ADVERTISEMENT

ವೈ.ಕೆ.ಸಂಧ್ಯಾ ಶರ್ಮ ಬರೆದ ಕಥೆ: ಅವರವರ ಭಾವಕ್ಕೆ

ವೈ.ಕೆ.ಸಂಧ್ಯಾಶರ್ಮ
Published 28 ಮೇ 2022, 19:30 IST
Last Updated 28 ಮೇ 2022, 19:30 IST
ಸಾಂದರ್ಭಿಕ ಕಲೆಕಲೆ: ಪ್ರವೀಣ್‌ ಆಚಾರ್ಯ
ಸಾಂದರ್ಭಿಕ ಕಲೆಕಲೆ: ಪ್ರವೀಣ್‌ ಆಚಾರ್ಯ   

ಎದುರು ದಿಕ್ಕಿನಿಂದ ಹಿಂದು ಹಿಂದಕ್ಕೆ ನಡೆಯುತ್ತಾ ಬರುತ್ತಿದ್ದ ಆಸಾಮಿ ಸೀದಾ ಬಂದು ನನ್ನನ್ನು ಗುಮ್ಮಿಯೇ ಬಿಟ್ಟ. ಯಾರಿವನು ವಿಚಿತ್ರಪ್ರಾಣಿ ಎಂದು ಕೆಕ್ಕರಿಸಿದ ನನಗೆ ನೆತ್ತಿ ಬಿರಿದು ಬಂತು ಸಿಟ್ಟು. ಅವನನ್ನು ಬಾಯಿಗೆ ಬಂದಂತೆ ಬಯ್ಯುವ ಮೊದಲು, ಅವನು ‘ಸಾರಿ ಸಾರಿ..’ ಎನ್ನುತ್ತಾ ಬೆನ್ನ ಹಿಂದೆ ಓಡಿಯೇ ಬಿಟ್ಟ.

ಕಣ್ಣುಗಳು ಕಿರಿದಾಗಿ ‘ಇದ್ಯಾವ ಸೀಮೆ ವಾಕಿಂಗು!’-ಎಂದು ರೇಗಿಕೊಂಡು, ಮುನ್ನಡಿ ಇಡುವಷ್ಟರಲ್ಲಿ ಮುಂದೆ ನಡೆಯುತ್ತಿದ್ದವನು ಜಾಗವೇ ಬಿಡಲಿಲ್ಲ. ಹೆಜ್ಜೆ ನಮಸ್ಕಾರದ ರೀತಿ ಅವನು, ಒಂದೊಂದೇ ಹೆಜ್ಜೆಯನ್ನು ಪೋಣಿಸುತ್ತ ನಿಧಾನವಾಗಿ ನಡೆಯುತ್ತಿರುವುದನ್ನು ಕಂಡವನು, ಅವನ ಬೆನ್ನನ್ನು ತುಸು ಅದುಮಿ ನಿಲ್ಲಿಸಿ ಪಕ್ಕದಲ್ಲಿ ಜಾಗ ಮಾಡಿಕೊಂಡು, ‘ಗ್ರಹಚಾರ’ ಎಂದು ಗೊಣಗಿಕೊಂಡು ದೂರದಲ್ಲಿದ್ದ ಒಂಟಿ ಬೆಂಚಿನ ಮೇಲೆ ಹೋಗಿ ಕುಳಿತುಕೊಂಡೆ .

ಮುಖ ಕೋಪದ ಕನ್ನಡಿಯಾಗಿತ್ತು. ‘ವಿಚಿತ್ರ ಮನುಷ್ಯರು, ತಾವೂ ಸರಿಯಾಗಿ ನಡೆಯಲ್ಲ, ನಮಗೂ ಬಿಡಲ್ಲ, ಹೀಗಾದರೆ ನಮ್ಮ ವಾಕಿಂಗ್ ಗತಿಯೇನು?’-ಎಂದು ಒಬ್ಬನೇ ವಟಗುಟ್ಟಿಕೊಂಡವನಲ್ಲಿ, ಅಸಮಾಧಾನ ಇನ್ನೂ ಕುದಿಯುತ್ತಿತ್ತು. ನೆಮ್ಮದಿಯಾಗಿ ಒಂದು ಗಳಿಗೆಯೂ ಕೂತಿರಲಿಲ್ಲ.

ADVERTISEMENT

ಟಪ್ಪೆಂದು ತಲೆಯ ಮೇಲೆ ಮರದ ಟೊಂಗೆಯಿಂದ ಏನೋ ಬಿತ್ತು. ಗಡಬಡಿಸೆದ್ದು ಮೇಲೆ ನೋಡುತ್ತ ನೆತ್ತಿಯನ್ನು ಮುಟ್ಟಿಕೊಂಡೆ. ಯಾವುದೋ ಪಕ್ಷಿ ಹೇತಿತ್ತು. ಬೆರಳೆಲ್ಲ ಅಂಟು ಅಂಟು..ಬೆಳ್ಳಗೆ ಕೈತುಂಬಾ. ಮೂಗಿನ ಬಳಿ ಅಂಗೈ ಸೋಕಿಸಿದವನು, ‘ಥೂ ದರಿದ್ರವು...ಒಂದ್ನಿಮಿಷ ಹಾಯಾಗಿ ಕೂರಕ್ಕೆ ಬಿಡಲ್ಲ’ ಎಂದು ಶಪಿಸುತ್ತ ತಲೆಯೆತ್ತಿ ನೋಡಿದೆ ದೂರ್ವಾಸ ಋಷಿಯಂತೆ, ಕಣ್ ದೃಷ್ಟಿಯಿಂದಲೇ ಅದು ಉರಿದು ಬೀಳುವಂತೆ.

‘ಥುಪಕ್...’...ಮತ್ತೆ ಮುಖದ ತುಂಬಾ ಅದರ ಗಲೀಜು ರಂಗೋಲಿ...’ -ಹೌಹಾರಿದೆ. ಜೇಬಿನಿಂದ ಕರವಸ್ತ್ರ ಹೊರಗೆಳೆದು ತೆಗೆದು ಅಸಹ್ಯಪಡುತ್ತಲೇ ಮುಖವನ್ನು ತೀಡಿ ಒರೆಸಿಕೊಂಡವನು, ದುಬುದುಬು ಅತ್ತ ಇದ್ದ ನಲ್ಲಿಯತ್ತ ನಡೆದು ಮೂರ್ನಾಲ್ಕು ಸಲ ಮುಖವನ್ನು ತಿಕ್ಕಿ ತಿಕ್ಕಿ ತೊಳೆದರೂ ಸಮಾಧಾನವಾಗಲಿಲ್ಲ. ಹಾಗೇ ಕರ್ಚೀಫನ್ನೂ ಎರಡೂ ಕೈಯಲ್ಲಿ ತೀಡಿ ನಲ್ಲಿಯಿಂದ ಇಳಿಯುತ್ತಿದ್ದ ನೀರಿನ ಕೆಳಗೆ ಹಿಡಿದು ಉಜ್ಜಿ ತೊಳೆದೆ.

ಸಿಟ್ಟಿನಿಂದ ತುಟಿಗಳು ಪಿಟಿ ಪಿಟಿ ಅಲ್ಲಾಡಿ, ಈ ಸಲ ಯಾವ ಮರಗಳ ನೆರಳೂ ಇಣುಕದ ಮೂಲೆಯ ಇನ್ನೊಂದು ಬೆಂಚು ಆರಿಸಿಕೊಂಡು ಕುಳಿತವನು, ಒದ್ದೆ ಕರವಸ್ತ್ರವನ್ನು ಬೆನ್ನ ಒರಗುಕಲ್ಲ ಮೇಲೆ ಹರವಿ ನಿಟ್ಟುಸಿರು ಕಕ್ಕಿದೆ. ಕೈ ಗಡಿಯಾರ ನೋಡಿಕೊಂಡೆ. ಪ್ರತಿದಿನ ಈ ದೊಡ್ಡ ಪಾರ್ಕನ್ನು ಹತ್ತು ಸಲ ರೌಂಡ್ ಹಾಕುತ್ತಿದ್ದವನು ಇಂದು ಸರಿಯಾಗಿ ನಾಲ್ಕುಸುತ್ತೂ ಹಾಕಿಲ್ಲ. ಅದೂ ದಾರಿಯುದ್ದಕ್ಕೂ ಬರೀ ಅಡೆ ತಡೆ ಈ ವಿಚಿತ್ರ ನಂಬಿಕೆಯ ಜನಗಳಿಂದ. ದೂರದಲ್ಲೊಬ್ಬ ವಾಸ್ತುಪ್ರಕಾರ ದಿಕ್ಕುಗಳಿಗೆ ನಮಸ್ಕಾರ ಮಾಡುತ್ತಾ, ವಿಚಿತ್ರವಾಗಿ ಕೈ ಕಾಲುಗಳನ್ನು ಅಲ್ಲಾಡಿಸುತ್ತಿದ್ದ ಪಾರ್ಶ್ವವಾಯು ಪೀಡಿತನಂತೆ.

