ಊರಿನ ಗ್ರಾಮ ಪಂಚಾಯತಿಯ ಮುಂದೆ ಬಂದು ಬಿದ್ದಿದ್ದ ಕಸದ ತೊಟ್ಟಿಗಳನ್ನು ಕಂಡು ಕುತೂಹಲಗೊಂಡ ನೆರೆದ ಜನರಿಂದ ‘ಅಲ್ರಿ, ಇಷ್ಟಕೊಂಡ ಬಕೇಟು ಯಾತಕ? ಮತ್ತ ಯಾರಿಗೆ?’ ಪ್ರಶ್ನೆಗಳು ಹುಟ್ಟಿಕೊಳ್ಳತೊಡಗಿದಾಗ, ‘ಇವೆಲ್ಲಾನೂ ಮನಿಗೊಂದರಂಗ ಕಸಾಹಾಕಾಕ ಕೊಡುದು’ ಎಂಬ ಉತ್ತರದಿಂದ ಖುಷಿಗೊಂಡ ಊರ ಉಸಾಬರಿಯ ಸೋನವ್ವಾಳ ‘ಅಯ್ಯ ತಮ್ಮಾ ಇವು ಕಸಾ ಹಾಕಾಕ? ಹೆಂತಾ ಚೊಲೋ ಅದಾವು. ನೀರ ತುಂಬಾಕ ಬಾಳ ಚೊಲೋ ಆಕ್ಕಾವು’ ಎಂಬ ಮಾತಿನ ಹಿಂದೆಯೇ ಉಡಾಫೆ ಹುಡುಗನೊಬ್ಬ ಆ ಬಕೇಟಿನ ತಳದಲ್ಲಿನ ರಂಧ್ರವನ್ನು ತೋರಿಸಿ ‘ಅಲ್ಲಬೇ ನೀ ಇದರಾಗ ನೀರು ತುಂಬತಿಯಾ? ನೀ ಬೆಳತನಾ ತುಂಬಿರೂ ಬಕೇಟು ತುಂಬುವುದಿಲ್ಲ. ಸರಕಾರದಾರು ಶ್ಯಾನ್ಯಾ ಇರತಾರಾ ಯಾವುದಕ್ಕಾರ ಕೊಟ್ರ ಯಾವುದಕ್ಕಾರ ಬಳಸು ಮಂದಿ ಐತಿ ಅಂತ ಹೇಳಿ ಹಿಂಗ ಮಾಡ್ಯಾರಾ’ ಎಂದಾಗ, ಸೇರಿದ ಜನ ಜೋರಾಗಿ ನಗತೊಡಗಿದಾಗ, ಕೋಪಗೊಂಡ ಸೋನವ್ವಾ ‘ಭಾಡ್ಯಾ ನನಗೇನ ಕಣ್ಣ ಇಲ್ಲ ಅಂತ ತಿಳದಿ?.... ?’ ಎಂದೆಲ್ಲ ಕೂಗಾಡಿ ಅಲ್ಲಿಂದ ಕಾಲುತೆಗದಳು.
ಆ ಹುಲ್ಲಳ್ಳಿ ಗ್ರಾಮದ ಗ್ರಾಮ ಪಂಚಾಯತಿ ಘನತ್ಯಾಜ್ಯ ವಿಲೇವಾರಿ ಯೋಜನೆಯ ಪಲಾನುಭವಿಯಾಗಿ ಹಣವೂ ಬಿಡುಗಡೆಯಾಗಿ ಯೋಜನೆಯ ಲಾಭ ಪಡೆದಿತ್ತು. ಕಸ ವಿಲೇವಾರಿಗೆ ಬೇಕಾಗುವ ಪರಿಕರಗಳಾದ ಕಸದ ಗಾಡಿ, ಪ್ರತಿಯೊಂದು ಮನೆಗೂ ಸಣ್ಣ ಸಣ್ಣ ಕಸದ ತೊಟ್ಟಿಗಳು, ಸಾರ್ವಜನಿಕ ಸ್ಥಳಗಳಲ್ಲಿಡಲು ದೊಡ್ಡ ದೊಡ್ಡ ಕಸದ ತೊಟ್ಟಿಗಳನ್ನು ಒಟ್ಟಿನಲ್ಲಿ ಆ ಯೋಜನೆಯ ಕೆಲಸಕ್ಕೆ ಬೇಕಾಗುವ ಸಾಮಗ್ರಿಗಳು ಜೊತೆಗೆ ಕಸ ಹೆಕ್ಕಲು ಕೆಲಸಗಾರ್ತಿಯರನ್ನೂ ನೇಮಿಸಿದ್ದಲ್ಲದೇ ಸರಕಾರಿ ಹಳೆಯ ಕಟ್ಟಡವನ್ನು ಕಸ ವಿಂಗಡಣೆಗೆ ಸಜ್ಜುಗೊಳಿಸಿದ್ದರು. ಹೀಗೆ ಎಲ್ಲವೂ ತಯಾರಾದ ನಂತರ ಯೋಜನೆಯನ್ನು ಕಾರ್ಯರೂಪಕ್ಕೆ ತರದೇ ಇರಲಾಗುತ್ತದೆಯೇ? ಸಾಲದ್ದಕ್ಕೆ ಮೇಲಿನ ಅಧಿಕಾರಿಗಳ ಒತ್ತಡ. ಹಾಗಾಗಿ ಕಸದ ಘಟಕ ನಿರ್ಮಾಣವಿಲ್ಲದೇ ಪ್ರಾಯೋಗಿಕವಾಗಿ ಒಂದೆರಡು ಓಣಿಗಳನ್ನು ಆಯ್ದುಕೊಂಡು ಕೆಲಸ ಪ್ರಾರಂಭಿಸಿದರು.
