ಆಗಸದಲ್ಲಿ ಮುಂಗಾರು ಮೋಡಗಳು ಒತ್ತರಿಸಿ, ಧಡ್ ಧಡಾಲ್ ಎಂದು ಅಬ್ಬರಿಸುತ್ತ ಬೆಂಕಿಯುಗುಳುವುದಕ್ಕೆ ಸರಿಯಾಗಿ ಹೊನ್ನೂರಿನ ಹೊರಗಿರುವ ಸಂಪಿಗೆ ಮರದ ಕಟ್ಟೆಯೆದುರು ಕಚ್ ಕಚಕ್ ಎಂದು ಎರಡು ತಲೆಗಳುರುಳಿ ಇಡೀ ಹಳ್ಳಿಯೇ ನಿಬ್ಬೆರಗಾಗಿ ನಿಂತುಬಿಟ್ಟಿತು. ತಲೆ ಕತ್ತರಿಸಿ ಬಿದ್ದ ಹುಡುಗರ ದೇಹದಿಂದ ಹರಿದ ರಕ್ತದ ಕೋಡಿಯನ್ನು ಒರೆಸಲೋ ಎಂಬಂತೆ ಅಬ್ಬರಿಸಿ ಸುರಿದ ಮಳೆ ಎಲ್ಲವನ್ನೂ ತೊಳೆದು ಹೊಳೆಯ ಕೆಂಪಿನೊಂದಿಗೆ ಬೆರೆಸಿಬಿಟ್ಟಿತು.
ಅಲ್ಲೆಲ್ಲೋ ನಡೆಯುತ್ತಿದ್ದ ಪುಂಡು ಹುಡುಗರ ನಡುವಿನ ಜಗಳ ಇಂಥದೊಂದು ಅನಾಹುತವನ್ನು ತಂದಿಡಬಹುದೆಂಬುದರ ಕಿಂಚಿತ್ ಮುನ್ಸೂಚನೆಯೂ ಇಲ್ಲದ ಊರ ಹಿರಿಯರಿಗೆಲ್ಲ ಏನು ನಡೆಯಿತೆಂಬುದು ಅರಿವಾಗುವ ಮೊದಲೇ ಊರಿಗಿದ್ದ ಒಂದೇ ಒಂದು ಮರದ ಸಂಕವನ್ನು ದಾಟಿ ಪೋಲೀಸರ ದಂಡು ಊರೊಳಗೆ ಕಾಲಿಟ್ಟಿತು. ಪೋಲೀಸರ ಎದುರು ಮಕ್ಕಳು, ಎಳೆಯ ಹೆಂಗಸರು ಸುಳಿಯುವುದು ಮಹಾಪರಾಧವೆಂಬ ಊರ ಕಟ್ಟಳೆಗಳಿಗನುಗುಣವಾಗಿ, ಗಂಡಸರು ಮತ್ತು ಅಜ್ಜಿಯಂದಿರು ಮಾತ್ರವೇ ಸಂಪಿಗೆ ಮರದಡಿಗೆ ನಿಂತರು. ಅವರಲ್ಲಿ ಕೆಲವರು ಇನ್ನೇನಾದರೂ ಈ ಮರ್ಡರ್ ಕೇಸಿನಲ್ಲಿ ತಮ್ಮನ್ನು ಸಿಕ್ಕಿಸಿದರೆ ಎಂಬ ಭಯದಲ್ಲಿ ಒಳಗೊಳಗೇ ನಡುಗುತ್ತಿದ್ದರು. ಪೋಲೀಸರು ಕತ್ತರಿಸಿ ಬಿದ್ದ ದೇಹದ ಹತ್ತಿರಕ್ಕೆ ಯಾರೊಬ್ಬರೂ ಸುಳಿಯದಂತೆ ಮೊದಲಿಗೆ ತಾಕೀತು ಮಾಡಿದರಾದರೂ, ಹತ್ತಿರ ಹೋಗಿ ನೋಡಿದಾಗ ಯಾವ ತಲೆಗೆ ಯಾವ ದೇಹವೆಂಬುದು ತಿಳಿಯದೇ ದೂರ ನಿಂತಿದ್ದ ಕೆಲವರನ್ನು ಹತ್ತಿರ ಕರೆದರು. ಅವರೊಂದಿಗೇ ಬಂದ ಫೋಟೋಗ್ರಾಫರ್‌ಗಳು ಅವರ ನಿರ್ದೇಶನದಂತೆ ಅಲ್ಲಿಂದ, ಇಲ್ಲಿಂದ ಎಲ್ಲ ಕಡೆಯಿಂದಲೂ ಚಕಚಕನೆ ಚಿತ್ರ ತೆಗೆಯುತ್ತಿದ್ದರು. ತಕ್ಷಣವೇ ಹೆಣಗಳನ್ನು ತಾಲೂಕು ಆಸ್ಪತ್ರೆಗೆ ಕೊಂಡೊಯ್ದು ಪೋಸ್ಟ್ ಮಾರ್ಟಂ ಮಾಡಬೇಕೆಂದು ಅಲ್ಲಿ ನೆರೆದವರಿಗೆ ಹೇಳಿದವರೇ, ದೇಹಗಳನ್ನು ರಸ್ತೆಯಲ್ಲಿ ನಿಂತಿರುವ ಆಂಬುಲೆಲ್ಸ್‌ಗೆ ಸಾಗಿಸಲು ಸಹಾಯ ಮಾಡುವಂತೆ ವಿನಂತಿಸಿಕೊಂಡರು. ಧೈರ್ಯಸ್ಥರಾದ ಅಥವಾ ಕೃತಕವಾಗಿ ಗಂಡಸುತನವನ್ನು ತಮ್ಮೊಳಗೆ ಆವಾಹಿಸಿಕೊಂಡ ಕೆಲ ಯುವಕರು ಬೇರಾದ ರುಂಡ, ಮುಂಡಗಳನ್ನು ಹತ್ತಿರವಿಟ್ಟು ಸ್ಟ್ರೆಚರ್‌ನಲ್ಲಿ ಮಲಗಿಸುವಾಗ ಅಲ್ಲೇ ನಿಂತಿದ್ದ ದ್ಯಾಮಜ್ಜಿ, ‘ಎಲಾ ಸಿವನೆ, ಇವ್ರೂ ನಿನ್ನ ಮಕ್ಳೇ ಅಲ್ವೇನೋ ದ್ಯಾವ್ರೆ? ನಿನ್ ಮಗ ಹೀಗೆ ತಲೆಕಡಿದು ಬಿದ್ದಾಗ ಆನೆಯ ತಲೆಕೂಡಿಸಿ ಜೀವ ಕೊಟ್ಯಲ್ಲೊ. ಈಗ್ನೋಡು, ಅವ್ರದ್ದೇ ತಲೆ, ಅವ್ರದ್ದೇ ದೇಹ, ಜೀವ ಇದೆ ಅನ್ನೋ ಥರಾ ಹಸಿಯಾಗೈತಲ್ಲೋ. ಜೀವ ನೀಡಿ ಕಾಪಾಡು ತಂದೆ’ ಎಂದು ಗಟ್ಟಿಯಾಗಿ ಪ್ರಾರ್ಥಿಸುತ್ತ ಮುಗಿಲಿನ ಕಡೆಗೆ ನೋಡಿ ಕೈ ಮುಗಿಯತೊಡಗಿದಳು. ಅಜ್ಜಿಯ ಮಾತು ಕಿವಿಗೆ ಬಿದ್ದದ್ದೇ ಪೋಲೀಸರ ಆಗಮನದಿಂದ ದೈನಂದಿನ ಮಾತಿನ ಚಹರೆಯನ್ನೇ ಮರೆತಿದ್ದ ಕೆಲ ಗಂಡಸರು ಅವಳ ಮಾತಿಗೆ ಮಾತು ಸೇರಿಸುತ್ತ ಗದ್ಗದಿತರಾಗತೊಡಗಿದರು. ಅವರ ದುಃಖದ ಕಟ್ಟೆಯೊಡೆದರೆ ದುಃಖದ ಪ್ರವಾಹ ಇನ್ನಷ್ಟು ಬಿರುಸುಗೊಂಡು ಮತ್ತೇನಾದರೂ ಅನಾಹುತವಾದೀತೇನೊ ಎಂಬ ಭಯದಿಂದ ಅಲ್ಲಿದ್ದ ಪೋಲಿಸ್ ಆಫೀಸರ್ ತನ್ನ ಗಡಸು ದನಿಯನ್ನು ಇನ್ನಷ್ಟು ಗಡಸುಗೊಳಿಸುತ್ತಾ, ‘ಏಯ್, ಸೈಲೆನ್ಸ್, ಏನಾಗಿದ್ಯೋ ಅದು ಆಗಿಹೋಗಿದೆ. ಅದರ ಬಗ್ಗೆ ಇನ್ನು ನೀವ್ಯಾರೂ ಮಾತನಾಡೋದು ಬ್ಯಾಡ. ಎಲ್ಲ ಕಾನೂನು, ಕೋರ್ಟ್‌ನಲ್ಲಿ ತೀರ್ಮಾನ ಆಯ್ತದೆ. ಅಲ್ಲಿತನಕ ಬಾಯಿ, ತಿಕ ಅಮಿಕಂಡು ಇರಬೇಕು ತಿಳೀತಾ? ಇಂದಿನಿಂದಲೇ ಇಡೀ ಊರಿನಲ್ಲಿ ಸೆಕ್ಷನ್ ಜಾರಿ ಮಾಡಿದ್ದೇವೆ. ಸಂಜೆ ಆರರ ನಂತರ ನರಪಿಳ್ಳೇನೂ ಮನೆಯಿಂದ ಹೊರಗೆ ಓಡಾಡಬಾರದು’ ಎಂದು ಎಚ್ಚರಿಸಿದರು. ಸ್ಟ್ರೆಚರ್ ಮೇಲೆ ಎರಡೂ ದೇಹಗಳು ಆಚೆಗೆ ಸಾಗುತ್ತಿರುವಂತೆ ಎಲ್ಲರೂ ತಮ್ಮ ತಮ್ಮೊಳಗೆ ಚರ್ಚಿಸುತ್ತಾ ಮನೆದಾರಿ ಹಿಡಿದರು. ಸಂಬಂಧಿಸಿದ ಕೆಲವರು ಮಾತ್ರವೇ ತಾಲೂಕು ಆಸ್ಪತ್ರೆಯೆಡೆಗೆ ಹೊರಟರು.
