ADVERTISEMENT

ಕಥೆ: ಮೋಕ್ಷದಾತ

ವೈ.ಕೆ.ಸಂಧ್ಯಾಶರ್ಮ
Published 19 ಫೆಬ್ರುವರಿ 2022, 19:30 IST
Last Updated 19 ಫೆಬ್ರುವರಿ 2022, 19:30 IST
ಸಾಂದರ್ಭಿಕ ಕಲೆ: ಡಿ.ಕೆ. ರಮೇಶ್‌
ಸಾಂದರ್ಭಿಕ ಕಲೆ: ಡಿ.ಕೆ. ರಮೇಶ್‌   

ತಲೆ ಎತ್ತಿ ನೋಡಿದರು ಆಚಾರ್ಯರು. ಫ್ಯಾನ್ ಗಿರ್ರನೆ ತಿರುಗುತ್ತಿತ್ತು. ತಲೆಯೂ ಗಿರಿಗಿರಿ ಎನ್ನುತ್ತಿತ್ತು. ಬಲಕ್ಕೆ ಹೊರಳಿದರು. ಹೆದರಿ ಹಿಡಿಯಾಗಿದ್ದ ಹೆಂಡತಿಯ ದ್ರಾಬೆ ಮುಖ. ತಟ್ಟನೆ ಎಡಕ್ಕೆ ಮಗ್ಗುಲು ಬದಲಿಸಿದರು. ಸುಮಳ ಕಣ್ಣಕಟ್ಟೆ ತುಂಬಿದೆ. ಅವಳ ಅಳುಮುಂಜಿಯ ಮುಖ ನೋಡಲಾರದೆ ರೆಪ್ಪೆಗಳನ್ನು ಬಿಗಿದುಕೊಂಡವರು ಸಣ್ಣಗೆ ನರಳಿದರು.

‘ಏನಪ್ಪಾ ಏನಾಗ್ತಿದೆ...ನೀರು ಬೇಕಾ...ಡಾಕ್ಟರನ್ನ ಕರೀಲಾ?’-ಸುಮಾ ಗಾಬರಿಯಿಂದ ಗಡಬಡಿಸಿ, ವಾರ್ಡಿನಿಂದ ಓಡು ನಡಿಗೆಯಲ್ಲಿ ಹೊರನಡೆದಳು.

‘ಏನಾಗ್ತಿದೇಂದ್ರೆ’- ಹೆಂಡತಿ ಕಕ್ಕುಲಾತಿಯಿಂದ ಹತ್ತಿರ ಬಾಗಿದರು.

ADVERTISEMENT

‘ಗುರು..ಗುರು..’ ಎಂದು ಕ್ಷೀಣದನಿ ಗುನುಗುನಿಸಿತು. ಸುಮಿತ್ರಮ್ಮ ನೋವಿನಿಂದ ಮುಖ ಹಿಂಡಿಕೊಂಡು- ‘ಏನು ಯೋಚನೆ ಮಾಡಬೇಡಿ, ಡಾಕ್ಟರನ್ನ ಕರೆಯಕ್ಕೆ ಸುಮಾ ಹೋಗಿದ್ದಾಳೆ’ ಎಂದು ಗಂಡನ ಎದೆಯ ಮೇಲಿದ್ದ ಅವರ ಹಸ್ತವನ್ನು ಬಿಗಿಯಾಗಿ ಅದುಮಿ ಹಿಡಿದುಕೊಂಡರು.

‘ನಾಳೆ ನವಮಿ ಅಲ್ವೇ, ನಮ್ತಂದೆ ಶ್ರಾದ್ಧ...’ -ಮುಖ ಪೆಚ್ಚುಮಾಡಿಕೊಂಡರು. ‘ಸುಮ್ನೆ ನೆಮ್ಮದಿಯಾಗಿ ಮಲಕ್ಕೊಳ್ಳಿ...ಇಷ್ಟು ವರ್ಷ ನೇಮ ಹಿಡಿದು, ಪಾಂಗಿತವಾಗಿ ಶ್ರದ್ಧೆಯಿಂದ ಮಾಡಿಲ್ವೇ...ಸಾಕು ಬಿಡಿ, ಪಿತೃ ಋಣ ತೀರಿಸಿದ್ದೀರಿ..’ಎಂದು ಸಮಾಧಾನ ಹೇಳಿದರೂ, ಅವರು ವ್ಯಾಕುಲಗೊಂಡರು.

ಒಂದು ದಿನವೂ ಮೂರು ಹೊತ್ತೂ ಸಂಧ್ಯಾವಂದನೆ ತಪ್ಪಿಸಿರದ ಜೀವ, ಸಾಯಂಸಂಧ್ಯೆಯನ್ನು ತಮ್ಮೆರಡು ಕಿವಿಗಳನ್ನು ಮುಟ್ಟಿಕೊಂಡು, ಮೆತ್ತಿಕೊಂಡ ತುಟಿಗಳನ್ನು ಕದಲಿಸಿ, ಗಂಟಲಲ್ಲೇ ಮಂತ್ರ ಹೇಳಿಕೊಂಡು ನೀರಿಲ್ಲದೆ ಆಚಮನ ಮುಗಿಸಿ ಅತೃಪ್ತಿಯ ಭಾವದಲ್ಲಿ ನಿಟ್ಟುಸಿರು ಹುಯ್ದರು.

ಪತಿಯನ್ನು ಎಂದೂ ಇಂಥ ಅಸಹಾಯಕ ಪರಿಸ್ಥಿತಿಯಲ್ಲಿ ನೋಡಿರದ ಸುಮಿತ್ರಮ್ಮ ವೇದನೆಯಿಂದ ಗೋಡೆಯತ್ತ ಮುಖ ಹೊರಳಿಸಿ ಕಣ್ಣಿಗೆ ಸೆರಗೊತ್ತಿಕೊಂಡರು.

‘ಗುರು..ಗುರು’

ಆಚಾರ್ಯರ ಧಾನ್ಯ ಎತ್ತ ಹುದುಗಿದೆಯೆಂದರಿತೂ ಆಕೆ, ‘ಗುರುರಾಯರು ಖಂಡಿತಾ ಒಳ್ಳೇದು ಮಾಡ್ತಾರೆ ಬಿಡಿ’ -ಎನ್ನುತ್ತಾ, ತಮ್ಮ ಬ್ಯಾಗಿನಲ್ಲಿದ್ದ ರಾಘವೇಂದ್ರಸ್ವಾಮಿಗಳ ಸಣ್ಣಫೋಟೋವನ್ನು ಅವರ ಕಣ್ಣ ಮುಂದೆ ಹಿಡಿದರು.

ಮದುವೆಯಾದಾರಾಭ್ಯ ಗಂಡನ ಮಡಿ-ಹುಡಿ, ನೇಮ-ಆಚಾರಗಳನ್ನು ಬಲ್ಲ ಆಕೆ, ಆಸ್ಪತ್ರೆಯಲ್ಲಿನ ಅವರ ಬವಣೆಯನ್ನು ಕಂಡು ಉಮ್ಮಳಿಸುತ್ತಿದ್ದ ದುಃಖವನ್ನು ಒಳಗೇ ಅದುಮಿಕೊಂಡರು.

ಗಂಡನ ಎಲ್ಲ ಆಚಾರಗಳಿಗೂ ಸಾಥ್ ಕೊಟ್ಟವರು ಆಕೆ. ಪ್ರತಿನಿತ್ಯ ಆಚಾರ್ಯರದು ಒಂದೇ ಪರಿಪಾಠ. ಅವರಿಗೆ ಉಪನಯನವಾದಾಗಿನಿಂದ ಹೊತ್ತೊತ್ತಿಗೆ ಎಂದೂ ತಪ್ಪದ ಸ್ನಾನ, ಸಂಧ್ಯಾವಂದನೆ, ಪೂಜೆ-ಅಗ್ನಿಕಾರ್ಯ ಎಲ್ಲವೂ ಸಾಂಗವಾಗಿ ನಡೆದುಕೊಂಡು ಬಂದಿತ್ತು.

ನೆನಪಿನ ಸುಳಿ ಆಕೆಯನ್ನು ಒಳಗೆ ಸೆಳೆದುಕೊಂಡಿತ್ತು.

‘ರಾಮಾಯ ರಾಮ ಭದ್ರಾಯ, ರಾಮಚಂದ್ರಾಯ ವೇಧಸೇ....’ ಉದ್ದಕ್ಕೆ ರಾಮಸ್ಮರಣೆ ಮಾಡುತ್ತಾ ವಾಮನಾಚಾರ್ಯರು ಸಂಧ್ಯಾವಂದನೆ ಮುಗಿಸಿ, ಆಚಮನದ ನೀರನ್ನು ತುಳಸೀ ಗಿಡಕ್ಕೆ ಚೆಲ್ಲಲು ಬೃಂದಾವನದತ್ತ ನಡೆದರು.

