ರಾತ್ರಿ ಉಣ್ಣ ಹೊತ್ತಿನ್ಯಾಗ ಅಲೈಗುಡಿಯೊಳಗ ಡಿಗ್ರಿ ಕಲಿತ ಸಾಕಷ್ಟು ಹುಡುಗ್ರು ಕೂತಗಂಡಿದ್ವು. ಗುಡಿಯೊಳಗ ದೇವ್ರು ದಂಡಿ ಹೂವ್ವ, ಬಣ್ಣಬಣ್ಣದ ದಟ್ಟಿ ಧರಿಸಿ ಬೆಳ್ಳಿಕುದ್ರಿ, ಕಂಚಿನ ತೊಟ್ಲ, ಧರಿಸಿಕೊಂಡು ನಿಂತಿದ್ವು. ಅದ್ರಾಗ ಬುಡ್ಡನ ದೇವ್ರು ಬಂಗಾರ ಕುದ್ರಿ ಧರಿಸಿಕೊಂಡು ಬುಡ್ಡನಂತೆಯೇ ಚೆಂದಾಗಿ ಕಾಣುತಿತ್ತು. ಇದನ್ನ ನೋಡಿ ಬ್ಯಾಡ್ರಸಿದ್ಧ ‘ಬುಡ್ಡ ಅದೇಸು ಮಂದಿಗೆ ಮಾಡತನಲೇ.. ಊರಾಗ ಒಬ್ರುನೂ ಬಿಟ್ಟಿಲ್ಲ. ಹಳ್ಳದಾಗ ಈರವ್ವನ, ಗೌಡ್ರು ಬಣಿವ್ಯಾಗ ಬಸವ್ವನ, ಬಗಡಿ ಹೊಲ್ದಾಗ ಸವಿತವ್ವನ, ಮತ್ತೀಗ ಆ ಈರಭದ್ರನ ಹೆಣ್ತಿ ಲಲೀತವ್ವಗ ಗಂಟುಬಿದ್ದಾನಂಥ ಭೋಗ್‍ಬಡಿ ಸೂಳೆಮಗನ್ ತಗಬಂದು. ಆ ಲಲೀತವ್ವನ ಸಿಮಿಗಿ ಹುಲ್ಲಿನಂಥ ಕೂದ್ಲ. ರುಬುಗುಂಡಂಥ ಮಲೆ ನೋಡಿದ್ರ ಬುಡ್ಡನ ಎಗ್ರಿಒದ್ದು ಲಲೀತವ್ವನ ಅಂಬ್ರಿಸಿ ಹಿಡಕಬೇಕನಿಸ್ತದ’ ಅಂತ ಮಾತಾಡೋದು ಕೇಳಿಸಿಕೊಂಡೆ. ತಡಕಳ್ಳಕಾಗಲಿಲ್ಲ. ‘ಬಾಯಿ ಐತೆಂಥ ಕಂಡಕಂಡಂಗ ಬೊಗಳುತಿರ್ತಿಯಾ..’ ಅಂತ ಆ ಬ್ಯಾಡ್ರಸಿದ್ಧನ ಚಪ್ಪಲಿ ತಗಂಡು ರಪರಪ ಬಡಿಬೇಕಂತ ಸಟಕ್ಕನ ಎದ್ದುಕುಂತೆ. ಮೈ ಕುದ್ಯಾಕತ್ತಿತ್ತು. ಇದು ಹೊತ್ತಲ್ಲ ಗೊತ್ತಲ್ಲ ಅನ್ಕಂಡು ಹೋಳುಮಗ್ಗಲು ಮಲಿಗಿದೆ.
ಗಂಡ ಪಂಪಣ್ಣ ಅವುಡ-ಬವುಡ ತಿಂದು ನಿಗುರೊದ್ದು ಗೊರ್‍ಗೊರ್ ನಿದ್ದಿಹೊಡಿತಿತ್ತು. ನಾಲ್ಕು ವರ್ಸದ ಅಂಬಿಕಾ ಮಲಿ ತಲುಬಾಗಿ ಕುಬುಸದಾಗ ಕೈಯಾಕಿ ಬಾಯಿ ಚಪ್ಪರಿಸುತಿತ್ತು. ಆರು ವರ್ಸದ ಮಗ ಸುರೇಶ ಹೊರಕಟ್ಟಿಗೆ ತಂಡ್ಯಾಗ ಮಲಗಿತ್ತು. ಹೊರ್ಗ ಹುಡುಗ್ರು ತುಡುಗು ಮಾತಾಡೋದು ಕಮ್ಮಿ ಮಾಡಿದಾಗ ನಿದ್ದಿ ಹತ್ತಿರಬೇಕು. ಸವತ್ತಿನ್ಯಾಗ ಎಚ್ಚರಾತು. ಕರೆಂಟು ನೋಡಿದ್ರ ಡಿಮ್ಮಿತ್ತು. ಎಷ್ಟು ಹೊಳ್ಳಾಡಿದ್ರೂ ನಿದ್ದಿನೇ ಬರಲಿಲ್ಲ. ಈ ಹುಡುಗ್ರು ತುಡುಗು ಮಾತಾಡೋದು ಕೇಳಿ ಬುಡ್ಡ ಮತ್ತೆ ನೆಪ್ಪಾದ. ಆತನ ಎತ್ರೇನು, ಗತ್ತೇನು.. ಕಲ್ಡಿಮೀಸೇನು.. ಬೆಳ್ಳನ ಬಟ್ಟೇನು.. ಗಂಧದೆಣ್ಣಿ ವಾಸ್ನೇನು..’ ಅಂತ ಮಳ್ಳಿಡಿದು ಮೈ ಬೆಚ್ಚಗಾತು. ಗಂಡನ ಲಾಡಿ ಚೆಡ್ಡ್ಯಾಗ ಕೈಯಾಕಿದೆ. ನರಸತ್ತಿದ್ದು ಸಟಕ್ಕನ ಎದ್ದುಕುಂತು ‘ಏ ಅರಿಗೇಡಿ ದಗದೈತಿಲ್ಲ..’ ಅಂತ ಕೈಬಳೆ ಹೊಡೆಂಗ ಸರಕ್ಕನ ಕೈಕಿತ್ತೊಗ್ದ. ಈ ಕಸಪಸ ಗದ್ಲದಾಗ ಕೈಕಾಲು ತಗಲಿ ಅಂಬಿಕಾ ಎರಡು ಕಾಲೆತ್ತಿ ಚಿಟ್ಟನ ಚೀರಿದ್ಲು. ಚೋ..ಚೋ.. ಬಡ್ದು ಮಲಗಿಸಿದೆ. ಇದು ನೋಡಿದ್ರ ಜ್ವಾಳದ ಸುಂಕ ಕಡದಂಗ ಚುಟ್ಟುಗರಿತಿತ್ತು. ತಡಕಲಾರ್ದ ಗಂಡನ ಬೆನ್ನಿಗೆ ಡೆಮ್ಮಂತ ಗುದ್ದಬೇಕನಿಸ್ತು. ಆಗಲಿಲ್ಲ. ಮತ್ತೀಟು ಸೆಟಗಂಡು ಬಿತ್ತು. ಹೀಗೀಗ ಗಂಡನಂಬೋದು ಮಕ್ಕಂದಾಗ ಎತ್ತೆತ್ತಗೋ ಮಾಡ್‍ತಿತ್ತು. ನಿದ್ದಿ ಬರ್ತಿ ಏರಿದಾಗ, ಸೀರೆ ಮ್ಯಾಗೆತ್ತಿ ಜಿಗುತು ಮಲೆ ಹಿಂಡದಲ್ದ.. ತೊಡಿ ಗಟ್ಟಿಗಿ ರಗುತಬರಂಗ ಕಡಿತಿದ್ದ. ಈ ಕಾಟಕ್ಕ ಊರ್‍ಮಂದಿ ಎದ್ದೆಳಂಗ ಒಂದೊಂದ್ಸಲ ವೈಕ್ಯಾಂಬುಟ್ಟಿನಿ. ಈತ್ನ ಸವಾಸ ಸಾಕಾಗಿನೇ ಆ ಬುಡ್ಡನ ಬೇಕನಿಸ್ತದ.