ಆ ಕ್ಷಣದಿಂದಲೇ ಇನ್ನೊಂದು ಪ್ರವರ ಶುರುವಾಗಿತ್ತು. ಕಂಡು ಕೇಳರಿಯದ ಈ ಊರಿನ ದಾರಿಯನ್ನು ಅದು ಹೇಗೋ ಪತ್ತೆ ಹಚ್ಚಿದ ಟಿ.ವಿ.ಯ ಮಂದಿ ತಲೆಯುರುಳಿದ ಜಾಗದಲ್ಲಿ ನಿಂತು ಸುತ್ತೆಲ್ಲಾ ತಮ್ಮ ಕ್ಯಾಮರಾ ಕಣ್ಣನ್ನು ಹೊರಳಾಡಿಸುತ್ತಾ, ನೋಟಕ್ಕೆ ಸಿಲುಕಿದವರನ್ನೆಲ್ಲಾ, ‘ಬೈಟ್ ಪ್ಲೀಸ್’ ಎಂದು ಹಳ್ಳಿಯವರಿಗೆ ಅರ್ಥವಾಗದ ಭಾಷೆಯಲ್ಲಿ ಕೇಳುತ್ತಾ, ಅವರ ಮುಂದೆ ಮೈಕ್ ಹಿಡಿಯತೊಡಗಿದರು. ಟಿ.ವಿ.ಯಲ್ಲಿ ಕಾಣಿಸಿಕೊಳ್ಳುವ ಬಯಕೆಯ ಕೆಲ ಗಂಡು ಹೈಕಳು ಕೈಯ್ಯಲ್ಲಿಯೇ ತಮ್ಮ ಕೂದಲನ್ನು ಸರಿಪಡಿಸಿಕೊಂಡು, ತಮ್ಮದಲ್ಲದ ಪೇಟೆಯ ಭಾಷೆಯನ್ನು ಬಲಾತ್ಕಾರವಾಗಿ ನಾಲಿಗೆಯ ಮೇಲೆ ಬರಿಸಿಕೊಂಡು ನಡೆದ ಘಟನೆಯ ಬಗ್ಗೆ, ಸತ್ತ ತಮ್ಮ ಗೆಳೆಯರ ಬಗ್ಗೆ ಅಷ್ಟಿಷ್ಟು ಮಾತನಾಡತೊಡಗಿದರು. ಇಡಿಯ ಊರೇ ದುಃಖದಲ್ಲಿ ತೇಲಾಡಬೇಕಾದ ಹೊತ್ತಿನಲ್ಲಿ ಅಳುವುದಕ್ಕೂ ಬಿಡದೇ ನಡೆಯುತ್ತಿರುವ ಕ್ಷಣಕ್ಷಣದ ಬೆಳವಣಿಗೆಯ ಬಗ್ಗೆ ಊರ ಹೆಂಗಸರೆಲ್ಲರೂ ಭಯಗೊಳ್ಳುತ್ತಾ, ಬೆಳ್ಳಂಬೆಳಿಗ್ಗೆ ಎದ್ದು ತಂಬಿಗೆ ಹಿಡಿದು ಪೊದೆಯ ಮರೆಯಲ್ಲಿ ಕುಳಿತಾಗಲೂ ಎಲ್ಲಿಯಾದರೂ ಕ್ಯಾಮೆರಾ ಕಣ್ಣಿಗೆ ತಾವು ಬಿದ್ದರೇನು ಗತಿಯೆಂದು ಒಳಗೊಳಗೇ ಬೆಚ್ಚಿಬೀಳುತ್ತಿದ್ದರು. ದೂರದ ಅದ್ಯಾವುದೋ ಊರಿನಲ್ಲಿ ಇಂತಹ ಘಟನೆಗಳು ನಡೆದಾಗ ಇಡೀ ದಿನ ಟಿ.ವಿ.ಯಲ್ಲಿ ಅದನ್ನೇ ತೋರಿಸುತ್ತಿದ್ದುದನ್ನವರು ಬಿಟ್ಟ ಕಣ್ಣು ಬಿಡದಂತೆ ನೋಡುತ್ತಿದ್ದರಾದರೂ, ಇಂದು ತಮ್ಮದೇ ಊರಿನ ವಿಷಯ ಪದೇ ಪದೇ ಬರುತ್ತಿದ್ದುದನ್ನು ಕಂಡು ಏನೆನ್ನಬೇಕೆಂದು ತಿಳಿಯದವರಾಗಿದ್ದರು. ತಾವು ದಿನವೂ ನೋಡುತ್ತಿದ್ದ ತಮ್ಮೂರಿನ ಜಾಗೆ ಇಷ್ಟೊಂದು ಸುಂದರವಾಗಿದೆಯೇ? ಅಥವಾ ಆ ಸುಡುಗಾಡು ಟಿ.ವಿ.ಯವರು ತೋರಿಸುವಾಗ ಬಣ್ಣ-ಗಿಣ್ಣ ತುಂಬಿ ಚಂದ ಮಾಡಿ ತೋರಿಸುವರೋ ಎಂದು ದಿಗಿಲುಗೊಂಡರು!
ಹೀಗೆ ರಾತ್ರಿ, ಬೆಳಗು ವ್ಯತ್ಯಾಸವಿಲ್ಲದೇ ಬೆರೆಸಿಹೋದ ದಿನವೊಂದು ಹೊರಳುವುದರೊಳಗಾಗಿ ಊರಿನಿಂದ ಹೊರಟ ದೇಹಗಳು ತಾಲೂಕು ಆಸ್ಪತ್ರೆಯಲ್ಲಿ ರುಂಡ, ಮುಂಡಗಳನ್ನು ಜೋಡಿಸಿಕೊಂಡು ಊರೊಳಗೆ ಬಂದು ತಮ್ಮ, ತಮ್ಮ ಕುಟುಂಬಗಳ ಮನೆಗೆ ಸೇರಿ ಎಲ್ಲರನ್ನೂ ಶೋಕಸಾಗರದಲ್ಲಿ ಮುಳುಗಿಸಿ, ಪಂಚಭೂತಗಳಲ್ಲಿ ಲೀನವಾಗಿ ಹೋದವು. ಅವರ ಶಿರಗಳುರುಳಿದ ಘಳಿಗೆಯಿಂದ ಮೊದಲುಗೊಂಡು ಒಂದರಗಳಿಗೆ ಬಿಡದೇ ಭೋರೆಂದು ಸುರಿದ ಮಳೆ ಊರಿಗೆ ಬರಲು ಇರುವ ಒಂದೇ ಒಂದು ಕಿರುದಾರಿಯನ್ನೂ ಮುಳುಗಿಸಿ ಊರನ್ನು ಜಗತ್ತಿನ ಸಂಪರ್ಕದಿಂದ ಬೇರ್ಪಡಿಸಿಬಿಟ್ಟಿತು. ಸುರಿದ ಮಳೆಗೆ ಭೂಮಿಯೊಳಗಡಗಿದ್ದ ಬಿತ್ತಗಳೆಲ್ಲ ಮಣ್ಣೊಡೆದು ಹೊರಚಾಚುವಂತೆ ಊರ ಮಕ್ಕಳಿಬ್ಬರ ಸಾವಿನ ಬಗ್ಗೆ ಸಾವಿರ ಕತೆಗಳು ಊರತುಂಬಾ ಹರಡಿ ಗಂಧ ಬೀರತೊಡಗಿದವು.