ಅಷ್ಟರಲ್ಲಿ ಮಡಿಯಲ್ಲಿ ಫಲಾಹಾರ ತಯಾರಿಸಿ, ಗಂಡನನ್ನು ಕರೆಯಲು ಅಂಗಳಕ್ಕೆ ಬಂದ ಸುಮಿತ್ರಮ್ಮ, ತುಳಸೀಕಟ್ಟೆಗೆ ತಲೆಹಚ್ಚಿ ನಮಸ್ಕರಿಸುತ್ತಿದ್ದ ಗಂಡನ ಭಕ್ತಿಪಾರಮ್ಯ ಗಮನಿಸುತ್ತ ಮುಖದಲ್ಲಿ ಸಂತೃಪ್ತಿಯ ನಗೆ ತುಳುಕಿಸಿದರೂ - ‘ಸಾಕ್ಸಾಕು...ಗಂಟೆಯಾದರೂ ನಿಮ್ಮ ಸಂಧ್ಯಾವಂದನೆ ಮುಗೀವಲ್ದು, ಬೇಗ್ಬನ್ನಿ, ನಿಮಗೆ ತಿಂಡಿ ಕೊಟ್ಟು, ನಾನು ತಿಂದು ಯಾವಾಗ ಅಡುಗೆಮನೆಯ ಉಳಿದ ಕೆಲಸಗಳನ್ನ ಮುಗಿಸೋದು?...ಹಾಗೆ ಹೀಗೆ ನೋಡೋದ್ರಲ್ಲಿ ಸೂರ್ಯ ನೆತ್ತಿ ಮೇಲೆ ಸವಾರಿ ಮಾಡ್ತಿರ್ತಾನೆ’

-ಎಂದು ಮೆಲ್ಲಗೆ ಗೊಣಗುತ್ತ ಮುಸುರೆಯ ಪಾತ್ರೆಗಳನ್ನು ನಲ್ಲಿಯ ಕೆಳಗಿಟ್ಟು ಕೈ ತೊಳೆದುಕೊಂಡರು.

ನೆಲದ ಮೇಲೆ ಹಾಸಿದ್ದ ಚಾಪೆಯ ಮೇಲೆ ಕೂಡುತ್ತ ಆಚಾರ್ಯರು- ಸಡಿಲವಾದ ಕಿರುಜುಟ್ಟಿನ ತುದಿಯನ್ನು ಸುತ್ತಿ ಗಂಟಿಕ್ಕಿ ಎಲೆಯ ಮೇಲೆ ಬಡಿಸಿದ್ದ ಗೊಜ್ಜವಲಕ್ಕಿಯನ್ನು ಒಂದು ತುತ್ತು ಬಾಯಿಗಿಟ್ಟಿದ್ದರೋ ಇಲ್ಲವೋ ಅಷ್ಟರಲ್ಲಿ ಕಾಲಿಂಗ್ ಬೆಲ್.

ಸುಮಿತ್ರಮ್ಮ ನೆಲ ಸಾರಿಸುತ್ತಿದ್ದ ತಮ್ಮ ಕಚ್ಚೆಸೀರೆಯ ಮುಂದಿನ ನೆರಿಗೆಯ ತುದಿಯನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು ಮುಂಬಾಗಿಲಿಗೆ ಧಾವಿಸಿದರು. ಬೆಳಗಾದರೆ ಈ ಅಮೆಜಾನ್ ಕಾಟ ಎಂದವರಿಗೆ ಚೆನ್ನಾಗಿ ಗೊತ್ತಿತ್ತು.

‘ಯಾರೇ ಬೆಲ್ಲೂ ?’- ಗಂಡನ ಪ್ರಶ್ನೆಗೆ ಆಕೆ ಉತ್ತರಿಸಲಿಲ್ಲ.

ಒಳಗೆ ಬಂದು ಸಿಂಕಿನಲ್ಲಿ ಸೋಪು ಹಾಕಿ ಚೆನ್ನಾಗಿ ಉಜ್ಜುಜ್ಜಿ ಕೈ ತೊಳೆದರು. ಆಚಾರ್ಯರಿಗೆ ಅರ್ಥವಾಗಿತ್ತು.

‘ಅಮೆಜಾನ್ ತಾನೇ?’

ಮತ್ತೆ ಉತ್ತರ ಬರಲಿಲ್ಲ.

‘ಯಾರು ಕಳಿಸಿರೋದು?’

‘ನಿನ್ನ ಹೆಣ್ಣುಮಕ್ಕಳಲ್ಲಿ ಯಾರೋ ಒಬ್ಬರದು ತಾನೇ’ – ಆಚಾರ್ಯರ ದನಿಯಲ್ಲಿ ಕೊಂಚ ಅಸಡ್ಡೆ ಇಣುಕಿತು. ಮುಖದಲ್ಲಿ ಯಾವ ಭಾವನೆಯನ್ನೂ ಪ್ರಕಟಪಡಿಸದೆ ತಿಂಡಿಯ ತಟ್ಟೆಯನ್ನು ಕೈಗೆ ತೆಗೆದುಕೊಂಡರು. ಬದಿಯಲ್ಲೇ ನಿಂತಿದ್ದ ಹೆಂಡತಿಯ ಮುಖಭಾವದ ಬಗ್ಗೆಯಾಗಲಿ, ಅಮೆಜಾನ್‌ನಲ್ಲಿ ಬಂದ ವಸ್ತುವಿನ ಬಗ್ಗೆಯಾಗಲೀ ಯಾವ ಕುತೂಹಲವನ್ನೂ ತೋರ್ಪಡಿಸದೆ, ಯಾಂತ್ರಿಕವಾಗಿ ಕಾಫಿ ಕುಡಿದು, ಲೋಟವನ್ನು ಬದಿಗಿರಿಸಿ ಕೈ ತೊಳೆದುಕೊಂಡರು.

ಸುಮಿತ್ರಮ್ಮ ಸಶಬ್ದವಾಗಿ ನಿಟ್ಟುಸಿರು ಬಿಟ್ಟು ಅಲ್ಲಿಂದ ಸರಿದರು.

ಅಂದವರಿಗೆ ತಿಂಡಿ ಒಂಚೂರೂ ರುಚಿಸಲಿಲ್ಲ. ತಂದೆ-ತಾಯಿಯನ್ನು ಕಂಡರೆ ಅಷ್ಟು ಒದ್ದುಕೊಳ್ಳುವ ತಮ್ಮ ಪ್ರೀತಿಯ ಹೆಣ್ಣುಮಕ್ಕಳ ಬಗ್ಗೆ ಗಂಡನಿಗೆ ಅಷ್ಟೇನೂ ಅಕ್ಕರೆ ಇಲ್ಲದ್ದು ಆಕೆಗೆ ಚೆನ್ನಾಗೇ ಗೊತ್ತಿತ್ತು.

ಹೆಂಡತಿಯ ಮೊದಲ ಹೆರಿಗೆಯಲ್ಲೇ ಆಚಾರ್ಯರಿಗೆ ತುಂಬಾ ನಿರಾಸೆಯಾಗಿತ್ತು. ಹುಟ್ಟಿದ್ದು ಹೆಣ್ಣು ಎಂದು ತಿಳಿದು ಅವರ ಮುಖ ಚಿಕ್ಕದಾಗಿತ್ತು. ಅವರ ತಾಯಿ ಕೂಡ ತಾವು ಅಷ್ಟು ಅಕ್ಕರಾಸ್ಥೆಯಿಂದ ಸೊಸೆಗೆ ಸೀಮಂತ ಮಾಡಿದ್ದು ವ್ಯರ್ಥವಾಯಿತೇ ಎಂದು ಮುಖ ಬಾಡಿಸಿಕೊಂಡರು. ವಂಶೋದ್ಧಾರಕ-ಗಂಡುಮಗುವನ್ನು ಕೈಗೆ ಕೊಡದ, ತಮ್ಮ ಕನಸನ್ನು ಭಗ್ನಗೊಳಿಸಿದ ಸೊಸೆಯ ಸ್ವಾಟೆ ತಿವಿದರು. ಎಷ್ಟೋ ದಿನ ಅವಳಿಗೆ ಮುಖಗೊಟ್ಟು ಮಾತನಾಡದೆ ತಮ್ಮ ಅಸಮಾಧಾನವನ್ನು ಹೊರ ಕಕ್ಕಿದ್ದರು.