ನನ್ನ ವಾಕು ಇಂದು ಅರ್ಧದಲ್ಲೇ ತುಂಡಾಗಿತ್ತು. ಬ್ರಿಸ್ಕ್ ವಾಕ್ ಮಾಡಿ ಎಂದ ಡಾಕ್ಟರ ಸಲಹೆಯಂತೆ ಈ ಪಾರ್ಕಿನಲ್ಲಿ ಜೋರಾಗಿ ನಡೆಯುವುದು ದುಸ್ಸಾಹಸವೇ ಸರಿ ಎನಿಸಿತ್ತು. ಕೆಲವರು ಜೋರಾಗಿ ಮಂತ್ರ ಪಠಿಸುತ್ತಾ ಗಾಳಿಯಲ್ಲಿ ಕೈಕಾಲುಗಳನ್ನು ಎತ್ತಿ ಆಡಿಸುತ್ತ ನಡೆಯುತ್ತಿದ್ದರೆ ಅಕ್ಕಪಕ್ಕದವರು ಅವರ ಬೀಸು ತೋಳುಗಳು ತಮಗೆಲ್ಲಿ ತಗುಲುವುದೋ ಎಂಬ ಅಂಜಿಕೆಯಲ್ಲಿ ತಾವೇ ಪಕ್ಕಕ್ಕೆ ಸರಿದುಕೊಳ್ಳುತ್ತಿದ್ದರು.

ಈ ಚಿತ್ರ-ವಿಚಿತ್ರ ತಮಾಷೆಗಳನ್ನೆಲ್ಲ ನಿರುಕಿಸುತ್ತ ಕುಳಿತಿದ್ದೆ. ನನ್ನ ಮುಂದೆ ಹಾದು ಹೋಗುವವರನ್ನೆಲ್ಲ ಅಯಾಚಿತವಾಗಿ, ಅನಿವಾರ್ಯವಾಗಿ ನಾನು ಗಮನಿಸಬೇಕಾಗಿ ಬಂದು, ನನ್ನ ನೋಟ ಅವರ ಮೇಲೆ ಕಚ್ಚಿಕೊಳ್ಳುತ್ತಿತ್ತು. ಹೆಂಗಸರ ಗುಂಪು ಆಮೆಯ ನಡಿಗೆಯಲ್ಲಿ ಊರಿನವರ ವಿಷಯಗಳನ್ನೆಲ್ಲ ಸಾಣೆ ಹಿಡಿಯುತ್ತ ಒಂದೊಂದು ರಾಗದಲ್ಲಿ ಚರ್ಚಿಸುತ್ತ ಕಾಲೆಳೆಯುತ್ತಿದ್ದರೆ ನನಗೋ ತಾತ್ಸಾರದ ನಗು. ವಾಕಿಂಗ್ ಪರಿಣಾಮ, ಸುಖವನ್ನು ಅನುಭವಿಸದೆ, ವ್ಯರ್ಥ ಕಾಲಹರಣ ಮಾಡುತ್ತಿರುವ ಮಾತಿನ ಚಟದ ಗಂಡಸರ ಬಗ್ಗೆಯೂ ನನ್ನದು ಅದೇ ದೂರು.

ಸರಿಯಾಗಿ ನಾನು ಕುಳಿತ ಜಾಗದಿಂದ ನಾಲ್ಕು ಮೀಟರ್ ದೂರದಲ್ಲಿ ನನ್ನ ಮೂಗಿನ ನೇರಕ್ಕೆ ಒಂದು ಬಿಲ್ವಪತ್ರೆಯ ಮರ. ಅದು ಯಾವ ಮರ ಎಂದು ಮೊದಲು ನನಗೆ ಗೊತ್ತೇ ಇರಲಿಲ್ಲ. ಅದರ ಪಕ್ಕ ಹಾಯ್ದು ಹೋಗುವ ಶೇ. ತೊಂಭತ್ತು ಮಂದಿ ಅದರಲ್ಲೂ ನಡುವಯಸ್ಸಿನ, ವಯಸ್ಸಾದ ಹೆಂಗಸರು ಆ ಮರಕ್ಕೆ ಭಯ-ಭಕ್ತಿಯಿಂದ ಮೂರು ಮೂರು ಪ್ರದಕ್ಷಿಣೆ ಹಾಕಿ ಮರವನ್ನು ಮುಟ್ಟಿ ಕಣ್ಣಿಗೊತ್ತಿಕೊಂಡು ತಮ್ಮ ಜನ್ಮದ ಪಾಪಗಳನ್ನೆಲ್ಲ ಕಳೆದುಕೊಳ್ಳುವ ಸುಲಭ ಉಪಾಯ ಕಂಡುಕೊಂಡ ಅವರು ಅಮಾಯಕರೋ ಅಥವಾ ಪ್ರಾಜ್ಞರೋ ಎಂದು ಯೋಚಿಸಿ ನಾನು ಗೊಂದಲಕ್ಕೆ ಬಿದ್ದಿದ್ದೆ.

ಇದೇ ದೃಶ್ಯ ನೋಡೀ ನೋಡಿ ಸಾಕಾಗಿ ಮೇಲೆದ್ದು, ವಾಕಿಂಗ್ ಮುಂದುವರಿಸೋಣ ಎಂದು ಮೇಲೆದ್ದು, ಪಾರ್ಕಿನ ಇನ್ನೊಂದು ಪಾರ್ಶ್ವಕ್ಕೆ ಹೆಜ್ಜೆ ಹಾಕಿದವನೇ ಮುಖ ಕೆಟ್ಟದಾಗಿ ಮಾಡಿ ಮೂಗು ಮುಚ್ಚಿಕೊಂಡೆ. ನಡೆಯುವ ಕಾಬ್ಲಾರ್ ಸ್ಟೋನ್ ಪಥದಲ್ಲಿ ಸಣ್ಣಗೆ ಹರಿವ ಹಾಲಿನ ಕೊಳೆತ ವಾಸನೆ ಅಸಾಧ್ಯ ಹಿಂಸೆ ತಂದಿತು. ಅಲ್ಲಿಂದ ಇಪ್ಪತ್ತು-ಮೂವತ್ತು ಮೀಟರ್ ಹಿಂದೆ ಸಣ್ಣ ಕಲ್ಲುಮಂಟಪ. ಅದರೊಳಗೆ ದೊಡ್ಡ ಹುತ್ತ. ಹುತ್ತ ಎಂದರೆ ಮಣ್ಣಿನದಲ್ಲ. ಸಿಮೆಂಟಿನದು. ಅದನ್ನು ನಾನು ಚಿಕ್ಕವನಿದ್ದಾಗ ನೋಡಿದ ನೆನಪು ಚೆನ್ನಾಗಿದೆ. ಆಗ ಮಂಟಪ ಇರಲಿಲ್ಲ. ಪಾರ್ಕಿನಲ್ಲಿ ಸಿಕಾಪಟ್ಟೆ, ಮುಳ್ಳಿನ ಗಿಡ-ಗೆಂಟೆಗಳು. ಮರಗಳೂ ಇಷ್ಟು ದೊಡ್ಡದಾಗಿ ಬೆಳೆದಿರಲಿಲ್ಲ. ಒಂದು ಮೂಲೆಯಲ್ಲಿ ಗಿಡಗಳ ಪಕ್ಕದಲ್ಲಿದ್ದ ಸಣ್ಣ ಮಣ್ಣಿನ ಹುತ್ತ, ಕುಸಿಯದಂತೆ ಸಿಮೆಂಟು ಮೆತ್ತಿ ಭದ್ರ ಮಾಡಿದ್ದರು ಯಾರೋ ಆಸ್ತಿಕರು. ಷಷ್ಠಿ ದಿನಗಳಲ್ಲಿ ಹುತ್ತಕ್ಕೆ ಹಾಲೆರೆಯಲು ಅನುಕೂಲವಾಗಲಿ ಎಂದಿರಬಹುದು. ಆ ಮನುಷ್ಯ ನಿರ್ಮಿತ ಹುತ್ತದ ಮೇಲೆ ಯಾರೋ ಭಕ್ತಾದಿಗಳು ಒಂದು ಸಣ್ಣ ಮಂಟಪ ಕಟ್ಟಿಸಿ, ಹುತ್ತದ ಸುತ್ತ ಕಲ್ಲು ಹಾಸು ಹಾಕಿಸಿದ್ದರು. ಮತ್ತೆ ಕೆಲವು ವರ್ಷಗಳಲ್ಲಿ ಯಾರೋ ಭಕ್ತಾದಿಗಳು ನೀಟಾಗಿ ಅಲ್ಲಿ ಮೊಸಾಯಕ್ ಫ್ಲೋರ್ ಹಾಕಿಸಿದ್ದರು. ಆಮೇಲೆ ಶುರುವಾಯ್ತು, ನಾನು ಕಾಣು ಕಾಣುತ್ತಿದ್ದ ಹಾಗೇ ನಾಟಕದ ಅಂಕಗಳು.