ಹೆಣವಾಗಿ ಉರುಳಿದ ಊರ ಗೌಡರ ಮಗ ಶರಣ, ದುಬಾಯಿಯಲ್ಲಿರುವ ಶ್ರೀಮಂತ ಅಬ್ಬು ಬ್ಯಾರಿಯವರ ಮಗ ಹುಸೇನ ಒಂದೇ ವರ್ಷ ಹುಟ್ಟಿದವರು. ಊರ ನಡುವಿರುವ ಸರಕಾರಿ ಶಾಲೆಯಲ್ಲಿ ಒಟ್ಟಿಗೆ ಕೈ, ಕೈ ಹಿಡಿದು ಕಲಿತವರು, ಬಿಡುವಿನಲ್ಲಿ ಹುಲಿ-ದನದ ಆಟವಾಡಿದವರು. ಇವರ ಮನೆಯಲ್ಲವರು, ಅವರ ಮನೆಯಲ್ಲಿವರು ರಾತ್ರಿಯನ್ನು ಕಳೆದವರು. ಅವರವ್ವನೂ, ಇವರವ್ವನೂ ಮೀನು, ಮಸಾಲೆಗಳನ್ನು ಒಬ್ಬರಿಗೊಬ್ಬರು ಬದಲಾಯಿಸಿಕೊಂಡವರು. ಓದಲು ಶಾಣ್ಯಾರೆಂಬ ಇನಾಮು ಪಡೆದು ಇಬ್ಬರೂ ಪೇಟೆಯ ಕಾಲೇಜು ಸೇರಿದ್ದರು. ಹುಸೇನನ ತಂದೆ ಮಗನಿಗೆಂದು ಬೈಕು ಕೊಡಿಸಿದರೆಂದು ಶರಣನೂ ಬೈಕಿಗೆ ಹಣ ಕೇಳಿ ಅಪ್ಪನಿಂದ ಬೈಸಿಕೊಂಡ ಘಟನೆಯನ್ನು ಊರಿನವರೆಲ್ಲ ಜೋಕಿನಂತೆ ಹೇಳಿಕೊಂಡು ನಕ್ಕಿದ್ದರು. ನಿಯತ್ತಿನ ಮನುಷ್ಯರಾದ ದೊಡ್ಡೇಗೌಡರು ರಸ್ತೆಯೇ ಇಲ್ಲದ ಊರಿಗೆ ಬೈಕ್ ಎಂಬ ಶೋಕಿ ಏಕೆಂದು ಮಗನ ಬಾಯಿ ಮುಚ್ಚಿಸಿದ್ದರು. ಮೊದಲೆಲ್ಲ ಒಂದೇ ಬೈಕಿನಲ್ಲಿ ಒಬ್ಬರನ್ನೊಬ್ಬರು ತಬ್ಬಿಕೊಂಡು ಹೊಳೆಯಾಚೆಯವರೆಗೂ ಬರುತ್ತಿದ್ದವರು ಇತ್ತೀಚೆಗೆ ಬೇರೆ, ಬೇರೆಯಾಗಿ ಬಂದಿಳಿದುದನ್ನು ಊರಿನವರು ಗಮನಿಸಿದ್ದರೂ, ಏನೋ ಹುಡುಗು ಬುದ್ದಿಯೆಂದು ಕಡೆಗಣಿಸಿದ್ದರು. ಅಲ್ಲೆಲ್ಲೋ ಕಾಲೇಜಿನ ಅಡ್ಡೆಯಲ್ಲಿ ಬೇರೆ, ಬೇರೆ ಸಂಘಗಳಲ್ಲಿ ಸೇರಿಕೊಂಡು ಗೆಳೆಯರನ್ನೆಲ್ಲಾ ಸೇರಿಸಿ, ಗುಂಪು ಜಗಳ ಮಾಡಿ ಒಂದು ದಿನದ ಮಟ್ಟಿಗೆ ಪೋಲೀಸ್ ಠಾಣೆಯಲ್ಲಿ ಇದ್ದರೆಂಬ ಸುದ್ದಿಯೂ ಗುಸು, ಗುಸು ಊರಿನಲ್ಲಿ ಹರಡಿತ್ತು. ಹಳ್ಳಿಯ ಮಕ್ಕಳೆಲ್ಲ ಭೂಮಿ, ಕಾಣಿ ನೋಡಿಕೊಂಡು ಆರಾಮವಾಗಿರುವುದನ್ನು ಬಿಟ್ಟು ಕಾಲೇಜು ಕಟ್ಟೆ ಹತ್ತಿದರೆ ಇಂಥವೆಲ್ಲ ಆಗಿಯೇ ತೀರುತ್ತದೆಯೆಂದು ಕೆಲವು ಹಿರಿತಲೆಗಳು ಆಡಿಕೊಂಡು ನಕ್ಕಿದ್ದರು ಕೂಡ.
ಹೀಗೆ ಎಲ್ಲವೂ ಸಾಗುತ್ತಿರುವಾಗಲೇ ಆ ಬೇಸಿಗೆಯಲ್ಲಿ ನಡೆದ ಊರದೇವಿಯ ಹಬ್ಬದಲ್ಲಿ ಅವರಿಬ್ಬರ ನಡುವಿನ ಜಗಳದ ಕಾವು ಊರಿನವರಿಗೆಲ್ಲ ತಾಗಿತ್ತು. ಊರ ದೇವಿಯ ಉತ್ಸವವೆಂದರೆ ಇಡಿಯ ಊರೇ ಸಂಭ್ರಮದಿಂದ ಕಳೆಯೇರುತ್ತಿತ್ತು. ವಾರದ ಮೊದಲೇ ಊರಿನವರೆಲ್ಲ ಸೇರಿ, ವರ್ಗಿಣಿ ಹಾಕಿ ಒಂದಿಷ್ಟು ಹಣ ಸೇರಿಸಿ, ಗುಡಿಯ ಗೋಡೆಗಳಿಗೆ ಸುಣ್ಣ-ಬಣ್ಣವನ್ನು ಹೊಡೆಸುತ್ತಿದ್ದರು. ಅಲ್ಲಿಯೇ ಗುಡಿಯ ಆವರಣದಲ್ಲಿ ನಳನಳಿಸುತ್ತಿರುವ ಚಿಗುರು ಮಾವಿನ ಎಲೆಗಳನ್ನು ಪೋಣಿಸಿ ತೋರಣವನ್ನು ಕಟ್ಟುತ್ತಿದ್ದರು. ನಾಲ್ಕಾರು ಬಾಳೆಗಿಡಗಳನ್ನು ಗೊನೆಸಮೇತ ಕಡಿದು ತಂದು ಬಾಗಿಲಿಗೆ ಚಂದದ ಅಂಲಂಕಾರವನ್ನು ಮಾಡಿ, ದೇವಿಯ ಗುಡಿಯ ಮುಂದಿನ ಅಂಗಳವನ್ನು ಮಿದುಮಣ್ಣು ಹರಡಿ ಬಡಿದು ಹದಗೊಳಿಸುತ್ತಿದ್ದರು. ಊರ ಹೆಂಗಸರೆಲ್ಲರೂ ತಮ್ಮ, ತಮ್ಮ ಕೊಟ್ಟಿಗೆಯ ಸಗಣಿಯನ್ನು ಒಟ್ಟುಗೂಡಿಸಿ ತಂದು ಹರಡಿ, ಬಚ್ಚಲ ಒಲೆಯಲ್ಲಿ ಸುಟ್ಟ ತೆಂಗಿನ ಸಿಪ್ಪೆಯ ಕರಿಯನ್ನು ಸೇರಿಸಿ ಸಗಣಿಯನ್ನು ಕಡುಗಪ್ಪಾಗಿಸಿ, ಇಡಿಯ ಅಂಗಳವನ್ನು ಒಪ್ಪವಾಗಿ ಸಾರಿಸುತ್ತಿದ್ದರು. ಸಗಣಿಯ ನರುಗಂಪು ಸುತ್ತಲೆಲ್ಲ ಅರಳಿಸುವ ಹೂವಿನ ಸುಗಂಧದೊಂದಿಗೆ ಬೆರೆತು ಉತ್ಸವದ ವಾಸನೆಯನ್ನು ಇಡಿಯ ಊರಿಗೆ ಹರಡುತ್ತಿತ್ತು. ಉತ್ಸವದ ದಿನ ಇಡಿಯ ಊರಿಗೆ ಊರೇ ಅಲ್ಲಿ ನೆರೆದು ವರ್ಷವಿಡೀ ತಾವು ದೇವಿಗೆ ಹೇಳಿಕೆ ಮಾಡಿಕೊಂಡ ಹರಕೆಯನ್ನೆಲ್ಲ ಸಲ್ಲಿಸುತ್ತಿತ್ತು. ಸಾಮಾನ್ಯ ಜ್ವರ, ದದ್ದು ಬಂದವರೆಲ್ಲ ದೇವಿಗೆ ಸುತ್ತು ಬಲಿಯ ಸೇವೆ ಹೇಳಿಕೊಂಡರೆ, ಜೀವಕ್ಕೆ ಕುತ್ತು ಬಂದು ಪಾರಾದವರು ದೇವಿಗೆ ಕೋಳಿಯೊಪ್ಪಿಸುತ್ತಿದ್ದರು. ವ್ಯವಹಾರದಲ್ಲಿ ನಷ್ಟ, ಮನೆ ಬಿಟ್ಟು ಹೋದ ಮಗನ ದುಃಖ, ಮದುವೆಯಾಗದ ಹೆಣ್ಣಿನ ಕಡೆಯವರೆಲ್ಲ ಕುರಿಯನ್ನು ಹರಕೆಯಾಗಿ ಹೇಳಿಕೊಳ್ಳುವುದೂ ಇತ್ತು. ಸಣ್ಣ ಮಕ್ಕಳ ಅಮ್ಮಂದಿರು ತಮ್ಮ ಮಕ್ಕಳ ಬಾಲಗ್ರಹದ ನಿವಾರಣೆಗೆಂದು ತೆಂಗಿನ ಕಾಯಿಯ ತುಲಾಭಾರದ ಹರಕೆಯನ್ನೂ ಹೊರುತ್ತಿದ್ದರು. ಹೀಗೆ ದೇವಿಯ ಕರುಣೆಯ ಕಾರುಣ್ಯದ ಆ ದಿನ ಮಧ್ಯಾಹ್ನದ ಊಟ ಅಲ್ಲಿಯೇ ಗುಡಿಯ ಆವರಣದಲ್ಲಿ. ಸಂಜೆ ಮಾತ್ರ ಎಲ್ಲರ ಮನೆಯಲ್ಲಿ ಬಲಿಕೊಟ್ಟ ಕೋಳಿ, ಕುರಿಗಳ ಸಮಾರಾಧನೆ. ಊರ, ಪರವೂರ ಸಂಬಂಧಿಕರೆಲ್ಲರೂ ಈ ಹಳ್ಳಿಗೆ ಬರಲು ಇಂತಹ ಪ್ರಶಸ್ತ ದಿನ ಬೇರೆಯಿರಲಿಲ್ಲ. ಈ ಸಲ ಊರ ಗೌಡರ ಮನೆ ವಿಶೇಷ ಅತಿಥಿಗಳಿಂದ ತುಂಬಿ ತುಳುಕುತ್ತಿತ್ತು. ಶರಣನೊಂದಿಗೆ ಬಂದ ಅವರ ಗೆಳೆಯರ ತಂಡ ಊರಿಡೀ ತಿರುಗಾಡುತ್ತ, ದೇವಿಯ ಉತ್ಸವದ ತಯಾರಿಯಲ್ಲಿ ಉತ್ಸಾಹದಿಂದ ಭಾಗವಹಿಸುತ್ತ, ಇಡಿಯ ಊರಿಗೆ ಯೌವ್ವನದ ಕಳೆಯೇರಿಸಿದ್ದರು. ಪೇಟೆಯ ಹುಡುಗರಾದರೂ ಹಳ್ಳಿಯವರೊಂದಿಗೆ ಅವರು ಬೆರೆಯುತ್ತಿದ್ದ ರೀತಿ ಎಲ್ಲರ ಮನಸ್ಸನ್ನೂ ಗೆದ್ದಿತ್ತು.
