ರಾಗವಾಗಿ ಮಗ್ಗಿ ಬಾಯಿಪಾಠ ಮಾಡುತ್ತಿದ್ದ ವಾಸಂತಿಗೆ ಆ ಸಂಜೆ ಗೊತ್ತಾದ ಹೊಸ ಸುದ್ದಿಯಿಂದ ಬಹಳ ಖುಷಿಯಾಗಿತ್ತು.
ಅಪ್ಪ ಅಮ್ಮನಿಗೆ ಕೆಲಸದ ನಿಮಿತ್ತ ದೂರದ ಪೇಟೆಗೆ ಹೋಗಲಿಕ್ಕಿದೆಯಂತೆ. ಅದೂ ನಾಳೆಯೇ.
ಈಗಷ್ಟೇ ಪೋಸ್ಟ್‌ನಲ್ಲಿ ವಿಷಯ ಬಂತು. ವಿಷಯ ಗೊತ್ತಾದ ಕೂಡಲೇ ಬಾಯಿಪಾಠ ನಿಲ್ಲಿಸಿ, ನಾಳೆಯ ಯೋಜನೆಗಳ ಕುರಿತು ಮನಸ್ಸಲ್ಲಿ ಸಾಕಷ್ಟು ಲೆಕ್ಕಾಚಾರ ಹಾಕತೊಡಗಿದಳು ವಾಸಂತಿ.
ವರ್ಷದಲ್ಲಿ ಎರಡು ಮೂರು ಬಾರಿ ಹೀಗೆ ಆ ಒಂಟಿ ಮನೆಯಲ್ಲಿ ಮಕ್ಕಳನ್ನು ಮಾತ್ರ ಬಿಟ್ಟು ದೂರದ ಪೇಟೆಗೆ ಅಪ್ಪ ಅಮ್ಮ ಹೋಗಲೇಬೇಕಾದ ಸಂದರ್ಭ ಬಂದಾಗಲೆಲ್ಲಾ ಕೆಲಸದ ಪಾರಿಯನ್ನು ಜೊತೆಗಿರಲು ಬಿಟ್ಟು ಹೋಗ್ತಾರೆ.
ಆಗೆಲ್ಲಾ ಪಾರಿಯ ಜೊತೆಗೆ ಪಕ್ಕದ ಕಾಡು ಸುತ್ತುವ, ಕಾಡುಹಣ್ಣುಗಳನ್ನು ಹುಡುಕಿ ತಿನ್ನುವ, ಮರಳು ರಾಶಿಯಲ್ಲಿ ಕಪ್ಪೆಗೂಡು ಕಟ್ಟುವ ಮಜ.
ಕಳೆದ ಸರ್ತಿ ಅಮ್ಮನ ಕಣ್ಣು ತಪ್ಪಿಸಿ ಬೆಲ್ಲದ ಚೀಲದಿಂದ ಮೂರಚ್ಚು ಬೆಲ್ಲ ಕದ್ದು ಪಾರಿಯ ಜೊತೆಗೆ ಅಡುಗೆಯಾಟ ಆಡಿದ್ದು ಎಷ್ಟು ಮಜವಾಗಿತ್ತು. ಉಪ್ಪು ಸೂಜಿಮೆಣಸು ನುರಿದು ಪೇರಲೆ ಜೊತೆ ತಿಂದಿದ್ದು ಈಗಲೂ ತಾಜಾ. ಐದು ಸಮ ಆಕಾರದ ಕಲ್ಲುಗಳನ್ನು ಆರಿಸಿ ಕಲ್ಲಾಟ ಆಡುವುದನ್ನು ಕಲಿಸಿದ್ದೂ ಪಾರಿಯೇ.
ಕುಂಟೆಬಿಲ್ಲೆಯಲ್ಲಿ ಪಾರಿಯನ್ನು ಮೀರಿಸುವವರಿಲ್ಲ. ಅಮಟಾ ಎಸ್ಸಾ ಅನ್ನುವುದು ಆಮ್ ಐ ರೈಟ್ ಎನ್ನುವುದೂ ತನಗೆ ಗೊತ್ತಾಗಿದ್ದು ಈ ವರ್ಷ ಹೊಸಶಾಲೆಗೆ ಹೋದಮೇಲೆಯೇ.
ಆದರೆ ಈ ಬಾರಿ ಪಾರಿ ದೊಡ್ಡೋಳಾಗಿದಾಳಂತೆ. ಒಬ್ಳೆ ಇರಲು ಕಳಿಸುವುದು ಕಷ್ಟ ಅಂತ ಅವರಣ್ಣ ಹೇಳಿದ್ದನ್ನು ಅಪ್ಪ ಅಮ್ಮನ ಬಳಿ ಹೇಳ್ತಿದ್ರು. ಮಲಗಿದ್ದ ವಾಸಂತಿಗೆ ಇದು ಛೆ ಅನ್ನುವಷ್ಟು ಸಂಕಟದ ವಿಷಯ.
ಪಕ್ಕದಲ್ಲಿ ಮಲಗಿದ್ದ ತಮ್ಮ, ತಂಗಿ ಈ ಲೋಕವೇ ಮರೆತವರಂತೆ ನಿದ್ದೆಯ ಆಳಕ್ಕೆ ಇಳಿದಿದ್ದಾರೆ.
ಆರನೇ ತರಗತಿಯಲ್ಲಿದ್ದ ವಾಸಂತಿಗೆ ‘ಸೋಮವಾರದಶಮಾಂಶದ ಪಾಠವನ್ನು ಮಾಡ್ತೀನಿ’ ಅಂತ ಹೇಳಿರುವ ಗಣಿತದ ಮೇಷ್ಟ್ರು ಮಾತನ್ನು ನೆನೆಸಿಕೊಂಡೇ ನಿದ್ದೆ ಹತ್ತಿರಲಿಲ್ಲ. ನಡುಹಜಾರದಿಂದ ಆ ಬದಿಗೆ ಇರುವ ಕೋಣೆಯ ಮುಚ್ಚಿದ ಬಾಗಿಲಿನಿಂದ ಅಪ್ಪ ಅಮ್ಮನ ಮಾತುಗಳು ಸ್ಪಷ್ಟವಾಗಿ ಕೇಳುತ್ತಲೇ ಇದ್ದವು.
‘ಮತ್ತೇನು ಮಾಡಬಹುದು ಪಾರಿ ಬರದಿದ್ದರೆ’ ಅನ್ನುವ ಅಮ್ಮನ ಆ ಧ್ವನಿ ವಾಸಂತಿಗೆ ಅಷ್ಟೇನು ಪರಿಚಿತವಾದಂತೆ ಅನಿಸದೆ ಕುತೂಹಲ ಹೆಚ್ಚಿ ಕಿವಿಯ ಜೊತೆಗೆ ಮನಸ್ಸನ್ನೂ ಕೊಟ್ಟಳು.