ಈ ನರಸತ್ತ ನಾಯಿಗೆ ಜುಲುಮಿ ಮಾಡದಕ್ಕಿಂತ ಆ ಬುಡ್ಡನ ಕೂಡ ಒಂದು ಸತಿನ ಮಕ್ಕಬೇಕನಿಸ್ತದ. ಆತ ಎಷ್ಟೋ ಮಂದಿಗೆ ಮಾಡ್ಯನಂಥ ನನಗ್ಯಾಕ ಮಾಡಗಲ ನೋಡೇ ಬುಡ್ತಿನಿ. ನಾ ರೂಪದಾಗ ಚೆಲುವಿ. ಮೈಯೆಂಬುದು ತೆಳ್ಳಗ ಕಬ್ಬಾಗೈತಿ. ಕೂದ್ಲ ಕತ್ಲ ಕವುಣ್ಯಾಗಿ ಕುಂಡಿಗಿ ಇಳಿಬಿದ್ದಾವ. ನೀರು ಎರ್‍ಕಂಡು, ದಡಿಸೀರೆ ಉಟ್ಗಂಡು, ದಂಡಿ ಹೂವ್ವ ಮುಡಕಂಡು ಅಗಿಸ್ಯಾಕ ದಿಡಿಗಿಲೆ ಹೊಂಟ್ರ ಅದ್ಯಾವ ನಾಯಿ ನೋಡಂಗಿಲ್ಲ’ ಅಂತ ನನ್ನನ್ನ ನಾನೇ ಹೊಗಳಿಕ್ಯಾಂತ ಮೈಮರ್ತು ರೆಪ್ಪೆಮ್ಯಾಲೆ ಮಲಿಗಿದ್ದೆ. ಹೊರ್ಗ ಬೆಳಕರಿದಿದ್ದೂ ಗೊತ್ತಾಗಲಿಲ್ಲ. ಮುಂಜಾನೆದ್ದು ಸುರೇಶನ, ಅಂಬಿಕನ್ನ ಕರಕೊಂಡು ಬಟ್ಟೆ ಒಗ್ಯಾಕಂತ ಹಳ್ಳಕ ಹೋದೆ. ಬುಡ್ಡ ಹಿಂದಿಂದ ಬಂದ್ರಬರುಬಹುದಂತ, ಹಳ್ಳದಾಗ ಕಾಣಲಿಲ್ಲ. ಆಮ್ಯಾಲೆ ಗಂಡಗ ಅನುಮಾನ ಬಂದಂಗಾಗಿ ನನ್ನ ತೆಳಗಮ್ಯಾಗ ನೋಡಿ ‘ಅಲ್ಲಿಲ್ಲಿ ಬೆಂಡ್ಲೆಂದ್ದು ತಿರ್ಗಬ್ಯಾಡ’ ಅಂತ ಅಡ್ಡಗಟ್ಟಿದ್ರೂ ಒಂದ್ಯಾಲ್ಡು ದಿನ ಮಂದಿಹೊಲ್ಕ ಕೆಲ್ಸಕ ಹೋದೆ. ಅಲ್ಲಿನೂ ಬುಡ್ಡನ ಸುಳಿವು ಸಿಗಲಿಲ್ಲ.
ನಾನು ಹೋದಲ್ಲಿಗೆ ಬಂದಿದ್ದ ಈರವ್ವ, ಬಸವ್ವ, ಸವಿತವ್ವ ‘ಬುಡ್ಡನ ದೇವ್ರು ಹಂಗ.. ಬುಡ್ಡನ ದೇವ್ರು ಹಿಂಗ.. ನಾನ್ ಬುಡ್ಡಗ ಕಂಚಿನ ಕುದ್ರಿ ಮಾಡಿಸಿನಿ, ನಾನ್ ಬೆಳ್ಳಿತೊಟ್ಲ ಮಾಡಿಸಿನಿ ಲೋಕದಾಗ ಯಾರ್ಯಾರು ಮಾಡಿಸಿಲ್ಲ..’ ಅಂತ ತಾವತಾವ ಮೊಣಕಾಲು ಎತ್ರ ಸೀರೆ ಎತಿಗಂಡೇ ಟಬುರು ತೋರಿಸಿಕೊಳ್ಳುತಿದ್ವು. ಇವ್ರ ಕಿರಿಕಿರಿಗೆ ಅವತ್ತಿನಿಂದ ಕೆಲ್ಸಕ ಹೋಗದುಬಿಟ್ಟೆ. ‘ಆದ್ರ ನನ್ನಂಗ ಬುಡ್ಡನ ದೇವ್ರಿಗೆ ಬಂಗಾರ ಕುದ್ರಿ ಮಾಡಿಸಿದ್ರ ಇನ್ನೆಷ್ಟು ಧಿಮಾಕು ಮಾಡುತಿದ್ವೇನು ಖೋಡಿವು..’ ಅಂತ ಹಿಂದಕ ನಡಿದಿದ್ದೆಲ್ಲಾ ಕಣ್ಣಮುಂದ ಸುಳಿದಾಡಿದ್ವು.
ಅದು ಅಲೈಹಬ್ಬದ ದಿನ ಸುರೇಶ ಇನ್ನಾ ಹುಟ್ಟಿರಲಿಲ್ಲ. ಬುಡ್ಡಂದು ಅವಾಗ ಬೇಸಾ ನಡಿತಿತ್ತು. ಸುತ್ತಲ ಊರುಗಳಿಂದ ಒಳ್ಳೆದು, ಕೆಟ್ಟದು ಕೇಳಾಕಂತಲೇ ಉದ್ನಿಕಡ್ಡಿ, ತಾಯಿತ, ಎಲೆಡಿಕಿ, ನಿಂಬೆಣ್ಣು ಇಟ್ಕಂಡು ಬಂಡಾರ, ಕುಂಕುಮ ಬಡಕಂಡು ಬರುತಿದ್ರು. ಒಂದ್ಯಾಲ್ಡು ಹೇಳಿಕೆ ಸತ್ಯಾಗಿ, ಸುತ್ತ ನಾಕಹಳ್ಳಿಗೆ ಒಮ್ಮಿಗೆ ಹೆಸರಾಗಿದ್ದ. ಈಗೀಗ ದೊಡ್‍ದೊಡ್ಡೋರು ಹೇಳಿಕಿ ಕೇಳಾಕಂತಲೇ ಕಾರು ತಗಂಡು ಬರುತಿದ್ರು.
ಅವತ್ತು ಬುಡ್ಡನ ಸವಾರಿ. ಬೆಳ್ಗ ಮುಂಜಾನೆ ದೆವ್ರು ಹೊತಗಂಡು ಬಂದಾತ ಮನೆ ಎದಿರಿಗೆ ನಿಂತ. ದೆವ್ರಿಂದ ಜನ ಅಮಾರಿ-ದುಮಾರಿ ಮುಗಿಬಿದ್ದಿದ್ರು. ಎದ್ರಿಗಿದ್ದ ಬುಡ್ಡನ ದೇವ್ರಿಗೆ ತುಂಬಿದ ಕೊಡ ನೀರು ಸುರುವಿ ಡೊಗ್ಗುಮುಣಗಾಲಚ್ಚಿ ಭಕ್ತಿಭಾವದಿಂದಲೇ ಸಣಮಾಡಿದೆ. ಮುಲ್ಲಾಸಾಬಿ ಕಣ್ಣು ಪಿಕಿಪಿಕಿಳಿಸುತ್ತ ಏನೆನೋ ವಟವಟಂಥ ಲೋಬಾನದ ಮಂತ್ರ ಹೇಳುತಿದ್ದ. ಬುಡ್ಡ ಮೈ ತುಮ್‍ತುಂಬ್ಯಾಡಿ ಸಾಕಾಗಿ ದೇವ್ರು ಮೈಯ್ಯಾಗಿನ ಹೂವ್ವ ಕಿತ್ತಿಗಂಡು ನನ್ ಸೀರೆ ಹುಡ್ಯಾಗಾಕಿ ದಡದಡ ಐನೇರ ಓಣ್ಯಾಕೋದ. ಊರುಮಂದಿ ‘ಬೊಂಬರಾಹಿಂಮೋಮ್ ದುಲ್ಹಾ..ದುಲ್ಹಾ..’ ಅನ್ಕಂತ ಧಮ್ಮಂಥಂಗ ಓಡುತಿದ್ರು. ಈ ಡಿಗ್ರಿ ಕಲಿತ ಹುಡುಗ್ರು ‘ಬುಡ್ಡ ಲಲೀತವ್ವಗ ಪ್ರಪೋಸ್ ಮಾಡಿದಾ..ಮಾಡಿದಾ ಅನ್ಕಂತ.. ಅದ್ಯಾವುದೋ ಸೆಲ್ಪೆಂತ ಒಳ್ಳೊಳ್ಳಿಸಿ ತೆಕ್ಕಂತ ನಿಂತಿದ್ರು. ನನ್ಗ ತಡಕನಕಾಗಲಿಲ್ಲ. ಅಲ್ಲಿದ್ದ ಬಸವ್ವ, ಈರವ್ವನ ಮುಂದ ‘ನೋಡಾ ಯಕ್ಕಾ.. ಈ ಹುಡುಗ್ರು ಹೆಂಗ ಆಡಿಕೆಳ್ಳಾಕತ್ಯಾರ..’ ಅಂತ ಅವರ ಮುಂದ ಗೋಗರಿದೆ. ಅವ್ರೆಲ್ಲಾ ಆ ಹುಡುಗ್ರದೇ ಕರೆಟ್ಟು ಅನ್ನುವಂಗ ಅರುವಿಲ್ದಂಗ ನಕ್ರು. ಅವತ್ತೆ ಇವ್ರನೆಲ್ಲಾ ತುರುಬು ಹಿಡಕಂಡೇ ಬಡಿಬೇಕನಿಸ್ತು. ಗಂಡ ನೋಡಿದ್ರ ಹಿಡಕಂಡು ಒತ್ಯಾನ. ಅಂತ ಬ್ಯಾಡೆಂದು ಉಳ್ಳುಗ ಮನೆ ಸೇರಿದೆ.
