್ಟಪಟ್ಟಿದ್ದರೂ, ಅವಳಲ್ಲಿ ಯಾರಿಗೂ ಗೊತ್ತಾಗದ ವಿಲಕ್ಷಣ ಭಾವವೊಂದು ಉತ್ಪತ್ತಿಯಾಗಿ ನಿಸ್ತೇಜಿತಳಾಗುತ್ತಾಳೆ. ಹಾಗಂತ ನೀನು ನಂಗೆ ಬೇಡ. ನನ್ನ ಬಿಟ್ಟುಬಿಡು ಅಂತ ಒಂದಿನಾನೂ ಹೇಳಿಲ್ಲ ಆಕೆ. ಆನೆಕೆರೆಯ ಬಸದಿಗಪ್ಪಲ್ಲಿ ಆಕೆ ಸ್ಟಷ್ಟತೆಯಿಲ್ಲದ ಪ್ರಶ್ನೆಯಾಗುತ್ತಿದ್ದಳು. ದೂರದಲ್ಲಿ ನಗುತ್ತಾ ನಿಂತಿರುವ ಬಾಹುಬಲಿ ಬೆಟ್ಟದ ಶಾಂತತ್ವದಲ್ಲಿ ಲೀನಳಾಗುತ್ತಿದ್ದಳು. ಅಷ್ಟೊತ್ತಿಗೆ ಇವಳನ್ನು ನೋಡುತ್ತಾ ನಿಲ್ಲುವ ಸಂದೇಶ ಕೂಡ ಏನಾಗುತ್ತೋ ಆಗಲಿ... ಈ ಕ್ಷಣದಲ್ಲಿ ಬದುಕೋದು ಮುಂದೆನಾಗುತ್ತೋ ಆಗಲಿ ಅಂತ ನಿಡುಸುಯ್ಯುತ್ತಿದ್ದ.
ಪಲ್ಲವಿ, ಬಸದಿಗೆ ಆಗಲೇ ಬಂದು ಹೋಗಿ ದ್ದಾಳಾ? ಮತ್ತೆ ತನ್ನಷ್ಟಕ್ಕೇ ಕೇಳಿದಾಗ ಸಂದೇಶನ ಮೂಗೊಳಗೆ ಪಲ್ಲವಿಯಷ್ಟೇ ಹಾಕುತ್ತಿದ್ದ ಸೆಂಟಿನದ್ದೋ, ಪೌಡರಿನದ್ದೋ ಪರಿಮಳ ಸುತ್ತಿ ಕೊಂಡಿತು. ಆ ಎಲ್ಲಾ ಕೃತಕ ವಾಸನೆಗಳಿಗಿಂತ ಅವನೊಳಗೇ ಅವನಿಗಷ್ಟೇ ಅರ್ಥವಾಗುತ್ತಿದ್ದ ಅವಳ ಒಲವಿನ ಪರಿಮಳವೂ ಸೇರಿ, ಆ ಸಂಜೆ ಒಂದು ಅಲೌಕಿಕ ಆನಂದ ಲಭಿಸಿತು ಅವನಿಗೆ. ಇದು ಅವಳದ್ದೇನಾ ಪರಿಮಳ, ಇವತ್ತೇ ಬಂದಿರಬಹುದಾ? ಇಷ್ಟು ಬೇಗ ಹೋಗಿಯೂ ಆಯಿತಾ? ನಂಗ್ಯಾಕೆ ಹೇಳೇ ಇಲ್ಲ ಆಕೆ? ಅಂತ ಸಂದೇಶ ಯೋಚಿಸುತ್ತಲೇ ಹೋದಂತೆಲ್ಲಾ ಪಲ್ಲವಿ ಬಂದು ಹೋಗಿದ್ದ ಚಿತ್ರವೇ ಅವನ ಚಿತ್ತಭಿತ್ತಿಯಲ್ಲಿ ಗಟ್ಟಿಯಾಯಿತು. ಪಲ್ಲವಿ ಇಲ್ಲಿ ಬಂದೇ ಇಲ್ಲ ಎನ್ನುವ ನಿರ್ಧಾರ ಅವನಲ್ಲಿ ಬರಲು ಆಸ್ಪದವೇ ಇರಲಿಲ್ಲ, ಮೊದ ಮೊದಲು ಇದು ಪಲ್ಲವಿಯ ಪರಿಮಳ ಇರಲಿಕ್ಕಿಲ್ಲ ಇರಲಿಕ್ಕಿಲ್ಲ ಎನ್ನುವ ಉತ್ತರವೇ ಕೊನೆಗೆ ಇದು ಪಲ್ಲವಿಯದ್ದೇ ಎನ್ನುವಲ್ಲಿಗೆ ಬಂದು ನಿಂತಿತು.
