ADVERTISEMENT

ವಿಶ್ವನಾಥ ಎನ್ ನೇರಳಕಟ್ಟೆ ಅವರ ಕಥೆ: ಕೃತಕ ಬುದ್ಧಿಮತ್ತೆ

ವಿಶ್ವನಾಥ ಎನ್.ನೇರಳಕಟ್ಟೆ
Published 12 ಅಕ್ಟೋಬರ್ 2024, 22:30 IST
Last Updated 12 ಅಕ್ಟೋಬರ್ 2024, 22:30 IST
<div class="paragraphs"><p>ಎಐ ಸಾಂದರ್ಭಿಕ ಚಿತ್ರ</p></div>

ಎಐ ಸಾಂದರ್ಭಿಕ ಚಿತ್ರ

   

ರಾಯಿಟರ್ಸ್ ಚಿತ್ರ

ವಿಶ್ವನಾಥ ಎನ್ ನೇರಳಕಟ್ಟೆ

ADVERTISEMENT

ಒಂದೇ ವೇಗದಲ್ಲಿ ಸಾಗುತ್ತಿದ್ದ ಕಾರು ಒಂದೇ ಸಲಕ್ಕೆ ಚಲನೆಯನ್ನು ನಿಲ್ಲಿಸಿದಾಗ ಹಿಂದಿನ ಸೀಟಿನಲ್ಲಿದ್ದ ವಾಗೀಶ್ವರ ರಾವ್ ಲ್ಯಾಪ್‌ಟಾಪ್‌ನಿಂದ ತಲೆ ಮೇಲೆತ್ತಿ ರಸ್ತೆಯ ಕಡೆಗೆ ದೃಷ್ಟಿ ಹಾಯಿಸಿದರು. ಟ್ರಾಫಿಕ್ ಸಿಗ್ನಲ್ಲಿನಲ್ಲಿ ಭರ್ತಿ ಎರಡು ನಿಮಿಷ ನಿಂತು ಮುಂದೆ ಬಂದು ಕೆಲವು ಕ್ಷಣಗಳು ಕಳೆಯುವಷ್ಟರಲ್ಲಿಯೇ ಎದುರಾದ ತಡೆ ಯಾವುದಿದು? ಎನ್ನುವ ಪ್ರಶ್ನೆ ಅವರ ಆ ನೋಟದಲ್ಲಿತ್ತು. ಬಹಳಷ್ಟು ಜನ ಸೇರಿದ್ದರು. ಘೋಷಣೆ ಕೂಗುತ್ತಿದ್ದರು. ಜೈ ಎನ್ನುತ್ತಿದ್ದರು. ಅಷ್ಟು ಜನರು ನಿಂತಿದ್ದ ರಸ್ತೆಯ ಒಂದು ಬದಿಯಲ್ಲಿ ತಾತ್ಕಾಲಿಕವಾದ ವೇದಿಕೆಯೊಂದನ್ನು ಹಾಕಲಾಗಿತ್ತು. ವೇದಿಕೆ ತುಂಬುವಷ್ಟೂ ಜನರಿದ್ದರು. ಮೈಕ್ ಮುಂದೆ ನಿಂತವನೊಬ್ಬ ಸಾಧ್ಯವಾಗುವಷ್ಟು ಅಬ್ಬರದ ಧ್ವನಿಯಲ್ಲಿ ಮಾತನಾಡುತ್ತಿದ್ದ.


“ಸರ್, ಇನ್ನೈದು ತಿಂಗಳು ಇದೆಯಷ್ಟೇ ಎಲೆಕ್ಷನ್‌ಗೆ. ಇದು ರಾಜಕೀಯ ಸಮಾವೇಶ. ಮೈಕ್ ಮುಂದೆ ಮಾತನಾಡುತ್ತಿದ್ದಾರಲ್ಲಾ, ಅವರೇ ಈ ಕ್ಷೇತ್ರದ ಕ್ಯಾಂಡಿಡೇಟ್ ನಂಜುಂಡಪ್ಪ” ಎಂದ ಚಾಲಕ, “ಏನಿದು? ಯಾಕೆ ಇಷ್ಟೊಂದು ಜನ ಸೇರಿದ್ದಾರೆ?” ಎಂದು ವಾಗೀಶ್ವರ ರಾವ್ ಅವರು ಕೇಳಿದಾಗ.
ಕಾರಿನ ಮುಂದುಗಡೆಯೆಲ್ಲಾ ಜನ ಸೇರಿದ್ದರು. ಕಾರನ್ನು ಒಂದಿಂಚೂ ಮುಂದಕ್ಕೋಡಿಸುವುದಕ್ಕೆ ಅವಕಾಶವೇ ಇರಲಿಲ್ಲ. “ವ್ಹಾಟ್ ನಾನ್ಸೆನ್ಸ್! ಎಲೆಕ್ಷನ್ ಇದ್ದರೆ ಹೀಗೆ ರಸ್ತೆ ಬ್ಲಾಕ್ ಮಾಡಿ ಭಾಷಣ ಮಾಡಬೇಕಾ? ಆ್ಯಂಬುಲೆನ್ಸ್ ಏನಾದರೂ ಇದೇ ದಾರಿಯಾಗಿ ಬಂದರೆ, ಅದರೊಳಗೊಬ್ಬ ಅರೆಜೀವವಾಗಿರುವ ಪೇಶೆಂಟ್ ಇದ್ದರೆ ಗತಿಯೇನು? ಪೋಲೀಸರೆಲ್ಲಾ ಎಲ್ಲಿ ಹೋಗಿದ್ದಾರೆ? ಅವರಿಗಾದರೂ ಬುದ್ಧಿ ಬೇಡವಾ?” ಎಂದು ಕೋಪದಿಂದ ಕೂಗಾಡತೊಡಗಿದರು ವಾಗೀಶ್ವರ ರಾವ್. “ಪೋಲೀಸರು ಅಲ್ಲಿದ್ದಾರೆ ನೋಡಿ ಸರ್” ಎಂದು ಕಾರಿನ ಎಡಬದಿಗೆ ಕೈ ತೋರಿಸಿದ ಚಾಲಕ, “ಅವರೂ ಪ್ರಯತ್ನ ಮಾಡುತ್ತಲೇ ಇದ್ದಾರೆ ವಾಹನಗಳಿಗೆ ದಾರಿಮಾಡಿಕೊಡುವುದಕ್ಕೆ. ಆದರೆ ಜನರು ಆಚೆಗೆ ಹೋಗುತ್ತಲೇ ಇಲ್ಲ ನೋಡಿ” ಎಂದ. ಆ ಕಡೆಗೆ ನೋಡಿದ ವಾಗೀಶ್ವರ ರಾವ್ “ನಾನು ಇಷ್ಟು ಹೊತ್ತಿಗೆ ತಲುಪಿ ಆಗಬೇಕಿತ್ತು. ಈಗಲೇ ಐದು ನಿಮಿಷ ತಡ ಆಗಿದೆ. ಹೀಗಾದರೆ ಇನ್ನರ್ಧ ಗಂಟೆ ತಡವಾಗುತ್ತದೆ. ಏನಾದರೂ ಮಾಡುವುದಕ್ಕೆ ಸಾಧ್ಯವಿದೆಯಾ?” ಎಂದರು. ಕಾರಿನ ಕನ್ನಡಿಯಲ್ಲಿ ಕಾರಿನ ಹಿಂಭಾಗವನ್ನು ನೋಡಿದ ಚಾಲಕ “ಇಲ್ಲ ಸರ್. ಮುಂದೆ ಹೋಗುವುದಕ್ಕೆ ಹೇಗೂ ಸಾಧ್ಯ ಇಲ್ಲ. ರಿವರ್ಸ್ ತೆಗೆಯುವುದೂ ಸಾಧ್ಯವಿಲ್ಲದ ಹಾಗಾಗಿದೆ. ಹಿಂದೆಯೆಲ್ಲಾ ವಾಹನಗಳು ನಿಂತಿವೆ” ಎಂದ.