ಹಸೀಬಾಣಂತಿ ಕಣ್ಣಲ್ಲಿ ನೀರು ಹಾಕಿಕೊಂಡದ್ದನ್ನು ಕಂಡು, ಸುಮಿತ್ರಮ್ಮನ ತಾಯಿ ಕೂಡ ಕಣ್ಣು ಹನಿಸಿಕೊಂಡು, ‘ಎರಡನೆಯದು ಖಂಡಿತಾ ಗಂಡು ಆಗತ್ತೆ ಕಣೆ, ಅದಕ್ಯಾಕೆ ಈ ಪಾಟಿ ದುಃಖಿಸ್ತೀ, ನಿನ್ನ ಗಂಡನ್ಗೂ ವಿವೇಕ ಬೇಡವೇ...ಹೆಣ್ಣು-ಗಂಡು ಆಗೋದು ನಮ್ಮ ಕೈಲಿದೆಯೇ?..’ ಎಂದು ಮಗಳನ್ನು ಸಮಾಧಾನಿಸಲು ಯತ್ನಿಸಿದರಾಕೆ.

ಅವಳ ದುರಾದೃಷ್ಟಕ್ಕೆ ಎರಡನೆಯದೂ ಹೆಣ್ಣುಮಗುವೇ ಆಗಬೇಕೇ?!...ಆಚಾರ್ಯರ ಕೋಪ ನೆತ್ತಿಗೇರಿತು. ಮಗುವನ್ನಾತ ಕೈಯಲ್ಲೂ ಮುಟ್ಟಲಿಲ್ಲ. ಗಂಡನ ಸಂಕಟವನ್ನರಿತ ಸುಮಿತ್ರಮ್ಮ, ಅವರ ಒರಟು ನಡುವಳಿಕೆಯನ್ನು ಅಪಾರ್ಥ ಮಾಡಿಕೊಳ್ಳದೆ, ತಾವೇ ಸಹನೆ ವಹಿಸಿ ನೋವನ್ನು ನುಂಗಿಕೊಂಡರು. ಆತನೂ ತಮ್ಮ ನಿರಾಸೆಯನ್ನು ಮೌನವಾಗಿ ಗುಟುಕರಿಸಿದರು. ಅತ್ತೆ ಗೊಣಗಾಡಿದರು, ತಾವೂ ಒಬ್ಬ ಹೆಣ್ಣೆಂದು ಮರೆತು. ಮೂರ್ನಾಲ್ಕು ವರ್ಷಗಳಲ್ಲಿ ಮಕ್ಕಳ ಮುದ್ದಿನಾಟಗಳನ್ನು ನೋಡುತ್ತ ಆಚಾರ್ಯರು ಖುಷಿಯಾದರೂ ವಂಶೋದ್ಧಾರನನ್ನು ಧರೆಗಿಳಿಸುವ ತಮ್ಮ ಕನಸನ್ನು ಮಾತ್ರ ಜಾರಲು ಬಿಡಲಿಲ್ಲ.

ಸುಮಿತ್ರಮ್ಮ ಉದ್ದಕ್ಕೆ ನಾಲ್ಕು ಹೆಣ್ಣುಮಕ್ಕಳನ್ನು ಎರಡೆರಡು ವರ್ಷಗಳ ಅಂತರದಲ್ಲಿ ಹಡೆದಿದ್ದರು. ಆಚಾರ್ಯರು ಹಟ ಬಿಡಲಿಲ್ಲ, ಜೊತೆಗೆ ಆಸೆಯನ್ನೂ. ದೇವರಿಗೇ ಇನ್ನು ಪರೀಕ್ಷಿಸಲು ಮನಸ್ಸಾಗಲಿಲ್ಲವೋ ಅಥವಾ ಸುಮಿತ್ರಮ್ಮನ ಮೇಲೆ ಕರುಣೆ ಉಕ್ಕಿಬಂದಿತ್ತೋ, ಅಂತೂ ಆಚಾರ್ಯರ ವಂಶೋದ್ಧಾರಕ ಗುರುರಾಜ ಅವರ ಮಡಿಲಿಗೆ ಬಿದ್ದು ಕಣ್ಮನ ತಂಪು ಮಾಡಿದ್ದ. ಸ್ವರ್ಗಕ್ಕೆರಡೇ ಗೇಣು ಅವರಿಗೆ!! ಕಡೆಗೂ ಅಜ್ಜಿ, ಮೊಮ್ಮಗನನ್ನು ಕಂಡು ಜನ್ಮ ಸಾರ್ಥಕವಾದಂತೆ ಓಡಿಹೋಗಿ ದೇವರಿಗೆ ತುಪ್ಪದ ದೀಪ ಹಚ್ಚಿ, ಕಟ್ಟಿಟ್ಟ ಮುಡಿಪನ್ನೆತ್ತಿ ಕಣ್ಣಿಗೊತ್ತಿಕೊಂಡಿದ್ದರು. ಜನ್ಮ ಸಾರ್ಥಕವಾದಂಥ ಧನ್ಯತೆ ಆಚಾರ್ಯರ ಮುಖದಲ್ಲಿ ರಾರಾಜಿಸುತ್ತಿತ್ತು.

ಕಣ್ಣರಳಿಸಿ ನೋಡಿದರು. ಆತಂಕದಿಂದ ತಮ್ಮನ್ನೇ ದಿಟ್ಟಿಸುತ್ತಿದ್ದ ಸುಮಳ ಮುಖ ಕಳವಳಗೊಂಡಿತ್ತು. ಕೆದರಿದ ತಲೆಗೂದಲು. ಭಣಗುಡುತ್ತಿದ್ದ ಬೋಳುಹಣೆ, ನಿದ್ದೆಗೆಟ್ಟು ಕಿರಿದಾಗಿದ್ದ ಕಣ್ಣುಗಳು. ಮುಖದಲ್ಲಿ ಜೋಭದ್ರ ಭಾವ.

ಗೊಂದಲದಿಂದ ಆಚಾರ್ಯರ ರೆಪ್ಪೆಗಳು ಅಲ್ಲಾಡಿ, ಹುಬ್ಬುಗಳು ಒಂದಾದವು. ಸುತ್ತ ಮುಕುರಿಕೊಂಡ ನರ್ಸುಗಳು..ಡಾಕ್ಟರುಗಳು....ಅವರ ಮಾತುಗಳೊಂದೂ ಅರ್ಥವಾಗಲಿಲ್ಲ...ಬರೀ ಶಬ್ದಗಳು..

‘ಮನೆಗೆ ಹೋದ್ಮೇಲೂ ಬೀ ಕೇರ್ ಫುಲ್...ಹೆಚ್ಚು ಸ್ಟ್ರೆಸ್ ಆಗಬಾರದು..ಸ್ಟಂಟ್ ಹಾಕಿರೋದು ನೆನಪಿರ್ಲಿ..ಎಮೋಶನ್ ಆಗೋದು ಬೇಡ...’

ಅವರೆಲ್ಲ ಮಾತುಗಳಿಗೂ ತಾಯಿ-ಮಗಳು ತಲೆಯಾಡಿಸುತ್ತಿದ್ದರು. ಹತಾಶರಾಗಿ ಅವರು ಕಣ್ಮುಚ್ಚಿದರು.

ಮೊಬೈಲ್ ರಿಂಗಣಿಸಿತು. ಸುಮಿತ್ರಮ್ಮ ಪಿಸುದನಿಯಲ್ಲಿ ‘ಹಲೋ’ ಎಂದರು.

‘ಹೂಂ...ಹುಷಾರಾಗಿದ್ದಾರೆ...ಯಾರೂ ಬರೋದು ಬೇಡ..ಇಲ್ಲಿ ಬಿಡಲ್ಲ...ಇನ್ನು ಮೂರ್ನಾಲ್ಕು ದಿನಗಳಲ್ಲಿ ಡಿಸ್ಚಾರ್ಜ್ ಆಗ್ತಾರೆ...’ ಎಂದು ಫೋನಿಟ್ಟರು. ತಮ್ಮನ್ನೇ ನೋಡುತ್ತಿದ್ದ ಸುಮಾಳಿಗೆ-

‘ಕ್ಷಮಾ ಒಂದೇಸಮನೆ ಅಳ್ತಾ ಇದ್ದಾಳೆ ಕಣೆ, ಅಪ್ಪನ್ನ ನೋಡ್ಬೇಕೂಂತ...ಉಳಿದವರದೂ ಅದೇ ಗೋಳು ಸುಮಾ..’ ಎಂದರು ಕಣ್ಣಂಚಿನ ನೀರು ತೊಡೆದು. ಸುಮಾ ಬದಲಾಡದೆ ತುಟಿ ಕಚ್ಚಿಕೊಂಡು, ವಾರ್ಡಿನಿಂದ ಹೊರಸರಿದಳು.