ಊರ ಉತ್ಸವದ ಊಟದ ತಯಾರಿಗೆಂದು ಸಾಮಾನು ಪಟ್ಟಿ ತಯಾರಿಸಿ, ಖರೀದಿಗೆಂದು ಹೊರಡುವಾಗಲೇ ಅಪಸ್ವರದ ಕರಿನೆರಳು ಕೈಚಾಚಿತ್ತು. ಎಲ್ಲ ಸಾಮಾನುಗಳನ್ನೂ ಊರಿನ ಅಲಿಸಾಹೇಬರ ಅಂಗಡಿಯಿಂದಲೇ ಖರೀದಿಸುವುದು ವಾಡಿಕೆ. ಅದಕ್ಕೆಂದೇ ಅವರು ವಾರದ ಮುಂಚೆಯೇ ಬೇಕಾಗುವ ಸಾಮಾನುಗಳೆಲ್ಲವನ್ನೂ ಲಾರಿಯಲ್ಲಿ ಊರ ಹೊಳೆಯವರೆಗೆ ತಂದು, ಕೂಲಿಗಳ ನೆರವಿನಿಂದ ಅಂಗಡಿಗೆ ಸಾಗಿಸಿ ಶೇಖರಿಸಿಡುತ್ತಿದ್ದರು. ಉತ್ಸವದ ದಿನ ಕಡಿಮೆ ಬಿದ್ದಿತೆಂದರೆ ತಕ್ಷಣ ಹೋದವರಿಗೆ ಎಷ್ಟೊತ್ತಿಗೆ ಬೇಕಾದರೂ ಅಂಗಡಿಯ ಬಾಗಿಲು ತೆರೆದು ದಿನಸಿ ನೀಡುತ್ತಿದ್ದರು. ಲಾಟುಗಳ ಲೆಕ್ಕದಲ್ಲಿ ತೆಗೆದುಕೊಂಡದ್ದಷ್ಟಕ್ಕೆ ಲೆಕ್ಕವಿಡುತ್ತಿದ್ದರೆ ವಿನಾ ಚಿಲ್ಲರೆಗಳ ಲೆಕ್ಕವನ್ನು ಅವರು ಮಾಡಿದ್ದಿಲ್ಲ. ಇಂತಿಪ್ಪ ಹುಸೇನ ಸಾಹೇಬರ ಅಂಗಡಿಯಿಂದ ಸಾಮಾನು ತರುವುದು ಬೇಡವೆಂದು ಶರಣನ ಬಳಗ ಪಟ್ಟುಹಿಡಿದು ಕುಳಿತುಬಿಟ್ಟಿತು. ಎಷ್ಟೇ ಕಷ್ಟವಾದರೂ ತಾವೆಲ್ಲರೂ ಹೋಗಿ, ಪೇಟೆಯಲ್ಲಿ ತಮಗೆ ಪರಿಚಿತವಿರುವ ಅಂಗಡಿಯಿಂದಲೇ ಸಾಮಾನು ತರುತ್ತೇವೆಂದು ಹಠ ಹಿಡಿದಾಗ ಕೆಲಸದ ಗಡಿಬಿಡಿಯಲ್ಲಿರುವ ಹಿರಿಯರು ಹೇಗಾದರೂ ಸರಿ, ಸಮಯಕ್ಕೆ ಸರಿಯಾಗಿ ಸಾಮಾನು ಬಂದರಾಯಿತೆಂದು ಸುಮ್ಮನಾದರು. ಸಾಮಾನುಗಳ ಮೂಟೆಯನ್ನು ಹೊತ್ತು ತಂದ ಊರಿನ ಕೆಲವು ಹುಡುಗರು ಮಾತ್ರ, ‘ಶರಣಣ್ಣ ಹೇಳುವುದು ಸರಿಯಾಗಿಯೇ ಇದೆ. ನಮ್ಮ ಹಬ್ಬಕ್ಕೆ ಅವರ ಅಂಗಡಿಯಿಂದ ನಾವ್ಯಾಕೆ ಸಾಮಾನು ತರಬೇಕು? ಒಂದೇ ಊರಿನವನಾದರೂ ಅದ್ಯಾವುದೋ ಬೇರೆ ಸಂಘಟನೆಯೊಂದಿಗೆ ಸೇರಿ ಈ ಹುಸೇನ ಕಾಲೇಜಿನಲ್ಲಿಡೀ ಸೊಕ್ಕು ಹಾರಿಸುವುದು ನೋಡಬೇಕಂತೆ. ದುಬಾಯಿಯಿಂದ ಅದೆಷ್ಟು ದುಡ್ಡು ತರುತ್ತಾರೆ ನೋಡೇಬಿಡುವ. ಊರಿನವರು ಯಾಪಾರ ಮಾಡದಿದ್ರೆ ಅಂಗಡಿ ಬಾಗಿಲು ತಂತಾನೇ ಮುಚ್ಚಿಹೋಗ್ತದೆ. ಮತ್ತೆ ಉರಾಪೆಲ್ಲ ನಿಲ್ತದೆ ನೋಡಿ’ ಎಂದು ತಾವೇನೋ ಹೊಸ ಸತ್ಯ ತಿಳಿದವರಂತೆ ಆಡತೊಡಗಿದರು.
ಮನೆಯ ಮಗುವೊಂದಕ್ಕೆ ಮೈಮೇಲೆ ಬೊಕ್ಕೆಯೆದ್ದುದಕ್ಕೆ ಊರ ದೇವಿಗೆ ಹರಕೆ ಹೊತ್ತ ಹುಸೇನನ ತಾಯಿ ಜುನೇದಮ್ಮ ಪೂಜೆಯ ಸಾಮಾನು ಹಿಡಿದು ಗುಡಿಗೆ ಬಂದಾಗ ಶರಣ ಬಾಗಿಲಲ್ಲೇ ತಡೆದು ಒಳಬರಲು ಅಡ್ಡಿಪಡಿಸಿದ. ಜುನೇದಮ್ಮ ಮೊದಲು ಇದು ಮಕ್ಕಳಾಟಿಕೆಯೆಂದು ನಗುತ್ತಲೇ, ‘ಅರೆ ಮಗಾ! ನಮ್ದು ನಿಮ್ಮ ದೇವಿಗೆ ಹರಕೆ ಒಪ್ಪಿಸಲಿಕ್ಕೆ ಬಂದಿದೆ. ನೀನು ಬ್ಯಾಡವೆಂದರೆ ದೇವಿ ಸಿಟ್ಟಾಗುತ್ತಾಳೆ ನೋಡು’ ಎಂದಳು. ಅದಕ್ಕೆ ಶರಣ ತನ್ನ ಶರಟಿನ ತೋಳೇರಿಸುತ್ತ, ‘ಮೊದಲು ನಿಮ್ಮ ದೇವರಲ್ಲಿಗೆ ಹೋಗೋಕೆ ಪ್ರಯತ್ನಪಡಿ, ಮತ್ತೆ ನಮ್ಮ ದೇವರ ಉಸಾಬರಿ ಮಾಡೋರಂತೆ. ನಿಮ್ಮ ಮಗ ನೋಡಿದ್ರೆ ಕಾಲೇಜಿನಲ್ಲಿ ವಿಚಾರವಾದಿಗಳೊಡನೆ ಸೇರಿಕೊಂಡು ನಮ್ಮ ದೇವರನ್ನು ಅವಹೇಳನ ಮಾಡ್ತಾ ತಿರುಗ್ತಾನೆ, ನೀವು ನೋಡಿದ್ರೆ ಇಲ್ಲಿ ಪೂಜೆ ಮಾಡ್ತೀನಂತ ಬರ್ತೀರಿ. ನಿಮ್ಮ ರಂಗಿನಾಟವೆಲ್ಲ ಇಲ್ಲಿ ನಡೆಯೋದಿಲ್ಲ’ ಎಂದು ನಿಷ್ಠುರವಾದ ಮಾತುಗಳಲ್ಲಿ ಹೇಳಿದ್ದ. ಜುನೇದಮ್ಮ ಕೈಯಲ್ಲಿ ಹಿಡಿದ ಪೂಜೆಯ ಸಾಮಾನುಗಳ ಕಡೆಗೊಮ್ಮೆ, ಸುತ್ತ ನೆರೆದಿರುವ ಜನರ ಕಡೆಗೊಮ್ಮೆ ನೋಡುತ್ತಾ ನಿಂತ ಹೊತ್ತಿನಲ್ಲಿಯೇ ಅಲ್ಲಿಗೆ ಬಂದ ಶರಣನ ತಾಯಿ ಕಮಲಮ್ಮ, ‘ಅಯ್ಯಾ ಜುನೇದಕ್ಕ, ಇಲ್ಲೇ ಯಾಕೆ ನಿಂತಿರಿ? ನಾವು ಬರಲಿ ಅಂತ ಕಾಯ್ತೀದ್ದೀರೇನು? ಎಷ್ಟು ಬೇಗ ಅಂದ್ರೂ ಮನೆಮಂದಿಯನ್ನೆಲ್ಲಾ ಸುಧಾರಿಸಿ, ಸ್ನಾನ ಮಾಡಿ ಬರುವಾಗ ಇಷ್ಟೊತ್ತಾಗಿಯೇ ಬಿಡ್ತು ನೋಡಿ’ ಎಂದು ಅವಳನ್ನು ತನ್ನೊಂದಿಗೆ ಗುಡಿಯ ಒಳಗೆ ಕರೆತಂದಳು. ಅಮ್ಮನೆದುರು ಮಾತಾಡುತ್ತ ನಿಂತರೆ ಇನ್ನೆಲ್ಲಿ ಜುನೇದಮ್ಮನ ಎದುರೇ ಕಿವಿಯೆಳೆದು ತನ್ನನ್ನು ಅವಮಾನಿಸಿಬಿಟ್ಟಾಳೆಂಬ ಮುಜುಗರದಲ್ಲಿ ಶರಣ ಗುಡಿಯ ಹೊರಗಿರುವ ತನ್ನ ಗೆಳೆಯರೆಡೆಗೆ ನಡೆದ.