ವಾಗೀಶ್ವರ ರಾವ್ ಅವರಿಗೀಗ ಚಿಂತೆ ಆರಂಭವಾಗಿತ್ತು. ಯಾವತ್ತೂ ಸಮಯಪಾಲನೆ ಮಾಡಿ ಮಾಡಿ ಅಭ್ಯಾಸವಾಗಿದ್ದ ಅವರಿಗೆ ಇದು ಹೊಸ ಅನುಭವ. ಪೋಲೀಸರಲ್ಲಿ ಹೇಳಿದರೆ ಏನಾದರೂ ಪ್ರಯೋಜನ ಆದೀತೇನೋ ಎಂದುಕೊಂಡು ಕಾರಿನ ಕಿಟಕಿ ಗಾಜನ್ನು ಕೆಳಗಿಳಿಸಿದರು. ಕೈಸನ್ನೆ ಮಾಡಿ ಪೋಲೀಸ್ ಒಬ್ಬರನ್ನು ಕರೆಯುವ ಪ್ರಯತ್ನ ಮಾಡಿದರು. ಆದರೆ ಜನರ ಗದ್ದಲದಲ್ಲಿ ಕಳೆದುಹೋಗಿದ್ದ ಪೋಲೀಸ್‌ಗೆ ಅದು ಗೊತ್ತಾಗಲೇ ಇಲ್ಲ.


ವೇದಿಕೆ ಮೇಲೆ ನಿಂತಿದ್ದ ನಂಜುಂಡಪ್ಪನ ಭಾಷಣ ವಾಗೀಶ್ವರ ರಾವ್ ಅವರ ಕಿವಿಗೆ ಬೀಳಲಾರಂಭಿಸಿತು. “ಈ ಸರ್ಕಾರದಲ್ಲಿ ನಮ್ಮ ಸಹೋದರಿಯರಿಗೆ ರಕ್ಷಣೆ ಇಲ್ಲದ ಹಾಗಾಗಿದೆ. ಈಗ ಅಧಿಕಾರದಲ್ಲಿ ಇರುವವರು ದುರ್ಯೋಧನ ದುಶ್ಯಾಸನರು. ಇವರದೇನಿದ್ದರೂ ಅಮಾಯಕ ದ್ರೌಪದಿಯ ಸೆರಗಿಗೆ ಕೈಯ್ಯಿಕ್ಕುವ ಕೌರವ ಸರ್ಕಾರ. ಇವರ ತೊಡೆಯೆಲುಬು ಮುರಿಯಬೇಕಾದರೆ ನಮ್ಮಂತಹ ಪಾಂಡವರು ಅಧಿಕಾರಕ್ಕೆ ಬರಬೇಕು. ಬಾಂಧವರೇ ನೆನಪಿಡಿ, ಈ ಸಲದ ಚುನಾವಣೆ ಧರ್ಮ ಅಧರ್ಮದ ನಡುವಿನ ಯುದ್ಧ...” ಜನರ ಚಪ್ಪಾಳೆ, ಶಿಳ್ಳೆ ಮುಗಿಲು ಮುಟ್ಟಿತು. “ಸಮಾಜಕ್ಕಾಗಿ ಗಂಭೀರವಾಗಿ ಯೋಚಿಸಲೇಬೇಕಾದ ಸಮಯ ನಮ್ಮ ಮುಂದಿದೆ. ಒಳ್ಳೆಯ ಆಡಳಿತ ನೀಡುತ್ತೇವೆ ಎಂದು ಸುಳ್ಳು ಹೇಳಿ ಸಿಂಹಾಸನದಲ್ಲಿ ಕೂತವರು ಚಕ್ರವ್ಯೂಹ ಒಂದನ್ನು ನಿರ್ಮಿಸಿಟ್ಟಿದ್ದಾರೆ. ಅವರು ಕಟ್ಟಿರುವ ಚಕ್ರವ್ಯೂಹ ಅನ್ಯಾಯದ್ದು. ಅವರ ಚಕ್ರವ್ಯೂಹ ಭ್ರಷ್ಟಾಚಾರದ್ದು. ಅವರ ಚಕ್ರವ್ಯೂಹ ಅಸಮಾನತೆಯದ್ದು. ಅವರ ಚಕ್ರವ್ಯೂಹ ಸಮಾಜದ್ರೋಹದ್ದು. ಕುರುಕ್ಷೇತ್ರದ ಚಕ್ರವ್ಯೂಹ ಮುರಿಯುವುದಕ್ಕಾಗಿರಲಿಲ್ಲ ಆ ಅಭಿಮನ್ಯುವಿಗೆ. ಆದರೆ ನಿಮ್ಮೆಲ್ಲರ ಬೆಂಬಲ ಇದ್ದರೆ ಈ ಸಮಾಜಘಾತುಕ ಸರ್ಕಾರದ ಚಕ್ರವ್ಯೂಹವನ್ನು ಒಂದೇ ಸಲಕ್ಕೆ ಭೇದಿಸಬಹುದು...” ಭಾಷಣ ಮುಂದುವರಿಯುತ್ತಲೇ ಇತ್ತು. ಅಸಹನೀಯ ಭಾವದಿಂದ ಕಿಟಕಿ ಗಾಜು ಮೇಲಕ್ಕೇರಿಸಿದರು ವಾಗೀಶ್ವರ ರಾವ್.