ಅದು ಯಾರು ಪ್ರಾರಂಭಿಸಿದರೋ..ನಾಗರ ಚೌತಿ, ಷಷ್ಠಿ ದಿನಗಳಲ್ಲಿ ಬೆಳ್ಳಂ ಬೆಳಗ್ಗೆಯೇ ಕೈಯಲ್ಲಿ ಹರಿದ್ರಾ-ಕುಂಕುಮ, ಹಣ್ಣಿನ ತಟ್ಟೆ, ಪೂಜಾ ಸಾಮಗ್ರಿಗಳನ್ನು ಹಿಡಿದು ಬಂದ ಮುತ್ತೈದೆಯರು, ಯುವತಿಯರು, ಅವರ ಬೆಂಗಾವಲಿನ ಗಂಡಸರು, ಹಿಂದೆ ಚಿಳ್ಳೆ-ಪಿಳ್ಳೆಗಳು, ಪಾರ್ಕ್ ತುಂಬಾ ಜನಜಾತ್ರೆ. ಕ್ಯಾಲೆಂಡರ್ ನೋಡದಿದ್ದರೂ ನಂಗೆ ಅಂದು ನಾಗರ ಚೌತಿಯೋ ಷಷ್ಠಿಯೋ ಇರಬೇಕೆಂದು ತಿಳಿದುಬಿಡುತ್ತಿತ್ತು.

ದೂರದಲ್ಲಿ ಚಪ್ಪಲಿಗಳ ರಾಶಿ. ಮಂಟಪದೊಳಗೆ, ಹುತ್ತ ಕಾಣದ ಹಾಗೆ ಜನಗಳು ಹುತ್ತಗಟ್ಟಿದ್ದರು. ಹಾಲು ಕುಡಿಯದ, ಹುತ್ತವಲ್ಲದ ಹುತ್ತದೊಳಗೆ, ಹಾವಿನ ಪತ್ತೆಯಿರದ ಬಿಲದೊಳಗೆ ಜನ ಹಾಲು ಸುರಿದದ್ದೇ ಸುರಿದದ್ದು. ತೆಂಗಿನಕಾಯಿ ಒಡೆದದ್ದೇ ಒಡೆದದ್ದು..ದೀಪ ಹಚ್ಚಿ, ಊದಿನಬತ್ತಿಯ ಹೊಗೆ ಹಬ್ಬಿಸುತ್ತಿದ್ದರು. ಅವರು ಸುರಿದ ಹಾಲಿನ ಹೊಳೆ ಇಳಿಜಾರಿನ ನಡಿಗೆಯ ಪಥದಲ್ಲಿ ಪಾಪನಾಶಿನಿಯಂತೆ ಜುಳು ಜುಳು..ದಿನವೆರಡರಲ್ಲಿ ಕೆಂಗೇರಿ ಚರಂಡಿ ದ್ರವ್ಯದ ನಾತ. ಬರಿಗಾಲಲ್ಲಿ ನಡೆಯುವ ಅಭ್ಯಾಸ, ಇರಾದೆ ಇದ್ದವರ ಕಾಲಿಗೆ ಅಂಟೋ ಅಂಟು.

ಅತ್ತ ಕೆಕ್ಕರಿಸಿ ನೋಡಿದ ನನ್ನ ನೋಟದಲ್ಲಿ ಹೇವರಿಕೆ ಮಡುಗಟ್ಟಿತ್ತು. ಅವಡುಗಚ್ಚಿದ ತುಟಿಗಳ ದಡ ಮೀರಿ ಚಿಮ್ಮಲು ಹವಣಿಸುತ್ತಿದ್ದ ಸಿಟ್ಟೂ ಕೂಡ.

ಇತ್ತ ತಿರುಗಿದರೆ, ಒಬ್ಬ ವಯಸ್ಸಾದ ವ್ಯಕ್ತಿ, ಕೈಯಲ್ಲಿ ಒಂದು ಪ್ಲಾಸ್ಟಿಕ್ ಕವರಿನಿಂದ ಹಿಡಿ ಸಕ್ಕರೆಯನ್ನು ತೆಗೆದು, ಇರುವೆಯ ಗೂಡುಗಳನ್ನು ಹುಡುಕಿಕೊಂಡು ಹೋಗಿ ಅದರೊಳಗೆ ಉದುರಿಸುತ್ತಿದ್ದ. ಅವನನ್ನು ನೋಡಿಕೊಂಡು ಇನ್ನೊಬ್ಬ ಬ್ರೆಡ್ ತುಂಡುಗಳನ್ನು ಮರದ ಮೇಲಿದ್ದ ಕಾಗೆಗಳನ್ನು ‘ಕಾ..ಕಾ..’ ಎಂದು ಅಕ್ಕರೆಯಿಂದ ಆಹ್ವಾನಿಸುತ್ತಾ, ಕಾಕರಾಯ ಬಳಗಕ್ಕೆ ಲೋಫ್ ಲೋಫ್ ಬ್ರೆಡ್ ವಿತರಿಸುತ್ತಿದ್ದ.

ಎರಡು ರೌಂಡ್ ಹಾಕಿದ ಶಾಸ್ತ್ರ ಮುಗಿಸಿ, ಪಾರ್ಕಿನ ನಡುವೆ ಹೊಸದಾಗಿ ಹಾಕಲಾಗಿದ್ದ ವ್ಯಾಯಾಮ ಮಾಡುವ ಜಿಮ್ ಉಪಕರಣಗಳ ಗಡಣದತ್ತ ಹತಾಶನಾಗಿ ಸಾಗಿದೆ. ಮನಸ್ಸು ಇನ್ನೂ ಸುತ್ತಣ ದೃಶ್ಯಗಳತ್ತ ಭಸ್ಕಿ ಹೊಡೆಯುತ್ತಿತ್ತು. ನಂಗೆ ನಾನೇ ‘ಕೂಲ್ ಕೂಲ್..’ ಎಂದು, ಸಾಂತ್ವನ ಹೇಳಿಕೊಂಡು ಎದೆಯನ್ನು ನೀವಿಕೊಂಡೆ.

ಹೊತ್ತೇರಿದಂತೆ ಜನ ಕರಗುತ್ತಿದ್ದರು. ಮನೆಗೆ ಹೋಗುವ ಧಾವಂತವೇನಿರಲಿಲ್ಲ ನನಗೆ. ಕಡೆಯಲ್ಲಿ ನಿರಾಳವಾಗಿ ಪಾರ್ಕನ್ನು ಇನ್ನೂ ನಾಲ್ಕು ಸುತ್ತು ಹಾಕಿ ವಾಕ್ ಮುಗಿಸಿಕೊಂಡು ಹೋಗುವ ಬಯಕೆ ಇದ್ದುದರಿಂದ ನಿಧಾನವಾಗಿ ವ್ಯಾಯಾಮ ಮಾಡುವುದರಲ್ಲಿ ನಿರತನಾಗಿದ್ದೆ.

‘ಒಂದು..ಎರಡು..ಮೂರು..’ -ಎಣಿಸುತ್ತ ಪುಲ್ ಅಪ್ಸ್ ಮಾಡತೊಡಗಿದೆ.

ಸ್ವಲ್ಪ ಹೊತ್ತಿನ ನಂತರ ಒಬ್ಬ ನಡುವಯಸ್ಕ ಪಾರ್ಕಿನ ಗೇಟು ತೆಗೆದು ಒಳಬಂದವನು, ನನ್ನ ಕಣ್ಣು ನಿಲುಕಿನ ಒಂದು ಜಾಗ ಅರಿಸ್ಕೊಂಡು, ಚಪ್ಪಲಿಯನ್ನು ಒಂದು ಮಗ್ಗುಲಿಗೆ ಬಿಟ್ಟು, ಪೂರ್ವಾಭಿಮುಖನಾಗಿ ಚಕ್ಕಂಬಕ್ಕಳ ಹಾಕಿ ನೆಲದ ಮೇಲೆ ಕೂತವನು, ಸೂರ್ಯದೇವನಿಗೆ ಕಣ್ಮುಚ್ಚಿ ಕೈಮುಗಿದು ಧ್ಯಾನಸ್ಥನಾದ.

ನನ್ನ ಪಾಡಿಗೆ ನಾನು ವ್ಯಾಯಾಮ ಮಾಡುತ್ತಿದ್ದೆ. ಅರ್ಧ ಗಂಟೆ ಕಳೆಯಿತು. ಅರೇ...ಅವನು ಇನ್ನೂ ಅದೇ ಕೈಮುಗಿಯುವ ಭಂಗಿಯಲ್ಲೇ ಫ್ರೀಜ್ ಆಗಿ, ಪ್ರತಿಮೆಯಂತೆ ಕುಳಿತಿದ್ದ!.. ಅಚ್ಚರಿಯಾಯಿತು..ಅವನನ್ನು ದಿಟ್ಟಿಸಿ ನೋಡಿಯೇ ನೋಡಿದೆ. ಹೌದು, ಈ ಥರ ಅವನು ಧ್ಯಾನಾರೂಢನಾಗಿ ಕುಳಿತದ್ದನ್ನು ಒಂದು ವಾರದಿಂದ ತಪ್ಪದೆ ಗಮನಿಸುತ್ತಲೇ ಇದ್ದೇನೆ. ಇದೇ ಟೈಮ್..ಅದೇ ಭಂಗಿ..ಅದೇ ಭಾವ...!...ಇಂದು ಕುತೂಹಲ ಚಿಮ್ಮಿ, ಅವನ ಮುಖವನ್ನೇ ದುರ್ಬೀನು ಕಣ್ಣುಗಳಿಂದ ದಿಟ್ಟಿಸಿದೆ.

ಕುರುಚಲು ಗಡ್ಡ, ಒಳಗೆ ಹುದುಗಿ ಹೋಗಿದ್ದ ಗುಳಿ ಬಿದ್ದ ಕಣ್ಣುಗಳು, ಕ್ಷೌರ ಮಾಡಿಸದ ಅರೆ ನರೆತ ಕೊಂಚ ಉದ್ದಗೂದಲು, ಬಡಕಲು ದೇಹ. ಎಲ್ಲಕ್ಕಿಂತ ಮುಖದಲ್ಲಿ ನೆರೆ ನಿಂತ ದೈನ್ಯತಾ ದುಃಖಭಾವ ನನ್ನನ್ನು ಕದಲಿಸಿತು.

ಮೆಲ್ಲನೆ ತುಳಿಯುತ್ತಿದ್ದ ಸೈಕಲ್ಲನ್ನು ಬಿಟ್ಟು ಅವನತ್ತ ನಡೆದೆ.

ಉಹೂಂ... ಅವನಿಗೆ ಸುತ್ತಮುತ್ತಲ ಯಾವುದರ ಪರಿವೆಯೂ ಇಲ್ಲ. ಹತ್ತಿರ ಬಂದ ನನ್ನ ಆಕೃತಿಯತ್ತಲ್ಲೂ ಅರಿವಿಲ್ಲ. ಬಾಗಿ ನೋಡಿದೆ.... ಕಣ್ಣರಳಿಸಿ, ಅವನ ಮುಖದಲ್ಲಿ ಹುಗಿದುಹೋದ ಭಾವಗಳನ್ನು ಅಗೆಯುವ ನೋಟವನ್ನು ತೂರಿಬಿಟ್ಟೆ.

ಮೆತ್ತಿಕೊಂಡ ತುಟಿಗಳು. ಮಂತ್ರ ಪಠಿಸುತ್ತಿಲ್ಲ. ಕಣ್ಣ ಕುಣಿಕೆಯಲ್ಲಿ ಹೊರಚಿಮ್ಮುವಂತಿದ್ದ ಸಣ್ಣ ನೀರ ಬಿಂದು.

ಹತ್ತಾರು ನಿಮಿಷ.., ನಾನೂ ಕಲ್ಲಂತೆ ನಿಂತಿದ್ದರೆ, ಅವನೂ ಶಿಲಾಪ್ರತಿಮೆಯಂತೆ ನೆಲಕ್ಕೆ ಅಂಟಿಕೊಂಡೇ ಇದ್ದ.

ನನಗೆ ಇನ್ನು ತಡೆಯದಾಯಿತು.

‘ಏನಪ್ಪಾ, ನಿನ್ನ ಹೆಸರೇನು?’ ಎನ್ನುತ್ತಾ ಅವನ ಭುಜ ತಡವಿ ಎಚ್ಚರಿಸಿದೆ.

ಅವನು, ಮೈಕೊಡವಿ ಗಾಬರಿಯಿಂದ ಕಣ್ತೆರೆದು ಎದ್ದು ನಿಂತ. ನನ್ನನ್ನೇ ಮಿಕ ಮಿಕ ದಿಟ್ಟಿಸಿದ. ಮುಖದಲ್ಲಿ ಗಲಿಬಿಲಿ.

‘ಸಾರ್ ...’ ತೊದಲಿದ.

‘ಯಾರಪ್ಪ ನೀನು...ಯಾಕೆ ಹೀಗೆ ವಾರದಿಂದ ಕೂತ್ಕೋತಾ ಇದ್ದೀಯಲ್ಲ...ನಿನ್ನ ಹೆಸರೇನು?’-ದಬದಬ ಪ್ರಶ್ನೆಗಳನ್ನು ಒಂದೇ ಉಸುರಿನಲ್ಲಿ ಕೇಳತೊಡಗಿದೆ ಮಿತಿ ಮೀರಿದ ಕುತೂಹಲದಿಂದ.

‘ಯಾಕ್ ಸಾರ್ ...?’- ತನ್ನಿಂದ ಏನಾದರೂ ತಪ್ಪಾಯಿತೇ ಎಂಬ ಗೊಂದಲ.

ಅವನ ಗಾಬರಿಯನ್ನು ನಿವಾರಿಸುವವನಂತೆ- ನಗುಮುಖದಿಂದ ಅವನ ಬಳಿಸಾರಿ, ಅವನ ಭುಜದ ಮೇಲೆ ಹಗುರವಾಗಿ ಕೈಯಿರಿಸಿದೆ.

‘ವಾರದಿಂದ ನೋಡ್ತಾ ಇದ್ದೀನಿ, ಇಲ್ಲೇನು ಮಾಡ್ತಾ ಇದ್ದೀಯಾ..ಏನಪ್ಪ ಸಮಾಚಾರ?’ ಅನುನಯದಿಂದ ಕೇಳಿದಾಗ, ಅವನು ತುಸು ಸಡಿಲವಾದ. ಮಾತು ಹೊರಡಲಿಲ್ಲ. ಪಿಳಿ ಪಿಳಿ ನಿರುಕಿಸಿದ.

‘ಹೇಳಪ್ಪ...ಏನು ಸಮಸ್ಯೆ?’

ನನ್ನ ದನಿಯಲ್ಲಿ ಅಂತಃಕರಣದ ಮಿಡಿತ ಕಂಡಿರಬೇಕು ಅವನಿಗೆ. ಸೊರಗಿದ ದನಿಯಲ್ಲಿ ಮೆಲ್ಲನೆ ಉಸುರಿದ:

‘ಇರೋ ಒಬ್ಬನೇ ಮಗನ್ನ ಆಸ್ಪತ್ರೆಗೆ ಸೇರಿಸಿದ್ದೀನಿ...ಹೊಟ್ಟೆನೋವು ಅಂತ ತಿಂಗಳಿಂದ ಅಳ್ತಾ ಇದ್ದೋನು, ವಾರದ ಕೆಳಗೆ ನೋವು ತಡೆಯಲಾರದೆ ಜ್ಞಾನ ತಪ್ಪಿ ಬಿದ್ದೇ ಹೋದ.. ಡಾಕ್ಟ್ರು, ಅಪರೇಷನ್ ಆಗಲೇಬೇಕು, ಇಲ್ಲದಿದ್ರೆ ಮಗ ಉಳಿಯಲ್ಲ ಅಂತ ಹೇಳಿದಾರೆ... ಅಷ್ಟೊಂದು ದುಡ್ಡು ನಾನೆಲ್ಲಿಂದ ತರಲಿ ಬಡವ..’-ಅವನ ಕೆನ್ನೆಯ ಮೇಲೆ ಕಣ್ಣೀರು ಗೆರೆ ಎಳೆಯಿತು.