ಹೌದು ಪಲ್ಲವಿಯದ್ದೇ ಇದು, ಬೇರೆ ಯಾರ ಪರಿಮಳವಾಗಿರಲು ಸಾಧ್ಯವೇ ಇಲ್ಲ. ಆಕೆ ಇವತ್ತೇ ಬಂದು ಹೋಗಿದ್ದಾಳೆ. ಸಂದೇಶ ಗಾಬರಿಯಾದ.
ಖಾತರಿಪಡಿಸಿಕೊಳ್ಳಲು ಮತ್ತೆ ಬಸದಿಯ ಸುತ್ತ ಸುತ್ತಾಡಿದ. ಅಲ್ಲೇ ಬಸದಿಯ ಕೊನೆಯ ಮೆಟ್ಟಿಲೊಂದರ ಬುಡದ ಮರೆಯಲ್ಲಿ ಕಾಗದ ದಂತಿರೋ ಹಸಿರ ವಸ್ತುವೊಂದು ಕಾಣಿಸಿತು. ಸಂದೇಶನ ಕಣ್ಣಬೆಳಕು ಮಿಂಚಾಡಿತು ಹಾಗೇ ಸೋಜಿಗದಿಂದ ಎತ್ತಿಕೊಂಡ. ಸಾವಿರ ಪರಿಮಳಗಳು ಒಟ್ಟಾಗಿ ಹೊಸ ಪರಿಮಳವೊಂದು ಹುಟ್ಟಿ ಅವನನ್ನು ರೋಮಾಂಚನಗೊಳಿಸಿದವು.
ಐಟೆಕ್ಸ್ ಪಲ್ಲವಿ... ಹೊಂಬಣ್ಣದ ಹುಡುಗಿಯ ಚಿತ್ರವಿದ್ದ ಬಿಂದಿ ಕಂಪೆನಿಯ ಪೊಟ್ಟಣ, ಪರಿಮಳದ ಜೊಲ್ಲು ಸುರಿಸುತ್ತಾ ನಿಂತಿತ್ತು.
ಪಲ್ಲವಿ ಬಂದಿದ್ದಾಳೆ..! ಇದು ಅವಳದ್ದೇ ಬಿಂದಿ ಪ್ಯಾಕೆಟ್ ಅಲ್ವಾ? ಅಂತ ಪ್ರಶ್ನೆ ಆಗುತ್ತಾ ಕೊನೆಗೆ ಅದೇ ಉತ್ತರ ಆಗಿಹೋಯಿತು. ಸಂದೇಶ ಬಿಂದಿ ಪ್ಯಾಕೆಟ್ ಮೂಸಿ ನೋಡಿದ. ಹೌದು ಅದೇ ಪರಿಮಳ, ಸಂದೇಶ ತುಂಬಿಕೊಂಡ.
