ADVERTISEMENT

ರಂಗಸ್ವಾಮಿ ಮಾರ್ಲಬಂಡಿ ಅವರ ಕಥೆ ‘ಕುಲ್ಕಣ್ಣಿ ಮಾಡಿಸದ ಸಂಬಳ’

​ಪ್ರಜಾವಾಣಿ ವಾರ್ತೆ
Published 16 ಜನವರಿ 2022, 0:15 IST
Last Updated 16 ಜನವರಿ 2022, 0:15 IST
ಸಾಂದರ್ಭಿಕ ಕಲೆಕಲೆ: ಆದಿತ್ಯ ಸದಾಶಿವ್
ಸಾಂದರ್ಭಿಕ ಕಲೆಕಲೆ: ಆದಿತ್ಯ ಸದಾಶಿವ್   

ಏನ ನೀಲಮವ್ವ ಮಲ್ಲಪ್ಪಂದು ಗದ್ದೆ ಹಚ್ಚೊದು ಮುಗಿತಾ? ನಾನು ಬರ‍್ತಿದ್ದೆ ಇವತ್ತು ಸಂಬಳ ಕೊಟ್ರು ಅದ್ಕ ಮನೆಗಾದೆ ನಾಳೆ ಆ ಈರೇಶ್‌ನೊರ್ ಅಣ್ಣಂದು ಹಚ್ಚಂಡ್ರಾ? ಎಂದು ಕೇವಲ ಸಂಬಳ ದಿವ್ಸವಷ್ಟೆ ತನಗೆ ಸಂಬಳ ಬರ್ತಾದ ಅಂತ ತೋರ್‌ಸೋಕೆ ನನ್ ಮನಿಗೆ ಬರತಾಳ ನಮ್ ಗುಂಪಿನಾಗ ಹಚ್ಚಾಕ ಬರಲಾರದ ಹೆಂಗಸು, ಅದ್ಕ ಈಕೆನ ಸಸಿ ಹೊರಕಿಟ್ಟಿವಿ, ಆದ್ರ ಸಂಬಳ ಬರೊ ದಿವಸ ಮಾತ್ರ ಈಕೆ, ಆ ಈರೇಶನವರಮ್ಮ, ಆ ಕಡೆ ಮನೆ ವೆಂಟೇಶಪ್ಪನ ಹೆಣ್ತಿ ಇವರೆಲ್ಲ ಸಂಬಳ ಬಂದು ದಿನ ಗದ್ದೆ ಹಚ್ಚೊದು ಬಿಟ್ಟು ಮನ್ಯಾಗ ಇರತಾರ ನಾನು ಕೂಡ ಹೋದ ದೀಪಾಳಿಗೆ ತಳವಾರ ನಾಗಮ್ಮಳ ಮನೆಗೆ ಕುಲ್ಕಣ್ಣಿ ಬಂದಾಗ ಸಂಬಳ ಮಾಡ್ಸಿದ್ರೆ ಇದೆಲ್ಲ ಆಗ್ತಿದ್ದಿಲ್ಲ ನಾನು ನನ್ ಮಗಳ ಮಾತು ಕೇಳಿ ಆಕೆಗೆ ರೊಕ್ಕ ಕೊಡ್ಲಂಗ, ‘ಆಕೆ ಸುಮ್ನೆ ತಿಂದ್ಹಾಕ್ತಾಳೆ ನೋಡು’ ಎಂದಾಗ ಹೌದು ಬಿಡು ಎಂದುಕೊಂಡು ರೊಕ್ಕ ಕೊಟ್ಟಿದಿಲ್ಲ.

ಒಲ್ಯಾಗ ಗಟ್ಟಿಕಟಿಗೆ ತುರುಕಿ ಎದ್ದು ಬಂದು ಸಂಬಳ ತಗಂಡೆನೇ? ಯಂಕಿ, ಎಂದು ಮಾತು ಶುರು ಮಾಡಿದೆ, ಬಂತು ಸಂಬಳ ಇವತ್ತು ಅದ್ಕ ಹಚ್ಚಾಕ ಬಂದಿಲ್ಲ, ನೀನು ಸಂಬಳ ಮಾಡಿಸ್ಕಂಡಿದ್ರೆ ನೀನು ಕೂಡ ಮನ್ಯಾಗಿರ‍್ತಿದ್ದಿ ನೋಡು!

