ಮೇನ್ ರೋಡಿಗೇ ಇದ್ದ ನಾಗಪ್ಪರ ಮನೆಯ ಕಿಟಕಿಗೆ ಭಾನುವಾರ, ಗುರುವಾರ ಬಂತೆಂದರೆ ಎಲ್ಲಿಲ್ಲದ ಡಿಮ್ಯಾಂಡು. ತನ್ನ ಹೊರಬದಿಗೆ ಜೋತುಬಿದ್ದ ಬೀದಿಮಕ್ಕಳಿಗೆ ತನ್ನ ಸರಳು ಕಣ್ಣುಗಳಿಂದ ಟೀವಿ ತೋರಿಸುವಲ್ಲಿನ ಅದರ ಠೀವಿ ಹೇಳತೀರದು. ನಟ-ನಟಿಯರು ಎಷ್ಟು ದೊಡ್ಡವರೆ ಆಗಿರಲಿ, ತನ್ನ ಹೊಕ್ಕೆ ಹೊರಹೋಗಬೇಕಲ್ಲ. ತನ್ನ ಮೈಮುಟ್ಟಿ ಪುಳಕವೆಬ್ಬಿಸಿದ ಮೇಲೆತಾನೆ ಹೊರನಿಂತ ಮಕ್ಕಳ ಕಣ್ಣುಗಳಿಗೆ ಕಚಗುಳಿಯಿಡುವುದು. ಈ ಎರಡು ದಿನತಾನೆ ರಸ್ತೆಯಲ್ಲಿ ಅಬ್ಬರಿಸುವ ಬಸ್ಸು ಲಾರಿಗಳ ಚಿಟ್ಟಿಡಿಯುವ ಸೌಂಡಿಂದ ನೆಮ್ಮದಿ ಸಿಗುವುದು. ಆ ಮಕ್ಕಳು ತನ್ನ ಕೊರಳಿಗೆ ಪುಟ್ಟ ಕೈಗಳಿಂದ ತೂಗಿಬಿದ್ದಾಗ ಎಷ್ಟು ಮುದ. ಆ ಹುಡುಗಿಯ ಕೆದರಿದ ತಲೆಗೂದಲ ಮುಗ್ಗಲು ವಾಸನೆ ತನಗೆಂದಿಗೂ ವಾಕರಿಕೆ ತರಿಸಿಲ್ಲ. ಮನೆಯೊಳಗಿನ ಆ ಜನರ ಸೋಗಲಾಡಿತನದಿಂದ ಒಂದಿಷ್ಟು ಮನಸ್ಸಿಗೆ ಸಂತಸ ಸಿಗುವುದೆ ಬೀದಿಮಕ್ಕಳ ಈ ಮುಗ್ಗಲು ವಾಸನೆಯಿಂದ ಅಲ್ಲವೆ ಅಂತ ನಿಟ್ಟುಸಿರಿಡುತ್ತಿದ್ದ ನಾಗಪ್ಪರ ಆ ಕಿಟಕಿ ಪ್ರತಿವಾರ ಬರುವ ಬೋಣಿಗಾಗಿ ಹುಡುಕಾಡಿತು. ಹೋದ ಗುರುವಾರ ಇರಬೇಕು. ಹೀಗೆ ಬೋಣಿ ತನ್ನ ಗೊಣ್ಣೆಮುಖವನ್ನು ತನ್ನೆರಡು ಸರಳುಗಳಿಗೆ ಸಿಕ್ಕಿಸಿ ‘ವಾರ ಬಂತಮ್ಮ’ ಹಾಡು ನೋಡುತ್ತಿದ್ದಾಗ ಅವನವ್ವ ಬಂದು ‘ನಿನ್ ಹೆಜ್ಜಡಗೋಗ್ಲಿ ಕೊಬ್ರಿ ತಕಂಬಾ ಅಂತ ಕಳಿಸಿದ್ರೆ ಇಲ್ಲಿ ಟಿಬಿ ನೋಡ್ಕಂತ ನಿಂತೀಯ..’ ಅಂತ ಏನು ಬಡಿಬಡಿ ಬಡಿದು ಹಾಕಿಬಿಟ್ಟಿದ್ದಳು, ಅವನನ್ನು ಪಾಪ. ಸಾಲದ್ದಕ್ಕೆ ಈ ನಮ್ಮ ನಾಗಪ್ಪ ‘ಇನ್ನೊಂದಿಷ್ಟು ಹಾಕು, ಇಪ್ಪತ್ನಾಗಂಟೆ ಇಲ್ಲೆ ಸಾಯ್ತಾನೆ ಓದೋದು ಬರೆಯೋದು ಏನು ಇಲ್ಲ ಇವನಿಗೆ’ ಅಂತ ಎಣ್ಣೆ ಸುರಿದಿದ್ದ. ಅಲ್ಲ ಈ ಬೋಣಿ ಜೊತೆಗೆ ಶಾಲೆಗೆ ಹೋಗೊ ತನ್ನ ಕಿರಿಮಗ ರವಿ ಯಾವಾಗಲು ಟೀವಿ ಮುಂದೇನೆ ಇದ್ದರೂ ಏನೊಂದು ಹೇಳದ ನಾಗಪ್ಪ, ಈ ಕಂಡೋರ ಮಗನ ಮೇಲೆ ಯಾಕಿಷ್ಟು ಕಾಳಜಿ. ಸದ್ಯ ಅಲ್ಲಿ ನೋಡಿ ಬೋಣಿ ಬಂದ. ಕಿಟಕಿ ಹಲ್ಲು ಕಿರಿದು ಅವನಿಗೆ ತನ್ನ ಕೊರಳು ಕೊಡುತ್ತಿದ್ದಂತೆ ಅವನೊ ತಿಳಿಯದ ವಿಚಿತ್ರ ಲೋಕವೊಂದರಲ್ಲಿ ಕಳೆದುಹೋದ. ಮಕ್ಕಳ ಆ ಟೀವಿ ತನ್ಮಯತೆಯಲ್ಲಿ ತಾನೂ ಮೈಮರೆಯುವದರಲ್ಲಿ ಏನೊ ವಿಶೇಷ ಸಡಗರ ಕಿಟಕಿಗೆ.