ಆಯ್ದ ಓಣಿಗಳಲ್ಲಿ ಮೊದಲು ಕಸದ ತೊಟ್ಟಿಗಳನ್ನು ಹಂಚುವಾಗ, ಆ ಓಣಿಯ ಜನರು ಮತ್ತೊಂದೆರಡು ತೊಟ್ಟಿಗಳನ್ನು ಕೊಡುವಂತೆ ವಿನಂತಿಸಿದಾಗ, ಸಿಬ್ಬಂದಿ ಸಂಗಮೇಶ, ಮತ್ತೊಂದೆರಡು ತೊಟ್ಟಿಗಳನ್ನು ಕೊಡಲು ತೊಂದರೆ ಇಲ್ಲ. ಆದರೆ, ಪ್ರತಿಯೊಂದು ಕಸದ ತೊಟ್ಟಿಗೂ ಪ್ರತಿ ತಿಂಗಳೂ ಐವತ್ತು ರೂಪಾಯಿ ಕೊಡಬೇಕು ಎಂದಾಗ, ಬಹಳ ಮಂದಿ ವಿರೋಧ ವ್ಯಕ್ತಪಡಿಸಿದರು. ಆ ವಿರೋಧದ ಮಧ್ಯಯೇ, ತಾವು ತೊಟ್ಟಿಗಳನ್ನು ಹಂಚುವುದು ತಮ್ಮ ಕರ್ತವ್ಯ ಎಂಬಂತೆ, ಹಂಚಿದರು.
** ** **
ಈ ಸಲದ ಗ್ರಾಮ ಸಭೆಯಲ್ಲಿ ಕಸವಿಲೇವಾರಿ ವಿಷಯವೇ ಪ್ರಮುಖ ಅಂಶವಾಗಿ ಚರ್ಚಿತವಾಯಿತು. ಜನರಿಗೆ ಅಧಿಕಾರಿಗಳು ಕಸ ನಿರ್ವಹಣೆಯ ಮಹತ್ವ, ಊರನ್ನು ಸ್ವಚ್ಛ ಹಾಗೂ ಸುಂದರಗೊಳಿಸುವ ಉದ್ದೇಶವನ್ನು ಹೇಳುತ್ತಲೇ ಪ್ರತಿ ತಿಂಗಳೂ ಪ್ರತಿಯೊಂದು ಮನೆಯವರು ಕಸವಿಲೇವಾರಿಗಾಗಿ ಐವತ್ತು ರೂಪಾಯಿಗಳನ್ನು ಸಂದಾಯ ಮಾಡಬೇಕೆಂದು ಹೇಳಿದ ತಕ್ಷಣ, ದಿಢೀರನೇ ಸಭೆಯ ಮಧ್ಯದಿಂದ ಎದ್ದು ನಿಂತ ರಾಜಪ್ಪ ‘ಅಲ್ರಿ ಸರಕಾರಾ ಎಲ್ಲಾ ಕೊಟ್ಟಿರತೈತಿ ನಾವು ಯಾಕ ರೊಕ್ಕಾ ಕೊಡಬೇಕು?’ ಎಂದು ಪ್ರಶ್ನೆಯೊಡ್ಡಿದ. ಅಧಿಕಾರಿಗಳು ‘ನೋಡ್ರಿ ಪ್ರತಿ ತಿಂಗಳೂ ಐವತ್ತ ರೂಪಾಯಿ ಕೊಡೂದು ದೊಡ್ಡದಲ್ಲಾ. ಅಷ್ಟಕ್ಕೂ ಆ ರೊಕ್ಕಾ ನಾವು ಈ ಕೆಲಸಕ್ಕ ಹಾಕ್ಕಿವಿ. ಅಲ್ಲರಿ ನಿಮಗ, ಕಸಾ ಹಾಕಾಕ ಬಕೇಟ ಕೊಟ್ಟು, ಆ ಕಸಾ ತುಗೊಂಡ ಹೋಗಾಕ ಗಾಡೀನೂ ಮನಿಮುಂದ ಬಂದ ನಿಂದ್ರೂವಂಗ ಮಾಡತೈತಿ. ಇದರಿಂದ ನೀವು ರೋಡು ಗಟಾರ ಎಲ್ಲಿ ಬೇಕಲ್ಲಿ ಕಸಾ ಹಾಕೂದು ತಪ್ಪಿ ರೋಡು ಗಟಾರ ಸ್ವಚ್ಛ ಉಳಿತಾವು. ಆಗ ಗಟಾರ ಬಳಸೂ ಸಮಸ್ಯೆನೂ ಇರೂದಿಲ್ಲ. ಗಟಾರ ಸ್ವಚ್ಛ ಮಾಡಾಕ ವರ್ಸಾ ಲಕ್ಷಾಂತರ ರೂಪಾಯಿ ಖರ್ಚ ಆಕ್ಕಾವು. ಇದರಿಂದ ಆ ಹಣಾ ಉಳಿತೈತಿ. ಎಲ್ಲಾಕ್ಕಿಂತ ಹೆಚ್ಚಾಗಿ ಗಟಾರ ತುಂಬಿ ವಿಷ ಆಗಿ ರೋಗ ರುಜಿನಾ ಬರೂದು ತಪ್ಪಿಸಿದಂಗ ಆಕ್ಕತಿ’ ಎಂಬ ಸುಧೀರ್ಘವಾದ ಉತ್ತರ ನೀಡಿದ್ದರು. ಅಷ್ಟಾಗಿಯೂ ಜಾನಕ್ಕ ಎದ್ದು ನಿಂತು, ‘ನೀವು ಹೇಳೂದು ಖರೆ ಐತಿ. ಇದೆಲ್ಲಾ ಕಸಾ ಚೆಲ್ಲಾಕ ಬಿಡ್ರಿ ಉಸರಾಡಾಕೂ ಒಂದೀಟೂ ಜಾಗಾ ಇಲ್ಲದಂತಾ ಬೆಂಗಳೂರಂತಾ ಊರಾಗ. ಇಲ್ಲೆ ಎಲ್ಲಾರ ಮನಿ ಹಿತ್ತಲಾ ಹೊಲಾ ಆಗ್ಯಾವು. ನಾವು ಅಲ್ಲೇ ಚೆಲ್ಲತೀವಿ ಬಿಡ್ರಿ ಸಾಹೇಬ್ರ’ ಎಂದ ಮಾತು ಆ ಜನರಲ್ಲಿ ಉತ್ಸಾಹದ ಅಲೆ ಎಬ್ಬಿಸಿ, ‘ಹೌದ ಹೌದ್ರಿ..’ ಎಂದು ಕೂಗಾಡುವಂತಾಯಿತು. ಆ ಸದ್ದು ಗದ್ದಲವನ್ನು ಅಡಗಿಸಲು ಅಧಿಕಾರಿಗಳು ಟೇಬಲ್ ಬಡಿಯುವ ಮೂಲಕ ನಿಲ್ಲಿಸಬೇಕಾಯಿತು. ‘ಆತು, ನೀವು ಹೇಳಿದಂಗ ನಿಮ್ಮ ಹಿತ್ತಲ ಜಾಗಾದಾಗ, ಕಸಾ ಚೆಲ್ಲರಿ ಮತ್ಯಾಕ ರೋಡು ಗಟಾರು ಅಂತ ಎಲ್ಲಿ ಬೇಕಾದಲ್ಲಿ ಚೆಲ್ಲತೀರಿ? ನೀವು ಹೇಳಿದಂಗ ನಿಮ್ಮ ಹಿತ್ತಲದಾಗ ಚೆಲ್ಲಿದ್ರ ಕಸಾ ರೋಡು ಯಾಕ ಗಲೀಜ ಆಕ್ಕಿದ್ದು?’ ಮತ್ತೆ ಹಲವಾರು ಧ್ವನಿಗಳು ಉದಿಸಿ, ‘ನಾವೇನು ಚೆಲ್ಲುದಿಲ್ಲ ಬಿಡ್ರಿ’ ಎಂದವು. ‘ಹಂಗಾದ್ರ ಬ್ಯಾರೆ ಊರನ್ನ ಮಂದಿ ಬಂದು ನಿಮ್ಮೂರಾಗ ಕಸಾ ಚೆಲ್ಲತಾರಾ?....?’ ಎಂಬೆಲ್ಲ ಚರ್ಚೆ ವಾಗ್ವಾದ ನಡೆದು ಅಂತಿಮವಾಗಿ ಒಂದಿಷ್ಟು ಬುದ್ಧಿವಂತರು, ಊರಿನ ಹಿರಿಯರೂ, ಅಧಿಕಾರಿಗಳು ಸೇರಿ ಕಸ ವಿಲೇವಾರಿಯ ಕುರಿತು, ಠರಾವು ಪಾಸು ಮಾಡಿದರು.
** ** **
ಅಂತೂ ಎಲ್ಲರ ಶ್ರಮದಿಂದ ಕಸದ ಗಾಡಿ ತೇರಿನಂತೆ ‘ತಗಿ ತಗಿ ಕಸವನ್ನ ತಂಗೆಮ್ಮ ನಿನ್ನ ಪರಿಸರ ಸ್ವಚ್ಛಗೊಳಿಸು ತಂಗೆಮ್ಮ....’ ಎಂಬ ಕಸದ ಜಾಗೃತಿ ಹೊತ್ತ ಹಾಡಿನೊಂದಿಗೆ ರೋಡಿಗೆ ಬಂದು ಅಲ್ಲಲ್ಲಿ ನಿಂತು ಕಸ ಸಂಗ್ರಹಿಸತೊಡಗಿತು. ಒಂದು ವಾರದಲ್ಲಿ ಗಾಡಿ ಸಾಗುವುದು ಕಸ ಬಂದು ಬೀಳುವುದು ರೂಢಿಯೇ ಆದಂತಾಯಿತು. ಒಂದೆರಡು ಓಣಿಗಳಲ್ಲಿ ಮಾತ್ರ ಪ್ರಾಯೋಗಿಕವಾಗಿ ಆದ ಕೆಲಸ ಮುಂದೆ ಇಡೀ ಊರನ್ನು ವ್ಯಾಪಿಸಿತು.