‘ಬಸವಯ್ಯನ ಮಗ ಪರಮಿ ಇದಾನಲ್ಲ. ಬರಕೆ ಹೇಳಿದ್ರಾಯ್ತು ಬಿಡು, ಅದಕ್ಕೆ ಯಾಕೆ ಅಷ್ಟು ಯೋಚ್ನೆ ಮಾಡ್ತೀಯಾ’ ಅನ್ನುವ ವಾಕ್ಯ ಮುಗಿಯುವ ಮೊದಲೇ ಜೋರಾಗಿ ಪ್ಚ್್ಂಮ್್್ ಎನ್ನುವ ಸದ್ದೂ ಮತ್ತದರ ಬೆನ್ನಿಗೇ ಅಮ್ಮ ‘ಅಮ್ಮಾ’ ಅಂತ ನರಳಿದ್ದೂ ಕೇಳಿ ವಾಸಂತಿ ಬೆಚ್ಚಿದಂತಾಗಿ ಒಣಗಿದ ತುಟಿಗಳನ್ನು ನಾಲಿಗೆಯಿಂದ ಸವರಿಕೊಂಡಳು.
ತಾನು ಕೇಳಿದ ಆ ಸದ್ದಿನ ಹಿನ್ನೆಲೆ ಏನಿರಬಹುದೆಂದು ಮತ್ತೆ ಕಿವಿಗೊಡುವ ಮೊದಲೇ ಅಂತಹುದೇ ಸದ್ದುಗಳು ಮೇಲಿಂದ ಮೇಲೆ ಕೇಳಿ ಆ ಸದ್ದಿನೆಡೆಗೆ ವಿಚಿತ್ರವಾದ ಕುತೂಹಲ ಹೆಚ್ಚಾಯಿತು. ನಾಳೆಯ ಸಂಭ್ರಮ ಒಮ್ಮೆಗೆ ವಾಸಂತಿಯ ಮನಸ್ಸಿನಿಂದ ಮರೆಯಾಗಿ ಹೊಸ ಸದ್ದಿನ ಮೂಲದೊಳಗೆ ಅವಳ ಎಳೆ ಹೃದಯ ಸಿಕ್ಕಿಕೊಂಡಿದ್ದು ಅವಳಿಗೆ ಅಷ್ಟೇನೂ ಖುಷಿ ಕೊಡಲಿಲ್ಲ.
ಜೋರಾಗಿ ಹೊಡೆದುಕೊಳ್ಳುತ್ತಿರುವ ಎದೆಯ ಸದ್ದಿನಿಂದಾಗಿ ಪಕ್ಕದಲ್ಲಿರುವ ತಮ್ಮ, ತಂಗಿ ಎಲ್ಲಿ ಎದ್ದು ಬಿಡ್ತಾರೋ ಎನ್ನುವ ಆತಂಕದಿಂದ, ಆದಷ್ಟೂ ಮೆಲ್ಲಗೆ ಉಸಿರಾಡಿ ಎದೆಬಡಿತದ ಸದ್ದು ಕಡಿಮೆ ಮಾಡಿಕೊಳ್ಳಲು ಯತ್ನಿಸಿದಳು ವಾಸಂತಿ.
ಉಹು.
ಎದೆಬಡಿತ ಮತ್ತೂ ಹೆಚ್ಚಾಗಿ ಕಾಲ್ಬೆರಳ ತುದಿಯಿಂದ ನಡುನೆತ್ತಿವರೆಗೆ ಬಿಸಿಯ ಅಲೆಯೊಂದು ಹಾದುಹೋಯಿತು. ಕಿವಿಯನ್ನು ಜೊತೆಗೆ ಮನಸ್ಸನ್ನೂ ಆ ಕೋಣೆಯೆಡೆಗೆ ನೆಟ್ಟು ಸದ್ದುಗಳನ್ನು ಆಲಿಸತೊಡಗಿದಳು.
ಪ್ಚ್ಮ್್್್ ಪ್ಚ್ಮ್್್್ ಎನ್ನುವ ಸದ್ದೂ, ಅಮ್ಮನ ನರಳಿಕೆಯಲ್ಲದ ನರಳಾಟವೂ ಅಗತ್ಯಕ್ಕಿಂತಲೂ ಜೋರಾಗಿ ಕೇಳಿಸಿ ಕಿರಿಕಿರಿಯೂ ಅಲ್ಲದ ಕಸಿವಿಸಿಯೂ ಅಲ್ಲದ ಹೇಸಿಗೆಯೂ ಅಲ್ಲದ ಪರಚುವಿಕೆಯಂತ ಅನುಭವವಾಗಿ ಪಕ್ಕದ ತಮ್ಮ, ತಂಗಿಯರ ಮೇಲೆ ವಿನಾಕಾರಣ ಅಸಹನೆ ಹುಟ್ಟಿತು.
ತನ್ನ ಪುಟ್ಟ ಬೆರಳುಗಳನ್ನು ಕಿವಿಯೊಳಗೆ ಗಟ್ಟಿಯಾಗಿ ತೂರಿಸಿಕೊಂಡು ನೋಡಿದಳು. ಆದರೆ ಅದನ್ನು ಮೀರಿ ಕೇಳುತ್ತಿದ್ದ ಸದ್ದು ವಾಸಂತಿಯನ್ನು ವಿಚಿತ್ರವಾದ ಹಿಂಸೆಗೆ ಒಳಪಡಿಸುತ್ತಿದೆ. ಕಿವಿಯೊಳಗೆ ಬೆರಳಿಟ್ಟಿದ್ದ ವಾಸಂತಿಗೆ ಈಗ ಕೇಳುತ್ತಿರುವ ಸದ್ದು ಹೇಗಿರಬಹುದೆಂಬ ಹುಚ್ಚು ಕುತೂಹಲ ಹೆಚ್ಚಾಗಿ ಬೆರಳನ್ನು ಮೆಲ್ಲಗೆ ಹೊರತೆಗೆದಳು. ಈಗ ಇನ್ನೂ ಸ್ಪಷ್ಟವಾಗಿ, ಇನ್ನೂ ಪದೇಪದೇ ಕೇಳಿಸುತ್ತಿದೆ.
ಜೊತೆಗೆ ಮಂಚದ ಲಯಬದ್ಧ ಮುರುಗುಟ್ಟುವಿಕೆಯೂ.
ಉಗುಳು ನುಂಗಿಕೊಂಡಳು ವಾಸಂತಿ.
ಕಣ್ಣು ಗಟ್ಟಿಯಾಗಿ ಮುಚ್ಚಿದ್ದವಳು ಕಣ್ಣಿಂದಲೂ ಆಲಿಸಬಹುದೆನ್ನುವಂತೆ ಮತ್ತೆ ಅಗಲವಾಗಿ ಕಣ್ಣು ತೆರೆದು ಕಿವಿಯ ಹತ್ತಿರವಿದ್ದ ಕೌದಿಯನ್ನು ಕುತ್ತಿಗೆಗೆ ಸರಿಸಿಕೊಂಡಳು.
ಮಲಗಿದ್ದು ಸರಿಯಿಲ್ಲವಾ?