ನಾನು ಕೊಟ್ಟಿದ್ನಮ್ಮ ಅವನು ಏನೂ ಆಗ್ಯಾನಲ್ಲ, ಕ್ಯಾಂಡೆಟು ವಿರೇಶಗ ನಾಕಸಾವ್ರ ರೊಕ್ಕನೂ ಕೊಟ್ಟಿನಿ ಇಲ್ಲಿಗೆ ಮೂರು ವರ್ಷ ಆಯ್ತು ಇವತ್ತು ನಾಳೆ ಅನ್ಕೊತ ಹೊಂಟಾನ ಎಳ್ತನ ಹೋಗ್ತದ ಹೋಗ್ಲಿ..! ನಾನನ ಏನ್ ಮಾಡ್ಲಿ?

ADVERTISEMENT

ನೀನು ಬುಡೆ ನೀಲಮ್ಮವ್ವ ನಾವೆಲ್ಲ ಹೋದ್ ವರ್ಷ ಆ ತಳವಾರ ನಾಗಮ್‌ಗ ಕೊಟ್ವಿ ಮೂರು ತಿಂಗ್ಳಾಗ ಮಾಡ್ಸಿಕೊಟ್ಲು ಕುಲ್ಕಣ್ಣಿನ ಹಿಡಕೊಂಡು ಅರ್ಜಿ ಪರ್ಜಿ ಇರತಾವ ಕೊಡಬೇಕು ರಕ್ಕ, ಅವರೆಲ್ಲ ಮಾಡಸ್ತಾರ.

ನಾನು ಕೊಡ್ತಿದ್ನಮ್ಮ ಕ್ಯಾಂಡೆಟಿಗೆ ಕೊಟ್ಟಿದ್ನಲ್ಲೆ, ಅದ್ಕ ಸುಮ್ನಾದೆ ಇಲ್ಲಂದ್ರೆ ಅಲ್ಲೆ ಕೊಡ್ತಿದ್ದೆ.

‘ಅವನೇನ ಕ್ಯಾಂಡೆಟ್ ಬಿಡಾ.! ಅವನು ಆಕೆ ಲಚ್ಮಿದೆ ಮಾಡ್ಸಿಲ್ಲ, ಮತ್ತೆ ಆಕೆ ಅವ್ರಮಂದಿ. ಆದ್ರೂ ಮಾಡಿಸಿಲ್ಲ ಇನ್ನ ನಿಂದು ಮಾಡ್ಸಸ್ತಾನ?’

ಏನಮ್ಮ, ಕೊಟ್ಟೆ ಏನ ಮಾಡ್ಲಿ ಮಾಡ್ಲಿಲ್ಲಂದ್ರೆ ಇರ್ಲಿ ಬಿಡು ನಾನು ಎಲ್ಡದಪ್ಪ ಹೆಡ್ನಾಳಗೆ ಹೋಗಿಬಂದೆ ಅದೇನೊ ಆಧಾರ ಕಾರ‍್ಡು ತಗೊವಲ್ದಂತೆ.

ನೀನೆ ಹೋಗು ಕುಲ್ಕಣ್ಣಿತಾಕ.

ನಾನು ಹೋಗಿದ್ದೆ ಅವತ್ತು ಅಂಗನವಾಡಿ ಸಾಲಿತಾಕ ಬಂದಿದ್ದ, ಆಕೆ ನಾಗಮ್ಮ ನೀನು ಮೂರು ಸಾರ ತಿಂದಿರಂತಲ್ಲ ಅಂತ ಪೋನು ಮಾಡಿದ್ಳಂತೆ ಅದ್ಕ ಸಿಟ್ಟುಬಂದು ಆತ ‘ಪೊಲಿಸ್ ಕಂಪ್ಲೆಟ ಕೊಡ್ತಿನಿ ನೋಡಜ್ಜಿ ಸುಮ್ ಸುಮ್ನೆ ಪ್ರಚಾರ ಮಾಡಿದ್ರೆ ರಕ್ಕ ಯಾರಿಕೊಟ್ಟಿ?’

ಅಂದ್ನೇ ಯಮ್ಮ.

ನೀನ್ ಒಳ್ಯಾಕ್ ಬಿಡು ರಕ್ಕ ಕ್ಯಾಂಡೆಟಿಗೆ ಕೊಟ್ಟು ಕುಲ್ಕಣ್ಣಿಗೆ ಕೇಳಿದ್ರೆಂಗ.?