ಸುಮಿತ್ರಮ್ಮನ ಹೃದಯ ಒಂದೇ ಸಮನೆ ಮಗನ ನೆನಪಿನಿಂದ ತೊಯ್ದು ಹೋಗಿತ್ತು.

ಮುದ್ದುಕೃಷ್ಣನ ರೂಪ ಅವನದು. ನಿಂತರೆ, ಕೂತರೆ ಸವೆಯುತ್ತಾನೆಂಬಂತೆ ಗುರುರಾಜನಿಗೆ ಮನೆಯಲ್ಲಿ ಯಾರಿಗಿಲ್ಲದ ವಿಶೇಷ ಅಕ್ಕರಾಸ್ಥೆ. ಅಕ್ಕಂದಿರೆಲ್ಲ ಸೊಂಟದಲ್ಲಿಟ್ಟುಕೊಂಡು ಮೆರೆಸಿದ್ದೇ ಮೆರೆಸಿದ್ದು. ಆದರೆ ಸುಮಿತ್ರಮ್ಮ ಮಾತ್ರ ಐದು ಬೆರಳೂ ಸಮವೆಂಬಂತೆ ಎಲ್ಲ ಮಕ್ಕಳಿಗೂ ಸಮಾನ ಪ್ರೀತಿಯನ್ನು ಹಂಚುತ್ತಲೇ ಬೆಳೆಸಿದ್ದರು. ಎಲ್ಲರೂ ಒಪ್ಪವಾಗಿ ಬೆಳೆದರು. ಜಾಣರು. ಚೆನ್ನಾಗಿ ಓದಿ ಮುಂದೆ ಬಂದಿದ್ದು ದೊಡ್ಡ ಸಮಾಧಾನ.

ಉದ್ದಕ್ಕೆ ಬೆಳೆದು ನಿಂತಿದ್ದ ಹೆಣ್ಣುಮಕ್ಕಳನ್ನು ಕಂಡು ಆಚಾರ್ಯರಿಗೆ ಒಳಗೇ ಅವಲಕ್ಕಿ ಕುಟ್ಟುತ್ತಿತ್ತು. ಇವರಿಗೆಲ್ಲ ಹೇಗೆ ಮದುವೆ ಮಾಡಿ ಸಾಗು ಹಾಕುವುದೆಂಬ ಚಿಂತೆ. ಸುಮಿತ್ರಮ್ಮ ಮಾತ್ರ ನಿಶ್ಚಿಂತರಾಗಿ ಪೂಜೆ-ಪುನಸ್ಕಾರ, ಅಡುಗೆ ಕೆಲಸ, ಮನೆಯ ನಿಭಾವಣೆಯಲ್ಲೇ ತಲ್ಲೀನರು. ತಮಗಿದ್ದ ಸಣ್ಣ ಸಂಬಳದಲ್ಲಿ ಮಕ್ಕಳ ವಿದ್ಯಾಭ್ಯಾಸ, ಬಟ್ಟೆ-ಬರೆ, ಆಹಾರ ಇನ್ನಿತರ ಖರ್ಚುಗಳನ್ನು ಹೊಂದಿಸುವಲ್ಲಿ ಆಚಾರ್ಯರು ಹೈರಾಣು. ಇದರ ಜೊತೆ ಮದುವೆಯನ್ನೂ ಮಾಡಬೇಕಲ್ಲ ಎಂಬ ಕೊರಗಿನಿಂದ ಆತ ಒಳಗೊಳಗೇ ಕೊರಗುತ್ತಿದ್ದುದನ್ನು ಪತ್ತೆ ಹಚ್ಚಿದಂತೆ, ಹೆಣ್ಣುಮಕ್ಕಳು- ‘ಕೆಲಸಕ್ಕೆ ಸೇರಿ, ಸಂಪಾದಿಸಿದ ಮೇಲೆಯೇ ನಮಗೆ ಮದುವೆ ಅಪ್ಪ...’ -ಎಂದು ಕಟ್ಟುನಿಟ್ಟಾಗಿ ಹೇಳಿದ ಮೇಲೆ ಆಚಾರ್ಯರಿಗೆ ಕೊಂಚ ನಿರಾಳ.

ಅಜ್ಜಿ ಮಾತ್ರ ಗೊಣಗಾಡಿ ಕೊಂಡಿತು-‘ಅದಕ್ಕೆ ಹೆಂಗಸರು ಜಾಸ್ತಿ ಓದಬಾರದು ಅನ್ನೋದು, ನಮ್ಮ ಕಾಲದಲ್ಲಿ ದೊಡ್ಡವರ ಎದುರಿಗೆ ಹೀಗೆ ನಿಂತು ಮಾತಾಡೋದುಂಟೇ?’

‘ಇದು ನಿಮ್ಮ ಕಾಲ ಅಲ್ಲ ಅಜ್ಜಿ..’ ಹಿರಿಮೊಮ್ಮಗಳು ಸುಮಾ ದಬಾಯಿಸೇ ಬಿಟ್ಟಳು. ಜವಾಬ್ದಾರಿಯಿಂದ ಮೆತ್ತಗಾಗಿದ್ದ ಆಚಾರ್ಯರು ಅನುಕೂಲ ಸಿಂಧುವೆಂಬಂತೆ ತಮ್ಮ ತುಟಿಗಳನ್ನು ಹೊಲಿದುಕೊಂಡು ಕುಳಿತಿದ್ದರು.

ಸರ್ಕಾರಿ ಶಾಲೆಗಳಲ್ಲೇ ಓದು ಮುಗಿಸಿದ್ದ ಸುಮಾ, ಉಮಾ, ರಮಾ, ಮತ್ತು ಕ್ಷಮಾ ಕಾಲೇಜುಗಳಲ್ಲೂ ಸ್ಕಾಲರ್ಷಿಪ್-ಫ್ರೀಶಿಪ್ ಪಡೆದುಕೊಂಡಿದ್ದರಿಂದ ಹೆತ್ತವರಿಗೆ ಹೊರೆಯಾಗಲಿಲ್ಲ. ಒಬ್ಬನೇ ಮಗನೆಂದು ಗುರುರಾಜನನ್ನು ಮಾತ್ರ ಅಕ್ಕಂದಿರೇ ಹಟ ಮಾಡಿ ಕಾನ್ವೆಂಟಿಗೆ ಸೇರಿಸಿ, ತಮ್ಮನಿಗೆ ಪಾಠ ಹೇಳಿಕೊಟ್ಟು, ರಾಜಕುಮಾರನಂತೆ ಜತನವಾಗಿ ನೋಡಿಕೊಂಡಿದ್ದರು. ಆಚಾರ್ಯರಿಗೆ ಮಾತ್ರ ಮಗ ಎಂದರೆ ಒಂದು ಗುಲಗಂಜಿ ತೂಕ ಹೆಚ್ಚೇ. ತಪಸ್ಸು ಮಾಡಿ ಪಡೆದ ಮಗನಿಗೆ ಯಾವ ಅರೆಕೊರೆಯನ್ನೂ ಮಾಡಲಿಲ್ಲ ಅವರು. ಹೆಂಗರುಳುಗಳ ಮಧ್ಯೆ ಮುಚ್ಚಟೆಯಿಂದ ಬೆಳೆದ ಗುರುರಾಜ, ಬಾಯಲ್ಲಾಡಿದ್ದು ಕ್ಷಣಮಾತ್ರದಲ್ಲಿ ನೆರವೇರಿ ಹೋಗುತ್ತಿತ್ತು.

ಖರ್ಚು-ವೆಚ್ಚಗಳ ಲೆಕ್ಕ ಹಾಕುತ್ತಿದ್ದ ಆಚಾರ್ಯರಿಗೆ ಮನೆ ಬಾಡಿಗೆಯ ಹೊರೆ ಎಂಬುದೊಂದು ಮಾತ್ರ ಇರಲಿಲ್ಲ. ಹತ್ತು ಚದರದ ಹಳೆಯ ಸ್ವಂತ ಮನೆ. ಸಾಲ-ಸೋಲ ಮಾಡಿ ಕಟ್ಟಿದ್ದ ಮನೆ ನೆಮ್ಮದಿಯ ನೆರಳು ನೀಡಿತ್ತು. ಸುಮಿತ್ರಮ್ಮ ಸಮಾಧಾನಸ್ಥ ಹೆಂಗಸು. ಮನೆ ತುಂಬಾ ಕಿಲಕಿಲನೆ ನಗುತ್ತ ಓಡಾಡುವ ಸುಂದರ ಹೆಣ್ಣುಮಕ್ಕಳು, ಮನೆಗೆಲಸಗಳಲ್ಲಿ ತಮಗೆ ಭುಜಕೊಟ್ಟು ನೆರವಾಗುತ್ತ, ವಾತ್ಸಲ್ಯ ತೋರುವುದನ್ನು ಕಂಡಾಗ ಅವರೆದೆ ತಂಪಾಗುತ್ತದೆ.