ಅದಕ್ಕೇ ತನಗೆ ನಿದ್ದೆ ಹತ್ತುತ್ತಿಲ್ಲ. ಮಗ್ಗುಲಿಗೆ ಹೊರಳಿದವಳ ಮೊಳಕೈ ಪಕ್ಕದಲ್ಲಿರುವ ತಮ್ಮನಿಗೆ ತಾಗಿ ಅವನು ಕೊಸರಾಡಲು ಶುರು ಮಾಡಿದ.
ಅವನಿಗೇನಾದರೂ ಎಚ್ಚರಾಗಿ ಆ ಸದ್ದಿನ ಕುರಿತು ಕೇಳಿದರೆ ಅ...ಥ..ವಾ, ಅಥವಾ ಅವನು ಎಚ್ಚರಾಗಿ ಕುಸುಗುಡುವಾಗ ತನಗೆ ಆ ಸದ್ದು ಕೇಳದೆಹೋದರೆ?
ಮೆಲ್ಲಗೆ ತಮ್ಮನನ್ನು ತಟ್ಟಿದಳು.
ಒಂದೆರಡು ಬಾರಿ ಕೊಸರಿದ ಹಾಗೆ ಮಾಡಿ ಗಾಢ ನಿದ್ದೆಗಿಳಿದ ತಮ್ಮನನ್ನು ನೋಡಿ ನಿರಾಳವಾಗುವಾಗಲೇ ಹಜಾರದಾಚೆಗಿನ ಮುಚ್ಚಿದ ಕೋಣೆಯಿಂದ ‘ಅಮ್ಮಾ’ ಎನ್ನುವ ಸಣ್ಣ ಚೀತ್ಕಾರ ಕೇಳಿತು. ಅಲ್ಲಿ ನಡೆಯುತ್ತಿರುವುದೇನು ಎನ್ನುವ ಸ್ಪಷ್ಟ ಕಲ್ಪನೆ ಇರದಿದ್ದರೂ ಆ ಮುಚ್ಚಿದ ಕದಕ್ಕೆ ಎದ್ದು ಹೋಗಿ ಒದ್ದು ಬರಬೇಕೆನ್ನಿಸಿತು ವಾಸಂತಿಗೆ.
ಎಷ್ಟೋ ಹೊತ್ತಿನ ನಂತರ ಆ ಕೋಣೆಯಿಂದ ಬರುವ ಸದ್ದೂ ಕ್ಷೀಣವಾಗಿ ವಾಸಂತಿಯೂ ಕವುಚಿ ಮಲಗಿ, ತುಸು ಕೊಸರಾಡಿ, ಅರಿವಿಲ್ಲದೆಯೋ ಇದ್ದೋ ಎಲ್ಲೆಲ್ಲೋ ಮುಟ್ಟಿಕೊಂಡು ಯಾವುದೋ ಹೊತ್ತಿನಲ್ಲಿ ನಿದ್ದೆ ಬಂದಿತ್ತೊ ಗೊತ್ತಾಗಲಿಲ್ಲ.
….
‘ನಮಸ್ಕಾರ ..ಇದು ಭದ್ರಾವತಿ ಆಕಾಶವಾಣಿ’ ರೇಡಿಯೊದಿಂದ ಬರ್ತಿದ್ದ ಧ್ವನಿಯೊಂದಿಗೆ ಮಾರನೆ ಬೆಳಗು ಎಬ್ಬಿಸಿದಾಗ
ಕಣ್ಣು ಹೊಸಕಿ ಪಕ್ಕಕ್ಕೆ ನೋಡಿದಳು ವಾಸಂತಿ.
ಹೇಗೂ ತಮ್ಮ ತಂಗಿ ನಿದ್ದೆ ಮಾಡ್ತಿದ್ದಾರೆ. ತಾನೂ ಇನ್ನು ಸ್ವಲ್ಪ ಹೊತ್ತು ಮಲಗುವ ಅಂದುಕೊಂಡು ಹೊರಳಿದವಳನ್ನು ಅಮ್ಮನ ‘ಎದ್ದೇಳೇ’ ಎನ್ನುವ ಸುಪ್ರಭಾತ ಬಡಿದು ಎಬ್ಬಿಸಿತು.
ನಿದ್ದೆ ಸರಿಯಾಗದೆ ಕಣ್ಣುಜ್ಜುತ್ತಾ ಎದ್ದವಳು ಹಾಸಿಗೆ ಸುತ್ತಿ ಅದನ್ನು ಒಟ್ಟಿನ ಮೇಲಿಟ್ಟು ಕೋಣೆಯ ಹೊರಗೆ ಹೋಗುವಾಗ ಅಪ್ಪ ಅಮ್ಮನ ಪೇಟೆಗೆ ಹೊರಡುವ ಸಿದ್ಧತೆ ಸಾಕಷ್ಟು ಮುಗಿದಂತೆ ಕಂಡಿತು.
ಅಮ್ಮನ ಸ್ನಾನ ಮುಗಿದು ವಾಸಂತಿಯ ಕೆಲಸವಾದ ಪೂಜೆಗೆ ಹೂವು ಬಿಡಿಸುವುದು, ಬಾಗಿಲು ಸಾರಿಸಿ ರಂಗೋಲಿ ಹಾಕುವುದು ಕೂಡ ಮುಗಿದಿದೆ.
ಅಮ್ಮ ದೇವರ ಮನೆಯಲ್ಲಿ ದೇವರಿಗೆ ಹೂವೇರಿಸುತ್ತ ಕೂತಿದ್ದಳು. ಅಪ್ಪ ಕಾಲೋನಿಗೆ ಹೋಗಿ ಪರಮಿಯನ್ನು ಕರಕೊಂಡು ಬಂದಾಗಿದೆ.
ಸಂಜೆವರೆಗೂ ಅವನು ಮಾಡಬೇಕಾದ ಕೆಲಸಗಳನ್ನು ಹೇಳಿ, ಮನೆ ಕಡೆಗೂ ಗಮನ ಕೊಡಬೇಕು ಅಂತ ಹೇಳ್ತಿದ್ರು ಅಪ್ಪ.
ಪರಮಿ ಮಾತ್ರ ಇದ್ಯಾವುದೂ ತನಗೆ ಕೇಳಿಸುತ್ತಲೇ ಇಲ್ಲವೆಂಬಂತೆ ಒಂದೇ ಧ್ಯಾನದಿಂದ ಪಕ್ಕದ ದಿಬ್ಬದಲ್ಲಿದ್ದ ಸೀಬೆ ಮರವನ್ನೂ ಅದರ ಮೈ ತುಂಬಾ ತೊನೆದಾಡುತ್ತಿದ್ದ ಹಳದಿ ಬಣ್ಣದ ಕಸಿ ಸೀಬೆಹಣ್ಣುಗಳನ್ನೂ ನೋಡ್ತಾ ಬಾಯ್ನೀರು ಕುಡಿತಿದ್ದ. ಅವನ ಮನಸಿನೊಳಗೆ ಏನೋ ಲೆಕ್ಕಾಚಾರ ನಡೀತಿದೆ.
ಆದರೆ ಗೌಡ್ರು ಹೇಳಿದ ಮಾತಿಗೆ ಕೋಲೆ ಬಸವನಂತೆ ತಲೆಯಾಡಿಸುವುದು ಮಾತ್ರ ನಿಂತಿರಲಿಲ್ಲ.