ಭಾಷಣವೆಲ್ಲಾ ಮುಗಿದು, ಜನರೆಲ್ಲಾ ಚದುರಿಹೋಗಿ ಅವರಿದ್ದ ಕಾರು ಆಮೆಗತಿಯಲ್ಲಿ ಸಾಗಲಾರಂಭಿಸುವುದಕ್ಕೆ ಭರ್ತಿ ಮೂವತ್ತೈದು ನಿಮಿಷ ತೆಗೆದುಕೊಂಡಿತು. ಜನಸಂದಣಿ ಕಳೆಯುತ್ತಿದ್ದಂತೆಯೇ “ಇನ್ನು ಸ್ವಲ್ಪ ಫಾಸ್ಟ್ ಆಗಿ ಹೋಗು” ಎಂದು ಚಾಲಕನಲ್ಲಿ ಹೇಳಿದರು ವಾಗೀಶ್ವರ ರಾವ್.


***


ವಾಗೀಶ್ವರ ರಾವ್ ನಿಗದಿತ ಸ್ಥಳವನ್ನು ಸೇರುವಾಗ ಹೇಳಿದ್ದಕ್ಕಿಂತ ಐವತ್ತೈದು ನಿಮಿಷ ತಡವಾಗಿತ್ತು. ಸಭೆಯಲ್ಲಿರಬೇಕಾದ ಪೋಲೀಸ್ ಅಧಿಕಾರಿಗಳು ಮತ್ತು ಪೋಲೀಸ್ ವರಿಷ್ಠಾಧಿಕಾರಿಗಳು ಆಗಲೇ ಆಗಮಿಸಿ, ಹಾಲ್‌ನ ಒಳಹೋಗಿ, ತಮಗೆ ಕಾದಿರಿಸಿದ್ದ ಆಸನದಲ್ಲಿ ಕುಳಿತಾಗಿತ್ತು. ಕಾರಿನಿಂದಿಳಿದ ವಾಗೀಶ್ವರ ರಾವ್ ಗಡಿಬಿಡಿಯಿಂದ ಹಾಲ್‌ನ ಒಳಹೋಗುವಾಗ ವರಿಷ್ಠಾಧಿಕಾರಿಗಳು ಅಧಿಕಾರಿಗಳಿಗೆ ಏನನ್ನೋ ವಿವರಿಸುತ್ತಿದ್ದರು. ಇವರನ್ನು ಕಂಡ ಕೂಡಲೇ ವರಿಷ್ಠಾಧಿಕಾರಿಯವರ ಮುಖ ಅರಳಿತು.


“ಬನ್ನಿ ವಾಗೀಶ್ವರ ರಾವ್ ಅವರೇ” ಎಂದು ನಗುತ್ತಾ ಇವರನ್ನು ಸ್ವಾಗತಿಸಿದವರು “ಇವರೇ ನಮ್ಮ ದೇಶದ ಪ್ರಸಿದ್ಧ ತಂತ್ರಜ್ಞ ವಾಗೀಶ್ವರ ರಾವ್” ಎಂದು ಅಧಿಕಾರಿಗಳಿಗೆ ಪರಿಚಯ ಮಾಡಿಕೊಟ್ಟರು. ಎಲ್ಲರಿಗೂ ನಮಸ್ಕರಿಸಿ, ಮುಗುಳ್ನಗುತ್ತಾ ಕುರ್ಚಿಯಲ್ಲಿ ಕುಳಿತ ವಾಗೀಶ್ವರ ರಾವ್, ಪೋಲೀಸ್ ವರಿಷ್ಠಾಧಿಕಾರಿಯವರ ಕಡೆಗೆ ಪ್ರಶ್ನಾರ್ಥಕವಾಗಿ ನೋಡಿದರು. ಅವರಿಗೆ ಪೋಲೀಸ್ ವರಿಷ್ಠಾಧಿಕಾರಿ ತಮ್ಮನ್ನು ಯಾಕೆ ಕರೆಸಿದ್ದಾರೆ ಎನ್ನುವುದರ ಅಂದಾಜಿತ್ತೇ ವಿನಃ ಸ್ಪಷ್ಟತೆ ಇರಲಿಲ್ಲ.