ಬುಡ್ಡ ತನ್ನ ಸವಾರಿ ಆದಮ್ಯಾಲ ಗಂಡನ ಜತಿಗೆ ಬಂದು ‘ಮನ್ಯಾಗ ಕಾಡಿಕೈತಿ ಐದ್ವಾರ ಹಸೇನಾ-ಹುಸೇನಿಗೆ ನಡಕರ್ರಿ..’ ಅಂತ ಹೇಳಿದ. ನನ್ನೊಳಗ ಸಿಟ್ಟು, ಸೆಡುವಿದ್ರೂ ತಡಕಂಡು, ಅದರಂಗ ಐದ್ವಾರ ಮಡಿಲೆ ನಡಕಂಡೆ. ಅಮ್ಯಾಗ ವಸರ್‌ದಾಗ ಸುರೇಶನ ಹಡಿದೆ. ಆಮ್ಯಾಲಮೇಲೆ ಬುಡ್ಡ ಮನಿಗೆ ಬರೋದು ಜಾಸ್ತಿ ಮಾಡಿದ. ಬಂದಾತ ಸುರೇಶನ ಎತಿಗಂಡು ಗಲ್ಲಹಿಂಡಿ, ಲಚಲಚ ಮುದ್ದುಕೊಟ್ಟು ನನ್ನ ಒಂಥರಾ ನೋಡಾಕ ಶುರುಮಾಡಿದ. ಒಂದೆರ್ಡುಸಲ ಹೊಲ್ಕ ಹೋದಾಗ, ಹಳ್ಳಕ ಬಂದಾಗ ಹಿಂದಿಂದ ಬಂದು ಜಬಿಲಿನ್ಯಾಗ ಕಳ್ಳ ಕುಂತಂಗ ಮಾಡಿದ್ದ. ಅವಾಗ ಅಷ್ಟು ತಲಿ ಕೆಡಿಸಿಗಂಡಿರಲಿಲ್ಲ. ಆದ್ರ ಬುಡ್ಡನ ದೇವ್ರಿಗೆ ವಾರವಾರ ಬೇಸಾ ನಡಕಂತಿದ್ದೆ. ಮತ್ತೆ ಒಂದು ವರ್ಸದಾಗ ಗಂಡನ ಕಾಟಕ್ಕ ಅಂಬಿಕನ ಅಡಿದೆ. ‘ಎಲ್ಲಾ ಬುಡ್ಡನ ದೇವ್ರು ಹರಕಿಲಿಂದ ಬಂಗಾರದಂಥ ಮಕ್ಕಳಾದ್ವು..’ ಅಂತ ನಡ ಬ್ಯಾಸಿಗ್ಯಾಗ ಮಂದಿಕೂಡ ಬೆಂಗಳೂರುತನ ಸಿಮೆಂಟು ಕೆಲ್ಸದಾಗ ದುಡುದು ಎರಡು ತೊಲಿದು ಬಂಗಾರದ ಕುದ್ರಿ ಮಾಡಿಸಿ ಬುಡ್ಡನ ದೇವ್ರಿಗೆ ಹಾಕಿದೆ. ಆ ಬಂಗಾರ ಕುದ್ರಿ ಮುಲ್ಲಾಸಾಬಿನಿಂದ ದೈವಕೊಪ್ಪಿ ದೇವ್ರು ಪೆಟಾರದಾಗ ಭದ್ರವಾಗಿ ಸೇರ್ತಿ. ಬುಡ್ಡ ಒಳಗೊಳಗ ನನ್‍ಮ್ಯಾಲೆ ಸಿಟ್ಟಿಗೇರಿ, ‘ಆ ಬಂಗಾರ ಕುದ್ರಿ ನನ್ಗ ಸೇರಿದ್ದು..’ ಅಂತ ನಾಲ್ಕೈದ್ಸಲ ಮುಲ್ಲಾಸಾಬುನೊಂದಿಗೆ ಜಗಳಕ ಬಿದ್ದಿದ್ದ. ಆದ್ರ ಮುಲ್ಲಾಸಾಬಿ ಇದು ದೇವ್ರಿಗೆ ಸೇರಿದ್ದು ಅಂತ ದೈವಕ್ಕ ಹೇಳಿದ್ದ.
‘ಹಂಗೆಲ್ಲಾ ದೇವ್ರ ಸಾಮಾನು ಮುಟ್ಟಂಗಿಲ್ಲ.. ಅಕಸ್ಮಾತ್ ನಿಮ್ಮನ್ಯಾಗ ಹೇಳಿಕಿ ಕೇಳಾಕ ಬಂದವ್ರು ನಿನ್ಗ ಬಂಗಾರ, ಬೆಳ್ಳಿ, ರೊಕ್ಕ ಬೇಕಾದ್‍ಕೊಟ್ರ ಅದು ನಿನ್ಗ ಸೇರಿದ್ದು.. ಈ ಗುಡ್ಯಾಗಿನ ದೇವ್ರಿನ ಬಂಗಾರ ಮಾತ್ರ ದೇವ್ರಿಗೇ ಸೇರಿದ್ದು..’ ಅಂತ ದೈವ ಅಪ್ಪಣೆ ಕೊಟ್ಟಮ್ಯಾಲೆನೆ ಬುಡ್ಡ ನಮ್ಮನಿಗೆ ಬರೋದು ಬಿಟ್ಟ. ‘ಊರುಮಂದಿ ಕಂಚಿನ ಕುದ್ರಿ, ಬೆಳ್ಳಿಕುದ್ರಿ ಮಾಡಿಸಿದ್ರ ನಾನ್ ಬೆಂಗಳೂರುತನ ದುಡುದು ಬಂಗಾರ ಕುದ್ರಿ ಮಾಡಿಸಿನಿ ಯಾಕ್ ಮನಿಗೆ ಬರೋದು ಬಿಟ್ಟ ಏನ್ಕತೆ..’ ಅಂತ ದಿಂಗಿಡಿದು ಕಾಡಕತ್ತಿದ್ದು ಇಲ್ಲಿಗೆ ಮೂರ್ನಾಲ್ಕು ಅಲೈ ಹಬ್ಬಾದ್ರು ಮೈಮನಸಿನ್ಯಾಗನಿಂದ ಹೊರಹೋಗ್ದ ಹಿಂಗ ಕಾಲ ಕಳಿದಿದ್ದೆ.