ಮಕ್ಕಳ ಮೈವಾಸನೆಗೆ ಜೀವತಳೆಯುವ ಕಿಟಕಿಗೆ ಆಶ್ಚರ್ಯ ಏನೆಂದರೆ ಶಾಲೆಯಲ್ಲಿ ಬೋಣಿ ಹಿಂದೆಮುಂದೇನೆ ಅವನಿಗೆ ಅಂಟುಕೊಂಡೇ ಇರುವ ನಾಗಪ್ಪರ ಮಗ ರವಿ ಇಲ್ಲಿ ಮನೆಯಲ್ಲಿ ಹೊರಗೆನಿಂತು ಟೀವಿ ನೋಡುವ ಬೋಣಿ ಕಡೆಗೆ ಅಪ್ಪಿತಪ್ಪಿಯೂ ನೋಡದೆ ಇರುತ್ತಿದ್ದದ್ದು. ಬೋಣಿ ಬರಿ ಹಾರ್ನ್ ಮೇಲೆ ‘ಇದು ತಿಪ್ಪೇಸಾಮಿ ಉಂ ಅದು ಗಜಾನನ ಇದು ಎಸ್ಟಿಆರೆಮ್ಮೆಸ್ಸು’ ಅಂತ ಬಸ್ಸು ಹೆಸರೇಳುವ ಪರಿ ಕಿಟಕಿಗೆ ಅದ್ಭುತವೆನಿಸಿದರೆ ರವಿಗೆ ಬೋಣಿ ಬಾಯಿಂದ ಬರುವ ಬಸ್ಸುಗಳ ಕತೆ, ತಿಪ್ಪಣ್ಣನ ಸಾಹಸ ಕೇಳುವುದೆಂದರೆ ಪ್ರಾಣ. ಶಾಲೆ ಹಿಂದೆ ಹೋಗಿ ‘ಯಾರ‍್ದು ಜಾಸ್ತಿ ದೂರುಕೆ ಹೊಕ್ತತೊ ಚಾಲೇಂಜಪ’ ಅಂತ ಸಾಲಾಗಿ ಎಲ್ಲರು ಉಚ್ಚೆಹೊಯ್ಯಲು ನಿಂತರೆ ಬೋಣಿನ ಯಾರೂ ಸೋಲಿಸಲು ಆಗುತ್ತಿರಲಿಲ್ಲ. ಬೋಣಿಯ ಉಚ್ಚೆಕಾರಂಜಿಯನ್ನು ತುಂಬ ಆಸ್ಥೆಯಿಂದ ಕಣ್ತುಂಬಿಕೊಳ್ಳುವ ರವಿಗೆ ಬಬ್ರುವಾಹನದ ಬಾಣಬಿರುಸುಗಳ ಹಾರಾಟ ಈ ಉಚ್ಚೆಹಾರಾಟದ ಮುಂದೆ ಸಪ್ಪೆ ಅನಿಸುತ್ತಿತ್ತು.
ಒಂದು ಸಲವಂತು ಅನಂತನಾಗ್‌ನನ್ನು ದೆವ್ವದಿಂದ ಕಾಪಾಡಲು ಲಕ್ಷ್ಮಿ ರಾಘವೇಂದ್ರಸ್ವಾಮಿಗಳ ಹತ್ತಿರ ಕಣ್ಣೀರು ಹಾಕ್ಕೊಂಡು ಬೇಡುತ್ತಿದ್ದಾಗ ಇತ್ತ ಮಕ್ಕಳೆಲ್ಲ ಅತ್ತಿದ್ದೇ ಅತ್ತಿದ್ದ ನೋಡಿ ತನ್ನ ಸರಳು ಕೈಗಳಿಂದ ಅವರ ಕೆನ್ನೆ ಒರೆಸುವ ಕಿಟಕಿಗೆ ಇತ್ತ ನಾಗಪ್ಪ ಜೋರಾಗಿ ಟರ‍್ರೆಂದು ಹುಸು ಬಿಟ್ಟೇ ಬಿಟ್ಟಾಗ ಒಂದು ಕ್ಷಣ ರೇಗಿಹೋಯಿತು. ಆ ಕ್ಷಣದಲ್ಲೆ ಕಿಟಕಿ ತನ್ನ ಒಳಗಣ್ಣಿಂದ ಬೋಣಿಯ ಹೃದಯ ಹೊಕ್ಕಾಗ - ಅಪ್ಪ ಕುಡಿದುಬಂದು ಅವ್ವನನ್ನ ಒದೆಯುತ್ತಿದ್ದ. ಅವ್ವ ಬೀದಿಗೆ ಬಿದ್ದು ಚೀರಾಡುತ್ತಿದ್ದಳು. ಅಷ್ಟರಲ್ಲೆ ಈ ರವಿ ಅಲ್ಲೆಲ್ಲೊ ಹೋಗುತ್ತಿದ್ದವನು ಸ್ವಲ್ಪಹೊತ್ತು ನಿಂತು ಈ ರಂಪಾಟ ನೋಡಿದ. ಬೋಣಿಗೆ ಜೀವನೇ ಕೈಗೆ ಬಂದಂತಾಯಿತು. ಕಿಟಕಿಗೆ ಏನಾದರು ಕೊಡಬೇಕು ಈ ಮಕ್ಕಳಿಗೆ ತಿನ್ನಲು ಅಂತ ಪ್ರತಿ ಸಾರಿ ಅನಿಸುತ್ತೆ. ಅಡುಗೆಮನೆಗೆ ಹೋಗಿ ಹಪ್ಪಳ ಶೇಂಗಾ ಮತ್ತಿನ್ನೇನೊ ತಂದು ಟೀವಿ ಮುಂದೆ ತಿನ್ನುತ್ತಿದ್ದ ರವಿಯ ಕೈಯಿಂದ ಕಸಿದು ಕೊಡಲೆ ಅಂತ ಅನ್ನಿಸಿದ್ದೂ ಉಂಟು.
ಬೋಣಿಗೆ ಅವನವ್ವ ಕೊಬ್ಬರಿ ತರಲಿಲ್ಲ ಅಂತ ಒದ್ದಾಗ ಅವನು ಓಡಿಹೋದ ದಿಕ್ಕನ್ನೇ ನೋಡತ್ತ ನಿಂತ ಕಿಟಕಿಗೆ ಕಂಡಿದ್ದು-ಬೋಣಿ ಬೊಕ್ಕಣದಾಗಿದ್ದ ಎಂಟಾಣೆನ ಕಿಷ್ಣಣ್ಣನಿಗೆ ಕೊಟ್ಟು ಅಂಗಡಿ ಹೊರಗಿಟ್ಟಿದ್ದ ಪ್ಲಾಸ್ಟಿಕ್ ಬಕೀಟಿಗೆ ಕೈಹಾಕಿ ಎರಡು ಕೊಬ್ಬರಿ ಚೂರ ನೀರಿನಿಂದ ತೆಗೆದು ಕಿಷ್ಣಣ್ಣನಿಗೆ ತೋರಿಸಿದ. ಅವನು ‘ಏ ಎಲ್ಡಲ್ಲೊ ಒಂದ್ತಕ್ಕ’ ಎಂದು ಜಬರಿಸಿದ. ಒಮ್ಮೆ ಇದೇ ಕಿಷ್ಣಣ್ಣನ್ನ ಕೊಬ್ಬರಿ ವಿಷಯನೆ ತಾನೆ ಈ ನಾಗಪ್ಪ ಮಾತಾಡಿದ್ದು. ‘ಸಗಣೀನೂ ಸಿಗ್ತತಿ ಅಲ್ಲಿ. ಒಣ ಸೀಗಡಿಯಿಂದ ಹಿಡಿದು ತಾಮ್ರುದ್ದು ತಾಯ್ತತಂಕ ಎಲ್ಲದೂನು ಮಾರ‍್ತಾನೆ. ಆದ್ರೆ ಕೊಬ್ರೀನ ಅಲ್ಲಿ ತಗಂಬರ‍್ದು ನೋಡು. ಆ ಮಾದ್ರು ಬಸ್ಯ ಕುಡಿಯೋ ತೀಟಿಗೆ ಹೆಣಕ್ಕೊಡೆದ ಕಾಯ್ನ ತಂದು ಕಿಷ್ಣುಗೆ ಮಾರ‍್ತಾನೆ’ ಅಂತ ನಾಗಪ್ಪ ಮುಖ ಕಿವುಚಿದ್ದ. ಈ ಮಾತನ್ನು ಕೇಳುವಾಗ ತನಗೆ ಆತುನಿಂತಿದ್ದ ಬೋಣಿ ಎದೆಯಲ್ಲಿ ನಡೆಯುತ್ತಿದ್ದದ್ದೇ ಬೇರೆ- ಇವತ್ತಾದ್ರೂ ಕೋಳಿ ಸಾರ ತಟ್ಟೆ ತುಂಬಾ ಉಣ್ಬೇಕು......
