ADVERTISEMENT

ಡಿ.ಎನ್.ಶ್ರೀನಾಥ್ ಅವರ ಅನುವಾದಿತ ಕಥೆ: ಅಬ್ದುಲ್ ಶಕೂರನ ನಗು

ಡಿ.ಎನ್.ಶ್ರೀನಾಥ್
Published 5 ಅಕ್ಟೋಬರ್ 2024, 23:30 IST
Last Updated 5 ಅಕ್ಟೋಬರ್ 2024, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   
ಮೂಲ: ಅಸಗರ್ ವಜಾಹತ್ 

 [1]

ಪ್ರಸ್ತಾವನೆ:

ADVERTISEMENT

ನಾವು ನಿನಗೆ ಹೊಡೆಯುತ್ತಿದ್ದೇವೆ, ಆದರೂ ನೀನು ನಗುತ್ತಿದ್ದೀಯ. ನೋಡು, ಅದೆಷ್ಟು ನಿಜವಾದ, ಪ್ರೀತಿಯ ಮತ್ತು ಅದ್ಭುತ ನಗು. ಹೀಗೆ ಈ ಹಿಂದೆ ನೀನೆಂದೂ ನಕ್ಕಿರಲಿಲ್ಲ. ಅಥವಾ ನಕ್ಕು ಮರೆತಿದ್ದೀಯ. ನಿನ್ನ ನೆನಪಿನ ಶಕ್ತಿ ದುರ್ಬಲವಾಗಿದ್ದು ಒಳ್ಳೆಯದಾಯಿತು. ನಿನ್ನನ್ನು ನಗಿಸಿದವರನ್ನೆಲ್ಲಾ ನೀನು ಮರೆಯುತ್ತೀಯ. ನೀನು ಮನಬಿಚ್ಚಿ ನಗುತ್ತಿದ್ದೀಯ. ಈಗ ನೋಡು, ನೀನು ಬದಲಾಗುತ್ತಿದ್ದೀಯ. ನಿನ್ನಲ್ಲಿ ಕಣ್ಣೀರಿಲ್ಲ, ಇವು ಆಕಾಶದಿಂದ ನಿನ್ನ ಮೇಲೆ ಹನಿಗೆರೆಯುತ್ತಿರುವ ಮಂಜಿನ ಹನಿಗಳು. ನೋಡು, ನಿನ್ನ ಅಲ್ಲಾಹ ಸಹ ನಿನ್ನ ಬಗ್ಗೆ ಸಂಸತಗೊಂಡಿದ್ದಾನೆ. ಯಾಕೆಂದರೆ ನೀನು ಸಂತೋಷವಾಗಿದ್ದೀಯ. ನೋಡು, ನೀನು ಬದುಕಿದ್ದೀಯ. ನೀನು ಮಾತನಾಡಬಲ್ಲೆ. ಮುಂದುವರೆಯುತ್ತಿದ್ದೀಯ. ನಿನ್ನ ಮುಂಬರುವ ಪೀಳಿಗೆಗಳು, ನೀನೆಂದೂ ರೋದಿಸಲಿಲ್ಲವೆಂದು ಹೆಮ್ಮೆ ಪಡುತ್ತವೆ. ನೀನು ಮಾತ್ರ ನಗುತ್ತಿದ್ದೆ, ಕೇವಲ ನಗುತ್ತೀಯ. ನೀನು ನಗುತ್ತಿರು ಎಂಬುವುದೇ ನಮ್ಮ ಶುಭ ಹಾರೈಕೆ. 

 [2]

ಅಬ್ದುಲ್ ಶಕೂರ್ ಮಗ ಅಬ್ದುಲ್ ವಹೀದ್ ಮಗ ಕರೀಮ್ ಮಗ ರಹೀಮ್ ಮಗ ರಮನಾ ಮಗ ಚಮನಾನ ಮನಸ್ಸಿನಲ್ಲಿ ಒಂದು ವಿಶೇಷತೆ ಹುಟ್ಟಿಕೊಂಡಿದೆ. ಹಾಗಂತ ಅಬ್ದುಲ್ ಶಕೂರ್ ಬಡಗಿಯ ಕೆಲಸವನ್ನು ಮಾಡುತ್ತಾನೆ. ಅವನ ಏಳು ಪೀಳಿಗೆಗಳು ಇದೇ ಕೆಲಸವನ್ನು ಮಾಡಿಕೊಂಡು ಬಂದಿವೆ.