ಒಂದಿನ ದೇವ್ರು ಪ್ರತ್ಯಕ್ಷ ಆದಂಗ ಬುಡ್ಡ ನಮ್ಮನಿಗೆ ಬಂದ. ಅವತ್ತು ಕೂಡ ವರ್ಷದಂಗ ಅಲೈಹಬ್ಬ. ತನ್ನ ಸವಾರಿ ಆಗಿತ್ತು. ಬೆಳಕರಿದ್ರೆ ದಫನ್ ಇತ್ತು. ಸೀದಾ ಮನಿಗೆ ಬಂದವನೆ ಸುರೇಶನಂತೆ ಅಂಬಿಕನ ಎತಿಗಂಡು ಗಲ್ಲಹಿಂಡಿ, ಲಚಲಚ ಮುದ್ದುಕೊಟ್ಟು ‘ನಮ್ ಜ್ವಾಳದಾಗ ಕಸ ಬಿದ್ದೈತಿ ಕಳೆವುಕಾ ಒಂದಿಬ್ಬರಿಗೆ ಹೇಳಿನಿ.. ನೀನೊಬ್ಬಾಕಿ ಹೋಗು..’ ಅಂತ ಅವತ್ತು ನೋಡಿದಂಗ ನೋಡಿ ಹೋದ. ನನ್ಗ ಅಷ್ಟೇ ಬೇಕಿತ್ತು. ಪುಣ್ಯಕ ಗಂಡ ಅದೆಲ್ಲಿಗೋಗಿತ್ತು. ಸುರೇಶ ಹೊರ್ಗ ಗೋಲಿ ಆಡುತಿದ್ದ. ಬುಡ್ಡ ಬಂದು ಹೋಗಿದ್ದು ನೋಡಿರಲಿಲ್ಲ. ಬಾಳ ದಿನದ ಬೆಟ್ಟಿ, ತಕ್ಷಣಕ ಗಾಬರಿ, ಖುಷಿ ಎಲ್ಲವನ್ನು ಕೊಟ್ಟಿತ್ತು. ಇದೇ ಗುಂಗಿನ್ಯಾಗ ಮನೆಕೆಲ್ಸ ಬಡಬಡ ಮುಗಿಸಿ ರಸರಾಯಿ ಬುತ್ತಿ ಕಟಿಗಂಡು, ದಡಿಸೀರೆ ಉಟ್ಗಂಡು, ತುರುಬಿನ ತುಂಬ ಹೂವ್ವಿಟ್ಗಂಡು ಬುಡ್ಡನ ಹೊಲ್ಕ ತಯಾರಾದೆ. ಹೆಂಗೋ ಬುಡ್ಡ ಹೊಲ್ಕ ಬಂದೇ ಬರ್ತಾನಂತ ಹುರ್ಯಾಗಿದ್ದೆ. ಬುಡ್ಡನ ಹೊಲ್ಕ ಹೋಗಮುಂದ ಸುರೇಶ, ಅಂಬಿಕಾ ‘ನಾನ್‍ಬರ್ತಿನಿ.. ನಾನ್‍ಬರ್ತಿನಿ..’ ಅಂತ ಅಂಟ್ರಗಾಲುಬಡದ್ವು. ಎಷ್ಟು ಬ್ಯಾಡಂದ್ರು ಬಿಡ್ಲಿಲ್ಲ ಬಾರಿಬೇಲಿಯಂಗ ಬೆನ್ನತಿದ್ವು. ‘ನಾನ್ ಎತ್ತಿಗಳಲ್ಲ ನೀವಾ ಬರ್ರಿ..’ ಅಂತ ಮುಂದಮುಂದ ಹೋದೆ.
ಸುರೇಶ, ಅಂಬಿಕಾ ದಾರ್ಯಾಗಿನ ಗಿಡಮರ ನೋಡಿಕೆಂತ ‘ಅದು ನನ್‍ಗಿಡ.. ಇದು ನಿನ್‍ಗಿಡ..’ ಅಂತ ಹಿಂದಿಂದ ಆಡಿಕ್ಯಾಂತ ಬರತಿದ್ವು. ಅಂಬಿಕಾ ಒಮ್ಮೆಲೆ ಅರಿಚಿದ್ಲು ಗಾಬರ್ಯಾಗಿ ಹಿಂದಕ ನೋಡಿದೆ. ಅಂಬಿಕಗೆ ಚಿಟುಮುಳ್ಳು ಚುಚ್ಚಿತ್ತು. ‘ಬಕ್ಕಬಾರ್ಲಾ ಬಡಿಯಾ..’ ಅಂತ ಮುಳ್ಳು ಕಿಚಕ್ಕನ ಕಿತ್ತಿದೆ. ಎತಿಗಂಡು ಹೋಗಂತ ಒಂಟಿ ಕಾಲಿಲೆ ಹಠಿ ಹಿಡಿದ್ಲು. ಎತಿಗಂಡಿದ್ದೆ ತಡ. ಸುರೇಶ ‘ಯವ್ವಾ ನನ್ನ ಎತಿಗ್ಯಾ..’ ಅಂತ ಎಗ್ಗೆಗ್ಗೆರಿ ಕುಣಿದ. ಸಿಟ್ಟುಬಂದು ‘ನಿನ್ನಪ್ಪನಾ ಏಳು ಮಿಂಡ್ರಿಗುಡಿದೇನ್ಯಾ ಕತ್ತೆ ಆಗಿದ್ದೆಲ್ಲಾ.. ನಡ್ಯಾಕ ಏನ್‍ದಾಡಿ’ ಅಂತ ಸತುವಿದ್ದಷ್ಟು ಡೆಮ್ಮಂತ ಗುದ್ದಿದೆ. ಅವಾಗ ಹಿಂದಿಂದ ಉಳ್ಳುಗ ಬಂದ. ಕಡಿಗಿ ಬುಡ್ಡನ ಹೊಲ್ಕ ಬಂದಿವಿ. ‘ಯವ್ವಾ ಇದು ನಮ್ಮ್ಹೊಲ ಅಲ್ಲಂಗೆ..’ ಅಂತ ಸುರೇಶ ಮತ್ತೆ ಬ್ಯಾರೆ ರಾಗತೆಗದ. ‘ಇದು ನಮ್ಮ್ಹೊಲ ನೀನ್ ನೋಡಿಲ್ಲ..’ ಅಂತ ಇಬ್ಬರ್ನ ಹುಂಚೆಗಿಡದ ಕೆಳ್ಗ ಕುಂದ್ರಿಸಿ, ಹೊಲ್ದಾಗ ಯಾರ್ಯಾರ ಕೆಲ್ಸಕ ಬಂದಾರಂತ ಕಣಿಮ್ಯಾಗ ನಿಂತು ನೋಡಿದೆ. ತಾಸಾದ್ರು ಕೆಲ್ಸಕ ಯಾರು ಬರಾಣ ಕಾಣಲಿಲ್ಲ. ಸುತ್ತಮುತ್ತಲ ಅಡಿವ್ಯಾಗ ಯಾರು ಕಾಣಲಿಲ್ಲ. ಆರ್ಯಾಣಾಗಿತ್ತು. ಮತ್ತೀಟು ಧೈರ್ಯಬಂತು. ಇದ್ರ ಸಲುವಾಗಿನೇ ಮಂದಿಕೂಡ ಅಂತ ಸುಳ್ಳುಹೇಳಿ, ಒಬ್ಬಾಕಿನೇ ಕರಿಸ್ಯಾನಲ್ಲಂತ ಗೊತ್ತಾಗಿ ಒಳಗೊಳಗ ನಕ್ಕಂತ, ಬುಡ್ಡ ಬರೋ ದಾರಿ ನೋಡಿಕೆಂತ ಕಸಕಿತ್ತಾಕ ಕುಂತೆ. ಆಗಲೇ ನಡುಮಟ ಹಚ್ಚಗ ಜ್ವಾಳ ಬೆಳಿದಿತ್ತು. ಯಾರ್ ನೋಡಗಲ ಅನುವಗುತ್ತ ಅನ್ಕಂಡೆ.