ಅವ್ವ ಕಾರದುಂಡಿಯಲ್ಲಿ ಕೊಬ್ಬರಿ ತುಂಡನ್ನು ಪಚ್ಚುಕ್ಕನಿಸಿ ಕಾರ ಅರೆದು ಸಾರು ಮಾಡುತ್ತಿದ್ದದ್ದು ವರ್ಷಕ್ಕೆ ಮರ‍್ನಾಕು ಸಾರಿ ಮಾತ್ರ. ಡಾವಣಗೇರಿಯಿಂದ ದೊಡ್ಡವ್ವುನ ಮನೇರು ಬಂದಾಗ ಕೋಳಿ ಕೊಯ್ದು ಕಾರ ಅರೆಯುತ್ತಿದ್ದಳು ಅವ್ವ. ಬಂಬೂಬಜಾರಲ್ಲಿ ಇದ್ದ ದೊಡ್ಡವ್ವನ ಸಣ್ಣ ಹಂಚಿನ ಮನೆಯಲ್ಲಿ ದೊಡ್ಡ ಮಗ ಬಾಡಿಗೆ ಆಟೊ ಹೊಡೆಯುತ್ತಿದ್ದ, ಸಣ್ಣೋನು ಈ ಗೊಲ್ಲರಳ್ಳಿ ಮೇಲೆ ಡಾವಣಗೇರಿಯಿಂದ ಶಿಮೊಗ್ಗಕ್ಕೆ ಓಡಾಡುವ ಎಸ್ಸರ‍್ಟಿ ಬಸ್ಸಲ್ಲಿ ಕ್ಲೀನರ್ ಆಗಿದ್ದ. ಅದು ದಿನಾ ರಾತ್ರಿ ಹತ್ತು ಗಂಟೆಗೆ ಈ ಊರಮೇಲೆ ಹೋಗುತ್ತಿತ್ತು. ಡಾವಣಗೇರಿಯಿಂದ ಬೇರೆ ಬಸ್ಸುಗಳು ಬರುತ್ತಿದ್ದರೂ ದೊಡ್ಡವ್ವೋರು ಎಸ್ಸರ‍್ಟಿ ಬಸ್ಸಿಗೇ ಬರುತ್ತಿದ್ದರು. ಆ ಬಸ್ಸಿನವರು ದೊಡ್ಡವ್ವರಿಗೆ ಟಿಕೇಟು ತೆಗೆದುಕೊಳ್ಳುತ್ತಿರಲಿಲ್ಲ. ಬೋಣಿಗೆ ಅದೆಷ್ಟೊ ವರ್ಷದ ನಂತರ ಗೊತ್ತಾಗಿದ್ದು ಈ ದೊಡ್ಡವ್ವ ಅವ್ವನ ಸ್ವಂತ ಅಕ್ಕ ಅಲ್ಲ, ದೂರದ ಸಂಬಂಧಿ ಅಂತ. ಬೆಳಗ್ಗೆ ಹತ್ತು ಗಂಟೆಗೆ ತಿರುಗಿ ಶಿಮೊಗ್ಗದಿಂದ ಬಸ್ಸು ವಾಪಸ್ಸು ಹೋಗುವಾಗ ಬೋಣಿ ಮನೆಬಾಗಿಲಲ್ಲಿ ನಿಂತು ‘ತಿಪ್ಪಣ್ಣಾ’ ಅಂದು ಕೂಗುತ್ತಿದ್ದ. ಕರ‍್ರಾಗಾದ ಖಾಕಿ ಡ್ರೆಸ್ಸಿನಲ್ಲಿರುತ್ತಿದ್ದ ತಿಪ್ಪಣ್ಣ ಕೈಯೆತ್ತಿ ‘ಚಂದ್ರಾ’ ಅಂತ ಬೋಣಿನ ಕೂಗುತ್ತಿದ್ದ. ಅವಾಗಲೆ ಬೋಣಿಗೆ ತನ್ನ ನಿಜ ಹೆಸರು ಚಂದ್ರ ಅಂತ ನೆನಪಾಗುತ್ತಿತ್ತು. ಮತ್ತೆ ಮೇಷ್ಟರು ಹಾಜರಿ ಕೂಗಿದಾಗ. ಚಿಳ್ಳಿಯ ಹತ್ತಿರ ಎಸ್ಸರ‍್ಟಿ ಹಾಗು ತಿಪ್ಪಣ್ಣನ ಕುರಿತು ಖುಷಿಯಿಂದ ಯಾವಾಗಲೂ ಹೇಳಿಕೊಳ್ಳುತ್ತಿದ್ದ. ‘ನಮ್ ತಿಪ್ಪಣ್ಣ ಹೆಂಗೆ ಬೀಡಿ ಸೇದ್ತಾನೆ ಗೊತ್ತ, ಮೂಗ್ನಾಗೇ ಹೊಗೆ ಬಿಡ್ತಾನೆ ಕಣೊ, ಅಂಬ್ರಿಸ್ಸು ಬಿಟ್ಟಂಗೆ. ಬೀಡಿನ ಬಾಯೊಳಗೆ ಉಲ್ಟಾ ಇಟ್ಕಂದು ಸೇದ್ತಾನೆ, ಬಾಯಿ ಸುಡೋದೆ ಇಲ್ಲ ಅವನಿಗೆ. ಬೆಂಕಿ ಕಡ್ಡಿನೂ ಅಷ್ಟೆ. ಹಲಿಗಿಗೆ ಕಡ್ಡೀನ ಸರ‍್ರಂತ ತೀಡಿ ಬೆಂಕಿ ಹಚ್ತಾನೆ’.
ಅವ್ವ ಒಂದತ್ತಿಪ್ಪತ್ತು ಕೋಳಿಗಳನ್ನು ಯಾವಾಗಲು ಮನೆಯಲ್ಲಿ ಸಾಕುತ್ತಿದ್ದರೂ ಒಂದು ಮೊಟ್ಟೆನೂ ಮಕ್ಕಳಿಗಂತ ಕೊಡುತ್ತಿರಲಿಲ್ಲ. ಮನೆಗೆ ಬಂದು ಕೇಳುತ್ತಿದ್ದ ಕುಂಚೀಲರಿಗೆ ಮಾರುತ್ತಿದ್ದಳು. ‘ನಾಳೀಕೆ ಅವ್ವ ಅಪ್ಪ ಬರ‍್ತಾರಂತೆ’ ಮನೆ ಮುಂದೆ ಹಾದುಹೋಗುತ್ತಿದ್ದ ಬಸ್ಸಿನ ಡೋರಿಂದಲೇ ಆಗಾಗ ಕೂಗು ಹಾಕುತ್ತಿದ್ದ ತಿಪ್ಪಣ್ಣ. ಆ ಸುದ್ದಿಯಿಂದ ಇಡೀ ದಿನ ಉಮೇದುಗೊಳ್ಳುವ ಅವ್ವ ಮಾರನೆದಿನ ಕೂಲಿಯಿಂದ ಸಂಜೆ ಇನ್ನು ಹೊತ್ತಿದ್ದಂಗೆ ಬಂದು ಕಿಷ್ಣಣ್ಣನ ಅಂಗಡಿಗೆ ಕೊಬ್ರಿಗೆ ಬೋಣಿ ಇಲ್ಲ ಅವನಣ್ಣನ್ನ ಅಟ್ಟುತ್ತಿದ್ದಳು. ಚೌಡವ್ವನ ಹಬ್ಬಕ್ಕೊ ಹಿರೇರ ಹಬ್ಬಕ್ಕೊ ಇಡೀ ಕಾಯಿಯನ್ನ ತರಿಸಿ ದೇವರಿಗೆ ಹೊಡೆಯುವ ಅವ್ವ ಹೊಳಿಕೆಗಳನ್ನ ಬಿಸಿಲಿಗಿಟ್ಟು ಎಷ್ಟೋ ದಿನ ಅವನ್ನೇ ಎಬ್ಬಿ ಎಬ್ಬಿ ಸಾರಿಗೆ ಹಾಕುತ್ತಿದ್ದಳು.