ರಸ್ತೆಯೇ ಇಲ್ಲದ ಊರಿನ ಹಬ್ಬಕ್ಕೆ ಹೊರಗಿನಿಂದ ಅಂಗಡಿಗಳು ಬರುವುದು ಸಾಧ್ಯವಿಲ್ಲವಾದರೂ, ಹತ್ತಿರದೂರಿನ ಕೆಲವರು ತಮ್ಮ ಲಟಾರಿ ಸೈಕಲ್‌ನಲ್ಲಿ ಒಂದೆರಡು ಪುಗ್ಗಿಗಳ ತೇರನ್ನು, ತಂಪುಪೆಟ್ಟಿಗೆಯಲ್ಲಿ ಐಸ್‌ಕ್ಯಾಂಡಿಗಳನ್ನು ತಂದು ಮಾರುತ್ತಿದ್ದರು. ಇಷ್ಟು ವರ್ಷಗಳಲ್ಲಿ ಅವರ ಕುಲಗೋತ್ರಗಳನ್ನು ವಿಚಾರಿಸುವ ಗೋಜಿಗೆ ಯಾರೊಬ್ಬರೂ ಹೋಗಿರದಿದ್ದರೂ, ಶರಣನ ಬಳಗದವರು ಅವರು ತಮ್ಮವರಲ್ಲವೆಂದು ಅದು ಹೇಗೋ ಗುರುತಿಸಿದ್ದರು. ತಮ್ಮ ಉತ್ಸವದಲ್ಲಿ ನಿಮ್ಮದೇನು ವ್ಯಾಪಾರವೆಂದು ಅವರೊಂದಿಗೆ ಜಗಳಾಡಿ, ಅವರಿಗೇ ಗೊತ್ತಿಲ್ಲದಂತೆ ತಮ್ಮದೇ ಬಳಗದ ಅಂಗಡಿಯವರನ್ನು ಕರೆಸಿ ಒಂದಿಷ್ಟು ಉರಾಪು ತೋರಿಸಿದ್ದರು. ಉಳಿದವರೆಲ್ಲ ಸುಮ್ಮನೆ ಹಿಂದಿರುಗಿದರಾದರೂ ಐಸ್‌ಕ್ಯಾಂಡಿಯ ಮುದುಕ ಮಾತ್ರ ತಾನು ಇವರೆಲ್ಲರೂ ಹುಟ್ಟುವುದಕ್ಕಿಂತ ಮೊದಲೇ ಇಲ್ಲಿಗೆ ಬರುತ್ತಿದ್ದನೆಂಬುದನ್ನು ಹೇಳಿ ಹಠಹಿಡಿದು ನಿಂತಾಗ ಶರಣನ ಗೆಳೆಯರು ಅವನನ್ನು ಹಿಡಿದೆಳೆದು ತಳ್ಳಿದರೆಂದೂ, ಅದೇ ಹೊತ್ತಿಗೆ ಪ್ರತ್ಯಕ್ಷನಾದ ಹುಸೇನ ಇದನ್ನು ವಿರೋಧಿಸಿದನೆಂದೂ, ಮಾತಿಗೆ ಮಾತು ಬೆಳೆದು ಕೈ, ಕೈ ಮಿಲಾಯಿಸುವ ಹೊತ್ತಿಗೆ ಆ ಮುದುಕನೇ ಹುಸೇನನ್ನು ಅಲ್ಲಿಂದ ಬಲವಂತವಾಗಿ ಎಳೆದುಕೊಂಡು ಹೋದನೆಂಬ ವಿವರಗಳೆಲ್ಲ ಹುಡುಗರ ಸಾವಿನ ನಂತರವೇ ಊರಿನವರನ್ನು ತಲುಪಿದ್ದು. ದೇವಿಯ ಉತ್ಸವವನ್ನು ಪದ್ಧತಿಯಂತೆ ನಡೆಸಬೇಕಾದ ಒತ್ತಡದಲ್ಲಿರುವ ಅವರಿಗೆ ಇವೆಲ್ಲದರ ಬಗ್ಗೆ ಅರಿವೇ ಇರಲಿಲ್ಲ.
ಹಬ್ಬವಾಗಿ ತಿಂಗಳು ಕಳೆಯುವುದರೊಳಗೆ ಊರ ಮೂರು ದಾರಿ ಸೇರುವ ಸಂಪಿಗೆ ಮರದ ಅಡಿಯಲ್ಲಿ ಊರು ಎಂದೂ ಕಾಣದ ಧಾರುಣ ಘಟನೆಯೊಂದು ನಡೆದುಹೋಯಿತು. ಪ್ರಕರಣದ ವಿವರಗಳು ಊರಿನಲ್ಲಿ ಏನೇನೂ ದೊರೆಯದೇ ಪೋಲೀಸ್ ಪಡೆಯೀಗ ನಗರದ ಕಾಲೇಜಿನ ಕಡೆಗೆ ಮುಖಮಾಡಿತ್ತು. ಭೊರೆಂದು ಸುರಿದ ಮಳೆಗೆ ಊರದಾರಿ ಮುಚ್ಚಿಹೋಗಿ ಟಿ.ವಿ.ಯವರ ಕೂಗಾಟಕ್ಕೂ ಒಂದು ವಿರಾಮ ಸಿಕ್ಕಿತ್ತು. ಕಾಲೇಜಿನಲ್ಲಿ ಅವರಿಬ್ಬರ ಸಹಪಾಠಿಗಳಾಗಿದ್ದವರ ಮತ್ತು ಅವರ ಹಿಂದೆ ನಿಂತ ಸಂಘಟನೆಗಳ ಹೆಸರು ಒಂದೊಂದೇ ಬಯಲಾಗುತ್ತ ನಡೆಯಿತು. ದುಬಾಯಿಯಿಂದ ಮಗನ ಸಾವಿನ ಸುದ್ದಿ ಕೇಳಿ ಬಂದಿಳಿದ ಅಬ್ಬು ಬ್ಯಾರಿಗಳ ಕೇರಿಯಲ್ಲಿ ಏನು ನಡೆಯಿತೆಂಬ ವಿವರಗಳೂ, ಒಂದೇ ರಾತ್ರಿಯಲ್ಲಿ ಇಬ್ಬರನ್ನೂ ತುಂಡಾಗಿಸಿದ ಕೈಗಳು ಯಾವುದೆಂಬುದರ ಒಗಟು ಯಾರೊಬ್ಬರಿಗೂ ತಿಳಿಯದೇ ಒಳಗೊಳಗೆ ಬೇಯತೊಡಗಿದರು. ನಡುವೆಲ್ಲೋ ಹತ್ತಾರು ಮನೆಗಳಿರುವ ಅವರಿಗೇ ಅಷ್ಟು ಕೊಬ್ಬಾದರೆ ನಾವೇನು ಹುಲ್ಲು ತಿನ್ನುತ್ತೇವೆಯೇ ಎಂಬ ಮಾತೂ ಬಂದುಹೋಗಿ, ಸಂಪಿಗೆ ಮರದ ದಾರಿಯಲ್ಲಿ ಅವರಿನ್ನೆಂದೂ ಈಚೆಗೆ ಬರದಂತೆ ಬಂದೋಬಸ್ತಾದ ಬೇಲಿಯನ್ನು ಕಟ್ಟಬೇಕೆಂದು ಮಾತುಕತೆಯಾಯಿತು. ನಡುರಾತ್ರಿಯಲಿ ಓಡಾಡುವ ಆ ಕೇರಿಯ ಪುಂಡು ಮಕ್ಕಳನ್ನು ಹಿಡಿದು ನಾಲ್ಕು ತದಕದಿದ್ದರೆ ಬಿಸಿ ತಾಗಲಾರದೆಂದು, ಅದಕ್ಕೆಂದೇ ಊರಿನ ವೀರರ ಪಡೆಯೊಂದು ತಯಾರಾಯಿತು. ಅಲ್ಲಿ, ಆ ಕೇರಿಯಲ್ಲಿಯೂ ಬಂದೂಕುಗಳ ರಾಶಿ, ರಾಶಿಯೇ ಬಂದಿದೆಯೆಂಬ ಸುದ್ದಿ ಅದು ಹೇಗೋ ಗಾಳಿಯಲ್ಲಿ ಸೇರಿಕೊಂಡು ಊರಿಡೀ ಹರಡಿಬಿಟ್ಟಿತು. ಇವೆಲ್ಲವನ್ನೂ ಮೂಕಗೊಂಬೆಯಂತೆ ನೋಡುತ್ತಿದ್ದ ಊರ ಹೆಂಗಸರ ಒಡಲಾಳದ ಬಯಕೆಯೆಂಬಂತೆ ಕೆಂಪಮ್ಮ ಮರುದಿನವೇ ಸುರಿವ ಮಳೆಯಲ್ಲಿ ಹೇಗೋ ಸಂಪಿಗೆ ಮರದವರೆಗೂ ಹೋಗಿ ಕಟ್ಟೆಯೇರಿ ಗಪ್ಪೆಂದು ಕುಳಿತುಬಿಟ್ಟಳು. ಹೊನ್ನೂರಿನಲ್ಲಿ ಊರ ದೇವಿಯನ್ನು ಬಿಟ್ಟರೆ ಜನರೆಲ್ಲ ಇನ್ನೊಂದು ಹೆಣ್ಣು ಜೀವಕ್ಕಿಷ್ಟು ಭಯ, ಭಕ್ತಿ ತೋರಿಸುತ್ತಿದ್ದರೆಂದರೆ ಅದು ಕೆಂಪಮ್ಮನಿಗೆ ಮಾತ್ರ. ಊರ ದೇವಿಯೊಂದಿಗೆ ಅವಳ ಚರಿತ್ರೆಯೂ ತಳುಕುಹಾಕಿರುವುದೇ ಇದಕ್ಕೆ ಕಾರಣವಾಗಿತ್ತು.