ಪ್ರತಿ ಓಣಿಯ ಹೆಂಗಳೆಯರು ಸುಂದರವಾದ ಕಸದ ತೊಟ್ಟಿಗಳನ್ನು ಹಿಡಿದು ಕಸವನ್ನು ಗಾಡಿಯಲ್ಲಿ ಹಾಕುವುದು ಚೆಂದವೆನ್ನಿಸಿತು. ಹಾಗೇ ಒಂದೇ ಸಮಯಕ್ಕೆ ಕಸ ಚೆಲ್ಲುವ ನೆವದಿಂದ ಬೀದಿಗಿಳಿದು ‘ಎದ್ರೆವಾ? ಚಾ ಆತನ?’ ಎಂಬ ಮಾತಿನಿಂದ ಹಿಡಿದು ರಾತ್ರಿ ಊಟ ಮಾಡಿದ್ದು, ಮಲಗಿದಾಗ ಕನಸು ಬಿದ್ದಿದ್ದು ಎಲ್ಲವನ್ನೂ ಮಾತಾಡಿಕೊಳ್ಳಲು ಅನುಕೂಲವಾಯಿತು.ಒಂದೊಂದು ದಿನ ಗಾಡಿ ಬರದೇ ಇದ್ದಾಗ, ಆ ಹೆಂಗಳೆಯರು ‘ಅಯ್ಯ ಯಾಕ ಗಾಡಿ ಬಂದೇ ಇಲ್ಲಲ?’ ಎಂದು ಪರಿತಪಿಸುವಂತಾಯಿತು.
** ** **
ಕಸ ವಿಲೇವಾರಿ ಯೋಜನೆ ನಿಧಾನವಾಗಿ ತನ್ನ ಹೆಜ್ಜೆ ಮುಂದಿಟ್ಟಿತ್ತು. ಪ್ರತಿ ದಿನವೂ ಕಸದ ಗಾಡಿ ಇಡೀ ಗ್ರಾಮವನ್ನು ಸುತ್ತು ಹಾಕಿ ಕಸ ಹೊತ್ತು ತರುವುದು ಮೊದಲೊಂದು ವಾರ ಕಸವನ್ನು ವಿಂಗಡನಾ ಕಟ್ಟಡದಲ್ಲಿ ಹಾಕಿ ಅನುಪಯುಕ್ತ ಕಸವನ್ನು ಗ್ರಾಮದ ಗುಡ್ಡದ ಬುಡದಿ ಚೆಲ್ಲತೊಡಗಿದರು. ಆದರೆ ಅಲ್ಲಿಂದ ಕಸವೆಲ್ಲ ಹಾರಿ ತೂರಿ ಸುತ್ತಲೂ ಚೆಲ್ಲುವರಿಯತಡಗಿದಾಗ, ಅದಕ್ಕೆ ಅದರದ್ದೇ ಆದ ವ್ಯವಸ್ಥೆ ಮಾಡಲೇಬೇಕಾಯಿತು.
ಕಸ ಚೆಲ್ಲುವ ಘಟಕ ನಿರ್ಮಾಣಕ್ಕಾಗಿ ಸರಕಾರಿ ಜಾಗ ಬೇಕಿತ್ತು. ಜಾಗ ಆ ಗ್ರಾಮದ ಊರ ಹೊರಗಡೆ ಅನುಕೂಲವಾಗುವಲ್ಲಿ ಲಭ್ಯವಿರಲಿಲ್ಲ. ಹಾಗಾಗಿ ಈ ಮೊದಲು ನಿರ್ಧರಿತವಾದ ಆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮತ್ತೊಂದು ಹಳ್ಳಿ ಹನ್ನೆಳ್ಳಿಯಲ್ಲಿ ಘಟಕ ನಿರ್ಮಾಣಕ್ಕಾಗಿ ಪೂಜಾ ಸಾಮಗ್ರಿಯೊಂದಿಗೆ ಅಧಿಕಾರಿ ಹಾಗೂ ಆಡಳಿತ ಮಂಡಳಿ ಸಾಗಿತು.
ಬಹುಶಃ ಆ ಹನ್ನೆಳ್ಳಿ ಜನರಿಗೆ ಅಲ್ಲಿ ಕಸವಿಲೇವಾರಿ ಘಟಕ ಸ್ಥಾಪಿಸುವ ಸೂಚನೆ ಮೊದಲೇ ಸಿಕ್ಕಿತ್ತೇನೋ ಇವರು ಹೋಗುವುದರಲ್ಲಿ ಆ ಸಣ್ಣ ಹಳ್ಳಿಯ ಜನರೆಲ್ಲ ನೆರೆದಿದ್ದರು. ಭೂಮಿಪೂಜೆ ಇರಲಿ ಅಧಿಕಾರಿಗಳು ಕಾರಿನಿಂದ ಕೆಳಗೆ ಇಳಿಯುವ ಮುನ್ನವೇ ಯುದ್ಧಕ್ಕೆ ಸಿದ್ಧರಾಗಿಯೇ ನಿಂತಂತಹ ಜನರು ‘ಯಾಕ್ರಿ ಸಾಹೇಬ್ರ ಇಲ್ಯಾಕ ಬಂದಿರಿ?’ ಎಂದು ಕೆಣಕಿದರು. ಅಧಿಕಾರಿಗಳು ಇರುವ ವಿಷಯವನ್ನು ನೇರವಾಗಿ ಹೇಳಿದಾಗ, ‘ಯಾಕ್ರಿ ನಿಮ್ಮ ಹುಲ್ಲಳ್ಳಿಯೊಳಗ ಜಾಗಾ ಇಲ್ಲನ? ಅಲ್ಲಿ ಕಸಾ ತಂದ ಇಲ್ಲೆ ಚೆಲ್ಲುವಾರಾ?’
‘ಇದು ಮನಿ ಮಾರು ಇರೂ ಜಾಗಾ. ನೀವು ಕಸಾ ಚೆಲ್ಲೆ ನಾವು ಅದರಲಿಂದ ರೋಗ ಹತ್ತಿಸಿಕೊಳ್ಳುಣು?’