ನನ್ನ ಕರುಳೊಳಗೆ ಯಾರೋ ಕೈಹಾಕಿ ಹಿಂಡಿದಂಥ ನೋವು...ಅವನ ನೋವು ಕಿಕ್ಕಿರಿದ ಮುಖವನ್ನು ದಿಟ್ಟಿಸಲಾರದೆ, ನೋಟ ತಪ್ಪಿಸಿ, ಕೇಳಿದೆ. ‘ನಿನ್ನ ಹೆಸರೇನಪ್ಪ..ಮಗ ಯಾವ ಆಸ್ಪತ್ರೆಯಲ್ಲಿದ್ದಾನೆ?’

‘ನನ್ನೆಸ್ರು ನಂಜುಂಡ.. ಮಗನಿಗೆ ಹದಿನಾರು ವರ್ಷ... ಕಾಲೇಜ್ನಲ್ಲಿ ಓದ್ತಾ ಇದಾನೆ...ಇಲ್ಲೇ ಅಗೋ ನೋಡಿ ಆ ಕಡೆ ಕಾಣ್ತಿದೆಯಲ್ಲ ಆಸ್ಪತ್ರೆ, ಅಲ್ಲೇ ಸೇರಿಸಿದೀನಿ....’- ಎಂದು ನನ್ನ ಪ್ರಶ್ನೆಗಳಿಗೆಲ್ಲ ವಿಧೇಯತೆಯಿಂದ ಉತ್ತರಿಸುತ್ತ, ಆಸ್ಪತ್ರೆ ಇದ್ದ ದಿಕ್ಕಿನತ್ತ ನಂಜುಂಡ ಕೈ ಮಾಡಿ ತೋರಿದ.

‘ಸರಿ, ನೀನು ದಿನಾ ಇಲ್ಲೇನು ಮಾಡ್ತಾ ಇದ್ದೀಯ?’

‘ಏನು ಮಾಡೋದು ಸಾರ್.. ಆ ದೇವರು ಬಿಟ್ರೆ ನಮಗಿನ್ಯಾರು ಗತಿ....ಅವನ ಮಡಿಲಿಗೇ ನನ್ಮಗನ್ನ ಹಾಕಿದೀನಿ....ಯಾರೋ ನಾಗರದೋಷ ಅಂದ್ರು, ಇನ್ಯಾರೋ ಸೂರ್ಯ ಹುಟ್ಟೋ ದಿಕ್ಕಿಗೆ ಕೂತು ಬೇಡ್ಕೋ ಅಂದ್ರು...ಮಗ ಬದುಕ್ತಾನೇ ಅಂದ್ರೆ ನಾ ಏನ್ ಮಾಡಕ್ಕೂ ಸಿದ್ಧ ಸಾರ್..ಅದ್ಕೆ, ದಿನಾ ಇಲ್ಲಿ ಕುಂತು ಆ ದೇವ್ರನ್ನ ಬೇಡ್ಕೊಂತಾ ಇದ್ದೀನಿ’

‘ನಿನ್ನ ದೇವರು ಬಂದ್ನಾ...ನಿನಗೇನಾದ್ರೂ ಸಹಾಯ ಸಿಗೋ ದಾರಿ ತೋರಿಸಿದ್ನಾ?’- ಅವನ ಮುಗ್ಧತೆ, ಅಸಹಾಯಕತೆ ಕಂಡು ನನ್ನ ಮನಸ್ಸು ಚುಳ್ ಎಂದಿತು.

‘ಇಲ್ಲ ಸಾರ್ ..ಇನ್ನೂ ದುಡ್ಡು ಹೊಂದಿಸಕ್ಕಾಗಿಲ್ಲ...ನಾಳೆ ಆಪರೇಶನ್ ಆಗ್ಲೇ ಬೇಕೂಂತ ಹೇಳಿದ್ದಾರೆ... ನಾ ಕೆಲ್ಸ ಮಾಡೋ ಜಾಗದಲ್ಲಿ ಹಣ-ಸಾಲ ಸಿಗೋದಿರ್ಲಿ, ನಾಳೆಯಿಂದ ಕೆಲ್ಸಕ್ಕೇ ಬರ್ಬ್ಯಾಡ ಅಂತ ಯಜಮಾನ್ರು ರೇಗಿ ಬಿಟ್ರು, ಏನ್ಮಾಡ್ಬೇಕೋ ಗೊತ್ತಾಗ್ತಿಲ್ಲ ಸಾರ್...ಎಲ್ಲಕ್ಕೂ ಈ ನಮ್ಮಪ್ಪನ್ನೇ ನಂಬೀವ್ನಿ’ -ಎಂದು ಎದುರಿಗಿದ್ದ ಹುತ್ತದೊಳಗಿರಬಹುದಾದ ನಾಗಪ್ಪನತ್ತ ಕೈ ಜೋಡಿಸಿದ ಆರ್ತನಾಗಿ.

ನನ್ನ ಮನದೊಳಗೆ ಸರಸರನೆ ಏನೇನೋ ವಿಚಾರಗಳು ಲಗ್ಗೆ ಹಾಕಿದವು. ಅವನ ದೈನ್ಯಸ್ಥಿತಿ ಕಂಡು ಮನಸ್ಸು ವ್ಯಸ್ತವಾಯಿತು. ದೀರ್ಘವಾಗಿ ಆಲೋಚಿಸುತ್ತ- ‘ನೋಡಪ್ಪ, ನಾನು ಹೇಳಿದ ಹಾಗೇ ನೀನು ಕೇಳಿದರೆ, ನಿನಗೆ ನಾ ಸಹಾಯ ಮಾಡ್ತೀನಿ..ಆಗಬಹುದಾ?’ – ಎಂದೇ ದೃಢವಾದ ಸ್ವರದಲ್ಲಿ. ಅವನಿಗೆ ಸಹಾಯ ಮಾಡಬೇಕೆಂದು ನಾನು ನಿರ್ಧರಿಸಿಯಾಗಿತ್ತು.

ಏನಾಗ್ತಿದೆ ಎಂದು ಗೊತ್ತಾಗುವಷ್ಟರಲ್ಲಿ ನಂಜುಂಡ, ನನ್ನ ಕಾಲಿಗೆರಗಿಯೇ ಬಿಟ್ಟಿದ್ದ. ಸಾಷ್ಟಾಂಗ.

‘ಸಾರ್...ಸಾರ್....ನೀವೇನೇಳಿದ್ರೂ, ನಾ ಕೇಳ್ತೀನಿ, ಹೇಳಿ ಸಾರ್...’-ದೈನ್ಯತೆಯ ಅಪರಾವತಾರವಾದ.

‘ವಾರದಿಂದ ಒಂದೇಸಮನೆ ನೀನು ದೇವರನ್ನ ಕೇಳ್ಕೋತಾ ಇದ್ದೀಯ..ನಿನ್ನ ದೇವರು ಬಂದನೇನಯ್ಯ...ಹೂಂ..ಅವನು ಬರೋದೂ ಇಲ್ಲ..ಇನ್ನು ಅವನ್ನ ಬಿಟ್ ಹಾಕು..ನನ್ನ ಮಾತು ಕೇಳು, ಇವತ್ತಿನಿಂದ ನೀನು ಅವನನ್ನ ಪೂಜಿಸ್ಬೇಡ. ಅವನನ್ನ ನಂಬಬೇಡ...ನಿನ್ನ ಪ್ರಯತ್ನ ನೀನು ಮಾಡು...’

ನನ್ನ ಮಾತು ಅವನಿಗೆ ವಿಚಿತ್ರವೆನಿಸಿರಬೇಕು. ನಂಜುಂಡ ಕಣ್ಣು ಪಿಳಕಿಸುತ್ತ, ಗಲಿಬಿಲಿಯಿಂದ ನಡುಗುತ್ತಿದ್ದ.

‘ಕಷ್ಟಪಟ್ಟು ದುಡಿ, ದೇವ್ರು-ದಿಂಡರು ಅಂತ ಕಾಲ-ಹಣ ವ್ಯರ್ಥ ಮಾಡಬೇಡ ...ಗೊತ್ತಾಯ್ತಾ’

ನನ್ನ ಮೊಗದ ಹುಳ್ಳನೆಯ ನಗು, ವಿಚಿತ್ರ ಮಾತು ಅರ್ಥವಾಗದೆ ಅವನು ಮತ್ತಷ್ಟು ವಿಹ್ವಲನಾದ.