ಎಲ್ಲರಂತೆ ಸಾಮಾನ್ಯ ಹೆಣ್ಣಾಗಿ ಊರುಸೇರಿದ ಕೆಂಪಮ್ಮ, ಸಂಪಿಗೆಮರದ ಪ್ರಕರಣ ನಡೆದಾಗ ಇದ್ದಕ್ಕಿದ್ದಂತೆ ಊರಿನ ನಾಯಕಿಯಾಗಿ ಹೊರಹೊಮ್ಮಿದ್ದಳು. ಅದೆಷ್ಟೋ ಕಾಲದಿಂದ ಊರ ಮೂರು ದಾರಿಗಳು ಸೇರುವ ದಾರಿಯಲ್ಲಿ ಸಂಪಿಗೆ ಮರವೊಂದು ಉದ್ದಾನುದ್ದಕ್ಕೆ ಬೆಳೆದು ಬಾನಿಗೆ ಮುತ್ತುಕೊಡುವಂತೆ ಎದ್ದುನಿಂತಿತ್ತು. ಬೇಸಿಗೆಯಲ್ಲಿ ಎಲ್ಲ ಮರಗಳಂತೆ ಮೈತುಂಬ ಹೂವರಳಿಸುತ್ತಿತ್ತಾದರೂ ಬಾನೆತ್ತರದ ಆ ಮರವನ್ನು ಹತ್ತುವ ಧೀರರು ಯಾರೂ ಇರಲಿಲ್ಲವಾದ್ದರಿಂದ ಹೂವಿನ ಗಂಧ ಮಾತ್ರವೇ ಊರಿನವರ ಪಾಲಿಗಿತ್ತು. ಊರೊಳಗಿನ ಕುಟುಂಬದ ನಾಲ್ಕು ಅಣ್ಣ ತಮ್ಮಂದಿರು ಪಾಲುಪಟ್ಟಿ ಮಾಡುವಾಗ ಸಂಪಿಗೆ ಮರ ಬೆಳೆದಿರುವ ತಾವು ತಮ್ಮದೆಂಬುದು ಅರಿವಾಗಿ ಅಲ್ಲೊಂದು ಮನೆಕಟ್ಟುವುದೆಂದು ತೀರ್ಮಾನವಾಗಿಬಿಟ್ಟಿತ್ತು. ಇನ್ನೇನು ದಿನವೊಪ್ಪತ್ತಿನಲ್ಲಿ ಸಂಪಿಗೆ ಮರವನ್ನು ಕಡಿಯುತ್ತಾರೆನ್ನುವಾಗಲೇ ತೂಗಿ, ತೊನೆವ ಸಂಪಿಗೆ ಮರದ ಅಳಲು ತನ್ನೆದೆಯನ್ನು ಮುಟ್ಟಿತೋ ಎಂಬಂತೆ ಬೆಳಿಗ್ಗೆ ಎದ್ದ ಕೆಂಪಮ್ಮ ರಾತ್ರಿ ಕನಸಿನಲ್ಲಿ ಊರದೇವಿ ಬಂದು ಮರಕಡಿದರೆ ಶಾಪ ತಪ್ಪದೆಂದು ನುಡಿದಂತಾಯಿತೆಂದು ಕಂಡವರ ಮುಂದೆಲ್ಲಾ ಹೇಳಿಕೊಂಡು ಬಂದಳು. ಹೆಣ್ಣಿನ ಮಾತಿಗೆ ಕವಡೆ ಬೆಲೆಯಿಲ್ಲದ ಊರಿನಲ್ಲಿ ಅವಳ ಮಾತುಗಳು ಗಾಳಿಯಲ್ಲಿ ಹಾರಿಹೋಗಿ ಸಂಪಿಗೆ ಮರವನ್ನು ಕಡಿಯುವ ದಿನವೂ ನಿಗದಿಯಾಗಿ ಹೋಗಿತ್ತು. ಆ ರಾತ್ರಿ ಬೆಳಗಿನ ಜಾವದಲ್ಲಿ, ಊರಿಡೀ ಸಕ್ಕರೆಯ ಸವಿ ನಿದ್ದೆಯಲ್ಲಿರುವಾಗ ‘ಬೊಳ್ಳು’ ಕೂಗಿ ಎಲ್ಲರನ್ನೂ ಬೆಚ್ಚಿಬೀಳಿಸಿತ್ತು. ಯಾವುದಕ್ಕೂ ಇರಲಿ ಎಂದು ಬೆಳಿಗ್ಗೆ ದೇವಿಯ ಗುಡಿಗೆ ಹೋಗಿ ಪ್ರಸಾದವಿಟ್ಟರೆ ಎಡದಲ್ಲಿ ಬಡಲ್ಲನೆ ಹೂವುದುರಿ ಮರವನ್ನು ಕಡಿಯಬಾರದೆಂಬ ದೇವಿಯ ಫರ್ಮಾನು ಹೊರಬಿದ್ದಿತ್ತು. ಎಲ್ಲರ ಬಾಯಲ್ಲಿಯೂ ಕೆಂಪಮ್ಮನ ಮಾತುಗಳು ಪುನರಾವರ್ತನೆಯಾಗುತ್ತ ಅವಳ ಹೆಸರೇ ‘ಸಂಪಿಗೆಮರದ ಕೆಂಪಮ್ಮ’ ಎಂದಾಗಿಹೋಯಿತು. ಸಂಪಿಗೆ ಮರ ಉಳಿದ ಖುಷಿಯಲ್ಲಿ ಕೆಂಪಮ್ಮನೂ ಊರ ದೇವಿಯ ಪುರಾಣವನ್ನು ಸಂಪಿಗೆ ಮರದ ತುದಿಯವರೆಗೂ ಹಬ್ಬಿಸಿ ತನ್ನ ಹೆಸರನ್ನು ಖಾಯಂ ಮಾಡಿಕೊಂಡಿದ್ದಳು. ‘ನಾ ಒಳ್ಳೇ ಮಾತಿನಲ್ಲಿ ಹೇಳಿದ್ರೆ ಕೇಳೂರ? ರಾತ್ರಿ ಬೊಳ್ಳು ಕೂಗಿ ಊರಿಗೆಲ್ಲ ಕೆಟ್ಟದಾಯ್ತದೆ ಅಂದಮೇಲೆ ಎಲ್ರೂ ಮರ ಕಡಿಯೂದ ಕೈಬಿಟ್ರು. ಅಲ್ಲಾ, ಅನ್ನ ತಿಂಬೂ ಮನಸರಿಗೆ ಅರ್ಥವಾಗೂದಿಲ್ವ ಇದೆಲ್ಲಾ? ದೇವಿಯ ಗುಡಿಯ ಸುತ್ತಲೂ ಇಂಥದ್ದೇ ಎಷ್ಟೊಂದು ಸಂಪಿಗೆ ಮರಗಳಿವೆ. ಊರಲ್ಲಿ ಮತ್ತೆಲ್ಲಾದರೂ ಸಂಪಿಗೆ ಮರ ಕಂಡೀರಾ ನೀವು? ಇಲ್ಲಿ, ಮೂರು ದಾರಿ ಸೇರುವಲ್ಲಿ ದೇವಿಯ ಗುಡಿಯಲ್ಲಿರುವ ಥರದ್ದೇ ಸಂಪಿಗೆ ಮರ ಬೆಳೆದು ನಿಂತದೆ ಅಂದರೆ ದೇವೀನೇ ಅದನ್ನ ತಂದು ನೆಟ್ಟದೆ ಅಂತರ್ಥ. ಮನುಷ್ಯರು ನೆಟ್ಟಿದ್ರೆ ಕುಡಿಮುರದು, ಚಿಗುರೊಡೆಯೋ ಹಾಗೆ ಮಾಡಿ ಹೂವ ಕೊಯ್ಯಲಾಗುವಂತೆ ಮಾಡದಿರೂರೆ? ದೇವಿಯ ಮರ ಇದು. ಊರ ನೋಡಲು ಬರುವ ದೇವಿ ಹಾಂಗೆ ಒಂದು ಸಲ್ಪ ಹೊತ್ತು ಮರದ ಮೇಲೆ ಕುಂತು ದಣಿವಾರಿಸಿಕೊಂಡು ಹೋಯ್ತಳಿರಬೇಕು. ಇಲ್ಲದಿದ್ರೆ ಇಷ್ಟ ಹೂವ ಬಿಟ್ಟ ಮರದ ಒಂದಾದ್ರೂ ಹೂಂಗ ಯಾರಾರೂ ಮುಡದೀರಾ?’ ಎಂದು ತನ್ನದೇ ಭಾಷೆಯಲ್ಲಿ ಸಂಪಿಗೆ ಮರವನ್ನು ವರ್ಣಿಸುತ್ತಿದ್ದರೆ ಎದುರಲ್ಲಿರುವವರಿಗೆ ಅಲ್ಲಗಳೆಯಲಾಗುತ್ತಿರಲಿಲ್ಲ.