‘ಇಲ್ಲೆ ದನಾಕರಾ ಓಡ್ಯಾಡತಾವು. ಮೂಕಪ್ರಾಣಿ ನಿಮ್ಮ ಕಸಾ ತಿಂದ ಸಾಯಬೇಕಾ?’ ಎಂದೆಲ್ಲ ತಲೆಗೊಬ್ಬರು ಮಾತನಾಡಿದ್ದು ಸಾಲದಂತೇ ಕೈಯಲ್ಲಿ ಕುಡಗೋಲು ಹಿಡಿದು ಹೊಲಕ್ಕೆ ಕಸ ಕೀಳಲು ಸಾಗುವ ಹೆಣ್ಣುಮಕ್ಕಳು ಬಂದು ಅದೇ ಕೈಯಿಂದ ‘ನೋಡ್ರಿ ಇಲ್ಲಿ ಕಸಾ ಚೆಲ್ಲಿದ್ರ ನೀವು ಒಗಾತಿ ಆಗೂದಿಲ್ಲ. ಮೊದಲ ಯಾಕ ಹೇಳಲಿಲ್ಲಾ ಅಂದಗಿಂದಿರಿ’ ಎಂಬ ಎಚ್ಚರಿಕೆಯ ಕರೆಯನ್ನು ಕೂಡ ನೀಡಿದರು.
ಅವರ ಮಾತನ್ನು ಕೇಳಿ ಅವರಿಗೆ ತಿಳಿಹೇಳಲು ಅಧಿಕಾರಿ ಹಾಗೂ ಆಡಳಿತ ಮಂಡಳಿ ಸೋತುಹೋಯಿತು.
** ** **
ಘಟಕ ನಿರ್ಮಾಣಕ್ಕೆ ಜಾಗ ಸಿಗದೇ ಇರುವ ವಿಷಯ ಪಂಚಾಯತಿಗೆ ತಲೆನೋವಾಗಿ ಪರಿಣಮಿಸಿತು. ಪ್ರಯತ್ನವನ್ನೇನೂ ಬಿಟ್ಟಿರಲಿಲ್ಲ. ಹುಲ್ಲಳ್ಳಿಯ ಗ್ರಾಮದ ಮಧ್ಯ ಇರುವ ಸರಕಾರಿ ಜಾಗದಲ್ಲಿ ಘಟಕ ನಿರ್ಮಿಸಲು ಪ್ರಯತ್ನಿಸಿದರು. ಆದರೆ ಆ ಜಾಗದ ಹತ್ತಿರದ ಮನೆಯವರೆಲ್ಲ ರೊಚ್ಚಿಗೆದ್ದು ಅಲ್ಲಯೂ ಘಟಕ ನಿರ್ಮಾಣಕ್ಕೆ ಅಡ್ಡಿಪಡಿಸಿದರು.
ಘಟಕದ ವ್ಯವಸ್ಥೆ ಇಲ್ಲದೇ ಕಸವನ್ನು ಊರ ಹೊರಗೆ ಆ ದಿಕ್ಕಿಗೊಮ್ಮೆ ಈ ದಿಕ್ಕಿಗೊಮ್ಮೆ ಚೆಲ್ಲಲಾರಂಭಿ ಆ ಕಸ ಅಲ್ಲಲ್ಲಿ ಹಾರಾಡಿ ಊರ ಹೊರವಲಯವನ್ನೆಲ್ಲ ಹದಗೆಡಿಸಿತು.
ಅಧಿಕಾರಿಗಳಂತೂ ಒಂದು ಸಂದಿಗ್ಧ ಸ್ಥಿತಿಗೆ ಸಿಲುಕಿದರು. ಒಮ್ಮೆ ಪ್ರಾರಂಭಿಸಿದ ಯೋಜನೆಯನ್ನು ಕೈಬಿಡುವಂತೆಯೂ ಇಲ್ಲ.
** **
ಗಂಗವ್ವ ಆ ಗ್ರಾಮದ ಬಹಳ ತಿಳುವಳಿಕೆಯುಳ್ಳ ವಿಧವೆ. ತನಗಿರುವ ಒಂದೆಕರೆ ಜಮೀನಿನಲ್ಲೇ ಅಚ್ಚುಕಟ್ಟಾಗಿ ಕೃಷಿ ಮಾಡಿಕೊಂಡು ಬದುಕಿದವಳು. ಇರುವ ಇಬ್ಬರು ಹೆಣ್ಣುಮಕ್ಕಳನ್ನು ಮದುವೆಮಾಡಿಕೊಟ್ಟಿದ್ದಳು. ಆಕೆಯ ಭೂಮಿ ಗುಡ್ಡದ ಬದಿಗೆ ತಗ್ಗುಪ್ರದೇಶದಲ್ಲಿತ್ತು. ಒಂದು ಬಾರಿ ಆಕೆಯ ಆ ಭೂಮಿಯಲ್ಲಿ ಗುಡ್ಡದ ಜಾಗವೆಂದು ಕಸ ಚೆಲ್ಲಿದ್ದರು. ಆಗ ಆಕೆಯ ಅಳಿಯ ಜಗಳಮಾಡಿಹೋಗಿದ್ದ.