‘ಸುಮ್ನೆ ತಲೆ ಕೆಡಿಸಿಕೊಳ್ಳಬೇಡ, ಬಾ, ನಾನೂ ನಿಂಜೊತೆ ಆಸ್ಪತ್ರೆಗೆ ಬರ್ತೀನಿ, ಡಾಕ್ಟರನ್ನು ನೋಡಿ ಮಾತಾಡ್ತೀನಿ, ಯೋಚಿಸ್ಬೇಡ, ನಡಿ..’ ಎಂದು, ಅವನನ್ನು ಕರೆದುಕೊಂಡು, ಪಾರ್ಕಿನ ಹೊರಗೆ ನಿಲ್ಲಿಸಿದ್ದ ನನ್ನ ಕಾರಿನಲ್ಲಿ ಕೂಡಿಸಿಕೊಂಡು ಸೀದಾ ಆಸ್ಪತ್ರೆ ಕಡೆ ನಡೆಸಿದೆ.

ಕಾರೊಳಗೆ ಗುಬ್ಬಚ್ಚಿಯಂತೆ ಮುದುರಿ ಕುಳಿತುಕೊಂಡಿದ್ದ ನಂಜುಂಡನಿಗೆ ಇದು ಕನಸೋ ನನಸೋ ಅರ್ಥವಾಗಲಿಲ್ಲ. ದೇವರಿಗೆ ಅವನು ಸಂಪೂರ್ಣ ಶರಣಾಗಿಬಿಟ್ಟಿದ್ದ. ಕಣ್ಮುಚ್ಚಿ ದೇವರನ್ನು ಪ್ರಾರ್ಥಿಸುತ್ತಲೇ ಇದ್ದ. ಮುಂದೆ ನಡೆದದ್ದೆಲ್ಲ ಅವನ ಪಾಲಿಗೆ ಕನಸೇ.

ಅವನ ಅಚಲ ದೇವರ ಭಕ್ತಿ ಕಂಡು ಕರುಣಾಜನಕವಾಗಿ ಅವನತ್ತ ದೃಷ್ಟಿ ಹೊರಳಿಸಿದೆ. ನಗಬೇಕೋ ಅಳಬೇಕೋ ನನಗೆ ಸಂದಿಗ್ಧವಾಯಿತು. ನನ್ನ ಮನಸ್ಸಿನಲ್ಲಿ ನೆಲೆಯೂರಿದ್ದ ವಿಚಾರಗಳೇ ತದ್ವಿರುದ್ಧ. ದೇವರಲ್ಲಿ ನಂಬಿಕೆ ಕಳೆದುಕೊಂಡಿದ್ದ ನನ್ನ ನಾಸ್ತಿಕ ಗಟ್ಟಿ ಮನಸ್ಸಿನಲ್ಲಿ ನೂರೆಂಟು ಪ್ರಶ್ನೆಗಳು...ಸವಾಲುಗಳು. ದೇವರನ್ನೇ ನಂಬಿ ಕುಳಿತು ತಾನಂತೂ ಸೋಮಾರಿಯಾಗಿರಲಿಲ್ಲ, ಅಥವಾ ಹತಾಶನಾಗಿ ಡಿಪ್ರೆಶನ್ನಿಗೆ ಜಾರಿರಲಿಲ್ಲ. ಹಗಲಿರುಳು ಶ್ರಮವಹಿಸಿ ಕೆಲಸ ಮಾಡಿ ಸಾಕಷ್ಟು ಅನುಕೂಲವಂತನಾಗಿರುವ ಹೆಮ್ಮೆಯ ಭಾವ.

ಈಗ ಎಲ್ಲರೂ ನಾಸ್ತಿಕನೆಂದು ಗುರುತಿಸುವ ನಾನು ಮೊದಲು ಹೀಗಿರಲಿಲ್ಲ. ಚಿಕ್ಕಂದಿನಲ್ಲಿ, ಹಿರಿಯರು ಹೇಳಿದಂತೆ ಕೇಳುವ ಭಯಸ್ಥನೇ ಆಗಿದ್ದೆ. ಊರಲ್ಲಿ ರಾಮಮಂದಿರದಲ್ಲಿ ನಿತ್ಯ ಭಜನೆ ಮಾಡುತ್ತಿದ್ದೆ. ರಥೋತ್ಸವಗಳಲ್ಲಿ ಮಂಗಳಾರತಿ, ತೀರ್ಥ-ಪ್ರಸಾದ ಎಲ್ಲವನ್ನೂ ಬಹು ಭಯ-ಭಕ್ತಿಯಿಂದ, ನಿಷ್ಠೆಯಿಂದ ಮಾಡಿಕೊಡುವ ಆಸ್ತಿಕ ಬಾಲಕನಾಗಿದ್ದೆ. ವಿಧೇಯ ಸ್ವಭಾವದವನಾದ ತಾನು, ದೇವರ ವಿಗ್ರಹಗಳು ಎಲ್ಲಿ ಕಂಡರೂ ರೂಢಿಯಿಂದ ಕೈಗಳು ಯಾಂತ್ರಿಕವಾಗಿ ಮುಗಿಯುತ್ತಿದ್ದವು. ದಾರಿಯಲ್ಲಿ ಯಾವ ಗುಡಿ ಕಂಡರೂ ತಲೆಬಾಗಿಸಿ ನಮಸ್ಕರಿಸುತ್ತಿದ್ದೆ. ದುಡಿಯಲು ಶುರು ಮಾಡಿದ ಮೇಲೆ, ದೇವರು ಎಂದುಬಿಟ್ಟರೆ ಸಾಕು ಧಾರಾಳವಾಗಿ ಖರ್ಚು ಮಾಡುವ ಸ್ವಭಾವ ತಾನೇ ತಾನಾಗಿ ಬೆಳೆದುಬಿಟ್ಟಿತ್ತು. ಇದೆಲ್ಲ ತನ್ನ ತಲೆ ಚೆನ್ನಾಗಿ ಬಲಿಯುವ, ಪಕ್ವವಾಗುವ ಮುಂಚಿನ ಸಂಗತಿ, ನಡವಳಿಕೆಗಳು. ಆದರೆ,... ಬರುಬರುತ್ತಾ, ಸುತ್ತಣ ಜನರ ಒಡನಾಟ, ಅವರ ಕಪಟ ರೀತಿ-ನೀತಿ, ವಿಚಾರಗಳು ಚೆನ್ನಾಗಿ ಮನನವಾಗುತ್ತ ಬಂದಂತೆ ನಿಧಾನವಾಗಿ ಪಲ್ಲಟಗೊಂಡೆ.. ಸ್ವಾರ್ಥ ಉದ್ದೇಶವನ್ನಿಟ್ಟುಕೊಂಡು ದೇವರ ಪೂಜೆ-ಪುನಸ್ಕಾರ ಮಾಡುವ ಜನಗಳನ್ನು ಕಂಡರೆ ನನಗ್ಯಾಕೋ ತೀರಾ ಉರಿದುಹೋಗುತ್ತಿತ್ತು. ಮಾಡಿದ ತಪ್ಪು-ಪಾಪಗಳನ್ನೆಲ್ಲ ಹವನ-ಹೋಮ-ಪೂಜೆ-ದಂಡ ಕಾಣಿಕೆಗಳಲ್ಲಿ ಮುಚ್ಚಿಹಾಕಿಬಿಡುವ ಹುನ್ನಾರದ ಜನಗಳ ಮಧ್ಯೆ ಪಳಗುತ್ತ ಬಂದ ನಾನು, ಮೊದಲಿನ ಮುಗ್ಧ-ಭಕ್ತ ಶಿರೋಮಣಿ ವ್ಯಕ್ತಿಯಾಗಿ ಇನ್ನು ಉಳಿದಿರಲಿಲ್ಲ. ಪಾಪದ ಕೆಲಸಗಳನ್ನ್ನು ಮಾಡುತ್ತಲೇ, ಹುಂಡಿಗೆ ದುಡ್ಡು ಹಾಕಿ ಪರಿಹಾರ ಕಂಡುಕೊಳ್ಳುವ ವಾಮಮಾರ್ಗದ ಬಗ್ಗೆ ಜುಗುಪ್ಸೆ ಬಂದು, ನಾನು ನನ್ನ ಜವಾಬ್ದಾರಿ, ದುಡಿಮೆ-ಪ್ರಾಮಾಣಿಕತೆಗಳನ್ನೇ ನನ್ನ ದೇವರನ್ನಾಗಿ ಮಾಡಿಕೊಂಡಿದ್ದೆ. ಇದಕ್ಕೆ ಮನೆಯವರಿಂದ, ಇತರ ಜನಗಳಿಂದ ಎಷ್ಟೇ ಆಕ್ಷೇಪಗಳು ಬಂದಿದ್ದರೂ ನಾನು ಕೇರ್ ಮಾಡಿರಲಿಲ್ಲ. ಬದಲು ಕೋಪ ಸಿಡಿಯುತ್ತಿತ್ತು. ಕೇವಲ ದೇವರನ್ನೇ ನಂಬಿ, ಅವನ ಮೇಲೆ ಸಂಪೂರ್ಣ ಭಾರ-ಜವಾಬ್ದಾರಿಗಳನ್ನು ಹೊರೆಸಿ, ತಮ್ಮ ಪ್ರಯತ್ನ, ಕ್ರಿಯಾಶೀಲತೆಗಳನ್ನು ಕಡೆಗಣಿಸುವ ಜನರ ಪ್ರವೃತ್ತಿ ಹಿಡಿಸದೆ, ನನ್ನ ವ್ಯಕ್ತಿತ್ವ-ವಿಚಾರಗಳನ್ನು ಬದಲಿಸಿಕೊಂಡಿದ್ದೆ ಅಷ್ಟೇ...ಇದೇನು ಅಂಥ ಮಹಾಪರಾಧವೆನಿಸಿಲ್ಲ... ಪೂಜೆ- ತಾಯಿತ, ಮೂಢನಂಬಿಕೆಗಳನ್ನು ಬಿತ್ತುವ ಆಷಾಢಭೂತಿ, ವಂಚಕರನ್ನು ಕಂಡರಷ್ಟೇ ಉರಿ ಕಾರುತ್ತಿದ್ದೆ.