ಅವ್ವ ಕಾರ ಅರೆಯುತ್ತಿದ್ದರೆ ಅಪ್ಪ ಕೋಳಿ ಕತ್ತು ಕೊಯ್ದು ಅದನ್ನ ಕ್ಲೀನು ಮಾಡೊ ಕೆಲಸಕ್ಕೆ ಕೈ ಹಾಕುತ್ತಿದ್ದ. ಆ ಕಲೆಯನ್ನು ಮಕ್ಕಳಿಗೂ ಹೇಳಿಕೊಟ್ಟಿದ್ದ. ಕತ್ತಲಾಗುತ್ತಿದ್ದಂತೆ ಅವ್ವನ ಜೊತೆ ಅಷ್ಟೆಲ್ಲ ರಂಪಾಟಮಾಡುತ್ತಿದ್ದ ಅಪ್ಪ ಬೆಳಗ್ಗೆ ಎದ್ದರೆ ದೇವರು! ಅವ್ವ ಏನು ಹಾಡಿ ಹೆಟ್ಟಿದರೂ ಒಂದು ದುಸ್ರ ಮಾತೂ ಆಡುತ್ತಿರಲಿಲ್ಲ. ರಾತ್ರಿ ಅವ್ವನ ತಲೆಹೊಡೆದ ಅಪ್ಪ ಇವನೇನ ಅಂತ ಅನಿಸುತ್ತಿತ್ತು. ಯಾರಾದ್ರು ಅಕ್ಕಪಕ್ಕದೋರು ಅವ್ವನ ಪರ ಹೇಳಕ್ಕೆ ಬಂದರೆ ಅವರ ಜತೀಗೆ ಅಪ್ಪ ಜಗಳಕ್ಕೆ ಬೀಳುತ್ತಿದ್ದ. ಇಲ್ಲ ಅವರು ಅಪ್ಪನ ಪರ ಹೇಳಿದರೆ ಅವ್ವ ಅವರಮೇಲೆ ಎಗರಿ ಹೋಗುತ್ತಿದ್ದಳು. ಕ್ರಮೇಣ ಈ ಅಪ್ಪ ಅವ್ವ ಜಗಳ ಬಿದ್ದಾಗ ಮಕ್ಕಳು ಎಷ್ಟು ಕರೆದರೂ ಯಾರು ಬರುತ್ತಿರಲಿಲ್ಲ.
ಅಪ್ಪ ಸುಲಿದು ಕೊಯ್ದುಕೊಟ್ಟ ಕೋಳಿಗೆ ಅವ್ವ ಮಸಾಲೆ ಹಾಕಿ ಸಾರುಮಾಡುತ್ತಿದ್ದಳು. ಅಪ್ಪ ಎಂದಿನಂತೆ ಇಲ್ಲೆ ಹೋಗಿ ಬರ‍್ತೀನಿ ಅಂತ ಹೊರಗೆ ನಡೆಯುತ್ತಿದ್ದ. ಅವ್ವ ‘ಇವತ್ತು ಕುಡ್ಕಂದು ಬರಬ್ಯಾಡ ಅವರೆಲ್ಲ ಬರ‍್ತಾರೆ’ ಅಂತ ಕೂಗಿ ಹೇಳುತ್ತಿದ್ದಳು. ಮಕ್ಕಳು ಎಷ್ಟು ಗೋಗರೆದರೂ ಕುಡಿಯಲು ಒಂತೊಟ್ಟು ಸಾರೂ ಕೊಡುತ್ತಿರಲಿಲ್ಲ ಅವ್ವ. ದೊಡ್ಡಪ್ಪ ದೊಡ್ಡವ್ವ ಬರ‍್ಲಿ ಆಮೇಕೆ ಉಣ್ವಂತ್ರಿ ಅಂತ ಬೋಣಿ ಮತ್ತು ಅಣ್ಣನನ್ನು ಕಾಯಿಸುತ್ತಿದ್ದಳು. ಅವಾಗ ಜಲ್ದಿ ಬಾರದಿದ್ದ ಎಸ್ಸರ‍್ಟಿ ಮೇಲೆ ಕೆಂಡದಂತ ಕೋಪ ಬರುತ್ತಿತ್ತು. ಒಂದೇ ಒಂದು ಚೂರಾದ್ರೂ ಕೊಡು ಅಂತ ಹಟಮಾಡುತ್ತಿದ್ದ ಬೋಣಿಗೆ ‘ಎಲ್ಲ ಆ ಬಾಡ್ಯಾನ ಬುದ್ದೀನೆ ಬಂದೇತಿ ಇವುಕೆ’ ಅಂತ ಮುದ್ದೆ ದೊಣ್ಣೆ ತಗೆದುಕೊಳ್ಳುತ್ತಿದ್ದಳು. ಮನೆಯಲ್ಲಿ ಮಕ್ಕಳು ಅಂತ ಇದ್ದಿದ್ದೇ ಈ ಅಣ್ಣ ತಮ್ಮರಿಬ್ಬರು. ಇನ್ನಿಬ್ಬರು ಅಕ್ಕರನ್ನ ಗುಡ್ಡೆಹಳ್ಳಿ ಜೀನಹಳ್ಳಿ ಅಂತ ಯಾರದೊ ಸಂಬಂಧಿಕರ ಮನೆಯಲ್ಲಿ ಕೆಲಸಕ್ಕೆ ಬಿಟ್ಟಿದ್ದರು.