ಬದುಕಿನಲ್ಲೆದ್ದ ಚಂಡಮಾರುತಗಳನ್ನೆಲ್ಲ ಕೆಂಪಮ್ಮ ಸಂಪಿಗೆ ಮರವನ್ನು ತಬ್ಬಿಕೊಂಡೇ ಸಹಿಸಿದ್ದಾಳೆ. ಕುಡುಕ ಗಂಡನ ಸಾವು, ಎಳೆಯ ಪ್ರಾಯದ ಮಕ್ಕಳ ಮರಣ ಇವೆಲ್ಲವೂ ಎಲ್ಲರ ಮನೆಯಂತೆ ಅವಳ ಮನೆಯಲ್ಲೂ ನಡೆದಿವೆ. ಕಡುದುಃಖದ ಘಳಿಗೆಗಳಲ್ಲೂ ಅವಳು ತಾಸೆರಡು ತಾಸು ಮರದಡಿಯಲ್ಲಿ ಕುಳಿತವಳೇ ಹೊರತೂ ಮರಮರನೆ ಮರುಗಿಲ್ಲ. ಅಷ್ಟೇ ಅಲ್ಲ, ಸಂಪಿಗೆ ಮರದ ನೆರಳಲ್ಲಿ ಕುಳಿತು ಎದ್ದು ಬಂದು ನುಡಿದ ಅವಳ ಮಾತು ಕಾರಣಿಕವಾಗಿ ಅದೆಷ್ಟೋ ಹೆಣ್ಣುಗಳ ದುಃಖವನ್ನು ಕಳೆದಿದೆ. ಊರಿನ ಅನೇಕ ಸಿರಿವಂತರನ್ನು, ಹೆಂಡತಿಯನ್ನು ಹೊಡೆದು ಆಳುವೆನೆಂದು ಹೊರಟ ಹೊಂತಕಾರರನ್ನು ಕೆಂಡದುಂಡೆಗಳಾಗಿ ಸುಟ್ಟಿವೆ. ಸಿಂಗಾರದ ಗೊಂಬೆಯಂತಹ ಹೆಣ್ಣನ್ನು ಮದುವೆಯಾಗಿ ಬಂದು ಅವಳ ಸೆರಗು ಸಹ ಸರಿಸದೇ ಷಂಡತನವನ್ನು ಮೆರೆದ ಊರ ಗಂಡಿಗವಳು ಮಂಗಳಾರತಿಯನ್ನು ಮಾಡಿದ್ದಾಳೆ. ತನ್ನ ಮಡಿಲಲ್ಲಿ ತಲೆಯಿಟ್ಟು ಮಲಗಿ ಗಂಡಲ್ಲದ ಗಂಡನ ಬಗ್ಗೆ ಹೇಳಿ ಅತ್ತವಳನ್ನು ಸಂತೈಸಿ ತವರಿನ ದಾರಿ ತೋರಿದ್ದಾಳೆ. ತವರಿಗೆ ಹೋದವಳು ಬರದೆಲ್ಲಿಗೆ ಹೋಗುತ್ತಾಳೆಂದು ಗಂಡಿನವರ ಜಂಬರವ ಬಿಡದೇ ಕುಳಿತ ಹಿರಿಯರಿಗೆ ಅವಳ ಮದುವೆ ಇನ್ನೊಬ್ಬರೊಂದಿಗೆ ನಿಕ್ಕಿಯಾದ ಕಾಗದ ಸಿಕ್ಕಿ ಕೆರಳಿ ಕೆಂಡವಾಗಿದ್ದಾರೆ. ಇಷ್ಟೆಲ್ಲದಕ್ಕೂ ಕೆಂಪಮ್ಮನೇ ಕಾರಣವೆಂದು ಅಬ್ಬರಿಸಿ ವಿಚಾರಿಸಿದರೆ ಅವಳು ಮಾತ್ರ ತಣ್ಣಗೆ, ‘ನಿನ್ನ ಮಗ ಗಂಡಸೇ ಆಗಿದ್ದರೆ ಅವಳನ್ನು ಬಾ ಅನ್ನಲಿ, ಇಲ್ಲವಾದರೆ ಅವಳ ಮದುವೆಗೆ ಹೋಗಿ ನಾಲ್ಕಕ್ಷತೆಕಾಳು ಹಾಕಿ ಹರಸಲಿ’ ಎಂದು ಕೆನ್ನೆಗೆ ಹೊಡೆದಂತೆ ಎಲ್ಲರೆದುರು ಆಡಿದ್ದಾಳೆ. ಮೊಗ ಕೆಳಗೆ ಹಾಕಿ ನಿಂತ ಮಗನ ವರ್ತನೆ ಎಲ್ಲವನ್ನೂ ಬಿಡಿಸಿ ಹೇಳಿದೆ.
ಊರ ಗೌಡರ ಮಗನಿಗೆ ತಂದ ರತ್ನದಂತಹ ಹುಡುಗಿ ಕಮಲಿಯ ಒಡಲು ವರ್ಷ ಐದಾದರೂ ತುಂಬದಿದ್ದಾಗ ಅವಳು ಅರಸಿ ಬಂದದ್ದು ಕೆಂಪಮ್ಮನನ್ನೆ. ಅದೇನು ಮಾಯಕವಾಯಿತೋ ತಿಳಿಯದು, ವರ್ಷವಾಗುವುದರೊಳಗೆ ಮನೆಯ ಯಾರಿಗಿಲ್ಲದ ಬಣ್ಣ ಹೊತ್ತ ನೀಲಿ ಕಂಗಳ ಮಗು ಶರಣ ಭೂಮಿಗಿಳಿದು ಬಂದಿದ್ದ. ಮಗುವಿನ ನಾಮಕರಣಕ್ಕೆ ವಿಶೇಷವಾದ ಉಡುಗೊರೆಯೊಂದಿಗೆ ಬಂದ ಅಬ್ಬುಬ್ಯಾರಿಗಳು ಮಗುವನ್ನು ಹರಸಿ ಹೋಗಿದ್ದರು. ಹೊಸದಾಗಿ ಮದುವೆಯಾದ ಸಂಭ್ರಮಕ್ಕೆ ಅವರು ಒಂದು ವರ್ಷವಿಡೀ ಊರಿನಲ್ಲಿಯೇ ಉಳಿದಿದ್ದರು. ಒಂದೇ ಓರಗೆಯ ಹುಸೇನ, ಶರಣರು ಅವಳಿ ಜವಳಿಗಳಂತೆ ಒಟ್ಟಿಗೆ ಬೆಳೆದಿದ್ದರು. ಈಗ ಯಾರ ಹುನ್ನಾರದಿಂದಲೋ ಒಂದೇ ದಿನ ಇಬ್ಬರೂ ಸಂಪಿಗೆ ಮರದಡಿಯಲ್ಲಿಯೇ ಹೆಣವಾಗಿ ಮಲಗಿದ್ದ ಕೇಳಿದ ಮೇಲೆ ಕೆಂಪಮ್ಮ ಒಂದುಸಿರೂ ಎತ್ತದೇ ಮೌನವಾಗಿದ್ದಳು. ಇಷ್ಟೆಲ್ಲದರ ನಂತರ ಜನರೆಲ್ಲ ಸೇರಿ ಊರ ಎಲ್ಲರ ಕೇರಿಯನ್ನು ಹೆಣೆಯುವ ಸಂಪಿಗೆ ಮರದ ದಾರಿಯನ್ನು ಮುಚ್ಚುವ ಹುನ್ನಾರ ಮಾಡಿದ ದಿನವೇ ಮನೆಯ ಜಗುಲಿಯಲ್ಲಿ ಮಲಗಿದ್ದ ಕೆಂಪಮ್ಮ ಕಾಣೆಯಾಗಿದ್ದಳು.