ಇಂಥ ನಾನು, ನಂಜುಂಡನಿಗೆ, ಇಂದು ದಾರಿ ಉದ್ದಕ್ಕೂ ಆಸ್ತಿಕತೆಯ ವಿರುದ್ಧ ಉಪನ್ಯಾಸ ನೀಡುತ್ತ ಬಂದೆ.

ಅಷ್ಟರಲ್ಲಿ ಆಸ್ಪತ್ರೆ ಬಂದಿತ್ತು. ಅಲ್ಲಿದ್ದ ನಂಜುಂಡನ ಮಗ, ನಾಗೇಶನನ್ನು ವಿಚಾರಿಸಿಕೊಂಡು, ನಂತರ ವೈದ್ಯರನ್ನು ಕಂಡು ಅವನ ಅಪರೇಷನ್ ಬಗ್ಗೆ ಚರ್ಚಿಸಿ ಹೊರಬಂದವನೇ ನಾನು, ‘ ನೀ ಏನೂ ಯೋಚ್ನೆ ಮಾಡಬೇಡ ನಂಜುಂಡ, ನಾನು ಎಲ್ಲ ನೋಡಿಕೊಳ್ತೀನಿ... ಆದ್ರೆ ನೀನು ನನಗೊಂದು ಮಾತು ಕೊಡ್ಬೇಕು..’ ಎಂದಾಗ, ನಂಜುಂಡ ಗಲಿಬಿಲಿಗೊಂಡ.

‘ಹೇಳಿ ಸಾರ್ ...’ -ಎಂದ ಕ್ಷೀಣದನಿಯಲ್ಲಿ ಗಾಬರಿ ತುಳುಕಿಸುತ್ತ .

‘ನೀನು ಇನ್ಮೇಲೆ ಆ ದೇವರ ಸಾವಾಸಕ್ಕೆ ಹೋಗ್ಬೇಡ...ಕಷ್ಟಪಟ್ಟು ದುಡಿ, ಪುರುಷ ಪ್ರಯತ್ನದಲ್ಲಿ ನಂಬಿಕೆ ಇಡು, ತಾನೇ ತಾನಾಗಿ ನಿನ್ನ ಸಮಸ್ಯೆಗಳೆಲ್ಲ ಪರಿಹಾರವಾಗತ್ತೆ...ನಾ ಹೇಳಿದ ಹಾಗೆ ಮಾಡ್ತೀಯಲ್ಲ’

ನನ್ನ ನೇರ ನೋಟವನ್ನೆದುರಿಸಲಾರದೆ ಅವನು ಬಾಗಿಸಿದ ತಲೆಯನ್ನು ಮೌನವಾಗಿ ಆಡಿಸಿದ.

ನಾನು ಎರಡು-ಮೂರು ಸಾಮಾಜಿಕ ಸಂಸ್ಥೆಗಳಲ್ಲಿ ಅಧ್ಯಕ್ಷನಾಗಿದ್ದೆ. ನಮ್ಮ ದಾನ-ದತ್ತಿಯ ಸಂಸ್ಥೆಗಳಿಂದ ಈ ಬಗೆಯ ಅನೇಕ ವೈದ್ಯಕೀಯ, ಶೈಕ್ಷಣಿಕ ಸೇವೆಗಳಿಗಾಗಿ ಪ್ರತಿತಿಂಗಳೂ ಇಂತಿಷ್ಟು ಹಣವನ್ನು ವಿನಿಯೋಗಿಸುತ್ತ ಬಂದಿದ್ದರಿಂದ ನನಗೆ, ಈಗ ಈ ಹುಡುಗನಿಗೆ ನೆರವು ನೀಡುವುದು ಸಮಸ್ಯೆಯಾಗಿರಲಿಲ್ಲ.

ಮರುದಿನವೇ ನಾಗೇಶನ ಅಪರೇಷನ್ ಆಯಿತು. ಅವನು ಹುಷಾರಾಗಿ ಮನೆಗೂ ಬಂದದ್ದೂ ಆಯ್ತು. ಅವನ ಇಡೀ ಕುಟುಂಬ ನನ್ನ ಕಾಲಿಗೆ ಬಿದ್ದರು. ನಂಗೆ ತುಂಬಾ ಸಂಕೋಚವೆನಿಸಿತು.

ಸಂಕಷ್ಟದಲ್ಲಿದ್ದ ನಂಜುಂಡನ ಮನೆಯ ಪರಿಸ್ಥಿತಿಯನ್ನು ಕಣ್ಣಾರೆ ಕಂಡೆ.

‘ಯಾವ ಜನ್ಮದ ನೆಂಟರೋ ಸ್ವಾಮಿ ನೀವು’ ಎಂದು ಅವನ ಹೆಂಡತಿ ಎರಡೂ ಕೈಯೆತ್ತಿ ಮುಗಿದು ಕಣ್ಣಲ್ಲಿ ನೀರು ತುಂಬಿಕೊಂಡಳು.

‘ಛೆ..ಮೇಲೇಳಮ್ಮ...ಹಾಂ..ನಂಜುಂಡ ನಿನಗೆ ಏನು ಬೇಕಾದ್ರೂ ನನ್ನ ಕೇಳು, ಬರೀನಪ್ಪ ನಾಗೇಶ, ಚೆನ್ನಾಗಿ ಓದು..’ ಎಂದು ಅವನ ಕೈಗೆ ಸ್ವಲ್ಪ ಹಣ ಕೊಟ್ಟು ಬಂದಿದ್ದೆ.

ನಂತರ ಮನಸ್ಸಿನಲ್ಲಿ ಒಂದು ಬಗೆಯ ಸಂತೃಪ್ತ-ಧನ್ಯತಾ ಭಾವ ಜಿನುಗುತ್ತಿತ್ತು. ಬರೀ ದೇವರನ್ನೇ ನಂಬಿಕೊಂಡು ಅನ್ಯಾಯವಾಗಿ ಹಾಳಾಗುತ್ತಿದ್ದ ಒಂದು ಸಂಸಾರವನ್ನು ಸರಿ ದಾರಿಗೆ ತಂದ, ಅವರಲ್ಲಿ ಸರಿಯಾದ ವಿಚಾರಗಳನ್ನು ತುಂಬಿಸಿ, ಅವರನ್ನು ಶ್ರಮಜೀವಿಗಳನ್ನಾಗಿಸಿದ ಕೃತಕೃತ್ಯತೆಯ ಅವ್ಯಕ್ತ ಖುಷಿ ನನ್ನಲ್ಲಿ.