ಅವನ ಒಳಮನಸ್ಸು ತಿಳಿದ ಅಪ್ಪ ಗದರಿಸಬೇಕೆಂದುಕೊಂಡವರು ಸುಮ್ಮನಾಗಿ ‘ಬಿಸಿಲು ಹತ್ತಿದ ಮೇಲೊಂದ್ ಸರ್ತಿ, ಇಳಿದ ಮೇಲೊಂದ್ ಸರ್ತಿ ಕೆರೆ ಕಡೆಗೆ ಹೋಗಿ ಎತ್ತು ಬದಲಿಸಿ, ಕೆರೆಯಲ್ಲಿ ನೀರು ಕುಡಿಸಿ ಕಟ್ಟಬೇಕೆಂದು’ ತಾಕೀತು ಮಾಡಿದ್ರು. ಜೊತೆಗೆ ಕೆರೆಗಿಳಿಯುವುದು, ಈಜುವುದು ಏನಾದರೂ ಮಾಡಿದ್ರೆ ಕಾಲು ಮುರಿದು ಕೈಗೆ ಕೊಡುವ ಎಚ್ಚರಿಕೆಯನ್ನೂ ಕೊಟ್ಟರು.
ಬಚ್ಚಲು ಮನೆಯಲ್ಲಿ ನಿಂತು ನಂಜನಗೂಡು ಹಲ್ಲುಪುಡಿಯನ್ನು ಬ್ರಷ್ಷಿಗೆ ಅಂಟಿಸಿಕೊಂಡು ಬೇಕೋ ಬೇಡವೋ ಎನ್ನುವಂತೆ ಹಲ್ಲು ತಿಕ್ಕುತ್ತಿದ್ದ ವಾಸಂತಿಗೆ ಬೇಕಿಲ್ಲದಿದ್ದರೂ ಇದೆಲ್ಲವೂ ಕೇಳಿಸುತ್ತಿದೆ.
ಅವಳ ಮನಸ್ಸೀಗ ರಾತ್ರಿಯ ಸದ್ದುಗಳನ್ನು ಇಲ್ಲೇ ಬಚ್ಚಲು ಮನೆಯಲ್ಲಿ ತೊಳೆದು ಹೋಗಬೇಕೇ ಅಥವಾ ಹೊತ್ತೇ ತಿರುಗಬೇಕೆ ಎನ್ನುವ ಗೊಂದಲದಲ್ಲಿತ್ತು.
ಅಮ್ಮ ಆಗಲೇ ಹೊಸಸೀರೆಯುಟ್ಟು ಬಿಗಿಯಾಗಿ ಸೆರಗು ಮಾಡಿಕೊಂಡು ಮತ್ತೆಮತ್ತೆ ಕನ್ನಡಿಲಿ ನೋಡ್ಕೊತ್ತಿದ್ರು.
ಅಮ್ಮನನ್ನು ನೋಡಲು ವಾಸಂತಿಗೆ ಯಾಕೋ ಕಿರಿಕಿರಿಯಾಗಿ ಅಲ್ಲೇ ಮಲಗಿದ್ದ ಕರೀ ನಾಯಿಮರಿಗೆ ಸಂಡಿಗೆ ಚಾಪೆಯ ಮೂಲೆಗಿಟ್ಟಿದ್ದ ಕಲ್ಲನ್ನು ಗುರಿಯಿಟ್ಟು ಬೀಸಿ ಒಗೆದಳು. ಅದು ಕಯ್ಯೋ ಎನ್ನುತ್ತಾ ಕಿರುಚಿಕೊಂಡು ಕುಂಟುತ್ತಾ ಓಡಿದ್ದು ನೋಡಿ ಒಂದಿಷ್ಟು ನಿರಾಳವೆನಿಸಿ ಅಡುಗೆ ಮನೆಗೆ ಹೋದಳು. ಒಲೆಯ ಮೇಲೆ ಕಡುಬಿನ ಪಾತ್ರೆಯ ಸುತ್ತಲೂ ನೀರಿಳಿಯುತಿತ್ತು. ಕಡುಬಿನ ಸೌಮ್ಯ ಪರಿಮಳ ಅಡುಗೆಮನೆಯನ್ನು ವ್ಯಾಪಿಸಿ ಅದನ್ನು ಆಘ್ರಾಣಿಸಿದ ವಾಸಂತಿಗೆ ಆ ಕ್ಷಣಕ್ಕೆ ಉಳಿದೆಲ್ಲಾ ಯೋಚನೆಗಳಿಗೂ ವಿರಾಮ ಬಿದ್ದು ಹೊಟ್ಟೆ ಚುರುಗುಟ್ಟತೊಡಗಿತು.
ಇವತ್ತಿನ ತನ್ನ ಮಾಮೂಲು ಕೆಲಸವನ್ನೂ ಅಮ್ಮ ಈಗಾಗಲೇ ಮುಗಿಸಿರುವುದರಿಂದ ಅವರು ಹೋದಮೇಲೆ ಬಚ್ಚಲು ಹಂಡೆಗೆ ನೀರು ತುಂಬಿಸಿದರಾಯ್ತು ಅಂದುಕೊಂಡು ಏನೋ ನೆನಪಾಗಿ ಅಂಗಳಕ್ಕೆ ಬಂದವಳಿಗೆ, ನೆಪಕ್ಕೆ ತೆಂಗಿನ ಮಡ್ಲು ಒಟ್ಟುತ್ತಾ ಕೆಲಸ ತಪ್ಪಿಸಿಕೊಳ್ಳುವ ಸಲುವಾಗಿ ಆಗಾಗ ಅಂಗೈಗೆ ಏನೋ ಚುಚ್ಚಿದಂತೆ ನಟಿಸುತ್ತಿದ್ದ ಪರಮಿ ಕಾಣಿಸಿದ.
ವಾಸಂತಿ ಬಂದ ಸದ್ದಿಗೆ ತಿರುಗಿ ನೋಡಿದವನು ಮತ್ತೆ ಬಹಳ ಗಡಿಬಿಡಿಯಲ್ಲಿ ಮಡ್ಲು ಪೇರಿಸತೊಡಗಿದ.
ಖಾಕಿಯ ಚಡ್ಡಿ ಶರ್ಟು ತೊಟ್ಟ ಬಡಕಲು ಶರೀರದ ಪರಮಿ ಕೆಲಸ ಮಾಡುತ್ತಾ ತಿರುಗಿ ತನ್ನನ್ನು ನೋಡಿದಾಗ ಅವನ ಮುಖದಲ್ಲಿ ಏನೋ ಬದಲಾವಣೆಯಾಗಿದೆ ಅಂತ ವಾಸಂತಿಗೆ ತೀವ್ರವಾಗಿ ಅನಿಸಿ ಅದೇನೆಂದು ನೋಡಬೇಕೆಂಬ ಕುತೂಹಲ ಹೆಚ್ಚಾಯಿತು. ತಾನು ತೊಟ್ಟಿದ್ದ ದಪ್ಪನೆಯ ಉದ್ದಲಂಗ ಸದ್ದಾಗದಂತೆ ಅದನ್ನು ತುಸುವೇ ಮೇಲಕ್ಕೆತ್ತಿ ಪರಮಿ ಕೆಲಸ ಮಾಡುತ್ತಿದ್ದ ಮರದ ಹತ್ತಿರ ಹೋದಳು.