ವರ್ಷದಾಗೆ ಯಾವಾಗರ ಒಂದೊಂದು ಸಾರಿ ಸಾರಿಗೆ ಒಗ್ಗರಣೆ ತೋರಿಸೋದ್ದನ್ನ ನೋಡುವುದೇ ಬೋಣಿಗೆ ಹಬ್ಬ! ಕಣ್ಣಗಲಿಸಿ ಮೈಮರೆತು ನಿಲ್ಲುತ್ತಿದ್ದ. ಅವ್ವ ಎಣ್ಣೆಗಿಂಡಿಯಲ್ಲಿ ಮುಳುಗಿಸಿಟ್ಟ ಕರೀಕಲ್ಲೊಂದ ತೆಗೆದು ಪಾತ್ರೆಗೆ ಹಾಕಿ ಕಾಯಿಸಿ ಸಾಸಿವೆ ಸಿಡಿಯೋದನ್ನ ನೋಡದೆ ಒಂದು ಅದ್ಭುತ! ಕರಿಬೇವು ಈರುಳ್ಳಿ ಮೆಣಿಸಿನಕಾಯಿ ಬಾಡಿಸಿದಾಗ ಬರುವ ಘಮ ಇವನ್ನಲ್ಲಿ ಏನೋ ಒಂದು ಹುಕಿಯನ್ನ ಎಬ್ಬಿಸುತ್ತಿತ್ತು. ಕೊನೆಗೆ ಅವ್ವ ಎಣ್ಣೆಗಲ್ಲನ್ನ ಒಗ್ಗರಣೆಯಿಂದ ತೆಗೆದು ಮರಳಿ ಎಣ್ಣೆಗಿಂಡಿಗೆ ಹಾಕುತ್ತಿದ್ದಳು. ಹೊಳೆಸಾಲಲ್ಲಿ ಸಿಗುವ ಆ ಕರಿಕಲ್ಲು ಯಾವಾಗಲು ಎಣ್ಣೆಮಜ್ಜನ ಮಾಡುತ್ತ ಸೊಂಪಾಗಿ ಎಣ್ಣೆಗಿಂಡಿಯಲ್ಲಿ ನಿದ್ದೆಹೋಗುತ್ತಿತ್ತು. ಚೌಡವ್ವನ ಹಬ್ಬದ ಮುಂದೆ ಅವ್ವ ಸಂತೆಗೆ ಹೋಗಿ ಕಾಲು ಕೇಜಿ ಹೊಳ್ಳೆಣ್ಣೆ ತಂದರೆ ಸಾಕು ವರ್ಷಪೂರ್ತಿ ಆಗೋದು. ಹಿಂಗೆ ಏನಾದ್ರು ಕೋಳಿಗೀಳಿ ಕೊಯ್ದಾಗ ಎಣ್ಣೆಗಲ್ಲನ್ನ ಹಾಕದೆ ಒಂದು ತೊಟ್ಟು ಎಣ್ಣೆಯನ್ನ ಪಾತ್ರೆಗೆ ನೇರವಾಗಿ ಬಗ್ಗಿಸುತ್ತಿದ್ದಳು. ಈ ಎಸ್ಸರ‍್ಟಿ ಬಸ್ಸೊ ಒಮ್ಮೊಮ್ಮೆ ಹತ್ತಕ್ಕೆ ಬರೋದು ಹನ್ನೊಂದಕ್ಕೆ ಬರುತ್ತಿತ್ತು. ಅಷ್ಟರಲ್ಲಿ ಅಪ್ಪ ಅವ್ವನ ಒಂದು ಸುತ್ತು ಜಗಳಮುಗಿದು ಅಪ್ಪ ಎಲ್ಲೊ ಮೂಲೇಲಿ ಬಿದ್ದಿದ್ದರೆ, ಕೋಳಿಸಾರಿನ ಆಸೆಗೆ ಡಾವಣಗೇರೇರು ಬರುವುದನ್ನೇ ಕಾದೂಕಾದು ಹುಡುಗರು ಅಲ್ಲಲ್ಲೇ ನಿದ್ದೆಹೋಗುತ್ತಿದ್ದರು. ಅವರು ಬಂದು ‘ಹುಡ್ರು ಎಬ್ಸು ನಮ್ಜತಿಗೆ ಉಣ್ಲಿ’ ಅಂದರೆ ಅವ್ವ ‘ಅವರ‍್ದು ಒಂದ್ಪಟ ಆಗೇತಿ, ನೀವುಣ್ರಿ ಆಮೇಕೆ ಎಬ್ಸಿತೀನಿ’ ಅಂತ ಸುಳ್ಳು ಹೇಳುತ್ತಿದ್ದಳು. ಅವರದು ಆದಮೇಲೆ ಹುಡುಗರನ್ನ ಎಬ್ಬಿಸಿ ಒಂದೊಂದು ಪೀಸು ಹಾಕಿ ತಿಳಿಸಾರು ಬಿಡುತ್ತಿದ್ದಳು. ಅವುಕೆ ನಿದ್ದೆಗಣ್ಣಲ್ಲಿ ಮುದ್ದೆ ಯಾವುದೊ ಸಾರು ಯಾವುದೊ... ಬೆಳಗ್ಗೆ ಎದ್ದಮೇಲೆ ನಿಜವಾಗಿ ಉಂಡಿದ್ದೊ ಅಥವಾ ಕನಸಿನಲ್ಲಿ ಉಂಡಿದ್ದೊ ಅಂತ ಗೊಂದಲವಾಗುತ್ತಿತ್ತು.
ಒಮ್ಮೆ ಟೀವಿಯಲ್ಲಿ ‘ಮಂತ್ರಾಲಯ ಮಹಾತ್ಮೆ’ ನಡೆಯುವಾಗ ಕಿಟಕಿ ಹಾಗೇ ಬೋಣಿ ಎದೆಯೊಳಗೆ ಇಳಿದು ಹೊಕ್ಕಿತು. ‘ಅಪಾ ರಾಗ್ವೇಂದ್ರ, ಅವ್ವ ಅಪ್ಪ ಜಗಳ ಆಡದಂಗೆ ಮಾಡಪ, ಪ್ರತಿ ಗುರ‍್ವಾರ ನಿನ್ ಹೊನ್ನಾಳಿ ಮಟೂಕೆ ಬರ‍್ತೀನಿ, ಹೆಂಗೂ ಸಾಲಿಗೆ ಹೊನ್ನಾಳಿಗೆ ಬರ‍್ತೀನಲ್ಲ’ ಎಂಬ ದನಿ ಕೇಳಿಸುತ್ತಿತ್ತು. ಹೌದು ಶಾಲೆಗೆಂದು ಗೊಲ್ಲರಳ್ಳಿಯಿಂದ ಹೊನ್ನಾಳಿ ಟೀಬಿ ಶಾಲೆಗೆ ಹುಡುಗರೆಲ್ಲ ನಡೆದು ಬರುತ್ತಿದ್ದರು. ಕುಂಚೀಲರ ಹುಡುಗರು ಮಾತ್ರ ಬುತ್ತಿ ಕಟ್ಟಿಕೊಂಡು ಬರುತ್ತಿದ್ದರು. ಮಧ್ಯಾಹ್ನ ಉಣ್ಣದೆ ಹಾಗೆ ಇರುತ್ತಿದ್ದ ಬೋಣಿಯಂಥ ಹುಡುಗರು ಕುಂಚೀಲರ ಹುಡುಗರು ಹೆಚ್ಚಾದ ಅನ್ನ ಚೆಲ್ಲುವಾಗ ‘ನಮಗಾದ್ರು ಕೊಟ್ರೆ ಉಣ್ತಿದ್ದೆವಲ್ಲಾ’ ಅಂದುಕೊಳ್ಳುತ್ತಿದ್ದರು. ಅಪರೂಪಕ್ಕೆ ಒಂಚೂರೇನಾದರು ಕಟ್ಟಿಕೊಂಡು ಬಂದರೆ ಅದನ್ನೆ ಗಂಟೆಗಟ್ಟಲೆ ಉಣ್ಣುತ್ತಿದ್ದರು. ರಾಶಿರಾಶಿ ಮಕ್ಕಳಿದ್ದ ಆ ಗರ‍್ಮೆಂಟ್ ಶಾಲೆಯಲ್ಲಿ ಪ್ರತಿ ಗುರುವಾರ ಮಧ್ಯಾಹ್ನ ಉಣ್ಣಲುಬಿಟ್ಟಾಗ ಬೋಣಿ ಒಬ್ಬನೆ ತಪ್ಪಿಸಿಕೊಂಡು ಬಸ್‌ಸ್ಟ್ಯಾಂಡಿಗೆ ಬಂದು ಅಲ್ಲಿಂದ ತುಮ್ಮಿನಕಟ್ಟೆ ರಸ್ತೆಯಲ್ಲಿ ನಡೆದುಕೊಂಡು ಬಂದು ಹೊಳೆದಡದಲ್ಲಿದ್ದ ರಾಯರ ಮಠದ ಮುಂದೆ ನಿಲ್ಲುತ್ತಿದ್ದ. ಹೆಚ್ಚಾಗಿ ಬ್ರಾಹ್ಮಣರೆ ಸುತ್ತುವರೆದಿದ್ದ ಮಠದಲ್ಲಿ ಹೆದರಿಕೊಂಡೇ ಕೈಮುಗಿದು ನಿಲ್ಲುತ್ತಿದ್ದ. ಶಾಲೆ ಬೆಲ್ ಹೊಡೆಯುವತನಕ ಅಲ್ಲಿ ಇಲ್ಲಿ ಸುತ್ತಾಡಿ ಶಾಲೆ ಬಿಡುವ ಹೊತ್ತಿಗೆ ಮತ್ತೆ ಹುಡುಗರ ಜತೆ ಸೇರಿಕೊಂಡು ಗೊಲ್ಲರಳ್ಳಿಗೆ ಹೋಗುತ್ತಿದ್ದ. ಅಣ್ಣ ಅಲ್ಲೆ ಸ್ವಲ್ಪ ದೂರದಲ್ಲಿ ಇನ್ನೊಂದು ಬದಿಯಲ್ಲಿದ್ದ ಹೈಸ್ಕೂಲಿಗೆ ಹೋಗುತ್ತಿದ್ದರಿಂದ ಅವನಿಗೆ ಪ್ರೈಮರಿ ಸ್ಕೂಲಿನ ಈ ಬೋಣಿಯ ಗುಟ್ಟು ಗೊತ್ತಾಗುತ್ತಿರಲಿಲ್ಲ. ಅವ್ವ ಸಂತೆಯಲ್ಲಿ ತಂದಿದ್ದ ರಾಘವೇಂದ್ರಸ್ವಾಮಿ ಕ್ಯಾಲೆಂಡರಿಗೆ ಸಂಜೆಹೊತ್ತು ಊದುಕಡ್ಡಿ ಬೆಳಗುತ್ತಿದ್ದ ಬೋಣಿಗೆ ಅವ್ವ ‘ಇವತ್ತು ಹಳ್ದವ್ವನ ವಾರ ಆಕೀಗೂ ಬೆಳಗೊ’ ಅನ್ನುತ್ತಿದ್ದಳು.