ಅಂಬಿಕಾ ಹುಂಚೆಗಿಡ ನೋಡಿ ಹುಂಚೆಣ್ಣು ಹುಂಚೆಣ್ಣು ಅಂತ ಅಳಾಕತಿದ್ಲು. ಆಗಲೆ ಹುಂಚೆಣ್ಣು ಚಿಗುರು ಹಿಡಿದಿತ್ತು. ಸುರೇಶ ಮಂಗ್ಯಾನಂಗ ಗಿಡಏರಿ ಹುಂಚೆಣ್ಣು ಹರ್ಯಾಕ ಜೋತುಬಿದ್ದ. ಅಂಬಿಕಾ ಹುಂಚೆಣ್ಣು ಹಾಯೋದು ಕಾಣುತಿತ್ತು. ‘ಬುಡ್ಡ ಈಗ ಬಂದಾನು ಆಗ ಬಂದಾನು..’ ಅಂತ ಬರೋ ದಾರಿನ ನೋಡುತ್ತ ಎದಿ ರುಮ್‍ರುಮ್ ಅಂತಿತ್ತು. ಹೊತ್ತು ಹಣ್ಣೆತ್ತಿಗೇರಿತ್ತು. ಮರಿಪಟ್ಲೆ ತುಂಬಿದ ಜ್ವಾಳದಾಗ ಬುಡ್ಡ ಅದೆಂಗೋ ಎದಿರಿಗೆ ಬಂದು ಕುಂತಿದ್ದ. ಏಕದಮ್ಮು ಹೆದರಿಕೆಂಡು, ನಾಚಿದೆ. ಬಗಲಾಕ ಬಂದವನೆ ಎದಿರಿಗೆ ಕುಂತ. ಬುಸ್ಸಂಥ ಬೆಚ್ಚಗ ಉಸ್ರುಬಡಿತು. ಸುರೇಶ ಕೊಟಾಕೊಲ್ಲಿಗೆ ಏರಿದವ್ನು ಹೆಂಗ ನೋಡಿದ್ನೋ ಏನೋ.. ‘ಯವ್ವೋ ನಮ್ಮ್ಹೊಲ್ದಾಗ ಯಾರ ಬಂದಾರ..’ ಅಂತ ಗಂಟ್ಲಕಿತ್ತಂಗ ಕೂಗಿದ. ಎದೆ ತಣ್ಣಗಾಗಿ ಯಾರಿಲ್ಲಲ್ಲಲೋ.. ಅಂತ ಜಿಗುತು ಕೂಗಿ ತಲೆಬಗ್ಗಿಸಿ ಕುಂತೆ. ಮೆಲ್ಲಕ ತಲೆತ್ತಿ ಗಲ್ಲಹಿಂಡಿ ತುರುಬು ಬಿಚ್ಚಿದ. ‘ಅಪ್ಪಾ ಬಂದ ಅಪ್ಪ..’ಅಂತ ಅಂಬಿಕಾ ಚಪ್ಪಳಿ ಬಡಬಡದು ಕುಣಿತಿದ್ಲು. ಬುಗುಲುಬಂದು ಪಸಕ್ಕನ ಎದ್ದು ನೋಡಿದೆ. ಯಾರೋ ದಾರ್ಯಾಗ ಬಂಡಿ ಹೊಡಕಂಡು ಹೋಗೋದು ಕಂಡು ಎದೆ ತಣ್ಣಗಾತು. ತುರುಬು ಬಿಚ್ಚಿದವನೆ ರಾಶಿಯಂಥ ಕೂದ್ಲದಾಗ ಚೆಂಡು ಹೂವ್ವ ಅದೆಲ್ಲಿಗೊ ಪಸಕ್ಕನ ಜಾರಿಬಿತ್ತು. ಗೊತ್ತಾಗಲಿಲ್ಲ. ಮೈಮುಟ್ಟಿದ, ಮೈಯೆಲ್ಲಾ ಗುಲುಗುಲು ಇಟ್ಟಂಗಾತು. ಎಂದೋ ಸಪ್ಪ್ಯಾ ಮರಿಗಿಟ್ಟಿದ್ದ ಕೆಂಪನ ಬೀರುಬಾಟ್ಲಿ ಒಂದೀಟು ಕುಡ್ದು, ಮುನುಮುನುಗಿ ಕುಡಿ ಎಂದು ಬಾಯಿಗೆ ಮೆಲ್ಲಕ ತಗಲಿಸಿದ. ತಣ್ಣಗ ಘಮ್ಮೆಂದು ಹಿಸ್ಸಗರ್ದು ಒಲ್ಲೊಲ್ಲೆಂತ ತಲೆ ಅಲ್ಲಾಡಿಸಿದೆ. ಹೆಗಲಮ್ಯಾಲೆ ಕೈಯಾಕಿ ‘ಮಜ್ಜಿಗಿ ಇದ್ದಂಗಿರ್ತದ ಕುಡಿ..’ ಎಂದು ಒತ್ತಿ ಕುಡಿಸಿದ. ಒಂದು ಕೈ ಹೂವ್ವಿನಂಗ ಬೆನ್ನು ಸವರಾಡುತಿತ್ತು.