ನಾನು ಕೇಳಿಲ್ಲೆ ಆತ ಮೂರು ಸಾವ್ರ ಕುಲ್ಕಣ್ಣಿಗೆ ಆರೈಗೆ ಕೊಡಬೇಕಂತ ಇಷ್ಕಂಡು ಹೋದ ಕೊಟ್ಟಿರ್ ತಾನಂತ ಈಕೆ ತಳವಾರಿಗೆ ಹೇಳಿದ್ರೆ ಆಕೆ ಹೋಗಿ ಆತಗ ಹೇಳಿಬಿಟ್ಟಾಳ ಎಲ್ಲಾ ದೊಡ್ಡೊರು ಇದಾರ ನನ್ ಮಗಳು ದಿನ್ನಾಗ ಇದಾಳಮ್ಮ ಕುಲ್ಕಣ್ಣಿಗೆ ಒಂದು ಮಾತು ಹೇಳಲ್ಲ.

ನಿನ್ ಮಗಳು ಯಾಕೆ ಕುಲ್ಕಣ್ಣಿ ತಕ ಹೋಗ್ತಾಳ?

ಅಯ್ಯೆ ಆಕೆ ತಳವಾರಿಕೆ ಮಾಡ್‌ತಾಳಮ್ಮ ಗಂಡ ಸತ್‌ಮೇಲೆ ನಾನೇ ಮಾಡ್ಸಿಕೊಟ್ಟೆ ಗೊತ್ತೆನು. ಅವಾಗ ಯವ್ವನಿತ್ತು ಸಿನ್ನೂರು ಮಾನ್ವಿ ತಿರುಗಾಡ್‌ದ್ವಿ ಇವಾಗ ಎಲ್ಲಿ ಆಗ್‌ತೈತಿ ಸಿನ್ನೂರುಗೆ ಹೋದ್ರೆ ಎಲ್ಲಿ ಬಿದ್ದು ಸತ್ತೊಗಬಿಡ್‌ತಿನೇನೂ ಅಂತ ಭಯ ಬಂದೈತಿ.

ನಿನ್ ಮಗಳು ತಳವಾರಿಕೆ ಮಾಡ್ತಾಳ!! ಭಾರಿ ಬಿಡಮ್ಮ ಮತ್ತೆ ನೀನು ಆಕೆನ ಕರಕೊಂಡು ಕುಲ್ಕಣ್ಣಿ ತಕ ಹೋಗಬೇಕು.

ಅಯ್ಯೊ ಹೋಗಿದ್ನೆ ಆಕೆನ ಕರಕೊಂಡು ಅವತ್ತು ಕಂಪ್ಲೇಟು ಅಂದ ಮೇಲೆ ಮರದಿನ ಹೆಡ್ನಾಳಿಗೆ ಬರ‍್ತಿನಿ ಅಂದಿದ್ದ ಹೋಗಿದ್ವಿ, ಅವತ್ತು ಕುಲ್‌ಕಣ್ಣಿ, ‘ಅಜ್ಜಿ ನಿನ್ದು ಆಧಾರ್ ಕಾರ್ಡ ಆಗುವಲ್ದು ತಿದ್ದುಪಡಿ ಮಾಡಕೊದ್ರೆ ನಿನ್ವು ಹೆಬ್ಬೆಟ್ಟು ತಗವಲ್ದಂತೆ’ ಎಂದು ಹೇಳಬೇಕಾದಗ ಅದೇ ತಳವಾರ ನಾಗಮ್ಮ ನಮ್ಮ ಮನೆಗೆ ಅನುಮತಿ ಇಲ್ಲದೆ ಒಳಬಂದು

‘ಹೆಂಗ್ಞೇ’, ಅಂದ್ಳು

ಇದಿನಿ ಬಾರೆ

‘ನೀನು ಕೂಡ ಇಲ್ಲೆ ಇದ್ದಿ ಏನೆ’ ಎಂದು ಆಕೆನ ಮಾತಾಡಸ್ತ ನಾಳೆ ಕುಲ್ಕಣ್ಣಿ ಹೆಡನಾಳಗೆ ಬಾ ಅಂದಾನ ನಡಿ ಮತ್ತೆ ಹೋಗೋಣು ಹ್ಞಾ.?

ಏನ್ ಬರತತೊ ಇಲ್ಲೊ ನನಗೆ ಸಾಕಾಗೈತಿ, ಇನ್ನೆನು ಸಂಬಳ ಕೈಬಿಡೊದೆ.., ಸತ್ತೊಗೊದು ಮೇಲು.