ಅವ್ವಗೆ ಹಳದವ್ವನ ವಾರ ಅಂದರೆ ಮುಗೀತು. ಅವತ್ತು ಮನೆಯಲ್ಲಿ ಏನು ನೀಚುಪಾಚು ಮಾಡಂಗಿಲ್ಲ. ಬೆಳಗ್ಗೆನೆ ಮನೆನ್ನೆಲ್ಲ ತೊಳೆದು ಸ್ವಚ್ಛ ಮಾಡುತ್ತಿದ್ದಳು. ಒಮ್ಮೊಮ್ಮೆ ಗುರುವಾರ ಸಂಜೆ ಬುತ್ತಿ ಕಟ್ಟಿಕೊಂಡು ಮಕ್ಕಳ ಜತೆ ಮಾರಿಕೊಪ್ಪಕ್ಕೆ ನಡೆದುಕೊಂಡುಹೋಗಿ ರಾತ್ರಿಯೆಲ್ಲ ಹಳದವ್ವನ ಗುಡಿಯಲ್ಲಿ ಕಳೆದು ಬೆಳಗ್ಗೆನೆ ಓಡಿಬರುತ್ತಿದ್ದಳು. ಗುರ‍್ವಾರ ರಾಗ್ವೇಂದ್ರಸ್ವಾಮಿಗಳ ವಾರ ಅವತ್ತು ಏನು ನೀಚು ತಿನ್ನಬರ‍್ದು ಅಂತ ಬೋಣಿಗೆ ಅಸ್ಪಷ್ಟವಾಗಿ ಅನಿಸಿದ್ದು ಯಾವಾಗ ಏಕೆ ಎಂಬುದು ಸ್ಪಷ್ಟವಾಗಿ ತಿಳಿದಿಲ್ಲ. ಅದರ ಬಗ್ಗೆ ಯೋಚಿಸುತ್ತಿರುವಾಗಲೆ ಒಂದ್ಪಟ ಏನಾರಮಾಡಿ ತಟ್ಟೆತುಂಬ ಪೀಸು ಹಾಕಂದು ಉಣ್ಬೇಕು ಅನಿಸುತ್ತಿತ್ತು. ರಾಜ್ಯ ಹೆದ್ದಾರಿ ಪಕ್ಕದಲ್ಲೆ ಇದ್ದ ಅವನ ಮನೆಯ ಕೋಳಿಗಳು ಎಷ್ಟೊ ಬಾರಿ ಬೈಕು ಬಸ್ಸು ಲಾರಿಗೆ ಸಿಕ್ಕು ಕಾಲು ಮುರಿದುಕೊಂಡು ಅರೆಜೀವ ಆಗುತ್ತಿದ್ದದ್ದು ಉಂಟು. ಅವು ಗಾಡಿಗೆ ಸಿಕ್ಕು ಸಾಯಿಲಿ, ಅವನ್ನ ಕೊಯ್ಕೊಂದು ತಿನ್ಬೋದು ಅಂತ ಕಾಯುತ್ತಿದ್ದ ಬೋಣಿ ಮತ್ತು ಅವನಣ್ಣನಿಗೆ ಆ ಅವಕಾಶ ಎಂದೂ ದೊರೆಯುತ್ತಿರಲಿಲ್ಲ. ಕೋಳಿಗೆ ಏನಾದರು ಆಕ್ಸಿಡೆಂಟ್ ಆಗಿ ಕಾಲು ಮುರಿದುಕೊಂಡರೆ ಅವ್ವ ಗಡಗಡ ಒಲೆಯಲ್ಲಿನ ಬೂದಿ ತಂದು ಮುರಿದ ಕೋಳಿಕಾಲಿಗೆ ಸವರಿ ಬೇಲಿಸಾಲಿನ ಕಳ್ಳಿಹಾಲು ತಂದು ಬಿಡುತ್ತಿದ್ದಳು. ಅದು ಒಳ್ಳೆ ಬ್ಯಾಂಡೇಜ್‌ನಂತೆ ಬಿಗಿದಿಡಿಯುತ್ತಿತ್ತು. ಒಂದ್ನಾಕು ದಿನ ಆ ಕೋಳಿ ಹಾಗೆ ಕುಂಟುತ್ತಾ ಇದ್ದು ನಂತರ ಪಾಡಾಗಿ ನಡೆಯುಲು ಶುರುಮಾಡುತ್ತಿತ್ತು!