ಈಚೆಗೆ ಅಬ್ದುಲ್ ಶಕೂರ್ ತುಂಬಾ ಸಂತಸದಿಂದ್ದಾನೆ. ಯಾಕೆಂದರೆ ಅವರ ಮನಸ್ಸಿನಲ್ಲಿ, ಬೇರಾರಲ್ಲೂ ಇಲ್ಲದ ವಿಶೇಷತೆಯೊಂದು ಹುಟ್ಟಿಕೊಂಡಿದೆ. ಅಂದರೆ, ಅಬ್ದುಲ್ ಶಕೂರ ಹೊಡೆತ ತಿಂದಾಗ ನಗುತ್ತಾನೆ. ಸಂತಸ ಪಡುತ್ತಾನೆ. ಈ ಬಗ್ಗೆ ಅವನ ಪರಿವಾರದವರು ಸಹ ನಗುತ್ತಾರೆ. ಚಪ್ಪಾಳೆ ತಟ್ಟುತ್ತಾರೆ, ಹೊಡೆಯುವವನ ಸಂತಸಕ್ಕಂತೂ ಮಿತಿಯೇ ಇಲ್ಲ.

 [3]

-’ಅಬ್ದುಲ್ ಶಕೂರ್, ನಿನಗೆ ಹೊಡೆತ ತಿನ್ನುವುದರಲ್ಲಿ ಮಜ ಸಿಗುವುದೇ?’

-’ಹೌದು, ನನಗೆ ಹೊಡೆತ ತಿನ್ನುವುದರಲ್ಲಿ ಮಜ ಸಿಗುತ್ತದೆ’

-’ಎಷ್ಟು ಮಜವೆನಿಸುತ್ತದೆ?

-ಇದನ್ನು ಹೇಳಲಾರೆ, ಆದರೆ ಸಿಕ್ಕಾಪಟ್ಟೆ ಮಜ ಸಿಗುತ್ತೆ ಅಂತ ತಿಳಿಯಿರಿ’

-’ಯಾರೇ ಹೊಡೆದರೂ ಮಜ ಸಿಗುವುದೇ?’

-’ಇಲ್ಲ’

_’ಹಾಗಾದ್ರೆ, ಯಾರು ಹೊಡೆದಾಗ ನಿನಗೆ ಮಜ ಸಿಗುತ್ತೆ?’

-’ನೀವು ಹೊಡೆದಾಗ ನನಗೆ ಮಜ ಸಿಗುತ್ತೆ’


 [4]


-’ಅಬ್ದುಲ್ ಶಕೂರ್, ಮೀಡಿಯಾದೆದುರು ನಾನು ನಿನಗೊಂದು ಪ್ರಶ್ನೆಯನ್ನು ಕೇಳುತ್ತಿದ್ದೇನೆ’

- ‘ಕೇಳಿ’

-'ಅಬ್ದುಲ್ ಶಕೂರ್, ನಾನು ನಿನಗೆ ಹೊಡೆಯುವಾಗ ನಿನಗೆ ಸ್ವಲ್ವವೂ ಪೆಟ್ಟಾಗುವುದಿಲ್ಲವೇ?'

-'ಇಲ್ಲ, ನನಗೆ ಪೆಟ್ಟಾಗುವುದಿಲ್ಲ.'

-'ನಿನಗೆ ಸ್ವಲ್ಪವೂ ನೋವಾಗುವುದಿಲ್ಲವೇ?'

-'ಇಲ್ಲ, ನನಗೆ ನೋವಾಗುವುದಿಲ್ಲ.'

-'ನಿನ್ನ ಚರ್ಮ ಸುಲಿದು ಹೋಗುತ್ತೆ, ಆದರೂ ನಿನಗೆ ಸ್ವಲ್ಪವೂ ಕಷ್ಟವಾಗುವುದಿಲ್ಲವೇ?'

-'ಇಲ್ಲ, ನನಗೆ ಸ್ವಲ್ಪವೂ ಕಷ್ಟವಾಗುವುದಿಲ್ಲ.'