ಅದೇ ಸಮಯಕ್ಕೆ ಅಪ್ಪ ಎತ್ತು ಕಟ್ಟುವ ದಿಬ್ಬದಲ್ಲಿ ಎತ್ತುಗಳನ್ನು ಕಟ್ಟಿಹಾಕಿ ಕೆಳಕ್ಕೆ ಬರ್ತಿದ್ದಿದ್ದು ಕಾಣಿಸಿತು.
ಪರಮಿ ಮತ್ತೂ ಲಗುಬಗೆಯಿಂದ ಮಡ್ಲು ಒಟ್ಟ ಹತ್ತಿದವನು ಹಿಂದೆ ಕಾಣಿಸಿದ ವಾಸಂತಿಯನ್ನು ಕಂಡು ತಿರುಗಿ ನೋಡಿ ಸಣ್ಣಗೆ ಪರಿಚಯದ ನಗೆ ನಕ್ಕ. ವಾಸಂತಿಗೆ ತಟ್ಟನೆ ಪರಮಿಯ ಮುಖದಲ್ಲಾದ ಬದಲಾವಣೆ ಏನೂಂತ ಗೊತ್ತಾಯಿತು.
ಅವನಿಗೆ ಕೆಲಸ ಹೇಳುತ್ತಿದ್ದ ಅಪ್ಪನನ್ನು ನೋಡಲು ಮನಸ್ಸಾಗದೆ ತಮ್ಮ, ತಂಗಿ ಮಲಗಿದ್ದ ಕೋಣೆಗೆ ಬಂದವಳು ಒಟ್ಟಿದ್ದ ಹಾಸಿಗೆಗೆ ಒರಗಿಕೊಂಡು ಮತ್ತೂ ಏನನ್ನೋ ಯೋಚಿಸಹತ್ತಿದಳು. ಅವಳ ಎಳೆಮನಸ್ಸು ಸಿಗ್ಗಾಗಿ ಎದೆಯ ಮೇಲೊಂದು ಹೆಣಭಾರದ ಕಲ್ಲು ಬಿದ್ದಿದೆ.
ಅಲ್ಲಿದ್ದ ಪುಟಾಣಿ ಕನ್ನಡಿಯಲ್ಲಿ ತನ್ನನ್ನು ನೋಡಿದವಳಿಗೆ ತನ್ನ ಚಂದಕ್ಕೆ ಮೆಚ್ಚುಗೆಯೆನಿಸಿತು.
ಹಳೆಯ ಬಟ್ಟೆಯ ತುಂಡೊಂದನ್ನು ಸೀರೆಯಂತೆ ತನ್ನ ಭುಜಕ್ಕೆ ಇಳಿಬಿಟ್ಟು ಸೆರಗನ್ನು ಬಿಗಿ ಮಾಡಿಕೊಂಡು ಮತ್ತೆ ಕನ್ನಡಿ ನೋಡಿ ಕೊಂಡಳು.
‘ತಾನು ಬಹಳ ಸುಂದರಿ.ಅಮ್ಮನಿಗಿಂತಲೂ ನಾನು ಬಹಳ ಚಂದ’ ಛೀ ಛೀ.ಅಮ್ಮನಂತಲ್ಲ. ನಾನು ಸಿನಿಮಾ ನಟಿ ಥರ ಇದ್ದೇನೆ.
ವಾಸಂತಿಗೆ ಹೆಮ್ಮೆಯಾಯಿತು.
––––––
ದೇವರ ಕೋಣೆಯಿಂದ ಕೇಳಿದ ಗಂಟೆಯ ಸದ್ದು ಅಪ್ಪನ ಪೂಜೆಯಾಗಿದ್ದನ್ನು ಹೇಳ್ತಿದೆ.
ಈ ಮುಂಚೆ ಗಂಟೆಯ ಸದ್ದಿಗೆ ಖುಷಿಗೊಳ್ಳುತ್ತಿದ್ದ ಮನಸ್ಸಿಗೆ ಇವತ್ತು ಹಾಗನಿಸ್ತಿಲ್ಲ. ರಾತ್ರಿ ಕೇಳಿದ ಸದ್ದುಗಳು ತನ್ನ ಸುತ್ತೆಲ್ಲವೂ ತುಂಬಿಹೋಗಿ ವಿಚಿತ್ರ ಸಂಕಟದಿಂದ ತಲೆಯನ್ನು ಗಟ್ಟಿಯಾಗಿ ಹಿಡಿದು ನಿಂತಳು ವಾಸಂತಿ.
ಯಾವುದೋ ಯೋಚನೆಗೆ ಅವಳೊಮ್ಮೆ ಬೆಚ್ಚಿದಳಾದರೂ ಮತ್ತದೇ ರಾತ್ರಿಯಂಥದೇ ಒಂದು ಶಾಖದ ಅಲೆ ಅವಳನ್ನು ಹಾದು ಹೋಯಿತು.
ಅಪ್ಪ, ಅಮ್ಮ ದಿನಸಿ ಪಟ್ಟಿಯ ಜೊತೆಗೆ ಬ್ಯಾಗು ಮತ್ತೇನೋ ಕಾಗದಪತ್ರಗಳನ್ನು ಜೋಡಿಸಿಕೊಂಡು ಗಡಿಬಿಡಿಯಲ್ಲೇ ಹೊರಟರು. ಅವರನ್ನು ಕಳಿಸಲು ಹೊರಗೆ ಬಂದ ವಾಸಂತಿ ಮತ್ತೆ ಏನನ್ನೋ ಯೋಚಿಸಿ ಮುಂದೆ ಹೋಗಲಿಲ್ಲ.
----
ಗೌಡ್ರೂ ಅಮ್ಮಾರೂ ಹೋದ ಆರುನಿಮಿಷದವರೆಗೂ ಮಡ್ಲು ಜೋಡಿಸಿದ ಪರಮಿ ‘ವಸಂತವ್ವ...ಎತ್ ನೋಡ್ಕಬತ್ತೀನಿ’ ಅಂತ ಕೂಗಿ ಉತ್ತರಕ್ಕೂ ಕಾಯದೆ ದಿಬ್ಬದ ಕಡೆಗೆ ಹೋದ. ತಮ್ಮ, ತಂಗಿಯ ಜೊತೆಗೆ ಬೆಳಗಿನ ತಿಂಡಿ ತಿನ್ನುತ್ತಿದ್ದ ವಾಸಂತಿ ‘ಅಪ್ಪ ಹೇಳಿದ್ದು ಹನ್ನೆರಡು ಗಂಟೆಗಲ್ವೆನೋ ಪರಮಿ’ ಅಂತ ಕೂಗಿ ಹೇಳುವ ಅಂದುಕೊಂಡಳಾದರೂ ಅವನ ಮುಖದ ಮೇಲೆ ಹೊಸದಾಗಿ ಮೂಡಿರುವ ಮೀಸೆ ನೆನಪಾಗಿ ಅವನನ್ನು ಹೇಗೆ ಕರೆಯಬೇಕೆನ್ನುವ ಗೊಂದಲದಲ್ಲಿ ಏನೂ ಹೇಳದೆ ಸುಮ್ಮನಾದಳು.