“ವೆಲ್, ನಾನು ನೇರವಾಗಿ ವಿಷಯಕ್ಕೆ ಬರುತ್ತೇನೆ. ನಮ್ಮ ದೇಶಕ್ಕೆ ಸಹಾಯವಾಗುವ ಮಹತ್ತರ ಜವಾಬ್ದಾರಿಯನ್ನು ನಿಮಗೆ ವಹಿಸುವ ಕಾರಣಕ್ಕೆ ನಾನು ನಿಮ್ಮನ್ನು ಈ ಸಭೆಗೆ ಕರೆಸಿಕೊಂಡಿದ್ದೇನೆ” ಎಂದವರು ವಾಗೀಶ್ವರ ರಾವ್ ಅವರ ಮುಖವನ್ನೊಮ್ಮೆ ನೋಡಿದರು. ಈ ಮೊದಲಿದ್ದ ಪ್ರಶ್ನಾರ್ಥಕ ಭಾವ ಹಾಗೆಯೇ ಇತ್ತು.


“ನಾಗರಾಜ ಎನ್ನುವ ಭೂಗತ ಪಾತಕಿ ಹಲವು ಅಪರಾಧಗಳನ್ನು ಮಾಡುತ್ತಲೇ ಇರುವ ವಿಷಯ ನಿಮಗೆ ತಿಳಿದಿರಬಹುದು. ಅವನನ್ನು ನಿಯಂತ್ರಿಸುವ, ಬಂಧಿಸುವ ಹೊಣೆಗಾರಿಕೆ ನಮ್ಮ ಮೇಲಿದೆ. ಆದರೆ ಹಿಂದೆ ಹಲವು ಸಲ ಅವನನ್ನು ಬಂಧಿಸುವುದಕ್ಕೆಂದು ಹೋದಾಗ ನಮ್ಮ ಹಲವು ಜನ ಪೋಲೀಸರೇ ಪ್ರಾಣ ಕಳೆದುಕೊಂಡಿದ್ದಾರೆ. ಆದ್ದರಿಂದ ಹಿಂದಿನ ವಿಧಾನವನ್ನೇ ಅನುಸರಿಸಿದರೆ ನಮ್ಮ ಇಲಾಖೆಯ ಇನ್ನಷ್ಟು ಮಂದಿಯನ್ನು ನಾವು ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ನಾವು ಈ ಸಲ ಹೊಸ ವಿಧಾನವೊಂದನ್ನು ಅನುಸರಿಸುವುದಕ್ಕೆ ನಿರ್ಧರಿಸಿದ್ದೇವೆ. ನೀವೊಬ್ಬ ಅದ್ಭುತ ತಂತ್ರಜ್ಞರೆಂದು ನಮಗೆ ಗೊತ್ತಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ನೀವು ಹಲವು ರೋಬೋಟ್ ತಯಾರಿಸಿದ್ದೀರಿ. ಅವು ಮನುಷ್ಯರ ಹಾಗೆಯೇ ಕೆಲಸ ಮಾಡುವಂತೆ ರೂಪಿಸಿದ್ದೀರಿ. ಕಾಣುವುದಕ್ಕೂ ಮನುಷ್ಯರಂತಿರುತ್ತವೆ. ಅದೇ ತರಹದ ರೋಬೋಟ್ ಒಂದನ್ನು ನೀವು ನಮಗೆ ತಯಾರಿಸಿ ಕೊಡಬೇಕು. ಹಳ್ಳಿಯ ಒಬ್ಬ ಸಾಮಾನ್ಯ ಹೆಂಗಸಿನಂತೆ ಆ ರೋಬೋಟ್ ಇರಬೇಕು. ಆದರೆ ರೋಬೋಟ್ ಎಂದು ಆ ನಾಗರಾಜನಿಗೆ ಗೊತ್ತಾಗಲೇಬಾರದು. ಥೇಟ್ ಸಾದಾ ಸೀದಾ ಸೀರೆ ಸುತ್ತಿಕೊಂಡ ಒಂದು ಹೆಂಗಸಿನ ಹಾಗೆಯೇ ಕಾಣಬೇಕು. ಮಾತೂ ಸಹ ಮನುಷ್ಯರ ಹಾಗೆಯೇ ಇದ್ದರೆ ಒಳ್ಳೆಯದು. ಆ ರೋಬೋಟನ್ನು ನಾಗರಾಜ ಅಡಗಿರುವ ಸ್ಥಳಕ್ಕೆ ಕಳುಹಿಸಿಕೊಡುತ್ತೇವೆ. ಹಳ್ಳಿಯ ಹೆಂಗಸಿನ ಹಾಗಿರುವ ಅದನ್ನು ನೋಡಿ ಅವನಿಗೆ ಅನುಮಾನ ಬರುವ ಸಾಧ್ಯತೆ ಕಡಿಮೆ. ಜೊತೆಗೆ ಅವನಿಗೆ ಹುಡುಗಿಯರ ಬಗ್ಗೆ ವಿಪರೀತ ಮೋಹ ಇರುವುದರಿಂದ ಅವನ ತಲೆಯನ್ನು ಒಂದು ಕ್ಷಣ ಕೆಡಿಸಬೇಕಾದರೆ ಆ ತರಹದ ರೋಬೋಟೇ ಆಗಬೇಕು. ಎರಡೇ ಎರಡು ನಿಮಿಷ ಆ ರೋಬೋಟ್ ಅವನಲ್ಲಿ ಮಾತನಾಡಿದರೆ ಸಾಕು, ಸುತ್ತ ಅಡಗಿ ಕೂತ ನಮ್ಮ ಪೋಲೀಸರು ತಕ್ಷಣ ದಾಳಿ ಮಾಡಿ ಅವನನ್ನು ಬಂಧಿಸುತ್ತಾರೆ” ಎಂದು ಒಂದೆರಡು ಕ್ಷಣ ಮಾತು ನಿಲ್ಲಿಸಿದ ವರಿಷ್ಠಾಧಿಕಾರಿಗಳು ತಡೆತಡೆದು “ನೀವೇನಾದರೂ ಇದನ್ನು ಸಾಧ್ಯ ಮಾಡಿಬಿಟ್ಟರೆ ಅದು ನಿಜಕ್ಕೂ ಬೆಲೆ ಕಟ್ಟಲಾಗದ ಕೆಲಸವಾಗುತ್ತದೆ. ಆದರೆ ನಿಮಗೆ ಗೌರವಸೂಚಕವಾಗಿ ಒಂದಷ್ಟು ಮೊತ್ತದ ಹಣವನ್ನು ನೀಡಲಾಗುತ್ತದೆ” ಎಂದರು.
ವಾಗೀಶ್ವರ ರಾವ್ ಅವರ ಮುಖದಲ್ಲಿ ನಸುನಗು ಮೂಡಿತು. “ರೋಬೋಟ್‌ನ ಮೈ, ಮಾತು, ಚಲನೆ ಎಲ್ಲವೂ ಮನುಷ್ಯನ ಹಾಗೆಯೇ ಆಗಬೇಕು ಎನ್ನುವುದು ನನ್ನ ಕನಸು. ನಾನೀಗಾಗಲೇ ಆ ರೀತಿಯ ಪ್ರಯತ್ನದಲ್ಲಿದ್ದೇನೆ. ದೇಶದ ಹಿತಕ್ಕಾಗಿ ನನ್ನ ಈ ಅನ್ವೇಷಣೆ ಬಳಕೆಯಾಗುವುದಿದ್ದರೆ ಅದಕ್ಕಿಂತ ಸಂತೋಷದ ವಿಷಯ ಬೇರೇನಿದೆ? ನನಗೆ ಸಂಪೂರ್ಣ ಒಪ್ಪಿಗೆ ಇದೆ” ಎಂದರು. ಸಭೆಯಲ್ಲಿದ್ದ ಎಲ್ಲರ ಮುಖದಲ್ಲಿಯೂ ಸಂತಸ.


