ADVERTISEMENT

ಬಿ.ಎಲ್‌.ವೇಣು ಅವರ ಕಥೆ: ಸಂಗಾತಿ

ಬಿ.ಎಲ್.ವೇಣು
Published 10 ಡಿಸೆಂಬರ್ 2023, 0:35 IST
Last Updated 10 ಡಿಸೆಂಬರ್ 2023, 0:35 IST
ಸಂಗಾತಿ- ಸಾಂದರ್ಭಿಕ ಚಿತ್ರ
ಸಂಗಾತಿ- ಸಾಂದರ್ಭಿಕ ಚಿತ್ರ   

ಬಹಳ ವರ್ಷಗಳ ನಂತರ ಪತ್ರ ಬರೆದು ನನ್ನ ಮನದ ಕೊಳದಲ್ಲಿ ಅಲೆಗಳನ್ನೆಬ್ಬಿಸಿದ್ದೀಯ ಮಿತ್ರ. ನನ್ನ ಬಗ್ಗೆ ಕಾಳಜಿಯಿಂದ ವಿಚಾರಿಸಿಕೊಳ್ಳುವ ನೆಪದಲ್ಲಿ ನಿನ್ನ ಸಾಂಸಾರಿಕ ಜೀವನದ ಸಂಭ್ರಮವನ್ನು ಸಾರುವ ಸಡಗರವೇ ಪತ್ರದಲ್ಲಿ ಹೆಚ್ಚು ಕಂಡಿದೆ - ಸಂತೋಷವೆ. ನಿನ್ನ ಮಗ ಹೊಸ್ತಿಲು ದಾಟಿದ್ದು, ದೊಡ್ಡ ಮಗನಿಗೆ ಪ್ರಸಿದ್ದ ಕಾಲೇಜೊಂದರಲ್ಲಿ ಸೀಟ್‍ ಸಿಕ್ಕಿದ್ದು, ನಿನ್ನ ಶ್ರೀಮತಿಯವರು ಹಾಕಿದ ಉಪ್ಪಿನಕಾಯಿಯು ಮಹಿಳಾ ಸಮಾಜದಲ್ಲಿ ಪ್ರಥಮ ಬಹುಮಾನ ಗಿಟ್ಟಿಸಿದ್ದು, ಅದು ‘ಹೊಸರುಚಿ’ ಪತ್ರಿಕೆಯಲ್ಲಿ ಪ್ರಕಟವಾಗಿದ್ದು, ನಿನ್ನ ಮತ್ತೊಂದು ವೈನ್‍ಶಾಪಿಗೆ ಪರ್ಮಿಟ್ ಸಿಕ್ಕಿದ್ದು, ತಂಗಿಗೆ ಗಂಡು ಸಿಕ್ಕಿದ್ದು ಇತ್ಯಾದಿ ತೆಲುಗು ಫ್ಯಾಮಿಲಿ ಸೆಂಟಿಮೆಂಟ್ ಸಿನಿಮಾ ನೋಡಿದಂತಹ ಅನುಭವ ನನಗೆ ನೀಡಿತು-ಒಟ್ಟಾರೆ ಅಭಿನಂದನೆಗಳು.

ನಿನಗೂ ಮದುವೆಯಾಗಿದ್ದರೆ ಈ ಹೊತ್ತಿಗೆ ಮೂರು ಮಕ್ಕಳಾಗಿರ್ತಿದ್ವಲ್ಲಯ್ಯ ಎಂದು ಚ್ಯಾಷ್ಯಿ ಮಾಡಿದ್ದೀಯೇ. ಮೂರೇನು ಆರೂ ಆಗ್ತಿದ್ದವೇನೋ, ಮಕ್ಕಳ ಮಾಡೋದೆ ಒಂದು ದೊಡ್ ಡಸಾಧನೆ ಅಂತ ನಾನಂದುಕೊಂಡಿಲ್ಲಪ್ಪಾ. ನಿನ್ನಲ್ಲಿನ್ನೂ ಪ್ರೇಮ ಉಸಿರಾಡುತ್ತಿದೆಯೇ ಎಂದು ಕೆಣಕುತ್ತಾ ಅಶ್ವಿನಿಯಂತೂ ಕೈ ಕೊಟ್ಟಳು. ಮಕ್ಕಳ ತಾಯಿಯೂ ಆದಳು. ಈಗಾಗಲೇ ಪ್ರೇಮಾಘಾತಗೊಂಡಿರುವ ನೀನೊಂತರಾ ಆಕ್ಸಿಡೆಂಟ್ ಆದ ಬಸ್ಸಿನಂತೆ ವಿಲಕ್ಷಣ. ನಿಮ್ಮ ತಾಯಿ ನೋಡಿದವರನ್ನು ಇನ್ನಾದರೂ ಲಗ್ನವಾಗಿ ಬ್ರಹ್ಮಚರ್ಯಕ್ಕೆ. ‘ಗುಡ್ ಬೈ’ ಹೇಳು ಅಂತೆಲ್ಲಾ ಉಪದೇಶವನ್ನು ಮಾಡಿದ್ದೀಯೆ-ಥ್ಯಾಂಕ್ಸ್ ಕಣೋ. ನೀನಷ್ಟೆ ಅಲ್ಲ ಇತ್ತೀಚೆಗೆ ನನ್ನ ಜೀವನದ ಬಗ್ಗೆ ತೀರ್ಪುಕೊಡುವ ಮಾರ್ಗದರ್ಶಿಸುವ ಚಪಲ ಅನೇಕರಲ್ಲಿ ಚಿಗುರೊಡೆಯುತ್ತಿರುತ್ತೆ. ಎಲ್ಲರಿಗೂ ಉತ್ತರಿಸಲಾಗದಿದ್ದರೂ ನಿನಗಂತೂ ಉತ್ತರಿಸುತ್ತೇನೆ ಅಥವಾ ಈ ಮೂಲಕ ನಿನ್ನ ಅಂತರಂಗವನ್ನು ನಾನು ಶೋಧಿಸುವ ಪ್ರಯತ್ನ ಮಾಡುತ್ತೇನೆ. ಅಪಘಾತಗೊಂಡ ಬಸ್ ವಿಲಕ್ಷಣವೇನೋ ಸರಿ. ಆದರೆ ಆಘಾತಕ್ಕೊಳಗಾಗುವ ಮನಸ್ಸು ಮೂಸೆಯಲ್ಲಿ ಬೆಂದ ಚಿನ್ನದಂತೆ ಎಂಬ ಭಾವ ಭಾವನೆ ನನ್ನದು. ಉಳಿಯ ಪೆಟ್ಟುಗಳಿಂದ ಶಿಲೆ ಶಿಲ್ಪವಾದಂತೆ ಅನೇಕ ಆಘಾತಕ್ಕೊಳಗಾದ ಮನಸ್ಸು ಮೂಸೆಯಲ್ಲಿ ಬೆಂದ ಚಿನ್ನದಂತೆ ಎಂಬ ಭಾವ ಭಾವನೆ ನನ್ನದು, ಉಳಿಯ ಪೆಟ್ಟುಗಳಿಂದ ಶಿಲೆ ಶಿಲ್ಪವಾದಂತೆ ಅನೇಕ ಆಘಾತಕ್ಕೊಳಗಾದ ಮನುಷ್ಯ ಓದಲರ್ಹವಾದ ಕೃತಿಯಾಗಿ ಬಿಡುತ್ತಾನೆ. ಎಲ್ಲರಿಗೂ ಮಕ್ಕಳು ಮದುವೆ ಆಗುತ್ತವೆ ಬಿಡಯ್ಯಾ. ನನ್ನ ಗತಕಾಲದ ಪ್ರೇಮಿಗೂ ಮಕ್ಕಳಾಗಿವೆ. ಡ್ರಮ್‍ನಂತೆ ದೇಹ ಬೆಳೆಸಿಕೊಂಡಿದ್ದಾಳೆ. ಆಡಿಕೊಳ್ಳುತ್ತಿಲ್ಲ ಮಾರಾಯ ಅದರರ್ಥ ಸುಖವಾಗಿದ್ದಾಳಂತಷ್ಟೆ, ಚಿನ್ನದ ಅಂಗಡಿ, ಬಟ್ಟೆ ಅಂಗಡಿ, ಕಾಪಿ ಡೇ ಮಾಲ್‍ಗಳು ಪಿವಿಆರ್‍ಗಳೇ ಅವಳ ಪ್ರಪಂಚವೆನಿಸುತ್ತದೆ. ಕೆಲವರಿಗೆ ಹೆಂಡತಿಗೆ ಸೀರೆ ತಕ್ಕೊಟ್ಟರೆ, ಮಗನಿಗೆ ಕಾನ್ವೆಂಟ್‍ನಲ್ಲಿ ಸೀಟ್ ಸಿಕ್ಕರೆ ಜನ್ಮಸಾರ್ಥಕವಾದ ಭಾವನೆ. ಆದರೆ ಇವೆಲ್ಲಾ ಇಲ್ಲದೆಯೂ ಜೀವನವನ್ನು ಆಸ್ವಾದಿಸುವ ಸಾರ್ಥಕಗೊಳಿಸುವ ಅನುಭವ ಎಂತದ್ದೆಂದು ಗೊತ್ತಿದೆಯಾ ನಿನಗೆ? ನಿನ್ನ ಪಾಲಿಗೆ ಪ್ರೇಮವೆಂಬುದು ಹರೆಯದಲ್ಲಿರುವವರಿಗೆ ‘ಟೈಂಪಾಸ್’ ಮೆಟೀರಿಯಲ್ ಅಷ್ಟೆ. ಆದರೆ ನಮ್ಮಂಥವರಿಗೆ ಕಳೆದುಕೊಂಡರೂ ಅದೊಂದು ದಿವ್ಯಾನುಭವ, ಅನುಭೂತಿ, ನೀನಿದನ್ನು ಓದುವಾಗ ಖಂಡಿತ ಪಕ್ಕನೆ, ನಗುತ್ತೀ ಎಂದೂ ಊಹಿಸಬಲ್ಲೆ. ಆದರೆ ನಾನಂತೂ ಈಗಲೂ ಪ್ರೇಮವನ್ನು ಕುರಿತು ಸೀರಿಯಸ್ ಆಗಿ ಬರೆಯಬಲ್ಲೆ ವಸ್ತುನಿಷ್ಠವಾಗಿ ಯೋಚಿಸಬಲ್ಲೆ ವಿಮರ್ಶಿಸಬಲ್ಲೆ. ಸಲೀಂ ಅನಾರ್ಕಲಿ, ಲೈಲಾ ಮಜ್ನು ಶರಿನ್ ಫರಿಯಾದರಂತಹ ಪ್ರೇಮಿಗಳು ಔಟ್ ಡೇಟೆಡ್ ಎಂದು ನನಗೀಗಲೂ ಅನಿಸುತ್ತಿಲ್ಲ. ಈಗಿನ ವೇಗದ ಯುಗದಲ್ಲಿ ಕೈಯಲ್ಲೇ ಮೊಬೈಲು, ಇಂಟರ್ನೆಟ್, ಕಂಪ್ಯೂಟರ್, ಫೇಸ್‍ಬುಕ್, ಟ್ವಿಟರು, ವಾಟ್ಸ್‌ಆ್ಯಪ್‌, ಇನ್‍ಸ್ಟ್ರಾಗಾಮ್ ಏನೆಲ್ಲ ಇದ್ದರೂ ಕಾಲೇಜು ಓದುವ ಅವಳಿಗೋ ಅವನಿಗೋ ಪ್ರೇಮಿಸುವವನೊಬ್ಬಬೇಕು. ಅದೇನು ಫ್ಯಾಶನ್‍ಗಾಗಿಯೋ ‘ಇಗೋ’ ತಣಿಸಲೋ? ಅವರೆ ಉತ್ತರಿಸಬೇಕು. ಕಾಲೇಜಿನಲ್ಲಿ ಪಾಠ ನಡೆದಿರುವಾಗ ಪಾಠವನ್ನು ಕೇಳದೆ ತನ್ನತ್ತಲೇ ನೋಡುವ ಆರಾಧಿಸುವ ಹುಡುಗನೊಬ್ಬ ತರಗತಿಯಲ್ಲಿದ್ದರೇನೇ ಮೆರಿಟ್ಟು. ಅದಂತೂ ಎಲ್ಲರಿಗೂ ತಿಳಿಯಬೇಕು.

ಅವನ ಕಥೆ ಕವನ ಅವಳ ಸುತ್ತಲೇ ಗಿರ್ಕಿ ಹೊಡೆದರೆ ದುಪ್ಪಟ್ಟು ಕ್ರೆಡಿಟ್ಟು. ಆದರೆ ಅವಳು ಅವನನ್ನು ಮೆಚ್ಚಿಕೊಳ್ಳುವುದಿಲ್ಲ. ಮಾತನಾಡಿಸುವುದೂ ಇಲ್ಲ. ‘ಏನೇನೂ ಮೀನಿಂಗ್ ಲೆಸ್ ಬರೆಯುತ್ತಾನೆ...... ಬರೀ ಬಂಡಲ್, ಎಂದು ಮುಖ ಕಿವುಚಿ ಬಿಲ್ಡಪ್ ತಗೋತಾಳೆ. ಆದರೂ ಬೇರೆಯವಳತ್ತ ಅವನ ದೃಷ್ಟಿ ಹಾಯದಂತೆ ನಿಗಾ ಇರಿಸುತ್ತಾ ಮನಸ್ಸು ಜಾರದಂತೆ ಕೇಂದ್ರೀಕರಿಸಿ ಓದಿ ಎಕ್ಸಾಂ ಪಾಸ್ ಮಾಡಿ ಡಿಗ್ರಿ ಸರ್ಟಿಫಿಕೇಟ್ ಹಿಡಿದು ಪೋಟೋನೂ ತೆಗೆಸಿಕೊಂಡು ಮಾಯವಾಗಿ ಬಿಡುತ್ತಾರೆ.