ಗಂಗವ್ವ ಪಂಚಾಯತಿಗೆ ತೆರಿಗೆ ಕಟ್ಟಲು ಹೋದಾಗ, ಕಸದ ವಿಲೇವಾರಿ ಬಗ್ಗೆ ಮಾತು ನಡೆದಿತ್ತು. ಆ ಮಾತುಗಳನ್ನು ಕೇಳಿಸಿಕೊಂಡಾಗ, ಊರ ಹೊರಗಡೆಗೆಲ್ಲ ಕಸ ಚೆಲ್ಲಾಪಿಲ್ಲೆಯಾಗಿ ಬಿದ್ದು ಹೊಲಸಾದ ಪ್ರದೇಶದ ಚಿತ್ರ ಕಣ್ಣಮುಂದೆ ಬಂತು. ಹಾಗೇ ತನ್ನ ಹೊಲದಲ್ಲಿ ಕಸ ಚೆಲ್ಲಿ ಆಕೆಯ ಅಳಿಯ ಜಗಳ ಮಾಡಿದ್ದೂ ನೆನಪಾಯಿತು. ಆ ವಿಚಾರ ಆಕೆಯನ್ನು ವಾರದವರೆಗೆ ಸತಾಯಿಸಿತ್ತು.
** **
ಗ್ರಾಮದ ಗುಡ್ಡದ ವಿರುದ್ಧ ದಿಕ್ಕಿನಲ್ಲಿಯ ಬಂಜರು ಭೂಮಿಯಲ್ಲಿ ಕಸ ಚೆಲ್ಲಿದ ಪರಿಣಾಮ ಭಾರಿ ದೊಡ್ಡ ಹೊಡೆದಾಟ ನಡೆಯಿತು. ಆ ಬಂಜರು ಭೂಮಿ ಯಾರದೆಂದೇ ತಿಳಿಯದ ಸಂದರ್ಭದಲ್ಲಿ ಕಸ ಚೆಲ್ಲಿದ ನಂತರ, ಆ ಭೂಮಿಯ ಮಾಲೀಕ ಎಚ್ಚೆತ್ತುಕೊಂಡು ಕಸಚೆಲ್ಲಿದವರ ಮೇಲೆ ಮಾರಕಾಸ್ತ್ರದಿಂದ ಪ್ರಹಾರ ಮಾಡಿದಾಗ, ಅವರನ್ನು ಆಸ್ಪತ್ರೆಗೆ ದಾಖಲಿಸಬೇಕಾಗಿ ಬಂತು.
ಗಂಗವ್ವಗಳಿಗೆ ವಿಷಯ ತಿಳಿದು ಬಹಳ ಬೇಸರವಾಯಿತು. ಆ ದಿನ ಇಡೀ ರಾತ್ರಿ ಆ ಘಟನೆ ಬಗ್ಗೆ ಆಲೋಚಿಸಿದಳು. ತಮ್ಮದು ಅದೆಂತಹ ಸುಂದರ ಹಾಗೂ ಶಾಂತ ಊರು. ಎಲ್ಲವೂ ಸರಾಗವಾಗಿ ನಡೆದಲ್ಲಿ ಇನ್ನೂ ಎಷ್ಟು ಚೆಂದ. ಊರಲ್ಲಿ ಅದೆಷ್ಟು ದೊಡ್ಡ ಭೂಹಿಡುವಳಿದಾರರಿದ್ದಾರೆ. ಒಂದಿಷ್ಟು ಜಾಗ ದಾನ ಮಾಡಿದರೆ ಎಂದುಕೊಳ್ಳುತ್ತಲೇ ಒಮ್ಮೆಲೇ ತಾನೇ ಏಕೆ ತನ್ನ ಜಾಗ ಕೊಡಬಾರದು ಎನ್ನಿಸಿತು.
** ** **
ಮೂರು ತಿಂಗಳಲ್ಲಿ ಗುಡ್ಡದ ಪಕ್ಕ ಕಸದ ಘಟಕ ನಿರ್ಮಾಣವಾಯಿತು. ಅಲ್ಲಿಯೇ ಕಸ ಸುಡುವ ಮಶೀನು ಸ್ಥಾಪಿತವಾಗಿ ಊರ ಕಸವೆಲ್ಲ ಆ ಸ್ಥಳದಲ್ಲಿ ಐಕ್ಯವಾಗತೊಡಗಿತು. ಊರು ಕಸರಹಿತ ಸ್ವಚ್ಛ ಸುಂದರ ಹಾಗೂ ಆರೋಗ್ಯಯುತ ಪರಿಸರದಿಂದ ಕಂಗೊಳಿಸತೊಡಗಿತು.
** ** **
ಈ ಸಲದ ಪಂಚಾಯತಿ ಚುನಾವಣೆಯಲ್ಲಿ ಗಂಗವ್ವ ‘ನನಗ್ಯಾಕ ಬೇಕವಾ ಊರ ಉಸಾಬರಿ?’ ಎಂದರೂ ಕೇಳದೇ ಆ ಓಣಿಯ ಜನರು ‘ಊರ ಉದ್ಧಾರ ಮಾಡೂವಂತಾ ನಿನ್ನಂಥಾ ನಿಸ್ವಾರ್ಥ ಮಂದಿ ಹುಡಕಿದ್ರೂ ಸಿಗೂದಿಲ್ಲಾ’ ಎಂದು ಆಕೆಯನ್ನು ಆ ವಾರ್ಡಿನ ಸದಸ್ಯೆಯನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದರು. ಮುಂದೆ ಆಕೆ ಅಧ್ಯಕ್ಷಳಾಗಿಯೂ ಚುನಾಯಿತಳಾದಳು.