ತಿಂಡಿ ತಿಂದು ಬಂದು ಗೋಡೆಯ ಮೇಲಿದ್ದ ಗಡಿಯಾರದ ದೊಡ್ಡ ಮುಳ್ಳು ಸಣ್ಣ ಮುಳ್ಳುಗಳನ್ನು ನೋಡಿ ಕೈ ಬೆರಳು ಮಡಿಸಿ ಈಗಿನ್ನೂ ಗಂಟೆ ಒಂಬತ್ತೂವರೆ, ಬರೀ ಮೈಗಳ್ಳ ಈ ಪರಮಿ ಎಂದು ಬೈದುಕೊಂಡವಳು ಹಿಂದಿನ ಮುಂದಿನ ಬಾಗಿಲನ್ನು ಹಾಕಿ ಕೋಣೆಗೆ ಬಂದಳು.
ಹೊತ್ತು ಹೋಗಲು ಡ್ರಾಯಿಂಗ್ ಪುಸ್ತಕ ತೆಗೆದು ಹಳೆಯ ಬಣ್ಣದ ಟ್ಯೂಬುಗಳನ್ನು ಗಟ್ಟಿಯಾಗಿ ಹಿಂಡಿ ಸಿಕ್ಕಿದ ಒಂದೊಂದೇ ತೊಟ್ಟು ಬಣ್ಣವನ್ನು ಮಿಕ್ಸ್ ಮಾಡಿ ಬ್ರಷ್ಷಿನಲ್ಲಿ ಹಚ್ಚುವಾಗ ಒಂಚೂರು ನಿರಾಳವೆನಿಸಿತು.
ಅಕ್ಕ ಬಿಡಿಸುತ್ತಿದ್ದ ಹಕ್ಕಿಯ ಚಿತ್ರಕ್ಕೆ ಬಾಲ ಇನ್ನೂ ಸ್ವಲ್ಪ ಉದ್ದವಿರಬೇಕಿತ್ತು ಅಂತ ತಮ್ಮ, ತಂಗಿ ಇಬ್ಬರೂ ಬಹಳ ಹೊತ್ತು ಚರ್ಚಿಸಿದರಾದರೂ, ವಾಸಂತಿ ಆಮೇಲೆ ಬಿಡಿಸಿದ ಬೆಟ್ಟ ಮತ್ತು ಹುಡುಗಿಯ ಕಡೆಗೆ ಬಹಳ ಕುತೂಹಲದಿಂದ ಗಮನಿಸುತ್ತ,
ಬಾಗಿಲಿಗೆ ಈ ಬಣ್ಣ, ಲಂಗಕ್ಕೆ ಈ ಬಣ್ಣ ಎನ್ನುತ್ತಾ ಬಣ್ಣಗಳನ್ನು ಹಿಂಡಿಹಿಂಡಿ ಕೊಡುತ್ತಿದ್ದರು. ಯಾಂತ್ರಿಕವಾಗಿ ಎಂಬಂತೆ ಬಣ್ಣ ಹಚ್ಚುತ್ತಿದ್ದ ವಾಸಂತಿಗೆ ಅದೂ ಬೇಸರವಾಗಿ ಅವೆಲ್ಲವನ್ನೂ ಅಲ್ಲೇ ಬಿಟ್ಟು ರಾತ್ರಿ ಸದ್ದಿನ ನೆನಪಲ್ಲೇ ಅಪ್ಪ ಅಮ್ಮನ ರೂಮಿಗೆ ಬಂದಳು.
ರೂಮು ವಿಪರೀತ ಅಸ್ತವ್ಯಸ್ತವಾಗಿತ್ತು. ಹೊರಡುವ ಗಡಿಬಿಡಿಯಲ್ಲಿ ಹೀಗಾಗಿದೆ ಎಂದುಕೊಳ್ಳುತ್ತಲೆ ಎಲ್ಲವನ್ನೂ ಸರಿ ಮಾಡುವಾಗ
ದಿಂಬು ಎತ್ತಿದವಳಿಗೆ ಅದರ ಕೆಳಗೆ ಅಮ್ಮನ ನುಂಗುವ ಗುಳಿಗೆಗಳು ಕಂಡು ಅದನ್ನು ಪಕ್ಕದ ಕಪಾಟಿಗಿಡಲು ಹೋದಾಗ ಬಟ್ಟೆಯ ಅಡಿಯಲ್ಲಿ ಯಾವುದೋ ಪುಸ್ತಕವೊಂದು ಕಾಣಿಸಿತು. ತನ್ನ ಕಳೆದು ಹೋಗಿದ್ದ ಕನ್ನಡ ಟೆಕ್ಸ್ಟ್ ಪುಸ್ತಕವೇ ಸಿಕ್ಕಿತೆನ್ನುವ ಸಂಭ್ರಮದಲ್ಲಿ ಅದನ್ನು ಹೊರಕ್ಕೆ ಎಳೆದಳು.
ಆದರೆ...ಆ..ದ..ರೆ...ಅದು
ಅದು ಅವಳ ಕನ್ನಡ ಪುಸ್ತಕವಲ್ಲ.
ಬಹಳ ತೆಳುಗಾತ್ರದ ಆ ಪುಸ್ತಕದ ಹೊರಗಿನ ಪುಟದಲ್ಲಿ….ವಾಸಂತಿಗೆ ಕೈಕಾಲು ನಡುಗಿದಂತಾಗಿ ಮುಖಪುಟ ನೋಡಲಾಗದೆ ಪುಟ ತೆರೆದಳು.
ಪ್ರತಿಪುಟದಲ್ಲೂ ಅಂತಹುದೇ ಚಿತ್ರಗಳು.
ಓದ ಹೋದವಳಿಗೆ ಅರ್ಥವಾದ, ಅರ್ಥವಾಗದ, ಅರ್ಥವಾದರೂ ಚಿತ್ರಿಸಿಕೊಳ್ಳಲಾಗದ ಮತ್ತೊಂದೇ ಲೋಕ ತನ್ನ ಸುತ್ತು ಹರಡಿಕೊಳ್ಳುತ್ತಿರುವಂತೆ ಭಾಸವಾಗಿ ಕಣ್ಣು ಕತ್ತಲಿಟ್ಟ ಹಾಗಾಯಿತು.
ತನಗೆ ಆಗಿಂದಲೂ ಕೇಳುತ್ತಿರುವ ಆ ಸದ್ದಿಗೂ ಈ ಪುಸ್ತಕಕ್ಕೂ ಸಂಬಂಧ ಇದೆಯೆನಿಸಿ, ಯಾಕೋ ತಾನು ವಿಪರೀತ ಕೆಟ್ಟವಳಾದ ಹಾಗೆ ಭಾಸವಾಗಿ ನಡುಗುತ್ತಾ ಪುಸ್ತಕವನ್ನು ಮತ್ತೆ ಇದ್ದಲ್ಲಿಯೇ ಇಟ್ಟು ಹೊರಗೆ ಬಂದಳು.