ADVERTISEMENT

ಇನ್ನು ಹೇಳುವೆ ಕೇಳು. ಇವರಿಗೆ ಕಾಲೇಜಿನಲ್ಲೊಬ್ಬ ಆರಾಧಕನಿದ್ದರೆ, ಸಾಲದ ಮನೆಯಲ್ಲಿ ಬೋರ್ ಹೊಡೆಯುತ್ತಲ್ಲ. ಮನೆಯ ಬಳಿಯೊಬ್ಬ ಕಿಟಕಿ ಪ್ರೇಮಿ - ಪಡೋಸನ್ ಸಿನಿಮಾ ನೆನಪು ಮಾಡಿಕೋ. ಆ ಹುಡುಗ ಮನೆ ಎದುರು ಸುಳಿದರೆ ದಢಾರನೆ ಬಾಗಿಲು ಮುಚ್ಚಿ ಕಿಟಕಿಯಲ್ಲಿ ನೋಡಿ ಬಲೆಯ ಬೀಸೋದು ಇವರಿಗೆ ಐಸ್‍ಕ್ರೀಮ್ ತಿಂದಷ್ಟೆ ಸುಲಭ. ಮುಂದೆಲ್ಲಾ ಅವಳಿಗಾಗಿ ಪರಿತಪಿಸುವುದವನ ಕರ್ಮ. ಅವಳು ಬಜಾರ್ಗೆ, ಹೊರಟರೆ ಬೆಂಗಾವಲಾಗಿ ಬಾಡಿಗಾರ್ಡ್ಸ್‌ ಇರದಿದ್ದರೆ ತನ್ನ ಬ್ಯೂಟಿಗೇನು ಕಿಮ್ಮತ್ತು? ಇದೇ ನೋಡು ಹುಡುಗಿಯರ ಗಮತ್ತು. ಹೀಗೆ ಹುಡುಗರನ್ನು ಪೇರಿ ಹೊಡೆಸಿ ಯಾರನ್ನೂ ಪ್ರೇಮಿಸದೆ ಕಡೆಗೊಂದು ಶುಭದಿನ ಭರ್ಜರಿ ಮದುವೆಯಾಗಿ ಸದ್ದಿಲ್ಲದೆ ಬೇರೆ ಊರು ಸೇರಿಬಿಡುತ್ತಾರೆ. ಹುಡುಗರೂ ಮಹಾಸಾಚಾ ಏನಲ್ಲ ಬಿಡು. ಸಂಜೆ ಕಳೆಯಲು, ಸಿನಿಮಾ, ಪಾರ್ಕ್ ಹೋಟೆಲ್‍ಗೆ ಕಂಪನಿ ಕೊಡಲು, ಪೆವಿಲಿಯನ್ ಏರಿ ಹಿಂದೆ ಕೂರಲೊಬ್ಬಳು ಹುಡುಗಿಬೇಕು. ಅದಕ್ಕೂ ಹೆಚ್ಚು ಮುಂದುವರೆದರೂ ಅಡ್ಡಿಯಿಲ್ಲ. ಲಿವಿಂಗ್ ಟುಗೆದರ್, ಫ್ರೀ ಸೆಕ್ಸ್ ಯಾವುದು ತಪ್ಪಲ್ಲವೆಂಬಷ್ಟು ಮುಂದುವರೆದ ಜನರೇಶನ್ ನಡುವೆ ಸಿಕ್ಕ ಪ್ರೇಮ ಈವತ್ತು ಸೀರಿಯಸ್ ವಸ್ತುವಾಗೇನೂ ಉಳಿದಿಲ್ಲ. ಪ್ರೇಮ ಕುರುಡು ಅಂತಾರೆ. ಅದನ್ನು ನಾನು ಒಪ್ಪುವುದಿಲ್ಲ. ಪ್ರೇಮಿಗಳು ಕುರುಡರಷ್ಟೆ. ಪ್ರೇಮಕ್ಕೂ ಒಂದು ಘನತೆ ತಂದು ಕೊಡೋದು ಪ್ರೇಮಿಗಳ ಕರ್ತವ್ಯವೆಂಬ ಭಾವ ನನ್ನದು. ಪ್ರೇಮದಲ್ಲಿ ನಾನು ಸೋತೆನೋ, ಮೋಸ ಹೋದೆನೋ ಅದರಲ್ಲಿ ಪ್ರೇಮದ ತಪ್ಪೇನಿದೆ? ಸೋ ಈಗಲೂ ಪ್ರೇಮದ ಬಗ್ಗೆ ನನಗೆ ಗೌರವವಿದೆ. ಅದೇನು ನನ್ನ ವೀಕ್‍ನೆಸೊ ಸ್ಟ್ರೆಂಥೋ ಗೊತ್ತಿಲ್ಲ. ಬಡವನಾದರೂ ಮನಸಾ ಪ್ರೀತಿಸಿದ್ದೆ. ಆದರೆ ಅವಳ ಆಸೆಯ ಕಣಜವನ್ನು ತುಂಬಿಸುವಷ್ಟು ಸಮರ್ಥನಲ್ಲವೆಂದು ಗುಮಾನಿ ಬರುತ್ತಲೇ ಕಾಸಿಗಾಗಿ ಕವನ ಬರೆಯುವವನಿಗಿಂತ ಕೋಟಿ ದುಡಿಯುವವನು ಮೇಲೆಂದು ತೀರ್ಮಾನಿಸಿ ದೂರ ಸರಿದಳು. ಮೋಸ ಮಾಡಿದಳೆಂದು ಬಹಳ ಕಾಲ ಪರಿತಪ್ಪಿಸಿದ ಮೇಲೆ ಸತ್ಯಾನ್ವೇಷಣೆಯಾಯಿತು.