ಎಲ್ಲವೂ ಹೂವಿನ ಸರ ಎತ್ತಿದಂತೆ ನಡೆದುಹೋಗಿತ್ತು. ಆಚಾರ್ಯರು ತಲೆಕೆಡಿಸಿಕೊಳ್ಳುವ ಸಂದರ್ಭವೇ ಬರಲಿಲ್ಲ. ನಾಲ್ಕು ಜನರಿಗೂ ಒಳ್ಳೆಯ ಉದ್ಯೋಗಗಳು ಸಿಕ್ಕಿದ್ದವು. ಚೆನ್ನಾಗಿ ಓದಿ ತಂತಮ್ಮ ಕಾಲ ಮೇಲೆ ನಿಂತಿದ್ದರು. ಕೈತುಂಬಾ ಸಂಬಳ. ಒಳ್ಳೆಯ ಲಕ್ಷಣವಂತರಾದ್ದರಿಂದ ಹುಡುಗರ ಕಡೆಯವರು ಅವರೇ ಬಯಸಿ ಬಂದು ಮದುವೆ ಮಾಡಿಕೊಂಡಿದ್ದು ಆಚಾರ್ಯರ ಪುಣ್ಯ. ಹುಡುಗಿಯರು ತುಂಬಾ ತಿಳುವಳಿಕಸ್ಥರು. ತಮ್ಮ ಮದುವೆಗಳಿಗೆ ತಾವೇ ಹಣ ಹೊಂದಿಸಿ ತಂದೆಗೆ ಭುಜ ಕೊಟ್ಟಿದ್ದಾರೆ. ಎಂದೂ ಹೊರೆಯಾಗದ, ಹೆತ್ತವರನ್ನು ಕಂಡರೆ ಅಮಿತ ವಾತ್ಸಲ್ಯ ತೋರುವ ತಮ್ಮ ಹೆಣ್ಣುಮಕ್ಕಳನ್ನು ಕಂಡರೆ ಸುಮಿತ್ರಮ್ಮನವರಿಗೆ ಜೀವ.

ಮೊಬೈಲ್‌ನಲ್ಲಿ ಹೆಣ್ಣುಮಕ್ಕಳ ಕಕ್ಕುಲಾತಿಯ ದನಿಗೇಳಿ ಒಂದುಕಡೆ ಆಕೆಯ ದುಃಖ ಹೆಚ್ಚಾದರೆ, ಇನ್ನೊಂದೆಡೆ ಸದಾ ಧೈರ್ಯ ತುಂಬುವ ಮಕ್ಕಳ ಕಾಳಜಿ-ಮಮತೆಗಳ ಮಾತುಗಳು ಬೆಚ್ಚನೆಯ ಭಾವ ಎರೆದಿದ್ದವು.

ಸುಮಾ, ಬಿಲ್ ಕೌಂಟರಿಗೂ ವಾರ್ಡಿಗೂ ತರಾತುರಿಯಿಂದ ಓಡಾಡುತ್ತಿದ್ದಳು. ಸುಮಿತ್ರಮ್ಮ ಮೆಲ್ಲನೆ ಆಚಾರ್ಯರ ಕೈಹಿಡಿದುಕೊಂಡು ಮೇಲೆಬ್ಬಿಸಿ, ಚೆಲ್ಲಾಪಿಲ್ಲಿಯಾಗಿದ್ದ ಅವರ ತಲೆಗೂದಲನ್ನು ಕೈಯಲ್ಲೇ ಬಾಚಿ, ಶಾಲನ್ನು ಬೆಚ್ಚಗೆ ಹೊದಿಸಿ ಪಕ್ಕದ ಆರಾಮ ಖುರ್ಚಿಯಲ್ಲಿ ಕೂರಿಸಿದರು. ಗಂಡ-ಹೆಂಡತಿ ಇಬ್ಬರ ಮುಖಗಳಲ್ಲೂ ‘ಸದ್ಯ ಮನೆಗೆ ಹೋಗ್ತೀವಲ್ಲ’ ಎಂಬ ಬಿಡುಗಡೆಯ ಭಾವ.

ಆಸ್ಪತ್ರೆಯ ಬಿಲ್ ಕಟ್ಟಿ ಲಗುಬಗೆಯಿಂದ ಹತ್ತಿರ ಬಂದ ಮಗಳನ್ನು ಆಚಾರ್ಯರು ಪ್ರೀತಿಯಿಂದ ದಿಟ್ಟಿಸಿದರು. ಮನಸ್ಸಿನಲ್ಲಿ ನೂರು ಮಾತುಗಳು ಹೊರಳಿದರೂ ಬಾಯಿ ತೆರೆದುಕೊಳ್ಳಲಿಲ್ಲ. ಉಳಿದ ಹೆಣ್ಣುಮಕ್ಕಳ ಮುಖಗಳನ್ನು ನೋಡಲು ಕಾತರಿಸಿದ ಕಣ್ಣೋಟ. ಅವರ ಇಂಗಿತವರಿತ ಸುಮಿತ್ರಮ್ಮ-‘ಮೊದ್ಲು ನೀವು ಮನೆಗೆ ಬನ್ನಿ...ಎಲ್ಲರೂ ನಿಮಗಾಗಿ ಕಾದಿದ್ದಾರೆ’-ಎಂದು ಸಮಾಧಾನ ಮಾಡುವಂತೆ ಅವರ ಬೆನ್ನು ನೇವರಿಸಿದರು. ಆದರೂ ಅವರ ನೋಟ ದೂರದಲ್ಲಿದ್ದ ಮಗನಿಗಾಗಿ ತಡಕಾಡಿತು.

ಓದಿ ಬೇರೆ ಊರಿನಲ್ಲಿ ಕೆಲಸದಲ್ಲಿದ್ದ ಗುರುರಾಜ ವಾರದ ಕೊನೆಯಲ್ಲಿ, ಮನೆಗೆ ಹಾಜರಾಗುತ್ತಿದ್ದರೂ ವಾರದ ದಿನಗಳಲ್ಲಿ ಮನೆಯಲ್ಲಿ ಇಳಿವಯಸ್ಸಿನ ಆಚಾರ್ಯ ದಂಪತಿಗಳಿಬ್ಬರೇ. ಆದರೆ, ಇಬ್ಬರೇ ಇದ್ದರು ಅನ್ನೋದು ಹೆಸರಿಗಷ್ಟೇ. ಬೆಳಗಿನಿಂದ ಸಂಜೆಯವರೆಗೂ ಹೆಣ್ಣುಮಕ್ಕಳ ಫೋನುಗಳಲ್ಲಿನ ಗಲಗಲ ಧ್ವನಿ ಮನೆ ತುಂಬಿಹೋಗುತ್ತಿತ್ತು. ಯಾವುದಕ್ಕೂ ಅರೆಕೊರೆಯಿಲ್ಲ. ಮನೆಗೆ ಬೇಕಾದ ವಸ್ತುಗಳೆಲ್ಲವೂ ಸ್ಪರ್ಧೆಯಂತೆ ಬಂದು ಬೀಳುತ್ತಿದ್ದವು.

‘ನೀವು ನೀವು ಮಾತನಾಡಿಕೊಂಡು ತಂದ್ಕೊಡ್ರೆ...ಎಲ್ಲರೂ ಹೀಗೆ ಒಟ್ಟೊಟ್ಟಿಗೆ ಹಾರ್ಲಿಕ್ಸೂ, ಬೋರ್ನವೀಟಾ ಇಷ್ಟೊಂದು ಬಾಟಲ್ಗಳನ್ನು ತಂದ್ಕೊಟ್ರೆ ಹೇಗೆ?’ ಎಂದು ಸುಮಿತ್ರಮ್ಮ ಗದರುತ್ತಿದ್ದುದೂ ಉಂಟು. ಅವರೆಲ್ಲ ತಂತಮ್ಮ ಗಂಡಂದಿರಿಗೆ ಹೇಳಿ ತೌರುಮನೆಯ ಹತ್ತಿರ ಹತ್ತಿರದಲ್ಲೇ ಮನೆ ಮಾಡಿಕೊಂಡಿದ್ದರು. ಗುರುರಾಜನೂ, ಅಕ್ಕಂದಿರ ಅಕ್ಕರೆಯ ಗುಣ ಕಂಡವನು ಅಷ್ಟೇ ಅವರನ್ನು ಹಚ್ಚಿಕೊಂಡಿದ್ದ. ಆಚಾರ್ಯರ ಸಂಸಾರ ಸುಖಗಡಲಲ್ಲಿ ತೇಲುತ್ತಿತ್ತು.