ಬಣ್ಣ ಹಚ್ಚುವುದರಲ್ಲಿ ಮಗ್ನರಾಗಿದ್ದ ತಮ್ಮ, ತಂಗಿಯಂತೇ ತಾನೂ ಚಿಕ್ಕವಳಿರಬೇಕಿತ್ತು ಎಂದುಕೊಂಡು, ಎದೆಯ ಭಾರವನ್ನು ದೊಡ್ಡದಾದ ಉಸಿರಿನೊಂದಿಗೆ ಹೊರ ಹಾಕಿದಳು ವಾಸಂತಿ.
––––––
ಬೆಳಿಗ್ಗೆ ವಾಸಂತಿಯಿಂದ ಏಟು ತಿಂದು ಮಲಗೇ ಇದ್ದ ಕರೀ ನಾಯಿ ಮರಿ ತನ್ನ ಸ್ವರವನ್ನೆಲ್ಲಾ ಒಟ್ಟು ಸೇರಿಸಿ ಬೊಗಳುತ್ತಿದೆ. ತೀವ್ರ ಯೋಚನೆಯಲ್ಲಿದ್ದ ವಾಸಂತಿಗೆ ಕಳೆದ ತಿಂಗಳು ಹೊಸ್ತಿಲಿನವರೆಗೂ ಬಂದು ಹೆಡೆಯೆತ್ತುತ್ತಿದ್ದ ಹಾವಿನ ಚಿತ್ರ ಕಣ್ಣು ಮುಂದೆ ಬಂದು ಒಂದು ಕ್ಷಣ ಭಯವಾಯಿತು. ಈಚೀಚೆಗೆ ಕನಸಲ್ಲೂ ವಿಚಿತ್ರ ಹಾವುಗಳು ಕಾಣಿಸಿ ವಾಸಂತಿ ಬೆಚ್ಚಿ ಎದ್ದು ಕೂರುತ್ತಿದ್ದಳು.
ಹಾವೇ ಬಂದಿರಬಹುದೆಂದು ನಡುಗುತ್ತ ಮೆಲ್ಲಗೆ ಕದತೆಗೆದು ಹೊರಬಂದರೆ, ಪರಮಿ ದಿಬ್ಬದಲ್ಲಿದ್ದ ಸೀಬೆ ಮರ ಹತ್ತಿ ಕೂತಿದ್ದಾನೆ!
ನಾಯಿ ಅವನನ್ನು ನೋಡೇ ಬೊಗಳಿದ್ದು.
ಮರ ಹತ್ತಿದ್ದ ಪರಮಿಯನ್ನು ಕಂಡದ್ದೇ ವಾಸಂತಿ ತನ್ನ ಉದ್ದಲಂಗ ತೊಡರದಂತೆ ಸ್ವಲ್ಪ ಮೇಲೆತ್ತಿ ದಿಬ್ಬದೆಡೆಗೆ ಓಡಿಬಂದವಳು ‘ನಂಗೆರಡು ಪೇರಲೆ ಕಿತ್ಕೊಡೋ ಪರಮೀ’ ಅಂದಳು.
ಸೀಬೆಹಣ್ಣನ್ನೇ ಮನದಲ್ಲಿ ತುಂಬಿಕೊಂಡವಳಿಗೆ ಅವನನ್ನು ಹೇಗೆ ಕರೆಯಬೇಕೆಂಬ ಗೊಂದಲ ಮರೆಯಾಗಿತ್ತು.
‘ಓ ವಸಂತವ್ವ..ಕೂಯ್ಕೊಡ್ತಿನಿ..ಗೌಡ್ರಿಗೆ ಹೇಳಬ್ಯಾಡಿ ಮತ್ತೆ’ ಎಂದ ಪರಮಿ.
ನಮ್ ಸೀಬೆಮರದಲ್ಲಿ ಹಣ್ಣು ಕಿತ್ತುಕೊಡ್ಲಿಕ್ಕೆ ನನಗೇ ಷರತ್ತು ಹೇಳ್ತಿದಾನೆ ಎನಿಸಿ ಸಿಟ್ಟು ಬಂದರೂ ‘ಜಾಸ್ತಿ ಕಿತ್ತರೆ ಹೇಳದೆಯಾ.
ಅಕೋ. ಅಲ್ಲಿ ನೋಡಲ್ಲಿ. ಮೇಲಿನ ಕೊಂಬೆಲಿ..ಮೂರು ದಪ್ಪನೆ ಹಣ್ಣಿದಾವಲ್ಲ. ಅವು ನನಗೆ ಕಿತ್ತುಕೊಡು. ನೀ ಎರಡು ತಿನ್ನು’ ಅಂತ ಪಾಲು ಹಂಚಿದಳು ವಾಸಂತಿ.
‘ಓ...ನೀವ್ ಗೌಡ್ರಿಗಿಂತ ಆಬೋದು ಬುಡಿ ವಸಂತವ್ವ’ ಅಂತ ಪರಮಿ ಜೋರು ನಕ್ಕು ಅವಳಿಗಾಗಿ ತುದಿಗೊಂಬೆಗೆ ಹತ್ತಿ ಹಣ್ಣು ಕಿತ್ತುಕೊಟ್ಟವನು ತನ್ನ ಚಡ್ಡಿ ಮತ್ತು ಶರ್ಟಿನ ಜೇಬು ಹಿಡಿಯುವಷ್ಟು ಹಣ್ಣುಗಳನ್ನು ಕಿತ್ತು ತುಂಬಿಸಿಕೊಳ್ಳತೊಡಗಿದ.
‘ಏಯ್..ಕೀಳಬೇಡ ಕಣೋ. ಅಷ್ಟೊಂದು.. ಇರು ನಿಂಗೆ ಅಪ್ಪ ಬಂದ ಮೇಲೆ ಹೇಳ್ತೀನಿ...ಏಏಏಎ ಪರಮೀ’
ಅವಳ ಮಾತನ್ನು ಗಮನಿಸದವನಂತೆ ಕಿತ್ತು ತುಂಬಿಸಿಕೊಂಡ ಪರಮಿ ಮರದಿಂದ ಇಳಿಯುವಾಗ ಹೊಲಿಗೆ ಹಾಕಿದ್ದ ಅವನ ಚಡ್ಡಿ ಜೇಬು ಹರಿದು ಹಣ್ಣುಗಳು ತಪತಪನೆ ಕೆಳಗುರುಳಿದವು.
‘ಹಂಗೇ ಆಗ್ಬೇಕು ನಿಂಗೆ. ಅದಿಕ್ಕೆ....ದೇವರು ಶಿಕ್ಷೆ ಕೊಡ್ತಾನೆ ಅಂತ ಹೇಳಾದು’ ಎನ್ನುತ್ತಾ ಬಿದ್ದ ಸೀಬೆಹಣ್ಣುಗಳನ್ನು ತನ್ನ ಉದ್ದಲಂಗಕ್ಕೆ ತುಂಬಿಕೊಳ್ಳತೊಡಗಿದಳು ವಾಸಂತಿ.