ಮೋಸ ಮಾಡಿದ್ದು ಅವಳಲ್ಲ, ಮೋಸ ಹೋಗಿದ್ದು ನಾನು ಎಂಬಷ್ಟು ಬದುಕು ಮಗ್ಗಲು ಬದಲಿಸಿತು. ಬರೀ ಪ್ರೇಮ ಹೊಟ್ಟೆ ತುಂಬಿಸೋದಿಲ್ಲ. ಬದುಕನ್ನು ಚೆಂದಗೊಳಿಸುವುದಿಲ್ಲ. ಬಡವನಿಗೆ ಪ್ರೀತಿಸುವ ಹಕ್ಕಿಲ್ಲವೆಂದು ಅರ್ಥ ಮಾಡಿಸಿದ ಮೊದಲ ಗುರು ಅವಳು. ಹಾಗಂತ ಬಡತನದ ಬಗ್ಗೆ ನನಗೇನೂ ಜಿಗುಪ್ಸೆ ಬರಲಿಲ್ಲ. ಒಂದು ಕಪ್‍ ಕಾಫಿ ಕುಡಿಯಲು ಕಾಸಿಲ್ಲದೆ ಒದ್ದಾಡುವುದರಲ್ಲೂ ಎಂತಹ ಸುಖವಿದೆ ಎಂಬುದು ಪ್ರಾಯಃ ಹಣವಂತನಾದವನಿಗೆ ಖಂಡಿತ ವೇದ್ಯವಾಗದು. ಒಬ್ಬರೂ ಸಾಲ ಕೊಡದಿದ್ದಾಗಲೂ ಬದುಕು ನಡೆಸುವ ಹೋರಾಟದಲ್ಲೊಂತರ ‘ಥ್ರಿಲ್’ ಇರ್ತದೆ ಮಿತ್ರ. ಪ್ರೇಮಿಸಿದಾಕೆಯನ್ನೇ ಮದುವೆಯಾಗಿ ಬಿಟ್ಟಿದ್ದರೆ ಇಷ್ಟು ಹೊತ್ತಿಗೆ ಮುದುಕನಾಗಿ ಬಿಡುತ್ತಿದ್ದೆನೇನೋ. ಯಾಕೀ ಮಾತು ಹೇಳಿದೆನೆಂದರೆ, ಅವಳೀಗ ಒಂದರ ನಂತರ ಒಂದು ಹೆರುತ್ತಾ ಮಕ್ಕಳನ್ನು ಎತ್ತಿಕೊಂಡು ಗಂಡನೊಡನೆ ಏದುಸಿರು ಬಿಡುತ್ತಾ ಬರುವುದನ್ನು ನೋಡುವುದು ಒಂದು ದಿವ್ಯಾನುಭವವೆ. ಜೇನುಗೂಡನ್ನು ನೋಡುವುದು ಅದನ್ನು ಕಿತ್ತು ತಿನ್ನುವುದಕ್ಕಿಂತಲೂ ಹೆಚ್ಚಿನ ಆನಂದವನ್ನು ನೀಡುತ್ತದೆ ಕಣೋ, ದುರಂತವನ್ನೂ ನಾನು ಏನ್‍ಜಾಯ್ ಮಾಡಬಲ್ಲೆ ನನ್ನನ್ನು ನಾನೇ ಪ್ರೀತಿಸಿಕೊಳ್ಳಬಲ್ಲೆ. ಸಿರಿವಂತರನ್ನು ಕಂಡಾಗ ಶೋಷಣೆಗೆ ಒಳಗಾಗಿದ್ದೇವೆಂಬ ಸ್ವಾನುಕಂಪವೇ ನನ್ನಂಥವರ ಬದುಕಿನ ಗಾಡಿಗೆ ಇಂಧನ, ತುಂಬಾ ಸೆಂಟಿಮೆಂಟಲ್ ಆಗಿ ಬಿಡುವ ನಮ್ಮಂಥವರು ನೂರು ರೂಪಾಯಿ ಸಾಲ ಸಿಕ್ಕನೂ ಸಿನಿಮಾದಲ್ಲಿ ಹಿರೋಪಾತ್ರ ಸಿಕ್ಕಷ್ಟೆ ಸಂಭ್ರಮಿಸುತ್ತೇವೆ. ಖಂಡಿತ ಆಸೆಯೇ ದುಃಖಕ್ಕೆ ಕಾರಣವಲ್ಲ. ಆಸೆಯೇ ಸಂಜೀವಿನಿ. ಬೇಕು ಎಂಬಾಸೆಯೇ ಕಣೋ ಬದುಕು. ‘ಸಾಕು’ ಎಂದವ ಸತ್ತನೆಂಬುದೇ ಸತ್ಯ. ಪ್ರೇಮ ಯಾವತ್ತೂ ಮರೀಚಿಕೆಯಾಗಬೇಕು. ಕಡಿದುಕೊಳ್ಳಬೇಕು. ಕಡಿದಷ್ಟು ಸುಪುಷ್ಟವಾಗಿ ಬೆಳೆಯುವ ಗುಲಾಬಿ ಗಿಡದಂತೆಯೇ ಹೃದಯದಲ್ಲಿ ಚಿಗುರೊಡೆದು ಬೆಳವ ಪ್ರೇಮಕ್ಕೆ ಸಾವಿಲ್ಲವೆಂದು ಅಥೆಂಟಿಕ್ ಆಗಿ ಹೇಳಬಲ್ಲೆನಯ್ಯ, ನಾನೀಗ ಮತ್ತೊಬಳ್ಳನ್ನು ಪ್ರೇಮಿಸುತ್ತಿದ್ದೆನೆಂದು ನನ್ನ ಸಹೋದ್ಯೋಗಿ ಹೇಳಿದನೆಂದು ತಮಾಷೆ ಮಾಡಿ ಬರೆದಿದ್ದೀಯೆ. ಆಪ್‍ಕೋರ್ಸ್ ನಿನಗದು ತಮಾಷೆ. ನನಗದು ಪ್ರಾಕ್ಟಿಕಲ್. ಹೌದು ಎನ್ನಲು ಮುಜುಗರವೇನಿಲ್ಲ ನನಗೆ. ಮರಳಿ ಯತ್ನವ ಮಾಡುವುದರಲ್ಲಿ ತಪ್ಪೇನಿದೆ?