ಒಂಥರಾ ಉರಿ, ತಣ್ಣಗ, ಕಾಕಾಗಿ ಕಕ್‍ಕಕ್ ಕಕ್ಕಿದೆ. ನೆಲಮಾಡ ತೆಳ್ಗ-ಮ್ಯಾಗಾಗಿ ಮೈತೇಲಾಡಿ ತಲೆ ಗಿಮಿಗಿಮಿ ತಿರುಗ್ತಿ. ತಲೆಬೆನ್ನು ಬಾಚಿ ಅಂಗಾತ ಮಲಿಗಿಸಿದ. ಸುಡುಗಾಡು ಸೂರ್ಯ ಕಣ್ಣಿಗೆ ಚೂರಿಯಂಗ ಚುಚ್ಚಿದ. ದಡಿಸೀರೆ ಮುಖದ ಮ್ಯಾಲೆ ಎಳೆದಾಗಲೆ ಕೆಂಪಕೆಂಪಗ ತಣ್ಣಗ ಕಾಣಕತ್ತಿದ. ಸುರೇಶ ಗಿಡದ ಮ್ಯಾಲಿದ್ದವನು ‘ಯವ್ವಾ ನೀನನ್ಗ ಕಾಣವಲ್ಲಿ ಕೈಯೆತ್ತು.. ಹೋಲ್ದಾಗ ಯಾರ ಬಂದಾರ..’ ಅಂತ ಮತ್ತೆ ಕೂಗಿದ. ಈ ಗದ್ಲದಾಗ ಇವ್ನದೇನ್ ಗಲಾಟಿ ಅಂತ ಹೋಗಿ ರಪ್ಪನ ಬಡಿಬೇಕನಿಸ್ತು. ‘ಯವ್ವಾ ನಿಂತಾಕ ಬರ್ಲಾ..’ ಅಂತ ಅಂಬಿಕಾ ಸಾಲಿಡಿದು ಬಂದಂಗಾತು. ‘ಇಲ್ಲಿ ಕಲ್ಡಿಬವ್ವೈತಿ ಬರಬ್ಯಾಡ..’ ಅಂತ ಹುರಿಮಾಡಿ ತೂತುಕುಂಡಿಲೆ ಕುಂತಿದ್ದ ಬುಡ್ಡನ ಕಲ್ಡಿಮೀಸೆಗೆ ಕೈಯಾಕಿ ಮುಸುಮುಸು ನಕ್ಕಂತ ಹೇಳಿದ್ದೇ ತಡ. ‘ಲೇ..ಲಲೀತಾ.. ನಾಳೆ ದೇವ್ರು ಧಪ್ಪನ.. ಆ ಎರ್ಡು ತೊಲಿದು ಬಂಗಾರದ ಕುದ್ರಿನಾ.. ನನ್ಗ ಮಾಡಿಸಿಯಾ.. ಆ ತುಡುಗು ದೇವ್ರಿಗೆ ಮಾಡಿಸಿಯಾ ಮೊದ್ಲು ಬೊಗಳು..’ ಅಂತ ಕುಕ್ಕುರಲೇ ಕುಂತವನು ಗಟ್ಟಿಗೆ ಗಂಟ್ಲಹಿಡಿದ. ಪೆಕಪೆಕ ಒದ್ದಾಡಿದೆ. ಯಾರೋ ಒಂದಿಬ್ಬರು ಸರಸರ ಕುತ್ಗಂಡು ಬಂದಂಗಾತು. ಗಾಬರ್ಯಾಗಿ ಚಿಟ್ಟನ ಚೀರಾಕ ಬಾಯಿ ಕಟ್ಟಿತ್ತು. ಸಪ್ಪ್ಯಾಗ ಕಣ್ಣು ನಿಚ್ಚಳ ಕಾಣಲಿಲ್ಲ. ಜಾಡಿಸಿ ಒದ್ಯಾಕ ಸತುವು ಮಾಡಿದೆ, ಕಾಲು ಎದ್ದೇಳಲಿಲ್ಲ. ಸುರೇಶ, ಅಂಬಿಕಾ ಹುಂಚೆಗಿಡದ ಕೆಳ್ಗ ಯವ್ವಾ.. ಯವ್ವೋ!!! ಅಂತ ಅಳೋದು, ಕಿರುಚೋದು, ಸಪ್ಪ್ಯಾಗ ಹುಡಿಕ್ಯಾಡೋದು ಮಾತ್ರ ಕಿವಿಗೆ ಕಟ್ಟಿದಂಗ ಕೇಳಿಸುತಿತ್ತು. ಆಮೇಲೆ ಎಚ್ಚರನೇ ಆಗಲಿಲ್ಲ.
ಅಂಬಿಕಾ, ಸುರೇಶ ಮೈಮ್ಯಾಲೆ ಬಿದ್ದು ‘ಯವಾ ಎದ್ದೆಳಂಗೆ.. ‘ಯವ್ವೋ ಎದ್ದೆಳಂಗೆ..’ಅಂತ ಎದೆದೆ ಬಡ್ದು ಎಚ್ಚರಿಸಿದಾಗಲೇ ಎಚ್ಚರಾಗಿದ್ದು. ಕಣ್ಣು ತೆರೆದೆ. ಕಣ್ಣೆಲ್ಲಾ ನೀರು. ಮಾತೇಳಲಿಲ್ಲ. ಬಾಯಿ ಕಲ್ಲಾಗಿತ್ತು. ಎದ್ದೆಳಲು ತೊಡಿ ತಣ್ಣಗಾಗಿ, ಮೈ ಹೆಣಭಾರಾಗಿತ್ತು. ಸುರೇಶನ ಹೆಗಲಿಡಿದು ಊರದಾರಿ ನೋಡಿದೆ. ಊರಿಗೆ ಬೆಂಕಿ ತಗಲಿದಂಗ ಆ ಸೂರ್ಯ ಆ ನಾಲ್ಕು ಮಂದಿನ ಕರಕೊಂಡು ತಾಯಿ ಹೊಟ್ಯಾಗ ತಣ್ಣಗ ಇಳಿತ್ತಿರುವುದು ಮಸುಮಸುಕಾಗಿ ಕಂಡಿತು. ಅದ್ಹೇಗೋ ಕತ್ತಲಾಗಿ ಬೆಳಕು ಹರಿದಿದ್ದು, ದೇವ್ರ ದೊಡ್ಡಗುಣ.