ಏ್ಞ ನಿಮ್ಮಮ್ಮನ ಎಂತ ಮಾತಾಡ್ತಿದಂಗೆ ನೀನು ಸಂಬಳ ತಗೊವಂತೆ ಸುಮ್‌ನೆ ಇರು ನಾಳೆ ತಶೀಲ್ದಾರ ಸರ್ ಬರ‍್ತಾನಂತೆ ನೀನು ಅವರ ಕಾಲಿಗೆ ಬಿದ್ ಬಿಡು ಅಲ್ಲಿ ಡಿ.ಟಿ ಸಾಬ್ರಗೆ ಅಯ್ಯಣ್ಣಗೆ ಎಲ್ರ ಕಾಲಿಗೆ ಬಿಳು ಅವರ ಮಾಡ್ತಾರ ಏನನ ಏನಂಗೆ.!

ಏನ್ ಮಾಡ್ತಾರೇನೊ, ಕುಲ್ಕಣ್ಣಿ ಅವತ್ತೆ ಹೇಳ್ದ ಅಜ್ಜಿ ಕಷ್ಟ ನಿನ್ದು ಅಂತ.

‘ಹಂಗಂದಿದ್ನಾ ನಮ್ ಕುಲ್ಕಣ್ಣಿ?’ ಆಶ್ಚರ್ಯಚಕಿತಳಾಗಿ ಅವಳು ಕೇಳಿದಾಗ

ಹ್ಞೂನಮ್ಮ ಅವತ್ತು ಅಂದಿದ್ದ.

ಹಂಗದ್ರೆ ಕಷ್ಟ, ಯಾಕಂದ್ರ ನಮ್ ಕುಲಕಣ್ಣಿ ಸುಳ್ ಹೇಳಕಿಲ್ಲ ಅತದಂದ್ರೆ ಆಗ್ತದ ಅಂತಾನ ಇಲ್ಲಂದ್ರೆ ಇಲ್ಲ ಅಂತಾನ.

ಹ್ಞೂ ಅದ್ಕ ನಾಳೆ ಗದ್ದೆ ಹಚ್ಚೊಕೆ ಹೊಗ್ತೀನಿ ಸುಮ್ನೆ ಎಲ್ಲಿ ಕಿರಿಕಿರಿ.

ಹ್ಞೇ ನಿಮ್ಮಮ್ಮನ, ನಾಳೆ ಒಂದಿನ ಬಾ ಆದ್ರೆ ಸರಿ ಇಲ್ಲಂದ್ರೆ ಇಲ್ಲ, ನಾಳೆ ಆಗಲಿಲ್ಲಂದ್ರೆ ನಮ್ ಕುಲ್ಕಣ್ಣಿಗೆ ಹೇಳ್ತಿನಿ .

ಆತ ಆಗಲ್ಲ ಅಂದಾನೆ ಎಂದು ಬಾಯಾಗಿನ ನಸಿಯ ಎಂಜಲನ್ನು ಅಂಕಣದಾಗ ಉಗುಳಿದೆ

‘ಥೂ ನಿನೇನೆ ವಲ್ಸು ಇಲ್ಲೆ ಉಗುಳ್ತಿ’ ಎಂದು ಪಕ್ಕದಾಗಿನ ಯಂಕಿ ಅಂದಾಗ

ನಿನ್ ಬೇಸ ಏಳ್ತಿ ಬಿಡಾ ವಲ್ಸಂತ ವಲ್ಸು ನಿನ ಗಂಡ ಕುಡ್ದ್ ಬಂದು ಬಗ್ಲಾಗ ಮಕ್ಕಂಬಂಗಿಲ್ಲೇನು? ಅದರಕ್ಕಿಂತ ಇದು ವಲ್ಸೇನು? ಬಾರಿ, ಹೊಗಲು ಮಾಡ್ತಿವಂತ ಮಾಡ್‌ಬಾರದು ಏನೇ ಎಂಬ ನನ್ನ ಪ್ರಶ್ನೆ ಮಾತುಗಳಿಗೆ ಪಕ್ಕದಲ್ಲೆ ಇದ್ದ ತಳವಾರಿ ‘ಅದೆಲ್ಲಾ ಬಿಡು ನಾನು ಹೋಗಬೇಕು ವಲ್ಯಾಗ ಹಾಲು ಇಟ್ಟೀನಿ ಬೆಕ್ಕು ಗಿಕ್ಕು ಬರತಾವ ನಾಳೆ ಬಾ ಏನೆ ಆಗಲಿಲ್ಲಂದ್ರೆ ನಾನು ಕುಲ್ಕಣ್ಣಿಗೆ ಹೇಳ್ತಿನಿ ಇದೊಂದು ಮಾಡ್ಸಿ ಕೊಡ್ರಿ ಅಂತ ಮಾಡ್ಸತಾನ ನನ್ನ ಮಾತು ಕೇಳ್ತಾನ ಕುಲ್ಕಣ್ಣಿ’ ಎಂದು ಅವಳು ನಮ್ಮ ಮನೆ ಬಿಟ್ಟು ಹೊದಾಗ ನಾನು ಹೋಗ್ತಿನೆ ಅಜ್ಜಿ ಎಂದು ಗದ್ದೆ ಹಚ್ಚೊ ಕೆಲಸಕ್ಕೆ ಬಂದ ಯಂಕಿ ಕೂಡ ಎದ್ದು ಹೊರಹೋಗಳು ಶುರುಮಾಡಿದಳು.