ನಾನು ಆಫೀಸಿಗೆ ಹೋಗುವ ದಾರಿಯಲ್ಲೇ ಅವಳ ಮನೆಯಿದೆ. ನಾನು ಚಹಾ ಕುಡಿವ ಕಾಕಾನ ಹೋಟೆಲ್ ಸಹ ಅವಳ ಮನೆಯ ಕ್ರಾಸ್‍ನಲ್ಲಿದೆ. ಹೋಗುವಾಗ ಬರುವಾಗ ಮನೆ ಬಾಗಿಲಲ್ಲಿ ನಿಂತ ಅವಳ ದುರುಶನದ ಬಿಟ್ಟಿಭಾಗ್ಯ. ನೋಡುತ್ತೇನೆ. ಅವಳೂ ನೋಡುತ್ತಾಳೆ. ಇದಿಷ್ಟನ್ನೇ ಪ್ರೇಮವೆನ್ನಲೆ? ಪ್ರೇಮದ ಬೀಜವು ಹೃದಯಕ್ಕೆ ಬಿದ್ದು ಮೊಳಕೆಯೊಡೆವುದು ಅಷ್ಟೊಂದು ಈಜಿನಾ? ಕಾಯುವಷ್ಟು ತಾಳ್ಮೆ ನನ್ನ ವಯಸ್ಸಿಗಿದೆಯೋ ಗೊತ್ತಿಲ್ಲ. ಮೊದಲಿನ ಬೆಚ್ಚಗಿನ ಭಾವನೆಗಳೀಗ ಬಿಸಿ ಕಳೆದುಕೊಂಡಿವೆ. ಮೊದಲಿನ ವೇಗವೂ ಅಷ್ಟಕ್ಕಷ್ಟೆ. ಪ್ರವಾಹದ ನಂತರ ಹರಿವ ನದಿಯಂತೆ ನಾನು ಅವಳನ್ನು ನೋಡುತ್ತೇನೆ ತಣ್ಣಗೇ. ಆಬ್ವಿಯೆಸ್ಲಿ ಚೆನ್ನಾಗಿರುವ ಹುಡುಗಿಯರನ್ನೆಲ್ಲ ನೋಡುತ್ತೇನೆ. ನಾವಿಬ್ಬರೂ ಕಣ್ಣುಗಳಲ್ಲಿ ಸಂಧಿಸುವುದು ನಿಜವಾದರೂ ನಾನವಳನ್ನೆಂದೂ ಮಾತನಾಡಿಸಿದವನಲ್ಲವಾದರೂ ನಾನಾಕೆಯನ್ನು ಪ್ರೇಮಿಸುತ್ತಿರುವ ವಿಷಯ ಆ ಬೀದಿಗೆಲ್ಲಾ ಗೊತ್ತಾಗಿಬಿಟ್ಟಿದೆ!