‘ಪಲ್ಲವಿ, ನಿಂದೇ ಹೆಸರಿನ ಒಂದು ಬಿಂದಿ ಕಂಪನಿಯಿದೆ ಮಾರಾಯ್ತಿ, ನಿಂಗೆ ಗೊತ್ತೇ ಇಲ್ವಾ?’ ಅಂತ ಅವನೇ ಮೊದಲು ಆಕೆಗೆ ಐಟೆಕ್ಸ್ ಪಲ್ಲವಿ ಕಂಪನಿಯ ಬಿಂದಿಯನ್ನು ಪರಿಚಯಿಸಿದ್ದು. ಆಕೆ ತುಂಬಿಕೊಂಡಿದ್ದಳು. ಆ ಬಳಿಕ ಆಕೆ ಅದೇ ಕಂಪನಿಯ ಬಿಂದಿಯನ್ನೇ ಇಡುತ್ತಿದ್ದಳು. ಸಂದೇಶ ಆಸೆಗಣ್ಣಿನಿಂದ ಒಮ್ಮೆ ಆಕೆಯ ಬಿಂದಿಯನ್ನೂ, ಮತ್ತೊಮ್ಮೆ ಬಿಂದಿ ಹಾಕಿಕೊಂಡ ಕೂಡಲೇ ಹೊಳೆಯುತ್ತಿದ್ದ ಅವಳ ಮೈಯ ಪರಿಮಳವನ್ನೂ ಅನುಭವಿಸುತ್ತಿದ್ದ. ಅಲ್ಲದೇ ಆಕೆ ಬಿಂದಿ ಪ್ಯಾಕೆಟನ್ನು ತನ್ನ ಪರ್ಸಿನೊಳಗೆ ಇಟ್ಟಾಗ ಅದು ಸಹಜವಾಗಿ ಅವಳ ಪರ್ಸಿನಲ್ಲಿರೋ ಲಿಂಬೆ ಹಣ್ಣಿನ ಸಣ್ಣ ಸುಗಂಧ ದ್ರವ್ಯವೊಂದರ ಸಕಲ ಪರಿಮಳಗಳನ್ನೂ ತನ್ನದಾಗಿಸಿಕೊಂಡು ಮತ್ತೂ ದಿವ್ಯ ಘಮಲಿನಿಂದ ತುಂಬಿಕೊಳ್ಳುತ್ತಿದ್ದುದನ್ನು ಸಂದೇಶ ಗಮನಿಸಿದ್ದ. ಈಗ ಅದೇ ಲಿಂಬೆ ಹಣ್ಣಿನ ಪರಿಮಳ ಬಿಂದಿ ಪ್ಯಾಕೆಟನ್ನು ಆವರಿಸಿಕೊಂಡಿತ್ತು. ಇದೂ ಪಲ್ಲವಿಯದ್ದೇ ಬಿಂದಿ ಪ್ಯಾಕೆಟ್, ಅನ್ನೋ ತೀರ್ಮಾನಕ್ಕೆ ಬಂದ ಸಂದೇಶನಿಗೆ ಕೈಗೆ ಪಲ್ಲವಿಯೇ ಸಿಕ್ಕಷ್ಟು ಖುಷಿಯಾಯ್ತು. ಪಲ್ಲವಿ ಇಷ್ಟು ಬೇಗ ಬಸ್ಸು ಹಿಡಿಯಲು ಸಾಧ್ಯವೇ ಇಲ್ಲ ಅಂತನ್ನಿಸಿದ್ದರಿಂದ ಸೀದಾ ಬೈಕ್ ಹತ್ತಿ ಚಂಡೆಕ್ರಾಸ್ ಬಸ್‌ನಿಲ್ದಾಣದ ಕಡೆಗೆ ಹೋದ. ಐದ್ಹತ್ತು ಬಸ್ಸುಗಳು ಮಹಾನಗರದ ದಾರಿಯತ್ತ ಹೋಗಲು ಅಣಿಯಾಗಿದ್ದವು. ಒಂದೊಂದು ಬಸ್ಸನ್ನು ಹೊಕ್ಕ ಸಂದೇಶನಿಗೆ ಒಂದೊಂದು ಬಸ್ಸಿನಲ್ಲಿಯೂ ನೂರಾರು ಪರಿಮಳಗಳು ಮುತ್ತಿ ಕೊಂಡವು. ಪಲ್ಲವಿಯಂತೆಯೇ ಚೂಡಿ–ವೇಲು ಅಲ್ಲಾಡಿಸುತ್ತಿದ್ದ ಹುಡುಗಿಯರು ಕಿಟಕಿ ಬದಿಯಲ್ಲಿ ಕೂತು ಕಾಣದ ಆಕಾಶ ನೋಡುತ್ತಿದ್ದರು. ಹಗಲುಗನಸಿನಲ್ಲಿ ಲೊಚಗುಟ್ಟುತ್ತಿದ್ದರು. ‘ಬರುತ್ತೇನೆ ಕಣೋ, ಹುಷಾರಾಗಿರು’ ಅಂತ ತನ್ನವನ ಕೈಗಳನ್ನು ಕುಲುಕುತ್ತಾ ಅಭಯ ನೀಡುತ್ತಿದ್ದರು. ಎಲ್ಲಿಯೂ ಸಂದೇಶನ ಪಲ್ಲವಿ ಕಾಣಿಸಲಿಲ್ಲ. ಯಾವ ಬಸ್ಸುಗಳ ಕಿಟಕಿ ಪಕ್ಕ ದಲ್ಲಿಯೂ ಅವಳ ಬೆಳಕಿರಲಿಲ್ಲ. ದೂರದಿಂದ ಆನೆಕೆರೆ ಬಸದಿಯ ಕೆಂಪುತಾವರೆಗಳು ತನ್ನನ್ನೇ ನೋಡುತ್ತಾ ‘ಏನೋ ಅವಸ್ಥೆ ನಿಂದು, ಅವಳ ಪರಿಮಳಕ್ಕಾಗಿ ಯಾಕೆ ಅಷ್ಟೊಂದು ಜೀವ ಬಿಡ್ತೀಯಾ? ಅವಳೇ ಒಂದು ಪರಿಮಳ, ಪರಿಮಳ ಕೈಗೆ ಸಿಗಲ್ಲ. ನೋಡಬೇಕನ್ನಿಸಿದರೂ ಅದಕ್ಕೆ ಆಕಾರವೇ ಇಲ್ಲ. ಬಿಟ್ಟು ಬಿಡು. ಬಾ ನನ್ನ ತೆಕ್ಕೆ ಯಲ್ಲಿ ಹಾಯಾಗಿರು’ ಅಂತ ಕರೆದಂತಾಯಿತು. ಐಟೆಕ್ಸ್ ಪಲ್ಲವಿಯ ತಿಳಿಹಸಿರು ಕಾಗದ ಮತ್ತೂ ತನ್ನ ಒಂದು ತೂಕ ಬಣ್ಣವನ್ನು ಕಳೆದುಕೊಂಡಂತೆ ಸಂದೇಶನ ಕಿಸೆಯಲ್ಲಿ ತೆಪ್ಪಗೇ ಕೂತಿತ್ತು. ಮತ್ತೆ ಆನೆಕೆರೆಯ ಸಂದಿನಲ್ಲಿ ಬಂದು ಕುಳಿತವನಿಗೆ ಪಲ್ಲವಿ ಹಿಂದೆ ಹೇಳಿದ್ದು, ತನ್ನೊಳಗೆ ಕನಸಿದ್ದು ಎಲ್ಲವೂ ನೆನಪಾಯ್ತು.
‘ನಾವು ನಮ್ಮೊಳಗೇ ಅಚಲವಾಗಿ ಬದುಕಬೇಕು, ನಾಳೆ ನಾನು ನಿನ್ನ ಬಿಟ್ಟೋಗ್ಬೋದು, ಆದರೆ ನಿನ್ನೊಳಗು ನಿನ್ನನ್ನು ಬಿಡ್ಬಾರ್ದು, ನಂಗೂ ಹಾಗೇ, ನೀನು ಬಿಟ್ಟೋದ್ರೂ ನನ್ನೊಳಗಿರುವ ನಿನ್ನೊಳಗಿನ ಬೆಳಕು ಗಟ್ಟಿಯಾಗುತ್ತಾ ಹೋಗಬೇಕು ಅಷ್ಟೇ’ ಅಂತ ಯಾವುದೋ ದೃಢವಾದ ನಿರ್ಧಾರದಲ್ಲಿ ಹೇಳಿದ್ದಳು. ಅಂತದ್ದೇ ಅವಳ ವಿಲಕ್ಷಣ ಮಾತು ಗಳು ಈಗ ವೀರಪಾಂಡ್ಯ ರಾಜ ಕಟ್ಟಿಸಿದ್ದ ಈ ಪುರಾತನ ಬಸದಿಯ ಸುತ್ತ ಸುತ್ತಿ ಸಂದೇಶನಲ್ಲಿ ಕೂಡುತ್ತಾ... ಕಳೆಯುತ್ತಾ... ಭಾಗಿಸಲ್ಪಡುತ್ತಾ... ಗುಣಕಾರವಾಗುತ್ತಾ ಅಸ್ಪಷ್ಟ ಒಲವಿನ ಲೆಕ್ಕವಾಯ್ತು.