ತೊಂಭತ್ತರ ಮುದುಕಿ ತನ್ನ ಜೀವವೇ ಆಗಿದ್ದ ಸಂಪಿಗೆ ಮರದ ಹತ್ತಿರವೇ ಹೋಗಿರಬಹುದೆಂಬ ಊಹೆಯಿಂದ ಹೋಗಿ ನೋಡಿದರೆ ಕೆಂಪಮ್ಮ ಸುರಿವ ಮಳೆಯಲ್ಲಿ ಮರದ ಕೆಳಗೆ ಕಲ್ಲಿನಂತೆಯೇ ಕುಳಿತುಬಿಟ್ಟಿದ್ದಳು. ಎಷ್ಟು ಅನುನಯಿಸಿದರೂ ಅಲ್ಲಿಂದ ಕದಲದೇ ಸತ್ಯಾಗ್ರಹಿಯಂತೆಯೇ ಹಠಹಿಡಿದುಬಿಟ್ಟಳು. ಊರ ಮಕ್ಕಳಿಬ್ಬರ ಮರಣ ಮುದುಕಿಯನ್ನು ಕಾಡಿರಬಹುದೆಂದು ಅಷ್ಟೋ, ಇಷ್ಟೋ ತಿಳಿದಿದ್ದ ಕೆಲವರು ತಿಳುವಳಿಕೆಯನ್ನು ಹೇಳಲು ಬಂದರೆ, ‘ಸತ್ತ ಹೆಣಕ್ಕೆ ಜೀವ ಬರಬಾರದು, ಮತ್ತೆ ಹೆಣ ಬೀಳಿಸುವುದನ್ನು ಕಾಣಲಾರೆನೊ’ ಎಂಬ ಕಾರಣಿಕದ ಮಾತುಗಳನ್ನು ಹೇಳಿ ಮೌನಕ್ಕೆ ಜಾರಿದ್ದಳು. ಹಳೆಯ ಮುದುಕಿಗೆ ಎಲ್ಲೆಡೆ ನಡೆಯುತ್ತಿರುವ ಹೊಸ ಕಾಲದ ಹುನ್ನಾರಗಳು ತಿಳಿಯಲಾರದು ಎಂದು ಅಲವತ್ತುಕೊಂಡ ಹೊಂತಕಾರಿಗಳು ಅವಳನ್ನೆತ್ತಿ ಮನೆಗೆ ಬಿಸಾಕಲು ಸಿದ್ದರಿದ್ದರೂ, ಊರಿನ ಇಡಿಯ ತಾಯಂದಿರ ಲೋಕವೇ ಅವಳ ಜತೆಗಿದೆಯೆಂಬ ಹೆದರಿಕೆಯಿಂದ ಸುಮ್ಮನೆ ಮನೆಗೆ ಮರಳಿದರು. ಸುರಿವ ಮಳೆಯಲ್ಲಿ ಎಷ್ಟಂತ ಕೂತಾಳು, ಇಂದಲ್ಲ ನಾಳೆ ಎದ್ದು ಬಂದಾಳೆಂದು ಸೇರಿದ ಜನರೆಲ್ಲರೂ ತಮ್ಮ, ತಮ್ಮ ಮನೆ ಸೇರಿದರು.
ಎಲ್ಲರ ನಿರೀಕ್ಷೆಯನ್ನು ಹುಸಿಗೊಳಿಸುವಂತೆ ಕೆಂಪಮ್ಮ ವಾರವೊಂದಾದರೂ ಮರದಡಿಯಿಂದ ಅಲುಗಾಡದೇ ಕುಳಿತುಬಿಟ್ಟಳು. ಅವರಿವರು ನೀಡಿದ ತಿಳಿಗಂಜಿಯನ್ನು ಗಂಟಲೊಳಗೆ ಅಷ್ಟಿಷ್ಟು ಇಳಿಸುತ್ತಾ ಹಗಲು ರಾತ್ರಿಯೆನ್ನದೇ ಅಲ್ಲಿಯೇ ಕುಳಿತ ಅವಳ ಅವಗಾಹನೆಗೆ ಹೊತ್ತು ಗೊತ್ತಿಲ್ಲದೇ ಎಲ್ಲ ಕೇರಿಯ ಜನರೂ ಬಂದುಹೋಗುತ್ತಾ ಊರಿನೊಳಗಿನ ಬೇಧಗಳನ್ನು ಕಲಸಿಹಾಕಿದರು. ಏಕಾಂತದ ಕ್ಷಣದಲ್ಲಿ ಕೆಂಪಮ್ಮನನ್ನು ಸಂಧಿಸಿದ ಕಮಲಮ್ಮನಂತೂ, ‘ತಾಯೇ, ನೀ ಕೊಟ್ಟ ಸುಖದ ತುಣುಕೊಂದು ನಿನ್ನದೇ ಪಾದ ಸೇರಿತಲ್ಲೆ’ ಎಂದು ಭೋರೆಂದು ಅತ್ತಳು. ಸಂಪಿಗೆ ಮರದಡಿಯಲ್ಲಿ ಮೊಳೆತ ಬೀಜ ಅಲ್ಲಿಯೇ ಮಣ್ಣಾದ ಸತ್ಯಕ್ಕೆ ಸಾಕ್ಷಿಯಾದ ಮರವೂ ಎಲೆಯಲ್ಲಾಡಿಸಿ ಕಣ್ಣೀರು ಉದುರಿಸಿತು.
ವಾರವೊಂದು ಕಳೆದೊಡನೆ ಎಲ್ಲರ ಸಹನೆಯ ಕಟ್ಟೆಯೊಡೆದು, ಇನ್ನೆಲ್ಲಿಯಾದರೂ ಈ ಮುದುಕಿ ಚಟ್ಟ ಕಟ್ಟಿತೆಂದರೆ ಊರಿನಲ್ಲಿ ಇನ್ನೊಂದು ಚಿತೆಯುರಿಯುವುದು ಖಂಡಿತವೆಂದು ಅವಳಿರುವಲ್ಲಿಗೆ ದಾಂಗುಡಿಯಿಟ್ಟರು. ಅವರಿವರೆಂಬ ಬೇಧವಿಲ್ಲದೇ ಎಲ್ಲರೂ ಊರದೇವಿಯ ಹಬ್ಬಕ್ಕೆ ಸೇರುವಂತೆ ಸೇರಿ, ಮನೆಗೆ ಬರುವಂತೆ ಮುದುಕಿಗೆ ಮೊರೆಯಿಟ್ಟರು. ಕಾರಣಿಕವ ಹೇಳದೇ ಕೆಂಪಮ್ಮ ಕೆಳಗಿಳಿಯಲಾರಳೆಂದು ತಿಳಿದ ಜನರೆಲ್ಲ ಒಮ್ಮೆ ಕಣ್ಮುಚ್ಚಿ ಮೌನವಾಗಿ ನಿಂತು ಅವಳ ಮಾತುಗಳಿಗೆ ಕಾಯತೊಡಗಿದರು. ಊರೊಳಗಿನ ಹಗೆ, ಸುರಿವ ಮಳೆಗಳಿಂದ ಜಟ್ಟುಗಟ್ಟಿಹೋಗಿದ್ದ ಎಲ್ಲರ ಮನಸ್ಸು ಏನಾದರೊಂದು ಒಳ್ಳೆಯ ಒಸಗೆಗೆ ಹಾತೊರೆದು ನಿಂತಿದ್ದವು. ಬೆಂದ ಮನಕ್ಕೆ ತಂಪೆರೆಯುವಂತೆ ಕೆಂಪಮ್ಮನ ಮಾತುಗಳು ಮೌನವನ್ನು ಸೀಳಿ ಹೊರಬಂದವು. ‘ಯಾವ ಬೀಜ ಎಲ್ಲಿಗೆ ಹೋಗಿ ಮೊಳೆವುದೋ ಯಾರಿಗೆ ಗೊತ್ತು? ಬೀಜವುಗುಳಿದ ಹಕ್ಕಿಯ ಕೊಂದರೆ ಪಾಪ ಪರಿಹಾರವೆಂತು? ಆಗಸಕ್ಕೆ, ಬಯಲಿಗೆ ಗೋಡೆ ಕಟ್ಟುವುದೆಂತು? ನಮ್ಮೊಳಗಿನ ಕೆಡುಕಿಗೆ ಬೇಲಿಹಾಕಬೇಕು. ಕಳೆದುಹೋಯಿತೆಂದು ಹಿಂದಿರುಗಿ ಹೊರಟರೆ ಮುಂದಿನ ಗುರಿ ದೂರವಾಗುವುದು. ಎಲ್ಲರೊಂದೇ ತಾಯಿಯ ಮಕ್ಕಳು. ಹುಸೇನನೂ, ಶರಣನೂ ಸಹೋದರರು. ನೀವೆಲ್ಲರೂ ಸಂಬಂಧಿಗಳು’. ಕಾರಣಿಕದ ಮಾತು ಮುಗಿದು ಅದೆಷ್ಟೋ ಹೊತ್ತು ಕಳೆದರೂ ನಿಂತ ಜನರೆಲ್ಲ ಹಾಗೆ ಕಲ್ಲಿನಂತೆ ನಿಂತೇ ಇದ್ದರು. ಕ್ಷಣಬಿಟ್ಟು ಎಚ್ಚರಗೊಂಡ ಜನರು ಕಣ್ಮುಚ್ಚಿ ಕುಳಿತಿದ್ದ ಕೆಂಪಮ್ಮನನ್ನು ಎತ್ತಲೆಂದು ಹೋದರೆ ಅವಳ ತಲೆ ಬದಿಯಲ್ಲಿ ವಾಲಿಕೊಂಡಿತು. ಪ್ರತೀಕಾರದ ಅಮಲಿನಲ್ಲಿದ್ದ ಎಲ್ಲರ ಕಣ್ಣುಗಳು ಮೋಡಗಟ್ಟಿದ ಮುಗಿಲಿನಂತೆ ತುಂಬಿಕೊಂಡವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.