“ಆದರೆ ನಮಗೆ ಹೆಚ್ಚಿನ ಸಮಯ ಇಲ್ಲದಿರುವುದರಿಂದ ಆದಷ್ಟು ಬೇಗ ನೀವು ರೋಬೋಟ್ ತಯಾರಿಸಿಕೊಟ್ಟರೆ ಒಳ್ಳೆಯದು. ನಿಮಗೆಷ್ಟು ಸಮಯ ಬೇಕಾದೀತು?” ಪ್ರಶ್ನಿಸಿದರು ವರಿಷ್ಠಾಧಿಕಾರಿಗಳು. “ಹೆಚ್ಚೆಂದರೆ ಐದು ದಿನ ಅಷ್ಟೇ” ಎಂದು ವಾಗೀಶ್ವರ ರಾವ್ ಹೇಳಿದಲ್ಲಿಗೆ ಸಭೆ ಮುಗಿದಿತ್ತು.


***


“ನೋಡಿ, ಇವತ್ತಿನ ನನ್ನ ಸಮಾವೇಶ ದೊಡ್ಡಮಟ್ಟಿಗೆ ಯಶಸ್ಸಾಗಿದೆ. ಮಂಗಳವಾರ, ಕೆಲಸದ ದಿನ, ಆ ರಸ್ತೆಯಲ್ಲಿ ಏಳ್ನೂರೈವತ್ತು ಎಂಟುನೂರು ಜನ ನನ್ನ ಭಾಷಣಕ್ಕಾಗಿಯೇ ಸೇರುವುದೆಂದರೆ ಅದೇನು ಸಾಮಾನ್ಯ ವಿಷಯ ಅಲ್ಲ” ಪಕ್ಷದ ಹಿರಿಯ ನಾಯಕರಿಗೆ ಆ ದಿನದ ಸಮಾವೇಶದ ವರದಿಯನ್ನು ಹೀಗೆ ಒಪ್ಪಿಸುತ್ತಿರುವಾಗ ನಂಜುಂಡಪ್ಪ ತಾನು ತಲೆಗೆ ಐನೂರರಂತೆ ಖರ್ಚು ಮಾಡಿರುವ ಸಂಗತಿಯನ್ನು ಬಿಟ್ಟುಕೊಟ್ಟಿರಲಿಲ್ಲ.