***
ಅಂಗಡಿಯಿಂದ ಹೊಸ ಬಿಂದಿಯ ಪ್ಯಾಕೆಟ್ ಒಂದನ್ನು ಖರೀದಿಸಿ, ಆ ಬಿಂದಿ ಪ್ಯಾಕೆಟಿನ ಕಾಗದ ದ ಕಿರು ಬಣ್ಣವನ್ನು ನೋಡಿದಾಗ ಸಂದೇಶನ ನೆನಪಾಗಿ ಪಲ್ಲವಿಯ ಕಣ್ಣಲ್ಲಿ ಕಣ್ಣೀರು ಧುತ್ತನೇ ಹಣತೆ ಹಚ್ಚಿತು. ನಡುಗುವ ಕೈಗಳಿಂದ ಕುಂಕುಮ ಬಣ್ಣದ ಬಿಂದಿ ಹಣೆಗಿಟ್ಟು ಕಿಟಕಿಯಿಂದ ಹೊರ ಇಣುಕಿದಳು. ‘ಬಿಂದಿ ಎಲ್ಲಾ ಬೆಳಕಿನಲ್ಲಿ ಕಿರುದೊಂದಿಯಂತೆ ಆಯ್ತು. ಮಲ್ಪೆಗಡಲು ಗೆಜ್ಜೆ ಕಟ್ಟಿ ನಿನ್ನ ನೋಡಿ ಹೋಯ್ತು.’ ಸಂದೇಶ ತನಗಾಗಿಯೇ ಹಾಡಿದ್ದ ಹಾಡಿನ ಸಾಲೊಂದು ಅವಳ ಕಣ್ಣೀರ ಗಾಢವಾದ ಬಿಸಿಪಸೆಯಲ್ಲಿ, ಕಣ್ಣ ಮುಂದೆ ಬೆಳಕಿದ್ದರೂ ಕತ್ತಲೆಗೆ ಕೊಂಪೆ ಗೆ ಹೋಗಿಯೇ ಬೀಳುತ್ತೇನೆ ಅನ್ನೋ ಅವಳ ದಿಟ್ಟದ್ದೋ, ಕೆಟ್ಟದ್ದೋ ನಿರ್ಧಾರದಲ್ಲಿ ತೇಲಿಕೊಂಡು, ಭೋರ್ಗರೆದುಕೊಂಡು ಸಾಗರವಾಯ್ತು. ಸಂದೇಶನ ಬೆಳ್ಮೊಗವೂ ಅವಳನ್ನು ಆ ಕ್ಷಣಕ್ಕೆ ಕಾಡಿಬಿಟ್ಟಿತು.
ಕಿಟಕಿಯ ಕನ್ನಡಿಯ ಪ್ರತಿಬಿಂಬದ ತುಂಬೆಲ್ಲಾ ಹಗುರಾಗಿ ಸರಿಯುತ್ತಿದ್ದ ಬಸ್ಸಿನ ಕುಲುಕಾಟದ ತುಂಬೆಲ್ಲಾ ಸಂದೇಶನ ದಿವ್ಯ ಪ್ರತಿಮೆಯೇ ಹರಡಿದಂತಾಗಿ ಏನೋ ಆಗಿಹೋದಳು ಪಲ್ಲವಿ.
ಕೊನೆಗೂ ನಾನು ಅವನನ್ನು ಕೂಡಲು ಆಗಲೇ ಇಲ್ಲ. ಅಷ್ಟೊಂದು ಬೆಳಕೇ ಕೊಡುತ್ತಿದ್ದವನಿಗೆ ಕೊನೆಗೂ ಕತ್ತಲೆಯೇ ಕೊಟ್ಟೆನಾ? ನನ್ನೊಳಗು ನಿನ್ನೊಳಗು ನಿತ್ಯ ಬೆಳಗುತ್ತಾವೆ, ನಮ್ಮೊಳಗನ್ನು ನಾವು ಉಳಿಸಿಕೊಳ್ಳೋಣ ಎಂದು ದೊಡ್ಡ ಮಹಾತ್ಮೆಯಂತೆ ಸಾರುತ್ತಾ, ಅವನ ಭಾವ ಪ್ರಪಂಚದಲ್ಲಿ ಆಟವಾಡಿದೆಯಲ್ಲ, ಛೇ ಅಂತ ತನ್ನೊಳಗಲ್ಲಿ ಯಾವುದೋ ಪ್ರೇತಾತ್ಮವೊಂದು ಕಿಟಾರನೆ ಕಪಾಳಕ್ಕೆ ಬಾರಿಸಿದಂತೆನಿಸಿ ಪಲ್ಲವಿ ಚೀರಿದಳು. ಮುಸ್ಸಂಜೆಯ ಕಪ್ಪು ಆವರಿಸುತ್ತಾ ಆನೆಕೆರೆಯ ಹೊನ್ನೀರಲ್ಲಿ ಬೀದಿದೀಪದ ಪಿಳಿಪಿಳಿ ಕಣ್ಣಿನ ಬಣ್ಣಗಳು ಅದ್ದಿಕೊಳ್ಳುತ್ತಾ, ದೂರದಲ್ಲಿ ಬಿಮ್ಮಗೆ ನಿಂತಿರುವ ಶಾಂತಮೂರ್ತಿ ಬಾಹುಬಲಿಯ ಮೊಗವೂ ಕೂಡ ಪುಟ್ಟ ಕಾಡುಗಳ ಮಧ್ಯೆ ಒಮ್ಮೆ ಜಿಗ್ಗೆಂದು ಚಿಮ್ಮಿಹೋದಾಗ ಪಲ್ಲವಿಯ ಕಣ್ಣೂ ನೀರಾಡಿತು.