ಮರುದಿನ ಅಲೈದೆವ್ರುಗಳ ದಫನ್, ದೇವ್ರುಗಳನ್ನು ಕೊನೆದಾಗಿ ಹೊಳಿಗೆ ಕಳಿಸಲು ಅಲೈ ಕುಣಿಸುತ್ತ ಊರುಮಂದಿ ನಿಂತಿದ್ರು. ಎಲ್ಲ ದೆವ್ರುಗಳು ಎದ್ದಂತೆ ಬುಡ್ಡನ ದೆವ್ರುನೂ ಎದ್ದಿತ್ತು. ದಫನ್ ದಿನ ಬುಡ್ಡನ ದೆವ್ರು ದೆವ್ವ ಬಡಿದುಕೊಂಡವರಿಗೆ ದೆವ್ವ ಬಿಡಿಸುವುದರಲ್ಲಿ ಊರಿಗೆ ಹೆಸರಾಗಿತ್ತು. ಹಾಗಾಗಿ ಊರುಮಂದಿ ದೆವ್ವ ಬಡಿದುಕೊಂಡವರಿಗೆ ಬುಡ್ಡ ಹೆಂಗ ಕೂದಲಿಡಿದು ದೆವ್ವ ಬಿಡಿಸುತ್ತಾನೆಂದು ಕಾತುರದಿಂದ ನೋಡಾಕ ನಿಂತಿದ್ರು. ಗಂಡ ಅಂಬಿಕ, ಸುರೇಶನ ಕರಕೊಂಡು ದೂರದಿಂದ ಬುಡ್ಡನ ಬ್ಯಾಡ್ರ ದೇವ್ರಿಗೆ ಕೈಮುಗಿಯುವುದು ಕಾಣುತಿತ್ತು. ಮುಲ್ಲಾಸಾಬು ಲೋಬಾನದ ಹೊಗೆಬ್ಬಿಸಿ ತಾನೇ ಕಾಣದಂಗಾಗಿದ್ದ. ಬುಡ್ಡ ದೆವ್ವ ಬಡಿದುಕೊಂಡವರ ನಡುಕ ನಿಂತು ಮೈ ಮಣಮಣಿಸುತಿದ್ದ. ಬುಡ್ಡನ ಸೋಗು, ವೈಯ್ಯಾರ ನೋಡಿ ನಿತ್ರಿಸಿಕೊಳ್ಳಲಾಗಲಿಲ್ಲ. ಮೈ ಸೊಡೆಬಿಟ್ಟು ಕುಣಿಯತೊಡಗಿದೆ. ಹಿಂದಿದ್ದ ಬಸವ್ವ, ಸವಿತವ್ವ, ಈರವ್ವ ‘ಲಲೀತವ್ವಗ ದೆವ್ವ ಬಡುಕೊಂಡೈತಿ..’ ಅಂತ ಕೊಕಾಸಿ ನಕ್ಕು ಬುಡ್ಡನ ಮುಂದ ದಬ್ಬಿದರು. ಸೀದಾ ಬುಡ್ಡನ ಪಾದಕ್ಕ ಬಿದ್ದೆ. ಬುಡ್ಡ ತುರುಬು ಹಿಡಿದವನು ಮೈತುಂಬಿ ಒಂಟಿಕಾಲಿಲೆ ಕುಣಿಯುತ್ತ ದರದರ ಎಳೆದಾಡಿದ. ನನ್ಗ ಕೈಕಾಲು ಕೆತ್ತಿ ರಗುತ ತಿಳಿತಿಳಿಯಾಗಿ ಹೊಡಿತಿತ್ತು. ಊರುಮಂದಿ ಕ್ವಾಣ ಕಡಿಯುವವರಂಗ ನೋಡಾಕ ಮುಗಿಬಿದ್ದಿದ್ರು. ಇನ್ನುಳಿದ ದೆವ್ರು ಹಿಡಿದುಕೊಂಡವ್ರು ಬುಡ್ಡನೊಂದಿಗೆ ಎಲ್ಲಿಬೇಕಲ್ಲಿ ಕೈಯಾಕಿದ್ರು. ಗದ್ಲ ಹೆಚ್ಚಾಗತೊಡಗಿತು. ಹಿಂದೆ ಅಲೈ ಕುಣಿಯೊಳಗಿನ ಬೆಂಕಿ ನನ್ನ ಮೈಯ್ಯಂಗ ನಿಗಿನಿಗಿ ಉರಿತಿತ್ತು. ಹಣೆಗಚ್ಚಿದ ಬುಡ್ಡನ ಎರಡು ಪಾದಗಳನ್ನು ಸತುವಿಡಿದು ಎತ್ತಗೋ ಎಳೆದೆ. ದೇವ್ರು ಹೊತ್ತ ಬುಡ್ಡ ಅಲೈಕುಣಿಯೊಳಗೆ ದಪ್ಪನೆ ಅಂಗಾತ ಬಿದ್ದ. ಬಿದ್ದಿದ್ದೇ ತಡ ಬೆಂಕಿ ಛಟಪಟಂತ ಕಿಡಿಕಿಡಿ ಚಿಮ್ಮಿ ಹೊಗೆ ಮುಗಿಲಿಗೆ ಎದ್ದಿತು. ಸುತ್ತ ಯಾರ್ಯಾರು ಕಾಣಲಿಲ್ಲ. ‘ಬುಡ್ಡನ ದೇವ್ರು ಕುಣ್ಯಾಕ ಬಿತ್ತು.. ಬುಡ್ಡ ಸಾಯ್ತಾನ..’ ಅಂತ ಊರುಮಂದಿ ನನ್ನ ದೂರದಬ್ಬಿ ಅಲೈಕುಣಿಸುತ್ತ ನೀರು, ಮಣುಗ್ಗಿ ಹೌಹಾರಿ ಕೂಗಾಡತೊಡಗಿದ್ರು. ಮುಲ್ಲಾಸಾಬು ಓಡೋಡಿ ಬಂದು ಪಂಚಾರತಿಯೊಳಗಿದ್ದ ಸುಡುಸುಡು ಬೂದಿ ‘ಆಸ್ಮಿಲ್ಲಾ.. ಬಿಸ್ಮಿಲ್ಲಾ..’ ಅಂತ ನನ್ನ ಹಣೆಗೆ ಹಚ್ಚಿ, ಬೆನ್ನು ದಪದಪ ಬಾಚಿದ. ಇನ್ನೂ ನನ್ನೊಳಗಿನ ದೆವ್ವ ಬಿಟ್ಟಿರಲಿಲ್ಲ. ಕೊಕಾಸಿ ನಗುತ್ತ, ಗಂಡಸಿನಂಗ ಕ್ಯಾಕರಿಸಿ ಕೇಕೆ ಹೊಡಿಯುತ್ತ, ಮೈ ಮಣಮಣಿಸುತ್ತ, ಕೆಂಗಣ್ಣು ಅರಳಿಸಿ ಉಬ್ಬುಬ್ಬಿ ಕುಣಿಯುತ್ತಲೇ ಇದ್ದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.