ಗಂಗವ್ವ ಅಧ್ಯಕ್ಷಳಾದ ಮೇಲೆ ಕಸ ವಿಲೇವಾರಿಯ ಕೆಲಸ ಮತ್ತಷ್ಟು ಚುರುಕುಗೊಂಡಿತು. ಘಟಕದಲ್ಲಿ ಕಸದಿಂದ ರಸವನ್ನೂ ಉತ್ಪಾದಿಸಲಾಯಿತು. ಆ ರಸಗೊಬ್ಬರವನ್ನು ಬಡ ಹಾಗೂ ಶ್ರಮಜೀವಿ ರೈತರಿಗೆ ಹಂಚಲಾಯಿತು.
ಒಂದೆರಡು ವರ್ಷಗಳಲ್ಲಿ ಹುಲ್ಲಳ್ಳಿಯ ಕಸ ವಿಲೇವಾರಿ ಘಟಕ ಮಾದರಿ ಘಟಕವಾಗಿ ಎಲ್ಲೆಡೆಯಲ್ಲೆಲ್ಲ ಹೆಸರು ಮಾಡಿತು. ಮುಖ್ಯವಾಗಿ ಆ ಗ್ರಾಮ ಪಂಚಾಯತಿಗೆ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿತು.
** ** **
ಇದ್ದಕ್ಕಿದ್ದಂತೇ ಗಂಗವ್ವಳಿಗೆ ಎದೆನೋವು ಕಾಣಿಸಿಕೊಂಡಿತು. ಆಸ್ಪತ್ರೆಗೆ ಕರೆದೊಯ್ದಾಗ, ತಕ್ಷಣ ಸರ್ಜರಿ ಮಾಡಬೇಕು ಹಾಗೂ ಅದಕ್ಕೆ ತಗಲುವ ವೆಚ್ಚ ಲಕ್ಷಾಂತರ ರೂಪಾಯಿ ಎಂದಾಗ, ಆಕೆಯ ಇಬ್ಬರೂ ಅಳಿಯಂದಿರು ಕಂಗಾಲಾದರು. ‘ನೋಡ ನಿಮ್ಮವ್ವಾ ಊರು ಊರು ಅಂತ ಇದ್ದ ಒಂದೀಟ ಹೊಲಾನೂ ಕೊಟ್ಟಕುಂತಾಳಾ. ಈಗ ರೊಕ್ಕಾ ಎಲ್ಲಿಂದ ತರೂದು? ಬೇಕಾದಂಗ ಅಧ್ಯಕ್ಷೆ ಆಗಿ ಏನ ಬೇಕಾದ್ದ ಮಾಡಕೋಬೇಕಿತ್ತ. ಆಕಿ ಅಕೌಂಟದಾಗೂ ರೊಕ್ಕ ಇಲ್ಲ’ ಎಂದೆಲ್ಲ ಕೂಗಾಡಿದರು.
ಹೌದು, ಗಂಗವ್ವ ಗಂಡ ಸತ್ತರೂ ಇರುವ ಒಂದೆಕರೆ ಭೂಮಿಯಲ್ಲಿಯೇ ಶ್ರಮಪಟ್ಟು ಬೆಳೆ ಬೆಳೆದು ಅದರಿಂದಲೇ ಬದುಕನ್ನು ಹಸನಾಗಿಸಿಕೊಂಡಿದ್ದಳು. ವಿಧವಾ ವೇತನ ಮಾಡಿಸೋಣವೆಂದರೂ ‘ಛೇ ನನಗ್ಯಾತಕ? ರಟ್ಟಿ ಗಟ್ಟಿ ಇರೂತನಾ ದುಡದ ತಿಂದರಾತು’ ಎಂದು ಹೇಳಿದಂತೆ ನಡೆದಿದ್ದಳು. ಕಸ ವಿಲೇವಾರಿಗೆ ಜಾಗ ಕೊಟ್ಟರೂ ಉಳಿದ ಜಾಗದಲ್ಲಿಯೇ ಕೃಷಿ ಮಾಡಿ ಬದುಕಿದ್ದಳು. ಆಕೆ ಜಾಗಕೊಡಲು ಮುಂದೆ ಬಂದಾಗ, ಅಧಿಕಾರಿಗಳು ಆ ಬಡ ಹೆಣ್ಣು ಮಗಳನ್ನು ಕಂಡು ‘ನೋಡವಾ ನೀ ಬಡವಿ ಅದಿ. ಮತ್ತ ದುಡದ ಹಾಕಾಕ ನಿನಗ ಹಿಂದ ಮುಂದ ಯಾರೂ ಇಲ್ಲಾ. ಇದ್ದಷ್ಟ ಜಾಗಾ ಕೊಟ್ಟರ ನಿನಗ ಕಷ್ಟಾ ಆಗಬಹುದು’ ಎಂದು ಎಚ್ಚರಿಸಿದ್ದರು. ಆದರೂ ಆಕೆ ‘ನಂದು ಇನ್ನೇನ ಐತ್ರಿ ಸಾಹೇಬ್ರ? ಎರಡೂ ಮಕ್ಕಳು ಮೆಟ್ಟಿಗೆಹತ್ಯಾವು. ಅಲ್ರಿ ಸಾಹೇಬ್ರ ನಾವು ನಮ್ಮ ಸಮಂದ ಅಷ್ಟ ಬದುಕಬಾರದು. ಒಂದೀಟು ಇನ್ನೊಬ್ಬರ ಸಮಂದನೂ ಬದುಕಬೇಕು’ ಎಂದಿದ್ದಳು.