ಪ್ರೇಮ ಮತ್ತು ಕೆಮ್ಮು ಇವೆರಡನ್ನು ಬಹಳ ಕಾಲ ಮುಚ್ಚಿಡಲು ಅಸಾಧ್ಯವಂತೆ. ಕೆಮ್ಮಿಗಾದರೂ ಮೆಡಿಸಿನ್ ಉಂಟು ಪ್ರೇಮಕ್ಕೆಲ್ಲಿಂದ ತರಲಿ? ಅವಳು ನನ್ನನ್ನು ಪ್ರೇಮಿಸಲಿ ಬಿಡಲಿ, ನಿತ್ಯದ ನೀರಸ ನಿಮಿಷಗಳನ್ನು ಕೆಲವು ಕಾಲವಾದರೂ ಚೇತೋಹಾರಿಗೊಳಿಸಬಲ್ಲಳು, ನನ್ನ ಕಥೆ ಕಾದಂಬರಿಗಳಲ್ಲಿ ಬರುವ ನಾಯಕಿಯರಿಗೆ ಅವಳೇ ರೂಪದರ್ಶಿ. ಆ ಮಟ್ಟಿಗೆ ನಾನವಳಿಗೆ ಕೃತಜ್ಞ. ನಾನು ಬರಹಗಾರನೆಂದ ತಿಳಿದ ಮೇಲೆ ಮಾತಿನ ಚಪಲದ ಅರೆಬೆಂದ ಬುದ್ಧಿಜೀವಿ ಹುಡುಗಿಯರ ಗೆಳೆತನಕ್ಕೆಂದೂ ಕೊರತೆಯಾಗಿಲ್ಲ. ಆ ಸಾಲಿನಲ್ಲಿ ನೀನು ಗುಮಾನಿಪಡುವ ರೋಹಿಣಿಯೂ ಬರುತ್ತಾಳೆ. ನನಗಂತೂ ಇಂತ ವಿಚಾರವಾದಿ ಮಾತಿನ ಮಲ್ಲಿಯರನ್ನು ಕಂಡರೆ ಸಖತ್ ಇಷ್ಟ. ಒಂದು ಸಾಲೂ ಬರೆವ ಯೋಗ್ಯತೆ ಇರದಿದ್ದರೂ ಎಲ್ಲಾ ಬರಹಗಾರರನ್ನು ಟೀಕಿಸುತ್ತಾರೆ. ನನ್ನ ಆ್ಯಂಗಲ್‍ನಲ್ಲಿ ಹೆಚ್ಚು ಮಾತನಾಡುವವರು ಒಳ್ಳೆಯ ಪ್ರೇಮಿಗಳಾಗಲಾರರು. ಇವಳಿಗಿಂತ ನಳಿನಿ ವಾಸಿ ಕಣೋ, ಮುದ್ದಿಸಿಕೊಳ್ಳಲೆಂದೆ ಹುಟ್ಟಿದ ಕೋಲು ಮುಖದ ಕೋಮಲ ಹುಡುಗಿ. ನನ್ನ ಕಥೆಗಳೆಂದರೆ ಅವಳಿಗೆ ಅಗದಿ ಇಷ್ಟವಂತೆ ಹಾಗಂತ ಹೇಳಿದ್ದು, ಅವಳ ಪಕ್ಕದ ಮನೆಯ ಹುಡುಗ ನಾನು ಬರೆದ ಬುಕ್ಸ್ ಕೊಟ್ಟೆ ಅವಳ ಸ್ನೇಹ ಬೆಳೆಸಿದ್ದಾನಂತೆ. ಇತ್ತೀಚೆಗೆ ನೀವು ಬರೆದ ಪುಸ್ತಕಗಳಿದ್ದರೆ ಕೊಡಿ ಸಾರ್ ಎಂದು ಗಂಟು ಬೀಳುತ್ತಾನೆ. ಇವನ ಚರ್ಯಯನ್ನು ಗಮನಿಸಿದರೆ ಇವನು ಇವನ ಪಠ್ಯಪುಸ್ತಕಗಳನ್ನೇ ನೆಟ್ಟಗೆ ಓದುವವನಂತೆ ಕಾಣುವುದಿಲ್ಲ ಇನ್ನು ಸಾಹಿತ್ಯದ್ದು ಎಲ್ಲಿಯ ನೆಂಟು, ಆದರೂ ನಾಳೆ ಅವಳು ಇವನನ್ನೇ ಪ್ರೇಮಿಸಲು ಶುರು ಹಚ್ಚಿಕೊಂಡರೇ ಎಂಬ ಆತಂಕವೂ ನನ್ನನ್ನಾವರಿಸಿಸೋದುಂಟು. ಪ್ರೇಮವೇ ಹೀಗೆ ಒಂತರಾ ತಿಕ್ಕಲು ಪುಕ್ಕಲು. ಬಡವನಾದ ನನ್ನನ್ನೂ ಪ್ರೇಮಿಸಿದಳು. ಬಡವ ಅಂತ ಅಂಜಿಯೇ ಕೈ ಬಿಟ್ಟಳು. ‘ನಾನಾಗಿದ್ದರೆ ಖಂಡಿತ ನಿಮ್ಮನ್ನೇ ಮದುವೆ ಆಗ್ತಿದ್ದೆ ಸಾರ್ ಯು.ಆರ್ ಜೀನಿಯಸ್’ ಎಂದೆಲ್ಲಾ ಲಿಪ್‍ಸಿಂಪತಿ ತೋರಿದ ಅವಳ ಗೆಳತಿಯವರೆಲ್ಲಾ ಈಗ ತಾಯಂದಿರಾಗಿದ್ದಾರೆ ತಲೆಯಲ್ಲೀಗ ಬೆಳ್ಳಿ ಮೂಡಿದೆ.