“ಹೌದು, ನಿಮಗೆ ಈ ಕ್ಷೇತ್ರದಲ್ಲಿ ಜನರ ಬೆಂಬಲ ಇದೆ ಎನ್ನುವುದು ನಮಗೆ ಗೊತ್ತಿದೆ. ಆದರೆ ಆ ಬೆಂಬಲ ನಿಮ್ಮನ್ನು ಗೆಲ್ಲಿಸುತ್ತದಾ ಇಲ್ಲವಾ ಎನ್ನುವ ಅನುಮಾನವೂ ಇದೆ. ನೋಡಿ, ನಿಮ್ಮ ಜಾತಿಯ ಜನ ಇರುವುದು ಮೂವತ್ತೆರಡು ಪರ್ಸಂಟೇಜ್ ಮಾತ್ರ. ಉಳಿದ ಎರಡು ಜಾತಿಯವರ ಬೆಂಬಲ ನಿಮಗೆ ಸಿಕ್ಕಿದರೆ ಹೆಚ್ಚೆಂದರೆ ಮೂವತ್ತಾರು ಮೂವತ್ತೆಂಟು ಪರ್ಸಂಟೇಜ್‌ಗೆ ಹೋಗಬಹುದು. ಅಲ್ಲಿಗೆ ಇನ್ನೂ ಅರುವತ್ತೆರಡು ಪರ್ಸಂಟೇಜ್ ಓಟು ಹೊರಗೇ ಇದೆ. ಅದರಲ್ಲಿ ನಿಮ್ಮ ಒಪೋನೆಂಟ್ ಆ ದೊಡ್ಡಮಲ್ಲಪ್ಪ ಇದ್ದಾನಲ್ಲಾ, ಅವನ ಜಾತಿಯವರೇ ನಲುವತ್ತು ಪರ್ಸಂಟ್. ರಸ್ತೆ, ಸೇತುವೆ, ಆಸ್ಪತ್ರೆ ಅಂತೆಲ್ಲಾ ಮಾಡಿಸಿ, ದೊಡ್ಡ ಕೆಲಸ ಮಾಡಿದವನಂತೆ ತೋರಿಸಿಕೊಂಡಿದ್ದಾನೆ. ಕೆಲವು ಕಡೆ ಒಳ್ಳೆ ಕೆಲಸವೇ ಮಾಡಿದ್ದಾನೆ ಎನ್ನುವುದು ನಮಗೂ ಗೊತ್ತಿರುವ ವಿಷಯವೇ ತಾನೇ? ಹಾಗಿರುವಾಗ ನಾವು ಈ ಸಲ ಅವನನ್ನು ಸೋಲಿಸಬೇಕಾದರೆ ಇಷ್ಟೂ ವರ್ಷ ಈ ಕ್ಷೇತ್ರದ ಎಲೆಕ್ಷನ್‌ನಲ್ಲಿ ಪ್ರಸ್ತಾಪವೇ ಆಗದ ವಿಷಯವನ್ನು ಎತ್ತಿತರಬೇಕು” ಹಿರಿಯ ಮುಖಂಡರ ಮಾತು ನಂಜುಂಡಪ್ಪ ಮತ್ತು ಅಲ್ಲಿ ಸೇರಿದ್ದ ಇತರರಲ್ಲಿ ಕುತೂಹಲ ಹುಟ್ಟುಹಾಕಿತು. ಯಾವುದದು ಹೊಸ ವಿಷಯ ಎಂಬ ಕುತೂಹಲವದು.


“ಧರ್ಮ. ಧರ್ಮವನ್ನು ನಾವು ಎತ್ತಿತರಬೇಕು. ‘ಆ’ ಧರ್ಮದವರು ಮತ್ತು ‘ಈ’ ಧರ್ಮದವರ ಮಧ್ಯೆ ಸಂಘರ್ಷ ಹುಟ್ಟಿದಾಗ ನಾವು ನಿಲ್ಲಬೇಕಾದದ್ದು ‘ಆ’ ಧರ್ಮದವರ ಪರವಾಗಿ. ಯಾಕೆಂದರೆ ಈ ಕ್ಷೇತ್ರದಲ್ಲಿ ಹೆಚ್ಚಿರುವವರು ‘ಆ’ ಧರ್ಮದವರು. ಅವರ ಓಟು ನಮಗೆ ಬಿದ್ದರೆ ಈ ಎಲೆಕ್ಷನ್‌ನಲ್ಲಿ ಗೆಲ್ಲುವುದು ಕಷ್ಟವೇ ಅಲ್ಲ” ಹೇಳಿದವರು ಗೆಲುವಿನ ನಗು ಬೀರಿದರು.


“ಆದರೆ ಇಲ್ಲಿ ಧರ್ಮ ಸಂಘರ್ಷ ಇಲ್ಲವಲ್ಲ?” ಇನ್ನೂ ಚುನಾವಣೆಗೆ ನಿಲ್ಲುವ ಅವಕಾಶವೇ ಸಿಗದಿದ್ದ ಪಕ್ಷದ ಕಾರ್ಯಕರ್ತರೊಬ್ಬರು ಪ್ರಶ್ನಿಸಿದರು.


“ಸಂಘರ್ಷ ಅದಾಗಿಯೇ ಶುರುವಾಗುವುದಿಲ್ಲ. ಅದನ್ನು ಹುಟ್ಟುಹಾಕಬೇಕಾದವರು ನಾವೇ...” ಮೀಸೆಯಡಿಯಲ್ಲಿ ನಗುತ್ತಾ ಹಿರಿಯ ಮುಖಂಡರು ವಿವರಿಸುತ್ತಾ ಹೋದಂತೆ, ಸೇರಿದ್ದ ಎಲ್ಲರ ಮುಖದಲ್ಲಿಯೂ ನಗು.


***


“ನಾವೀಗ ಮೊದಲು ಮಾಡಬೇಕಾದದ್ದು ಈಗಾಗಲೇ ಇರುವ ಡೇಟಾವನ್ನು ಅಳಿಸಿಹಾಕಬೇಕು. ಆಗಷ್ಟೇ ನಾವು ಹೊಸ ಡೇಟಾವನ್ನು ಫಿಲ್ ಮಾಡುವುದಕ್ಕೆ ಸಾಧ್ಯವಿದೆ” ಸಹಾಯಕನಿಗೆ ವಿವರಿಸುತ್ತಿದ್ದರು ವಾಗೀಶ್ವರ ರಾವ್. ಅವರೆದುರು ಈಗಾಗಲೇ ಅವರು ತಯಾರಿಸಿದ್ದ ರೋಬೋಟ್ ಇತ್ತು. ಅವರು ತಿಳಿಸಿದಂತೆಯೇ ಹಳೆಯ ದತ್ತಾಂಶವನ್ನೆಲ್ಲಾ ಅಳಿಸಿ, ಹೊಸ ದತ್ತಾಂಶವನ್ನು ಫೀಡ್ ಮಾಡಿದ ಅವರ ಸಹಾಯಕ ಮುಂದೇನು ಎನ್ನುವಂತೆ ಅವರ ಮುಖ ನೋಡತೊಡಗಿದ...