ಆದರೆ... ಈ ಮಧ್ಯೆ ಅನಿರೀಕ್ಷಿತ ಘಟನೆಯೊಂದು ಸಂಭವಿಸಿ ಆ ಸಂಸಾರದ ನೆಮ್ಮದಿ ಒಮ್ಮೆಲೆ ಹಾರಿಹೋಗಿ, ಎಲ್ಲರೂ ವಿಪ್ಲವಗೊಂಡಿದ್ದರು!...

ಹಿರಿಮಗಳು ಸುಮಳ ಗಂಡ ವಾಹನದ ಅಪಘಾತದಲ್ಲಿ ಮರಣಿಸಿದ ದುರ್ವಾರ್ತೆ ಕೇಳಿ ಆಚಾರ್ಯ ದಂಪತಿಗಳು ಗರಬಡಿದಂತಾದರು. ಕ್ಷಣಾರ್ಧದಲ್ಲಿ ಮನೆ ಶೋಕಸಾಗರವಾಯಿತು.

ತಮ್ಮ ಸುಂದರ ಸಂಸಾರಕ್ಕೆ ದೃಷ್ಟಿ ತಗುಲಿತೇ ಎಂದು, ಸುಮಿತ್ರಮ್ಮ ಒಳಗೇ ಕೊರಗುತ್ತ ಕೃಶವಾಗತೊಡಗಿದರು. ಹತ್ತುವರ್ಷದ ಮೊಮ್ಮಗಳೊಂದಿಗೆ ಮಗಳು ಒಬ್ಬಳೇ ವಾಸಿಸುವುದನ್ನು ಸಹಿಸದ ಆಕೆ ಒತ್ತಾಯದಿಂದ ಸುಮಳನ್ನು ತಮ್ಮ ಮನೆಗೆ ಕರೆತಂದು ಜೊತೆಯಲ್ಲೇ ಇರಿಸಿಕೊಂಡರು.

ಮೊದಮೊದಲು ಎಲ್ಲವೂ ಸರಿಯಾಗೇ ಇತ್ತು. ಗುರುವಿನ ಹೆಂಡತಿ, ಸುಮಾನೇ ಆರಿಸಿ ಇಷ್ಟಪಟ್ಟು ಮದುವೆ ಮಾಡಿಸಿದ ಹುಡುಗಿ. ಆದರೂ ಮನೆ ತಪ್ಪಿದ ಮಗಳು ಜೀವನಪರ್ಯಂತ ತಮ್ಮ ಮನೆಯಲ್ಲೇ ಝಾಂಡಾ ಊರಿದ್ದು ಮನೆಯ ಸೊಸೆಗೆ ಕಿಚ್ಚಾಯಿತು. ಅವಳ ಅಸಡ್ಡೆಯ ಮಾತು-ನಡವಳಿಕೆ ಸುಮಳ ಸೂಕ್ಷ್ಮ ಮನಸ್ಸು ಅರಗಿಸಿಕೊಳ್ಳಲಾರದಾಯಿತು. ವಿಧವೆ ಅಕ್ಕನನ್ನು ವಹಿಸಿಕೊಂಡು ಬರಲಾರದ ಅಸಹಾಯಕತೆ, ಇಬ್ಬಂದಿಯ ಸಂಕಟ ಗುರುವಿಗೆ.

‘ಪರ್ಮನೆಂಟಾಗಿ ಮನೆಮಗಳು ತವರುಮನೆ ಸೇರಿಕೊಂಡ್ರೆ.. ಈ ಮನೆಯಲ್ಲಿ ನಾವೇ ಅಪರಿಚಿತರಾಗಿ ಬಿಡ್ತೀವಿ ಅಷ್ಟೇ...ಆಮೇಲೆ ಅಧಿಕಾರ, ಮನೆ ಎಲ್ಲ ಅವರದೇ ಆಗಿಬಿಡತ್ತೆ’- ಕೋಣೆಯೊಳಗೆ ಗಂಡನ ಬಳಿ ಚುಚ್ಚಿಕೊಡುತ್ತಿದ್ದ ನಾದಿನಿಯ ನಂಜಿನ ಮಾತುಗಳನ್ನು ಕೇಳಿ ಸುಮಾ ತಲ್ಲಣಿಸಿ ಹೋಗಿದ್ದಳು. ಕೂಡಲೇ ಬೇರೆ ಮನೆ ಮಾಡಲು ಮುಂದಾದ ಮಗಳನ್ನು ಸುಮಿತ್ರಮ್ಮನೇ ಬಲವಂತದಿಂದ ಕಟ್ಟಿಹಾಕಿದರು. ಸುಮಾ ಮನೆಬಿಟ್ಟು ಹೋಗುವ ಬದಲು, ಮಗ ಮನೆ ಖಾಲಿ ಮಾಡಿದ!.. ಗಂಡನಿಗೆ ಬೇರೆ ಊರಿಗೆ ವರ್ಗ ಮಾಡಿಸಿಕೊಂಡು ಸೊಸೆ, ಗಂಡನನ್ನು ಹೊರಡಿಸಿಕೊಂಡು ಗಂಟು ಮೂಟೆ ಕಟ್ಟಿದಾಗ ಆಚಾರ್ಯರು ಅವಾಕ್ಕಾದರು. ಅಷ್ಟೇ ಗಾಬರಿಯೂ ಆದರು.

‘ನಮ್ಮ ವಂಶೋದ್ಧಾರಕ, ಒಬ್ಬನೇ ಮಗ, ಹೀಗೆ ಏಕಾಏಕಿ ನಮ್ಮನ್ನು ಬಿಟ್ಟುಹೋಗೋದೂಂದ್ರೆ ಏನೇ’ ಎಂದು ಹೆಂಡತಿಯ ಬಳಿ ಒದ್ದಾಡಿಕೊಂಡು ಕಂಗಾಲಾದರು.

ಸುಮಿತ್ರಮ್ಮನಿಗಿರುವಷ್ಟು ಗುಂಡಿಗೆ ಆಚಾರ್ಯರಿಗಿರಲಿಲ್ಲ.

‘ನೀನು ಏನೇ ಹೇಳು, ಮಗ ಮುನಿಸಿಕೊಂಡು ಹೀಗೆ ಮನೆಬಿಟ್ಟು ಹೋಗೋದು ಒಳ್ಳೆದಲ್ಲ...ನಾಳೆ ನಾವು ಸತ್ತಾಗ ಅಂತ್ಯಸಂಸ್ಕಾರ ಮಾಡಿ, ಶ್ರಾದ್ಧ ಕಾರ್ಯಗಳನ್ನು ಮಾಡಿ ಮೋಕ್ಷ ತೋರಿಸೋದು ಅವನೇ ತಾನೇ ...ಈ ಹೆಣ್ಣುಮಕ್ಕಳು ಏನು ಮಾಡ್ತಾರೆ?’- ಎಂದು ಮಮ್ಮಲ ಮರುಗಿದರು.

ತಂದೆಯ ದೌರ್ಬಲ್ಯ ಮತ್ತು ಅವರ ಹೃದಯವನ್ನು ಕೊರೆಯುತ್ತಿದ್ದ ಕೀಟವನ್ನು ಬಲ್ಲ ಮಗ, ಹೆಂಡತಿಯ ಒತ್ತಾಯದ ಮಾತಿಗೆ ಪಕ್ಕಾಗಿ, ‘ಮನೆ ಮಗನಾಗಿ ನನಗೇನಿದೇಪ್ಪ ಹಕ್ಕು ಈ ಮನೇಲಿ?’ ಎಂದು ಆಡಿದ ಮಾತು, ಸವಾಲೆಂಬಂತೆ ಎದೆ ಸೀಳಿದಾಗ, ಆಚಾರ್ಯರು ದಂಗಾದರು. ಹೆಂಡತಿಯನ್ನು ಒಂದ್ಮಾತು ಕೇಳುವ ಗೋಜಿಗೂ ಹೋಗದೆ, ಕೂಡಲೇ ಅವರು ತಮ್ಮ ಮನೆಯನ್ನು ಅವನ ಹೆಸರಿಗೆ ರಿಜಿಸ್ಟರ್ ಮಾಡಿಸಿಕೊಟ್ಟು ಬಿಟ್ಟರು, ತಮ್ಮ ಆಯಸ್ಸಿನ ಪೂರಾ ಅವನು ಕಣ್ಣೆದುರೇ ಇರಬೇಕೆಂಬ ಕಡು ವಾಂಛೆಯಿಂದ. ಆದರೆ ಇದಾದ ತಿಂಗಳೊಪತ್ತಿನಲ್ಲೇ ಅವನಿಗೆ ವಿದೇಶದಲ್ಲಿ ಹೊಸ ಪ್ರಾಜೆಕ್ಟ್ ಸಿಕ್ಕು ಅವನು ಹೆಂಡತಿಯೊಡನೆ ದೂರದ ಅಮೆರಿಕಗೆ ಹೊರಡಬೇಕಾಯಿತು.