ಅದನ್ನು ಕಂಡು ಜೀವವೇ ಹೋದವನಂತೆ ಒಂದೇ ನೆಗೆತಕ್ಕೆ ಕೆಳಗೆ ಹಾರಿದ ಪರಮಿ
‘ಅವ್ವೂ..ಅವ್ವು..ಅವು ನನ್ನವು..ಎಲ್ಲಾನೂ ನೀವೇ ತಗಂಡ್ರಲಾ....ಕೊಡ್ರಾ’ ಎನ್ನುತ್ತಾ ಅವಳು ತುಂಬಿಕೊಳ್ಳುತ್ತಿದ್ದ ಸೀಬೆಹಣ್ಣಿನ ಮಡಿಲಿಗೆ ಕೈ ಹಾಕಿದ.
ಕೈ ಹಾಕಿದವನಿಗೆ ಏನೋ ತಾಗಿದಂತಾಗಿ ಗಾಬರಿಯಾಗಿ ಗಕ್ಕನೆ ಕೈ ಆಚೆ ತೆಗೆದ ಪರಮಿ ಒಂದು ಕ್ಷಣ ಕಕ್ಕಾವಿಕ್ಕಿಯಾದ.
‘ಹೋಗಲೋ’ ಎಂದವಳನ್ನು ನೋಡಲಾಗದೆ ಎಲ್ಲೋ ನೋಡುವವನಂತೆ ಅವಳ ಕಣ್ಣು ತಪ್ಪಿಸಿದ.
ಇದಾವುದರ ಪರಿವೆಯಿಲ್ಲದ ವಾಸಂತಿ ಮಾತ್ರ ತನಗೆ ಸಿಕ್ಕಿದ ಹೆಚ್ಚುವರಿ ಹಣ್ಣಿನಿಂದ ಖುಷಿಯಾಗಿ ಪರಮಿಗೆ ಹಂಗೇ ಆಗ್ಬೇಕು ಅಂದುಕೊಳ್ಳುತ್ತಾ ತನ್ನ ಲಂಗದೊಳಗಿದ್ದ ಹಣ್ಣುಗಳನ್ನು ಮತ್ತೆಮತ್ತೆ ನೋಡುತ್ತಾ ಹೊರಡಲನುವಾದಳು.
ಕಿತ್ತ ಹಣ್ಣುಗಳೆಲ್ಲವೂ ತನಗೆ ಸಿಗದ ಬೇಸರಕ್ಕೂ, ಈಗಷ್ಟೇ ಅಚಾನಕ್ಕು ದಕ್ಕಿದ ಪುಳಕಕ್ಕೂ ಪರಮಿಯ ಮನಸ್ಸು ಕೊಳದಲ್ಲಿ ಬಿದ್ದ ಹೂವಾಗಿತ್ತು.
ಕೆಳಕ್ಕೆ ಬಿದ್ದಿದ್ದ ಕಸಗಾಯನ್ನು ಆಯ್ದುಕೊಳ್ಳಲು ಬಗ್ಗಿದ ಪರಮಿಗೆ ಎತ್ತಿದ ಲಂಗದಿಂದಾಗಿ ವಾಸಂತಿಯ ದುಂಡುದುಂಡಗಿನ ಬೆಳ್ಳನೆಯ ಕಾಲುಗಳು ಪಳಪಳನೆ ಹೊಳೆದು ಅವನ ಮನಸ್ಸು ಚುಳ್ಳೆಂದಿತು.
ಏನು ನಡೆಯುತ್ತಿದೆಯೆಂದು ಗೊತ್ತಾಗುವಷ್ಟರಲ್ಲಿ ದಿಬ್ಬದ ಆ ಸೀಬೆ ಮರದಡಿಯಲ್ಲಿ ವಾಸಂತಿಯ ಲಂಗದಲ್ಲಿದ್ದ ಆ ಸೀಬೆಹಣ್ಣುಗಳಷ್ಟೂ ಉರುಳುರುಳಿ ಕೆಳಗೆ..ಕೆಳಗೆ...ಕೆಳಗೆ..ಜಾರಿ ಹೋದವು.
ಕನಸಲ್ಲಿ ವಾಸಂತಿ ಕಂಡ ಹಾವುಗಳೆಲ್ಲವೂ ಅವಳ ಮೈಮೇಲೆ ಹರಿದಾಡಿದವು.
ಹಿಂದಿನ ರಾತ್ರಿ ವಾಸಂತಿ ಮಾತ್ರ ಕೇಳಿಸಿಕೊಂಡಿದ್ದ ಮುಚ್ಚಿದ ಕೋಣೆಯಿಂದ ಬರುತ್ತಿದ್ದ ಆ ಸದ್ದಿನಂತಹುದ್ದೇ ಶಬ್ದ ಆ ಮರದ ತುಂಬಾ ತೊನೆದಾಡುತ್ತಿದ್ದ ಆ ಸೀಬೆಹಣ್ಣುಗಳಿಗೂ, ಪಕ್ಕದ ಕಾಡುಗುತ್ತಿಗೂ, ಪಪ್ಪಾಯ ಕುಕ್ಕುತ್ತಿದ್ದ ಕರ್ರನೆಯ ಕಾಗೆಗೂ ಕೇಳಿ ಅವು ಒಮ್ಮೆ ತಿರುಗಿ ನೋಡಿದವು. ಓತಿಕ್ಯಾತವೊಂದು ನೋಡಬಾರದ್ದು ನೋಡಿದಂತೆ ಓಡಿಹೋಯಿತು.
ಹತ್ತಾರು ನಿಮಿಷಗಳ ನಂತರ ವಾಸಂತಿ ಮತ್ತೆ ತನ್ನ ಉದ್ದಲಂಗದ ಸದ್ದಿನಿಂದಾಗಿ ತಮ್ಮ, ತಂಗಿ ಕಿಟಿಕಿಯಿಂದ ಎಲ್ಲಿ ಈಚೆ ನೋಡುತ್ತಾರೋ ಎನ್ನುವ ಹೆದರಿಕೆಯಲ್ಲಿ ಲಂಗವನ್ನು ತುಸುವೇ ಮೇಲಕ್ಕೆತ್ತಿ ಬಿಕ್ಕುತ್ತಾ ಓಡಿಬಂದು ಮನೆ ಸೇರಿಕೊಂಡವಳು ಬೇಗನೆ ಮುಂದಿನ ಕದ ಬಿಗಿದಳು.
ಇನ್ನರ್ಧ ಗಂಟೆಯಲ್ಲಿ ‘ಕದ ತೆಗಿರಿ...ಅವ್ವೂ…’
ಅಂತ ಭಾರವಾಗಿ ಪಿಸುಗುಡುವ ಸದ್ದೊಂದು ಮತ್ತೆಮತ್ತೆ ಮುಂದಿನ ಬಾಗಿಲು ಬಡಿಯತೊಡಗಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.