-'ಯಾಕಾಗಲ್ಲ, ಅಬ್ದುಲ್ ಶಕೂರ್?'

-ಯಾಕೆಂದರೆ ನೀವು ನನ್ನನ್ನು ಮರದ ಶಕೂರನೆಂದು ತಿಳಿಯುತ್ತೀರ.'


 [5]


-'ಅಬ್ದುಲ್ ಶಕೂರ್, ನಾನು ನಿನಗೇಕೆ ಹೊಡೆಯುತ್ತೇನೆ?'

-'ಯಾಕೆಂದರೆ ನಾನು ದೇಶವನ್ನು ಪ್ರೀತಿಸುವುದಿಲ್ಲ.'

-'ನೀನು ದೇಶವನ್ನು ಪ್ರೀತಿಸುವುದಿಲ್ಲ ಎಂಬುದು ನಿನಗೆ ಹೇಗೆ ತಿಳಿಯಿತು?'

-'ಸಾರ್, ಇದು ನನಗೆ ಗೊತ್ತಾಗುವುದೇ ಇಲ್ಲ, ಒಂದು ವೇಳೆ...'

-'ಒಂದು ವೇಳೆ ಏನು? ಹೇಳು-ಹೇಳು.'

-'ಒಂದು ವೇಳೆ...'

-'ಮತ್ತೆ ನೀನು ನಿಂತೆ...ಹೇಳು?'

-'ಒಂದು ವೇಳೆ ನೀವು ಹೇಳದಿದ್ದರೆ...'


 [6]


-'ನನಗೊಬ್ಬ ದೊಡ್ಡ ಶತ್ರುವಿದ್ದಾನೆ. ಅವನ ಬಳಿ ತುಂಬಾ ಶಕ್ತಿಯಿದೆ. ಅವನು ನನ್ನನ್ನು ಹಾಳು ಮಾಡಲು ಬಯಸುತ್ತಾನೆ. ನಾನು ಅವನನ್ನು ಎದುರಿಸಲು ಸದಾ ಸಿದ್ಧನಾಗಿರುತ್ತೇನೆ. ಅವನು ಒಮ್ಮೆ ಅಡಗಿದ್ದು ಆಕ್ರಮಣ ಮಾಡಿದರೆ, ಇನ್ನೊಮ್ಮೆ ಎದುರಿನಿಂದ ಆಕ್ರಮಣವನ್ನು ಮಾಡುತ್ತಾನೆ. ಅವನು ಯಾರೆಂದು ನಿನಗೆ ಗೊತ್ತಾ, ಅಬ್ದುಲ್ ಶಕೂರ್?'

 _'ಅವನು ಯಾರೆಂದು ನನಗೆ ಗೊತ್ತಿದೆ.'

 _'ಹೇಳು, ಅವನ್ಯಾರು?'

 -'ನಾನು...ನಾನು...' 

 [7]


-'ಅಬ್ದುಲ್ ಶಕೂರ್, ನೀನು ಕನಸನ್ನು ಕಾಣುತ್ತೀಯ?'

-'ಹೌದು, ನಾನು ಕನಸನ್ನು ಕಾಣುತ್ತೇನೆ.'

-'ಯಾವ ಕನಸನ್ನು ಕಾಣುತ್ತೀಯ?'

-'ಒಂದು ಹಸಿರು ಬಯಲಿದೆ, ಆ ಬಯಲಿನಲ್ಲಿ ಒಂದು ಕುದುರೆ ಹುಲ್ಲನ್ನು ಮೇಯುತ್ತಿದೆ ಎಂದು ಕನಸು ಕಾಣುತ್ತೇನೆ.'

-'ಆ ಕುದುರೆ ಯಾರು?'

-'ಅದು ನಾನು.'

-'ಮತ್ತೇನಾಗುವುದು?'

-'ಹಸಿರು ಹುಲ್ಲನ್ನು ಮೇಯುತ್ತಿರುವಾಗ ನನ್ನ ಬಾಯಿಗೆ ಲಗಾಮ ಹಾಕಲಾಗುತ್ತೆ, ನನ್ನಿಂದ

 ಹುಲ್ಲನ್ನೂ ಸಹ ತಿನ್ನಲಾಗುವುದಿಲ್ಲ.'