ಮನೆಯೊಳಗೆ ಕಾಲಿಟ್ಟಾಗ ಆಚಾರ್ಯರಿಗೆ ಜೀವ ಝಗ್ ಎಂದಿತು. ಮೌನ ಕಿವಿಯೊಳಗೆ ಗಿಜಿಗುಟ್ಟಿತು...ಭಣ ಭಣವೆಂಬ ಭಾವ-ನೋವು.. ಅದು ಒಂದೇ ಕ್ಷಣ ...‘ಹೇಗಿದ್ದೀರಾ ತಾತಾ’ -ಎಂದು ಮೊಮ್ಮಗಳು ಅಕ್ಕರೆಯಿಂದ ಅವರ ಹೆಗಲು ತಬ್ಬಿ ಪ್ರಶ್ನಿಸಿದಾಗ ಅವರ ಮುಖದ ನೆರಿಗೆಗಳು ಅಲ್ಲಾಡಿದವು. ಮೌನವಾಗಿ ಅವಳ ಗಲ್ಲ ನೇವರಿಸಿದರೂ ಗೋಡೆಯ ಮೇಲಿದ್ದ ಮಗ-ಸೊಸೆಯ ಫೋಟೋವನ್ನು ದಿಟ್ಟಿಸುತ್ತ ಮೌನವಾದರು.

ದಿನವಿಡೀ ಮನೆಯಲ್ಲಿ ಮುದುಕರಿಬ್ಬರೇ. ಸುಮಾ ಕೆಲಸಕ್ಕೆ ಹೋದರೆ, ಅವಳ ಮಗಳು ಸ್ಕೂಲಿಗೆ. ಈಗಾಗಲೇ ಈ ವ್ಯವಸ್ಥೆಗೆ ಅವರು ಚೆನ್ನಾಗಿ ಹೊಂದಿಕೊಂಡು ಬಿಟ್ಟಿದ್ದರು. ಸುಮಾ ಮನೆಯ ವಹಿವಾಟನ್ನೆಲ್ಲ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದುದರಿಂದ, ಮೊಮ್ಮಗಳೂ ಮನೆಗೆಲಸದಲ್ಲಿ ಅಷ್ಟಿಷ್ಟು ನೆರವಾಗುತ್ತಿದ್ದುದರಿಂದ ಸುಮಿತ್ರಮ್ಮನಿಗೆ, ಅವಳ ಮುದ್ದು ಮಾತುಗಳನ್ನು ಕೇಳುತ್ತ ದಿನಗಳು ಸರಿಯುವುದರ ಅರಿವೇ ಆಗುತ್ತಿರಲಿಲ್ಲ..

ಜೋರಾಗಿ ಕಾಲಿಂಗ್ ಬೆಲ್ ಬಾರಿಸಿತು.

‘ಅಮೇಜಾನ್’- ಯೋಚನೆಯ ಹುತ್ತವಾಗಿದ್ದ ಆಕೆ ದಡಬಡಿಸಿ ಮೇಲೆದ್ದರು.

ಪ್ರತಿದಿನ ದಿನಕ್ಕೆರಡು ಬಾರಿ ಅಮೆಜಾನ್ ರಾಯಭಾರಿಯ ದರ್ಶನ!!..ಗೊತ್ತು, ದಿನಾ ಅವರುಗಳದೇ ಈ ಕಾರುಬಾರು. ಹಿಂದೆಲ್ಲ ತಮಗೆ ಅಗತ್ಯವಾದ ವಸ್ತುಗಳನ್ನು ಅವರುಗಳೇ ಬಂದು ತಂದು ಕೊಡುತ್ತಿದ್ದವರು, ಈಗ ಈ ಬದಲೀ ವ್ಯವಸ್ಥೆ. ಪ್ರಪಂಚವನ್ನೇ ತನ್ನ ಕಬ್ಜಕ್ಕೆ ತೆಗೆದುಕೊಂಡಿರುವ ರಕ್ಕಸ ‘ಕೊರೊನಾ’ ದೆಸೆಯಿಂದ ಎಲ್ಲ ದೂರ ದೂರದಿಂದಲೇ ಯೋಗಕ್ಷೇಮ ವಿಚಾರಿಸುವುದು, ಮನೆಗೆ ಹಣ್ಣು-ಹಂಪಲು, ತರಕಾರಿ ಮತ್ತು ಉಳಿದೆಲ್ಲ ದಿನಸಿ ಪದಾರ್ಥಗಳನ್ನು ಆನ್‌ಲೈನ್ ಮೂಲಕ ತರಿಸಿಕೊಡುತ್ತಿದ್ದಾರೆ. ಸದಾ ಫೋನ್ ರಿಂಗಣಿಸುತ್ತಿರುತ್ತದೆ. ಎಷ್ಟು ವಿಚಾರಿಸಿಕೊಂಡರೂ ಅವರುಗಳಿಗೆ ಸಮಾಧಾನವಿಲ್ಲ.

ಈಚೆಗೆ ಮನೆಯಿಂದಲೇ ಕೆಲಸ ಮಾಡುತ್ತಿದ್ದಳು ಸುಮಾ.

ಅಂದು ಅಪರಾತ್ರಿ. ಸುಮಾರು ಮೂರೂ ಮುಕ್ಕಾಲುಗಂಟೆ. ಕಲ್ಲು-ನೀರು ಕರಗುವ ಸಮಯ. ನಡುರಾತ್ರಿಯಲ್ಲಿ ಆಚಾರ್ಯರು ಎದೆ ಹಿಡಿದುಕೊಂಡು ಕುಳಿತಿದ್ದರು. ಮೈಯೆಲ್ಲಾ ನೀರಾಗಿ ಹೋಗಿತ್ತು ತಾಯಿ-ಮಗಳಿಗೆ. ಸುಮಾ ತಡ ಮಾಡದೆ, ಹತ್ತಿರದ ಆಸ್ಪತ್ರೆಗೆ ಫೋನ್ ಮಾಡಿ ಆಂಬುಲೆನ್ಸ್ ತರಿಸಿ ತಂದೆಯನ್ನು ಆಸ್ಪತ್ರೆಗೆ ಅಡ್ಮಿಟ್ ಮಾಡಿ ಅವರನ್ನು ಉಳಿಸಿಕೊಂಡಿದ್ದೇ ಒಂದು ದೊಡ್ಡ ಕಥೆ.

ಬೆಳಕು ಹರಿಯಲಿಕ್ಕಿಲ್ಲ ಉಳಿದ ಹೆಣ್ಣುಮಕ್ಕಳೆಲ್ಲ ಆಸ್ಪತ್ರೆಗೆ ಧಾವಿಸಿ ಬಂದಿದ್ದರು. ಆದರೆ ಯಾರನ್ನೂ ಒಳಬಿಡಲಿಲ್ಲ.

ಮಗನನ್ನು ನೋಡಬೇಕೆಂಬ ಆಚಾರ್ಯರ ಅತೀವ ಹಂಬಲವೇ ಅವರ ಹೃದಯಾಘಾತಕ್ಕೆ ಕಾರಣವಾಗಿತ್ತು. ‘ಗುರೂ..ಗುರೂ..’ ಎಂದು ಒಂದೇಸಮನೆ ಪಠಿಸುತ್ತಿದ್ದರು. ಈ ಕೊರೊನ್ಮಯ ಸನ್ನಿವೇಶದಲ್ಲಿ ದೇಶದಿಂದ ದೇಶಕ್ಕೆ ಬರುವುದು ಅಸಾಧ್ಯದ ಮಾತು ಎಂಬುದನ್ನು ಬಲ್ಲರಾದರೂ ನೋಡುವ ಅಭೀಪ್ಸೆ ಸ್ಫೋಟಗೊಂಡಿತ್ತು.