***
ಕಿಸೆಯಲ್ಲಿದ್ದ ಐನೂರು ರೂಪಾಯಿಯನ್ನು ಪದೇ ಪದೇ ಮುಟ್ಟಿ ನೋಡಿಕೊಳ್ಳುತ್ತಿದ್ದ ವ್ಯಕ್ತಿಯೊಬ್ಬ ಇನ್ನೆರಡು ಗಂಟೆ ಕಳೆದರೆ ಹೊಟ್ಟೆ ಸೇರುವ ಬಿರಿಯಾನಿಯನ್ನು ಧೇನಿಸುತ್ತಿದ್ದ. ಅವನಿಗೆ ಇಷ್ಟದ ಅಭ್ಯರ್ಥಿ ಎಂದರೆ ದೊಡ್ಡಮಲ್ಲಪ್ಪ. ಏನಾದರೂ ಕೆಲಸ ಮಾಡಬೇಕಾದರೆ ದೊಡ್ಡಮಲ್ಲಪ್ಪನೇ ಮತ್ತೆ ಗೆದ್ದು ಬರಬೇಕು ಎನ್ನುವ ಅನಿಸಿಕೆ ಇವನದ್ದು. ದೊಡ್ಡ ನೋಟಿತ್ತವರ ದೊಡ್ಡ ಒತ್ತಾಯಕ್ಕೆ ಮಣಿದು ನಂಜುಂಡಪ್ಪನವರ ಈ ಸಮಾವೇಶಕ್ಕೆ ಬಂದು ಕುಳಿತಿದ್ದ ಅಷ್ಟೇ.


ತಾಯಿಯನ್ನು ಕಳೆದುಕೊಂಡ ಮಗುವಿನಂತೆ ಎತ್ತೆತ್ತಲೋ ನೋಡುತ್ತಿದ್ದ ಅವನ ಮೇಲೆ ವಿಶೇಷ ಶಕ್ತಿಯೊಂದರ ಆವಾಹನೆಯಾದದ್ದು ಮಿರಿ ಮಿರಿ ಮಿಂಚುವ ಡ್ರೆಸ್ ಹಾಕಿಕೊಂಡ ನಂಜುಂಡಪ್ಪ ವೇದಿಕೆ ಮೇಲೆ ಬಂದಾಗ. ಹೆಜ್ಜೆ ಇಡುವುದರಲ್ಲಿರುವ ಗತ್ತು, ಸೇರಿದ ಜನರ ಕಡೆಗೆ ಕೈ ಬೀಸುವ ಆ ಸ್ಟ್ರೈಲ್‌, ಮುಖದ ಮೇಲಿದ್ದ ಚಂದದ ಸ್ಮೈಲ್‌ ಇವೆಲ್ಲಾ ಆ ವ್ಯಕ್ತಿಯನ್ನು ಸಮ್ಮೋಹಗೊಳಿಸಿತ್ತು.

ಮೈಕ್ ಮುಂದೆ ನಿಂತ ನಂಜುಂಡಪ್ಪ “ಪ್ರೀತಿಯ ಬಾಂಧವರೇ, ನನ್ನ ಅನ್ನದಾತರೇ, ನಿನ್ನೆ ಏನಾಗಿದೆ ನಿಮಗೇ ಗೊತ್ತಿದೆ. ‘ಈ’ ಧರ್ಮದವರು ‘ಆ’ ಧರ್ಮದವನ ಅಂಗಡಿಗೆ ಬೆಂಕಿಯಿಟ್ಟಿದ್ದಾರೆ. ಆ ದೊಡ್ಡಮಲ್ಲಪ್ಪನ ಕುಮ್ಮಕ್ಕಿನಿಂದಲೇ ಇದು ಆದದ್ದು. ಈಗ ನೀವು ಎಚ್ಚೆತ್ತುಕೊಳ್ಳದಿದ್ದರೆ ಇಂತಹದ್ದು ನಡೆಯುತ್ತಲೇ ಇರುತ್ತದೆ. ನಾಳೆ ‘ಈ’ ಧರ್ಮದವರು ನಿಮ್ಮ ಮನೆಗೆ ಬೆಂಕಿಯಿಡುವುದಕ್ಕೂ ಹೆದರುವುದಿಲ್ಲ...” ಎಂದು ಎದೆಯುಬ್ಬಿಸಿ ಮಾತನಾಡುತ್ತಲೇ ಇದ್ದ.


ಆ ವ್ಯಕ್ತಿಗೆ ನೆನಪಾಯಿತು, ತನ್ನ ಮನೆಯ ಸಮೀಪದ ‘ಈ’ ಧರ್ಮದವ ಜಾಗದ ಗಡಿಯ ವಿಚಾರದಲ್ಲಿ ಮೊನ್ನೆಯಷ್ಟೇ ತನ್ನ ಜೊತೆಗೆ ಜಗಳವಾಡಿದ್ದಾನೆ. ಅವನ ಕೈಗಳು ತನ್ನಿಂದ ತಾನೇ ಹೊಡೆದುಕೊಂಡವು.