ಬಸ್ಸು ಹಾವಿನಂತೆ ಸರಿಯುವಾಗ ಅವಳ ಅದೇ ಕಣ್ಣ ಹಣತೆಯ ಬೆಳಕಲ್ಲಿ, ಆನೆಕೆರೆ ಬಸದಿಯ ಕಲ್ಲು ಮೆಟ್ಟಿಲಲ್ಲಿ ಚೂರು ಚೂರೇ ಸರಿಯುವ ಸಂದೇಶ ಕಂಡ. ಕಣ್ಣೀರು ಈಗ ಧಾರಾಕಾರವಾಯ್ತು, ಎದೆಯ ತೊಟ್ಟಿಲಲ್ಲಿ ಜೀವವೂ, ನಿರ್ಜೀವವೂ ಒಂದಕ್ಕೊಂದು ಲಾಲಿ ಹಾಡಿ ತಣ್ಣಗೇ ತೂಗಿದಂತಾಗುವಾಗ ಎದುರಿನಿಂದ ಜೋರಾಗಿ ಬಂದ ಲಾರಿಯೊಂದಕ್ಕೆ ಸೀದಾ ಗುದ್ದಿದ ಬಸ್ಸು ಆನೆಕೆರೆಯ ಸ್ವಲ್ಪ ಆಚೆ ಇರುವ ಮರಕ್ಕೆ ಜೋರಾಗಿ ಬಡಿದು ಪ್ರಯಾಣಿಕರು ಚೀರಿಕೊಂಡರು. ಪಲ್ಲವಿಯ ಕೂಗು ಅವಳಿಗೇ ಕೇಳದಷ್ಟು ಮೌನವಾಗಿತ್ತು. ಅವಳ ಕೈಯಲ್ಲಿದ್ದ ಬಿಂದಿ ಪ್ಯಾಕೆಟು ಜಾರಿ ಹೋಗಿ ಕತ್ತಲಲ್ಲಿ ಆವಿಯಾಯಿತು. ಅಷ್ಟೊತ್ತಿಗೆ ಪಲ್ಲವಿ ಸಿಗದೇ ಆನೆಕೆರೆ ಬಸದಿಯಲ್ಲಿ ನಿರಾಶೆಯಿಂದ ಬಂದು ಕೂತಿದ್ದ ಸಂದೇಶನಿಗೆ ಬಸದಿಯಿಂದ ಬಲು ದೂರದಲ್ಲಿ ಹ್ಯಾಗ್ಯಾಗೋ ಮಿಂಚುತ್ತಿದ್ದ ಬಸ್‌ನ ದೀಪಗಳು ಕಾಣಿಸಿತಾದರೂ ಪಲ್ಲವಿಯದ್ದೇ ಧ್ಯಾನದಲ್ಲಿದ್ದ ಅವನಿಗೆ ಯಾಕೋ ಕತ್ತಲೆಯೇ ಆಪ್ತವಾದಂತಾಗಿ ಅಲ್ಲೇ ಬಸದಿಯ ಕತ್ತಲಲ್ಲಿ ಕೂತುಬಿಟ್ಟ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.