ಡಾಕ್ಟರ್ ಹೇಳಿದಂತೆ ಕೂಡಲೇ ತಂದೆಯ ಆಪರೇಷನ್ನಿಗೆ ಹಣ ಹೊಂದಿಸಿ ತಾಯಿ-ತಂಗಿಯರಿಗೆ ಧೈರ್ಯ ಹೇಳಿ ಆಚಾರ್ಯರಿಗೆ ಒತ್ತಾಸೆಯಾಗಿ ನಿಂತವಳಿಗೆ ಬರೋಬ್ಬರಿ ಆರು ಲಕ್ಷ ರೂ ಕೈಬಿಟ್ಟಿತ್ತು. ಸದ್ಯ ತಂದೆ, ಜೀವದೊರಸೆ ಮನೆಗೆ ಬಂದದ್ದು ದೊಡ್ಡ ಸಮಾಧಾನ.

ಮೂರು ಹಗಲು. ಮೂರು ರಾತ್ರಿ ಕಳೆದಿತ್ತು. ನಡುರಾತ್ರಿಯಾದರೂ ಸುಮಾ ನಿದ್ದೆಯಿಲ್ಲದೆ ಹೊರಳಾಡುತ್ತಿದ್ದಳು. ಪಕ್ಕದ ಕೋಣೆಯಿಂದ ಒಂದೇಸಮನೆ ತೂರಿ ಬರುತ್ತಿದ್ದ ಆಚಾರ್ಯರ ಕೆಮ್ಮಿನ ಸದ್ದು, ಅವಳ ನಿದ್ದೆ ಕಸಿದಿತ್ತು. ಎದ್ದು ಹೋಗಿ ಕಾಫ್ ಸಿರಪ್ ಕೊಟ್ಟುಬಂದಳು. ಸುಮಿತ್ರಮ್ಮನೂ ಮೇಲೆದ್ದು ಹೋಗಿ ನೀರು ತಂದು ಕುಡಿಸಿದರು. ಮೆಲ್ಲಗೆ ಎದೆ ನೀವಿದರು. ಬೆಳಕು ಹರಿಯುವುದರಲ್ಲಿ ಆಚಾರ್ಯರಿಗೆ ಜ್ವರ ಕಾಣಿಸಿಕೊಂಡಿತ್ತು. ಸುಮಳ ಹೃದಯ ಢವಢವಿಸಿ, ಕೂಡಲೇ ಡಾಕ್ಟರಿಗೆ ಫೋನ್ ಮಾಡಿದಳು.

ಲಕ್ಷ ಲಕ್ಷ ರೂಪಾಯಿ ವಸೂಲಿ ಮಾಡಿದ್ದರ ಜೊತೆಗೆ ಆಸ್ಪತ್ರೆ ನೀಡಿದ ಬಳುವಳಿ!!!..

ಸುದ್ದಿ ತಿಳಿದು ಎಲ್ಲ ಧರೆಗಿಳಿದು ಹೋದರು.

ಮುಂದೆ ನಡೆದದ್ದೆಲ್ಲ ಅನಿರೀಕ್ಷಿತ-ಅನಪೇಕ್ಷಿತ... ಸುಮಾ, ಈಗಾಗಲೇ ಹಗಲೂ ರಾತ್ರಿ ತಂದೆಯೊಂದಿಗೆ ಆಸ್ಪತ್ರೆಯ ವನವಾಸ ಅನುಭವಿಸಿ ಬಂದವಳು, ಇನ್ನೂ ನಿರಾಳ ಉಸಿರು ಬಿಟ್ಟಿರಲಿಲ್ಲ. ಮತ್ತೆ ಗ್ರಹಚಾರ ಬೆನ್ನಟ್ಟಿ ಬಂದಿತ್ತು. ಈಗ ಯಾವುದಕ್ಕೂ ವ್ಯವಧಾನವಿರಲಿಲ್ಲ. ತಂಗಿಯರಿಗೆಲ್ಲ ವಿಷಯ ಮುಟ್ಟಿಸಿದಳು. ಇಡೀ ರಾತ್ರಿ ಫೋನ್ ಮಾಡಿದರೂ ಯಾವ ಆಸ್ಪತ್ರೆಯಲ್ಲೂ ಬೆಡ್ ಸಿಗಲಿಲ್ಲ. ಗಳಿಗೆ ಗಳಿಗೆಗೂ ಆಕ್ಷಿಜನ್ ಲೆವೆಲ್ ಕಡಮೆಯಾಗುತ್ತಿರುವುದನ್ನು ಗಮನಿಸಿ ಅವಳ ಜೀವದಲ್ಲಿ ಜೀವ ನಿಲ್ಲಲಿಲ್ಲ. ಬೆಳಗಿನವರೆಗೂ ನಿಲ್ಲದ ಪರದಾಟ. ಉಸಿರಾಟದ ತೊಂದರೆಯಿಂದ ಆಚಾರ್ಯರ ಪ್ರಾಣವಾಯು ಮೇಲೆ ಕೆಳಗೆ ಹೊಯ್ದಾಡುತ್ತಿತ್ತು.

ಕನಸಿನಲ್ಲೂ ನೆನೆದು ನಡುಗುತ್ತಿದ್ದ ಆ ಕೆಟ್ಟರೋಗದ ಹೆಸರು ಕೇಳಿ ಮೆಟ್ಟಿಬಿದ್ದ ಸುಮಿತ್ರಮ್ಮ, ಉಳಿದ ಯಾವ ಹೆಣ್ಣುಮಕ್ಕಳೂ ಮನೆಬಿಟ್ಟು ಹೊರಗೆ ಬರಕೂಡದೆಂದು ಕಟ್ಟಪ್ಪಣೆ ಹೊರಡಿಸಿದ್ದರು. ಕಡೆಗೂ ಹತ್ತು ಪಟ್ಟು ದುಡ್ಡು ತೆತ್ತು ಸುಮಾ, ಆಸ್ಪತ್ರೆಯಲ್ಲಿ ತಂದೆಗೊಂದು ಹಾಸಿಗೆ ಗಿಟ್ಟಿಸಿಕೊಂಡಿದ್ದಳು.

ಎಲ್ಲವೂ ಕನಸಿನಲ್ಲಿ ನಡೆದು ಹೋದಂತಾಗಿತ್ತು. ಹಣ ನೀರಿನಂತೆ ಖರ್ಚಾಗುತ್ತಿದ್ದರೂ ಎಲ್ಲ ವ್ಯರ್ಥವಾಯಿತು. ಸ್ಟೀರಾಯ್ದ್ಸ್, ಆಕ್ಸಿಜನ್ನು, ವೆಂಟಿಲೇಟರ್ ಯಾವುದೂ ಆಚಾರ್ಯರಿಗೆ ಜೀವದಾನ ಮಾಡಲಿಲ್ಲ.

ಜೀವನವಿಡೀ ಮಡಿ ಮಡಿ ಎಂದು ಹಾರಾಡುತ್ತಿದ್ದ ಜೀವ ಈಗ ನೂರಾರು ಶವಗಳು ಮಲಗಿದ ಮೈಲಿಗೆಯ ಆಂಬುಲೆನ್ಸ್‌ನಲ್ಲಿ ನಿಷ್ಪಂದವಾಗಿ ಮಲಗಿತ್ತು. ಅವರ ಪ್ರೀತಿಯ ಜೀವಗಳು ಅವರನ್ನು ತಕ್ಕೈಸಿಕೊಂಡು ವಿದಾಯ ಹೇಳುವ ಆಸ್ಪದವೂ ಇರಲಿಲ್ಲ.

ಕಡೆಗೆ ತಂದೆಯ ಮುಖದರ್ಶನವೂ ಸಿಗದ ಸುಮಾ, ಕಣ್ಣೀರೇ ತಾನಾಗಿ ಪುರೋಹಿತರೊಂದಿಗೆ ಅವರ ಅಪರಕರ್ಮಗಳನ್ನು ನೆರವೇರಿಸುವ ಬಗ್ಗೆ ಚರ್ಚಿಸುತ್ತಿದ್ದರೆ, ಆಚಾರ್ಯರು ಅದಾಗಲೇ ಯಾವುದೋ ಅಪರಿಚಿತ ಹಸ್ತಗಳಿಂದ ಅಗ್ನಿಸ್ಪರ್ಶಗೊಂಡು ಪಂಚಭೂತಗಳಲ್ಲಿ ಲೀನರಾಗಿ ಹೋಗಿದ್ದರು!!!....

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.