ನನಗೀಗ ಉದ್ಯೋಗವಿದೆ. ಪ್ರೇಮಿಸಿದಾಕೆಯನ್ನು ಸುಖವಾಗಿಡುವ ಸೌಲಭ್ಯಗಳಿವೆ, ಆದರೆ ಹುಡುಗಿಯರೇ ಹೀಗೆ ಶೋಕಿಲಾರ ಹಿಂದೆ ಬೀಳುತ್ತಾರೆ. ಬೈಕ್‍ಗಿಂತ ಕಾರು ಇಟ್ಟವನಿಗೆಗಾಳ ಹಾಕುತ್ತಾರೆ. ತರಲೆಗಳನ್ನೇ ಇಷ್ಟಪಡುತ್ತಾರೆ. ಪ್ರಾಮಾಣಿಕವಾಗಿ ಪ್ರೇಮಿಸುವವರನ್ನು ದೂರವೇ ಇಡುತ್ತಾರೆ!

ಈ ಬಗ್ಗೆಯೇ ಒಂದು ಪಿಎಚ್‍.ಡಿ. ಮಾಡುವಷ್ಟು ಸರಕು ನನ್ನಲಿದೆ ಕಣೋ. ಮದುವೆಯಾಗದೆ ಯಾವುದೇ ದುರಾಭ್ಯಾಸಗಳಿಗೆ ದಾಸನಾಗದಿರುವ ನನ್ನಂಥವನ ಮೇಲೆ ಹಲವರಿಗೆ ಗುಮಾನಿ ಇದೆ. ಎಂತೆಂಥ ಸನ್ಯಾಸಿಗಳೇ ಹಳ್ಳ ಹಿಡಿದಿರುವಾಗ ನೀನು ಹೇಗಯ್ಯ ಅಂತ ನಗ್ತಾರೆ, ವರದಕ್ಷಿಣೆಯಿಲ್ಲದೆ ಮದುವೆ ಆಗ್ತೀನಿ ಅನ್ನೋರ ಬಗ್ಗೆಯೂ ಕೆಲವರಿಗೆ ಗುಮಾನಿ, ನಮ್ಮ ಸಮಾಜ ಇತ್ತೀಚೆಗೆ ಸಭ್ಯ ನಡವಳಿಕೆಯ ಬಗ್ಗೆ ಮೆಚ್ಚಿಗೆ ಸೂಚಿಸದಷ್ಟು ಮಾಡರನ್ ಆಗಿಬಿಟ್ಟಿದೆ. ಹೀಗಂತ ನನಗೇನು ದುಃಖವಿಲ್ಲ. ಮತ್ತೆ ಯಾವ ಕಥೆ ಕಾದಂಬರಿ ಹೊಸದಾಗಿ ಹೊಸೆದಿದ್ದೀಯೆ ಅಂತ ವ್ಯಂಗ್ಯವಾಡುತ್ತಲೇ, ನನ್ನ ಹೆಂಡತಿ ಈಗ ಗರ್ಭಿಣಿ ಕಣಯ್ಯ ಅಂತಲೂ ಹೇಳಿಕೊಂಡಿದ್ದೀಯಾ, ಅಭಿನಂದನೆಗಳು. ನಿನ್ನ ಪ್ರಚಂಡ ಸಾಧನೆಯ ಎದುರು ಮೊನ್ನೆ ನನ್ನ ಕಾದಂಬರಿ ಒಂದಕ್ಕೆ ಅಕಾಡೆಮಿ ಪ್ರಶಸ್ತಿ ಬಂದಿದೆಯೆಂದು ತಿಳಿಸಲೂ ನನಗೆ ಸಂಕೋಚ ಕಾಡುತ್ತಿದೆ. ಗಂಡಸು ಎಂದು ಸಾಬೀತು ಪಡಿಸಲು ಮದುವೆಯೇ ಆಗಬೇಕೆಂದೇನಿಲ್ಲವಲ್ಲ ಎಂದರೂ ತಪ್ಪು ಕಂಡು ಹಿಡಿವ ನಿನ್ನಂಥವರ ಬಾಯಿ ಮುಚ್ಚಿಸುವ ಸಲುವಾಗಿಯಾದರೂ ಮದುವೆಯಾಗಬೇಕೆಂದಗೀಗ ನನಗೂ ಅನಿಸುತ್ತಿದೆ. ನೀನು ನನ್ನನ್ನು ಲೇವಡಿ ಮಾಡಿದರೂ ನೋ ಪ್ರಾಬ್ಲಮ್. ಆಗಾಗ ಪತ್ರವನ್ನು ಬರೆಯುತ್ತಿರು ಮಾರಾಯ. ಬರೆಯುವುದಷ್ಟೆ ಅಲ್ಲ ಓದುವುದೂ ನನಗಿಷ್ಟ. ಅದೂ ಕಷ್ಟವಾದಾಗ ನನ್ನ ಸುತ್ತಮುತ್ತ ಹೆಂಡತಿ, ಮಕ್ಕಳಿರುತ್ತಾರೆ. ಐಮೀನ್ ಬರಹವೇ ನನ್ನ ಸಂಗಾತಿ ನಾ ಬರೆದ ಕೃತಿಗಳೇ ನನ್ನ ಮಕ್ಕಳೇಕಾಗಬಾರದು? ನಗಬೇಡ ಪುಲ್‍ಸ್ಟಾಪ್ ಇಡುವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.