--------

ಆ ಶ್ಯಾಮಲ್ ಕೆಳ್ಗ ಕುಂತ್ಗಂಡ ದೊಡ್ಡು ಸರ‍್ನ ನೋಡಿ ಮಾತಡಿಸಿದ್ರೆ ಆತನ ಕಾಲು ಹಿಡ್ಕಬೇಕಂತ ನಾಗಿ ಹೇಳಿ ಕುಂದ್ರಿಸಿದ್ಳು ಅಲ್ಲಿಗೆ ನಾಗಿ ಮತ್ತೆ ಬಂದು ಕುಲ್ಕಣ್ಣಿ ಬಂದಾನ ಬಾ ಅಂತ ಕರೆದು ಜನ್ದಾಗ ಹೋದ್ಲು, ಅವತ್ತು ನೋಡಿದ ಕೆಂಪನ ಮುಸರಿ ಹುಡುಗ, ಕುಲ್ಕಣ್ಣಿ ಅಂತ ನೆನಪಾಗಿ ಆತನ ಕಾಲು ಬಿಳಾಕೆ ಹೋದೆ.

ಅದ್ಕ ‘ಅಜ್ಜಿ ನಮ್ಮದೇನು ಇಲ್ಲ ಅಲ್ಲಿ ಕುಂತಾನಲ್ಲ ಆತ ಮನ್ಸು ಮಾಡಬೇಕು’ ಎಂದು ಶ್ಯಾಮಾಲ್ದಾಗ ಕುಂತ ದೊಡ್ ಸಾರಿಗೆ ಬೊಳ್ಳು ಮಾಡಿದ, ಇವಾಗೆಲ್ಲ ಗದ್ಲ ಐತಿ ಇನ್ನ ಅರ್ಧಗಂಟೆ ಬಿಟ್ಟು ಆತನ ಕಾಲಿಗೆ ಬಿಳು ಅಲ್ಲಿವರಗೆ ಸುಮ್ಮನೆ ಕುಂತ್ಕ ಅಲ್ಲಿ’ ಎಂದು ಮತ್ತೆ ಅದೇ ಹಳೆ ಜಾಗಕ್ಕೆ ನನ್ನ ಕೂಡ್ಸಿದ್ರು.

ಬಂದೊರೆಲ್ರೂ ಹೂವಿನಾರ ತಾವ್‌ತಾವೆ ಹಕ್ಕೊಂಡು ನಿಂತು ಮತಾಡಿದ್ರೂ, ಮಾತಾಡಿ ಬೇಸರ ಮಾಡ್ಕಂಡು ಎಲ್ರೂ ಬರ‍್ರಿ ಅಂತೇಳಿ ಮತ್ತೆ ಗುಂಪಿನ ಕಡೆ ಕೂಗಿದಾಗ ನಾನು ಹೋಗ ಬೇಕೆನೊ ಎಂದು ಮನಸು ಹೇಳುತ್ತಿದ್ದರು ಕುಲ್ಕಣ್ಣಿ ಹೇಳಿದ ಅರ್ಧಗಂಟೆ ಅಗಿಲ್ಲ ಅನ್ಕಂಡು ಸುಮ್ಮನೆ ಕೂತೆ.

ಅಲ್ಲಿಗೆ ನಾಗಿ ಬಂದವಳೆ ಹೆಂಗ್ಞೆ ಬಾ ಸುಮ್ಮನೆ ಕುಂತಿಯಲ್ಲ ಎಂದು ಹೇಳಿ ನನ್ನ ಎಡಗೈ ಮಣಿಕಂಠವನ್ನು ಹಿಡಿದೆಳೆದು ದೊಡ್ಡ ಸಾರ ಮುಂದೆ ನಿಂತ್ಳು,

‘ಹೇಳ್ ಅಜ್ಜಿ ಏನ್ ಪ್ರಾಬ್ಲಮ್ಮು’ ಎಂದ ದೊಡ್ಡ ಸಾರನ ಪ್ರಶ್ನೆಗೆ ಕುಲ್ಕಣ್ಣಿನೆ ಮುಂದೆ ನಿಂತು ಇವರ್ದು ಸಂಧ್ಯಾ ಸುರಕ್ಷ ಅರ್ಜಿ ತಗಳ್ತಾ ಇಲ್ಲ ಸರ್ ಎಂದ ಅದು ಆಧಾರ ಕಾರ್ಡಗೆ ತಿದ್ದುಪಡಿ ಮಾಡಲು ಹೋದರೆ ಇವ್ರುವು ಬೆರಳು ತಗಳ್ತಾ ಇಲ್ಲ ಸರ್ ಎಂದು ಕುಲ್ಕಣ್ಣಿನೆ ಭಯ ಬಿಳ್ತಾ ಹೇಳ್ದಾಗ, ಯಾರೊ ದೊಡ್ಡೊರು ಇರ‍್ಬೇಕು ಅನ್ಕಂಡು ಅವರ್ನೆ ನೊಡ್ತಾ ನಿಂತೆ.

ಅದೇ ದೊಡ್ಡ ಸಾರು ಮತ್ತೆ ಏನೊ ಪ್ರಾಬ್ಲಮ್ಮ, ಆಪರೇಟ್ರ, ಎಂದು ಪಕ್ಕದಲ್ಲಿದ್ದ ಇನ್ನೊಬ್ಬ ಹುಡುಗ್ನ ಕೇಳಿದ್ರೆ ಅದು ಡಾಟ ಸಮಸ್ಯೆ ಸಾರ್ ಬೆಂಗೂಳ್‌ರಗೆ ಹೋಗಬೇಕು ಎಂದ ತಕ್ಷಣ ‘ಹೇ ಮುದುಕಿ ಆಯ್ತು ಹೋಗು’ ಎಂದು ನಾ ತಂದ ಕಾಗದ ಪತ್ರನ ಕೈಯಿಂದ ಕಸ್ಕಂಡು ಮುಂದೆ ಇಟ್ಕಂಡ.

ಏನು ಹೇಳಿದ್ರು ! ಕೇಳ್ಸ್ಕಳಿಲ್ಲ ಇನ್ನೊಮ್ಮ ಕೇಳ್‌ಬೇಕು ಅನ್ನೊದ್ರೊಳಗೆ ನನ್ನ ಬಲಗೈ ರೆಟ್ಟೆ ಹಿಡಿದು ಮುಂದಕ್ಕೆ ತಳ್ಳಿದ ಒಬ್ಬ, ಮುಂದೆ ಇದ್ದ ಅದೇ ತಳವಾರಿ ನಾಗಮ್ಮ ಇನ್ನೊಬ್ಬ ಕುಲ್ಕಣ್ಣಿ ಮೇಡಂನತ್ತ ಮಾತನಾಡತಿರಬೇಕಾದ್ರ ನಾ ಮುಂದೆ ಹೋಗಿ ನಿಂತೆ.

ಅಜ್ಜಿ ಇಪ್ಪತ್ಸಾವ್ರ ರೆಡಿ ಮಾಡ್ಕಂಡು ಬೆಂಗಳೂರಿಗೆ ಹೋಗು ಎಂದು ಕುಲ್ಕಣ್ಣಿ ಅಂದಾಗ, ಏನ್ ಮಾಡಬೇಕೊ ಗೊತ್ತಿಲ್ದಿಂಗ ನಮ್ಮ ಕುಲ್ಕಣ್ಣಿನ ಹಿಂತಿರುಗಿ ನೋಡಿದೆ ಆಗ ಆತ ದೊಡ್ಡ ಸಾರ್ ಮುಂದೆ ಇರೊ ಟೆಬಲ್ ಮೇಲೆ ಒಂದು ಕೈಯಿಟ್ಟು ಇನ್ನೊಂದು ಕೈನ ಪ್ಯಾಂಟ್ನ ಜೊಬ್ಯಾಗ ತುರಿಕೊಂಡು ಏನೊ ಭಾಷಣ ಬಿಗಿತಿದ್ದ ಜನ ಚಪ್ಪಾಳೆ ಬಡಿತಿದ್ರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.