-'ಆಗ?'

-'ಆಗ ನನ್ನ ಬೆನ್ನ ಮೇಲೆ ಯಾರೋ ಕೂರುತ್ತಾರೆ.'

-'ನಿನ್ನ ಬೆನ್ನಿನ ಮೇಲೆ ಯಾರು ಕೂರುತ್ತಾರೆ?'

-'ನನ್ನ ಬೆನ್ನಿನ ಮೇಲೆ ನೀವೇ ಕೂರುತ್ತೀರ, ನನಗೆ ಚಾವಟಿಯಿಂದ ಹೊಡೆಯುತ್ತೀರ. ನಾನು

 ವೇಗವಾಗಿ ಓಡುತ್ತೇನೆ. 

-'ಆಮೇಲೆ?'

-'ಎದುರಿನಿಂದ ಯಾರೋ ಬರುತ್ತಿದ್ದಾರೆ.'

-'ನಾನು ಬರುತ್ತಿದ್ದೇನೆ.'

-'ಆಮೇಲೆ?'

-'ನಾನು ನನ್ನನ್ನು ತುಳಿಯುತ್ತಾ ಹೋಗುತ್ತೇನೆ.'


 [8]


-'ಅಬ್ದುಲ್ ಶಕೂರ್, ನೀನೇಕೆ ವಿದ್ಯಾಭ್ಯಾಸವನ್ನು ಮಾಡಲಿಲ್ಲ, ಶಾಲಾ-ಕಾಲೇಜುಗಳೆಲ್ಲವೂ 

 ತೆರೆದಿವೆ?'

-'ಹೂಂ, ತಪ್ಪು ನನ್ನದೇ.'

-'ನೀನೇಕೆ ನಿನ್ನ ಚಿಕಿತ್ಸೆಯನ್ನು ಮಾಡಿಸಿಕೊಳ್ಳದಾದೆ ಅಬ್ದುಲ್ ಶಕೂರ್, ಆಸ್ಪತ್ರೆಗಳೆಲ್ಲವೂ ತೆರೆದಿವೆ?'

-'ಹೂಂ, ತಪ್ಪು ನನ್ನದೇ.'

-'ನೀನೇಕೆ ನೌಕರಿಯನ್ನು ಮಾಡದಾದೆ ಅಬ್ದುಲ್ ಶಕೂರ್? ಕಛೇರಿಗಳೆಲ್ಲವೂ ತೆರೆದಿವೆ'

-'ಹೂಂ, ತಪ್ಪು ನನ್ನದೇ.'

-ನೀನೆಷ್ಟು ತಪ್ಪುಗಳನ್ನು ಮಾಡ್ತೀಯ ಅಬ್ದುಲ್ ಶಕೂರ್?'

-'ಮರದ ಮನುಷ್ಯ ತಪ್ಪು ಮಾಡದಿದ್ದರೆ, ಏನು ಮಾಡ್ತಾನೆ ಸಾಹೇಬ್ರೆ?'

 [9]


-'ಅಬ್ದುಲ್ ಶಕೂರ್, ನಿನ್ನ ಮನೆಯ ಗೋಡೆ ಬಿತ್ತು.'

-'ಪರ‍್ವಾಗಿಲ್ಲ, ಬೀಳಲಿ ಬಿಡಿ.'

-'ಅಬ್ದುಲ್ ಶಕೂರ್, ನಿನ್ನ ಮನೆಯ ಛಾವಣಿ ಬಿತ್ತು.'

-'ಬೀಳಲಿ ಬಿಡಿ, ಪರ‍್ವಾಗಿಲ್ಲ.'

-'ಅಬ್ದುಲ್ ಶಕೂರ್, ನಿನ್ನ ಹೆಂಡತಿ-ಮಕ್ಕಳು ಕೆಳಗೆಬಿದ್ದು ಅರಚಿ ಹೋಗಿದ್ದಾರೆ.' 

-'ಅರಚಿ ಹೋಗಲಿ ಬಿಡಿ, ಪರ‍್ವಾಗಿಲ್ಲ.'