***


“ನಾವೀಗ ಮಾಡಬೇಕಾದದ್ದು, ಕೈಗಳ ಚಲನೆ ಇದೆಯಲ್ಲ, ಅದನ್ನು ಸ್ಪೀಡ್ ಮಾಡಬೇಕು. ಕಾಲುಗಳೂ ವೇಗ ಪಡೆದುಕೊಂಡರೆ ನಡೆಯುವಾಗ ಮನುಷ್ಯನಂತೆಯೇ ಕಾಣುತ್ತದೆ. ಸೋ, ಅದಕ್ಕಾಗಿ ಈ ಕೈ ಕಾಲುಗಳು ಫ್ಲೆಕ್ಸಿಬಲ್ ಆಗಬೇಕು” ಎಂದ ವಾಗೀಶ್ವರ ರಾವ್ ಅದನ್ನು ಹೇಗೆ ಮಾಡುವುದೆಂದು ಸಹಾಯಕನಿಗೆ ತಿಳಿಸಿಕೊಟ್ಟರು. ಆದರೆ ಆತ ಮಾಡುತ್ತಿರುವುದು ಸರಿಯಾಗುತ್ತಿಲ್ಲ ಎನಿಸಿದಾಗ ತಾವೇ ರೋಬೋಟ್‌ನ ಕೈ ಕಾಲುಗಳನ್ನು ಸಡಿಲಗೊಳಿಸಲಾರಂಭಿಸಿದರು...


***


“...ನನ್ನ ಈ ಮಾತನ್ನು ನೀವು ಒಪ್ಪಿಕೊಳ್ಳುವುದಾದರೆ ಎರಡೂ ಕೈಗಳನ್ನು ಮೇಲಕ್ಕೆತ್ತಿ ನಿಮ್ಮ ಒಪ್ಪಿಗೆ ಸೂಚಿಸಿ” ಎಂದು ನಂಜುಂಡಪ್ಪ ಹೇಳಿದ ತಕ್ಷಣವೇ ಸೇರಿದ್ದ ಎಲ್ಲರಿಗಿಂತ ಮೊದಲು ಕೈಗಳನ್ನು ಮೇಲೆತ್ತಿ ‘ಹೋ...’ ಎಂದು ಜೋರಾಗಿ ಬೊಬ್ಬೆ ಹೊಡೆದ ಆ ವ್ಯಕ್ತಿ.


***
“ನಾಗರಾಜ, ನನಗೆ ನೀನೆಂದರೆ ತುಂಬಾ ಇಷ್ಟ. ನಿನಗೋಸ್ಕರ ನಾನು ಏನು ಬೇಕಾದರೂ ಮಾಡುವುದಕ್ಕೆ ಸಿದ್ಧ ಇದ್ದೇನೆ. ನಿನಗೂ ನಾನೆಂದರೆ ಇಷ್ಟ ಇದೆ ತಾನೇ?” ಹಳ್ಳಿಯ ಹೆಂಗಸಿನಂತಿದ್ದ ರೋಬೋಟ್ ಹೀಗೆ ಮಾತನಾಡಿದಾಗ ವಾಗೀಶ್ವರ ರಾವ್ ಅವರ ಮುಖದಲ್ಲಿ ಭೂಮಿ ತೂಕದ ನಗು. “ವ್ಹಾವ್! ಸೂಪರ್ಬ್! ಧ್ವನಿಯೂ ಮನುಷ್ಯರ ಹಾಗಿದೆ. ಉಚ್ಚಾರವೂ ಕೂಡ. ಎರಡು ನಿಮಿಷ ಅಲ್ಲ, ಇಪ್ಪತ್ತು ನಿಮಿಷ ಕಣ್ಣಮುಂದೆ ಮಾತಾಡುತ್ತಿದ್ದರೂ ಆ ನಾಗರಾಜನಿಗೆ ಸ್ವಲ್ಪವೂ ಅನುಮಾನ ಬರಲಿಕ್ಕಿಲ್ಲ” ಎಂದು ನಗತೊಡಗಿದವರು ಪೋಲೀಸ್ ವರಿಷ್ಠಾಧಿಕಾರಿಗಳಿಗೆ ಕರೆಮಾಡಿ “ನೀವು ಹೇಳಿದಂತೆಯೇ ರೋಬೋಟ್ ತಯಾರಾಗಿದೆ” ಎಂದರು.


***
“ಎಲ್ಲರೂ ಇನ್ನೊಮ್ಮೆ ಜೋರಾಗಿ ಹೇಳಿ, ನಂಜುಂಡಪ್ಪನವರಿಗೆ...” ಎಂದು ನಿರೂಪಕ ಹೇಳಿದಾಗ ಸೇರಿದವರೆಲ್ಲರ ಜೊತೆ ಆ ವ್ಯಕ್ತಿ ‘ಜೈ’ ಎಂದು ಕೂಗಿದ. “ನಿಮ್ಮ ಮತ ಯಾರಿಗೆ...” ಎಂದಾಗ “ನಂಜುಂಡಪ್ಪನವರಿಗೆ” ಎಂದು ಜೋರಾಗಿ ಹೇಳಿದ.


***


ಭೂಗತ ಪಾತಕಿಯೆದುರು ನಿಂತ ರೋಬೋಟ್ ಹಳ್ಳಿ ಹೆಂಗಸಿನಂತೆಯೇ ಕಾಣುತ್ತಿತ್ತು. ಯಂತ್ರವೊಂದು ಮನುಷ್ಯನಂತೆ ಬದಲಾಗಿಹೋಗಿತ್ತು.


***


ಚುನಾವಣೆಯ ದಿನ ಮತಯಂತ್ರದೆದುರು ನಿಂತ ಆ ವ್ಯಕ್ತಿ ಯಂತ್ರದಂತೆಯೇ ಆಗಿಹೋಗಿದ್ದ.


*****

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.