ಸಂಜೆ ಶಾಲೆಯಿಂದ ಅಣ್ಣತಮ್ಮರಿಬ್ಬರು ಮನೆಗೆ ಬಂದಾಗ ಖುಷಿ ವಿಷಯವೊಂದು ಕಾದಿತ್ತು! ಇವರ ಒಂದು ಕೋಳಿಗೆ ಆಕ್ಸಿಡೆಂಟ್ ಆಗಿತ್ತು. ಎದ್ದಾಡಲು ಬರದಂತೆ ಮುಕ್ಕಾಗಿತ್ತು. ಅವ್ವ ಅದಕ್ಕೆ ನೀರಾಕಿ ಎಬ್ಬಿಸಲು ನೋಡೇನೋಡಿದರೂ ಅದು ಕೊಕ್ಕೊಕ್ಕಂತ ಹಾಗೆ ಗೋಣು ಓರೆಮಾಡಿತು. ಅವ್ವ ಕೇರಿಬಾಗಿಲರೆಲ್ಲ ಸೇರುವಂತೆ ಹೊಯ್ಕಂದಳು. ಮನೆದೇವರು ಹಳದವ್ವನ್ನ ಗ್ರಹಚಾರ ಬಿಡಿಸಿದಳು. ಅಷ್ಟೊತ್ತಿಗೆ ಎಲ್ಲಿದ್ದನೊ ಅಪ್ಪ ಬಂದದ್ದ ನೋಡಿ ಅವ್ವ ತನ್ನ ಸಿಟ್ಟನ್ನೆಲ್ಲ ಅವನ ಮೇಲೆ ಹಾಕಿದಳು. ‘ಹಳ್ದವ್ವನ ವಾರ ಅನ್ನಂಗಿಲ್ಲ ಪಳ್ದವ್ವನ ವಾರ ಅನ್ನಂಗಿಲ್ಲ... ಇವ್ನು ಹೊರಗಿಂದ್ದು ತಿಂಕಂಬಂದು ನಮ್ಮನೀಗೆ ತಂದಿಟ್ಟ... ಮುಟ್ಚಟ್ಟು ಮಾಡಿದ್ದಕ್ಕೆ ಹಿಂಗಾಗಿರೋದು...’ ಕೊನೆಗೆ ಇವತ್ತು ಗುರವಾರ ಅನ್ನೋದು ನೆನಪಿಗೆ ಬಂದು ‘ಅಯ್ಯೊ ಹಳ್ದವ್ವ ಇವತ್ತು ನಿನ್ ವಾರಲ್ಲವ್ವ, ಇವತ್ತೆ ಕೋಳೀದು ಜೀವತಕ್ಕಂಡ್ಬಿಟ್ಟೆಲ್ಲವ್ವ... ನಾನೇನು ಅನ್ಯಾಯ ಮಾಡಿದ್ದೆ ನಿಂಗೆ’ ‘ಯಾವ್ ಮುಂಡೇ ಮಗ ಇದರಮೇಲೆ ಗಾಲಿ ಅತಸ್ಕಂದ ಹೋದ್ನೊ ಅವ್ನಿಗೆ ಬರಬರ‍್ದು ಬರಾ...’ ಅಂತ ಅವ್ವ ಹೊಯ್ಕಂತಿರಬೇಕಾದರೆ ಮನೆಬಾಗಿಲಲ್ಲಿ ಸತ್ತುಬಿದ್ದಿದ್ದ ಕೋಳಿಗೆ ಕೈಹಾಕಿ ಒಳಗೆ ಹೊಯ್ಯಲು ಹೊರಟ ಅಪ್ಪನನ್ನ ಮತ್ತೆ ಅವ್ವ ಹಿಗ್ಗಾಮುಗ್ಗ ಬೈದು ಬಾಗಿಲಲ್ಲೆ ತಡೆದಳು. ‘ಇವತ್ತು ಹಳ್ದವ್ವನ ವಾರ ಮನೆಯೊಳಕೆ ಕೋಳಿ ಒಯೋಕೆ ಬಿಡಲ್ಲ, ಬೆಳಗ್ಗೆಲ್ಲ ಮನೆನ್ನೆಲ್ಲ ತೊಳ್ದು ವಾರ‍್ಣ ಮಾಡಿಟ್ಟೀನಿ. ನೀಚಪಾಚು ಮಾಡಿದ್ರೆ ಸುಮ್ಕಿರಲ್ಲ... ಇದನೊಯ್ದು ಯಾರಾದ್ರು ತಿನ್ನಾರಿಗೆ ಕೊಟ್ಬಿಡು...’ ಬೊಬ್ಬಿರಿಸಿದಳು. ಅಪ್ಪ ‘ಮುಂಡೆಮಗಳ್ದು ಯಾವಾಗ್ಲು ಇದೇ ಗೋಳು’ ಅಂತ ಮುಡುಕೆಗಾಸಿಂದ ಹಿತ್ತಲಿಗೆ ಹೋಗಿ ಪುಟ್ಟಿ ತೆಗೆದು ಕೋಳಿ ಮುಚ್ಚಿ ಅದರಮೇಲೆ ದೊಡ್ಡ ಕಲ್ಲೊಂದೇರಿ ‘ನಾಯಿಬೆಕ್ಕು ಏನರ ಬಂದು ಕಚ್ಕಂದೋದವು ನೋಡ್ಕಂತಿರ‍್ರಿ.... ಇಲ್ಲೆ ಹೋಗಿ ಬರ‍್ತಿನಿ’ ಅಂತ ಹೋದ. ಒಂದು ಗಂಟೆಯಾದಮೇಲೆ ಸ್ವಲ್ಪ ಹೇರಿಸಿಕೊಂಡು ಬಂದ ಅಪ್ಪ ಸೀದಾ ಹಿತ್ತಲಿಗೆ ಹೋಗಿ ‘ಏ ಬೇರ‍್ಸಿಮುಂಡೆ ನೀನು ಕಾರ ಅರ‍್ಕೊಡದಿದ್ರೆ ಕತ್ತೆಬಾಲ, ಒಂದು ಪಾತ್ರೇನರ ಕೊಡು, ಒಂದೀಟು ಉಪ್ಪು ಕಾರು ಒಗಾಸು, ಒಳ್ಳೆ ಲಿಂಗಾಯ್ತಿರಿಗುಟ್ಟಿದೋಳು ಮಾಡ್ದಂಗೆ ಮಾಡ್ತಾಳೆ’ ಅಂತ ಸರ್ಟು ಪಂಚೆ ಕಳಚಿ ಬರೀ ಚಡ್ಡಿಮೇಲೆ ಇದ್ದು ಮೂರು ಕಲ್ಲಿಟ್ಟುಕೊಂಡು ಬೆಂಕಿ ಹಚ್ಚಿ ಕೋಳಿ ಸುಡಲು ಶುರುಮಾಡಿದ. ಅವ್ವನ ಹಿಂದೆ ಹಿತ್ತಲ ಬಾಗಿಲಲ್ಲಿ ನಿಂತು ನೋಡುತ್ತಿದ್ದ ಇಬ್ಬರು ಹುಡುಗರನ್ನು ಕರೆದ ಅಪ್ಪನಿಗೆ ಅವ್ವ ಕಣ್ಣು ಕೆಕ್ಕರಿಸಿದರೂ ಅಣ್ಣ ತಡೆಯದೆ ಹೋಗಿ ಅಪ್ಪನನ್ನು ಸೇರಿಕೊಂಡ. ಅವ್ವ ‘ಏನಾದ್ರು ಮಾಡ್ಕಂದು ಸಾಯ್ರಿ, ಆದ್ರೆ ಒಳಕ್ಮಾತ್ರ ಬರಂಗಿಲ್ಲ ಇವತ್ತು’ ಅಂತ ಒಳಗೆ ಹೋದಳು. ಬೋಣಿಗೆ ಇವತ್ತು ಯಾವ ದೊಡ್ಡವ್ವನ ಮನೇರು ಇಲ್ಲ ನಾವು ಮೂವರೇ... ದೆವ್ವದಂಥ ಕೋಳಿ... ತಟ್ಟೆ ತುಂಬನೇನು ಹೊಟ್ಟೆ ತುಂಬಾನೆ ತಿನ್ಬೋದು ಅಂತ ಅನಿಸಿತು. ತಕ್ಷಣವೆ ರಾಘವೇಂದ್ರಸ್ವಾಮಿಗಳು ನೆನಪಾಗಿ ಮುಂದೆ ಇಡುತ್ತಿದ್ದ ಹೆಜ್ಜೆಯನ್ನು ಹಾಗೆ ಹಿಂದಕ್ಕೆ ಸರಿಸಿದ. ಅಲ್ಲೆ ಬಾಗಿಲಿಗೆ ಆತು ಕುಳಿತುಕೊಂಡ ಬೋಣಿ. ಇವತ್ತು ಸುಮಾರು ದೂರ ನಡೆದಿದ್ದ. ಮಠ ಶಾಲೆಯಂತ. ಅಪ್ಪ ಅವ್ವ ಬೀದಿಯಲ್ಲಿನ ರಂಪಾಟ ಸಣ್ಣಗೆ ನೆನಪಿಗೆ ಬಂತು. ಕೆಂಪುಬಟ್ಟೆ ತೋರಿಸಿ ಮಾಸ್ಟರ್ ಲೋಹಿತ್ ರೈಲುನಿಲ್ಲಿಸಿ ಜನರ ಜೀವ ಕಾಪಾಡಿದ್ದ ದೃಶ್ಯನೂ ಕಣ್ಣಮುಂದೆ ಬರುತ್ತಿದ್ದಂತೆ ಅಪ್ಪ ಅಣ್ಣ ಕೋಳಿಗೆ ಕಾರ ಉಪ್ಪು ಸವರಿತ್ತಿದ್ದ ಘಮಲು ಮೂಗಿಗೆ ತಾಗಿತು. ತಟ್ಟೆತುಂಬಾ ಕೋಳಿ ಸಾರು ತಿನ್ನಬೇಕು ಎಂಬ ಇಡೀ ಜೀವನದ ಜೀವದ ಕನಸು..... ತಿನ್ಬರ‍್ದ... ತಿನ್ಬೇಕಾ.... ರವಿಗೆ ಮುಖ ತೋರಿಸಲಾಗದಂತೆ ಮಾಡುವ ಅಪ್ಪ ಅವ್ವನ ಜಗಳ.... ಅವ್ವನ ಸೀರೆ ಕಳಚುವಂತೆ ಕುಡಿದ ನಶೆಯಲ್ಲಿ ಹೊಡೆದು ಬೀದಿಯಲ್ಲಿ ಮಲಗಿಸಿದ್ದ ಅಪ್ಪ..... ಹೊಟ್ಟೆ ಹಿಂಡಿದಂತಾಯಿತು. ಅದು ಕುಂಚೀಲರ ಮನೆಯ ಬುತ್ತಿಯೆಬ್ಬಿಸುವ ವಿಚಿತ್ರ ಸಂಕಟವೆ? ಇನ್ಯಾವುದೆ ಬೇರೆಯ ಭಯವೆ? ತಿಳಿಯದಾಯಿತು. ಇದ್ದಕ್ಕಿದ್ದಂತೆ ತರಗತಿಯೊಳಗೆ ಇರುವ ಅನುಭವ. ಎಲ್ಲೆಲ್ಲೂ ಇವರ ಮನೆಯ ಜಗಳದ ಸುದ್ದಿಯೇ. ಎಲ್ಲ ಹುಡುಗರು ಇವನನ್ನು ನೋಡಿ ಕಿಸ್ಸಕ್ಕೆನ್ನುತ್ತಿದ್ದಾರೆ. ಮೇಷ್ಟರು ಎಬ್ಬಿಸಿ ನಿಲ್ಲಿಸಿ ‘ಅದೇ’ ವಿಷಯವನ್ನೆ ಪ್ರಶ್ನೆ ಹಾಕಿಹಾಕಿ ಕೇಳುತ್ತಿದ್ದಾರೆ. ನೋಡುನೋಡುತ್ತಿದ್ದಂತೆ ಎಸ್ಸರ‍್ಟಿ ಬಸ್ಸಿನ ಡೋರಿನಲ್ಲಿ ನಿಂತು ತಾನೇ ‘ಶಿಮೋಗ ಶಿಮೋಗ’ ಅಂತ ಜನರನ್ನು ಕೂಗಿ ಕರೆದು ಬಸ್ಸಿಗೆ ಹತ್ತಿಸುತ್ತಿದ್ದಾನೆ.... ಇನ್ನೊಂದು ಗಳಿಗೆಯಲ್ಲಿ ಇವನೇ ನಾಗಪ್ಪರ ಮನೆಯ ಒಳಗೆ ಸೋಫಾದಲ್ಲಿ ಕೂತು ಟೀವಿ ನೋಡುತ್ತಿದ್ದಾನೆ.... ರವಿ ಹೊರಗಿನ ಕಿಟಿಕಿಯಲ್ಲಿ ಇಣುಕಿ ಇಣುಕಿ ನೋಡುತ್ತಿದ್ದಾನೆ... ಅಷ್ಟರಲ್ಲಿ ಅಣ್ಣ ‘ಬಾರ‍್ಲಾ ಬಾರಿ ಪಸಂದಾಗೈತಿ..’ ಅಂದ. ‘ಇನ್ನೆಂದು ಈ ಅವಕಾಶ ಸಿಗಲ್ಲ...’ ಇಡೀ ಕೋಳಿ ಕಣ್ಣಮುಂದೆ ಬಂದು ನಿಂತು ಕೂಗಿದಂಗಾಯಿತು. ದೇಹ ಮನಸ್ಸಿಗೆ ಹಿಡಿತ ತಪ್ಪಿದಂತಾಗುತ್ತಿತ್ತು..... ಕೋಳಿಯ ಮೇಲೆ ಹತ್ತಿದ್ದ ಬಸ್ಸು ಅದೊ ಬರುತ್ತಿದೆ... ತನ್ನ ಹತ್ತಿರವೇ ಬರುತ್ತಿದೆ......
ಈ ಒಂದೆರಡು ಭಾನುವಾರ, ಗುರುವಾರದಿಂದ ಟೀವಿ ನೋಡಲು ಬಾರದ ಬೋಣಿಯ ಹಾದಿ ಕಾದುಕಾದು ಸಾಕಾದ ಕಿಟಕಿಗೆ ಏನೋ ವಿಚಿತ್ರ ತಳಮಳ. ಒಬ್ಬನೆ ಬರುತ್ತಿದ್ದ ಅವನಣ್ಣನನ್ನು ಎಷ್ಟು ಕೇಳಿದರೂ ಉಪಯೋಗವಿಲ್ಲದಂತಾಯಿತು. ಬಂದವನೇ ಟೀವಿಯಲ್ಲಿ ಮುಳುಗುತ್ತಿದ್ದ ಅವನ ಕಿವಿಗೆ ತನ್ನ ಒಳದನಿ ಕೇಳಿಸಲು ಸಾಧ್ಯವೇ ಇರಲಿಲ್ಲ... ಟೀವಿಯಲ್ಲಿ ಮಾಸ್ಟರ್ ಲೋಹಿತ್ ಒಬ್ಬನೆ ನಡೆದು ಹೋಗುವ ದೃಶ್ಯ ನೋಡಿದ ಕಿಟಕಿ ‘ಬೋಣಿ ತಡಿಯೋ ಹೋಗ್ಬೇಡಾ...’ ಎಂದು ಕೂಗಿಕೊಳ್ಳುವ ಆಕ್ರಂದನ ಅಲ್ಲಿದ್ದ ಯಾರಿಗೂ ಕೇಳಿಸುವಂತಿರಲಿಲ್ಲ....
ಆದರೂ ಆಕ್ರಂದನ ನಿಲ್ಲುತ್ತಿಲ್ಲ ..... ಈಗಲೂ ನಿಲ್ಲುತ್ತಿಲ್ಲ.... ಮೂವತ್ತು ವರ್ಷಗಳಿಂದಲೂ..... ಪಾಳುಬಿದ್ದ ಆಕ್ರಂದನ.....
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.