ಗಂಗವ್ವ ಅಧ್ಯಕ್ಷೆ ಆದಮೇಲೂ ಅಧಿಕಾರವನ್ನು ಕಿಂಚಿತ್ತೂ ದುರುಪಯೋಗಪಡಿಸಿಕೊಂಡವಳಲ್ಲ. ಬಹಳ ಸಾದಾ ಸೀದಾ ಬದುಕು ನಡೆಸಿದವಳು. ಯಾರಾದರೂ ‘ಊರ ಅಧ್ಯಕ್ಷ ಆಗಿ ಹ್ಯಾಂಗ ಇರಬೇಕ ನೀ’ ಎಂದೆನಾದರೂ ಕೆಣಕಿದರೆ, ‘ನನಗೇನ ಕಡಿಮಿ ಆಗೇತ್ರೆ? ಮನಸ್ಸು ದೊಡ್ಡದಿದ್ರ ಎಲ್ಲಾ ಇದ್ದಂಗನ. ಮನಶ್ಯಾಗ ತೃಪ್ತಿ ಅನ್ನೂದು ಇತ್ತ ಅಂದ್ರ ಅವನಷ್ಟ ಶ್ರೀಮಂತ ಮತ್ಯಾರೂ ಇಲ್ಲ. ಬೇಕ ಅಂದ್ರ ಬೇಕ ಆಕೈತಿ ಸಾಕ ಅಂದ್ರ ಸಾಕ ಆಕೈತಿ. ಇಲ್ಲದರ ಬೆನ್ನ ಹತ್ತೂ ಬದಲಿ ನಮ್ಮ ಕಡೆ ಇದ್ದುದ್ದು ನೋಡಿ ಖುಷಿಪಡಬೇಕ’ ಎಂದೆಲ್ಲ ಹೇಳಿದಂತೆ ನಡೆದುಕೊಂಡಳು.
ಗಂಗವ್ವಳಿಗೆ ಹಾರ್ಟ್ ಅಟ್ಯಾಕ್ ಆದ ಸುದ್ದಿ ಊರ ತುಂಬ ಹರಡಿ ಜನರು ಜಾಗೃತರಾಗಿ ಇದ್ದವರು ಇಲ್ಲದವರು ಎಲ್ಲರೂ ಸೇರಿಯೇ ಹಣ ಸಂಗ್ರಹಣೆ ಮಾಡಿದರು. ಹಣ ಅವಶ್ಯಕತೆಗಿಂತ ಹೆಚ್ಚಿಗೆಯೇ ಸೇರಿತು. ಆದರೆ ಅಷ್ಟರಲ್ಲಿ ಆಕೆಯ ಸ್ಥಿತಿ ಚಿಂತಾಜನಕವಾಗಿತ್ತು. ಡಾಕ್ಟರು ಆಕೆಗೆ ಶಸ್ತ್ರಚಿಕಿತ್ಸೆ ಆದರೂ ಉಳಿಯುವ ನಿಖರತೆ ಇಲ್ಲ ಎಂದಾಗಲೂ ಜನರು ಹಣ ಎಷ್ಟಾದರೂ ತಾವು ಕೊಡುವುದಾಗಿ ಮೊದಲು ಆ ದೇವತೆಯನ್ನು ಉಳಿಸುವಂತೆ ಗೋಗರೆದರು. ವಿಷಯ ಗಂಗವ್ವಳಿಗೆ ತಿಳಿದು. ತನಗೆ ಆಪರೇಶನ್ ಬೇಡ. ಆ ಹಣವನ್ನು ಅನುದಾನವಿಲ್ಲದೇ ಅರ್ಧಕ್ಕೆ ನಿಂತುಹೋದ ಗ್ರಂಥಾಲಯದ ಕಟ್ಟಡಕ್ಕಾಗಿ ವಿನಿಯೋಗಿಸಬೇಕೆಂದು ಅದು ತನ್ನ ಕೊನೆಯ ಆಸೆ ಎಂತಲೂ ಹೇಳಿ ಅಸುನೀಗಿದಳು.
ದೇವತೆ ಸಮಾನಳಾದ ಗಂಗವ್ವಳ ಅಂತ್ಯಸಂಸ್ಕಾರಕ್ಕೆ ಊರಿಗೆ ಊರೇ ನೆರೆದಿದೆ. ಹೆಂಗಳೆಯರಂತೂ ‘ಯವ್ವಾ ತಾಯಿ ಹೆಂತಾ ಪುಣ್ಯೆದಾಕಿ’
‘ಆ ಹೊಳಿಗಂಗವ್ವ ತನ್ನ ಹೊಟ್ಯಾಗ ಎಲ್ಲಾ ಹೊಲಸ ಹಾಕ್ಕೊಂಡಂಗ ಈ ಗಂಗವ್ವನೂ ಊರ ಹೊಲಸ ತನ್ನ ಹೊಲದಾಗ ಹಾಕ್ಕೊಂಡ ಊರ ಹಸನ ಮಾಡೀಳು’
‘ಹೌದ ಯವ್ವಾ ಗಂಗವ್ವ ಇದ್ದಾಗೂ ಸತ್ತಮ್ಯಾಲೆನೂ ಊರಿಗೆ ಉಪಕಾರಿ ಆದಳು’ ಎಂದೆಲ್ಲ ಹಾಡ್ಯಾಡಿ ಅಳತೊಡಗಿದರು. ಶವಯಾತ್ರೆ ಊರಿನ ತೇರಿನಂತೆ ಸಾಗಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.