-'ನಿನ್ನ ಅಂಗಡಿಗೆ ಬೆಂಕಿ ಬಿದ್ದಿದೆ. ನಿನ್ನೆಲ್ಲಾ ಉಪಕರಣಗಳು ಸುಟ್ಟು ಹೋಗಿವೆ. ನಿನ್ನ ಹತ್ತಿರ ತಿನ್ನಲು ಏನೂ ಇಲ್ಲ.'

-'ಏನಾದರೂ ಆಗಲಿ.'

-'ಯಾಕೆ ಅಬ್ದುಲ್ ಶಕೂರ?'

-'ಒಳ್ಳೆಯ ದಿನಗಳು ಬರುತ್ತವೆ.'

-'ಇದನ್ನು ನಿನಗ್ಯಾರು ಹೇಳಿದರು?'

-'ನನಗೆ ನಂಬಿಕೆಯಿದೆ.'

-'ಹೇಗೆ?'

-'ನೀವೇ ಹೇಳಿದ್ದೀರ...'


 [10]


-'ಅಬ್ದುಲ್ ಶಕೂರ್, ನೀನು ಊಟ ಮಾಡಿದೆಯಾ?'

-'ಊಟ ಮಾಡಿದೆ.'

-'ಆದ್ರೆ ನಿನ್ನ ಮನೆಯಲ್ಲಿ ಏನೂ ಇರಲಿಲ್ಲ.'

-'ನೀನು ನೀರು ಕುಡಿದೆಯಾ?'

-'ಹೂಂ, ಕುಡಿದೆ.'

-'ಆದ್ರೆ ನಿನ್ನ ಮನೆಯಲ್ಲಿ ನೀರಿರಲಿಲ್ಲ.'

-'ಆದ್ರೆ ಕುಡಿದೆ.'

-'ನೀನು ಬಟ್ಟೆ ಉಟ್ಟಿಕೊಂಡೆಯಾ?'

-'ಉಟ್ಕೊಂಡೆ.'

-'ಆದ್ರೆ ನೀನು ಬೆತ್ತಲಾಗಿದ್ದೀಯ.'

-'ನೀನು ಚಿಕಿತ್ಸೆ ಮಾಡಿಸಿಕೊಂಡೆಯಾ?'

-'ಮಾಡಿಸಿಕೊಂಡೆ.'

-'ಆದ್ರೆ ನೀನು ರೋಗಿಯಂತೆ ಕಾಣಿಸುತ್ತಿದ್ದೀಯ, ಅಬ್ದುಲ್ ಶಕೂರ್.'

-'ನೀವೊಳ್ಳೆ ಹೇಳ್ತೀರ...ನಾನು ತುಂಬಾ ಸಂತೋಷದಲ್ಲಿದ್ದೇನೆ...ಮರದ ಮನುಷ್ಯನಲ್ವ...'

 [11] 

[ಅಬ್ದುಲ್ ಶಕೂರ್ ಇಹಲೋಕವನ್ನು ತ್ಯಜಿಸಿದಂತೆಯೇ, ನಮ್ಮ ಅಂತ್ಯವೂ ಆಗಲಿ. ಆಮೀನ್]

 ಅಬ್ದುಲ್ ಶಕೂರ್ ಮಸೀದಿಯಲ್ಲಿ ನಮಾಜು ಮಾಡಲು ಹೋದ. ಅವನು ನಮಾಜು ಮಾಡಲು ಎದ್ದು ನಿಲ್ಲುವವನಿದ್ದ. ಆಗಲೇ ಮಸೀದಿಯ ಒಂದು ದೊಡ್ಡ ಸ್ತಂಭವೊಂದು ತುಂಡಾಗಿ ಅವನ ಮೇಲೆ ಬಿತ್ತು, ಅಬ್ದುಲ್ ಶಕೂರ್ ಅದರ ಕೆಳಗೆ ಅರಚಿ ಸತ್ತ.

ಸತ್ತ ನಂತರ ಅವನ ಪೋಸ್ಟ್‌ಮಾರ್ಟಮ್ ಮಾಡಲಾಯಿತು. ಅವನು ಸಾಯುವುದಕ್ಕೆ ಮೊದಲು ನಗುತ್ತಿದ್ದ ಎಂದು ರಿಪೋರ್ಟ್ ಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.