ಇದೆಲ್ಲ ನಡೆದು ಸುಮಾರು ಎಷ್ಟೋ ತಿಂಗಳುಗಳಾಗಿ ನನ್ನ ಬಿಜಿ ಜೀವನದಲ್ಲಿ ಇವೆಲ್ಲ ನನಗೆ ಮರೆತೇ ಹೋಗಿತ್ತು. ನನ್ನ ಕಚೇರಿಯ ಕೆಲಸದ ಒತ್ತಡದಲ್ಲಿ, ಆಗಾಗ ಬೇರೆ ಊರುಗಳಿಗೆ ಟೂರ್ ಹೋಗಿ ಬರುವುದರಲ್ಲಿ ಅದೆಷ್ಟು ತಿಂಗಳುಗಳಾಗಿದ್ದವೋ ನಾನು ಸರಿಯಾಗಿ ವಾಕ್ ಮಾಡಿ.

ಇಂದು ಬೆಳಗ್ಗೆಯೇ ಮನೆ ಬಿಟ್ಟು ವಾಕ್ ಮಾಡಲೇ ಬೇಕೆಂದು ಹಟ ತೊಟ್ಟು ಆ ಪಾರ್ಕಿಗೆ ಬಂದಿದ್ದೆ. ನಿರಾಳವಾಗಿ ಒಂದೆರಡು ರೌಂಡ್ ಹಾಕಿದ್ದೆನೋ ಇಲ್ಲವೋ, ದುಬುದುಬು ಜನಗಳ ಹಿಂಡು ನನ್ನನ್ನು ಸರಿಸಿಕೊಂಡು ನಾಗನ ಮಂಟಪದತ್ತ ಧಾವಿಸುತ್ತಿದೆ!.. ಹಿಂತಿರುಗಿ ನೋಡಿದೆ. ಪಾರ್ಕಿನ ಹೊರಗೆ ಉದ್ದಕ್ಕೆ ಕಾರುಗಳು ನಿಂತಿವೆ. ಜರಿಬುಟ್ಟದ ಸೀರೆಗಳು...ಕೈಯಲ್ಲಿ ಹರಿವಾಣಗಳು...ಹಾಲಿನ ಗಿಂಡಿಗಳು, ಪ್ಲಾಸ್ಟಿಕ್ ಪ್ಯಾಕೆಟ್ಟುಗಳು...

ಮತ್ತದೇ ದೃಶ್ಯಗಳು....ಅರೇ, ಸರಿಯಾಗಿ ಇಂಥ ದಿನಾನೇ ಆರಿಸ್ಕೊಂಡು ಬಂದೆನಲ್ಲ ವಾಕಿಗೆ, ಎಂದು ಮಿಡುಕುತ್ತ ಒಳಗೇ ಗೊಣಗುಟ್ಟಿಕೊಂಡೆ...

ಅವರುಗಳ ಮಾತಿನಿಂದ ಇವತ್ತು ಇನ್ಯಾವುದೋ ದೊಡ್ಡ ಷಷ್ಠಿ, ನಾಗಪ್ಪನಿಗೆ ತನಿ ಎರೆಯೋ ದಿವಸ ಅಂತ ಗೊತ್ತಾಯಿತು.

‘ಷ್’ -ಎಂದು ದೊಡ್ಡ ನಿಟ್ಟುಸಿರು ಕಕ್ಕಿ, ವಾಕ್ ಮಾಡುವ ಆಸೆಯನ್ನು ಬಿಟ್ಟು, ಹೋಗಲಿ ಸ್ವಲ್ಪ ವ್ಯಾಯಾಮವನ್ನಾದರೂ ಮಾಡೋಣವೆಂದು ‘ಜಿಮ್’ ಉಪಕರಣಗಳಿದ್ದ ಆವರಣಕ್ಕೆ ನಡೆದೆ. ಯಾಂತ್ರಿಕವಾಗಿ ಕಾಲ್ಗಳು ಸೈಕಲ್ ತುಳಿಯುತ್ತಿದ್ದರೂ ಗಮನವೆಲ್ಲ ಹಾಲಿನ ಹೊಳೆ ಹರಿಸುತ್ತಿದ್ದ ಜನಗಳತ್ತಲೇ ನೆಟ್ಟಿತ್ತು.

ನನ್ನ ಕೀಟಲೆಯ-ಲೇವಡಿಯ ದೃಷ್ಟಿ ಅತ್ತಲ್ಲಿಂದ ಬಹಳ ಹೊತ್ತು ಕದಲಲಿಲ್ಲ. ಇದ್ದಕ್ಕಿದ್ದ ಹಾಗೇ ಸೀಟಿನಿಂದ ನಿಮಿರಿ ಕುಳಿತೆ. ಮಗ್ಗುಲ ಕಟ್ಟೆಯ ಮೇಲೆ ಪೂಜಾ ಸಾಮಗ್ರಿಗಳನ್ನು ಜೋಡಿಸುತ್ತಿದ್ದ ಕುಟುಂಬವನ್ನು ಎಲ್ಲೋ ಕಂಡ ನೆನಪು ಒಸರಿತು. ದೃಷ್ಟಿ ಕೀಲಿಸಿ ನೋಡಿದೆ. ಗುರುತು ಹತ್ತಿತು. ಆಕಸ್ಮಿಕವಾಗಿ ಅವನೂ ಇತ್ತ ತಿರುಗಿ ನೋಡಿದವನೆ , ನಗುತ್ತ ಹತ್ತಿರ ಬಂದು ಮಾತಾಡಿಸಿದ.

‘ಚೆನ್ನಾಗಿದ್ದೀರಾ ಸಾರ್?’

ಅರೇ ಇವನು ಅದೇ ನಂಜುಂಡ!!!...

ನನ್ನ ಬಾಯಿಂದ ಮಾತೇ ಹೊರಡಲಿಲ್ಲ. ನಾಗನಿಗೆ ತನಿ ಎರೆಯಲು ಕುಟುಂಬ ಸಮೇತ ಹಾಜರಾಗಿದ್ದ ಅವನ ಮೊಗದಲ್ಲಿ ನಿಷ್ಕಳಂಕ ನಗು...ಆದರೆ, ನನಗೆ ಮಾತ್ರ ದೊಡ್ಡ ಶಾಕ್!....

ನನ್ನ ಪ್ರಶ್ನೆ ಗಂಟಲಲ್ಲೇ ಉಳಿಯಿತು.

‘ನೋಡಿ ಸಾರ್, ಈ ದೇವರ ಮಹಿಮೆ ಹೇಗಿದೇಂತ...’ ಭಕ್ತಿ ತುಂದಿಲನಾಗಿದ್ದ.

ಸ್ತಂಭೀಭೂತನಾಗಿ ನಿಂತಿದ್ದ ನಾನು, ‘ನಂಜುಂಡ!!!... ನೀನು ಇನ್ನೂ ದೇವರನ್ನ ನಂಬ್ತೀಯಾ?!!...’-ಬೇಸರದ ದನಿಯಲ್ಲಿ ಕೇಳಿದೆ.

‘ಖಂಡಿತಾ ಸಾರ್... ನೀವಾಗೇ ನನ್ನ ಹತ್ತಿರ ಬಂದು ನನ್ನ ಕಷ್ಟ-ಸುಖ ವಿಚಾರಿಸ್ತಿದ್ರಾ... ಆ ದೇವರೇ ಅಲ್ವಾ ಸಾರ್, ನನ್ನ ನಿಮಗೆ ತೋರಿದ್ದು, ...ನನ್ನ ಮಗನ ಜೀವ ಉಳೀತು..ಹಂಗೆ ಉಳಿಸೋಕ್ಕೆ ನಿಮಗೆ ಬುದ್ದಿ ಕೊಟ್ಟೋನು ಅವನೇ ಅಲ್ವಾ... ಈ ದೇವರೇ ಅಲ್ವಾ ನನ್ಮಗ-ನಮ್ಮನೆಯನ್ನು ಕಾಪಾಡಿದೋನು.. ನಿಜವಾಗಿ ಅವನೇ ಅಲ್ವಾ......’

-ನಂಜುಂಡ ಭಕ್ತಿಪಾರಮ್ಯದಿಂದ ಒಂದೇಸಮನೆ ಬಡಬಡಿಸುತ್ತಲೇ ಇದ್ದ.

ನಾನು ಭ್ರಮಿತನಂತೆ ಕಲ್ಲಾಗಿ ನಿಂತುಬಿಟ್ಟಿದ್ದೆ. !

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.